ಪ್ರಪ್ರಥಮವಾಗಿ ವಿಶ್ವದ ಇಡೀ ಮಾನವ ಕುಲಕ್ಕೆ ಸಾಹಿತ್ಯವನ್ನು ನೀಡಿದಂತಹ ದೇವರ ದಾಸಿಮಯ್ಯನವರ ದೇವರ ದಾಸಿಮಯ್ಯ ಅಧ್ಯಯನ ಪೀಠವನ್ನು ಸ್ಥಾಪಿಸಿದಂತಹ ಘನ ಸರಕಾರಕ್ಕೆ ರಾಜ್ಯದ ನೇಕಾರ ಸಮಾಜ ಬಾಂಧವರ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಈ ಒಂದು ವೇದಿಕೆಯ ಮೂಲಕ ಅರ್ಪಿಸಲು ನನಗೆ ತುಂಬ ಸಂತೋಷವೆನಿಸುತ್ತದೆ.

ಈ ವಿಚಾರ ಸಂಕಿರಣದಲ್ಲಿ ನಾನು ನನಗೆ ತಿಳಿದ ಮಟ್ಟಿಗೆ ನನಗೆ ಒಪ್ಪಿಸಿರುವ ವಿಷಯವಾಗಿ ನೇಕಾರರಿಗೆ ಸರಕಾರಿ ಸವಲತ್ತುಗಳ ಬಗ್ಗೆ ನನ್ನ ವಿಚಾರ ಮಂಡನೆಯನ್ನು ಮಂಡಿಸಲು ಇಚ್ಛೆಪಡುತ್ತೇನೆ.

ಒಂದು ಕಾಲದಲ್ಲಿ ಒಂಭತ್ತು ಗಜದ ಸೀರೆಯನ್ನು ಒಂದು ಬೆಂಕಿ ಪೊಟ್ಟಣದಲ್ಲಿ ಹಿಡಿಸಿಬಹುದಾದಷ್ಟು ಸೂಕ್ಷ್ಮವಾಗಿ, ನವಿರಾಗಿ ನೇಯ್ದ ಪ್ರಾಚೀನ ಇತಿಹಾಸವಿರುವಂತಹ ನಮ್ಮ ನೇಕಾರ ಜನಾಂಗಕ್ಕೆ ಇವತ್ತಗೂ ಆ ಕುಶಲತೆಯನ್ನು ಪ್ರದರ್ಶಿಸಬೇಕಾದರೆ, ತಮ್ಮ ನಿಜವಾದ ನೈಪುಣ್ಯತೆಯನ್ನು ಸಾಬೀತು ಪಡಿಸಬೇಕಾದರೆ ಕೇವಲ ಕೈಮಗ್ಗದಲ್ಲಿ ಮಾತ್ರ ಸಾಧ್ಯ. ಈ ಸಾಂಪ್ರದಾಯಿಕ ನೇಕಾರಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲಿಕ್ಕಾಗಿಯೇ ಸರಕಾರದವರು ಕೈಮಗ್ಗ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿದ್ದಾರೆ. ಇವತ್ತಿಗೂ ನಾವು ಕೈಮಗ್ಗದ ನೇಕಾರಿಕೆ ಅಭಿವೃದ್ದಿಗಾಗಿ ಸರಕಾರದವರು ಕೊಟ್ಟಂತಹ ಸಹಾಯ, ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಕೈಮಗ್ಗದ ಉದ್ಯಮವನ್ನು ಉಳಿಸಿ ಬೆಳೆಸಬೇಕಾಗಿದೆ. ಈವತ್ತಿಗೆ ನಮ್ಮ ದೇಶದಲ್ಲಿಯೇ ಈ ನೇಕಾರಿಕೆಯ ಕುಶಲ ಕರ್ಮಿಗಳ ಸಂಖ್ಯೆ ದಿನ ದಿನಕ್ಕೆ ಕಡಿಮೆಯಾಗುತ್ತಲಿದೆ. ನಮ್ಮ ಮುಂದಿನ ಪೀಳಿಗೆಯವರಿಗೆ ಈ ಒಂದು ವಿದ್ಯೆಯನ್ನು ಪರಿಚಯಿಸುವತ್ತ ನಮ್ಮ ಪ್ರಯತ್ನವಾಗಬೇಕಾಗಿದೆ. ಇದು ಒಂದು ಕಲೆ. ಆದರೆ ಈವತ್ತು ಜಗತ್ತಿಗೆ ಬೇಕಾದಂತಹ ಬಟ್ಟೆಯನ್ನು ಪೂರೈಸಬೇಕಾದರೆ ಅನಿವಾರ್ಯವಾಗಿ ನಾವು ವಿದ್ಯುತ್ ಯಾತ್ರಿಕ ಮಗ್ಗಗಳ ಮೊರೆ ಹೋಗಬೇಕಾಯಿತು. ಅವಶ್ಯಕತೆಗನುಸಾರವಾಗಿ ಹೆಚ್ಚಿನ ಉತ್ಪಾದನೆಗಾಗಿ ರೂಪುಗೊಂಡ ವಲಯವೇ ವಿದ್ಯುತ್ ಮಗ್ಗದ ನೇಕಾರರ ವರ್ಗವಾಗಿದೆ. ಈ ವಿದ್ಯುತ್ ವುಗ್ಗ ನೇಕಾರರು ಮೂಲತಃ ಕೈಮಗ್ಗದ ನೇಕಾರರೇ ಆಗಿರುತ್ತಾರೆ. ನೇಕಾರಿಕೆಗೆ ಮಾತೃ ಸ್ಥಾನವಾದ ಈ ಕೈಮಗ್ಗ ನೇಕಾರಿಕೆಯನ್ನು ಮರೆಯದೇ ನಾವು ಬದಲಾಗುತ್ತಿರುವ ಔದ್ಯೋಗಿಕ ಕ್ರಾಂತಿಯಾದ ವಿದ್ಯುತ್ ಮಗ್ಗಗಳ ನೇಕಾರಿಕೆಯನ್ನು ಸಮಾನಾಂತರವಾಗಿ ಬೆಳೆಸಬೇಕಾಗಿದೆ. ಹಾಗಾಗಿ ತೀರ ಇತ್ತೀಚಿಗೆ ಸರಕಾರದವರು ಸ್ಥಾಪಿಸಿದ ಕರ್ನಾಟಕ ರಾಜ್ಯ ವಿದ್ಯುತ್ ಮಗ್ಗ ಅಭಿವೃದ್ದಿ ನಿಗಮ ೧೯೯೪ರಲ್ಲಿ ಪ್ರಾರಂಭವಾಗಿರುತ್ತದೆ. ಸರಕಾರದವರೇ ಆದ ಈ ಎರಡೂ ನಿಗಮಗಳನ್ನು ಸಮಾನ ದೃಷ್ಟಿಯಿಂದ ಸರಕಾರದವರು ನೀಡುವ ಸಹಾಯ ಸವಲತ್ತುಗಳನ್ನು ಉಪಯೋಗಿಸಿಕೊಂಡು ನಮ್ಮ ನೇಕಾರ ಸಮಾಜವನ್ನು ಪ್ರವರ್ಧಮಾನಕ್ಕೆ ಒಯ್ಯಬೇಕಾಗಿದೆ.

ಹಸಿದ ಹೊಟ್ಟೆಗೆ ಅನ್ನ ನೀಡುವ ರೈತ ಭಾರತ ಮಾತೆಯ ಒಂದು ಕಣ್ಣಾದರೆ ಹೊಟ್ಟೆ ತುಂಬಿದ ನಂತರ ನಮ್ಮ ಮಾನ ಮುಚ್ಚಲು ಬೇಕಾದ ವಸ್ತ್ರವನ್ನು ಕಷ್ಟುಪಟ್ಟು ತಯಾರಿಸುವ ನೇಕಾರ ಭಾರತ ಮಾತೆಯ ಇನ್ನೊಂದು ಕಣ್ಣು. ಈ ಎರಡೂ ಕಣ್ಣುಗಳು ಸರಿಯಾಗಿದ್ದರೆ ಮಾತ್ರ ಈ ದೇಶ ಮುಂದುವರೆಯಲು ಸಾಧ್ಯ! ಆದರೆ ಇವತ್ತೇನಾಗಿದೆ ಹಸಿದಾಗ ಅನ್ನ ಕೊಡುವವನು ಮತ್ತು ಮಾನ ಕಾಪಾಡುವವರಿಬ್ಬರೂ ಅಶಕ್ತರಾಗಿದ್ದಾರೆ. ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಜೊತೆ ಜೊತೆಗೆ ಬಡನೇಕಾರರ ಆತ್ಮ ಹತ್ಯೆಗಳು ನಡೆಯುತ್ತಲೇ ಇವೆ. ಕೇಂದ್ರ ಸರಕಾರದವರು ರಾಜ್ಯ ಸರಕಾರದವರೂ ಈ ಎರಡೂ ಸಮುದಾಯದವರನ್ನು ಬಡತನ ರೇಖೆಗಿಂತ ಮೇಲಕ್ಕೆ ತರಲು ಎಷ್ಟೇ ಪ್ರಯತ್ನ ಪಟ್ಟರೂ ಹಲವಾರು ಯೋಜನೆಗಳನ್ನು ಹಾಕಿಕೊಂಡರೂ ಆ ಯೋಜನೆಗಳು ಯಶಸ್ವಿಯಾಗದಿದ್ದುದಕ್ಕೆ ಸಾಕಷ್ಟು ವಾಸ್ತವಿಕ ಆಡಚಣೆಗಳು ಎದುರಾಗುತ್ತಲಿವೆ. ಮತ್ತು ಮಧ್ಯಮ ದರ್ಜೆಯ ಹಾಗೂ ಕನಿಷ್ಟ ದರ್ಜೆಯ ರೈತ ಹಾಗೂ ನೇಕಾರರಿಗೆ ಸಿಗಬೇಕಾದಂತಹ ಸರಕಾರಿ ಸವಲತ್ತುಗಳು ನಿಷ್ಕ್ರೀಯವಾಗುತ್ತಲಿವೆ. ಇದಕ್ಕೆ ಕಾರಣ ನಮ್ಮ ಈ ಕೆಳಮಟ್ಟದ ಜನರ ಅಜ್ಞಾನ ಹಾಗೂ ಸರಕಾರಿ ಸೌಲಭ್ಯಗಳ ತಿಳುವಳೀಕೆ ಇಲ್ಲದಿದ್ದುದು ಒಂದು ಕಾರಣವಾದರೆ ಉದ್ಯಮದಲ್ಲಿರುವ ತಿಮಿಂಗಿಲುಗಳಂತಹ ಮಧ್ಯವರ್ತಿಗಳು ಯೋಜನೆಯ ಬಹುಭಾಗವನ್ನು ತಾವೇ ತಿಂದು ಬಡನೇಕಾರರನ್ನು ಮತ್ತಷ್ಟು ಬಡತನಕ್ಕೆ ತಳ್ಳುತ್ತಲಿದ್ದಾರೆ. ಇದಕ್ಕೆ ಯಾರು ಹೊಣೆ? ಸರಕಾರದ ಅಧಿಕಾರಿಗಳು ನೇರವಾಗಿ ಈ ಕೆಳಮಟ್ಟದ ಜನರನ್ನು ಸಂಪರ್ಕಿಸಿ ಇದರಲ್ಲಿ ಸರಕಾರದ ಅಧಿಕಾರಿಗಳು ಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ ಸರಕಾರದ ಯೋಜನೆಗಳನ್ನು ಹೇಳುವಾಗ ಬಡನೇಕಾರನಿಗೆ ಹೇಳಬೇಕಾದ ಹೊತ್ತಿನಲ್ಲಿ ಅಂದರೆ ಅವನು ತನ್ನ ನೇಕಾರಿಕೆ ಕೆಲಸದಲ್ಲಿ ನಿರತನಾಗಿದ್ದಾಗ ಹೇಳದೆ ಅವನು ಕೆಲಸ ಬಿಟ್ಟು ಖಾಲಿಯಾದಾಗ ಅದು ರಾತ್ರಿಯಯೇ ಆಗಲಿ, ಹಗಲು ಹೊತ್ತೇ ಆಗಲಿ ಈ ಸರಕಾರದ ರಜೆಗಳನ್ನು ಗಮನಿಸದೇ ತಮ್ಮ ಕೆಲಸದ ಅವಧಿಯನ್ನೂ ಗಮನಿಸದೆ ಸರಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡಿ, ಯೋಜನೆಗಳು ಯಶಸ್ವಿಯಾಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಇಂತಹ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ನೇಕಾರರ ಜನಸಾಂಧ್ರತೆ ಇರುವ ಎಲ್ಲ ಸ್ಥಳಗಳಲ್ಲೂ ಏರ್ಪಡಿಸಿ ನೇಕಾರರಲ್ಲಿ ಜಾಗೃತಿಯನ್ನುಂಟು ಮಾಡಬೇಕಾಗಿದೆ. ಹಾಗೂ ಬಹುಮುಖ್ಯವಾಗಿ ಈ ವೇದಿಕೆಯ ಮೂಲಕ ಸರಕಾರದ ಹಾಗೂ ಸಂಬಂಧಪಟ್ಟ ಅಧಿಕಾರಗಳ ಗಮನ ಸೆಳೆಯಬೇಕಾಗಿದೆ. ಈವತ್ತು ಇಲ್ಲಿ ಚರ್ಚಿತವಾದ ವಿಷಯಗಲಣ್ನು ಹಾಗೂ ನಿರ್ಣಯಗಳನ್ನು ಈವತ್ತೇ ಸರಕಾರಕ್ಕೆ ತಿಳಿ ಹೇಳಬೇಕೆಂದು ಈ ವೇದಿಕೆಯ ಸಂಘಟಕಾರರಲ್ಲಿ ನನ್ನ ಕಳಕಳಿಯ ಪ್ರಾರ್ಥನೆ. ಇದೇ ರೀತಿ ನಮ್ಮ ನೇಕಾರ ಸಮಾಜದವರಲ್ಲಿ ನನ್ನ ಪ್ರಾರ್ಥನೆ ಏನೆಂದರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸರಕಾರದ ಯೋಜನೆಗಳನ್ನು ಅಧಿಕಾರಿಗಳಿಂದ ಮನವರಿಕೆ ಮಾಡಿಕೊಂಡು, ನಮ್ಮ ಶ್ರೇಯೋಭಿವೃದ್ದಿಯನ್ನು ನಾವೇ ಸಾಧಿಸಬೇಕಾಗಿರುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತಾಗುತ್ತದೆ ನಮ್ಮ ಪರಿಸ್ಥಿತಿ.

ಈಗ ಕೈಮಗ್ಗ ನೇಕಾರರಿಗೆ ಒಟ್ಟಾರೆ ಸವಲತ್ತುಗಳ ಬಗ್ಗೆ ವಿವರಿಸಲು ಇಚ್ಛೆಪಡುತ್ತೇನೆ. ಅದರಲ್ಲಿ ಎರಡು ತೆರನಾಗಿ ವಿಂಗಡಿಸಬಹುದಾಗಿದೆ. ಮೊದಲನೆಯದಾಗಿ ಜಿಲ್ಲಾ ವಲಯ ಯೋಜನೆಗಳು. ಎರಡನೆಯದಾಗಿ ಕೇಂದ್ರ ಸರಕಾರದ ಯೋಜನೆಗಳನ್ನು ಒಳಗೊಂಡ ರಾಜ್ಯ ವಲಯ ಯೋಜನೆಗಳು, ಮೊದಲಿಗೆ ಜಿಲ್ಲಾ ವಲಯ ಯೋಜನೆಗಳ ಅಡಿಯಲ್ಲಿ ಬರುವಂತಹ ಪ್ರಥಮವಾಗಿ ಕೈಮಗ್ಗ ನೇಕಾರಿಕೆ ತರಬೇತಿ. ನೇಯ್ಗೆ ಕುಶಲತೆಯನ್ನು ಅಭಿವೃದ್ದಿ ಪಡಿಸುವ ಸಲುವಾಗಿ ಮತ್ತು ನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ನೇಕಾರಿಕೆ ತರಬೇತಿ ಕೇಂದ್ರವನ್ನು ಜಿಲ್ಲಾಮಟ್ಟದಲ್ಲಿ ತೆರೆದು ಪ್ರತಿ ತಿಂಗಳಿಗೆ ೨೦೦ ರೂ.ಗಳಂತೆ ಶಿಷ್ಯವೇತನ ಹಾಗೂ ತರಬೇತಿ ನೀಡುವ ಶಿಕ್ಷಕರಿಗೆ ತಿಂಗಳಿಗೆ ೫೦೦ ರೂ. ಗಳಂತೆ ಗೌರವ ಧನ ನೀಡಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. ಇದರ ಉಪಯೋಗವನ್ನು ನೇಕಾರರು ಪಡೆದುಕೊಳ್ಳಬೇಕು. ಇನ್ನು ಎರಡನೆಯದಾಗಿ

