ನೆನಪು :
ಹಿಂದೊಮ್ಮೆ ಬೃಂದಾವನದ ಕಾಡಿನಲಿ ನಾನೊಂದು
ಬಿದಿರ ಮೆಳೆಯಾಗಿದ್ದಂತೆ ನನಗೆ ನೆನಪು,
ಕೃಷ್ಣನೂದಿದ ಕೊಳಲ ಮೆಲ್ಲೆಲರು ಮೈದಡವಿ
ಚಿಗುರು ಹೊಮ್ಮಿಸಿದಂತೆ ನನಗೆ ನೆನಪು.
ಗೋಪಿಯರ ಕಾಲ್ಗೆಜ್ಜೆ ಹತ್ತಿರವೆ ಸುಳಿದಂತೆ
ಸೆರಗು ಸೋಕಿದ ಹಾಗೆ, ಮಸುಕು ನೆನಪು.
ಗೋಕುಲದ ಗೋವುಗಳು ಬಂದು ನೆಕ್ಕಿದ ಹಾಗೆ
ಬೆಚ್ಚನೆಯ ನೆನಪು.

ಅವನ ಮೋಹನ ಮುರಳಿಯಲೆಯಲೆಯ ಬೆಳಕಿನಲಿ
ಹಿಂದು-ಮುಂದಿನ ಭವದ ಚಿತ್ರಗಳು ತೆರೆದಂತೆ
ನನಗೆ ನೆನಪು.
ಅಕ್ರೂರ ರಥ ಚಕ್ರ ಹಸುರಿನೆದೆಗಳ ಮೇಲೆ
ಗಾಲಿಗುರುತಿನ ಬರೆಯನೆಳೆದು ಸಾಗಿದ ಹಾಗೆ
ನನಗೆ ನೆನಪು.

ಸತ್ತ ಮೌನಗಳಲ್ಲಿ ಗೋಪಿಯರ ನಿಟ್ಟುಸಿರು
ಗಾಳಿಯಲಿ ಅತ್ತಂತೆ ನನಗೆ ನೆನಪು
ಅಂದೊಮ್ಮೆ ಬೃಂದಾವನದ ಕಾಡಿನಲಿ ನಾನೊಂದು
ಬಿದಿರ ಮೆಳೆಯಾಗಿದ್ದಂತೆ ನನಗೆ ನೆನಪು.