ವಂದಿಸುವೆ ಚರಣಾರವಿಂದಕ್ಕೆ ಮುಡಿಯಿಟ್ಟು!
ಇಂದು ಆಶೀರ್ವದಿಸು ಕಂದನನು, ಗುರುದೇವ,
ಮುಂದೆ ಬರವಂದು ಸಂಸಾರಿ ನಾನು!
ಬಿದ್ದಂದು ಮೇಲತ್ತಿ ಕೆಚ್ಚೊರೆದು ಸಂತವಿಸಿ
ಬ್ರಹ್ಮಚರ‍್ಯದೊಳೆಂತು ಕೈಹಿಡಿದು ಕಾಯ್ದಿಹೆಯೊ
ಅಂತೆ ಸಂಸಾರಿಯನು ಸಲಹು ನೀನು!

ನಲ್ಮೆಯಿಂದೆನ್ನ ನಲ್ಲೆಯ ಕೈಯ ಮೆಲ್ಲನೆಯೆ
ಪಿಡಿಯುತಾದರದಿ ನೋಯದವೋಲೆ ನಿನ್ನಡಿಗೆ
ನಮ್ಮೆದೆಗಳೊಂದೆ ಹೂ ಮುಡಿಪನಿಡುವೆ;
ಪ್ರೇಮನೈವೇದ್ಯವನೆ ಪೂಜೆಗೊಡುವೆ!
ಸರಸ ಮೋಹಕೆ ಮನವ ಮಾರಿ ನಿನ್ನನು ಮರೆತು
ಜಡಹೃದಯನಾಗದಂತೆನಗೆ ಕೃಪೆಗೈ, ಗುರುವೆ,
ಓ ಎನ್ನ ಜೀವನದ ಕಲ್ಪತರುವೆ!

ಆಶೀರ್ವದಿಸು ನನ್ನ ಈ ಬಯಕೆ ಕೈಗೂಡುವಂತೆ!
ಆಶೀರ್ವದಿಸು ನಮ್ಮಿರ್ವರೆದೆಗಳೊಂದಾಗುವಂತೆ!
ಆಶೀರ್ವದಿಸು ನಿನ್ನ ದಿವ್ಯೇಚ್ಛೆ ನಮದಾಗುವಂತೆ!

ಸಾವಿರದ ಒಂಭೈನೂರ ಮೂವತ್ತೇಳನೆಯ ಏಪ್ರಿಲ್ ಐದರಂದು ಈ ಪ್ರಾರ್ಥನೆಯನ್ನು ಗುರುದೇವನಿಗೆ ನವೇದಿಸಿ, ಉತ್ತಪತ್ರಿಕೆಗಳಿಗೆ ಬೆಲೆಕಟ್ಟುವ ಇತ್ಯಾದಿ ನೀರಸ ಕರ್ತವ್ಯಗಳನ್ನೆಲ್ಲ ಪೂರೈಸಿ, ಇನ್ನೊಂದು ತಿಂಗಳೊಳಗಾಗಿಯೆ ಒಲವಿನೊಡಗೂಡಿ ನಲಿವ ಮನದ ರಸದೋಕುಳಿಯಲ್ಲಿ ತೇಲುತ್ತಾ, ಮೈಸೂರಿನಿಂದ ಶಿವಮೊಗ್ಗಗೆ ರೈಲು ಹತ್ತಿದೆ.

ಶಿವಮೊಗ್ಗದಲ್ಲಿ ಎಂದಿನಂತೆ ದೇವಂಗಿ ಅಡಕೆಮಂಡಿಯಲ್ಲಿಯೇ ಮಂಜಪ್ಪ ಗೌಡರು ಮಾನಪ್ಪರ ಅತಿಥಿಯಾಗಿಯೆ ಉಳಿದಿದ್ದೆ, ಅಲ್ಲಿಯೆ ಒಂದು ಅರ್ಧ ಮೈಲಿಯ ಒಳಗೆ ಇರುವ ಮಾವನ ಮನೆಯಲ್ಲ ಅಲ್ಲ. ಮುಂದೆ ಸನಿಹದಲ್ಲಿಯೆ ಒದಗಲಿರುವ ನನ್ನ ಬದುಕಿನ ಸುಮಧುರ ಕ್ರಾಂತಿಯ ನಿರೀಕ್ಷಾಭಾವದಲ್ಲಿ ನನ್ನ ಸಮಸ್ತಚೇತನವೂ ಬೇರೊಂದು ಮಧುಮಯ ಆಯಾಮವನ್ನೆ ಪ್ರವೇಶ ಮಾಡಿದಂತಿತ್ತು. ಬದುಕಿನ ಹಿಂಗಾರವು ಹೊರಹೊಮ್ಮಲು ತನ್ನ ಆನಂದಾತಿಶಯದ ಹಿಗ್ಗಿನಿಂದ ತನ್ನನ್ನು ಮುಚ್ಚಿಕೊಂಡಿರುವ ಹೊಂಬಾಳೆಯನ್ನು ನಸು ಬಿರಿದು ಲೋಕಮೋಹಕ ಪುಷ್ಪಶೃಂಗಾರವನ್ನು ಅವಿರ್ಭೂತಿಸಿದಂತಿತ್ತು.

ಒಂದೆರಡು ದಿನಗಳೊಳಗೆ, ಬಹುಶಃ ಶಿವಮೊಗ್ಗೆಗೆ ಇಂಗ್ಲಾದಿಯಿಂದ ಬಂದ ಡಿ.ಆರ್.ವೆಂಕಟಯ್ಯನವರ ಕಾರಿನಲ್ಲಿರಬೇಕು, ನಾನೂ ಇತರ ಹುಡುಗರೂ ಇಂಗ್ಲಾದಿಗೆ ಹೋದೆವು. ಇಂಗ್ಲಾದಿ ಈಗ ಬರಿಯ ಮಾವನ ಮನೆಯಾಗಿರದೆ ನನ್ನ ಜೀವನದ ಸಂಗಾತಿಯಾಗುವವಳ ತವರು ಮನೆಯೂ ಆಗಿತ್ತು.

ಇಂಗ್ಲಾದಿ ಮನೆಯ  ಸುವಿಸ್ತಾರವಾದ ಅಂಗಳದಲ್ಲಿ, ಇನ್ನೊಂದು ತಿಂಗಳೊಳಗಾಗಿಯೆ ನಡೆಯಲಿರುವ ಮದುವೆಗೆ  ಸಿದ್ಧತೆಗಳಾಗುತ್ತಿದ್ದವು. ಪ್ರಾಚೀನವೂ ದೊಡ್ಡದೂ ಶ್ರೀಮಂತವೂ ಆಗಿದ್ದ  ದೇವಂಗಿ ಮನೆತನಕ್ಕೆ ಸೇರಿದ್ದ ಒಕ್ಕಲುಗಳೂ ಆಳುಗಳೂ ಇಂಗ್ಲಾದಿಯಲ್ಲಿ ಒಟ್ಟುಗೂಡಿ ಅಂಗಳದಲ್ಲಿ ಗಿಜಿಗಿಜಿಯಾಗಿ ಸೇರಿ ಚಪ್ಪರ ಹಾಕುವ ಮತ್ತು ಧಾರೆಯ ಸಾಲಂಕೃತಮಂಟಪ ಕಟ್ಟುವ ಮೊದಲಾದ ಕೆಲಸಗಳಲ್ಲಿ ನೆರೆದಿದ್ದರು. ಗಂಡಿನ ಮನೆಯಾದ ಕುಪ್ಪಳಿಯಿಂದ ದಿಬ್ಬಣ ಹೊರಡುವುದು ಮೊದಲಾದ ಸಂಪ್ರದಾಯದ ಎಲ್ಲ ಕಾರ‍್ಯಕ್ರಮಗಳೂ ರದ್ದಾಗಿದ್ದರಿಂದ ಸಿದ್ಧತೆಯೆಲ್ಲ ಇಂಗ್ಲಾದಿ ಮನೆಯಲ್ಲಿಯೆ ಕೇಂದ್ರೀಕೃತವಾಗಿತ್ತು.

