೨೪ನೆಯ ಮೇ ೧೯೩೭ರಲ್ಲಿ ಶ್ರೀ ಡಿ.ವಿ. ಗುಂಡಪ್ಪನವರು ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ನಾಗಸಂದ್ರ ರಸ್ತೆಯಿಂದ ಛಂದೋಬದ್ಧವಾದ ಕಾವ್ಯಮಯ ಭಾಷೆಯಲ್ಲಿಯೆ ತಮ್ಮ ಆಶೀರ್ವಾದದ ಓಲೆಯನ್ನು ಬರೆದು ಕಳಿಸಿದ್ದಾರೆ:

ಶ್ರೀಮಂತಕವಿ ಕೆ.ವಿ. ಪುಟ್ಟಪ್ಪ ಕೇಳಿದನು,

ಸಿರಿವರಗಳೊಂದುಮಿಲ್ಲದ ಗುಂಡುರಗಳೆಯನು:-
ಗೆಳೆಯನೆ, ಸ್ವೀಕರಿಪುದೆನ್ನಯಭಿನಂದನೆಯ.
ನಿನ್ನಯಾಹ್ವಾನಮೆನ್ನಯ ಹಸ್ತ ಚಿತ್ತಗಳ
ಮುಟ್ತಿಹುದು. ಸಂತಸಂಬಟ್ಟು ನಾಂ ವಂದಿಪೆನು

ಪರೀಕ್ಷೆಯ ವಿಶೇಷ ಸಾಹಿತ್ಯೋತ್ಸವದ ದುಡಿತ
ವೆನಗೆ ತಪ್ಪಿಸಿತು (ನೀನೇ ಶಂಕೆಪಟ್ಟಂತೆ)
ನಿನ್ನಯ ವಿಶೇಷ ಸಾಹಿತ್ಯೋತ್ಸವದ ಸೊಗವ.
ಕೆಳೆನುಡಿಯ ಬರೆಯಲುಂ ಬಿಡುವಿಲ್ಲದಂತಾಯ್ತು.
ನೀನೀಗಳಾನುಮೀ ಹರಕೆಯನು ಕೊಳ್ಳುವದು:-

ನಿನ್ನ ಬಾಳ್ಗೆರಡನೆಯ ಕಣ್ಣು ಬಂದಿಹುದೀಗ.
ಪೊಸಬಳ್ಳಿಯೊಂದೀಗ ನಿನ್ನಿರವನಪ್ಪಿಹುದು.
ಅದರ ತಳಿರಲರುಗಲ ಸವ ಬೆಡಗು ಬಣ್ಣಗಳು
ನಿನ್ನ ತಿಳಿಗಣ್ಣನಿನ್ನಷ್ಟಗಲವರಳಿಸಲಿ
ಅದರ ಮೆಲ್ಲುಲಿಯ ನಸುನಗೆಯ ಸೆಲೆ ಸುಳುಹುಗಳು
ನಿನ್ನ ಕಿವಿಗಿನ್ನಷ್ಟು ಸೂಕ್ಷ್ಮತೆಯ ಸೇರಿಸಲಿ.
ಅಂತು ನೀಂ ಜಗದ ಬದುಕಿನ ಮಹಿಮೆ ಮರುಮಗಳ
ಕಾಣುತ್ತೆ, ಕೇಳುತ್ತೆ, ಪೇಳುತ್ತಲಿಹುದೆಮಗೆ;
ಆಲಿಸುತೆ, ಬಾಳೊಳ್ಳಿತೆನುತೆ, ನಾಂ ನಲಿಯುವೆವು.
ನಿನ್ನ ಕೊರಲೊಡನೀಗ ಕೊರಲೊಂದು ಸೇರಿಹುದು;
ಅಂತಿನ್ನು ಪೊಸರಾಗದಿಂಬೊಂದು ಹೊಮ್ಮುವುದು;
ಅದು ನಮ್ಮ ಕನ್ನಡದ ಜೀವವನು ತಣಿಸುವುದು.

೨೭-೪-೧೯೩೭ರಲ್ಲಿ ಬೆಂಗಳೂರಿನ ಬಸವನಗುಡಿಯಿಂದ ಪೂಜ್ಯ ಬಿ.ಎಂ. ಶ್ರೀಕಂಠಯ್ಯನವರು ಒಂದು ಕಾವ್ಯಭಾಷೆಯ ಕಾವ್ಯಮಯ ಹರಕೆ ಕಳುಹಿಸಿದ್ದಾರೆ:

ನನ್ನ ಅಕ್ಕರೆಯ ಪುಟ್ಟಪ್ಪನವರಿಗೆ-

ನೀವು ಪ್ರೀತಿಯಿಂದ ಕಳುಹಿಸಿದ ಲಗ್ನಪತ್ರಿಕೆಗನುಸಾರವಾಗಿ ಅಲ್ಲಿಗೆ ಬಂದು ನಿಮ್ಮ ಮತ್ತು ಶ್ರೀ ಮನಪ್ಪನವರ ಮದುವೆಯ ಆನಂದವನ್ನು ನಿಮ್ಮ  ನಡುವೆ ಸವಿಯಬೇಕೆಂದು ಬಹಳ ಪ್ರಯತ್ನಪಟ್ಟೆನು. ಆದರೆ ಪರೀಕ್ಷೆಯ ಫಲಿತಾಂಶಗಳ ಕೂಟಗಳ ಕಾಟಗಳು ಅಡ್ಡಗಟ್ಟಿವೆ. ಒಂದಾಗುತ್ತಲು ಒಂದು- ಆದರೆ ನಿಮ್ಮ ಪರಮಾನಂದದಲ್ಲಿ ಈ ವಿವರಣೆ ಸಾಕು. ಬಯಸಿದೆಡೆ ಬಿಡುತೆಯಲಿ ಬಾನಿನಲಿ ಹಾರಿ ಹೋಗುವ ಹಕ್ಕಿಗಳ ಕಂಡು ಗೂಡಿನಲಿ ತಡೆಗೊಂಡು ಬರದೆ ಗರಿಗೆದರಿ ಬಾಯಾರ‍್ವ ಗಿಳಿಯಂತೆ ಮಿಡಿದು, ಇಲ್ಲಿಂದಲೆ ಆ ಆನಂದವನ್ನು ತುಂಬಿಕೊಂಡು, ಇಲ್ಲಿಂದಲೇ ನನ್ನ ಹೃದಯದ ಉತ್ತಮವಾದ ಹರಕೆಗಳನ್ನು ನಿಮ್ಮಿಬ್ಬರಿಗೂ ನಿಮ್ಮ ನಾಲ್ವರಿಗೂ ಎಂದು ಹೇಳಿದರೆ ಅತಿ ಸಲಿಗೆಯಾ ಗದಷ್ಟೆ? ಹರಸುವುದಷ್ಟೇ ನನಗುಳಿದುದು.

