ಬೆಂಗಳೂರು ಮಲ್ಲೇಶ್ವರಂ ನಾಲ್ಕನೆಯ ಮುಖ್ಯರಸ್ತೆಯಿಂದ ೨೯ ಏಪ್ರಿಲ್ ೧೯೩೭ರಂದು ವೆಂಬಾರ್ ವೆಂಕಟಾಚಾರ‍್ಯರು ಶುಭಾಶಯ ಪತ್ರ ಬರೆದು ಅಭಿನಂದಿಸುತ್ತಾ “…once again I wish you the best of luck and hope this will be one of the most epochful events and a mile-stone in the great career of one of the greatest modern Kannada poets. I hope to see more of a newer type of poetry from your gifted pen hereafter.
ಅಂತೂ ಈ ಎಲ್ಲಾ ಹಿರಿಯರ, ಮಿತ್ರರ ಮತ್ತ ಹಿತೈಷಿಗಳ ಆಶೀರ್ವಾದದ, ಶುಭಾಶಯದ ಮತ್ತು ಅಭಿನಂದನೆಯ ಪತ್ರಗಳನ್ನು ಓದಿ ಆ ಹರಿದೆಸೆದ ಬೇನಾಮಿ ವಿಷಕಾರ್ಡನ್ನು ಸಂಪೂರ್ಣವಾಗಿ ಮರೆತು, ಹೃದಯ ಮುಂದಿನ ಮಂಗಳ ಮುಹೂರ್ತಕ್ಕೆ ಹಿಗ್ಗಿನಿಂದ ಕಾಯುತ್ತಿತ್ತು.

ನನ್ನ ಮದುವೆಗೆ  ಮೊದಲೇ ಮಾನಪ್ಪನ ಮದುವೆ ನಿಶ್ಚಯವಾಗಿತ್ತು. ನನ್ನ ಮದುವೆ ಹೆಣ್ಣಿನ ಮನೆ ಇಂಗ್ಲಾದಿಯಲ್ಲಿ, ಮಾನಪ್ಪನ ಮದುವೆ ಹೆಣ್ಣಿನ ಮನೆ ಮರಿತೊಟ್ಟಿಲಲ್ಲಿ. ಅವನ ಮದುವೆ ಏಪ್ರಿಲ್ ೨೯ಕ್ಕೆ-ನನ್ನದು ಏಪ್ರಿಲ್ ೩೦ಕ್ಕೆ ಅವನದು ಹಗಲು ಮದುವೆ; ನನ್ನದು ಏಪ್ರಿಲ್ ೩೦ರ ರಾತ್ರಿ ೧ ಗಂಟೆಗೆ. ಅಂದರೆ ಪಂಚಾಂಗದ ರೀತ್ಯಾ ಒಂದು ಸೂರ‍್ಯೋದಯದಿಂದ ಮತ್ತೊಂದು ಸುರ‍್ಯೋದಯಕ್ಕೆ ದಿನದ ಲೆಕ್ಕವಾದರೆ, ಕ್ಯಾಲೆಂಡರ್ ರೀತ್ಯಾ ರಾತ್ರಿ ೧೨ರ ಮೇಲೆ ಮತ್ತೊಂದು ರಾತ್ರಿ ೧೨ರ ವರೆಗೆ ದಿನದ ಲೆಕ್ಕ. ಅಂದರೆ ನನ್ನ ಮದುವೆ ಏಪ್ರಿಲ್ ೩೦ರ ರಾತ್ರಿ ೧ ಗಂಟೆಗೆ ನಿಶ್ಚಯವಾಗಿ ಕ್ಯಾಲೆಂಡರ್ ರೀತ್ಯಾ ಮೇ ೧ಕ್ಕೆ ಬೀಳುತ್ತದೆ! ಸಾಧಾರಣವಾಗಿ ಶೂದ್ರರಿಗೆ  ಬ್ರಾಹ್ಮಣ ಪುರೋಹಿತರು ಆಗ ಇಟ್ಟುಕೊಡುತ್ತಿದ್ದುದೆಲ್ಲ ನಿಶಾ ಲಗ್ನವಾಗಿತ್ತು ಎಂದೆ ಹೇಳುತ್ತಿದ್ದರು. ನಾನು ಇತರ ವಿಚಾರಗಳಲ್ಲೆಲ್ಲ  ಸಂಪ್ರದಾಯವನ್ನು ಲೆಕ್ಕಿಸದೆ ಕಾರ‍್ಯ ನಿರ್ವಹಿಸಲು ಕೇಳಿಕೊಂಡಿದ್ದೆನಾದರೂ ಲಗ್ನ ಇಟ್ಟುಕೊಡುವ ಮಹೂರ‍್ತದ ಪುರೋಹಿತರ ಈ ವಿಚಾರವನ್ನು ಗಮನಕ್ಕೇ ತಂದುಕೊಂಡಿರಲಿಲ್ಲ. ಮುಂದೆ ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಮೇಲೆ ಪುರೋಹಿತ ವರ್ಗದವರಿಂದ ತಪ್ಪಿಸಿಕೊಳ್ಳಲು ‘ಮಂತ್ರಮಾಂಗಲ್ಯ’ ರೀತಿಯ ಮದುವೆಯನ್ನು ಪ್ರಚಾರಮಾಡಿದಾಗಲೆ ನನ್ನ ಸುಧಾರಣಾಮತಿಗೆ ಪುರೋಹಿತ ವರ್ಗದವರಿಂದ ಸಂಪೂರ್ಣವಾಗಿ ಪಾರಾಗುವ ಸಮಗ್ರಮಾರ್ಗ ಗೋಚರವಾದುದು.

ಇಂಗ್ಲಾದಿಯಿಂದ ತೀರ್ಥಹಳ್ಳಿ-ಕೊಪ್ಪ ರಸ್ತೆಯಲ್ಲಿ ಹಾದು, ಕೊಪ್ಪದಿಂದ ಐದಾರು ಮೈಲಿ ದೂರವಿರುವ, ಎಂದರೆ ಇಂಗ್ಲಾದಿಯಿಂದ ಸುಮಾರು ಹದಿನೈದು ಮೈಲಿ ದುರವಿರುವ, ಮರಿತೊಟ್ಟಿಲಿಗೆ, ಮಾನಪ್ಪನ ದಿಬ್ಬಣ ಕಾರು ಬಸ್ಸುಗಳಲ್ಲಿ  ಹೊರಟಿತು. ಮರುದಿನವೇ ಮದುವೆಯಾಗಲಿರುವ ಮದುವಣಿಗನೆ ಆಗಿದ್ದರೂ, ಎಲ್ಲ ಹಳೆಯ ಸಂಪ್ರದಾಯಗಳಿಗೂ ಹೊರತಾಗಿದ್ದ ನನ್ನನ್ನು ತಡೆಯುವ ಗೋಜಿಗೆ ಯಾರೂ ಹೋಗಿರಲಿಲ್ಲವಾಗಿ, ನಾನೂ ಮಿತ್ರರೊಡನೆ ಒಂದು ಕಾರಿನಲ್ಲಿ ದಿಬ್ಬಣದವರೊಡನೆ ಹೋದೆ. ನನಗೆ ನೆನಪಿರುವಂತೆ ನಾನು ಕುಳಿತಿದ್ದ ಕಾರಿನಲ್ಲಿ ಶ್ರೀಕಂಠಯ್ಯ-ಸುಧಾ, ಬಿ. ಕೃಷ್ಣಮೂರ‍್ತಿ ಮತ್ತು ಅವರ ಹೆಂಡತಿ ಮತ್ತು ನರಸಿಂಹಮೂರ‍್ತಿ ಇದ್ದರೆಂದು ತೋರುತ್ತದೆ. ಶ್ರೀಕಂಠಯ್ಯ ಮೈಸೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಭಿಕ್ಷಾನ್ನದ ವಿದ್ಯಾರ್ಥಿಯಾಗಿದ್ದವರು ಸ್ವಾತ್ಂತ್ರ‍್ಯ ಸಂಗ್ರಾಮದಲ್ಲಿ ಗಾಂಧೀಜಿಯ ಸಬರ‍್ಮತಿ ಆಶ್ರಮ ಸೇರಿ, ಸತ್ಯಾಗ್ರಹದಲ್ಲಿ ಭಾಗವಹಿಸಿ, ಜೈಲಿಗೆ ಹೋಗಿ, ಆಮೇಲೆ ಒಬ್ಬಳು ಗುಜರಾತಿ ಹುಡುಗಿಯನ್ನು ಮದುವೆಯಾಗಿ ಕನ್ನಡನಾಡಿಗೆ ಹಿಂದಿರುಗಿದ್ದರು.

ಬೆಟ್ಟಬೇಸಗೆಯ ಕಾಲವಾಗಿದ್ದರಿಂದ ನಾವು ಮನೆಯೊಳಗೆ ಮದುವೆ ಚಪ್ಪರದ ಸೆಖೆಯ ಗಲಿಬಿಲಿಯ ನೂಕುನುಗ್ಗಲಿನ ಗಡಿಬಿಡಿಗೆ ಹೋಗದೆ ಮನೆಯ ಮುಂದಣ ಕೆರೆಯ ಆಚೆಯ ಕಾಡಿಡಿದ ದಿಬ್ಬಕ್ಕೆ ಹೋಗಿ, ಒಂದು ಚಾಪೆಯನ್ನೋ ಜಮಖಾನೆಯನ್ನೋ ಹಾಸಿಕೊಂಡು ಹರಟೆಹೊಡೆಯುತ್ತಾ ಮರದ ನೆರಳಿನಲ್ಲಿ ಕಾಲ ನೂಕಿದೆವು.

ಮದುವೆ ಪೂರೈಸಿ, ಊಟ ಮುಗಿಸಿ, ಸಾಯಂಕಾಲ ಗಂಡುಹೆಣ್ಣಿನ ದಿಬ್ಬಣದೊಡನೆ ಮತ್ತೆ ಕಾರಿನಲ್ಲಿ ಹಿಂತಿರುಗಿದೆವು.

ಮರುದಿನ ೩೦-೪-೧೯೩೭-ನನ್ನ ಮದುವೆ: ಶ್ರೀಗುರು ಮತ್ತು ಶ್ರೀಮಾತೆಯರ ಕೃಪೆ ಇಚ್ಛಿಸಿದಂತೆ ಚಿ|| ಸೌ|| ಹೇಮಾವತಿ ನನ್ನ ಚೇತನವನ್ನು ಅರ್ಧಾಂಗಿಯಾಗಿ ಅಲ್ಲ, ಪೂರ್ಣಾಂಗಿಯಾಗಿಯೆ ಆಲಿಂಗಾಕ್ರಮಿಸುತ್ತಾಳೆ. ನನ್ನ ಸದ್ಯದ ಜನ್ಮಕಾಯ ತನ್ನ ಪ್ರಾಣಮಯ ಮನೋಮಯ ಕೋಶಗಳನ್ನು ಪೊರೆಗಳಚಿ ಹೊಸ ಹುಟ್ಟು ಪಡೆದು ದಿವ್ಯಯಾತ್ರೆಗೆ ಹೊರಡುತ್ತದೆ. ಹಿಂದೆ ಈ ಮಾತುಗಳನ್ನೆಲ್ಲ ಅಲಂಕರಗಳೆಂದೂ ರೂಪಕಗಳೆಂದೂ ತಿಳಿಯುತ್ತಿದ್ದೆ. ಈಗ ೧೯೮೧ರಲ್ಲಿ ಇದನ್ನು ಬರೆಯುವಾಗ, ಈ ಮಾತುಗಳೆಲ್ಲ ಅಲಂಕಾರಗಳೂ ಅಲ್ಲ, ರೂಪಕಗಳೂ ಅಲ್ಲ, ನನಗೆ ಸಾಕ್ಷಾತ್ ಅನುಭವವಾಗಿರುವಂತೆ, ಅವು ಅಕ್ಷರಶಃ ಅರ್ಥಶಃ ವಾಚ್ಯವಾಗಿವೆ!

ಸಾಯಂಕಾಲವಾಗುವಷ್ಟರಲ್ಲಿ ನಂಟರಿಷ್ಟರಿಂದಲೂ ಬಂಧುಬಳಗದವರಿಂದಲೂ ಇಂಗ್ಲಾದಿಯ ಸುವಿಶಾಲವಾದ ಸಾಲಂಕೃತ ಚಪ್ಪರವು ದೊಡ್ಡವರು ಚಿಕ್ಕವರು ಗಂಡಸರು ಗರತಿಯರು ಆಳುಗಳಿಂದ ಕಿಕ್ಕಿರಿದಂತೆ ಸಶಬ್ದವಾಯಿತು. ಮದುವೆಯ ಮಹೂರ‍್ತ ರಾತ್ರಿ ಸುಮಾರು ಒಂದು ಗಂಟೆಗೆ ಇದ್ದು ಹೊರಗಿನ ದೂರದೂರುಗಳಿಂದ ಬರುವವರು. ಕತ್ತಲೆಯಾದ ಮೇಲೆಯೂ ಬರುತ್ತಿದ್ದರು- ಮೈಸೂರು ಬೆಂಗಳೂರು ಶಿವಮೊಗ್ಗ ತೀರ್ಥಹಳ್ಳಿ ಕಡೆಯವರು.

ಇಂಗ್ಲಾದಿಯ ಉಪ್ಪರಿಗೆಯ ಹೊಸದಾಗಿ ಮುಂಚಾಚಿದಂತೆ ಕಟ್ಟಿಸಿ ಪೀಠೋಪಕರಣ, ಮಂಚ, ಬೆಂಚು, ಕುರ್ಚಿ ಇತ್ಯಾದಿಗಳಿಂದ ಸಜ್ಜಾಗಿದ್ದ ಕೊಠಡಿಯಲ್ಲಿ ನಾನು ಇತರ ಮಿತ್ರರೊಡನೆ ಯಾವುದೋ ಒಂದು ಸಮ್ಮೇಲನದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿತನಾಗಿರುವವನಂತೆ ಹಾಸ್ಯಸಂವಾದ ಸಲ್ಲಾಪಗಳಲ್ಲಿ ತೊಡಗಿದ್ದೆ. ರಾತ್ರಿ ಕಳೆದು ಮುಹೂರ‍್ತ ಸಮೀಪಿಸುತ್ತಿದ್ದಂತೆ ಸಮ್ಮೇಲನದ ಮುಖ್ಯ ಭಾಷಣ ಮಾಡಲು ವೇದಿಕೆ ಏರುವವನನ್ನು ಸಿದ್ಧವಾಗಲು ಹೇಳುವಂತೆ, ಸ್ನೇಹಿತರು ಡ್ರೆಸ್ ಮಾಡಿಕೊಳ್ಳಲು ಅವಸರಿಸಿದರು. ಆದರೆ ಈ ಮದುಮಗನದು ಮದುವಣಿಗನ ವೇಷವಾಗಿರಲಿಲ್ಲ.

ಸಂಪ್ರದಾಯದ ಇತರ ವಾಡಿಕೆಗಳನ್ನೆಲ್ಲ ಉಲ್ಲಂಘಿಸಿದ್ದಂತೆ ಮದುಮಗನ ವೇಷಭೂಷಣಗಳನ್ನೂ ತಿರಸ್ಕರಿಸಿದ್ದೆ. ಚಿನ್ನದ ಆಭರಣಗಳನ್ನು ಯಾವ ರೂಪದಲ್ಲಿಯೂ ಹತ್ತಿರ ಸೇರಿಸದಿದ್ದೆ. ಆ ‘ಅವಿವೇಕ’ ಯಾವ ನಿಷ್ಠುರ ಪ್ರಮಾಣಕ್ಕೆ ಏರಿತ್ತು ಎಂದರೆ, ಈಗ ನೆನೆದರೆ ವಿಆದವಾಗುತ್ತಿದೆ. ನನ್ನ ತಂಗಿ ರಾಜಮ್ಮ ಒಂದು ಹರಳು ಕೂರಿಸಿದ ಚಿನ್ನದುಂಗುರವನ್ನು ನನಗೆ, ಅವಳ ಅಣ್ಣಯ್ಯಗೆ, ಕಾಣಿಕೆಯಿತ್ತು ಬೆರಳಿಗೆ ತೊಡಿಸಲು  ಪ್ರಯತ್ನಿಸಿದುದನ್ನೂ ತಿರಸ್ಕರಿಸಿಬಿಟ್ಟೆ!

ಸಾಮಾನ್ಯವಾಗಿ ಮದುಮಗನ ವೇಷ ಯಾವ ಭಾಗವತರಾಟದ ಅಥವಾ ನಾಟಕದ ವೇಷಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ತುಂಬಾ ಹಿಂದಿನದು ಭಟ್ಟಂಗಿಗಳ ಉಡುಪಿನಂತಿರುತ್ತಿತ್ತು. ನಿಲುವಂಗಿ ಮುಂಡಾಸು ಕಿವಿಗೆ ಒಂಟಿಗಳು, ಕೊರಳಿಗೆ ಹಾರ, ಬೆರಳಿಗೆ ಉಂಗುರಸಾಲು ಇತ್ಯಾದಿ. ಇತ್ತೀಚೆಗೆ ಹೊಸ ನಾಗರಿಕತೆಗೆ ಅನುಗುಣವಾಗಿ ತುಂಬ ಬೆಲೆಬಾಳುವ ಬಟ್ಟೆಯ ಕೋಟು ಪ್ಯಾಂಟು ಅಥವಾ ಜರಿಪಂಚೆ, ಜರಿಪೇಟ ಇತ್ಯಾದಿ. ಮದುಮಕ್ಕಳಿಗೆ-ಗಂಡಿಗೂ ಹೆಣ್ಣಿಗೂ-ಬಾಸಿಂಗದ ಕಿರೀಟ ಕಟ್ಟುವುದಂತೂ ಅನಿವಾರ‍್ಯ ಅಲಂಕಾರವಾಗಿತ್ತು. ನಾನು ಅದನ್ನೆಲ್ಲ ತಿರಸ್ಕರಿಸಿದ್ದೆ. ನಾನು ಗಾಂಧೀಜಿ ಕಾಲದವನಾಗಿ ಶ್ರೀರಾಮಕೃಷ್ಣಾಶ್ರಮದಲ್ಲಿ ಇರುತ್ತಿದ್ದುದರಿಂದ ಖಾದಿಬಟ್ಟೆಯನ್ನಲ್ಲದೆ ಧರಿಸುತ್ತಿರಲಿಲ್ಲ. ಸಾಮಾನ್ಯವಾಗಿ ನನ್ನ ಉಡುಪು-ಖಾದಿಯ ‘ಪಂಜಾಬಿ’ ಎಂದು ಕರೆಯುತ್ತಿದ್ದ ಮೊಳಕಾಲವರೆಗೆ ಬರುತ್ತಿದ್ದ ಉದ್ದನೆಯ ಷರಟು, ಕಚ್ಚೆಪಂಚೆ, ಒಂದು ಹೆಗಲಿನಿಂದ ಇಳಿಯುವ ಉತ್ತರೀಯ. ಆ ‘ಪಂಜಾಬಿ’ಗೂ ಖಾದಿಯ ಗುಂಡಿಗಳೇ ಇರುತ್ತಿದ್ದು, ಎದೆಯ ಮೇಲಲ್ಲದೆ ಹೆಗಲಿನ ಮೇಲೆಯೆ ಗುಂಡಿ ಹಾಕುವಂತೆ ಇಕ್ಕೆಲಗಳಲ್ಲಿಯೂ ಕಾಚಮಾಡಿರುತ್ತಿತ್ತು. ನಾನು ಕಾವ್ಯವಾಚನಕ್ಕಾಗಲಿ ಭಾಷಣಕ್ಕಾಗಲಿ ವೇದಿಕೆ ಏರುವಾಗಲೆಲ್ಲ ಆ ರೀತಿಯದೇ ಉಡುಪು ಧರಿಸುತ್ತಿದ್ದೆ. ಈಗ ಮದುವೆ ಮಂಟಪಕ್ಕೆ ಧಾರೆಗೆ ಹೋಗುವಾಗಲೂ ಅದೇ ಉಡುಪಿನಲ್ಲಿದ್ದೆ. ಆದರೆ ಒಮದು ರಿಯಾಯಿತಿ ತೋರಿಸಬೇಕಾಯಿತು, ಮಾನಪ್ಪನಿಗಾಗಿ. ಅವನು ಮದುವೆ ಗಂಡಿಗಾಗಿ ಎಂದು, ದೊಡ್ಡವರು ಹೇಳಿದ್ದು ಎಂದು, ಒಂದು ‘ಪಂಜಾಬಿ’ಯನ್ನೂ ಒಂದು ಉತ್ತರೀಯವನ್ನೂ ಮದುವೆ ಮಂಟಪಕ್ಕೆ ಧಾರೆಗೆ ಹೋಗುವ ಮುನ್ನ ಧರಿಸಲು ಕೊಟ್ಟ. ನಾನು ಖಾದಿಯನ್ನಲ್ಲದೆ ಬೇರೆಯಾವುದನ್ನೂ ಉಡುವುದಿಲ್ಲ ಎಂದೆ. ಅದಕ್ಕೆ ಅವನು ‘ಈ ರೇಶಿಮೆ ಬಟ್ಟೆಗಳು ಸ್ವದೇಶಿಯವೂ ಆಗಿವೆ, ಖಾದಿಯೂ ಆಗಿವೆ’ ಎಂದು ನನ್ನನ್ನು ಸೋಲಿಸಿಬಿಟ್ಟ.ಅದೊಂದೇ ಕಾಣಿಕೆ, ನಾನು ನನ್ನ ಮಾವನ ಕಡೆಯಿಂದ ಸ್ವೀಕರಿಸಿದ್ದು, ಹೆಣ್ಣೊಂದು ಹೊರತಾಗಿ ಎಂದು ಸೇರಿಸುವುದು ಅನಿವಾರ‍್ಯ ತಾನೆ!

