ಸ್ವಾಮಿ ಸಿದ್ಧೇಶ್ವರಾನಂದಜಿಯವರು ಫ್ರಾನ್ಸಿಗೆ ಹೋದಮೇಲೆ ಫ್ರೆಂಚ್ ಭಾಷೆಯನ್ನು ಕಲಿತು, ಅದರಲ್ಲಿ ಓದುವ ಬರೆಯುವ ಮಾತನಾಡುವ ಪ್ರವಚನ ಮತ್ತು ಉಪನ್ಯಾಸಗಳನ್ನು ಕೊಡುವ ಸಾಮರ್ಥ್ಯ ಪಡೆದು, ಯೂರೋಪಿನ ಬೇರೆಬೇರೆ ದೇಶಗಳಲ್ಲಿ ಸಂಚರಿಸಿ, ವಿಶ್ವವಿದ್ಯಾನಿಲಯಗಳಿಗೆ ಭೇಟಿಯಿತ್ತು, ತಮ್ಮನ್ನು ಸಂಧಿಸಿದವರೆಲ್ಲರ ಪ್ರೀತಿ, ಗೌರವ, ಆತ್ಮೀಯತೆಗಳನ್ನು ಆರ್ಜಿಸಿ ಜನಪ್ರಿಯರಾದರು ತುದಿತುದಿಯಲ್ಲಿ ಕೆಲವರಿಗೆ ದೀಕ್ಷೆಯನ್ನೂ ದಯಪಾಲಿಸಿ, ಅಧ್ಯಾತ್ಮಿಕ ಗುರುಗಳೂ ಆಗಿ, ಪೂಜ್ಯರೂ ಆದರು.

ಅವರ ವ್ಯಕ್ತಿತ್ವದ ಪ್ರಭಾವ ಯೂರೋಪಿನ ಬೇರೆಬೇರೆ ದೇಶಗಳಲ್ಲಿ ಎಷ್ಟರಮಟ್ಟಿಗೆ ಆಗಿತ್ತು ಎಂಬುದನ್ನು ಅರಿಯಬೇಕಾದರೆ ಸ್ವಾಮಿ ರಂಗನಾಥಾನಂದರ A pilgrim looks at the world  ಎಂಬ ಗ್ರಂಥ ರೂಪದ ದಿನಚರಿಯನ್ನು ನೋಡಬೇಕು. (‘ನೆನಪಿನ ದೋಣಿಯಲ್ಲಿ’ಯ ಮೊದಲಿನಲ್ಲಿ ನಾನಾಗಲೆ ಶಂಕರ್ ಮಹಾರಾಜರ ವಿಚಾರ ಹೇಳಿದ್ದೇನೆ. ಅವರೇ ಈಗ ಜಗತ್ ಪ್ರಸಿದ್ಧರಾಗಿರುವ ಸ್ವಾಮಿ ರಂಗನಾಥಾನಂದರು. ಸ್ವಾಮಿ ವಿವೇಕಾನಂದರನ್ನು ಬಿಟ್ಟರೆ ಶ್ರೀರಾಮಕೃಷ್ಣ ಮಿಷನ್ನಿನ ಸಂನ್ಯಾಸಿಗಳಲ್ಲಿ ಬೇರೆ ಯಾರೂ ಸ್ವಾಮಿ ರಂಗನಾಥಾನಂದರಂತೆ ಜಗದ್ ವಿಸ್ತಾರವಾಗಿ ಪೂರ್ವಾರ್ಧ ಪಶ್ಚಿಮಾರ್ಧ ಗೋಲಗಳಲ್ಲೆಲ್ಲಿಯೂ ಸಂಚರಿಸಿ ಶ್ರೀರಾಮಕೃಷ್ಣ-ವಿವೇಕಾನಂದ-ವೇದಾಂತ ವಿಷಯಕವಾಗಿ ಪ್ರವಚನೋಪನ್ಯಾಸಾದಿಗಳನ್ನಿತ್ತು ಲೋಕದ ಅಧ್ಯಾತ್ಮಿಕ ಚೇತನಕ್ಕೆ ಜಾಗ್ರತಿಯನ್ನಿತ್ತವರಿಲ್ಲವೆಂದು ತೋರುತ್ತದೆ.)

ಫ್ರೆಂಚ್ ಭಾಷೆಯಲ್ಲಿ ಮಾಡಿದ ಅವರ ಉಪನ್ಯಾಸಗಳಲ್ಲಿ ಎರಡನ್ನು ಆರಿಸಿ ಇಂಗ್ಲಿಷಿಗೆ ತರ್ಜುಮೆ ಮಾಡಿಸಿ ತ್ರಿಚೂರಿನ ಶ್ರೀರಾಮಕೃಷ್ಣಾಶ್ರಮದವರು ಪ್ರಕಟಿಸಿದ್ದಾರೆ. ಅದರಲ್ಲಿ ಒಂದಕ್ಕೆ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದು ರಾಷ್ಟ್ರಪತಿಯಾದ ಶ್ರೀರಾಧಾಕೃಷ್ಣನ್ ಅವರೆ ಮುನ್ನುಡಿ ಬರೆದಿದ್ದಾರೆ. ಆ ಮುನ್ನುಡಿಯಲ್ಲಿ ಅವರು “Swami Siddeshwarananda and I continued to keep in touch with each other till his last day. I had the pleasure to visit him in Mysore in the last twenties,(ಅವರು ಮೈಸೂರಿನ ಶ್ರೀರಾಮಕೃಷ್ಣಾಶ್ರಮಕ್ಕೆ ಬಂದಿದ್ದಾಗ ನಾನೂ ಆಶ್ರಮವಾಸಿಯಾಗಿದ್ದು ಸ್ವಾಮಿ ಸಿದ್ಧೇಶ್ವರಾನಂದರೊಡನೆ ಅವರೊಡನೆ ಸಂವಾದಿಸುವ ಯೋಗ ಒದಗಿತ್ತು. ಅವರು ತಾವು ಪಶ್ಚಿಮ ದೇಶಗಳಲ್ಲಿ ಪ್ರಾಧ್ಯಾಪಕರಾಗಿ ಹೋದಾಗ ಅಲ್ಲಿಗೆ ಬರಲು ನನ್ನನ್ನು ಆಹ್ವಾನಿಸಿದ್ದರು!) and again in Paris in the late forties, and I have witnessed the deep love and respect in which he was held by his students and friends everywhere” ಎಂದು ತಮ್ಮ ಗೌರವಾದರಗಳನ್ನು ಸೂಚಿಸಿದ್ದಾರೆ.

ಇಂಗ್ಲಿಷಿಗೆ ಫ್ರೆಂಚ್‌ನಿಂದ ತರ್ಜುಮೆಯಾದುವು:

1. Meditation According to Yoga–a Vedanta

2. Some aspects of Vedanta Philosophy

ಈ ಪುಸ್ತಕಗಳ ಪ್ರಕಾಶಕರು ಸ್ವಾಮಿಜಿಯ ಜೀವನ ಚಾರಿತ್ರಿಕ ಲಿಖಿತದಲ್ಲಿ ಸಂಕ್ಷೇಪವಾಗಿ ಹೀಗೆ ಬರೆದಿದ್ದಾರೆ:

THE AUTHOR

Swami Siddeshwarananda was a sanyasin of the RamaKrishna order who served the organisation devotedly for nearly thirtyseven years. He was born in Trichur in 1897. As a pupil ij school, he had the good fortune to be introduced to Sri Ramakrishna and Swami Vivekananda by some of his teachers. While yet a student in Madras, he was initiated by Swamy Brahmananda in the year 1917. His parednts were  both disciples of Swami Shivananda.

He joined the order in 1920 and was ordained into sanyasa by Swami Shivananda in 1924. He served in various centres, first in Madras and later in Mysore and Bangalore. In 1937 he was depted to go to France to start the Ranajrusgba-Vivekananda Centre there. Under his guidance an association called the Centre Vedantique Ramakrishna was formed in that country, where he carried on his work, even during the dark days of the second world-war, in a devoted and dedicated manner. It is to his credit that he was able to get the intellectuals of France deeply interested in Vedanta. Apart from the classes he held and the personal interviews he granted, he delivered regular lectures at the Sorbonne University. His lectures at the Toulouse and Montepellier Universities also attracted many people. Not merely the intellectuals but persons from all strata of society were attracted. He carried out his work without rest for nearly twenty years, till the last day of his life, April 2, 1957.

This book on Beditation played and important part to advance his work in France.

