ಆದರೆ ಒಲವು ಇನ್ನೂ ಆಗಮಿಸಿರಲಿಲ್ಲ. ನನ್ನ ವಿರಹ ಮಾತ್ರ ಯಾವ ಕಾಳಿದಾಸನ ಯಕ್ಷನೂ ಅನುಭವಿಸದಿದ್ದಷ್ಟು ನರಕಯಾತಾ ಸದೃಶವಾಗಿತ್ತು. ೧-೬-೧೯೩೭ರಲ್ಲಿ ಬರೆದ ಕವನ ‘ಪ್ರೇಮಕಾಶ್ಮೀರ’ದಲ್ಲಿರುವ ಈ ‘ಸುಂದರ ಸಂಜೆ’ ಎಂಬುದು ಹೀಗೆ ಮೊದಲಾಗುತ್ತದೆ:

ಈ ಸುಂದರ ಸಂಜೆ-
ಬರಿ ಬಂಜೆ!
ನೀನಿಲ್ಲದೆ, ನಲ್ಲೆ,
ನಾ ಬಲ್ಲೆ!

ಮಾನಪ್ಪನಿಗೆ ಮತ್ತೆಮತ್ತೆ ಕಾಗದದ ಮೇಲೆ ಕಾಗದ ಬರೆದರೂ ಪ್ರಯೋಜನವಾಗಲಿಲ್ಲ. ಕಾರಣ, ಹೇಮಾವತಿ ಒಬ್ಬಳನ್ನೆ ಕರೆತರುವುದಾಗಿದ್ದರೆ ಬೇಗ ಬರುತ್ತಿದ್ದನೇನೋ? ಆದರೆ ಅವನು ಮದುವೆಯಗುವ ಮುನ್ನ ಕುಪ್ಪಳಿಯಲ್ಲಿ ಕವಿಶೈಲದಲ್ಲಿ ಬಂಡೆಯ ಮೇಲೆ ಕುಳಿತು ಅವನನ್ನು ಮದುವೆಗೆ ಒಪ್ಪಿಸಿದ್ದಾಗ ನಾನು”ನೀನು ಮದುವೆಯಾಗುವ ಹುಡುಗಿಯನ್ನು ಮೈಸೂರಿನ ನಮ್ಮ ಮನೆಯಲ್ಲಿಯೆ ಇರಿಸಿಕೊಂಡು ಸ್ಯಾನಿಟೋರಿಯಂ ಡಾಕ್ಟರ್ ಜಯರಾಂ ಅವರಿಂದ ಪರೀಕ್ಷೆ ಮಾಡಿಸಿ, ಔಷಧಿ ಕೊಡಿಸಿ, ಶುಶ್ರೂಷೆ ಮಾಡಿಸುತ್ತೇನೆ” ಎಂದು ಹೇಳಿದ್ದ ಮಾತಿನಂತೆ ಅವನು ಅವನ ಹೆಂಡತಿ ಲಕ್ಷ್ಮೀದೇವಿಯನ್ನೂ ಕರೆತರುವ ಉದ್ಯೋಗದಲ್ಲಿದ್ದನೆಂದು ತೋರುತ್ತದೆ. ಅಂತೂ ಪುಂಖಾನುಪುಂಖವಾಗಿ ನನ್ನ ವಿರಹ ಪತ್ರಬಾಣಗಳು ಪ್ರಯೋಗವಾದ ಮೇಲೆ ೧೯-೬-೧೯೩೭ರಂದು “ನಾಳೆ ಬರುತ್ತೇವೆ” ಎಂಬ ಕಾಗದ ಬಂತು. ಪ್ರಾಣವೇ ಚೇತರಿಸಿಕೊಳ್ಳುವಂತೆ!!

ಅಂತೂ ೨೦-೬-೧೯೩೭ರಂದು ಮಾನಪ್ಪ ರೈಲಿನಲ್ಲಿ ಶಿವಮೊಗ್ಗದಿಂದ ಹೇಮಾವತಿ ಮತ್ತು ಲಕ್ಷ್ಮೀದೇವಿಯರನ್ನು ಕರೆದುಕೊಂಡು ಮೈಸೂರಿಗೆ ಬಂದನು. ಮನೆ ಕಟ್ಟಿಸಿಕೊಂಡು, ಮದುವೆ ಮಾಡಿಕೊಂಡು ಸಂಸಾರಿಯಾಗಿ “ಉದಯರವಿ”ಯಲ್ಲಿ ನೆಲಸಿದೆನು. ಸದ್ಯಕ್ಕೆ ೧೯೩೭-೧೯೮೧ರ ಅವಧಿಯ ನಮ್ಮ ಸಾಂಸಾರಿಕ ಜೀವನದ ಉಬ್ಬುತಗ್ಗು ಹಿಗ್ಗುಕುಗ್ಗುಗಳನ್ನು ಮುಂದೆ ಆಯಾ ಸಂದರ್ಭಗಳಲ್ಲಿ ವಿವರಿಸುತ್ತೇನೆ ಆದರೆ ಒಟ್ಟಿನಲ್ಲಿ ಈ ನಾಲ್ವತ್ತುನಾಲ್ಕು ಸಂವತ್ಸರಗಳ ಮಧ್ಯೆ ವಿಕಸಿತವಾದ ನಮ್ಮ ದಾಂಪತ್ಯ ಜೀವನದ ಶೃಂಗಾರ ಪಕ್ಷವನ್ನು ಕುರಿತು ನಾಲ್ಕು ಮಾತುಗಳಲ್ಲಿ ಸೂಚಿಸಬಯುಸತ್ತೇನೆ. ಒಟ್ಟಿನಲ್ಲಿ ನಮ್ಮ ಬದುಕು ಶರೀಮತೆಯ ಕೃಪೆಯಿಂದ ಸುಖಸಂತೋಷಮಯವಾಗಿ ನಡೆದು ಬಂದಿರುವುದನ್ನು ಆ ವಿಚಾರವಾದ ನನ್ನ ಕವನ ಸಂಗ್ರಹಗಳು ಸಾರುತ್ತವೆ. ಆದರೆ ಮದುವೆಯಾದ ಗಂಡುಹೆಣ್ಣುಗಳ ಸಂಬಂಧದಲ್ಲಿ ಸಾಮಾನ್ಯವಾಗಿ ರೂಢಮೂಲವಾಗಿರುವ ಭಾವಭಂಗಿಗಳಲ್ಲಿ ತುಸು ವಿಶಿಷ್ಟತೆ ಕಂಡುಬರುವುದನ್ನು ಸಾಹಿತ್ಯವಿಮರ್ಶೆ ಗುರುತಿಸಿದೆ. ನಲ್ಲನಲ್ಲೆಯರ ಒಲುಮೆ ಅಂಗಸಂಬಂಧದ ರತಿಸುಖದ ಮಟ್ಟದಿಂದ ವಿಕಸಿತವಾಗಿ, ಪ್ರೀತಿಯಾಗಿ, ಗೌರವವಾಗಿ, ಪೂಜ್ಯವಾಗಿ, ದಿವ್ಯವಾಗಿ ಮುಂದುವರಿಯುವುದನ್ನು ಕಾಣುತ್ತೇವೆ: ನನ್ನ ಅತ್ಯಂತ ಪಶುರುಚಿಯಿಂದ ಹಿಡಿದು ಮಹೋನ್ನತ ಕವಿರುಚಿ ಋಷಿರುಚಿ ದೇವರುಚಿಗಳವರೆಗೆ ಸಂತೃಪ್ತಿಗೊಳಿಸಿದ್ದಾಳೆ ಹೇಮಾವತಿ

