ಇದು ನೆರಳಿಲ್ಲದ ದಾರಿ-
ನೀಲಿಯ ನಿರ್ಭಾವದ ಬಾನೋ
ಬಿರು ಬಿಸಿಲಿನ ಗೋರಿ
ಸುಮ್ಮನೆ ಬಿದ್ದಿದೆ ದಾರಿ
ಬಟ್ಟಂಬಯಲೊಳು ಜಾರಿ |
ಇದು ನೆರಳಿಲ್ಲದ ದಾರಿ-
ತಲೆಗೆದರಿದ ಛಾವಣಿ ; ಎಲುಬಿನ ತಡಿಕೆ ;
ತೂತಾಗಿಹ ಕಣ್ಗೂಡಿನ ಕಿಟಕಿಯ ಮನೆ ಹಲವು,
ಭುಸುಗುಡುತಿದೆ ಹುತ್ತ ಹುತ್ತದೊಳು
ನಿಟ್ಟುಸಿರಿನ ಹಾವು |
ಇದು ನೆರಳಿಲ್ಲದ ದಾರಿ-
ಕಲ್‌ಚರಲಿನ ನೆಲ ; ಪಾಳ್ ಬಿದ್ದಿವೆ ಹೊಲ ;
ಹಸುರಿನ ಉಸಿರೇ ಇಲ್ಲ.
ಆದರು ಈ ಬರಡೆದೆಯನು ಕೆರೆದೂ ಕೆರೆದೂ
ಮೈಬೆವರನು ಸುರಿದೂ ಸುರಿದೂ
ಈ ಕೃಪಣೆಯ ಕಲ್ಲೆದೆಯನು ಕರಗಿಸಿ
ಹಸುರನೆತ್ತಬೇಕು ಈ ಎಲುಬಿನ ಯಾತಗಳು |
ಈ ಸುಂದರಿ ವಸುಂಧರೆ ಮಾತಾಯಿ,
ಹೇಗೋ ಕರುಣಿಸಿದರೆ ಉಂಟು.
ಇಲ್ಲ, ಇದ್ದೇ ಇದೆ ಹೊಟ್ಟೆಗು ಬೆನ್ನಿಗು
ನಂಟು.

ಇದು ನೆರಳಿಲ್ಲದ ದಾರಿ-
ಮರವೇ, ಗಿಡವೇ, ಕಾಣಬಹುದೆ ಒಂದಾದರು
ನೆರಳಿನ ತೇಪೆ ?
ನೆಲವೋ ಬಣ್ಣಬಣ್ಣಗಳ ಮಣ್ಣಿನ ಚಾಪೆ,
ಎಲ್ಲೋ ಹೇಗೋ ಒಂದಾದರು ಮರ ಕಣ್ಣಿಗೆ ಬಿತ್ತೋ,
ಅದು ಕೂಡಾ ವಿಕೃತಿಯ ನಿಷ್ಕರುಣೆಯ ರೂಪೇ |

ಇದು ನೆರಳಿಲ್ಲದ ದಾರಿ-
ನೀಲಿಯ ನಿರ್ಭಾವದ ಬಾನೋ
ಬಿರುಬಿಸಿಲಿನ ಗೋರಿ.
ಕನವರಿಸಿದೆ ನಿಟ್ಟುಸಿರಿನ ದಾರಿ :
‘ಬಂದೀತೆಂದಿಗೆ ಈ ಕಡೆಗೆ
ಗಂಗೆಯ ಮೆರವಣಿಗೆ’