ನಮ್ಮ ತಂದೆ, ಅವರ ನಡುಹರೆಯಲ್ಲಿಯೇ, ಅಕಾಲಿಕವಾಗಿ, ದುಃಖಕರ ಸನ್ನಿವೇಶದಲ್ಲಿ ತೀರಿಕೊಂಡಾಗ, ನನಗೆ ಹತ್ತೊ ಹನ್ನೊಂದೊ. ಆದ್ದರಿಂದ ಅವರ ವ್ಯಕ್ತಿತ್ವವನ್ನು ಚೆನ್ನಾಗಿ ಅರಿಯುವ ಸಾಧ್ಯತೆ ನನಗೆ ಒದಗಲಿಲ್ಲ. ನಾನು ಚಿಕ್ಕವನಾಗಿದ್ದೆ ಎಂಬ ಕಾರಣದ ಜೊತೆಗೆ ಅದಕ್ಕಿಂತಲೂ ಪ್ರಬಲವಾದ ಮತ್ತೊಂದು ಕಾರಣವೂ ಇದೆ: ಅವಿಭಕ್ತ ಕುಟುಂಬದ ಬದುಕಿನ ಪದ್ಧತಿ!

ಏಳೆಂಟು ಮಂದಿ ಹೆಂಗಸರೂ ಮೂರು ನಾಲ್ಕು ನಾಲ್ಕು ಜನ  ಗಂಡಸರೂ ಇದ್ದ ಒಟ್ಟು ಕುಟುಂಬದಲ್ಲಿ ಮಕ್ಕಳಿಗೆ ತಮ್ಮ ತಂದೆ ತಾಯಿಯರೇ ಬೇರೆ ಎಂಬ ಪ್ರತ್ಯೇಕತಾಬುದ್ಧಿ ಪ್ರಖರಗೊಳ್ಳಲು ಸಾಧ್ಯವಿರುತ್ತಿರಲಿಲ್ಲ. ಹಗಲೆಲ್ಲ ಇತರ ಮಕ್ಕಳೊಡನೆ ಆಟವಾಡುತ್ತಾ ಕಾಲಕಳೆದು, ರಾತ್ರಿ ಮಲಗುವಾಗ ಮಾತ್ರ ನನ್ನ ತಾಯಿ ತಂದೆಯರು ಮಲಗುತ್ತಿದ್ದ ‘ನಮ್ಮ ಕೋಣೆ’ಯಲ್ಲಿ ಇತರರಿಂದ ಬೇರೆಯಾಗಿ ಮಲಗುತ್ತಿದ್ದುದೆಷ್ಟೋ ಅಷ್ಟೆ! ಊಟ ಮಾಡುವಾಗಲೂ ತಿಂಡಿ ತಿನ್ನುವಾಗಲೂ ಮಕ್ಕಳನ್ನೆಲ್ಲ ಅಡುಗೆ ಮನೆಯಲ್ಲಿ ಮಣೆಹಾಕಿ, ಒಟ್ಟಿಗೆ ಕೂರಿಸಿ, ಹೆಂಗಸರಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರಾದರೆ ಇಬ್ಬರು, ಅನುಕೂಲ ಒದಗಿದಂತೆ ಬಡಿಸುತ್ತಿದ್ದರು; ಊಟಮಾಡಿಸುತ್ತಿದ್ದರು. ಒಂದು ಮಗುವಿಗೆ ಸಾಮಾನ್ಯವಾಗಿ ಅದರ ತಾಯಿಗೆ ಉಣ್ಣಿಸುತ್ತಿದ್ದಳಾದರೂ ಇತರ ಅಮ್ಮಂದಿರೂ ಉಣ್ಣಿಸುತ್ತಿದ್ದುದು ಅಪೂರ್ವವಾಗಿರಲಿಲ್ಲ. ಮಗುವಿಗೆ ತನಗೂ ತನ್ನ ತಾಯಿಗೂ ಇದ್ದ ಸಂಬಂಧವೇ ಮುಖ್ಯಕಾರಣವಾಗಿ ತನ್ನ ತಾಯಿ ತನಗೆ ಊಟ ಮಾಡಿಸುತ್ತಿದ್ದಾಳೆ ಎಂಬ ಭಾವನೆ ಉಂಟಾಗಲು ಅವಕಾಶವಿರುತ್ತಿರಲಿಲ್ಲ. ತನ್ನ ತಾಯಿಗೆ ಬೇರೆ ಕೆಲಸವಿದ್ದ ಪಕ್ಷದಲ್ಲಿ ಇನ್ನಾರಾದರೂ ಬೇರೆ ಅಮ್ಮ ಆ ಕೆಲಸ ಮಾಡುತ್ತಿದ್ದುದು ಆ ಮಗುವಿನ ಮನಸ್ಸಿಗೆ ‘ಸಂಬಂಧ’ ನಿಬದ್ಧವಾಗಿ ತೋರುತ್ತಿರಲಿಲ್ಲ! ಬರಿಯ ಸಂದರ್ಭಾನುಕೂಲದ ಸಂಗತಿಯಾಗಿ ತೋರುತ್ತಿತ್ತು. ಅವರವರ ತಾಯಂದಿರು ತಮ್ಮ ತಮ್ಮ ಹಕ್ಕುಬಾಧ್ಯತೆಗಳನ್ನು ತಮ್ಮ ಮಕ್ಕಳ ಮನಸ್ಸಿನ ಮೇಲೆ ಮುದ್ರಿಸಲು ಪ್ರಯತ್ನಿಸುತ್ತಿರಲಿಲ್ಲ ಎಂದಲ್ಲ. ತನ್ನ ಕಂದನನ್ನೆ ಎಕ್ಕಟಿ ಕರೆದು, ಮರೆಯಾಗಿ, ಏನನ್ನಾದರೂ ತಿನ್ನಲು ಕೊಟ್ಟು, ಬೇರೆ ಯಾವ ಮಕ್ಕಳಿಗೂ ತೋರಿಸದೆ ಗುಟ್ಟಾಗಿ ತಿನ್ನುವಂತೆ ಹೇಳುತ್ತಿದ್ದುದೂ ಉಂಟು. ಆ ಮಗುವೂ ಬಾಗಿಲ ಸಂಧಿಯಲ್ಲಿಯೊ ಅಥವಾ ‘ನಮ್ಮ ಕೋಣೆ’ಯ ಕತ್ತಲೆಯ ಮರೆಯ ರಕ್ಷೆಯಲ್ಲಿಯೊ ಅದನ್ನೆಲ್ಲ ತಿಂದು ಪೂರೈಸಿ, ಅಂಗಿತೋಳಿನಿಂದ ಆದಷ್ಟು ಎಚ್ಚರಿಕೆಯಿಂದ ಬಾಯಿ ಒರಸಿಕೊಂಡು ಹೋಗಿ, ಇತರ ಮಕ್ಕಳಾರಿಗೂ ತಿಳಿಯದಂತಹ ಮುಗ್ಧ ಭಂಗಿಯಲ್ಲಿ ಅವರೊಡನೆ ಆಟಕ್ಕೆ ಸೇರಿಕೊಳ್ಳುತ್ತಿದ್ದದೂ ಉಂಟು! ಅಷ್ಟರಮಟ್ಟಿಗೆ ತಾನು ತನ್ನ ಅಮ್ಮನಿಗೆ ವಿಶೇಷವಾಗಿ ಸಂಬಂಧಪಟ್ಟವನೆಂಬ ಅರಿವೂ ಅದಕ್ಕಾಗುತ್ತಿತ್ತು. ಆದರೂ ಆಧುನಿಕ ನಗರ ಸಂಸಾರದ ಗಂಡ ಹೆಂಡತಿ ಮಕ್ಕಳಲ್ಲಿ ತೋರುವಂತೆ ತಾನು ತನ್ನದು ತಮ್ಮವರು ಎಂಬ ಕಾಂಪೌಂಡು ಗೋಡೆಯ ನಡುವಣ ಪ್ರಖರ ಪ್ರತ್ಯೇಕತಾಭಾವನೆಗೆ ಅಲ್ಲಿ ಎಡೆಯಿರಲಿಲ್ಲ. ಇತರ ಮಕ್ಕಳಲ್ಲಿ ತಾನೂ ಒಬ್ಬ, ಇತರ ಅಮ್ಮಂದಿರಲ್ಲಿ ತನ್ನ ಅವ್ವನೂ ಒಬ್ಬಳು, ಎಂಬ ಸಾಮೂಹಿಕ ಭಾವನೆಯಿಂದಾಗಿ ವೈಯಕ್ತಿಕವಾಗಿರುತ್ತಿದ್ದ ವ್ಯತ್ಯಾಸಗಳೂ ಗಮನಕ್ಕೆ ಬರುತ್ತಿರಲಿಲ್ಲ; ಅದರಲ್ಲಿಯೂ ಅಂತಹ ವ್ಯತ್ಯಾಸ ತಾರತಮ್ಯಗಳನ್ನು ಗಮನಿಸುವ ವಯಸ್ಸಿಗೆ ಇನ್ನೂ ಬಾರದ ಮಕ್ಕಳಲ್ಲಿ!

