ಪ್ರೀತಿಯ ಪುಟ್ಟಪ್ಪನವರೆ,

ನಾನು ಈ ಹಿಂದೆ ಬರೆದ ಕಾರ್ಡೂ, ಹಾಲೆಂಡಿನ ಪ್ರವಾಸವನ್ನು ಕುರಿತು ಬರೆದ ದೀರ್ಘ ಪತ್ರದ ಪ್ರತಿಯೂ ನಿಮಗೆ ಈಗಾಗಲೇ ತಲುಪಿರಬೇಕು. ಪ್ಯಾರಿಸ್ಸಿನಲ್ಲಿ ಮೂರು ವಾರಗಳ ಬಿಡುವಿಲ್ಲದ ಕೆಲಸದ ನಂತರ ನಾನೀಗ ಇಟಲಿಯಲ್ಲಿದ್ದೇನೆ. ಫ್ಲಾರೆನ್ಸಿನಲ್ಲಿ ಟಸ್ಕನಿ ಪರ್ವತಗಳ ಭುವನಮೋಹಕ ದೃಶ್ಯಗಳ ಮಧ್ಯದಲ್ಲಿದ್ದೇನೆ. ಆಧುನಿಕ ಯೂರೋಪೀಯ ಸಂಸ್ಕೃತಿಯ ವಿಕಾಸಕ್ಕೆ ಪ್ರೇರಕವಾದ ಇಟಲಿಯ ಪುನರಜ್ಜೀವನದ ಕೇಂದ್ರವಿದು. ನಾನಿಲ್ಲಿ ಅಡ್ಡಾಡುವಾಗ ಉಂಟಾಗುವ ಹರ್ಷೋತ್ಕರ್ಷವನ್ನು ಕಸ್ತೂರಿ, ಶೇಷುಮಾಮ ಮತ್ತು ನಿಮ್ಮೊಡನಲ್ಲದೆ, ಬೇರೆ ಯಾರೊಡನೆ ತೋಡಿಕೊಳ್ಳಲಿ? ಮೈಕೇಲ್ ಅಂಜೆಲೊ ಮತ್ತು ರ‍್ಯಾಫೆಲರ ಉತ್ತಮೋತ್ತಮ ಕಲಾಕೃತಿಗಳನ್ನು ಇಲ್ಲಿಯ ಸುಪ್ರಸಿದ್ಧ ಚೌಕದಲ್ಲಿ ಕಾಣಬಹುದು. ಡಾಂತೆಯ ಮನೆಯನ್ನು ನೋಡಿದೆ. ಡಿವೈನ್ ಕಾಮೆಡಿ ರಚನೆಗೊಂಡಿದ್ದೇ ಅಲ್ಲಿ. ಗೆಲಿಲಿಯೊ ದೂರದರ್ಶಕದ ಮೂಲಕ ನಕ್ಷತ್ರಗಳನ್ನು ವೀಕ್ಷಿಸುತ್ತಿದ್ದ ಪರ್ವತದ ಮೇಲೆ ಹತ್ತಿದೆ. ಮೆಡಿಸಿಸ್‌ನ ಸುಪ್ರಸಿದ್ಧ ಚರ್ಚು ಮತ್ತು ಮೈಕೇಲ್ ಅಂಜೆಲೋವಿನ ಮೇರುಕೃತಿಗಳನ್ನಲ್ಲಿ ನೋಡಿದೆ. ದೊಡ್ಡ ಆಕಾರದ ಭಾವಚಿತ್ರಗಳನ್ನು ನಿಮಗಾಗಿ ಕಳಿಸುತ್ತಿದ್ದೇನೆ. ನೀವವನ್ನು ನೋಡಿದ ನಂತರ, ನಿಮ್ಮ ಔದಾರ್ಯ ಜಾಗರೂಕವಾಗುವುದಾದರೆ, ಅದನ್ನು ರಾಷ್ಟ್ರೀಯ ಶಾಲೆಗೆಂದು ಸಂಪತ್ತು ಅವರ ಕಡೆಗೆ ಕಳಿಸಬಹುದು. ಇಲ್ಲೇ ಸನಿಹದಲ್ಲಿ ಬೊಕಾಶಿಯೋ ತನ್ನ ಡೆಕಮರಾನ್ ರಚಿಸಿದನು. ಅಸಿಸಿಯಲ್ಲಿ ಎರಡು ದಿನ ತಂಗಿದ್ದು, ಸಿಯನ ನೋಡಿದೆ. ಅಸಿಸಿ ಇಟಲಿಯ, ಅಂತೆಯೇ ಯೂರೋಪಿನ ಮೇಲುಕೋಟೆಯೆನ್ನಬಹುದು. ಅಲ್ಲಿ ಸಂತ ಫ್ರಾನ್ಸಿಸ್ಸನ ಸಾನ್ನಿಧ್ಯವನ್ನನುಭವಿಸಬಹುದು. ಇಂಡಿಯಾದ ಸಂಪೂರ್ಣ ಚಿತ್ರವನ್ನು ನೆನಪಿಗೆ ತಂದುಕೊಡುವ ಯೂರೋಪಿನ ಇಂಥ ಏಕಮಾತ್ರ ಸ್ಥಾನವನ್ನು ಕಂಡಾಗ ಆನಂದವಾಗುತ್ತದೆ. ಮತ್ತೊಂದು ಸವನ ರೋಲಮಠವನ್ನೂ, ವಸ್ತುಸಂಗ್ರಹಾಲಯವನ್ನೂ, ವಿಶ್ವವಿದ್ಯಾಲಯವನ್ನೂ ಈಕ್ಷಿಸಿದೆ. ಪ್ರವಾಸದ ಪೂರ್ಣ ವಿವರಗಳುಳ್ಳ ದೀರ್ಘಪತ್ರವೊಂದು ಬಹುಬೇಗನೆ ನಿಮ್ಮ ಕೈಸೇರಲಿದೆ. ಎಲ್ಲರನ್ನೂ, ಅದರಲ್ಲಿಯೂ, ಶ್ರೀ ಎನ್. ನರಸಿಂಹಮೂರ್ತಿಯವರನ್ನು ನಾನು ಕೇಳಿದೆನೆಂದು ತಿಳಿಸಿ. ಮುಂದಿನ ಗುರುವಾರ ನಾನು ಪ್ಯಾರಿಸ್ಸಿಗೆ ಹೋಗುತ್ತೇನೆ. ಹೆಚ್ಚುದಿನ ನಾನಿಲ್ಲಿಯೇ ನಿಂತದ್ದಾದರೆ ಮುಸಲೋನಿಯ ಮೆಚ್ಚುಗಾರನಾಗಬಹುದು. ಹಾಗಾಗುವುದು ನನಗಿಷ್ಟವಿಲ್ಲ. ಇಟಲಿ ಎಂದರೆ ಮುಸಲೋನಿ. ಅವನದನ್ನು ದೊಡ್ಡದಾಗಿ ಬೆಳಸಿದ್ದಾನೆ.

ಇಂತು ನಿಮ್ಮ ಪ್ರೀತಿಯ
ಸಹಿ. ಸಿದ್ಧೇಶ್ವರಾನಂದ

ನಾನು ಬೆಂಗಳೂರಿಗೆ ಅಸಿಸ್ಟೆಂಟ್ ಪ್ರೋಫೆಸರ್ ಆಗಿ ಹೋದಮೇಲೆ ಸ್ವಾಮಿಜಿಗೆ ಕಾಗದ ಬರೆಯುವುದು ಅತಿ ವಿರಳವಾಯಿತು. ಯುದ್ಧದ ಸಮಯದಲ್ಲಿ ಬೆಂಗಳೂರಿನ ಜೀವನದ ರೀತಿಯ ನಿತ್ಯದ ಅನಿಶ್ಚಯತೆ ಮತ್ತು ಉದ್ವೇಗದ ಕಾರಣವೂ ನನ್ನ ಉದಾಸೀನಕ್ಕೆ ನೆರವಾಯಿತು. ಆಗ ರಾಮಾಯಣ ದರ್ಶನ ಸಾಗುತ್ತಿತ್ತು. ೧೯೪೦ನೆಯ ಏಪ್ರಿಲ್ ೨೪ರಂದು ಬರೆದ ಕಾಗದದಲ್ಲಿ ಸ್ವಾಮಿಜಿ ತಮ್ಮ ನೋವು ಅಸಮಾಧಾನಗಳನ್ನು ಹೇಳಿಕೊಂಡಿದ್ದಾರೆ.  ನನ್ನದಕ್ಕಿಂತಲೂ ಭಯಂಕರವಾದ ಯುದ್ಧರಂಗದ ಕೇಂದ್ರ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದರೂ ಅವರು ಮಾತ್ರ ತಮ್ಮ ಸ್ಥಿತಪ್ರಜ್ಞ ಸ್ಥಿತಿಯನ್ನು ಕಳೆದುಕೊಳ್ಳದೆ ಇದ್ದುದನ್ನು ಅವರ ಪತ್ರ ಪ್ರಕಟಿಸುತ್ತದೆ. ಪತ್ರದಲ್ಲಿ ಯುದ್ಧದ ಕಷ್ಟಸಂಕಟದ ವಿಚಾರವೇನನ್ನೂ ಪ್ರಸ್ತಾಪಿಸದೆ “ಎಇ” ಎಂಬ ಐರಿಸ್ ಕವಿಯ ‘Song and Its Fountain’ (ಕವಿತೆ ಮತ್ತು ಅದರ ಉಗಮಚಿಲುಮೆ) ಎಂಬ ಹೊಸಪುಸ್ತಕದ ವಿಚಾರ ಬರೆದು, ಆ ಪುಸ್ತಕವನ್ನು ನನಗೆ ಕಳಿಸುವಂತೆ ಇಂಗ್ಲೆಂಡಿನ ಒಂದು ಪುಸ್ತಕದ ಅಂಗಡಿಯವರಿಗೆ ಬರೆದಿರುವ ವಿಷಯ ತಿಳಿಸಿದ್ದಾರೆ. ಮುಂದೆ ನಾನು ‘ನೆನಪಿನ ದೋಣಿಯಲ್ಲಿ’ ತಿಳಿಸಲಿರುವಂತೆ, ಸ್ವಾಮಿ ಸಿದ್ಧೇಶ್ವರಾನಂದರು ನನಗೆ ಲೋಕದ ಅದ್ಭುತ ಅನುಭವದ ಅನೇಕ ಕ್ಷೇತ್ರಗಳಿಗೆ ಬಾಗಿಲು ತೆರೆದು, ಒಳಗೆ ತಳ್ಳಿದ್ದಾರೆ!

೨೪-೪-೧೯೪೦

My dear Puttappa,

It is strange you don’t write at all. Did you get a long letter I wrote to you some-time in November or so last year? If you don’t mean replying doesn’t matter.

I just read an extraordinarily nice book by the great Irish poet and author A.E.(Russell). It’s called the “Song and its Fountain”. I felt I must present a copy. As no copy is available at Paris I have asked a London Friend to send it to you. I hope it is available there. A.E. gives one of the most marvellous conception of an artist, a poet. A close friend of A.E. attends my classes. She took me to her Studio–(She being a sculptor) showed me a marvellous painting by A.E. His Irish mind is one with us in India and his conceptrion of Life is so much influenced by the Upanishads–even by the Tapatraya–(ಆಶ್ರಮದಲ್ಲಿರುವಾಗ ನಾವೆಲ್ಲ ವೇದಾಂತದ ಅವಸ್ಥಾತ್ರಯ ಸಿದ್ಧಾಂತವನ್ನು ವಿನೋದಕ್ಕಾಗಿ ‘ತಾಪತ್ರಯ ಸಿದ್ಧಾಂತ’ ಎಂದು ಕರೆಯುತ್ತಿದ್ದೆವು.) Avasthatraya–Vedanta!! Love to all.

Yours affectionately
Sd.Siddheswarananda

P.S. If I get an extra copy I shall send to Masti and V.Sitaramaiah.

(ದೇಜಗೌ ಅವರ ಅನುವಾದ)
೨೪-೪-೧೯೪೦

ಪ್ರೀತಿಯ ಪುಟ್ಟಪ್ಪನವರೆ,

ನೀವು ಬಹುದಿನಗಳಿಂದ ಕಾಗದ ಬರೆದಿಲ್ಲವಾಗಿ ಆಶ್ಚರ್ಯವಾಗುತ್ತಿದೆ. ಕಳೆದ ವರ್ಷ ನವೆಂಬರ್ ತಿಂಗಳ ಸುಮಾರಿನಲ್ಲಿ ನಿಮಗೊಂದು ದೀರ್ಘಪತ್ರ ಬರೆದಿದ್ದೆ. ಅದು ನಿಮಗೆ ತಲುಪಿತೊ ಏನೊ ಕಾಣೆ. ನೀವು ಉತ್ತರ ಬರೆಯದಿದ್ದರೂ ಬಾಧಕವಿಲ್ಲ.

ಐರ್ಲೆಂಡಿನ ದೊಡ್ಡಕವಿ ಮತ್ತು ಸಾಹಿತಿ ಏ.ಇ. (ರಸೆಲ್) ಅವರ ಗ್ರಂಥವೊಂದನ್ನು ಇದೆ ತಾನೆ ಓದಿ ಮುಗಿಸಿದೆ. ಅದು ತುಂಬ ಒಳ್ಳೆಯ ಪುಸ್ತಕ. “ಗಾನ ಹಾಗೂ ಅದರ ಚಿಲುಮೆ” ಎಂಬುದು ಅದರ ಹೆಸರು. ಅದರ ಪ್ರತಿ ಒಂದನ್ನು ನಿಮಗೆ ಕಾಣಿಕೆಯಾಗಿ ನೀಡಬೇಕೆಂದು ಯೋಚಿಸಿದೆ. ಅದು ಪ್ಯಾರಿಸ್ಸಿನಲ್ಲಿ ಸಿಗುವುದಿಲ್ಲ. ಅದನ್ನು ನಿಮಗೆ ಕಳಿಸಿಕೊಡುವಂತೆ ಲಂಡನ್ನಿನ ಗೆಳೆಯರೊಬ್ಬರಿಗೆ ಬರೆದಿದ್ದೇನೆ. ಅದು ಅಲ್ಲಿ ಸಿಗಬಹುದು. ಕಲಾವಿದ ಹಾಗೂ ಕವಿಯ ಬಗ್ಗೆ ಏ.ಇ. ವ್ಯಕ್ತಪಡಿಸಿರುವ ಭಾವನೆ ಅತ್ಯದ್ಭುತವಾದುವು. ಏ.ಇ. ಅವರ ಸಮೀಪದ ಗೆಳತಿಯೊಬ್ಬಳು ನನ್ನ ತರಗತಿಗಳಿಗೆ ಬರುತ್ತಾಳೆ. ಆಕೆ ಶಿಲ್ಪಿ. ನನ್ನನ್ನು ತನ್ನ ಕಾರ್ಯಾಗಾರಕ್ಕೆ ಕರೆದೊಯ್ದು, ಏ.ಇ. ಅವರ ಅದ್ಭುತ ಕಲಾಕೃತಿಗಳನ್ನು ತೋರಿಸಿದಳು. ಏ.ಇ. ಅವರ ಅಂತರಂಗ ಭಾರತೀಯತ್ವಕ್ಕೆ ಹತ್ತಿರವಾಗಿದೆ. ಜೀವನವನ್ನು ಕುರಿತ ಅವರ ಕಲ್ಪನೆ ಉಪನಿಷತ್ತುಗಳಿಂದ-ಅಷ್ಟೇ ಏಕೆ? ತಾಪತ್ರಯ ಅವಸ್ಥಾತ್ರಯಗಳಿಂದಲೂ, ಒಟ್ಟಿನಲ್ಲಿ ವೇದಾಂತದಿಂದ ಪ್ರಭಾವಿತವಾಗಿದೆ. ಎಲ್ಲರಿಗೂ ನನ್ನ ಒಲವಿನ ನೆನಕೆಗಳು.

