೮-೩-೧೯೫೧

ಪ್ರೀತಿಯ ಪುಟ್ಟಪ್ಪನವರೆ,

ಬರೆಯದ ಅನೇಕ ಕಾಗದಗಳನ್ನು ನಿಮಗೆ ಬರೆದಿದ್ದೇನೆ! ಅನೇಕ ಸಲ ನಿಮ್ಮನ್ನು ನೆನಪು ಮಾಡಿಕೊಂಡಿದ್ದೇನೆ. ಮೂರು ಆಯಾಮಗಳ ಈ ಜಗತ್ತಿನಲ್ಲಾಗಲಿ ಬಹು ಆಯಾಮಗಳ “ಮನೋಲೋಕ”ದಲ್ಲಾಗಲಿ ‘ಮಹತ್ತಾದ’ ಭವ್ಯವಾದ, ಸುಂದರವಾದ ಏನನ್ನೇ ಆಗಲಿ ನಾನು ನೋಡುವಾಗ ಅಥವಾ ಕೇಳುವಾಗ, ಖಂಡಿತವಾಗಿಯೂ ನೀವೂ ಅದರಲ್ಲಿ ಭಾಗಿಯಾಗಿಯೆ ಇರುತ್ತೀರಿ. ನನಗೆ ಆದ ಒಂದು ಅದ್ಭುತವಾದ ಅನುಭವದಲ್ಲಿ ಕೂಡ, ನಿಮಗೆ ತಿಳಿಯದಂತೆಯೆ ನೀವೂ ಭಾಗಿಯಾಗಿದ್ದಿರಿ! ‘ಈಶ್ವರ-ಬ್ರಹ್ಮ’ಅಥವಾ ‘ಬ್ರಹ್ಮ ಈಶ್ವರ’ವಾದ “ಸಾಕ್ಷಿ”ಯನ್ನು ಗೀತೆ “ಕವಿ” ಎಂದು ಕರೆದಿದೆ. ಏಕೆಂದರೆ ಆಧ್ಯಾತ್ಮಿಕ ಸತ್ಯವನ್ನು ಮೂರ್ತಗೊಳಿಸುವ ಕಲೆ ಅವನಿಗೆ ಮಾತ್ರ ಗೊತ್ತು. (‘ವೇದಾಂತ ಫಾರ್ ದಿ ವೆಸ್ಟ್’ನಲ್ಲಿ ಪ್ರಕಟವಾದ ನನ್ನ ಲೇಖನವನ್ನು ನೀವು ಓದಿರಬಹುದು. ಅದರ ಪ್ರತಿಯನ್ನು ನಿಮಗೆ ಕಳಿಸುವಂತೆ ಲಾಸ್ ಅಂಜಲೀಸ್‌ನ ಆಶ್ರಮಕ್ಕೆ ನಾನು ಬರೆದಿದ್ದೆ.) ೧೯೩೩ರಲ್ಲಿ ಮೈಸೂರಿನಲ್ಲಿ ನನಗಾದ ಒಂದು ಗಂಭೀರವಾದ ದರ್ಶನವನ್ನು ನಿಮ್ಮಿಂದ ಮುಚ್ಚಿಡಲಾರೆ. ಆ ದರ್ಶನದಲ್ಲಿ ‘ಈಶ್ವರ-ಬ್ರಹ್ಮದ’ ರಹಸ್ಯ ನನಗೆ ಸ್ಫುಟವಾಯಿತು. ಬೇಲೂರು ಮಠದಲ್ಲಿ ವೃದ್ಧರಾದ ಸ್ವಾಮಿಗಳೊಬ್ಬರನ್ನು ಬಿಟ್ಟು ಬೇರಾರಿಗೂ ಅದರ ಬಗ್ಗೆ ಚಕಾರವೆತ್ತಿರಲಿಲ್ಲ. ಆ ದರ್ಶನದ ಮಹತ್ವ. ಈಗ ನನಗೆ ಮತ್ತೆ ಮತ್ತೆ ಸ್ಫುರಿಸುತ್ತಿದೆ. ಒಂದು ಮಧುರವಾದ ಸ್ಮೃತಿ ಮಾತ್ರದ ದಿಗಂತವನ್ನು ದಾಟಿ ಅದು ಈಗ ನನ್ನ ಪ್ರಜ್ಞಾವಲಯವನ್ನು ಪ್ರವೇಶಿಸಿ ಅದರ ಒಂದು ಭಾಗವೇ ಆಗಿ ಹೋಗಿದೆ. ಆ ಅತೀಂದ್ರಿಯ ದರ್ಶನ ದೊರೆತ ದಿನ ಪವಿತ್ರವಾದದ್ದು. ಆ ಅನುಭವವನ್ನು ನಾನು ‘ಅದು’ ಎಂದು ನಿರ್ದೇಶಿಸುತ್ತೇನೆ. ಪೂಜ್ಯರಾದ ವಿ. ಸುಬ್ರಹ್ಮಣ್ಯ ಅಯ್ಯರ್ ಅವರು ನೀಡಿದ ಶಿಕ್ಷಣದಿಂದ ಎಲ್ಲ “ಮತ”ಗಳೂ ನನ್ನ ಪಾಲಿಗೆ ನುಚ್ಚುನೂರಾಗಿ ಹೋಗಿದ್ದುವು. ಅದ್ವೈತದ ಭವ್ಯತೆಯು ಬುದ್ಧಿಯ ಮಹಾದ್ವಾರದ ಮೂಲಕ ನನ್ನನ್ನು ಪ್ರವೇಶಿಸಿತ್ತು. ಎಂದರೆ ಪರಂಪರಾಗತ ಅದ್ವೈತದ ನಿರಾಕರಣೆ-ನನ್ನ ಅರ್ಧ ಅರ್ಧಸತ್ಯವಾದ ಗ್ರಂಥಸ್ಥ ಅದೈತದ ನಿರಾಕರಣೆ, ೧೯೩೩ರ ಆ ಅತೀಂದ್ರಿಯ ದರ್ಶನ ನನಗೆ ಅಖಂಡಸತ್ಯದ ಅರಿವನ್ನು ನೀಡಿತು. ವಿ.ಸು ಅವರ ವಿಷಯದಲ್ಲಿ ನನ್ನ ಋಣ ಬೆಳೆಯುತ್ತಿದೆ. ಅದಕ್ಕಿಂತ ಹೆಚ್ಚಾಗಿ ವೃದ್ಧಿಗೊಳ್ಳುತ್ತಿರುವುದು “ಅವರ” ವಿಷಯದಲ್ಲಿ ನನಗಿರುವ ಪ್ರೀತಿ. ಅವರು ಎಂದರೆ ಅಧ್ಯಾತ್ಮಿಕವಾಗಿ ನನ್ನ ಕಣ್ಣುಗಳನ್ನು ತೆರೆದ ಶ್ರೀ ಮಹಾರಾಜ (ಸ್ವಾಮಿ ಬ್ರಹ್ಮಾನಂದರು) ಮತ್ತು ಶ್ರೀ ಮಹಾಪುರುಷ ಮಹಾರಾಜರು (ಶ್ರೀ ಸ್ವಾಮಿ ಶಿವಾನಂದರು). ಅವರನ್ನು ನಿರ್ದೇಶಿಸಲು ನಾನು ಬಹುವಚನವನ್ನು ಬಳಸುವುದಿಲ್ಲ. ‘ಅದು’ ನನಗೆ ದೊರೆತದ್ದು ಸ್ವಪ್ನದಲ್ಲಲ್ಲ. ‘ಅದು’ ದೊರೆತದ್ದು “ಆ ಮರ”ವನ್ನು, (ಅಂಚೆ ಕಚೇರಿಯ ಹಿಂದೆ ಇದ್ದ ಆ “ನನ್ನ” ಮರ ನಿಮಗೆ ನೆನಪಿರಬಹುದು), ನೋಡಿದಾಗ. ಯಾವ ಮರದ ಪೀಡಿತ ಶಾಖೆಗಳು ಯಾತನಾಪೂರ್ಣವಾದ ಭಂಗಿಯಿಂದ ಆಕಾಶದತ್ತ ನೋಡುತ್ತಿದ್ದುವೋ ಆ ಮರ. ಚಂದ್ರೋದಯವಾಗುತ್ತಿದ್ದಾಗ ಅದರ ಹಿ‌ನ್ನಲೆಯಲ್ಲಿ ಛಾಯಾರೂಪದಲ್ಲಿ ನಿಂತಿದ್ದ ಆ ವೃಕ್ಷವು ಇಡೀ ಚೈತನ್ಯದ ಯಾತನೆಯೇ ಮೂರ್ತಿಭವಿಸಿ ನಿಂತಿದ್ದಂತೆ ಕಾಣುತ್ತಿತ್ತು. ಅದರ “ಶಬ್ದ-ರೂಪ”ವು ನನಗೆ ಯೂರೋಪಿನಲ್ಲಿ ಬೀಥೋನ್ ಒಂದು ಕೃತಿಯ ಮೂಲಕ (Overature of Egmont-ಬರೀ ಏಳು ನಿಮಿಷಗಳ ಆ ಕೃತಿಯನ್ನು ನೀವು ಗ್ರಾಮೂಫೋನ್ ರೆಕಾರ್ಡಿನಲ್ಲಿ ಕೇಳಬೇಕು) ಅನುಭವಕ್ಕೆ ಬಂತು. ಯಾತನೆಯ ಮುದ್ರೆಯನ್ನು ಧರಿಸಿದ ಆ ವೃಕ್ಷವು ಏಕೆ ನನಗೆ ಒಂದು ದೊಡ್ಡ ಪ್ರತಿಮೆಯಂತೆ ಭಾಸವಾಯಿತು ಎಂಬುದನ್ನು ಈಗ ಮಾತ್ರ ನಿಮಗೆ ತಿಳಿಸುತ್ತೇನೆ. ತಮಾಷೆಯಾಗಿ ಒಮ್ಮೆ ಶ್ರೀ ಸ್ವಾಮಿ ದೇಶಿಕಾನಂದರಿಗೆ ಹೇಳಿದೆ: “ಇನ್ನು ಮೇಲೆ ನಾನು ಮೈಸೂರಿಗೆ ಬರುವುದೇ ಇಲ್ಲ “ನನ್ನ ಮರ”ವನ್ನು ಕಡಿಯಲು ಅವಕಾಶಕೊಟ್ಟುಬಿಟ್ಟಿರಿ, ಅದಕ್ಕೆ!”) ಕುಂಭಕರ್ಣ ದರ್ಶನನ ಅಧ್ಯಯನವು ಗಾಢವಾದ ಪ್ರಭಾವವನ್ನು ಬೀರಿತ್ತು. ಅದು ಅತೀಂದ್ರಿಯ ದರ್ಶನವನ್ನು ನೇರವಾಗಿ ತ್ವರೆಗೊಳಿಸಿತು. ಗೌಡಪಾದರ ಅಜಾತವಾದವು-ಅದರಲ್ಲೂ ನಮ್ಮ ತಲೆಯೊಳಕ್ಕೆ ಅದನ್ನು ಕಳಿಸುವ ವಿ.ಸು. ಅವರ ವಿಶೇಷ ವಿಧಾನದಿಂದಾಗಿ-ಅತ್ಯಂತ ಪರಿಣಾಮಕಾರಿಯಾಗಿತ್ತು. ಬುದ್ಧಿಯ ದಿಗಂತವನ್ನು ದಾಟಿದ್ದಾಯಿತು-ಅತೀಂದ್ರಿಯ ದರ್ಶನವು ಬುದ್ಧಿಪ್ರಾಧಾನ್ಯವಾದವನ್ನು ನಿಷ್ಕ್ರಿಯಗೊಳಿಸಿತು. ನಿಮ್ಮ ಸಹನೆ ಹಾರಿಹೋಗುತ್ತಿರಬೇಕು-ಅತೀಂದ್ರಿಯ ದರ್ಶನದ ಕಥನವನ್ನು ಏಕೆ ನಿರೂಪಿಸುತ್ತಿಲ್ಲ ಎಂದು. ಮುನ್ನಡಿಯ ಕಿರಿಕಿರಿಯಿಲ್ಲದೆ ಈಗ ಅದನ್ನು ಹೇಳುತ್ತೇನೆ. ನೇತಿ ಶಕ್ತಿಯು ಒಂದು ದೃಶ್ಯದ ರೂಪದಲ್ಲಿ ನನಗೆ ದೊರಕಿತು. ನಾನು ಒಂದು ಶಿಶುವಾಗಿ ಶ್ರೀ ಗುರುಮಹಾರಾಜರ ತೊಡೆಯ ಮೇಲೆ ಮಲಗಿದ್ದೆ. ಜಾಜ್ವಲಮಾನವಾದ ಜ್ಯೋತಿಯು ನಮ್ಮ ಭಗವಂತನನ್ನು ಆವರಿಸಿತ್ತು. ಅವರ  ಕಣ್ಣಿನಿಂದ ಆಶ್ರುಬಿಂದುಗಳು-ಆನಂದಾಶ್ರುಗಳು ತೊಟ್ಟಿಕ್ಕುತ್ತಿದ್ದುವು. ಒಂದು ಅಶ್ರುಬಿಂದುವು ಬೆಳಕಿನ ಪಥದಲ್ಲಿ ಜಾರುತ್ತಾ ಉರುಳಿ ಶಿಶುವಿನ ಶಿರದ ಮೇಲೆ ಬಿತ್ತು-ಆ ಅತಿ ಚತುರ, ಗೊಂದಲದ ಬುರುಡೆ (ಆವರಣ)! ಮರುಕ್ಷಣವೇ ತಲೆ ಕರಗಿ ಆ ಬೆಳಕಿನೊಡನೆ ಬೆರೆತು ಬಿಟ್ಟಿತು. ಇನ್ನೊಂದು ಹನಿ ದೇಹದ ಕೆಳಭಾಗದ ಮೇಲೆ ಉದುರಿತು. ಕೂಡಲೇ ಕಾಲುಗಳೂ ದೇಹದ ಕೆಳಭಾಗವೂ ಬೆಳಕಿನ ಒಂದು ಶೂನ್ಯವಾಗಿ ಹೋಯಿತು! ಮೂರನೆಯ ಹನಿ ಬೀಳಲಿತ್ತು, ಆದರೆ ಗುರಿಯನ್ನು ಇನ್ನೂ ತಲುಪಿರಲಿಲ್ಲ. ಹನಿಗಳು ಉರುಳುತ್ತಿದ್ದುವು. ಬಾಂಬುಗಳು ಬೀಳುವಂತೆ! ಮೂರನೆಯ ಹನಿಯು ಹೃದಯದ ಮೇಲೆ ಬೀಳಬೇಕಾಗಿತ್ತು-ಆ ಮಹಾಶೂನ್ಯದಲ್ಲಿ ಕರಗಿಯೇ ಹೋಗಿದ್ದ ಮಗುವಿನ ನಾಲಗೆಯಿಂದ ಹೊಮ್ಮಿದ ಕೂಗು ಕೇಳಿತು: “ಓ, ಅಷ್ಟು ಹೆಚ್ಚಿನ ಶಿಕ್ಷೆ ಬೇಡ. ನನ್ನ ಒಂದೇ ಒಂದು ಆಸ್ತಿಯನ್ನು ದೋಚಬೇಡಿ”. ೧೯೧೭ರಲ್ಲಿ ಆ ಶಿಶುವನ್ನು ಆರ್ಶಿರ್ವದಿಸುವ ಸಂದರ್ಭದಲ್ಲಿ ಅದರ ಹೃದಯದಲ್ಲಿ “ಠಾಕೂರ”ರನ್ನು ಸ್ಥಾಪಿಸಿದ್ದ ದಯಾಮಯಿಯ-ಪ್ರಿಯಮಹಾರಾಜರ-ಹಸ್ತಮೂಡಿತು-ಸೆಂಚುರಿ ಹೊಡೆಯುತ್ತಿರುವ ಕ್ರಿಕೆಟ್ ಆಟಗಾರನ ಹಸ್ತದಂತೆ, ಹಸ್ತಮಾತ್ರ ಮೂಡಿತು. ಆ ಅಶ್ರುವು-ದಿವ್ಯಬಾಂಬು-ತನ್ನ ಗುರಿಯನ್ನು ಮುಟ್ಟುವ ಮುನ್ನವೇ ಸಹಸ್ರಸೂರ್ಯ ಪ್ರಭೆಯ ಆ ಹಸ್ತವು ಅದನ್ನು ತೊಡೆದು ಹಾಕಿತು. ಆ ದಯಾಮಯಿಯ ಕ್ರೀಡೆ ನಡೆಯಿತು. ರುದ್ರನ ಪ್ರಳಯ ತಾಂಡವದ ಗತಿಗೆ ತಕ್ಕಂತೆ ಉದುರುತ್ತಿದ್ದ ಆ ಪ್ರಕಾಶಮಾನವಾದ ಅಶ್ರುಬಿಂದುವು-ಹೃದಯವನ್ನು ಛಿದ್ರಗೊಳಿಸುವ ಉದ್ದೇಶದಿಂದ ಉದುರುತ್ತಿದ್ದ ಆ ಅಶ್ರುಬಿಂದುವು-ಲಕ್ಷಾಂತರ ಬೆಳಕಿನ ಬಿಂದುಗಳಾಗಿ ನುಚ್ಚುನೂರಾಯಿತು. ಪ್ರಕಾಶಮಾನವಾದ  ಆ ಬೆಳಕಿನ ಬಿಂದುಗಳು ಈ ವಿಶ್ವವಾಯಿತು- ಬಹುಸಂಖ್ಯೆಯ ನಕ್ಷತ್ರ ಪುಂಜಗಳು, ಕ್ಷೀರ ಪಥ ಇವುಗಳೆಲ್ಲ ಸೇರಿದ ವಿಶ್ವವಾಯಿತು- ಸಂಕ್ಷೇಪವಾಗಿ ಹೇಳುವುದಾದರೆ ಆ ಆಶ್ರುಬಿಂದುವೇ ಈ ವಿಶ್ವವಾಗಿ ಕಾಣಿಸಿಕೊಂಡಿತು. ನಿಮ್ಮ ಕವಿ ವಾಣಿ “ಎಲ್ಲ ಇದೆ, ಎಲ್ಲ ಇದೆ ನಿತ್ಯತೆಯ ಗಬ್ಬದಲಿ” ಎಂಬುದು ನನ್ನ ತಲೆಯಲ್ಲಿ ಅನುರಣಿತವಾಗುತ್ತಿತ್ತು. ಇದೆಲ್ಲ ನಡೆದದ್ದು ರಾತ್ರಿ ಹನ್ನೊಂದು ಗಂಟೆಯ ಸುಮಾರಿನಲ್ಲಿ, ಅಂಚೆ ಕಛೇರಿಯ ಹತ್ತಿರದ ಆ ಪೀಡಿತ ವೃಕ್ಷಕ್ಕೆ ಆಗತಾನೆ ಉದಯಿಸುತ್ತಿದ್ದ ಚಂದ್ರ ಹೆಚ್ಚಿನ ವೈಭವವನ್ನು ನೀಡುತ್ತಿದ್ದ. ‘ಅತೀಂದ್ರಿಯದರ್ಶನ’ದಲ್ಲಿ ಸ್ವಲ್ಪ ಸಮಯಕ್ಕೆ ಮುಂಚೆ ನೇತಿಮಾರ್ಗದಲ್ಲಿದ್ದ ವಿರಾಟ್ ಪ್ರಾಣವನ್ನು ಪಡೆದುಕೊಳ್ಳತೊಡಗಿತು. ಪಡೆದಕೊಳ್ಳತೊಡಗಿತು ಎಂಬ ಮಾತಿಗೆ ಕಾಲಾನುಕ್ರಮಣಿಯಲ್ಲಿ ಅರ್ಥವೇ ಇಲ್ಲ. ನಿತ್ಯ ವರ್ತಮಾನದ ಅನುಭವ ಅದು. ‘ಬರುತ್ತಿದೆ’ ‘ಹೋಗುತ್ತಿದೆ’ ಮುಂತಾದ ಪದಗಳು ತಮ್ಮ ಶಬ್ದಮೌಲ್ಯವನ್ನು ಕಳೆದುಕೊಳ್ಳುವ, ಅವು ಬರೀ ‘ಶಬ್ದಜಾಲ’ವಾಗುವ ಅನುಭವ ಅದು. ನಿತ್ಯ ಮತ್ತು ಲೀಲೆಗಳ ನಡುವೆ ಇದ್ದ ದ್ವಂದ್ವ ಇಲ್ಲವಾಯಿತು! ಇಲ್ಲವಾಯಿತು ಅಷ್ಟೆ! ಎಂದೆಂದಿಗೂ ಇಲ್ಲವಾಯಿತು. ನಕ್ಷತ್ರ ಖಚಿತವಾದ ವಿಶ್ವದಲ್ಲಿ ಶ್ರೀ ಗುರುಮಹಾರಾಜರು ನಮ್ಮ ಆಭರಣ ‘ಪದಕ’ ಇದ್ದಂತೆ. ಅಥವಾ ಹೀಗೂ ಹೇಳಬಹುದು: ಇಡೀ ವಿಶ್ವ ಶ್ರೀ ಗುರುಮಹಾರಾಜರಲ್ಲಿ ನಕ್ಷತ್ರಮಾಲಿಕೆಯಾಗುತ್ತದೆ. ಅದರ ಅಂತರಂಗದ ಶಾಖದಿಂದ ‘ಬುದ್ಧಿ’ ಸ್ಥಗಿತವಾಗುತ್ತದೆ. ಹೃದಯ ಅದಕ್ಕೆ ಮಾತ್ರ ಪ್ರಾಣ ನೀಡುತ್ತದೆ. ಏಕೆಂದರೆ ಆ ದಯಾಮಯನು ತನ್ನ ರಹಸ್ಯವನ್ನು ಆ ಶಿಶುಹೃದಯಕ್ಕೆ ಉಸಿರಿ ಆಶೀರ್ವದಿಸಿದಾಗಲೇ “ಅತೀಂದ್ರಿಯ ದರ್ಶನ”ವು ಅಲ್ಲಿ ಸ್ಥಾಪಿತವಾಗಿತ್ತು. ‘ಅತೀಂದ್ರಿಯ ದರ್ಶನ’ದ ಮಂಗಳದ ಮನೆಯಲ್ಲಿ ‘ಓಂ ಪೂರ್ಣಮದಃ ಪೂರ್ಣಮಿದಂ’ಗೂ ‘ಅವತಾರ ವರಿಷ್ಠಾಯ ರಾಮಕೃಷ್ಣಾಯ ತೇನಮಃ’ ಕ್ಕೂ ಲಗ್ನ ನಡೆಯುತ್ತದೆ. ‘ತುರೀಯ-ಜ್ಞಾನ ವೇದಾಂತ’ಕ್ಕೂ ‘ತುಳಸಿ-ಅರ್ಚನ-ಭಕ್ತಿ’ಗೂ ಮದುವೆ. ವರಾಂಡದಲ್ಲಿ ಕುರ್ಚಿಯಲ್ಲಿ ಕುಳಿತಿದ್ದಾಗ ನಿದ್ದೆಯೂ ಅಲ್ಲದ, ಪೂರ್ತ ಎಚ್ಚರವೂ ಅಲ್ಲದ ಒಂದು ಸ್ಥಿತಿಯಲ್ಲಿ (ಸಕೃದ್ ದರ್ಶನ) ಕ್ಷಿಪ್ರವಾದ ಒಂದು ನೋಟದಂತೆ ಅತೀಂದ್ರಿಯ ದರ್ಶನ ನನಗೆ ದೊರಕಿತು. ಈಗ ನನಗೆ ಗೊತ್ತಾಗಿದೆ ಅದು ಭ್ರಮೆ ಅಲ್ಲ. ಏಕೆಂದರೆ ಈಗ ಫ್ರಾನ್ಸಿನಲ್ಲಿ ದಿನದ ಅನೇಕ ಕ್ಷಣಗಳಲ್ಲಿ ಅದು ನನ್ನನ್ನು ‘ಎಚ್ಚರಿಸು’-ತ್ತಿದೆ.” ಸ್ಮರಣ ಮನನಗಳು ಗ್ರಾಹ್ಯವಾದ ಅನುಭವವಾಗಿವೆ, ಆ ಅತೀಂದ್ರಿಯ ದರ್ಶನದಿಂದ. ನನ್ನ ಅನುಭವವನ್ನು ನಾನು ಯಾರಿಗೂ ಹೇಳಲಿಲ್ಲ, ಬೇಲೂರು ಮಠದಲ್ಲಿ ಸೀತಾಪತಿ ಮಹಾರಾಜರ ಹೊರತು. ಅವರೂ ಅದಕ್ಕೆ ಗಮನ ಕೊಡಲಿಲ್ಲ. ಅಥವಾ ಭಾವುಕನಾದ ಸೋದರನೊಬ್ಬನ ಹರಟೆ ಎಂದು ಅವರು ಉಪೇಕ್ಷಿಸಿರಲೂ ಬಹುದು. ಈಗ ಅದು ನನ್ನ ಪ್ರಜ್ಞೆಯ ಪದರದಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿದೆ. ಹೀಗಾಗಿ ‘ಅದು’ ನನಗೆ “ಮಹಾರಾಜ್-ಮಹಾ ಪುರುಷರು” ಕರುಣಿಸಿದ ಮಹಾಪ್ರಸಾದವಾಗಿದೆ. ಈಗ ಅದರ ಅನುಭವವು ಬಿಟ್ಟುಬಿಟ್ಟು ದೊರಕುತ್ತಿದೆ. ನನ್ನ ‘ಅದು’ದಲ್ಲಿ ನೀವು ಕಾಣಿಸಿಕೊಳ್ಳುತ್ತಿದ್ದೀರಿ, ಸೇರಿಕೊಂಡಿದ್ದೀರಿ. ಹದಿನೆಂಟು ವರ್ಷಗಳ ಅನಂತರ ‘ರಹಸ್ಯ ಮತ್ತು ‘ವೈಯಕ್ತಿಕ’ ಎಂಬ ಮೊಹರನ್ನೊತ್ತಿ ನಿಮಗೆ ನಿರೂಪಿಸುತ್ತಿದ್ದೇನೆ-“ಎಲ್ಲ ಇದೆ, ಎಲ್ಲ ಇದೆ ನಿತ್ಯತೆಯ ಗಬ್ಬದಲಿ.”