ನಾನು ಉಪನ್ಯಾಸ ಮಾಡಲು ವೇದಿಕೆಗೆ ಏರಲು ಹೋಗುವವನಂತೆ ಡ್ರೆಸ್ಸು ಮಾಡಿಕೊಂಡು ಧಾರೆಗೆ ಹೊರಡಲು ಉಪ್ಪರಿಗೆ ಇಳಿಯುವ ಸಮಯದಲ್ಲಿ, ಅಲ್ಲಿಯೆ ಕುಳಿತಿದ್ದ ನನ್ನ ಮಿತ್ರರಾದ ಕೂಡಲಿ ಚಿದಂಬರಂ ಅವರು ಅವರ ಎಂದಿನ ದರಹಾಸ ರಂಜಿತ ಮುಖ ಭಂಗಿಯಿಂದ “ರೀ ಪುಟ್ಟಪ್ಪ, ಮದುವೆ ಮಂಟಪಕ್ಕೆ ಹೋಗ್ತೇನೆ ಅನ್ನೋದು ಮರೆತು ಎಲ್ಲಿಯಾದರೂ ಉಪನ್ಯಾಸಕ್ಕೆ ಶರುಮಾಡಿಬಿಟ್ಟೀರಿ?” ಎಂದು ಅಲ್ಲಿ ನೆರೆದಿದದ ಗೆಳೆಯರೆಲ್ಲರನ್ನೂ ನಗೆಕಡಲಿನಲ್ಲಿ ಮುಳುಗಿಸಿಬಿಟ್ಟರು.

ಮಹನೀಯರೂ ಮಹಿಳೆಯರೂ (ಅಥವಾ ಮಲೆನಾಡ ಮಕ್ಕಳ ಮಾತಿನಲ್ಲಿ ಹೇಳುವುದಾದರೆ-ಗಿರಾಸ್ತರೂ ಗರತಿಯರೂ) ಕಿಕ್ಕಿರಿದಿದ್ದ ತಳಿರು, ತೋರಣ, ಹಸುರು, ಹೂವು,ಹಿಂಗಾರ ಹಲಸು ಮಾವಿನ ತೊಂಡೆ, ಬಾಳೆಮರ, ಬಾಳೆಗೊನೆಗಳಿಂದ ಅರಣ್ಯಭಾವನೆ ಹುಟ್ಟಿಸುವಂತೆ ಸಿಂಗರಗೊಂಡಿದ್ದು, ಬೆಳಕು ಬೀರುವ ನಾನಾ ರೀತಿಯ ಅರ್ವಾಚೀನ ಮತ್ತು ಪ್ರಾಚೀನ ಸಾಧನಗಳಿಂದ ಉಜ್ವಲೋಜ್ವಲ ಪ್ರಕಾಶ ದೇದೀಪ್ಯವಾಗಿ ರಂಜಿಸುತ್ತಿದ್ದ ಚಪ್ಪರದಡಿ ಕುಳಿತಿದ್ದ ನರನಾರಿಯರ ಸಾಲಿನ ನಡುವೆ ನಡೆದು ಧಾರಾಮಂಟಪ ಪ್ರವೇಶ ಮಾಡಿದೆ. ವರ್ಣರಂಜಿತ ವಸ್ತ್ರಭೂಷಣಗಳಿಂದ ಶೋಭಿಸುವ ಮಹಿಳಾಮಣಿಯರ ಓಲೈಕೆಗೊಳಗಾಗಿ ಸ್ವರ್ಣಾಭರಣ ಮತ್ತು ಸ್ವರ್ಣಮಯ ವಸ್ತ್ರಶೋಭಿತೆಯಾಗಿ ನನ್ನ ಪ್ರಾಣೇಶ್ವರಿಯಾಗಲಿರುವವಳನ್ನು ನನ್ನ ಎಡಗಡೆಗೆ ಕರೆತಂದು ನಿಲ್ಲಿಸಿದರು. ಏತಕ್ಕೊ ಏನೋ? ನನ್ನ ಬದುಕಿನ ಆ ದಿವ್ಯ ಸನ್ನಿವೇಶದ ಭವ್ಯತಾ ಅನುಭವಕ್ಕೆ ಶರಣಾಗಿಯೊ ಏನೊ ನನ್ನ ಪ್ರಜ್ಞೆ ಒಂದು ರೀತಿಯ ವಿಸ್ಮೃತಿಯ ಲೋಕಾತಿಗಸ್ತರಕ್ಕೆ ಏರಿದಂತಾಗಿತ್ತು, ಮುಂದೆ ನಡೆದದ್ದೆಲ್ಲ ಒಂದು ದಿವ್ಯಸ್ವಪ್ನದಲ್ಲಿ ನಡೆದಂತೆ ಭಾಸವಾಗಿ!

ಪುರೋಹಿತರ ಮಮತ್ರಘೋಷವಾಗಲಿ, ಬಂಧುವರ್ಗ ತಳಿದ ಅಕ್ಷತೆಯಾಗಲಿ, ವಧುವಿಗೆ ನಾನು ತಾಳಿ ಕಟ್ಟಿದುದಗಲಿ, ಅವಳ ಸೆರಗಿಗೆ ನನ್ನ ಉತ್ತರೀಯವನ್ನು ಗಂಟುಹಾದಿದುದಾಗಲಿ, ಯಾವುದೋ ಒಂದು ಕಾವ್ಯದಲ್ಲಿ ನನು ಒದುತ್ತಿದ್ದ ಕವಿಕಲ್ಪನಾ ಘಟನೆಗಳಂತೆ ರಸಲೋಕ ವಸ್ತುಗಳಾದ್ದುವು! ನನ್ನ ಚೈತನ್ಯ ಜಾಗ್ರದ್ರಂಗದ ಬಹೀ ಪ್ರಜ್ಞೆಗೆ ಪೂರ‍್ತಿಯಾಗಿ ಬಂದುದು, ನನ್ನನ್ನೂ ಹೇಮಾವತಿಯನ್ನೂ ಅರುಂಧತಿ ನಕ್ಷತ್ರ ದರ್ಶನಕ್ಕೆ ಜನಸಮದಣಿಯಿಂದ ಮನೆಯ ಹೊರಗೆ ಹೆಬ್ಬಾಗಿಲಾಚೆಗೆ ಕರೆದೊಯ್ದಾಗಲೆ!

ಅಂತೂ ನಮ್ಮ ಮದುವೆಯಾಯಿತು: ಶಾಸ್ತ್ರಸಮ್ಮತವಾಗಿ ಲೋಕಾನುಮೋದನೆಯಿಂದ ನಾವಿಬ್ಬರೂ ಗಂಡಹೆಂಡಿರಾದೆವು:

ಒಲುವೆ ಒಂದು ದಿವ್ಯ ರಕ್ಷೆ
ಇಹ ಸಮಸ್ಯೆಗೆ!
ಮದುವೆ ಅದಕೆ ಮಧುರ ದೀಕ್ಷೆ
ಗೃಹ ತಪಸ್ಯೆಗೆ!

೧೯೩೬ನೆಯ ನವಂಬರ್ ೧೫ನೆಯ ದಿನದ ದಿನಚರಿ ಬರೆದು ಮದುವೆಗೆಂದು ಊರಿಗೆ ಹೋದವನು ಮತ್ತೆ ದಿನಚರಿ ಬರೆಯತೊಡಗಿದುದು ೧೯೩೮ನೆಯ ಆಗಸ್ಟ್ ೨೭ರಂದು. ಅಂದರೆ ಸುಮಾರು ಒಂದುವರ್ಷ ಒಂಭತ್ತು ತಿಂಗಳು ಖಾಲಿಬಿದ್ದಿದೆ. ಅದು ನಾನು ಮದುವೆಯಾಗಿ ಮನೆಕಟ್ಟಿಸಿ ‘ಉದಯರವಿ’ಯಲ್ಲಿ ಖಾಯಂ ನೆಲೆಸಿದ ಕಾಲವಾಗುತ್ತದೆ. ಆದರೆ ನನ್ನ ಹಸ್ತಪ್ರತಿಯಲ್ಲಿ ಕವನಗಳಿಗೆ ಹಾಕಿರುವ ತಾರೀಖುಗಳ ಆಧಾರದ ಮೇಲೆ ಮರುಕಳಿಸಿದ ನೆನಪುಗಳನ್ನು ಕುರಿತು ಸಾಧ್ಯವಾದಷ್ಟನ್ನು ಹೇಳುತ್ತೇನೆ.

ಮದುವೆ ಮುಗಿದು ಕೆಲವು ದಿನ ಇಂಗ್ಲಾದಿಯಲ್ಲಿಯೆ ಹೆಣ್ಣಿನ ಮನೆಯ ಮಹಿಳಾವರ್ಗದ ಸಂಪ್ರದಾಯ ಶಾಸ್ತ್ರಕರ‍್ಮಾಧೀನನಾಗಿದ್ದು ಸತಿಯೊಡನೆ ಕುಪ್ಪಳಿಗೆ ಹೋದೆ. ಅಲ್ಲಿ ಮದುಮಕ್ಕಳನ್ನು ಪದ್ಧತಿಯಂತೆ ಸ್ವಾಗತಿಸಿದರು. ಅಣ್ಣಯ್ಯನ ಮದುವೆಗೆ ತವರಿಗೆ ಬಂದಿದ್ದ ತಂಗಿ ರಾಜಮ್ಮನ ಯಾಜಮಾನ್ಯ ಮತ್ತು ಉತ್ಸಾಹವೆ ವಿಶೇಷ ಕಾರಣವಾಗಿ ಎಂದು ಭಾವಿಸುತ್ತೇನೆ. ಒಂದು ತುಂಬ ವಿನೋದದ ಸಂಗತಿ ಜ್ಞಾಪಕಕ್ಕೆ ಬರುತ್ತದೆ. ನಮ್ಮ ಮದುವೆಗೆ ಮೈಸೂರಿನ ಕಡೆಯಿಂದ ಬಂದಿದ್ದವರಲ್ಲಿ ಎ.ಸಿ. ನರಸಿಂಹಮೂರ‍್ತಿಯ ವಯೋವೃದ್ಧ ತಂದೆತಾಯಿಯರೂ ಇದ್ದರು. ನವದಂಪತಿಗಳನ್ನು ಮಣೆಯಲ್ಲಿ ಕೂರಿಸಿ ಹಸೆಗೋಡೆಯ ಮುಂದೆ ಆರತಿ ಎತ್ತಿ ಅಕ್ಷತೆ ಎರಚಿದ ಮೇಲೆ, ಆ ಮಣೆಗಳಲ್ಲಿ ವಯೋವೃದ್ಧ ದಂಪತಿಗಳಾಗಿದ್ದ ನರಸಿಂಹಮೂರ್ತಿಯ ತಂದೆತಾಯಿಯರನ್ನು ತರುಣ ತರುಣಿಯರು ಬಲಾತ್ಕಾರವಾಗಿಯೆ ನಗುನಗುತ್ತಾ ಎಳೆದು ತಂದು ಕೂರಿಸಿ ಆರತಿ ಎತ್ತಿ ಅಕ್ಷತೆ ತಳಿದು ನೆರೆದಿದ್ದೆಲ್ಲರೂ ಚಪ್ಪಾಳೆಯಿಕ್ಕಿ ಉಲ್ಲಸಿಸುವಂತೆ ಮಾಡಿದ್ದರು; ಮುದ್ದುಮಕ್ಕಳು ಎಂಬ ವಿಡಂಬನೆಯ ಹೆಸರು ಕೊಟ್ಟು!

