ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ,
ದಿನ ದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ.

ನನ್ನೆದೆಯ ಹಸಿರ ಉಸಿರು ಕುಗ್ಗಿದರು
ಬರಲಿಲ್ಲ ನಿಮಗೆ ಕರುಣ.
ನನ್ನ ಹೃದಯದಲಿ ನೋವು ಮಿಡಿಯುತಿದೆ
ನಾನು ನಿಮಗೆ ಶರಣ.

ಬಡವಾದ ನನ್ನ ಒಡಲುರಿಯ ಬೇಗೆ
ನಿಮಗರಿವು ಆಗಲಹುದೆ ?
ನೀಲಗಗನದಲಿ ತೇಲಿಹೋಗುತಿಹ
ನಿಮ್ಮನೆಳೆಯಬಹುದೆ ?

ಬಾಯುಂಟು ನನಗೆ, ಕೂಗಬಲ್ಲೆ ನಾ
ನಿಮ್ಮೆದೆಯ ಪ್ರೇಮವನ್ನು-
ನೀವು ಕರುಣಿಸಲು ನನ್ನ ಹಸಿರೆದೆಯು
ಉಸಿರುವುದು ತೋಷವನ್ನು.

ಓ ಬನ್ನಿ ಬನ್ನಿ, ಓ ಬನ್ನಿ ಬನ್ನಿ,
ನನ್ನೆದೆಗೆ ತಂಪ ತನ್ನಿ
ನೊಂದ ಜೀವರಿಗೆ ತಂಪನೀಯುವುದೆ
ಪರಮಪೂಜೆಯೆನ್ನಿ !