‘ಕರಾವಳಿಯಲ್ಲಿ ಮಳೆ ಅಬ್ಬರ, ಜನ ಜೀವನ ತತ್ತರ! ಮಲೆನಾಡಿನಾದಂತ್ಯ ಭಾರೀ ಮಳೆ, ಪ್ರವಾಹ ಕಟ್ಟೆಚ್ಚರ’ ಮಾಮೂಲಿಯಂತೆ ವಾರ್ತೆಗಳು ಬಿತ್ತರವಾಗುತ್ತಿವೆ. ಸುದ್ದಿ ಹಲವು ಸಾರಿ ಮಳೆ ಪ್ರಹಸನವಾಗಿ ಕಾಣುತ್ತದೆ. ಮಳೆಗಾಲ ಶುರುವಾಗಿ ತಿಂಗಳು ಕಳೆದರೂ ಮಲೆನಾಡಿನಲ್ಲಿ ಇನ್ನೂ ಕೊಡೆ ಖರೀದಿಯ ಭರಾಟೆ ಇಲ್ಲ, ಹೊಳೆ ಹಳ್ಳಗಳಲ್ಲಿ ಪ್ರವಾಹ ಬಂದಿಲ್ಲ, ಒರತೆ ಜಲ ಮೂಡಿಲ್ಲ! ಇವತ್ತು ಬಿಸಿಲಲ್ಲಿ ನಿಂತು ನಿನ್ನೆಯ ಮಳೆಯ ಸುದ್ದಿ ಓದುತ್ತೇವೆ. ಈಗ ೧೫ ದಿನಗಳ ಹಿಂದೆಯೇ ನಾಡಿನ ಪ್ರಮುಖ ಪತ್ರಿಕೆಯಲ್ಲಿ ಮಲೆನಾಡಿನ ಮಳೆಯ ನಾಡಿಮಿಡಿತ ಎಂಬಂತೆ “ಜೋಗ ಜಲಪಾತ ಮರುಕಳಿಸಿದ ವೈಭವ!’ ಚಿತ್ರ ಸುದ್ದಿ ಪ್ರಕಟವಾಗಿದೆ. ಮರು ದಿನವೇ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿ ಬಸ್‌ಗಳು ಹೊರಟಿವೆ, ವ್ಯವಹಾರ ಚಾಲೂ ಆಗಿದೆ. ಈಗಲೂ ಜಲಪಾತದಲ್ಲಿ ಅಂತಹ ವೈಭವವೇನೂ ಕಾಣುವದಿಲ್ಲ. ‘ಸರ್, ಇಲ್ಲಿ ಒಟ್ಟೂ ೮೫-೧೦೦ ಜನ ಪೋಟೋಗ್ರಾಫಿ ಮಾಡ್ತೀವಿ, ೪೦ ಅಂಗಡಿಗಳಿವೆ. ಜನ ಬಂದರೆ ವ್ಯಾಪಾರ!’ ಪೋಟೊ ಹಿಂದಿನ ವಿಷಯ ಕೆದಕಿದರೆ ಸುಳಿವು ಸಿಗುತ್ತದೆ. ಮಳೆ ಆರಂಭವಾದ ತಕ್ಷಣ ಜೋಗದ ಒಂದು ಚಿತ್ರ ಪ್ರಕಟವಾದರೆ ಪ್ರವಾಸಿ ತಾಣದಲ್ಲಿ ಜನಜಂಗುಳಿ ಮೆರೆಯುತ್ತದೆ.