ಕರ್ಮಕ್ಷಯ (ಅಮೆರಿಕನ್ ಭಾಷಾಂತರ ದಹಿಸುವುದು) ಪ್ರಚಂಡ ವೇಗದಲ್ಲಿ ನಡೆಯುತ್ತಿದೆ–ಪ್ರತಿದಿನ ೧೨ರಿಂದ ೧೪ ಗಂಟೆಗಳ ಕೆಲಸದ ರೂಪದಲ್ಲಿ. ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಗಳು-ಬಹು ಸಂಖ್ಯೆಯಲ್ಲಿ ಜನ ಸೇರುತ್ತಾರೆ-ಪ್ರತಿದಿನ ಅನೇಕ ಜನ ಭೇಟಿಗಾಗಿ ಬರುತ್ತಾರೆ. ಈ ಭವನದಲ್ಲೇ ನಾವು ಭಕ್ತರಿಗಾಗಿ ಅಲ್ಪಾವಧಿಯ ಸಾಧನಾ ಶಿಬಿರಗಳನ್ನು ಏರ್ಪಡಿಸುತ್ತಿದ್ದೇವೆ. ಅನೇಕ ಜನ ನಿರಂತರವಾಗಿ ಬರುತ್ತಲೇ ಇರುತ್ತಾರೆ. ಆಶ್ರಮದಲ್ಲಿ ಸಜ್ಜನರಾದ ಮೂರುಜನ ಬ್ರಹ್ಮಚಾರಿಗಳೂ ಮೂವರು ಬ್ರಹ್ಮಚಾರಿಣಿಯರೂ ಇದ್ದಾರೆ.  ಪ್ರತಿಯೊಬ್ಬರಿಗೂ ಕೈತುಂಬ ಕೆಲಸ ಇದೆ. ನಮ್ಮ ಪೂಜಾಗೃಹದಲ್ಲಿ ಶ್ರೀ ಗುರು ಮಹಾರಾಜ್, ಸ್ವಾಮಿಜಿ ಮತ್ತು ಮಹಾಮಾತೆಯ ಕೇಶ ಇತ್ತು. ಈಗ ಅಸ್ಥಿಸ್ಮಾರಕವೂ ಇದೆ. ಗಂಟೆಬಾರಿಸುವ ವೇದಾಂತ-ನಿತ್ಯಪೂಜೆಯನ್ನು ನಮ್ಮ ಭಾರತದ ಆಶ್ರಮಗಳಲ್ಲಿ ಮಾಡುವಂತೆಯೇ ನಾನು ಮಾಡುತ್ತೇನೆ. ಇಷ್ಟೇ ಹೆಚ್ಚು: ಠಾಕೂರ್, ಮಹಾಮಾಯಿ, ಸ್ವಾಮೀಜಿ ಮತ್ತು ಗಂಗಾಮಾಯಿಯ ಜೊತೆಗೆ ಮಹಾಪುರುಷ ಮಹಾರಾಜರಿಗೂ ಶಶಿಮಹಾರಾಜರಿಗೂ ಜೈಕಾರ ಹಾಕುತ್ತೇವೆ. ಸಂಜೆಯ ಪೂಜೆಯನ್ನು ನಾನೇ ಮಾಡುತ್ತೇನೆ. ಅಂತರಂಗ ಭಕ್ತರನ್ನುಳಿದು ಇತರರಿಗೆ ದೇವರ ಮನೆಗೆ ಪ್ರವೇಶವಿಲ್ಲ. ಏಕೆಂದರೆ ಶುಷ್ಕ ಕುತೂಹಲಿಗಳು ನಿಂತು ಓಡುವ ಕೇಂದ್ರವನ್ನಾಗಿ ಇದನ್ನು ಮಾಡಲು ನನಗೆ ಇಷ್ಟವಿಲ್ಲ. ವಿಶ್ವವಿದ್ಯಾನಿಲಯದಲ್ಲಿ ಒಂದು ಉಪನ್ಯಾಸ ನೀಡಬೇಕಾದರೆ ನಾನು ೩೦ರಿಂದ ೪೦ ಗಂಟೆಗಳವರೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳೇ ಒಂದು, ಸಾರ್ವಜನಿಕರಿಗೇ ಒಂದು ಉಪನ್ಯಾಸ ಮಾಲೆಯನ್ನು ಏರ್ಪಡಿಸಲಾಗಿದೆ. ಈಗ ನಾನು ಸಾರ್ವಜನಿಕರ ಉಪನ್ಯಾಸಗಳಿಗೆ ಮಾಹೆಯಾನ ಬೌದ್ಧಧರ್ಮ  ಮತ್ತು ವೇದಾಂತದಲ್ಲಿ ವಿಶೇಷ ಅಧ್ಯಯನ ನಡೆಸುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಮೂರು ವರ್ಷ ತೈತ್ತಿರೀಯವನ್ನು ವ್ಯಾಖ್ಯಾನಿಸಿದ ಮೇಲೆ ಈಗ ಮಾಂಡೂಕ್ಯವನ್ನು ಪ್ರಾರಂಭಿಸಿದ್ದೇನೆ. ಚಾಚೂ ತಪ್ಪದೆ ‘ತುಳಸೀ ಆರಾಧನಾ ಭಕ್ತಿ’ಯನ್ನು ಹೇಗೋ ಹಾಗೇ ಇದನ್ನು ಮಾಡುತ್ತಿರುವುದನ್ನು ಕಂಡು ವಿ.ಸೂ.ಗೆ ಸಂತೋಷವಾಗಿರಬೇಕು. ತಮಾಷೆಯ ‘ವೇಷಧಾರಿ’ಗೆ ಶುದ್ಧ ಜ್ಞಾನದ ಉಡುಪನ್ನು ಧರಿಸಿದಂತಾಗಿದೆ! ಕಳೆದ ಮೂರು ತಿಂಗಳಿಂದ ಒಂದೇ ವಿಷಯವನ್ನು ಪ್ರವೇಶಿಕೆಯಾಗಿ ಆಯ್ದುಕೊಂಡಿದ್ದೇನೆ, ವೇದಾಂತದ ಹತ್ತು ದೃಷ್ಟಾಂತಗಳು: (೧) ಹಾವು-ಹಗ್ಗ. (೨) Naere- ಕೆಂಪುಹೂವು. (೩) ಮರೀಚಿಕೆ. (೪) ಮಾಟಗಾರನ ಹಗ್ಗದಾಟ. (೫) ಕಳೆದುಹೋದ ಮುತ್ತು. (೬) ಹತ್ತನೆಯ ವ್ಯಕ್ತಿ. (೭) ವರ್ಣಚಿತ್ರ. (೮) ಕನ್ನಡಿ. (೯) ಮೃತ್ತಿಕೆ. (೧೦) ಸ್ವಪ್ನ “ಸಂಬಂಧ”ದ ಸಮಸ್ಯೆಯನ್ನು ತಾತ್ವಿಕ, ಮನಶ್ಯಾಸ್ತ್ರೀಯ ಮತ್ತು ತರ್ಕದ ದೃಷ್ಟಿಯಿಂದ ಸಮಗ್ರವಾಗಿ ಪರಿಶೀಲಿಸುತ್ತಿದ್ದೇನೆ. ನಾನು ತಕ್ಕಷ್ಟು ಸಂಶೋಧನೆ ಮಾಡಿದ್ದೇನೆ-ಡಾಕ್ಟರೇಟ್ ಪ್ರಬಂಧ ಬರೆಯಲು ಸಾಕಾದಷ್ಟು! ನನಗೆ ಮನಸ್ಸಾಗಲೀ ಸಮಯವಾಗಲೀ ಇಲ್ಲದ್ದರಿಂದ ಯಾರಾದರೂ ಈ ವಿಷಯದ ಮೇಲೆ ಡಾಕ್ಟರೇಟಿಗೆ ಕೆಲಸ ಮಾಡಲು ತೊಡಗುವಂತೆ ಪ್ರಚೋದಿಸುತ್ತಿದ್ದೇನೆ: “ಸಂಬಂಧಗಳ ಸಮಸ್ಯೆ: ವೇದಾಂತದ ದೃಷ್ಟಾಂತಗಳ ಅಧ್ಯಯನದ ದೃಷ್ಟಿಯಿಂದ.”

