ನೇಕಾರಿಕೆ ಬಹಳ ಪುರಾತನವಾದುದು. ಕ್ರಿ.ಶ.ಪೂರ್ವ ೨೦೦೦ ವರುಷಗಳ ಹಿಂದೆಯೇ ಒಂದಿಲ್ಲೊಂದು ರೂಪದಲ್ಲಿ ವಸ್ತ್ರ ನಿರ್ಮಾಣ ಕಾರ್ಯ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ. ಖ್ಯಾತ ಸಂಶೋಧಕರಾದ ಶಂಬಾ ಜೋಷಿ ಅವರು ನೇಕಾರರು ಮೂಲತಃ ಹಟ್ಟಿಕಾರರು ಎಂದು ಅಭಿಪ್ರಾಯ ಪಡುತ್ತಾರೆ. ಹಟ್ಟಿಯೆಂದರೆ ದನಕರುಗಳ ಬೀಡು, ಕುರಿಗಾರರೂ, ತುರು(ಗೋವು)ಕಾರರೂ ಪಟ್ಟುಕೊಂಡಿರುವ ಪಟ್ಟಿ ಹಟ್ಟಿಕಾರನೆಂದರೆ ‘‘ಜೀವಧನಂಗಳ” ಸಾಕಿ ಬದುಕುವವರು ಅವನೇ ಹಟ್ಟಿಕಾರ. ಹಟ್ಟಿಕಾರ ಶಬ್ದವನ್ನು ಬಳಕೆಯ ಮಾತಿನಲ್ಲಿ ‘‘ಹಟಗಾರ”ವೆಂದು ಹೇಳುವವರೇ ಹೆಚ್ಚು. ಮರಾಠಿಯವರಂತೂ ಹಟಗಾರ, ಹೇಟಗಾರ ಎಂದು ಎರಡು-ಮೂರು ತೆರವಾಗಿ ಬರೆಯುವರು. ಮರಾಠಿ ಭಾಷೆಯಂತೆ ಹಟಗಾರ ಶಬ್ದದ ರೂಪಿಸಿದ್ದಿಯೆ ಆಗುವುದು ಕಷ್ಟ ಅದರ ನಿಜವಾದ ಅರ್ಥವು ತಿಳಿಯದುದರಿಂದ ಅವರಿಗೆ ಇದೊಂದು ಗೂಢಶಬ್ದವೇ ಆಗಿದೆ. ‘‘ಹಟಗಾರ” ದನಕಾರರಂತೆ. ‘‘ಹಟಗಾರ” -ಜಾಡರ-ಇನ್ನೊಂದು ಮಹತ್ವದ ಸಮಾಜವಿದೆ. ಇವೆರಡು ಸಮಾಜಗಳಲ್ಲಿ ಬರಿಯ ಹೆಸರಿನ ಹೋಲಿಕೆ ಇದೆಯೆ? ಅಥವಾ ಪ್ರಾಚೀನ ಕಾಲದಲ್ಲಿ ಇವೆರಡೂ ಜನಾಂಗಗಳೊಲಗೆ ಏನಾದರೂ ಸಂಬಂಧವಿದ್ದಿತೆ? ಎಂಬುದು ಬಹಳ ಮಹತ್ವದ ಪ್ರಶ್ನೆಯಾಗಿದೆ. ‘‘ಹಟ್ಟಿ”(ದನಗಳ ಬೀಡು) ಮಾಡಿಕೊಂಡಿದ್ದವರು ‘‘ಹಟಗಾರ”ರಾದರು. ‘‘ಪಟ” (ವಸ್ತ್ರ)ಗಳನ್ನು ಮಾಡುವವರು ಹಟಕಾರರಾದರು.

ಶಂಬಾ ಅವರ ಮೇರೆಗೆ ‘‘ಹಟಗಾರ-ಜಾಡರ ಇಂದಿನ ಹೋರೆ ನೇಗಿ ಇವರು ದೇವಾಂಗರೆಂಬ ಹೆಸರಿನಿಂದಲೇ ಸುಪ್ರಸಿದ್ದರಿದ್ದಾರೆ. ‘‘ದೇವಾಂಗ ಪುರಾಣ”ವೆಂಬ ಒಂದು ಗ್ರಂಥವೂ ಇದೆ. ಇದೇ ಪುರಾಣದಲ್ಲಿ ಇನ್ನೊಂದೆಡೆಗೆ ಪಾರ್ವತಿಯ ದೇವಾಂಗನಿಗೆ ಕಂಕಣವನ್ನೂ ದಯಪಾಲಿಸಿದ ಸಂಗತಿಯಿದೆ. (ಪುಟ-೯೧) ಆ ಕಂಕಣವು ದೊರೆತ ಬಳಿಕ ದೇವಿಯ ಅಪ್ಪಣೆಯಂತೆ ನೇಗಿಯನ್ನು ಕೈಗೊಂಡ ವರ್ಣನೆಯಿದೆ. ಆದರೆ ದೇವಿಯು ಕೊಟ್ಟ ಕಂಕಣವು ಎಂತಹುದು?….. ಎಂಬುದರ ಬಗ್ಗೆ ಮಾತ್ರ ಪುರಾಣವು ಮೌನ ತಾಳುತ್ತದೆ. ಅದು ಉಣ್ಣಿಯದೆ? ಹತ್ತಿಯದೆ? ಸ್ವಲ್ಪ ವಿಚಾರಿಸಿ ನೋಡಿದೆರ ಹತ್ತಿಗಿಂತ ಮೊದಲು ಉಣ್ಣಿಯೆಂಬುದು ಗೊತ್ತಾಗುವಂತಿದೆ. ಒಕ್ಕಲುತನವು ಗೊತ್ತಾದ ಮೇಲೆ ಹತ್ತಿ; ಕಾಡು ಹತ್ತಿಯ ಗಿಡಗಳು ದೊರತ ಬಳಿಕ ಅದು ಮನುಷ್ಯನಿಗೆ ಗೊತ್ತು. ಅಲ್ಲಿಯವರೆಗೆ? ಹಟ್ಟಗಾರ-ದನಗಾರನಾಗಿದ್ದಾಗ ಸುಲಭವಾಗಿ ಸಿಕ್ಕುವ ಉಣ್ಣಿಯಿಂದ ಬಟ್ಟೆಗಳನ್ನು ಮಾಡಿಕೊಳ್ಳುವ ಬಗೆಯನ್ನು ಮನುಷ್ಯನು ಮೊಟ್ಟಮೊದಲಿಗೆ ಕಲಿತಿರಲಿಕ್ಕೆಬೇಕು. ಆದುದರಿಂದ ಉಣ್ಣೆಕಂಕಣದವರು ಹಳಬರು ಹತ್ತಿ ಕಂಕಣವು ಅದರ ಮುಂದಿನ ತರಗತಿ.

ಶಂಬಾರವರ ಅನಿಸಿಕೆಯಂತೆ ಆ ಕಾಲದಲ್ಲಿ ಮರಗಳು ಹಟಗಾರ ಜನಾಂಗದ ಉಪ ಜೀವಿಕೆಯ ಮುಖ್ಯ ಸಾಧನವಾಗಿರಬೇಕು. ಉಣ್ಣಿಗಿಯಲೂ ಮೊದಲಿಗೆ ಎಷ್ಟೋ ಕಾಲದವರೆಗೆ, ಉಣ್ಣೆ ಬಂದ ಬಳಿಕ ಎಷ್ಟೋ ದಿನಗಳವರೆಗೆ, ಗಿಡಗಳಿಂದಲೇ ಬಟ್ಟೆಗಳನ್ನು ಮಾಡಿಕೊಳ್ಳುವ ಪದ್ಧತಿಯಿತ್ತು. ನೇಗೆಯು ಗೊತ್ತಾಗುವ ಮೊದಲು ಕಾಡು ಸ್ಥೀತಯ ಮಾತು ಹಾಗಿರಲಿ, ಹೆಣೆಯುವುದು – ನೇಯುವುದು ತಿಳಿದ ಬಳಿಕ, ಹತ್ತಿಗಿಂತ ಮೊದಲು, ಗಿಡಗಳೇ ನೇಯ್ಕರರಿಗೆ ಜೀವನಾಧಾರವಾಗಿದ್ದವು. ‘‘ತ್ವಕ್ , ಫಲ, ಕ್ರಿಮಿ-ರೋಮಾಣಿ ವಸ್ತ್ರಯೋನಿ”(ನಾರು, ನೂಲು, ಕ್ರಿಮಿಜ, ರೋಮಂಗಳು) ಎಂದು ಅಮರಕೋಶವು ಹೇಳುತ್ತದೆ. ತ್ವಕ್ ಎಂದಿರಿಲ್ಲಿ ವಲ್ಕಲ. ವಲ್ಕ ವಸ್ತ್ರಗಳಿಗೆ ಪ್ರಾಚೀನ ಕಾಲದಲ್ಲಿ ನಮ್ಮ ದೇಶದೊಳಗೆ ಎಷ್ಟೊಂದು ಪ್ರಾಶಸ್ತ್ಯವಿದ್ದಿತೆಂಬುದು ಸುಪ್ರಸಿದ್ಧವೇ ಇದೆ. ಕಣ್ವನ ಆಶ್ರಮದ ಒಂದು ಗಿಡವು ಶಕುಂತಲೆಗೆ ಅತ್ತೆಯ ಮನೆಗೆ ಹೋಗುವಾಗ ವಸ್ತ್ರ (ಕ್ಷೌಮ)ವನ್ನು ಕೊಟ್ಟ ಹಾಗೆ ಕಾಲಿದಾಸನು ವರ್ಣಿಸಿದ್ದಾನೆ…… ಹಟಗಾರನು ಮರದಿಂದ ಝೂಡಿಯಿಂದ – ಜಾಡಿಯಿಂದ ಬಟ್ಟೆಗಳನ್ನು ನೇಯುತ್ತಿದ್ದನೆಂದು, ಅವನು ಮರವನು – ಜಾಡನು. ಆದರೆ, ಮುಂದೆ ಉಣ್ಣೆ – ಅರಳೆಯ – ಬಟ್ಟೆಗಳನ್ನು ನೇಯುವಾಗಲೂ ಆ ಹೆಸರೇ ಉಳಿಯಿತು. ಸಾಳಿಗಳೆಂದು ಜಾಡ (ಮರವ)ರಿಗೆ ಪರ್ಯಾಯನಾಮ. ಸಾಲ, ಶಾಲಿ-ಶಾಲ್ಮಲವೆಂಬುದೊಂದು ವೃಕ್ಷಭೇದ, ಬೂರಲಿ ಅರಳೆಯ ಮರ! ಅಂತೂ ಆವ ಆ ದಿಕ್ಕಿನಿಂದ ವಿಚಾರಿಸಿದರೂ ಈ ಜಾನಂಗಕ್ಕೆ (ಮರ) ಜಾಡಿ ಮತ್ತು ಉಣ್ಣೆಗಳಿಗೂ ಇರುವ ಇವರ ಸಂಬಂಧವೇ ಕಣ್ಣಿಗೆ ಬೀಳುತ್ತಲಿದೆ. ‘‘ಒಂದು ಕಾಲಕ್ಕೆ ಬಟ್ಟೆಗಳು ಕೂದಲಿನವೆ ಇರುತ್ತಿದ್ದವೆಂಬ ಸೂಚನೆಯ ಕನ್ನಡದ ‘‘ನವುರು” (ಸೂಕ್ಷ್ಮ ಬಟ್ಟೆ) ಎಂಬ ಶಬ್ದಲ್ಲಿಯೂ ಗೋಚರವಾಗುತ್ತದೆ” ಎಂದು ಶಂಬಾ ಅಭಿಪ್ರಾಯ ಪಡುತ್ತಾರೆ. ಹೀಗೆ ಶಂಬಾರವರು ನೇಕಾರಿಕೆ ಹಾಗೂ ನೇಕಾರ ಜನಾಂಗದ ಪ್ರಾಚೀನತೆ ಕುರಿತು ಸಾಕಷ್ಟು ಮಾಹಿತಿ ಒದಗಿಸಿದ್ದಾರೆ.

ಕ್ರಿ.ಶ.ಪೂರ್ವ ೧೫೦೦ ರಿಂದ ಕ್ರಿ.ಶ.೧೫೦೦ರವರೆಗೆ ಭಾರತ ಬಟ್ಟೆ ತಯಾರಿಸುವ ಏಕೈಕ ದೇಶವಾಗಿತ್ತು. ಭಾರತ ಗ್ರೀಸ, ಕ್ರೀಟ, ಇಜಿಪ್ಟ್ , ಬೆಬೆಲೋನಿಯಾ, ಸಿರಿಯಾ, ಜೇರುಸಲೇಮ, ಚೀನ, ಮಲೇಶಿಯಾ, ಜಾವಾ-ಸುಮಾತ್ರ ಮುಂತಾದ ದೇಶಗಳಿಗೆ ಬಟ್ಟೆ ರಫ್ತು ಮಾಡುತ್ತಿತ್ತೆಂದು ತಿಳಿಯುತ್ತದೆ. ಇಜಿಪ್ತದಲ್ಲಿರುವ ಪಿರಾಮಿಡ್ ಗಳಲ್ಲಿರುವ ಶವಗಳಿಗೆ ಭಾರತದಿಂದ ಆಮದಾದ ಬಟ್ಟೆಗಳನ್ನೇ ಸುತ್ತಲಾಗಿದ್ದು ಈ ಬಟ್ಟೆಗಳಿಗೆ ‘‘ಪಟ್ ” ಎಂದು ಕರೆದಿದೆ. ಇಲ್ಲಿ ಬಟ್ಟೆಗೆ ‘‘ಪಟ್ ” ಹಾಗೂ ಹತ್ತಿಗೆ ‘‘ಕರ್ಪಸ್ ” ಶಬ್ದ ಬಳಕೆಯಲ್ಲಿದೆ.