ತಾಯಂದಿರ ವಿಚಾರದಲ್ಲಿಯೇ ಹೀಗಾದಮೇಲೆ ಇನ್ನು ತಂದೆಯರ ವಿಚಾರವಾಗಿ ಮಕ್ಕಳಿಗೆ ಆಗುತ್ತಿದ್ದ ಪರಿಚಯವನ್ನು ಕೇಳಬೇಕೆ? ತಾಯಿಯಾದರೂ ಹೊತ್ತುಹೆತ್ತು ಎದೆಹಾಲು ಕೊಟ್ಟು ಸಾಕಿಸಲಹಿ ಮುದ್ದಿಸಿ ಎದೆಗವಚಿ ಮಡಿಲಲ್ಲಿಟ್ಟು, ಪ್ರಾಣಸ್ತರದಲ್ಲಿ ಮಾತ್ರವಲ್ಲದೆ ದೈಹಿಕವಾಗಿಯೂ ಶಿಶುವಿನ ಪ್ರಜ್ಞೆಯಲ್ಲಿ ಒಂದು ಅತ್ಯತಿನಿಕಟಬಾಂಧವ್ಯವನ್ನು ನೈಸರ್ಗಿಕವಾಗಿಯೆ ಸ್ಥಾಪಿಸಿರುತ್ತಾಳೆ. ಆದರೆ ತಂದೆ? ಒಮ್ಮೊಮ್ಮೆ ಮನೆಗೆಲಸದಲ್ಲಿ ಗದ್ದೆತೋಟಗಳ ಕೆಲಸದಲ್ಲಿ ಯಜಮಾನಿಕೆಯ ಕರ್ತವ್ಯಗಳಲ್ಲಿ ಮನಸ್ಸಿಗೆ ಬಿಡುವಾಗಿ ಅವಕಾಶ ಒದಗಿದಾಗ ತುಸುಹೊತ್ತು ಎತ್ತಿ ಮುದ್ದಾಡಿದರೆ ಅದೂ ಅತಿ ಎಂಬಂತೆ ತೋರುತ್ತಿತ್ತು, ಸಂಪ್ರದಾಯನೇತ್ರಕ್ಕೆ! ಏಕೆಂದರೆ ತನ್ನ ಹೆಂಡತಿಯ ಮೇಲಣ ಸಾಧಾರಣ ಪ್ರೀತಿಯನ್ನೂ ಇತರಗೋಚರವಾಗಿ ಪ್ರದರ್ಶಿಸುವುದು ಅಸಭ್ಯವೆಂದೂ ಅವಮಾನಕರವೆಂದೂ ನಾಚುತ್ತಿದ್ದ ಆ ಕಾಲದಲ್ಲಿ ತನ್ನ ಮಗುವನ್ನು ತಾನೆ ಮದ್ದಿಡುವುದೂ ಅಷ್ಟೇನೂ ‘ಪೌರುಷ ಸಭ್ಯ’ವೆಂದು ಪರಿಗಣಿತವಾಗಿರಲಿಲ್ಲ. ಆ ಕಾರಣದಿಂದಲೂ ಗಂಡಸು ಆ ವಿಚಾರವಾಗಿ ತುಂಬ ‘ಸಂಯಮ’ದಿಂದ ವರ್ತಿಸುತ್ತಿದ್ದನು. ಇತರ ಯಾರಿಗೂ ಇರದಿದ್ದ ಒಂದು ವಿಶೇಷ ಹಕ್ಕು ತಂದೆಯಾದವನಿಗೆ ಮಾತ್ರ ವಿಶಿಷ್ಟರೀತಿಯಲ್ಲಿ ಇರುತ್ತಿದ್ದುದು ಮಕ್ಕಳ ಗಮನಕ್ಕೆ ಬರುತ್ತಿದ್ದು, ಅದರಿಂದಲಾದರೂ ಮಗುವಿನ ಮನಸ್ಸಿನ ಮೇಲೆ ಅದರ ತಂದೆಯ ಮುದ್ರೆ ಕಾಯಿಸಿ ಅಡಚಿದಂತೆ ಆಗುತ್ತಿತ್ತು. ಅದಾವುದೆಂದರೆ-ಶಿಕ್ಷೆ! ತಾನು ಎಂತಹ ನಿರ್ದಾಕ್ಷಿಣ್ಯ ನ್ಯಾಯಪರ ಶಿಸ್ತಿನ ಮನುಷ್ಯ ಎಂಬುದನ್ನು ಎಲ್ಲರೆದುರು ಅಪವಾದವಿಲ್ಲದೆ-(ಪ್ರೀತಿ ತೋರಿಸಿದಾಗ ಇರುತ್ತಿದ್ದಂತೆ!)-ಪ್ರದರ್ಶಿಸಬಹುದಾಗಿದ್ದುದರಿಂದ-(ಒಟ್ಟು ಕುಟುಂಬದಲ್ಲಿ ನಿಷ್ಪಕ್ಷಪಾತ ಪ್ರದರ್ಶನೀಯ ಲಕ್ಷಣವಲ್ಲವೆ?)-ಹೊಡೆದು ಬಡಿಯುವ ವಿಚಾರದಲ್ಲಿ ತಂದೆಯ ‘ತಂದೆತನ’ ಚೆನ್ನಾಗಿ ವ್ಯಕ್ತವಾಗುತ್ತಿತ್ತು, ಮಗು ಮರೆಯದ ರೀತಿಯಲ್ಲಿ!