ದಾಸಪ್ಪನವರ ತಂಗಿ ಅಮ್ಮಾಜಿ ಮುಂದಿನ ಭಾನುವಾರ ಇಲ್ಲಿಗೆ ಬರುತ್ತಿದ್ದಾಳೆ. ಸದ್ಯದಲ್ಲೇ ಮಾನಪ್ಪನಿಗೂ ಮಂಜಪ್ಪನಿಗೂ ಒಂದು ದೀರ್ಘವಾದ ಪತ್ರ ಬರೆಯುತ್ತೇನೆ. ಆಗ ಅವರಿಗೆ  ಗೊತ್ತಾಗುತ್ತೆ ನೀವು ತಿಳಿದುಕೊಂಡಿರುವದಕ್ಕಿಂತಲೂ ಎಷ್ಟು ಹೆಚ್ಚು ಆತ್ಮೀಯವಾಗಿ ನೀವು ನನ್ನ ಬದುಕು ಮತ್ತು ಸ್ಮೃತಿಗಳಲ್ಲಿ ಬೆರೆತುಹೋಗಿದ್ದೀರಿ ಎಂಬುದು. ಕಳೆದ ವರ್ಷ ಸ್ವಿಟ್ಜರ್‌ಲೆಂಡಿನಿಂದ ಹಿಂದಿರುಗಿದ ಮೇಲೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರಿಗೆ ಒಂದು ದೀರ್ಘವಾದ ಪತ್ರ ಬರೆದಿದ್ದೆ. ತಮ್ಮ ಸ್ವಹಸ್ತದಿಂದ ತುಳಸೀದಳಗಳನ್ನು ಕಿತ್ತು ಒಣಗಿಸಿ ಒಂದು ಪುಸ್ತಕದ ಹಾಳೆಗಳ ಮಧ್ಯೆ ಇಟ್ಟು ಕಳಿಸಿ ಎಂದು ಕೇಳಿದ್ದೆ. ಕಾವೇರಿ ಜಲದಲ್ಲಿ ತೊಳೆದಿದ್ದರೆ ಇನ್ನೂ ಸಂತೋಷವಾಗುತ್ತಿತ್ತು. ಬೇಲೂರು ಮಠದಲ್ಲಿ ಗಂಗಾಜಲದಲ್ಲಿ ತೊಳೆದು ಹಾಗೆ ಒಣಗಿಸಿ ಒಂದು ಪುಸ್ತಕದ ಹಾಳೆಗಳ ಮಧ್ಯೆ ಇಟ್ಟು ಕಳಿಸಿ ಎಂದು ಕೇಳಿದ್ದೆ. ಕಾವೇರಿ ಜಲದಲ್ಲಿ ತೊಳೆದಿದ್ದರೆ ಇನ್ನೂ ಸಂತೋಷವಾಗುತ್ತಿತ್ತು. ಬೇಲೂರು ಮಠದಲ್ಲಿ ಗಂಗಾಜಲದಲ್ಲಿ ತೊಳೆದು ಹಾಗೆ ಒಣಗಿಸಿ ಕಳಿಸುತ್ತಿದ್ದಾರೆ. ತ್ರಿಚೂರಿನಿಂದ ನನ್ನ ಸೋದರಿಯೂ ಕಳಿಸುತ್ತಿದ್ದಾರೆ. ಗೋದಾವರೀ ಆಶ್ರಮದ ಸ್ವಾಮಿಯನ್ನು ಕೇಳಿದ್ದೇನೆ-ಗೋದಾವರಿ ಜಲದಲ್ಲಿ ತೊಳೆದು ಕಳಿಸಿ ಎಂದು. “ಗಂಗೇಚ ಯಮುನಾ ಚೈವ” ಎಂದು ಹೇಳುವಾಗ ಆ ಪವಿತ್ರ ನದಿಗಳಲ್ಲಿ ಅದ್ದಿದ್ದ ತುಳಸಿಯನ್ನು ನೀರಿರುವ ತಾಮ್ರದ ಪಾತ್ರೆಗೆ ಅರ್ಪಿಸುತ್ತಿದ್ದೇನೆ ಎಂಬ ಭಾವನೆ ನನಗೆ ಬರುತ್ತಿದೆ. ದೂರದ ಈ ಗ್ರೆಟ್ಜ್‌ನಲ್ಲಿ ಮಹತ್ತರವಾದ ಸಮಸ್ತ ಭಾರತವನ್ನೂ ಸ್ಪರ್ಶಿಸುತ್ತಿರುವ ಭಾವನೆ ನನಗೆ ಬರುವುದು ಈ ರೀತಿಯಾಗಿ. ರಾಜಕೀಯ ಭಾರತದ ಬಗ್ಗೆ ಇದ್ದ ಉತ್ಸಾಹ ಕುಗ್ಗುತ್ತಿದೆ- ಸಾಂಸ್ಕೃತಿಕ ಭಾರತ ಅಮರವಾದದ್ದು. ಸಾಂಸ್ಕೃತಿಕ ಭಾರತ ಎಂದರೆ ವಾಸ್ತವವಾಗಿ ಏಳು ನದಿಗಳು ಹರಿಯುತ್ತಿರುವ ದೇಶ ಅಲ್ಲ-ಭೌಗೋಳಿಕ ಮೂರ್ತಿಪೂಜೆ ಈಗ ನನಗೆ ಹಿಡಿಸದು-ಆ ಭಾರತ ಅಂತರ ಗ್ರಹಗಳದ್ದು-ವಿಶ್ವಸ್ವರೂಪದ್ದು ನನ್ನ “ಅತೀಂದ್ರಿಯ ದರ್ಶನ” ಸ್ವರೂಪದ್ದು.

ಇಲ್ಲಿನ ವರ್ತಮಾನವನ್ನೆಲ್ಲ ಪ್ರೀತಿಯ ಶೇಷುಮಾಮನಿಗೆ ತಿಳಿಸಿ. ಆಶ್ರಮದಲ್ಲೂ ಎಲ್ಲರಿಗೂ ಅದರಲ್ಲೂ ವೀರೇಶ ಮಹಾರಾಜರಿಗೆ ಮತ್ತು ಶಾಮಣ್ಣನಿಗೆ ತಿಳಿಸಿ. ದಯವಿಟ್ಟು ನಿಮ್ಮ ಕೆಲವು ಕವನಗಳನ್ನು ಕಳಿಸಿ. ನಿಮ್ಮ ಪುಸ್ತಕಗಳ ಒಂದು ಇಡೀ ಸೆಟ್ಟನ್ನೇ ಕೊಳ್ಳುತ್ತೇನೆ, ಬಿಲ್ ಸಮೇತ ಪುಸ್ತಕಗಳನ್ನು ಕಳಿಸಿಬಿಡಿ. ನಿಮಗೆ ಹಣ ಕಳಿಸುತ್ತೇನೆ. ಇಲ್ಲಿ ಒಳ್ಳೆಯ ಕನ್ನಡಿಗರ ಒಂದು ಗುಂಪೇ ಇದೆ. ಗದಗಿನ ಒಬ್ಬ ಒಳ್ಳೇ ಹುಡುಗ ಇದ್ದಾನೆ. ಹೆಸರು ಮಹೇಶ.. ಹಠಯೋಗ ಓದುತ್ತಾನೆ. ಬೆಂಗಳೂರಿನ ವಾಸುದೇವಯ್ಯ ಇದ್ದಾನೆ. ಮಹೇಶ ಲಿಂಗಾಯತ. ತಪ್ಪದೆ ಪ್ರತಿ ಭಾನುವಾರ ಬಂದು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸುತ್ತಾನೆ. ನಿಮ್ಮ ಕಾದಂಬರಿ “ಸುಬ್ಬಮ್ಮ” ಚೆನ್ನಾಗಿ ಓದಿಕೊಂಡಿದ್ದಾನೆ. ನನಗೆ ಕನ್ನಡ ಓದಲು ಬಾರದು. ಅವನ ಕೈಯಲ್ಲಿ ನಿಮ್ಮ ಪದ್ಯಗಳನ್ನು ಓದಿಸುತ್ತೇನೆ. ನೀವೇ ಓದುವುದನ್ನು ಕೇಳಿದ್ದೇನಲ್ಲ, ಹೀಗಾಗಿ ಹಳೆಯ ದಿನಗಳನ್ನು ಮರಳಿ ಬಾಳಬಹುದು.

ಸ್ವಿಟ್ಜರ್‌ಲೆಂಡಿನ ದೃಶ್ಯಗಳ ಬಣ್ಣದ ಚಿತ್ರಗಳ ಒಂದು ಆಲ್ಬಂ ಕಳಿಸುತ್ತೇನೆ. ಈಗಷ್ಟೇ ವಸಂತ ಇಣಿಕಿದೆ. ವಸಂತದ ವೈಭವವನ್ನು ನೀವು ನೋಡಬೇಕು. ಸ್ವಿಟ್ಜರ್‌ಲೆಂಡಿಗೆ ಬರಲು ಆಗದಿದ್ದರೆ ಹಿಮಾಲಯಕ್ಕೆ ಹೋಗಿ. ಶಿಶಿರದ ಮೃತ್ಯುವಿನಿಂದ ವಸಂತದ ಪುನರುತ್ಥಾನವಾಗುತ್ತಿದೆ. ಆ ವೈಭವ ಕಲ್ಪನಾತೀತವಾದದ್ದು. ಪ್ರತಿ ಕ್ಷಣ ಪ್ರತಿ ಸೆಕೆಂಡ್ ಪ್ರಕೃತಿ ಬದಲಾಗುತ್ತದೆ. ಚಲನರಹಿತವಾದ ಶಿಶಿರದಿಂದ ಮಾಯೆ ನರ್ತಿಸುತ್ತಾ ಬರುತ್ತಿದ್ದಾಳೆ.

ನಿಮ್ಮ ಹೆಂಡತಿ ಮಕ್ಕಳಿಗೂ, ಮಂಜಪ್ಪಗೌಡರಿಗೂ ನೆನಪು ಕೊಡಿ.

Swami Siddheswarananda
Centre Vedantique Ramakrishna
Boulevard Victor hugo
GRETZ (S.et M)

9-6-1954

My Dear Puttappa,

I was very much touched by the affectionate letter you wrote me during my illness. Only the Grace of Sri Guru Maharaj aided my coming back to life. I had the worst type of myocardic INFARCT, the name of my heart attack. I was given every day an anti-blood-coagulating serum-‘Heparine’. Whereas it saved me for the period of 18 days on the injection, it came as it were, as a Messenger from the Beloved. Suddenly the heart stopped. It took time for the doctor to come and he found me dead; no heart beat, no pulse, no blood-pressure! As a last measure, by massaging heart and 8 Camplin and Adrenaline injections, after half and hour of Death, consciousness came, in the same abrupt way as it left. In this awakening it was rebirth and living the Reality of Adwaita, and this Reality expressing itself as LOVE for the rest of night–the LOVE streaming forth from the gracious invisible–but more real than visible–presence of the Beloved Guru. The docor who had lost all hope of reviving life in me, finding me suddenly repeating Vivekachudamani Verse 254 ending with Brahma tatvamasi Bhavayatamani, after shouting JAI GURU MAHARAJ, it seems–fro I have only vague memory of the words I uttered–told me “Do you know you are  coming from FAR? Did you give us Swami a demonstration of stopping of heart for such long time, for which yogis are reputed for?” I only replied that I am not a fakir. To devotees I say that the Grace of Sri Guru Maharaj converted a “one-way-ticket” to yamaloka into a ‘return ticket’ to Ramakrishna Loka; for this world where we repeat his name and knew his children, is the Ramakrishna loka; this world where we can hurrah–“Bhagavat-Bhakta-Bhagavan Ki Jai”. I had written to you 3 years back a souvenir of a semi-dream as we sat on the verandha on1931 or 1932 and looked at that tree near the Vontikoppal Post Office, that leafless tree swinging its multiple arms to the skies in that clear moon lit night, in that moment where all melodies swoon into speechless SILENCE, that semi-dream that solved the problem of the Personal and Impersonal. On this memorable 9th Jan. 1954 night the Grace of Sri Guru-Maharaj made a lived intuition, understand within the twinkling of eye, the truths expounded in Mandukya Up. and Karikas(?) A few moments passed near Maharaj, alone during the moments closeted with him in 1921 at Madras. Those moments alone came into life for the remaining hours of night. After 35 years a few moments when “Maharaj”s presence lifted mind to SILENCE, those moments were tasted once more as if it happened yesterday.

