ಉಂಕಿಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೊಳು ಎಳೆ ಮೆಟ್ಟಿದೆ
ಹಿಡಿದ ಲಾಳಿಯು ಮುಳ್ಳು ಕಂಡಿಕೆ ನುಂಗಿತ್ತು
ಸೀರೆಯ ನೈದವ ನಾನೋ ನೀನೋ ರಾಮನಾಥ

ಅದ್ಯ ವಚನಕಾರ ದೇವರ ದಾಸಿಮಯ್ಯನು ತನ್ನ ಈ ವಚನದಲ್ಲಿ ತನ್ನ ವೃತ್ತಿಯಾದ ನೇಯಿಗೆ ಕಾಯಕವನ್ನು ವಿವರಿಸುತ್ತ ನೇಯಿಗೆ ವೃತ್ತಿಗೆ ಅವಶ್ಯವಾಗಿರುವ ಉಪಕರಣಗಳ ಕ್ರಿಯೆಗಳನ್ನು ವರ್ಣಿಸಿ, ಆ ಕ್ರಿಯೆಗಳಲ್ಲಿ ತನ್ನ ನೇಯಿಗೆ ಕಾಯಕದಲ್ಲಿ ಬ್ರಹ್ಮಜ್ಞಾನವನ್ನೇ ಹೋಲಿಕೆ ಮಾಡಿದ ಮಹಾನ ದಾರ್ಶನಿಕನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.

ಸಹಸ್ರ ವರ್ಷದ ಹಿಂದೆ ದೇವರ ದಾಸಿಮಯ್ಯ ಹೇಳಿದ ವಚನ ಇಂದಿನ ಕಾಲಕ್ಕೂ ಚಿಂತನೆಗೆ ಆಧಾರವಾಗಿದೆ. ಈ ವಚನದಲ್ಲಿ ಬ್ರಹ್ಮಜ್ಞಾನವನ್ನು ಬದಿಗಿರಿಸಿ ಲೌಕಿಕವಾಗಿ ವಿಚಾರ ಮಾಡಿದಾಗ ನೇಕಾರ ಸಾಕಷ್ಟು ಪರಿಶ್ರಮ ವಹಿಸಿ ಸೀರೆಯನ್ನು ನೇಯ್ದು ಶ್ರಮಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಲೆ ಸಿಗದಾದಾಗ ನಮ್ಮ ಅಂತರಾಳದ ಉಸಿರಿನಿಂದ ಬರುವ ಉದ್ಗಾರವೇ ಈ ವಚನದ ಕೊನೆಯ ಸಾಲಿನಲ್ಲಿ ಮೂಡಿಬಂದಿದೆ. ನೇಕಾರನ ಬದುಕು ಈ ಸಮರ್ಪಣಾ ಭಾವ ನಿರಂತರವಾಗಿ ಇಂದಿನವರೆಗೂ ಮುಂದುವರೆದಿದೆ. ಎಷ್ಟೇ ಕಷ್ಟ ಕಾರ್ಪಣ್ಯಗಳು ಎದುರಾದರೂ ತನ್ನ ವೃತ್ತಿಯಲ್ಲಿ ವಿಧೇಯತೆಗೆ ಕುಂದು ಬರದಂತೆ ನೇಕಾರ ಸಮೂದಾಯಗಳು ಸಾಗಿ ಬಂದಿವೆ. ನೇಕಾರಿಕೆ ಉದ್ಯೋಗ ಇದು ಒಂದು ಕುಟುಂಬದ ಸದಸ್ಯರೆಲ್ಲರೂ ಕೂಡಿ ಮಾಡುವ ಗೃಹೋದ್ದಮೆ. ವಂಶ ಪರಂಪರೆಯಾಗಿ ಬಂದ ಈ ವೃತ್ತಿಯಲ್ಲಿ ದೇವಾಂಗ, ಪಟ್ಟಸಾಲಿ, ಪದ್ಮಸಾಲಿ, ಸ್ವಕುಳಸಾಲಿ, ಕುರುಹಿನಶೆಟ್ಟಿ ಹಾಗೂ ತೊಗಟವೀರ ಜನಾಂಗಗಳು ಪ್ರಮುಖವಾದವು. ಈ ಜನಾಂಗಗಳು ತಮ್ಮ ಪೂರ್ವಜರಿಂದ ಬಂದ ಈ ವೃತ್ತಿಯನ್ನು ಉಳಿಸಿಕೊಂಡು ಬಂದವರಾಗಿದ್ದಾರೆ. ಈ ಜನಾಂಗಗಳಿಗೆ ವಂಶ ಪರಂಪರೆಯಾಗಿ ಬಂದ ಈ ನೇಕಾರಿಕೆ ವೃತ್ತಿಯ ಬಗ್ಗೆ ತನ್ನದೇ ಆದಂತಹ ಚಾರಿತ್ರಿಕ ಮತ್ತು ಪೌರಾಣಿಕ ಹಿನ್ನೆಲೆಗಳಲ್ಲಿ ಧಾರ್ಮಿಕವಾದ ಅನೇಕ ನಂಬಿಕೆ, ಆಚರಣೆಗಳನ್ನು ಅನುಸರಿಸುತ್ತ ಬಂದವರಾಗಿದ್ದಾರೆ.