ಈಗ ೧೦ ವರ್ಷದ ಹಿಂದೆ ಮಂಗಳೂರಿನ ಪತ್ರಕರ್ತರ ವಲಯದಲ್ಲಿ ಒಂದು ಜೋಕು ಜನಪ್ರಿಯವಾಗಿತ್ತು. ಮಂಗಳೂರಿಗೆ ಹೊಸದಾಗಿ ವರ್ಗವಾದ ರಾಜ್ಯದ ಪ್ರಮುಖ ಪತ್ರಿಕೆಯ ಹೊಸ ವರದಿಗಾರರು ಮಳೆ ಶುರುವಾದ ತಕ್ಷಣ ‘ನೇತ್ರಾವತಿಗೆ ಪ್ರವಾಹ!’ ಸುದ್ದಿ ಬರೆಯುತ್ತಾರೆ! ಸ್ಥಳೀಯ ಪತ್ರಕರ್ತರು ನಗುತ್ತಿದ್ದರು. ಮಳೆಗಾಲದಲ್ಲಿ ಯಾವತ್ತೂ ಮಡಿಲು ತುಂಬಿಕೊಳ್ಳುವ ನೇತ್ರಾವತಿ ನದಿ ಪ್ರವಾಹ ಉಕ್ಕೇರಿದಂತೆ ಕಾಣುತ್ತದೆ, ಅದು ಸಹಜರೂಪ. ಕರಾವಳಿಯಲ್ಲಿ ಇದ್ದವರಿಗೆ ವಿಶೇಷವೆನಿಸದ ಸಂಗತಿ ಅಪರಿಚಿತರಿಗೆ ವಿಶೇಷ. ಪತ್ರಿಕೆ ಓದುವ ನದಿದಂಡೆಯ ಜನ ನೇತ್ರಾವತಿ ಪ್ರವಾಹ ಸುದ್ದಿಯನ್ನು ನೋಡಿ ನಗುತ್ತಿದ್ದರು. ಇಲ್ಲಿನ ಮಳೆ, ಪ್ರವಾಹದ ಬಗೆಗೆ ಇವರಿಗೆ ಏನೂ ಗೊತ್ತಿಲ್ಲ ಎಂದು ಮಾತಾಡುತ್ತಿದ್ದರು. ಇವತ್ತು ಇದೇ ಪರಿಸ್ಥಿತಿ ರಾಜ್ಯಾದ್ಯಂತ ನೋಡಬಹುದು. ಸಣ್ಣ ಮಳೆ ಕೂಡಾ ದೊಡ್ಡ ಸುದ್ದಿಯಾಗುತ್ತಿದೆ.   ಆದರೆ ಇದು ಅಜ್ಞಾನವಲ್ಲ, ಈಗ ಮಳೆಯನ್ನು ಜೋಗ ಜಲಪಾತದಂತೆ ಮಾರ್ಕೆಟ್ ಮಾಡುವ ಖಯಾಲಿ ಆರಂಭವಾಗಿದೆ. ಮಾಧ್ಯಮಗಳು ಮುಂಚೂಣಿಯಲ್ಲಿ ನಿಂತಿವೆ, ‘ಬ್ರೇಕಿಂಗ್ ನ್ಯೂಸ್’ ಮುಖೇನ ರಂಗು ನೀಡುವ ಯತ್ನ ಕಾಣುತ್ತದೆ. ಮಳೆ ಅನಾಹುತ ಪಟ್ಟಿ ಮಾಡಿದರೆ ಆಳುವ ಸರಕಾರ, ವಿರೋಧ ಪಕ್ಷಗಳಿಗೆ ಮಾತಾಡಲು ವಿಷಯ ದೊರೆಯುತ್ತದೆ, ಹೊಸ ಸುದ್ದಿಯ ಅವಕಾಶ ತೆರೆದುಕೊಳ್ಳುತ್ತದೆ. ನೆರೆಯ ಅನುಸರಣಾ ವರದಿಗಳಿಗೆ ಬೆಲೆ ಬರುತ್ತದೆ. ಹೆಚ್ಚು ಅನಾಹುತವಾಗಿದೆ ಎಂದು ಬಿಂಬಿಸಿದರೆ ನಮ್ಮ ಶಾಸಕರುಗಳಿಗೆ ಮಾಧ್ಯಮ ವರದಿ ಎದುರು ಹಿಡಿದು ಪರಿಹಾರ ಬಿಡುಗಡೆ  ಹೆಚ್ಚಿಸಲು ನೆರವಾಗುತ್ತದೆ.

