ಅಜ್ಜಯ್ಯ (ಬಸಪ್ಪಗೌಡರು), ಅಪ್ಪಯ್ಯ (ವೆಂಕಟಯ್ಯಗೌಡರು), ದೊಡ್ಡ ಚಿಕ್ಕಪ್ಪಯ್ಯ (ರಾಮಯ್ಯಗೌಡರು) ಇವರ ವ್ಯಕ್ತಿತ್ವಗಳನ್ನು ನಾನು ಹುಡುಗನಾಗಿದ್ದು ಪೂರ್ಣ ನೈಜ ಪ್ರಮಾಣದಲ್ಲಿ ಗ್ರಹಿಸಿದ್ದೆನೆಂದು ಹೇಳಲಾರೆ. ಆದರೆ ಆಗಿನ ನನ್ನ ಬಾಲಕಬುದ್ದಿ ಗ್ರಹಿಸಿದಂತೆ ಹೇಳುವುದಾದರೆ, ಆ ಮೂವರಲ್ಲಿ ಅಜ್ಜಯ್ಯನ ವ್ಯಕ್ತಿತ್ವವೆ ಹುಡುಗರಾದ ನಮ್ಮ ಮೇಲೆ ಹೆಚ್ಚು ಪ್ರಭಾವಶಾಲಿಯಾಗಿತ್ತು ಎಂದು ಹೇಳಬಹುದು. ಬಸಪ್ಪಗೌಡರೆಂದರೆ ಬಸವನಂತಹ ಮನುಷ್ಯ ಎಂದು ಯಾರಾದರೂ ಹೇಳುತ್ತಿದ್ದುದು ನಮ್ಮ ಕಿವಿಗೆ ಬೀಳುತ್ತಿತ್ತು. ಅವರದು ಮೃದುಸ್ವಭಾವ; ಸ್ವಭಾವದ ಮೃದುತ್ವವನ್ನು ಪ್ರತಿಬಿಂಬಿಸುವ ಶರೀರದ ಸ್ಥೂಲತ್ವ ಮತ್ತು ಮೃದುತ್ವ; ಬಹಳ ಕಷ್ಟದ ಕೆಲಸ ಮಾಡದೆ ಸುಖವಾಗಿ ಬೆಳೆದ ದೇಹದಂತೆ. ಅಗಲವಾದ ಮುಖ, ತುಸು ಬೊಜ್ಜಾದ ದೊಡ್ಡ ಹೊಟ್ಟೆ, ಸುಪುಷ್ಟ ಅಂಗಾಂಗಗಳು. ಅವರು ಸೊಂಟದ ಪಂಚೆಯನ್ನು ಅಡ್ಡವಾಗಿಯೋ ಅಥವಾ ಮೊಳಕಾಲು ಮೀರದಂತೆ ಕಚ್ಚೆ ಹಾಕಿಯೋ ಉಟ್ಟುಕೊಂಡು ಬರಿ ಮೈಯಲ್ಲಿ ಇರುತ್ತಿದ್ದುದೆ, ಮನೆಯೊಳಗೆ ನಮ್ಮ ಕಣ್ಣಿಗೆ ಹೆಚ್ಚಾಗಿ ಬೀಳುತ್ತಿದ್ದ ನೋಟ. ಅವರಲ್ಲಿ ನಮಗೆ ಸಾಧುಪ್ರಾಣಿಯನ್ನು ಕಂಡರೆ ಹೇಗೋ ಹಾಗೆ ನಿರ್ಭಯಸಲಿಗೆ. ಅವರು ನಮ್ಮನ್ನ ಯಾವಾಗಲಾದರೂ ಹೊಡೆದದ್ದಾಗಲಿ ಬೈದದ್ದಾಗಲಿ ಜೋರಾಗಿ ಹೆದರಿಸಿದ್ದಾಗಲಿ ನೆನಪಿಲ್ಲ. ಅವರ ಗದರಿಕೆಯನ್ನು ನಾವು ಅಪಾಯಕರವೆಂದು ಭಾವಿಸದೆ, ಲಘುವಾಗಿ ತೆಗೆದುಕೊಳ್ಳುತ್ತಿದ್ದೆವು, ವಿನೋದಾಂಗವೆಂದು!

ಆಗಿನ ಅಲ್ಲಿಯ ಶೂದ್ರರ ಮನೆಗಳಲ್ಲಿ ಅಪೂರ್ವವೆನ್ನಬಹುದಾದ ಒಂದು ಧಾರ್ಮಿಕ ಮಡಿವಾತಾವರಣವನ್ನು ಅವರು ನಿರ್ಮಿಸಿದ್ದರು. ದೇವರು, ದಿಂಡರು, ಪೂಜೆಗೀಜೆ, ಆಚಾರ ಇವೆಲ್ಲಕ್ಕೂ ಅವರೇ ಕೇಂದ್ರವಾಗಿದ್ದರು. ಹುಡುಗರನ್ನೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೇವರ ಕೆಲಸದಲ್ಲಿ ನಿಯೋಜಿಸಿ, ಪೂಜೆಯಲ್ಲಿ ಸಕ್ರಿಯವೂ ಜೀವಂತವೂ ಆಗಿ ಅವರು ಭಾಗವಹಿಸುವಂತೆ ಮಾಡುತ್ತಿದ್ದರು. ಕೆರೆಯ ದಂಡೆಯ ಮೇಲೆ ಮತ್ತು ತೋಟದಲ್ಲಿ ಹೂ ಕುಯ್ಯುವ ಕೆಲಸವನ್ನು ಕೆಲವರಿಗೆ, ಪೂಜಾ ಪಾತ್ರೆಗಳನ್ನು ತರತರದ ಆಟದ ಸಾಮಾನಿನ ಆಕಾರದ ಹಿತ್ತಾಳೆಯ ಆರತಿಗಳನ್ನು ಬೆಳಗುವ ಕೆಲಸವನ್ನು ಕೆಲವರಿಗೆ; ಸೆಗಣಿ ಉಂಡೆ ಕಟ್ಟಿ, ದರ್ಭೆಗಳನ್ನು ಸಿಕ್ಕಿಸಿ, ಗಣಪತಿ ಮಾಡುವ ಕೆಲಸಕ್ಕೆ ಒಬ್ಬ; ಬಟ್ಟೆ ಹರಿದು, ತುಂಡುಮಾಡಿ ಬತ್ತಿ ಹೊಸೆದು, ಎಣ್ಣೆಗೆ ಅದ್ದಿ, ಐದು ಹೆಡೆಯೆತ್ತಿದ ಸಪ್ಪದ ಆಕಾರದ ಆರತಿಗೆ ಐದು ಬತ್ತಿ ಹಾಕುವ ಹೆಮ್ಮೆಯ ಕೆಲಸಕ್ಕೆ ಇನ್ನೊಬ್ಬ; ಜಾಗಟೆ ಹೊಡೆಯುವುದಕ್ಕೆ ಒಬ್ಬ ಸಣಕಲ; ಶಂಖ ಊದುವುದಕ್ಕೆ ಉಸಿರು ಕಟ್ಟಿಬಿಡುವ ಸಾಮರ್ಥ್ಯದ ಒಬ್ಬ ಗಟ್ಟಿಗ; ತೆಂಗಿನಕಾಯಿ ಸುಲಿಯುವುದು, ಬಾಳೆಹಣ್ಣು ಚಿಪ್ಪನ್ನು ಅಕ್ಷತವಾಗಿ ಸಿದ್ಧಗೊಳಿಸುವುದು, ಬಿಳಿನಾಮ ಕೆಂಪುನಾಮ ಗಂಧಗಳನ್ನು ತೇದು ತುಲಸಿ ಕಟ್ಟೆಯ ದೇವರಿಗೆ, ಸರಿಯಾದ ಸ್ಥಳಗಳಲ್ಲಿ, ಸರಿಯಾದ ಸಂಪ್ರದಾಯಸಿದ್ಧವಾದ ರೀತಿಯಲ್ಲಿ ಇರಿಸುವುದು; ಹೀಗೆ ಘಂಟೆಬಾರಿಸಿ ಕರ್ಪೂರದಾರತಿಯೆತ್ತುವ ಪೂಜಾರಿಯ ಕೆಲಸ ಯಾವಾಗಲೂಅ ವರದ್ದೇ ಆಗಿದ್ದರೂ, ಒಟ್ಟು ಪೂಜೆಯಲ್ಲಿ ನಾವೆಲ್ಲರೂ ಜೀವಂತವಾಗಿ ಪಾಲುಗೊಳ್ಳುವಂತೆ ಮಾಡುತ್ತಿದ್ದರು.

