ಕೃಷಿ ಪ್ರಧಾಹನ ಭಾರತ ದೇಶದಲ್ಲಿ ಜವಳಿ ಉದ್ಯಮದ ಸ್ಥಾನ ಎರಡನೆಯದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಕೃಷಿ ಮತ್ತು ಜವಳಿ ಉದ್ಯಮಗಳು ಒಂದಕ್ಕೊಂದು ಪೂರಕವಾದವುಗಳಾಗಿವೆ. ದೇಶದ ಅಭಿವೃದ್ದಿಯಲ್ಲಿ ಕೃಷಿಯ ಪಾತ್ರ ಎಷ್ಟು ಮಹತ್ವವೋ ಅಷ್ಟೇ ಮಹತ್ವದ ಪಾತ್ರ ಜವಳಿ ಉದ್ಯಮದ್ದೂ ಆಗಿದೆ ಎಂದರೆ ತಪ್ಪಾಗಲಾರದು. ಕೃಷಿ ಹಾಗೂ ಜವಳಿ, ಪ್ರಗತಿ ರಥದ ಎರಡು ಗಾಲಿಗಳಿದ್ದಂತೆ. ಯಾವುದೇ ಒಂದು ಗಾಲಿ ಮುಗ್ಗರಿಸಿದರೂ ಇಡೀ ಅರ್ಥ ವ್ಯವಸ್ಥಯೇ ಗಂಡಾಂತರಕಾರಿ ಸ್ಥಿತಿಗೆ ತಲುಪುತ್ತದೆ. ಇಂತಹ ಎಷ್ಟೋ ಸನ್ನಿವೇಶಗಳನ್ನು ನಾವು ಕಂಡಿದ್ದೇವೆ. ಅವುಗಳಲ್ಲಿ ಇಲ್ಲಿ ಪ್ರತ್ಯೇಕವಾಗಿ ಉದಾಹರಿಸಿ ಹೇಳಬೇಕಾದ ಅಗತ್ಯವಿಲ್ಲ.

ಬಂಡವಾಳದ ಕೊರತೆಯನ್ನು ಎದುರಿಸುತ್ತಿರುವ ಭಾರತದಂತಹ ದೇಶಕ್ಕೆ ಸಣ್ಣ ಪ್ರಮಾಣದ ಉದ್ಯಮಗಳು ಅದರಲ್ಲೂ ಜವಳಿ ಉದ್ಯಮ (ನೇಕಾರಿಕೆ) ಆಧಾರಿತ ಕೈಗಾರಿಕೆಗಳು ವರದಾನವಾಗಿವೆ ಎಂದು ಮಹಾತ್ಮ ಗಾಂಧಿ ಅವರು ಹೇಳಿದ್ದರು. ಅದೇ ರೀತಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿನ ಕೈಗಾರಿಕೆ ಕ್ರಾಂತಿ ದೇಶದಲ್ಲಿ ಒಂದು ಬಗೆಯ ಅಲೆಗಳನ್ನೇ ಸೃಷ್ಟಿಸಿದ್ದಾಗ ಅಂದಿನ ಪ್ರಧಾನ ಜವಹರಲಾಲ ನೆಹ್ರೂ ಅವರು ಹೇಳಿದ್ದ ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. `ದೇಶವು ಕೈಗಾರೀಕರಣದತ್ತ ದಾಪುಗಾಲಿಟ್ಟಿದೆ. ಅದು ಯಶಸ್ವಿಯೂ ಆಗುತ್ತದೆ. ಆದರೆ ಅದರಿಂದ ಭಾರತದಲ್ಲಿನ ನೇಕಾರಿಕೆ ಅದರಲ್ಲೂ ಕೈಮಗ್ಗ ಉದ್ಯಮದ ಅವಸಾನವಾಗಬಾರದು’ ಎಂದಿದ್ದರು ಪಂಡಿತ್ ನೆಹ್ರೂ. ಆದರೆ ಒಂದು ಹಂತದಲ್ಲಿ ಅವಸಾನದತ್ತ ಸಾಗಿದ ನೇಕಾರಿಕೆ ಇಂದು ಬೇರೆ ಬೇರೆ ಕಾರಣಗಳಿಗಾಗಿ ಮತ್ತೆ ಚಿಗುರೊಡೆಯತೊಡಗಿದೆ. ನೇಕಾರಿಕೆ ಉದ್ಯಮವನ್ನೇ ನಂಬಿಕೊಂಡವರು. ಅದನ್ನೇ ಕುಲ ಕಸುಬುನ್ನಾಗಿಸಿಕೊಂಡು ಇಂದಿಗೂ ಉದ್ಯಮವನ್ನು ಉಳಿಸಿಕೊಂಡು ಹೋಗುತ್ತಿರುವವ ಪಾತ್ರ ಇದರಲ್ಲಿ ತುಂಬಾ ಮಹತ್ವದ್ದಾಗಿದೆ.