ಸಾಮೂಹಿಕ ನೇಯ್ಗೆ ಕೇಂದ್ರಗಳು – ಕೈಮಗ್ಗ ನೇಕಾರರು ಸಾಂಧ್ರಿಕೃತವಾದ ಸ್ಥಳಗಳಲ್ಲಿ ನೇಕಾರ ಸಹಕಾರ ಸಂಘಗಳ ವತಿಯಿಂದ ಕಟ್ಟಲ್ಪಟ್ಟ ಸಾಮೂಹಿಕ ನೇಯ್ಗೆ ಕೇಂದ್ರಗಳಲ್ಲಿ ನೇಕಾರರು ಗುಂಪುಗೂಡಿ ಒಂದೇ ಕಡೆ ಕೆಲಸ ಮಾಡಲು ಸ್ಥಳವಕಾಶ ಒದಗಿಸಲಾಗುವುದು. ಈ ಮುಖಾಂತರ ನೇಕಾರರಿಗೆ ಬೇಕಾಗುವಂತಹ ಕಚ್ಚಾಮಾಲು ಹಾಗೂ ಉಪಕರಣಗಳ ಖರೀದಿಗಾಗಿ ಸರಕಾರದಿಂದ ಸಿಗುವಂತಹ ಅನುದಾನ ಪ್ರತಿಶತ ೫೦ ಮತ್ತು ಸಾಲ ಪ್ರತಿಶತ ೫೦ ಪಡೆದುಕೊಂಡು ಅತೀ ಬಡ ನೇಕಾರನೂ ಕೂಡ ಸ್ವಾವಲಂಬಿತವಾಗಿ ನೇಕಾರಿಕೆಯನ್ನು ಮುಂದುವರೆಸಬಹುದು.

ಮೂರನೆಯದಾಗಿ ಬಣ್ಣದ ಮನೆಗಳು – ವಿವಿಧ ಬಣ್ಣದ ನೂಲುಗಳನ್ನು ಸಂಘದ ಸದಸ್ಯರಿಗೆ ಒದಗಿಸುವ ಸಲುವಾಗಿ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಸಂಘಗಳಿಗೆ ಸ್ವಂತ ಬಣ್ಣ ಹಾಕುವ ಘಟಕಗಳನ್ನು ಹೊಂದಲು ನೇರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದಕ್ಕೆ ತಗಲುವ ಎಲ್ಲ ವೆಚ್ಚಗಳಿಗೆ ಶೇಕಡಾ ೧೦೦ರಷ್ಟು ಅನುದಾನವನ್ನು ನೀಡಲಾಗುವುದು. ನಾಲ್ಕನೆಯದಾಗಿ ವಸತಿ ಕಾಲೋನಿಗಳು. ಸ್ವಂತ ಜಾಗ ಇದ್ದು ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಕೊಡುವುದು ಮತ್ತು ಸಹಕಾರಿ ಸಂಘಗಳ ನಿವೇಶನವಿದ್ದಲ್ಲಿ ಗಂಪು ಮನೆಗಳನ್ನು ನಿರ್ಮಿಸಿ ಸದಸ್ಯರು ತಮ್ಮ ಮನೆಯಲ್ಲಿಯೇ ಮಗ್ಗಗಳನ್ನು ಹಾಕಿಕೊಂಡು ಕುಟುಂಬದ ಎಲ್ಲಾ ಸದಸ್ಯರಿಗೂ ಮಗ್ಗದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಲು ಅನುಕೂಲವಾಗುತ್ತದೆ. ಒಂದು ಮನೆಗೆ ಗರಿಷ್ಠ ೩೦ ಸಾವಿರಗಳಷ್ಟು ಹಣವನ್ನು ಮಂಜೂರು ಮಾಡಲಾಗುವುದು. ಇದರಲ್ಲಿ ಸಾಲದ ರೂಪದಲ್ಲಿ ೨೦,೦೦೦ ರೂ. ಮತ್ತು ಸಹಾಯಧನ ರೂಪದಲ್ಲಿ ೧೦ ಸಾವಿರ ನೀಡಲಾಗುವುದು. ಸಾಲದ ಹಣವನ್ನು ಹಣ ಸಂದಾಯವಾದ ಒಂದು ವರುಷದ ನಂತರ ಸರಕಾರವು