ಅವರ ನಡೆನುಡಿ ಆಚಾರ ವ್ಯವಹಾರಗಳೂ ವಿಶಿಷ್ಟವಾಗಿರುತ್ತಿದ್ದುವು. ‘ಅಜ್ಜಯ್ಯನ ಅಭ್ಯಂಜನ’ ಎಂಬ ಪ್ರಬಂಧದ್ಲಲಿ ಅವರ ತೈಲಸ್ನಾನ ವೈಶಿಷ್ಟ್ಯದ ಪರಿಚಯವನ್ನಾಗಲೆ ಮಾಡಿಕೊಟ್ಟಿದ್ದೇನೆ. ನಾವು ಹುಡುಗರಾಗಿ ಬುದ್ದಿ ತಿಳಿಯುವ ಕಾಲಕ್ಕೆ ಮೊದಲೇ ಮಲೆನಾಡಿನ ಒಕ್ಕಲಿಗ ಜನಾಂಗದಲ್ಲಿ ಒಂದು ಸುಧಾರಣೆಯ ಭಾವನೆ ತಲೆದೋರಿತ್ತು. ಅದರ ಒಂದು ಪರಿಣಾಮವಾಗಿ ಅನೇಕ ಮನೆಗಳಲ್ಲಿ ಹೆಂಡ ತಯಾರಿಸುವುದನ್ನು ಕುಡಿಯುವುದನ್ನು ನಿಲ್ಲಿಸಿದ್ದರು. ಹಾಗೆ ಕುಡಿಯುವುದು ಪ್ರತಿಜ್ಞಾಭಂಗವೆಂದೂ ಅದು ಅವಮಾನಕರವೆಂದೂ ತಿಳಿಯುತ್ತಿದ್ದರು. ಆದರೂ, ಅದರ ಚಟಕ್ಕೆ ಆಗಲೆ ಬಲಿಬಿದ್ದಿದ್ದ ವಯಸ್ಸಾದವರು ಅದನ್ನು ಬಹಿರಂಗವಾಗಿ ಕುಡಿಯದಿದ್ದರೂ, ಕದ್ದುಮುಚ್ಚಿ ಕುಡಿಯುತ್ತಿದ್ದರು, ಹುಡುಗರು ಮಕ್ಕಳು ನೋಡಿ ಕಂಡು ಅನುಕರಿಸಬಾರದು ಎಂದು. ನಮ್ಮ ಈ ಅಜ್ಜಯ್ಯ ದಿನವೂ ಸಂಜೆ ಬಗನಿಯ ಕಳ್ಳು ಸೇವನೆಮಾಡುವ ರೂಢಿ ಇಟ್ಟುಕೊಂಡಿದ್ದರು. ಹಳೆಪೈಕದವನು ಗೊತ್ತಾದ ಜಾಗದಲ್ಲಿ, ಯಾವುದೋ ಪೊದೆಯಲ್ಲಿ, ಮೊಗೆಯಲ್ಲಿ ತಂದಿಡುತ್ತಿದ್ದ ಕಳ್ಳನ್ನು ಕತ್ತಲಾದ ಮೇಲೆ ತಂದು, ಮುರುವಿನ ಒಲೆಯಲ್ಲಿಯೋ ಬಚ್ಚಲು ಒಲೆಯಲ್ಲಿಯೋ ಕಾಯಿಸಿ, ಅದಕ್ಕಾಗಿಯೆ ಸಮೆದುಮಾಡಿದ ಕರಟದಲ್ಲಿ ಕುಡಿಯುತ್ತಿದ್ದರು, ಮಕ್ಕಳಾಗಿದ್ದ ನಮ್ಮ ಕಣ್ಣಿಗೆ ಬೀಳದಂತೆ. ಆದರೆ ಎಂದಾದರೊಮ್ಮೆ ನಾವು ಅಕಸ್ಮಾತ್ತಾಗಿ ಅದನ್ನು ಕಂಡು, ಒಲೆಯ ಬಳಿಸಾರಿ, ತುದಿಗಾಲಿನಲ್ಲಿ ಸುತ್ತಲೂ ಕೂತು ಅಭೀಷ್ಟಕ ನಯನಗಳಿಂದ ನೋಡತೊಡಗಿದರೆ, “ಮಕ್ಕಳು ಎಲೆ ಅಡಿಕೆ ಹಾಕುವುದು, ಕಳ್ಳು ಕುಡಿಯುವುದು ಇದನ್ನೆಲ್ಲ ಮಾಡಬಾರದು!” ಎಂದು ಬುದ್ಧಿವಾದ ಹೇಳುತ್ತಾ, ನಮಗೆಲ್ಲ ಕರಟದಲ್ಲಿ ಉಗುರು ಬೆಚ್ಚಗಿದ್ದ ಕಳ್ಳನ್ನು ತುಸುತುಸು ಬೊಗಿಸಿ ಕೊಡುತ್ತಿದ್ದರು!