ಭಾರತದಲ್ಲಿನ ನೇಕಾರಿಕೆ ಸಿಂಧೂ ಸಂಸ್ಕೃತಿಯಷ್ಟೇ ಪುರಾತವಾದದ್ದಾಗಿದೆ. ಕ್ರಿ.ಶ.ಪೂರ್ವ ಒಂದನೇ ಶತಮಾನದಿಂದ ೧೮ನೇ ಶತಮಾನದವರೆಗೆ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದ ಹತ್ತಿ ಬಟ್ಟೆ ಪ್ರಪಂಚದ ಅದ್ಭುತಗಳಲ್ಲಿ ಒಂದಾಗಿತ್ತು. ಯುರೋಪ, ಆಫ್ರಿಕಾ ಮತ್ತು ಕೊಲ್ಲಿ ದೇಶಗಳ ರಾಜ ಮಹಾರಾಜರು ಮತ್ತಿತರ ಶ್ರೀಮಂತ ವರ್ಗಕ್ಕೆ ಭಾರತೀಯ ಹತ್ತಿ ಉಡುಪುಗಳು ತುಂಬಾ ಅಚ್ಚುಮೆಚ್ಚಾಗಿದ್ದವು.

ಆ ಕಾಲದಲ್ಲಿಯೇ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದ್ದ ಹತ್ತಿ ಬಟ್ಟೆಗಳು ಪ್ರಾಚೀನ ಗ್ರೀಕ್ ದೇಶಕ್ಕೆ ರಫ್ತಾಗುತ್ತಿತ್ತು. ಇದರಿಂದ ಕರ್ನಾಟಕದಲ್ಲಿನ ನೇಕಾರಿಕೆ ಉದ್ಯಮವೂ ಸಿಂಧೂ ಸಂಸ್ಕೃತಿಯಷ್ಟೇ ಹಳೆಯದು ಎಂಬುದನ್ನು ನಿಖರವಾಗಿ ಹೇಳಬಹುದು. ಅನಂತರದ ದಿನಗಳಲ್ಲಿ ಕರ್ನಾಟಕ-ಮೈಸೂರು ರಾಜ್ಯಗಳಲ್ಲಿನ ಹತ್ತಿ ಹಾಗೂ ರೇಷ್ಮೆ ವಸ್ತ್ರಗಳು ಜಗತ್ಪ್ರಸಿದ್ಧವಾಗಿ ಬ್ರಿಟಿಷರಿಂದಲೂ ಅತಿಯಾದ ಪ್ರಶಂಸೆಗೆ ಒಳಗಾಗಿದ್ದವು ಎಂಬುದನ್ನು ಯಾರೂ ಮರೆತಿಲ್ಲ. ಕರ್ನಾಟಕ ರಾಜ್ಯದಲ್ಲಿನ ನೇಕಾರಿಕೆ ಉದ್ಯಮದ ಉತ್ಪನ್ನಗಳು ಇಂದಿಗೂ ಸಹ ದೇಶ ವಿದೇಶಗಳಲ್ಲಿಯೂ ಅಚ್ಚು ಮೆಚ್ಚು. ಅದು ಮೈಸೂರು ರೇಷ್ಮೆ ಸೀರೆ ಇರಬಹುದು. ಇಳಕಲ್ ಸೀರೆಯೇ ಇರಬಹುದು. ಮೊಳಕಾಲ್ಮೂರಿನ ಸೀರೆಯೇ ಇರಬಹುದು. ಬೆಂಗಳೂರಿನ ವಿವಿಧ ವಿನ್ಯಾಸದ ಸೀರೆಯೇ ಇರಬಹುದು, ಹೀಗೆ ಹೇಳುತ್ತ ಹೋದರೆ ಕರ್ನಾಟಕ ರಾಜ್ಯದಲ್ಲಿನ ವಿವಿಧ ಪ್ರಾಂತಗಳಲ್ಲಿನ ಜವಳಿ ಮತ್ತು ನೇಕಾರಿಕೆ ಉದ್ಯಮ ತನ್ನ ವಿಶಿಷ್ಟತೆಯ ಛಾಪವನ್ನು ಮೂಡಿಸಿದೆ.