Belur Math permitted me to retire from active work. By the first week of August I am expecting Swami Nisreyasananda. He will have a nice field to work. Besides a convent for girls and a monastery for boys, cultural work is growing here since three years which in the long run gives hope of the realisation of SWAMIJI’S programme of a University according to his conception. The Ashram has now 81 acres of land to which another 21 more will soon be added. All this area is situated surrounded on 3 sides by forest–and all this again so near the capital. Paris, with all the peace of country life–excepting the noise of planes the symbol of forthcoming cataclysm–Every word of your poet’s vision of Kalki and the cries of ‘Ayyo Daha’ are to be fulfilled! The cold world war No. III is gaining temperature, and it will soon come to a hot war or the hottest war the world has seen. Your perioscopic vision of what will happen, shape of things to come, has according to our Puranic tradition await another four thousand years or more for its achievement. (you know I have become an ardent admirer of Puranas, and the Mythological Approach to Reality which a KAVI gives to suffering humanity is on a par with the metaphysical approach. Our University tortured education had caricatured this truth and made us believe that the lowest is Mythology, then theology and then philosophy and the Crown is Metaphysics. I have unlearned this false hierarchy of values. The Puranic approach is the INTEGRAL Purna approach as it contains all the rest–whereas a pure university drilled metaphysics does not contain that salt of life–the power of creative imagination–you are right! The Purana is the real INCARNATION.

I have now a great and amusing hobby–INTEREST IN AKASHA VIMANAS: I have sent you a book by Leslie and Adamski–on ‘the Flying Saucers have landed’ and I have asked you to read first the second part by Adamski. The only reservation I make in this second part is the difficulty to accept the conversation between the Vanusian and Mr. Adamski. The second part is the evidence. The first part written by Leslie–a nephew it seems of Sri Winston Churchill is too theisophical in the explanations. It would have been better if Leslie had kept quiet! and not written the first part. People laughed at the Purana of Adamski not believing that there are facts stranger than fiction. Today I am sending you another book by an American’s army Officer Major Donald Keyhoe– a remarkable document reading which many who came to scoff will remain to pray. The book is called Flying Saucers from outer Space and contains numerous evidences, supported by Radar and eye-witness evidences. In the Engilish edition, I am sending there are no illustrations, whereas in the French there are. The French edition must be translation of a later. impression of the book. In this book you will find a letter published–letter from the U.S.A was Office. In the French edition the facsimile of the whole letter is published (in translation of course) the original being in English. I copy to you a part of this official letter from the Pentagon speaking about Major Key……..,the Officer of the Pentagon writes: “His long association and co-operation with the Air Force, in our study of unidentified flying objects qualifies him as a leading authority in this investigation. The Air Force and its investigative agency–Project Blue book, are aware of Major Keyhoe’s conclusion that the flying saucers are from another planet. The Air Force has never denied that this possibility exists–some of the personnel believe that there may be some strange natural phenomena completely unknown to us, but if the apparently controlled manocurve reported by many competent observers are correct, then the only remaining explanation is the interplanetary answer.” I have got and finished sending another document whose veracity in spite of all my enthusiasm, I am unable to give adhesion. The book is “Aboard on a Flying Saucer.” It does not  speak of any voyage. Only the contents within Vimana when it landed. Eleven visits to this Vimana directed by beautiful woman as its captain are described. If this is to be believed one has to abdicate all our earth born judgements! Though your critical mind would not allow any credit to what the author says–a non-fiction, factual experience. Your poet’s mind will be highly tickled. The author talked 11 times with The lady Captain and Vimana had 31 to 41 as crew. Those people from the other planet talk all languages of our earth as they have some super instinct and the description of life in that planet as given by the Lady Captain to Truman is exactly as what is described in the satyayuga period. The account of Adamski and the author of this book Truman Bethrun (?) indicates that these visitors come, alarmed by the warring instincts of earth-men–an instinct with the explosion of H-Bombs may blow up this world. The energy so released will dislocate life in other planets as in the microscopic world, change the atomic structure. One metal can be changed into another, by dislocating the structure of lead, gold can be formed! The whole solar system can be compared to an atom. As the Purana told by beings in other planets to our men have who met them, like Adamski, records this fear of dislocation to the solar system, in the event of our earth breaking up. Because of the Puranic mind insilled into us by Sri Guru Maharaj when he said that His Message will remain to equillibrate Dharma in this world for another five hundred years, I cannot believe that there will be an end of the world for another five hundred years, I cannot believe that there will be an end of the world now–by our Lord has programmed 500 years for His work to spread. Recently a well known man of science wrote that  by the bursting of 12 Hydrogen bombs the inclination of earth on its axis will change and the net result of man’s adventure will be the coming in of the Glacial age once more. The whole earth will be covered with white ice–the Ksheerasagara of our Puranas.”Imagination has only to figure the metaphysical concept of Return to the Original Source” of the poet’s figure of Krishna sucking his toe floating a banian leaf to make the picture complete. As Kaliyuga has another four thousand years more, I don’t believe of the Glacial age coming now and there may still be scope for Persons (?) from other planets intervening and stop man’s mad rush after destruction.

My mind saturated more and more by the Vedantic, Mandukya Upanishid position (?) commented by Gaudapada takes all these– if they are true as Maya Jokes. If this world is a joke of Maya Maya can break more jokes to make the play “un-cipherable” (un-intelligible!) incapable of rendering. If intelligent by our intellectual exploits of reasoning and research. In Baudapada is notion of SYHANTI–Dharma any discovery in the Vyavaharic plane will not be in opposition to Paramarths satta. When people ask–why do you take interest in Akasha Vimanas, I reply:-A panic is gaining evrerywhere due to the possibility of hostility breaking out the 3rd world war. 51 square miles of area of Paris and London will  disappear in a second if H–Bombs burst out. In this pause, man cannot live without hope–of the Reality(?) of Flying Saucers, give a nice “resting place” for man’s anguished mind! To make this letter have a topical interest I must tell you last year about this time two members of the Ashram, Rakhal and one another at midday sighted the movement in the sky of objects and the photos give in Adamski’s book tally with their observation. And again on  on 21st June that is 3 days back, the same phenomenon was observed at 4-30 P.M.

Please send this letter to Viresh Maharaj and Seshumama (M.Seshagiri Rao) and request Shamanna to take typed copy and send it to our Priyanath Maharaj at Madras. Priyanath Maharaj wrote to me a very nice letter 11 days back. I will reply to  him a short letter telling him that you will send him a copy of this letter for further news. Give my news to Manappa. Manjappa gowda and all friends–with deep love

Yours affectionately
Siddheswarananda

೯-೬-೧೯೫೪

ಪ್ರೀತಿಯ ಪುಟ್ಟಪ್ಪನವರೆ,

ನಾನು ಖಾಯಿಲೆಯಲ್ಲಿದ್ದಾಗ ನೀವು ಬರೆದ ವಾತ್ಸಲ್ಯಪೂರ್ಣ ಪತ್ರದಿಂದಾಗಿ ನಾನು ಆನಂದ ತುಂದಿಲನಾದೆ. ಶ್ರೀಗುರುಮಹಾರಾಜರ ಅನುಗ್ರಹ ಮಾತ್ರ ನನ್ನ ಉಳಿವಿಗೆ ಕಾರಣವಾಗಿದೆ. ನಾನನುಭವಿಸಿದ ಹೃದಯಾಘಾತ ಕ್ರೂರತರದ್ದಾಗಿತ್ತು. ಹೆಪರೀನ್ ಎಂಬ ರಕ್ತ ಘನೀಕರಣ ನಿರೋಧಕ ಚುಚ್ಚುಮದ್ದು ಇಷ್ಟದೇವತೆಯ ಸಂದೇಶವಾಹಕವೋ ಎನ್ನುವಂತಿತ್ತು. ತಕ್ಷಣವೇ ಹೃದಯ ಚಲನೆ ನಿಂತಿತು. ವೈದ್ಯರ ಬರವು ವಿಲಂಬವಾಯಿತು. ಬಂದವರೇ ನನ್ನನ್ನು ಪರೀಕ್ಷಿಸಿದಾಗ, ನಾನು ಸತ್ತುಹೋಗಿರಬೇಕೆಂದು ಊಹಿಸಿದರು: ಹೃದಯದ ಹೊಡೆತವಿಲ್ಲ, ನಾಡಿಯ ಮಿಡಿತವಿಲ್ಲ, ರಕ್ತದ ಒತ್ತಡವಿಲ್ಲ. ಕೊಟ್ಟಕೊನೆಯ ಪ್ರಯತ್ನವೆಂದು ಎದೆಯನ್ನು ತಿಕ್ಕಿದರು; ಎಂಟು ಕರ್ಪೂರದ ಚುಚ್ಚುಮದ್ದು ಕೊಟ್ಟರು. ಸತ್ತ ಅರ್ಧ ಗಂಟೆಯ ನಂತರ, ಅಗಲಿದ್ದಷ್ಟೇ ತೀವ್ರವಾಗಿ ಪ್ರಜ್ಞೆ ಮರುಕೊಳಿಸಿತು; ಮರುಹುಟ್ಟು ಪಡೆದಂತಾಯಿತು; ಅದ್ವೈತದ ವಾಸ್ತವಸತ್ಯವನ್ನು ಪುನರುನುಭವಿಸಿದಂತಾಯಿತು. ಇಡೀ ಇರುಳೆಲ್ಲ ಆ ಸತ್ಯ ಪ್ರೇಮರೂಪದಲ್ಲಿ ನನ್ನನ್ನು ಆಕ್ರಮಿಸಿಕೊಂಡಂತಿತ್ತು. ಆ ಪ್ರೇಮ ಅಗೋಚರ ಕೃಪಾಶಕ್ತಿಯಿಂದ ಪ್ರವಹಿಸುತ್ತಿದ್ದಂತೆ, ವಾತ್ಸಲ್ಯಸ್ವರೂಪಿಯಾದ ಗುರುಮಹರಾಜರ ಪ್ರತ್ಯಕ್ಷ ದರ್ಶನಕ್ಕಿಂತ ಮಿಗಿಲಾದ ವಾಸ್ತವತೆಯಂತೆ ತೋರುತ್ತಿತ್ತು. ‘ಬ್ರಹ್ಮ ತತ್ವಮಸಿ ಭಯಾತ್ಮನಿ’ ಎಂದು ಕೊನೆಯಾಗುವ ವಿವೇಕ ಚೂಡಾಮಣಿಯ ಶ್ಲೋಕವನ್ನುಚ್ಚರಿಸುತ್ತಿದ್ದುದನ್ನು ಕೇಳಿಸಿಕೊಂಡ ವೈದ್ಯರು, ನಾನು ಬದುಕುವುದಿಲ್ಲವೆಂದೆ ತಿಳಿದಿದ್ದ ಅವರು ‘ಕಾಣದ ದೂರದಿಂದ ನೀವು ಬಂದಿದ್ದೀರೆಂಬ ವಿಷಯ ನಮಗರಿವಾಗಿದೆಯೆ? ಸ್ವಾಮಿ, ಬಹು ದೀರ್ಘಕಾಲ ಹೃದಯಸ್ತಂಭನ ಪ್ರದರ್ಶನವನ್ನು ತೋರಿಸಿದಿರಲ್ಲವೆ? ಯೋಗಿಗಳು ಅಂಥ ಶಕ್ತಿ ಪ್ರದರ್ಶನಕ್ಕಾಗಿ ಪ್ರಸಿದ್ಧರಾಗಿದ್ದರಲ್ಲವೆ? ಎಂದು ನುಡಿದರು. ಆಗ ನಾನಾಡಿದ ಮಾತುಗಳ ನೆನಪು ಮಸಕುಮಸಕಾಗಿದೆ. ನಾನು ಫಕೀರನಲ್ಲವೆಂದು ಉತ್ತರಿಸಿದೆ. ಗುರುಮಹಾರಾಜರ ಅನುಗ್ರಹ ಯಮಲೋಕದ ಏಕ ,ಮಾರ್ಗೀಯ ಟಿಕೆಟ್ಟನ್ನು ರಾಮಕೃಷ್ಣ ಲೋಕದ ದ್ವಿಮಾರ್ಗೀಯ ಟಿಕೆಟ್ಟಾಗಿ ಪರಿವರ್ತಿಸಿದೆ ಎಂದು ನಾನು ಭಕ್ತರಿಗೆ ತಿಳಿಸುತ್ತೇನೆ. ಅವರ ನಾಮಸ್ಮರಣೆಗವಕಾಶವಿರುವ, ಭಗವಾನ್ ಕೀ ಜೈ ಎಂದು ಘೋಷಿಸಬಹುದಾದ, ಅವರ ಮಕ್ಕಳೊಡನಾಡುವ ಈ ಲೋಕವೇ ರಾಮಕೃಷ್ಣಲೋಕ. ಮೂರು ವರ್ಷಗಳ ಹಿಂದೆ ಅರ್ಧಸ್ವಪ್ನಾವಸ್ಥೆಯ ಸ್ಮೃತಿಚಿತ್ರವನ್ನು ಕುರಿತು ನಿಮಗೆ ಬರೆದಿದ್ದೆ. ೧೯೩೧-೩೨ನೆಯ ವರ್ಷದಲ್ಲೊಂದು ದಿನ ಪಡಸಾಲೆಯಲ್ಲಿ ಕುಳಿತು ಒಂಟಿಕೊಪ್ಪಲ್ ಅಂಚೆಕಚೇರಿಯ ಬಳಿಯ ವರ್ಣರಹಿತ ವೃಕ್ಷದ ಕಡೆಗೆ ನೋಡುತ್ತದ್ದೆ. ಜ್ಯೋತ್ಸ್ನೆಯಲ್ಲಿ ಮುಳುಗಿದ್ದ ಆ ವೃಕ್ಷದ ಅಸಂಖ್ಯಾತ ತೋಳುಗಳು ಆಕಾಶದಲ್ಲಿ ತೂಗಾಡುತ್ತಿದ್ದುವು. ಆ ಅಮೃತ ಕ್ಷಣದಲ್ಲಿ ಎಲ್ಲ ಮಧುರಸ್ವರಗಳು ನಿಷ್ಪಂದ ಮೌನದಲ್ಲಿ ಮೈಮರೆತಂತಿದ್ದುವು. ಆ ಅಮೃತ ಕ್ಷಣದಲ್ಲಿ ಎಲ್ಲ ಮಧುರಸ್ವರಗಳು ನಿಷ್ಪಂದ ಮೌನದಲ್ಲಿ ಮೈಮರೆತಂತಿದ್ದುವು. ವ್ಯಷ್ಟಿಸಮಷ್ಟಿಗಳ (ಸಾಕಾರ-ನಿರಾಕಾರಗಳ) ಸಮಸ್ಯೆಯನ್ನು ಆ ಅರ್ಧಸ್ವಪ್ನಾವಸ್ಥೆ ಬಗೆಹರಿಸುವಂತಿತ್ತು. ೧೯೫೪ನೆಯ ಜೂನ್ ೯ನೆಯ ತೇದಿಯಾದ ಇಂದು ಸದಾ ಸಂಸ್ಮರಣೇಯವಾದ ಸುದಿನ; ಗುರುಮಹಾರಾಜರ ಅನುಗ್ರಹವನ್ನು ಪುನರನುಭವಿಸಿದ ಮಹಾದಿನ; ಮುಂಡಕೋಪ ನಿಷತ್ತಿನ ಸತ್ಯವನ್ನು ದರ್ಶಿಸಿದ ಮಹೋಜ್ವಲ ದಿನ. ೧೯೨೧ರಲ್ಲಿ ಮದ್ರಾಸಿನಲ್ಲಿದ್ದಾಗ ನನ್ನ ಪಾಲಿಗೊದಗಿ ಬಂದಿತ್ತು. ಇಡೀ ರಾತ್ರಿಯೆಲ್ಲ ಅದೇ ದರ್ಶನಾನಂದದಲ್ಲಿ  ಮೈಮರೆತಿದ್ದೆ. ಮೂವತ್ತೆರಡು ವರ್ಷಗಳ ಹಿಂದಿನ ಗುರುಮಹಾರಾಜರ ದರ್ಶನ ನಿನ್ನೆ ತಾನೆ ನಡೆದ ಘಟನೆಯಂತೆ ಭಾಸವಾಗಿ ನನ್ನನ್ನು ಮೌನಸಮಾಧಿಯಲ್ಲಿ ಮುಳುಗಿಸಿತು.