ನಮ್ಮ ಮನೆಯಲ್ಲಿ ಪ್ರತಿ ಶನಿವಾರವನ್ನೂ ವಿಶೇಷ ಪವಿತ್ರ ದಿನದಂತೆ ಆಚರಿಸುತ್ತಿದ್ದರು. ಹಿಂದೆ ನಮ್ಮವರೆಲ್ಲ ಜೈನರಾಗಿದ್ದುದರ ಅವಶೇವೊ ಏನೋ? ಶನಿವಾರ ಮನೆಯವರೆಲ್ಲ-ಗಂಡಸರು ಹೆಂಗಸರು ಮಕ್ಕಳು-ಸ್ನಾನಮಾಡಿ ಮಡಿಬಟ್ಟೆ ಉಡುತ್ತಿದ್ದರು, ಉಡಲೇ ಬೇಕಿತ್ತು. ಇಲ್ಲದಿದ್ದರೆ ಅಮಂಗಳ ಭೀತಿ! ಅದರ ಹಿಂದಿನ ದಿನ ಎಂದರೆ ಶುಕ್ರವಾರ, ವಿಸ್ತಾರವಾಗಿದ್ದ ಮನೆಯ ಭಾಗಗಳಿಗೆಲ್ಲ ಸೆಗಣಿ ಬಳಿದು ಸಾರಿಸುವ ಕೆಲಸವಂತೂ ಹೆಂಗಸರ ಅನಿವಾರ್ಯ ಕರ್ತವ್ಯವಾಗಿರುತ್ತಿತ್ತು. ಶನಿವಾರದ ದಿವಸ ಮಾಂಸ ಭಕ್ಷಣೆ, ಮಾಂಸದ ಪದಾರ್ಥದ ತಯಾರಿಕೆ, ಮಾಂಸದ ಸೋಂಕು ಇವು ಸಂಪೂರ್ಣವಾಗಿ ನಿಷಿದ್ಧವಾಗಿತ್ತು. ಪುನಃ ನಾವು ಹಿಂದೆ ಬಿಟ್ಟಿದ್ದ ಜೈನ ಧರ್ಮದ ಪ್ರಭಾವವಾಗಿಯೋ ಏನೋ, ನಮ್ಮ ಮನೆಯಲ್ಲಿ ಅಡುಗೆ ಮನೆಯಲ್ಲಿ ಮೀನುಮಾಂಸ ಮೊದಲಾದ ಯಾವ ಆಮಿಷ ಪದಾರ್ಥಗಳನ್ನು ಬೇಯಿಸುತ್ತಿರಲಿಲ್ಲ. ಮಾತ್ರವಲ್ಲ, ಅದನ್ನು ಬೇಯಿಸುವ ಹಿತ್ತಲು ಕಡೆಯಲ್ಲಿದ್ದ ಮೀಸಲು ಒಲೆಗಳನ್ನು ‘ಹೊಲಸಿನ ಒಲೆ’ ಎಂದೇ ಕರೆಯುವುದು ಪದ್ಧತಿಯಾಗಿತ್ತು. ‘ಹೊಲಸಿನ ಒಲೆ’, ‘ಹೊಲಸಿನ ಪಲ್ಯ’, ‘ಹೊಲಸಿನ ಊಟ’ ಎಂದೇ ನಾವೆಲ್ಲ ಮಾತನಾಡುತ್ತಿದ್ದರೂ ನಮಗೆ ಅದು ‘ಅಂಕಿತನಾಮ’ದಂತಿತ್ತೇ ಹೊರತು ‘ಅನ್ವರ್ಥ’ವಾಗಿರಲಿಲ್ಲ. ಏಕೆಂದರೆ ಆ ಹೆಸರು ನಮಗೆ ಜುಗುಪ್ಸೆ ಹುಟ್ಟಿಸುತ್ತಿರಲಿಲ್ಲ. ಅದಕ್ಕೆ ಬದಲಾಗಿ ಮಾಂಸದ ಭಕ್ಷ್ಯ ಭೋಜ್ಯಗಳಿದ್ದು ‘ಶನಿವಾರ’ದ ಕಾರಣದಿಂದ ನಾವು ಅದನ್ನು ಉಪಯೋಗಿಸಬಾರದಾದಾಗ ನಮಗೆ ‘ಇದೆಲ್ಲಿಯ ಹಾಳು ಶನಿವಾರ!’ ಎನ್ನುವ ಹಾಗಾಗುತ್ತಿತ್ತು!

ಈ ಶನಿವಾರದ ಜೈನೆಡೆ ಕಟ್ಟಳೆಯನ್ನು, ಮಕ್ಕಳು ಮರಿ ನಂಟರಿಷ್ಟರು ಎಂಬ ಯಾವ ವಿಧವಾದ ದಾಕ್ಷಿಣ್ಯಕ್ಕೂ ಒಳಗಾಗದೆ, ಕಟ್ಟುನಿಟ್ಟಾಗಿ ಆಚರಿಸುತ್ತಿದ್ದುದಕ್ಕೆ ಅಜ್ಜಯ್ಯನ ಕಠೋರನಿಷ್ಠುರ ನಿಷ್ಠೆಯೇ ಮುಖ್ಯ ಕಾರಣವಾಗಿತ್ತೆಂದು ತೋರುತ್ತದೆ. ಆ ದಿನ ಅವರು ಸ್ನಾನಮಾಡಿ, ಅಂಗಳದ ತುಳಸಿಕಟ್ಟೆಯ ಕಲ್ಲುದೇವರನ್ನು ನಾಮಗಳಿಂದಲೂ ಹೂವುಗಂಧಗಳಿಂದಲೂ ಸಿಂಗರಿಸಿ, ಸಾವಧಾನವಾಗಿ ಶ್ರದ್ಧೆಯಿಂದ ಪೂಜೆ ಮಾಡಿ ಮುಗಿಸುವಷ್ಟರಲ್ಲಿ ನಮ್ಮ ಹೊಟ್ಟೆ ಹಸಿದು ತಾಳಹಾಕುತ್ತಿತ್ತು.

ಆದರೆ ಆವೊತ್ತಿನ ಊಟ ತುಂಬ ಚೆನ್ನಾಗಿರುತ್ತಿತ್ತು. ಚೆನ್ನಾಗಿ ಹಸಿದಿರುತ್ತಿದ್ದುದರಿಂದ ಎಂಬ ಕಾರಣದಿಂದ ಮಾತ್ರವಲ್ಲ. ಅಜ್ಜಯ್ಯ ತಾವೆ ಬೆಳೆದ ತರಕಾರಿಯನ್ನೊ ಅಥವಾ ಕಾಡಿನಲ್ಲಿ ಬೇಲಿಯ ಸಾಲಿನಲ್ಲಿ ಬೆಳೆದಿರುತ್ತಿದ್ದ ಮೇಲೋಗರಕ್ಕೆ ಯೋಗ್ಯವಾದ ಎಲೆ ಕಾಯಿಗಳನ್ನೋ ತಂದುಕೊಡುತ್ತಿದ್ದುದರಿಂದ ಅದನ್ನೆಲ್ಲ ತುಪ್ಪದ ಒಗ್ಗರಣೆ ಹಾಕಿ ವಿಶೇಷ ಮುತುವರ್ಜಿಯಿಂದ ಮಿಂದು ಮಡಿಯುಟ್ಟ ಮಡಿಮನಸ್ಸಿನಿಂದ ತಯಾರಿಸುತ್ತಿದ್ದುದರಿಂದಲೂ ಹೆಚ್ಚು ಆಸ್ವಾದ್ಯವಾಗಿರುತ್ತಿತ್ತು. ಜೊತೆಗೆ ಪಾಯಸ ಪರಮಾನ್ನವೊ ಏನಾದರೊಂದು ವಿಶೇಷ ಭೋಜ್ಯವೂ ಇರುತ್ತಿತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ ನಮಗೆ ಶನಿವಾರದ ಆಕರ್ಷಣೆ ಎಂದರೆ ಹೆಸರುಕಾಳು ಗಂಜಿ!

ಶನಿವಾರದಂದು ಅಜ್ಜಯ ರಾತ್ರಿ ಊಟಮಾಡುತ್ತಿರಲಿಲ್ಲ. ಉಪಾಸ ಮಾಡುತ್ತಿದ್ದರು. ಅದಕ್ಕಾಗಿ ಅವರಿಗೆ ‘ಪಳಾರ’ವಾಗಿ ಬೆಲ್ಲಹಾಕಿ ಮಾಡಿದ ಹೆಸರುಕಾಳಿನ ಗಂಜಿ ಸಿದ್ಧವಾಗುತ್ತಿತ್ತು. ಹುಡುಗರಿಗೆ ಮಾತ್ರ, ಉಪಾಸವಿಲ್ಲದಿದ್ದರೂ, ‘ಪಳಾರ’ದಲ್ಲಿ ಪಾಲು ದೊರೆಯುತ್ತಿತ್ತು. ನಮಗಂತೂ ಪ್ರತಿ ಶನಿವಾರವೂ ಬೆಳಿಗ್ಗೆಯಿಂದ ಹಿಡಿದು ಹಗಲೆಲ್ಲ ಮಾಡಿದ ಕಠೋರ ತಪಸ್ಸಿನ ಫಲವಾಗಿ ರಾತ್ರಿ ಮಲಗುವ ಮುನ್ನ ಆ ತಪಸ್ಸನ್ನು ಸಫಲಗೊಳಿಸಿದಂತೆ, ಹೆಸರುಕಾಳಿನ ಗಂಜಿಯನ್ನು ಆಸ್ವಾದಿಸುತ್ತಿದ್ದೆವು, ಸ್ವರ್ಗಸುಖವೆಂಬಂತೆ! ಈಗ ನೆನದರೆ ನಗು ಬರುತ್ತದೆ. ಎಂತಹ ಅಲ್ಪದಿಂದ ಎಂತಹ ‘ಭೂಮ’ವನ್ನು ಪಡೆಯುವ ಸಮರ್ಥವಾಗಿತ್ತು ಆ ಬಾಲ್ಯ ಎಂದು!

