ನಮ್ಮ ವಿಶ್ವವಿದ್ಯಾಲಯಗಳಲ್ಲಿ ಆಡಳಿತಾಂಗಗಳು ಪಡೆದುಕೊಳ್ಳುತ್ತಿರುವ ಅನವಶ್ಯಕ ಪ್ರಾಮುಖ್ಯತೆ ಕಣ್ಣಿಗೆ ರಾಚುವಂತಿದೆ. ಅವುಗಳಿಗೆ ನಿರ್ಮಿಸುವ ಕಟ್ಟಡಗಳಿಂದ ಹಿಡಿದು ಅಲ್ಲಿ ಕೆಲಸ ಮಾಡುವವರಿಗೆ ದೊರಕುವ ವಿಶೇಷ ಸೌಲಭ್ಯಗಳವರೆಗೆ ವಿಶ್ವವಿದ್ಯಾಲಯಗಳ ವಿವಿಧ ವಿಭಾಗಗಳು ಮತ್ತು ಆಡಳಿತಾಂಗ ಇವುಗಳಲ್ಲಿ ತಾರತಮ್ಯ ಬೆಳೆಯುತ್ತಲೇ ಬಂದಿದೆ. ಹೀಗಾಗಿ ಆಡಳಿತಾಂಗಗಳು ಆಡಳಿತವನ್ನು ಮಾತ್ರ ನಿರ್ವಹಿಸದೆ ಅಧ್ಯಯನಾಂಗಗಳ ಸ್ವಾಯತ್ತತೆಯನ್ನೂ ನುಮಗಿಹಾಕಿವೆ. ವಿಶ್ವವಿದ್ಯಾಲಯದಶೈಕ್ಷಣಿಕ ನೀತಿಯನ್ನೂ ಅವೇ ನಿರ್ಧರಿಸುತ್ತಿವೆ. ಈ ಪರಿಸ್ಥಿತಿಯ ಬದಲಾದ ಹೊರತು ವಿಶ್ವವಿದ್ಯಾಲಯಗಳ ಸಮಸ್ಯೆಗಳು ಬಗೆಹರಿಯುವುದು ಕಷ್ಟ.

ಕನ್ನಡ ವಿಶ್ವವಿದ್ಯಾಲಯವು ಈ ಅಂಶವನ್ನು ಮನಗಂಡು ತನ್ನ ಇಡೀ ವ್ಯವಸ್ಥೆಯಲ್ಲಿ ಆಡಳಿತಾಂಗದ ಪ್ರಾಧಾನ್ಯವನ್ನು ಕಡಿಮೆ ಮಾಡಲು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ. ವಿಶ್ವವಿದ್ಯಾಲಯಗಳಲ್ಲಿ ಮುಂಚೂಣಿಗೆ ಬರಬೇಕಾದ ಸಂಶೋಧನೆಗಳಲ್ಲಿ ತೊಡಗಿರುವ ಸಂಶೋಧನಾಂಗ ಮತ್ತು ಜನಸಂಪರ್ಕದಲ್ಲಿ ತೊಡಗಿರುವ ಪ್ರಸಾರಾಂಗ ಇವುಗಳೊಡನೆ ಆಡಳಿತಾಂಗ ಹಿನ್ನೆಲೆಯಲ್ಲಿ ನಿಂತು ಅವು ಸುಗಮವಾಗಿ ಕೆಲಸ ಮಾಡಲು ನೆರವಾಗಬೇಕಾಗಿದೆ. ವಿಶ್ವವಿದ್ಯಾಲಯದ ವಿವಿಧ ಕಾರ್ಯಯೋಜನೆಗಳನ್ನು ಆಯಾಯಾ ಅಧ್ಯಯನ ವಿಭಾಗಗಳ ತಜ್ಞರು ನಿರ್ಧರಿಸಿ ಅವೆಲ್ಲವನ್ನು ಸಮನ್ವಯಗೊಳಿಸಿ ಜಾರಿಗೆ ಕೊಡುವಾಗ ಆಡಳಿತಾಂಗದ ಪ್ರವೇಶ ಮೊದಲಾಗುತ್ತದೆ. ಅಲ್ಲದೆ ವಿಶ್ವವಿದ್ಯಾಲಯದಲ್ಲಿ ಕಾರ್ಯಪ್ರವೃತ್ತರಾಗುವ ಉದ್ಯೋಗಿಗಳ ಆಯ್ಕೆ. ವಿವಿಧ ಸಂಪನ್ಮೂಲಗಳ ಅಭಿವೃದ್ಧಿ ಮುಂತಾದ ವ್ಯಾವಸಾಯಿಕ ಕೆಲಸಗಳಲ್ಲೂ ಆಡಳಿತಾಂಗದ ಪಾತ್ರ ಕೇವಲ ಕನಿಷ್ಠ ಪ್ರಮಾಣದಲ್ಲಿರುತ್ತದೆ. ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಸರ್ಕಾರದೊಡನೆ ಆಡಳಿತಾತ್ಮಕ ವ್ಯವಹಾರ, ಅನುದಾನ ಮೂಲಗಳಿಂದ ಸಂಪನ್ಮೂಲಗಳನ್ನು ಪಡೆಯುವಿಕೆ, ರಾಜ್ಯ ಮತ್ತು ಹೊರಗಿನ ವಿದ್ವತ್‌ ಸಂಸ್ಥೆಗಳೊಡನೆ ಸಂಪರ್ಕ ಮುಂತಾದ ಕೆಲಸಗಳನ್ನು ಆಡಳಿತಾಂಗ ನಿರ್ವಹಿಸುತ್ತದೆ. ಇಂಥ ಕೆಲಸಗಳನ್ನು ನಿರ್ವಹಿಸುವಲ್ಲಿ ಆಡಳಿತಾಂಗಕ್ಕೆ ವಿಶ್ವವಿದ್ಯಾಲಯದ ವಿವಿಧ ಪ್ರಾಧಿಕಾರಿಗಳು ಸೂಕ್ತ ನಿರ್ದೇಶನಗಳನ್ನು ನೀಡುತ್ತವೆ ಹಾಗೂ ಮಾರ್ಗದರ್ಶನ ಮಾಡುತ್ತವೆ.