ಕಳೆದ ವರ್ಷದ ನೆರೆ ಹಾವಳಯಿಂದ ಹಾನಿಗೊಳಗಾದ ಉತ್ತರ ಕರ್ನಾಟಕದ ೩೦೧ ಹಳ್ಳಿಗಳನ್ನು ಸ್ಥಳಾಂತರಿಸಲು ಸರಕಾರ ಆಸರೆ ಯೋಜನೆ ರೂಪಿಸಿದ್ದು ಕೇಳಿದ್ದೇವೆ. ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ೬೩ ಸಾವಿರ ಮನೆಗಳನ್ನು ನಿರ್ಮಿಸುವ ಗುರಿಯಿದೆ. ನಿರಂತರ ಪ್ರವಾಹಪೀಡಿತ ಗ್ರಾಮಗಳ ಪೈಕಿ ೧೪೯ ಗ್ರಾಮಗಳನ್ನು ಪೂರ್ಣವಾಗಿ ಹಾಗೂ ೧೫೨ ಗ್ರಾಮಗಳನ್ನು ಭಾಗಶಃ ಸ್ಥಳಾಂತರಿಸುವ ಯೋಜನೆ ಇದು! ಹೊಸ ನೆಲೆಗಳ ನಿರ್ಮಾಣಕ್ಕೆಂದು ೫,೬೫೩ ಎಕರೆ ಜಮೀನು ಸ್ವಾಧೀನ, ರಾಜ್ಯ ಸರಕಾರದಿಂದ ಪುನರ್ವಸತಿ ಕಾರ್ಯಕ್ರಮಗಳಿಗೆ ೨,೦೩೩ ಕೋಟಿ ಬಿಡುಗಡೆ! ನೆರೆ ಬಂದಾಗ ಗ್ರಾಮ ಸ್ಥಳಾಂತರದತ್ತ “ಶೇಷ ಗಮನ ಸೆಳೆದ ಪರಿಣಾಮ ಎಚ್ಚೆತ್ತ ಸರಕಾರ ಯೋಜನೆ ರೂಪಿಸಿದೆ. ಈಗಾಗಲೇ ೧೮೬ ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣ ಆರಂಭವಾಗಿದೆ. ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಪ್ರಗತಿಯಿಲ್ಲ, ಈ ಮಳೆಗಾಲವನ್ನು ತಾತ್ಕಾಲಿಕ ಶೆಡ್‌ಗಳಲ್ಲಿ ಕಳೆಯುವ ಸಂದರ್ಭ ಎದುರಾಗಿದೆ.

ನೆರೆಹಾವಳಿಯ ಪರಿಣಾಮದಲ್ಲಿ ಕಂಡ ಗ್ರಾಮ ಸ್ಥಳಾಂತರ ಸುದ್ದಿ ಓದಲು ಬಹಳ ಖುಷಿಯಾಗುತ್ತದೆ. ನದಿದಂಡೆಯ ಜನರಿಗೆಲ್ಲ ಎತ್ತರದ ಗುಡ್ಡಗಳಲ್ಲಿ ಹೊಸ ಮನೆ ಸಿಗುತ್ತದೆ, ಹೊಸಗ್ರಾಮ ಉದುಯಿಸುತ್ತದೆ. ಮತ್ತೆ ಪ್ರವಾಹ ಬಂದರೆ ಮುಳುಗಡೆ, ನೆರೆ ಭಯ ಇರುವದಿಲ್ಲ ಎಂದು ನಾವು ಕೂತಲ್ಲಿ ವಿಶ್ಲೇಸಬಹುದು. ಸರಕಾರ ಇಷ್ಟೊಂದು ಕೋಟಿ ಖರ್ಚುಮಾಡಿ ನಿರ್ಮಿಸಿದ ಮನೆಗಳು ಗ್ರಾಮವನ್ನು ನಿಜವಾಗಿ ಸ್ಥಳಾಂತರಿಸುತ್ತಿವೆಯೇ? ಅಂತಹ ಹಳ್ಳಿ ಸುತ್ತಿದರೆ ಸತ್ಯ ಢಾಳಾಗಿ ಕಾಣುತ್ತದೆ. ನಮಗೆ ತೊಂದರೆಯಾಗಿದೆ ಎಂದು ಬಿಂಬಿಸಲು ಹಲವರು ಪರಿಶ್ರಮ ಪಟ್ಟಿದ್ದಾರೆ, ಒಂದು