ಮಾನವನ ಬದುಕಿಗೆ ಅನ್ನ, ಬಟ್ಟೆ, ಇರಲು ಮನೆ(ಆಶ್ರಯ) ಇವು ಪ್ರಮುಖ ಅಗತ್ಯತೆಗಳು. ಮನುಷ್ಯ ತನ್ನ ‘‘ಅನ್ನದ” ಅಗತ್ಯತೆಗಾಗಿ ಕೃಷಿಯನ್ನು ನೀಗಿಸಿಕೊಂಡ. ತದನಂತರ ತನ್ನ ಪ್ರಮುಖ ಅಗತ್ಯತೆ ಬಟ್ಟೆ ವಸ್ತ್ರನಿರ್ಮಾಣ ಕಾರ್ಯ ಅಂದರೆ ನೇಕಾರಿಕೆ ಪ್ರಾರಂಭಿಸಿರಲು ಸಾಕು. ಆದ್ದರಿಂದ ನೇಕಾರಿಕೆ ಇದು ಕೃಷಿಯಷ್ಟೇ ಪುರಾತನ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ನಮ್ಮ ದೇಶದಲ್ಲಿ ಕೃಷಿಯನ್ನು ಬಿಟ್ಟರೇ ಹೆಚ್ಚಿನ ಜನರ ಜೀವನಾಧಾರ ಎನಿಸಿರುವ ವೃತ್ತಿ ನೇಕಾರಿಕೆ. ನೇಕಾರಿಕೆ ಎಂದರೆ ನಾವು ಉಡಲು ತೊಡಲು ಬಳಸುವ ಬಟ್ಟೆಯ ಉತ್ಪಾದನೆ ಮಾಡುವುದು. ಇದು ಶ್ರಮ ಬಯಸುವ ವೃತ್ತಿ ಗಿಡಮರಗಳ ನಾರು, ಪ್ರಾಣಿಗಳ ಕೂದಲು, ರೇಶಿಮೆ, ಹತ್ತಿನಂತರ ಇತ್ತೀಚಿನ ದಿನಗಳಲ್ಲಿ ಕೃತ್ರಿಮ ಹಾಗೂ ರಾಸಾಯನಿಕ ನೂಲು ಹೀಗೆ ಬಟ್ಟೆ ನಿರ್ಮಾಣಕ್ಕೆ ಹಂತ ಹಂತವಾಗಿ ಬೇರೆ ಬೇರೆ ಕಚ್ಚಾ ಸಾಮಗ್ರಿಗಳ ಬಳಸುತ್ತ ಬಂದಿರುವುದು ಗೋಚರವಾಗುತ್ತದೆ. ಅದರಂತೆಯ ಬಟ್ಟೆ ನಿರ್ಮಾಣ ಸಾಧನಗಳಲ್ಲೂ ಹೊಸ ಹೊಸ ಅವಿಷ್ಕಾರಗಳನ್ನು ನಡೆದು ವಸ್ತ್ರ ನಿರ್ಮಾಣ ಕ್ರಿಯೆ ಸುಲಭಗೊಳ್ಳುತ್ತ ನಡೆದಿರುವುದು ಕಾಣುತ್ತೇವೆ.

ನೇಕಾರ ಬಟ್ಟೆಯನ್ನು ನೇಯಲು ಬಳಸುವ ಸಾಧನವೇ ಮಗ್ಗ. ಒಂದು ರೀತಿಯಲ್ಲಿ ಸಾಕಷ್ಟು ಬದಲಾವಣೆಗಳ ನಂತರ, ನೇಯ್ಗೆಗೆ ಒಂದು ಪರಿಪೂರ್ಣ ಎನಿಸಬಹುದಾದ (ಆಗಿನ ಕಾಲದಲ್ಲಿ) ರೂಪವೇ ಕುಣಿ ಮಗ್ಗ. ಕುಣಿ ಮಗ್ಗ ಇದು ಕೈ ಮಗ್ಗವಾಗಿದ್ದು ಲಾಳಿಯನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಕೈಯಿಂದ ಓಡಾಡಿಸಬೇಕು. ಈ ಪ್ರಕಾರದ ಕೈಮಗ್ಗ ಸುಮಾರು ವರುಷ ಅಸ್ತಿತ್ವದಲ್ಲಿರಲು ಸಾಕು. ೧೯೨೫ರ ನಂತರ ದಾರದ ಸಹಾಯದಿಂದ ಲಾಳಿಯನ್ನು ಒಂದೆಡೆಯಿಂದ ಮತ್ತೊಂದೆಡೆ ಓಡಾಡಿಸುವ ತಂತ್ರ ಕಂಡುಹಿಡಿಯಲಾಯಿತು. ಇದೇ ಷಟಲ್ ಮಗ್ಗ. ಇದರಿಂದ ನೇಕಾರರ ಶ್ರಮ ಕಡಿಮೆಯಾಯಿತಲ್ಲದೇ, ಉತ್ಪಾದನೆ ಎರಡು ಮೂರು ಪಟ್ಟು ಹೆಚ್ಚಿತು. ಜೊತೆಗೆ ಅಣಿಯನ್ನು ಮೇಲೆ ಕೆಳಗೆ ಕಾಲಿನಿಂದ ಮಾಡಲು ಅನುಕೂಲವಾಗುವ ಕಾಲ್ಮಣೆ(ಪೆಡಲ್ ) ಬಂತು. ನಂತರ ಬಂದುದೇ ಸ್ವಯಂಚಾಲಿತ (ಅಟೊಮ್ಯಾಟಿಕ್ ) ಮಗ್ಗ. ನೇಕಾರನಿಗೆ ಇದರಲ್ಲಿ ಶ್ರಮ ಕಡಿಮೆ. ಈ ಸ್ವಯಂ ಚಾಲಿತ ಮಗ್ಗದಲ್ಲಿ ಹಾಸು ಸುತ್ತಲು ದುಂಡನೆಯ ಮರವೊಂದಿದ್ದು ಅಗತ್ಯಕ್ಕೆ ತಕ್ಕಂತೆ ಹಾಸನ್ನು ಸುತ್ತಿರಲಾಗಿರುತ್ತದೆ. ಕೈ ಮಗ್ಗದಂತೆಯೇ ನೇಕಾರ ಎಲ್ಲ ಕೆಲಸ ಮಾಡಬೇಕಾಗಿದ್ದರೂ, ಸಾಂಪ್ರದಾಯಿಕ ಕೈ ಮಗ್ಗಕ್ಕೂ ಇದಕ್ಕೂ ಇರುವ ವ್ಯತ್ಯಾಸವೆಂದರೆ, ಸಿದ್ಧವಾಗುವ ಬಟ್ಟೆ ತಾನಾಗಿಯೇ ಸುತ್ತಿಕೊಳ್ಳುವ ದುಂಡನೆಯ ಮರ (ರೋಲರ) ಇರುತ್ತದೆ. ಹಾಸು ಸುತ್ತಿದ ಮರ ಅಗತ್ಯಕ್ಕೆ ತಕ್ಕಂತೆ ನೂಲು ಬಿಡುವಂತೆ ನೇಯ್ದ ಬಟ್ಟೆ ತಾನಾಗಿಯೇ ಸುತ್ತಿಕೊಳ್ಳುವುದು. ಈ ಎರಡು ಕೆಲಸ ತಾನಾಗಿಯೇ ನಡೆಯುತ್ತವೆ. ಮಿಕ್ಕಂತೆ ಎಲ್ಲವೂ ಒಂದೇ. ಇದು ನೆಲದ ಮೇಲ್ಮಟ್ಟದಲ್ಲಿರುತ್ತದೆ. ಕುಣಿ ಮಗ್ಗದ ಹಾಗೆ ‘‘ತಗ್ಗು” (ಗುಳಿ) ಇರುವುದಿಲ್ಲ. ಈ ಮಗ್ಗ ಹಾಕಲು ಕಡಿಮೆ ಜಾಗ ಸಾಕು. ಈ ನಂತರದ ನೇಯ್ಗೆಯ ಅವಿಷ್ಕಾರವೇ ವಿದ್ಯುತ್ ಚಾಲಿತ ಮಗ್ಗ (ಪಾವರಲೂಮ) ಇಲ್ಲಿ ಲಾಳಿ ಓಡಾಡುವುದು, ಅಗತ್ಯವಾದ ಹಾಸು ನೂಲು ಬಿಡುವುದು – ನೇಯ್ದ ಬಟ್ಟೆ ಸುತ್ತುವುದು, ಎಲ್ಲ ಕ್ರಿಯೆ ವಿದ್ಯುತ್ ಯಂತ್ರದಿಂದ ಸಾಗುತ್ತದೆ. ಮಗ್ಗ ನಿರಾಂತಕ ಕೆಲಸ ಮಾಡುವಂತೆ ಸತತ ಕಣ್ಣಿಡುವುದು ಹಾಸಿನ – ಹೊಕ್ಕಿನ ಎಳೆಗಳು ತುಂಡಾದಾಗ ಜೋಡಿಸುವುದು ಮುಂತಾದ ಎಲ್ಲ ಕೆಲಸ ನೇಕಾರ ಮಾಡಬೇಕಾಗುತ್ತದೆ.

ನೇಯ್ಗೇಗೆ ಅತ್ಯಗತ್ಯವಾದ ಕಚ್ಚಾ ಮಾಲು ಎಂದರೆ ನೂಲು. ಈಗ ನೂಲು ಕಾರಖಾನೆಗಳಲ್ಲಿ ಸಿದ್ದಗೊಂಡು ಹೊರ ಬರುತ್ತಿದೆ. ಇದರಲ್ಲಿ ಹತ್ತಿ ಹಾಗೂ ರೇಶಿಮೆ ಪ್ರಮುಖ ಬಟ್ಟೆಯ ಆಕರ್ಷಕ ಅಂಚಿನ ಅಂಚಿನ ನಿರ್ಮಾಣಕ್ಕೆ ಜರಿ ಬೇಕಾಗುತ್ತದೆ. ಇದರ ಜೊತೆಗೆ ಈಗಿನ ದಿನಮಾನಗಳಲ್ಲಿ ಸಾರ್ವತ್ರಿಕವಾದ ರಾಸಾಯನಿಕ ನೂಲುಗಳು, ಪಾಲಿಸ್ಟರ್ , ಮಸರಾಯಿಜ, ಕೃತ್ರಿಮ ರೇಶಿಮೇ (ಚಮಕಾ), ಪ್ಲಾಸ್ಟಿಕ ಜರಿ ಮುಂತಾದವುಗಳು ನೇಕಾರರ ಕಚ್ಚಾಮಾಲುಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ.

ನೇಕಾರಿಕೆಯಲ್ಲಿ ಕಾರಖಾನೆಯಲ್ಲಿ ಸಿದ್ದವಾದ ಮಾಲನ್ನು ತಂದು ಅದನ್ನು ಶುದ್ಧ ಮಾಡುವುದು, ಬೇಕಾದ ಬಣ್ಣ ಹಾಕುವುದು, ನಂತರ ಹಾಸು ತಯಾರ ಮಾಡುವುದು, ನೂಲು ತೋಡುವುದು, ಹಣಗಿ ಕೆಚ್ಚುವುದು, ಕಂಡಿಕೆ ಸುತ್ತುವುದು, ಕೊಯ್ಯುವುದು ಸಿದ್ಧವಾದ ಮಾಲನ್ನು ಪೇಟೆಗೆ ಅಥವಾ ಯಜಮಾನನಿಗೆ ತಲುಪಿಸುವುದು -ಇವೆಲ್ಲ ನೇಕಾರಿಯಲ್ಲಿನ ಪ್ರಕ್ರಿಯೆಗಳು.

ನೇಕಾರಿಕೆ ಉದ್ಯೋಗದಲ್ಲಿ, ನೇಕಾರಿಕೆಯ ಕುಲಕಸಬು ಎಂದು ನಂಬಿರುವ ದೇವಾಂಗ, ಸ್ವಕುಳಸಾಳಿ, ಕುರುಹಿನ ಶೆಟ್ಟಿ, ಪಟ್ಟಸಾಳಿ, ಪದ್ಮಸಾಳಿ ಹಾಗೂ ತೋಟಗವೀರ (ಜಾಡರ) ಇವರು ತಮ್ಮನ್ನು ತಾವು ತಲೆ-ತಲಾಂತರದಿಂದ ತೊಡಗಿಸಿಕೊಂಡಿರುತ್ತಾರೆ. ಇವರಲ್ಲದೆ ಪಟ್ಟೇಗಾರ, ಮುಸ್ಲಿಮ, ಮರಾಠಾ, ಕುರುಬರು, ಲಿಂಗಾಯತ ಮುಂತಾದ ಇತರ ಜನಾಂಗದವರು ನೇಯ್ಗೆ ಕಲಿತು ಈ ಉದ್ಯೋಗದಲ್ಲಿದ್ದಾರೆ.

ಇನ್ನೂ ನೇಕಾರಿಕೆಯ ವ್ಯವಹಾರದ ಕುರಿತು ಗಮನ ಹರಿಸೋಣ. ನೇಕಾರಿಕೆಯ ಉದ್ಯೋಗದಲ್ಲಿ ನೇಕಾರಿಕೆಗೆ ಸರಬರಾಜು ಆಗಬೇಕಾದ ಕಚ್ಚಾ ಮಾಲು ಹಾಗೂ ಸಿದ್ದವಾದ ಬಟ್ಟೆಗೆ ಮಾರುಕಟ್ಟೆ ಇವು ಎರಡು ಬಹಳ ಪ್ರಮುಖವಾದ ಅಂಶಗಳು. ನೇಕಾರ ತನ್ನ ಸ್ವಂತ ಆಥಿರಕ ಪರಿಸ್ಥಿತಿ ಇನ್ನಿತರ ಕಾರಣಗಳಿಂದ ತಾನೇ ಸ್ವತಃ ಪೇಟೆಯಿಂದ ಕಚ್ಚಾ ಮಾಲು ತಂದು, ನೇಯ್ಗೆ ಮಾಡಿ ಪೇಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗದು. ಇದರಿಂದ ನೇಕಾರನ ನೇಯ್ಗೆಗೆ ಬೇಕಾಗುವ ಕಚ್ಚಾಮಾಲು ಪೂರೈಕೆ, ನೇಯ್ದ ಸಿದ್ದಮಾಲಿಗೆ ಹಣ ಸಂದಾಯ ಕುರಿತು ಮೂರು ತರಹದ ಕೊಡುತಕ್ಕೊಳುವ ವಿಧಾನಗಳು ಅಸ್ತಿತ್ವದಲ್ಲಿವೆ.