ಯೂರೋಪಿನ ವಿದ್ಯಾವಂತ ಪ್ರತಿಷ್ಠಿತ ವ್ಯಕ್ತಿಗಳ ಮೇಲಿರಲಿ, ಅಲ್ಲಿಯ ಸಾಮಾನ್ಯ ಜನಗಳ ಮೇಲೆಯೂ ಸ್ವಾಮಿ ಸಿದ್ಧೇಶ್ವರಾನಂದಜಿಯ ವ್ಯಕ್ತಿತ್ವದ ಪ್ರಭಾವ ಎಷ್ಟರಮಟ್ಟಿಗೆ ಆಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ನನಗೇ ಒದಗಿದ್ದ  ಒಂದು ಅನುಭವವನ್ನು ನಿದರ್ಶನಕ್ಕಾಗಿ ಹೇಳುತ್ತೇನೆ:

ನಾನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯಿಂದ ನಿವೃತ್ತನಾಗಿ ಆರೇಳು ವರ್ಷಗಳ ಮೇಲೆ ಇರಬಹುದು, (೧೯೭೧ನೆಯ ಏಪ್ರಿಲ್ ೨೬ನೆಯ ಸೋಮವಾರ) ಒಂದು ಸಂಜೆ ನಮ್ಮ ಮನೆ ‘ಉದಯರವಿ’ಯ ಕೈದೋಟದಲ್ಲಿ ಹಿಂದೆಮುಂದೆ ನಡೆದಾಡುತ್ತಿದ್ದೆ, ಚಿಕ್ಕ ಗೇಟಿನ ಕಡೆಯಿಂದ ದೊಡ್ಡ ಗೇಟಿನ ಕಡೆವರೆಗೂ. ಒಮ್ಮೆ ದೊಡ್ಡ ಗೇಟಿನ ಬಳಿಗೆ ಬಂದು ಹಿಂತಿರುಗುವ ಮುನ್ನ ಗೇಟಿನ ಕಡೆ ನೋಡಿದಾಗ, ಗೇಟಿನ ಕಡೆಯಿಂದ ನೇರವಾಗಿ ಇಳಿಜಾರಿನತ್ತ ಹೋಗುತ್ತಿದ್ದ ರಸ್ತೆಯಲ್ಲಿ ಒಂದು ರಿಕ್ಷಾ ಕೆಳಗಿನಿಂದ ಮೇಲುಗಡೆಗೆ ನಮ್ಮ ಮನೆಯ ದಿಕ್ಕಿಗೆ ಬರುತ್ತಿತ್ತು. ಆ ಹೊತ್ತಿನಲ್ಲಿ ಒಂಟಿಕೊಪ್ಪಲಿನ ಆ ಭಾಗದಲ್ಲಿ ಅಷ್ಟೇನೂ ಜನಸಂಚಾರವಾಗಲಿ ವಾಹನ ಸಂಚಾರವಾಗಲಿ ಇರುತ್ತಿರದಿದ್ದ ಸಮಯವಾದ್ದರಿಂದ ಆ ರಿಕ್ಷಾ ನನ್ನ ಕುತೂಹಲವನ್ನು ಕೆರಳಿಸಿ, ಹಾಗೆಯೆ ನಿಂತು ನೋಡುತ್ತಿದ್ದೆ. ನಮ್ಮ ಮನೆಯ ದಿಕ್ಕಿಗೆ ಬರುತ್ತಿದ್ದ  ರಿಕ್ಷಾ ನಡುರಸ್ತೆಯಲ್ಲಿ ನಮ್ಮ ಗೇಟಿನಿಂದ ಒಂದು ಕಾಲುಫರ್ಲಾಂಗು ದೂರದಲ್ಲಿ ನಿಂತಿತು. ಐರೋಪ್ಯ ವೇಷಭೂಷಣದ ಬಿಳಿಯ ಬಣ್ಣದ ಯೂರೋಪೀಯರೊಬ್ಬರು ರಿಕ್ಷಾದಿಂದಿಳಿದು ಅಲ್ಲಿಯೆ ಪಕ್ಕದಲ್ಲಿದ್ದ ಮನೆಯ ಕಡೆಗೆ ಹೋದರು. ಯಾರೋ ಆ ಮನೆಯ ಕಡೆಯವರಿರಬೇಕೆಂದು ಆಲೋಚಿಸುತ್ತಿರುವಷ್ಟರಲ್ಲಿ ಆ ವ್ಯಕ್ತಿ ಮತ್ತೆ ಹಿಂದಕ್ಕೆ ಬಂದು, ರಿಕ್ಷಾಕ್ಕೆ ಏರದೆ, ರಿಕ್ಷಾವನ್ನು ಬಿಟ್ಟು ಮುಂದಕ್ಕೆ ನಮ್ಮ ಮನೆಯತ್ತ ಮುಂದುವರಿದರು.

ನೋಡುತ್ತಿದ್ದ ಹಾಗೆಯೆ ಆ ಯುವಕ ನೇರವಾಗಿ ಮುಂದುವರಿದು ನಮ್ಮ ಗೇಟಿನ ಕಡೆಯೆ ಬರುವಂತೆ ತೋರಿತು. ಯಾರನ್ನೊ ಅಥವಾ ಯಾರ ಮನೆಯನ್ನೊ ಹುಡುಕುತ್ತಿರಬೇಕು ಎಂದು ಊಹಿಸಿ ಗೇಟಿಗೆ ಒರಗಿ ನೋಡುತ್ತಾ ನಿಂತಿದ್ದ ಹಾಗೆಯೆ ಆ ಯುವವ್ಯಕ್ತಿ ಸರಸರನೆ ಮುಂಬರಿದು ನಮ್ಮ ಗೇಟಿಗೇ ಬಂದರು. ಗೇಟಿನ ಆಚೆಯಿಂದ, ಈಚೆಗೆ ನಿಂತಿದ್ದು ಆತನನ್ನೆ ಗಮನಿಸುತ್ತಿದ್ದ ನನ್ನನ್ನೆ ಪ್ರಶ್ನಿಸುವಂತೆ ಆತ ನೋಡಿದಾಗ ನಾನು ಇಂಗ್ಲಿಷಿನಲ್ಲಿ ‘ಯಾರು ಬೇಕಾಗಿತ್ತು ನಿಮಗೆ?’ ಎಂದು ಕೇಳಿದೆ. ಆತ ಇಂಗ್ಲಿಷಿನಲ್ಲಿಯೆ “I want to meet Dr. Puttappa!” ಎಂದನು. ನನಗೆ ಆಶ್ಚರ್ಯವೋ ಆಶ್ಚರ್ಯ! ನನ್ನ ಉತ್ತರವನ್ನು ಕೇಳಿ ಆತನಿಗೂ ಆಶ್ಚರ್ಯವೇ ಆಗಿರಬೇಕು.

ಆತ ಇಂಗ್ಲಿಷಿನಲ್ಲಿ ಮಾತಾಡಿದ್ದರೂ ಉಚ್ಚಾರಣೆ ಇಂಗ್ಲಿಷಿನಂತೆ ಇರದೆ, D T ಮೊದಲಾದುವನ್ನು ದತ ಎಂಬಂತೆ ಉಚ್ಚರಿಸುತ್ತಿದ್ದುದು ಗೊತ್ತಾಯಿತು.

ಆತ “I want to meet Dr. Puttappa!” ಎಂದೊಡನೆ ನಾನು “I am Dr. Puttappa”  ಎಂದೆ.

ಪ್ರತಿಕ್ರಿಯೆ ಅದ್ಭುತವಾಗಿತ್ತು. ನನಗೂ ಆತನಿಗೂ ನಡುವೆ ಗೇಟು ಇತ್ತು. ಆತ ಮಿಂಚಿನ ವೇಗದಿಂದೆಂಬಂತೆ ಗೇಟಿನ ಅಗಣಿಯನ್ನು ಮೇಲೆತ್ತಿ ಕಳಚಿ, ಗೇಟಿನ ರೆಕ್ಕೆಗಳನ್ನು ಹಾರುಹೊಡೆಯುವಂತೆ ತಳ್ಳಿದನು. ನಾನು ವಿಸ್ಮಯದಿಂದ ಹಿಂದಕ್ಕೆ ಸರಿದೆ, ಆತನಿಗೆ ಒಳಗೆ ಬರಲು ದಾರಿ ಸುಗಮವಾಗಲಿ ಎಂದು. ಆತ ಒಳಕ್ಕೆ ಬರಲಿಲ್ಲ. ನಿಂತಲ್ಲಿಂದಲೆ ದಢಾರನೆ ನೆಲಕ್ಕೆ ಕುಸಿದು ಅಡ್ಡಬಿದ್ದು ದಂಡಪ್ರಣಾಮ ಮಾಡಿಬಿಟ್ಟನು, ಆತನ ಹಣೆ ನನ್ನ ಕಾಲು ಮುಟ್ಟುವವರೆಗೂ ಹಣೆ ಚಾಚಿ ನನ್ನ ಪಾದಕ್ಕೆ! ನಾನು ಸ್ವಲ್ಪ ತತ್ತರಿಸಿ ಹೋದೆ, ಆ ಅನರೀಕ್ಷಿತಕ್ಕೆ.

ನನ್ನ ಅಚ್ಚರಿ ವಿಸ್ಮಯವಾಯಿತು. ಯೂರೋಪಿಯನ್ ಸಭ್ಯನೊಬ್ಬನು ಇಡೀ ದೇಹವನ್ನು ನೆಲಕ್ಕೆ ಚಾಚಿ, ಕೈಮುಗಿದು, ಕಾಲುಮಟ್ಟುವಂತೆ ಅಡ್ಡಬಿದ್ದುದನ್ನು ನಾನು ಎಂದೂ ಕಂಡಿರಲಿಲ್ಲ, ಕೇಳಿಯೂ ಇರಲಿಲ್ಲ. ಅದರಲ್ಲಿಯೂ ಒಬ್ಬ ಸಾಮಾನ್ಯ ಕರಿಯ ಭಾರತೀಯನೊಬ್ಬಗೆ! ನನಗೆ ಅರ್ಥವಾಗದಿದ್ದರೂ ಏಕೊ ಏನೊ ಆನಂದವಾಯಿತು! ನೆಗೆದು ಎದ್ದು ನಿಂತ ಆತನ ಮುಖ ಅರಳಿದಂತೆಯೆ ನನ್ನ ಮುಖವೂ ಅರಳಿತು.

