ನೇಕಾರಿಕೆಯ ವೃತ್ತಿ ಮನುಕುಲದ ಆದಿಯಿಂದಲೆ ಬಂದದ್ದಾಗಿದೆ ಮೊದ ಮೊದಲು ಮಾನ ಮುಚ್ಚಿಕೊಳ್ಳಲು ಮನುಷ್ಯ ಮರದ ತೊಗಟೆಯನ್ನೂ ಅಥವಾ ಪ್ರಾಣಿಗಳ ಚರ್ಮವನ್ನು ಸುತ್ತಿಕೊಳ್ಳತೊಡಗಿದ ನಾಗರೀಕ ಪ್ರಜ್ಞಾವಂತಿಕೆ ಬೆಳೆದಂತೆಲ್ಲ ಅದನ್ನು ಕಲಾತ್ಮಕ ಗೊಳಿಸುತ್ತ ಅದರಲ್ಲಿ ಕುಶಲತೆ ಸಾಧಿಸುತ್ತ ಇಂದಿನ ಹಂತಕ್ಕೆ ಬಂದು ತಲುಪಿರುವುದನ್ನು ಕಾಣುತ್ತೇವೆ.

ಮೊದಲಿಗೆ ಮನುಷ್ಯ ಚರ್ಮಧಾರಿಯಾಗಿದ್ದ ಎನ್ನಲಿಕ್ಕೆ ನ ಅವು ಪೂಜಿಸುವ ದೇವರು ಶಿವ ಚರ್ಮಬರಧಾರಿಯಾಗಿರುವುದೇ ಉದಾಹರಣೆಯಾಗಿದೆ ಮಂಗನ ಅವಸ್ಥೆಯಲ್ಲಿದ್ದ ಮನುಷ್ಯ ಬೆತ್ತಲೆಯಾಗಿರುತ್ತಿದ್ದಂನೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ವಿಕಾಸಗೊಳ್ಳುತ್ತ ಪ್ರವಂತಿಕೆ ಮೈಗೂಡಿಸಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಸಾಧಿಸುತ್ತ ಬಂದಂತೆ ತಾನು ಉಡುತ್ತಿದ್ದ ಚರ್ಮ ಅಥವಾ ಗಿಡದ ತೊಗಟೆಯ ಬದಲಾಗಿ ಹತ್ತಿಯ ಗಿಡದಿಂದ ನೂಲು ತೆಗೆಯುವುದನ್ನು ಕಂಡು ಹಿಡಿದು ಅದನ್ನು ಕುಶಲತೆಯಿಂದ ಕಲಾತ್ಮಕವಾಗಿಸುತ್ತ ಬಟ್ಟೆಯ ಹಲವಾರು ನಮೂನೆಗಳನ್ನು ಹಾಗು ಅವುಗಳನ್ನು ನೇಯುವ ಉಪಕರಣಗಳನ್ನು ಸುಧಾರಣೆಗೊಳಿಸಿಕೊಂಡುಕ ಇಂದಿನ ಹಂತ ತಲುಪಿರುವುದನ್ನು ಕಾಣಬಹುದು.

ಆರಂಭದಲ್ಲಿ ಅಸಕ್ತಿಗಾಗಿ ನೇಕಾರಿಕೆಯನ್ನು ಮಾಡುತ್ತ ಬಂದವರೆ ಒಂದು ಪಂಗಡವಾಗಿ ಅದೇ ಅವರ ವೃತ್ತಿಯಾಗಿದ್ದರಿಂದ ಅವರನ್ನು ನೇಕಾರರೆಂದು ಕರೆಯುತ್ತ ಬಂದದ್ದು ಮುಂದೆ ದೇವಾಂಗವೋ, ಪದ್ಮಶಾಲಿಯೋ, ಕುರುಹೀನಶೆಟ್ಟಿಯೋ ಎಂದು ಕರೆಯಲ್ಪಟ್ಟು ಅದರಲ್ಲಿಯೇ ಉಪ ಪಂಗಡಗಳಾಗಿ ಒಟ್ಟು ನೇಕಾರಿಕೆಯನ್ನೇ ಕುಲವೃತ್ತಿಯಾಗಿಸಿಕೊಂಡ ದೇವಾಂಗ, ಪದ್ಮಶಾಲಿ, ಕುರುಹೀನಶೆಟ್ಟಿ ಸ್ವಕುಳಸಾಲಿ, ಪಟ್ಟಸಾಲಿ, ತೊಗಟವೀರ ಹೀಗೆ ಪ್ರತ್ಯೇಕ ಆರು ಪಂಗಡಗಳು ಆಯಾ ಜಾತಿಯ ಹೆಸರಿನಲ್ಲಿ ಗುರುತಿಸಿಕೊಂಡು ಬಂದಿದ್ದಾರೆ. ಆದ್ದರಿಂದಲೇ ಇವರೆಲ್ಲರ ಸಾಂಸ್ಕೃತಿಕ ಆಚರಣೆ. ಹಬ್ಬ ಹರಿದಿನಗಳು, ಧಾರ್ಮಿಕ ಕಾರ್ಯಗಳು ಸ್ವಲ್ಪ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುವುದು ಸಹಜ.

ಮೊಟ್ಟ ಮೊದಲಿಗೆ ಇವರ ಮೂಲಕ ಪುರುಷರು ಬಟ್ಟೆ ನೆಯ್ದದ್ದರಿಂದ ಅವರು ದೇವತೆಗಳಿಗೆ ಬಟ್ಟೆ ನೆಯ್ದು ಅವರ ಮಾನ ಕಾಯ್ದರೆಂದು ಅವರೆಲ್ಲರ ಪುರಾಣಗಳಲ್ಲಿ ಚಿತ್ರಿಸಲಾಗಿದೆ. ಈ ಮೂಲ ಪುರುಷರನ್ನು ದೇವಾಂಗ ಋಷಿ, ಭಾವನ ಋಷಿ, ಸಾಲೇಶಸ್ವರ ಋಷಿ ಇತ್ಯಾದಿ ಹೆಸರಿನಿಂದ ಕರೆಯಲಾಗುತ್ತಿದೆ. ಒಂದು ಪುರಾಣದ ಪ್ರಕಾರ ದೇವಾಂಗ ಋಷಿಗೆ ಆರು ಜನ ಪತ್ನಿಯರು, ಆ ಆರು ಹೆಂಡಂದಿರಿಗೆ ಹುಟ್ಟಿದ ಮಕ್ಕಳೆ ಮೇಲಿನ ಆರು ನೇಕಾರ ಪಂಗಡಗಳವರು ಎಂದು ಹೇಳಲಾಗುತ್ತಿದೆ ಆದರೆ ಇದನ್ನು ಇನ್ನೊಂದು ಪಂಗಡದವರು ಒಪ್ಪದೆ ವಿವಾದವಾಗಿರುವುದನ್ನು ಇಲ್ಲಿ ಗಮನಿಸಬಹುದು.