ಆದರೆ ನನಗೆ ಮಾತ್ರ ಇತರರ ಕ್ರೂರಶಿಕ್ಷೆಯ ಸಚಿತ್ರ ಸ್ಮರಣೆಯಾಗುತ್ತಿದ್ದರೂ ನನಗೆ ಆ ರೀತಿಯಲ್ಲಿ ಶಿಕ್ಷೆ ವಿಧಿಸಿದ್ದು ಎಷ್ಟು ಪ್ರಯತ್ನಪಟ್ಟರೂ ಜ್ಞಾಪಕಕ್ಕೆ ಬರುತ್ತಿಲ್ಲ. ಹಾಗೆಯೆ ನನ್ನ ತಂದೆ ವಿಶೇಷರೀತಿಯಲ್ಲಿ ಮುದ್ದಿಸಿದ್ದುದೂ ನೆನಪಿಗೆ ಬರುತ್ತಿಲ್ಲ. ಅವರು ಯಾವುದರಲ್ಲಿಯೂ ಅತಿಯಾಗಿ ಆ ಕಡೆ ಅತಿಯಾಗಿ ಈ ಕಡೆ ಹೋಗುವ ವ್ಯಕ್ತಿಯಾಗಿರಲಿಲ್ಲವೆಂದು ನನ್ನ ಇಂದಿನ ಊಹೆ.

ಹೊರನೋಟಕ್ಕೆ ನನ್ನ ತಂದೆ ಯಾವ ವ್ಯಕ್ತಿವಿಶಿಷ್ಟತೆಯೂ ಇಲ್ಲದ ಸಾಧಾರಣ ಮನುಷ್ಯರಾಗಿದ್ದರು. ಮನೆಯಲ್ಲಿದ್ದ ಇತರ ವ್ಯಕ್ತಿಗಳು-ಅಜ್ಜಯ್ಯ, ದೊಡ್ಡ ಚಿಕ್ಕಪ್ಪಯ್ಯ-ಸಬಲರೂ ದೃಢಕಾಯರೂ ಆಗಿ ತೋರುತ್ತಿದ್ದರು. ಅವರ ಮುಂದೆ ನನ್ನ ತಂದೆ ತುಂಬ ಬಡಕಲು! ಬಾಲಕನಾಗಿದ್ದ ನಾನು ಅಚ್ಚರಿಯಿಂದ ನೋಡುತ್ತಿದ್ದೆ; ಅವರ ಗಂಟಲಿನಲ್ಲಿ ಬೇರೆ ಯಾರಲ್ಲಿಯೂ ಎದ್ದು ತೋರದ ರೀತಿಯಲ್ಲಿ ಮುಂಚಾಚಿ ಕಾಣಿಸುತ್ತಿದ್ದ ಗಂಟಲು ಮಣಿ ಅಥವಾ ಗೋಮಾಳೆಯನ್ನು! ಉಡುಗೆ ತೊಡುಗೆಯಲ್ಲಿಯೂ ಅವರು ಅತಿ ನಿರಾಡಂಬರ. ನಂಟರ ಮನೆಗೆ ವಿಶೇಷ ಸಂದರ್ಭಗಳಲ್ಲಿ ಹೋಗಬೇಕಾದಾಗ ಅವರು ಒಂದು ಕಪ್ಪು ಬಣ್ಣದ ಅಂಗಿ ಹಾಕಿಕೊಂಡು, ಕೆಂಪಂಚಿನ ಕಚ್ಚೆ ಮಂಚೆಯುಟ್ಟು, ಹಾಸನದ ತೋಪಿ ತೊಟ್ಟುಹೋಗುತ್ತಿದ್ದುದು ನೆನಪು. ಆಗ ನಮ್ಮನ್ನು ಬೆರಗುಗೊಳಿಸುತ್ತಿದ್ದ ಏಕಮಾತ್ರ ವಸ್ತುವೆಂದರೆ, ಅವರ ಗಡಿಯಾರದ ಜೇಬಿನಿಂದ ಗುಂಡಿಯರಂಧ್ರದವರೆಗೆ ನೇತಾಡುವಂತೆ ಇಳಿಬಿದ್ದಿರುತ್ತಿದ್ದ ಗಡಿಯಾರದ  ಸರಪಣಿ: ಬೆಳ್ಳಿಯ ಸರಪಣಿ!