ಯಾರು? ಏನು? ಎತ್ತ? ಮೊದಲಾಗಿ ವಿಚಾರಿಸಿದೆ. ಆತ ಸಂಕ್ಷೇಪವಾಗಿ ಕೊಟ್ಟ ವಿವರದಿಂದ ಇನ್ನೇನಾಗದಿದ್ದರೂ ಆತನ ಅನಿರೀಕ್ಷಿತ ವರ್ತನೆ ಸ್ವಲ್ಪಮಟ್ಟಿಗೆ ಅರ್ಥವಾಯಿತು:

ತಾನು ಫ್ರಾನ್ಸ್ ದೇಶದವನೆಂದೂ, ಪ್ಯಾರಿಸ್ಸಿನ ಗ್ರೆಟ್ಸ್‌ನಿಂದ ಬರುತ್ತಿದ್ದೇನೆಂದೂ, ಅಲ್ಲಿಯ ಶ್ರೀರಾಮಕೃಷ್ಣ ವೇದಾಂತಿಕ ಕೇಂದ್ರದಿಂದ ಬಂದವನೆಂದೂ, ಸ್ವಾಮಿ ಸಿದ್ಧೇಶ್ವರಾನಂದಜಿಯವರ ಶಿಷ್ಯನೆಂದೂ ಪರಿಚಯಿಸಿದನು. ಹೆಸರು ಕೇಳಿದರೆ ಆತನು ತನ್ನ ಫ್ರೆಂಚ್ ಹೆಸರನ್ನು ಹೇಳಲಿಲ್ಲ; ಬದಲಾಗಿ “ರಾಖಾಲ್-ಬ್ರಹ್ಮಚಾರಿ ರಾಖಾಲ್!” ಎಂದನು. ನನ್ನ ಪ್ರಶ್ನೆ ಅರ್ಥವಾಗಲಿಲ್ಲವೋ ಏನೋ ಎಂದು ಭಾವಿಸಿ ಮತ್ತೆ ಸ್ಪಷ್ಟವಾಗಿ ವಿರಳವಾಗಿ ಪ್ರಶ್ನೆ ಕೇಳಿದೆ-ಹೆಸರೇನೆಂದು ಮತ್ತೆ ಅದೇ ಉತ್ತರ ಬಂತು “ರಾಖಾಲ್-ಬ್ರಹ್ಮಚಾರಿ ರಾಖಾಲ್!”

“ರಾಖಾಲ” ಎಂಬುದು ಬೃಂದಾವನದಲ್ಲಿ ಶ್ರೀಕೃಷ್ಣನ ದನಗಾಹಿ ಮಿತ್ರನೊಬ್ಬನ ಹೆಸರಂತೆ. ಆ ರಾಖಾಲನೆ ಶ್ರೀರಾಮಕೃಷ್ಣರ ಅವತಾರ ಕಾಲದಲ್ಲಿ ‘ಬ್ರಹ್ಮಾನಂದ’ರಾಗಿ ಬಂದಿದ್ದರೆಂದು ಶ್ರೀಗುರುಮಹಾರಾಜರ ಶಿಷ್ಯರೆಲ್ಲರ ನಂಬಿಕೆ. ಪರಮಹಂಸರೂ ಬ್ರಹ್ಮಾನಂದರನ್ನು ರಾಖಾಲ್ ಎಂದೇ ಕರೆಯುತ್ತಿದ್ದರಂತೆ. ಈ ಫ್ರೆಂಚ್ ಶಿಷ್ಯನಿಗೆ ಬಹುಶಃ ಸ್ವಾಮಿ ಸಿದ್ಧೇಶ್ವರಾನಂದರು ಆ ಹೆಸರನ್ನೇ ಕೊಟ್ಟಿರಬಹುದು ಎಂದು ಊಹಿಸಿ ಮುಂದೆ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ.

ಆತ ಬಂದ ಆ ದಿನದ ನನ್ನ ದಿನಚರಿಯಿಂದ ಒಂದು ದಿನದ ಹಾಳೆಯನ್ನು ಪ್ರತಿಯೆತ್ತಿ ಓದುಗರ ಕುತೂಹಲ ಸ್ವಾರಸ್ಯಕ್ಕಾಗಿ ಇಲ್ಲಿ ಕೊಡುತ್ತೇನೆ: ಬದುಕಿನ ಒಂದು ದಿನಕ್ಕೆ ‘ಚುಳುಕಿ’ ಹಾಕಿದಂತೆ: ಚುಳುಕಿ ಹಾಕುವುದು ಎಂದರೆ ಒಂದು ಹಲಸಿನ ಕಾಯಿ ಬೆಳೆದಿದೆಯೋ ಚಿಗುರಾಗಿದೆಯೋ ಹಣ್ಣಿಗೆ ಬಂದಿದೆಯೋ ಎಂದು ನೋಡುವುದಕ್ಕೆ, ಡಾಕ್ಟರು ‘ಬಯಾಪ್ಸಿಸ್’ತೆಗೆಯುವಂತೆ, ಒಂದು ಚೂರನ್ನು ಕತ್ತಿಮೂತಿಯಿಂದ ಕೊರೆದು ಕಿತ್ತು ನೋಡುತ್ತಾರೆ, ಮಲೆನಾಡಿನಲ್ಲಿ ಹಾಗೆ ಕೊರೆದು ಕೀಳುವುದಕ್ಕೆ ‘ಚುಳುಕಿ ಹಾಕುವುದು’ ಎಂದು ಹೇಳುತ್ತಾರೆ.

೧೯೭೧ನೆಯ ಏಪ್ರಿಲ್ ೨೬ನೆಯ ಸೋಮವಾರದ ದಿನಚರಿ;

“ಬೆಳಿಗ್ಗೆ ಐದೂವರೆಗೆ  ಎದ್ದು ಆರಕ್ಕೆ ಹೊರಟು ಮಾನಸಗಂಗೋತ್ರಿಯನ್ನು ಸುತ್ತಿ ಏಳಕ್ಕೆ ಬಂದೆ…ಪತ್ರಿಕೆಗಳಲ್ಲಿ: ಸೋವಿಯತ್ ದೇಶದ ಮೂರು ಜನ ಸೋಯೆಜ್ ಗಗನಯಾತ್ರಿಗಳು ತಮ್ಮ ಕೆಲಸ ಮುಗಿಸಿ ಭೂಮಿಗ ಇಳಿದರಂತೆ…. ಬಂಗ್ಲಾದೇಶದ ವಿಚಾರದಲ್ಲಿ ಪ್ರಪಂಚದ ಧರ್ಮಪ್ರಜ್ಞೆ ಎ‌ಚ್ಚತ್ತು ಕಾರ್ಯೋನ್ಮುಖವಾಗಿಲ್ಲ ಇನ್ನೂ. ಬರಿಯ ಬಾಯಿ ಸಹಾನುಭೂತಿ ತೋರಿಸುತ್ತಿದೆ….”ಅಗ್ನಿಹಂಸ’ ಪ್ರೂಫ್ ತಿದ್ದಿದೆ….‘ಜನಪ್ರಗತಿ’ಯಲ್ಲಿ “ಕುವೆಂಪು ನಿಂದೆಯ ಮೂರು ದಿನಗಳ ಸಾಹಿತ್ಯ ಸಮಾರೋಹ” ಎಂಬ ಶೀರ್ಷಿಕೆಯಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಸಾಹಿತ್ಯ ವಿಚಾರಗೋಷ್ಠಿಯ ವಿಚಾರ ಟೀಕೆ ಬಂದಿದೆ. ಸುಜನಾ ನನಗೆ ವರದಿ ಮಾಡಿದ್ದಂತೆಯೆ ಇದೆ. ಪಾಪ, ಆ ಗುಂಪಿಗೆ ಕುವೆಂಪು ಅವರ ಸರ್ವವ್ಯಾಪಿತ್ವ ತಮಗೆ ಏನೂ ಎಲ್ಲಿಯೂ ಜಾಗವೆ ಇಲ್ಲದಂತೆ ಹಬ್ಬಿಬಿಟ್ಟಿದೆಯಲ್ಲಾ ಎಂದು ಸಿಟ್ಟು, ಅಸೂಯೆ, ದ್ವೇಷ. ಪುರಂದರದಾಸರು ಹೇಳುವಂತೆ, ಹಂದಿಗಳಿರಬೇಕಷ್ಟೆ; ನಿಂದಕರು!….ದೇವರ ಮನೆಯಲ್ಲಿ ಪ್ರಾರ್ಥನೆ….ವಿಶ್ರಾಂತಿ ಮಂಚದಲ್ಲಿ ಹೇಮಿ ನಿದ್ರಿಸಿ ಹೋದಳು. ನಾನು ಮುಖಾವಲೋಕನದಿಂದಲೆ ತೃಪ್ತಿಪಟ್ಟೆ…ಹೇಮಿ ಹುಡುಗರೆಲ್ಲ ಜನತಾ ಬಜಾರಿಗೆ ಹೋಗಿದ್ದಾರೆ…ಏನಾಶ್ಚರ್ಯ! ಸಂಜೆ ಉದ್ಯಾನದಲ್ಲಿ ತಿರುಗುತ್ತಿದ್ದೆ. ಐರೋಪ್ಯ ಯುವಕನೊಬ್ಬ ಗೇಟ್ ಬಳಿ ಬಂದ. ಡಾ|| ಪುಟ್ಟಪ್ಪನವರನ್ನು ನೋಡಬೇಕಾಗಿತ್ತು ಎಂದ ಇಂಗ್ಲಿಷಿನಲ್ಲಿ! ನಾನೇ ಎಂದೆ. ಮುಖವರಳಿ ತನ್ನ ಪರಿಚಯ ಹೇಳಿದ. ನನ್ನ ಮುಖ ಅರಳಿತು. ಸ್ವಾಮಿ ಸಿದ್ಧೇಶ್ವರಾನಂದರ ಶಿಷ್ಯನಂತೆ! ಫ್ರೆಂಚರವನು, ರಾಖಾಲ್ ಎಂದು ಹೆಸರಂತೆ. ಪ್ಯಾರಿಸ್ಸಿನ ಆಶ್ರಮದಲ್ಲಿ ಬ್ರಹ್ಮಚಾರಿಯಂತೆ! ನನ್ನ ಕಾಲುಮುಟ್ಟಿ ನಮಿಸಿದ. ನಾಳೆ ಬೆಳಿಗ್ಗೆ ಒಂಭತ್ತುವರೆಗೆ ಬರತ್ತಾನಂತೆ. ಸ್ವಾಮಿ ಸಿದ್ಧೇಶ್ವರಾನಂದರ ಜೀವನಚರಿತ್ರೆ ಬರೆಯುವುದಕ್ಕೆ (ಫ್ರೆಂಚಿನಲ್ಲಿ) ಸಾಮಗ್ರಿ ಸಂಗ್ರಹಿಸುತ್ತಿದ್ದಾನಂತೆ….ರಾತ್ರಿ ಎಂಟೂವರೆಗೆ ಬೆಂಗಳೂರಿಂದ ವೆಂಕಟೇಶ, ಜಯ, ಲೀಲಾ, ಚಿನ್ಮಯೀ, ಅನಲಾ ಬಂದರು.”

ಮೇಲಿನ ಡೈರಿಗೆ ಒಂದೆರಡು ವಿವರಣೆ ಸೇರಿಸಿದರೆ ಹೆಚ್ಚು ಅರ್ಥಪೂರ್ಣವಾಗಬಹುದು. ಆ ಒಂದೇ ದಿದ ದಿನಚರಿ ನನ್ನ ಪ್ರಜ್ಞೆ ಜಾಗತಿಕ, ಭಾರತೀಯ, ಕರ್ಣಾಟಕ, ಸಾಂಸಾರಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೇಗೆ ಆಸಕ್ತವಾಗಿ ವ್ಯವಹರಿಸುತ್ತಿತ್ತು ಎಂಬುದನ್ನು ತೋರಿಸುತ್ತದೆ. ಬೆಂಗಳೂರು ವಿಶ್ವವಿದ್ಯಾನಿಲಯ ಏರ್ಪಡಿಸಿದ್ದ ಸಾಹಿತ್ಯ ವಿಚಾರಗೋಷ್ಠಿಯಲ್ಲಿ ನವ್ಯ ನಾಮಕ ವಿಮರ್ಶಕರು ಕುವೆಂಪು ಸಾಹಿತ್ಯವನ್ನೆಲ್ಲ ಅಲ್ಲಗಳೆಯುವ ಕೆಲಸದಲ್ಲಿ ಮಾತ್ರ ಹೇಗೆ ಆಸಕ್ತರಾಗಿದ್ದರು ಎಂಬುದನ್ನು ಹೇಳುತ್ತದೆ. ರಾತ್ರಿ ನಮ್ಮ ಮನೆಗೆ ಬಂದವರು ಎಂದರೆ–ಶ್ರೀಯುತ ಎನ್.ಡಿ. ವೆಂಕಟೇಶ್ ಬೆಂಗಳೂರಿನ ಹೈಕೋರ್ಟಿನ ನ್ಯಾಯಮೂರ್ತಿ ಮತ್ತು ಅವರ ಕುಟುಂಬದವರು, ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಡಾ||ಚಿನ್ನಯ್ಯನವರ ಕುಟುಂಬ ಮತ್ತು ಮಕ್ಕಳು.

ನಾಳೆ ಒಂಭತ್ತುವರೆಗೆ ಬರುತ್ತೇನೆ ಎಂದು ಬೀಳ್ಕೊಟ್ಟು ಶ್ರೀ ರಾಖಾಲ್ ಮಹಾರಾಜ್ ಅವರು ಮರುದಿನ ಬಂದರು.

೧೯೭೧ನೆ ಏಪ್ರಿಲ್ ೨೭ನೆಯ ಮಂಗಳವಾರದ ದಿನಚರಿ:

“ಬೆಳಿಗ್ಗೆ ಐದೂವರೆಗೆ ಎದ್ದು ಐದೂಮುಕ್ಕಾಲಿಗೆ ಹೊರಟು ಮಾನಸಗಂಗೋತ್ರಿಯನ್ನು ಸುತ್ತಿ ೭ಕ್ಕೆ ಬಂದೆ. ರಾತ್ರಿ ಭಾರೀ ಮಳೆ ಬಿತ್ತು. ಕಿಟಕಿಯ ಬಳಿ ಇಟ್ಟಿದ್ದ ಸಿದ್ಧೇಶ್ವರಾನಂದ ಸ್ವಾಮೀಜಿಯ ಫ್ರಾನ್ಸಿನಲ್ಲಿ ಪೂಜಾಮಂದಿರದಲ್ಲಿರುವ ಚಿತ್ರಪಟ ಗಾಳಿಗೆ ಉರುಳಿ ಬಿದ್ದು ಕನ್ನಡಿ ಪುಡಿಯಾಯಿತು. ಏನಿದು? ಇವೊತ್ತು ಒಂಭತ್ತೂವರೆ ಗಂಟೆಗೆ ಬರುವ ಬ್ರಹ್ಮಚಾರಿ ರಾಖಾಲ್ ಅವರಿಗೆ ತೋರಿಸಬೇಕು ಎಂದಿದ್ದೆನಲ್ಲಾ? ಹೀಗೇಕಾಯಿತು?… ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆಯ  ಪಾಕ್‌ದೂತಾವಾಸ ಬಾಂಗ್ಲಾದೇಶದ ಸರ್ಕಾರಕ್ಕೆ ತನ್ನ ನಿಷ್ಠೆ ಘೋಷಿಸಿದೆಯಂತೆ! ಫ್ರಾನ್ಸಿನ ಬ್ರಹ್ಮಚಾರಿ ರಾಖಾಲ್ ಬಂದು ನನ್ನೊಡನೆ ಗೋಪಾಲ್ ಮಹಾರಾಜರ ವಿಚಾರ ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ತಿಳಿದುಕೊಂಡರು. ನಾನು ಮೊದಲು ಅವರನ್ನು ಸಂಧಿಸಿದ ಬಗೆಯನ್ನೂ ತಿಳಿದರು. ನನ್ನ ಕಾಯಿಲೆ; ಆಸ್ಪತ್ರೆಗೆ ಸಾಗಿಸಿದ್ದು; ಆಶ್ರಮಕ್ಕೆ ಒಯ್ದಿದ್ದು; ಜೋಗ್ ಭೇಟಿ, ಮೈಲಿಯಾಗಿದ್ದು, ವಿಶೇಷಾನುಭವಗಳು-ಎಲ್ಲ ಹೇಳಿದೆ. ನನ್ನ ‘ದೀಕ್ಷಾಯಾತ್ರೆ’ಯ ಇಂಗ್ಲಿಷ್ ಅನುವಾದ ತೆಗೆದುಕೊಂಡರು, ಟೈಪ್ ಮಾಡಿಕೊಳ್ಳಲೆಂದು. ಗೋಪಾಲ್ ಮಹಾರಾಜರು ಫ್ರಾನ್ಸಿನಿಂದ ನನಗೆ ಬರೆದಿದ್ದ ‘Personal confidential’ ಕಾಗದವನ್ನು ಓದಿದೆ. ರಿಕಾರ್ಡ್ ಮಾಡಿಕೊಂಡರು. ಮತ್ತು ಟೈಪುಮಾಡಿಕೊಳ್ಳಲು ತೆಗೆದುಕೊಂಡು ಹೋಗಿದ್ದಾರೆ. ನಾಳೆ ಮತ್ತೆ ಬರುತ್ತಾರೆ. ವೆಂಕಟೇಶ ಕೇಶವ ಹೆಗ್ಗಡೆಯವರನ್ನು ಪರಿಚಯ ಮಾಡಿಕೊಟ್ಟೆ. ವೆಂಕಟೇಶನೆ ತನ್ನ ಕಾರಿನಲ್ಲಿ ಅವರನ್ನು ಇಳಿದುಕೊಂಡಿದ್ದ ಕಲ್ಪನಾ ಲಾಡ್ಜ್‌ಗೆ ಬಿಟ್ಟು ಬಂದ…ಔತಣದೂಟ…ಸಂಜೆ ಭಾರೀಮಳೆ ಬಿತ್ತು. ಜಯ ಮೊದಲಾದವರು ವೇದಾಂತ ಕಾಲೇಜಿಗೆ (ಶ್ರೀರಾಮಕೃಷ್ಣ ವಿದ್ಯಾಶಾಲೆಯ ಬಳಿ) ಹೋಗಿ ನೋಡಿಕೊಂಡು ಬಂದರು…ರಾತ್ರಿ ಊಟಕ್ಕೆ ಹೆಗ್ಗಡೆ ಮನೆಗೆ ಹೋಗಿದ್ದೆ. ವೆಂಕಟೇಶ, ಹೆಗ್ಗಡೆಯವರಿಗೆ ಸ್ವಾಮಿ ಸಿದ್ಧೇಶ್ವರಾನಂದರು ನನ್ನನ್ನು ಆಶ್ರಮಕ್ಕೆ ಕರೆದುಕೊಂಡು ಹೋದ ಸಂದರ್ಭವನ್ನು ಕುರಿತು ವಿವರ ಹೇಳಿದೆ…ದೇವರ ಮನೆಯಲ್ಲಿ ಪ್ರಾರ್ಥನೆ…”

ಬ್ರಹ್ಮಚಾರಿ ರಾಖಾಲ್ ಅವರು ತಮ್ಮೊಡನೆ ಕ್ಯಾಮರಾ ಮತ್ತು ಟ್ರಾ‌ನ್ಸಿಸ್ಟರ್ ರಿಕಾರ್ಡರ್ ಮುಂತಾದುವುಗಳನ್ನೆಲ್ಲ ತಂದಿದ್ದರು.