ಈ ಎಲ್ಲ ಒಳ ಪಂಗಡಗಳನ್ನು ಒಂದು ಗೂಡಿಸಿ ನೇಕಾರರೆಲ್ಲ ಒಂದೇ, ಅವರಲ್ಲಿ ಯಾವುದೇ ವ್ಯತ್ಯಾಸ ಮಾಡದೆ ಬಾಂಧವ್ಯ ಬೆಳೆಸಬೇಕೆನ್ನುವ ಪ್ರಯತ್ನವನ್ನು ಇತ್ತಿಚೇಗೆ ನಮ್ಮ ನೇಕಾರ ಜನಾಂಗದ ಮಠಾಧೀಶರನೆಲ್ಲ ಮುಂದಿಟ್ಟುಕೊಂಡು ಮಾಡಲಾಯಿತು. ಆದರೆ ಅದಿನ್ನೂ ವಿಚಾರದ ಹಂತದಲ್ಲಿ ಉಳಿದಿದೆ ಹೊರತು ಪ್ರಾಯೋಗಿಕ ಹಂತಕ್ಕೆ ಬಂದಿಲ್ಲ. ಇಡೀ ಮಾನವ ಕುಲ ಒಂದು ಎನ್ನುವ ಉದಾತ್ತ ಭಾವನೆ ಬಂದಾಗ ಇದೇನೂ ದೊಡ್ಡದಲ್ಲ ಆದರೆ ಕೆಲವು ಸಾಂಪ್ರದಾಯಿಕವಾದಿಗಳು, ಸಂಕುಚಿತ ಮನೋಭಾವದವರು ಪಟ್ಟಭದ್ರರು ಇದಕ್ಕೆ ಆತಂಕವಾಗಿದ್ದಾರೆ.

ನಂತರದ ದಿನಮಾನಗಳಲ್ಲಿ ಮೇಲಿನ ಆರು ಪಂಗಡಗಳವರಲ್ಲದೆ ಕುರುಬರು, ಮುಸ್ಲಿಂಮರು, ಕ್ರೈಸ್ತರು, ಹರಿಜನರು ಹೀಗೆ ಎಲ್ಲರೂ ಈ ನೇಕಾರಿಕಾ ವೃತ್ತಿಯನ್ನು ಅವಲಂಬಿಸಿಕೊಂಡು ಬಂದಿರುವುದನ್ನು ಕಾಣುತ್ತೇವೆ. ಪಟ್ಟೇಕಾರ ಎನ್ನುವ ಜನಾಂಗವೂ ಈ ವೃತ್ತಿಯನ್ನು ಕುಲವೃತ್ತಿಯಾಗಿಸಿಕೊಂಡದ್ದಿದೆ. ಪಟ್ಟೇಕಾರ ಎನ್ನುವುದರಿಂದ ಪಟ್ಟೇಕಾರ ಬಂದಿದೆ ಪಟ ಎಂದರೆ ಸಂಸ್ಕೃತದಲ್ಲಿ ಬಟ್ಟೆ ಎಂದಿದೆ. ಈ ಬಟ್ಟೆ ನೇಯುವವನೆ ಪಟಕಾರ. ಕೆಲವರಿಗೆ ಈ ನೇಕಾರಿಕೆ ಕುಲವೃತ್ತಿಯಾದರೆ ಇನ್ನು ಕೆಲವರಿಗೆ ಉಪಜೀವನ ವೃತ್ತಿಯಾಗಿದೆ ಒಟ್ಟಾರೆ ಈ ನೇಕಾರಿಕೆ ಸಮಾಜದ ಒಂದು ಅವಿಭಾಜ್ಯ ಅಂಗ. ಅದನ್ನು ಬಿಟ್ಟರಲಿಕ್ಕೆ ಸಾಧ್ಯಿವಿಲ್ಲ ಎಂಬುವುದಂತೂ ಸತ್ಯ.

ಯಜಮಾನಿಕೆ – ಹೀಗೆ ಬೆಳೆದು ಬಂದ ನೇಕಾರಿಕಾ ವೃತ್ತಿಯಲ್ಲಿ ಅದನ್ನು ಸಂಪೂರ್ಣವಾಗಿ ಜವಾಬ್ದಾರಿಯಿಂದ ನಿರ್ವಹಿಸಿಕೊಂಡು ಹೋಗಬಲ್ಲ ಯಜಮಾನನ ಅನಿವಾರ್ಯತೆ ತಲೆದೋರಿದ ಸಂದರ್ಭದಲ್ಲಿ ಕೆಲವು ಮಗ್ಗಗಳಿಗೆ ಒಬ್ಬೊಬ್ಬ ಯಜಮಾನ ಹುಟ್ಟಿಕೊಮಡ ಅವನು ಕಚ್ಚಾಬಂಡವಾಳ ಜೋಡಿಸುವುದು. ಸಿದ್ಧವಾದ ಒಟ್ಟಿಗೆಮಾರುಕಟ್ಟೆ ಹುಡುಕುವುದು ಮತ್ತು ಬಟ್ಟೆ ಮಾರಾಟವಾಗುವವರೆಗೆ ನೇಕಾರರಿಗೆ ಆಸರೆಯಾಗಿರುವುದೆ ಮೊದಲಾದ ಕರ್ತವ್ಯಗಳನ್ನು ನಿಭಾಯಿಸುವುದು ಈತನ ಕರ್ತವ್ಯವಾಯಿತು.

ಈ ಯಜಮಾನನ ದುರಾಸೆ ಸ್ವಾರ್ಥಗಳು ಅಧಿಕವಾದಾಗ ಈತನೇ ಬಂಡವಾಳಶಾಹಿಯಾಗಬಲ್ಲನಾದ ನೇಕಾರರ ಪೋಷಣೆಗೆ ಬದಲು ಶೋಷಣೆ ಮಾಡುವ ಸಾಧ್ಯತೆಗಳೂ ಈತನಿಗಿವೆ.

ಯಜಮಾನ, ಮಾಲಿಕ ಮತ್ತು ಮಾಸ್ಟರ್

ನೇಕಾರಿಕಾ ವೃತ್ತಿಯಲ್ಲಿ ಯಜಮಾನನ ಪಾತ್ರ ಬಹಳ ಮುಖ್ಯವಾಗಿದೆ. ಈ ಯಜಮಾನನನ್ನು ಮಾಲಿಕ ಅಥವಾ ಮಾಸ್ಟರ್ , ಸಾಹುಕಾರ ಎಂತಲೂ ಕರೆಯಲಾಗುತ್ತಿದೆ. ಈ ಶಬ್ದಗಳಲ್ಲಿರುವ ಸೂಕ್ಷ್ಮ ವ್ಯತ್ಯಾಸವನ್ನು ನಾವು ಗಮನಿಸಬೇಕು ಬಹುಶಃ ನಮಗೆ ಯಜಮಾನ ಎನ್ನುವ ಪದವೆ ಆಪ್ತವಾಗಿದೆ. ಮಾಲಿಕ ಎನ್ನುವ ಶಬ್ದಕಮ್ಯುನಿಜಂ ಚಿಂತನೆಯ ಮೂಲದಿಂದ ಬಂದಿರುವುದಾಗಿದೆ. ಮಾಲಿಕ ಅರಬ್ಬಿ ಮೂಲದ ಶಬ್ಧ, ಇದರ ಅಥರ ಒಡೆಯ, ಪತಿ, ಈಶ್ವರ, ಎಂದಿದೆ. ಶಿರಡಿ ಸಾಯಿಬಾಬಾ ಪದೇ ಪದೇ ಅಲ್ಲಾಮಾಲಿಕ್ ಎನ್ನುವ ಶಬ್ದವನ್ನು ನುಡಿಯುತ್ತಿದುದನ್ನು ಇಲ್ಲಿ ನೆನೆಯಬಹುದು. ಆದರೆ ಆ ಮಾಲಿಕ ಶಬ್ದಕ್ಕಿರುವ ವಿಶೇಷತೆ ವ್ಯಾವಹಾರಿಕ ಸಂದರ್ಭದಲ್ಲಿ ಬಳಸುವಾಗ ಇರುವುದಿಲ್ಲ. ಇಲ್ಲಿ ಮಾಲೀಕನೆಂದರೆ ಕಾರ್ಮಿಕರನ್ನು ದುಡಿಸಿಕೊಳ್ಳುವವ ಎಂತಲೇ ಅರ್ಥವಾಗುತ್ತದೆ. ಇದು ವರ್ಗಭೇದದ ಮೂಲವಾಗಿದೆ. ಕಾರ್ಖಾನೆಗಳು ದೊಡ್ಡ ದೊಡ್ಡ ಯಂತ್ರಗಳು ಮಿಲ್ಲುಗಳು ಬಂದ ಬಳಿಕ ದುಡಿಯುವ ವರ್ಗವೇ ಪ್ರತ್ಯೇಕಗೊಂಡು ಅವರನ್ನು ದುಡಿಸಿಕೊಳ್ಳೂವ ಮಾಲಿಕವರ್ಗ ಮೈದಳೆದಿದೆ.