ಅದೆಲ್ಲ ಮುಗಿದು ಹೊರಗಿನ ಅತಿಥಿಗಳೆಲ್ಲರೂ ಹೊರಟುಹೋದ ಮೇಲೆ ಮರುದಿನವೋ ಆ ಮರುದಿನವೋ ೧೯-೫-೧೯೩೭ರಂದು ಮುಖ್ಯವಾಗಿ ರಾಜಮ್ಮನ ಉತ್ಸಾಹವೆ ಕಾರಣವಾಗಿ ಎಂದು ಊಹಿಸುತ್ತೇನೆ, ನನ್ನನ್ನೂ ಹೇಮಾವತಿಯನ್ನೂ ಒಟ್ಟುಗೂಡುವ ಪ್ರಸ್ಥದ ಏರ್ಪಾಡು ನಡೆಯಿತು, ನನಗೆ ಸ್ವಲ್ಪವೂ ಸುಳುವು ತೋರದಂತೆ.

ಕತ್ತಲಾಗಿ ದೀಪ ಹೊತ್ತಿಸಿದ ಮೇಲೆ ನಾವೆಲ್ಲ ಕೆಲವು ಮಿತ್ರರು ಸೇರಿ ಇಸ್ಪೀಟೋ ಏನೊ ಆಟದಲ್ಲಿ ತೊಡಗಿದ್ದೆವು. ನಮ್ಮನ್ನು ಊಟಕ್ಕೆ ಕರೆದ ಸಮಯದಲ್ಲಿ ನಾವೆಲ್ಲ ಕೆಳಗಿಳಿದು ಊಟಕ್ಕೆ ಹೊಗಿದ್ದಾಗ, ಪದ್ಧತಿಯಂತೆ ತಡಿ ದಿಂಬುಗಳನ್ನು ಹಾಕಿ, ಮಗ್ಗಲು ಹಾಸಿಗೆ ಹಾಸಿ, ಹೊದೆಯಲು ಹಾಕಿಡುತ್ತಿದ್ದರು, ಸುಮರು ಹತ್ತು ಹದಿನೈದು ನೆಂಟರಿಗೆ, ಎಷ್ಟು ಇರುತ್ತಿದ್ದರೂ ಅಷ್ಟು ಸಂಖ್ಯೆಯಲ್ಲಿ. ನಾವೆಲ್ಲ ಊಟ ಎಲೆಅಡಕೆ ಹಣ್ಣು ಮುಂತಾದುವನ್ನು ತಿಂದು, ಮಲಗಲೆಂದು ಉಪ್ಪರಿಗೆಗೆ ಬಂದು, ಒಬ್ಬೊಬ್ಬರು ಒಂದೊಂದು ಹಾಸಗೆಗೆ ಕುಳಿತು ನೋಡುತ್ತೇವೆ, ಒಂದು ಹಾಸಗೆ ಕಡಮೆಯಾಗಿದೆ! ಹಸಗೆ ಹಸಿದ್ದ ಹುಡುಗನನ್ನು ಕರೆದು, ಬೈದು,”ಇನ್ನೊಂದು ಹಾಸಿಗೆ ತಂದು ಹಾಕೋ, ಮಂಕೂ!” ಎಂದು ಆಜ್ಞೆಮಾಡಿದೆವು.”ಅಮ್ಮೋರು ಹೇಳಿದ್ದಾರೆ ಇಷ್ಟೇ ಹಾಸಗೆ ಸಾಕು ಎಂದು” ನಾವು ‘ಮಂಕೂ!’ ಎಂದು ಸಂಬೋಧಿಸಿದಾತ ಬೇರೆಯಾರೋ ನಮ್ಮಲ್ಲಿಯೆ ಒಬ್ಬ ಇರಬೇಕೆಂಬಂತೆ ಹುಡುಕು ನೋಟವಟ್ಟಿ ನಿಂತನು. ನಮಗೆ ರೇಗಿ “ಯಾವ ಅಮ್ಮನೋ ಹೇಳಿದ್ದು? ಕರೆಯೊ!” ಎಂದು ಗದರಿಸಲು ಕೆಳಗಿಳಿದು ಹೋದನು. ತುಸು ಹೊತ್ತಿನಲ್ಲಿ ರಾಜಮ್ಮ ಏನಿಮೆಟ್ಟಲು ಸದ್ದಾಗುವಂತೆ ಹತ್ತಿಬಂದು, ಏನೂ ವಿಶೇಷವಿಲ್ಲ ಎಂಬಂತಹ ನೀರಸ ನಿರುದ್ವಿಗ್ನ ಧ್ವನಿಯಲ್ಲಿ “ಪುಟ್ಟಣ್ಣಯ್ಯಗೆ ಇಲ್ಲಿ ಹಾಸಿಲ್ಲ. ಕೆಳಗೆ ‘ಅವರ ಕೋಣೆಯಲ್ಲಿ’ ಹಾಸಿದೆ.” ಎಂದು ಹೇಳಿ ಮಾರುತ್ತರಕ್ಕೆ ನಿಲ್ಲದೆ ಹೊರಟೆಬಿಟ್ಟಳು. ಸ್ವಲ್ಪ ಕ್ಷಣಮಾತ್ರ ತಬ್ಬಿಬ್ಬಾದ ಎಲ್ಲ ಮಿತ್ರರೂ ತಟಕ್ಕನೆ ಧ್ವನಿಯನ್ನು ಗ್ರಹಿಸಿ ಅರ್ಥಮಾಡಿಕೊಂಡು ನನ್ನ ಕಡೆ ನೋಡಿ ನಾನಾ ರೀತಿಯಲ್ಲಿ ವ್ಯಂಗ್ಯವಾಕ್ಯಗಳನ್ನಾಡಿ ನಕ್ಕು ಚುಡಾಯಿಸತೊಡಗಿದರು: “ನಿಮಗೆ ಕೆಳಗೆ ಹಾಸಿದ್ದಾರಂತೆ. ಇಲ್ಲಿ ಜಾಗ ಕೊಡುವುದಿಲ್ಲ ಹೋಗಿ!” ಎಂದೂಬಿಟ್ಟರು. ನನಗೂ ಎಲ್ಲವೂ ಅರ್ಥವಾಗಿತ್ತು. ಹೃದಯದ ಮಧುರ ಇಷ್ಟವೂ ಆಗಿತ್ತು! ಮೆಟ್ಟಲಿಳಿದು ಮಲಗಲು ‘ನಮ್ಮ ಕೋಣೆಗೆ’ ತೆಪ್ಪಗೆ ಹೋದೆ!

‘ನಮ್ಮ ಕೋಣೆ ಎಂದರೆ ಕುಪ್ಪಳಿ ಮನೆಯಲ್ಲಿ ನನ್ನ ಅಪ್ಪಯ್ಯ ಅವ್ವ ಮಲಗುತ್ತಿದ್ದ ಕೋಣೆ. ನಾನು ಶಿಶುವಾಗಿದ್ದಾಗಿನಿಂದಲೂ ಅಮ್ಮನ ಮಗ್ಗುಲಲ್ಲಿ ಮಲಗಿ ಮೊಲೆವಾಲು ಕುಡಿದ ದೊಡ್ಡಮಂಚವಿದ್ದ ಕೋಣೆ. ನನ್ನ ಹಾಗೆ ನನ್ನ ತಂಗಿಯರಿಬ್ಬರೂ!

ಆ ‘ನಮ್ಮ ಕೋಣೆ’ ಸುಮಾರು ಐದಾರು ಅಡಿ ಅಗಲವಾಗಿ ಎಂಟು ಹತ್ತು ಅಡಿ ಉದ್ದವಾಗಿತ್ತು. ಅದಕ್ಕೆ ಒಂದು ತಕ್ಕಮಟ್ಟಿಗೆ ಅಗಲ ಎನ್ನಬಹುದಾದ ಕಿಟಕಿ ಅಥವಾ ನಾವು ಕರೆಯುತ್ತಿದ್ದ ಹಾಗೆ ‘ಬೆಳಕಂಡಿ’ ಇದ್ದರೂ ಅದು ಯಾವಾಗಲೂ ಮುಚ್ಚಿಯೆ ಇರುತ್ತಿತ್ತು. ನಾನು ಮಗುವಾಗಿದ್ದಾಗ ಅದು ತೆರೆದುದನ್ನು ನಾನು ಯಾವಾಗಲೂ ನೋಡಿಯೆ ಇರಲಿಲ್ಲ. ಅದರ ಒಂದು ಪಕ್ಕದಲ್ಲಿದ್ದ ದೊಡ್ಡಮಂಚದ ಮೇಲೆ ಎರಡು ತಡಿಗಳ ಒಂದೆ ಹಾಸಗೆ ಹಾಸಿತ್ತು. ಆ ಮಂಚೆ ಎತ್ತರ ಒಂದೇ ಅಡಿ ಎಂದು ಹೇಳಬಹುದು. ಅದರ ತಲೆದಿಸಿ ನೆಲದ ಮೇಲೆ, ಸುಮಾರು ಒಂದೊ ಒಮದುವರೆಯೊ ಅಡಿ ಎತ್ತರವಿರುವ ಹಿತ್ತಾಳೆಯ ದೀಪದ ಕಂಭದಲ್ಲಿ  ಹರಳೆಣ್ಣೆ ಹಾಕಿ ಬತ್ತಿ ಹೊತ್ತಿಸಿದ ದೀಪ ಉರಿಯುತ್ತಿತ್ತು. ಅದು ಮಾಡುತ್ತಿದ್ದ ಪರಿಣಾಮಕ್ಕೆ ಬೆಳಕು ಎಂಬ ಹೆಸರು ಔಪಚಾರಿಕ ಎನ್ನಬಹುದು! ಆರ್ಷಕಾಲದಿಂದಲೂ ಆ ಕಂಬಕ್ಕೆ ಹರಳೆಣ್ಣೆ ಹಾಕಿಯೆ ಬತ್ತಿ ಹೊತ್ತಿಸುತ್ತಿದ್ದರು. ಕಿಟಕಿಯೆ ಇಲ್ಲದ ಅಥವಾ ಇರುವ ಬಾಗಿಲನ್ನೂ ಸದಾ ಮುಚ್ಚಿರುವ ಕೋಣೆಯಲ್ಲಿ ಸೀಮೆಯೆಣ್ಣೆ ಹೊತ್ತಿಸಿದ್ದರೆ ಗತಿ ಏನಾಗುತ್ತಿತ್ತೊ!