ಶೈಕ್ಷಣಿಕ ಆಡಳಿತ ಮತ್ತು ಸಾಮಾನ್ಯ ಆಡಳಿತಗಳ ನಡುವೆ ಇರುವ ಮೂಲಭೂತ ವ್ಯತ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯ ಗಮನಿಸುತ್ತಿದೆ. ಶೈಕ್ಷಣಿಕ ಆಡಳಿತದಲ್ಲಿ ಬರುವ ಮಾನವ ಸಂಪರ್ಕ, ನೀತಿ ನಿರ್ಧಾರ ಮತ್ತು ಸಾಮಾಜಿಕ ಹೊಣೆಗಾರಿಕೆ ಸಾಮಾನ್ಯ ಆಡಳಿತದಲ್ಲಿರುವುದಕ್ಕಿಂತ ಭಿನ್ನವಾದದ್ದು. ಇದರಿಂದಾಗಿ ಕನ್ನಡ ವಿಶ್ವವಿದ್ಯಾಲಯ ರೂಪಿಸಬಯಸುವ ಶೈಕ್ಷಣಿಕ ಆಡಳಿತ ವಿಶ್ವವಿದ್ಯಾಲಯದ ಒಟ್ಟು ಶೈಕ್ಷಣಿಕ ಉನ್ನತಿಗೆ ಪೂರಕವಾಗಿರುವಂಥದ್ದು.

ನಮ್ಮ ಆಡಳಿತಾಂಗದ ಕಾರ್ಯವ್ಯಾಪ್ತಿ ಮೇಲೆ ಹೇಳಿದಂತೆ ಮಿತವಾದದ್ದು. ಹೀಗಾಗಿ ಇದು ದೊಡ್ಡ ಕಛೇರಿಗಳನ್ನು ಹೆಚ್ಚಿನ ಸಿಬ್ಬಂದಿಯನ್ನು ನಿರೀಕ್ಷಿಸುವಂಥದ್ದಲ್ಲ. ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲು ಅವಶ್ಯವಾಗುವಷ್ಟು ಸಿಬ್ಬಂದಿಯೊಡನೆ ವಿಶ್ವವಿದ್ಯಾಲಯದ ಸಂಶೋಧನಾಂಗದ ಪ್ರತಿನಿಧಿ ಆಡಳಿತವನ್ನು ನಿರ್ವಹಿಸಲು ಅನುಕೂಲವಾಗುವಂಥ ವ್ಯವಸ್ಥೆಯಿದು. ಇದು ಒಂದು ಉತ್ತಮ ಅವಕಾಶವಾಗಿರುವಂತೆ ದೊಡ್ಡ ಜವಾಬ್ದಾರಿಯೂ ಆಗಿದೆ.