ಕುಪ್ಪಳಿ, ವಾಟಗಾರು, ದೇವಂಗಿ, ಬಳಗಟ್ಟೆ ಮೊದಲಾದ ಒಂದೆಮನೆಯ ಹಳ್ಳಿಗಳಿಂದ ಈ ಮೊದಲೆ, ಕ್ರೈಸ್ತ ಮಿಷನರಿಗಳ ಪ್ರಭಾವ ಪ್ರೋತ್ಸಾಹ ಸಹಾಯಗಳಿಗೆ ಸಿಲುಕಿ, ಕೆಲವು ಹುಡುಗರು ಮೈಸೂರು ಬೆಂಗಳೂರುಗಳಿಗೆ ಓದಲು ಹೋಗಿದ್ದರಷ್ಟೆ. ನನ್ನ ಲೋಕಪ್ರಜ್ಞೆ ತನ್ನ ಬುದ್ಧಿ ನೇತ್ರಗಳನ್ನು ತೆರದು ಸುತ್ತಣ ಘಟನೆಗಳನ್ನು ಗ್ರಹಿಸಲು ಕಲಿಯುವುದಕ್ಕೆ ಪೂರ್ವದಲ್ಲಿಯೆ, ಹಾಗೆ ಓದಲು ಹೋಗಿದ್ದು, ಮೈಸೂರಿನ ಹಾರ್ಡ್ವಿಕ್ ಕಾಲೇಜಿನಲ್ಲಿ ಓದುತ್ತಿದ್ದ, (ಹೆಸರಿಗೆ ಮಾತ್ರ ಕಾಲೇಜು, ವಾಸ್ತವವಾಗಿ ಸ್ಕೂಲು) ಹಾರ್ಡ್ವಿಕ್ ಹಾಸ್ಟೆಲ್ ಎಂಬ ಆ ಕಾಲೇಜಿಗೆ ಸೇರಿದ್ದ ಕ್ರಿಶ್ಚಿಯನ್ ಹಾಸ್ಟಲಿನಲ್ಲಿ ಬಿಟ್ಟಿ ಊಟವಸತಿ ಗಿಟ್ಟಿಸುತ್ತಿದ್ದು, ಓದು ಸಾಕಾಗಿ ಹಿಂತಿರುಗಿಯೂ ಬಿಟ್ಟಿದ್ದರು. ನನಗೆ ನೆನಪಿರುವ ಅವರಲ್ಲಿ ಮೂವರೆಂದರೆ: (ಆಗ ನಾನು ಕರೆಯುತ್ತಿದ್ದಂತೆ) ವಾಟಗಾರು ವೆಂಕಟಣ್ಣಯ್ಯ, ಕುಪ್ಪಳಿ ಐಯಪ್ಪ ಚಿಕ್ಕಪ್ಪಯ್ಯ, ದೇವಂಗಿ ತಿಮ್ಮಯ್ಯಮಾವ. ಹಾಗೆ ತುಸು ಇಂಗ್ಲಿಷ್ ಯೆಸ್, ಪುಸ್, ಕೆಸ್ ಕಲಿತು ಬಂದ ತಮ್ಮ ಹುಡುಗರನ್ನು ನೋಡಿ, ವಯಸ್ಸಾದ ಹಿರಿಯರಿಗೂ ಇಂಗ್ಲಿಷ್ ಕಲಿಯಲು ಮನಸ್ಸಾಗಿ, ಮೋಸಸ್ ಬರುವುದಕ್ಕಿಂತ ಮೊದಲೆ ‘ಹುಚ್ಚು ವ್ಯಾಸರಾಯ’ರನ್ನು ನಮ್ಮ ಉಪ್ಪರಿಗೆ ಶಾಲೆಗೆ ನೇಮಿಸಿಕೊಂಡಿದ್ದರು. (ಅದರ ಸ್ವಲ್ಪ ಸಂಗತಿ ‘ಮಲೆನಾಡಿನ ಚಿತ್ರಗಳು’ ಪ್ರಸ್ತಕದ ‘ಮನೆಯಶಾಲೆಯ ಐಗಳ ಮಾಲೆ’ಯಲ್ಲಿ ಬರುತ್ತದೆ!) ನಮ್ಮ ಹಿರಿಯರಿಗೆ ಇಂಗ್ಲಿಷ್ ಅಕ್ಷರಗಳ ಪರಿಚಯ ಮಾತ್ರದಲ್ಲಿಯೆ ಅವರ ವಿದ್ಯಾಭ್ಯಾಸ ಪರಿಸಮಾಪ್ತವಾಯಿತೆಂದು ತೋರುತ್ತದೆ. ಅದನ್ನವರು ಉಪಯೋಗ ಮಾಡಿಕೊಂಡಿದ್ದನ್ನು ನಾನು ನೋಡಿದ್ದೇನೆ: ಮುಂದೆ, ನಮ್ಮ ದೊಡ್ಡ ಚಿಕ್ಕಪ್ಪಯ್ಯ-ಕುಪ್ಪಳಿ ರಾಮಣ್ಣಗೌಡರು-ಅಡಕೆ ವ್ಯಾಪಾರದ, ಸಾಹುಕಾರಿಕೆ ಕೈಕೊಂಡಾಗ, ಅಡಕೆ ತುಂಬಿದ್ದ ರವಾನೆ ಚೀಲಗಳ ಮೇಲೆ ‘K.R.G’ ಎಂದು ದೊಡ್ಡದಾಗಿ ಕೆಂಪುಮಸಿಯಲ್ಲಿ ವಿಳಾಸ ಹಾಕುತ್ತಿದ್ದರು, ತುಂಬ ಹೆಮ್ಮೆಯಿಂದ, ಇತರ ಹಳ್ಳಿಗರಿಗೆ ತಿಳಿಯದ ಇಂಗ್ಲಿಷ್ ತಮಗೊಬ್ಬರಿಗೇ ತಿಳಿಯುವುದು ಎಂಬ ಠೀವಿಯಲ್ಲಿ!

ಇಂಗ್ಲಿಷ್ ಕಲಿಯಬೇಕೆಂಬ ಆಕಾಂಕ್ಷೆಯ ಪರಿಣಾಮ ಅವರ ಮಟ್ಟಿಗೆ ಅಷ್ಟರಲ್ಲಿಯೆ ಪರ್ಯವಸಾನವಾಗಿದ್ದರೂ, ಮಕ್ಕಳಾಗಿದ್ದ ನಮ್ಮ ಬದುಕಿನ ಮೇಲೆ ಅವರ ಕೈಗೊಡದ ಆ ಆಕಾಂಕ್ಷೆ ಮಹತ್ ಪ್ರಭಾವಕಾರಿಯಾಗಿ ಪರಿಣಮಿಸಿತು: ಮಕ್ಕಳನ್ನು ಓದುವುದಕ್ಕೆ ಹಾಕಬೇಕು ಎಂಬ ಪ್ರಜ್ಞೆ ಅವರಲ್ಲಿ ಉದಿಸುವಂತೆ ಮಾಡಿತ್ತು. ಅವರಿಗೆ ಬುದ್ಧಿ ಸ್ಪಷ್ಟವಾಗಿರದಿದ್ದರೂ, ಬ್ರಿಟಿಷರ ಆಳ್ವಿಕೆಯಲ್ಲಿ, ಮುಂದೆ, ಅವರ ಭಾಷೆಯಾಗಿದ್ದ ಇಂಗ್ಲಿಷನ್ನು ಕಲಿಯದಿದ್ದರೆ, ತಮ್ಮ ಮಕ್ಕಳು ಮುಂದುವರಿಯುವುದು ಸಾಧ್ಯವಿಲ್ಲ ಎಂಬ ಭಾವನೆ ಅವರ ಹೃದಯದಲ್ಲಿ ಮೂಡಿ ಮನವರಿಕೆಯಾಗಿತ್ತು. ತತ್‌ಫಲವಾಗಿ ನಾವು ತೀರ್ಥಹಳ್ಳಿಯ ಪೇಟೆಯ ಇಸ್ಕೂಲಿಗೆ ಸೇರುವಂತಾಯಿತು.