ಕಾಲಚಕ್ರದ ಗತಿಯಲ್ಲಿ ಆಧುನಿಕ, ಅತ್ಯಾಧುನಿಕ ಗಾಳಿಯಲ್ಲಿ ಈ ಯದ್ದಿಮೆ ಸಿಕ್ಕು ಜರ್ಜರಿತವಾದರೂ ಈ ಜನಾಂಗಗಳಲ್ಲಿ ಸಾಂಪ್ರದಾಯಿಕವಾಗಿರುವ, ಅತ್ಯಾವಶ್ಯಕವಾಗಿರುವ ಬಟ್ಟೆಗಳನ್ನು ನೇಯುವ ಸಮೂದಾಯವು ಇನ್ನೂ ಅಲ್ಲಲ್ಲಿ ಉಳಿದುಕೊಂಡಿರುವುದು. ನಮ್ಮಗಳ ಧಾರ್ಮಿಕ ಸಾಂಸ್ಕೃತಿಕ ಪರಂಪರೆಗಳೇ ಕಾರಣವೆನ್ನಬಹುದು. ಮದುವೆ, ಮುಂಜಿವೆ, ಶ್ರೀಮಂತ, ದೇವತಾ ಕಾರ್ಯಗಳಿಗೆ, ಶುಭಕಾರ್ಯಗಳಿಗೆ ಸಾಂಪ್ರದಾಯಿಕವಾದ ಸೀರೆ, ರವಿಕೆ ಮಡಿ, ಪಂಜೆ, ಶಲ್ಯ ಮುಂತಾದವುಗಳನ್ನು ಬಳಸುವ ಪರಿಪಾಟವಿರುವವರಿಂದ ತಕ್ಕಮಟ್ಟಿಗೆ ಈ ಉದ್ದಿಮೆ ಈ ವೃತ್ತಿನಿರತ ಸಮಾಜಗಳಲ್ಲಿ ಜೀವಂತವಾಗಿ ಉಳಿದುಕೊಂಡಿದೆ.

ನೇಕಾರಿಕೆ ಉದ್ಯಮ

ನೇಕಾರಿಕೆ ಉದ್ಯಮವು ಇತ್ತೀಚಿನ ದಿನಗಳಲ್ಲಿ ತೀವ್ರತರವಾದ ಬದಲಾವಣೆಗಳನ್ನು ಕಂಡಿದೆ. ಕೈಮಗ್ಗ ಮತ್ತು ವಿದ್ಯುತೆ ಮಗ್ಗಗಳು ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿವೆ. ಜಾಗತೀಕರಣದ, ಮುಕ್ತ ಮಾರುಕಟ್ಟೆಯ, ಅನುಕೂಲ ಮತ್ತು ಪ್ರತಿಕೂಲ ಸ್ಥಿತಿಗತಿಗಳು ಇನ್ನೂ ನಿಗೂಢವಾಗಿವೆ. ಮುಕ್ತ ಮಾರುಕಟ್ಟೆಯ ವ್ಯವಸ್ಥೆಯು ಸಾಂಪ್ರದಾಯಿಕ ಬಟ್ಟೆಗಳನ್ನು ಉತ್ಪಾದಿಸುವ ಸಾಮಾನ್ಯ ನೇಕಾರ ಸಮೂದಾಯಕ್ಕೆ ಬಿಸಿಲುಗುದುರೆ ಇದ್ದಂತೆ. ಈ ನೇಯಿಗೆ ಉದ್ದಿಮೆಯನ್ನು ಅಧಿಕಾರಿಶಾಹಿಯು ಸಾರಾಸಗಟಾಗಿ ಒಂದೇ ಗುಂಪಿನಲ್ಲಿ ಗುರ್ತಿಸುತ್ತಿರುವ ಕ್ರಮವು ಸರ್ವಥಾ ಸರಿಯಲ್ಲ. ಇವುಗಳನ್ನು ನಾವು ಅನೇಕ ಹಂತಗಳಲ್ಲಿ ವರ್ಗಿಕರಿಸಬಹುದು.