ಏಪ್ರಿಲ್ ಐದಕ್ಕೆ ಮೈಸೂರು ಬಿಟ್ಟವನು ಏಪ್ರಿಲ್ ಹದಿನೆಂಟರ ಹೊತ್ತಿಗೆ ಕುಪ್ಪಳಿಯಲ್ಲಿದ್ದೆ. ಅಂದರೆ ಇಂಗ್ಲಾದಿಯಲ್ಲಿ ಏಳೆಂಟು ದಿನಗಳೇ ಇದ್ದೆನೆಂದು ತೋರುತ್ತದೆ. ಆ ಅವಧಿಯಲ್ಲಿ ವೆಂಕಟಯ್ಯ, ಮಾನಪ್ಪ ಅವರೊಡನೆ ಮದುವೆಯ ಕರೆಯೋಲೆಯನ್ನು ರಚಿಸುವುದು, ನಂಟರಲ್ಲದ ಬಯಲು ಸೀಮೆಯ ಯಾವಯಾವ ಮಿತ್ರರಿಗೆ ಮತ್ತು ಅಧ್ಯಾಪಕರು ಪ್ರಾಧ್ಯಾಪಕರುಗಳಿಗೆ ಆಹ್ವಾನ ಕಳಿಸುವುದು ಇತ್ಯಾದಿ ಕಾರ‍್ಯಗಳಿಗೆ ನೆರವು ನೀಡಿದೆ. ಕರೆಯೋಲೆರಚಿಸುವುದರಲ್ಲಿ ಸಂಪ್ರದಾಯದ ವಿಧಾನವನ್ನು ಬದಲಾಯಿಸಿದೆವು. ಮಾನಪ್ಪನ ಮತ್ತು ನನ್ನ ಮದುವೆಗಳು ಒಟ್ಟಿಗೆ ನಡೆಯುವಂತೆ ಗೊತ್ತಾದ್ದರಿಂದ ಅವನ ಕಾಂಗ್ರೆಸ್ ರಂಗದ ಮಿತ್ರರಿಗೂ ಲಗ್ನಪತ್ರಿಕೆ ಹಂಚುವುದನ್ನು ನಿರ್ಣಯಿಸಿದೆವು.

ಇದರ ಮಧ್ಯೆ ನನ್ನ ಕವಿತಾಪ್ರತಿಭೆ ಹಿಂದಕ್ಕೆ ಸರಿದಿದ್ದರೂ ಆ ಕಾಲದಲ್ಲಿಯೇ ಶ್ರೀ ರಾಮಾಯಣದರ್ಶನಂ ರಚನೆ ಮುಂದುವರಿಯುತ್ತಿತ್ತು. ಅಯೋಧ್ಯಾ ಸಂಪುಟದ “ಊರ‍್ಮಿಳಾ” ಸಂಚಿಕೆ ೧೩-೯೧೯೩೬ರಲ್ಲಿ ಮುಗಿದಿದೆ. ಮುಂದಿನ “ಭರತಮಾತೆ” ಸಂಚಿಕೆ ೩೧-೧೨೧೯೩೭ರಲ್ಲಿ ಮುಗಿದಿದೆ. ಅಂದರೆ ಮುನ್ನೂರೇ ಪಂಕ್ತಿಯ ಆ ಸಂಚಿಕೆಗೆ ಒಂದು ವರ್ಷ ಮೂರು ತಿಂಗಳು ಹಿಡಿದುದಕ್ಕೆ ಅರ್ಥ ಮದುವೆಯ ಮತ್ತು “ಮಧುಚಂದ್ರಿಕೆ”ಯ ಕಾಲದಲ್ಲಿ ರಚನಾಪ್ರತಿಭೆ ಅನ್ಯಸ್ರಾದುತರ ಕಾರ‍್ಯದಲ್ಲಿ ಮಗ್ನವಾಗಿತ್ತು; ಮತ್ತು ಕವಿತಾಶಕ್ತಿ ವಿಶೇಷವಾಗಿ ದಾಂಪತ್ಯ ಜೀವನದ ಪ್ರೇಮಗೀತೆಗಳ ಸೃಜನೆಯಲ್ಲಿ ತೊಡಗಿತ್ತು. ಆದರೂ ಮದುವೆಗೆ ಮುನ್ನ ೧೮-೪-೧೯೩೭ರಲ್ಲಿ ಕುಪ್ಪಳಿ ಮನೆಯಲ್ಲಿದ್ದಾಗ ಒಂದು ಸಣ್ಣ ಕವನ “ರಸಾನುಭೂತಿ ಮೌನಮದುವೆ ಕಾವ್ಯದರಮನೆ,” ಈಗ “ಅನಿಕೇತನ”ದಲ್ಲಿ ಅಚ್ಚಾಗಿರುವುದು ರಚಿತವಾಗಿದೆ:

ಪ್ರಕೃತಿ ತಾಯ ಮಡಿಲಿನಲ್ಲಿ
ಮಲೆಯನಾಡಿನಡವಿಯಲ್ಲಿ
ಕವಿಯೊರ್ವನೆ ನಡೆಯುವಲ್ಲಿ-
ನುಡಿಯೆ ಸೆರೆಮನೆ:
ಮಲೆಯ ಬೀಡಿನೆದೆಯ ಮೇಲೆ
ದಟ್ಟಗಾಡು ಹಬ್ಬಿರೆ
ಹಸುಳೆ ಬಿಸಿಲ ಹೊನ್ನಲೀಲೆ
ಹಸುರ ಕಡಲ ತಬ್ಬಿರೆ
ಪಕ್ಷಿಗಾನ ಕೋಟಿ ವೀಚಿ
ನಾದ ಶರಧಿಯಾಗಿರೆ
ಇಂದ್ರಿಯಂಗಳಿಂದ್ರ ಜಗಕೆ
ದಿವಾ ದ್ವಾರವಾಗಿರೆ-
ರಸಾನುಭೂತಿ ಮೌನಮದುವೆ
ಕಾವ್ಯದರಮನೆ!
-ಕುಪ್ಪಳಿ-ಭಾನುವಾರ

ಶ್ರೇಯಸ್ಸಿಗೆ ಬಹುವಿಘ್ನಗಳು ಎಂಬ ಗಾದೆಯ ಮಟ್ಟದ ಸೂಕ್ತಿಯಿದೆ. ನನ್ನ ಅಥವಾ ನಮ್ಮ-ನನ್ನ ಮತ್ತು ಮಾನಪ್ಪ-ಮದುವೆಗಳಲ್ಲಿಯೂ ಅಂತಹ ತೊಂದರೆಗಳು ತಲೆದೋರಿದ್ದುವು. ಒಂದಂತೂ, ಶ್ರೀಗುರುಕೃಪೆ ಕರುಣಿಸದೆ ಇದ್ದಿದ್ದರೆ, ಮದುವೆಯೆ ನಿಂತು ಹೋಗಬಹುದಾದಷ್ಟು ಭಯಂಕರವಾಗಿತ್ತು; ಅಥವಾ ಮದುವೆ ನಡೆದಿದ್ದರೂ ತರುವಾಯದ ದಾಂಪತ್ಯ ಜೀವನ ವಿಷಮವಾಗಿ ಬಿರುಕುದೋರಿ ಜೀವಮಾನವೆಲ್ಲ ವಿಷಮಯವಾಗಬಹುದಿತ್ತು. ಆದರೆ ಜೀವನದುದ್ದಕ್ಕೂ ನನ್ನನ್ನು ಕೈಹಿಡಿದು ನಡೆಸುತ್ತಿರುವ ತಾಯಿಯ ಕೃಪೆ ಹಾಗಾಗಲು ಬಿಡಲಿಲ್ಲ. ಹಾಲಾಹಲವಾಗಬಹುದಾಗಿದ್ದುಕ್ಕೆ ಬದಲಾಗಿ ಬದುಕನ್ನೆಲ್ಲ ಅಮೃತವನ್ನಾಗಿಸಲು ಪ್ರಚೋದಿಸುವ ವಿವೇಕವನ್ನು ದಯಪಾಲಿಸಿತ್ತು.

ಮಾನಪ್ಪನಿಗೆ ಗೊತ್ತಾಗಿದ್ದ  ಹೆಣ್ಣು ಬೇರೆ ಯಾರೂ ದೂರದವರಲ್ಲ; ಅವನ ಅಣ್ಣ ವೆಂಕಟಯ್ಯನವರ ಹೆಂಡತಿಯ ತಂಗಿಯೆ. ಮದುವೆ ಗೊತ್ತಾಗಿ ಅದು ನಡೆಯುವ ಕಾಲ ಮೊದಲಾದುವೂ ಗೊತ್ತಾದ ಮೇಲೆ, ಮಾನಪ್ಪನಿಗೆ ಯಾರು ಹೇಳಿದರೋ ಹೇಗೆ ಗೊತ್ತಾಯಿತೋ ಕಾಣೆ, ತಾನು ಮದುವೆಯಾಗಲಿರುವ ಹುಡುಗಿಗೆ ಆರೋಗ್ಯವಿಲ್ಲ ಎಂಬ ಭಾವನೆಯುಂಟಾಗಿ ತಾನು ಅವಳನ್ನು ಮದುವೆಯಾಗುವುದಿಲ್ಲ ಎಂದು ಹೇಳಿಬಿಟ್ಟನಂತೆ! ದೇವಂಗಿ ಮನೆಯವರಷ್ಟೇ ದೊಡ್ಡ ಮನೆತನದವರಾದ ಮರಿತೊಟ್ಲಿನವರಿಗೆ ಆಘಾತವಾಯಿತು. ಮಾತುಕೊಟ್ಟು ಮದುವೆ ನಿಶ್ಚಯಮಾಡಿ, ತುದಿಯಲ್ಲಿ ಆಗುವುದಿಲ್ಲ ಎಂಬ ವಚನಭ್ರಷ್ಟತೆಯ ಅಪಕೀರ‍್ತಿಗೆ ಪಕ್ಕಾಗುವುದಕ್ಕೆ ಮಾನಪ್ಪನವರ ಹಿರಿಯ ಬಂದುಗಳಾದರೂ-ತಂದೆ ದೇವಂಗಿ ರಾಮಣ್ಣ ಗೌಡರಾಗಲಿ ಅಣ್ಣ ವೆಂಕಟಯ್ಯನವರಾಗಲಿ- ಸಿದ್ಧರಾಗಿರಲಿಲ್ಲ. ಅಲ್ಲದೆ ನಮ್ಮಿಬ್ಬರ ಮದುವೆಗಳೂ ಒಟ್ಟಿಗೆ ನಡೆಯುವುದೆಂದು ಗೊತ್ತಾಗಿದ್ದುದರಿಂದ ಮಾನಪ್ಪನ ತಂಗಿಯನ್ನು ಮದುವೆಯಾಗಲಿರುವ ನನ್ನ ಮದುವೆಯೂ ನಿಂತು ಹೋಗುವ ಸಂಭವಃ ಅಂತೂ ದೊಡ್ಡ ಅಂತರಸಾಂಸಾರಿಕವಾದ ಅನಾಹುತದ ಗೊಂದಲ ಶುರುವಾಗಿತ್ತು!