ಯಜಮಾನ ಎನ್ನುವುದರಲ್ಲಿ ಒಂದು ಸಾಂಸ್ಕೃತಿಕ ಪರಂಪರೆಯ ಧ್ವನಿ ಇರುವುದನ್ನು ಗಮನಿಸಬಹುದು. ನೇಕಾರಿಕಾ ವೃತ್ತಿಯಲ್ಲಿ ಮೊದಲಿಗೆಲ್ಲ ಯಜಮಾನ ಪರಂಪರೆಯಿದ್ದದ್ದು ಇತ್ತೀಚೆಗೆ ಪವರ್ ಲೂಮ್ ಮತ್ತು ಮಿಲ್ ಗಳು ಹಲವಾರು ಸುಧಾರಿತ ಯಂತ್ರಗಳು ಬಂದ ಬಳಿಕ ದುಡಿಸಿಕೊಳ್ಳುವ ಗತ್ತುಗಾರಿಕೆ ಬೆಳೆದು ಈ ಯಜಮಾನ ಸಂಸ್ಕೃತಿ ಕಾಣೆಯಾಗುತ್ತ ಮಾಲಿಕ ಹಾಗೂ ಕಾರ್ಮಿಕ ಸಂಬಂಧವೆ ಪ್ರಧಾನವಾಗಿ ಸಂಘರ್ಷದ ಹಂತಕ್ಕೆ ತಲುಪಿದ್ದೇವೆ.

ಯಜಮಾನ ಎಂದಾಗ ಒಂದು ಮನೆ ಅಥವಾ ಒಂದು ಸಮಾಜ, ಒಂದು ಜನಾಂಗವನ್ನೆ ಮುನ್ನಡೆಸಬಹುದಾದ ಜವಾಬ್ದಾರಿ ಹೊಂದಿದವನಾಗಿರುತ್ತಾನೆ. ಅಯಾ ಮನೆ, ಸಮಾಜ, ಜನಾಂಗದ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ಅದರ ಸಂಪೂರ್ಣ ಹೊಣೆ ಹೊತ್ತವನಾಗಿ ಆ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರಬೇಕಾಗುತ್ತದೆ. ಯಜಮಾನನಲ್ಲಿ ಕಳಕಳಿ ಅಂತಃಕರಣ ಇರುತ್ತದೆ. ಆದರೆ ಮಾಲಿಕನಲ್ಲಿ ಅದೆಲ್ಲ ಇರಲಿಕ್ಕೆ ಸಾಧ್ಯವಿಲ್ಲ. ಆತ ಶ್ರಮವನ್ನು ಮೌಲ್ಯಕ್ಕೆ ಖರೀದಿಸುವವ ಮಾತ್ರನಾಗಿ ದುಡಿದವರಿಗೆ ಅವರ ಕೂಲಿ ಕೊಟ್ಟರೆ ಆ ಸಂಬಂಧ ಮುಗಿಯಿತು, ಅದು ಅವನಿಗೆ ಸಾಲುತ್ತದೊ ಇಲ್ಲವೋ ಅವನ ಸಮಸ್ಯೆಗಳೇನು ಸುಃಖ ದುಃಖಗಳೇನು ಎನ್ನುವುದರ ಬಗ್ಗೆ ಮಾಲಿಕ ತಲೆಕೆಡಸಿಕೊಳ್ಳಲಾರೆ.

ಮೊದಲಿಗೆಲ್ಲ ನೇಕಾರರಲ್ಲಿ ಯಜಮಾನ ಸಂಸ್ಕೃತಿ ಇತ್ತೇ ಹೊರತು ಈ ಮಾಲಿಕ ಕಾರ್ಮಿಕ ಸಂಬಂಧವಿರಲಿಲ್ಲ. ಅಂತೆಯೇ ನೇಕರರಲ್ಲಿ ಸಾಕಷ್ಟು ಕಡೆ ಅವಿಭಕ್ತ ಕುಟುಂಬಗಳಿರುವುದನ್ನು ಮತ್ತು ಸುಮಧುರ ಸಂಬಂಧಗಳೀರುವುದನ್ನು ಕಾಣುತ್ತೇವೆ.

ಈ ಯಜಮಾನ ಸಂಸ್ಕೃತಿಯಲ್ಲಿ ನೇಕಾರಿಕಾ ವೃತ್ತಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಆ ಯಜಮಾನ ವಿಶೇಷವಾದ ಹಬ್ಬ ಹರಿದಿನಗಳಲ್ಲಿ ತನ್ನಲ್ಲಿ ನೇಯುವ ನೇಕಾರರಿಗೆ ಹೊಸ ಬಟ್ಟೆ ಬೆಲ್ಲ ಬೇಳೆ ಅಥವಾ ಖುಷಿಯ ರೂಪದಲ್ಲಿ ಹಣ ಕೊಡುವ ಪದ್ಧತಿಯಿತ್ತು. ನೇಕಾರರ ವಾಸಕ್ಕೆ ಮನೆಗಳಿಲ್ಲದಿದ್ದರೆ ಮನೆಯಲ್ಲಿ ನೀಡುತ್ತಿದ್ದರು. ಇದು ನೇಕಾರ ಮತ್ತು ಯಜಮಾನರ ನಡುವಿನ ಸೌಹಾರ್ದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಇದೆಲ್ಲ ಕಾಣೆಯಾಗಿ ಕೇವಲ ದುಡಿಸಿಕೊಳ್ಳುವವ ದುಡಿಯುವವ ಎನ್ನುವ ಹಂತದಲ್ಲಿ ಆ ಸಂಬಂಧ ಉಳಿದಿದೆ.

ಯಜಮಾನ, ಮಾಲಿಕ ಮತ್ತು ಮಾಸ್ಟರ ಎನ್ನುವ ಪದಗಳಿಗೆ ಮೇಲ್ನೋಟದಲ್ಲಿ ಒಂದೇ ಅರ್ಥವಿರುವಂತೆ ಕಂಡುಬಂದರೂ ಸೂಕ್ಷ್ಮವಾಗಿ ಗಮನಿಸಿದರೆ ಅವುಗಳ ಧ್ವನಿರ್ಥದಲ್ಲಿರುವ ವ್ಯತ್ಯಾಸವನ್ನು ಗುರುತಿಸಬಹುದು. ಈ ಮೂರು ಶಬ್ದಗಳು ಬೇರೆ ಬೇರೆ ಭಾಷೆಗಳಿಂದ ಬಂದಿದೆ. ಇವುಗಳನ್ನ ಒಂದೆಡೆಯಿಟ್ಟುಕೊಂಡು ತುಲನೆ ಮಾಡಿದಾಗ ಇವುಗಳ ಸ್ಪಷ್ಟ ಸ್ವರೂಪ ನಮ್ಮೆದುರು ನಿಲ್ಲುತ್ತದೆ.