ಕೈಮಗ್ಗ ವಲಯದಲ್ಲಿ, ಅವುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದರೂ ಬೆಂಗಳೂರು ಭಾಗದಲ್ಲಿ ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಕಲಾತ್ಮಕವಾದ, ರೇಷ್ಮೆ, ಆರ್ಟಸಿಲ್ಕ ಹಾಗೂ ನೂಲಿನ ಸೀರೆ – ರವಿಕೆಗಳ ಉತ್ಪಾದನೆಯಲ್ಲಿದ್ದರೂ, ಲಾಭವಿಲ್ಲದೆ ಉದರ ನಿರ್ವಹಣೆಗಾಗಿ ಈ ವೃತ್ತಿಯನ್ನು ಸಮೂದಾಯಗಳು ಉಳಿಸಿಕೊಂಡಿವೆ. ಕಚ್ಚಾಮಾಲಿನ ಕೊರತೆ, ಬೆಲೆಯ ಏರಿಳಿತಗಳು, ವ್ಯವಸ್ಥಿತ ಮಾರುಕಟ್ಟೆ ಇಲ್ಲದೇ ಈ ವಲಯ ಸೊರಗುತ್ತಾ ಸಾಗಿದೆ. ಅನಕ್ಷರಸ್ಥರಾದ ನೇಯಿಗೆ ವೃತ್ತಿಯ ಸಮೂದಾಯಗಳು ಬೇರೆ ದಾರಿ ಕಾಣದೇ ಕಷ್ಟವೋ ನಷ್ಟವೋ ಇದ್ದುದ್ದರಲ್ಲಿಯೇ ಕಾಲ ನೂಕುವ ಅನಿವಾರ್ಯತೆಗೆ ಒಳಗಾಗಿದ್ದಾರೆ.

ವಿದ್ಯುತೆ ಮಗ್ಗದ ವಲಯವು ಕೈಮಗ್ಗದ ವಲಯಕ್ಕಿಂತ ಭಿನ್ನವಾಗಿಲ್ಲ. ೭೦ರ ದಶಕದಲ್ಲಿ ಅಗಿನ ರಾಜ್ಯ ಸರಕಾರವು ಕೈಮಗ್ಗದ ನೇಕಾರ ಸಹಕಾರ ಸಂಘಗಳಿಗೆ ಕೈಮಗ್ಗದ ನೇಕಾರರಿಗೆ ವಿದ್ಯುತೆ ಮಗ್ಗಗಳನ್ನು ಕಂತಿನಲ್ಲಿ ಮಂಜೂರು ಮಾಡಿ ಪರಿವರ್ತನೆಯ ಹಾದಿಯಲ್ಲಿ ಸಾಗುವಂತೆ ಪ್ರೇರೇಪಿಸಿತು. ವಿದ್ದುತ ಮಗ್ಗಗಳು ಕೂಡ ವಿದ್ದುತ ಜಾಲಿತ ಕೈಮಗ್ಗಗಳೆಂದೇ ಆಗಿನ ಮುಖ್ಯ ಮಂತ್ರಿಗಳು ಹೇಳಿದರು. ರಾಜ್ಯದಲ್ಲಿ ವಿದ್ಯುತ ಮಗ್ಗಗಳು ಸ್ವಲ್ಪಮಟ್ಟಿಗೆ ಜೀವನ ನಿರ್ವಹಣೆಗೆ ಆಧಾರವಾಯಿತು. ರಾಜ್ಯದಲ್ಲಿನ ಅದರ ಸಂಖ್ಯೆ ಒಂದು ಲಕ್ಷದಷ್ಟಿದ್ದು ಅದನ್ನು ಅವಲಂಬಿಸಿದ ಸುಮಾರು ಐದು ಲಕ್ಷದಷ್ಟು ಜನರಿಗೆ ಜೀವನೋಪಾಯಕ್ಕೆ ಆಧಾರವಾಗಿದೆ. ನೆರೆ ರಾಜ್ಯಗಳು ಈ ಕ್ಷೇತ್ರಕ್ಕೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿರುವ ಕಾರಣ, ನಮ್ಮ ರಾಜ್ಯದಿಂದ ವಲಸೆಗಳು ಆರಂಭಗೊಂಡು ಆ ರಾಜ್ಯಗಳಲ್ಲಿ ವಿದ್ದುತ ಮಗ್ಗಗಳ ಕ್ಷೇತ್ರವು ಗರಿಷ್ಟ ಪ್ರಮಾಣದಲ್ಲಿ ಬೆಳೆದು ಗಟ್ಟಿಯಾಗಿ ನೆಲೆಗೊಂಡಿತು. ಇದಕ್ಕೆಲ್ಲ ಅಲ್ಲಿಯ ಸರಕಾರಗಳು ನೇಕಾರಿಕೆ ಉದ್ದಿಮೆಗೆ ಬೇಕಾಗುವ ಮೂಲಭೂತ ಅವಶ್ಯಕತೆಗಳನ್ನು ಹಾಗೂ ಬೆಳವಣಿಗೆಗೆ ಬೇಕಾಗುವ ಸೌಲಭ್ಯಗಳನ್ನು ನೀಡಿರುವುದೇ ಕಾರಣವಾಗಿದೆ. ಇತ್ತೀಚಿನ ದಿನಗಳನ್ನು ನೇಕಾರಿಕೆ ಉದ್ದಿಮೆಯನ್ನು ಸರಕಾರವು ಗಮನಿಸಿ ಕೆಲವು ಸೌಲಭ್ಯಗಳನ್ನು ನೀಡಿದೆ. ಇವು ತಾತ್ಕಾಲಿಕವಾಗಿರಬಾರದು. ನೇಯಿಗೆ ಉದ್ದಿಮೆ ಉತ್ತಮ ರೀತಿಯಲ್ಲಿ ಬೆಳೆದು ನಿಲ್ಲಲು ಪೂರಕವಾಗಬೇಕು. ಕೈಮಗ್ಗದ ಹಾಗೂ ವಿದ್ದುತ ಮಗ್ಗದ ನೇಕಾರದ ಬದುಕಿಗೆ ಆಶ್ರಯ ನೀಡಲು ರಾಜ್ಯ ಸರಕಾರವು ಕೈಮಗ್ಗ ಅಭಿವೃದ್ದಿ ನಿಗಮ ಮತ್ತು ವಿದ್ದುತೆ ಮಗ್ಗಗಳ ಅಭಿವೃದ್ದಿ ನಿಗಮಗಳನ್ನು ಸ್ಥಾಪಿಸಿದೆ. ಕೈಮಗ್ಗ ಅಭಿವೃದ್ದಿ ನಿಗಮ ಆರಂಭದ ವರ್ಷಗಳಲ್ಲಿ ಒಳ್ಳೆಯ ದಾರಿಯಲ್ಲಿ ಸಾಗಿದ ಹಾಗೆ ಕಂಡುಬಂದಿತು. ನಿರುದ್ಯೋಗಿ ನೇಕಾರರಿಗೆ ವರದಾನವಾದಂತೆ ಕಂಡುಬಂದಿತಾದರೂ ಮುಂದಿನ ದಿನಗಳಲ್ಲಿ ನೇಕಾರರ ಕನಸುಗಳನ್ನು ಭಗ್ನಗೊಳಿಸಿ ಅದೇ ಸಂಕಷ್ಟಕ್ಕೆ ಗುರಿಯಾಯಿತು. ನೇಕಾರರ ಬದುಕು ಹಸನಗೊಳಿಸಬೇಕಾದ ಸಂಸ್ಥೆಯನ್ನೇ ಸರಕಾರವೇ ಹಸನುಗೊಳಿಸುವ ಸನ್ನಿವೇಶಕ್ಕೆ ಸಿಲುಕಿತು.