ಆ ಗೊಂದಲದಿಂದ ಪಾರುಮಾಡಲು ಮಾಪ್ಪನನ್ನು ಒಲಿಸುವಮತೆ ನನ್ನನ್ನೂ ಕೇಳಲಾಗಿತ್ತು.

ಇಂಗ್ಲಾದಿಯಲ್ಲಿ ಸ್ವಲ್ಪ ದಿನಗಳಿದ್ದು, ಮದುವೆಗೆ ಎಂಟು ಹತ್ತು ದಿನಗಳಿಗೆ ಮುಂಚೆ, ನಾನು ಕುಪ್ಪಳಿಗೆ ಹೋದೆ. ಹೋಗುವಾಗ ನನ್ನ ಜೊತೆ ಮಾನಪ್ಪನನ್ನೂ ಕರೆದೊಯ್ದೆ.

ಒಂದು ಸಂಜೆ ಎಂದಿನಂತೆ ನಾವೆಲ್ಲ ವಿಹಾರಾರ್ಥವಾಗಿ ‘ಕವಿಶೈಲ’ಕ್ಕೆ ಹೋದೆವು. ಅರಣ್ಯಾದ್ರಿ ವಿಶಾಲವಾಗಿದ್ದ ಅದ್ಭುತ ಪ್ರಕೃತಿದೃಶ್ಯ ವೈಭವವನ್ನೂ ಆ ವೈಭವಕ್ಕೆ ಕಲಶಪ್ರಾಯವಾಗಿ ನಿಷ್ಕಿರಣವಾಗಿ ದಿಗಂತಪರ್ವತದ ಅಮಚಿನಲ್ಲಿ ಮುಳುಗುತ್ತಿದ್ದ ಸೂರ‍್ಯನನ್ನೂ ನೋಡುತ್ತಾ ಕವಿಶೈಲದ ನೆತ್ತಿ ಬಂಡೆಯಲ್ಲಿ ಕುಳಿತೆವು. ಇತರ ಹುಡುಗರೆಲ್ಲ ಬಂಡೆಯಿಮದ ಇಳಿದು ದೂರ ದೂರ ಹೋದ ಸಂದರ್ಭವನ್ನು ಗಮನಿಸಿ ಮಾನಪ್ಪನೊಡನೆ ಅವನ ಮದುವೆಯ ಮಾತು ಎತ್ತಿದೆ. ಅವನು ಬೇರೆ ಏನೂ ಕಾರಣವನ್ನು ಹೇಳದೆ “ಹುಡುಗಿಗೆ ಅನಾರೋಗ್ಯ. ಕ್ಷಯ ಇರಬಹುದು ಎಂದು ಶಂಕಿಸುತ್ತಾರೆ. ಹಾಗಿದ್ದರೆ ನನ್ನ ಬದುಕು ನಿರರ್ಥಕವಾಗುತ್ತದೆ.” ಎಂದು ಸ್ಪಷ್ಟಪಡಿಸಿದ. ಅವನ ದುಃಖಭಯಗಳು ನಿಜವಾಗಿದ್ದುದು ಅವನ ಕಣ್ಣೀರು ಗದ್ಗದಗಳಿಂದ ವ್ಯಕ್ತವಾಗಿತ್ತು. ಅದಕ್ಕೆ ನಾನು “ಹುಡುಗಿಗೆ ತುಸು ಅನಾರೋಗ್ಯವಗಿರಬಹುದು. ತಾತ್ಕಾಲಿಕವಾಗಿ ಬಿಳಿಚಿಕೊಂಡಿರಲೂಬಹುದು. ಅಷ್ಟರಿಂದ ಅವಳು ಕ್ಷಯಕ್ಕೆ ತುತ್ತಾಗಿದ್ದಾಳೆಂದು ನಿರ್ಣಯಿಸುವುದು ತಪ್ಪು. ಅಲ್ಲದೆ ಆ ವಿಚಾರವಾಗಿ ಮೊದಲೇ ಪರಿಶೀಲಿಸಿ ಇಷ್ಟವಿಲ್ಲ ಎಂದು ಹೇಳಬಹುದಾಗಿತ್ತು. ಅವಳೇನು ನಿನಗೆ ಹೊಬಳಲ್ಲ; ನಿನ್ನ ಅತ್ತಿಗೆಯ ತಂಗಿಯೆ, ನಮಗೆಲ್ಲ ಚೆನ್ನಾಗಿ ಪರಿಚಿತಳು. ಅತ್ತಿಗೆಯ ಜೊತೆಯೆ ಇಂಗ್ಲಾದಿಯಲ್ಲಿ ಎಷ್ಟೋ ದಿನಗಳು ಇರುತ್ತಿದ್ದವಳು. ಎಲ್ಲ ಗೊತ್ತಿದ್ದೂ ಅವಳನ್ನು ಮದುವೆಯಾಗಲು ಸಮ್ಮತಿಸಿ, ಎಲ್ಲ ಏರ್ಪಾಡುಗಳೂ ಆದಮೇಲೆ, ತುದಿಯಲ್ಲಿ ‘ಮದುವೆಯಾಗುವುದಿಲ್ಲ’ ಎಂದು ಹೇಳುವುದು ಮನೆತನಕ್ಕೇ ಕೆಟ್ಟ ಹೆಸರು ತರುತ್ತದೆ” ಎಂದು ನಾನಾ ತೆರನಾಗಿ ವಾದಿಸಿದೆ.