೧೯೭೧ನೆಯ ಏಪ್ರಿಲ್ ೨೮ನೆಯ ಬುಧವಾರದ ದಿನಚರಿ:

ಬೆಳಿಗ್ಗೆ ಐದೂವರೆಗೆ ಎದ್ದು ಆರಕ್ಕೆ ಹೊರಟು ಮಾನಸಗಂಗೋತ್ರಿಯನ್ನು ಸುತ್ತಿ ಏಳೂವರೆಗೆ ಬಂದೆ….ವೆಂಕಟೇಶ ಹಾ.ಮಾ.ನಾ. ಅವರನ್ನು ನೋಡಲು ಹೋದ, ಹೆಗ್ಗಡೆಜತೆ ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ಅಲ್ಲಿಯ ಜಾನಪದ ವಸ್ತುಸಂಗ್ರಹಾಲಯವನ್ನು ನೋಡಿ ಹನ್ನೆರಡು ಗಂಟೆಗೆ ಹಿಂತಿರುಗಿದರು…ಫ್ರಾನ್ಸಿನ ಬ್ರಹ್ಮಚಾರಿ ರಾಖಾಲ್ ಒಂಭತ್ತೂವರೆಗೆ ಬಂದರು. ಗೋಪಾಲ್ ಮಹಾರಾಜರ ಕೆಲವು ದೀರ್ಘಪತ್ರಗಳನ್ನು ನೋಡಿ ಓದಿದೆವು. ಅವರ ವಿಚಾರ ಇನ್ನಷ್ಟು ವಿಷಯ ಹೇಳಿದೆ. ಕಡೆಗೆ ನಾನೇ ನನ್ನ ಕಾರಿನಲ್ಲಿ ಅವರನ್ನು ಆಶ್ರಮಕ್ಕೆ ಕರೆದೊಯ್ದೆ. ಸೋಮನಾಥಾನಂದರ ಪರಿಚಯ ಮಾಡಿಸಿದೆ. ಅವರಿಂದ ಗೋಪಾಲ್ ಮಹಾರಾಜರ ವಿಷಯ ತಿಳಿಯಲು ಐದು ಗಂಟೆಗೆ ಬರಹೇಳಿದರು ಆತನಿಗೆ. ಅಲ್ಲಿಂದ ಕಪಿಲಾನಂದರು ನಮ್ಮನ್ನು ಶಾಂಭವಾನಂದರಲ್ಲಿಗೆ ಕರೆದೊಯ್ದರು. (ಸ್ವಾಮಿ ಶಾಂಭವಾನಂದರು ಅಸ್ವಸ್ಥರಾಗಿ ರುಗ್ಣಶಯ್ಯೆ ಹಿಡಿದುಬಿಟ್ಟಿದ್ದರು, ಇನ್ನು ಅತ್ಯಲ್ಪ ಕಾಲದಲ್ಲಿಯೆ ಗುರುಮಹಾರಾಜರ ಪಾದಾರವಿಂದದಲ್ಲಿ ಐಕ್ಯರಾಗಲು ಸಿದ್ಧರಾಗಿ. ಅವರು ತುಂಬ ಬಲಿಷ್ಠರೂ ಆರೋಗ್ಯಶಾಲಿಗಳೂ ಆದ ವ್ಯಕ್ತಿಯಾಗಿದ್ದರೂ ಕೊಡಗು ಮೈಸೂರುಗಳಲ್ಲಿ ಶ್ರೀ ಗುರುಮಹಾರಾಜರ ಮಹಾಸಂಸ್ಥೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ಹಗಲಿರುಳೂ ತಮ್ಮ ಬಾಳನ್ನು ತೇದು ಅಯುಃ ಪ್ರಮಾಣವನ್ನು ಬಹುಬೇಗ ನಿವೇದಿಸಿಬಿಟ್ಟರು!) ನಾನು ಬ್ರಹ್ಮಚಾರಿ ರಾಖಾಲ್ ಅವರ ಪರಿಚಯ ಹೇಳಿದೆ. (ಅವರು ತುಂಬ ಕೃಶರಾಗಿ ಏಳಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಮಾತನಾಡುವುದೂ ಕಷ್ಟವಾಗುತ್ತಿತ್ತು. ಮಾತೂ ತುಂಬ ಕೆಳದನಿಯಲ್ಲಿರುತ್ತಿತು. ಹಾಗಿದ್ದರೂ ಬಂದವರು ಫ್ರಾನ್ಸಿನವರೆಂದೂ ಸ್ವಾಮಿ ಸಿದ್ಧೇಶ್ವರಾನಂದಜಿಯ ಶಿಷ್ಯರೆಂದೂ ಅವರ ಶಿಷ್ಯರಾದ ಬ್ರಹ್ಮಚಾರಿಯೆಂದೂ ತಿಳಿದ ಕೂಡಲೆ ತಮ್ಮ ನಿಃಶಕ್ತಿ ಅಸಸ್ಥತೆಗಳನ್ನೆಲ್ಲ ಲೆಕ್ಕಿಸದೆ ಕೊಡಹಿಬಿಟ್ಟು ಹೊಸ ಬಲ ಪಡೆದು ಗುಣವಾದವರಂತೆ ಎದ್ದೇ ಕುಳಿತುಬಿಟ್ಟರು, ನಾವೆಲ್ಲ ಬೆಕ್ಕಸಗೊಳ್ಳುವಂತೆ!) ಅವರು ನಿಧಾನವಾಗಿ ಎದ್ದು ಕುಳಿತರು. ರಾಖಾಲ್ ಅವರು ಸ್ವಾಮಿ ಬ್ರಹ್ಮಾನಂದರ ವಿಷಯ ಪ್ರಸ್ತಾಪಿಸಿ ಪ್ರಶ್ನೆ ಕೇಳಲು ಸ್ವಾಮಿ ಶಾಂಭವಾನಂದರು ತಮ್ಮ ರುಗ್ಣಾವಸ್ಥೆಯನ್ನೂ ಸಂಪೂರ್ಣವಾಗಿ ಮರೆತು, ಸುಮಾರು ಒಂದು ಗಂಟೆಯ ಹೊತ್ತು, ಮೆಲುದನಿಯಲ್ಲಿಯೆ ಮಾತಾಡಿಬಿಟ್ಟರು. ರಾಖಾಲ್ ಅದನ್ನೆಲ್ಲ ಟೇಪ್ ರಿಕಾರ್ಡ್ ಮಾಡಿಕೊಂಡರು. ಅವರನ್ನು ಆಶ್ರಮದ ಕಾರನ್ನೆ ಕೊಟ್ಟು ‘ಕಲ್ಪನಾ ಲಾಡ್ಜ್’ಗೆ ಕಳಿಸಿದರು. ಮತ್ತೆ ನಾಲ್ಕು ಗಂಟೆಗೆ ಹೋಗಿ ಕರೆತರಲು ಡ್ರೈವರ್ ಜಾನ್‌ಗೆ ಹೇಳಿದರು. ವೇದಾಂತ ಕಾಲೇಜನ್ನೂ ನೋಡಿ ಹೋಗುವಂತೆ ತಿಳಿಸಿದರು….ಸಂಜೆ ಭಾರೀ ಮಳೆಗಾಳಿ. ಹೆಗ್ಗಡೆ, ವೆಂಕಟೇಶ ಮಾನಸಗಂಗೋತ್ರಿ ಕಡೆ ವಾಕ್ ಹೋದವರು ಗಾಳಿಮಳೆಗೆ ಸಿಕ್ಕಿ ನೆಂದು ಹೋದರು. ರಾತ್ರಿ ದೀಪ ಕೆಟ್ಟುಹೋಗಿ ತುಂಬ ಫಜೀತಿಯಾಯಿತು. ನಾಳೆ ಬೆಳಿಗ್ಗೆ ಹೊರಡಲು ಅತಿಥಿಗಳು ಗಂಟುಮೂಟೆ ಕಟ್ಟಿದರು….ದೇವರ ಮನೆಯಲ್ಲಿ ಪ್ರಾರ್ಥನೆ.”