ಆನಂತರದ ದಿನಗಳಲ್ಲಿ ವಿದ್ದುತ ಮಗ್ಗದ ಕ್ಷೇತ್ರದ ಅಭಿವೃದ್ದಿಯ ಉದ್ದೇಶದಿಂದ ರಚನೆಗೊಂಡ ವಿದ್ದುತ ಮಗ್ಗಗಳ ಅಭಿವೃದ್ದಿ ನಿಗಮ, ಆ ವಲಯದ ನೇಕಾರರಿಗೆ ಸ್ವರ್ಗವನ್ನೇ ಧರೆಗಿಳಿಸುವ ಅಬ್ಬರದ ಪ್ರಚಾರದೊಂದಿಗೆ ಕಾರ್ಯಾರಂಭ ಮಾಡಿತು. ಅದು ಆಧುನೀಕರಣ ಹಾಗೂ ಮುಕ್ತ ಮಾರುಕಟ್ಟೆಯ ಪ್ರಚಾರ ಮಾಡುವ ಹೊಣೆಯನ್ನು ಮಾತ್ರ ನಿರ್ವಹಿಸಿದಂತೆ ಕಂಡುಬಂದಿತು. ಅದರ ಜೊತೆಗೆ ಶಿಕ್ಷಣ ಇಲಾಖೆಗೆ ಬೇಕಾಗುವ ಸಮವಸ್ತ್ರಗಳನ್ನು ವಿದ್ದುತ ಮಗ್ಗಗಳಿಂದ ನೇಯಿಸಿ ಇಲಾಖೆಗೆ ಪೂರೈಸಬೇಕಾದ ಸಂಸ್ಥೆ ಉತ್ಪಾದನೆ ಮಾಡದೆ ಸಾವಿರಾರು ನೇಕಾರ ಕುಟುಂಬಗಳ ಬದುಕಿಗೆ ಮಾರಕವಾಗಿರುವುದು ಅತ್ಯಂತ ದುರಂತವೆಂದೇ ಹೇಳಬೇಕು.

೨೫ ಸಾವಿರ ರೂ. ಅಸಲು, ಅಡ್ಡಿ ತುಂಬಲಾರದ ಸರಕಾರದ ಮುಂದೆ ಅಂಗಲಾಚುವ ಬಡ ನೇಕಾರದ ಮುಂದೆ ಗ್ಯಾಟೆ ಒಪ್ಪಂದ, ಮುಕ್ತ ಮಾರುಕಟ್ಟೆ ಕೋಟಿಗಟ್ಟಲೆ ಬಂಡವಾಳ ತೊಡಗಿಸಬೇಕಾದ ಅತ್ಯಾಧುನಿಕವಾದ ಮಶಿನರಿ ಮಗ್ಗಗಳ ಬಗ್ಗೆ ಜವಳಿ ಇಲಾಖೆಯ, ಉಪದೇಶ ಸಂಪ್ರದಾಯಿಕ ಬಟ್ಟೆಗಳ ಉತ್ಪಾದನೆ ಮಾಡುವವರಿಗೆ ಎಷ್ಟರಮಟ್ಟಿಗೆ ಸಮಂಜಸ ಎನ್ನುವ ಪರಿಜ್ಞಾನದ ಬಗ್ಗೆ ನಾವು ಚಿಂತನೆ ಮಾಡಬೇಕಾಗಿದೆ. ಮುಕ್ತ ಮಾರುಕಟ್ಟೆಯನ್ನು ಪ್ರವೇಶಿಸುವ ಆಸಕ್ತರು, ಬಂಡವಾಳ ಶಾಹಿಗಳು ಈ ಕಾರ್ಯವನ್ನು ಮಾಡಲಿ, ಆದರೆ ಅದರ ಜೊತೆಗೆ ಸಂಪ್ರದಾಯಿಕ ಬಟ್ಟೆಗಳ ಉತ್ಪಾದನೆ ನಿಲ್ಲಿಸಬೇಕು ಎಂದಾಗಿರಕೂಡದು. ಮುಕ್ತ ಮಾರುಕಟ್ಟೆಯಿಂದಾಗಿ ನಮ್ಮ ದೇಶದ ಜವಳಿ ಉತ್ಪಾದನೆ ಹಾಗೂ ಮಾರಾಟ ಹೊರ ದೇಶಗಳಿಗೆ ರಫ್ತು ಮಾಡುವ ಹೆಚ್ಚಿನ ಅವಕಾಶಗಳು ನಮ್ಮ ದೇಶಕ್ಕೆ, ನಮ್ಮ ರಾಜ್ಯಕ್ಕೆ ಲಭಿಸುವಂತಿದ್ದದೆ ಅದು ಕಂಡಿತವಾಗಿ ನಡೆಯಲಿ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿ. ಅದಕ್ಕೆ ಬಂಡವಾಳ ಹಾಕುವ ಶ್ರೀಮಂತ ವರ್ಗಗಳು, ಕಂಪನಿಗಳು ಬರಲಿ, ಆದರೆ ಇವುಗಳ ಭರಾಟೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಪಾರಂಪರಿಕ ಬಟ್ಟೆಗಳನ್ನು ನಿರ್ಮಿಸುವ, ನೇಯಿಗೆ ವೃತ್ತಿಯ ಸಮೂದಾಯಗಳನ್ನು ಒಕ್ಕಲೆಬ್ಬಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಸಂಬಂಧಪಟ್ಟ ಇಲಾಖೆಗಳು ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು.