[1] ಮತ್ತು ಕೈಹಿಡಿದ ಮಡದಿ ಕೊನೆಯಲ್ಲಿ ದೇವಿಯಾಗಿದ್ದಾಳೆ!

ಕನ್ನಡ ಸಾಹಿತ್ಯ ಪರಿಷತ್ತು ೧೯೭೭ರಲ್ಲಿ, ತನ್ನ ವಜ್ರಮಹೋತ್ಸವದ ಸಂದರ್ಭದಲ್ಲಿ ಪ್ರಕಟಿಸಿರುವ `Jnanpeet Laureates of Karnataka

ಎಂಬ ಪುಸ್ತಕದಲ್ಲಿ ಕುವೆಂಪು ಅವರ ಪ್ರೇಮಕವನಗಳನ್ನು ಕುರಿತು-ಷೋಡಶಿ, ಪ್ರೇಮಕಾಶ್ಮೀರ, ಜೇನಾಗುವಾ, ಚಂದ್ರಮಂಚಕೆ ಬಾ, ಚಕೋರಿ, ಅನುತ್ತರಾ-ಹೀಗೆ ಬರೆಯುತ್ತಾರೆ ಪ್ರೊ|| ಶಂಕರ ಮೊಕಾಶಿ ಪುಣೇಕರ,  “They are not`love’ poems in the ordinary sense of the term. If a Vashishtha or a Yajnavalkyar* were to write love poems, they would have written the kind of love poetry Kuvempu has written in his later collections like Anuttaraa”

“….And what he has achieved here has no precedent any where in the world.”

ದೈವೀಕರಣಗೊಂಡ ‘ಪ್ರೇಮ’ದ ವಿಚಾರವಾಗಿ ಬರೆಯುತ್ತಾ ಕುವೆಂಪು ಅವರ ಪ್ರಣಯ ಜೀವನದ ಕೊಟ್ಟಕೊನೆಯ ಕವನ ಸಂಕಲನ “ಪ್ರೇಮೋಪನಿಷತ್ತು” ಎಂದು ಉಪಶೀರ್ಷಿಕೆ ಹೊತ್ತಿರುವ ‘ಅನುತ್ತರಾ’ ಸಂಕಲನದಲ್ಲಿ, ಶೀರ್ಷಿಕೆಯ ಹೆಸರನ್ನೆ ತಕ್ಕ ಶೀರ್ಷಿಕೆಯಾಗಿ ಪಡೆದಿರುವ ಮಹಾಪ್ರಗಾಥವೆಂದು ಅವರು ಬಣ್ಣಿಸಿರುವ ‘ಅನುತ್ತರಾ’ವನ್ನು ಇಂಗ್ಲಿಷಿಗೆ ಅನುವದಿಸುವಾಗ ಹೀಗೆ ಬರೆಯುತ್ತಾರೆ: “The most magnificent emotion is a long ecstatic ode titled `Anuttaraa,’ the title piece for the collection published in 1964…”

ಸತಿಯ ವಿಚಾರದಲ್ಲಿ ಮೊದಲಿಂದಲೂ ನನಗಿದ್ದ ಈ ಪವಿತ್ರ ಭಾವನೆ ಮೇಲೇರುತ್ತಾ ಹೋಗಿ, ನಾನಾ ಘಟ್ಟಗಳನ್ನು ದಾಟಿ, ತುತ್ತತುದಿಯಲ್ಲಿ ಆಕೆ ಋತಚಿನ್ಮಯಿ ಜಗನ್ಮಾತೆಯ ಕೋಟ್ಯಂತರ ಅಸಂಖ್ಯ ಅವಿರ್ಭಾವದ ಅವತರಣಗಳಲ್ಲಿ ಒಂದೆಂಬ ಬುದ್ಧಿಗೆ ನೆಲಸಿತು! ಅದರ ಪ್ರಪ್ರಥಮ ಬೀಜ ಸ್ವರೂಪವ್‌ಉ, ಹೇಮಾವತಿ ಮೈಸೂರಿಗೆ ಬಂದು, ನಾವಿಬ್ಬರೂ ಸರ್ವ ರೀತಿಯಿಂದಲೂ ಗಂಡಹೆಂಡಿರಾದ ನಾಲ್ಕು ತಿಂಗಳಲ್ಲಿ, ಎಂದರೆ ೨೨-೧೧-೧೯೩೭ರಲ್ಲಿ, ನಾನು ರಚಿಸಿರುವ ‘ಗುರುಕೃಪೆ’ ಎಂಬ ಹೆಸರಿನ ಪ್ರೇಮಗೀತೆಯಲ್ಲಿ ಅಭಿವ್ಯಕ್ತಗೊಂಡುದನ್ನು ಗುರುತಿಸಬಹುದು. ಅಲ್ಲಿ ಆಕೆ ನನ್ನ ಗುರುಕೃಪೆಯೆ ಮೈವೆತ್ತವಳೆಂದು ಒಲಿದಿದೆ:

ಗುರುಕೃಪೆ

ದೇವರಮನೆ ಕಡೆ ನೋಡುತ್ತಿರೆ ನಾ
ಧ್ಯಾನನಂದದಲಿ
ಬಂಧಿಸಿ ಹೃದಯವ ಬಂದುದು ಗುರುಕೃಪೆ
ಸುಂದರಿಯಂದದಲಿ!
ನಿರಿಇರಿ ಮೆರೆದುದು ನೀಲಿಯ ಸೀರೆ:
ಶರಧಿಯನುಟ್ಟಳೆ ಭೂಮಿಯ ನೀರೆ?

ಮಂಗಳಾದಾರತಿ ಬಲಗೈಯಲಿ,
ಹೂವೆಡಗೈಯಲ್ಲಿ;
ಮಾಂಗಲ್ಯದ ತೋಳ್ಸೆರೆ ಕೊರಳಲ್ಲಿ,
ಬಿಡುಗಡೆ ಎದೆಯಲ್ಲಿ!
ಚಂದ್ರಮುಖದಲ್ಲಿ ತರೆಯ ಬಿಂದು:
ಚಂದ್ರೋದಯದಲಿ ಮಿಂದುದೆ ಸಿಂಧು?

ತುಟಿ ಕಾವಲ್ ನಿಂದುದು ನಂದನಕೆ;
ಕದವಾದುದು ಕಣ್ಣು:
ಮೋಹಿಸಿ ಭಕ್ತಿಯ ಮಧು ಬಂಧನಕೆ
ಕೃಪೆ ಆದುದು ಹೆಣ್ಣು!
ಗುಡಿಯಿಂದೀಪರಿ ತಾನೊಲಿದಕೆ
ನಡೆತರೆ ಬೇರೆಯ ಗುರುಕೃಪೆ ಬೇಕೆ?

ಮೇಲಣ ಮೂರು ಪದ್ಯಗಳಲ್ಲಿ ಪ್ರತಿಯೊಂದರಲ್ಲಿಯೂ ಇರುವ ಕೊನೆಯ ಎರಡು ಪಂಕ್ತಿಗಳಲ್ಲಿ ಧ್ವನಿತಾಗಿರುವ ಸೌಂದರ್ಯಭಾವನೆ ಮತ್ತು ಕಲ್ಪನಾ ಭವ್ಯತೆಗಳನ್ನು ಗಮನಿಸುವ ಸಹೃದಯರಿಗೆ ಮನದನ್ನೆಯ ಮೈಚೆಲುವಿನ ಸೊಬಗು ಗಾಂಭೀರ್ಯಗಳನ್ನು ಕವಿ, ಹೇಗೆ ಪೂಜಿಸುವ ರೀತಿಯಲ್ಲಿ ಗೌರವಿಸಿದ್ದಾನೆ, ಎಂಬುದನ್ನು ಗಮನಿಸಬಹುದು.

ನಾನು ಜನ್ಮಧಾರಣೆ ಮಾಡುವ ಪೂರ್ವದಲ್ಲಿಯೆ ನನ್ನ ಶ್ರೀಗುರುಕೃಪೆ ದೂರದ ಬಂಗಾಳದ ಕಲ್ಕತ್ತೆಯ ಬಳಿಯ ದಕ್ಷಿಣೇಶ್ವರದಿಂದ ಸಹ್ಯಾದ್ರಿಯ ಮಲೆನಾಡಿನ ಕ್ಷುದ್ರ ಹಳ್ಳಿಮನೆಯಾದ ‘ಹಿರಿಕೊಡಿಗೆ’ಗೆ ಬಂದು ನನ್ನನ್ನು ಆಶೀರ್ವದಿಸಿದ ಸಂದರ್ಭದಲ್ಲಿ ಸಹ್ಯಾದ್ರಿದೇವಿಯೊಡನೆ ಸಂವಾದಿಸುವಾಗ ತನಗೆ

“ಇವನ ಕೈಹಿಡಿದು ನಡಸೆ

ನನಗಿಹುದು ಇವನೊಡನೆ ಸಹಧರ್ಮಿಣಿಯ ಯೋಗಲಗ್ನ!”

ಎಂದು ಆಶೀರ್ವದಿಸಿದಂತೆ ಚಿತ್ರಿತವಾಗಿದೆ, “ಅನುತ್ತರಾ” ಎಂಬ ಪ್ರೇಮ ಗೀತಾ ಸಂಕಲನದಲ್ಲಿ ೨೯-೧೨-೧೯೫೭ರಲ್ಲಿ ರಚಿತವಾಗಿರುವ “ವರ್ಧನ್ತಿ” ಕವನದಲ್ಲಿ: ಹೀಗೆ ನನ್ನ ಕೈಹಿಡಿದವಳು ನನ್ನ ಶ್ರೀಗುರುಕೃಪೆ ಎಂಬ ಭಾವನೆ ನಮ್ಮ ದಾಂಪತ್ಯ ಜೀವನದಲ್ಲಿ ಮೊದಲಿಂದಲೂ ಬೀಜರೂಪದಿಂದದ್ದು ಮೊಳೆತು ಗಿಡವಾಗಿ ಮರವಾಗಿ ಪ್ರೇಮದ ದೈವೀಕರಣದ ಭಾವದಲ್ಲಿ ಸಫಲಗೊಂಡಿದೆ!