ಇಂದಿನ ವಿಷಯಕ್ಕೆ ಸೀಮಿತವಾಗಿ ಅಂದರೆ ಕರ್ನಾಟಕ ರಾಜ್ಯದಲ್ಲಿನ `ನೇಕಾರಿಕೆ ವೃತ್ತಿಯಲ್ಲಿನ ಪ್ರಾಂತೀಯ ವೈವಿಧ್ಯತೆಗಳು’ ಕುರಿತು ಹೇಳುವುದಾದರೆ `ಅನೇಕತೆಯಲ್ಲಿ ಏಕತೆ… ಏಕತೆಯೇ ಭಾರತ’ ಎನ್ನುವ ಮಾತು ರಾಜ್ಯದಲ್ಲಿನ ನೇಕಾರಿಕೆ ಉದ್ಯಮಕ್ಕೂ ಅಕ್ಷರಶಃ ಅನ್ವಯಿಸುತ್ತದೆ. ಸಹಕಾರಿ ತತ್ವಗಳೆಲ್ಲದರ ತವರಾಗಿರುವ ಕರ್ನಾಟಕದಲ್ಲಿನ ನೇಕಾರಿಕೆ ಉದ್ಮ ಸಹಕಾರ ವಲಯ, ಸ್ವತಂತ್ರ ವಲಯ ಸರಕಾರ ಪ್ರಯೋಜಿತ ವಲಯದಲ್ಲಿ ಹಂಚಿ ಹೋಗಿದೆ. ರಾಜ್ಯದ ವಿಭಿನ್ನ ಪ್ರಾಂತ್ಯಗಳಲ್ಲಿನ ನೇಕಾರಿಕೆ ಉದ್ಯಮ ತನ್ನದೇ ಆದಂತಹ ವಿಶಿಷ್ಟತೆಯನ್ನು ಹೊಂದಿದೆ. ಭಾಷಾ ಶಾಸ್ತ್ರಜ್ಞರು ಹೇಳುವಂತೆ ಜನರ ಆಡುಭಾಷೆ ಶೈಲಿ ಪ್ರತಿ ೨೦ ಕಿ.ಮೀ.ಗೆ ಬದಲಾವಣೆಯಿಂದ ಕೂಡಿದ್ದಾಗಿರುತ್ತದೆ. ಇದು ನೇಕಾರಿಕೆ ಉದ್ಯಮಕ್ಕೆ ಪೂರ್ಣವಾಗಿ ಅನ್ವಯಿಸಿದ್ದರೂ ಪ್ರಾಂತದಿಂದ ಪ್ರಾಂತಕ್ಕಂತೂ ಅನ್ವಯಿಸುತ್ತದೆ.