ಅಪ್ಪಯ್ಯ-ತಂದೆ-ಮನೆಯ ಯಜಮಾನರಾಗಿದ್ದರೂ ಯಾಜಮಾನ್ಯದ ಲಕ್ಷಣಗಳಾವುವೂ ಅವರಲ್ಲಿ ಇದ್ದಹಾಗೆ ಇರಲಿಲ್ಲ. ಬಹುಶಃ ಅವರು ತಮ್ಮ ವಯಸ್ಸಿನ ಹಿರಿಯತನದಿಂದಲೆ ಮನೆಯ ಯಜಮಾನರಾಗಿದ್ದಿರಬೇಕು. ಏಕೆಂದರೆ ಆಳುತನ, ಮೀಸೆ, ದರ್ಪ, ಧ್ವನಿ, ನಡೆನುಡಿ, ಉದ್ಧಟತನ, ಗರ್ವ, ರೋಷ, ರಜೋಗುಣ, ಸಾಹಸಪ್ರವೃತ್ತಿ-ಇವೆಲ್ಲವೂಸ ಮಧಿಕ ಪ್ರಮಾಣದಲ್ಲಿದ್ದಂತೆ ತೋರುತ್ತಿತ್ತು, ನಮ್ಮ ‘ದೊಡ್ಡ ಚಿಕ್ಕಪ್ಪಯ್ಯ’ಗೆ-ರಾಮಯ್ಯಗೌಡರಿಗೆ! ನನ್ನ ತಂದೆಯ ಸಾತ್ತ್ವಿಕಪ್ರವೃತ್ತಿ ದುರ್ಬಲತೆಯ ಅಂಚಿನಲ್ಲಿ ತತ್ತರಿಸುವಂತಿದ್ದರೆ, ದೊಡ್ಡ ಚಿಕ್ಕಪ್ಪಯ್ಯನ ರಜೋಗುಣಮಯ ಪ್ರವೃತ್ತಿ ಅವಿವೇಕದ ಸಾಹಸಕ್ಕೂ ಹಿಂಜರಿಯುತ್ತಿರಲಿಲ್ಲ. ಕುಪ್ಪಳ್ಳಿ ಮನೆಯಲ್ಲಿದ್ದ ಮೂವರು ಗಂಡಸರಿಗೂ ಮೂರು ಗ್ರಾಮಗಳ ಪಟೇಲಿ ಇತ್ತು. ಆದರೆ ಜನರಿಗೆ ಬಸಪ್ಪಗೌಡರ ಮತ್ತು ವೆಂಕಟಯ್ಯಗೌಡರ ಪಟೇಲಿಕೆ ಗಮನಕ್ಕೆ ಬರುತ್ತಿರಲಿಲ್ಲ. ಕುಪ್ಪಳಿ ಪಟೇಲರು ಎಂದರೆ ಜಬರದಸ್ತಿನ ರಾಮಯ್ಯಗೌಡರಿಗೇ ಸಲ್ಲುತ್ತಿತ್ತು ಆ ಬಿರುದು! ಅದರ ಪರಿಣಾಮವಾಗಿಯೆ ಮುಂದೆ ಒಂದು ಜಮೀನಿನ ವಿಷಯದಲ್ಲಿ, ಎರಡು ಮನೆಯವರೂ ಪರಸ್ಪರ ಅತ್ಯಂತ ಸಮೀಪ ಬಂಧುಗಳಾಗಿದ್ದರೂ, ಕುಪ್ಪಳಿ ಮತ್ತು ದೇವಂಗಿ ಮನೆತನಗಳಿಗೆ ಹೊಡೆದಾಟವಾಗಿ, ಪೋಲಿಸಿನವರು ನಡುವೆ ಬಂದು ಆಗಬಹುದಾಗಿದ್ದ ಕೊಲೆ ಖೂನಿಗಳನ್ನು ತಪ್ಪಿಸಬೇಕಾಗಿ ಬಂದದ್ದು! ದೊಡ್ಡ ಚಿಕ್ಕಪ್ಪಯ್ಯನ ಆ ರಜೋಗುಣದ ಛಲದ ಹಠದ ಪರಿಣಾಮವಾಗಿಯೆ ಮುಂದೆ, ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ಜಲಾಂತರ್ಗಾಮಿ ಎಮುಡನ್‌ಮದರಾಸಿನ ಲೈಟ್‌ಹೌಸಿಗೆ ಗುಂಡು ಹೊಡೆದ ತರುವಾಯ ಒಂದು ವರ್ಷದೊಳಗಾಗಿ, ರಾಮಯ್ಯಗೌಡರು ಅಡಕೆಯ ವ್ಯಾಪಾರದಲ್ಲಿ ಉಂಟಾಗಿದ್ದ ಭಾರಿ ನಷ್ಟವನ್ನೂ ಸಾಲವನ್ನೂ ತೀರಿಸುವ ವಿಚಾರದಲ್ಲಿ, ನನ್ನ ತಂದೆಗೂ ಅವರಿಗೂ ಮನಸ್ತಾಪ ಬಂದು, ನನ್ನ ತಂದೆ ಮನೆಗೆ ಯಜಮಾನರಾಗಿದ್ದರೂ-(ಹಣಕಾಸಿನ ವ್ಯವಹಾರವೆಲ್ಲ ದೊಡ್ಡ ಚಿಕ್ಕಪ್ಪಯ್ಯನ ಕೈಯಲ್ಲಿದ್ದುದರಿಂದ ಎಂದು ಹೇಳುತ್ತಾರೆ)-ಮನೆಯನ್ನು ತೊರೆದು ತೀರ್ಥಹಳ್ಳಿಗೆ ಹೋಗಿ, ಒಂದೆರೆಡು ವಾಡಗಳಲ್ಲಿಯೆ ವಿಷಮಶೀತಜ್ವರವೇರಿ ತೀರಿಕೊಂಡದ್ದು!