ಈ ಸಂದರ್ಭದಲ್ಲಿ ನಮ್ಮ ದಾಂಪತ್ಯ ಜೀವನದಲ್ಲಿ ಒಂದು ತಪ್ಪುಗ್ರಹಿಕೆಗೆ ಆಸ್ಪದವಾಗಿರುವ ಅಭಿಪ್ರಾಯವನ್ನು ಮೊದಲೇ ತಿದ್ದಿಬಿಡಲು ಬಯಸುತ್ತೇನೆ. ಇತ್ತೀಚೆಗೆ, ನಾನು ನಾಲ್ಕು ಮಕ್ಕಳ ತಂದೆಯಾದ ಅನಂತರ, ಶಿಷ್ಯಪ್ರಾಯರಾದ ನನ್ನ ಕೆಲವು ಮಿತ್ರರು ನಾನು ನನ್ನ ಹೆಂಡತಿಯನ್ನು ದೇವೀಭಾವದಿಂದ ಕಾಣುತ್ತೇನೆ ಎಂಬುದಕ್ಕೆ ತಮ್ಮ ರೀತಿಯಿಂದಲೇ ವ್ಯಾಖ್ಯಾನಮಾಡಿ ತಪ್ಪುಭಾವನೆಗೆ ಎಡೆಮಾಡಿಕೊಟ್ಟಿದ್ದಾರೆ, ನಾನು ಸತಿಯೊಡನೆ ದೈಹಿಕವಾದ ಸಂಪರ್ಕವನ್ನೂ ತ್ಯಿಸಿದ್ದೇನೆ ಎಂಬರ್ಥ ಬರುವಂತೆ, ಹಾಗೇನೂ ಇಲ್ಲ. ಶ್ರೀರಾಮಾಯಣ ದರ್ಶನಂ ಅಯೋಧ್ಯಾ ಸಂಪುಟಂ ಮೂರನೆಯ ‘ಮಮತೆಯ ಸುಳಿ ಮಂಥರೆ’ ಸಂಚಿಕೆಯಲ್ಲಿ ಸೀತಾರಾಮರು ಗಂಡಹೆಂಡಿರಾಗಿ ಬಾಳುವ ಚಿತ್ರದಲ್ಲಿ

….ಧರಣಿಜೆಯ
ಪುಣ್ಯಾತ್ಮಮಂ ಪ್ರೀತಿಸಿದೋಲೆ ಸೀತೆಯಾ
ಸುಂದರ ಶರೀರಮಂ ಪ್ರೀತಿಸಿದನಾ ರಾಮನೆನೆ
ದೇಹಾತ್ಮ ಭೇದಮಂ ಪೇಳ್ ಮಿಥ್ಯೆ ಗೊಳಿಸದೆ ರಸದ
ದೃಷ್ಟಿ? ಕಾಯಕೆ ಕಣ್ಗೆಳೆರಡಿರ್ಪ ಮಾಳ್ಕೆಯಿಂ
ದ್ವೈತಮಿರ್ದುದು ಸೀತೆರಾಮರೊಳಗದ್ವೈತಿ
ತಾನಾಗಿ!

ಸೀತೆಯ ಪುಣ್ಯಾತ್ಮವನ್ನು ಪ್ರೀತಿಸುವಂತೆಯೆ ಅಕೆಯ ಸುಂದರ ಶರೀರವನ್ನು ಪ್ರೀತಿಸುತ್ತಾನೆ ಶ್ರೀರಾಮ. ನಾನು ಮದುವೆಯಾದ ಮೊದಲಿಂದಲೂ ನನ್ನ ಸಹಧರ್ಮಿಣಿಯ ಮೈಯನ್ನೂ ಆಕೆಯ ಆತ್ಮವನ್ನೆಂತೊ ಅಂತೆಯೆ ಒಲಿಯುತ್ತಾ ಬಂದಿದ್ದೇನೆ. ೧೯೩೭ರಲ್ಲಿ ರಚಿತವಾಗಿರುವ ಈ ಕೆಳಗಿನ ಎರಡು ಚಿಕ್ಕ ಕವನಗಳು ಆ ದೇಹಾತ್ಮ ಭೇದವಿಲ್ಲದ ಆದ್ವೈತಕ್ಕೆ ಸಾಕ್ಷಿಯಾಗಿವೆ: ೧. ರಸಪೂಜೆ ೨. ಮೈಗೆ ಮೈ ಸೋಂಕಿದರೆ.

ರಸಪೂಜೆ

ನಿನ್ನ ಮೈದೇಗುಲದಿ
ನಾನು ಪೂಜಾರಿ;
ನೀನೆ ದೇವತೆ ಅಲ್ಲಿ,
ನನ್ನೆದೆಯ ನಾರಿ.
ಪ್ರೇಮದಾಲಾಪನೆಯೆ
ಋಷಿಮಂತ್ರದೋಜೆ;
ಪ್ರಣಯ ಪ್ರಸಾದದಿಂ
ತಣಿಯುವುದೆ ಪೂಜೆ:

ಮೈಗೆ ಮೈ ಸೋಂಕಿದರೆ

ಮೈಗೆ ಮೈ ಸೋಂಕಿದರೆ
ನಂನವೊ ನಮ್ಮ ಧರೆ.
ಮೈಗೆ ಮೈ ಸೋಂಕಿದರೆ
ದೇವಗಂಗೆಯಲಿ ತೆರೆ
ಪುಲಕಿಸುವುದುಕ್ಕಿ!
ಮೈಗೆ ಮೈ ಸೋಂಕಿದರೆ,
ಮೈಗಳೆರಡಪ್ಪಿದರೆ,
ಒಲಿದೊಪ್ಪಿದಪ್ಪಿನಲಿ ದ್ವೈತವದ್ವೈತದಲಿ
ಳಿನ ಧುಮ್ಮಿಕ್ಕಿ!