ನಿಮ್ಮೊಲುಮೆ ನನ್ನ ಸೆಳೆಯುತಿದೆ-ನಿಮ್ಮ ನನ್ನ ನಂಟು ಬಲವಾಗಿ ಎಳೆಯುತಿದೆ. ಎಷ್ಟೋ ಸವಿ ನೆನಪುಗಳು ನಮ್ಮನೊಂದುಗೂಡಿಸಿವೆ. ಇದು ಮಾನಪ್ಪನವರಿಗೂ ಸೇರಿದ್ದು. ಚಿನ್ನದಂತಹ ಹುಡುಗರು. ನಿಮ್ಮ ನಲ್ಲೆಯರೊಡನೆ ಹಿರಿಯ ಬಾಳು ಬಾಳಿ, ಸಿರಿಯ ಬಾಳು ಬಾಳಿ, ಚಿರಕಾಲ ಧರ‍್ಮ ಬಾಳು, ಪೆರ‍್ಮೆಬಾಳು ಬಾಳಿ, ನಿಮ್ಮ ಹಿರಿಯರನು ನಲಿಸಿ, ನಿಮ್ಮ ನಾಡನು ಮೆಚ್ಚಿಸಿ, ದೇವರ ಸೇವೆಯನ್ನು ಮಾಡಿ, ಆನಂದವಾಗಿರಿ ಎಂಬುದೇ ನನ್ನ ಹಾರೈಕೆ.

ಒಬ್ಬರು ವರಕವಿಗಳು, ವೀರತನವಿಲ್ಲದವರಲ್ಲ. ಒಬ್ಬರು ವೀರರು,  ಕವಿಗುಣವಿಲ್ಲದವರಲ್ಲ. ನಿಮ್ಮ ಮನೆ ಬೆಳಗಲಿ, ನಿಮ್ಮ ಕುಡಿ ಬೆಳೆಯಲಿ. ನಿಮ್ಮಿಂದ ನಿಮ್ಮ ಮಕ್ಕಳಿಂದ ಲೋಕ ಧನ್ಯವಾಗಲಿ.

ನಿಮ್ಮವ
ಬಿ.ಎಂ.ಶ್ರೀ

೨೯-೪-೧೯೩೭ರಲ್ಲಿ ಬೆಂಗಳೂರಿನ ಬಸವನಗುಡಿಯ ಗವಿಪುರದ ವಿಸ್ತರಣದಿಂದ ಶ್ರೀ ಮಾಸ್ತಿ ವೆಂಕಟೇಶ ಐಯಂಗಾರ್ ಅವರು ಶುಭಾಶಯ ಕಳಿಸಿದ್ದಾರೆ: ಪ್ರಿಯ ಪುಟ್ಟಪ್ಪನವರಿಗೆ, ನಮಸ್ಕಾರ-

ನೀವು ಬಹು ವಿಶ್ವಾಸದಿಂದ ಕಳುಹಿಸಿದ ಆಹ್ವಾನ ಬಂದು ಸೇರಿತು. ಅದರ ಮಾತಿನಿಂದ ನನಗೆ ಆದ ಸಂತೋಷ ಹೇಳತೀರದು. ಆದರೆ ಸದ್ಯ ನಾನು ಇಲ್ಲಿಂದ ಅಲ್ಲಿಗೆ ಬರುವುದಕ್ಕೆ ಅನುಕೂಲವಿಲ್ಲದೆ ಇದೆ. ಆದ್ದರಿಂದ ಈ ಕಾಗದವನ್ನು ಬರೆಯುತ್ತಿದ್ದೇನೆ. ನಿಮಗೆ ನಿಮ್ಮ ಕುಟುಂಬಕ್ಕೆ ಶ್ರೀ ಮಾನಪ್ಪನವರಿಗೆ ಅವರ ಕುಟುಂಬಕ್ಕೆ ಭಗವಂತನು ಸದಾ ಒಳ್ಳೆಯದನ್ನು ಮಾಡಲಿ ಎಂದು ನನ್ನ ಹಾರೈಕೆ-

ನಿಮಗೆ ನಿಮ್ಮ ಕುಟುಂಬದವರಿಗೆ ಎಂದು ನಿನ್ನೆ ಒಂದು ಕಾಪಿ Cup and Saucer ಮತ್ತು ರವಿಕೆ ಕಳುಹಿಸಿದೆ. ಅದು ಸೇರಿರಬಹುದೆಂದು ನಂಬಿದ್ದೇನೆ.

ಇಂತೀ ನಮಸ್ಕಾರ
ಮಾಸ್ತಿ ವೆಂಕಟೇಶ ಐಯಂಗಾರ್

೨೪-೪-೧೯೩೭ರಲ್ಲಿ ಬೆಂಗಳೂರಿನಿಂದ, ೧೫, ಗ್ರಾಂಟ್‌ರೋಡ್‌ನಿಂದ ಪ್ರೊಫೆಸರ್ ಎ.ಆರ್. ವಾಡಿಯಾ ಅವರು ಶುಭಾಶಯದ ಪತ್ರ ಬರೆದಿದ್ದಾರೆ. ಅವರು ಮೈಸೂರು ಮಹಾರಾಜಾ ಕಾಲೇಜಿನ ಫಿಲಾಸೊಫಿ ಪ್ರೊಫೆಸರ್ ಹುದ್ದೆಯಿಂದ ಮೈಸೂರು ಸಂಸ್ಥಾನದ ವಿದ್ಯಾ ಇಲಾಖೆಯ ಸರ್ವೋಚ್ಚ ಸ್ಥಾನವಾದ ಡೈರೆಕ್ಟರ್ ಆಫ್ ಪಬ್ಲಿಕ್ ಇನ್‌ಸ್ಟ್ರಕ್ಷನ್ (D.P.I) ಆಗಿ ಬೆಂಗಳೂರಿಗೆ ಹೋಗಿದ್ದಿರಬೇಕು.