ನಮ್ಮ ದೇಶದಲ್ಲಿ ನಂಬಿಕೆ ಹಾಗೂ ಶ್ರದ್ಧೆಯಿಂದ ನಡೆದುಕೊಂಡು ಬಂದಿರುವ ಮೂಲ ಸಂಸ್ಕೃತಿಯ ಪರಂಪರೆಗಳು, ಮದುವೆ, ಮುಂಜಿವೆ, ಶ್ರೀಮಂತ, ಜಾತ್ರೆ, ಹಬ್ಬ, ಉತ್ಸವಗಳು ಹಾಗೂ ಧಾರ್ಮಿಕ ಆಚರಣೆಗಳು, ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೆ ಕುಶಲ ಕರ್ಮಿಗಳ ವೃತ್ತಿಗಳು ಭದ್ರವಾಗಿರುತ್ತದೆ. ನಾವು ನಿರ್ಮಿಸುತ್ತಿರುವ ಪಾರಂಪರಿಕ ಉತ್ಪಾದನೆಗೆ ಮೆರಗು ನೀಡುವ ವ್ಯವಸ್ಥೆಗಳು ರೂಪುಗೊಳ್ಳಲಿ, ಅವುಗಳು ಆಕರ್ಷಣೆ ಹೆಚ್ಚಲಿ, ಹೊರದೇಶಗಳ ಉಡಿಗೆ, ತೊಡಿಗೆಗಳನ್ನು ಆಕರ್ಷಿಸುವ ನಾವು ನಮ್ಮ ದೇಶದ ಕಲಾತ್ಮಕವಾದ ಆಯಾ ಋತುಮಾನಗಳಿಗೆ ಶರೀರಕ್ಕೆ ಒಗ್ಗುವಂತಹ, ಶ್ರೇಷ್ಠ ದರ್ಜೆಯ ಬಟ್ಟೆಗಳ ಉತ್ಪಾದನೆ ನಡೆದು ಹೊರದೇಶಗಳಲ್ಲಿ ಅವರು ಆಕರ್ಷಣೆಗೊಳಗಾಗುವ ರೀತಿಯಲ್ಲಿ, ಉತ್ಪಾದನೆಗೊಂಡು ರಫ್ತು ಮಾಡುವ ವ್ಯವಸ್ಥೆಗಳು ಸೃಷ್ಟಿಯಾಗಲಿ, ಇದರಿಂದ ಸಂಪ್ರದಾಯಿಕ ವೃತ್ತಿಯೂ ಉಳಿಯುತ್ತವೆ. ಅವುಗಳನ್ನು ಯೋಜನೆಗಳನ್ನು ರೂಪಿಸಿದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯು ಉದ್ದಿಮೆಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯು ಕೈಮಗ್ಗ ವಿದ್ದುತಮಗ್ಗಗಳನ್ನು, ಹಾಗೂ ದೊಡ್ಡ ದೊಡ್ಡ ಮಿಲಗಳನ್ನು ಸಾರಾಸಗಟವಾಗಿ ಒಂದೇ ದೃಷ್ಟಿಯಲ್ಲಿ ಪರಿಗಣಿಸುತ್ತಿರುವ ಕ್ರಮಗಳಿಂದಾಗಿ ಕೆಳವರ್ಗದ ಹಾಗೂ ಮಧ್ಯಮವರ್ಗದ ಸಮುದಾಯಗಳು ಇಂದು ಮೇಲಿಂದ ಮೇಲೆ ಆತಂಕಕ್ಕೆ ಒಳಗಾಗುತ್ತಿವೆ. ಈ ಸಮೂಹಗಳ ಆರ್ಥಿಕ ಸ್ಥಿತಿ-ಗತಿಗಳು ಸಂಪನ್ಮೂಲಗಳ ವ್ಯವಸ್ಥೆಗಳು, ಅವರ ಸಾಮರ್ಥ್ಯಗಳು ಇವುಗಳ ಅವಲೋಕನ ಅತ್ಯವಶ್ಯವಾಗಿವೆ. ಈ ನಿಟ್ಟಿನಲ್ಲಿ ತಜ್ಞರ ಸಲಹೆಗಳನ್ನು ಆಡಳಿತ ರಂಗವು ಪಡೆಯುವುದು ಅವಶ್ಯವಾಗಿದೆ. ಸಾಂಪ್ರದಾಯಿಕವಾದ ಹಾಗೂ ಕಡಿಮೆ ಬಂಡವಾಳದಿಂದ ಹೆಚ್ಚೆಚ್ಚು ಜನರಿಗೆ ಉದ್ಯೋಗಾವಕಾಶ ನೀಡುವ ನೇಕಾರಿಕೆ ಉದ್ದಿಮೆ ಉಳಿಸಿ ಬೆಳೆಸಿಕೊಂಡು ಬರಲು ಅನೇಕ ಮಾರ್ಗೋಪಾಯಗಳೂ ಇವೆ. ಈ ದಿಶೆಯಲ್ಲಿ ಕೆಳಕಂಡ ಕೆಲ ಸೂಚನೆಗಳನ್ನು ಪರಿಗಣಿಸಬಹುದಾಗಿದೆ.