೧. ಮುಂಗಡ ವಿಧಾನ ೨. ಸಟ್ಟಾ ವಿಧಾನ ಹಾಗೂ ೩. ರೋಖಡಾ ವಿಧಾನ

೧. ಮುಂಗಡ ವಿಧಾನ : ಈ ವಿಧಾನದಲ್ಲಿ ನೇಕಾರ ತನ್ನ ಸ್ವಂತ ಹಣವನ್ನಾಗಲಿ ಅಥವಾ ಯಾರಿಂದಾದರೂ ತಂದ ಹಣವನ್ನು ಕಚ್ಚಾ ಮಾಲು ಖರೀದಿಯಲ್ಲಿ ತೊಡಗಿಸುವುದಿಲ್ಲ. ಯಜಮಾನ ಅಥವಾ ಸಾಹುಕಾರರಿಂದ ಅಥವಾ ಸಂಘದಿಂದ ಪ್ರತಿಯೊಂದು ಮಗ್ಗಕ್ಕೆ ಸುಮಾರು ೧೦ ರಿಂದ ೨೦ ಸೀರೆ ಕಚ್ಚಾ ಮಾಲು ಅಂದರೆ ಬಣ್ಣ ಹಾಕಿದ ನೂಲು ತರುವುದು. ಯಜಮಾನನಿಂದ ತಂದ ಮಾಲನ್ನು ತೋಡುವುದು, ಹಾಸು ಮಾಡುವುದು, ಕೆಚ್ಚುವುದು ಮುಂತಾದ ಪ್ರಕ್ರಿಯೆಗಳ ಕೊನೆಗೆ ನೇಯ್ದು, ಸಿದ್ಧವಾದ ಬಟ್ಟೆಯನ್ನು ಮರಳಿ ಕಚ್ಚಾ ಮಾಲು ನೂಲು ತಂದ ಯಜಮಾನರಿಗೆ ಮರಳಿ ಕೊಡುವುದು. ಆ ಯಜಮಾನ ಸಿದ್ದಗೊಂಡ ಬಟ್ಟೆಯನ್ನು ತೆಗೆದುಕೊಂಡು ನೇಯ್ದ ಬಟ್ಟೆಯ ಒಂದು ಮೀಟರ ಅಳತೆ ಅಥವಾ ಒಂದು ಸೀರೆ ಅಥವಾ ಒಂದು ಧೋತಿಗೆ ಇಂತಿಷ್ಟು ಹಣ ನೇಕಾರನಿಗೆ ಸಂದಾಯ ಮಾಡುತ್ತಾನೆ. ಇವರಿಂದ ನೇಕಾರನಿಗೆ ದುಡಿದ ಕೂಲಿ ಅಥವಾ ಮಜೂರಿ ದೊರೆಯುತ್ತದೆ. ಕಚ್ಚಾ ಮಾಲಿನ ಅಥವಾ ಸಿದ್ದಗೊಂಡ ಬಟ್ಟೆಯ ದರದ ಏರಿಳಿತಕ್ಕೆ ಈ ಪದ್ಧತಿಯಲ್ಲಿ ನೇಕಾರನಿಗೆ ಯಾವುದೇ ರೀತಿ ಸಂಬಂಧ ಇರದು. ಆದರೆ ದುಡಿತಕ್ಕೆ ಕನಿಷ್ಠ ಕೂಲಿಯಾದರು ನಿಶ್ಚಿತ.

೨. ಸಟ್ಟಾ ವಿಧಾನ : ಸಟ್ಟಾ ವಿಧಾನದಲ್ಲಿ ನೇಕಾರ ಯಜಮಾನನಿಂದ ಕಚ್ಚಾ ಮಾಲು ಅಂದರೆ ನೂಲಿಗಾಗಿ ಹಣವನ್ನು ತರುತ್ತಾನೆ. ಆ ಹಣದಿಂದ ಪೇಟೆಯಿಂದ ತನಗೆ ಬೇಕಾದ ನೂಲು, ಕೃತಕ ರೇಶ್ಮೆ ಮುಂತಾದವುಗಳನ್ನು ಖರೀದಿಸುವುದು, ನೇಯ್ಯುವ ಮೊದಲಿನ ಕ್ರಿಯೆಗಳ ನಂತರ, ಬಟ್ಟೆ ನೇಯ್ದು ಸಿದ್ದವಾದ ಬಟ್ಟೆಯನ್ನು, ಹಣವನ್ನು ತಂದ ಯಜಮಾನನ ಹತ್ತಿರ ಮಾರುವುದು. ಆಗ ಆ ಯಜಮಾನನು ಆ ವೇಳೆಯಲ್ಲಿ ಇರುವ ಮಾರುಕಟ್ಟೆ ದರದಂತೆ ಸಿದ್ದ ಬಟ್ಟೆಯನ್ನು ಖರೀದಿಸುವನು. ಇದರಲ್ಲಿ ಕಚ್ಚಾ ಮಾಲಿಗಾಗಿ ಖರ್ಚಾದ ಹಣ ಹೋಗಲಾಗಿ ಉಳಿಯುವ ಮೊತ್ತವೇ ನೇಕಾರನ ಲಾಭವಾಗುತ್ತದೆ. ಈ ವಿಧಾನದಲ್ಲಿ ನೇಕಾರ ಕಚ್ಚಾ ಮಾಲು ಹಾಗೂ ಸಿದ್ದ ಬಟ್ಟೆಯ ಮಾರುಕಟ್ಟೆಯ ದರಗಳ ಏರು-ಇಳಿಕೆಗೆ ಬಾಧ್ಯಸ್ಥರು. ಆದುದರಿಂದ ಈ ವಿಧಾನದಲ್ಲಿಯೂ ನೇಕಾರನಿಗೆ ಹಾನಿಯಾಗುವ ಸಂಭವ ಹೆಚ್ಚು ಸದ್ಯ ಈ ವಿಧಾನ ಈಗ ಅನುಷ್ಠಾನದಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು.

೩. ರೋಬಡಾ ಪದ್ಧತಿ : ಇಲ್ಲಿ ನೇಕಾರ ತನ್ನ ಸ್ವಂತ ಹಣವನ್ನು ಕಚ್ಚಾ ಮಾಲಿನಲ್ಲಿ ತೊಡಗಿಸುತ್ತಾನೆ. ನೇಕಾರ ತನ್ನ ಸ್ವಂತ ಹಣ ಅಥವಾ ಇನ್ನಾರಿಂದಲೂ ತಂದ ಹಣ ತೊಡಗಿಸಿ ಪೇಟೆಯಿಂದ ತನಗೆ ಬೇಕಾದ ನೂಲನ್ನು ಖರೀದಿಸುತ್ತಾನೆ. ನೂಲನ್ನು ತೋಡುವ, ಹಾಸುವ, ಕೆಚ್ಚುವ ಕಾರ್ಯದ ಜೊತೆ ಬಟ್ಟೆಯನ್ನು ನೇಯುತ್ತಾನೆ. ಸಿದ್ಧವಾದ ಬಟ್ಟೆಯನ್ನು ಮುಕ್ತ ಮಾರುಕಟ್ಟೆಯಲ್ಲೋ ಅಥವಾ ಸಹಕಾರಿ ಸಂಘದಲ್ಲಿ ಮಾರುತ್ತಾನೆ. ಸಿದ್ಧವಾದ ಬಟ್ಟೆ ಮಾರಾಟ ಮಾಡಿ ಬಂದ ಹಣದಲ್ಲಿ ತಾನು ಕಚ್ಚಾ ಮಾಲಿಗಾಗಿ ತೊಡಗಿಸಿದ ಹಣ ಕಳೆಯಲಾಗಿ ಉಳಿಯುವ ಹಣವೇ ನೇಕಾರನ ಪಾಲಿನ ಲಾಭ. ಇದರಲ್ಲಿ ಎಲ್ಲ ಕ್ರಿಯೆಗಳಿಗೆ ತೊಡಗಿಸಿದ ಕೂಲಿ-ಮಜೂರಿ ಒಳಗೊಂಡಿರುತ್ತದೆ. ತನ್ನ ಮನೆಯ ಅಗತ್ಯತೆಗಳಿಗಾಗಿ ಸ್ವಲ್ಪ ಹಣ ಬಳಸಿ ಮತ್ತೆ ಉಳಿದ ಹಣ ನೇಕಾರಿಕೆ ವ್ಯವಹಾರದಲ್ಲಿ ತೊಡಗಿಸುವನು.

ಈ ವಿಧಾನದಲ್ಲಿ ನೇಕಾರ ಕಚ್ಚಾ ಮಾಲಿನ ಹಾಗೂ ಸಿದ್ಧಬಟ್ಟೆಯ ಮಾರುಕಟ್ಟೆಯ ದರಗಳ ಏರಿಳಿತಕ್ಕೆ ಜವಾಬ್ದಾರನಾಗಿರುತ್ತಾನೆ. ಅಂದರೆ ಏರಿಳಿತದಿಂದ ಲಾಭ-ಹಾನಿಗೆ ಒಳಪಡುವ ಸಂಭವವಿರುತ್ತದೆ. ಹಣಕಾಸಿನ ದೃಷ್ಟಿಯಿಂದ ಬಲಿಷ್ಠ ಮನುಷ್ಯ ಮಾತ್ರ ಈ ತರಹದ ವ್ಯವಹಾರ ಮಾಡಲು ಸಾಧ್ಯ. ಬಹುತೇಕ ನೇಕಾರರು ಈ ಪದ್ಧತಿಯಲ್ಲಿ ಹಾನಿ ಅನುಭವಿಸುವುದೇ ಹೆಚ್ಚು. ಕನಿಷ್ಠ ಕೂಲಿಯ ನಿಶ್ಚಿಂತತೆಯು ಈ ವಿಧಾನದಲ್ಲಿ ಇಲ್ಲ.

ಕರ್ನಾಟಕದಲ್ಲಿ ನೇಕಾರರು

೧೯೮೦ರ ಅವಧಿಯಲ್ಲಿ ಕರ್ನಾಟಕದಲ್ಲಿ ಸುಮಾರು ೮೦,೪೦೦ ಕೈಮಗ್ಗಗಳಿದ್ದವು ಎಂದು ಅಂದಾಜಿಸಲಾಗಿದೆ. ಅಂದಿನ ಅವಿಭಾವಿತ ವಿಜಾಪೂರ ಜಿಲ್ಲೆಯಲ್ಲಿ ೨೬೨೦೦ ಮಗ್ಗಗಳಿದ್ದರೆ ಅವಿಭಾಜಿತ ಧಾರವಾಡ ಜಿಲ್ಲೆಯಲ್ಲಿ ೧೦,೦೦೬, ಬೆಳಗಾವಿ ಜಿಲ್ಲೆಯಲ್ಲಿ ೫೨೫೩ ಮಗ್ಗಗಳಿದ್ದವು. ಅಂದರೆ ಈ ಮೇಲಿನ ಮುಂಬಯಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ೪೧೪೫೯ ಕೈಮಗ್ಗಗಳಿದ್ದವು. ಬೆಂಗಳೂರು ಜಿಲ್ಲೆಯಲ್ಲಿ ೬೮೫೮, ತುಮಕೂರು ಜಿಲ್ಲೆಯಲ್ಲಿ ೭೨೧೮ ಚಿತ್ರದುರ್ಗ ಜಿಲ್ಲೆಯಲ್ಲಿ ೪೮೧೯, ಗುಲಬರ್ಗಾ ಜಿಲ್ಲೆಯಲ್ಲಿ ೩೯೯೩ ಮಗ್ಗಳಿದ್ದ ಅಂಶ ಗಮನಕ್ಕೆ ಬರುತ್ತದೆ. ಮಿಕ್ಕ ಎಲ್ಲ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕೈಮಗ್ಗಗಳಿರುವುದು ಗೋಚರಿಸುವುದು. ವಿದ್ಯುತ್ ಚಾಲಿತ ಮಗ್ಗದ ಪ್ರಭಾವ, ಕಚ್ಚಾ ಸರಕಿನ ದರದಲ್ಲಿ ಏರಿಕೆ – ಸಿದ್ದ ಸರಕಿಗೆ ಸರಿಯಾದ ಮಾರುಕಟ್ಟೆ ಇಲ್ಲದ್ದರಿಂದ ಇಂದು ಕೈಮಗ್ಗಗಳ ಸಂಖ್ಯೆ ಬಹಳಷ್ಟು ಇಳಿಮುಖವಾಗಿದೆ. ಈಗ ಸುಮಾರು ೩೦೦೦೦ವರೆಗೆ ನಿರಂತರವಾಗಿ ಬೆಳೆಯುತ್ತ ಸಾಗಿದ್ದು ಇತ್ತೀಚಿಗೆ ಈ ಸಂಖ್ಯೆಯ ಬೆಳವಣಿಗೆ ನಿಂತಿದೆ. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಚಾಲಿತ ಮಗ್ಗಳ ಸಂಖ್ಯೆ ಕಡಿಮೆಯಾಗುತ್ತ ಸಾಗಿದೆ. ಕರ್ನಾಟಕದಲ್ಲಿ ಈಗ ಸುಮಾರು ೧,೪೦,೦೦೦ ವಿದ್ಯುತ್ ಚಾಲಿತ ಮಗ್ಗಗಳಿವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಸುಮಾರು ೫೦,೦೦೦ ವಿದ್ಯುತ್ ಚಾಲಿತ ಮಗ್ಗಗಳಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ ೩೦,೦೦೦ ವಿದ್ಯುತ್ ಮಗ್ಗಗಳಿರುವುದು ಕಂಡುಬರುವುದು.

ನೇಕಾರಿಕೆ ವೃತ್ತಿಯಲ್ಲಿ ಪ್ರಮುಖವಾಗಿ ಎರಡು ಪ್ರಮುಖ ಭಾಗಗಳನ್ನು ಕಾಣಬಹುದು. ಒಂದು ನೇಕಾರ ಹಾಗೂ ಎರಡನೆಯದು ಯಜಮಾನ. ನೇಕಾರ ಇವನು ಶ್ರಮ ಜೀವಿ. ಬಟ್ಟೆಯನ್ನು ನೇಯುವ ಪ್ರಕ್ರಿಯೆಯನ್ನು ಪೂರೈಸಿ ಬಟ್ಟೆಯನ್ನು ಸಿದ್ಧಪಡಿಸುವವನು. ಯಜಮಾನ ನೇಕಾರನಿಗೆ ಕಚ್ಚಾ ಸರಕನ್ನು ಒದಗಿಸುವುದು. ನೇಕಾರ ಸಿದ್ದಪಡಿಸಿದ ಬಟ್ಟೆಗಳನ್ನು ಕೊಂಡುಕೊಳ್ಳುವುದು ಅಥವಾ ಕೂಲಿ ಕೊಡುವುದು. ತಯಾರಾದ ಬಟ್ಟೆಗಳನ್ನು ಮಾರುಕಟ್ಟೆಯ ಅಗತ್ಯತೆ ಅನುಸಾರ ಬಟ್ಟೆಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡುವುದು.

ಇತ್ತೀಚಿನ ದಿನಗಳಲ್ಲಿ ಕೈಮಗ್ಗಗಳ ಸಂಖ್ಯೆ ಬಹಳಷ್ಟು ಕ್ಷೀಣಿಸಿರುವುದರಿಂದ, ವಿದ್ಯುತ್ ಮಗ್ಗಗಳೇ ಹೆಚ್ಚು. ಈ ವ್ಯವಸ್ಥೆಯಲ್ಲಿ ಒಬ್ಬ ಯಜಮಾನ ಕನಿಷ್ಟ ಒಂದು ಅಥವಾ ಎರಡು, ಗರಿಷ್ಠ ೨೦ ರಿಂದ ೨೫ ವಿದ್ಯುತ್ ಮಗ್ಗಗಳನ್ನು ಹೊಂದಿರುವುದು ಕಂಡುಬರುವುದು. ಇಲ್ಲಿ ವಿದ್ಯುತ್ ಮಗ್ಗಗಳ ಸಂಪೂರ್ಣ ವ್ಯವಹಾರದಲ್ಲಿ ಯಜಮಾನ ತಾನೇ ಸ್ವಂತ ಹಣ ತೊಡಿಗಿಸುತ್ತಾನೆ. ಕಚ್ಚಾ ಸರಕನ್ನು ಮಾರುಕಟ್ಟೆಯಿಂದ ಖರೀದಿಸಿ ಸಿದ್ದವಾದ ಸರಕನ್ನು ಮಾಡುಕಟ್ಟೆಗೆ ಮಾರಾಟ ಮಾಡಲು ತನ್ನದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾನೆ. ಬಟ್ಟೆ ನೇಯಲು ನೇಕಾರರನ್ನು ನಿಯಮಿಸಿ ಕೊಳ್ಳುತ್ತಾನೆ. ನೇಕಾರ ನೇಯ್ದ ಬಟ್ಟೆಗೆ ಒಂದು ಮೀಟರ್ ಬಟ್ಟೆಗೆ ಅಥವಾ ಒಂದು ಸೀರೆಗೆ ಅಥವಾ ಒಂದು ಧೋತಿಗೆ ಇಂತಿಷ್ಟು ಹಣ ಎಂದು ಮಜೂರಿ ನೇಕಾರನಿಗೆ ಕೊಡುತ್ತಾನೆ. ಒಂದೆರಡು ವಿದ್ಯುತ್ ಮಗ್ಗಗಳಿರುವ ಹಲವಾರು ನೇಕಾರರು ಮುಂಗಡ ವಿಧಾನದಂತೆ ಯಜಮಾನರಿಂದ ಕಚ್ಚಾ ಸರಕನ್ನು ತಂದು ಬಟ್ಟೆಯನ್ನು ಸಿದ್ಧಪಡಿಸಕ್ಕೆ ಮಜೂರಿ ಅಥವಾ ಕೂಲಿ ಪಡೆಯುತ್ತಾನೆ. ಹೆಚ್ಚಿನ ವಿದ್ಯುತ್ ಮಗ್ಗದವರು ರೋಖಡಾ ವಿಧಾನದಂತೆ ನೇಯುವ ವೃತ್ತಿ ನಡೆಸುವರು.