The University Mysore
15,Grant Road, Bangalore
24-4-1937

My Dear Puttapa,

Some time back I heard with pleasure about your betrothal, and now I have received your invitation for which I am very grateful. Though I cannot be present, my heartiest wishes go out to you and to your young bride. May you find in her all that a poet can dream of in a woman and may she find in you all that a good wife can desire in her husband. May you both live a long life of joy and happiness. Amen!

Yours sincerely
A.R. Wadia

೨೫-೪-೧೯೩೭ ರಲ್ಲಿ ಶ್ರೀ ವಿ.ಸೀತಾರಾಮಯ್ಯನವರು ಬೆಂಗಳೂರಿನ ಚಾಮರಾಜ ಪೇಟೆಯ ಎರಡನೆಯ ರಸ್ತೆಯಿಂದ ತಮ್ಮ ಶುಭಾಶಯದ  ಪತ್ರ ಕಳಿಸಿದ್ದಾರೆ: ಶ್ರೀಮಾನ್ ಕೆ.ವಿ.ಪುಟ್ಟಪ್ಪನವರಿಗೆ ಗೆಳೆಯನ ಒಸಗೆ, ಬಿನ್ನಹ.

ತಾವು ವಿಶ್ವಾಸದಿಂದ ಕಳುಹಿಸಿದ ಸುದ್ದಿಯೂ ಆಹ್ವಾನವೂ ಮುಟ್ಟಿದುವು.

ಬಹುದಿನಗಳ ಹಿಂದೆಯೇ ನೆರವೇರಬೇಕಾಗಿದ್ದ ಮಂಗಳವು ಈ ತಿಂಗಳು ೨೦ಕ್ಕಾದರೂ ನಡೆಯಲಿರುವುದು ನಮ್ಮೆಲ್ಲರಿಗೂ ಸಂತೋಷದ ಸಂಗತಿ. ವಸಂತದ ಹುಣ್ಣಿಮೆ ಇಂದು ಆರಂಭವಾಗುವುದಾದರೂ ನಿಜವಾಗಿ ಈ ತಿಂಗಳ ಮೂವತ್ತರ ದಿನವೇ ಅದು ಬೆಳಗೀತು. ಅಂದು ವಧೂವರರಾಗಿ ದಂಪತಿಗಳಾಗುವ ತಮಗೂ ಶ್ರೀ ದೇವಿಯವರಿಗೂ ‌ಗೆಳೆಯನೊಬ್ಬನ ಸಂತೋಷದ ಕಾಣಿಕೆಯನ್ನು ಈ ದೂರದಿಂದ ಅರ್ಪಿಸುತ್ತಿದ್ದೇನೆ.

ಕುಪ್ಪಳಿಗೆ ಬರುವ ಆಸೆ ನನಗೂ ಬಹು ವರ್ಷಗಳಿಂದ ಇದೆ. ಕೆಲವರು ಹೇಳುವಂತೆ ಇನ್ನೂ ದರ‍್ಮ ಕರ‍್ಮ ಸಂಯೋಗ ಆಗಿಲ್ಲವೇನೊ ನನ್ನ ಅನುಕೂಲಕ್ಕೆ ನಾನು ತಮ್ಮ ಊರಿಗೆ ಬರುವುದಕ್ಕೆ ಆಗಿಲ್ಲ. ಈ ಶುಭಸಮಯಕ್ಕೂ ಅಲ್ಲಿಗೆ ಬರುವ ಅನುಕೂಲವಾಗದಿರುವುದಕ್ಕಾಗಿ ವಿಷಾದವಾಗುತ್ತಿದೆ. ಇಲ್ಲಿ ಪರಿಷತ್ತಿನ ವಸಂತೋತ್ಸವವು ನಡೆಯಲಿದೆ. ಅದಕ್ಕಾಗಿ ಚಾಕರರಾದ ನಾವಾದರೂ ಇಲ್ಲಿ ನಿಂತಿರಬೇಕಾದುದು ಅಗತ್ಯ. ಆದುದರಿಂದ ಮಾತ್ರ ಈ ಸಲದ ಪ್ರಯಾಣಕ್ಕೆ ಅಡ್ಡಿ ಬಂದಿದೆ. ಇಲ್ಲವಾಗಿದ್ದರೆ ಖಂಡಿತ ಅಲ್ಲಿಗೆ ಬರುತ್ತಿದ್ದೆ. ಸಾಕ್ಷಾತ್ ಬಾರದಿದ್ದರೂ ನನ್ನ ಮನಸ್ಸು ಅಲ್ಲಿರುವುದೆಂದೂ ಅಲ್ಲಿನ ಸಂಭ್ರಮಗಳಲ್ಲಿ ಭಾಗವಹಿಸುತ್ತದೆಯೆಂದೂ ತಾವು ಎಣಿಸಬೇಕೆಂದು ಬೇಡುತ್ತೇನೆ.

ಆ ಸಮಯದಲ್ಲಿ ಮೊದಲಾಗುವ ತಮ್ಮ ಆಶ್ರಮವು ಸುಖ ಶಾಂತಿ ಸುಫಲತೆಗಳಿಂದ ತುಂಬಿ ಮೆರೆಯಲಿ, ಬದುಕಿನ ಸಂಗತಿಗೆ ಒಲವಿನ ಗೆಳತಿಯೊಬ್ಬಳು ದೊರೆತು ಆಕೆಯ ಮತ್ತು ನಿಮ್ಮ ಪುಣ್ಯದಿಂದ ನಿಮ್ಮ ದಾಂಪತ್ಯವು ದಿವ್ಯವಾಗಿ ಚಿರಕಾಲ ನಿಲ್ಲಲಿ. ಅದರ ಸವಿ ಸಂತೋಷಗಳು ನಿಮ್ಮ ಬದುಕಿಗೆ ಕೊಡುವಂತೆ ನಮ್ಮ ನಾಡಿಗೂ ನುಡಿಗೂ ಕಲೆಗೂ ಹೊಸಕಾಂತಿ ಭವ್ಯತೆಗಳನ್ನೂ ಕೊಡಲಿ. ನಿಮ್ಮನ್ನರಿತ ನಮಗೆ ಇದಕ್ಕಿಂತ ಹೆಚ್ಚಿನ ಸಂತೋಷವಿಲ್ಲ; ಹಾರೈಕೆಯಿಲ್ಲ.