ಕ್ರಿಯಾತ್ಮಕ ಚಟುವಟಿಕೆಗಳಿಂದ ನಿವೃತ್ತನಾಗುವಂತೆ ಬೇಲೂರು ಮಠ ನನಗೆ ಅನುಮತಿ ಇತ್ತಿದೆ. ಆಗಸ್ಟ್ ಮೊದಲನೆಯ ವಾರದೊಳಗಾಗಿ ಸ್ವಾಮಿ ನಿಶ್ರೇಯಸಾನಂದರು ಇಲ್ಲಿಗೆ ಬರಬಹುದೆಂದು ನಿರೀಕ್ಷಿಸಿದ್ದೇನೆ. ಸೇವಾಕಾರ್ಯಕ್ಕೆ ಇದೊಂದು ಅತ್ಯುತ್ತಮ ಕ್ಷೇತ್ರ. ಇಲ್ಲಿ ಹುಡುಗಿಯರಿಗೊಂದು ಶಾಲೆಯಿದೆ, ಹುಡುಗರಿಗೊಂದು ಆಶ್ರಮವಿದೆ. ಅವುಗಳ ಜತೆಗೆ ಸಾಂಸ್ಕೃತಿಕ ಘಟಕವೊಂದು ಮೂರು ವರ್ಷಗಳಿಂದ ಕಾರ್ಯನಿರತವಾಗಿದೆ. ಅದು ಮುಂದಿನ ದಿನಗಳಲ್ಲಿ ಸ್ವಾಮಿಜಿಯವರ ಕಲ್ಪನೆಯ ವಿಶ್ವವಿದ್ಯಾಲಯದ ಅಸ್ತಿತ್ವಕ್ಕೆ ಭದ್ರಬುನಾದಿಯಗಬಹುದೆಂದು ನಿರೀಕ್ಷಿಸಲಾಗಿದೆ. ಆಶ್ರಮಕ್ಕೀಗ ೮ ಎಕರೆ ಜಮೀನಿದೆ. ಅದರ ಜತೆಗೆ ೨ಎಕರೆ ಹೆಚ್ಚುವರಿ ಭೂಮಿಯನ್ನು ಸೇರಿಸುವುದೆಂದಿದೆ. ಆಶ್ರಮದ ಮೂರು ದಿಕ್ಕುಗಳಲ್ಲಿ ಕಾಡು ಸುತ್ತುವರಿದಿದೆ. ಆದರೂ ರಾಜಧಾನಿ ಪ್ಯಾರಿಸ್ಸಿನಿಂದ ದೂರಿವಿಲ್ಲ. ಭವಿಷ್ಯತ್ತಿನ ಮಹಾವಿಪ್ಲವದ ಸಂಕೇತವಾದ ವಿಮಾನಗಳ ಮಹಾನಿಸ್ವನ ಹೊರತಾಗಿ ಇಲ್ಲಿ ಹಳ್ಳಿಗಾಡಿನ ಶಾಂತಿ ತಾಂಡವವಾಡುತ್ತಿದೆ. ಕಲ್ಕಿಯಲ್ಲಿ ಅಭಿವ್ಯಕ್ತಿಗೊಂಡಿರುವ ಕವಿದರ್ಶನದ ಪ್ರತಿಯೊಂದು ಪದವೂ ‘ಅಯ್ಯೊ’ ‘ದಾಹ’ ಎಂಬ ಹಾಹಾಕಾರಗಳೂ ಒಂದಲ್ಲ ಒಂದು ದಿನ ಫಲಿಸಬೇಕಾಗಿದೆ. ಜಗತ್ತಿನ ಮೂರನೆಯ ಶೀತಯುದ್ಧ ದಿನೇ ದಿನೇ ಬಿಸಿಯಾಗುತ್ತಿದೆ. ಅದು ಬಹಬೇಗನೆ ಪ್ರಪಂಚ ಹಿಂದೆಂದೂ ಕಾಣದ ಭೀಕರ ಯುದ್ಧವಾಗಿ ಪರಿವರ್ತನೆ ಹೊಂದಬಹುದೆಂಬ ಸೂಚನೆಗಳೂ ಇವೆ. ನಿಮ್ಮ ಪೂರ್ಣದೃಷ್ಟಿಗೆ ಗೋಚರವಾದ ಪ್ರತಿಯೊಂದು ಘಟನೆಯೂ ನಡೆಯಬೇಕಷ್ಟೆ. ಪೌರಾಣಿಕ ಸಂಪ್ರದಾಯದ ಪ್ರಕಾರ ಅವುಗಳ ಸಂಭವತೆಗೆ ಒಂದು ಸಾವಿರ ವರ್ಷವಾದರೂ ಬೇಕಾಗಬಹುದು.

ಪುರಾಣಗಳ ಬಗ್ಗೆ ನನಗೆ ಅಪಾರ ಮೆಚ್ಚುಗೆಯಿದೆ. ದುಃಖತಪ್ತ ಮಾನವ ಕುಲದ ಕಣ್ಣೀರೊರಸುವಲ್ಲಿ ಕವಿ ಸತ್ಯವನ್ನು ಕಾಣಲು ಯತ್ನಿಸುತ್ತಾನೆ. ಆ ಸತ್ಯದರ್ಶನಕ್ಕಾಗಿ ಅವನು ಅನುಸರಿಸುವ ಮಾರ್ಗ ಪೌರಾಣಿಕವಾದದ್ದು. ಅದು ಅಧ್ಯಾತ್ಮಮಾರ್ಗಕ್ಕೆ ಸಮನಾದದ್ದು. ನಮ್ಮ ವಿಶ್ವವಿದ್ಯಾನಿಲಯದ ದುರ್ಬಲ ಶಿಕ್ಷಣ ಸತ್ಯಾನ್ವೇಷಣ ಮಾರ್ಗಗಳಲ್ಲಿ ಅಧ್ಯಾತ್ಮಮಾರ್ಗಕ್ಕೆ ಅತ್ಯುಚ್ಚಸ್ಥಾನವನ್ನು ನೀಡಿ, ಪುರಾಣಕ್ಕೆ ನೀಚತಮಸ್ಥಾನವನ್ನು ಕಲ್ಪಿಸಿ, ದೇವತಾಶಾಸ್ತ್ರ ಹಾಗೂ ತತ್ತ್ವಶಾಸ್ತ್ರಕ್ಕೆ ಮಧ್ಯಮಸ್ಥಾನವನ್ನು ನೀಡುವ ಮೂಲಕ ಸತ್ಯಕ್ಕೆ ಅಪಚಾರವೆಸಗಿದ್ದುವು. ಮೌಲ್ಯಗಳ ಕೃತ್ರಿಮ ಶ್ರೇಣಿಯನ್ನು ಮರೆಯಲು ನಾನು ಪ್ರಯತ್ನಿಸಿದ್ದೇನೆ. ಎಲ್ಲವನ್ನೂ ಒಳಕೊಳ್ಳುವುದರಿಂದ ಪೌರಾಣಿಕ ಮಾರ್ಗವೇ ಸಮಗ್ರವಾದದ್ದು. ವಿಶ್ವವಿದ್ಯಾಲಯದ ಕಸರತ್ತಿನಿಂದ ಕಲಿತ ವೇದಾಂತ (metaphysics)ದಲ್ಲಿ ಜೈವಿಕತೆಯಾಗಲಿ ಸೃಜನಶೀಲಪ್ರತಿಭಾಶಕ್ತಿಯಾಗಲಿ ಇರುವುದಿಲ್ಲ. ಈ ವಿಷಯದಲ್ಲಿ ನಿಮ್ಮ ನಿಲವೇ ಸರಿ! ಪುರಾಣ ನಿಜವಾದ ಅವತಾರ.