ಮತ್ತೆ ಏಕೆ ನಾನು ಬ್ರಹ್ಮಚರ್ಯ ದೀಕ್ಷೆ ತೊಟ್ಟು, ಸತಿಯನ್ನು ದೇವಿಯೆಂದು ಪೂಜಿಸಿ, ಆಕೆಯ ದೇಹ ಸಮಪರ್ಕದಿಂದ ದೂವಾದೆನೆಂಬ ಭಾವನೆಗೆ ಕಾರಣವಾಯಿತು? ಬಹಶಃ ನಾನು ಬರೆದ ಒಂದು ಕವನದಿಂದ ಇರಬೇಕು. ನಿಜ, ನಾವು ನಾಲ್ಕು ಮಕ್ಕಳಾದಮೇಲೆ ಸಂಪೂರ್ಣ ಬ್ರಹ್ಮಚರ್ಯೆಯ ವ್ರತಕ್ಕೆ ಪ್ರಯತ್ನಿಸಿದ್ದುಂಟು. ಆ ಪ್ರಯತ್ನ ಸೋತುದನ್ನೂ ಕುರಿತು ನಮ್ಮ ವಿಜಯಸೇತುವೆಗೆ ನೂರಾರು ಸೋಲಿನ ಕಮಾನುಗಳಿವೆ ಎಂಬರ್ಥದ ಮತ್ತೊಂದು ಕವನವೂ ರಚಿತವಾಗಿದೆ.

ನಾವು ಬ್ರಹ್ಮಚರ್ಯ ಪ್ರಯತ್ನವನ್ನು ಕೈಗೊಂಡ ಸಂದರ್ಭದಲ್ಲಿ ರಚಿತವಾದದ್ದು ‘ವ್ರತಭಿಕ್ಷೆ’ ಎಂಬ ಶೀರ್ಷಿಕೆಯಲ್ಲಿ ‘ಚಂದ್ರಮಂಚಕೆ ಬಾ, ಚಕೋರಿ’ಯಲ್ಲಿ ಪ್ರಕಟವಾಗಿದೆ:

ವ್ರತಬಿಕ್ಷೆ

ಇಂದು ಕೈಕೊಳ್ಳುವೆವು ನಿಮ್ಮ ಪದತಲದಲ್ಲಿ
ಬ್ರಹ್ಮಚರ್ಯವ್ತತವ, ಗುರುವೆ, ತಾಯಿ.
ಪಶುಮಾನವರು ನಾವು;ನಿತ್ಯಮುಕ್ತರು ನೀವು;
ನೋಂಪಿ ಗೆಲುವಂತೆಮ್ಮ ಹರಸಿ, ಕಾಯಿ.

ವಿಹರಿಸಿದೆವಿಂದ್ರಿಯಂಗಳ ಇಂದ್ರನಂದನದಿ
ಹತ್ತುವರುಷಗಳಿಂತು ನಿಮ್ಮ ಕರುಣೆಯಲಿ;
ಬಿಡಿಸಿ ನಮ್ಮನು ಮಧುರ ಮಾಯೆಯೀ ಪಾಶದಿಂ;
ಮುಳುಗಲಾ ತೃಷ್ಣೆ ನಿಮ್ಮಡಿಯ ಮಡುವಿನಲಿ.

ನಮ್ಮಹಂಕಾರದಿಂ ನಾವಿದನು ಕೈಕೊಂಡು
ಕಡೆಹಾಯಿಸುವ ಹೆಮ್ಮೆ ನಮ್ಮದಿನಿತಿಲ್ಲ;
ನಮ್ಮ ಭಕ್ತಿಗೆ ಒಲಿವ ನಿಮ್ಮ ಕೃಪೆ ತಾಂ ಶಕ್ತಿ;
ಅದನುಳಿದರೆಮಗಾವ ಬೇರೆ ಬಲವಿಲ್ಲ.

ನಾವಿಲ್ಲಿ ಕತ್ತಲಲಿ;ನೀವಲ್ಲಿ ಬೆಳಕಿನಲಿ;
ಕನಿಕರಿಸಿ ಕಿರಣಚರಣವನಿತ್ತ ನೀಡಿ!
ಬಲ್ವಿಡಿಯುತಾ ಪಾದಪಂಕೇಜಮಂ, ತಾಯಿ,
ಪಂಕದಿಂ ಪಂಕಜಗಳೇಳುವೆವು ಮೂಡಿ,
ಪಾದವನಲಂಕರಿಪ ಪೂಜೆಯಂ ಮಾಡಿ!

ಮತ್ತೊಂದು ಕವನ, ನಮ್ಮ ಸಾಧನೆಯಲ್ಲಿ ಸೋಲುಗಳುಂಟಾದಾಗ ಬರೆದುದು, “ಚಂದ್ರಮಂಚಕೆ ಬಾ, ಚಕೋರಿ!” ಯಲ್ಲಿಯೆ ಅಚ್ಚಾಗಿದೆ. ಅದಕ್ಕೆ ಶೀರ್ಷಕೆ “ವಿಜಯ ಸೇತು!”.

ಯೋಗವನು ಕಾಲ್ವಿಡಿದು ಭೋಗಮಾರ್ಗದಿ ನಡೆದು
ತ್ಯಾಗವನು ಸಾಧಿಪುದು ನಮ್ಮ ದಾರಿ.
ಮೊದಲು ಕಾಲುವೆ ನೆಗೆದು ಮೇಲೆ ಕಡಲನು ನೆಗೆವ
ಸಾಹಸವೆ ನೀತ, ಓ ನನ್ನ ನಾರಿ!