ಇದೇ ಸಮಯದಲ್ಲಿ ನಡೆಯಲಿರುವ ಶ್ರೀ ಮಾನಪ್ಪನವರ ಲಗ್ನವೂ ಆತ್ಮೀಯರೊಬ್ಬರದೆಂದು ನಂಬಿರುವ ನಮ್ಮಿಂದ ಅವರಿಗೂ ನನ್ನ ಗೆಳೆತನದ ಕಾಣಿಕೆಯನ್ನು ಅರ್ಪಿಸಬೇಕೆಂದು ಬೇಡುತ್ತೇನೆ. ನವದಂಪತಿಗಳಾದ ನಿಮ್ಮಿಬ್ಬರಿಗೂ ಶುಭಪರಂಪರೆಯುಂಟಾಗಲಿ.

ಯಾವುದೊ ಸಂಬಂಧದಲ್ಲಿ ಕೆಲವು ಪಂಕ್ತಿಗಳನ್ನು ಬರೆದು ‘ಸಪ್ತಪದಿ’ ಎಂದು ಹೆಸರಿಟ್ಟೆ. ಅಲ್ಲಿನ ಒಂದೆರಡು ಪದ್ಯಗಳ ಬಯಕೆಯಂತೆ ನಿಮ್ಮ ಬದುಕುಗಳೂ ತುಂಬಲೆಂದು ಹಾರೈಸುವೆ.

ಒಂದೇ ಗೊಂಚಲ ಹೂವುಗಳಂದದಿ
ಒಂದೇ ಗಾಳಿಗೆ ತೊನೆದೇವು.
ಒಂದೇ ಗೊನೆಯಲಿ ಬಿಟ್ಟ ಹಣ್ಣಿನಂ
ತೊಂದೇ ಸವಿಯನ್ನಿತ್ತೇವು.

ಹೆಜ್ಜೆಗಳೇಳನು ಈಗಿಡುವಂತೆಯೆ
ತಲೆಗಳನೇಳನು ನಡೆದೇವು,
ಮಕ್ಕಳು ಮರಿಮೊಮ್ಮಕ್ಕಳ ಹಾಲಿಗೆ ಶುಚಿನಡೆ ಸಕ್ಕರೆ ಬೆರಸೇವು.

ಮನೆಗಳು ಮಠಗಳು ನೆತ್ತರು ಬಳಿವುವು.
ಇಬ್ಬರ ದೇವರು ಹರಸುವರು.
ಗಂಗಾ ಯಮುನಾ ಸಂಗಮವಾಗಿರೆ
ಒಂದೇ ಕಡಲಿಗೆ ಸಾರುವೆವು.

ಅಕ್ಕದ ಪಕ್ಕದ ನಾಡಿನ ಬೇಗೆಯ
ದಾಹವನನಿಬರು ಹರಿಸೇವು,
ಸುತ್ತಲ ತೋಟದ ಹೊಲಗದ್ದೆಗಳಿಗೆ
ಜೀವನ ಹಾಯಿಸಿ ನಲಿದೇವು.

ದಿನದಿನವೂ ಹೊಸ ಮೆಚ್ಚನು ಬಳಸುತೆ
ದಿನವೂ ಹತ್ತಿರ ಸರಿದೇವು,
ದಿನವೂ ಹೊಸಗುಣದಾಕರ್ಷಣದಲಿ
ಒಲವಿನ ಬೆಸುಗೆಗೆ ಬೆಸೆದೇವು.

ಎಮ್ಮೀ ಬಾಳೇ ಹೂ ಬಿಟ್ಟಂದದಿ
ಎಲ್ಲರ ಮೊಗವೂ ಅರಳೀತು,
ಎಮ್ಮೀ ನಗುವೇ ನೆರೆಯಿಟ್ಟಂದದಿ
ಎಲ್ಲಾನಗುವೇ ನೆರೆಯಿಟ್ಟಂದದಿ
ಎಲ್ಲಾ ತೆನೆ ಹಾಲಿಟ್ಟೀತು!
ಇಟ್ಟೀತು. ಇಡಲಿ ಎಂದು ಕೋರುವ

ತಮ್ಮ
ವಿ.ಸೀತಾರಾಮಯ್ಯ

೨೩-೪-೧೯೩೭ರಲ್ಲಿ ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನಿಂದ ಆಗ ‘ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕನ್ನಡ’ ಆಗಿದ್ದ ಶ್ರೀಯುತ ಎ.ಆರ್. ಕೃಷ್ಣಶಾಸ್ತ್ರಿಗಳು ಆಶೀರ್ವಾದ ಪತ್ರ ಬರೆದಿದ್ದಾರೆ:

ಚಿ||ರಾ|| ಪುಟ್ಟಪ್ಪನವರಿಗೆ ಆಶೀರ್ವಾದ

ನೀವು ವಿಶ್ವಾಸವಿಟ್ಟು ಬರೆದ ಕಾಗದವೂ ಆಹ್ವಾನವೂ ಲಗ್ನಪತ್ರಿಕೆಗಳೂ ತಲುಪಿದುವು. ಈ ತಿಂಗಳ ಕೊನೆಯಲ್ಲಿ ಬಹಳ ಕೆಲಸವಿರುವುದರಿಂದ ಊರು ಬಿಟ್ಟು ಬರಲು ಸಾಧ್ಯವಿಲ್ಲ. ನಾನು ಬರದಿದ್ದರೂ ನನ್ನ ಆಶೀರ್ವಾದಗಳನೇಕಾನೇಕ ಈಗಲೆ ಬರುತ್ತವೆ. ಭಗವಂತನು ತಮಗೂ ಮಾ|| ಮಾನಪ್ಪನವರಿಗೂ ಸಕಲ ಸಂಸಾರಸೌಖ್ಯವನ್ನೂ ಕೊಟ್ಟು ಕಾಪಾಡಲಿ. ತಾವು ಸುಖಿಗಳಾಗಿ ಚಿರಂಜೀವಿಗಳಾಗಿ ಬಾಳಿ ಎಂದು ಭಗವಂತನಿಗೆ ಪ್ರಾರ್ಥನೆ ಮಾಡಿ ಆಶೀರ್ವದಿಸುತ್ತೇನೆ.