ನಾನೀಗ ಕುತೂಹಲಯುಕ್ತವಾದ ಹವ್ಯಾಸವೊಂದರಲ್ಲಿ, ಅಂದರೆ ಆಕಾಶ ವಿಮಾನಗಳಲ್ಲಿ-ಆಸಕ್ತಿಯುಳ್ಳವನಾಗಿದ್ದೇನೆ. ಡೆಸ್ಮೆಂಡ್ ವೆಸ್ಲಿ ಮತ್ತು ಜಾರ್ಜ್ ಆಡಂ ಸ್ಕಿ” ಬರೆದ ಪುಸ್ತಕವೊಂದನ್ನು ನಿಮಗೆ ಕಳಿಸಿದ್ದೇನೆ; “ಹಾರಾಡುವ ತಟ್ಟೆಗಳು ಭೂಮಿಯ ಮೇಲಿಳಿದಿವೆ.” ಮೊದಲು ಆಡಮ್‌ಸ್ಕಿ

[1] ಬರೆದ ಪುಸ್ತಕವೊಂದನ್ನು ನಿಮಗೆ ಕಳಿಸಿದ್ದೇನೆ; “ಹಾರಾಡುವ ತಟ್ಟೆಗಳು ಭೂಮಿಯ ಮೇಲಿಳಿದಿವೆ.” ಮೊದಲು ಆಡಮ್‌ಸ್ಕಿ ಬರೆದಿರುವ ಎರಡನೆಯ ಭಾಗವನ್ನೋದಿ. ಮೊದಲನೆಯದರಲ್ಲಿ ಅನೇಕ ಸಾಕ್ಷಿ ಪುರಾವೆಗಳಿವೆ. ಮೊದಲನೆಯ ಭಾಗ ತಾತ್ವಿಕವಾಗಿ ಅತಿಯಾಯಿತೇನೊ ಎನಿಸುತ್ತದೆ. ಆ ಭಾಗವನ್ನು ಕೈಬಿಟ್ಟಿದ್ದರೂ ನಷ್ಟವಾಗುತ್ತಿರಲಿಲ್ಲ. ಕಲ್ಪಿತ ಕಥೆಯೊಳಗಿನ ಸಂಗತಿಗಳಿಗಿಂತ ವಿಚಿತ್ರವಾದುವು ಲೋಕದಲ್ಲಿ ನಡೆಯುತ್ತವೆಂಬುದನ್ನು ಮರೆತ ಜನ ಆಡಂಸ್ಕೀಯ ಗ್ರಂಥವನ್ನು ಪುರಾಣವೆಂದು ಅಪಹಾಸ್ಯ ಮಾಡುತ್ತಿದ್ದಾರೆ. ಅಮೆರಿಕೆಯ ಸೈನ್ಯಾಧಿಕಾರಿ ಮೇಜರ್ ಡೊನಾಲ್ಡ್ ಕಿಹೋ ಬರೆದ ಮತ್ತೊಂದು ಪುಸ್ತಕವನ್ನು ಇಂದೇ ನಿಮಗೆ ಕಳಿಹಿಸುತ್ತಿದ್ದೇನೆ. ದಾಖಲೆಗಳಿಂದ ಕೂಡಿದ ಆ ಪುಸ್ತಕವನ್ನೋದಿದಾಗ ಹಾಸ್ಯಗಾರರು ಪ್ರಾರ್ಥನಾಸಕ್ತರಾಗಬಹುದು. ಪುಸ್ತಕದ ಹೆಸರು ‘ಬಾಹ್ಯಾಕಾಶದ ಹಾರಾಡುವ ತಟ್ಟೆಗಳು’. ಅದರಲ್ಲಿ ರೆಡಾರ್ ನಿಂದ ಪಡೆದ ದಾಖಲೆಗಳಿವೆ, ಸಾಕ್ಷಿಗಳಿಂದ ಪಡೆದ ಪ್ರಮಾಣಗಳಿವೆ. ನಾನು ಕಳಿಸುವ ಇಂಗ್ಲಿಷ್ ಮುದ್ರಣದ ಪ್ರತಿಯಲ್ಲಿ ಚಿತ್ರಗಳಿಲ್ಲ; ಫ್ರೆಂಚ್ ಪ್ರತಿಯಲ್ಲಿ ಸಾಕಷ್ಟಿವೆ. ಪ್ರಾಯಶಃ ಫ್ರೆಂಚ್ ಪ್ರತಿ ಆ ಪುಸ್ತಕದ ಇತ್ತೀಚಿನ ಮುದ್ರಣ ಪ್ರತಿಯ ಭಾಷಾಂತವಿರಬಹುದು. ಅಮೆರಿಕೆಯ ಯುದ್ಧ ಕಚೇರಿಯಿಂದ ಪ್ರಕಟವಾದ ಪತ್ರವೊಂದು ಈ ಗ್ರಂಥದಲ್ಲಿ ಸೇರಿದೆ. ಅದರ ಫ್ರೆಂಚ್ ಭಾಷಾಂತರದ ಪಡಿಯಚ್ಚೂ ಆ ಗ್ರಂಥದಲ್ಲಿದೆ. ‘ಮೇಜರ್ ಕೀ ಹೋನಿ’ಗೆ ಸಂಬಂಧಿಸಿದ ಯುದ್ಧ ಕಚೇರಿಯ ಅಧಿಕೃತ ಪತ್ರದ ಒಂದು ಭಾಗವನ್ನಿಲ್ಲಿ ಪ್ರತಿಮಾಡಿದ್ದೇನೆ. “ಹಾರಾಡುವ ವಸ್ತುಗಳ ಅಧ್ಯಯನದಲ್ಲಿ ವಾಯುಸೈನ್ಯದೊಂದಿಗೆ ದೀರ್ಘಸಂಪರ್ಕವಿಟ್ಟುಕೊಂಡು ಸಹಕರಿಸುತ್ತಿರುವ ಅವರು ಈ ಕ್ಷೇತ್ರದಲ್ಲಿ ಪ್ರಮಾಣ ಪುರುಷರೆಂದೇ ಹೇಳಬೇಕು. ಆ ವಸ್ತುಗಳು ಬೇರೊಂದು ಗ್ರಹದಿಂದ ಬಂದವುಗಳೆಂಬ ಮೇಜರ್ ಕೀಹೋ ಅವರ ತೀರ್ಮಾನವನ್ನು ವಾಯುಪಡೆಯೂ, ಅದರ ಸಂಶೋಧನಾಂಗವೂ ಒಪ್ಪಿಕೊಂಡಿವೆ. ಅವು ಭೇದಿಸಲಾಗದ ರಹಸ್ಯಗರ್ಭಿತವಾದ ವಿಚಿತ್ರ ನೈಸರ್ಗಿಕ ವಸ್ತುಗಳೆಂದು ಕೆಲವರು ಶಂಕಿಸುತ್ತಾರೆ. ಆದರೆ ಸಮರ್ಥ ವೀಕ್ಷಕರ ಊಹೆಗಳು ನಿಜವೆನ್ನುವುದಾದರೆ, ಅವು ಬಾಹ್ಯಂತರಿಕ್ಷದ ಗ್ರಹಗಳಿಂದ ಬಂದುವೆಂದೇ ಹೇಳಬೇಕಾಗುತ್ತದೆ.

ಇದೆತಾನೆ ಮತ್ತೊಂದು ಪುಸ್ತಕವನ್ನು ಕುತೂಹಲೋತ್ಸಾಹದಿಂದ ಓದಿ ಮುಗಿಸಿದ್ದೇನೆ. ಅದರ ಹೆಸರು ‘ಹಾರಾಡುವ ತಟ್ಟೆಯಲ್ಲಿ ಪ್ರಯಾಣ’ (Abpard on a Flying Saucer) ಅದು ಪ್ರಯಾಣದ ವಿಷಯ ತಿಳಿಸುವುದಿಲ್ಲ. ಭೂಮಿಗಿಳಿದಾಗ ವಿಮಾನದಲ್ಲೇ ಏನೇನಿದೆ ಎಂಬುದನ್ನು ವಿವರಿಸುತ್ತದೆ. ವಿಮಾನದ ಬಳಿ ಹನ್ನೊಂದು ಸಾರಿ ಹೋಗಲಾಯಿತಂತೆ! ಸುಂದರ ತರುಣಿಯೊಬ್ಬಳು ಅದರ ಕಫ್ತಾನಳಂತೆ; ಗ್ರಂಥಕರ್ತರ ಮಾತುಗಳಿಗೆ ನಿಮ್ಮ ತಾರ್ಕಿಕ ಬುದ್ಧಿ ಬೆಲೆ ಕೊಡುವುದಿಲ್ಲ. ನಿಜ. ಆದರೆ ಅವು ಕಾಲ್ಪನಿಕವಲ್ಲವೆಂದು ತಿಳಿದಾಗ ಕವಿಚೇತನಕ್ಕೆ ಕಚಗುಳಿ ಇಟ್ಟಂತಾಗುತ್ತದೆ. ಗ್ರಂಥಗರ್ತ ಕಫ್ತಾನಿಯೊಡನೆ ೧೧ ಸಾರಿ ಮಾತಾಡಿದನು. ಆ ವಿಮಾನದೊಳಗೆ ೩೦-೪೦ ಜನ ನಾವಿಕರಿದ್ದರು. ಬಾಹ್ಯಗ್ರಹದ ಜನ ವಿಶೇಷ ಸಾಮರ್ಥ್ಯದಿಂದಾಗಿ ಭೂಲೋಕದ ಎಲ್ಲ ಭಾಷೆಗಳನ್ನು ಬಲ್ಲವರಾಗಿದ್ದಾರೆ. ಕಫ್ತಾನಿ ನೀಡಿದ ಬಾಹ್ಯಗ್ರಹದ ಜೀವನ ವಿವರಣೆ ಸತ್ಯಯುಗದ ಜೀವನವನ್ನು ಹೋಲುತ್ತದೆ. ಜಲಜನಕ ಬಾಂಬಿನ ಆಸ್ಫೋಟನೆ ಭೂಮಿಯನ್ನೇ ಸಿಡಿಸಿಬಡಬಹುದೆಂಬ ಸೂಚನೆ ಅವರ ಗಮನಕ್ಕೆ ಬರಲಾಗಿ ಅವರು ಈ ಗ್ರಹಕ್ಕೆ ಬರಲಾಯಿತೆಂದು ಹೇಳುತ್ತಾರೆ. ಆಸ್ಫೋಟದಿಂದ ಮುಕ್ತಗೊಂಡ ಪ್ರಳಯಶಕ್ತಿ ಅನ್ಯಗ್ರಹಗಳ ಜೀವನವನ್ನು ಅಸ್ತವ್ಯಸ್ತಗೊಳಿಸುವುದಲ್ಲದೆ, ಅಣುರಚನೆಯನ್ನು ಬದಲಿಸುತ್ತದೆ, ಲೋಹಗಳ ಸ್ವರೂಪವನ್ನು ವ್ಯತ್ಯಾಸಗೊಳಿಸುತ್ತದೆ. ಈ ಅಸ್ತವ್ಯಸ್ತತೆಯಿಂದಾಗ ಸೀಸ ಚಿನ್ನವಾಗಬಹುದು, ಒಂದು ಲೋಹ ಮತ್ತೊಂದಾಗಬಹುದು. ಇಡೀ ಸೂರ್ಯವ್ಯೂಹವನ್ನು ಒಂದು ಅಣುವಿಗೆ ಹೋಲಿಸಬಹುದು. ಒಂದು ಗ್ರಹದ ಜನ ಮತ್ತೊಂದು ಗ್ರಹದ ಜನರನ್ನು ಭೇಟಿಯಾಗುವ ವಿಚಾರವನ್ನು ಪುರಾಣಗಳಲ್ಲಿ ನಾವು ಓದಿದ್ದೇವಲ್ಲವೆ? ಆಡಮ್‌ಸ್ಕಿ ಕಂಡ ಜನ ಅಂಥವರಿರಬಹುದು. ಭೂಲೋಕದ ಸಿಡಿತದಿಂದ ಸೂರ್ಯವ್ಯೂಹ ಸ್ಥಾನಾಂತರ ಹೊಂದಬಹುದೆಂಬ ಭಯವನ್ನು ಅವರು ವ್ಯಕ್ತಪಡಿಸಿರುವರೆಂದು ಆಡಮ್‌ಸ್ಕಿ ವಿವರಿಸುತ್ತಾನೆ. ನಮ್ಮ ಪುರಾಣಪ್ರಜ್ಞೆಯನ್ನು ಜಾಗ್ರತಗೊಳಿಸಿದವರು ಗುರುಮಹಾರಾಜರು. ಈ ಲೋಕದಲ್ಲಿ ಐನೂರು ವರ್ಷಗಳ ತನಕ ತಮ್ಮ ಸಂದೇಶ ಧರ್ಮದ ಸಮತೋಲನವನ್ನು ಕಾಪಾಡುತ್ತದೆಂದು ಅವರು ಹೇಳಿದ್ದುಂಟು. ಐನೂರು ವರ್ಷಗಳಲ್ಲಿ ಈ ಲೋಕ ಕೊನೆಗೊಳ್ಳುವದೆಂಬುದು ಅವರ ಮಾತಿನ ಅರ್ಥವಲ್ಲ. ಹನ್ನೆರಡು ಜಲಜನಕ ಬಾಂಬುಗಳನ್ನು ಸಿಡಿಸಿದ್ದಾದರೆ ಭೂಮಿಯ ಅಕ್ಷಸ್ಥಿತಿಯೇ ವ್ಯತ್ಯಾಸಗೊಂಡು, ಹಿಮಯುಗ ಪುನರಾವರ್ತನೆಯಾಗುವ ಸಂಭವವುಂಟೆಂದು ಪ್ರಖ್ಯಾತ ವಿಜ್ಞಾನಿಯೊಬ್ಬರು ಇತ್ತೀಚೆಗೆ ಲೇಖನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಅದು ಸಂಭಾವ್ಯವಾಗುವುದಾದರೆ ಇಡೀ ಭೂಮಂಡಲ ಧವಳ ಹಿಮದಿಂದ ಅಚ್ಛಾದಿತವಾಗುತ್ತದೆ. ನಮ್ಮ ಪುರಾಣಗಳ ಕ್ಷೀರಸಾಗರ ವಾಸ್ತವವಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ತೇಲುತ್ತಿರುವ ಆಲದೆಲೆಯ ಮೇಲೆ ಕಾಲ್ಬೆರಳು ಚೀಪುತ್ತ ಮಲಗಿರುವ ಕವಿಕಲ್ಪನೆಯ ಕೃಷ್ಣನ ಚಿತ್ರ ನೆನಪಾಗಿ ಆ ದೃಶ್ಯ ಪೂರ್ಣವಾಗುತ್ತದೆ. ಕೃಷ್ಣ ಸಂಬಂಧವಾದ ಆಧ್ಯಾತ್ಮಿಕ ಕಲ್ಪನೆಯ ಆದಿ ಕಾರಣವೂ ಗೃಹೀತವಾಗುತ್ತದೆ. ಕಲಿಯುಗದ ಅವಧಿ ನಾಲ್ಕುಸಾವಿರ ವರ್ಷಗಳಿಗೂ ಮಿಗಿಲಾಗಿರುವುದರಿಂದ ಹಿಮಯುಗ ಸನ್ನಿಹಿತವಾಗುತ್ತಿದೆ ಎಂಬ ಮಾತನ್ನು ನಾನು ನಂಬುವುದಿಲ್ಲ. ಬಾಹ್ಯಗ್ರಹಗಳ ಜನ ನಡುವೆ ಪ್ರವೇಶಿಸಿ ವಿನಾಶದ ಕಡೆಗಿನ ಹುಚ್ಚು ಕಾತರತೆಯನ್ನು ಸ್ಥಗಿತಗೊಳಿಸಬಹುದೆಂದು ಯೋಚಿಸಲವಕಾಶವಿದೆ.