ನನಗೆ ಚಿಕ್ಕಂದಿನಿಂದಲೂ ಪರಿಚಿತವಾಗಿದ್ದು, ಈಗ ಹದಿನೈದು ಇಪ್ಪತ್ತು ವರ್ಷಗಳಿಂದ ಒಮ್ಮೆಯಾದರೂ ಪ್ರವೇಶಿಸದಿದ್ದ ಆ ಕೋಣೆಗೆ ಪ್ರವೇಶಿಸಿ ಏಪ್ರಿಲ್ ಕಾಲವಾಗಿದ್ದರಿಂದ ಹೊದಿಕೆಯ ತಮಟೆಗೆ ಹೋಗದೆ ಮಲಗಿಕೊಂಡೆ, ರೂಢಿಯಂತೆ ಶ್ರೀಗುರು ಶ್ರೀಮಾತೆಯರನ್ನೂ ಜಗನ್ಮಾತೆಯನ್ನೂ ಧ್ಯಾನಿಸುತ್ತಾ, ಮುಂದಿನ ನನ್ನ ಜೀವನ ಸಂಗಾತಿಯನ್ನು ಹೃದಯ ಹಿಗ್ಗಿ ನಿರೀಕ್ಷಿಸುತ್ತಾ.

ಕಾಯುತ್ತಿದ್ದೆ. ಕ್ಷಣವೊಂದು ಯುಗವಾಗಿ; ಸ್ವಲ್ಪ ಹೆಚ್ಚೇ ಎಂಬಷ್ಟು ಹೊತ್ತು ತಡೆದು ಬಾಗಿಲು ತೆರೆಯಿತು. ಹಿಂದಿದ್ದ ಯಾರೊ ಗೆಳತಿಯರೇ ನೂಕುತ್ತಿದ್ದುದು ಮರೆಯಾಗಿ ಮುಂದೆ ನಾನು ‘ಪ್ರೇಮಕಾಶ್ಮೀರ’ ಕವನ ಸಂಕಲನದಲ್ಲಿರುವ ‘ಗುರುಕೃಪೆ’ ಎಂಬ ಕವನದಲ್ಲಿ ಬರೆದಂತೆ:

“ನಿರಿನಿರಿ ಮೆರೆದುದು ನೀಲಿಯ ಸೀರೆ,
ಶರಧಿಯನುಟ್ಟಳೆ ಭೂಮಿಯ ನೀರೆ?”
“ಚಂದ್ರಮುಖದಲ್ಲಿ ತಾರೆಯ ಬಿಂದು
ಚಂದ್ರೋದಯದಲಿ ಮಿಂದುದೆ ಸಿಂಧು:’

ಸೌಂದರ್ಯ ಗಾಂಭೀರ‍್ಯಗಳೆ ಮಧುಪಟಲವಗಿ ದೇವಿ ಹೇಮಾವತಿ ಪ್ರವೇಶಿಸಿದಳು. ಅದೆ ಮೊದಲಾಗಿ ನಾನು ಆಹ್ಲಾದಮಯವಾಗಿ ಎವೆಯಿಕ್ಕದೆ ನೋಡಿದೆ!

ಮಲಗಿದ್ದವನು ಕುಳಿತಿದ್ದೆ. ಅವಳು ಬಾಗಿಲು ದೂಡಿ, ತಾಳಹಾಕಿ, ಸಮೀಪಿಸಲು ಇರ್ಕೈಗಳಿಂದಲೂ ಸ್ವಾಗತಿಸಿದೆ….ಲೋಕದಲ್ಲಿ ಹಿರಿಯರೊಪ್ಪಿಗೆ ಪಡೆದು ಲೋಕಮೋದನೆಯಿಮದ ಒಟ್ಟಗುವ ನವಯೌವನದ ಸುಸಂಸ್ಕೃತ ವಧೂವರರೆಲ್ಲರಂತೆ ನಮ್ಮ ಪ್ರಣಯಯೋಗವೂ ಸಾಗಿತೆಂದರೆ ಹೇಳಬೇಕಾದುದನೆಲ್ಲ ಸೂಚಿಸಿದಂತಾಗುತ್ತದೆ. ಜೊತೆಗೆ ನನ್ನ ಕಾವ್ಯ ಕಾದಂಬರಿ ಸಾಹಿತ್ಯದಲ್ಲಿ ಸಹೃದಯರಿಗೆ ಅದರ ಪರಿಚಯ ಸಾಕಷ್ಟು ದೊರೆಯುತ್ತದೆ. ಆದರೆ ಒಂದು ವಿಷಯ ಬಾಯಿಬಿಟ್ಟು ಹೇಳಬಹುದು. ನಾನು ಏನು ಎಷ್ಟೆಷ್ಟು ಮಾತಾಡಿಸಿದರೂ ಅವಳು ಒಂದು ಸೊಲ್ಲನ್ನೂ ನುಡಿಯಲಿಲ್ಲ. ಮೌನದ ಬಂಡೆಯಾಗಿದ್ದಳು.

ಆದರೆ ಲೋಕದ ಇತರ ನವವಧೂವರರಿಗೆ ಅವರ ಪ್ರಥಮ ಸಮಾಗಮ ಸಮಯದಲ್ಲಿ ಆಗದ ಒಂದು ಅನುಭವ ಅಥವಾ ಅನುಭವದ ಅಭಾವ, ನಮ್ಮದಾಯಿತೆಂದು ತೋರುತ್ತದೆ. ರಾತ್ರಿಯೆಲ್ಲ-ಒಂದು ರಾತ್ರಿಯಲ್ಲ ಮೂರು ರಾತ್ರಿಗಳೂ-ಚುಂಬನಾಲಿಂಗನಾದಿ ಪ್ರಣಯ ಶುಶ್ರೂಷೆಯ ಲೀಲಾಂಗಗಳು ಯಥೇಚ್ಛವಾಗಿ ಸಮೃದ್ಧವಾಗಿ ಜರುಗಿದ್ದರೂ ನಮ್ಮ ಪ್ರಣಯ ಪರ್ವತಾರೋಹಣವು ಪ್ರತ್ಯಂತದವರೆಗೆ ಏರಿದ್ದರೂ ತುತ್ತತುದಿಯ ರತಿಶಿಖರಕ್ಕೆ ತಲುಪಿ, ಪರಾಕಾಷ್ಠೆಯ ರಸಪ್ರಳಯದಲ್ಲಿ ಸಿದ್ಧಿಸಿರಲಿಲ್ಲ, ಸ್ಥಾನಜ್ಞಾನದ ಅಭಾವವೆ ಕಾರಣವಾಗಿ! ಕುಪ್ಪಳಿಯ ‘ನಮ್ಮ ಕೋಣೆ’ಯಲ್ಲಿ ಸಂಭವಿಸದ ಆ ರಸಪ್ರಲಯ ಸಿದ್ಧಿ ಮಡದಿ ಮೈಸೂರಿಗೆ ಬಂದು “ಉದಯರವಿ”ಯ ನಮ್ಮ ಕೋಣೆಯಲ್ಲಿ ‘ಚಂದ್ರಮಂಚ’ದಲ್ಲಿ ನನ್ನೊಡನೆ ಪವಡಿಸುವ ೨೦-೬-೧೯೩೭ರ ಯಾಮಿನಿಯವರೆಗೆ ಕಾಯುವ ಯೋಗವಿತ್ತೆಂದು ತೋರುತ್ತದೆ!

ಸಾವಿರದ ಒಂಭೈನೂರ ಮೂವತ್ತೇಳನೆಯ ಮೇ ಹತ್ತೊಂಭತ್ತು ಇಪ್ಪತ್ತು ಮತ್ತು ಇಪ್ಪತ್ತೊಂದು ಈ ಮೂರು ದಿನಗಳಲ್ಲಿ ನಮ್ಮ ಸಮಾಗಮ ನಡೆದು ಕೊನೆಯ ದಿನ ಹಿಂದಿನ ವರ್ಷಗಳಲ್ಲಿ ಬೇಸಗೆ ರಜದಲ್ಲಿ ಹೋದಾಗಲೆಲ್ಲ ಜರುಗಿಸುತ್ತಿದ್ದಂತೆ ಈ ವರ್ಷವೂ ಶ್ರೀರಾಮಕೃಷ್ಣ ಜಯಂತ್ಯುತ್ಸವವನ್ನು ಆಚರಿಸಿದೆವು. “ನೆನಪಿನ ದೋಣಿಯಲ್ಲಿ”ಯ ಮೊದಲಿನಲ್ಲಿ ೧೯೩೬ರಲ್ಲಿ ಸ್ವಾಮಿ ಸಿದ್ಧೇಶ್ವರಾನಂದರ ಸಾನ್ನಿಧ್ಯದಲ್ಲಿ ಜರುಗಿಸಿದ ಶ್ರೀ ರಾಮಕೃಷ್ಣೋತ್ಸವವೇ ಕೊನೆಯದಾಗಿ ಬಿಟ್ಟಿತು ಎಂದು ತಪ್ಪಾಗಿ ವಿಷಾದಿಸಿದ್ದೇನೆ. ಆದರೆ ಆ ವಿಷಾದ ೧೯೩೭ಕ್ಕೆ ವರ್ಗಾಯಿಸಲ್ಪಡಬೇಕು. ಏಕೆಂದರೆ ೧೯೩೭ರಂದು ನಾನು ಮದುವೆಯಾಗಿ  ಸತೀಸಹಿತ ಕುಪ್ಪಳಿಯ ಉಪ್ಪರಿಗೆಯಲ್ಲಿ ಶ್ರೀರಾಮಕೃಷ್ಣೋತ್ಸವವನ್ನು ಆಚರಿಸಿದ ಮೇಲೆ ನಾನು ಕುಪ್ಪಳಿಗೆ ಹೋಗುವುದೇ ಅತ್ಯತಿ ಅಪೂರ್ವವಾಗಿಬಿಟ್ಟಿತು. ಬೇಸಗೆ ರಜಾಕ್ಕೆ ಹೇಮಾವತಿಯೊಡನೆ ಹೋದಾಗಲೂ ಶಿವಮೊಗ್ಗೆಯಲ್ಲಿಯೆ ನಿಂತು ಮೈಸೂರಿಗೆ ಹಿಂತಿರುಗುತ್ತಿದ್ದೆ.

