ಸಣ್ಣಗೆ ಅಗಿದು ನುಣ್ಣಗೆ ಮಾಡಿ ನುಂಗುವುದು
ನನ್ನನ್ನು ನಿನ್ನ ನೆನಪಿನ ಹಸಿವು.
ಇದೂ ಒಂದು ಥರಾ ಸಿಹಿಯಾದ ಸಾವು,
ಗಾಯವಿಲ್ಲದ ನೋವು. ಕಾಲವೆ ಕರಗಿ
ನಿನ್ನೆರಡು ಕಣ್ಣಾಗಿ, ದೃಷ್ಟಿಯಿಕ್ಕಳದಲ್ಲಿ
ನನ್ನನು ಹಿಡಿದು ಹೂವಿನುರಿಬೆಂಕಿಯಲ್ಲಿ
ಕರಗಿಸಿ ನಿನ್ನೆದೆಗೆ ಪದಕವನು ಮಾಡಿ
ತೂಗಿಟ್ಟುಕೊಳ್ಳುವುದು. ನಿನ್ನೆದೆಯ ಆ
ಮೃದು ತುಡಿತ ನಿಸ್ವನದಲೆಯ ಮೇಲೆ
ತೇಲುವುದು ನನ್ನ ಮನಸಿನ ದೋಣಿ.