ವೇದಾಂತ ದರ್ಶನದಲ್ಲಿ ನಿಮಗ್ನವಾಗಿರುವ, ಗೌಡಪಾದರ ಮಾಂಡುಕ್ಯೋಪನಿಷತ್ತಿನ ವ್ಯಾಖ್ಯಾನವನ್ನು ಓದಿರುವ ನನ್ನ ಚೇತನ ಇದೆಲ್ಲ ಮಾಯೆಯ ವಿನೋದಗಳಂತೆ ನಿಜವಿರಬೇಕೆಂದು ಭಾವಿಸುತ್ತದೆ. ಈ ಜಗತ್ತು ಮಾಯೆಯ ವಿನೋದಗಳಂತೆ ನಿಜವಿರಬೇಕೆಂದು ಭಾವಿಸುತ್ತದೆ. ಈ ಜಗತ್ತು ಮಾಯೆಯ ವಿನೋದವೆನ್ನುವುದಾದರೆ, ಆ ಮಾಯೆಯೇ ಇನ್ನೂ ಅನೇಕ ವಿನೋದಗಳನ್ನು ಸೃಷ್ಟಿಸಬಹುದಾಗಿದೆ. ಅವು ಬೌದ್ಧಿಕಸಾಹಸಗಳಿಗಾಗಲಿ, ತರ್ಕಕ್ಕಾಗಲಿ ಸಂಶೋಧನೆಗಳಿಗಾಗಲಿ ಸಗ್ಗುವಂತೆ ಕಾಣುವುದಿಲ್ಲ. ಗೌಡಪಾದರ ಸನಾತನ ಧರ್ಮದನಿರೂಪಣೆಯ ಪ್ರಕಾರ ವ್ಯಾವಹಾರಿಕ ಕ್ಷೇತ್ರದ ಯಾವುದೇ ಅವಿಷ್ಕಾರವಾಗಲಿ ಪರಮಾರ್ಥಿಕ ಸತ್ಯಕ್ಕೆ ವಿರೋಧವಾಗಿರಲಾರದು. ಆಕಾಶವಿಮಾನದ ಬಗ್ಗೆ ನಾನು ತೋರಿಸುತ್ತಿರುವ ಆಸಕ್ತಿಯ ಬಗ್ಗೆ ಜನ ಪ್ರಶ್ನಿಸುವಾಗ ಇದೇ ಉತ್ತರ ನೀಡಬೇಕಾಗುತ್ತದೆ. ಮೂರನೆಯ ಮಹಯುದ್ಧ ಸಂಭವಿಸುವ ಸಾಧ್ಯತೆಯಿಂದಾಗಿ ಎಲ್ಲೆಲ್ಲೂ ಭಯಜ್ವರ ವ್ಯಾಪಿಸುತ್ತಿದೆ. ಜಲಜನಕ ಬಾಂಬನ್ನು ಸಿಡಿಸಿದ್ದಾದರೆ, ಐವತ್ತು ಚದರ ಮೈಲಿ ವಿಸ್ತಾರವುಳ್ಳ ಪ್ಯಾರಿಸ್ ಅಥವಾ ಲಂಡನ್ ನಗರಗಳು ಎರಡೇ ಎರಡು ಸೆಕೆಂಡುಗಳಲ್ಲಿ ನೆಲಸಮವಾಗುತ್ತವೆ. ಮಾನವನ ದುಃಖತಪ್ತ ಚೇತನಕ್ಕೆ ಸುಂದರ ವಿಶ್ರಾಮಸ್ಥಾನವಾಗಬಹುದಾದ ಹಾರಾಡುವ ತಟ್ಟೆಗಳ ಅಸ್ತಿತ್ದ ಭರವಸೆಯಿಲ್ಲದೆ ಮನುಷ್ಯ ಈ ಪ್ರದೇಶದಲ್ಲಿ ಬದುಕುವಂತಿಲ್ಲ. ಇತ್ತೀಚೆಗೆ ನಡೆದ ಘಟನೆಯೊಂದನ್ನು ವಿವರಿಸುವುದಾದರೆ ಈ ಪತ್ರದ ಉಪಯುಕ್ತತೆ ಅಧಿಕವಾಗುತ್ತದೆ. ಕಳೆವರ್ಷ ಸುಮಾರು ಇದೇ ತಿಂಗಳಲ್ಲಿ ಇಬ್ಬರು ಆಶ್ರಮವಾಸಿಗಳು (ಅವರಲ್ಲೊಬ್ಬನ ಹೆಸರು ರಾಖಾಲ್) ಮಧ್ಯಾಹ್ನದ ಸಮಯದಲ್ಲಿ ಆಕಾಶಮಾರ್ಗದಲ್ಲಿ ಚಲಿಸುತ್ತಿದ್ದ ವಸ್ತುವೊಂದನ್ನು ಗಮನಿಸಿದರು. ಅಡಮ್‌ಸ್ಕಿ ಪುಸ್ತಕದ ಚಿತ್ರಗಳನ್ನು ಹಾಗೂ ವಿವರಗಳನ್ನು ಅವು ಹೋಲುತ್ತಿದ್ದುವು. ಮತ್ತೆ ಜೂನ್ ೨೧ರಂದು, ಅಂದರೆ ಮೂರು ದಿನಗಳ ಹಿಂದೆ ಅಪರಾಹ್ನ ೪-೨೦ರ ಸಮಯದಲ್ಲಿ ಅದೇ ದೃಶ್ಯವನ್ನು ವೀಕ್ಷಿಸಲಾಯಿತು.

ದಯೆಯಿಟ್ಟು ಈ ಪತ್ರವನ್ನು ವೀರೇಶ್ ಹಾಗೂ ಶೇಷುಮಾಮ (ಎಂ. ಶೇಷಗಿರಿರಾವ್) ಅವರ ಮುಂದೆ ಓದಿ. ಇದರ ಪ್ರತಿಯೊಂದನ್ನು ಸಿದ್ಧಗೊಳಿಸಿ, ಮದ್ರಾಸಿನ ಪ್ರಿಯನಾಥ್ ಮಹಾರಾಜರಿಗೆ ಕಳಿಸಿಕೊಡುವಂತೆ ಶಾಮಣ್ಣನಿಗೆ ತಿಳಿಸಿ. ಪ್ರಿಯನಾಥ್ ಮಹಾರಾಜರಿಂದ ಎರಡು ದಿನಗಳ ಹಿಂದೆ ಸೊಗಸಾದ ಪತ್ರ ಬಂದಿತ್ತು. ಅವರಿಗೊಂದು ಸಂಕ್ಷಿಪ್ತ ಪತ್ರವನ್ನು ಬರೆದು, ಹೆಚ್ಚಿನ ಸಮಾಚಾರಕ್ಕಾಗಿ ಈ ಪತ್ರದ ಪ್ರತಿಯೊಂದನ್ನು ನೀವು ಕಳಿಸುವುದಾಗಿ ತಿಳಿಸುತ್ತೇನೆ. ಮಾನಪ್ಪ, ಮಂಜಪ್ಪಗೌಡ ಮತ್ತು ಇತರ ಗೆಳೆಯರಿಗೆಲ್ಲ ನನ್ನ ವಿಷಯ ತಿಳಿಸಿ.

ಆತ್ಮೀಯತೆಯ ಪ್ರೀತಿಯೊಡನೆ ನಿಮ್ಮವನೇ ಆದ
ಸಿದ್ದೇಶ್ವರಾನಂದ

 


[1] ಆ ಪುಸ್ತಕ ನಿಮ್ಮ ಕೈ ಸೇರಿತೋ ಏನೋ ತಿಳಿಯಲಿಲ್ಲ. ಅದು ಎಲ್ಲಿ ತಪ್ಪಿಸಿಕೊಂಡಿತೋ ಕಾಣೆ. ಎರಡು ಮೂರು ವರ್ಷಗಳ ಹಿಂದೆ ವರ್ಜಿಲನ ’೨೫ನೆಯ ಗಂಟೆ’ ಎಂಬೊಂದು ಪುಸ್ತಕ ಕಳಿಸಿದ್ದೆ. ಅದೊಂದು ಅದ್ಭುತ ಕಾದಂಬರಿ. ಅದರ ಬಗ್ಗೆಯೂ ನಿಮ್ಮಿಂದ ಪತ್ರ ಬಂದಿಲ್ಲ.