ಜನುಮ ಜನುಮಾಂತರದ ಸಂಸ್ಕಾರ ಸಂಗವನು
ತೆಕ್ಕನೆ ವಿಸರ್ಜಿಸುವುದೆಮ್ಮ ಅಳವೆ?
ತನ್ನ ಸಮಯಕೆ ಮೂಡುವಲರ ನೀ ಮುನ್ನಮೆಯೆ
ಗಿಡದ ಗಬ್ಬದಿನೆಂತು ಹೊರಗೆ ಎಳೆವೆ?

ಸಾಧನೆಯ ಕಣದಿ ಗೆಲ್ಲುವೆವು ಗುರುಕೃಪೆಯಿಂದ
ಹಜ್ಜೆಹಜ್ಜೆಗೆ ಹೋರಿ ಕೆಡೆದು ಸೋತು
ಸೋಲಿನ ಕಮಾನುಗಳೆ ಸಾಲ್ಗಟ್ಟಿ ನಿಲೆ, ಹುಟ್ಟಿ
ಬಟ್ಟೆವರಿವುದು ನಮ್ಮ ವಿಜಯಸೇತು!

ಅಲ್ಲದೆ ಬ್ರಹ್ಮಚರ್ಯೆಗೂ ನಾನಾ ಸ್ತರಗಳಿವೆ. ಸಂಪೂರ್ಣ ನಿರಾಹಾರದ ರೂಪದ, ಕಡೆಗೆ ನೀರನ್ನೂ ಕೂಡ ಕುಡಿಯದ, ಉಪವಾಸದ ರೂಪದ ಕೇವಲ ಬ್ರಹ್ಮಚರ್ಯೆಯಂತೆಯೆ, ಸಂಯಮವನ್ನು ಸಾಧಿಸುವ ಫಲಾಹಾರ ನಿಷ್ಠೆಯ ಉಪವಾಸದ ಮಟ್ಟದ ಬ್ರಹ್ಮಚರ್ಯೆಯೂ ಇರಬಹುದು. ಅಲ್ಲದೆ “ಸ್ತ್ರಿಯಃ ಸಮಸ್ತಾಃ ಸಕಲಾ ಜಗತ್ಸು” ಜಗತ್ತಿನ ಎಲ್ಲ ಗಂಡೂ ಶಿವನ ಅಂಶವಾಗಿರುವಂತೆ ಎಲ್ಲ ಹೆಣ್ಣೂ ಶಕ್ತಿಯ ಅಂದರೆ ಶಿವೆಯ ಅಂಶವೆಂದು ಭಾವಿಸಿ, ಪತ್ನಿಯನ್ನೂ ದೇವಿಯ ಅಂಶವೆಂದು ಗೌರವಿಸಿದ ಮಾತ್ರಕ್ಕೆ ಆಕೆಯೊಡನೆ ದೇಹಸಂಬಂಧವು ತ್ಯಾಜ್ಯವಾಗಬೇಕೆಂದೇನೂ ಇಲ್ಲ. “ಚಂದ್ರಮಂಚಕೆ ಬ, ಚಕೋರಿ” ಎಂಬ ಪ್ರೇಮಗೀತಾ ಸಂಕಲನದಲ್ಲಿರುವ “ಹರ ಗಿರಿಜಾ” ಎಂಬ ಕವನ ನನ್ನ ಪ್ರೇಮೋಪಿಷತ್ತಿನ ಕೇಂದ್ರದರ್ಶನಕ್ಕೆ ಸಾಕ್ಷಿಯೊದಗಿಸುತ್ತದೆ.

ಪತ್ನಿಯನ್ನು ದೇವೀಭಾವದಿಂದ ಕಾಉವುದಕ್ಕೂ ಆಕೆಯೊಡನೆ ಲೈಂಗಿಕ ಸಂಬಂಧವಿಟ್ಟುಕೊಳ್ಳುವುದಕ್ಕೂ ಸಂಬಂಧಿಸಿದಂತೆ Ramakrishna and His disciples ಎಂಬ ತನ್ನ ಪುಸ್ತಕದಲ್ಲಿ Christopher Isherwood ಹೀಗೆ ಜಿಜ್ಞಾಸಿಸಿದ್ದಾರೆ:

“To think clearly about this matter requires some  effort; because our Western minds are so steeped in puritanism.

The association of the idea `sex’ with the idea `religion’ shocks us even more profoundly than we know. Yet, what is there in all this to be shocked about? You have a wife whom you love and with whom you have sexual relations. These sexual desire. None of us find `THIS’ shocking-although it might well be argued, by  some one not accustomed to our ways of thinking, that love is degraded by desire and should never be associated with it. You do not accept this view. Why, then, should you be  shocked when it is suggested that  you associate love and desire with religious devotion, and try to regard your wife as an embodiment of the Divinie Mother at all times and even when you are having sexual relations with her? True, if you fully succeed in regarding your wife as the Divine Mother, you will find that your sexual desire for her ceases. But, as long as you have not succeeded in this attempt, ther mere effort is surely better than no effort at all.”

“ಈ ವಿಷಯವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ತುಸು ಪ್ರಯತ್ನ ಅವಶ್ಯಕ. ಏಕೆಂದರೆ ನಮ್ಮಂತಹ ಪಾಶ್ಚಾತ್ಯರ ಮನಸ್ಸುಗಲು ಲೈಂಗಿಕ ಸಂಬಂಧದ ವಿಷಯದಲ್ಲಿ ಅತೀ ಅಧಿಯದ ಮಡಿವಂತಿಕೆಯ ಉಸುಬಿನಲ್ಲಿ ಅದ್ದಿಹೋಗಿವೆ. ದೇವರು ಧರ್ಮ ಪೂಜೆ ಪ್ರಾರ್ಥನೆ ಮೊದಲಾದುವನ್ನು ಲೈಂಗಿಕತೆಯೊಂದಿಗೆ  ಸೇರಿಸುವುದನ್ನು ಕಂಡಾಗ ನಮಗೆ ಅಸಹ್ಯದ ಮಿಂಚು ಹೊಡೆದಂತಾಗುತ್ತದೆ; ನಮ್ಮ ಶೌಚ ಮೌಢ್ಯಾತಿರೇಕದ ನೀತಿಪ್ರಜ್ಞೆಗೆ ನಾವು ತಿಳಿದುರುವುದಕ್ಕಿಂತಲು ಹೆಚ್ಚು ಗಾಢವಾಗಿ ಮರ್ಮಾಘಾತವಾಗುತ್ತದೆ.