ಇದೀಗ ರಾಜ್ಯದಲ್ಲಿನ ಒಟ್ಟಾರೆ ನೇಕಾರಿಕೆ ಉದ್ಯಮ ಸ್ಥಿತಿಗಳತ್ತ ಕಿರುನೋಟ ಬೀರಿ ಅನಂತರ ಉದ್ಯಮದ ವೈವಿಧ್ಯತೆಗಳೇನು ಎಂಬುದನ್ನು ಗಮನಿಸೋಣ. ೧೯೯೫-೯೬ರ ಗಣತಿ ಪ್ರಕಾರ ಅಧಿಕೃತವಾಗಿ ರಾಜ್ಯದಲ್ಲಿನ ಕೈಮಗ್ಗಗಳ ಸಂಖ್ಯೆ ೭೬.೬೦೫. ಇವುಗಳಲ್ಲಿ ೧೩.೬೪೧ ರೇಷ್ಮೆ ಮಗ್ಗಗಳು, ೪೯,೩೮೪ ಹತ್ತಿ ನೂಲು ಮಗ್ಗಗಳು ಮತ್ತು ೧೩,೫೮೦ ಉಣ್ಣೆಯೂ ಸೇರಿದಂತೆ ಇತರೆ ನೂಲು ಆಧಾರಿತ ಮಗ್ಗಗಳಿವೆ. ಅದೇ ರೀತಿ ಒಂದು ಲಕ್ಷ ೫ ಸಾವಿರಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳಿವೆ. ಇವುಗಳೆಲ್ಲದರ ಮೂಲ ಧ್ಯೇಯ ಬಟ್ಟೆಯ ಉತ್ಪಾದನೆಯಾದರೂ ಅದರಲ್ಲಿ ನಾವು ಪ್ರಾಂತೀಯ ಭಿನ್ನತೆ ಮತ್ತು ವಿಶಿಷ್ಟತೆಯನ್ನು ಗಮನಿಸುತ್ತೇವೆ. ಇಂತಹ ವೈವಿಷ್ಟ್ಯಗಳಿಂದಲೇ ಯಾಂತ್ರೀಕರಣದ ಭರಾಟೆಯಲ್ಲಿಯೂ ಬಹುತೇಕ ಜವಳಿ ಸರಕುಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ.

ಇಂತಹ ವಿಶಿಷ್ಟ ಉತ್ಪನ್ನಗಳಲ್ಲಿ ಮೊಳಕಾಲ್ಮೂರಿನ ರೇಷ್ಮೆ ಸೀರೆ, ಇಳಕಲ್ಲಿನ ಕಲಾತ್ಮಕ ಸೀರೆ, ರಬಕವಿ ಬನಹಟ್ಟಿಯ ನೂಲಿನ ಸೀರೆಗಳು, ಬೆಳಗಾವಿಯ ಶಹಪುರ ಮತ್ತು ಸುಳಿಭಾವಿಯಲ್ಲಿನ ಬೆಡಗಿಣ ಸೀರೆ, ಗುಳೇದಗುಡ್ಡದ ಖಣ, ನವಲಗುಂದದ ಜಮಖಾನೆ, ರಾಷ್ಟ್ರ ಧ್ವಜ ತಯಾರಿಕೆಯಲ್ಲಿ ದೇಶದಲ್ಲಿಯೇ ಹೆಸರುವಾಸಿಯಾದ ಧಾವಾಡದ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರ, ಗದಗ ಬೆಟಗೇರಿಯಲ್ಲಿಯೂ ತಯಾರಾಗುವ ಇಳಕಲ್ ಮಾದರಿ ಸೀರೆಗಳು, ಹುಬ್ಬಳ್ಳಿ ಸೀರೆ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಯಲ್ಲಿನ ಗ್ರಾಮೀಣ ಸೊಗಡಿನ ಸೀರೆ, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ದೊಡ್ಡ ಬಳ್ಳಾಪುರದಲ್ಲಿನ ಬಗೆ ಬಗೆಯ ರೇಷ್ಮೆ ವಸ್ತ್ರಗಳು, ಫ್ಯಾಷನ್ ಸೀರೆ, ಚಾಮರಾಜ ನಗರ ಜಿಲ್ಲೆಯ ವಿವಿಧೆಡೆ ಮತ್ತು ಕೋಲಾರ ಜಿಲ್ಲೆ ಚಿಂತಾಮಣಿಯಲ್ಲಿ ತಯಾರಾಗುವ ವಿವಿಧ ಬಗೆಯ ರೇಷ್ಮೆ ವಸ್ತುರಗಳು, ಮಂಡ್ಯ ಜಿಲ್ಲೆ ಮೇಲುಕೋಟೆಸಯ ಹೆಸರಾಂತ ಪಂಚೆಗಳು, ತುಮಕೂರು ಜಿಲ್ಲೆ ತಿಪಟೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನ ವಯ್ಯರದ ಸೀರೆ, ಹೀಗೆ ಹೇಳುತ್ತ ಹೋದರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ.