ಆಗಲೆ ಬೈಗುಗಪ್ಪು  ಗಿರಿವನಗಳ ಮೇಲೆ ಇಳಿಯುತ್ತಿತ್ತು. ಸೂರ‍್ಯ ಮುಳುಗಿದ ಮೇಲಣ ಒಂದು ತರಹ ಕೆಂಪುಛಾಯೆ ಕತ್ತಲೆಯನ್ನು ತಡೆದಂತಿತ್ತು. ಮಾನಪ್ಪ ಮಾತ್ರ ತನ್ನ ನಿರ್ಣಯವನ್ನು ಬದಲಾಯಿಸುವಂತೆ ತೋರಲಿಲ್ಲ. ಮತ್ತೆ ನಾನು ಒಂದು ಲೌಕಿಕವಾದ ಸಮಾಧಾನವನ್ನು ಮುಂದಿಟ್ಟೆ: “ಒಂದು ವೇಳೆ ನೀನು ಅವಳನ್ನು ಮದುವೆಯಾದ ಮೇಲೆ ಡಾಕ್ಟರಿಂದ ಪರೀಕ್ಷೆ ನಡೆಸಿ ಅವಳಿಗಿರುವ ಅನಾರೋಗ್ಯದ ಸ್ವರೂಪ ಏನು ಎಂದು ತಿಳಿದ ಮೇಲೆ ಅದಕ್ಕೆ ಬೇಕಾದ ಔಷಧೋಪಚಾರ ನಡೆಸಿ ಆಕೆಯನ್ನು ಆರೋಗ್ಯವಂತಳನ್ನಾಗಿ ಮಾಡಬಹುದು. ಒಂದು ವೇಳೆ ಆಕೆಗೆ ಬಂದಿರುವುದು ಕ್ಷಯದ ಪ್ರಾರಂಭಿಕ ಸ್ಥಿತಿ ಹೌದಾದರೆ ಮೈಸೂರಿನಲ್ಲಿ ‘ಸ್ಯಾನಿಟೋರಿಯಂ’ಗೂ ಸೇರಿಸಿ ಗುಣಪಡಿಸಬಹುದು. ಆಸ್ಪತ್ರೆಯ ಡಾಕ್ಟರು ನಾನು ಕಟ್ಟಿಸುತ್ತಿರುವ ಮನೆಯ ಪಕ್ಕದಲ್ಲಿಯೆ ಇದ್ದಾರೆ. ಕ್ಷಯಾಸ್ಪತ್ರೆಗೆ ದಾಖಲಾಗಿಸುವುದೂ ಬೇಡ. ನಮ್ಮ ಮನೆಯ ಒಂದು ರೂಮಿನಲ್ಲಿಯೆ ಎಲ್ಲ ಶುಶ್ರೂಷೆ ನಡೆಸಬಹುದು” ಇತ್ಯಾದಿಯಾಗಿ. ಆದರೂ ಮಾನಪ್ಪನ ಮನಸ್ಸುತಿರುಗಲಿಲ್ಲ. ಅವನ ಹಟ ನನ್ನ ಮದುವೆಗೂ ವಿಘ್ನವಾಗುವ ಶಂಕೆ ಉದ್ಭವಿಸಿ ನಾನು ಮನದಲ್ಲಿಯೆ ಶ್ರೀಗುರುವನ್ನು ನೆನೆದು ಪ್ರಾರ್ಥಿಸತೊಡಗಿದೆ. ನನಗೂ ದುಃಖ ಉಕ್ಕಿ ಕಣ್ಣಲ್ಲಿ ನೀರು ತೊಟ್ಟಿಕ್ಕತೊಡಗಿದುದನ್ನು ನೋಡಿದನು ಮಾನಪ್ಪ! ಇಬ್ಬರೂ ಬಹಳ ಹೊತ್ತು ಮಾತಾಡದೆ ಕುಳಿತಿದ್ದೆವು. ಕಡೆಗೆ ನನ್ನ ಪ್ರಾರ್ಥನೆಯ ಫಲವೊ, ಮಾನಪ್ಪನ ಮನೆತನದ ಗೌರವದ ಔಚಿತ್ಯಜ್ಞಾನ ಎಚ್ಚತ್ತುದರ ಫಲವೊ, ನಾನು ಕಟ್ಟುತ್ತಿರುವ ಮನೆಯಲ್ಲಿಯೆ ಅವಳಿನ್ನಿರಿಸಿ ಶುಶ್ರೂಷೆ ಮಾಡಿಸುವ ಭರವಸೆಯಿಂದ ಮೂಡಿದ ಧೈರ‍್ಯದ ಪ್ರಭಾವವೊ-ಮಾನಪ್ಪನ ಮನಸ್ಸು ಮೃದುವಾಯಿತು! ತನ್ನ ಮದುವೆ ನಡೆಯದಿದ್ದರೆ ತನ್ನ ತಂಗಿಯ ಮದುವೆಗೂ ಭಂಗ ಬರುತ್ತದೆ ಎಂಬ ಕಾರಣದಿಂದ ಮೆಚ್ಚಿನ ಸ್ನೇಹಿತನ ಪರವಾಗಿ ಉಂಟಾದ ಮೈತ್ರಿಯ ಪ್ರಭಾವವೊ- ಮಾನಪ್ಪ ಮದುವೆಗೆ ಒಪ್ಪಿದನು: ಅವನ ಮದುವೆ ೧೯೩೭ನೆಯ ಏಪ್ರಿಲ್ ೨೯ರಲ್ಲಿ ಮರಿತೊಟ್ಟಲಿನಲ್ಲಿ ನಡೆಯುವಂತೆಯೂ ನನ್ನ ಮದುವೆ ಏಪ್ರಿಲ್ ೩೦ರಲ್ಲಿ-ಅಂದರೆ ಪಂಚಾಂಗ ರೀತ್ಯಾ ರಾತ್ರಿ ಒಂದು ಗಂಟೆಗೆ ಲಗ್ನ ಇಟ್ಟುದರಿಂದ ಕ್ಯಾಲೆಂಡರ್ ರೀತ್ಯಾ ಮೇ ಒಂದನೆಯ ತಾರೀಖು ಆಗುತ್ತದೆ.- ನಡೆಯುವಂತೆಯೂ ಗೊತ್ತಾಗಿತ್ತು. ನನ್ನ  ಮದುವೆ ನಡೆದದ್ದು ಈಶ್ವರ ಸಂವತ್ಸರದ ಚೈತ್ರ ಬಹುಳ ೫ ಶುಕ್ರವಾರ ರಾತ್ರಿ ೧೨ಗಂಟೆ ೧೫ನಿಮಿಷಕ್ಕೆ ಮಕರ ಲಗ್ನದಲ್ಲಿ!

ಮದುವೆಗೆ ಮೂರು ನಾಲ್ಕು ದಿನಗಳಿಗೆ ಮುನ್ನ ಇಂಗ್ಲಾದಿಯ ಕಾರು ಕುಪ್ಪಳಿಗೆ ಬಂದಿತು, ಮದುಮಗನನ್ನು ಕರೆದುಕೊಂಡು ಹೋಗಲು. ಇಂಗ್ಲಾದಿಗೆ ತಲುಪಿದಾಗ ಮನೆಯ ಒಳಗೂ ಹೊರಗೂ ಅಸಾಧಾರಣ ಸ್ಥತಿ ಒದಗಿದಂತೆ ಕಳೆಕಟ್ಟಿತ್ತು. ಮದುವೆಯ ಸಂಭ್ರಮದ ಸಿದ್ಧತೆಗಳು ತುದಿಮುಟ್ಟುತ್ತಿದ್ದವು. ಅಂಗಳದ ಚಪ್ಪರ ತಳಿರು ತೋರಣಗಳಿಂದಲೂ ಮಾವು ಹಲಸು ತೆಂಗು ಅಡಕೆ ಮೊದಲಾದವುಗಳ ಹಸುರು ತುಂಡೆಗಳಿಂದಲೂ ಶೋಭಿಸಿ, ನೋಡುವವನಿಗೆ ತಾನೊಂದು ವನವನ್ನೇ ಹೊಕ್ಕಂತಾಗುತ್ತಿತ್ತು. ಚಪ್ಪರಕ್ಕೆ ತೂಗುಹಾಕಿದ್ದ ಬಾಳೆಗೊನೆಗಳು-ಕರಿಬಾಳೆ ಪುಟ್ಟಬಾಳೆ ವಾಟಿಬಾಳೆ ರಸಬಾಳೆ ಇತ್ಯಾದಿ-ಕೆಲವು ತೋರೆಗಾಯಿಗಳಾಗಿದ್ದು ಕೆಲವು ಹಣ್ಣಾಗಿದ್ದು ಮಕ್ಕಳ ಕಣ್ಣಿಗೆ ಮಾತ್ರವಲ್ಲದೆ ನಾಲಗೆಗೂ ಮೋಹಕವಾಗಿದ್ದುವು. ಬಣ್ಣ ಬಣ್ಣದ ಬಟ್ಟೆಗಳನ್ನು ಬಿಗಿದ ಕಂಬಗಳೂ ಕಣ್ಮನಂಗೊಳಿಸುತ್ತಿದ್ದುವು. ಧಾರೆಯ ಮಂಟಪವಂತೂ ಸಿಂಹಾಸನಯೋಗ್ಯವೆಂಬಂತೆ ಆಸ್ಥಾನದಂತೆ ಕಂಗೊಳಿಸಿತ್ತು. ಆ ತರದ ಶೋಭೆ ನನಗೆ, ಅನೇಕ ಸಾಹಿತ್ಯಕ ಸಮಾರಂಭಗಳಲ್ಲಿ ಭಾಗವಹಿಸಿದ್ದ ನನಗೆ, ಅಪರಿಚಿತವಾಗಿರಲಿಲ್ಲವಾದರೂ ಅದೆಲ್ಲ ನನ್ನ ಮತ್ತು ನನ್ನವಳಾಗಲಿರುವವಳ ಮದುವೆಗಾಗಿ ಆಗುತ್ತಿರುವುದನ್ನು ನೆನೆದು ಹೆಮ್ಮೆಯಿಂದ ಹಿಗ್ಗಿತ್ತು!