ಇಂತು ನಿಮ್ಮ
ವಾತ್ಸಲ್ಯದ
ಸಹಿ. ಸಿದ್ಧೇಶ್ವರಾನಂದ

ಮ.ಮಾ: ನನಗೆ ಒಂದು ಹೆಚ್ಚಿನ ಪ್ರತಿ ಸಿಕ್ಕುವ ಪಕ್ಷದಲ್ಲಿ ಮಾಸ್ತಿಯವರಿಗೂ ವಿ. ಸೀತಾರಾಮಯ್ಯನವರಿಗೂ ಕಳಿಸುತ್ತೇನೆ.

ಸ್ವಾಮಿಜಿ ತಮ್ಮ ಹಿಂದಿನ ಕಾಗದದಲ್ಲಿ ಬರೆದಿದ್ದಂತೆ ಲಂಡನ್ನಿನ ಅವರ ಸ್ನೇಹಿತರು A.E.ಕವಿಯ “Song and Its Fountain” ಗ್ರಂಥವನ್ನು ನನ್ನ ಬೆಂಗಳೂರು ವಿಳಾಸಕ್ಕೆ-ಕೆ.ವಿ.ಪುಟ್ಟಪ್ಪ, ೧೨೩, ವಿಶ್ವೇಶ್ವರಪುರಂ, ಬೆಂಗಳೂರು-ಅಂಚೆಯಲ್ಲಿ ತಲುಪಿತು, ೩-೧-೧೪೧ರಲ್ಲಿ. ನಾನು ಸೆಂಟ್ರಲ್ ಕಾಲೇಜಿನಲ್ಲಿ ಉಪಪ್ರಾಧ್ಯಾಪಕನಾಗಿದ್ದೆ ಮತ್ತು ಶ್ರೀರಾಮಾಯಣದರ್ಶನಂ ರಚನೆ ರಸಾಗ್ನಿಪ್ರವಾಹದಲ್ಲಿ ತೇಲಿ ಸಾಗಿತ್ತು!

ನನ್ನ ಹಸ್ತಪ್ರತಿಯಲ್ಲಿ ‘ಶಬರಿಗಾದನು ಅತಿಥಿ’ ಮತ್ತು ‘ಅತ್ತಲಾಕಿಷ್ಕಿಂಧೆಯೊಳ್’ ಎರಡೂ ಮೈಸೂರಿನಲ್ಲಿಯೆ ಮುಗಿದಿದ್ದುವೆಂಬುದು ಹಾಕಿದ ತಾರೀಖಿನಿಂದ ಗೊತ್ತಾಗುತ್ತದೆ. ಆ ಎರಡೂ ಸಂಚಿಕೆಗಳ ತುದಿಯಲ್ಲಿಯೂ ೧೧-೧೦-೧೯೩೯, ಬುಧವಾರ “ಉದಯರವಿ” ಎಂದೂ, ೨೪-೧೦-೧೯೩೯, “ಉದಯರವಿ” ಎಂದೂ ಗುರುತಿಸಿದೆ. ಮುಂದಿನ ಸಂಚಿಕೆ ‘ಪೂಣ್ದೆನಗ್ನಿಯೆ ಸಾಕ್ಷಿ’ ಎಂಬುದರ ತುದಿಯಲ್ಲಿ ೮-೧೨-೧೯೩೯, ೧೨೩, ವಿಶ್ವೇಶ್ವರಪುರಂ ಬೆಂಗಳೂರು ಎಂದಿದೆ. ಬೆಂಗಳೂರಿನಲ್ಲಿ ೧೯೩೯ ಮತ್ತು ೧೯೪೦ರ ತುದಿಯೊಳಗಾಗಿ ಕಿಷ್ಕಿಂದಾ ಸಂಪುಟಂ ಮುಗಿದು-ಸಾಗರೋಲ್ಲಂಘನಂ ೧೭-೧೧-೧೯೪೦ರಲ್ಲಿ ಮುಗಿದು ‘ದಶಶಿರ ಕನಕಲಕ್ಷ್ಮಿ’ ಪ್ರಾರಂಭಗೊಂಡು ೪-೨-೧೯೪೧ರಲ್ಲಿ ಪೂರೈಸಿದೆ. ಅಂದರೆ ೧೯೪೧ರಲ್ಲಿ ಲಂಕಾ ಸಂಪುಟಂ ಪ್ರಾರಂಭವಾಗಿ (೧೧-೨-೧೯೪೧ರಲ್ಲಿ) ಕನಕಲಂಕಾನ್ವೇಷಣಂ ಸಂಚಿಕೆ ೮-೮-೧೯೪೧, ಶುಕ್ರವಾರ, ೧೨೩ ವಿಶ್ವೇಶ್ವರಪುರಂ ಬಾಡಿಗೆ ಮನೆಯಲ್ಲಿ ಮುಗಿದಿದೆ. ಅಂದರೆ ಸ್ವಾಮಿಜಿ ಕಳಿಸಿದ ಎ.ಇ. ಗ್ರಂಥ ‘ಕಾವ್ಯ ಮತ್ತು ಅದರ ಉಗಮದ ಗಂಗಾಮೂಲ’ ಬೆಂಗಳೂರಿನಲ್ಲಿ ನನ್ನ ಕೈಸೇರಿದಾಗ ನಾನು ಶ್ರೀ ರಾಮಾಯಣದರ್ಶನದಲ್ಲಿ ಅರ್ಧದಷ್ಟನ್ನು ಬರೆದಿದ್ದೆ. ಎ.ಇ. ಸೂಚಿಸಬಹುದಾದ ಅನೇಕ ತತ್ತ್ವಗಳು ನನ್ನ ಕಾವ್ಯಪ್ರತಿಭೆಯ ಸಾಕ್ಷಾತ್ಕಾರಗಳಾಗಿದ್ದುವು.

ಸ್ವಾಮಿಜಿಯೆ ತಮ್ಮ ಕಾಗದದಲ್ಲಿ ತಿಳಿಸಿದಂತೆ ಎ.ಇ. ನಮ್ಮ ಉಪನಿಷತ್ತಿನ ವೇದಾಂತ ದರ್ಶನವನ್ನು ಬಹುಮಟ್ಟಿಗೆ ಜೀರ್ಣಿಸಿಕೊಂಡವನಾಗಿದ್ದನು. ನಮ್ಮ ಪ್ರಾಚೀನರ ಕಾವ್ಯಮೀಮಾಂಸೆ ವೇದಾಂತದ ಪರಿಭಾಷೆಯಲ್ಲಿ ಸೂಚಿಸುವ ಕೆಲವು ತತ್ವಗಳನ್ನು ಎ.ಇ. ಪಾಶ್ಚಾತ್ಯ ಕಾವ್ಯಮೀಮಾಂಸೆ ಮತ್ತು ಮನಶ್ಯಾಸ್ತ್ರ ಮತ್ತು ಮತನಂಬಿಕೆಗಳ ವಿಧಾನಗಳಲ್ಲಿ ಧ್ವನಿಸುತ್ತಾನೆ: ಅವನ ಕೆಲವು ಋಷಿವಾಕ್ಯಗಳನ್ನೂ ವಾಕ್ಯಪುಂಜಗಳನ್ನೂ ನಿದರ್ಶನವಾಗಿ ಕೊಡುತ್ತೇನೆ.

“I think there should be as much interest in the truth about the making of a thing as in the thing that is made”

“How is poetry born in us? There is I think. some commerce between the outer and the inner being. Some character in aspiration determines the character of inspiration.”