ಇಷ್ಟಾದರೂ ಅದರಲ್ಲಿ ಆಘಾತಗೊಳ್ಳಬೇಕಾದ ಪ್ರಮೇಯವೇನಿದೆ? ನಿಮ್ಮ ಹೆಂಡತಿಯನ್ನು ನೀವು ಪ್ರೀತಿಸುತ್ತೀರಿ. ಮತ್ತು ಅವಳೊಡನೆ ಲೈಂಗಿಕ ಸಂಬಂಧವನ್ನಿಟ್ಟು ಕೊಂಡಿದ್ದೀರಿ. ಈ ಲೈಂಗಿಕ ಸಂಬಂಧಕ್ಕೆ ಪ್ರೇಮದ ಜೊತೆಗೆ ಭೋಗಾಸಕ್ತಿಯೂ ಕಾರಣವೆಂಬುದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ. ಕಾಮಾಸಕ್ತಿಯಿಂದ ಪ್ರೇಮ ಕಲುಷಿತಗೊಳ್ಳುತ್ತದೆಂದೂ ಅದನ್ನು ಪ್ರೇಮದೊಡನೆ ಸಂಗಮಗೊಳಿಸಕೂಡದೆಂದೂ ನಮ್ಮ ಅಲೋಚನಾ ವಿಧಾನದ ಪರಿಚಯವಿಲ್ಲದವರು ವಾದಿಸಬಹುದಾದರೂ, ಅದರಿಂದ ನಮಗೆ ಗಾಸಿಯಾಗಲಾರದು. ಆ ದೃಷ್ಟಿಯನ್ನು ನೀವು ಒಪ್ಪಿಕೊಳ್ಳಲಾರಿರಿ.

ಮತ್ತೇಕೆ? ಪ್ರೇಮದೊಡನೆ  ನೀವು ಕಾಮವನ್ನೂ ಅನುಭವಿಸುತ್ತೀರಿ ಎಂದಾಗ, ನಿಮ್ಮ ಹೆಂಡತಿಯೊಡನೆ ನೀವು ಲೈಂಗಿಕ ಸಂಬಂಧವನ್ನಿರಿಸಿಕೊಂಡಿದ್ದರೂ ಅವಳನ್ನು ಜಗನ್ಮಾತೆಯ ಮೈದೋರಿಕೆಯೆಂದು ಸದಾ ಭಾವಿಸುವಂತೆ ಸೂಚನೆ ನೀಡಿದಾಗ, ನಿಮಗೆ ಜುಗುಪ್ಸೆಯಿಂದ ಬೀಭತ್ಸವಾಗಬೇಕು?

ನಿಜ, ನಿಮ್ಮ ಮಡದಿಯನ್ನು ಜಗನ್ಮಾತೆಯ ಅಂಶವೆಂದು ಗ್ರಹಿಸುವಲ್ಲಿ ನೀವು ಯಶಸ್ವಿಯಾದದ್ದಾದರೆ, ಅವಳ ಬಗೆಗಿನ ನಿಮ್ಮ ಕಾಮಾಸಕ್ತಿ ಕ್ರಮೇಣ ಸ್ತಂಭನಗೊಳ್ಳುತ್ತದೆ. ಆದರೆ ಆ ಸಾಧನೆಯಲ್ಲಿ ನೀವು ಯಶಸ್ವಿಯಾಗುವ ತನಕ, ಕೇವಲ ಮಾತ್ರ ಪ್ರಯತ್ನವೂ ಏನೂ ಪ್ರಯತ್ನವಿಲ್ಲದಿರುವುದಕ್ಕಿಂತಲೂ ಮೇಲು ಎಂಬುದೂ ಸಿದ್ಧಸತ್ಯ.”

ಅಲ್ಲದೆ ಭಕ್ತಿಯೋಗದ ಪೂರ್ಣದೃಷ್ಟಿಗೆ, ಶ್ರೀ ಅರವಿಂದರು ಹೇಳುವಂತೆ, ಬದುಕೆಲ್ಲವೂ ಯೋಗವಾಗಿಯೆ ಕಾಣುವ, ಸಾಧಕನ ದೃಷ್ಟಿಗೆ

“ನೀನಾತ್ಮಂ, ಮತಿ ಗಿರಿಜೆ, ಸಹಚರರ್ ಪ್ರಾಣಗಳ್,
ಮನೆ ಶರೀರಂ, ವಿಷಯೋಪಭೋಗರಚನೆಯೆ ಪೂಜೆ
ನಿದ್ರೆಯೆ ಸಮಾಧಿ, ಸಮಚಲನೆ ತಾಂ ಪ್ರದಕ್ಷಿಣಂ,
ನುಡಿವುದೆಲ್ಲಂ ನುತಿ, ನೆಗಳ್ಕೆಯಖಿಲಂ ನಿನಗೆ,
ಓ ಗುರುವೆ, ತಾನದುವೆ ಆರಾಧನೆ!”

ಎಂಬಂತೆ, ನಮ್ಮ ಇತರ ಜೀವಿತ ವ್ಯಾಪಾರಗಳು ಮಾತ್ರವಲ್ಲ, ಎಲ್ಲ “ವಿಷಯೋಪಭೋಗಗಳೂ ಪೂಜೆಯೆ” ಆಗುತ್ತವೆ.