ಮದುವೆಗೆ ಬರಬೇಕೆಂದು ನಾವು ಕಳುಹಿಸಿದ್ದ ಕರೆಯೋಲೆಗಳಿಗೆ ಕನ್ನಡ *ನಾಡಿನ ಮೂಲೆಮೂಲೆಗಳಿಂದಲೂ ಅನೇಕ ಹಿರಿಯರೂ ಮಿತ್ರರೂ ಅಧ್ಯಾಪಕ ವರ್ಗದವರೂ ಸಾಹಿತ್ಯ ಪ್ರೇಮಿಗಳೂ ಸಾಹಿತಿಗಳೂ ಅನೇಕಾನೇಕ ಅಭಿನಂದನೆಯ ಮತ್ತು ಶುಭಾಶಯದ ಪತ್ರಗಳನ್ನು ಕಳಿಸಿದ್ದು, ಅಂಚೆಯಿಂದ ಬಂದಿದ್ದ ಆ ಕಾಗದಗಳ ದೊಡ್ಡ ಕಂತೆಯನ್ನೆ ಮಾನಪ್ಪ ತಂದು ಕೊಟ್ಟನು. ಅವುಗಳನ್ನೆಲ್ಲ ಆನಂದದಿಂದೋದುತ್ತಾ ಹೆಮ್ಮೆಪಡುತ್ತಾ ಹಿಗ್ಗುತ್ತಾ ಇರುವಾಗ ಮಧ್ಯೆ ಇದ್ದ ಒಂದು ಕಾರ್ಡು ಸಿಕ್ಕಿತು. ಆ ಕಾರ್ಡಿನ ಬರಹ ನೋಡಿದರೆ ಯಾರೋ ಆಗತಾನೆ ಅಕ್ಷರಾಭ್ಯಾಸ ಮಾಡಿದ ಮಕ್ಕಳು ಪೆನ್ಸಿಲ್ಲಿನಲ್ಲಿ ಕಪ್ಪೆ ಹೊಟ್ಟೆಯ ಕುಂಬಳಕಾಯಿ ಅಕ್ಷರದಲ್ಲಿ ಗೀಚಿದ ಹಾಗಿತ್ತು. ಯಾರೋ ಮಕ್ಕಳ ಕೈಲಿ, ‘ಬೊಮ್ಮನಹಳ್ಳಿ ಕಿಂದರಿಜೋಗಿ’ಯನ್ನು ಓದಿ ಸಂತೋಷಪಟ್ಟಿದ್ದ ಒಂದು ಮಗುವಿನ ಕೈಲಿ ಬರೆಸಿರಬೇಕು.’ ಎಂದು ಓದಿದೆ: ಸಿಡಿಲೆರಗಿತು! ಅದೊಂದು ಮಹಾದುಷ್ಟ ಉದ್ದೇಶದ ಪತ್ರರೂಪದ ಬಾಂಬ್ ಆಗಿತ್ತು. ನನ್ನಂತಹದ್ದೇ ಅಗಿರುವ ಸನ್ನಿವೇಸದ ಸ್ಥಿತಿಯಲ್ಲಿದ್ದ ಯಾರೇ ಆಗಿರಲಿ ಪ್ರಜ್ಞೆ ತತ್ತರಿಸಿ ಮೂರ್ಛೆಹೋಗಿ ಬೀಳಬಹುದಾಗಿತ್ತು!!

ಆ ಕಾಗದ ಬರೆದವರ ಊರು ಹೆಸರು ರುಜು ಏನೂ ಇರಲಿಲ್ಲ. ಅದೊಂದು ಅನಾಮಧೇಯ ಪತ್ರ. ನೂರಾರು ಅಭಿನಂದನೆಯ ಶುಭಾಸಯಗಳ ಮಮಗಳಾಶೀರ್ವಾದಗಳ ಮಧ್ಯೆ ಇದೊಂದು ವಿಷ ಕಾರುವ ಕಾರ್ಡು. ಎಡಗೈಯಲ್ಲೆ ಬರೆದಿದ್ದುದೆಂದು ಸ್ಪಷ್ಟವಾಗಿತ್ತು!

ಆ ಕಾರ್ಡಿನಲ್ಲಿ ನನ್ನನ್ನು ಮದುವೆಯಾಗುವವಳ ಹೆಸರು ನಮೂದಿಸಿ, ಆಕೆ ಬೇರೋಬ್ಬನಲ್ಲಿ ಅನುರಕ್ತೆಯಾಗಿರುವಳೆಂದೂ ನಾನು ಅವಳನ್ನು ಮದುವೆಯಾದರೆ ಮುಂದೆ Tables Turned ಆಗುವುದೆಂದೂ ತಿಳಿಸಿ, ಆಕೆಯ ಅನುರಕ್ತಿಗೆ ಪಾತ್ರನಾಗಿದ್ದವನ ಹೆಸರು ಊರೂ ತಿಳಿಸಿ ಎಚ್ಚರಿಕೆ ಕೊಟ್ಟಿತ್ತು. Tables Turned ಎಂದು ಇಂಗ್ಲಿಷ್ ಲಿಪಿಯಲ್ಲಿಯೆ ಬರೆದಿತ್ತು. ಯಾರಲ್ಲಿ ಅನುರಕ್ತೆಯಾಗಿರುವಳೋ ಅವನ ಮನೆ ಶಿವಮೊಗ್ಗಾದಲ್ಲಿ ದೇವಂಗಿ ಅಡಕೆಮಂಡಿಯ ಬಳಿ ಎಂದೂ ಬರೆದಿತ್ತು. ಅಂತೂ ಎಂಥಾ ನಿಶ್ಚಿತ ವಿವಾಹವನ್ನೂ ಭಗ್ನಗೊಳಿಸುವ ವಿಷಪತ್ರವಾಗಿತ್ತು.

ಓದಿದೊಡನೆ ನನಗೆ ದಿಕ್ಕುಕೆಟ್ಟಂತಾಯಿತು! ಒಂದು ಕ್ಷಣ! ಮರುಕ್ಷಣವೆ ನಕ್ಕುಬಿಟ್ಟೆ!

ನನ್ನನ್ನು ಮನಗಾಣಿಸುವಂತೆ ಮಾಡುವ ಆ ಬರೆದವನ ಅಥವಾ ಬರೆದವಳ (ನನ್ನ ಅಂತರ್ಬೋಧೆ  ಹೇಳುತ್ತಿತ್ತು, ಬರೆದವರು ಹುಡುಗಿಯೇ ಇರಬೇಕೆಂದು, ಅದರಲ್ಲಿಯೂ ಮದುವೆಗೆ ಬಂದವಳೇ ಇರಬೇಕೆಂದು. ಏಕೋ? ಏನೋ? ನಾನರಿಯೆ.) ಪ್ರಯತ್ನವೇ ಅವನ ಅಥವಾ ಅವಳ ಹೇಳಿಕೆಗಳನ್ನೆಲ್ಲ ಹುಸಿಗೊಳಿಸಿತ್ತು. ದೇವಂಗಿ ಮನೆತನದ ಹೆಣ್ಣುಮಕ್ಕಳ ನಿಷ್ಠೆ ಗಾಂಭೀರ‍್ಯ ಬಿಗುಮಾನಗಳು, ಅನ್ಯರಲ್ಲಿರಲಿ ಅನ್ಯಜಾತಿಯವರಲ್ಲಿರಲಿ ಸ್ವಜಾತಿಯ ನಂಟರನ್ನೂ ನಿರ್ಲಕ್ಷಿಸುವ ಅತಿಮಾನತ್ವ ಮಟ್ಟದ್ದೆಂದು ಎಲ್ಲರ ಟೀಕೆಗೂ ಪಕ್ಕಾಗಿದ್ದ ವಿಷಯವಾಗಿತ್ತು. ಹೀಗಿರಲು ನನ್ನನ್ನು ಕೈಹಿಡಿಯುವವಳು ಬೇರೆಯ ಜಾತಿಯ ಯಾವನೋ ಯಃಕಶ್ಚಿತನಲ್ಲಿ ಅನುರಕ್ತೆಯಾಗಿದ್ದಳೆಂದು ಅಪಾದಿಸುವುದು ಮಿಥ್ಯೆ ಎಂದು ಯಾರಿಗೂ ಗೊತ್ತಾಗುತ್ತಿತ್ತು.