ಬಟ್ಟೆ ನೇಯುವ ಈ ಪ್ರಕ್ರಿಯೆಯಲ್ಲಿ ತಮ್ಮನ್ನು ತಲೆತಲಾಂತರದಿಂದ ತೊಡಗಿಸಿಕೊಂಡ ಬಟ್ಟೆ ನೇಯುವ ನೇಕಾರ ಹಾಗೂ ಯಜಮಾನ ಇವರಿಬ್ಬರು ನೇಕಾರ ವೃತ್ತಿಯ ಅವಿಭಾಜ್ಯ ಅಂಗ. ಯಜಮಾನ ಅಥವಾ ಅವನ ಪೂರ್ವಜರು ಮೂಲತಃ ನೇಕಾರರೇ. ಆದ್ದರಿಂದ ಇಲ್ಲಿ ನೇಕಾರಿಕೆ ಕೂಲಿ ಮಾಡುವವ ಹಾಗೂ ನೇಕಾರಿಕೆ ವೃತ್ತಿಯ ಯಂತ್ರಗಳ ಸ್ಥಾಪನೆ-ನಿರ್ವಹಣೆ ಅಲ್ಲದೆ ಕಚ್ಚಾ, ಸರಕು ಖರೀದಿ – ಸಿದ್ದವಾದ ಸರಕಿನ ಮಾರಾಟ – ಕೂಲಿ ಹಣ ವಿತರಣ ಈ ಕ್ರಿಯೆಯಲ್ಲಿ ತೊಡಗುವ ಯಜಮಾನ ಇಬ್ಬರೂ ನೇಕಾರರೇ. ಈ ಎರಡು ವಿಧದ ನೇಕಾರರ ಸಮಸ್ಯೆಗಳು ಒಂದು ದೃಷ್ಟಿಯಿಂದ ಬೇರೆ ಬೇರೆ. ಆದಾಗ್ಯೂ ನೇಕಾರಿಕೆಯ ಸಮಸ್ಯೆಗಳೇ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ.

ನೇಕಾರಿಕೆ ವೃತ್ತಿಯಲ್ಲಿ ನೇಯ್ದ ಕೆಲಸಕ್ಕೆ ದೊರೆಯುವ ಕೂಲಿ, ಪ್ರದೇಶಗಳ ಅನುಗುಣ ಸ್ವಲ್ಪ ವ್ಯತ್ಯಾಸ ಇರುವುದು ಕಂಡುಬರುವುದು. ಉದಾಹರಣೆಗಾಗಿ ಬಾಗಲಕೋಟ ಜಿಲ್ಲೆಯ ಇಳಕಲ್ಲು, ಗದಗ ಜಿಲ್ಲೆಯ ಗದಗ-ಬೆಟಗೇರಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಬೆಂಗಳೂರು, ಬೆಳಗಾವಿ ಇತ್ಯಾದಿ.

ಇಳಕಲ್ಲು ರೇಶಿಮೆಯ ಟೋಪ ತೆನಿ ಸೀರೆಗಾಗಿ ಪ್ರಖ್ಯಾತವಾದುದು. ಇಲ್ಲಿ ಮೊದ ಮೊದಲು ಪೂರ್ಣ ಪ್ರಮಾಣದ ರೇಶಿಮೆ ಸೀರೆಗಳು ನಿರ್ಮಾಣವಾಗುತ್ತಿದ್ದವು. ಮುಂದೆ ಕೃತ್ರಿಮ ರೇಶಿಮೆ, ಪ್ಲಾಸ್ಟಿಕ ಜರಿ ಬಳಕೆಗಳಿಂದ, ಸೆರಗು ಮಾತ್ರ ರೇಶಿಮೆ, ಮಿಕ್ಕ ಭಾಗ ಕೃತ್ರಿಮ ರೇಶಿಮೆ ಒಳಗೊಂಡ ಸೀರೆ ಉತ್ಪಾದನೆ ಪ್ರಾರಂಭವಾಯಿತು. ಇಳಕಲ್ಲ ಸುತ್ತಲಿನ ಪ್ರದೇಶವಾದ ಹನಮಸಾಗರ, ದೋಟಿಹಾಳ, ತಾವರಗೇರಿ, ಸೂಳೇಬಾವಿ ಹಾಗೂ ಇನ್ನಿತರ ಭಾಗಗಳಲ್ಲಿ ಇದೇ ಪ್ರಕಾರ ಸೀರೆಗಳ ಉತ್ಪತ್ತಿಯಾಗುವುದು. ಇಳಕಲ್ಲ ಸೀರೆಗಳಿಗೆ ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಅಪಾರ ಬೇಡಿಕೆ. ಮಹಾರಾಷ್ಟ್ರದ ಕೆಲ ಊರುಗಳಲ್ಲಿ ಕೆಲ ಮದುವೆ ಸಮಾರಂಭದಲ್ಲಿ ಸಾಂಪ್ರದಾಯಿಕ ಇಳಕಲ್ಲು ಸೀರೆ ಇಲ್ಲದೇ ಮದುವೆಯೇ ನಡೆಯುವುದಿಲ್ಲ. ಇಳಕಲ್ಲು ಸೀರೆ ನೇಯುವ ನೇಕಾರನಿಗೆ ಒಂದು ಸೀರೆ ನೇಯ್ದರೆ ರೂ.೬೫- ರಿಂದ ರೂ.೧೦೦ ರವರೆಗೆ ಕೂಲಿ ದೊರೆಯುತ್ತದೆ. ಈ ಕೂಲಿ ಸೀರೆಯಲ್ಲಿ ಉಪಯೋಗಿಸುವ ರೇಶ್ಮೆ ಪ್ರಮಾಣ, ಅದರ ನಕ್ಷೆ, ಅಂಚು ಮುಂತಾದ ಅಂಶ ಪರಿಗಣಿಸಲಾಗುವುದು. ಒಟ್ಟಾರೆ ಇಳಕಲ್ಲು ಸೀರೆ ನೇಯುವ ನೇಕಾರರಿಗೆ ಒಂದು ವಾರಕ್ಕೆ ರೂ.೩೫೦ ರಿಂದ ರೂ.೪೫೦ ಕೂಲಿ ದೊರೆಯುವುದು.

ಗದಗ-ಬೆಟಗೇರಿಯಲ್ಲಿ ಸುಮಾರು ೧೦೦ ಕೈಮಗ್ಗಗಳಿದ್ದರೆ ಸುಮಾರು ೩೦೦೦ ವಿದ್ಯುತ್ ಮಗ್ಗಗಳಿವೆ. ಬೆಟಗೇರಿ ಸೀರೆ ಎಂದೇ ಪ್ರಖ್ಯಾತ. ಇಲ್ಲಿ ಸೀರೆ ರೇಶ್ಮೆ, ಪಾಲಿಸ್ಟರ್ , ಮಸರಾಯಿಜ್ ನಿಂದ ನಿರ್ಮಿಸಲಾಗುವುದು. ಪರಾಸ, ಧೋಡಾ ಪರಾಸ ಬೆಟಗೇರಿಯ ವಿಶೇಷತೆ. ಬೆಟಗೇರಿಯಲ್ಲಿ ಇಳಕಲ್ಲಗಿಂತ ಸ್ವಲ್ಪ ಕೂಲಿ ಪ್ರಮಾಣ ಹೆಚ್ಚು. ಐದೂವರೆ ಮೀಟರ್ ಸೀರೆಯೊಂದಕ್ಕೆ ಇಲ್ಲಿ ಕೂಲಿ ರೂ.೮೫. ಇಲ್ಲಿ ನೇಕಾರ ದಿನವೊಂದಕ್ಕೆ ರೂ.೧೦೦ ರಿಂದ ರೂ.೧೪೦ ಸಂಪಾದನೆ, ಅಂದರೆ ವಾರಕ್ಕೆ ರೂ.೬೦೦ ರಿಂದ ೮೦೦ ಆದಾಯ.

ಇನ್ನು ಮೊಳಕಾಲ್ಮೂರಲ್ಲಿ ವಿದ್ಯುತ್ ಮಗ್ಗಗಳೇ ಇಲ್ಲ. ಇಲ್ಲಿರುವುದು ಕೇವಲ ಕುಣಿ ಮಗ್ಗಗಳು. ಮೊಳಕಾಲ್ಮೂರು ರೇಶ್ಮೆ ಸೀರೆಗಳು ಜಗತ್ತಿಗೆ ಪ್ರಸಿದ್ಧ. ಸಂಪೂರ್ಣ ರೇಶ್ಮೆ ಸೀರೆಗಳ ನಿರ್ಮಾಣ ಮೊಳಕಾಲ್ಮೂರು ವಿಶಿಷ್ಠತೆ. ಇಲ್ಲಿ ಒಂದು ಸೀರೆ ನೇಯ್ಯಲು ಒಂದು ದಿನದಿಂದ ಎಂಟು ದಿನಗಳಷ್ಟು ಸಮಯ ತೆಗೆದುಕೊಳ್ಳುವ ವಿವಿಧ ಪ್ರಕಾರದ, ವಿವಿಧ ನಕ್ಷೆಯ, ಗ್ರಾಹಕರ ಅಗತ್ಯತೆಯ ಅನುಗುಣ ರೇಶ್ಮೆ ಸೀರೆಗಳು ನಿರ್ಮಾಣವಾಗುತ್ತದೆ. ಒಂದು ಸೀರೆ ನೇಯ್ಯಲು ನೇಕಾರನಿಗೆ ಇಲ್ಲಿ ಕೂಲಿ ರೂ.೩೦೦ ರಿಂದ ರೂ.೯೦೦ ರವರೆಗೆ ಇರುತ್ತದೆ. ಏನಾದರೂ ಸರಿ ವಾರದ ಸಂಪಾದನೆ ರೂ.೬೦೦ ರಿಂದ ರೂ.೯೦೦ ಮಾತ್ರ.

ಬೆಂಗಳೂರಿನಲ್ಲಿ ಕೇವಲ ವಿದ್ಯುತ್ ಮಗ್ಗಗಳೇ. ಇಲ್ಲಿ ರೇಶ್ಮೆ, ಕ್ರೇಪ್ , ಆಟ್ ಸಿರ್ಲ್ಕ್ , ಜಾರ್ಜೆಟ್ ಬಟ್ಟೆ ಹಾಗೂ ಸೀರೆಗಳ ನಿರ್ಮಾಣ. ಸಾದಾ ಬಟ್ಟೆಗೆ ಕೂಲಿ ಒಂದು ಮೀಟರಿಗೆ ರೂ.೬ ರಿಂದ ರೂ.೮- ಸೀರೆಯೊಂದಕ್ಕೆ ರೂ.೪೦ ರಿಂದ ರೂ. ೩೦೦ ಒಂದು ದಿನಕ್ಕೆ ನೇಕಾರನಿಗೆ ಸುಮಾರು ರೂ.೧೨೫ ರಿಂದ ರೂ.೧೫೦ ಕೂಲಿ ದೊರೆಯುತ್ತದೆ. ವಾರಕ್ಕೆ ರೂ.೧೦೦೦ ಗರಿಷ್ಠ ಕೂಲಿ ಪಡೆಯುವ ನೇಕಾರರು ಇದ್ದಾರೆ.

ಇನ್ನು ಬೆಳಗಾವಿ ವಿದ್ಯುತ್ ಮಗ್ಗಗಳಿಗೆ ಪ್ರಸಿದ್ದಿ. ನೇಕಾರರ ಹೋರಾಟದ ಕೇಂದ್ರ ಸ್ಥಳ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ೩೦,೦೦೦ ವಿದ್ಯುತ್ ಮಗ್ಗಗಳಿದ್ದರೆ ಬೆಳಗಾವಿ ನಗರದಲ್ಲಿ ವಿದ್ಯುತ್ ಮಗ್ಗಗಳು ೨೦,೦೦೦. ಬೆಳಗಾವಿ ಅಂದದ ಚೆಂದದ ಪಾಲಿಸ್ಟರ್ ಸೀರೆಗಳಾಗಿ ಬಹಳ ಪ್ರಸಿದ್ಧ. ಇಲ್ಲಿ ನೇಕಾರಿನಿಗೆ ಕೂಲಿ, ಹತ್ತಿ-ಪಾಲಿಸ್ಟರ್ ಸಾದಾ ಸೀರೆ ಒಂದಕ್ಕೆ ರೂ.೩೫ ರಿಂದ ರೂ.೫೦ ದಿನಕ್ಕೆ ಒಬ್ಬರಿಂದ ಮೂರು ಸೀರೆ ತಯಾರಿಸಲಾಗುತ್ತದೆ. ರೇಶ್ಮೆ ಸೀರೆ ಒಂದಕ್ಕೆ ರೂ.೫೦ ರಿಂದ ರೂ. ೨೦೦ ಕೂಲಿ, ಸರಾಸರಿ ವಾರದ ನೇಕಾರರ ಕೂಲಿ ರೂ.೫೦೦ ರಿಂದ ರೂ.೮೦೦. ಕೆಲ ಯುವಕರು ರೂ.೧೦೦೦ ಕೂಲಿ ಪಡೆಯುವ ಉದಾಹರಣೆಗಳು ಇವೆ.

