ನಮ್ಮ ಸಂಶೋಧನೆಗಳ ಪ್ರಮುಖ ಪ್ರಯೋಜನ ಎಂದರೆ ಉಪಯುಕ್ತತೆಯೇ ಆಗಿದೆ. ಈ ಉಪಯುಕ್ತತೆ ಒಳ್ಳೆಯ ಪರಿಣಾಮಗಳನ್ನು ನೀಡಬೇಕಲ್ಲದೆ ಅದು ಬರಿಗಣ್ಣಿಗೇ ಕಾಣಿಸುವಷ್ಟು ಸ್ಪಷ್ಟವಾಗಿರಬೇಕೆಂದು ನಮ್ಮ ಆಶೆ. ಆದ್ದರಿಂದಲೇ ನಮ್ಮ ಪ್ರಸಾರಾಂಗಕ್ಕೆ ಸಂಶೋಧನಾಂಗದಷ್ಟೇ ಜವಾಬ್ದಾರಿ ಇದೆ. ಸಂಶೋಧನೆಯಿಂದ ದೊರೆತ ವಿದ್ಯೆಯನ್ನು ಪ್ರಸಾರಾಂಗ ಮೂರು ರೀತಿಗಳಲ್ಲಿ ಪ್ರಸಾರ ಮಾಡುತ್ತದೆ; ನಾಡಿನ ತಜ್ಞರಿಂದ ಗ್ರಂಥಗಳನ್ನು ಬರೆಯಿಸಿ ಪ್ರಕಟಿಸುವುದರ ಜತೆಗೆ, ವಿಶ್ವವಿದ್ಯಾಲಯ ಸೃಷ್ಟಿಸುತ್ತಿರುವ ಸಾಹಿತ್ಯವನ್ನೂ ಅದು ಪ್ರಕಟಿಸಬೇಕು. ಇದು ತಿಳುವಳಿಕೆಗೆ ಪರಿಪ್ರೇಕ್ಷ್ಯವನ್ನು ಕಟ್ಟುವ ಕೆಲಸ. ನಾಡಿನ ಪ್ರಕೃತಿಯಂತೆ ನಾಡಿನ ಸಂಸ್ಕೃತಿ ಕೂಡ ಈ ಪರಿಪ್ರೇಕ್ಷ್ಯವಿಲ್ಲದೆ ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಕಲ್ಲಿನಲ್ಲಿರುವ ಶಾಸನಗಳನ್ನು ಕಣ್ಣೆತ್ತಿ ನೋಡದ ಜನ ಅದೇ ಪುಸ್ತಕದಲ್ಲಿ ಪ್ರಕಟಗೊಂಡರೆ ಓದುತ್ತಾರೆ. ಅರ್ಥಮಾಡಿಕೊಳ್ಳುತ್ತಾರೆ. ಜನರಾಡುವ ಶಬ್ದಗಳನ್ನೇ ಕೋಶದಲ್ಲಿ ಸಂಗ್ರಹಿಸಿದರೆ ಆ ಶಬ್ದಗಳಿಗೆ ತಿಳುವಳಿಕೆಯ ಬೆಲೆ ಬರುತ್ತದೆ. ನಮ್ಮ ಪ್ರಸಾರಾಂಗ ಇದಕ್ಕಿಂತ ವಿಶಾಲವದ, ಹೆಚ್ಚು ಪರಿಣಾಮಕಾರಿಯಾದ ಪರಿಪ್ರೇಕ್ಷ್ಯವನ್ನು ಕಟ್ಟುವುದರಲ್ಲಿ ತೊಡಗಿದೆ. ಪ್ರಸಾರಾಂಗದ ಪ್ರಕಟಣೆಗಳಿಗೆ ಇಂಥ ಒಂದು ಸಾರ್ಥಕವಾಗಬಲ್ಲ ಉದ್ದೇಶವಿದೆ. ಲೋಕದಲ್ಲಿಯ ತಿಳುವಳಿಕಲೆಯನ್ನು ಸಂಗ್ರಹಿಸಿ ತಿರುಗಿ ಲೋಕಕ್ಕೇ ದಾನ ಮಾಡುವ ಒಂದು ಪ್ರಕ್ರಿಯೆ ಪ್ರಸಾರಾಂಗದಲ್ಲಿ ನಡೆಯುತ್ತಿದೆ. ಸಂಗ್ರಹವಾದ ತಿಳುವಳಿಕೆಗೆ ಗ್ರಂಥಗಳ ರೂಪವನ್ನು ಕೊಡುವ ಹೊಣೆಗಾರಿಕೆ ಈ ಪ್ರಸಾರಾಂಗದ್ದಾಗಿದೆ. ಈ ರೂಪಾಂತರದ ಪ್ರಕ್ರಿಯೆ ನಮ್ಮ ವಿಶ್ವವಿದ್ಯಾಲಯದ ವೈಶಿಷ್ಟ್ಯವಾಗಿದೆಯೆಂದರೂ ತಪ್ಪಿಲ್ಲ.