ಇತಿ ಆಶೀರ್ವಾದ
ಎ.ಆರ್. ಕೃಷ್ಣಶಾಸ್ತ್ರಿ

೨೮-೪-೧೯೩೭ರಲ್ಲಿ ನನ್ನ ಆಪ್ತಮಿತ್ರರಾದ ಶ್ರೀ ಎ. ಸೀತಾರಾಂ (ಸಾಹಿತ್ಯಲೋಕದಲ್ಲಿ ಪ್ರಸಿದ್ಧರಾಗಿರುವ ‘ಆನಂದ’) ಮೈಸೂರಿನ ಲಕ್ಷ್ಮೀಪುರದ ೯೩೩ನೆಯ ನಂಬರಿನ ಮನೆಯಿಂದ ಶುಭಾಶಯ ಕಳಿಸಿದ್ದಾರೆ:

ಪ್ರಿಯ ಗೆಳೆಯರಾದ ಶ್ರೀಮಾನ್ ಪುಟ್ಟಪ್ಪನವರಿಗೆ ಗೆಳೆಯರೇ,

ನಿಮ್ಮೀರ‍್ವರ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆ ತಲುಪಿತು. ಅದಕ್ಕಾಗಿ ಬಹಳ ಕೃತಜ್ಞನು. ನಿಮ್ಮೀರ‍್ವರ ಜೀವನ ಪಥಗಳು ಸುಖಸೌಭಾಗ್ಯಮಯವಾಗಲಿ, ನಿಮ್ಮ ಪಾಲಿಗೆ ಜಗದೀಶ್ವರನ ಕರುಣೆ ಅಪಾರವಾಗಲಿ, ನಿಮ್ಮ ಜೀವ ತುಂಬಿತುಳುಕಿ ತೊರೆಯಾಗಿ ಹರಿಯಲಿ ಎಂದು ಪ್ರಾರ್ಥಿಸುತ್ತೇನೆ.

ಇಂತು ನಿಮ್ಮ ಗೆಳೆಯ
ಎ. ಸೀತಾರಾಂ

ಕಲೆಗಾರರೂ ಆಗಿದ್ದ ಅವರು ಈ ಪುಟ್ಟ ಕಾಗದಕ್ಕೆ ಒಂದು ಓಕುಳಿ ಬಣ್ಣದ ಚೌಕಟ್ಟು ಕಟ್ಟಿ ಮಂಗಳಾಲಂಕಾರಮಾಡಿ ಬರೆದಿದ್ದಾರೆ.

ತಾರೀಖು ೨೮-೪-೧೯೩೭ರಲ್ಲಿ ಮೈಸೂರು ಕೃಷ್ಣಮೂರ‍್ತಿಪುರದ ೧೨೨೩ನೆಯ ಮನೆಯಿಂದ ಮಿತ್ರ ತೀ.ನಂ.ಶ್ರೀಕಂಠಯ್ಯನವರು ಮಂಗಳವಾಗಲಿ ಎಂದು ಹಾರೈಸಿ ಬರೆದಿದ್ದಾರೆ:

ಶ್ರೀಮಾನ್ ಪುಟ್ಟಪ್ಪನವರಲ್ಲಿ ವಿಜ್ಞಾಪನೆಗಳು:

ನಿಮ್ಮ ಪ್ರೀತಿಪೂರ್ವಕವಾದ ಆಹ್ವಾನವು ಕೈಸೇರಿತು. ನೀವು “ಗೃಹಸ್ಥ”ರಾಗುವುದನ್ನು ತಿಳಿದು ನನಗೆ ತುಂಬ ಸಂತೋಷವಾಯಿತು. ಮನೆಯನ್ನಂತೂ ಕಟ್ಟಿಸುತ್ತೀದ್ದೀರಿ; ಮನೆಗೂ ನಿಮಗೂ ಒಬ್ಬ ಒಡತಿ ಬರುವುದು ಸಹಜವಾಗಿಯೇ ಇದೆ. ಗೃಹಿಣಿಯಿಂದ ಅದು “ಗೃಹ”ವಾಗಲಿ. ಈ ನಲ್ಲೆಯ ಆಗಮನದಿಂದ ನಿಮ್ಮ ಕವಿತೆಯಲ್ಲಿ ಇನ್ನೂ ಹೊಸಹೊಸ ರಸಗಳು ಹೆಚ್ಚಾಗಿ ಊರಲಿ. ಸಂಸಾರವನ್ನು ಕಟ್ಟಿಕೊಂಡು ಬಾಳುವ ನಮ್ಮ ತೊಡಕುಗೆಲುವುಗಳು ನಿಮ್ಮ ಸ್ವಕೀಯಾನುಭವಕ್ಕೆ ಬರಲಿ.

ನಿಮ್ಮ ಆಹ್ವಾನವನ್ನು ಮನ್ನಿಸಿ ವಿವಾಹದ ಮಹೂರ‍್ತಕ್ಕೆ ಅಲ್ಲಿರಬೇಕೆಂಬ ಆಸೆ ನನಗೆ ದಿಟವಾಗಿಯೂ ಬಹಳವಾಗಿದೆ. ಆದರೆ ನಾನು ಇಲ್ಲಿಂದ ಹೊರಟು ಬರಲು ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲವಾಗಿದೆ. ನನ್ನ ಅನಿವಾರ‍್ಯ ನಿಜವಾಗಿಯೂ ಬಲವತ್ತರವಾದದ್ದು. ಆಗಲಿ, ಇಲ್ಲಿಂದಲೇ. ವಧೂವರದ್ವಯಕ್ಕೆ ಮಂಗಳವಾಗಲೆಂದು ಹಾರೈಸುತ್ತೇನೆ. ಶ್ರೀಮಾನ್ ಮಾನಪ್ಪನವರಿಗೂ ನನ್ನ ಅಭಿನಂದನೆಗಳನ್ನು ತಿಳಿಸಿ. ನಿಮ್ಮ ಸಮ್ಮೇಳನದ ಕಾಲದಲ್ಲಿ ನಮಗೆ ಪರಿಚಿತವಾದ ನಿಮ್ಮ ಬಂಧುವರ್ಗಕ್ಕೆಲ್ಲ ನನ್ನ ನೆನಪು ಕೊಡಿ.

ಶ್ರೀಮಾನ್ ನಂಜುಂಡಯ್ಯನವರಿಗಾಗಿ ನೀವು ಕಳುಹಿಸಿದ್ದ ಆಹ್ವಾನ ಪತ್ರಿಕೆಯನ್ನೂ ತಲುಪಿಸಿದೆನು. ಅವರು ನಿಮಗೆ ಶುಭವನ್ನು ಕೋರಿ ಅಭಿನಂದನೆಗಳನ್ನು ಈ ಮೂಲಕ ತಿಳಿಸುತ್ತಾರೆ.