ಇವೆಲ್ಲ ಉತ್ಪನ್ನಗಳು ಬೇರೆ ಬೇರೆ ರೀತಿಯಲ್ಲಿ ವಿಭಿನ್ನವಾಗಿದ್ದರೂ ಇವುಗಳ ತಯಾರಿಕೆಯಲ್ಲಿ ತೊಡಗಿದವರೆಲ್ಲ ನೇಕಾರರು ಎಂಬುದನ್ನು ಯಾರೂ ಮರೆಯಲಾರರು. ನೇಕಾರಿಕೆ ವೃತ್ತಿ ಒಂದೇ ಆಗಿದ್ದರೂ ಉತ್ಪನ್ನಗಳ ಮಾದರಿ ಪ್ರಾಂತದಿಂದ ಪ್ರಾಂತಕ್ಕೆ ವಿಭಿನ್ನ ಮತ್ತು ವಿಶಿಷ್ಟತೆಯಿಂದ ಕೂಡಿದೆ ಎಂಬುದನ್ನು ನಾವು ಗಮನಿಸುತ್ತೇವೆ. ಇಂತಹ ವಿಭಿನ್ನತೆಗೆ ಪ್ರಾದೇಶಿಕ ಮತ್ತು ಭೌಗೋಳಿಕ ಕಾರಣಗಳುಂಟು. ಇಂತಹ ಕಾರಣಗಳಿಂದಲೇ ಇಂದಿಗೂ ಹಲವು ಸಾಂಪ್ರದಾಯಿಕ ಉತ್ಪನ್ನಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ ಎಂಬುದರಲ್ಲಿ ಸಂಶಯವೇ ಇಲ್ಲ. ಇಂತಹ ಸಂದರ್ಭಗಳ್ಲಿಯೇ ನಮಗೆ ಪ್ರಾಂತೀಯ ಭಿನ್ನತೆ ಮತ್ತು ವೈಶಿಷ್ಟ್ರತೆಯ ಹಿನ್ನೆಲೆ ಏನೆಂಬುದು ಅರ್ಥವಾಗುತ್ತದೆ. ಉದಾಹರಣೆಗೆ ಬೆಂಗಳೂರು ಸುತ್ತಮುತ್ತ ತಯಾರಾಗುವ ಬೆಡಗಿನ ರೇಷ್ಮೆ ವಸ್ತ್ರಗಳನ್ನು ಅದೇ ಮಾದರಿಯಲ್ಲಿ ಉತ್ತರ ಕರ್ನಾಟಕ ಇಲ್ಲವೇ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ತಯಾರಿಸಲಿಕ್ಕಾಗದು. ಅಂತೆಯೇ ಉತ್ತರ ಕರ್ನಾಟಕ ಭಾಗದಲ್ಲಿನ ಇಳಕಲ್ ಸೀರೆ, ಗದಗ ಬೆಟಗೇರಿ ಮತ್ತು ಹುಬ್ಬಳ್ಲೀ ಮಾದರಿ ಸೀರೆಗಳನ್ನು ಬೆಂಗಳೂರಿನಲ್ಲಿಯೋ ಮೈಸೂರಿನಲ್ಲಿಯೋ ಇಲ್ಲವೇ ದಾವಣಗೆರೆ ಜಿಲ್ಲೆಯಲ್ಲಿನ ಹೊನ್ನಾಳಿಯಲ್ಲಿಯೋ ತಯಾರಿಸಲಿಕ್ಕಾಗದು.