ಯಜಮಾನ ಸಂಸ್ಕೃತ ಮೂಲವಾದ ಈ ಶಬ್ದನಮ್ಮಲ್ಲಿ ಹೆಚ್ಚು ಸಾರ್ವತ್ರಿಕ ಬಳಕೆಯಲ್ಲಿದೆ. ಸಹೃದಯತೆ, ಕುಟುಂಬದ ಹಿರಿಯ ಮನುಷ್ಯ ಗೌರವಾನ್ವಿತ ವ್ಯಕ್ತಿಯಾಗಿ ಕಂಡುಬರುತ್ತಾನೆ. ಮಾಲಿಕ ಶಬ್ದ ಅರಬ್ಬಿ ಮೂಲದಿಂದ ಬಂದಿದ್ದಾಗಿ ಮತ್ತು ಅದರ ಬಳಕೆ ಅಥವಾ ಕುರಿತಂತೆ ಈಗಾಗಲೇ ಹೇಳಲಾಗಿದೆ. ಮಾಸ್ಟರ್ ಎನ್ನುವ ಪದ ಆಂಗ್ಲ ಭಾಷೆಯಾಗಿ ಮಾಸ್ಟರ್ ವೀವರ್ಸ್ ಎಂದು ಇತ್ತೀಚಿಗೆ ಹೆಚ್ಚಾಗಿ ಬಳಕೆಯಲ್ಲಿ ಬಂದಿದೆ ಇದು ಕೂಡಾ ಯಜಮಾನ ಎನ್ನುವ ಶಬ್ದಕ್ಕೆ ಸಾಮ್ಯತೆ ಪಡೆದುಕೊಂಡಿದೆಯಾದರು ಆದಕ್ಕಿಂತಲೂ ಒಮದಿಷ್ಟು ಮುಂದಾಗಿ ಶಿಸ್ತನ್ನು ರೂಢಿಸುವವ ಶಿಕ್ಷಕ ದಂಡಿಸುವವ ಎನ್ನುವುದರ ಜೊತೆಗೆ ಆ ವೃತ್ತಿಯಲ್ಲಿ ಪಾರಂಗತನಾದವ ಎನ್ನುವ ಅರ್ಥವನ್ನೂ ಧ್ವನಿಸುತ್ತದೆ. ಆದರೆ ಮಾಸ್ಟರ್ ಮೀವರ್ಸ್ ಎನ್ನುವ ಶಬ್ದ ಮೇಲಿನ ಅರ್ಥಕ್ಕಿಂತ ಮಾಲಿಕ ಎನ್ನುವ ಅರ್ಥದಲ್ಲಿಯೆ ಹೆಚ್ಚು ಬಳಕೆಯಲ್ಲಿದೆ. ಬಂಡವಾಳ ಹೊಂದಿರುವ ಎನ್ನುವುದನ್ನೆ ಧ್ವನಿಸುತ್ತದೆ.

ಇವುಗಳಿಗಿಂತಲೂ ಭಿನ್ನವಾಗಿ ತಮ್ಮ ಭಾಗದಲ್ಲಿ ಧಣಿ ಸಂಸ್ಕೃತಿಯಿದೆ ಹಣಯಿರುವವರನ್ನು ದೊಡ್ಡ ಜಮೀನುದಾರರನ್ನು ಅಥವಾ ತನ್ನ ಕೈಯಲ್ಲಿ ಕೆಲಸ ಮಾಡುವವರನ್ನು ದುಡಿಸಿಕೊಳ್ಳುವವನನ್ನು ಧಣಿ ಎಂದು ಕರೆಯಲಾಗುತ್ತಿದೆ. ನಾವು ಹಾಸ್ಯಕ್ಕಾಗಿ ಅವನನ್ನು ದಣಿಯಲಾರದವನೇ ಧಣಿಯಾಗುತ್ತಾನೆ ಎನ್ನುತ್ತೇವೆ. ನಮ್ಮಲ್ಲಿಯ ನೇಕಾರರು ತಮಗೆ ದುಡಿಯಲು ಅವಕಾಶ ಮಾಡಿದವನಿಗೆ ಯಜಮಾನ. ಮಾಲಿಕ ಅಥವಾ ಮಾಸ್ಟರ್ ಎನ್ನುವುದಕ್ಕಿಂತಲು ಹೆಚ್ಚಾಗಿ ಸಾಹುಕಾರ ಧಣಿ ಎಂದೇ ಸಂಬೋಧಿಸುವುದು ವಾಡಿಕೆ. ಈ ಅನುಭವದ ಹಿನ್ನೆಲೆಯಲ್ಲಿ ನಮ್ಮ ಖ್ಯಾತ ನಾಟಕಕಾರರಾದ ಪಿ.ಬಿ ಧುತ್ತರಗಿಯವರು ಸಂಪತ್ತಿಗೆ ಸವಾಲ್ ನಾಟಕ ರಚಸಿದ್ದು, ಸಧ್ಯದ ಪರಿಸ್ಥಿತಿಯಲ್ಲಿ ಈ ಸಾಹುಕಾರ, ಧಣಿ ಸಂಸ್ಕೃತಿ ಕೇವಲ ಹಳ್ಳಿಗಳಲ್ಲಿ ಮಾತ್ರ ಉಳಿದಿದೆ. ನಾಗರಿಕತೆ ಬೆಳೆದಂತೆ ನಗರದಲ್ಲಿ ಕೆಲಸಗಾರರ ಕೊರತೆ ಮತ್ತು ಅವರ ಮಹತ್ವ ಹೆಚ್ಚಿದಂತೆಲ್ಲ ದೈನ್ಯತೆ ಅಥವಾ ದುಡಿಸಿಕೊಳ್ಳುವ ಅಹಂಕಾರದ ಭಾವ ಕಡೆಮೆಯಾಗುತ್ತಾ ಸಮಾನತೆಯ ಭಾವಕ್ಕೆ ಬರತೊಡಗಿದೆ ಇಂದು ಎಲ್ಲ ಕ್ಷೇತ್ರಗಳಲ್ಲಿಯು ಕೆಲಸ ಮಾಡುವವರ ಕೊರತೆ ಇರುವುದನ್ನು ಕಾಣುತ್ತೇವೆ. ಕೈಮಗ್ಗಗಳಿಗಾಯಿತು. ಇಲ್ಲವೆ ವಿದ್ಯುತ್ ಮಗ್ಗಗಳಿಗೆ ಆಯಿತು. ದುಡಿಯುವವರು ದೊರೆಯುವುದೆ ಕಷ್ಟವಾಗಿದೆ. ಹಾಗಾಗಿ ಸಾಕಷ್ಟು ಮಗ್ಗಗಳು ಖಾಲಿಬಿದ್ದಿವೆ ನೇಕಾರಿಕೆಯನ್ನು ಹೊಸದಾಸಗಿ ಕಲಿಯಬೇಕೆನ್ನುವರೂ ಕಡಿಮೆಯಾಗಿದ್ದಾರೆ. ಬೇರೆ ಬೇರೆ ಸರಳವಾದ ವೃತ್ತಿಯ ಕಡೆ ಎಲ್ಲರೂ ಮುಖ ಮಾಡಿದ್ದಾರೆ. ಎಷ್ಟೇ ಬಾಕಿ ಕೊಡುತ್ತೇನೆಂದರೂ ನೇಕಾರರು ಸಿಗುವುದಿಲ್ಲ. ಯಜಮಾನರೆ ಇಂದು ನೇಕಾರರಾಗಿ ದುಡಿಯಬೇಕಾದ ಅನಿವಾರ್ಯತೆಯಿದೆ.