ಅಜ್ಜಯ್ಯ ಗದ್ದೆ ತೋಟದ ಕೆಲಸದಲ್ಲಿ ಆಗಲಿ, ಗೃಹಕೃತ್ಯದ ಹಣಕಾಸಿನ ವ್ಯವಹಾರದಲ್ಲಿ ಆಗಲಿ, ಅಪ್ಪಯ್ಯ ದೊಡ್ಡ ಚಿಕ್ಕಪ್ಪಯ್ಯ ಇವರಂತೆ, ಕೈಹಾಕುತ್ತಲೆ ಇರಲಿಲ್ಲ ಎಂಬುದು ನನ್ನ ನಂಬುಗೆ. ಅವರದು ಸಂಸಾರದ ಆಧ್ಯಾತ್ಮಿಕ ಕ್ಷೇತ್ರದ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಮಾತ್ರ ಜವಾಬುದಾರಿಯಾಗಿದ್ದಂತೆ ತೋರುತ್ತದೆ. ಅವರ ದುಡಿಮೆಯ ಕೆಲಸ ಏನಿದ್ದರೂ ಅದನ್ನು ನಾವು ಕಾಣುತ್ತಿದ್ದುದು ಮನೆಯ ಒಳಗೇ: ಪುಂಡಿ ನಾಡಿನ ಹಗ್ಗ ಹುರಿ ಹೊಸೆಯುತ್ತಿದ್ದರು, ಕಿರುಜಗಲಿಯ ಕಂಭದಿಂದ ಕಂಭಕ್ಕೆ ಚೆನ್ನಾಗಿ ನುಲಿದು ಸುತ್ತಿದ್ದ ಬೆಳ್ಳನೆಯ ಆ ಕುಶಲಕರ್ಮವನ್ನು ನಾವೆಲ್ಲ ಬೆರಗಾಗಿ ಮೆಚ್ಚಿ ನೋಡುವಂತೆ. ಕೊಟ್ಟೆಕಡ್ಡಿ ಹೆರೆಯುತ್ತಿದ್ದರು, ಹಸುರುಹಚ್ಚನೆ ಬಿದಿರನ್ನು ಸೀಳಿ, ತಿಳ್ಳವನೆಲ್ಲ ಕೆತ್ತಿ ಬೆಳ್ಳಗೆ ರಾಸಿಹಾಕಿ. ಅಡಕೆಯ ಸೋಗೆಯ ಹಾಳೆಗಳನ್ನು ಕತ್ತರಿಸಿ, ಕೊನೆಕಟ್ಟುವ ಕೊಟ್ಟೆಗಳನ್ನು ತಯಾರಿಸುತ್ತಿದ್ದರು. ವಾಟೆಯನ್ನು ಸೀಳಿ, ಸಲಕುಮಾಡಿ, ಬೇಯಿಸಿದ ಅಡಕೆ ಹರಡುವ ತಟ್ಟೆಗಳನ್ನು, ಮುಚ್ಚುವ ಬುಟ್ಟಿಗಳನ್ನು ಗೂಡೆಗಳನ್ನು ತಯಾರಿಸುತ್ತಿದ್ದರು. ದನ ಎತ್ತುಗಳನ್ನು ಕೊಟ್ಟಗೆಯಲ್ಲಿ ಕಟ್ಟುವುದಕ್ಕೆ ಉಪಯೋಗಿಸುವ ಕೊರಳುಗಣ್ಣಿಗಳನ್ನು, ತರಗು ತುಂಬಲು ಉಪಯೋಗಿಸುವ ಕಣ್ಣಿಜಲ್ಲೆಗಳನ್ನು ನೆಯ್ಯುತ್ತಿದ್ದರು. ಎಷ್ಟೋ ಸಾರಿ ಅವರ ಆ ಕುಶಲ ಕರ್ಮದಲ್ಲಿ ಪಾಲುಗೊಳ್ಳಲು ಹೋಗಿ, ಏನಾದರೂ ಕಿತಾಪತಿ ಮಾಡಿ ನಾನು ಅವರ ಭರ್ತ್ಸನೆಗೆ ಪಕ್ಕಾಗುತ್ತಿದ್ದುದೂ ಉಂಟು!

ಎಲ್ಲಕ್ಕಿಂತಲೂ ಹೆಚ್ಚಾಗಿ, ನನ್ನ ನೆನಪಿನಲ್ಲಿ ಇಂದಿಗೂ ಪೂಜ್ಯವಾಗಿ ಉಳಿದಿರುವ ಚಿತ್ರವೆಂದರೆ ಅಜ್ಜಯ್ಯನ ನೇತೃತ್ವದಲ್ಲಿ ನವರಾತ್ರಿಯ ಒಂಬತ್ತು ದಿನಗಳೂ ಅಖಂಡವೆಂಬಂತೆ ನಡೆಯುತ್ತಿದ್ದ ಸರಸ್ವತೀ ಪೂಜೆ. ಅದು ನಡೆಯುತ್ತಿದ್ದುದು ನಮ್ಮ ಮನೆಯ ಉಪ್ಪರಿಗೆಯ ಮೇಲಣ ಮಳಿಗೆ ಕೋಣೆಯಲ್ಲಿ. ಯಾವ ಚಿತ್ರಪಟವಾಗಲಿ, ವಿಗ್ರಹವಾಗಲಿ ವಾಗ್ದೇವಿಯನ್ನು ಪ್ರತಿಮಿಸುತ್ತಿರಲಿಲ್ಲ: ಪುಸ್ತಕಗಳು! ಪುಸ್ತಕಗಳು ಮತ್ತೂ ಪುಸ್ತಕಗಳು! ಮತ್ತು, ನಾವು ಓದುಬರೆಯಲು ಪ್ರಾರಂಭಿಸಿದ ಮೇಲೆ ನಮ್ಮ ಸ್ಲೇಟು, ಬಳಪ, ಸೀಸದಕಡ್ಡಿ, ಲೇಖನಿ, ಕಾಪಿ ಪುಸ್ತಕ, ಕೊನೆಗೆ ಮಸಿದೌತಿ! ಪುಸ್ತಕಗಳೆಂದರೆ ನಮ್ಮ ಮನೆಯಲ್ಲಿ ಆಗ ಅಚ್ಚಾದ ಪುಸ್ತಕಗಳ ಲೈಬ್ರೆರಿ ಇತ್ತು ಎಂದು ಯಾರಾದರೂ ಭಾವಿಸಿಯಾರು? ಅವೆಲ್ಲ ಓಲೆಗರಿ ಪುಸ್ತಕಗಳು! ಎರಡೋ ಮೂರೋ ದೊಡ್ಡ ದೊಡ್ಡ ಬೆತ್ತದ ಪೆಟ್ಟಿಗೆಗಳಲ್ಲಿ ತುಂಬಿ ಇಡುತ್ತಿದ್ದ ಓಲೆಗರಿ ಪುಸ್ತಕಗಳು-ರಾಮಾಯಣ, ಭಾರತ, ಜೈಮಿನಿ, ಸಹ್ಯಾದ್ರಿಕಾಂಡ, ಇತ್ಯಾದಿ, ಇತ್ಯಾದಿ. ಬಹುಶಃ ಅವುಗಳೆಲ್ಲ ಕನ್ನಡ ಜಿಲ್ಲೆಯಿಂದ ಬಂದ ಐಗಳ ಕೈಲಿ ಬಹಳ ಹಿಂದಿನಿಂದಲೂ ಬರೆಯಿಸಿದ್ದ ವಿರಬೇಕು. ಒಂದೊಂದು ಗ್ರಂಥಕ್ಕೂ ವರುಷವೆಲ್ಲ, ಅದನ್ನು ಬರೆದು ಮುಗಿಸುವ ತನಕ, ಮನೆಯಲ್ಲಿಯೇ ಊಟ, ಬಟ್ಟೆ, ತಿಂಡಿ ಎಲ್ಲವನ್ನೂ ನೀಡಿ, ಅದು ಮುಕ್ತಾಯವಾದಂದು ವಿಶೇಷ ಪೂಜೆ ನಡೆಸಿ ಲಿಪಿಕಾರನಿಗೆ ಕೊಡಬೇಕಾಗಿದ್ದ ಆಗಿನ ಕಾಲಕ್ಕೆ ತುಂಬ ದುಬಾರಿಯೆ ಆದ, ನೂರೊ ಇನ್ನೂರೊ ರೂಪಾಯಿಗಳನ್ನು ಸಂತೋಷದಿಂದ ಸಂಭಾವನೆಯಾಗಿ ಕೊಟ್ಟಿರಬೇಕು. ಅಂತೂ ಅಜ್ಜಯ್ಯ ಅವುಗಳೊಡನೆ ವ್ಯವಹರಿಸುತ್ತಿದ್ದ ರೀತಿಯನ್ನು ನೋಡಿಯೇ ನಮಗೆ ಅವು ಅತ್ಯಂತ ಅಮೂಲ್ಯವೂ ಪವಿತ್ರವೂ ಆಗ ವಸ್ತುಗಳು ಎಂಬ ಭಾವನೆ ಮೂಡುತ್ತಿತ್ತು.