ಈ ಮೇಲಿನ ಉದಾಹರಣೆ ಅಂದರೆ ಜೀವಂತ ನಿದರ್ಶನಗಳಿಂದ ಕೂಲಿ ಮಾಡುವ ನೇಕಾರನ ಆರ್ಥಿಕ ಪರಿಸ್ಥಿತಿಯ ಒಂದು ಸಾಮಾನ್ಯ ತಿಳುವಳಿಕೆ ಬರುತ್ತದೆ. ನೇಕಾರನ ಕೂಲಿಯ ಪದ್ಧತಿ ಈ ಮೇಲಿನಂತೆಯೇ ಎಲ್ಲ ಕಡೆಯೂ ಇರುತ್ತದೆ. ಈ ಅಂಶಗಳಿಂದ ಕೆಳಗಿನ ನಿಷ್ಕರ್ಷೆಗೆ ಬರಬಹುದಾಗಿದೆ.

೧. ನೇಕಾರನಿಗೆ ತಾವು ನೇಯ್ದ ಬಟ್ಟೆಗೆ ಒಂದು ಮೀಟರ್ ಬಟ್ಟೆಗೆ ಅಥವಾ ಒಂದು ಸೀರೆಗೆ ಅಥವಾ ಒಂದು ಧೋತಿಗೆ ಇಂತಿಷ್ಟು ಹಣ ಎಂದು ಕೂಲಿ ಸಂದಾಯ ಮಾಡಲಾಗುತ್ತಿದೆ. ಆದ್ದರಿಂದ ನೇಕಾರ ದಿನಗೂಲಿ ನೌಕರನಾಗಲಿ, ಕಾಯಂ ನೌಕರನಾಗಲಿ ಎಂದು ಪರಿಗಣಿಸುವುದಿಲ್ಲ. ಆದ್ದರಿಂದ ದಿನಗೂಲಿ ಅಥವಾ ತಿಂಗಳ ಸಂಬಳದ ನೌಕರರಿಗೆ ಲಭ್ಯವಾಗುವ ಸಂಬಳ ಸಹಿತ ರಜೆ – ಇ.ಎಸ್ .ಐ. ಆಸ್ಪತ್ರೆ ಸೌಲಭ್ಯ ಅಥವಾ ಪ್ರಾವಿಡೆಂಟ್ ಫಂಡ್ ಯೋಜನೆ ಲಾಭ ಇವು ಯಾವುವೂ ದೊರೆಯಲಾರವು.

೨. ನೇಕಾರನು ಮಾಡಿದ ಕೆಲಸಕ್ಕೆ ಮಾತ್ರ ಕೂಲಿ ದೊರೆಯುತ್ತದೆ. ಅನಾರೋಗ್ಯದಿಂದಾಗಲಿ, ವೃದ್ಧಾಪ್ಯದ ಸಮಸ್ಯೆಗಳಿಂದಾಗಲಿ ಉತ್ಪಾದನೆಯಲ್ಲಾಗುವ ಕೊರತೆಗೆ ನೇಕಾರನೆ ಹೊಣೆಗಾರ. ಅಂದರೆ ಕೆಲಸ ಕಡಿಮೆ-ಕಡಿಮೆ ಕೂಲಿ ಅಂದರೆ ಕಡಿಮೆ ಆದಾಯ.

೩. ಎಲ್ಲ ಕಡೆಗೂ ವಾರಕ್ಕೆ ಒಂದು ಸಲ ಸಂಬಳ ವಿತರಣೆ ವ್ಯವಸ್ಥೆ.

೪. ಮೇಲಿನ ಉದಾಹರಣೆಗಳಲ್ಲಿ ಕಂಡುಬಂದಂತೆ ವಾರ ಒಂದಕ್ಕೆ ಕನಿಷ್ಠ ಕೂಲಿ ರೂ.೩೦೦ ರಿಂದ ರೂ.೮೦೦ ಮಾತ್ರ. ಕೆಲ ಯುವಕರು ಮಾತ್ರ ರೂ.೯೦೦ ರಿಂದ ರೂ.೧೦೦೦ ವಾರದ ಸಂಬಳ ಪಡೆಯುವ ವಿರಳವಾದ ಉದಾಹರಣೆಗಳುಂಟು.

೫. ಹಬ್ಬ ಹರಿ-ದಿನ ಕುಟುಂಬದ ಸದಸ್ಯರ ಅನಾರೋಗ್ಯ-ಕಾಯಿಲೆ, ಮದುವೆ, ಮಕ್ಕಳ ಶಾಲೆ ಪುಸ್ತಕ-ಫೀಜು ಇನ್ನಿತರ ಸಮಯದಲ್ಲಿ ಅನಿವಾರ್ಯವಾಗಿ ಯಜಮಾನನಲ್ಲಿ ಮುಂಗಡ ಪಡೆಯಬೇಕು. ವಾರದ ಸಂಬಳದಲ್ಲಿ ಈ ಮುಂಗಡ ಕಡಿತ ಮಾಡಲಾಗುವುದು.

ಒಟ್ಟಾರೆ ನೇಕಾರಿಕೆ ಕೂಲಿ ಮಾಡುವ ನೇಕಾರನ ಸರಾಸರಿ ಒಂದು ತಿಂಗಳ ಸಂಗಳ ರೂ. ೧೩೦೦ ರಿಂದ ರೂ. ೩೫೦೦ ಮಾತ್ರ. ಹೆಂಡತಿ-ಮಕ್ಕಳು ಸೇರಿ ಕನಿಷ್ಠ ೪ ರಿಂದ ೫ ಜನ ಸದಸ್ಯರು ಇರುವ ಕುಟುಂಬ ನಿಭಾಯಿಸುವುದು ಬಹಳ ಕಷ್ಟಸಾಧ್ಯ. ಅವಲಂಬಿತ ತಂದೆ-ತಾಯಿ ಇನ್ನಿತರರು ಇದ್ದರಂತೂ ಕಷ್ಟ ಅಪರಿಮಿತ. ಕೆಲ ನೇಕಾರರ ಹೆಂಡತಿ-ಮಕ್ಕಳು ಬಿಡುವಿನ ವೇಳೆಯಲ್ಲಿ ಕೆಚ್ಚುವುದು, ಕಂಡಿಕೆ ಸುತ್ತುವುದು ಮುಂತಾದ ನೇಕಾರಿಕೆ ಉಪ ಕಸುಬುಗಳನ್ನು ಮಾಡಿ ನೇಕಾರನ ಮನೆಯ ಹಣಕಾಸಿನ ಆದಾಯ ಹೆಚ್ಚಿಸಲು ಪ್ರಯತ್ನಿಸುವುದು ನಡೆದಿರುತ್ತದೆ. ಆದ್ದರಿಂದ ಪ್ರತಿ ತಿಂಗಳು ರೂ.೨೦೦ ರಿಂದ ರೂ.೪೦೦ ಆದಾಯ ಬರುವುದಾಗಿದೆ. ಪ್ರತಿಶತ ೮೦ರಷ್ಟು ನೇಕಾರರು ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ನೂರಾರು ವರುಷಗಳಿಂದ ಕೂಲಿ ಮಾಡುವ ನೇಕಾರನ ಬವಣೆ ಇದೇ ರೀತಿಯಾಗಿದ್ದು, ಇದು ನಿರಂತರವಾಗಿ ಮುಂದುವರೆಯುತ್ತಿರುವುದು ಬಹಳ ವಿಷಾದನೀಯವಾದ ಅಂಶ. ಒಬ್ಬ ಡಾಕ್ಟರ್ ತನ್ನ ಮಗ ಡಾಕ್ಟರನಾಗಬೇಕು. ಇಂಜನೀಯರ್ ತನ್ನ ಮಗ ಇಂಜನೀಯರಾಗಬೇಕು, ಶಿಕ್ಷಕ ತನ್ನ ಮಗ ಶಿಕ್ಷಕನಾಗಬೇಕೆಂದು ಬಯಸುವಂತೆ, ಕೂಲಿ ಮಾಡುವ ನೇಕಾರ ತನ್ನ ಮಗ ನೇಕಾರನಾಗಬೇಕೆಂದು ಬಯಸಲಾರ.

ಕರ್ನಾಟಕ ಸರಕಾರ ನೇಕಾರರ ಅಭ್ಯುದಯಕ್ಕಾಗಿ ‘‘ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ” ಸ್ಥಾಪನೆ ಮಾಡಿತು. ನೇಕಾರಿಕೆ ಇರುವ ಪ್ರಮುಖ ಊರುಗಳಲ್ಲಿ ತನ್ನ ಶಾಖೆಗಳನ್ನು ತೆರೆಯಿತು. ಕೂಲಿಕಾರ-ನೇಕಾರರನ್ನು ಗುರುತಿಸಿ ಸ್ವಯಂಚಾಲಿತ ಮಗ್ಗಗಳನ್ನು ವಿತರಿಸಿತು. ವರ್ಷವಿಡೀ ಕೈಗೆ ಕೆಲಸ ಕೊಡುವುದಾಗಿ ಘೋಷಿಸಿತು. ಆದರೆ ಈ ಯೋಜನೆ ನೇಕಾರರಿಗೆ ಹೊಸ ಸಮಸ್ಯೆಯನ್ನೇ ತಂದಿಟ್ಟಿತು.

‘ನಿಗಮ’ ಸ್ವಯಂಚಾಲಿತ ಮಗ್ಗ ಪೂರೈಸಿತು. ಕೈ ತುಂಬ ಕೆಲಸ ಕೊಡುವುದಾಗಿ ಹೇಳಿತು. ಆದರೆ ಈ ಆಶ್ವಾಸನೆ ಈಡೇರಲಿಲ್ಲ. ನೇಕಾರ ನಿಗಮ ನೀಡಿದ ಬಟ್ಟೆ ನಿರ್ಮಾಣ ಮಾಡಿ ಕೊಟ್ಟ ಕೂಡಲೇ, ಮತ್ತೇ ಬಟ್ಟೆ ನಿರ್ಮಾಣಕ್ಕೆ ನೂಲು ಕೊಡುತ್ತಿಲ್ಲ. ವಿಳಂಬ ಮಾಡುತ್ತಲಿದೆ. ತಿಂಗಳಲ್ಲಿ ೧೦-೧೫ ದಿನ ಮಾತ್ರ ಕೆಲಸ. ಉಳಿದ ೧೫ ದಿನ ನೇಕಾರನಿಗೆ ಕೆಲಸವಿಲ್ಲ. ‘ನಿಗಮ’ದ ಕೆಲಸ ಮಾಡುತ್ತಿರುವುದರಿಂದ ಖಾಸಗಿ ಯಜಮಾನ ಕೆಲಸ ಕೊಡುವುದಿಲ್ಲ. ‘ನಿಗಮ’ವು ನೇಕಾರಿಕೆ ಸಂಪ್ರದಾಯದಂತೆ ನೇಯುವ ಬಟ್ಟೆಗೆ ಒಂದು ಮೀಟರಿಗೆ, ಒಂದು ಸೀರೆಗೆ ಇಂತಿಷ್ಟು ಎಂದು ನಿಗದಿ ಮಾಡಿ, ಕೂಲಿ ಸಂದಾಯ ಮಾಡುತ್ತಿದ್ದಾರೆ. ಸುಮಾರು ವರುಷಗಳಿಂದ ಕೂಲಿ ದರಗಳ ಪರಿಷ್ಕರಣೆ ನಿಮಗ ಮಾಡಿರುವುದಿಲ್ಲ. ಉದಾಹರಣೆ ಹುಬ್ಬಳ್ಳಿಯ ಪಾಲಿಸ್ಟರ್ ಬಟ್ಟೆ ಒಂದು ಮೀಟರ್ ನೇಯ್ದರೆ ರೂ.೯ ಸಂದಾಯ ಮಾಡುತ್ತದೆ. ೧೯೮೦ ರಿಂದ ಪರಿಷ್ಕರಿಸದೇ ಹಳೆಯ ದರ ಹಾಗೆಯೇ ಮುಂದುವರಿಸಿದೆ.

‘ನಿಗಮ’ ಕೂಲಿಕಾರ ನೇಕಾರರಿಗೆ ಮನೆ ಕಟ್ಟಿ ವಿತರಿಸುವ ಯೋಜನೆ ಪ್ರಕಾರ ಹಲವಾರು ಊರುಗಳಲ್ಲಿ ಮನೆಗಳನ್ನು ನಿರ್ಮಿಸಿ ವಿತರಣೆ ಮಾಡಿರುತ್ತಾರೆ. ಬಟ್ಟೆ ನೇಯುವ ಮಜೂರಿಯಲ್ಲಿ ಮನೆಯ ಬೆಲೆಯನ್ನು ಕಂತುಗಳ ರೂಪದಲ್ಲಿ ವಸೂಲಿ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಈ ಯೋಜನೆಯಲ್ಲಿ ಭೂ-ಸ್ವಾಧೀನ ಮುಂತಾದ ಪ್ರಕ್ರಿಯೆಗಳು ಸರಿಯಾಗಿ ನಡೆಸದ್ದರಿಂದ ಕೆಲ ನೇಕಾರ ಗೃಹ ಸಮುಚ್ಚಯದ ನೇಕಾರರು ವಿಪರೀತ ಸಮಸ್ಯೆ ಎದುರಿಸುತ್ತಿದ್ದಾರೆ.

ಇನ್ನೂ ಕೂಲಿಕಾರ ನೇಕಾರರ ಆರ್ಥಿಕ ಸಮಸ್ಯೆಗಳು ಒಂದು ತೆರನಾದರೆ ‘ಯಜಮಾನ’ ನೇಕಾರನ ಸಮಸ್ಯೆಗಳು ಅಪರಿಮಿತ. ಇಂದಿನ ಯುಗ ಸ್ಪರ್ದಾತ್ಮಕ ಯುಗ. ಜಾಗತೀಕರಣ, ಖಾಸಗೀಕರಣ ಹಾಗೂ ಉದಾರೀಕರಣ ನೀತಿಯಿಂದಾಗಿ ಜಗತ್ತು ಬಹಳ ಕುಬ್ಜವಾಗಿದೆ. ಹೊಸ ಹೊಸ ತಂತ್ರಜ್ಞಾನ, ಕಂಪ್ಯೂಟರ್ ಗಳ ಆವಿಷ್ಕಾರದಿಂದಾಗಿ ಬಹಳಷ್ಟು ಹೊಸ ಹೊಸದನ್ನು ಇಂದು ಗ್ರಾಹಕ ಆಪೇಕ್ಷೆಪಡುತ್ತಿದ್ದಾನೆ. ದೊಡ್ಡ ದೊಡ್ಡ ಕಾರಖಾನೆಗಳ ಹೊಸ ಹೊಸ ಫ್ಯಾಷನ್ ಗಳ ಎದುರು ನೇಕಾರರ ಉತ್ಪನ್ನಗಳನ್ನು ಆಕರ್ಷಣೀಯವಾಗಿ ನಿರ್ಮಿಸಿ ಮಾರಾಟ ಮಾಡುವುದು ಬಹಳ ಕಷ್ಟಕರವಾಗಿದೆ.