ಗುಲ್ಬರ್ಗ ಮತ್ತು ಬಿಜಾಪುರ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ನಗರ ಪ್ರದೇಶಗಳ ನಾರಿಯರೂ ಸೇರಿದಂತೆ ಗ್ರಾಮೀಣ ಪ್ರದೇಶ ನಾರಿಯರಿಗೆಲ್ಲ ಇಳಕಲ್ ಸೀರೆ ಮತ್ತು ಗುಳೇದಗುಡ್ಡದ ಖಣಗಳೆಂದರೆ ಅಚ್ಚುಮೆಚ್ಚು. ಯಾವುದೇ ಹಬ್ಬ ಹರಿದಿನಗಳಿರಲೀ.., ಮನೆಯಲ್ಲಿ ವಿಶೇಷ ಸಮಾರಂಭವಿರಲೀ ಅದಕ್ಕೆ ಇಳಕಲ್ ಸೀರೆ ಬೇಕೆ ಬೇಕು. ಅದೇ ರೀತಿ ಬೆಳಗಾವಿ ಜಿಲ್ಲೆಯ ಗಡಿಗೆ ಹೊಂದಿಕೊಂಡ ಕೊಲ್ಹಾಪುರ ಮತ್ತು ಸಾಂಗಲಿ ಭಾಗದ ಜನರಿಗೆ ಹುಬ್ಬಳ್ಳಿ ಮತ್ತು ಗದಗ ಸೀರೆಗಳೇ ಬಲು ಇಷ್ಟ.

ಸ್ಪರ್ಧಾತ್ಮಕ ಯುಗದಲ್ಲಿಯೂ ಕರ್ನಾಟಕದ ಕೆಲವು ಪ್ರದೇಶಗಳಲ್ಲಿನ ನೇಕಾರರು ಸಾಂಪ್ರದಾಯಿಕ ಉತ್ಪನ್ನಗಳನ್ನು ಪೋಷಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ ಎಂಬುದು ಶ್ಲಾಘನೀಯ. ಪ್ರಾಂತದಿಂದ ಪ್ರಾಂತಕ್ಕೆ ನೇಕಾರರ ಉತ್ಪನ್ನಗಳಲ್ಲಿ ಭಿನ್ನತೆಯಿರುವಂತೆ ನೇಕಾರರ ಜೀವನ ಶೈಲಿಯಲ್ಲಿಯೂ ನಾವು ಭಿನ್ನತೆಯನ್ನು ಕಾಣುತ್ತೇವೆ.

ವಿದ್ಯುತ್ ಮಗ್ಗ ಮತ್ತು ಕೈಮಗ್ಗ ನೇಕಾರಿಕೆ ದೃಷ್ಟಿಯಿಂದ ಬೆಂಗಳೂರು ಮತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಮೊದಲ ಸ್ಥಾನದಲ್ಲಿ ನಿಂತರೆ ಅನಂತರದ ಸ್ಥಾನಗಳಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳು ನಿಲ್ಲುತ್ತವೆ. ಈಚಿನ ಅಧಿಕೃತ ಅಂಕಿ ಅಂಶಗಳ ಪ್ರಕಾರ ವಿದ್ಯುತ್ ಮಗ್ಗಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದ ಕೈಮಗ್ಗಗಳ ಸಂಖ್ಯೆ ಕುಸಿಯುತ್ತಿದೆ. ಆದರೆ ಕೈಮಗ್ಗದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕೈಮಗ್ಗ ಮತ್ತು ವಿದ್ಯುತ್ ಮಗ್ಗದ ಸೀರೆಗಳೀಗೆ ವಿಶಿಷ್ಟವಾದ ಕಸೂತಿ ಕಲೆಯನ್ನು ಅಳವಡಿಸಿ ಸೀರೆಗಳ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯ ನಡೆದಿದೆ. ಇದು ಕೆಲವು ಪ್ರದೇಶಗಳಲ್ಲಿನ ವಿಶಿಷ್ಟ ಸೀರೆಗಳು, ಖಣಗಳು ಮತ್ತಿತರ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸಿದೆಯಲ್ಲದೇ ಪ್ರಾಂತೀಯ ವೈಶಿಷ್ಟತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಉದಾಹರಣೆಗೆ ಮೊಳಕಾಲ್ಮೂರಿನ ಸೀರೆಗಳಿಗೆ ಜಕಾಡ್ ರ್ ಮುಖಾಂತರವೇ ವಿವಿಧ ಬಗೆ ವಿನ್ಯಾಸದ ನಕ್ಷೆಗಳನ್ನು ಹಾಕುತ್ತಾರೆ. ಆದರೆ ಇಳಕಲ್ ಮತ್ತು ಗದಗ ಬೆಟಗೇರಿ ಭಾಗದಲ್ಲಿನ ಕಲಾತ್ಮಕ ಫ್ಲೇನ್ ಸೀರೆಗಳಿಗೆ ಧಾರವಾಡ ಮತ್ತು ಬಿಜಾಪುರ ಭಾಗದಲ್ಲಿನ ನುರಿತ ಮಹಿಳಾ ಕಲಾವಿದರು ವಿಶಿಷ್ಟ ಬಗೆಯ ಹೆಣಿಕೆಯಿಂದ ಆ ಸೀರೆಗಳ ಮೌಲ್ಯವನ್ನು ಹೆಚ್ಚಿಸುತ್ತಿದ್ದಾರೆ.

