ಸಾವಿರಾರು ಐತಿಹಾಸಿಕ ನೆನಪುಗಳನ್ನು ತುಂಬಿಕೊಂಡಿರುವ ಹಂಪಿಗೆ ಇನ್ನೂ ಜಾಗೃತಿ ಇದೆ. ೧೯೩೪ರಲ್ಲಿ ವಿಜಯನಗರ ಸಾಮ್ರಾಜ್ಯದ ೬೦೦ನೇ ಜಯಂತಿಯ ಉತ್ಸವವನ್ನು ಇಡೀ ಕನ್ನಡ ನಾಡು ಸಡಗರದಿಂದ ಆಚರಿಸಿತು. ಅಂದಿನಿಂದ ಹೊಸ ಕನಸುಗಳು ಗಾಳಿಯಲ್ಲಿ ತೇಲಿ ಬರುತ್ತಲೇ ಇವೆ. ಹಂಪಿಯ ನೆಲದ ದೈವದಲ್ಲಿ ನಮಗೆ ಅಪಾರವಾದ ನಂಬಿಕೆ ಇದೆ. ಕ್ಷೇತ್ರ ಶಕ್ತಿಯ ಪ್ರಭಾವದಿಂದಾಗಿ ಹಿಂದೆ ಸಣ್ಣ ರಾಜ್ಯವಾಗಿದ್ದದ್ದು ಸಾಮ್ರಾಜ್ಯವಾಗಿ ಬೆಳೆಯುವ ಬಯಕೆಯನ್ನು ಹೊತ್ತಿಸಿಕೊಂಡ ನೆಲ ಇದು. ಹೀಗೆ ಬೆಳೆಯುವ, ಬೆಳೆಸುವ ಬಯಕೆ ಈ ನೆಲಕ್ಕೆ ಇನ್ನೂ ಹೋಗಿಲ್ಲ. ಬೇರೆ ಬೆಟ್ಟಗಳಲ್ಲಿ ಹಸಿರು ಬೆಳೆದರೆ ಇಲ್ಲಿ ಬಂಡೆಗಳೇ ಬೆಳೆಯುವ ನೆಲ ಇದು. ಇದು ವಿದ್ಯಾರಣ್ಯರ ತಪೋಭೂಮಿ. ಸಾಯಣರ ಕರ್ಮಭೂಮಿ, ಹರಿಹರ ರಾಘವಾಂಕರ ಕಾವ್ಯಭೂಮಿ. ಈ ಪ್ರದೇಶದ ಮೊದಲ ಹೆಸರು ‘ವಿದ್ಯಾನಗರ’. ಆಮೇಲೆ ಸಾಮ್ರಾಜ್ಯದ ವಿಸ್ತಾರದಿಂದಾಗಿ ವಿಜಯನಗರವೆಂದಾಯಿತು. ಅದು ಮೂಲದಲ್ಲಿ ವಿದ್ಯೆಯ ಕೇಂದ್ರಸ್ಥಾನ. ವಿಜಯದ ತಳಹದಿಯ ಮೇಲೆ ಕಟ್ಟಿದ ಸಾಮ್ರಾಜ್ಯ ಇಂದು ನಾಮಾವಶೇಷವಾಗಿದೆ. ಅದೇ ಸ್ಥಳದಲ್ಲಿ ಈಗ ಕನ್ನಡ ವಿಶ್ವವಿದ್ಯಾಲಯ ತಲೆ ಎತ್ತಿದೆ. ಇದು ಇಡೀ ದಕ್ಷಿಣಭಾರತದ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನದು. ಈ ವಿಶ್ವವಿದ್ಯಾಲಯದ ಪರವಾಗಿಯೇ ಮುಂದೆ ಕೆಲವು ಮಾತುಗಳನ್ನ ಮಂಡಿಸುತ್ತಿದ್ದೇನೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಲ್ಕು ನಿಕಾಯಗಳಿದ್ದು, ಅವುಗಳಲ್ಲಿ ಒಟ್ಟು ಇಪ್ಪತ್ನಾಲ್ಕು ವಿಭಾಗಗಳಿವೆ.  ನಮ್ಮಲ್ಲಿ ಪಿಎಚ್.ಡಿ., ಎಂ.ಫಿಲ್‌ ಪದವಿಗಳನ್ನು ಪಡೆಯಲು ಅವಕಾಶವಿದ್ದರೂ ಶಿಕ್ಷಣವನ್ನು ನೀಡುವುದೇ ವಿಶ್ವವಿದ್ಯಾಲಯದ ಮುಖ್ಯ ಗುರಿಯಲ್ಲ. ಕನ್ನಡ ಭಾಷೆಯ ಸರ್ವತೋಮುಖ ಏಳಿಗೆಯನ್ನು ಸಾಧಿಸುವುದು ನಮ್ಮ ಮುಖ್ಯ ಉದ್ದೇಶ.  ಗುರಿ ಸಾಧನೆಗಾಗಿ ವಿಶ್ವವಿದ್ಯಾಲಯದ ಸಂರಚನೆಯನ್ನು – ಸಂಶೋಧನಾಂಗ, ಪ್ರಸಾರಾಂಗ ಹಾಗೂ ಆಡಳಿತಾಂಗ ಎಂದು ವಿಂಗಡಿಸಿಕೊಂಡಿದ್ದೇವೆ. ಅವುಗಳಲ್ಲಿ ಸಂಶೋಧನಾಂಗ ಅತ್ಯಂತ ಮುಖ್ಯವಾದದ್ದು. ಸಂಶೋಧನೆಗಳನ್ನು ಪ್ರಸಾರ ಮಾಡುವುದು ಪ್ರಸಾರಾಂಗ. ಇವೆರಡರ ಕೆಲಸ ಸುಗಮವಾಗಿ, ಸುರಳಿತವಾಗಿ ನಡೆಯುವಂತೆ ಅನುಕೂಲ ಮಾಡಿಕೊಡುವುದು ಆಡಳಿತಾಂಗ.

ಭಾಷಿಕ ಅಧ್ಯಯನಗಳಲ್ಲಿ ನಾವು ಹೊಸ ದಾರಿಯನ್ನೇ ಹಿಡಿಯಬೇಕಾಗಿದೆಯೆಂದು ನಾನು ನಂಬಿದ್ದೇನೆ. ಭಾಷೆಯ ಅಧ್ಯಯನವೆಂದರೆ ಮನುಷ್ಯನ ಅಧ್ಯಯನವೇ ಆಗಿದೆ. ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮತ್ತು ಜಾನಪದ ಅಧ್ಯಯನಗಳಿಗೂ ಭಾಷೆಯ ಅಧ್ಯಯನಕ್ಕೂ ನಿಕಟವಾದ ಸಂಬಂಧವಿದೆ. ಕನ್ನಡ ಭಾಷೆಯೆಂದರೆ ಕನ್ನಡ ಜನತೆಯ ನೈತಿಕ ಮೌಲ್ಯಗಳು, ಆಧ್ಯಾತ್ಮಿಕ ಆಕಾಂಕ್ಷೆಗಳು, ಧಾರ್ಮಿಕ ಅಪೇಕ್ಷೆಗಳು ಮತ್ತು ಇದುವರೆಗೆ ಎಲ್ಲೂ ದಾಖಲಾಗದಿರುವ ಕನ್ನಡ ಚರಿತ್ರೆ ಇವೆಲ್ಲವುಗಳ ಪ್ರತಿಫಲನವೇ ಆಗಿದೆ.