ಆ ಬೆತ್ತದ ಪೆಟ್ಟಿಗೆಗಳು ಕರಿಹಿಡಿದು ಕರ್ರಗಾಗಿರುತ್ತಿದ್ದುವು. ಏಕೆಂದರೆ, ಮಲೆನಾಡಿನ ಮಳೆಗಾಲದಲ್ಲಿ ತೇವವಾಗಿ ಬೂಸಲು ಬಂದು ಹಾಳಾಗದಂತೆ, ಅವುಗಳನ್ನು ‘ಹೊಗ್ಗಂಡಿ’ಯಲ್ಲಿ ಇಟ್ಟಿರುತ್ತಿದ್ದುದರಿಂದ: (ಹೊಗ್ಗಂಡಿ ಎಂದರೆ ಹೊಗೆಯ ಕಂಡಿ, ಅಡುಗೆಮಾಡುವ ಜಾಗದಲ್ಲಿ ನೇರವಾಗಿ ಮೇಲಕ್ಕೆ ಹೊಗೆ ಹೋಗುವಂತೆ ಕಿಂಡಿಬಿಟ್ಟಿರುತ್ತಾರೆ. ಸುಮಾರು ೮.೧೦ ಅಡಿಯಷ್ಟು ಚೌಕವಾಗಿ. ಅದಕ್ಕೆ ತೊಲೆಗಳನ್ನು ಚೌಕಟ್ಟಾಗಿ ಜೋಡಿಸಿ, ದಪ್ಪ ರೀಪುಗಳನ್ನು ಜಾಲಂದ್ರವಾಗುವಂತೆ ಹೊಡೆದು ಕೂರಿಸಿ, ಅದರ ಮೇಲೆ, ಅದು ಒಳಉಪ್ಪರಿಗೆಯ ಒಂದು ಮೂಲೆಯಾಗಿ ಬೆಳಕು ಮಳೆ ಗಾಳಿ ಥಂಡಿಗಳಿಗೆ ದೂರವಾಗುವುದರಿಂದ, ಥಂಡಿ ತಗಲಿ ಹಾಳಾಗಬಾರದಂತಹ ಸಾಮಾನುಗಳನ್ನೆಲ್ಲ ಇಟ್ಟಿರುತ್ತಾರೆ, ಹರಿಗಳಲ್ಲಿ, ಪೆಟ್ಟಿಗೆಗಳಲ್ಲಿ, ಮೆತ್ತು ಹಾಕಿದ ಮಡಿಕೆಗಳಲ್ಲಿ, ಚೀಲಗಳಲ್ಲಿ, ಉಗ್ಗಗಳಲ್ಲಿ, ಸಿಕ್ಕಗಳಲ್ಲಿ!) ಅಜ್ಜಯ್ಯ ಆ ಪೆಟ್ಟಿಗೆಗಳಿಂದ ಆ ಓಲೆಗರಿ ಗ್ರಂಥಗಳನ್ನು ನವರಾತ್ರಿ, ಉಗಾದಿ, ದೀಪಾವಳಿಯಂತಹ ಹಬ್ಬಗಳಲ್ಲಿ ಹೊರತೆಗೆದು, ಅವನ್ನು ಯಾವುದೋ ಒಂದು ವಿಶೇಷರೀತಿಯ ತೈಲದಿಂದ ಉಜ್ಜಿ ಶುಚಿಮಾಡುತ್ತಿದ್ದರು. ಓದುತ್ತಲೂ ಇದ್ದರೆಂದು ತೋರುತ್ತದೆ. ಆದರೆ ನಮ್ಮೊಡನೆ ಅವರು ಅವುಗಳ ವಿಚಾರವಾಗಿ ಮಾತನಾಡಿದುದನ್ನಾಗಲಿ, ಕಥೆ ಹೇಳಿದುದನ್ನಾಗಲಿ, ರಾಗವಾಗಿ ಓದಿ ಮನರಂಜಿಸಿದುದನ್ನಾಗಲಿ ನಾನು ನೆನೆಯಲಾರದವನಾಗಿದ್ದೇನೆ.