ಸಾಕಷ್ಟು ಬಾಕಿ ಪಡೆದ ನೇಕಾರರು ಯಜಮಾನನಿಗೆ ಕೈಕೊಟ್ಟು ಮತ್ತೊಂದು ಊರಿಗೆ ಹೋಗಿ ಬಿಡುವ ಪ್ರಸಂಗಗಳಿವೆ ಇದರ ಜೊತೆಗೆ ಯಜಮಾನನಿಗೆ ಕಚ್ಚಾಬಂಡವಾಳದ ಬೆಲೆ ಒಂದು ಕಡೆಯದಾರ ಸಿದ್ಧವಾದ ಬಟ್ಟೆಗೆ ಬೆಲೆಯೇ ಇಲ್ಲದಂತಾಗಿ ಕೈಗೆ ಬಂದಂತೆ ಮಾರಿಬಿಡಬೇಕಾದ ಸಂದರ್ಭವಿದೆ. ಖರೀದಿಸಿದ ಕಚ್ಚಾ ಬಂಡವಾಳದಲ್ಲಿ ಮೋಸವಾಗಿ ದೋಷಪೂರ್ಣ ನೂಲು ರೇಶ್ಮೆದೊರೆತು ಅಥವಾ ಕಳಪೆ ಬಣ್ಣ ಖರೀದಿಸಿ ಬಟ್ಟೆಯ ಮಾರುಕಟ್ಟೆ ಕಳೆದುಕೊಳ್ಳುವ ಭೀತಿ ಹೀಗೆ ಇವು ಯಜಮಾನನ ಹತ್ತು ಹಲವಾರು ಸಮಸ್ಯೆಗಳು.

ನೇಕಾರರ ಸಮಸ್ಯೆಗಳು

ಯಜಮಾನನ ಸಮಸ್ಯೆಗಳು ಒಂದು ರೀತಿಯಲ್ಲಿದ್ದರೆ ನೇಕಾರರ ಸಮಸ್ಯೆಗಳೇ ಬೇರೆಯಾಗಿ ಮತ್ತೊಂದು ರೀತಿಯಲ್ಲಿವೆ ನಾನೇ ಒಂದು ಹಾಡಿನಲ್ಲಿ ಬರೆದಂತೆ ಎಳೆಗಿಂತ ಸಣ್ಣಾಗಿ ಮುಗಿಲುದ್ದ ನೆಯ್ದರೂ ಬಟ್ಟೆಯನ್ನೇ ಕಾಣದೆ ಬೆತ್ತಲಾದ ಜನ ನಾವು ಎಂದಿರುವುದು ನನ್ನ ನೇಕಾರಿಕಾ ವೃತ್ತಿಯಲ್ಲಿದ್ದಾಗಿನ ಅನುಭವವಾಗಿದೆ. ನೇಕಾರನ ಹೆಂಡತಿ ಬೆತ್ತಲೆ ಎನ್ನುವ ಗಾದೆಯೂ ಇದೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದೆ.

ನೇಕಾರನಿಗೆ ದುಡಿಮೆಯ ಸಮಯದ ನಿಗದಿಯಲ್ಲಿ ಅವನು ಬೆಳಗು ಮುಂಜಾನೆಯಿಂದ ರಾತ್ರಿ ಹನ್ನೇರಡರವರೆಗಾದರೂ ನೇಯ ಬೇಕಾಗುತ್ತದೆ. ನಾವೆಲ್ಲ ಒಂದೊಂದು ದಿನ ಬೆಳಗಾಗುವವರೆಗೂ ಕಂದೀಲಿನ ಬೆಳಕಿನಲ್ಲಿ ನೆಯ್ದವರಾಗಿದ್ದೇವೆ. ಕಣ್ಣಿಗೆ ಕಾಣಲಾರದಷ್ಟು ಸೂಕ್ಷ್ಮವಾದ ರೇಶ್ಮೆ ಎಳೆ ಲಾಳಿಯಲ್ಲಿ ಏನಾದರೂ ದೋಷ ಉಂಟಾದರೆ ಸಾಕು ನೇಯುವವನಿಗೆ ಗೊತ್ತಾಗದಂತೆ ಒಮ್ಮಿಗೆ ನೂರಾರು ಎಳೆಗಳು ಕಿತ್ತು ಹೋಗುತ್ತವೆ. ಅದನ್ನು ಸರಿಪಡಿಸಿಕೊಳ್ಳಲಿಕ್ಕೆ ಒಂದೊಂದು ದಿನವೇ ಬೇಕಾಗುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಕೂಲಿ ಇಲ್ಲವೆ ಭತ್ತೆ ಸಿಗುವುದಿಲ್ಲ. ಸಮಯಕ್ಕೆ ಸರಿಯಾಗಿ ನೆಯ್ಗೆಯಾಗದ ಹೋದರೆ ಅವನಿಗೆ ಬರುವ ಕೂಲಿಯೂ ಕೈತಪ್ಪಿ ಉಪವಾಸವೇ ಗತಿಯಾಗುತ್ತದೆ.

ಇಷ್ಟೆಲ್ಲ ಕಷ್ಟಪಟ್ಟು ದುಡಿದರೂ ಅವನಿಗೆ ಸಿಗುವ ಕೂಲಿ ಒಬ್ಬ ಕಟ್ಟಡ ಕಟ್ಟುವ ಮೇಸ್ತ್ರಿಯ ಕೂಲಿಗಿಂತಲೂ ಕಡಿಮೆಯಾಗಿರುತ್ತದೆ. ಇದರಿಂದ ಅವನು ಸಾಲುಗಾರನಾಗುತ್ತ ಕೊನೆಗೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳಬೇಕು. ಇಲ್ಲವೆ ಬೇರೆಡೆ ಹೋಗಿ ಬೇರೆ ವೃತ್ತಿ ಅವಲಂಬಿಸಬೇಕು. ಈ ಸಮಸ್ಯೆಯಿಂದಾಗಿಯೇ ನೇಕಾರರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿಯೇ ಯಜಮಾನ ಮತ್ತು ನೇಕಾರರ ನಡುವೆ ಕೂಲಿಯ ವಿಷಯಕ್ಕೆ ಆಗಾಗ ಸಂಘರ್ಷ ನಡೆಯುವುದುಂಟು.

ಇಂದಿಗೂ ನಮ್ಮ ಕೈಮಗ್ಗದ ನೇಕಾರರು ಕೆಲವೊಂದು ಭಾಗದಲ್ಲಿ ದಿನಕ್ಕೆ ಕೇವಲ ರೂ ೨೦ ಅಥವಾ ೩೦ ರೂ.ಗಳಲ್ಲಿ ಜೀವನ ಕಳೆಯುತ್ತಿರುವವರನ್ನು ಕಾಣಬಹುದಾಗಿದೆ. ಇತ್ತೀಚಿನ ಒಂದು ಅಧ್ಯಯನ ದ ಪ್ರಕಾರ ನಮ್ಮ ದೇಶದಲ್ಲಿ ಹಳ್ಳಿಯ ಭಾಗದಲ್ಲಿ ಶೇ.೩೦ರಷ್ಟು ಜನ ಕೇವಲ ೨೦ ರೂ.ಗಳಲ್ಲಿ ದಿನದ ಜೀವನ ಕಳೆಯುವವರಿದ್ದಾರೆ ಎನ್ನುವುದರಲ್ಲಿ ಈ ನೇಕಾರರು ಸೇರಿದ್ದಾರೆ ಅಂಥವರಿಗೆ ಬೇರೆ ಹೊರ ಜಗತ್ತಿನ ಅರಿವಿಲ್ಲ ಆ ವೃತ್ತಿಯನ್ನು ಬಿಟ್ಟು ಬೇರೆ ಬರುವುದಿಲ್ಲ ಅನಿವಾರ್ಯವಾಗಿ ಅದಕ್ಕೆ ಅಂಟಿಕೊಂಡವರಿದ್ದಾರೆ. ಶೈಕ್ಷಣಿಕವಾಗಿಯೂ ಅವರು ಮುಂದೆಬರಲು ಪ್ರಯತ್ನಿಸಿಲ್ಲ ಕನಿಷ್ಠ ಮೂಲಭೂತ ಸೌಲಭ್ಯಗಳನ್ನೂ ಪಡೆಯದೆ ಬದುಕು ಕಳೆಯುತ್ತಿದ್ದಾರೆ ಸರ್ಕಾರದ ಸವಲತ್ತುಗಳಂತೂ ಇವರಿಗೆ ಕೇವಲ ಪತ್ರಿಕೆಯ ಸುದ್ದಿಗಳಾಗಿವೆ. ಯಾವುದೋ ಒಂದು ದೊಡ್ಡ ಯೋಜನೆಯ ಹೆಸರಿನಲ್ಲಿ ನೇಕಾರರಿಗೆ ಮೀಸಲಿಟ್ಟ ಹಣ ಬಳಕೆ ಮಾಡಿ ಅದು ವಿಫಲವಾಗಿ ಸರಕಾರದ ಸಾಧನೆಯ ಪಟ್ಟಿಗೆ ಸೇರಿಬಿಡುತ್ತದೆ. ಬಡ ನೇಕರನ ಗುಡಿಸಲಿಗೆ ಒಂದು ಪೈಸೆಯೂ ತಲುಪುವುದಿಲ್ಲ ಅದರಲ್ಲಿಯೂ ಈ ಸರಕಾರದ ಯೋಜನೆಗಳು ಬಕಾಸುರನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎನ್ನುವಂತಿವೆ ಅವು ಯಾರಿಗೆ ಎಷ್ಟರ ಮಟ್ಟಿಗೆ ಮುಟ್ಟುವವೊ ತಿಳಿಯದು. ಹೀಗೆ ಒಂದು ಕಡೆ ಯಜಮಾನ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದರೆ ಇನ್ನೊಂದೆಡೆ ನೇಕಾರ ಹತ್ತಾರು ಸಮಸ್ಯೆಗಳಲ್ಲಿ ನರಳುತ್ತಿದ್ದಾನೆ.