ತೀರ್ಥಹಳ್ಳಿ ನಮ್ಮ ಮನೆಗೆ-ಕುಪ್ಪಳಿಗೆ-ಒಂಬತ್ತು ಮೈಲಿ ದೂರದಲ್ಲಿದೆ, ಭೌಗೋಲಿಕವಾಗಿ ಮಾನಸಿಕವಾಗಿ ಆಗ ಒಂಬೈನೂರು ಮೈಲಿಗಳಾಚೆ ಇತ್ತು; ಈಗ ಒಂಬತ್ತು ಫರ್ಲಾಂಗು ಸಮೀಪದಲ್ಲಿದೆ! ಆಗ ನಮಗೆ ತೀರ್ಥಹಳ್ಳಿ ಎಂದರೆ ಯಾವುದೋ ಒಂದು ಪುರಾಣದ ಪತ್ತನವಿದ್ದಂತೆ: ಕ್ರೂರ ಮೃಗಗಳಿಂದಿಡಿದ ಕಾಡು ಕಣಿವೆ ಮಲೆಗಳಲ್ಲಿ ಸಂದಿಗೊಂದಿಗಳಲ್ಲಿ; ತೂರಿ ಹೋಗುವ ಪ್ರಯಾಣ ದುರ್ಗಮವಾದ ದಾರಿಯಲ್ಲಿ ಹಾದು, ಹಳ್ಳಕೊಳ್ಳ ಕೊಳೆಗಳನ್ನು ದಾಟಿದರೆ ಅದು ಸಿಕ್ಕುತ್ತದಂತೆ! ಬೇಸಗೆಯಲ್ಲಾದರೆ ಕಲ್ಲುಸಾರದ ಮೇಲೆ ದಾಟಬೇಕಂತೆ! ಅಲ್ಲಿಯೇ ರಾಮತೀರ್ಥ ಇದೆಯಂತೆ! ಕಲ್ಲುಮಂಟಪ ಎತ್ತರದ ಬಂಡೆಯಮೇಲೆ ಕಟ್ಟಿದೆಯಂತೆ! ಎಳ್ಳಾಮಾಸೆಯ ಜಾತ್ರೆಯಲ್ಲಿ ಅಲ್ಲಿಯೆ ಅಂತೆ ಸ್ನಾನಮಾಡಿಸುವುದು! ಅಲ್ಲಿ ಹೊಳೆಯ ಮರಳಿನ ಮೇಲೆ ಬುತ್ತಿಕಲ್ಲು ಬಂಡೆ ಬಿದ್ದಿದೆಯಂತೆ! ನಾಲ್ಕಾರು ಆನೆಯ ಗಾತ್ರ! ಭೀಮ ಬುತ್ತಿ ಉಣ್ಣುವಾಗ ಅನ್ನದಲ್ಲಿ ಸಿಕ್ಕಿದ ಕಲ್ಲುಹರಳಂತೆ ಅದು! ಇನ್ನು ಅವನು ತಿನ್ನುತ್ತಿದ್ದ ಅನ್ನದ ರಾಶಿ ಅದೆಷ್ಟು ದೊಡ್ಡದಿರಬೇಕು? ಮಳೆ ಬಿದ್ದು ಹೊಳೆ ಕಟ್ಟಿದ ಮೇಲೆ ದೋಣಿಯ ಮೇಲೆ ಕೂತೇ ದಾಟಬೇಕಂತೆ! ಹೊಳೆಗೆ ನೆರೆ ಬಂದು ನೋಡುವುದಕ್ಕೇ ಹೆದರಿಕೆಯಾಗುತ್ತದಂತೆ ಪ್ರವಾಹ! ಅದುವರೆಗೂ ಹಳ್ಳಿಯಲ್ಲಿಯೆ ಬದುಕು ಸಾಗಿಸಿದ್ದ ಹುಡುಗನ ಜೀವ-ಹುಡುಗರು ಕಣಿಯೊಡ್ಡಿ ಹಿಡಿದಾಗ ಅವರ ಕೈಯಲ್ಲಿ ಸಿಕ್ಕ ಹಕ್ಕಿಯ ಎದೆಯಂತೆ-ಹೊಡೆದುಕೊಳ್ಳುತ್ತಿತ್ತು!