“By whatever eay we ascend to that it answers. I think poetry is one way in which it answers aspiration, and we receive, interepret  or misinterpret the oracle as our being here is pure or clouded.”

“We first imagine, and that later the imagination attracts its affinities, and we live in the body what had first arisen in soul…”

ಒಂದು ಕಡೆ ಎ.ಇ. “It is to the seers who wrote the Upanishads I turn for illumination” ಎಂದು ಹೇಳಿ ಜಾಗ್ರತ್ ಸ್ವಪ್ನ ಸುಷುಪ್ತಿ ತುರೀಯ ಅವಸ್ಥೆಗಳ ಪ್ರಸ್ತಾಪ ಮಾಡುತ್ತಾನೆ.

“I have no doubt there are beings as far transcending us in wisdom and power as we may transcend the amoeba” ಎ.ಇ.ಯ ಈ ಹೇಳಿಕೆ ನನಗೆ ಶ್ರೀ ಅರವಿಂದರ ಒಂದು ಸಂವಾದವನ್ನು ನೆನಪಿಗೆ ತರುತ್ತದೆ.

ಒಮ್ಮೆ ಅವರ ಒಬ್ಬ ಶಿಷ್ಯ ಕೇಳಿದನಂತೆ “ಈ ದೇವ ದೇವತೆಗಳಿದ್ದಾರಲ್ಲಾ ಅವರಿಗೂ ನಮಗೂ ಜ್ಞಾನ ಮತ್ತು ಶಕ್ತಿಗಳಲ್ಲಿ ಏನು ವ್ಯತ್ಯಾಸ?” ಅವರು ಮಾತಾಡುತ್ತ ಕುಳಿತಿದ್ದ ಸ್ಥಳದಲ್ಲಿ ಕೆಳಗೆ ಒಂದು ಬೆಕ್ಕು ನಿದ್ದೆ ಮಾಡುತ್ತಾ ಮಲಗಿತ್ತಂತೆ. ಶ್ರೀ ಅರವಿಂದರು ಶಿಷ್ಯನಿಗೆ ಅದನ್ನು ತೋರಿಸುತ್ತಾ “ನೋಡು ನಿದ್ರಿಸುವ ಆ ಬೆಕ್ಕಿಗೂ ನಿನಗೂ ಇರುವ ತಾರತಮ್ಯಕ್ಕಿಂತಲೂ ಎಷ್ಟೋ ಪಾಲು ಸಮಧಿಕವಾಗಿದೆ ಆ ದೇವರುಗಳಿಗೂ ನಿನಗೂ ಇರುವ ತಾರತಮ್ಯ.”

“It may be because of this the poets use at times a lordlier language than their contracted life here could justify. If not true to outward being, it may be true to inward or deep own-being. The fallen divinity, for an instant forgets that is is fallen and speaks as to immortals.

There is as great a mystery about our least motion as there is about our whole being. We are affected by the whole cosmos. Emanations from most distant planert pour on us and through us. Everything is related to every thing else. ‘Thou canst not stir a stone without troubling of a star”.

“How can words portray truly any emotion when the whole of life is involved in its parts, all the past, and, for all know, the eternity we think of as the future?”

To bring this loveliness to be
Even for an hour. the builder must
Have wrought in the laboratory
Of many a star for its sweet dust.
Oh, to make possible that heart,
And that gay breath so lightly sighed,
What agony was in the art,
How many gods were crucified!”

ನನ್ನ ಸಾಹಿತ್ಯವು ಹಲವು ಕವನ ಮತ್ತು ಕವನಭಾಗಳಲ್ಲಿಯೂ ಕೆಲವು ಗದ್ಯಕೃತಿಯ ಸಾಂದರ್ಭಿಕ ಸನ್ನಿವೇಶಗಳಲ್ಲಿಯೂ ಸ್ವಾಮಿ ಸಿದ್ಧೇಶ್ವರಾನಂದರಿಗೆ ತನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿದೆ. ನನ್ನನ್ನು ೧೯೨೬ರಲ್ಲಿ ಸಂತೆಪೇಟೆಯ ‘ಆನಂದಮಂದಿರ’ದ ನರಕದಿಂದ ಎತ್ತಿ ಆಶ್ರಮಕ್ಕೆ ಕರೆದೊಯ್ದು, ನನ್ನ ದೈಹಿಕ, ಲೌಕಿಕ ಮತ್ತು ಆಧ್ಯಾತ್ಮಿಕಗಳ ಸರ್ವೋದ್ಧಾರಕ್ಕೂ ಅವರು ಕಾರಣರಾದುದನ್ನು ನನ್ನ ಒಂದು ಸಾನೆಟ್, ಸ್ಮಾರಕ ಸ್ತಂಭದೋಪಾದಿಯಲ್ಲಿ ಶಾಶ್ವತಗೈದಿದೆ: ಅದು ‘ಕೃತ್ತಿಕೆ’ಯಲ್ಲಿ ಪ್ರಕಟಗೊಂಡಿದೆ:

ನಿಮಗೆ ನಾನಾವಾವ ರೀತಿಯಿಂದೆನಿತು ಋಣಿ
ಎಂದು ಕಳೆದ ಕಾಲದ ಪುಸ್ತಕದ ಪುಟಗಳನ್
ಒಂದೊಂದನೆಯೆ ಮಗುಚಿ ನೋಡಿದರೆ ಪಟಗಳನ್,
ಥಳಿಸುವುದು ವಜ್ರವೈಡೂರ್ಯಮಯ ನೆನಹುಗಣಿ
ಕೃತಜ್ಞತೆಯ ಕಣ್ ಕೋರೈಸುವೋಲ್! ದೇಹಮಂ
ಕಾಣ್ಕೆಗೈದಿರಿ ದೇವ ಧನ್ವಂತರಿಯ ಗುಡಿಗೆ;
ಪ್ರಾಣಮಂ ಕೊಂಡೊಯ್ದು ಭಾಗೀರಥಿಯ ತಡಿಗೆ
ಮೀಯಿಸಿದಿರದು ಗುರುಮಂತ್ರದಿಂ. ಸ್ನೇಹಮಂ
ಸವಿಯೊಡ್ಡಿ, ತಿವ ಲಲಾಟಾಕ್ಷಿಯೊಳ್ ಅಭೀತಿಯಿಂ
ಚರಿಸುವಂತೆಸಗಿಹಿರಿ. ಸಂನ್ಯಾಸಯೋಗದಿಂ
ಧರ್ಮಗರ್ವದ ಸೋಂಕು ಸುಳಿಯದಾ ಪ್ರೀತಿಯಿಂ
ಸಾಮಾನ್ಯತೆಯನಾಂತು, ಕಲೆಗಳನುರಾಗದಿಂ
ರಸಯೋಗಿಯಾಗಿರ್ಪ ನೀಮೆ ಶಾಂತಿಯ ಭಟಂ,
ಮೇಣ್ ಆತ್ಮದಾನಂದ ಸಿದ್ಧೇಶ್ವರನೆ ದಿಟಂ!