ಅಂತೂ ನವರಾತ್ರಿ ಬಂದಿತೆಂದರೆ ಉಪ್ಪರಿಗೆಯ ನೆಲ ಸೆಗಣಿ ಬಳಿದು ಶುಚಿಯಾಗುತ್ತಿತ್ತು. ಕಸ ಕರಿಬಲೆ ಹೊಡೆದು ಹಸನಾಗುತ್ತಿತ್ತು, ಊರು ಹೆಂಚು ಹೊದಿಸಿದ್ದ ಮಾಡು. ಮಳಿಗೆಕೋಣೆ ದೇವಾಲಯವಾಗುತ್ತಿತ್ತು. ಓಲೆಗರಿ ಗ್ರಂಥಗಳೆಲ್ಲ ಮಣೆಗಳ ಮೇಳೆ ಒಪ್ಪವಾಗಿ ಜೋಡಿಸ್ಪಟ್ಟು ಪೂಜ್ಯವಾಗುತ್ತಿದ್ದವು. ನಮಗೂ ಓದುವ ಬರೆಯುವ ಪೀಡೆಯಿಂದ ಎಂಟು ಹತ್ತು ದಿನಗಳ ಮಟ್ಟಿಗಾದರೂ ತಪ್ಪಿಸಿಕೊಳ್ಳುವ ಸುಯೋಗ ಶರೀರವಾಗಿರುತ್ತಿದ್ದ ಕಾಲ! ನಮ್ಮ ಕಾಲೆಲ್ಲಿಯಾದರೂ ಒಂದಿನಿತು ಸೋಕಿದರೂ ಅದಕ್ಕೆ ನಮ್ಮ ಕೈ ಮುಟ್ಟಿಸಿ, ಹಣೆ ಮುಟ್ಟಿಕೊಂಡು, ನಮಸ್ಕರಿಸಿ, ವಿದ್ಯಾಮಾತೆಯ ಕ್ಷಮಾಪಣೆ ಕೇಳಿಕೊಳ್ಳುವಂತೆ ನಮ್ಮ ಹಿರಿಯರು ಕಲಿಸಿದ್ದರು. ಆ ಪಾಠವನ್ನೆ ಕಟುವಾಗಿ ಅನುಷ್ಠಾನಕ್ಕೆ ತರುತ್ತಿದ್ದೆವು ನಾವು. ಓಲೆಗರಿ ಪುಸ್ತಕಗಳು, ಮನೆಯ ಲೇವಾದೇವಿ ಲೆಕ್ಕದ ಪುಸ್ತಕಗಳು ಪವಿತ್ರವೂ ಪೂಜ್ಯವೂ ಆಗಿ ಸರಸ್ವತಿಯ ಪೀಠಕ್ಕೇರಿದರೆ, ನಾವು ಓದುವ ಬರೆಯುವ ಸ್ಲೇಟು ಪುಸ್ತಕಗಳೇನು ಕಡಿಮೆ ಪವಿತ್ರವೇ? ಅವೂ ಪೂಜ್ಯವಲ್ಲವೇ? ಅವೂ ಸರಸ್ವತಿಯ ಅಂಗಭಾಗ ತಾನೆ? ಆದ್ದರಿಂದ ನಾವೂ ನಮ್ಮ ಸ್ಲೇಟುಪುಸ್ತಕಗಳನ್ನೆಲ್ಲ ಒಂದು ಸಣ್ಣ ಮಣೆಯ ಮೇಲೆ ಓಲೆಗರಿಯ ಹೊತ್ತಗೆಗಳ ಅಡಿಯಲ್ಲಿ ಇಟ್ಟು ಗೆದ್ದೆವಪ್ಪಾ ಎಂದು ಹೊರೆಯಿಳಿಸಿ ದಣಿವಾರಿಸಿಕೊಳ್ಳುವವರಂತಾಗುತ್ತಿದ್ದೆವು. ‘ಸಿಲೇಟು’ ‘ಪೊಸ್ತಕ’ ಎರಡೇ ಏಕೆ ಪವಿತ್ರ? ಸರಸ್ವತಿಯ ಉಪಕರಣಗಳಾದ ಸಿಲೇಟುಕಡ್ಡಿ, ಸೀಸದ ಕಡ್ಡಿ, ಲೇಖನಿ, ಮಸಿದೌತಿ ಇವು ಮಾಡಿದ ಪಾಪ ಏನು? ಎಂದು ಅವುಗಳನ್ನು ಸಹ ಪವಿತ್ರಗೊಳಿಸಿ ಪೀಠಕ್ಕೆ ಜೋಡಿಸಿ, ಪೂಜಾರ್ಹವಾಗಿಸುತ್ತಿದ್ದೆವು!

ಮಳಿಗೆ ಕೋಣೆಯ ಪುಸ್ತಕರೂಪದ ಸರಸ್ವತಿದೇವಿ ತರತರದ ಸುವಾಸನೆಯ ಹೂವುಗಳಿಂದ ಸಿಂಗರಗೊಳ್ಳುತ್ತಿದ್ದಳು. ಎತ್ತರವಾದ ದೊಡ್ಡ ನೀಲಾಂಜನಗಳಲ್ಲಿ, (ಅವುಗಳನ್ನು ನಾವು ದೀಪದ ಕಂಭವೆಂದೇ ಕರೆಯುತ್ತಿದ್ದುದು) ಉದ್ದವಾಗಿ ಹೊಸೆದ ಬತ್ತಿಗಳು, ಎಣ್ಣೆಯಲ್ಲಿ ಮುಳುಗಿದ ಹಾವುಗಳಂತೆ ಸೊಡರುಗಳ ಹೆಡೆಯೆತ್ತಿ ರಮಣೀಯವಾಗುತ್ತಿದ್ದುವು. ಮಿಂದು ಮಡಿಯುಟ್ಟ ನಮ್ಮನ್ನೆಲ್ಲ ಅಜ್ಜಯ್ಯ ಸಾಲಾಗಿ ನಿಲ್ಲಿಸಿ ತಮ್ಮ ಗಂಭೀರ ಠೀವಿಯಿಂದ ಭಾವಪೂರ್ವಕವಾಗಿ ತರತರದ ಆಕಾರದ ಆರತಿಗಳನ್ನೆತ್ತಿ ಪೂಜೆಮಾಡುತ್ತಿದ್ದರು, ಘಂಟೆ ಬಾರಿಸುತ್ತಾ. ಆಮೇಲೆ ‘ಬೆನಕಾ! ಬೆನಕಾ! ಏಕದಂತಾ! ಪಚ್ಚೆಕಲ್ಲು! ಪಾಣೀಪೀಠ! ಮುತ್ತಿನುಂಡೆ! ಹೊನ್ನಘಂಟೆ! ಇಂತೀ ಒಪ್ಪುವ ಸಿರಿ ಸಿದ್ದಿ ವಿನಾಯಕದೇವರ ಪಾದಕ್ಕೆ ಇಪ್ಪತ್ತೊಂದು ನಮಸ್ಕಾರಗಳು” ಎಂದು ಅಜ್ಜಯ್ಯ ಹೇಳಿಕೊಟ್ಟಂತೆ ತುಸು ರಾಗವಾಗಿ ನಮ್ಮ ಕೈಯಲ್ಲಿ ಕೊಟ್ಟಿರುತ್ತಿದ್ದ ಗಂಧಾಕ್ಷತೆ ಎರಚಿ, ಎಲ್ಲರೂ ಸಾಷ್ಟಾಂಗ ಪ್ರಣಾಮಮಾಡುತ್ತಿದ್ದೆವು. ಅಂದರೆ ನಾವು ಆಗ ಹೇಳುತ್ತಿದ್ದಂತೆ ‘ಅಡ್ಡ ಬೀಳುತ್ತಿದ್ದೆವು’.