ಇಂತೀ ವಿಜ್ಞಾಪನೆಗಳು
ತೀ.ನಂ. ಶ್ರೀಕಂಠಯ್ಯ

೩೦-೪೧೯೩೭ರಂದು ವಿನೋದಶೀಲರಾಗಿದ್ದ ನಾ. ಕಸ್ತೂರಿಯವರು ಮೈಸೂರು ಕೃಷ್ಣಮೂರ‍್ತಿಪುರಂನ ಅವರ ಮನೆ ‘ಕಲ್ಪತರು’ವಿನಿಂದ ಪದ್ಯದಲ್ಲಿ ಶುಭಾಶಯ ಪತ್ರ ಬರೆದು ಕಳುಹಿಸಿದ್ದರು; ನನ್ನ ಸಹಧರ‍್ಮಿಣಿಯಾಗಲಿರುವವಳ ಹೆಸರನ್ನು ‘ಹೇಮಾವತಿ’ಯನ್ನೂ ‘ಚಿನ್ನಮ್ಮ’ ಎಂದು ಬಾಷಾಂತರಿಸಿದ್ದಾರೆ:

ಕತ್ತುರಿಯು ‘ಹೃತ್ತಿ’ ನಲಿ
ಬಯಸುವನು, ಹರಸುವನು:-
ಪುಟ್ಟಪ್ಪ-“ಚಿನ್ನಮ್ಮ”-
ಆ ಹೆಸರೇ-ಚಂದ-ಮ್ಮ-
ತುಂಗಭದ್ರೆಯರಂತೆ, ಗಂಗೆಯಮುನೆಯರಂತೆ,
ಕವಿ ಕಾವ್ಯವೆರಡಂತೆ,
ಬೆಲ್ಲದಲಿ ಸವಿಯಂತೆ,
ಹುಲ್ಲಿನಲಿ ಹಸುರಂತೆ,
ಪೂತ ಮಾಮರದಲ್ಲಿ ಕೋಗಿಲೆಗಳಿರುವಂತೆ,
ಹಾಲು ಸಕ್ಕರೆಯಂತೆ,
ಅವಲಕ್ಕಿ ಮೊಸರಂತೆ,
ಜೇನು ಹಲಸುಗಳಂತೆ,
ನವಿಲುಕಲ್ಲಿನ ಮೇಲೆ ಕುಣಿವ ಸಿಡಿಲ್ಮಿಂಚಂತೆ,
ಮಾತು ಮತ್ತದರರ್ಥ ಸಂಗ ಬಿಡದಿರುವಂತೆ,
ಕಾಳಿನೊಳಗಿರುವೆರಡು ಬೇಳೆಯಂತೆ,-
ಪುಟ್ಟಪ್ಪ-‘ಚಿನ್ನ’-ಮ್ಮ-
ಆ ಹೆಸರೇ ಕನ್ನಡವು-
ನೀವಿಬ್ಬರಿರುವಂತೆ,
ಕತ್ತುರಿಯು ‘ಹೃತ್ತಿ’ನಲಿ
ಬಯಸುವನು, ಹರಸುವನು.
-ನಾಕ

ತಾರೀಖು ೨೦-೪-೧೯೩೭ರಲ್ಲಿ ಮೈಸೂರಿನ ವೀವರ್ಸ್ ಲೈನ್ಸ್‌ನ ೧೪೪೪ನೆಯ ನಂಬರಿನ ಮನೆ ‘ಶಾರದಾವಿಲಾಸ’ದಿಂದ ಶುಭಾಶಯ ಪತ್ರ  ಬರೆದಿದ್ದಾರೆ ನನ್ನ ಮಿತ್ರ ಡಿ.ಎಲ್‌. ನರಸಿಂಹಾಚಾರ್‌:

ಪ್ರಿಯಮಿತ್ರರಾದ ಶ್ರೀ ಶ್ರೀಮಾನ್ ಕೆ.ವಿ. ಪುಟ್ಟಪ್ಪನವರಿಗೆ,

ತಮ್ಮ “ಅರಣ್ಯದ ಆಹ್ವಾನ”ಕ್ಕಾಗಿ ತಮಗೆ ನಾನು ಬಹಳ ಕೃತಜ್ಞನಾಗಿದ್ದೇನೆ. ಅದರಂತೆ ನಾನು ಅಲ್ಲಿಗೆ  ಬರಲು ಸದ್ಯದಲ್ಲಿ ಅವಕಾಶವಾಗದಿದ್ದುದಕ್ಕಾಗಿ ತಮ್ಮ ಕ್ಷಮಾಪಣೆಯನ್ನು ಬೇಡುತ್ತೇನೆ. ಬರಬೇಕೆಂದು ಎಷ್ಟು ಆಸೆಯಿಂದ ಇದ್ದೇನೆ. ಆದರೆ ಮನೆಯ ತಾಪತ್ರಯಗಳು ನನ್ನನ್ನು ತಡೆದು ನಿಲ್ಲಿಸಿಕೊಂಡಿವೆ. ನಾನು ಇಲ್ಲಿಯೇ ಇದ್ದರೂ ನನ್ನ ಮನಸ್ಸು ಮಾತ್ರ ಅಲ್ಲಿದೆ ಎಂಬುದನ್ನು ತಾವು ತಿಳಿಯಬೇಕು. ತಮ್ಮ ಮದುವೆಯ ಶುಭ ಸಮಾಚಾರವನ್ನು ಕೇಳಿ ನನಗೆ ಬಹಳ ಸಂತೋಷ ಆಗಿದೆ. ‘ಭದ್ರಂ ಶುಭಂ ಮಂಗಳಂ’ ದೇವರು ತಮಗೆ ಕೀರ್ತಿಯನ್ನೂ ಆರೋಗ್ಯವನ್ನೂ ಆನಂದವನ್ನೂ ದಯಪಾಲಿಸಲೆಂದು ಬೇಡುತ್ತೇನೆ.