ಅದೇ ರೀತಿ ಉಣ್ಣೆ ನೇಕಾರಿಕೆಯಲ್ಲಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶ, ಚಿತ್ರದುರ್ಗ ಜಿಲ್ಲೆ ಮತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಬೀಳಗಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹೆಸರುವಾಸಿ. ಕಂಬಳಿ ಮತ್ತು ಉಣ್ಣೆ ವಸ್ತ್ರಗಳು ವಿಭಿನ್ನತೆಯಲ್ಲಿ ಶ್ರೇಷ್ಠ ಗುಣಮಟ್ಟವನ್ನು ಕಾಪಾಡಿಕೊಂಡು ಬರುತ್ತಿರುವುದು ಸೋಜಿಗದ ಸಂಗತಿ.

ಇನ್ನೊಂದೆಡೆ ಸರ್ಕಾರ ಪ್ರಾಯೋಜಿತ ಸಂಸ್ಥೆ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ ಈಚೆಗೆ ಪ್ರಾಂತೀಯ ಭೀನ್ನತೆಗಳನ್ನು ಗುರುತಿಸಿ ಆಯಾ ಪ್ರದೇಶಗಳ ನೇಕಾರರಿಗೆ ಅವರ ಉದ್ಯೋಗ ಮತ್ತು ನೈಪುಣ್ಯವನ್ನು ಆಧರಿಸಿ ವಿಭಿನ್ನ ಉತ್ಪನ್ನಗಳ ತಯಾರಿಕೆಯಲ್ಲಿ ನಿರತವಾಗಿದೆ. ಇಲ್ಲಿಯೂ ನಾವು ಪ್ರಾಂತೀಯ ಭಿನ್ನತೆಗಳನ್ನು ಗುರುತಿಸುತ್ತೇವೆ. ನೇಕಾರಿಕೆ ವೃತ್ತಿ ಇಂದು ಸರಕಾರದ ಕೃಪೆಗೆ ಒಳಗಾಗುತ್ತಿರುವುದು ನೆಮ್ಮದಿಯ ಸಂಗತಿ. ಇದೀಗ ಭವಿಷ್ಯದಲ್ಲಿ ದೇವರ ದಾಸಿಮಯ್ಯ ಅಧ್ಯಯನ ಪೀಠ ಮತ್ತು ಇತರ ಸಮಾನ ಮನಸ್ಕ ಸಂಸ್ಥೆಗಳು ಒಗ್ಗೂಡಿ ಅಸಂಘಟಿತವಾಗಿರುವ ಇಡೀ ನೇಕಾರಿಕೆ ಸಮುದಾಯದ ಸರ್ವಾಗೀಣ ಒಳಿತಿಗೆ ಪಣ ತೊಡಬೇಕಾದ ಅಗತ್ಯ ಇಂದು ಹೆಚ್ಚಾಗಿದೆ.

* * *