ಏಪ್ರಿಲ್ ೨೯ನೆಯ ಗುರುವಾರ ೧೯೭೧ರ ದಿನಚರಿ

“ರಾತ್ರಿ ದೀಪ ಬರಲೇ ಇಲ್ಲ. (ನಾನು ಯಾವಾಗಲೂ ಮಾಡುತ್ತಿದ್ದಂತೆ ೫ ಗಂಟೆಗೆ) ಡ್ರಮ್ಮಿಗೆ ಸ್ವಿಚ್ ಹಾಕಲಿಲ್ಲ (ನೀರು ಕಾಯಿಸಲು). ಬೆಳಿಗ್ಗೆ ೫ಕ್ಕೆ ಎದ್ದೆ. ವೆಂಕಟೇಶನೂ ಆಗಲೆ ಎದ್ದ. ಸರಿ, ಲಾಟೀನು, ಟಾರ್ಚ್, ಮೊಂಬತ್ತಿಗಳ ನೆರವಿನಿಂದ ಕೆಲಸ ಪ್ರಾರಂಭ. ಹೇಮಿ ಸೀಮೆಎಣ್ಣೆ ಒಲೆ ಹೊತ್ತಿಸಿ ಕಾಫಿ ತಿಂಡಿ ಮಾಡಿದಳು. ನಾನು ಒಂದು ಸಣ್ಣ ಸುತ್ತು ಸಂಚಾರ ಹೋಗಿ ಬಂದೆ. ಅವರೆಲ್ಲ ಬೆಳಿಗ್ಗೆ ಏಳು ಗಂಟೆಗೆ ಎರಡೂ ಕಾರುಗಳಲ್ಲಿ (ಅಂದರೆ ವೆಂಕಟೇಶನ ಕಾರಿನೊಡನೆ ಹೆಗ್ಗಡೆ ಕಾರೂ ಎಂದು  ತೋರುತ್ತದೆ.) ಹೊರಟರು. ಬೆಂಗಳೂರಿನಿಂದ ತಂದಿದ್ದ ನನ್ನ ವರ್ಣಚಿತ್ರ ಮರೆತು ಬಿಟ್ಟು ಹೋಗಿದ್ದಾರೆ….ರಾತ್ರಿ ಮಳೆಗಾಳಿಗೆ ನಮ್ಮ ನುಗ್ಗಿಮರ ಮುರಿದು ಷೆಡ್ಡಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಲ್ನಾರು ಷೀಟು ಒಡೆದಂತೆ ತೋರಲಿಲ್ಲ….ಹಾಲು ಕರೆಯುವ ಹೆಂಗಸಿನ ಮಗ ನುಗ್ಗಿಮರ ಕಡಿದು ಸೌದೆ ಮಾಡಿಕೊಳ್ಳುತ್ತಿದ್ದಾನೆ…ಫ್ರೆಂಚ್ ಬ್ರಹ್ಮಚಾರಿ ರಾಖಾಲ್ ಅವರು ಬಂದು ಸ್ವಾಮಿ ಸಿದ್ಧೇಶ್ವರಾನಂದರ ಮತ್ತೊಂದು ಕಾಗದ ತೆಗೆದುಕೊಂಡು ಹೋದರು. ತಮ್ಮ ವೈಯಕ್ತಿಕ ಜೀವನದ ಪೂರ್ವಪರಿಚಯ ಕೇಳಿದಾಗ ಹೇಳಿದರು….ಅವರು ತಮ್ಮ ಇಪ್ಪತ್ತಯ್ದನೆಯ ವರ್ಷದಲ್ಲಿ ಪ್ಯಾರಿಸ್ಸಿನಲ್ಲಿ ಸಿನಿಮಾ ಡೈರೆಕ್ಟರ್ ಮತ್ತು ಆರ್ಟ್ ಡೈರೆಕ್ಟರ್ ಏನೇನೋ ಜವಾಬ್ದಾರಿ ಕೆಲಸ ಮಡುತ್ತಿದ್ದರಂತೆ. (ಚೆನ್ನಾಗಿ ಸಂಪಾದಿಸಿ ಶ್ರೀಮಂತ ಜೀವನ ನಡೆಸುತ್ತಿದ್ದರಂತೆ.) ಒಂದು ಪುಸ್ತಕದಲ್ಲಿದ್ದ  ಸ್ವಾಮಿ ವಿವೇಕಾನಂದರ ‘ಕೋಟೇಶನ್’ಗಳಿಂದ ಪ್ರಭಾವಿತರಾಗಿ, ವಿವೇಕಾನಂದರ ಇತರ ಕೃತಿಗಳನ್ನೂ ಓದಿ, ಸ್ವಾಮಿ ಸಿದ್ಧೇಶ್ವರಾನಂದರು ಅಲ್ಲಿಗೆ ಬಂದಮೇಲೆ ಅವರ ಭಾಷಣಗಳನ್ನು ಕೇಳಿ, ತಮ್ಮ ಬದುಕಿನ ದಿಕ್ಕನ್ನೆ ಬದಲಾಯಿಸಿದರಂತೆ….ನನ್ನ, ಹೇಮಿಯ ಮತ್ತು ತಾರಿಣಿಯ (ಬಣ್ಣದ) ಫೋಟೊ ತೆಗೆದುಕೊಂಡರು. (ಅವರು ಎರಡುಮೂರು ದಿನಗಳಲ್ಲಿ ನಮ್ಮೊಡನೆ ಸಲುಗೆಯಿಂದಿದ್ದು ಶ್ರೀಗುರುಮಹಾರಾಜರ ಭಕ್ತರಾಗಿ ನಮ್ಮ  ವಿಶ್ವಾಸ ಗೌರವಗಳಿಗೆ ಪಾತ್ರರಾದುದರಿಂದ ಅವರನ್ನು ನಮ್ಮ ಆತ್ಮೀಯರನ್ನಾಗಿ ಭಾವಿಸಿ, ಅನ್ಯರಾರಿಗೂ ಪ್ರವೇಶಿಸಲು ಬಿಡದಿದ್ದರೂ, ಅವರಿಗೆ ದೇವರ ಮನೆಗೆ ಹೋಗಿ ಗುರುಮಹಾರಾಜ್, ಸ್ವಾಮಿಜಿ, ಶ್ರೀಮಾತೆ ಮತ್ತು ಸ್ವಾಮಿ ಶಿವಾನಂದರನ್ನು ದರ್ಶಿಸಿ ನಮಸ್ಕರಿಸಲು ಅವಕಾಶ ಮಾಡಿಕೊಟ್ಟೆವು. ಅವರೂ ತುಂಬ ಭಕ್ತಿಯಿಂದ ದೇವರ ಮನೆಗೆ ಹೋಗಿ ದೀರ್ಘ ದಂಡ ಪ್ರಣಾಮಮಾಡಿ ಅಡ್ಡಬಿದ್ದು, ಬಹಳ ಹೊತ್ತು ಹಾಗೆಯೆ ಇದ್ದರು. ಮತ್ತೆ ಎದ್ದು ನಿಂತು, ಸ್ಪಷ್ಟವಾಗಿ ಅಸ್ಖಲಿತವಾಗಿ ನಾವು(ಎಂದರೆ ದಕ್ಷಿಣದವರು) ಉಚ್ಚರಿಸುವಂತೆಯೆ ಸಂಸ್ಕೃತದ ಮಂತ್ರಗಳನ್ನೂ ಸ್ತೋತ್ರಗಳನ್ನು ಹೇಳುತ್ತಾ ಪ್ರಾರ್ಥಿಸತೊಡಗಿದರು. ನಾವೆಲ್ಲ ನಿಂತು ಆಶ್ಚರ್ಯಚಕಿತರಾದೆವು. ಕೊನೆಯಲ್ಲಿ ಒಂದು ಸಂಸ್ಕೃತ ಭಾಷೆಯ ‘ಹೇ ರಾಮಕೃಷ್ಣ ತ್ವಯೀ ಭಕ್ತಿಹೀನೇ ಕೃಪಾ ಕಟಾಕ್ಷಂ ಕುರು ದೇವ ನಿತ್ಯಂ’ ಎಂದು ಕೊನೆಯಾಗುವ ಭಕ್ತಿಸ್ತೋತ್ರನ್ನು ರಾಗವಾಗಿ ನಮ್ಮಂತೆಯೇ ಅದ್ಭುತವಾಗಿ ಹಾಡಿದರು. ಸುಮಾರು ಹೊತ್ತು! ಅದನ್ನೆಲ್ಲ ನೋಡಿ ನನಗೆ ವಿಸ್ಮಯವೇ ಆಯಿತು. ಆಮೇಲೆ ಅವರನ್ನೆ ಕೇಳಿದೆ ‘ಸಾಧಾರಣವಾಗಿ ಯಾವ ಪಾಶ್ಚಾತ್ಯನೂ ಸಂಸ್ಕೃತವನ್ನಾಗಲಿ ಅಥವಾ ಇತರ ಭಾರತಿಯ ಭಾಷೆಗಳನ್ನಾಗಲಿ ನಾವು ಉಚ್ಚರಿಸುವಂತೆ ಉಚ್ಚರಿಸಿದ್ದನ್ನು ನಾನು ಇದುವರೆಗೂ ಕೇಳಿರಲಿಲ್ಲ. ನೀವು ಮಾತ್ರ ನಮ್ಮನ್ನೂ ಮೀರಿಸುವಂತೆ ತುಂಬ ಸೊಗಸಾಗಿ ಶಾಸ್ತ್ರೀಯವಾಗಿ ಪಠಿಸುತ್ತೀರಲ್ಲಾ? ಅದು ಹೇಗೆ ಸಾಧ್ಯವಾಯಿತು? ಎಂದರು. ಅದಕ್ಕೆ ಅವರು ಹೇಳಿದರು ‘ನಾನು’ ‘ಅಷ್ಟಾವಕ್ರಸಂಹಿತೆ’ಯ ಮೇಲೆ ಒಂದು ಥೀಸಿಸ್ ಬರೆದು ನಮ್ಮ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದೆ. ಆ ಸಂದರ್ಭದಲ್ಲಿ ಸ್ವಾಮಿ ಸಿದ್ಧೇಶ್ವರಾನಂರು ನೀನು ನಮ್ಮ ಭಾಷೆಯನ್ನು ಉಚ್ಚರಿಸಲು ಹೋಗುವುದಾದರೆ ನಮ್ಮಂತೆಯೆ ಉಚ್ಚರಿಸಬೇಕು ಇಲ್ಲದಿದ್ದರೆ ಆ ತಂಟೆಗೆ ಹೋಗಬೇಡ’ ಎಂದರು. ಅಂದಿನಿಂದ ನಾನು ಸಾಧನೆ ಮಾಡಿ ಹಾಗೆಯೆ ಉಚ್ಚರಿಸುವುದನ್ನು ಅಭ್ಯಾಸಮಾಡಿದೆ.) ದೇವರಮನೆಯಲ್ಲಿ ನಿಂತೇ ಮಂತ್ರ ಪ್ರಾರ್ಥನೆ ಮಾಡಿ ಹಾಡಿ ಸಾಷ್ಟಾಂಗ ಮಾಡಿದರು. ಆಶ್ರಮಕ್ಕೆ ಕಾರಿನಲ್ಲಿ ಬಿಟ್ಟುಬಂದೆ. ಮತ್ತೆ ಶನಿವಾರ (೧-೫-೧೯೭೧ ಬರುತ್ತಾರಂತೆ….ನುಗ್ಗಿಮರ ಬಿದ್ದು, ಭಾರಕ್ಕೆ ವಾಲಿದ್ದ ಬಟರ‍್ಫ್ರೂಟ್ ಗಿಡವನ್ನು ಹಗ್ಗದಿಂದ ಎಳೆದು ಮಾದಯ್ಯನ ಕೈಲಿ ಕಟ್ಟಿಸಿದೆ. ದೇವರ ಮನೆಯಲ್ಲಿ ನಾನು ಹೇಮಿ ಪ್ರಾರ್ಥನೆ…ಗುರುಸ್ತುತಿ…ದೇವಿ ಸ್ತುತಿ.