ದಾಂಪತ್ಯ ಪ್ರೇಮಜೀವನದ ವಿಚಾರವಾದ ನನ್ನ ಪೂರ್ಣದೃಷ್ಟಿ ನನ್ನ ಪ್ರೇಮಗೀತೆಗಳ ಸಂಕಲನಗಳಲ್ಲಿ, ಮುಖ್ಯವಾಗಿ ‘ಪ್ರೇಮೋಪನಿಷತ್ತು’ಎಂಬ ಉಪಶೀರ್ಷಿಕೆ ಹೊತ್ತ “ಅನುತ್ತರಾ”ದಲ್ಲಿ ಮೈಗೊಂಡಿದೆ; ಅದರಲ್ಲಿಯು ಮುಖ್ಯವಾಗಿ ‘ಚಂದ್ರಮಂಚಕೆ ಬಾ,

ಚಕೋರಿ’ಯ ‘ಹರಗಿರಿಜಾ’ ಎಂಬ ಪ್ರಗಾಥಸದೃಶ ಕವನದಲ್ಲಿಯೂ ಮತ್ತು ‘ಅನುತ್ತರಾ’ದ ‘ಅನುತ್ತರಾ ‘ಯಕ್ಷಪ್ರಶ್ನೆ’ ಮತ್ತು ‘ವರ್ಧನ್ತಿ’ ಎಂಬ ಹೆಸರಿನ ಮಹಾಕಾವ್ಯಗಳಲ್ಲಿಯೂ ಅಭಿವ್ಯಕ್ತಿ ಪಡೆದಿದೆ.

ನನ್ನ ಕೈಹಿಡಿದು ನಡೆಸಲು ನನಗೆ ಸಹಧರ್ಮಿಣಿಯಾಗುವ ಯೋಗವಿದೆ ಎಂದು ನಾನು ಹುಟ್ಟಿದ ಸಮಯದಲ್ಲಿ ಸಹ್ಯಾದ್ರಿದೇವಿಗೆ ಆಶ್ವಾಸನೆಯಿತ್ತ ದಕ್ಷಣೇಶ್ವರದ ಶ್ರೀಗುರುಕೃಪೆ, ಯಾರನ್ನು ನನ್ನ ಕವಿತೆ “ಲೋಕರಂಗದಲ್ಲಿ ಸತಿ, ನಿತ್ಯದಲ್ಲಿ ಭಗವತಿ;” ಎಂದು ಬಣ್ಣಿಸಿದೆಯೋ ಆ ‘ನನ್ನ ಸೌಭಾಗ್ಯವತಿಯನ್ನು ಕುರಿತು ‘ಅನುತ್ತರಾ’ದ ಕೊನೆಯ ಕವನ ‘ಕೃಪೆಯ ಸಾಕ್ಷಾತ್ಕಾರ’ದಲ್ಲಿ ತನ್ನ ಉಪನಿಷದ್‌ವಾಣಿಯಿಂದ ಹೀಗೆ ವೇದಘೋಷಂಗೈಯುತ್ತಿದೆ: ಪ್ರೇಮ ಸಾಕ್ಷಾತ್ಕಾರದ ಅನುತ್ತರಾ ವಾಕ್ಯವಾಗಿ:

ಜಗವನಾಳುವ ತಾಯೆ ನನ್ನನಾಳುವ ಮಾಯೆ
ತಾನಾಗಿ ಬಂದಿಹಳು ನನ್ನ ಜಾಯೆ!
ಭೂಮೆ ತಾನಾಗಿಯೂ ಅಲ್ಪೆ ತಾನೆನುವೋಲು
ಒಲಿದಪ್ಪಿ ಮಲಗಿಹಳು ಈ ಕೃಪಾಲು!

ಸೂರ್ಯನಕ್ಷತ್ರಾದಿ ಭೂವ್ಯೋಮಸಾಗರವ
ಮಾಡಿ ಅಡುಪ ದಿ‌ವ್ಯೆ ಆ ಸರ್ವಶಕ್ತೆ
ಇಲ್ಲಿ ಅಬಲೆಯ ಆಗಿ, ಒಲಿದ ಹೆಂಡಿತಿಯಾಗಿ
ಮಕ್ಕಳೊಂದಿಗೆ ಚಿಕ್ಕ ಸಂಸಾರಾನುರಕ್ತೆ!

ಸರ್ವಾಂತರಾತ್ಮೆ ಆ ಮುಕ್ತೆ ಭಕ್ತಿಗೆ ಸಿಲುಕಿ
ತೋಳ್ಸೆರೆಗೆ ಇಳಿದಿಹಳು ತನ್ನ ತಾಂ ತೆತ್ತು;
ಅಲ್ಲಿ ಸಿರಿಯಡಿಗೆರಗಿ ಪೂಜಿಸುವ ನನಗಿಲ್ಲಿ
ಚೆಂದುಟಿಯ ಜೇನೀಂಟುವಕಾಶವಿತ್ತು!
ಅದು ಪೂರ್ಣ; ಇದು ಪೂರ್ಣ;ಪೂರ್ಣದಂಶವು ಪೂರ್ಣ;
ಪೂರ್ಣವೆರಡರ ನಡುವೆ ನಾನೂ ಸುಪೂರ್ಣಪೂರ್ಣ!

 


[1] ೧೯೫೬ರಲ್ಲಿ ನಾನು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಆದಾಗ ಮತ್ತು ನನಗೆ, ಕನ್ನಡಕ್ಕೆ ಮೊತ್ತ ಮೊದಲನೆಯದಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹಮಾನ ಬಂದ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರೂ ಅಧ್ಯಾಪಕರೂ ವಿದ್ಯಾರ್ಥಿಗಳೂ ಅರ್ಪಿಸಿದ ‘ಉಡುಗೊರೆ’ ಹೆಸರಿನ ಸನ್ಮಾನ ಗ್ರಂಥದಲ್ಲಿ ‘ಕುವೆಂಪು ಅವರ ಪ್ರಣಯ ಗೀತೆಗಳು’ ಎಂಬ ಸಮರ್ಥ ಲೇಖನವನ್ನು ಬರೆದಿದ್ದಾರೆ ಜಿ.ವರದರಾಜರಾವ್.