ಉತ್ಪಾದನೆ

ಉತ್ಪಾದನೆಯ ಹಂತದಲ್ಲಿ ಮೂಲಭೂತವಾದ ಸೌಲಭ್ಯಗಳನ್ನು ಪೂರೈಸುವುದು ಅವಶ್ಯವಾಗಿದೆ. ಸಣ್ಣಪುಟ್ಟ ಯುನಿಟ್ ಗಳಲ್ಲಿ ನಾಲ್ಕೆಂಟು ಮಗ್ಗಗಳನ್ನು ಹಾಕುವ ಮನೆ, ನಿವೇಶನ ರಹಿತರಿಗೆ, ಯೋಗ್ಯ ಬೆಲೆಗೆ ನಗರಾಭಿವೃದ್ದಿ ಪ್ರಾಧಿಕಾರ, ನಗರಸಭೆ ಮತ್ತು ಸರಕಾರದ ಕೈಗಾರಿಕೆ ನಿಗಮ ಮಂಡಳಿಗಳಿಂದ ನಿವೇಶನ ಸಿಗುವಂತಾಗಬೇಕು. ಅವುಗಳ ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸುಲಭವಾದ ಕಂತಿನಲ್ಲಿ ಹಣಕಾಸಿನ ನೆರವು ದೊರಕಬೇಕು.

ರಿಯಾಯಿತಿ ದರದಲ್ಲಿ ವಿದ್ಯುತ ಪೂರೈಕೆ ನಿರಂತರವಾಗಿ ದೊರಕಬೇಕು.

ನಗರಸಭೆ, ಮಹಾನಗರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳಿಂದ ಇರುವ ವಾರ್ಷಿಕ ಲೈಸೆನ್ಸು ಶುಲ್ಕ, ಪಾವತಿಸಿ ನವೀಕರಿಸುವ ವ್ಯವಸ್ಥೆ ಬದಲಾಯಿಸಿ ಶಾಶ್ವತ ಲೈಸೆನ್ಸು ನೀಡುವ ಕ್ರಮ ಕೈಕೊಳ್ಳಬೇಕು.

ಉತ್ಪಾದಕರಿಗೆ ಕಚ್ಚಾಮಾಲು ರಿಯಾಯಿತಿಯಲ್ಲಿ ದರದಲ್ಲಿ ಮಿಲಗಳಿಂದ ಕೊರತೆಯಾಗದಂತೆ ವಿತರಣೆಯಾಗಬೇಕು. ಮಗ್ಗಗಳ ಅಧುನೀಕರಣ ಮತ್ತು ಇತರ ಸೌಲಭ್ಯಗಳು ನೇರವಾಗಿ ಹಂತ ಹಂತವಾಗಿ ನಡೆಯುವಂತಾಗಬೇಕು. ದುಡಿಯುವ ನೇಕಾರ ವರ್ಗಕ್ಕೆ ಆಶ್ರಯ ಮನೆಗಳನ್ನು ಅವರಿಗಾಗಿಯೇ ಕಾಯ್ದಿರಿಸಿ ಕೊಡುವ ವ್ಯವಸ್ಥೆಯಾಗಬೇಕು. ಪಡಿತರ ವ್ಯವಸ್ಥೆಯಲ್ಲಿ ಹಳದಿಕಾರ್ಡ ಎಲ್ಲ ಕೂಲಿಕಾರ ನೇಕಾರರಿಗೆ ಸಿಗಬೇಕು.