ಮತ್ತೆ ಶನಿವಾರ (೧-೫-೧೯೭೧) ಅವರು ಮಾತುಕೊಟ್ಟಂತೆ ರಖಾಲ್ ಮಹಾರಾಜ್ ಬಂದರು. ಗೋಪಾಲ್ ಮಹಾರಾಜರ ಅಂದರೆ ಸ್ವಾಮಿ ಸಿದ್ಧೇಶ್ವರಾನಂದರ ತಮ್ಮ ಶ್ರೀಯುತ ಮಾರಾರ್ ಎಂಬುವರು ತ್ರಿಚೂರಿನಿಂದ ಸ್ವಾಮಿ ಈಶ್ವರಾನಂದಜಿಯರ ಕೈಲಿ ನನಗೆ ಕಳಿಸಿದ್ದು, ನನಗೆ (ಕಾಗದ ರೂಪದಲ್ಲಿ) ಬರೆದಿದ್ದ ಅವರ (ಸ್ವಾಮಿ ಸಿದ್ಧೇಶ್ವರಾನಂದರ) ಪೂರ್ವಾಶ್ರಮದ ವಿಚಾರದ ದಫ್ತರವನ್ನು ರಾಖಾಲ್ ತೆಗೆದುಕೊಂಡರು. ಇವೊತ್ತು (ಸ್ವಾಮಿ ಸಿದ್ಧೇಶ್ವರಾನಂದರ ತಮ್ಮನಿಂದ ವಿಷಯ ಸಂಗ್ರಹಿಸಲು) ತ್ರಿಚೂರಿಗೆ ಹೋಗಿ ಅಲ್ಲಿ ಕೆಲವು ದಿನಗಳಿದ್ದು, ಮತ್ತೆ ಬೆಂಗಳೂರಿಗೆ ಹೋಗುತ್ತಾರಂತೆ. ಅಲ್ಲಿಂದ ಅದನ್ನೆಲ್ಲ ಟೈಪು ಮಾಡಿಕೊಂಡು ಮೂಲವನ್ನೆಲ್ಲ ಕಳಿಸುತ್ತಾರಂತೆ.

ನಾನು ಕವಿ ಎಂಬುದನ್ನು ತಿಳಿದು ನನ್ನ ಕೆಲವು ಕನ್ನಡ ಭಾವಗೀತೆಗಳನ್ನು ತಮ್ಮ ಟ್ರಾನ್ಸಿಸ್ಟರಿನಲ್ಲಿ ರಿಕಾರ್ಡ್ ಮಾಡಿಕೊಂಡು ಫ್ರಾನ್ಸಿನಲ್ಲಿ ಪ್ಲೇಮಾಡಲು ಇಚ್ಛಿಸಿದರು. ನನ್ನ ಮಗಳು ತಾರಿಣಿ‘ಬಾ, ಶ್ರೀಗುರುದೇವನೆ ಬಾ’‘ಅಂತರತಮ ನೀ ಗುರು’‘ನಿನ್ನಡಿದಾವರೆಯಲಿ ಹೂ ಕುಡಿಯುವ ಮರಿದುಂಬಿಯು ನಾ’ ಮುಂತಾದವುಗಳನ್ನು ಹಾಡಿದ್ದನ್ನು ರಿಕಾರ್ಡ್ ಮಾಡಿಕೊಂಡರು. ಮತ್ತೆ ತಾರಿಣಿ ವೀಣೆ ಬಾರಿಸಿದ್ದನ್ನೂ ರಿಕಾರ್ಡ್ ಮಾಡಿಕೊಂಡರು. ಜೊತೆಗೆ ನನ್ನ ಕೆಲವು ಸಾನೆಟ್ಟುಗಳ ಇಂಗ್ಲಿಷ್ ಭಾಷಾಂತರಗಳನ್ನೂ ತೆಗೆದುಕೊಂಡರು (ಶ್ರೀ ಟಿ.ಎನ್.ಶಾಮರಾಯರ ಭಾಷಾಂತರಗಳು). ಅತ್ಯಂತ ಆದರದಿಂದ ಬಹುಕಾಲದ ಬಂಧುಗಳನ್ನು ಬೀಳುಕೊಡುವಂತೆ ನಮ್ಮನ್ನೆಲ್ಲ ನಮಸ್ಕರಿಸಿ ಬೀಳ್ಕೊಂಡರು.

ಅವರು ತ್ರಿಚೂರಿನಲ್ಲಿ ಕೆಲದಿನಗಳಿದ್ದು, ಅಲ್ಲಿಂದ ಬೆಂಗಳೂರಿಗೆ ಬಂದು, ಮಾತು ಕೊಟ್ಟಿದ್ದಂತೆ ನಾನು ಕೊಟ್ಟಿದ್ದ ಕಾಗದ ದಫ್ತರಗಳನ್ನೆಲ್ಲ ಟೈಪು ಮಾಡಿಕೊಂಡು, ಮೂಲಗಳನ್ನೆಲ್ಲ ಅಂಚೆಯಲ್ಲಿ ರಿಜಿಸ್ಟರ್ ಮಾಡಿ ಕಳಿಸಿದರು.

ಸುಮಾರು ಆರು ತಿಂಗಳ ಮೇಲೆ ಅವರು ಪ್ಯಾರಿಸ್ಸಿನಿಂದ ಒಂದು ಕಾಗದ ಬರೆದರು. ಅದರೊಡನೆ ಅವರು ಮೈಸೂರಿನಲ್ಲಿ ತೆಗೆದುಕೊಂಡಿದ್ದ ನನ್ನ, ತಾರಿಣಿಯ ಮತ್ತು ಹೇಮಾವತಿಯ ಬಣ್ಣದ ಫೋಟೊಗಳನ್ನು ಕಳಿಸಿದ್ದರು. ಅವರ ಕಾಗದ ಇಂಗ್ಲೀಷಿನಲ್ಲಿದೆ. ತಾವು ಭಾರತಕ್ಕೆ ಬಂದಿದ್ದರ ಉದ್ದೇಶ ತಾವು ನಿರೀಕ್ಷಿಸಿದಷ್ಟು ಸಫಲವಾಗಲಿಲ್ಲ. ಎಂದು ವಿಷಾದಿಸಿದಂತಿದೆ:­­

So far as reminiescnces about Swami are concerned the stay in India was a failure. So, in order to recover, can you please write some ten or twenty pages about the days at Mysore? Otherewise I must avoid this very important chapter. What do you think about it? Very soon you receive photos taken in your house.

For you, for your dearest faminly, please accept my warmest wishes for this new year. (ಅವರು ಜನವರಿ ತಿಂಗಳ ಪ್ರಾರಂಭದಲ್ಲಿ ಕಾಗದ ಬರೆದಿದ್ದು.)

with love and respect.
Rakhal.

I hope you received in due course the registered letters containing pagis written by Sri K.N.Marar.(Sent from Trichur 28th of March 1971)

ಕಾಗದದ ಜೊತೆಯಲ್ಲಿ ಒಂದು ಸಚಿತ್ರ ಗ್ರಿಟೀಂಗ್ ಕಾರ್ಡು ಕಳಿಸಿ ಅದರಲ್ಲಿರುವ ಫ್ರೆಂಚ್ ಭಾಷೆಯ ಚಿತ್ರಾಕ್ಷರ ಲಿಖಿತಕ್ಕೆ ಇಂಗ್ಲಿಷ್ ಅನುವಾದ ಕಳಿಸಿದ್ದಾರೆ. ಸ್ವಾಮಿವಿವೇಕಾನಂದರ ಒಂದು ಪ್ರಸಿದ್ಧ ಉಕ್ತಿ: “Religion is the manifestation of Divinity already in man.”

ನಾನು ಅವರಿಗೆ ಸ್ವಾಮಿ ಸಿದ್ಧೇಶ್ವರಾನಂದರ ವಿಚಾರವಾಗಿ ಏನನ್ನೂ ಬರೆದು ಕಳಿಸಲಿಲ್ಲ. ನಾನು ಮುಂದೆ ಬರೆಯಲಿರುವ “ನೆನಪಿನ ದೋಣಿಯಲ್ಲಿ” ಮಾತ್ರ ನನಗೆ ನೆನಪಿರುವಷ್ಟನ್ನು ಬರೆಯಲಿದ್ದೇನೆ ಎಂದು ತಿಳಿಸಿದ್ದೆ. ತರುವಾಯ ಅವರಿಂದ ಕಾಗದಗಳೂ ಇಲ್ಲ; ಅವರು ಎಲ್ಲಿದ್ದಾರೆ ಏನಾದರೂ ಎಂಬುದೂ ಗೊತ್ತಿಲ್ಲ. ಮೊನ್ನೆಮೊನ್ನೆ ೧೮೦ರಲ್ಲಿ ತಮ್ಮ ಡಾಕ್ಟರೇಟ್ ಪ್ರಬಂಧದ ವಿಚಾರವಾಗಿ ಉಪನ್ಯಾಸಗಳನ್ನು ಕೊಡಲು ಆರು ತಿಂಗಳು ಪ್ಯಾರಿಸ್ಸಿಗೆ ಹೋಗಿದ್ದ ನನ್ನ ಮಗಳ ಯಜಮಾನರು ಡಾ||ಚಿದಾನಂದಗೌಡ ಅವರು ಪ್ಯಾರಿಸ್ಸಿನ ಗ್ರೆಟ್ಸ್ ಆಶ್ರಮಕ್ಕೆ ಹೋಗಿ, ನನ್ನ ಸಲಹೆಯಂತೆ, ಅಧ್ಯಕ್ಷರಾಗಿರುವ ಸ್ವಾಮಿ ಋತಜಾನಂದರೊಡನೆ ಬ್ರಹ್ಮಚಾರಿ ರಾಖಾಲ್ ಮಹಾರಾಜರ ವಿಚಾರವಾಗಿ ಕೇಳಿದಾಗ ‘ಅವರು ಏನಾದರೋ ಎಲ್ಲಿದ್ದಾರೋ ಒಂದೂ ತಿಳಿಯದು’ ಎಂದರಂತೆ.