೧೯-೫-೧೯೪೧

ಈ ಸಾನೆಟ್ಟಿಗೆ ನಾನು ನೇರವಾಗಿ ಸಿದ್ಧೇಶ್ವರಾನಂದರ ಹೆಸರು ಕೊಡದೆ “ಸ್ವಾಮಿಜಿಗೆ” ಎಂದು ಮಾತ್ರ ಹೆಸರು ಕೊಟ್ಟಿದ್ದೇನೆ. ೧೯೫೬ರಲ್ಲಿ ಸ್ವಾಮಿ ಸಿದ್ಧೇಶ್ವರಾನಂದರು ಅವರ ತಂದೆ ತೀರಿಕೊಂಡಿದ್ದ ಸಂದರ್ಭದಲ್ಲಿ ಅವರ ತಾಯಿಯವರನ್ನು ಸಂತೈಸಲೋಸುಗ ಭರತ ಖಂಡಕ್ಕೆ ಆಗಮಿಸಿದ ಸಂದರ್ಭದಲ್ಲಿ ಮೈಸೂರಿಗೂ ಬಂದು ಒಂದು ವಾರ ತಂಗಿದ್ದರು. ನಮ್ಮ ಮನೆ ‘ಉದಯರವಿ’ಗೂ ಒಂದೆರಡು ಸಾರಿ ಬಂದು, ನನ್ನೊಡನೆಯೂ ನನ್ನ ಹೆಂಡತಿ ಮಕ್ಕಳೊಡನೆಯೂ ಅತ್ಯಂತ ಆತ್ಮೀಯತೆಯಿಂದ ವರ್ತಿಸಿ, ನಮ್ಮ ದೇವರ ಮನೆಯಲ್ಲಿ ಶ್ರೀ ಗುರುಮಹಾರಾಜರಿಗೆ ಪೂಜೆ ಸಲ್ಲಿಸಿ. ಧ್ಯಾನಮಾಡಿ, ನಮ್ಮನ್ನೆಲ್ಲ ಆಶೀರ್ವದಿಸಿದ್ದರು. ಶ್ರೀ ಗುರುಮಹಾರಾಜ್ ಶ್ರೀಮಹಾಮಾತೆ ಮತ್ತು ಶ್ರೀ ಸ್ವಾಮಿ ವಿವೇಕಾನಂದರು ಇವರ ದೊಡ್ಡಗಾತ್ರದ ಭಾವಚಿತ್ರಗಳಿಂದ ಪವಿತ್ರೀಕೃತವಾಗಿರುವ ನಮ್ಮ ಊಟದ ಮನೆಯಲ್ಲಿ ನಮ್ಮೊಡನೆ ಅವರಿಗೆ ಪ್ರಿಯವಾಗಿದ್ದ ಬೇವಿನಸೊಪ್ಪು ಹಾಗಲಕಾಯಿಗಳ ವ್ಯಂಜನಗಳನ್ನು ಹರ್ಷದಿಂದ ಸ್ವೀಕರಿಸಿ ಭೋಜನಗೈಯುವ ಕೃಪೆ ಮಾಡಿದ್ದರು. ಆಗ ನಾನು ನನ್ನ ಕೆಲವು ಹೊಸ ಕವನಗಳನ್ನು ಅವರಿಗೆ ಓದಿದಾಗ ಈ “ಸ್ವಾಮಿಜಿಗೆ” ಎಂಬ ಸಾನೆಟ್ಟನ್ನೂ ಓದಿದೆ. ಓದುವ ಮೊದಲು “ಇದು ತಮ್ಮನ್ನೆ ಕುರಿತು ಬರೆದದ್ದಾದರೂ ಯಾರಿಗೂ ಗೊತ್ತಾಗಬಾರದೆಂದು ಹೆಸರು ಮರೆಸಿದ್ದೇನೆ” ಎಂದು ಹೇಳಿದೆ. ಆದರೆ ಸಾನೆಟ್ಟನ್ನು ಪೂರ್ತಿ ಕೇಳಿದ ಮೇಲೆ ಅವರು ನಕ್ಕು “ಹೆಸರು ಮರೆಸಿದ್ದೇನೆ ಎಂದು ಹೇಳುತ್ತೀರಲ್ಲಾ? ಯಾರಿಗೆ ತಾನೆ ಗೊತ್ತಾಗುವುದಿಲ್ಲ? ಅದರ ಕೊನೆಯ ಪಂಕ್ತಿಯೆ ಗುಟ್ಟನ್ನೆಲ್ಲ ಬಿಟ್ಟುಕೊಡುತ್ತಿದೆ!” ಎಂದು ಮಗುವಿನಂತೆ ಗಹಗಹಿಸಿದ್ದರು!

೧೯೪೧ರಲ್ಲಿ ಬರೆದಿದ್ದ ಆ ಸಾನೆಟ್ಟಿನಲ್ಲಿ ನನ್ನ ದೈಹಿಕ, ಲೌಕಿಕ ಮತ್ತು ಆಧ್ಯಾತ್ಮಿಕಗಳ ಸರ್ವೋದ್ಧಾರವನ್ನು ಕುರಿತಿದೆ: ದೈಹಿ-ಕ್ರಾನಿಕ್ ಮಲೇರಿಯಾ, ಕಜ್ಜಿ ಕುರು ಇತ್ಯಾದಿ; ಲೌಕಿಕ-ನನ್ನ ಜೀವನೋಪಾಯಕ್ಕಾಗಿ ನನ್ನಿಂದ ಕಾಲೇಜಿನ ಲೆಕ್ಚರರ್ ಕೆಲಸಕ್ಕೆ ಅರ್ಜಿ ಹಾಕಿಸುವುದೇ ಮುಂತಾದವು; ಆಧ್ಯಾತ್ಮಿಕ-ವೇದಾಂತ ಬೋಧೆ, ದೀಕ್ಷಾಪ್ರದಾನ ಇತ್ಯಾದಿ. ಅದಕ್ಕೆ ಬಹು ಪೂರ್ವದಲ್ಲಿಯೆ ಎಂದರೆ ೧೯೨೯ರಲ್ಲಿ, ಅವರು ನನ್ನನ್ನೂ ಮಾನಪ್ಪನನ್ನೂ ಬೇಲೂರು ಮಠಕ್ಕೆ ಕರೆದೊಯ್ದು ಸ್ವಾಮಿ ಶಿವಾನಂದರಿಂದ ದೀಕ್ಷೆ ಕೊಡಿಸಿದ ಸಂದರ್ಭದಲ್ಲಿ, ೧೪-೧೦-೧೯೨೯ರಲ್ಲಿ ಕಲ್ಕತ್ತಾದಲ್ಲಿಯೆ ರಚಿಸಿದ ಇನ್ನೊಂದು ಕವನ ‘ಶಿವನ ಕೃಪೆಯದಿರಲಿ ಬಿಡು’ ಎಂಬುದು (‘ಕಲಾಸುಂದರಿ’ ಕವನಸಂಗ್ರಹದ ೬೧ನೆಯ ಪುಟದಲ್ಲಿದೆ). ಗೋಪಾಲ್ ಮಹಾರಾಜರ ಸಮಗ್ರ ದೇವವ್ಯಕ್ತಿತ್ವದ ಪ್ರಭಾವವನ್ನು ಕುರಿತು ಹಾಡುತ್ತದೆ:

ಶಿವನ ಕೃಪೆಯದಿರಲಿ ಬಿಡು
ಬಂದೆ ಬರುವುದು.
ಮನುಜನೊಲ್ಮೆಯೊಂದ ಕೊಡು
ಶಿವನ ತರುವುದು.
ವೇದ ಮಾಡಬಲ್ಲುದೇನು?
ನನ್ನ ಎದೆಯನರಿವುದೇನು?
ಎದೆಯನರಿತ ಒಲ್ಮೆ ತಾನು
ಮರಣ ಮರಣಕೆ:
ಮೆಲ್ಲನೆನ್ನನೊಯ್ದಿತಣ್ಣ
ಶಿವನ ಚರಣಕೆ!

ವೇದವಲ್ಲ ಶಾಸ್ತ್ರವಲ್ಲ
ಬುದ್ದಿಯೊರೆದುದು:
ನರತ ನವಿರ ನೀತಿಯಲ್ಲ
ತಿದ್ದಿ ಪೊರೆದುದು.
ಜಯಿಸಲೆನನೊಬ್ಬನೊಲ್ಮೆ;
ಬಂದುದೊಯ್ಯನೆನ್ನ ಮೇಲ್ಮೆ;
ಹಿರಿಯ ಒಲ್ಮೆಯೊಂದೆ ಬಲ್ಮೆ,
ಶಕ್ತಿ ಮುಕ್ತಿಗೆ:
ಮೆಲ್ಲನೆನ್ನೊಯ್ದಿತಣ್ಣ
ಶಿವನ ಭಕ್ತಿಗೆ!

