ಆಗ ನಾನು ಬೆಳಗಾವಿ ಜಿಲ್ಲೆಯ ಐನಾಪುರ ಪ್ರೌಢಶಾಲೆಯ ಮೇಲಿನ ವರ್ಗದ ವಿದ್ಯಾರ್ಥಿ. ಅದು ಅಥಣಿ ತಾಲೂಕಿನ ಒಂದು ಹಿರಿಯ ಗ್ರಾಮ. ಮುಂಬಯಿ ಕರ್ನಾಟಕದಲ್ಲಿಯೇ ಪ್ರಥಮ ಗ್ರಾಮೀಣ ಪ್ರೌಢಶಾಲೆ ಪಡೆದ ಹೆಗ್ಗಳಿಕೆಯ ಜತೆ ಸುಶಿಕ್ಷಿತರು ಅಧಿಕ ಪ್ರಮಾಣದಲ್ಲಿದ್ದ ಊರು. ಅಲ್ಲಿ ಒಂದು ಖಾಸಗಿಯವರ ಮನೆಯಲ್ಲಿ ಅಂಚೆ ಕಛೇರಿ. ನಾನು ಪ್ರತಿ ತಿಂಗಳು ಮೊದಲವಾರ ತಪ್ಪದೇ ಅಂಚೆ ಕಛೇರಿಗೆ ಹೋಗುತ್ತಲಿದ್ದೆ. ಲವಲವಿಕೆ. ಉತ್ಸುಕತೆಯಿಂದ ಆಗ ಎಲ್ಲರೆದುರು ಬಿಚ್ಚುತ್ತಲಿರುವ ಅಂಚೆ ಚೀಲದತ್ತ ನೆಟ್ಟ ನೋಟ. ಮಡಿಕೆಯಾದ ದೊಡ್ಡ ಆಕಾರದ ಪತ್ರಿಕೆ ಕಂಡರೆ ನನಗೆ ಎಲ್ಲಿಲ್ಲದ ಖುಷಿ ಅದು ಖಾತ್ರಿಯಾಗಿ ನನ್ನ ‘ಜಯಂತಿ’ ಮಾಸ ಪತ್ರಿಕೆಯೇ ಆಗಿರುತ್ತಿತ್ತು. ನಾನೊಬ್ಬನೇ ಆ ಊರಿಗೆ ‘ಜಯಂತಿ’ಯ ಚಂದಾದಾರ. ಪತ್ರಿಕೆಯನ್ನು ಪಡೆದು ನೇರ ಕೋಣೆಗೆ ಹೋಗಿ, ಬಿಡುವಿದ್ದರೆ ಓದಿ ಮುಗಿಸಬೇಕು. ಶಾಲೆಯಿದ್ದರೆ ಬೇಗ ಬಂದು, ಅದನ್ನು ಪೂರ್ತಿ ಓದಿದಾಗಲೇ ಸಮಾಧಾನ.

ದಿ. ಬೆಟಗೇರಿ ಕೃಷ್ಣ ಶರ್ಮರ ‘ಜಯಂತಿ’ ಮಾಸಪತ್ರಿಕೆ ನನ್ನಂಥ ಸಾಹಿತ್ಯ ಅಭಿರುಚಿಯ ವಿದ್ಯಾರ್ಥಿಗಳಿಗೆ ತುಂಬ ಅಪ್ಯಾಯಮಾನವಾಗಿತ್ತು. ಆ ಸಮಯ ಕನ್ನಡದ ಅತ್ಯಂತ ಜನಪ್ರಿಯ ಮಾಸಪತ್ರಿಕೆ. ಮಾಸ್ತಿಯವರ ಜೀವನ’ವೂ ಅಷ್ಟೇ ಪ್ರಸಿದ್ಧ. ಅದಾಗಲೇ ‘ಜಯಕರ್ನಾಟಕ’ದ ಕಾಲ ಮುಗಿದು ಹೋಗಿತ್ತು. ಇದು ೧೯೪೯-೫೧ ರ ಸಮಯ. ೧೯೩೮ ರಿಂದ ೧೯೬೦೯ ರವರೆಗೆ ಅಖಂಡವಾಗಿ ೨೨ ವರ್ಷ ಬೆಟಗೇರಿ ಕೃಷ್ಣಶರ್ಮರು ಜಯಂತಿ’ ಪತ್ರಿಕೆಯನ್ನು ತಮ್ಮ ಮುದ್ದು ಮಗುವಿನಂತೆ ಜೋಪಾನ ಮಾಡಿಕೊಂಡು , ಅದರಿಂದ ಲಾಭಕ್ಕಿಂತ ಹೆಚ್ಚಿಗೆ ನಷ್ಟವನ್ನೇ ಅನುಭವಿಸಿದ್ದರೂ ಅದನ್ನು ಜತನದಿಂದ ಕಾಯ್ದುಕೊಂಡು ಬಂದಿದ್ದರು.

ತಮ್ಮ ಪತ್ನಿಯ ಆರೋಗ್ಯ, ತಮ್ಮ ಆರೋಗ್ಯ, ಮಕ್ಕಳ ಯೋಗಕ್ಷೇಮ, ಇವುಗಳ ಬಗೆಗೆ ಒಂದಿಷ್ಟು ನಿಷ್ಕಾಳಜಿ ತೋರಿದ್ದರು. ‘ಜಯಂತಿ’ ಮೇಲಿನ ಕಾಳಜಿಯಿಂದ ಅದನ್ನು ಉನ್ನತ ದರ್ಜೆಯ ಸಾಹಿತ್ಯಿಕ ಪತ್ರಿಕೆಯನ್ನಾಗಿ ರೂಪಿಸಿದ್ದರು. ಕನ್ನಡ ಪತ್ರಿಕಾರಂಗದ ಇತಿಹಾಸದಲ್ಲಿ ಅದು ಅಜರಾಮರವಾಗಿ ಉಳಿಯುವಂತಾಯಿತು. ಇದರಲ್ಲಿ ಬೆಟಗೇರಿಯವರ ತ್ಯಾಗದ ಜತೆ ತಪಸ್ಸೂ ಸೇರಿದೆ. ‘ಜಯಂತಿ’ ಗಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದರು. ಕನ್ನಡದ ಇತರ ಸಾಹಿತ್ಯ ಪ್ರಕಾರಗಳಾದ ಕಾವ್ಯ, ಕಥೆ, ಕಾದಂಬರಿ, ಜನಪದ, ಸಂಸ್ಕೃತಿ ಸಂಶೋಧನೆ-ಸಂಪಾದನೆ ನಾಟಕ, ಚರಿತ್ರೆ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಈ ಎಲ್ಲ ವೈವಿಧ್ಯಮಯ ಸಾಹಿತ್ಯ ಸೃಷ್ಟಿಯ ಜತೆ, ಅಷ್ಟೇ ಸಮರ್ಥವಾಗಿ ಅಷ್ಟೇ ಮೌಲಿಕವಾಗಿ ಉನ್ನತ ದರ್ಜೆಯ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದು ಕೂಡ ಬೆಟಗೇರಿಯವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.