ಆ ನವರಾತ್ರಿಯ ಸರಸ್ವತೀಪೂಜೆಗೆ ಸಂಬಂಧಪಟ್ಟು ಪ್ರಭಾವಶಾಲಿಯಾಗಿದ್ದ ಮತ್ತೊಂದು ವಿಷಯವೆಂದರೆ ಅವಿಚ್ಛಿನ್ನ ನಂದಾದೀಪ ಅನವರತ ರಕ್ಷೆಯ ಜಾಗರಣೆ ಸೇವೆ! ಅದರಲ್ಲಿ ಏನೋ ಒಂದು ‘ಅನುಭಾವ’ದ ಸಂಪತ್ತು ನಮ್ಮ ಬುದ್ದಿಗೆ ಅಗೋಚರವಾಗಿ ಅಂತಃಪ್ರಜ್ಞೆಗೆ ಸೋಂಕುತ್ತಿತ್ತೆಂದು ತೋರುತ್ತದೆ. ಏಕೆಂದರೆ ಈಗಳು ಅದನ್ನು ನೆನೆದಾಗಲೆಲ್ಲ ನನ್ನ ಮನಸ್ಸು ಯಾವುದೋ ಅನಂತಕಾಲದ ಗರ್ಭಗುಡಿಯ ಪವಿತ್ರತೆಯನ್ನು ಪ್ರವೇಶಿಸಿದಂತೆ ಪುಲಕಿತವಾಗುತ್ತದೆ, ಅಹೇತುಕವಾಗಿ! ಮಳಿಗೆ ಕೋಣೆಯಲ್ಲಿ ದೊಡ್ಡ ದೀಪದ ಕಂಬದ ಮೇಲೆ ಹೊತ್ತಿಸಿದ ಹೆಬ್ಬತ್ತಿಯ ಸೊಡರು ನವರಾತ್ರಿ ಪೂರೈಸುವ ತನಕ ಕೆಡದೆ ಉರಿಯಲೆಬೇಕಾಗಿತ್ತು, ಹಗಲೂ ರಾತ್ರಿಯೂ! ಹಗಲೇನೋ ಸರಿ; ಯಾರಾದರೂ ಉಪ್ಪರಿಗೆಯಲ್ಲಿ ಇದ್ದೇ ಇರುತ್ತಿದ್ದರು ಅಥವಾ ಯಾವುದಾದರೂ ಕೆಲಸಕ್ಕಾದರೂ ಬಂದು ಬಂದು ಹೋಗಿಯೇ ಹೋಗುತ್ತಿದ್ದರು. ಅವರು ಆಗಾಗ ಕೋಣೆಯಲ್ಲಿ ಇಣುಕಿ, ಬತ್ತಿ ಉರಿದಿದ್ದರೆ ಮುಂದಕ್ಕೆ ಹಾಕಿ, ಎಣ್ಣೆ ಬತ್ತಿದ್ದರೆ ಎಣ್ಣೆ ಹಾಕಿ, ಸೊಡರು ಕೆಡದಂತೆ ನೋಡಿಕೊಳ್ಳುವುದು ಸುಲಭವಾಗಿತ್ತು. ಆದರೆ ರಾತ್ರಿ? ಆ ಕೆಲಸಕ್ಕೆ ನಿಯೋಜಿತವಾಗುತ್ತಿದ್ದುದು, ಸಾಮಾನ್ಯವಾಗಿ, ಹುಡುಗರೆ, ನಮ್ಮ ಮನೆಯಲ್ಲಿ ಓದಲು ಬಂದು ಇರುತ್ತಿದ್ದವರು. ಅವರಲ್ಲಿ ಕೆಲವರು ದೊಡ್ಡವರು, ಅಂದರೆ ಮನೆಯವರಾಗಿದ್ದ ನಮಗಿಂತಲೂ ನಾಲ್ಕಾರು ವರ್ಷಕ್ಕೆ ಹಿರಿಯರು. ಅವರಲ್ಲಿ ಯಾರಾದರೂ ಆ ಮಳಿಗೆ ಕೋಣೆಯಲ್ಲಿ ಮಡಿಯಾಗಿ ಮಲಗಿ, ರಾತ್ರಿಯೂ ದೀಪ ಆರದಂತೆ ನೋಡಿಕೊಳ್ಳುತ್ತಿದ್ದರು. ಚಿಕ್ಕವರಾದ ನಮಗೆ ಕರುಬು! ನಾವೂ ಮಲಗುತ್ತೇವೆ ಎಂದು ನಮ್ಮ ಗಟ. ಆದರೆ ನಮ್ಮನ್ನೆ ಮಲಗಲು ಬಿಟ್ಟರೆ ನಮ್ಮಂತೆಯೆ ದೀಪವೂ ನಿದ್ದೆ ಹೋಗಬಹುದೆಂದು ಹಿರಿಯರ ಆಕ್ಷೇಪಣೆ. ಕಡೆಗೆ ಒಂದು ರಾಜಿಯಾಗಿ ನಮಗೆಲ್ಲ ಆನಂದ: ಒಬ್ಬ ದೊಡ್ಡವನ ಜೊತೆ ಯಾರಾದರೂ ಒಬ್ಬ ಚಿಕ್ಕವ ಮಲಗುವುದು ಎಂದು.

ಹೂವು, ಗಂಧ, ಲೋಬಾನ, ಕರ್ಪೂರ ಇತ್ಯಾದಿಗಳ ಸಂಮಿಶ್ರಿತ ಸುವಾಸನೆ ಆ ನಮ್ಮ ಉಪ್ಪರಿಗೆಯ ಮಳಿಗೆಕೋಣೆಯನ್ನು ಭೂಮಿಯಿಂದೆತ್ತಿ ದಿವ್ಯನಂದನದ ಅಂಗವನ್ನಾಗಿ ಪರಿವರ್ತಿಸುತ್ತಿತ್ತು. ರಾತ್ರಿ ಸುತ್ತಲೂ ನಿಶ್ಯಬ್ಧ, ನಿಬಿಡ ಘೋರಾಂಧಕಾರ! ಸಹ್ಯಾದ್ರಿಯ ಸಾಂದ್ರ ರುಂದ್ರ ಉನ್ನತ ಅರಣ್ಯಮಯ ಪರ್ವತಶ್ರೇಣಿಯ ಉಗ್ರ ಗಂಭೀರ ಸಾನಿಧ್ಯದ ಪ್ರಭಾವದ ಮಧ್ಯೆ ಆ ದೀಪದ ಕಂಬದ ಸೊಡರು ಎಂತಹ ಪ್ರಶಾಂತ ಶೀತಲ ಜ್ಯೋತಿಯಾಗಿ ತಾನು ಬೆಳಗುತ್ತಿದ್ದ ಅತ್ಯಂತ ಅಲ್ಪವಾದ ವಲಯಕ್ಕೆ ಒಂದು-ನಿರಾಶೆಯ ನಡುವೆ ಆಶೆಯಂತೆ, ಭೀತಿಯ ಹೃದಯದಲ್ಲಿಯೆ ಹೊಮ್ಮುವ ಧೈರ್ಯದಂತೆ-ಒಂದು ಆಧ್ಯಾತ್ಮಿಕ ಪರಿವೇಷವನ್ನುಂಟುಮಾಡುತ್ತಿತ್ತು! ಅದನ್ನು ರಕ್ಷಿಸುವ ನಮಗೆ ಅದೆಂತಹ ಹೆಮ್ಮೆಯ ಜವಾಬುದಾರಿ! ಅದನ್ನು ರಕ್ಷಿಸುವ ಒಂದು ಉಪಾಯವೊ ಎನ್ನುವಂತೆ-ಕಣ್ಣು ಮುಚ್ಚಿದರೆ ಅದೆಲ್ಲಿ ಕೆಟ್ಟು ಹೋಗುತ್ತದೆಯೋ ಎಂದು-ನಾವು ನಿದ್ದೆ ಹೋಗಬಾರದು ಎಂಬ ಸಂಕಲ್ಪದಿಂದ ಕಣ್ಣು ತೆರೆದುಕೊಂಡು ಅದನ್ನೆ ನೋಡುತ್ತಾ ಮಲಗುತ್ತಿದ್ದೆವು. ಆದರೆ ಕಣ್ಣು ಕುಗುರುತ್ತಿತ್ತು. ದಣಿದ ಮಕ್ಕಳ ಮನಸ್ಸಿನ ಮೇಲೆ ನಿದ್ರಾದೇವಿ ತನ್ನ ತಾಯಿಸೆರಗನ್ನು ಬೀಸುತ್ತಿದ್ದಳು. ಎಲ್ಲವೂ ಮಬ್ಬುಮಬ್ಬು ಮಂಜುಮಂಜು ಆಗಿ, ಪ್ರಜ್ಞೆಯಿಂದ ಜಾರಿಹೋಗುವಂತಾಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಫಕ್ಕನೆ, ಜಾಗರಣೆಯ ಸಂಕಲ್ಪದ ಪ್ರಜ್ಞೆ ಬಹಿರ್ಗೊಂಡು, ಕಣ್ಣುಗಳು ಬಲಾತ್ಕಾರವಾಗಿ ತೆರೆಯಿಸುತ್ತಿತ್ತು. ಅಯ್ಯೊ ಮಲಗಿಬಿಟ್ಟಿದ್ದೆವಲ್ಲಾ! ಇನ್ನು ಖಂಡಿತ ಮಲಗಬಾರದು; ಕಣ್ಣು ಬಿಟ್ಟುಕೊಂಡೇ ಇರಬೇಕು; ಎಂಬ ಸಂಕಲ್ಪ ತುಸು ಹೊತ್ತಿನಲ್ಲಿಯೆ ನಿದ್ದೆಯ ವೈತರಣಿಗೆ ಅದ್ದಿ ಹೋಗುತ್ತಿತ್ತು. ಬೆಳ್ಳಗೆ ಬೆಳಗಾದ ಮೇಲೆಯೆ ಪಕ್ಕದಲ್ಲಿರುವ ದೊಡ್ಡವನು-ಅವನು ರಾತ್ರಿಯಲ್ಲಿ ನಡುನಡುವೆ ಎದ್ದು ತನ್ನ ಕರ್ತವ್ಯಪಾಲನೆಮಾಡಿ ಕೃತಕೃತ್ಯನಾದವನು-ನೂಕಿ ಎಬ್ಬಿಸಿದ ಮೇಲೆಯೆ ಕಣ್ಣುಜ್ಜಿಕೊಂಡು ಏಳುತ್ತಿದ್ದುದು ನಾವು!