ಇತಿ ವಿಜ್ಞಾಪನೆಗಳು
ಡಿ.ಎಲ್. ನರಸಿಂಹಾಚಾರ್

ತಾರೀಖು ೨೮ ಏಪ್ರಿಲ್ ೧೯೩೭ ರಂದು “ಬಾಲಪ್ರಪಂಚ”ದ ಪ್ರತಿನಿಧಿ, ವಿ.ಅಶ್ವತ್ಥನಾರಾಯಣರಾವ್, ಬೆಂಗಳೂರಿನ ವಿಶ್ವೇಶ್ವರಪುರದ ನಂ.೨೯೭ ರಿಂದ ಅಭಿನಂದನೆ ಬರೆದಿದ್ದಾರೆ. ‘ನೆನಪಿನ ದೋಣಿಯಲ್ಲಿ’ಯ ಮೊದಲಿನಲ್ಲಿ ತಿಳಿಸಿರುವಂತೆ, ಅವರು ನಾನು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಕೊಡಲು ಸ್ವಾಮಿ ಚಿನ್ಮಾತ್ರಾನಂದರೊಡನೆ ದೊಡ್ಡಬಳ್ಳಾಪುರಕ್ಕೆ ಹೋಗಿದ್ದಾಗ, ಬೆಂಗಳೂರಿನಿಂದ ಜೊತೆಗೂಡಿ ಬಂದಿದ್ದರು; ಮತ್ತು ದೊಡ್ಡಬಳ್ಳಾಪುರದಿಮದ ನಂದೀಬೆಟ್ಟಕ್ಕೂ ಬಂದಿದ್ದರು. ಅವರು ಸತ್ಯಶೋಧನದ ಪುಸ್ತಕಾಲಯದ ಪಕ್ಕದ ‘ಖಾದಿಭಂಡಾರ’ ಕೆಲಸಗಾರರಾಗಿದ್ದರು.

ಪ್ರಿಯ ಪುಟ್ಟಪ್ಪನವರಿಗೆ,

ನಿಮ್ಮ ಆಹ್ವಾನಪತ್ರವು ಸಕಾಲದಲ್ಲಿ ಕೈಸೇರಿತು. ಆದರೆ ದೇಹಾಲಸ್ಯದ ನಿಮಿತ್ತ ನಾನು ನಿಮ್ಮ ಲಗ್ನದ ಕಾಲದಲ್ಲಿ ಹಾಜರಿರಲು ಸಾಧ್ಯವಿಲ್ಲ. ಅದಕ್ಕಾಗಿ ಕ್ಷಮೆ ಬೇಡುತ್ತೇನೆ.

ನಿಮ್ಮ ವಿವಾಹದ ಮಂಗಳ ಮಹೂರ‍್ತದಲ್ಲಿ, ಕನ್ನಡನಾಡೇ ಆನಂದ ಪಡುವಲ್ಲಿ, ನಾನು ಸಂತೋಷಪಡುವುದು ಏನು ವಿಶೇಷ? ನಿಮ್ಮ ಜೀವನದ ಈ ಒಂದು ಸೌಭಾಗ್ಯಪೂರ್ಣ ಸನ್ನಿವೇಶದಲ್ಲಿ ನನ್ನ ಸಹೃದಯತೆಯನ್ನು ಸೂಚಿಸಲು ಆತುರನಾಗಿದ್ದೇನೆ. ದಂಪತಿಗಳೀರ್ವರಿಗೂ ದೇವದೇವನು ಆಯಸ್ಸನ್ನೂ ಸುಖವನ್ನೂ ಆನಂದವನ್ನೂ ಸಮೃದ್ಧಿಯಾಗಿ ಕೊಡಲೆಂದು ಹಾರೈಸುತ್ತೇನೆ.

ನಿಮ್ಮ ವಿವಾಹದ ನೆನಪಿಗಾಗಿ ‘ವಿವಾಹ ಮಂಗಳ’ವೆಂಬ ಪುಟ್ಟಪುಸ್ತಕವನ್ನು ಕಳುಹಿಸಿರುವೆನು. ಈ ನಮ್ರ ಕಾಣಿಕೆಯನ್ನು ಸ್ವೀಕರಿಸಬೇಕಾಗಿ ಪ್ರಾರ್ಥನೆ.

ನಾನು ಈಗ ರಡು ವಾರಗಳ ಹಿಂದೆ ‘ಕೆಮ್ಮಣ್ಣುಗುಂಡಿ’ಗೆ ಹೋಗಿದ್ದಾಗ ಶ್ರೀ ಸಿದ್ದೇಶ್ವರಾನಂದರು ನೀವೆಲ್ಲರೂ ಬಂದಿದ್ದ ವಿಷಯವನ್ನು ತಿಳಿಸಿದರು. ಆದರೆ ನಾವು ಕೂಡಲೆ ಹಿಂತಿರುಗಬೇಕಾದುದರಿಂದ ನೋಡಲು ಅನುಕೂಲಿಸಲಿಲ್ಲ. ಶ್ರೀಯುತ ಮಾನಪ್ಪನವರಿಗೂ ನನ್ನ ನಮಸ್ಕಾರಗಳನ್ನು ಹೇಳಬೇಕು. ಅವರ ವಿವಾಹದ ಸಂದರ್ಭದಲ್ಲಿ ನನ್ನ ಶುಭಸೂಚನೆಗಳನ್ನು ಸಲ್ಲಿಸಬೇಕು.

ಸಾಧ್ಯವಾದರೆ ನಿಮ್ಮನ್ನು ಮೈಸೂರಿನಲ್ಲಿ-ಕಾಲೇಜಿನ ಬಾಗಿಲು ತೆಗೆದ ಮೇಲೆ-ನೋಡುವೆನು.

