ನೆರೆಮನೆಯ ಬಾನುಲಿಯ ಎದೆಯಿಂದ ವೀಣೆದನಿ
ತೇಲಿ ಅಲೆಯಲೆಯಾಗಿ ಬರುತಲಿಹುದು !
ಯಾರು ನುಡಿಸುತಲಿಹರೊ ; ಯಾರು ನುಡಿಸಿದರೇನು,
ಕೇಳುವೆದೆಯೊಳಗದರ ಮಾಧುರ್ಯವಿಹುದು.

ಅಹ ಕೇಳು, ಮಿಡಿಯುತಿದೆ ಶೋಕ ಗೀತೆಯನೊಂದ,
ಎದೆಯ ತಂತಿಯನೆಲ್ಲ ಮೀಂಟಿ ಮೀಂಟಿ
ಎದೆಯಾಳದಲಿ ನೂರು ನೋವುಗಳು ಸುಯ್ಯುತಿವೆ
ಹರಿದು ಬರುವೀ ರಾಗ ರಸವನೀಂಟಿ !

ಹಾಡು ನಿಂತುದು ಅಲ್ಲಿ, ನಿಶ್ಶಬ್ದವಾಯ್ತಿರುಳು
ಜೋಗುಳವನಾಲಿಸಿದ ಶಿಶುವಿನಂತೆ !
ನನ್ನ ಎದೆಯೊಳಗಿನ್ನು ಮೊರೆಯುತಿಹುದಾ ವೀಣೆ
ಹೆಪ್ಪುಗಟ್ಟಿದ ಎದೆಯ ಕಡೆಯುವಂತೆ !

ಯಾವ ಹಾಡನೊ ಕೇಳಿ ಇಂತೇಕೆ ತುಡಿವುದೆದೆ ?
ಅದಕು ಇದಕೂ ಏನು ಸಂಬಂಧವೊ !
ತುಂಬಿರುವ ಎದೆ ತನ್ನ ನೋವುಗಳ ತುಳುಕಾಡ-
ಲೊಂದು ನೆಪವನು ಕಾದು ನಿಲುವುದೇನೊ !

ಕುಲುಮೆ ಕೆಂಡಗಳಾರಿ ಬೂದಿ ಮುಸುಕುತಲಿರಲು
ಮೇಲಿನಿತು ಇದ್ದಿಲನು ಒಟ್ಟಿ ತಿದಿಯೊತ್ತಿ
ಉರಿಯ ಕೆರಳಿಸುವಂತೆ ಆವಾವುದೋ ನೆಪವೊ
ಎದೆಯ ನೋವನು ಮರಳಿ ಕೆರಳಿಸುವುದೆತ್ತಿ !