ಮನೆಯ ಗೋಡೆ ಕುಸಿದರೆ ನಾಲ್ಕು ಮನೆಯವರು ಪರಿಹಾರಕ್ಕೆ ಅರ್ಜಿಸಲ್ಲಿಸಿದ ಸಾವಿರ ಉದಾಹರಣೆಗಳು ಅಲ್ಲಿನ ತಹಶೀಲ್ದಾರರಿಗೆ ಗೊತ್ತಿದೆ. ನಿಜವಾಗಿ ತೊಂದರೆಯಲ್ಲಿ ಸಿಲುಕಿದವರಿಗೆ ಪರಿಹಾರ ಒದಗಿಸುವದು ಸವಾಲಾಗಿದೆ.  ಈಗ ಹೊಸಗ್ರಾಮ ನಿರ್ಮಿಸುತ್ತಿರುವ ಸ್ಥಳಕ್ಕೆ ಹೋಗಬೇಕು, ನಿಧಾನಕ್ಕೆ ಮಾಹಿತಿ ಕೆದಕಬೇಕು. ‘ಎಲ್ಲಾ ಜಾತಿಯವರಿಗೂ ಒಟ್ಟಿಗೆ ಮನೆ ನೀಡ್ತಾರಂತ್ರಿ, ಊರು ಅಂದ್ರೆ ಒಂದೊಂದು ಜಾತಿಯವರದ್ದು ಒಂದೊಂದು ಕೇರಿ ಇರ್ತದ್ರೀ ! ನಮ್ಮ ಆಚಾರ, ದೇವರು, ಧರ್ಮ, ನಡುವಳಿಕೆ ಬ್ಯಾರೆಬ್ಯಾರೆ ಇರ್ತಾವ. ಯಾವ ಯಾವುದೋ ಜಾತಿಯವರ ಸಂಗಡ ಬದಕಾಕ ಆಗ್ತದೇನ್ರೀ?’ ಹೊಸ ಮನೆ ನಿರ್ಮಾಣ ನಡೆಯುತ್ತಿರುವಂತೆ ಹೊಸ ಹೊಸ ಸಮಸ್ಯೆ ಕಾಣುತ್ತಿದೆ. ‘ಮತ್ತೆ ಮನೆ ಏನ್ ಮಾಡ್ತೀರಿ? ನಿಮಗೆ ಕಟ್ಟಿದ ಹೊಸ ಮನೆಯಲ್ಲಿ ಇರೋದಿಲ್ಲವಾ!?’ ಆತಂಕದಲ್ಲಿ ಪ್ರಶ್ನಿಸಿದರೆ ‘ ಏಯ್! ನಮ್ಮ ಮಗನ ಸಂಸಾರ ಅಲ್ಲಿ ಇಡತೀ”, ನಾವು ಇದೇ ಊರಾಗ ಮನೆ ದುರಸ್ತಿ ಮಾಡಿ ಬದುಕ್ತೀವಿ’ ಹೀಗೆ ಉತ್ತರಿಸುವ ಹಲವರು ಸಿಗುತ್ತಾರೆ.

ಸರಕಾರ ಮನೆ ನಿರ್ಮಿಸುತ್ತಿದ್ದಂತೆ ಅಪ್ಪ-ಮಗನ ಮಧ್ಯೆ ಹಿಸ್ಸೆಯಾಗಿದೆ, ಮಗನ ಸಂಸಾರ ಹೊಸ ಮನೆಗೆ ಸೇರಿಸುವ ಸೂತ್ರ ಸಿದ್ದವಾಗಿದೆ. ಒಮ್ಮೆ ಖುದ್ದಾಗಿ ಈಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿ ಬನ್ನಿ, ಅಲ್ಲಿ ಹಳೆ ಊರು, ಹೊಸ ಗ್ರಾಮ ಎರಡೂ ಬೆಳೆಯುತ್ತಿದೆ! ನಮ್ಮ ಊರುಗಳನ್ನು ಕುರ್ಚಿ, ಟೇಬಲ್ಲು  ಒಯ್ದಂತೆ ಎತ್ತಿ ಗುಡ್ಡದಲ್ಲಿಡಲಾಗದು, ಬೇರು ಆಳಕ್ಕೆ ಊರಲ್ಪಟ್ಟಿದೆ. ಸರಕಾರದ ನೆರೆಯ ಲೆಕ್ಕದ ಮನೆಗಳು ಗುಡ್ಡದಲ್ಲಿ ಬೆಳೆಯುತ್ತಿವೆ. ಮತ್ತೆ  ಅಬ್ಬರದ ಮಳೆ ಬಂದರೆ ? ಹಳೆಯ ಊರಿಗೆ ನೆರೆ ಬರಬಹುದು, ಕೆಮರಾ ಸಿದ್ದವಾಗಿರಲಿ!