ನಿಮ್ಮ ಮಿತ್ರ
ಅಶ್ವತ್ಥನಾರಾಯಣ

ನಮ್ಮ ಮನೆ “ಉದಯರವಿ” ಯನ್ನು ಕಟ್ಟಿಸುತ್ತಿದ್ದ ಕೆ.ಸಿ. ಧಾಮ್ ಎಂಬ ಕಾಂತ್ರಾಟುದಾರರು, ನಮ್ಮ ಮದುವೆ ಮುಗಿದ ಮೇಲೆ, ೫-೫-೧೯೩೭ರಲ್ಲಿ ನಮಗೆ ಶುಭಾಶಯ ಕೋರಿ, ಮನೆ ಕಟ್ಟಿಸಲು ವಿಶ್ವವಿದ್ಯಾನಿಲಯ ಕೊಡುತ್ತಿದ್ದ ಸಾಲದ ಮೊತ್ತ ಬಂದಿತೇ? ಆದಷ್ಟು ಬೇಗ ಅದನ್ನು ಕೊಟ್ಟರೆ ಕಟ್ಟಿಸುವ ಮನೆ ಮುಂದುವರಿಯುವುದಕ್ಕೆ ಅನುಕೂಲವಾಗುತ್ತಿತ್ತು ಎಂದು ತುಂಬ ವಿನಯಪೂರ್ವಕವಾಗಿ ಕೇಳಿಕೊಂಡು ತಗಾದೆ ಮಾಡಿದ್ದರು. ಅವರು ತಮ್ಮ ಪೂರ್ವಜೀವನದಲ್ಲಿ ಬಂಗಾಳದ ವಿಧ್ವಂಸಕ ಕ್ರಾಂತಿಕಾರರಾಗಿ ಸೇರಿ, ಸರ್ಕಾರ ಅವರ ತಲೆಗೆ ಬಹುಮಾನ ಘೋಷಿಸಿದ್ದು. ಅದರಿಂದ ತಪ್ಪಿಸಿಕೊಳ್ಳಲು (ಸರ್ಕಾರ ಸಾರಿದ ರಿಯಾಯತಿಯಂತೆ) ಮೊದಲ ಮಹಾಯುದ್ಧದ ಕಾಲದಲ್ಲಿ ಸೈನ್ಯಕ್ಕೆ ಸೇರಿ, ಯುರೋಪಿನ ಮತ್ತು ಮೆಸಪೊಟೋಮಿಯಾ ಯುದ್ಧರಂಗಗಳಲ್ಲಿ ಸೇವೆ ಸಲ್ಲಿಸಿ ಹಿಂದಿರುಗಿ, ಆಮೇಲೆ ಕಂಟ್ರಾಕ್ಟ್ ವೃತ್ತಿ ಕೈಕೊಂಡು ದಕ್ಷಿಣಕ್ಕೆ ಬಂದು ಕೊಡಗು ಮೈಸೂರುಗಳಲ್ಲಿ ಕೆಲಸ ನಡೆಸುತ್ತಿದ್ದರು. ಅವರು ಶ್ರೀರಾಮಕೃಷ್ಣರ ಭಕ್ತರಾಗಿ ಆಶ್ರಮದ ಕಟ್ಟಡಗಳನ್ನು ಕಟ್ಟಿಸಿಕೊಟ್ಟಿದ್ದರು. ಸ್ವಾಮಿ ದೇಶಿಕಾನಂದರು ನನಗೆ ಒಂಟಿಕೊಪ್ಪಲಿನಲ್ಲಿ ಜಾಗ ಕೊಡಿಸಿದಾಗ ಅಲ್ಲಿ ಮನೆ ಕಟ್ಟಿಸಲು ಅವರನ್ನೆ ಗೊತ್ತುಮಾಡಿದ್ದರು.

ಹಾಗೆಯೆ ಬೆಂಗಳೂರಿನ ಮಲ್ಲೇಶ್ವರಮ್ಮಿನ ‘ಹರಿಜನ ಸೇವಕ ಸಂಘ’ದ ರಾಮಚಂದ್ರರೂ ನನಗೂ ಮಾನಪ್ಪನಿಗೂ ಒಟ್ಟಿಗೆ ಶುಭಾಶಯ ಕಳಿಸಿದ್ದರು.

ತಾರೀಖು ೨೯-೪-೧೯೩೭ ಎ.ಸಿ.ನರಸಿಂಹಮೂರ‍್ತಿಯ ಹಿರಿಯ ಅಣ್ಣ ಎ.ಸಿ. ನಂಜುಂಡಯ್ಯ ಮಾನಪ್ಪಗೆ ಶುಭಾಶಯ ಕಳಿಸುತ್ತಾ “One very pleasant surprise was Mr. Puttappa’s marriage. Indeed it is to me tje most welcome news’ ಎಂದು ಬರೆದಿದ್ದರು. ’

ಬೆಂಗಳೂರು ಬಸವನಗುಡಿಯಿಂದ ಅವರ  ಶ್ರೀಮತಿ ಮತ್ತು ತಮ್ಮ ಪರವಾಗಿ ಬಿ.ಸುಂದರೇಶ್ವರ “ನಮ್ಮ ಬ್ರಹ್ಮಚರ‍್ಯದಲ್ಲಿ ತಾವು ನಮಗೆ ಮಾದರಿಯಾಗಿದ್ದಂತೆ ಗಾರ್ಹಸ್ಥ್ಯದಲ್ಲಿಯೂ ತಮ್ಮಿಬ್ಬರನ್ನೂ ಮಾದರಿಯಾಗಿ ನಿರೀಕ್ಷಿಸುವ” ಎಂದು ರುಜು ಮಾಡಿದ್ದರು. ಈಶ್ವರ ಸಂವತ್ಸರದ ಚೈತ್ರ ಬಹುಳ ಎರಡರಂದು.

ತಾರೀಖು ೨೮ ಏಪ್ರಿಲ್ ೧೯೩೭ ರಂದು ಮೈಸೂರಿನ ಚಾಮರಾಜಪುರಂ ೧೧೪೭ರಿಂದ ಶ್ರೀ ವಿ.ಎ. ತ್ಯಾಗರಾಜನ್ ಅವರು ಶುಭಾಶಯದ ಕಾಗದ ಕಳಿಸಿದ್ದಾರೆ. ಇಂಗ್ಲೀಷ್ ಅಧ್ಯಾಪಕರಾಗಿದ್ದು ತಮಿಳರೋ ಮಲೆಯಾಳಿಯೋ ಆಗಿದ್ದ ಅವರು ಇಂಗ್ಲಿಷಿನಲ್ಲಿ:

Dear Mr. Puttappa

Permit me to  convey to you my felicitations and hearty greetings on the auspicious occasion of your marriagi. I read in my shelley `poet.’s food is love and fame. I don.t know why Shelly has put love first and fame next, but I am sure that you, as a poet who has gained fame, will be able to tell us why fame takes only the place of side dish in poet’s food….in course of time, when love inspires you to write songs of a different order.

I should like to congratulate the lady of your choice also on her greater privilege and….terrrible responsibility. Poets are said to be particularly hard to please…they demand that the actual shall be a visible embodiment of the ideal, but the poet’s wife has the rare privilage of inspiring him to sing songs that bear on them the image of God’s eternal truth.

I am afraid I have written an essay and so shall end as I began, congratualating you on your marriage wishing you both the fullness of joy.

Yours sincerely
V.A.Thyagarajan