(೧೯೮೨ನೆಯ ಸೆಪ್ಟಂಬರ್ ಹದಿನೈದರಂದು ನನ್ನ ಜೀವನ ಸಂಗಾತಿ ಜೀವಿತೇಶ್ವರಿ ಪೂಜ್ಯ ದೇವಿ ಹೇಮಾವತಿ ದೇಹತ್ಯಾಗ ಮಾಡಿದ ಸುದ್ದಿ ಹೇಗೋ ಅವರಿಗೆ ತಿಳಿದು ಒಂದು ಅತ್ಯಂತ ಹೃದಯಸ್ಪರ್ಶಿ ಸಂತಾಪ ಸೂಚಕ ಪತ್ರ ಬರೆದಿದ್ದಾರೆ:)

* * *

ಸ್ವದೇಶದಲ್ಲಿದ್ದಾಗ ಎಂತೊ ಅಂತೆಯೆ ವಿದೇಶಕ್ಕೆ ಹೋದಮೇಲೂ ಸ್ವಾಮಿ ಸಿದ್ಧೇಶ್ವರಾನಂದರು ನನ್ನ ಅಂತರ್ಯ ಮತ್ತು ಬಾಹ್ಯ ಅಭ್ಯುದಯ ಶ್ರೇಯಸ್ಸುಗಳ ವಿಚಾರದಲ್ಲಿ ಅತ್ಯಂತ ಆಸಕ್ತರಾಗಿದ್ದರು. ನನ್ನ ಪ್ರಜ್ಞಾ ವಿಕಾಸಕ್ಕೂ ಮತ್ತು ಅದರ ವಿಸ್ತಾರಕ್ಕೂ ನೆರವಾಗಿ ಜ್ಞಾನದ ಹೊಸ ಹೊಸ ಆಯಾಮಗಳಿಗೂ ಪ್ರವೇಶದೊರಕಿಸಿ ಕೊಟ್ಟಿದ್ದಾರೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಮೂರು) ಒಂದು-ಮನಶ್ಯಾಸ್ತ್ರ ಸಂಬಂಧಿಯಾದುದು! ಎರಡು-ಜನ್ಮಾಂತರ ವಿಷಯಕವಾದದ್ದು! ಮೂರು-ಯು.ಎಫ್.ಓ. ಕುರಿತದ್ದು.

ಮನಶ್ಯಾಸ್ತ್ರ ಸಂಬಂಧಿಯಾದುದಕ್ಕೆ ಅವರಿಂದ ನನಗೆ ಪ್ರವೇಶ ದೊರೆತದ್ದು ಅವರು ಮೈಸೂರಿನಲ್ಲಿ ಇದ್ದಾಗಲೆ. ಬಿ.ಎ. ತರಗತಿಯಲ್ಲಿ ನಾನು ಮನಶ್ಯಾಸ್ತ್ರವನ್ನು ಒಂದು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದೆ. ಆ ಶಾಸ್ತ್ರದ ಪಠ್ಯವಿಷಯ ಮತ್ತು ಪಠ್ಯಗ್ರಂಥಗಳು ಕೂಡ ಎಲ್ಲವೂ ಪಾಶ್ಚಾತ್ಯದ್ದೆ ಆಗಿದ್ದರೂ ನಾನೂ ಆಶ್ರಮದಲ್ಲಿದ್ದುದರಿಂದ ಭಾರತೀಯ ತತ್ತ್ವಶಾಸ್ತ್ರದ ವಿಷಯದ ಅಧ್ಯಯನದ ಭಾಗವಾಗಿ ಯೋಗ ಶಾಸ್ತ್ರಭಾಗವನ್ನು ಪರಿಚಯ ಮಾಡಿಕೊಂಡಿದ್ದೆ. ಭೌತಶಾಸ್ತ್ರ ಮತ್ತು ಖಗೋಲಶಾಸ್ತ್ರಗಳ ಹೊಸ ವೈಜ್ಞಾನಿಕ ಆವಿಷ್ಕಾರಗಳಿಗೆ ನಾನು ಪ್ರವೇಶಿಸುವಂತೆ ಅವರು ಆಲಿವರ್ ಲಾಡ್ಜ್, ಜೀನ್ಸ್ ಮತ್ತು ಎಡ್ಡಿಂಗ್‌ಟನ್ ಆದಿ ಮಹಾವಿಜ್ಞಾನಿಗಳ ಕೃತಿಗಳನ್ನು ನನಗೆ ಪರಿಚಯಿಸಿದರು. ಹಾಗೆಯೆ ಸಾಹಿತ್ಯಕ್ಕೂ ಮತ್ತು ಮನೋವಿಜ್ಞಾನಕ್ಕೂ ನಿಕಟ ಸಂಬಂಧ ಕಲ್ಪಿಸುವಂತೆ ನೇರವಾಗಿ ಯುಂಗ್, ಅಡ್ಲರ್ ಮತ್ತು ಫ್ರಾಯ್ಡ್ ಅವರ ಕೃತಿಗಳನ್ನು ಓದಿಸಿದರು. ವಿದೇಶಕ್ಕೆ ಹೋದ ಮೇಲೆ ಆ ವಿಷಯಗಳಲ್ಲಿ ಆಗುತ್ತಿದ್ದ ಹೊಸಹೊಸ ಪ್ರಯೋಗ ಮತ್ತು ಆವಿಷ್ಕಾರಗಳ ಬಗೆಗೆ ಬರುವ ಹೊಸ ಪುಸ್ತಕಗಳನ್ನು ಕೊಂಡೂ ಕಳಿಸುತ್ತಿದ್ದರು.

ಹಾಗೆ ಅವರು ಕಳಿಸಿದ ಪುಸ್ತಕಗಳಲ್ಲಿ ಎರಡು ಮಹತ್ವದ ಮೊದಲ ಪುಸ್ತಕಗಳೆಂದರೆ ಒಂದು  ೩೧-೧೦-೧೯೫೬ರಲ್ಲಿ ಅವರು ಗ್ರೆಟ್ಸ್ ಇಂದ ಅಂಚೆಯಲ್ಲಿ ಕಳಿಸಿದ “The Search for Bridey Murphy” by Morey Bernstein ಅದಕ್ಕಿಂತಲೂ ತುಸು ಮುನ್ನ ೧೯೫೫ನೆಯ ಮಾರ್ಚಿ ೬ರಂದು ಕಳಿಸಿದ ಪುಸ್ತಕ “Flying Saucers Have Landed” by Desmond Leslie and George Adamski.

ಆ ಎರಡು ಪುಸ್ತಕಗಳು ನನ್ನ ಮಾನವ ಜ್ಞಾನ ಮಾತ್ರಮಯವಾಗಿದ್ದ ಪ್ರಜ್ಞೆಗೆ ಎರಡು ಹೊಸ ಲೋಕಗಳನ್ನೆ ತೆರೆದು ವಿಸ್ಮಯಗೊಳಿಸಿದುವು. ಒಂದು-Flying Saucers ಭೌತ ಜಗತ್ತಿನ ವಿಸ್ಮಯ, ವೈವಿಧ್ಯ ವಿಸ್ತಾರಗಳಿಗೆ. ಮತ್ತೊಂದು-The Search for Bridey Murphy ಆತ್ಮ ಜಗತ್ತಿನ ಅನಂತ ಅಶ್ಚರ್ಯಕ್ಕೆ.

ಮೊರೆ ಬರ್ನ್‌ಸ್ಟೀನ್ ಎಂಬ ಅಮೆರಿಕಾದ ಅಯೋವಾ ಪ್ರಾಂತ್ಯದ ಒಬ್ಬ ಕೈಗಾರಿಕಾ ವ್ಯಾಪಾರೋದ್ಯಮಿ ವೃತ್ತಿಯಿಂದ ಮನಶ್ಯಾಸ್ತ್ರಜ್ಞನಲ್ಲದಿದ್ದರೂ ಹವ್ಯಾಸದಿಂದ ಸೈಕಿಯಾಟ್ರಿಯಂತಹ ಮನೋವಿಜ್ಞಾನ ವಿಷಯಗಳಲ್ಲಿ ಆಸಕ್ತ. ಆ ಹವ್ಯಾಸಕ್ಕಾಗಿಯೇ ಅವನು ಹಿಪ್ನಾಟಿಸಮ್-ವಶೀಕರಣ ವಿದ್ಯೆ-ಅನ್ನು ಅಭ್ಯಾಸ ಮಾಡಿದನು. ಸೈಕಿಯಾಟ್ರಿಯನ್ನು ವೈದ್ಯರು ರೋಗನಿದಾನಕ್ಕಾಗಿ ಪ್ರಯೋಗಿಸುತ್ತಿದ್ದರು. ಹಾಗೆ ಪ್ರಯೋಗಿಸುವಾಗ ರೋಗಿಯನ್ನು ವಶನಿದ್ರನನ್ನಾಗಿ ಮಾಡಿ ಅವನ ಮನಸ್ಸಿಗೆ (ಅಥವಾ ಚೇತನಕ್ಕೆ) ಕಾಲದಲ್ಲಿ ಹಿಂದುಹಿಂದಕ್ಕೆ ಚರಿಸುವಂತೆ ಸೂಚನೆ ಕೊಡುತ್ತಿದ್ದರು. ಹಿಂದಕ್ಕೆ ಹೋಗು ಹಿಂದಕ್ಕೆ ಹೋಗು ಎಂದು ಸೂಚನೆ ಕೊಡುತ್ತಾ ‘ರೋಗಿ’ಯನ್ನು  ಅವನ   ಬಾಲ್ಯ ಶೈಶವ ಕಾಲಕ್ಕೂ ಕರೆದೊಯ್ಯುತ್ತಿದ್ದರು. ಮೊರೆ ಬರ್ನ್‌ಸ್ಟೀನನು ಹಾಗೆ ತಾನು ಶಿಶುತ್ವದ ಕಾಲಕ್ಕೆ ಕರೆದೊಯ್ದ ಒಬ್ಬ ತರುಣಿಗೆ ಮತ್ತೂ ಹಿಂದಕ್ಕೆ ಹೋಗು, ಮತ್ತೂ ಹಿಂದಕ್ಕೆ ಹೋಗು (Go back! back! back! back!)ಎಂದು ಸೂಚನೆ ಕೊಟ್ಟನು: ಆಗ ಒಂದು ಅದ್ಭುತ ನಡೆಯಿತು!