ನೇಕಾರಿಕೆ ವೃತ್ತಿ ನಿರಂತರ ಸರಾಗವಾಗಿ ನಡೆಯಲು ಉತ್ತಮ ಕೈಮಗ್ಗ-ವಿದ್ಯುತ್ ಮಗ್ಗಬೇಕು. ಬಟ್ಟೆ ನಿರ್ಮಾಣಕ್ಕೆ ಅಗತ್ಯವಾದ ಕಚ್ಚಾ ಸರಕು, ಸಮಂಜಸ ದರದಲ್ಲಿ ನಿರಂತರ ದೊರೆಯುತ್ತಿರಬೇಕು. ವಿದ್ಯುತ್ ಮಗ್ಗ ಸತತವಾಗಿ ಚಲಿಸುವಂತಾಗಲು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದೆ, ನಿರಂತರ ಸರಬರಾಜು ಆಗಬೇಕು. ಕೂಲಿಕಾರ ನೇಕಾರರು ನಿಯಮಿತವಾಗಿ ಕೆಲಸಕ್ಕೆ ಬಂದು ಕೆಲಸ ಮಾಡಬೇಕು. ಕೊನೆಯದಾಗಿ ನೇಯ್ದು ತಯಾರಾದ ಸರಕು ಯೋಗ್ಯ ಬೆಲೆಯಲ್ಲಿ ಮಾರಾಟವಾಗಬೇಕು. ಈ ಚಕ್ರ ಸರಿಯಾದ ಕ್ರಮದಲ್ಲಿ ನಡೆದಾಗಲೇ ನೇಕಾರಿಕೆ ಸರಾಗ.

ಆದರೆ ಯಜಮಾನ ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ನೇಕಾರನಿಗೆ ಕಚ್ಚಾ ಸರಕು ದೊರೆಯುವುದೇ ದೊಡ್ಡ ಸಮಸ್ಯೆ. ನೇಕಾರ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಅಂದರೆ ಗ್ರಾಹಕರು ಇಷ್ಟಪಡುವ ಬಟ್ಟೆಯನ್ನು ಉತ್ಪಾದಿಸಬೇಕಾಗುತ್ತದೆ. ಆ ಉತ್ಪಾದನೆಗೆ ಸೂಕ್ತವಾದ ಕಚ್ಚಾ ಸರಕು ನೇಕಾರರಿಗೆ ಸರಿಯಾದ ದರದಲ್ಲಿ ದೊರೆಯುವಂತಾಗಬೇಕು. ಅದಕ್ಕೆ ನೂಲಿನ ಗಿರಣಿಗಳು ಅಗತ್ಯ ನೂಲನ್ನು ತಯಾರಿಸಿ, ಪೂರೈಕೆ ಮಾಡಬೇಕು. ನೇಯ್ಗೆ ಮಾಡಿದ ಸರಕಿಗೆ ಯೋಗ್ಯ ಬೆಲೆಯೇ ಪೇಟೆಯಲ್ಲಿ ಇಲ್ಲದಾಗ, ಹೆಚ್ಚಿನ ಹಣ ಕೊಟ್ಟು ಕಚ್ಚಾ ಸರಕು ಕೊಂಡುಕೊಳ್ಳುವುದು ಬಹಳ ಕಷ್ಟಸಾಧ್ಯ. ಕಾರಣ ಸರಕಾರ ಆಯಾ ನೇಕಾರರ ಊರಿನಲ್ಲಿ ಸಿದ್ಧವಾಗುವ ನಮೂನೆಯ ಬಟ್ಟೆಗನುಗುಣವಾಗಿ ಅಲ್ಲಿಯ ನೇಕಾರರಿಗೆ ಅಗತ್ಯವಿರುವ ‘ಕಚ್ಚಾ ಮಾಲು ಬ್ಯಾಂಕ್ ‘ನ್ನು ತೆರೆಯುವ ಯೋಜನೆ ಮಾಡಬೇಕು.

ಯಜಮಾನ (ನೇಕಾರ) ಉತ್ಪಾದಿಸಿದ ಮಾಲಿಗೆ ಯೋಗ್ಯ ಬೆಲೆ ಬರಬೇಕಾದುದು ಬಹಳ ಅಗತ್ಯ. ಹಬ್ಬ-ಹರಿದಿನ ಹಾಗೂ ಮದುವೆ ಇರುವ ಕಾಲಾವಧಿಯಲ್ಲಿ ಬೇಡಿಕೆ ಬಹಳ. ಉಳಿದ ಅವಧಿಯಲ್ಲಿ ಬೇಡಿಕೆ ಬಹಳ ಕಡಿಮೆ ಇರುವುದರಿಂದ ಅಂಥ ಸಮಯದಲ್ಲಿ ಮಾರುಕಟ್ಟೆ ದರವು ಬಹಳ ಕಡಿಮೆ ಇರುತ್ತದೆ. ಬೇಡಿಕೆ ಬರುವವರೆಗೆ ಅಥವಾ ಮಾರುಕಟ್ಟೆ ದರ ಮತ್ತೇ ಚೇತರಿಸಿಕೊಳ್ಳುವವರೆಗೆ, ಉತ್ಪಾದನೆಯಾಗುವ ಸರಕನ್ನು ಶೇಖರಣೆ ಮಾಡಿಡುವುದು ಬಹಳ ದುಸ್ತರವಾದುದು. ನೇಕಾರ ಹಣಕಾಸಿನ ಸಾಮರ್ಥ್ಯದ ಅನುಗುಣ ದಾಸ್ತಾನು ಇಡಬಹುದಾದರೂ, ತನ್ನ ಬಟ್ಟೆ ನೇಯುವ ಕೆಲಸ ಸತತ ಚಾಲನೆಯಲ್ಲಿಡುವ ಸಲುವಾಗಿ ಅಗತ್ಯವಾದಸ ನೂಲು ಖರೀದಿಸುವುದು, ವಿದ್ಯುತ್ ಬಳಕೆ, ಹಣ ಸಂದಾಯ ಮಾಡುವುದು, ಕೂಲಿಕಾರನ ಕೂಲಿ ಕೊಡುವುದು, ದಿನನಿತ್ಯದ ಮನೆ ವೆಚ್ಚ ಇವುಗಳಿಗೆಲ್ಲ ಹಣದ ಅಗತ್ಯತೆ ಇರುತ್ತದೆ. ನೇಕಾರ ಉತ್ಪಾದಿಸುವ ಸರಕಿನ ಮೇಲೆ ಸರಕಾರ ಹಾಗೂ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು ಬಹಳ ಅಗತ್ಯವಾದುದಾಗಿದೆ.

ಇಂದಿನ ದಿನಗಳಲ್ಲಿ ಕೈಮಗ್ಗವಾಗಲಿ ಯಂತ್ರ ಮಗ್ಗವಾಗಲಿ ನಡೆಸಿಕೊಂಡು ಹೋಗುವುದು ಬಹಳ ದುಸ್ತರವಾಗಿದೆ. ಕೈಮಗ್ಗಕ್ಕಿಂತ ವಿದ್ಯುತ್ ಮಗ್ಗದಲ್ಲಿ ಹಣ ತೊಡಗಿಸುವ ಪ್ರಮಾಣ ಹೆಚ್ಚು ಇರುತ್ತದೆ. ಅಲ್ಲದೇ ಕೈಮಗ್ಗಕ್ಕಿಂತ ಹೆಚ್ಚು ಉತ್ಪಾದನೆ ವಿದ್ಯುತ್ ಮಗ್ಗದಲ್ಲಿ ಆಗುತ್ತದೆ. ಒಂದು ವಿದ್ಯುತ್ ಮಗ್ಗ ನಡೆಸುವವರಿಗೆ ಎಲ್ಲ ಖರ್ಚು ಕಳೆದು ಒಂದು ಮಗ್ಗಕ್ಕೆ ರೂ.೧೦೦೦ಕ್ಕಿಂತಲೂ ಕಡಿಮೆ ಉತ್ಪನ್ನ ಬರುತ್ತಲಿದೆ. ಹೆಚ್ಚಿನ ಸಂಖ್ಯೆಯ ವಿದ್ಯುತ್ ಮಗ್ಗಗಳು ನೇಕಾರನ ಸ್ವಂತ ಕಟ್ಟಡದಲ್ಲಿ ಅಥವಾ ಮನೆಯಲ್ಲಿರುವುದು ಕಂಡುಬರುತ್ತದೆ.

ಬೆಂಗಳೂರಿನಲ್ಲಿ ಈ ಹಿಂದೆ ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯುತ್ ಮಗ್ಗಗಳಿದ್ದವು. ಈಗ ಅವುಗಳ ಸಂಖ್ಯೆ ಅರ್ಧಕ್ಕೆ ಅಂದರೆ ೫೦,೦೦೦ಕ್ಕೆ ಇಳಿದಿದೆ. ಇದಕ್ಕೆ ಹಲವಾರು ಕಾರಣಗಳುಂಟು. ಮಗ್ಗ ನಡೆಯುವ ಪ್ರದೇಶದ ಜನರು, ಶಬ್ದ ಮಾಲಿನ್ಯದಿಂದ ಸಾರ್ವಜನಿಕರಿಗೆ ತೊಂದರೆ ಆಗುವುದೆಂದು ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಕ್ಕಾಗಿ ಕೆಲ ಮಗ್ಗಗಳು ಅನಿವಾರ್ಯವಾಗಿ ಸ್ಥಗಿತಗೊಂಡಿವೆ. ಎಲ್ಲ ತರಹದ ಉದ್ದಿಮೆಗಳಂತೆ ರಾಜ್ಯ ಸರಕಾರ, ನೇಕಾರಿಗಾಗಿ ಒಂದು ಪ್ರತ್ಯೇಕ ಔದ್ಯಮಿಕ ಪ್ರದೇಶ ಅಭಿವೃದ್ದಿಪಡಿಸಿರುವುದಿಲ್ಲ. ನೇಯ್ಗೆ ಕೂಲಿಗಳ ಅಭಾವ-ಅನಿಯಮಿತತನ-ಅಶಿಸ್ತು ಇವುಗಳಿಗೆ ಬೇಸತ್ತು ಎಷ್ಟೋ ಜನ ಮಗ್ಗಗಳನ್ನು ನಿಲ್ಲಿಸಿದ್ದಾರೆ. ಬೆಂಗಳೂರಿನ ಕಬ್ಬನಪೇಟೆ, ಸಂಪಂಗಿ ರಾಮನಗರ ಪ್ರದೇಶಗಳಲ್ಲಿ ವಿದ್ಯುತ್ ಮಗ್ಗದ ವ್ಯವಹಾರಕ್ಕಿಂತ ಹೆಚ್ಚಿನ ಹಣ, ಮಗ್ಗದ ಮನೆಗಳನ್ನು ಬಾಡಿಗೆಗೆ ಕೊಟ್ಟರೆ ನಿರಾಯಾಸವಾಗಿ ದೊರೆಯುವಂತಾದುದರಿಂದ, ಈ ಪ್ರದೇಶದಲ್ಲಿ ಬಹುತೇಕ ವಿದ್ಯುತ್ ಮಗ್ಗಗಳು ಮುಚ್ಚಿವೆ.

ಹುಬ್ಬಳ್ಳಿಯಲ್ಲಂತೂ ಕೂಲಿಕಾರರ ಅಭಾವ-ಹಾಜರಾತಿಯಲ್ಲಿ ಅನಿಯಮಿತತನ ನೇಯ್ಗೆ ಕೂಲಿಯಲ್ಲಿ ಬರುವುದಕ್ಕಿಂತ ಹೆಚ್ಚಿನ ಹಣ ಬೇರೆ ಉದ್ಯೋಗದಿಂದ ದೊರೆಯುತ್ತಿರುವುದರಿಂದ, ನೇಕಾರಿಕೆ ಕೂಲಿಯನ್ನು ಬಿಟ್ಟು ಬೇರೆ ಉದ್ಯೋಗ ಅರಸಿ ಹೋಗುವುದು ದೊಡ್ಡ ಶಹರಗಳಲ್ಲಿ ಸಾಮಾನ್ಯವಾಗಿದೆ; ಹುಬ್ಬಳ್ಳಿ ಸೀರೆಯ ಬೇಡಿಕೆಯಲ್ಲಾದ ಕುಸಿತ ಇವೆಲ್ಲವುಗಳಿಂದ ಹುಬ್ಬಳ್ಳಿ ನೇಕಾರಿಕೆ ಕ್ರಮೇಣ ಕಡಿಮೆಯಾಗುತ್ತಲಿದೆ.

ಆದರೆ ಇದಕ್ಕಿಂತ ಭಿನ್ನ ಪರಿಸ್ಥಿತಿ ಬೆಳಗಾವಿ ನಗರದ್ದಾಗಿದೆ. ಬೆಳಗಾವಿ ನೇಕಾರರು ಹೋರಾಟ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ನೇಕಾರಿಕೆ ಸಂಘಟನೆಗೆ ಬೆಳಗಾವಿ ಈಗ ದೊಡ್ಡ ಹೆಸರು ಪಡೆದುಕೊಂಡಿದೆ. ಪಕ್ಕದ ಮಹಾರಾಷ್ಟ್ರ ಸರಕಾರ, ತನ್ನ ರಾಜ್ಯದಲ್ಲಿ ನೇಕಾರರಿಗೆ ಕೊಡುವ ಸವಲತ್ತುಗಳ ಅನುಗುಣವಾಗಿ ಬೇಡಿಕೆ ಇತ್ತು. ಹೋರಾಟ ಮಾಡಿ, ಕೆಲ ಪ್ರಮಾಣದಲ್ಲಿ ಯಶಸ್ಸು ಪಡೆದ ಶ್ರೇಯಸ್ಸು ಬೆಳಗಾವಿ ನೇಕಾರರದ್ದು. ರಾಜ್ಯ ಸಮಸ್ತ ವಿದ್ಯುತ್ ಮಗ್ಗಗಳಿಗೆ ರಿಯಾಯಿತಿ ದರದಲ್ಲಿ ಅಂದರೆ ರೂ.೩-೨೦ಗೆ ಒಂದು ಯುನಿಟ್ ನಿಗದಿಯಾದದ್ದರ ಶ್ರೇಯಸ್ಸು ಬೆಳಗಾವಿ ನೇಕಾರ ಸಂಘಟನೆಯದ್ದು. ಬೆಳಗಾವಿ ಜಿಲ್ಲೆಯಲ್ಲಿ ೩೦,೦೦೦ ವಿದ್ಯುತ್ ಮಗ್ಗಗಳಿದ್ದರೆ, ಬೆಳಗಾವಿ ಶಹರದಲ್ಲಿ ೨೦,೦೦೦ ಮಗ್ಗಗಳಿವೆ. ಕಳೆದೆರಡು ಪ್ರತಿ ವರುಷ ೧೦೦ ಹಾಗೂ ೧೮೦ ಮಗ್ಗಗಳಂತೆ ವಿದ್ಯುತ್ ಮಗ್ಗಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಬೆಳಗಾವಿಯಲ್ಲಿ ಸರಕಾರದ ವಿದ್ಯುತ್ ಮಗ್ಗ ನೇಕಾರ ತರಬೇತಿ ಕೇಂದ್ರ ಇದೆ. ರಾಜ್ಯ ಸರಕಾರದ ‘‘ವಿದ್ಯುತ್ ಮಗ್ಗ ಅಭಿವೃದ್ದಿ ಕಚೇರಿ” ಕಾರ್ಯರತವಾಗಿದೆ. ಅಲ್ಲದೇ ‘‘ಜವಳಿ ಇಲಾಖೆ” ಕಾರ್ಯಾಲಯ ಇದೆ. ಸರಕಾರದಿಂದ ನೇಕಾರರಿಗೆ ದೊರೆಯಬಹುದಾದ ಸವಲತ್ತುಗಳು ಅಂದರೆ ‘‘ಬುನಕರ ಬಿಮಾ ಯೋಜನೆ”, ‘‘ಯಶಸ್ವನಿ-ಆರೋಗ್ಯ ಯೋಜನೆ”, ನೇಕಾರರ ಬಡ್ಡಿ ಮನ್ನಾ ಹಾಗೂ ರೂ.೨೫,೦೦೦ ವರೆಗಿನ ಸಾಲ ಮನ್ನಾ ಮುಂತಾದವುಗಳ ಲಾಭ ಬೆಳಗಾವಿಯ ಹೆಚ್ಚಿನ ಸಂಖ್ಯೆಯ ನೇಕಾರರಿಗೆ ದೊರೆಯುವಂತಾಗಿದೆ ಎಂದು ಬೆಳಗಾವಿ ನೇಕಾರ ಸಂಘಟನೆಯ ನಾಯಕ ಶ್ರೀ ಪರಶುರಾಮ ಢಗೆ ಬಹಳ ಅಭಿಮಾನದಿಂದ ನುಡಿಯುತ್ತಾರೆ. ಆದರೆ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಸುಮಾರು ೫೦,೦೦೦ ವಿದ್ಯುತ್ ಮಗ್ಗಗಳಿದ್ದರೂ, ಸರಕಾರದ ಯೋಜನೆ ನೇಕಾರರಿಗೆ ಮುಟ್ಟುವಲ್ಲಿ ಪ್ರಯತ್ನಗಳಾಗದಿರುವುದು ವಿಷದನೀಯ.