೨೧-೫-೧೯೩೭ರ ಶ್ರೀಗುರುಮಹಾರಾಜರ ಉತ್ಸವವಾದ ಮೇಲೆ ಹೇಮಾವತಿ ಶಿವಮೊಗ್ಗಕ್ಕೆ ತವರಿಗೆ ಹಿಂತಿರುಗಿದಳು. ನನಗೇ ಅತ್ಯಂತ ಆಶ್ಚರ‍್ಯವಾಗುವಂತೆ ಮಹಾಯಾತನಾಕ್ಲಿಷ್ಟವಾದ “ವಿರಹ” ಶುರುವಾಯಿತು! ‘ವಿರಹ’ ಪದವನ್ನು ಯಪಯೋಗಿಸಿ ‘ವಿರಹಯಾತನೆ’ಯನ್ನು ಕಾವ್ಯಗಳಲ್ಲಿ ಚಿತ್ರಿಸಿದ್ದೆ. ಇತರ ಎಲ್ಲ ಮಹಾಕವಿಗಳ ಕಾವ್ಯನಾಟಕಗಳಲ್ಲಿಯೂ ವಿಪ್ರಲಂಭ ಶೃಂಗಾರದ ವಿರಹವರ್ಣನೆಗಳನ್ನು ಓದಿದ್ದೆ. ಆದರೆ ವಿರಹಯಾತನೆ, ನರಕಯಾತನೆ, ಅರ್ಥವಾದುದು ಈಗಲೆ! ‘ಅರ್ಥವಾದುದು’ – ಎಂದು ಬರೆದೆ; ಆದರೆ ಬರೆಯಬೇಕಾದುದು ‘ಅರ್ಥವಾಗದುದು’ ಎಂದೇ/ ಇದ್ದಕ್ಕಿದ್ದ ಹಾಗೆ ನನಗೆ ಸಂಭವಿಸಿದ ಆ ಸಂಕಟದ ಮನಃಸ್ತಿತಿ ನನಗೆ ಅರ್ಥವಾಗಲಿಲ್ಲ. ದಿಗ್‌ಭ್ರಮೆಯುಂಟು ಮಾಡಿತು! ನನ್ನ ಹೃದಯ ಸ್ಥಿತಿ ಬೆಂಕಿಗೆ ಬಿದ್ದು ಸುಡುತ್ತಿರುವ ಪತಂಗದಂತಾಯ್ತು; ಆದ ನಾನು ಬರೆಯುತ್ತಿದ್ದ ಶ್ರೀರಾಮಾಯಣದರ್ಶನದಲ್ಲಿ ಎಲ್ಲೆಲ್ಲಿ ಈ ವಿಯೋಗ ದುಃಖ ದಾವಾನಲನ ವರ್ಣನೆ ಇದೆಯೋ ಅಲ್ಲೆಲ್ಲ ನಾನು ಅನುಭವಿಸಿದ ಆ ಒಲವಿನ ಅಗಲುವಿಕೆಯ ಘೋರವೇದನೆಯೆ ಚಿತ್ರಿತವಾಗಿದೆ ಎಂದು ತಿಳಿಯಬಹುದು.

ಆ ವಿರಹದ ಘೋರ ಅನುಭವವಾದಮೇಲೆ, ಅನೇಕ ವರ್ಷಗಳ ಮೇಲೆ ಒಂದು ದಿನ ಮಹಾರಾಜಾ ಕಾಲೇಜಿನ ಅಧ್ಯಾಪಕರ ಕೊಠಡಿ (Staff Room)ಯಲ್ಲಿ, ತರಗತಿಗಳು ಪ್ರಾರಂಭವಾಗುವುದಕ್ಕೆ ಮೊದಲು, ಕಿರಿಯ ಅಧ್ಯಾಪಕವರ್ಗದವರು ಯಾವುದೊ ಸಾಹಿತ್ಯಕವಾದ ಹರಟೆಯಲ್ಲಿ ತೊಡಗಿದ್ದೆವು; ಆಗ ಸಂಸ್ಕೃತದ ಯುವಕ ಅಧ್ಯಾಪಕರೊಬ್ಬರು ಕಾಳಿದಾಸನ ವರ್ಣನೆಗಳಲ್ಲಿ ಅತಿ ಉತ್ಪ್ರೇಕ್ಷೆಯಿದೆ ಎಂಬ ವಿಚಾರವಾಗಿ ಟೀಕಿಸುತ್ತಾ, “ಮೇಘದೂತ” ಕಾವ್ಯದ ಮೊದಲೆನಯ ಪದ್ಯವನ್ನೆ ನಿದರ್ಶನವಾಗಿಟ್ಟುಕೊಂಡು ಲೇವಡಿ ಮಾಡಿದರು.

ಕಶ್ಚಿತ್ಕಾಂತಾ ವಿರಹಗುರುಣೌ ಸ್ವಾಧಿಕಾರ ಪ್ರಮತ್ತ:
ಶಾಪೇನಾಂಸ್ತಂಗಮಿತ ಮಹಿಮಾ ವðಭೋಗ್ಯೇಣ ಭರ‍್ತುಃ
ಸ್ನಿಗ್ಧಚ್ಛಾಯಾ ತರುಷು ವಸತೀಂ ರಾಮಗಿರ‍್ಯಾಶ್ರಮೇಷು
ಯಕ್ಷಶ್ಚಕ್ರೇ ಜನಕತನಯಾ ಸ್ನಾನ ಪುಣ್ಯೋದಕೇಷು.

ಆ ಅಧ್ಯಾಪಕರು ಯಕ್ಷನ ವಿರಹತಾಪವನ್ನು ಕಾಳಿದಾಸ ‘ವಿರಹಗುರುಣೌ’ ಎಂದು ಅತಿಯಾಗಿ ಉತ್ಪ್ರೆಕಿಸಿದ್ದಾನೆ. ಏನು ಮಹಾ? ಒಂದಾರು ತಿಂಗಳು, ಒಂದುವರ್ಷ, ಹೆಂಡತಿಯಿಂದ ದೂರವಿರುವ ಶಾಪಕ್ಕೆಲ್ಲ ಚೇತನಾಚೇತನಗಳ ಅರಿವೂ ಆಗದಷ್ಟು ವಿರಹ ಸಂಕಟವಾಗುತ್ತದೆಯೇ? ಎಂದು ನಕ್ಕುಬಿಟ್ಟರು. ಒಲವಿನಿಂದ ದೂರವಾಗುವುದೇನು ಎಂಬುದನ್ನು ಅನುಭವಿಸಿದ್ದ ಮತ್ತು ಆಗಲೂ ಅಂತಹ ಅನುಭವಕ್ಕೆ ಭಯಂಕರವಾಗಿ ಹೆದರುತ್ತಿದ್ದ ನನಗೆ ಆ ಅಧ್ಯಾಪಕರ ಮಾತು ಕೇಳಿ ಆಶ್ಚರ‍್ಯವಾಯಿತು. ಮತ್ತೆ ಸಮಾದಾನ ಮಾಡಿಕೊಂಡೆ-ಬಹುಶಃ ಎಲ್ಲರಿಗೂ ನನಗೆ ಆದಹಾಗೆ ಆಗುತ್ತದೆಯೋ ಇಲ್ಲವೋ? ಏಕೆಂದರೆ ಪತ್ರಿಕೆಗಳಲ್ಲಿ ನಾನು ಎಷ್ಟೋ ಓದಿದ್ದೆ, ಕೈಹಿಡಿದ ಹೆಂಡತಿಯ ವಿರಹಕ್ಕೆ ಪರಿತಪಿಸುವುದಿರಲಿ, ಕೈಹಿಡಿದು ಒಲಿದಿದ್ದವಳನ್ನು ನಾನಾ ಕಾರಣಕ್ಕಾಗಿ ಹಿಂಸಿಸುವುದು, ಮಾವನು ವರದಕ್ಷಿಣೆ ಕೊಡಲಿಲ್ಲವೆಂದು ಹೆಂಡತಿಯ ಸೀರೆಗೆ ಸೀಮೆಯೆಣ್ಣೆ ಸುರಿದು ಬೆಂಕಿ ಹಚ್ಚುವುದು, ಅವಳನ್ನು ಕೊಂದು ನೇಣುಹಾಕಿ, ಅವಳೇ ಆತ್ಮಹತ್ಯೆ ಮಡಿಕೊಂಡಳೆಂದು ಹೇಳುವುದು-ಹೀಗೆ ನಡೆಯುವ ಭಯಂಕರ ವಾರ‍್ತೆಗಳನ್ನು ಓದಿದ್ದ ನನಗೆ ಆ ಅಧ್ಯಾಪಕರೂ ಅದೇ ವರ್ಗದವರಿರಬಹುದು ಎಂದುಕೊಂಡಿದ್ದೆ. ಆಮೇಲೆ ಕೇಳಿದರೆ ತಿಳಿಯಿತು, ಆ ಅಧ್ಯಾಪಕರು ತಮ್ಮ ಮೊದಲನೆಯ ಹೆಂಡತಿಯನ್ನು ನಾಲಗೆ ಹಿಡಿದೆಳೆದು ಕಿತ್ತು ಕೊಂದುಹಾಕಿ, ಮತ್ತೊಂದು ಮದುವೆಯಾದವರು ಎಂದು! ಕೊನೆಕೊನೆಗೆ ನಾನು ಹೀಗೆ ನಿಶ್ಚಯಿಸುವ ಹಾಗಾಗಿದ್ದೆ: ಈ ಪ್ರೇಮವಿರಹಗಳ ತೀವ್ರತೆ ಕವಿಚೇತನಕ್ಕೆ ಆಗುವಂತೆ ಇತರರಿಗೆ ಆಗುವುದಿಲ್ಲವೋ ಏನೋ ಎಂದು!