ಪ್ರಕಟಣೆಗಳ ಮೂಲಕ ಬೌದ್ಧಿಕ ವಲಯದಲ್ಲಿ ವಿದ್ಯೆ ಪ್ರಸಾರ ಮಾಡುತ್ತಾ ಕನ್ನಡದ ಚಿಂತನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳ್ಳುವಂತೆ ಮಾಡುವುದು. ‘ಪುಸ್ತಕ ಯಾತ್ರೆ’, ‘ಬಿತ್ತರ’, ‘ಪ್ರಸಂಗ’ದಂಥ ಕಾರ್ಯಕ್ರಮ ಹಮ್ಮಿಕೊಂಡು ಸಾಮಾನ್ಯ ಜನರಲ್ಲಿ ವಿದ್ಯೆ ಪ್ರಸಾರ ಮಾಡುತ್ತಾ ಅವರ ಜೀವನ ಹಸನಾಗುವಂತೆ, ಕನ್ನಡ ಸಂಸ್ಕೃತಿ ಸದಾ ಕ್ರಿಯಾಶೀಲವಾಗಿರುವಂತೆ ಪ್ರಯತ್ನಿಸುವುದು. ಹಾಗೂ ಕಮ್ಮಟಗಳು, ಶಿಬಿರಗಳು, ವಿಜ್ಞಾನ ಬೋಧನೆಯ ಕಾರ್ಯಕ್ರಮಗಳು ಮುಂತಾದವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನ ಪ್ರಸಾರ ಮಾಡುವುದು.

ವಿಜ್ಞಾನದ ಸಂಗತಿಗಳನ್ನು ವಿದ್ಯಾರ್ಥಿ ಮತ್ತು ಸಾಮಾನ್ಯ ಜನರಿಗೆ ತಿಳಿಸುವುದಕ್ಕಾಗಿಯೇ ‘ವಿಜ್ಞಾನ ಸಂಗಾತಿ’ ಎಂಬ ಮಾಸಿಕವನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ತರುತ್ತಿದೆ.

ವಿಜ್ಞಾನ ನಮಗೆಲ್ಲ ಉಪಕಾರವೇನೋ ಹೌದು. ಅದರಂತೆ ಒಂದು ಆಹ್ವಾನವೂ ಹೌದು.

ನಮಗರಿವಾಗದಂತೆ ವಿಜ್ಞಾನ ನಮ್ಮ ದಿನನಿತ್ಯದ ಬದುಕಿನಲ್ಲಿ ಸೇರಿಕೊಂಡು ಬಿಟ್ಟಿದೆ. ಆದರೂ ನಮಗಿನ್ನೂ ವೈಜ್ಞಾನಿಕ ದೃಷ್ಟಿಕೋನ ಬಂದಿಲ್ಲ. ಪಾಶ್ಚಾತ್ಯ ನಾಗರಿಕತೆಯ ಒಂದು ಮಹತ್ವದ ಕೊಡುಗೆಯಾಗಿರುವ ವಿಜ್ಞಾನ ನಮ್ಮ ದಿನನಿತ್ಯದ ಜೀವನವನ್ನು ರೂಪಿಸುತ್ತಿರುವಾಗ ನಮ್ಮಲ್ಲಿ ಆಗುವ ಮಾರ್ಪಾಡುಗಳನ್ನು ಇಂದು ದಾಖಲಿಸಬೇಕಾಗಿದೆ. ಅದರ ಜೊತೆಗೇ ವಿಜ್ಞಾನವನ್ನು ನಾವು ಯಾವ ವಿವೇಕದಿಂದ ಉಪಯೋಗಿಸಬೇಕೆಂಬುದರ ತಿಳಿವು ಕೂಡ ನಮ್ಮಲ್ಲಿ ಮೂಡಬೇಕಾಗಿದೆ.