ಬೇಟೆಯಾಡುವುದು ಮಲೆನಾಡಿನವರಿಗೆ ಒಂದು ದಿನನಿತ್ಯದ ಹವ್ಯಾಸದ ಕಸುಬಾಗಿದ್ದರೂ ನನಗೆ ಬುದ್ದಿ ತಿಳಿದ ಮೇಲೆ ನನ್ನ ತಂದೆ ಕೋವಿ ತೆಗೆದುಕೊಂಡು ಕಾಡಿನ ಕಡೆಗೆ ವಿಶೇಷವಾಗಿ ಹೋಗುತ್ತಿದ್ದುದು ನೆನಪಿಲ್ಲ. ಹಬ್ಬದ ಹಿಂದಿನ ‘ದೊಡ್ಡ ಬೇಟೆ’ಗೆ ಗುಮಪಿನ ಜೊತೆಯಲ್ಲಿ ಹೋಗುತ್ತಿದ್ದುದು ನೆನಪಿದೆ. ಹಳು ನುಗ್ಗುವ ತಂಟೆಗೆ ಹೋಗದೆ ಬಿಲ್ಲಿಗೆ ಮಾತ್ರ ನಿಲ್ಲುತ್ತಿದ್ದರೆಂದು ತೋರುತ್ತದೆ. ಆದರೆ ಅವರು ಯಾವ ದೊಡ್ಡ ಷಿಕಾರಿ ಮಾಡಿದ್ದೂ ನನಗೆ ಗೊತ್ತಿಲ್ಲ. ಅವರ ಬೇಟೆಯ ಹುಚ್ಚು ಇಳಿದು ಹೋಗಿದ್ದಿರಬೇಕು. ಅದಕ್ಕೆ ಕಾರಣ ಹಿಂದೊಮ್ಮೆ, (ಬಹುಶಃ ನಾನು ಹುಟ್ಟುವ ಮೊದಲು ಅಥವಾ ನಾನು ತೊಟ್ಟಿಲ ‘ಬಾಲೆ’ಯಾಗಿದ್ದಾಗ!) ಅವರು ಒಂದು ಹಬ್ಬದ ದೊಡ್ಡ ಬೇಟೆಯಲ್ಲಿ ಬಿಲ್ಲಿಗೆ ನಿಂತಿದ್ದಾಗ, ಅವರ ಮುದ್ದಿನ ನಾಯಿ ಅಟ್ಟಿಸಿಕೊಂಡು ಬಂದ ಒಂದು ಹೆಬ್ಬಂದಿಗೆ ಗುಂಡಿಕ್ಕಿದರಂತೆ. ಆ ಗುಂಡು ಹಂದಿಗೆ ತಗುಲಿ, ಅದನ್ನು ಹಾಯ್ದು, ಅದರ ಆಚೆಗೆ ಬೆನ್ನಟ್ಟಿ ಬರುತ್ತಿದ್ದ ನಾಯಿಗೂ ತಗುಲಿ ಅದು ಸತ್ತಿತಂತೆ. ಆ ದಿನ ಅವರು ಕಣ್ಣೀರಿಕ್ಕಿ ಬಹಳ ಸಂಕಟಪಟ್ಟರಂತೆ. ಊಟವನ್ನು ಮಾಡದೆ ಆ ಹಂದಿಯ ಮಾಂಸವನ್ನು ಮುಟ್ಟಲಿಲ್ಲವಂತೆ! ತಮ್ಮ ಮಕ್ಕಳಲ್ಲಿ ಒಂದು ಸತ್ತರೆ ಅದನ್ನು ಒಪ್ಪಮಾಡಿ ಹೂಳುವ ರೀತಿಯಲ್ಲಿ ಸಂಪ್ರದಾಯದ ಪ್ರಕಾರ ಆ ನಾಯಿಯನ್ನು ಮಣ್ಣು ಮಾಡಿದರಂತೆ! ಅದರ ಹೆಸರು ‘ಡೂಲಿ’ ಎನ್ನುತ್ತಿದ್ದರು.