ಅಂತೂ ನನಗೆ ಆ ವಿರಹ ಸಹಿಸುವುದು ಅಸಾಧ್ಯವಾಯಿತು. ಆ ಪ್ರಥಮ ಮಿಲನದ ತರುವಾಯ ಆ ಪ್ರಥಮ ವಿರಹದ ಫಲವಾಗಿ ೨೪-೫-೧೯೩೭ರಲ್ಲಿ ನಾನು ಕುಪ್ಪಳಿಯಿಂದ ಶಿವಮೊಗ್ಗಕ್ಕೆ ಹೇಮಿಯ ಬಳಿಗೆ ಹೊರಡುವ ಮಾರ್ಗವಾಗಿ ಇಂಗ್ಲಾದಿಗೆ ಬಂದಿದ್ದಾಗ ಬರೆದ ಎರಡು ಕವನಗಳು ಆ ಮಿಲನ ಮತ್ತು ವಿರಹದಲ್ಲಿ ನನಗಾದ ಅನುಭವಕ್ಕೆ ಕಾವ್ಯಸಾಕ್ಷಿಯಾಗುತ್ತವೆ. ಅವರೆಡೂ “ಜೇನಾಗುವಾ” ಎಂಬ ಪ್ರೇಮಗೀತೆಗಳ ಕವನಸಂಗ್ರಹದಲ್ಲಿ ಅಚ್ಚಾಗಿವೆ: ಹೆಸರು “ಜೇನಿರುಳು ಅಥವಾ ಪ್ರಥಮಮಿಲನ” ಮತ್ತು

ಪ್ರಥನ ವಿರಹ.”


ಮೊದಲನೆಯ ಮಿಲನವೇನ್?
ಅಹದು; ಈ ಜನ್ಮದಲಿ!
ಇಲ್ಲದಿರೆ ಮರೆತ ಚಿರಪರಿಚಿತೆಯನಿನ್ನೊಮ್ಮೆ
ಎದುರುಗೊಂಡಂತಾದುದೇಕೆ!
ಜನ್ಮಜನ್ಮಾಂತರದ ನಲ್ಲೆಯಾಕೆ!

ಕುಳಿತು ಕಾಯುತ್ತಿದ್ದೆ ಗಗನದಂತೆ
ಪ್ರಣಯಿ ನಾನು,
ಕತ್ತಲೆಗೆ ಕೆಮ್ಮಿಂಚು ಬಳುಕಿ ಬರುವಂತೆ
ಬಂದೆ ನೀನು,
ಓ ನನ್ನ ಚಿರ ಪರಿಚಿತೆ!

ನೀ ನನ್ನ ಗುರುತಿಸಿದೆ;
ನಾ ನಿನ್ನ ಗುರುತಿಸಿದೆ;
ಕರಗಿದುದು ಬಹುಜನ್ಮ ಕಾಲ ದೇಶದ ಹಿರಿಯ ಕರಿಯ ಕಲ್‌ಗೋಡೆ
ನಾ-ನಿನ್ನ, ನೀನೆನ್ನ ನೋಡೆ!
ಚೆಲುವೆ, ಶರಣಾದೆ ನೀನೆನ್ನನೊಪ್ಪಿ;
ಸಂಪೂರ್ಣನಾದೆ ನಾ ನಿನ್ನನಪ್ಪಿ!
ನಾನು ಮಾತಿನ ಹೊಳೆಯ ಹೊನಲಾಗಿ ಹರಿದೆ
ಸವಿನುಡಿಯ ಮಳೆಯ ಕರೆದೆ;
ನೀನು ಮೌನದ ಬಂಡೆಯಂದದಲಿ ಕುಳಿತೆ
ನೀರ್‌ನಡುವೆ ನಲ್‌ಮೊರೆಯನಾಲಿಸುತ, ಓ ಎನ್ನ ಲಲಿತೆ!

ಅಯ್ಯೊ ಆ ಜೇನಿರುಳು ಬೆಳಗಾದುದೇಕೆ?
ನಮ್ಮಿರ್ವರಾ ಬಿಗಿದ ನಲ್ಮೆಗೋಳ್‌ತಾವರೆಯ ಸೆರೆಗೆ
ಬಿಡುಗಡೆಯ ಹಾಳು ರವಿ ಉದಯಿಸಿದನೇಕೆ?
೨೪-೫-೧೯೩೭
ಇಂಗ್ಲಾದಿ
ಪ್ರಥಮ ವಿರಹ

ನೀನು ಬಳಿಯಿರೆ ಹೊತ್ತು ಹರಿಯುವುದು ಹೊನಲಾಗಿ
ಕುಣಿಕುಣಿದು ನಲಿನಲಿದು ನೊರೆನಗೆಯ ಬೀರಿ;
ನೀನಿಲ್ಲದಿರೆ ಕಾಲ ನಿಲ್ಲುವುದು ಕಲ್ಲಾಗಿ
ಭಾರದಿಂದೆದೆಯ ಜೀವವ ಹಿಂಡಿ ಹೀರಿ:

ನೀನು ಬಳಿಯಿರೆ ಬಾಳ ಕೊಳ ತುಳುಕುವುದು ತುಂಬಿ
ನಲ್ ಸೊಗದ ತಾವರೆಯ ನೂರು ಹೂವರಳಿ;
ನೀನಿಲ್ಲದಿರೆ ಬದುಕು ಶೂನ್ಯತೆಯ ಸುಳಿಯಲ್ಲಿ
ಹೊರಳುರುಳಿ ಕಂತುವುದುಸಿರ್ ಕಟ್ಟಿ ಕೆರಳಿ

ನೀನೆನ್ನ ಬಳಿಯಿರಲು ರವಿಯುದಯ ಬಲುಸೊಗಸು;
ನಿನ್ನ ಸೋಂಕಿರೆ ಸೊಗಸು ಕಾಂತಾರ ವೀಚಿ;
ನಿನ್ನ ಜೇನ್ದನಿ ಸೇರೆ ಹಕ್ಕಿಗೊರಲಿಂಚರಕೆ
ನಂದನದ ಗಾನ ಮೈಗರೆಯುವುದು ನಾಚಿ!

ನೀನು ಬಳಿಯಿಲ್ಲದಿದ್ದರೆ, ಓ ನಲ್ಲೆ ಹೇಮಾಕ್ಷಿ,
ಜಗವೆಲ್ಲ ಜಡಬಂಡೆ, ಬೇಸರದ ಬೀಡು!
ನೀನಗಲಿದೀ ಕವಿಗೆ ಇಂದು ಈ ಮಲೆನಾಡು,
(ಹೇಳೆ ನಾಚಿಗೆಗೇಡು!) ಹಿರಿ ಮರಳುಗಾಡು!
೨೪-೫-೧೯೩೭
ಇಂಗ್ಲಾದಿ

ಅಂತೂ ಆ ಅಸಹನೀಯವಾದ ಪ್ರಥಮವಿರಹದ ಬೇಗೆಯಿಂದ ಪ್ರಿಯೆಯ ಬಳಿ ಸೇರುವುದಕ್ಕಾಗಿ ನಾಉ ಒಲಿದಿದ್ದ ಮಲೆನಾಡಿನಿಂದ ದೂರ ಸರಿದು ಶಿವಮೊಗ್ಗೆಗೆ ಓಡಿಬಿಟ್ಟೆ. ಶಿವಮೊಗ್ಗೆಯಲ್ಲಿ ಹಿಂದೆ ಯಾವಾಗಲೂ ಉಳಿಯುತ್ತಿದ್ದ ಮಂಡಿಯಲ್ಲಿ ಉಳಿಯದೆ ಮಾವನ ರಜಾ ಮುಗಿದು ಪ್ರಾರಂಭವಾಗಲು ಇನ್ನೂ ಎರಡು ಎರಡೂವರೆ ತಿಂಗಳುಗಳಿದ್ದರೂ ಮಡದಿಯನ್ನು ಆದಷ್ಟು ಬೇಗನೆ ನನ್ನ ಸ್ವಂತ ಮನಗೆ ಕರೆತರುವ ಅನಿವಾರ್ಯಕ್ಕಾಗಿ ನಾನೊಬ್ಬನೆಯೆ ರೈಲು ಹತ್ತಿದೆ.

ಕಂತ್ರಾಟುದಾರ ಕೆ.ಸಿ.ಧಾಮ್ ಅವರಿಗೆ ವಿಶ್ವವಿದ್ಯಾನಿಲಯದಿಂದ ಬಂದಿದ್ದ ಸಾಲದ ಮೊತ್ತವನ್ನು ಕೊಟ್ಟಿದ್ದರೂ ಮನೆ ಇನ್ನೂ ಕಟ್ಟಿ ಮುಗಿದಿರಲಿಲ್ಲ. ಆದ್ದರಿಂದ ಹಿಂದೆ ಬಾಡಿಗೆಯಲ್ಲಿದ್ದ ಮನೆಯಲ್ಲಿಯೆ ಇದ್ದುಕೊಂಡು ದಿನವೂ ಮನೆ ಕಟ್ಟಿಸು ಸುಮಾರು ಒಂದೂವರೆ ಫರ್ಲಾಂಗು ದೂರದಲ್ಲಿದ್ದ ಜಾಗಕ್ಕೆ ಹೋಗಿ ಕಂಟ್ಟಾಕ್ಟರನ್ನು ಬೇಗ ಮಾಡಲು ಪ್ರಚೋದಿಸುತ್ತಿದ್ದೆ, ಕೆಲವೊಮ್ಮೆ ಬೆಂಬಲಕ್ಕೆ ಸ್ವಾಮಿ ದೇಶಿಕಾನಂಜಿಯನ್ನೂ ಕರೆದೊಯ್ದು.

ಕಾಲೇಜು ಪ್ರಾರಂಭವಾಗುವುದರೊಳಗಾಗಿ ಮನೆಯೇನೋ ಪೂರ್ತಿಪೂರೈಸಲಿಲ್ಲ. ಮುಮ್ಮನೆ ಹಿಮ್ಮನೆಗಳಿಗೆ ಕಿಟಕಿ ಬಾಗಿಲುಗಳನ್ನು ಜೋಡಿಸುವಂತೆ ಅವಸರಮಾಡಿ, ಗಾಳಿಮಳೆಗಳಿಗೆ ಸಿಗದಿರುವಷ್ಟು ಮಾತ್ರ ಭದ್ರ ಮಾಡಿಕೊಂಡು ಒಂದು ದಿನ ನನ್ನ ಸಾಮಾನುಗಳನ್ನೆಲ್ಲ ಸಾಗಿಸಿದೆ. ನನಗೆ ನೆರವಾಗಿ ನಮ್ಮ ಗೋಪಾಲನಿದ್ದ. ಅವನು ನಾವು ರಜಕ್ಕೆ ಹೋಗಿದ್ದಾಗ ಒಬ್ಬನೆ ಆ ಮನನೆಯಲ್ಲಿ ಇದ್ದುಕೊಂಡು, ಅಡುಗೆ ಮಾಡಿಕೊಳ್ಳುತ್ತಾ, ನಾನು ಮದುವೆಯಾಗಿ ಹಿಂದಕ್ಕೆ ಬರುವುದನ್ನೆ ಕಾಯುತ್ತಿದ್ದ.