ನಾವಿಂದು ವಿಜ್ಞಾನ, ಎಂಜಿನಿಯರಿಂಗ್‌, ಆಧುನಿಕ ತಂತ್ರವಿಜ್ಞಾನ ಇವನ್ನೆಲ್ಲ ಇಂಗ್ಲಿಷ್‌ ಭಾಷೆಯ ಮೂಲಕ ಕಲಿಯುತ್ತಿದ್ದೇವೆ. ಸಾಹಿತ್ಯ, ಕಲೆ, ತತ್ವಜ್ಞಾನ, ರಾಜಕೀಯ, ಸಮಾಜ ಶಾಸ್ತ್ರಗಳಿಗೆ ಇಂಗ್ಲಿಷ್‌ನ ಜೊತೆಗೆ ಕನ್ನಡವನ್ನು ಉಪಯೋಗಿಸಲು ಕಲಿಯುತ್ತಿದ್ದೇವೆ. ಆದರೆ, ಬೇರೆ ಭಾಷೆಯ ಮಾಧ್ಯಮದಿಂದ ಕೇವಲ ತಿಳಿವಳಿಕೆಯಷ್ಟೇ ದೊರೆಯುವುದಿಲ್ಲ. ತಿಳಿವಳಿಕೆಯ ವಿಧಾನಗಳೂ ಬಂದುಬಿಡುತ್ತವೆ. ಕನ್ನಡ ತನ್ನ ಶಾಸ್ತ್ರವಿಧಾನಗಳನ್ನು ರೂಪಿಸಲು ಕಲಿಯಬೇಕಾಗಿದೆ. ಆಗಲೇ ತಿಳಿವಳಿಕೆ ನಮ್ಮದಾಗುವುದು. ಭೌತಶಾಸ್ತ್ರ,ರಸಾಯನದಂಥ ಶುದ್ಧ ಶಾಸ್ತ್ರಗಳಿಗೆ ಪರಂಪರೆ ಪ್ಲೇಟೋ, ಅರಿಸ್ಟಾಟಲರಿಂದ ಬಂದರೆ ಅದು ನಮ್ಮದಾಗುವುದೇ ಇಲ್ಲ. ಅದ್ಭುತ ದೇವಾಲಯಗಳನ್ನು ನಿರ್ಮಿಸಿದ ನಮ್ಮ ಪೂರ್ವಜರ ತಂತ್ರವಿಜ್ಞಾನ ಯಾವುದಿತ್ತು ಎಂದು ಯೋಚಿಸಲು ಕೂಡ ನಾವು ಪ್ರಯತ್ನ ಮಾಡಿಲ್ಲ. ಸುಯೇಜ್‌ ಕಾಲುವೆಯ ಮೂಲಕ ಹರಿದು ಬಂದ ತಿಳಿವಳಿಕೆಯ ಪ್ರವಾಹದಿಂದ ನಮ್ಮ ಹೊಲಗಳಲ್ಲಿಯ ತಿಳಿವಳಿಕೆಯ ಕೃಷಿ ಸಾಗಬೇಕಾಗಿದೆ.

ಪಾಶ್ಚಾತ್ಯರಲ್ಲಿ ವೈಜ್ಞಾನಿಕ ಸಾಹಿತ್ಯ ವಿಪುಲವಾಗಿ ಬೆಳೆದುಬಂದಿದೆ. ಅಂಥ ಸಾಹಿತ್ಯ ಕನ್ನಡದಲ್ಲಿ ಬರಬೇಕು. ತಿಳಿವಳಿಕೆ ಎಷ್ಟೇ ಶ್ರೇಷ್ಠವಾಗಿರಲಿ, ಅಗತ್ಯವಾದದ್ದೇ ಆಗಿರಲಿ ನಮ್ಮ ಭಾಷೆಯಲ್ಲಿ ಅದು ಮೂಡಿ ಬರದಿದ್ದರೆ, ಅದು ನಮ್ಮ ತಿಳುವಳಿಕೆಯಾಗ ಲಾರದು. ನಮ್ಮ ವಿಶ್ವವಿದ್ಯಾಲಯ ಈಗ ಪ್ರಾರಂಭಿಸಿರುವ ‘ವಿಜ್ಞಾನ ಸಂಗಾತಿ’ಗೆ ಈ ಮಹತ್ತರವಾದ ಉದ್ದೇಶವಿದೆ. ಕರ್ನಾಟಕದಲ್ಲಿ ಮೌಲಿಕವಾದ ವಿಜ್ಞಾನ ಹುಟ್ಟಿ ಬರಬೇಕಾದರೆ ನಮ್ಮ ಭಾಷೆಯಲ್ಲಿ ವೈಜ್ಞಾನಿಕ ಸಾಹಿತ್ಯ ಹುಟ್ಟಿ ಬರಬೇಕು. ಕನ್ನಡದಲ್ಲಿ ವೈಜ್ಞಾನಿಕ ಚಿಂತನ ನಡೆಯಬೇಕು. ಕನ್ನಡಕ್ಕೆ ಅಂಥ ತೇಜಸ್ಸು ಶಕ್ತಿ ಇದೆ. ವಚನಕಾರರ ಭಾಷೆ ಅಣು ವಿಜ್ಞಾನದ ಅರ್ಥವನ್ನು ಪ್ರಕಟಿಸಲು ಸಮರ್ಥವಾಗಿದೆ.