ಸಮಸ್ಯೆಯ ಪರಿಹಾರಕ್ಕೆ ಸಹಕಾರ ಸಂಘಗಳು ಮತ್ತು ನಿಗಮಗಳು

ನೇಕಾರ ಮತ್ತು ಮಾಲೀಕರ ಸಮಸ್ಯೆಗಳು ಒಟ್ಟಿಗೆ ಬಗೆಹರಿಯಬೇಕು ಸರ್ವರಿಗೂ ಸಮಪಾಲು ಸಮಬಾಳು ಎನ್ನುವಂತಾಗಬೇಕು. ದುಡಿಸಿಕೊಳ್ಳುವವ ದುಡಿಯುವವ ಎನ್ನುವ ಭಾವನೆಯನ್ನು ಅಳಿಸಿ ಹಾಕಬೇಕೆಂದು ಕೈಮಗ್ಗ ನೇಕಾರ ಸಹಕಾರ ಸಂಘಗಳು ನಂತರ ವಿದ್ಯುತ್ ಮಗ್ಗದ ನೇಕಾರ ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದವು ಆದರೆ ಇವು ಸಾಕಷ್ಟು ಸಂಖ್ಯೆಯಲ್ಲಿ ಬೆಳೆದು ಬರಲಿಲ್ಲ. ಇದರಲ್ಲಿ ಕೆಲವು ಸಹಕಾರ ಸಂಘಗಳು ಕೇವಲೊ ಒಂದೊಂದು ಕುಟುಂಬಕ್ಕೆ ಮೀಸಲಾದರೆ, ಇನ್ನು ಕೆಲವು ಸ್ವಾರ್ಥಕ್ಕೆ ಬಲಿಯಾಗಿ ಭ್ರಷ್ಟಾಚಾರದಲ್ಲಿ ಮುಳುಗಿ ಕಣ್ಮುಚ್ಚಿದವು ಬಾಗಲಕೋಟೆ, ವಿಜಾಪೂರ, ಬೆಳಗಾವಿ ಜಿಲ್ಲೆಗಳಲ್ಲಿ ಈ ಸಹಕಾರ ಸಂಘಗಳು ಹೆಚ್ಚಾಗಿರುವುದನ್ನು ಕಾಣುತ್ತೇವೆ.

ನಮ್ಮ ನೇಕಾರ ಸಹಕಾರ ಸಂಘಗಳು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದಕ್ಕೆ ಈ ಅಂಕಿ ಸಂಖ್ಯೆಗಳೇ ಸಾಕ್ಷಿ ನೀಡುತ್ತವೆ ರಾಜ್ಯದಲ್ಲಿ ಒಟ್ಟು ೫೭೨ ಕೈಮಗ್ಗ ಸಹಕಾರ ಸಂಘಗಳಲ್ಲಿ ೩೪೪ ಮಾತ್ರ ಕ್ರಿಯಾಶೀಲವಾಗಿವೆ. ಉಳಿದ ೨೨೮ ಸಂಘಗಳು ಹೆಸರಿಗೆ ಮಾತ್ರ ಇವೆ. ಕ್ರಿಯಾಶೀಲವಾಗಿವೆ ಎಂದು ಹೇಳುವುಗಳಲ್ಲಿಯೂ ಎಷ್ಟರಮಟ್ಟಿಗೆ ಸಮರ್ಥವಾಗಿವೆ ಎನ್ನುವುದನ್ನು ಹೇಳಲಿಕ್ಕಾಗದು. ಅದೇ ರೀತಿ ೧೪೯ ವಿದ್ಯುತ್ ಮಗ್ಗಗಳ ಸಹಕಾರ ಸಂಘಗಳಲ್ಲಿ ೯೭ ಮಾತ್ರ ಕಾರ್ಯನಿರತವಾಗಿವೆ. ಇದರಲ್ಲಿ ಶೇ.೫೦ರಷ್ಟು ಹೆಸರಿಗೆ ಮಾತ್ರ ಉಳಿದಿವೆ ಎಂದರೆ ಎಂತಹ ವಿಚಿತ್ರ.

ಶಿವರಾಮನ್ ಸಮಿತಿಯ ೧೯೭೩ ರವರದಿಯ ಪ್ರಕಾರ ರಚನೆಗೊಂಡ ಕೈಮಗ್ಗ ಅಭಿವೃದ್ದಿ ನಿಗಮವನ್ನು ಮೊದಲಿಗೆ ಸರಕಾರ ನಿರ್ವಹಿಸಿ ನಂತರ ಅದನ್ನು ಸಹಕಾರ ಸಂಘವನ್ನಾಗಿ ಪರಿವರ್ತಿಸಿ ನೇಕಾರರ ಕೈಗೆ ಅದರ ಜವಾಬ್ದಾರಿ ವಹಿಸಿಕೊಡಬೇಕೆನ್ನುವುದಿತ್ತು. ಆದರೆ ಬಹುತೇಕ ಸಹಕಾರ ಸಂಘಟನೆಯವರೂ ಅದನ್ನು ವಿರೋಧಿಸಿದರು ಅಧಿಕಾರಿಗಳೂ ಬಿಟ್ಟು ಕೊಡಲು ಮನಸ್ಸು ಮಾಡಲಿಲ್ಲ. ಸರಕಾರವೂ ಅದಕ್ಕೆ ಆಸಕ್ತಿವಹಿಸಲಿಲ್ಲ.

ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ ಆರಂಭದಲ್ಲಿ ನೇಕಾಕರಿಗೆ ಸಾಕಷ್ಟು ಉದ್ಯೋಗ ಒದಗಿಸಿತು. ಸರಿಯಾಗಿ ಕಾರ್ಯನಿರ್ವಹಿಸಿತು. ಅದರಲ್ಲಿಯೇ ನೇಕಾರ ಖಾತೆದಾರರ ಸಂಖ್ಯೆ ಒಂದು ಹಂತದಲ್ಲಿ ೪೫ ಸಾರದವರೆಗೆ ತಲುಪಿತು. ನಂತರ ಅದರ ನೌಕರರು ಅಧಿಕಾರಿಗಳು ಅದನ್ನು ತಮ್ಮಸ್ವಾರ್ಥಕ್ಕೆ ಬಳಸಿಕೊಳ್ಳತೊಡಗಿದರು. ಅದರಲ್ಲಿ ರಾಜಕೀಯ ವ್ಯಕ್ತಿಗಳು ಪಾಲುದಾರರಾಗಿ ನೇಕಾರರ ಹೆಸರಿನಲ್ಲಿ ಏನೆಲ್ಲ ನಡೆದರೂ ಅದು ನೇಕಾರರಿಗೆ ತಲುಪದಾಯಿತು. ಅದರಲ್ಲಿ ದುಡಿಯುವ ನೇಕಾರರನ್ನು ಮಾಸ್ಟರ್ ವೀವರ್ಸ ಹಿಡಿತದಿಂದ ತಪ್ಪಿಸಿ ಸ್ವತಂತ್ರಗೊಳಿಸಬೇಕೆನ್ನುವುದಿತ್ತು. ಆದರೆ ಸಾಹುಕಾರನ ಕೈಯಲ್ಲಿ ದುಡಿಯುವುದು ಬೇಕು ಇಲ್ಲಿ ದುಡಿಯುವುದು ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು. ಹೋಗು ಎನ್ನಲಾರದ ಹೊಗೆ ಹಾಕಿದಂತೆ ನೇಕಾರರಿಗೆ ತುಂಬಾ ತೊಂದರೆ ಕೊಡತೊಡಗಿದರು. ದುಡಿಯುವುದಕ್ಕೆ ಸರಿಯಾಗಿ ಬಂಡವಾಳ ಪೂರೈಸಲಿಲ್ಲ ದುಡಿದದ್ದಕ್ಕೆ ಸರಿಯಾಗಿ ಮಜೂರಿ ನೀಡಲಿಲ್ಲ. ಇದರಿಂದಾಗಿ ನೇಕಾರರ ಸಂಖ್ಯೆ ಇಳಿಮುಖವಾಗುತ್ತ ಈಗ ಆ ಸಂಖ್ಯೆ ಕೇವಲ ೮ ಸಾವಿರಕ್ಕೆ ತಲುಪಿದೆ ಎನ್ನುವುದೆ ಅದರ ವಿಫಲತೆಗೆ ಉದಾಹರಣೆಯಾಗಿದೆ.

ವಿದ್ಯುತ್ ಮಗ್ಗದ ನೇಕಾರರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ವಿದ್ಯುತ್ ಮಗ್ಗಗಳ ಅಭಿವೃದ್ದಿ ನಿಗಮ ಸ್ಥಾಪಿಸಲಾಯಿತು. ಇದು ರಾಜ್ಯದ ವಿದ್ಯುತ್ ಮಗ್ಗಗಳ ಘಟಕಗಳೀಗೆ ಹಾಗೂ ವಿದ್ಯುತ್ ಮಗ್ಗಗಳ ಸಹಕಾರ ಸಂಘಗಳಿಗೆ ಮಾರುಕಟ್ಟೆ ಒದಗಿಸುವುದು ಸುಧಾರಿತ ತರಬೇತಿ ಇತ್ಯಾದಿ ಉತ್ತೇಜನ ಯೋಜನೆಗಳನ್ನು ರೂಪಿಸುವುದಾಗಿತ್ತು. ಆದರೆ ಆರಂಭದಲ್ಲಿ ಸರಕಾರದ ಸಮವಸ್ತ್ರ ಯೋಜನೆಯ ಆದೇಶವನ್ನು ಸರಕಾರದಿಂದ ಪಡೆದು ತನ್ನ ಸದಸ್ಯ ಘಟಕಗಳಿಗೆ ಬಟ್ಟೆ ಸರಬರಾಜು ಮಾಡಲು ಅವಕಾಶ ಒದಗಿಸುತ್ತಿತ್ತು. ಮೊದಲಿಗೆಲ್ಲ ಉತ್ತಮವಾಗಿ ಕಾರ್ಯನಿವರಹಿಸಿದ ಈ ಸಂಸ್ಥೆ ನಂತರ ಅದರಲ್ಲಿನ ಅಧಿಕಾರಿಗಳ ಅಧ್ಯಕ್ಷತೆಯಿಂದ ವರ್ಷವಾದರೂ ಬಟ್ಟೆ ಪೂರೈಸಿದವರಿಗೆ ಹಣ ಪಾವತಿಸದೆ ಗೋಳಾಡಿಸುವುದು ಮತ್ತು ವಿನಾಕಾರಣ ದಂಡ ವಗೈರೆ ಹಾಕಿ ಸತಾಯಿಸುತ್ತ ಅದರಿಂದ ಬೇಸತ್ತು ದೂರ ಉಳಿಯುವಂತೆ ಮಾಡುತ್ತ ಬಂದರು. ಹೀಗಾಗಿ ಈಗ ಆ ಸಂಸ್ಥೆಯೂ ನೇಕಾರರ ಪಾಲಿಗೆ ಸಮರ್ಥವಾಗಿ ಕಾರ್ಯನಿರ್ವಹಿಸಲಾರದ್ದಾಗಿದೆ. ಶೇ.೫ರಷ್ಟು ನೇಕಾರರಿಗೆ ಅದರಲ್ಲಿಯೂ ನೇರವಾಗಿ ನೇಕಾರರಿಗೆ ಸಹಕಾರಿಯಾದ ಉದಾಹರಣೆಯಿಲ್ಲ.

ನಮ್ಮ ಜನಾಂಗದ ನೇಕಾರರು ತಮ್ಮ ಕುಲವೃತ್ತಿಯನ್ನು ಬಿಟ್ಟು ಕೆಲವರು ಬೇರೇನೂ ಮಾಡಲಿಕ್ಕೆ ಸಾಧ್ಯವಾಗದೆ ಅದರಲ್ಲಿಯೆ ಒದ್ದಾಡುತ್ತಿದ್ದರೆ ಮತ್ತೆ ಕೆಲವರು ನಿರ್ದಾಕ್ಷಿಣ್ಯವಾಗಿ ಆ ವೃತ್ತಿಯನ್ನು ಕೈಬಿಟ್ಟು ಬೇರೆ ವೃತ್ತಿಯನ್ನು ಅವಲಂಬಿಸಿಕೊಂಡು ಯಶಸ್ವಿಯಾಗಿದ್ದಾರೆ. ಬಹಳಷ್ಟು ಜನ ಸರಿಯಾದ ಶಿಕ್ಷಣ ಪಡೆದು ನೌಕರಿ ಅವಲಂಬಿಸುವುದೇ ಸುರಕ್ಷಿತ ಎಂದುಕೊಂಡು ಆ ದಿಕ್ಕಿನಲ್ಲಿಯೇ ಪ್ರಯತ್ನ ನಡೆಸಿರುವುದು ಸಾಮಾನ್ಯವಾಗಿದೆ.

ಈ ಕಾರಣಕ್ಕಾಗಿ ಇಂದು ನಾವು ನೇಕಾರಿಕಾ ಕುಲವೃತ್ತಿಯವರು ಎನ್ನುವವವರ ಸಂಖ್ಯೆ ಹೆಚ್ಚಾಗಿದೆಯೇ ಹೊರತು ನೇಕಾರಿಕಾ ವೃತ್ತಿಯನ್ನು ಅವಲಂಬಿಸಿದವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಾಸ್ತವ.