೧೪-೧೦-೧೯೨

ಸ್ವಾಮಿ ಸಿದ್ಧೇಶ್ವರಾನಂದರು ೧೩೭ರ ತುದಿಯಲ್ಲಿ ಬೆಂಗಳೂರಿನ ಶ್ರೀರಾಮಕೃಷ್ಣಶ್ರಾಮದ ಅಧ್ಯಕ್ಷ ಸ್ಥಾನದಿಂದ ಶ್ರೀರಾಮಕೃಷ್ಣ ಮಿಷನ್ನಿನ ಪ್ರಸಾರ ಪ್ರತಿನಿಧಿಯಾಗಿ ಫ್ರಾನ್ಸಿಗೆ ತೆರಳಿದರು. ಅಲ್ಲಿ ಪ್ಯಾರಿಸ್ಸಿನಲ್ಲಿ ರಾಮಕೃಷ್ಣ-ವಿವೇಕಾನಂದ ಕೇಂದ್ರ ಸಂಸ್ಥಾಪನೆಗಾಗಿ. ಅವರ ಮಾರ್ಗದರ್ಶನದಲ್ಲಿ ಫ್ರಾನ್ಸಿನ ರಾಜಧಾನಿ ಪ್ಯಾರಿಸ್ಸಿಗೆ ಸಮೀಪದ ಗ್ರೆಟ್ಸ್ ನಾಮಕ ಒಂದು ಸುವಿಶಾಲವಾದ ವನ ಸುಂದರ ಪ್ರದೇಶದಲ್ಲಿ ‘ಸೆಂಟರ್ ವೇದಾಂತಿಕ್ ರಾಮಕೃಷ್ಣ’ (Centre Vedantique Ramakrishna) ಎಂಬ ಹೆಸರಿನ ಆಶ್ರಮ ಪ್ರಾರಂಭವಾಯಿತು. ಅವರು ಅಲ್ಲಿಗೆ ಹೋದ ಒಂದು ವರ್ಷದಲ್ಲಿಯೆ ಎಂದರೆ ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಹಿಟ್ಲರನ ಘೋರ ಸಮರಯಂತ್ರ ತನ್ನ ಭಯಂಕರ ರಣಬಾಹುಗಳನ್ನು ಜರ್ಮನಿಯ ಪೂರ್ವಕ್ಕೂ ಪಶ್ಚಿಮಕ್ಕೂ ಪ್ರಸರಿಸಿ ಫ್ರಾನ್ಸಿನ ಮೇಲೆ ನುಗ್ಗಿ ಪ್ಯಾರಿಸ್ಸನ್ನು ಕಬಳಿಸಿತು. ಫ್ರೆಂಚ್ ಸರ್ಕಾರವು ಹಿಟ್ಲರಿನ  ಧ್ವಂಸಕ ಕ್ರೌರ್ಯದಿಂದ ಸುಂದರ ನಗರವಾದ ಪ್ಯಾರಿಸ್ಸನ್ನು ಸಂರಕ್ಷಿಸುವ ಉದ್ದೇಶದಿಂದ ಅದನ್ನು open city (ತೆರೆದ ನಗರ) ಎಂದು ಘೋಷಿಸಿ, ಪ್ಯಾರಿಸ್ಸನ್ನು ತ್ಯಜಿಸಿ, ಶತ್ರುವಿಗೆ ಬಿಟ್ಟುಕೊಟ್ಟು, ತನ್ನ ಸರ್ಕಾರವನ್ನು ಫ್ರಾನ್ಸಿನ ಪಶ್ಚಿಮಕ್ಕೆ ಸಾಗಿಸಿತು, ವಿಚೀ ಎಂಬಲ್ಲಿಗೆ. ಫ್ರೆಂಚ್ ಮಿತ್ರರ ಸಲಹೆಯಂತೆ ಸ್ವಾಮಿಜಿಯೂ ಅವರೊಡನೆ ಆಶ್ರಮಕೇಂದ್ರವನ್ನು ವಿಚೀ ಸರ್ಕಾರದ ಸುರಕ್ಷತೆಯ ಸಲುವಾಗಿ ಪಶ್ಚಿಮಕ್ಕೆ ಯುದ್ಧರಂಗದಿಂದ ದೂರಕ್ಕೆ ಸಾಗಿಸಿದರು. ಆ ಕಷ್ಟದ ಸಂಕಟದ ಕ್ಷೋಭೆಯ ಕಾಲದಲ್ಲಿ ತಾವು ಪಾಡುಪಟ್ಟ ವಿಚಾರವನ್ನು ತಮ್ಮ ಕಾಗದಗಳಲ್ಲಿ ತುಸು ಸೂಚಿಸಿದ್ದಾರೆ. ಸ್ವಾಮಿಜಿ ಆ ಯುದ್ಧಕ್ಷೋಭೆಯ ತುಮುಲದಲ್ಲಿದ್ದಾಗಲೆ ೧೯೪೧ ರಲ್ಲಿ ಮೇ ಎರಡನೆ ತಾರೀಖು ನನ್ನ ಎರಡನೆಯ ಮಗ ‘ಕೋಕಿಲೋದಯ ಚೈತ್ರ’ ಹುಟ್ಟಿದನು ಶಿವಮೊಗ್ಗದಲ್ಲಿ, ಅವನ ತಾಯಿಯ ತವರಿನಲ್ಲಿ.

ಚೈತ್ರನ ಜನನ ದಿನ ಪಂಚಾಂಗ ರೀತ್ಯಾ ಶಂಕರ ಜಯಂತಿ, ರಾಮಾನುಜರ ತಿರುನಕ್ಷತ್ರ ಮತ್ತು ಬಸವ ಜಯಂತಿ ಎಲ್ಲಾ ಸಂಧಿಸುವ ಮಹೂರ್ತವಾಗಿತ್ತು. ಶಿವಮೊಗ್ಗಕ್ಕೆ ಹೆಚ್ಚು ದೂರವಲ್ಲದ ಊರು ಸಾಗರದಲ್ಲಿ ವಸಂತ ಸಾಹಿತ್ಯೋತ್ಸವ ನಡೆಯುತ್ತಿತ್ತು. ಅದರಲ್ಲಿ ಭಾಗವಹಿಸಲು ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ’ದಿಂದ (ಆಗಿನ್ನೂ ಆ ಹೆಸರು ಬಂದಿರಲಿಲ್ಲ) ನಿಯೋಜಿತರಾಗಿ ಕೆಲವು ನನ್ನ ಮಿತ್ರ ಅಧ್ಯಾಪಕರು-ತೀ.ನಂ. ಶ್ರೀ, ಸತ್ಯಗಿರಿನಾಥನ್, ಎಂ.ವಿ. ಕೃಷ್ಣರಾವ್, ಎ.ಎನ್. ಮೂರ್ತಿರಾವ್-ಶಿವಮೊಗ್ಗ ಮತ್ತು ಸಾಗರಗಳಲ್ಲಿ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲು ಶಿವಮೊಗ್ಗದಲ್ಲಿ ತಂಗಿದ್ದರು. (ಜಿ.ಹನುಮಂತರಾಯರು, ಪ್ರೊ. ವೆಂಕಣ್ಣಯ್ಯ ಮತ್ತು ಸಂಸ್ಕೃತ ಪ್ರೊ.ಸಿ.ಆರ್. ನರಸಿಂಹಶಾಸ್ತ್ರಿ ಇವರೂ ಇದ್ದರು.)