ಒಟ್ಟಾರೆ ಈ ದೇಶದ ಪ್ರಮುಖ ವೃತ್ತಿಯಾದ ಒಕ್ಕಲುತನ ನಂತರದ, ಮಹತ್ತರ ಸ್ಥಾನ ಪಡೆದಿರುವ ನೇಕಾರಿಕೆ ವೃತ್ತಿಯ ಸದ್ಯದ ಪರಿಸ್ಥಿತಿ ದಯನೀಯವಾದುದಾಗಿದೆ. ಈಗ ಈ ನೇಕಾರಿಕೆ ವೃತ್ತಿಯಲ್ಲಿರುವವರ ಆರ್ಥಿಕ ಪರಿಸ್ಥಿತಿ ಬಹಳ ಗಂಭೀರವಾದುದು. ‘ಯಜಮಾನ’ ಸ್ಥಾನದಲ್ಲಿರುವ ನೇಕಾರರು ಹಾಗೂ ಹೀಗೋ ಒಂದು ರೀತಿಯ ಸಮಾಧಾನದ ಬದುಕು ನಡೆಸುವಷ್ಟು ಆರ್ಥಿಕ ಪರಿಸ್ಥಿತಿ ಹೊಂದಿದವರು. ಆದರೆ ನೇಕಾರಿಕೆ ಕೂಲಿ ಮಾಡುವವರ ಆರ್ಥಿಕ ಸ್ಥಿತಿ ಶೋಚನೀಯ. ಬಾಡಿಗೆ ಮನೆಯಲ್ಲಿ ಆಶ್ರಯ, ಕುಟುಂಬದ ಅತ್ಯಗತ್ಯದ ಬೇಡಿಕೆ ಪೂರೈಸಲು ಅಸಾಧ್ಯ. ಮಕ್ಕಳಿಗೆ ಪ್ರಾಥಮಿಕ-ಮಾಧ್ಯಮಿಕ ಶಿಕ್ಷಣ ನಂತರ ಕಲಿಸುವುದು ಅಸಾಧ್ಯದ ಮಾತು. ‘‘ಯಶಸ್ವಿನಿ-ಆರೋಗ್ಯ ಯೋಜನೆ”, ‘ಐ.ಸಿ.ಐ.ಸಿ.ಐ. ಲೋಂಬಾರ್ಡ್ ಯೋಜನೆ’ ಅನುಷ್ಠಾನಗೊಂಡಿದ್ದರಿಂದ ಆರೋಗ್ಯ-ಆಸ್ಪತ್ರೆ ಕುರಿತು ಸ್ವಲ್ಪ ನೆಮ್ಮದಿ, ವಂಶ ಪರಂಪರೆಯಿಂದ ಮನೆತನದ ಹಳೇ ತಲೆಮಾರಿನವರು ಮಾಡುತ್ತ ಬಂದಿರುವ ಕಸುಬು, ಕಡಿಮೆಯೇ ಆಗಲಿ, ವರ್ಷವಿಡಿ ಉದ್ಯೋಗ ಸಿಗುವುದು, ಮನೆಯ ಮಂದಿಯನ್ನು ಸಹ ಇದರಲ್ಲಿ ಉಪ ಕಸುಬುಗಳಿಗೆ ತೊಡಗಿಸಬಹುದು. ಕಟ್ಟಡ ಒಳಗೆ ನೇಯ್ಗೆ ಕ್ರಿಯೆ ನಡೆಯುವುದು, ಬೇಸಿಗೆ – ಮಳೆ ಭಯವಿಲ್ಲ, ಅತ್ತಿಂದಿತ್ತ ಅಲೆದಾಟವಿಲ್ಲ. ಕೃಷಿಯಂತೆ ಮಳೆ-ಗಾಳಿ-ಬಿಸಿಲು ಇವುಗಳ ಅವಲಂಬನೆ ಇಲ್ಲ ಮುಂತಾದ ಕಾರಣಗಳಿಂದ ಅನಿವಾರ್ಯವಾಗಿ ನೇಕಾರಿಕೆ ಕೂಲಿ ಕೆಲಸ ಜನರು ಮಾಡುತ್ತಿದ್ದಾರೆ.

ನೇಕಾರಿಕೆ ಈ ವೃತ್ತಿ ನಿರಂತರವಾಗಿ ನಡೆಯಬೇಕಾಗಿದೆ. ಈ ದೇಶದ ಕೋಟಿಗಟ್ಟಲೇ ಜನರಿಗೆ ಉದ್ಯೋಗ ನೀಡಿದೆ. ಈ ವೃತ್ತಿ ನೇಕಾರಿಕೆ ಅಭಿವೃದ್ದಿ ಹೊಂದಬೇಕು. ಈ ಹಿಂದೆ ಒಂದಾನೊಂದು ಕಾಲ ನೇಕಾರರು ಬಹಳ ಉತ್ತಮ ಆದಾಯ ಹೊಂದಿದವರಾಗಿದ್ದು, ಆಥಿರಕ ದೃಷ್ಟಿಯಿಂದ ಸಬಲರಾಗಿದ್ದರು. ಮತ್ತೇ ಆ ದಿನಗಳು ಬರಬೇಕಾಗಿದೆ. ಆ ದಿನಗಳು ಮತ್ತೇ ಮರಳಬೇಕಾದರೆ ‘ನೇಕಾರ ಕೂಲಿ – ನೇಕಾರ ಯಜಮಾನ’ ಪರಸ್ಪರ ನಂಬಿಕೆ – ವಿಶ್ವಾಸದಿಂದ ಕೆಲಸದ ಬಗ್ಗೆ ಶ್ರದ್ಧೆ ಬೆಳೆಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೇಕಾರಿಕೆ ನಿರಂತರ ಸಾಗುವಂತೆ ನೇಕಾರನಿಗೆ ಯೋಗ್ಯ ಕೂಲಿ ಹಾಗೂ ಸವಲತ್ತುಗಳು ದೊರೆಯುವಂತೆ ಯೋಜನೆ ರೂಪಿಸಬೇಕು.

ಕಚ್ಚಾ ಸರಕು – ನೇಕಾರಿಕೆಯ ವಿವಿಧ ಪರಿಷ್ಕರಣೆ ಪಡೆದು, ನೇಯುವ ಮೂಲಕ ಮಾರಾಟಕ್ಕೆ ಸಿದ್ಧ ಸರಕಾಗುತ್ತದೆ. ನೇಕಾರನಿಂದ ಪೂರ್ಣಗೊಂಡ ಬಟ್ಟೆ, ಬಳಕೆದಾರನಿಗೆ ತಲುಪುವವರೆಗೆ ಹಲವಾರು ಮಧ್ಯವರ್ತಿಗಳು ಬರುತ್ತಾರೆ. ಈ ಮಧ್ಯವರ್ತಿಗಳಿಂದ ಒಂದಿಲ್ಲೊಂದು ರೀತಿಯಲ್ಲಿ ಇಬ್ಬರೂ – ನೇಕಾರರು ಶೋಷಣೆಗೊಳಪಡುವರು. ‘‘ಶ್ರೀಮಂತ ನೇಕಾರರಿಂದಲೇ ಬಡ ನೇಕಾರರ ಅವನತಿಯಾಗುತ್ತಲಿದೆ” ಎಂಬ ಕೂಗು ಎಷ್ಟೋ ವರುಷಗಳಿಂದ ನಿನಾದಿಸುತ್ತಿದೆ ಸಣ್ಣ ಸಣ್ಣ ನೇಕಾರರು, ಆರ್ಥಿಕ ದೃಷ್ಟಿಯಿಂದ ಅಶಕ್ತರಾದವರಿಗೆ ಸಹಾಯ ಮಾಡದೆ, ಬಡ ನೇಕಾರರ ಅಸಹಾಯಕತೆಯ ದುರ್ಲಾಭ ಪಡೆಯುವುದು ನಿರಂತರ ನಡೆದಿದೆ. ಒಬ್ಬ ಬಡ ನೇಕಾರ ಸ್ವಂತ ವ್ಯವಹಾರ ಮಾಡುವಾಗ ಕಡಿಮೆ ದರದಲ್ಲಿ ಸಿದ್ಧ ಬಟ್ಟೆ ತೆಗೆದುಕೊಳ್ಳುವುದು, ಅವನಿಗೆ ಹಾನಿಯಾಗುವ ಪರಿಸ್ಥಿತಿ ನಿರ್ಮಾಣ ಮಾಡಿ, ಆ ಬಡ ನೇಕಾರ ಸ್ವಂತ ನೇಕಾರಿಕೆ ಬಿಟ್ಟು ಕೂಲಿ ಮಾಡುವಂತೆ ತಂತ್ರ ರೂಪಿಸುವುದು, ಇದು ಅನೇಕ ಯಜಮಾನರು ಹಲವಾರು ವರುಷಗಳಿಂದ ಮಾಡುತ್ತ ಬಂದಿರುವ ನಿರಂತರ ಕಾರ್ಯ. ಈ ಶೋಷಣೆ ನಿಲ್ಲಬೇಕು. ಕೆಲ ಒಳ್ಳೆಯ ಯಜಮಾನ, ತನ್ನಲ್ಲಿರುವ ಪ್ರಾಮಾಣಿಕ ಹಾಗೂ ಕಷ್ಟದಿಂದ ದುಡಿಯುವ ಕೂಲಿಯವನಿಗೆ ತಮ್ಮ ಸ್ವಂತ ಮಗ್ಗಗಳನ್ನು ಕೊಟ್ಟು ತಾವೇ ನೇಕಾರಿಕೆ ಮಾಡಲು ಅನುವು ಮಾಡಿಕೊಟ್ಟ ಉದಾಹರಣೆಗಳಿವೆ. ಆದರೆ ಇದು ಸಾವಿರ – ದಶಸಾವಿರಕ್ಕೆ ಒಂದು ಯಜಮಾನ. ಈ ಶೋಷಣೆ ನಿಲ್ಲಬೇಕು.

ಇನ್ನು ‘ಯಜಮಾನ’ ಕಚ್ಚಾ ಸರಕು ಪೂರೈಕೆದಾರರಿಂದ, ಸಿದ್ಧ ಸರಕು ಖರೀದಿದಾರರಿಂದ ಒಂದು ರೀತಿಯ ಶೋಷಣೆಗೆ ಒಳಪಡುತ್ತಾನೆ. ಕಚ್ಚಾ ಸರಕಿನ ಬೆಲೆ – ಕೂಲಿ ಇತರ ಖರ್ಚುಗಳು ಇವುಗಳ ಮೊತ್ತಕ್ಕಿಂತ ಕಡಿಮೆ ದರಕ್ಕೆ ಹಣದ ಅಗತ್ಯತೆಗಾಗಿ ಮಾರಾಟ ಮಾಡುವ ದೊಡ್ಡ ದೊಡ್ಡ ವ್ಯಾಪಾರಸ್ಥರ ಸಂಚಿಕೆ ಬಲಿಪಶು ಆಗಿರುವ ಉದಾಹರಣೆಗಳುಂಟು. ಸರಗಟು ವ್ಯಾಪಾರಸ್ಥ – ಚಿಲ್ಲರೆ ವ್ಯಾಪಾರಸ್ಥ ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಹಣ ಹೂಡುವ ಸಾಮರ್ಥ್ಯವುಳ್ಳವರಾಗಿದ್ದರಿಂದ ‘ನೇಕಾರ-ಯಜಮಾನ’ ನಿರಂತರ ಶೋಷಣೆಗೊಳಪಡುತ್ತಿದ್ದಾನೆ. ಸಗಟು ಹಾಗೂ ಚಿಲ್ಲರೆ ವ್ಯಾಪಾರಸ್ಥ ನೇಕಾರ ಹಾಗೂ ಯಜಮಾನನಿಗಿಂತ ಹೆಚ್ಚು ಲಾಭ ಪಡೆಯುತ್ತಿದ್ದಾರೆ.

ನೇಕಾರಿಕೆ ವೃದ್ದಿಯಾಗಿ, ನೇಕಾರಿಕೆ ಒಂದು ನೆಮ್ಮದಿಯ ಬದುಕು ಸಾಗಿಸುವ ವೃತ್ತಿಯಂತಾಗಬೇಕು. ನೇಕಾರಿಕೆ ಬಗ್ಗೆ ಜನರಲ್ಲಿ ಒಂದು ಗೌರವ ಆಕರ್ಷಣೆ ಹುಟ್ಟುವಂತಾಗಬೇಕು. ಅದಕ್ಕಾಗಿ ಹಲವಾರು ಕ್ರಮಗಳು ಅಗತ್ಯ.