ಮಾರಾಟ ವ್ಯವಸ್ಥೆ

ರಾಜ್ಯದಲ್ಲಿ ನೇಕಾರರ ಉತ್ಪಾದನೆಯ ಜವಳಿ ಮಾರಾಟದ ವ್ಯವಸ್ಥೆಗಳು `ಏನೂ ಇರುವುದಿಲ್ಲ’ ಗುಜರಾತು, ಮಹಾರಾಷ್ಟ್ರದಲ್ಲಿ ಇರುವಂತೆ “ಕಾಪಡಮಾರ್ಕೆಟ” ನಿರ್ಮಾಣಗೊಳ್ಳಬೇಕು. ಜವಳಿ ಉದ್ದಿಮೆ ಇರುವ ಪ್ರಮುಖ ನಗರ ಪಟ್ಟಣಗಳಲ್ಲಿ ಹಾಗೂ ಮಾರುಕಟ್ಟೆಯ ಪ್ರದೇಶಗಳಲ್ಲಿ ಎ.ಪಿ.ಎಂ.ಸಿ. ಮಾದರಿಯಲ್ಲಿ ಮಳಿಗೆಗಳನ್ನು ಸರಕಾರ ನಿರ್ಮಿಸಿ ಉತ್ಪಾದನೆ ಮಾಡುವವರಿಗೆ ನೀಡಬೇಕು. ಪ್ರತ್ಯೇಕ ಮಾರುಕಟ್ಟೆ ಇರುವೆಡೆ, ಸಗಟು ವ್ಯಾಪಾರಸ್ಥರು ನೇರವಾಗಿ ಖರೀದಿಗೆ ಬರುವುದಕ್ಕೆ ಅವಕಾಶವಾಗುತ್ತದೆ.

ಸಂಪ್ರದಾಯಿಕ ಬಟ್ಟೆಗಳ ಜನಾಕಾರ್ಷಣೆಗೆ ಪ್ರಸಾರ, ಪ್ರದರ್ಶನ, ಇತ್ಯಾದಿ ಕ್ರಮಗಳನ್ನು ಸರಕಾರಗಳು ಕೈಗೊಳ್ಳಬೇಕು.

ಹೊರದೇಶಗಳಲ್ಲಿಯೂ ನಮ್ಮ ದೇಶದ ಬಟ್ಟೆಗಳನ್ನು ಉಪಯೋಗಿಸುವ ಜನರಿದ್ದಾರೆ. ಅವರಿಗೆ ಬೇಕಾಗುವ ಬಟ್ಟೆಗಳನ್ನು, ನೇಕಾರರಿಂದ ಉತ್ಪಾದಿಸಿ ನಿರ್ಯಾತ ಮಾಡುವ ಹೊಣೆಗಾರಿಕೆಯನ್ನು ವಿದ್ಯುತಮಗ್ಗಗಳ ಹಾಗೂ ಕೈಮಗ್ಗಗಳ ಅಭಿವೃದ್ದಿ ನಿಗಮಗಳು ಕಾರ್ಯನಿರ್ವಹಿಸುತ್ತ ಕ್ರಮ ಕೈಕೊಳ್ಳಬೇಕು. ಈ ಕ್ರಮಗಳ ಜಾರಿಗೆ ಬಂದಾಗ ನೇಕಾರನ ಉತ್ಪಾದನೆಗೆ ಮಾರುಕಟ್ಟೆಯ ವ್ಯವಸ್ಥೆಗಳಿಂದ ಪ್ರೋದೊರಕುತ್ತದೆ ಹಾಗೂ ಈ ಉದ್ದಿಮೆ ಉಳಿದು, ಬೆಳೆಯಲು ಅವಕಾಶವಾಗುತ್ತದೆ.

* * *