ಚೈತ್ರ ಹುಟ್ಟಿದ್ದು ೨-೫-೧೯೪೧ ಬೆಳಗಿನ ಜಾವ ೪-೪೫. ಅವೊತ್ತೇ ಬೆಳಿಗ್ಗೆ ನಾನೂ ಮೈಸೂರಿನಿಂದ ಬಂದಿದ್ದ ಅಧ್ಯಾಪಕ ಮಿತ್ರರೊಡನೆಯೂ ಮತ್ತು ಶಿವಮೊಗ್ಗದ ಮಿತ್ರರೊಡನೆಯೂ ಶಿವಮೊಗ್ಗಕ್ಕೆ ನಾಲ್ಕು-ಐದು ಮೈಲಿ ದೂರ ಇರುವ ತುಂಗಾ ನದಿಯ ‘ಏಳು ಸೀಳು’ ಎಂಬಲ್ಲಿಗೆ ಹೋಗಿ ಚೆನ್ನಾಗಿ ಹೊಳೆಯಲ್ಲಿ ದುಮುಕಿ ಈಜಿ ಮಿಂದು ನಲಿದಾಡಿದ್ದೆವು. ಮೈಸೂರಿನಿಂದ ಬಂದಿದ್ದವರೆಂದರೆ-ತೀ.ನಂ.ಶ್ರೀಕಂಠಯ್ಯ, ಸತ್ಯಗಿರಿನಾಥನ್; ಎಂ.ವಿ. ಕೃಷ್ಣರಾವ್, ಎ.ಎನ್.ಮೂರ್ತಿರಾವ್ ಮತ್ತು ಹೊಳೆಯಲ್ಲಿ ಮೀಯದಿದ್ದರೂ ದಡದಲ್ಲಿಯೆ ನೆರಳಲ್ಲಿ ಕೂತು ನೋಡುತಿದ್ದವರು ಬಹುಶಃ ವೆಂಕಣ್ಣಯ್ಯನವರು, ಹನುಮಂತರಾಯರು. ಶಿವಮೊಗ್ಗ ಮಿತ್ರರೆಂದರೆ-ಲಾಯರು ಎಸ್.ವಿ.ಕೃಷ್ಣಮೂರ್ತಿರಾಯರು, ನಮ್ಮ ಮಾನಪ್ಪ ಮತ್ತು ಭೂಪಾಳಂ ಪುಟ್ಟನಂಜಪ್ಪ ಇತ್ಯಾದಿ.

ನನಗೆ ಚೆನ್ನಾಗಿ ನೆನಪಿದೆ, ಸ್ನಾನಲೀಲೆಯೆಲ್ಲ ಪೂರೈಸಿ ದಡಕ್ಕೆ ಬಂದು ಎಲ್ಲರೂ ಮೈ ಒರಸಿಕೊಂಡು ಬಟ್ಟೆಗಿಟ್ಟೆ ಹಾಕಿಕೊಂಡು ಮರದ ನೆರಳಿನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾಗ, ಬಹುಶಃ ಮಾನಪ್ಪನಿಂದ ಇರಬೇಕು. ನನಗೆ ಬೆಳಗಿನ ಜಾವ ಪುತ್ರ ಜನನವಾದ ಸುದ್ದಿ ತಿಳಿದು, ಏನೂ ಆಗಿಲ್ಲ ಎಂಬಂತೆ ಎಲ್ಲರೊಡನೆ ಈಜಲು ಬಂದ ನನ್ನ ನಿರ್ಲಕ್ಷ ಮನೋಧರ್ಮಕ್ಕೆ ವಿಸ್ಮಿತರಾಗಿ, ನನ್ನನ್ನು ತರಾಟೆಗೆ ತೆಗೆದುಕೊಳ್ಳುವ ಭರ್ತ್ಸನೆಯ ದಾಟಿಯಲ್ಲಿ ತೀ.ನಂ.ಶ್ರೀಯವರು ಇತರರೆಲ್ಲರ ಪರವಾಗಿ ಎಂಬಂತೆ “ಪುಟ್ಟಪ್ಪ, ನಿಮ್ಮ ಧೈರ್ಯವೇ ಧೈರ್ಯ ಬಿಡಿ” ಎಂದು ನನ್ನ ಔದಾಸೀನ್ಯವನ್ನು ಛೇಡಿಸಿದ್ದರು! ಬೇಜಾವಾಬ್ದಾರಿಗೆ ಧೈರ್ಯನಾಮವಿತ್ತು!

ಮೇಲುನೋಟಕ್ಕೇನೂ ನನ್ನ ವರ್ತನೆ ಹಾಗೆ ಕಾಣಿಸುತ್ತಿತ್ತಾದರೂ ನನ್ನ ಮಗನ ಜನನದ ವಿಚಾರದಲ್ಲಿ ನಾನು ಅಷ್ಟೇನೂ ನಿಷ್ಕಾಮನೂ ಉದಾಸೀನನೂ ಆಗಿರಲಿಲ್ಲ. ಅದಕ್ಕೆ ‘ಕೋಕಿಲೋದಯ ಚೈತ್ರ’ ಎಂದು ಅವನು ಹುಟ್ಟಿದ ಮರುದಿನ ೩-೫-೧೯೪೧ರಲ್ಲಿಯೂ, ಅವನನ್ನು ತೊಟ್ಟಿಲಿಗೆ ಹಾಕಿ ಹೆಸರಿಟ್ಟ ದಿನ ೧೨-೫-೧೯೪೧ರಲ್ಲಿ ‘ಹೆಸರಿಟ್ಟು ಹರಸುವೆನು ಚೈತ್ರನಂ’ ಎಂದು ಬರೆದಿರುವ ಕವನಗಳ ಸಾಕ್ಷಿ!

ಆ ಎರಡು ಕವನಗಳೂ ‘ಜೇನಾಗುವಾ!’ ಎಂಬ ಹೆಸರಿನ ಪ್ರೇಮಕವನ ಸಂಗ್ರಹದಲ್ಲಿ ಪ್ರಕಟವಾಗಿವೆ. ೧೨-೫-೧೯೪೧ರಲ್ಲಿ ರಚಿತವಾಗಿರುವ ‘ಹೆಸರಿಟ್ಟು ಹರಸುವೆನು ಚೈತ್ರನಂ’ ಎಂಬ ಕವನದಲ್ಲಿ ಚೈತ್ರನನ್ನು ಆಶೀರ್ವದಿಸಿ ಹರಸುವಾಗ ನನ್ನ ಮನಸ್ಸು ಎರಡನೆ ಮಹಾಯುದ್ಧದ ಮಾರಕ ಯಜ್ಞದ ಮಧ್ಯೆ ಸಿಕ್ಕಿದ್ದ ಸ್ವಾಮಿ ಸಿದ್ಧೇಶ್ವರಾನಂದರನ್ನು ನೆನೆಯುತ್ತದೆ. ಅವರ ಕ್ಷೇಮಕ್ಕಾಗಿ ಕಾತರಿಸಿ ಪ್ರಾರ್ಥಿಸುತ್ತದೆ. ಆ ಕವನದ ಕೊನೆ ಹೀಗೆ ಮುಕ್ತಾಯವಾಗುತ್ತದೆ.