ನನಗನ್ನಿಸುತ್ತದೆ ಈ ಎಲ್ಲ ತರ್ಕದ ಕಾರ‍್ಯಕಾರಣಸಂಬಂಧಗಳೂ ಸಹಾಯಕ ಕಾರಣಗಳಾಗಿರಬಹುದಾದರೂ ನೆವಗಳಾಗಿರಬಹುದಾದರೂ ನೈಜವಾದ ಮೂಲಕಾರಣ ಶ್ರೀ ತಾಯಿಯ ಕೃಪೆ! ಯಾವ ಜಗನ್ಮಾತೆ ಭೌತ ಅಭೌತ ಸೇಂದ್ರಿಯ ಅತೀಂದ್ರಿಯ ಸಕಲ ಕ್ಲೇಶಕಷ್ಟಗಳ ಸನ್ನವೇಶಗಳಲ್ಲಿಯೂ ನನ್ನನ್ನು ಕೈಹಿಡಿದು ಪೊರೆಯುತ್ತಿರುವಳೋ ಆ ತಾಯಿಯ ಕೃಪೆಯೇ ನನ್ನ ಚಿತ್ತದಲ್ಲಿ ತತ್‌ಕ್ಷಣದ ವಿವೇಕವಾಗಿ ಆವಿರ್ಭವಿಸಿ, ತತ್ತರಿಸಿದ್ದವನು ನಕ್ಕು ಕಾರ್ಡನ್ನು ಚಿಂದಿಚಿಂದಿಯಾಗಿ ಹರಿದು ಎಸೆದುಬಿಡುವಂತೆ ಮಾಡಿತ್ತು: ಯಾ ದೇವೀ ಸರ್ವಭೂತೇಷು ಬುದ್ಧಿರೂಪೇಣ ಸಂಸ್ಥೆತ್ತ್ಯಾ ನಮಸ್ತಸ್ಸ್ಯೆ ನಮಸ್ತಸ್ತೈ ನಮೋ ನಮಃ||

ಅಂತೂ ಇಂತಹ ದ್ವೇಷ ಅಸೂಯೆ ಮತ್ಸರಾದಿಗಳಿಂದ ಪ್ರೇರಿತವಾಗಿ ಹುಟ್ಟುವ ವಿಷಪತ್ರಗಳಿಂದ ಎಷ್ಟು ಮನೆತನಗಳು ವಿನಾಶಕ್ಕೆ ಪಕ್ಕಾಗಿವೆಯೋ? ಮತ್ತೆಷ್ಟು ದಾಂಪತ್ಯಗಳು ಮುರಿದುಬಿದ್ದು ಜೀವನಗಳೆ   ಹಾಳಾಗಿವೆಯೋ? ಆದರೆ ನಮ್ಮಲ್ಲಿ ಶ್ರೀ ಗುರುಕೃಪೆಯಿಂದ ವಿವೇಕ ಸಂಜನಿಸಿದರೆ, ಕತ್ತಲಲ್ಲಿ ಹಾವೆಂದು ಭಾವಿಸಿ ಹೆದರಿದ್ದು ಬೆಳಕು ಬಂದೊಡನೆ ಹಗ್ಗವಾಗಿ ಪರಿಣಮಿಸಿ, ನಕ್ಕು ನಲಿವಂತಾಗುತ್ತದೆ.

ನನಗೆ ಅಂದು ಸಂಭವಿಸಿದ ಈ ವಿಷಪತ್ರ ಘಟನೆಯ ಸನ್ನಿವೇಶದಲ್ಲಿ ಆ ಹನಿಯೋಪಮ ವಿಷಕಣವನ್ನು ಸಂಪೂರ್ಣವಾಗಿ ಕೊಚ್ಚಿಹಾಕಿ ಅಮೃತದ ಸಮುದ್ರವೇ ಉಕ್ಕಿಹರಿವಂತೆ ಮಡಿದ ಆ ವಿಷಕಾರ್ಡು ಇದ್ದ ಅಂಚೆಯ ಕಂತೆಯಲ್ಲಿಯೇ ಶುಭಾಶಯದ ಅಭಿನಂದನೆಯ ಮತ್ತು ಆನಂದೋತ್ಸವದ ಮಂಗಳಾಶೀರ್ವಾದದ ಅನೇಕಾನೇಕ ಪತ್ರಗಳೂ ಇದ್ದುವು. ಆ ಅಮೃತ ಸಮುದ್ರದ ತರಂಗಗಳಲ್ಲಿ ಕೆಲವನ್ನು ಇಡಿಯಾಗಿಯೂ ಕೆಲವನ್ನು ಭಾಗಶಃವಾಗಿಯೂ ಸಹೃದಯ ಮಿತ್ರರೊಡನೆ ಪಾಲ್ಗೊಳ್ಳಲಾಶಿಸುತ್ತೇನೆ:

ಪರಮಪೂಜ್ಯರಾದ ಶ್ರೀಮತ್ ಸ್ವಾಮಿ ಸಿದ್ದೇಶ್ವರಾನಂರದು, ಮದರಾಸು ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷತೆಗೆ ವರ್ಗಗೊಂಡು, ಬೆಂಗಳೂರಿನಿಂದ ಶ್ರೀಮನ್‌ಮಹಾರಾಜ ಶ್ರೀಕೃಷ್ಣರಾಜ ಒಡೆಯರೊಡನೆಯೂ ನಿವೃತ್ತ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ವಿ.ಸುಬ್ರಹ್ಮಣ್ಯ ಐಯ್ಯರ್ ಒಡನೆಯೂ ಬೇಸಗೆಯ ಶೀತಲಧಾಮವಾದ ‘ಕೆಮ್ಮಣ್ಣುಗುಂಡಿ’ಗೆ ಬಂದು ತಂಗಿದ್ದವರು ನನ್ನನ್ನೂ ಮಾನಪ್ಪನನ್ನೂ ಆಶೀರ್ವದಿಸಿ ಇಂಗ್ಲಿಷಿನಲ್ಲಿ ಪತ್ರ ಬರೆದಿದ್ದರು: ತಾರೀಖು ೨೩-೪-೧೯೩೭ರಲ್ಲಿ: ಮೊದಲು ಅದನ್ನು ಇಲ್ಲಿ ಕೊಟ್ಟು, ಅನಂತರ ಶ್ರೀ ದೇಜಗೌ ಮಾಡಿರುವ ಅದರ ಕನ್ನಡ ಅನುವಾದವನ್ನು ಕೊಡುತ್ತೇನೆ:

H.H.Maharaja`s Camp
Kemmangundi
23-4-37

Dearest Brothers-Puttappa & Manappa.

I am writing this letter to you witj much prayers in my heart. on the eve of your both entering the threshold of a new existence.

May Sri Guru Maharaj and Sri Sri Mahapurushiji (who has literally committed you to His Grace) ever bless you and the blessed souls that join you in fulfilling tje destiny of your lives-The peace you give to the revered head of the family-Mr.Ramanna Gowda, is the true reward for a soul whose personality has left real character in the soil of Malanad. I must congratulate him and do convey my feelings to him for which no words constitute a proper vehicle. I should not forget our Brother Mr.Manjappa Gauda who has ever dreamed of linking the two ancient housed of Malanad. Tho I am not present there, all my deepest prayers are with you both: I am sure Manappa is feeling much happier. I am leaving for B`lore on the 25th and you can have the consolation that on the Sacred day you make a new consecration of birds, perhaps, the very same Malanad birds, that greet you in the morning, sing me in the early hours of the day, the congratulations of Heaven to the poet of Malanad, and to his brother Manappa who has in the world of action and service, brought the combined peace of Sabarmati 7 Dakshineswar to the distant corners of Malanad.

The next day after my arrival here Disikanandaji joined us. He left for Mysore two days back. H.H. has made our stay so comfortable and pleasant. I am now staying in the Doopadagiri Lodge. H.H. has given each lodge the name of a particular hill here. One is called Kalhatti, another Buden & so on and so forth.

In my letter to Manappa I have given the account of the submission of Karnataka Sangha book to H.H. The more I know him at close quarters I feel that he is a great man. India cannot think of a better example of a noble prince. Mr. Brunton is studying Vedanta under Mr. V.S. and has been profoundly influenced. He is going to stay with Mr. V.S. at Mysore to go thro’ Shankara. His  Scientific mind finds more release from all the webs of mystic hungering and in Shankara he finds the thought that has become flesh in Maharshee. As Mr. V.S. cannot always meet him, he seeks my help to give him talks on Shankara’s philosophy and I have been going through with him-the important portions of Brihadaranyaka. He has taken a great Belur and halebid. It was a glorious day-once more face to face with the wonder that was India’. We spent the night at Chickmagalore. All about my trip to Kalhatty I have written to Manappa. As I write the whole of the plains I see stretched before me and what glorious sunrise and sunsets!! Two days back at dusk the prismatic rays of sun, filtering through flowing mists created such a wonder work of dazzling and subdued tints, as if heaven had dropped multi-coloured Dacca muslins over the whole(?) of Nature. Every day we go for long walks and meet glorious beauty spots. A few days back a big panther and the cubs were seen playing in the tennis Court not tennis balls-but the play of love that unite young ones with mother, where upadhis of graded evolution that disturb nature are all forgotten. Unfortunately I could not see that festival of brute-joy.

Mr.Brunton says that in Mr. V.S. he has seen the deepest thinker he has ever met.

For me the whole of the atmosphere of Bababuden ranges palpitate with Brahman, and the constant meditation of scriptures with Mr.V.S. & Brunton to know that all, sarva is Brahman-giving a realistic basis for the bubble of mind barricaded within. Our inverted bowl of bone, playing within the prison walls of intellect and interrogation.

Give my best love to Narasimhamoorthy who I am sure is acting as your best-man in the wedding.

Remember me to all to Doddannayya and Seshappa Gowda, all our dear boys and their brothers, to the sisters who gave me nice food last year.

With deep love and greetings to you both and all my friends who have joined you to celebrate the festival.

Yours affecitonately
Sd.
(Siddeswarananda)

Write to me in detail to Bangalore address.

 

ಶ್ರೀ ಮನ್ಮಹಾರಾಜರವರ ಬಿಡದಿ
ಕೆಮ್ಮಣ್ಣುಗುಂಡಿ
೨೩-೪-೧೯೩೭

ಅತ್ಯಂತ ಪ್ರೀತಿಯ ಸೋದರರದ ಪುಟ್ಟಪ್ಪ ಮತ್ತು ಮಾನಪ್ಪನವರೆ,

ಹೊಸಬಾಳಿನ ಹೊಸ್ತಿಲೊಳಗೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಹೃತ್ಪೂರ್ವಕವಾದ ಪ್ರಾರ್ಥನೆಗಳೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮನ್ನೂ ನಿಮ್ಮ ಜೀವನೋದ್ದೇಶವನ್ನೂ ಪರಿಪೂರ್ಣಗೊಳಿಸಲು ನಿಮ್ಮನ್ನು ಸೇರುತ್ತಿರುವ ಪವಿತ್ರಾತ್ಮಗಳನ್ನೂ ಶ್ರೀ ಗುರುಮಹಾರಾಜರೂ ಶ್ರೀ ಶ್ರೀ ಮಹಾಪುರಷಜೀಯವರೂ ಸದಾ ಹರಸುತ್ತಿರಲಿ. ಮಹಪುರಷಜೀಯವರು ಈಗಾಗಲೇ ನಿಮ್ಮಿಬ್ಬರನ್ನೂ ಭಗವದನುಗ್ರಹಕ್ಕೆ ಪಾತ್ರರನ್ನಾಗಿ ಮಾಡಿದ್ದಾರೆ. ಕುಟುಂಬದ ಪೂಜ್ಯ ಹಿರಿಯರಾದ ಶ್ರೀ ರಾಮಣ್ಣಗೌಡರ ವ್ಯಕ್ತಿತ್ವ ಮಲೆನಾಡಿನ ಜೀವನದ ಮೆಲೆ ಅಚ್ಚಳಿಯದ ಪ್ರಭಾವ ಮುದ್ರೆಯನ್ನೊತ್ತಿದೆ. ಅವರ ಚೇತನಕ್ಕೆ ನೀವು ನೀಡಿರುವ ಶಾಂತಿ ಅವರ ಸೇವೆಗೆ ಸಂದ ಪ್ರತಿಫಲದಂತಿದೆ. ಅವರನ್ನು ನಾನು ಅಭಿನಂದಿಲೇಬೇಕು. ಆದರೆ ನನ್ನ ಹೃದಯದಲ್ಲಿ ಮಿಡಿಯುತ್ತಿರುವ ಭಾವನೆಗಳನ್ನು ಹಿಡಿದಿಡುವಷ್ಟು ಶಬ್ದಸಾಮಗ್ರಿ ನನ್ನಲ್ಲಿಲ್ಲ. ಮಲೆನಾಡಿನ ಈ ಎರಡು ಹಳೆಯ ಮನೆತನಗಳನ್ನು ಕೂಡಿಸಲು ಕನಸು ಕಾಣುತ್ತಿದ್ದ ಸೋದರ ಶ್ರೀ ಮಂಜಪ್ಪಗೋಡರನ್ನು ನಾನು ಮರೆಯಲಾರೆ. ನಾನಲ್ಲಿ ಉಪಸ್ಥಿನಿರದಿದ್ದರೂ ನಿಮಗಾಗಿ ನಾನು ಹೃದಯದಾಳದಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ಮಾನಪ್ಪನವರು ಉಲ್ಲಾಸದಿಂದಿರಬೇಕೆಂದು ನಂಬಿದ್ದೇನೆ. ೨೫ರಂದು ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ನೂತನ ಧ್ಯೇಯಸಾಧನೆಗಾಗಿ ನವವಧುಗಳೊಡನೆ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳುವ ಪವಿತ್ರ ದಿನದಂದು ಮಲೆನಾಡಿನ ಕವಿಗೂ ಮಾನಪ್ಪನಿಗೂ ಸ್ವರ್ಗದ ಅಭಿನಂದನೆಗಳನ್ನು ಹೊತ್ತು ತಂದ ಪಕ್ಷಿಗಳು-ಪ್ರಾಯಶಃ ಪ್ರಾತಃಕಾಲದಲ್ಲಿ ನಿಮಗೆ ಶುಭ ಕೋರುವ ಮಲೆನಾಡಿನ ಪಕ್ಷಿಗಳೇ ಇರಬೇಕು-ಮೃಧುಮಧುರವಾಗಿ ಗಾನಗೈಯುತ್ತಿವೆ. ಸೇವಾ ಮತ್ತು ಕರ್ಮ ಕ್ಷೇತ್ರಗಳ ಮೂಲಕ ಸಬರಮತಿಯ ಮತ್ತು ದಕ್ಷಣೇಶ್ವರದ ಶಾಂತಿಯನ್ನು ಮಲೆನಾಡಿನ ದೂರದ ಮೂಲೆಗಳಿಗೆ ಕೊಂಡೊಯ್ದಿರುವ ಮಾನಪ್ಪನವರನ್ನೂ ಅವು ಮರೆಯುವಂತಿಲ್ಲ.

ನಾನಿಲ್ಲಿಗೆ ಬಂದ ಮಾರನೆಯ ದಿನವೇ ದೇಶಿಕಾನಂದಜೀವಯವರು ಬಂದು ನಮ್ಮೊಂದಿಗಿದ್ದರು. ಎರಡು ದಿನಗಳ ಹಿಂದೆ ಅವರು ಮೈಸೂರಿಗೆ ಹೋದರು. ಶ್ರೀಮನ್ಮಹಾರಾಜರವರ ಕೃಪೆಯಿಂದ ನಮ್ಮ ತಂಗಣೆ ಹಿತಕರವಾಗಿದೆ. ಯಾವುದಕ್ಕೂ ಕೊರತೆಯಿಲ್ಲ. ನಾನೀಗ ಧೂಪದಗಿರಿ ಕುಟೀರದಲ್ಲಿ ತಂಗಿದ್ದೇನೆ. ಮಹರಾಜರು ವಸತಿಗಳಿಗೆ ಇಲ್ಲಿಯ ಬೆಟ್ಟಗಳ ಹೆಸರುಗಳನ್ನೆ ಕೊಟ್ಟಿದ್ದಾರೆ. ಒಂದು ಕಲ್ಲತ್ತಿ ಕುಟೀರ, ಮತ್ತೊಂದು ಬುಡನ್ ಕುಟೀರ ಇತ್ಯಾದಿ, ಇತ್ಯಾದಿ.