ಕೈಮಗ್ಗ ನೇಕಾರಿಕೆ

೧. ಕೈ ಮಗ್ಗ ನೇಕಾರಿಕೆ ತನ್ನದೇ ಆದ ವಿಶಿಷ್ಠತೆಯನ್ನು ಹೊಂದಿದ್ದು, ಕೆಲ ವಿಶಿಷ್ಠ ಬಟ್ಟೆಗಳು ವಿದ್ಯುತ್ ಮಗ್ಗದಲ್ಲಿ ತಯಾರಿಸುವುದು ಸಾಧ್ಯವಿಲ್ಲ. ಕಾರಣ ಈ ಸರಕುಗಳ ಬೇಡಿಕೆ ಹೆಚ್ಚಾಗಬೇಕು. ಅದರಿಂದ ಕೈಮಗ್ಗಗಳ ಸಂಖ್ಯೆ ಹೆಚ್ಚುವುದು.

೨. ನೇಕಾರರ ಸಹಕಾರಿ ಸಂಘಗಳು ಪ್ರಾಮಾಣಿಕ ನಿಷ್ಠೆಯಿಂದ ಕೆಲಸ ಮಾಡಬೇಕು.

೩. ನೇಕಾರರು ತಾವು ನೇಯ್ದ ಬಟ್ಟೆ/ಸೀರೆಗಳನ್ನು ಕಡ್ಡಾಯವಾಗಿ ಸಹಕಾರಿ ಸಂಘಗಳಿಗೆ ಕೊಡಬೇಕು.

೪. ಕನಿಷ್ಠ ವಾರದಲ್ಲಿ ನೇಯ್ದ ಅರ್ಧಕ್ಕಿಂತ ಹೆಚ್ಚು ಮಾಲನ್ನು ಸಹಕಾರ ಸಂಘಕ್ಕೆ ನೀಡುವ ಪರಿಪಾಠ ಇಟ್ಟುಕೊಳ್ಳಬೇಕು.

೫. ಸಹಕಾರಿ ಸಂಘವು ಯಜಮಾನ ಕೊಡುವ ದರಕ್ಕಿಂತ ಹೆಚ್ಚಿನದರ ಕೊಡುವ ಪದ್ಧತಿ ಮುಂದುವರೆಯಬೇಕು.

೬. ಸಹಕಾರಿ ಸಂಘ, ಸರಕಾರದಿಂದ ಲಭ್ಯವಿರುವ ಈ ಮುಂದೆ ಲಭ್ಯವಾಗುವ ಎಲ್ಲ ಸವಲತ್ತು ಅಂದರೆ ಹಳದಿ ಕಾಡ್ ರ್, ರೇಶನ ಹಂಚುವ ವ್ಯವಸ್ಥೆ, ಯಶಸ್ವಿನಿ ಆರೋಗ್ಯ ಯೋಜನೆ ಇತ್ಯಾದಿ.

೭. ಸಹಕಾರಿ ಸಂಘದಲ್ಲಿ ಮಾರಾಟವಾಗದೇ ಬಿದ್ದ ಹೆಚ್ಚುವರಿ ಸೀರೆ, ಸರಕಾರ ಯೋಗ್ಯ ಬೆಲೆ ನೀಡಿ ಖರೀದಿಸಬೇಕು.

೮. ಸಹಕಾರಿ ಸಂಘದ ಆರ್ಥಿಕ ಪರಿಸ್ಥಿತಿ ಸದೃಢವಾಗಲಿ ಆವರ್ತ ನಿಧಿ ಸ್ಥಾಪಿಸಿ ಹಣ ಸಹಾಯ ಮಾಡಬೇಕು.

೯. ಸೀರೆಗಳಿಗೆ ಸರಕಾರ ಕೊಡುವ ಯೋಜನೆ ಮುಂದುವರೆಸಿ ‘ರಿಬೇಟ್ ‘ ಮೌಲ್ಯ ಹೆಚ್ಚಿಸಬೇಕು.

೧೦. ಕರ್ನಾಟಕ ಕೈಮಗ್ಗ ನಿಗಮದಿಂದ ನೇಕಾರರಿಗೆ ನಿಯಮಿತ ನೂಲು ದೊರೆಯುವಂತಾಗಬೇಕು, ನಿರಂತರ ಕೆಲಸ ಮಾಡುವಂತಾಗಬೇಕು. ಸುಮಾರು ೮-೧೦ ವರುಷಗಳಿಂದ ಹಿಂದೆ ನಿಗದಿಯಾದ ಕೂಲಿ ದರ ಪರಿಷ್ಕೃತವಾಗಬೇಕು.

೧೧. ವಸತಿ ರಹಿತ ನೇಕಾರರಿಗೆ ಸರಕಾರ ಹಾಗೂ ನಿಗಮ – ರಿಯಾಯಿತಿ ದರದಲ್ಲಿ ವಾಸಕ್ಕಾಗಿ ಮನೆ ನಿರ್ಮಿಸಿ ಕೊಡಬೇಕು.

೧೨. ಕಡಿಮೆ ಬಡ್ಡಿ ದರದಲ್ಲಿ ನೇಕಾರರಿಗೆ ಸುಲಭ ಸಾಲ ಸಿಗುವಂತಾಗಬೇಕು.

೧೩. ಬಡ ನೇಕಾರರಿಗೆ ಉಚಿತ ಉಚ್ಚ ಶಿಕ್ಷಣ ದೊರಕಿಸುವ ವ್ಯವಸ್ಥೆ ಆಗಬೇಕು.

೧೪. ವಯಸ್ಸಾದ ಬಡ ನೇಕಾರರಿಗೆ ನಿವೃತ್ತಿ ನಂತರ ಸೌಲಭ್ಯ ಇಲ್ಲ. ನೇಕಾರರಿಗೆ ‘ಪ್ರಾವಿಂಡೆಂಟ್ ಫಂಡ್’ ಕ್ಕೆ ಒಳಪಡಿಸಿ, ಪಿಂಚಣಿ ದೊರಕಿಸುವ ಏರ್ಪಾಟಾಗಬೇಕು. ೫೫ ವರ್ಷ ವಯಸ್ಸಾದ ಅಥವಾ ನಿಗಮದಲ್ಲಿ ೧೫ ವರುಷ ದುಡಿದ ನೇಕಾರರಿಗೆ ಪಿಂಚಣಿ ಸಿಗುವಂತಾಗಬೇಕು.

ವಿದ್ಯುತ್ ಮಗ್ಗ ನೇಕಾರಿಕೆ

೧. ವಿದ್ಯುತ್ ಮಗ್ಗ ನೇಕಾರಿಕೆಯಲ್ಲಿ ಉತ್ಪಾದನೆ ಕೈಮಗ್ಗಕ್ಕಿಂತ ಹೆಚ್ಚು. ಗುಣಮಟ್ಟ ಅಂದರೆ ನೂಲಿನ ಬಿಗುವು ಹೆಚ್ಚು ಉತ್ತಮವಾಗಿರುವುದು. ಆದ್ದರಿಂದ ಈ ಉದ್ದಿಮೆಯು ಬೆಳೆಯಬೇಕು. ಮಗ್ಗಗಳ ಸಂಖ್ಯೆ ಹೆಚ್ಚಬೇಕು.

೨. ನೇಕಾರನಿಗೆ ಬೇಕಾದ ಕಚ್ಚಾ ಸರಕು ನಿಯಮಿತವಾಗಿ ಪೂರೈಸುವಂತೆ ಸರಕಾರ ನಿಗಾ ವಹಿಸಬೇಕು. ಆಯಾ ಊರುಗಳಲ್ಲಿ ‘ಕಚ್ಚಾ ಸಾಮಗ್ರಿ ಬ್ಯಾಂಕ್ ‘ ನಿರ್ಮಾಣವಾಗಬೇಕು.

೩. ನೇಕಾರನಿಂದ ಸಿದ್ಧಗೊಂಡ ಬಟ್ಟೆಗಳಿಗೆ ಯೋಗ್ಯ ಬೆಲೆ ಬರುವಂತೆ ಸರಕಾರ, ಕೃಷಿ ಉತ್ಪಾದನೆಗಳಿಗೆ ಇರುವಂತೆ ‘ನೇಕಾರ ಉತ್ಪನ್ನ ಮಾರುಕಟ್ಟೆ ಕೇಂದ್ರ’ ರಚಿಸಬೇಕು.

೪. ವಿದ್ಯುತ್ ಮಗ್ಗಗಳಿಗೆ ಪ್ರತ್ಯೇಕ ‘ಔದ್ಯಮಿಕ ವಸಹಾತು’ ನಿರ್ಮಿಸಿ ವಿದ್ಯುತ್ ಮಗ್ಗ ಹಾಕಲು ನೇಕಾರರಿಗೆ ರಿಯಾಯಿತಿ ದರದಲ್ಲಿ ಶೆಡ್ ಒದಗಿಸಬೇಕು.

೫. ನೇಕಾರರು ಸುಸಂಘಟಿತರಾಗಿ ಹೋರಾಟ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸರಕಾರದಿಂದ ಯಾವುದೇ ಸೌಲಭ್ಯ ದೊರಕದು.

೬. ನೇಕಾರರಿಗೆ ನೇಯುವ ತರಬೇತಿ ನೀಡುವಂತಾಗಬೇಕು. ಹೊಸ ಹೊಸ ತಂತ್ರಜ್ಞಾನದ ಸಂಪೂರ್ಣ ಜ್ಞಾನ ಅರಿತುಕೊಳ್ಳಲು ನೇಕಾರ ಸಮುದಾಯ ಉತ್ಸುಕರಾಗಿ ತಿಳಿದುಕೊಳ್ಳಬೇಕು.

೭. ನೇಕಾರಿಕೆಯಲ್ಲಿ ಹೆಚ್ಚಿನ ಶ್ರದ್ಧೆ ವಹಿಸಿ, ಕಠಿಣ ಪರಿಶ್ರಮದಿಂದ ನೇಕಾರಿಕೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಎದುರೇಟು ನೀಡಲು ನೇಕಾರ ಸಮುದಾಯ ಮಾನಸಿಕವಾಗಿ ಸಿದ್ಧರಾಗಬೇಕು.

೮. ಇತ್ತೀಚೆಗೆ ನೇಕಾರಿಕೆಯ ‘ವ್ಯಾಪಾರಿ’ ವರ್ಗದವರೇ ಆದ ಮಾರವಾಡಿಗಳು ಪ್ರವೇಶ ಪಡೆದಿದ್ದು, ಧೈರ್ಯ ಚಾಕ-ಚಕ್ಯತೆಯಿಂದ ಈ ಸಮಸ್ಯೆ ಎದುರಿಸಬೇಕು.

೯. ನೇಕಾರನಿಗೆ ಹಣದ ಸಾಮಥ್ಯರ ವೃದ್ದಿಯಾಗುವಲ್ಲಿ ಸರಕಾರ ಹಾಗೂ ಬ್ಯಾಂಕ್ , ಕಡಿಮೆ ದರದಲ್ಲಿ ಸಾಲ ನೀಡಬೇಕು.

೧೦. ಕೈಮಗ್ಗ ನೇಕಾರರು – ವಿದ್ಯುತ್ ಮಗ್ಗ ನೇಕಾರರಲ್ಲಿ ಸಮನ್ವಯ ಸಾಧಿಸಿ ಉತ್ಪಾದನೆ ಭಿನ್ನಾಭಿಪ್ರಾಯ ಬಗೆಹರಿಸಬೇಕು.

೧೧. ಕೇಂದ್ರ ಸರಕಾರ – ರಾಜ್ಯ ಸರಕಾರ ನೇಕಾರಿಕೆ ಜೀವಂತವಾಗಿರಿಸಲು ಸದೈವ ಎಚ್ಚರಿಕೆಯಿಂದ ಕಾರ್ಯತತ್ಪರವಾಗಿರಬೇಕು.

೧೨. ಯಾವುದಕ್ಕೂ ಅಂಜದೇ – ಹೆದರದೇ – ಹಿಗ್ಗದೇ – ಕುಗ್ಗದೇ ನೇಕಾರಿಕೆ ಮುಂದುವರೆಸುವ ಸಂಕಲ್ಪ ನೇಕಾರಿಕೆ ಸಮುದಾಯದವರಿರಬೇಕು. ಅಂದಾಗಲೇ ನೇಕಾರಿಕೆ ಉಳಿಯುವುದು ಮತ್ತು ಬೆಳೆಯುವುದು.

ಗ್ರಂಥಋಣ ಹಾಗೂ ಸಹಕಾರ

೧. ಶಂಬಾ ಸಂಪುಟ; ಕಂನಾಡು, ಕರ್ನಾಟಕ ೧, ಪ್ರ:ಕನ್ನಡ ಪುಸ್ತಕಕ ಪ್ರಾಧಿಕಾರ, ಬೆಂಗಳೂರು

೨. ಶ್ರೀ ಜಿಹ್ವೇಶ್ವರ ಮಂಗಲ ಭವನ ಉದ್ಘಾಟನೆ ಸ್ಮರಣ ಸಂಚಿಕೆ, ಪ್ರ : ಸ್ವಕುಳ-ಸಾಳಿ ಸಮಾಜ ಇಳಿಕಲ್ಲ

೩. ಶಿವಮಯ ‘ಸಾಳಿ’ (ಮರಾಠಿ), ಲೇ: ಶ್ರೀ.ಗ್ಯಾ.ರಾ.ಭಂಡಾರೆ(ಗುರೂಜಿ), ಹುಬ್ಬಳ್ಳೀ

೪. ಮೌಖಿಕ ಮಾಹಿತಿ ಒದಗಿಸಿದವರು.

೧. ಶ್ರೀ ತಿಪ್ಪಣ್ಣ ಚಿಲ್ಲಾಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಕೈಮಗ್ಗ ನೇಕಾರರ ಸಂಘ, ಇಳಕಲ್ಲ

೨. ಶ್ರೀ ಪರಶುರಾಮ ಢಗೆ, ಪ್ರಧಾನ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾ ನೇಕಾರರ ವೇದಿಕೆ, ಬೆಳಗಾವಿ

೩. ಶ್ರೀ ಶಿವಾಜಿ ವಾಂಜರೆ, ರೇಶ್ಮೆ ಸೀರೆ ಉತ್ಪಾದಕರು, ಮೊಳಕಾಲ್ಮೂರು

೪. ಶ್ರೀ ಗಿರಿಧರ ಕೆಂಧೋಳೆ, ರೇಶ್ಮೆ ಸೀರೆ ಉತ್ಪಾದಕರು, ಬೆಂಗಳೂರು

೫. ಶ್ರೀ ರಾಮಕೃಷ್ಣ ಏಕಬೋಟೆ, ನೇಕಾರರು ಹಾಗೂ ನಿವೃತ್ತ ಶಿಕ್ಷಕರು, ಗದಗ-ಬೆಟಗೇರಿ

೬. ಶ್ರೀ ದೇವಪ್ಪ ದಿವಟೆ, ಸೀರೆ ಉತ್ಪಾದಕರು, ಹುಬ್ಬಳ್ಳಿ

೭. ಶ್ರೀ ಶ್ರೀಕಾಂತ ಕಾಕತೀಕರ, ಪತ್ರಕರ್ತರು, ‘ಪುಢಾರಿ’ ಮರಾಠಿ ದಿನಪತ್ರಿಕೆ, ಬೆಳಗಾವಿ

* * *