೯೫-೯೬ರ ಗಣತಿಯ ಪ್ರಕಾರ ರಾಜ್ಯದಲ್ಲಿ ೭೬,೬೦೫ ಕೈಮಗ್ಗಗಳಿದ್ದರೆ ಇದರ ನೇಕಾರರ ಸಂಖ್ಯೆ ೧,೮೯,೯೩೪ ಆಗಿದೆ, ವಿದ್ಯುತ್ ಮಗ್ಗಗಳು ೮೮೫೬೬ ಇದ್ದರೆ ಅದರ ನೇಕಾರರ ಸಂಖ್ಯೆ ೧.೨೭.೫೩೫ ಇರುತ್ತದೆ. ಅಂದರೆ ಒಟ್ಟು ನೇಕಾರಿಕೆ ವೃತ್ತಿಯನ್ನು ಅವಲಂಬಿಸಿದವರು ರಾಜ್ಯದಲ್ಲಿ ೩.೧೭.೪೬೯ ಇರುತ್ತಾರೆ. ಇದು ಅಧಿಕೃತ ಮಾಹಿತಿ ಆದರೆ ಕೆಲವರು ಅಂದಾಜಿನ ಪ್ರಕಾರ ರಾಜ್ಯದಲ್ಲಿ ೫ ಲಕ್ಷ ನೇಕಾರರಿದ್ದಾರೆಂದು ಹೇಳುತ್ತಾರೆ ಏನೇ ಆಗಲಿ ನಮ್ಮ ರಾಜ್ಯದ ಆರು ಕೋಟಿ ಜನ ಸಂಖ್ಯೆಯಲ್ಲಿ ನಾವು ಶೇಕಡಾ ಒಂದರಷ್ಟೂ ಇರುವುದಿಲ್ಲ.

ಇದೆಲ್ಲ ೯೫-೯೬ ಗಣತಿಯಾದರೂ ಇಂದು ಗಣತಿಯಾದರೆ ಆ ಸಂಖ್ಯೆಯಲ್ಲಿ ಹೆಚ್ಚಳವಾಗಿರಲಿಕ್ಕೆ ಸಾಧ್ಯವಿಲ್ಲ ಯಾಕೆಂದರೆ ಈಗಿನ ಪ್ರಕಾರ ಮಗ್ಗಗಳ ಸಂಖ್ಯೆ ಕಡಿಮೆಯಾಗಿವೆ ಹೊರತು ಹೆಚ್ಚಾಗಿಲ್ಲ. ದಾವಣಗೇರೆಯಂಥಹ ಪ್ರದೇಶದಲ್ಲಿ ಎಲ್ಲ ಮಿಲ್ಲುಗಳು ಮುಚ್ಚಿ ಹೋದವು. ವಿಶ್ವ ಮಾರುಕಟ್ಟೆಯನ್ನು ಎದುರಿಸಲಾರದೆ ಇಂದಿನ ಸಾಮಾನ್ಯ ನೇಕಾರರು ಬೀದಪಾಲಾಗಿದ್ದಾರೆ. ಯಜಮಾನರು ತತ್ತರಿಸಿದ್ದಾರೆ.

ಖಾದಿ ಮತ್ತು ಉಣ್ಣೆ ನೇಕಾರರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸರಕಾರವೆ ಇವರನ್ನೆಲ್ಲ ಎಷ್ಟು ದಿನ ಪೋಷಿಸಿಕೊಂಡು ಬರಲಿಕ್ಕೆ ಸಾಧ್ಯ? ಈ ಕಾರಣಕ್ಕಗಿ ಇಂದಿನ ಸಂದರ್ಭದಲ್ಲಿ ಏನಾದರೊಂದು ಪರ್ಯಾಯ ವ್ಯವಸ್ಥೆಯನ್ನು ರೂಪಿಸಲೇ ಬೇಕಾಗುತ್ತದೆ.

ಇಂತಹ ಸಂದರ್ಭದಲ್ಲಿ ಆಂಧ್ರದ ಕೆಲವು ಕೈಮಗ್ಗದವರು ಸುಪ್ರಿಂಕೋರ್ಟಿನ ಆದೇಶ ಹಿಡಿದು ಬಣ್ಣದ ಸೀರೆ ಮತ್ತು ನೂಲಿನ ಬಟ್ಟೆ ನೇಯುವುದನ್ನು ನಿಷೇಧಿಸಲು ಅಗ್ರಹಿಸುತ್ತಿದ್ದಾರೆ ಪಾಲಿಸ್ಟರ್ ಜರ್ಜತ್ , ಸಿಫಾ ಮತ್ತು ಅರ್ಟಸಿಲ್ಕಗಳನ್ನು ಶೇ.೪೫ರಷ್ಟು ಬಳಕೆ ಮಾಡಿ ನೆಯ್ದರೆ ಸಮಸ್ಯೆಯಿಲ್ಲವೆಂದು ಹೇಳುತ್ತಾರೆ. ಇದೆಲ್ಲ ಎಲ್ಲಿ ಸಾಧ್ಯ.

ಕೈಯಿಂದ ನೇಯುವ ಕುಣಿಮಗ್ಗದಿಂದ ಹಿಡಿದು ಸೆಟೆಲ್ ಪವರ್ ಲೂಮ ಜಟ್ ಲೂಮ, ಮಿಲ್ಲ ಮಗ್ಗಗಳವರೆಗೆ ನೇಕಾರಿಕೋದ್ಯಮ ಬೆಳೆದು ಬಂದಿದೆ ಒಂದು ಸಮಸ್ಯೆ ಕಳೆದುಕೊಂಡರೆ ಮತ್ತೊಂದು ಸಮಸ್ಯೆ ಎದುರಾಗುತ್ತಲೇ ಬಂದಿದೆ. ಆದರೆ ನೇಕಾರರಲ್ಲಿ ಒಕ್ಕಟ್ಟಿಲ್ಲದ ಕಾರಣ ಯಾವುದೇ ಸರಕಾರದಲ್ಲಿ ನಮ್ಮ ಸಮಸ್ಯೆ ಬಿಂಬಿತವಾಗುತ್ತಿಲ್ಲ. ಎಲ್ಲ ಒಳಪಂಗಡಗಳನ್ನು ಒಂದು ಮಾಡಿಕೊಂಡು ಅಷ್ಟೆಯಲ್ಲ ನೇಕಾರರೆಲ್ಲರೂ ನಾವು ಒಂದೇ ಎನ್ನುವ ಭಾವಲ್ಲಿ ಒಟ್ಟು ಗೂಡಿ, ಯಜಮಾನ ನೇಕಾರರ ನಡುವಿನ ತಾರತಮ್ಯ ಸಂಘರ್ಷಕ್ಕೆ ಕೈಬಿಟ್ಟು ರೈತರಿಗೆ ಯಾವ ರೀತಿಯ ಅನುಕೂಲತೆಗಳನ್ನು ಸರಕಾರ ನೀಡುತ್ತಿದೆಯೋ ಆ ರೀತಿಯಲ್ಲಿ ನೇಕಾರನಿಗೂ ದೊರೆಯುವಂತೆ ಮಾಡಬೇಕಾಗಿದೆ. ಆದರೆ ವಾಸ್ತವದಲ್ಲಿ ಯಜಮಾನ ಮತ್ತು ನೇಕಾರರು ಬೇರೆ ಬೇರೆ ಸಮಸ್ಯೆಗಳಲ್ಲಿ ಒದ್ದಾಡುತ್ತಿರುವುದರಿಂದ ಯಜಮಾನ ನೇಕಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳದೆ ದೂರವಿಟ್ಟುಕೊಂಡೆ ಬಂದಿರುವುದರಿಂದ ಇದು ಅಷ್ಟು ಸರಳವಾಗಿ ಸಾಧ್ಯವಾಗುವ ಸಂಭವವಿಲ್ಲ ಈ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸಿ ಸಂಘಟಿಸಬೇಕು ಆ ಕೆಲಸ ಆಗುತ್ತಿಲ್ಲ ಮುಂದಿನ ದಿನಗಳಲ್ಲಾದರೂ ಅದು ಸಾದ್ಯವಾದೀತೋ ಎನ್ನುವುದನ್ನು ಕಾದುನೋಡಬೇಕಿದೆ.

* * *