ಇನ್ನೊಂದು ಅಪೂರ್ವವಾದ ಮತ್ತು ಅರ್ಥಪೂರ್ಣವಾದ ಚಿತ್ರ ನೆನಪಿಗೆ ಹೊಳೆಯುತ್ತದೆ: ಮುಂದೆ, ಎಷ್ಟೋ ವರ್ಷಗಳ ತರುವಾಯ, ನಾನು ಕನ್ನಡದ ಮಹಾಕವಿಯಾಗಿ ‘ಶ್ರೀ ರಾಮಾಯಣದರ್ಶನಂ’ ಮಹಾಛಂದಸ್ಸಿನ ಮಹಾಕಾವ್ಯವನ್ನು ರಚಿಸಿದುದಕ್ಕೂ ಅದಕ್ಕೂ ಏನಾದರೂ ಅತೀಂದ್ರಿಯ ಸಂಬಂಧವಿರಬಹುದೇ ಎಂದು ಅಚ್ಚರಿಪಡುತ್ತೇನೆ.

ಆಗತಾನೆ ತಾರುಣ್ಯವನ್ನು ದಾಟಿ ಯೌವನದ ಹೊಸ್ತಿಲಲ್ಲಿ ಕಾಲಿಟ್ಟಿದ್ದ ವಾಟಿಗಾರು ಮಂಜಪ್ಪಗೌಡರು (ಆಗ ನಮಗೆ ಅವರು ‘ಮಂಜಣ್ಣಯ್ಯ’ ಮಾತ್ರ ಆಗಿದ್ದರು.) ಕುಪ್ಪಳಿಗೆ ಉಳಿಯಲು ಬಂದಾಗಲೆಲ್ಲ ಅವರಿಂದ ಓಲೆಗರಿಯ ಕಟ್ಟುಗಳ ರೂಪದಲ್ಲಿ ಇರುತ್ತಿದ್ದ ರಾಮಾಯಣ ಭಾರತಗಳಲ್ಲಿ ಯಾವುದಾದರೂ ಒಂದೆರಡು ಸಂಧಿಗಳನ್ನು ಓದಿಸಿ ಆಲಿಸುತ್ತಿದ್ದರು, ಅಪ್ಪಯ್ಯ, ದೊಡ್ಡ ಚಿಕ್ಕಪ್ಪಯ್ಯ, ಅಜ್ಜಯ್ಯ ಮೊದಲಾದವರು. ರಾತ್ರಿ ಊಟಕ್ಕೆ ಕರೆಯುವುದು ಅಂತಹ ಸಂದರ್ಭಗಳಲ್ಲಿ ಸ್ವಲ್ಪ ತಡವಾಗುತ್ತಿದ್ದುದು ವಾಡಿಕೆ; ಏಕೆಂದರೆ ವಿಶೇಷ ಔತಣದ ಪಾಕಕಾರ್ಯ ಪೂರೈಕೆಯ ದೆಸೆಯಿಂದ. ಮಕ್ಕಳು ಅವರವರ ತಂದೆಯ ತೊಡೆಯ ನಡುವೆ ಹುದುಗಿ, ಹೊದ್ದ ಶಾಲಿನಿಂದ ತಲೆ ಮಾತ್ರ ಕಾಣುವಂತೆ ಬೆಚ್ಚಗೆ ಕುಳಿತು ಆಲಿಸುತ್ತಿದ್ದುವು. ನಾನೂ, ಮುಂಡಿಗೆಗೆ ಒರಗಿ ಶಾಲು ಹೊದ್ದು ಕುಳಿತು ಆಲಿಸುತ್ತಿದ್ದ, ಅಪ್ಪಯ್ಯನ ತೊಡೆಯ ಮಧ್ಯೆ ಶಾಲೊಳಗೆ ಹುದುಗಿ ಕುಳಿತು, ಯಾವುದೋ ಅಲೌಕಿಕ ಅತೀಂದ್ರಿಯ ವ್ಯಾಪಾರವನ್ನು ಗಮನಿಸುತ್ತಿರುವಂತೆ, ವಿಸ್ಮಯಾನಂದಗಳ ಸಮ್ಮಿಶ್ರಣ ಭಂಗಿಯಿಂದ ಆಲಿಸುತ್ತಿದ್ದೆ. ನನಗೀಗ ನೆನಪಾಗುತ್ತಿರುವ ಸಂದರ್ಭದಲ್ಲಿ ಮಂಜಪ್ಪಗೌಡರು ಓದಿ ಅರ್ಥ ಹೇಳುತ್ತಿದ್ದ ಭಾಗ, ತೊರವೆ ರಾಮಾಯಣದಲ್ಲಿ ಆಂಜನೇಯನ ಸಮುದ್ರ ಲಂಘನದ ಸನ್ನಿವೇಶವಾಗಿತ್ತು. ಹಳ್ಳಿಯ ಹುಡುಗನಾಗಿದ್ದ ನನ್ನ ಆ ವಯಸ್ಸಿಗೆ ರಾಮಾಯಣದ ಕಥೆ ಅದರ ಭ್ರೂಣಾವಸ್ಥೆಗಿಂತಲೂ ಪೂರ್ವತರದ್ದಾಗಿದ್ದು. ರಾಮ ಸೀತೆ ಹನುಮಂತ ರಾವಣರ ಹೆಸರುಗಳು ಕಿವಿಯ ಮೇಲೆ ಬಿದ್ದಿರಬಹುದಾಗಿದ್ದರೂ ಕಥೆಯ ರೂಪ ಅಖಂಡವಾಗಿರದೆ ತೆನ್ನಾಲಿ ರಾಮಕೃಷ್ಣನ ಚಿತ್ರಕಲೆಯ ಮಾದರಿಯದಾಗಿತ್ತು! ಆದರೂ ನನಗೆ ಮಂಜಣ್ಣಯ್ಯ ತುಸು ರಾಗವಾಗಿ ಓದಿ ಹನುಮಂತ ಹಾರಿದುದನ್ನು ಅರ್ಥಯ್ಸುತ್ತಿದ್ದಾಗ ಏನು ಕುತೂಹಲ! ತುಸು ರೋಮಾಂಚನ! ಮುಂದೇನು? ಮುಂದೇನು?-ಎಂಬ ಅದೇನು ಆತುರ! ತುಸು ವ್ಯಾಖ್ಯಾನ ಹೇಳಿ, ಮುಂದಿನ ಪದ್ಯ ಓದಲು ಗಮಕಿ ಸಾವಧಾನವಾಗಿ ಮುಂದುವರಿದಾಗ ನನಗೆ ಅದೊಂದೂ ಅರ್ಥವಾಗದೆ, ಆ ಪದ್ಯದ ಮೇಲೆ ಸಿಟ್ಟೂ ಬರುತ್ತಿತ್ತು! ಅದೇಕೆ ನಾನು ತಿಳಿಯಬಹುದಾದಂತಹ ಗದ್ಯವೇ ಆಗಿರಬಾರದಾಗಿತ್ತು ಎಂದು?! ಜೊತೆಗೆ ಅಷ್ಟರಲ್ಲಿಯೇ “ಬಳ್ಳೆ ಹಾಕಿದ್ದಾರೆ” ಎಂಬ ಊಟದ ಕರೆಯು ಬಂದು, ಎಲ್ಲರೂ ರಾಮಾಯಣದ ಲೋಕದಿಂದ ಕಡುಬು ತುಂಡುಗಳ ಅಡುಗೆ ಮನೆಗೆ ನಿರ್ಲಿಪ್ತ ನಿರ್ವ್ಯಸನಿಗಳಾಗಿ ನಿರ್ದಾಕ್ಷಿಣ್ಯವಾಗಿ ಹೊರಟುಬಿಡುತ್ತಿದ್ದರು, ನನ್ನನ್ನೂ ನನ್ನ ಹನುಮಂತನನ್ನೂ ಆಕಾಶದ ಮಧ್ಯೆ ಸಾಗರದ ಮೇಲೆ ತ್ರಿಶಂಕು ಸ್ವರ್ಗದಲ್ಲಿಯೇ ತ್ಯಜಿಸಿಬಿಟ್ಟು! ಈ ದೊಡ್ಡವರನ್ನು ಆಶ್ರಯಿಸಿದರೇ ಹೀಗೆ, ನಾನೇ ಇದನ್ನೆಲ್ಲ ಓದಿಕೊಳ್ಳುವುದನ್ನು ಕಲಿತುಬಿಟ್ಟರೆ ಇವರ ಯಾರ ಹಂಗೂ ಇಲ್ಲದೆ ಬೇಕಾದಾಗ, ಬೇಕಾದಷ್ಟು ಕಾಲ ಹನುಮಂತನೊಡನೆ ಹಾರಿ, ಮುಂದೆ ನಡೆಯುವುದನ್ನೆಲ್ಲ ಕಾಣುತ್ತೇನೆ ಎಂದು  ಸಾಹಸದ ಸಂಕಲ್ಪ ಮಾಡುತ್ತಿದ್ದೆ. ಬಹುಶಃ ಆ ಅಭೀಷ್ಟೆಯ ಹೃದಯದಲ್ಲಿ ಬೀಜದ ಅಂತರತಮ ಗರ್ಭದಲ್ಲಿ ಮುಂಬರುವ ಮಹಾವಟ ವೃಕ್ಷವು ಸುಪ್ತಗುಪ್ತವಾಗಿರುವಂತೆ, ಶ್ರೀ ರಾಮಾಯಣದರ್ಶನಂ ಮಹಾಕಾವ್ಯ ಅಂತರ್ಗತವಾಗಿ ನಿದ್ರಿಸುತ್ತಿತ್ತೊ ಏನೊ?