ಹಿಮ್ಮನೆಯ ಎರಡು ಕೊಠಡಿಗಳಲ್ಲಿ ಪುಸ್ತಕದ ಬೀರುಗಳನ್ನೂ ಕುರ್ಚಿ ಮೇಜುಗಳನ್ನೂ ಅಡುಗೆಸಾಮಾನುಗಳನ್ನೂ ಕಿತ್ತಲಪತ್ತಲವಾಗಿ ಜಮಾಯಿಸಿದೆವು. ಅಲ್ಲಿಯೇ ಮಲಗಲೂ ಹಾಸಗೆ ಹಾಸಲು ಜಾಗ ಮಾಡಿದ್ದೆವು; ಶಾಶ್ವತವಾಗಿ ಇಬ್ಬರೂ ಮಲಗುವಂತಹ ಹೊಸಮಂಚ ಮೊದಲಾದವು ಇನೂ ಸಿದ್ಧವಾಗಿರಲಿಲ್ಲ.!

ಹೊಸಮನೆ ಕಟ್ಟಿಸಿ ಅದಕ್ಕೆ ಸಾಮಾನು ಸಾಗಿಸಿ ಪ್ರವೇಶಿಸಿದಾಗ ನಾವು ಯಾವ ಅಶುಭಪರಿಹಾರಕ ಮತ್ತು ಶುಭಕಾರಕ ಪುರೋಹಿತ ಶಾಹಿ ಕಾರ್ಯಕ್ರಮಗಳನ್ನೂ ಇಟ್ಟುಕೊಳ್ಳಲಿಲ್ಲ. ನಾನು ಆ ಮೂಢಾಚಾರಗಳನ್ನು ಎಂದೂ ಮಾನ್ಯಮಾಡಿದವನಲ್ಲ; ಆಚರಿಸಿದವನಲ್ಲ; ಜೋಯಿಸರನ್ನು ಕೇಳುವುದಾಗಲಿ ಶುಭಮುಹೂರ್ತಗಳನ್ನು ಗೊತ್ತು ಮಾಡುವದಾಗಲಿ, ಪಂಚಾಂಗ ನೋಡಿಸುವುದಾಗಲಿ, ಭಟ್ಟರಿಂದ ಪೂಜೆಮಾಡಿಸುವುದಾಗಲಿ, ಗ್ರಹ ನಕ್ಷತ್ರಾದಿಗಳ ಗತಿಗಳನ್ನು ನೋಡಿ ಅಮಂಗಳ ಶಮನಕಾರ್ಯ ಯಜ್ಞಯಾಗ ಮಾಡುವುದಾಗಲಿ ಮುಂತಾದ ಯಾವ ಅವೈಜ್ಞಾನಿಕವೂ ಅವೈಚಾರಿಕವೂ ಆದ ಜ್ಯೋತಿಷ್ಯ ಕಾರ್ಯಗಳಲ್ಲಿ ವ್ಯರ್ಥ ಕಾಲಹರಣ ಮಾಡಿದವನಲ್ಲ. ಬಾಡಿಗೆ ಮನೆಯಲ್ಲಿ ಒಂದು ಚಿಕ್ಕ ಬೆತ್ತದ ಮೇಜಿನ ಮೇಲೆ ಇರಿಸಿದ್ದ, ಬೇಕಾದರೆ ದೇವರಮನೆ ಎನ್ನಬಹುದಾಗಿದ್ದ, ಆಶ್ರಮದಲ್ಲಿದ್ದಾಗ ಸ್ವಾಮಿ ನಿಃಶ್ರೇಯಸಾನಂದರು ಬರೆದುಕೊಟ್ಟಿದ್ದ ನನ್ನ ದೀಕ್ಷಾಗುರು ಸ್ವಾಮಿ ಶಿವಾನಂದರ ಎರಡು ಎರಡೂವರೆ ಅಡಿಯ ತೈಲ ವರ್ಣದ ಭಾವಚಿತ್ರವನ್ನೂ ಅದಕ್ಕಿಂತ ತುಸು ಚಿಕ್ಕ ಗಾತ್ರದ ಸ್ವಾಮಿಜಿ (ವಿವೇಕಾನಂದ) ಮಹಾಮಾತೆ (ಶಾರದಾದೇವಿ) ಮತ್ತು ಗುರುಮಹಾರಾಜರ (ಶ್ರೀರಾಮಕೃಷ್ಣ) ಪಟಗಳನ್ನೂ ತಂದು ಹೊಸಮನೆಯ ಹಿಮ್ಮನೆ ಸಾಮಾನು ತುಂಬಿ ಕಿಕ್ಕಿರಿದಿದ್ದ ಕೋಣೆಯ ಒಂದು ಮೂಲೆಯಲ್ಲಿ ಜೋಡಿಸಿದೆವು! ಬಹುಶಃ ಆ ಹೊಸ ಸನ್ನಿವೇಶಕ್ಕಾಗಿ ಊದಿನಕಡ್ಡಿ ಹೊತ್ತಿಸಿದ್ದೆವೆಂದು ತೋರುತ್ತದೆ! ಅಂತೂ ಇನ್ನೂ ಮನೆ ಪೂರ್ತಿ ಕಟ್ಟುವುದರೋಳಗಾಗಿಯೇ, ಕಂಟ್ರಾಕ್ಟರಿಗೂ ಕೆಲಸಗಾರರಿಗೂ ದಿಗ್‌ಭ್ರಮೆಯಾಗುವಂತೆ, ನಮ್ಮ ಮೆ ‘ಉದಯರವಿ’ಯ ‘ಗೃಹಪ್ರವೇಶ’ ಆಗಿಹೋಯಿತು!!

ಇನ್ನೂ ವಿದ್ಯುದ್ದೀಪದ ಕೆಲಸವಾಗಿಯೆ ಇರಲಿಲ್ಲವಾದ್ದರಿಂದ ರಾತ್ರಿ ಲಾಟೀನು ಲ್ಯಾಂಪು ಮೊಂಬತ್ತಿ ಇವುಗಳನ್ನು ಹೊತ್ತಿಸುತ್ತಿದ್ದೆವು. ಮನೆಯಲ್ಲಿದ್ದರೂ ಒಂದು ಕ್ಯಾಂಪಿನಲ್ಲಿ ಇರುವಂತೆ ಭಾಸವಾಗುತ್ತಿತ್ತು. ನಮ್ಮ ಮನೆಯೆ ಅಂದು ಮೈಸೂರಿನ ಪಶ್ಚಿಮದ ಕೊಟ್ಟಕೊನೆ ಮನೆಯಾಗಿತ್ತು. ಮನೆಯ ಗೇಟಿನಿಂದಲೆ ಆಗಿನ್ನೂ ಉತ್ತುಬಿತ್ತಿ ಕೃಷಿಯ ಉಪಯೋಗದಲ್ಲಿದ್ದ ರಾಗಿಯ ಜೋಳದ ಹಚ್ಚೆಳ್ಳಿನ ಹುರುಳಿಯ ಹೊಲಗಳು ಕಂಗೊಳಿಸುತ್ತಿದ್ದುವು!

ಇನ್ನೂ ಕಟ್ಟಿ ಪೂರೈಸದಿದ್ದ ಆ ಮನೆಯಲ್ಲಿಯೆ ಇದ್ದುಕೊಂಡು, ಹೇಮಾವತಿಯ ಆಗಮನಕ್ಕಾಗಿ ಅತ್ಯಂತ ಅವಶ್ಯಕವಾಗಿ ಆಗಲೇಬೇಕಾಗಿದ್ದ ಕೆಲಸಗಳನ್ನೆಲ್ಲ ತಕ್ಕಮಟ್ಟಿನ ತರಾತುರಿಯಿಂದಲೆ ಮಾಡಿಸಿದೆವು. ಆ ಕೆಲಸಗಳಲ್ಲಿ “ನಮ್ಮಕೋಣೆ”ಯನ್ನು ಸಜ್ಜುಗೊಳಿಸುವುದೂ ಒಂದಾಗಿತ್ತೆಂದು ಬೇರೆ ಹೇಳಬೇಕಾಗಿಲ್ಲ. ಆಶ್ರಮದಲ್ಲಿದ್ದಾಗ ಅಲ್ಲಿಗೆ ಬರುತ್ತಿದ್ದ ರೈಲ್ವೆ ಕೆಲಸಗಾರ ರಾಮಸ್ವಾಮಿಯಿಂದ ಬೇಟೆಮರದ ಪುಸ್ತಕದ ಬೀರು ಮಾಡಿಸಿದ್ದಂತೆ ಈಗಳು ಅದೇ ರಾಮಸ್ವಾಮಿಯ ಕೈಲಿ ಒಂದು ಸೊಗಸಾದ ಜೋಡುಮಂಚ ತಯಾರಿಸಿ, ಅದಕ್ಕೆ ಬೇಕಾದ ಹೊಸ ಬಣ್ಣಬಣ್ಣದ ಬಟ್ಟೆಯಿಂದ ಮೆರೆಯುವ ಮೆತ್ತೆ ತಡಿಗಳನ್ನೂ ಹಾಕಿಸಿ, ನಿಜವಾಗಿಯೂ ಒಂದು ಚಂದ್ರಮಂಚವನ್ನೆ ಸಿದ್ಧಗೊಳಿಸಿದೆನು. ಮನೆಗೆ ‘ಉದಯರವಿ’ ಎಂದು ಹೆಸರಿಟ್ಟೆ. ಸ್ವಾಮಿ ದೇಶಿಕಾನಂದರೊಡನೆ ನಮ್ಮ ಹೊಸಮನೆಯನ್ನು ನೋಡಲು ಬಂದ ಎಚ್.ಸಿ. ದಾಸಪ್ಪನವರು (ಆಗ ಅವರು ಆಶ್ರಮದ ಕಾರ್ಯದರ್ಶಿಯಾಗಿದ್ದರು.) ನಮ್ಮ ಮಲುವ ಕೋಣೆಯನ್ನೂ ಸಂದರ್ಶಿಸಿ ಧ್ವನಿಪೂರ್ಣವಾಗಿ ನಗುತ್ತಾ ಇಂಗ್ಲಿಷಿನಲ್ಲಿ ಎಂದಿದ್ದರು “ಓಹೋಹೋ! ಒಲವನ್ನು ಸುಸ್ವಾಗತಿಸಲು ಆಗಲೇ ಸರ್ವಸಿದ್ಧತೆ ಆಗಿಬಿಟ್ಟಿದೆ!!”