ಅಂತೂ ಕಡೆಗೂ ನಾವೆಲ್ಲ-ಐದಾರು ಹುಡುಗರು-ಕಮಾನುಗಾಡಿಯಲ್ಲಿ ಕುಳಿತು ಹೊಳೆಯನ್ನು ದಾಟಿ, ತೀರ್ಥಹಳ್ಳಿಯ ಒಂದು ಬಾಡಿಗೆಯ ಮಳಿಗೆ ಕೋಣೆಗೆ ಓದು ಸಾಗಿಸಲು ಹೋದೆವು.

ಆ ಪ್ರಾರಂಭದ ನೆನಪು ತುಂಬ ಮುಸುಕಾಗಿದೆ. ಒಂದು ಘಟನೆ, ಒಂದು ಚಿತ್ರ, ಎರಡೇ ನನ್ನ ಮನಸ್ಸಿಗೆ ಬರುತ್ತವೆ.

ಒಂದು ರಾತ್ರಿ ಮಲಗಿದ್ದಾಗ ನನ್ನ ಬೆನ್ನು ಮೂಳೆಯ ಪಕ್ಕಕ್ಕೆ, ನನ್ನ ಜೇಬಿನಲ್ಲಿಯೆ ಇದ್ದದ್ದೊ, ಅಥವಾ ಅಂಗಿಯ ಸೆರಗಿಗೆ ಚುಚ್ಚಿಯಿಟ್ಟದ್ದೊ ಅಥವಾ ಯಾರಾದರೂ ಹಾಸಿಗೆಗೆ ಬೀಳಿಸಿದ್ದೊ, ಒಂದು ಸೂಚಿ ಚುಚ್ಚಿಕೊಂಡಿತು, ಪೂರ್ತಿ ಕಣ್ಮರೆಯಾಗುವಂತೆ! (ಆಗ ನಮ್ಮ ಗ್ರಾಮೀಣ ಪದ್ಧತಿಯ ಪ್ರಕಾರ ಮನೆಯಲ್ಲಿ ಅವ್ವ ಅಪ್ಪಯ್ಯನೊಡನೆ ಮಂಚದ ಮೇಲೆ ಮಲಗುವಾಗ ಅಂಗಿಪಂಚೆ ಎಲ್ಲ ಬಿಚ್ಚಿಟ್ಟು ಬತ್ತಲೆ ಮಲಗುತ್ತಿರಲಿಲ್ಲ. ಹಗಲು ಹೇಗೆ ಬಟ್ಟೆ ಉಟ್ಟಿರುತ್ತಿದ್ದೆವೋ ಹಾಗೆಯೆ ರಾತ್ರಿ ಮಲಗಿ ಬಿಡುತ್ತಿದ್ದೆವು!) ಬೆಳಿಗ್ಗೆ ಬೆನ್ನುನೋವು ಎಂದು ಹೇಳಿದೆ. ಜೊತೆಯಿದ್ದ ನನಗಿಂತಲೂ ದೊಡ್ಡವರಾದ ಹುಡುಗರು ನೋಡಿ ‘ಏನೂ ಇಲ್ಲ ಕಣೋ’ ಎಂದುಬಿಟ್ಟು, ತುಸು ಎಣ್ಣೆ ಬಳಿದರು. ಆದರೆ ನೋವು ಹೆಚ್ಚಿತು. ಬೆನ್ನು ಬಾತುಕೊಂಡಿತು. ಮರುದಿನ ರಾತ್ರಿ ನಿದ್ದೆಯಿಲ್ಲದಷ್ಟು ಯಾತನೆ. ಅಂತೂ ಮರುದಿನ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರು ಇಡೀ ಸೂಜಿ ಅನಾಮತ್ತಾಗಿ ಅಡ್ಡ ಚುಚ್ಚಿಕೊಂಡಿದ್ದನ್ನು ಕಿತ್ತು ತೆಗೆದರು! ಇದು ನೆನಪಿರುವ ಘಟನೆ.