ಮಹಾರಾಜರಿಗೆ ನಾನು ಕರ್ಣಾಟಕ ಸಂಘ ಸಮರ್ಪಿಸಿದ ಪುಸ್ತಕದ ಬಗೆಯನ್ನು ಮಾನಪ್ಪನವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದೇನೆ. ಅವರನ್ನು ತೀರ ಹತ್ತಿರದಿಂದ ಮತ್ತೆ ಮತ್ತೆ ನೋಡಿದಂತೆಲ್ಲ ಅವರೊಬ್ಬರು ಮಹಾಪುರುಷರೆಂಬ ಭಾವನೆ ಮೂಡುತ್ತಿದೆ. ಅವರನ್ನು ಮೀರಿಸಿದ ಆದರ್ಶರಾಜ ಇಂಡಿಯಾದಲ್ಲಿ ಮತ್ತೊಬ್ಬ ಸಿಗಲಾರರು. ವಿ.ಎಸ್. ಅವರ ಮಾರ್ಗದರ್ಶನದಲ್ಲಿ ಶ್ರೀ ಬ್ರಂಟನ್ ವೇದಾಂತ ಅಧ್ಯಯನ ಮಾಡುತ್ತಿದ್ದಾರೆ. ಅದರಿಂದ ಅವರ ಮೇಲಾಗಿರುವ ಪ್ರಭಾವ ಅದಮ್ಯವಾದುದು. ತಾವು ಈ ತನಕ ಭೇಟಿ ಮಾಡಿರುವ ವಿದ್ವಾಂಸರಲ್ಲೆಲ್ಲ ವಿ.ಎಸ್. ಅತ್ಯಂತ ಗಹನ ಆಲೋಚಕರೆಂದು ಬ್ರಂಟನ್ ಹೇಳುತ್ತಾರೆ. ಶಾಂಕರ ಸಿದ್ಧಾಂತವನ್ನು ಅಧ್ಯಯನ ಮಾಡುವ ಸಲುವಾಗಿ ಅವರು ಮೈಸೂರಲ್ಲಿ ವಿ.ಎಸ್. ಅವರ ಜೊತೆ ಕೆಲ ಕಾಲ ತಂಗುತ್ತಾರೆ. ಅತೀಂದ್ರಿಯತ್ವದ ರಹಸ್ಯಾತ್ಮಕ ಜಾಲದಿಂದ ಪಾರಾಗುವಲ್ಲಿ ಅವರ ವೈಜ್ಞಾನಿಕಮತಿ ನೆರವಾಗುತ್ತದೆ. ಮಹರ್ಷಿಯಲ್ಲಿ ಸಾಕಾರಗೊಂಡಿರುವ ಅಲೋಚನೆಯನ್ನೆ ಶಂಕರರಲ್ಲವರು ಕಾಣುತ್ತಾರೆ. ಅವರಿಗೆ ವಿ.ಎಸ್. ಯಾವಾಗಲೂ ಸಿಗುವುದಿಲ್ಲವಾದ್ದರಿಂದ ಶಾಂಕರ ಸಿದ್ಧಾಂತದ ಅಧ್ಯಯನದಲ್ಲಿ ಅವರು ನನ್ನ ನೆರವನ್ನಪೇಕ್ಷಿಸಿದ್ದಾರೆ. ಬೃಹದಾರಣ್ಯಕದ ಮುಖ್ಯ ಭಾಗಗಳನ್ನು ಅವರೊಡನೆ ಅಧ್ಯಯನ ಮಾಡುತ್ತಿದ್ದೇನೆ. ನಮ್ಮಲ್ಲಿ ಅವರಿಗೆ ತುಂಬ ವಿಶ್ವಾಸವಿದೆ. ಪ್ರಾಮಾಣಿಕವಾಗಿ ಸತ್ಯಾನ್ವೇಷಣೆಯಲ್ಲಿ ತೊಡಗಿರುವ ಸರಳವ್ಯಕ್ತಿ ಅವರು. ಬೇಲೂರು ಹಳೇಬೀಡುಗಳಿಗೆ ಅವರನ್ನು ಕರೆದೊಯ್ದಿದ್ದೆ. ಅದೊಂದು ಮಹಾದಿನ-ಭರತಖಂಡದ ಗತವೈಭವವನ್ನು ಪ್ರತ್ಯಕ್ಷವಾಗಿ ದರ್ಶಿಸುವ ಸುದಿನ. ಚಿಕ್ಕಮಗಳೂರಿನಲ್ಲಿ ಇರುಳು ಕಳೆದವು. ಕಲ್ಹತ್ತಿಯ ಪ್ರವಾಸದ ಬಗ್ಗೆ ಮಾನಪ್ಪನವರಿಗೆ ಬರೆದಿದ್ದೇನೆ. ನಾನು ಮರೆಯುತ್ತಿರುವಾಗ ಇಡೀ ಮೈದಾನವೇ ನನ್ನ ಕಣ್ಮುಂದೆ ಹಬ್ಬಿದಂತಿದೆ. ಎಂಥ ವೈಭವಪೂರ್ಣವಾದ ಸೂರ್ಯೋದಯ ಸುರ್ಯಾಸ್ತಗಳು! ಎರಡು ದಿನಗಳ ಹಿಂದೆ ಮುಚ್ಚಂಜೆ ಸಮಯದಲ್ಲಿ ಸೂರ‍್ಯನ ಉಜ್ವಲ ಕಿರಣಗಳು ಸುರಿಯುತ್ತಿದ್ದ ಮಂಜಿನ ಮೂಲಕ ತೂರಿ, ಕೋರೈಸುವ ಹಾಗೂ ಮಂದಮಂದವಾದ ಬಣ್ಣಗಳ ಸುಂದರ ತೆರೆಯನ್ನು ಬೆಯ್ದಿದ್ದುವು. ಸ್ವರ್ಗವೇ ನಿಸರ್ಗದ ಮೇಲೆ ನಾನಾ ವರ್ಣಗಳ ಢಾಕಾ ಮಸ್ಲಿನ್ ತೆರೆಯನ್ನು ಇಳಿಬಿಟ್ಟಂತಿತ್ತು. ಪ್ರತಿನಿತ್ಯ ನಾವು ವಾಯು ಸಂಚಾರಕ್ಕಾಗಿ ಬಹಳ ದೂರ ಹೋಗುತ್ತೇವೆ. ಆಹ್ಲಾದಕಾರಿಯಾದ ಚೆಲುವುದಾಣಗಳನ್ನು ದರ್ಶಿಸುತ್ತೇವೆ, ಕೆಲವುದಿನಗಳ ಹಿಂದೆ ದೊಡ್ಡದೊಂದು ಚಿರತೆ ತನ್ನ ಮರಿಗಳೊಡನೆ ಟೆನ್ನಿಸ್ ಮೈದಾನದಲ್ಲಿ ಆಡುತ್ತಿದ್ದುದನ್ನು-ಟೆನಿಸ್ ಚೆಂಡಾಟವನ್ನಲ್ಲ-ಕಂಡೆವು. ತಾಯಿಯೊಡನೆ ಮರಿಗಳನ್ನು ಕೂಡಿಸುವ ಪ್ರೇಮದ ಆಟವಾಗಿತ್ತು. ಅದು. ಪ್ರಕೃತಿಯನ್ನು ಪ್ರಕ್ಷುಬ್ದಗೊಳಿಸುವ ವೈನಾಶಿಕ ಶ್ರೇಣಿಯ ಉಪಾಧಿಗಳೆಲ್ಲ ಅಲ್ಲಿ ಮಾಯವಾಗಿದ್ದುವು. ದುರ್ದೈವದಿಂದ ಪಾಶವಿಕಾನಂದದ ಆ ಹಬ್ಬವನ್ನು ನಾನು ನೋಡಲಾಗಲಿಲ್ಲ.

ಬಾಬಾಬುಡನ್ ಪರ್ವತಶ್ರೇಣಿಯ ಇಡೀ ವಾತಾವರಣ ಬ್ರಹ್ಮತತ್ತ್ವದಿಂದ ಪ್ರಸ್ಪಂದಿಸುತ್ತಿದ್ದಂತೆ ನನಗೆ ಅನುಭವವಾಗುತ್ತಿತ್ತು. ಸರ್ವಂ ಖಲ್ವಿದಂ ಬ್ರಹ್ಮ ಎಂಬ ಉಪನಿಷನ್ಮಂತ್ರವನ್ನು ಪ್ರತಿನಿತ್ಯ ವಿ.ಎಸ್, ಮತ್ತು ಬ್ರಮಟನ್‌ರೊಡನೆ ನಾನು ಧ್ಯಾನಿಸುವುದುಂಟಷ್ಟೆ! ಆ ದೃಶ್ಯ ನಮ್ಮ ಬೋರಲು ಹಾಕಿರುವ ಎಲುಬು ಬುರುಡೆಯ ಪ್ರತಿಬಂಧಕಗಳನ್ನು ನಿವಾರಿಸಿ ಬುದ್ಧಿ ತರ್ಕಗಳ ಸೆರೆಮನೆಯ ಗೋಡೆಯೊಳಗೆ ಕ್ರೀಡಾಸಕ್ತವಾಗಿರುವ ಚಿತ್ತವೃತ್ತಿಗೊಂದು ವಾಸ್ತವಾಧಾರವನ್ನು ಕಲ್ಪಿಸುತ್ತದೆ.

ನರಸಿಂಹಮೂರ‍್ತಿಯವರಿಗೆ ನನ್ನ ಸಪ್ರೇಮ ವಂದನೆಗಳನ್ನು ಸಲ್ಲಿಸಿ. ಅವರು ಮದುವೆಯಲ್ಲಿ ನಿಮ್ಮ ‘ಬಲಗೊಡೆಯ’ನ ಪಾತ್ರವನ್ನು ವಹಿಸಿರಬೇಕೆಂದು ಭಾವಿಸಿದ್ದೇನೆ.

ದೊಡ್ಡಣ್ಣಯ್ಯನಿಗೆ, ಶೇಷಪ್ಪಗೌಡರಿಗೆ, ಎಲ್ಲ ಹುಡುಗರಿಗೆ ಮತ್ತು ಅವರ ಸೋದರರಿಗೆ, ಕಳೆದ ವರ್ಷನನಗೆ ಸೊಗಸಾದ ಊಟ ಬಡಿಸಿದ ಸೋದರಿಯರಿಗೆ-ಎಲ್ಲರಿಗೂ ನನ್ನನ್ನು ನೆನಪು ಮಾಡಿಕೊಡಿ.

ವಿವಾಹ ಸಮಾರಂಭಕ್ಕಾಗಿ ನಿಮ್ಮೊಡನಿರುವ ಎಲ್ಲ ಮಿತ್ರರಿಗೂ, ಜತೆಗೆ ನಿಮ್ಮಿಬ್ಬರಿಗೂ ಶುಭಾಶಯಗಳನ್ನು ಪ್ರೀತಿಯನ್ನು ಸಲ್ಲಿಸುತ್ತೇನೆ.

ಬೆಂಗಳೂರಿನ ವಿಳಾಸಕ್ಕೆ ಬರೆಯಿರಿ.

ಇಂತು ನಿಮ್ಮ ಪ್ರೀತಿಯ
ಸಿದ್ಧೇಶ್ವರಾನಂದ