ಅಜ್ಜಯ್ಯನ ನೆನಪಿನೊಡನೆ ಅವಿಭಕ್ತವಾಗಿ ಹೊಂದಿಕೊಂಡಿರುವ ಇಂತಹುದೇ ಮತ್ತೊಂದು ಎಂದರೆ-ಆಕಾಶದೀಪ: ಕಾರ್ತಿಕಮಾಸದಲ್ಲಿ ದಿನವೂ ಕತ್ತಲಾಗುವ ಹೊತ್ತು ಅವರು ಸಂಪಿಗೆ ಮರದ ಬುಡದಲ್ಲಿ ಮನೆಯ ಬಳಿಯ ಅಡಕೆ ತೋಟದ ಪಕ್ಕದಲ್ಲಿ ನೆಟ್ಟಿರುತ್ತಿದ್ದ ಉದ್ದ ಗಳುವಿನ ತುದಿಗೆ ಹಗ್ಗದ ಮೂಲಕ ಏರಿಸಿ ಕಟ್ಟಿ ರಾತ್ರಿಯೆಲ್ಲ ಉರಿಯುವಂತೆ ಮಾಡಿಡುತ್ತಿದ್ದ ನಾಲ್ಕು ಕಡೆಯೂ ಗಾಳಿಗೆ ಆರದಂತೆ ಗಾಜಿನಿಂದ ಭದ್ರಪಡಿಸಿರುತ್ತಿದ್ದ ಲಾಂದ್ರದ ದೀಪ! ಎರಡೂವರೆಯೊ ಮೂರೊ ಅಡಿಗಳೆತ್ತರದ ನಾವು ಬಾನೆತ್ತರಕ್ಕೇರುತ್ತಿದ್ದ ಆ ದೀಪವನ್ನು ನೋಡುತ್ತಾ ಒಂದು ಅಸೀಮ ಅನಂತತೆಯನ್ನೇ ಅನುಭವಿಸುತ್ತಿದ್ದೆವು. ನಮ್ಮ ಮರ್ತ್ಯಸ್ಥ ಕಲ್ಪನೆಗೆ ಆ ದೀಪ ಏರುತ್ತೇರುತ್ತಾ ಅಮರ್ತ್ಯಲೋಕೋನ್ನತವಾಗಿ ತೋರುತ್ತಿತ್ತು. ಆಕಾಶಕ್ಕೆ ಮುಟ್ಟಮುಟ್ಟ, ಇನ್ನೇನು ನಕ್ಷತ್ರಕ್ಕೆ ತಗುಲಿಯೆ ಬಿಡುತ್ತದೆ ಎಂಬಂತೆ ಭಾಸವಾಗಿ ಹಿಗ್ಗುತ್ತಿತ್ತು ನಮ್ಮ ಪುಟ್ಟ ಹೃದಯ! ಒಂದು ಏಣಿ ಹಾಕಿದರೆ ಸಾಕು, ಆ ದೀಪದ ನೆತ್ತಿಯಿಂದ ಮೇಲಕ್ಕೆ, ಆಕಾಶ ನಮ್ಮ ಕೈಗೆ ಎಟುಕುತ್ತಿತ್ತು! ಆಗ ನಮಗೆ ಆಕಾಶ ಅಭಾವಸ್ವರೂಪದ್ದಾಗಿರಲಿಲ್ಲ; ಮುಷ್ಟಿಗ್ರಾಹ್ಯವಾಗಬಹುದಾದ ಘನವಸ್ತುವಾಗಿತ್ತು. ಅಜ್ಜಯ್ಯನ ಆ ಕಾರ್ತಿಕ ದೀಪದ ಆರೋಹಣ ನಮಗೆ, ಒಂದು ಆಧ್ಯಾತ್ಮಿಕ ಸ್ವರ್ಗಾರೋಹಣದಂತೆ ನಮ್ಮ ಚೇತನದ ಅಭೀಪ್ಸೆಯ ಊರ್ಧ್ವಗಮನ ಸಾಹಸಕ್ಕೆ ಸಂಕೇತವಾಗಿತ್ತೊ ಏನೊ?

ಕಲಾತ್ಮಕವಾದ ಇಂತಹ ಪದ್ಧತಿಗಳು ವಸ್ತುನಿಷ್ಠವಾದ ಬಾಹ್ಯದೃಷ್ಟಿಗೆ ಅಲ್ಪವೂ ಸಾಧಾರಣವೂ ಬರಿಯ ಕಂದಾಚಾರಮಾತ್ರವೂ ಆಗಿ ತೋರಬಹುದಾದರೂ ಭಾವನಿಷ್ಠ ಅಂತರ್‌ದೃಷ್ಟಿಗೆ, ಅದರಲ್ಲಿಯೂ ಭೂಮಿಯನ್ನೆಲ್ಲ ಸ್ವರ್ಲೋಕವೆ ವ್ಯಾಪಿಸಿಕೊಂಡಂತಿರುವ ಬಾಲಕರ ಸಹೃದಯದೃಷ್ಟಿಗೆ, ಅದೊಂದು ಅಮೃತಮಯ ಚಿರಂತನ ಆಧ್ಯಾತ್ಮಿಕ ಅನುಭವದಂತೆ ನಿಗೂಢವೂ ಅಂತಃಸ್ಥಾಯಿಯೂ ಆಗಿರುವ ಸ್ಮೃತಿಮಂದಿರದ ನಂದಾದೀಪವಾಗಿ ಜೀವಮಾನವನ್ನೆಲ್ಲ ತನ್ನ ಗುಪ್ತದೀಪ್ತಿಯಿಂದ ಬೆಳಗುತ್ತಿರುತ್ತದೆ!