ಇನ್ನು ನೆನಪಿರುವ ಚಿತ್ರ-ಉಳಿದುದೆಲ್ಲ ಮರೆತು ಆ ಚಿತ್ರ ಏಕೆ ನೆನಪಿದೆಯೋ ನನಗೆ ತಿಳಿಯದು. ಅದೇನೂ ಅಂತಹ ಅಸಾಮಾನ್ಯದ ದೃಶ್ಯವೂ ಅಲ್ಲ. ಅದನ್ನು ಕುರಿತು ಏಕೆ ಬರೆಯುತ್ತಿದ್ದೇನೆಯೋ ಅದೂ ತಿಳಿಯದಾಗಿದೆ. ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಇದು ಅತ್ಯಂತ ಅಪ್ರಕೃತ, ಅಸ್ವರಸ, ನೀರಸ!-ನಾನಿದ್ದ ಮಳಿಗೆಯ ಬಳಿಗೆ, ಒಂದು ಎತ್ತರದ ಪ್ರಕಾರದ ಒಳಗೆ ಇದ್ದ ಅಂಗಳವನ್ನು ಸುತ್ತುಗಟ್ಟಿ ಕೋಣೆಗಳಿದ್ದುವು. ಅವಕ್ಕೆ ಬಾಗಿಲೂ ಇರಲಿಲ್ಲ. ಇಡೀ ಕಟ್ಟಡ ಸರ್ವರಿಗೂ ತೆರೆದಂತೆ ತೆರದೇ ಇತ್ತು. ಅದನ್ನು ‘‘ಮುಸಾಫರ್ ಖಾನೆ’ ಎಂದು ಎಲ್ಲರೂ ಕರೆಯುತ್ತಿದ್ದರು. ನಮಗೆ ಅದರ ಅರ್ಥವೂ ಗೊತ್ತಿರದಿದ್ದುದರಿಂದ ಅದರ ವಿಚಾರವಾಗಿ ಏನೇನೊ ಭಯಂಕರ ಕಲ್ಪನೆಗಳನ್ನು ಕಟ್ಟಿಕೊಂಡಿದ್ದೆವು. ಅಲ್ಲಿ ಯಾವಾಗಲೂ ಗಡ್ಡ ಬಿಟ್ಟುಕೊಂಡವರು, ಉದ್ದನಿಲುವಂಗಿಯವರು, ಕೊಳಕಿನ ಮುದ್ದೆಯಾಗಿರುವವರು, ಭಿಕ್ಷುಕರಂಥವರು-ಒಟ್ಟಿನಲ್ಲಿ ನಮ್ಮ ಭಾಗಕ್ಕೆ ನಾವು ದೂರವೇ ಇರಬೇಕಾಗಿರುವಂತಹ ರಹಸಯ ವ್ಯಕ್ತಿಗಳು-ಒರುತ್ತಿದ್ದರು. ನಾವು ಅದರೊಳಗೆ ಅಂಗಳಕ್ಕೆ ಹೋಗಲೂ ಹೆದರುತ್ತಿದ್ದೆವು. ನಮ್ಮನ್ನು ಕದ್ದುಕೊಂಡು ಹೋಗುತ್ತಾರೆ ಎಂದು ಭಯ! ನಮ್ಮನ್ನು ಯಾವುದಾದರೂ ಒಂದು ಪ್ರಾಣಿಯನ್ನಾಗಿ ಮಂತ್ರಶಕ್ತಿಯಿಂದ ಪರಿವರ್ತಿಸಿ ದೂರ ದೂರಕ್ಕೆ ಕೊಂಡಯ್ದು, ಮತ್ತೆ ಮನುಷ್ಯರನ್ನಾಗಿ ಮಾಡಿ ಮಾರುತ್ತಾರೆ ಎಂದು ಹೆದರಿಕೆ! ಎಳೆಮಕ್ಕಳನ್ನು ಕೊಯ್ದು ಮಾಂಸ ಬೇಯಿಸಿ ತಿಂದೇಬಿಡುತ್ತಾರೆ ಎಂಬ ದಿಗಿಲು, ಆ ‘ಮುಸಾಫರ್ ಖಾನೆ’ಯ ಹಿಂಭಾಗದಲ್ಲಿ ಒಂದು ಕೆರೆಯಿತ್ತು. ಅದೇನು ಅಂತಹ ದರ್ಶನೀಯ ಸ್ಥಾನವಾಗಿರಲಿಲ್ಲ. ಅದೊಂದು ಹೊಟ್ಟುಗೆರೆ, ಬೇಸಿಗೆಯಲ್ಲಿ ಕೆಸರೇ ನೀರು! ಊರುಹಂದಿಗಳು ಎಮ್ಮೆಗಳು ಮಗ್ಗುಲು ಬೀಳುತ್ತಿದ್ದುವು. ಜನರು ಮಲಬಾಧೆ ತೀರಿಸುವುದಕ್ಕೂ ಧಾರಾಳವಾಗಿ ಉಪಯೋಗಿಸುತ್ತಿದ್ದರು. ನನಗೆ ನೆನಪಿರುವಂತೆ ನಾವು ಅಲ್ಲಿಗೆ ಹೋಗುತ್ತಿದ್ದುದು, ಮಗ್ಗುಲು ಬಿದ್ದಿರುತ್ತಿದ್ದ ಊರುಹಂದಿಗಳಿಗೆ ಕಲ್ಲುಹೊಡೆದೆಬ್ಬಿಸಿ ಅಲ್ಲಿದ್ದ ಕುರುಚಲು ಕಾಡಿನಲ್ಲೆಲ್ಲಾ ಅಟ್ಟುವುದಕ್ಕಾಗಿ. ಕುಪ್ಪಳಿಯಲ್ಲಿ ನಮ್ಮ ಹಿರಿಯರು ಹೆಗ್ಗಾಡಿನಲ್ಲಿ ಬೇಟೆಯಾಡುತ್ತಿದ್ದುದನ್ನು ಅನುಕರಿಸಿ ಆಟವಾಡುತ್ತಿದ್ದೆವಷ್ಟೆ: ಹಳು ನುಗ್ಗಿ, ಬಿಲ್ಲಿಗೆ ನಿಂತು! ಬಹುಶಃ ಆಗ ನಾನು ಓದಲು ಹೋಗುತ್ತಿದ್ದುದು ಪೇಟೆಯಲ್ಲಿರುತ್ತಿದ್ದ ಒಂದು ಪ್ರಾಥಮಿಕ ಶಾಲೆ ಇರಬಹುದೆಂದು ತೋರುತ್ತದೆ. ಆಗ ನನ್ನ ಪ್ರಜ್ಞೆ ಇನ್ನೂ ಸ್ಮೃತಿಯಲ್ಲಿ ಸ್ಥಾಯಿಯಾಗಿ ನಿಲ್ಲಲಾರದೆ, ಅಂಬೆಗಾಲಿಕ್ಕಿಯೋ ತಿಪ್ಪತಿಪ್ಪ ಹೆಜ್ಜೆಯಿಟ್ಟೋ ತತ್ತರಿಸುತ್ತಿದ್ದಿರಬೇಕು!