“ನೀನ್ ಬಂದ ಈ ಜಗಂ ನೀನ್ ಬಿಡುವ ಆ ಜಗಕೆ
ಕೀಳಾಗುವಂತೆ ಬಾಳ್: ಇಂದಲ್ಲಿ, ಪಶ್ಚಿಮದಿ
ಮಾನವೀಯತೆ ಮಾಣ್ದು ತಾಂಡವಂಗೈಯುತಿದೆ
ನೀಚ ರಾಕ್ಷಸತೆ. ಯಾಂತ್ರಿಕ ಕ್ರೌರ್ಯದಾ ರುದ್ರ
ರಣದಲ್ಲಿ. ಪೆಣ್ಗಳಂ ಮಕ್ಕಳಂ ಬಲಿಗೆಯ್ದು
ತಣಿಸುತಿರುವರು ಸಮರ ಚಂಡಿಯಂ. ಸೆಣಸುತಿವೆ
ಹಣೆಗೆ ಹಣೆ ಘಟ್ಟಿಸುತ್ತೆರಡು ದುಶ್ಯಕ್ತಗಳ್
ಲೋಕ ಚಕ್ರಾಧಿಪತ್ಯಕ್ಕೆ, ಆ ದುಷ್ಕರ್ಮ
ಶಕ್ತಿ ದ್ವಯಂಗಳುಂ ಹೇಳಹೆಸರಿಲ್ಲದೆಯೆ
ಒಂದರಿಂದೊಂದಳಿದು ಶೋಕವೊಂದುಳಿಯಲಾ
ಶೋಕಕೊಂದೊಳ್ಪಿನಾಕಾರಂ ನೀಡಲ್ಕೆ
ನೀಂ ಸತ್ಕೃತಿಯ ಲಸಚ್ಛಿಲ್ಪಿವರನಾಗೆಂದು
ಹರಸುವೆನು; ಹರಸುವೆನೊ ಗುರುದೇವನಂ ನುತಿಸಿ; ಮೇಣ್
ನನ್ನನಾಶೀರ್ವದಿಸಿ ಗೃಹಸ್ಥಾಶ್ರಮಕ್ಕೊಯ್ದು,
ಧರ್ಮದೌದಾರ್ಯಮಂ ಪೇಳೆ ಪಶ್ಚಿಮಕೆಯ್ದಿ,
ಐರೋಪ್ಯಯುದ್ಧದಾ ಕ್ರೌರ್ಯಭೂಮಿಯೊಳಿರ್ಪ
ನನ್ನ ಆ ಸಿದ್ಧೇಶ್ವರಾನಂದ ಸ್ವಾಮಿಜಿಗೆ
ಸುಕ್ಷೇಮಮಕ್ಕೆಂದು ಬಯಸಿ ನಲ್ಪಯಕೆಯಂ!

೧೩-೫-೧೯೪೧

೧೯೪೧ರಲ್ಲಿ ಚೈತ್ರ ಹುಟ್ಟಿದಾಗ ಶಿವಮೊಗ್ಗದಲ್ಲಿ ನಾನು ಮಾಡಿದ ಪ್ರಾರ್ಥನೆ ವ್ಯರ್ಥವಾಗಲಿಲ್ಲ. ಪ್ಯಾರಿಸ್ಸನ್ನು ಆಕ್ರಮಿಸಿದ್ದ ಹಿಟ್ಲರನ ಗೂಢಚರ ಸೇನೆ ಯೆಹೂದ್ಯರನ್ನೆಂತೋ ಅಂತೆ ಇತರರನ್ನೂ ಹಿಡಿದು ಟಾರ್ಚರ್ ಚೇಂಬರ್‌ಗಳಲ್ಲಿ ಕೊಲ್ಲುತ್ತಿತ್ತು. ಒಮ್ಮೆ ವಿಚಿ ಸರ್ಕಾರದ ಅಧೀನದಲ್ಲಿದ್ದ ಸ್ವಾಮಿಜಿಯನ್ನು ದಸ್ತಗಿರಿ ಮಾಡುವ ಸಂಭವ ಬಂದಿತ್ತು. ಆದರೆ ಪ್ರಭಾವಶಾಲಿ ಭಕ್ತಮಿತ್ರರ ನೆರವಿನಿಂದ ಸ್ವಾಮಿಜಿ ಪಾರಾದಂತೆ. ಅಂತೂ ೧೯೪೫ರಲ್ಲಿ ಆರು ವರ್ಷಗಳ ಎರಡನೆ ಮಹಾಯುದ್ಧಾನಂತರ ಹಿಟ್ಲರನ ಅಸುರೀ ಶಕ್ತಿ ಸಂಪೂರ್ಣವಾಗಿ ನಿರ್ನಾಮವಾದ ಮೇಲೆ ಸ್ವಾಮಿಜಿ ಮತ್ತೆ ಪ್ಯಾರಿಸ್ಸಿಗೆ ಬಂದು ಗ್ರೆಟ್ಸ್‌ನಲ್ಲಿ ‘ಸೆಂಟರ್ ವೇದಾಂತಿಕ್ ರಾಮಕೃಷ್ಣ’ವನ್ನು ಪುನರುಜ್ಜೀವಗೊಳಿಸಿದರು. ತಾವು ೧೯೫೭ರಲ್ಲಿ ಗುರುಮಹಾರಾಜರಲ್ಲಿ ಐಕ್ಯರಾಗುವವರೆಗೂ ಯೂರೋಪಿನಲ್ಲೆಲ್ಲ ಸರ್ವಧರ್ಮಸಮನ್ವಯ ವೇದಾಂತ ದರ್ಶನವನ್ನು ಬೋಧಿಸಿದರು. ಉದ್ದಕ್ಕೂ ನನಗೆ ಹೊಸ ಪುಸ್ತಕಗಳನ್ನು ಕಳಿಸುವುದರ ಮೂಲಕವೂ ಕಾಗದಗಳನ್ನು ಬರೆಯುವುದರ ಮೂಲಕವೂ ಜಗತ್ತಿನ ಜ್ಞಾನದ ಹೊಸ ಹೊಸ ಮುಖಗಳಿಗೆ ಬಾಗಿಲುಗಳನ್ನು ತೆರೆದು ನನ್ನನ್ನು ಆ ಬೆಳಕಿನ ವಲಯಗಳಿಗೆ ನೂಕುತ್ತಿದ್ದರು. ನನ್ನ  ಚೇತನೋದ್ಪೋಧನಕ್ಕೆ ಅವರಿಂದಾದ ದೈವೀ ಉಪಕಾರವನ್ನು ನೆನೆದು ನನ್ನ ಭಕ್ತಿ ೯-೧-೧೯೬೦ರಲ್ಲಿ ‘ಉದಯರವಿ’ಯ ದೇವರ ಮನೆಯಲ್ಲಿ ಧ್ಯಾನದ ಕಾಲದಲ್ಲಿ ರಚಿಸಿದ ‘ಕೃತಜ್ಞತೆ’ ಎಂಬ ಕವನವನ್ನು ಇಲ್ಲಿ ಅರ್ಪಿಸುತ್ತಿದ್ದೇನೆ:


ಗುರುವಿನೆಡೆಗೆ ಕರೆದ ಗುರುವೆ,
ನನ್ನ ಜೀವ ದೇವತರುವೆ,
ನಿಮ್ಮನೆಂತು, ಹೇಳಿ, ಮರವೆ?
ನೆನೆವೆ
ಕೃತಜ್ಞತೆಯೊಳನುದಿನ!

ಮಾನ್ಯರಲ್ಲಿ ಪರಮ ಮಾನ್ಯ!
ಸಾಮಾನ್ಯರಲಿ ಸಾಮಾನ್ಯ!
ನಿಮ್ಮ ಕೃಪೆಯೊಳಾದೆ ಧನ್ಯ.
ನಿಮ್ಮ
ನೆನೆವುದೆನಗೆ ಪೂಜನ!

ಸತಿಯನೊಲಿದು ನಿಮ್ಮ ನೆನೆವೆ;
ಸುತರ ನಲಿಸಿ ನಿಮ್ಮ ನೆನೆವೆ;
ಕೃತಿಯನೋದಿ ನಿಮ್ಮ ನೆನೆವೆ;
ನಿಮ್ಮ
ನೆನೆವುದಾತ್ಮ ಸಾಧನೆ

ಅಹೈತುಕೀ ಕೃಪಾಸಿಂಧು,
ನಿಷ್ಕಾರಣ ಆತ್ಮಬಂಧು,
ಅಂದಿನಂತೆ ಇಂದು ಮುಂದು
ಇರಲಿ ನನಗೆ ಎಂದೆಂದೂ,
ನಿಮ್ಮ
ಮೈತ್ರಿಯ ಅನುಮೋದನೆ!

೯-೧-೧೯೬೦

* * *