ಕಾಲಕಾಲಕ್ಕೆ ನಿಗದಿಪಡಿಸಿದ ಬಡ್ಡಿಯೊಂದಿಗೆ ೨೫ ವರುಷಗಳವರೆಗೆ ಮರು ಪಾವತಿಸಲು ಅವಕಾಶವಿರುತ್ತದೆ. ಇನ್ನು ಐದನೆಯದಾಗಿ ಸುಧಾರಿತ ಮಗ್ಗಗಳು ಮತ್ತು ಉಪಕರಣಗಳ ಪೂರೈಕೆ. ಪುರಾತನ ಕಾಲದಿಂದ ಬಂದಿರುವ ಕುಣಿಮ್ಗಗಳನ್ನು ಆಧುನೀಕರಿಸುವುದು ಮತ್ತು ಹೊಸ ಹೊಸ ನಮೂನೆಯ ಬಟ್ಟೆಗಳನ್ನು ಉತ್ಪಾದಿಸುವ ಸಲುವಾಗಿ ಆಧುನಿಕ ಮಗ್ಗಗಳನ್ನು ಪೂರೈಸುವುದು. ಇದನ್ನು ಸಹಕಾರ ಸಂಘಗಳ ಮುಖಾಂತರ ಒದಗಿಸುವ ಯೋಜನೆ ಆಗಿದೆ. ಆರನೆಯದಾಗಿ R.A.P.(ರೂರಲ್ ಆರ್ಟಿಜನ್ ಪ್ರೋ) ಮತ್ತು R.I.P. (ರೂರಲ್ ಇಂಡಸ್ಟ್ರೀಯಲ್ ಪ್ರೋ) ಯೋಜನೆ ಗ್ರಾಮೀಣ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ತರಬೇತಿ ಹಾಗೂ ಸುಧಾರಿತ ಉಪಕರಣಗಳ ವಿತರಣೆಗಾಗಿ ಶೇಕಡಾ ೩೩.೩೩(ಗರಿಷ್ಠ ೩,೦೦೦ ರೂ.) ಸಹಾಯಧನ ನೀಡಲಾಗುವುದು. ಈ ಯೋಜನೆ ಅಡಿಯಲ್ಲಿ ಕುಶಲ ಕರ್ಮಿಗಳ ಪ್ರವಾಸ ಕಾರ್ಯಕ್ಕೂ ಅವಕಾಶವಿರುತ್ತದೆ. ಇದೇ ಯೋಜನೆಯಡಿಯಲ್ಲಿ ಕೈಮಗ್ಗ ನೇಕಾರ ಸಹಕಾರಿ ಸಂಘಗಳಿಗೆ ಸರಕಾರದ ಶೇರು ಬಂಡವಾಳವಾಗಿ ಸಂಘದ ಸದಸ್ಯರಿಂದ ಸಂಗ್ರಹಿಸಿದ ಶೇರು ಮೊತ್ತಕ್ಕೆ ಸಮಾನವಾಗಿ ಸರಕಾರದಿಂದ ಶೇರು ಹಣವನ್ನು ಪಡೆಯಬಹುದಾಗಿದೆ. ಈ ಯೋಜನೆ ಸಮಾನವಾಗಿ ಸರಕಾರದಿಂದ ಶೇರು ಹಣವನ್ನು ಪಡೆಯಬಹುದಾಗಿದೆ. ಈ ಯೋಜನೆ ಸಮಾನವಾಗಿ ಸರಕಾರದಿಂದ ಶೇರು ಹಣವನ್ನು ಪಡೆಯಬಹುದಾಗಿದೆ. ಈ ಯೋಜನೆ ಅಡಿ ಮೂರನೆಯದಾಗಿ ಜವಳೀ ಉದ್ಯಮಗಳಿಗೆ ಪಾರ್ಶ್ವ ಹಾಗೂ ಮೂಲಧನ ಯೋಜನೆ. ಇದರಲ್ಲಿ ಗ್ರಾಮೀಣ ಭಾಗದಲ್ಲಿ ಸ್ಥಾಪಿಸುವ ಅತೀ ಸಣ್ಣ ಜವಳೀ ಉದ್ಯಮಗಳಿಗೆ ಪ್ರಾರಂಭಿಕ ಮೂಲಧನವಾಗಿ ಸಾಮಾನ್ಯರ ಯೋಜನಾ ವೆಚ್ಚದ ಮೇಲೆ ಶೇಕಡಾ ೨೦ (೪೦,೦೦೦ ಗರಿಷ್ಠ ರೂ.) ಹಾಗೂ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಶೇ.೩೦(೬೦,೦೦೦ ಗರಿಷ್ಟ ರೂ.) ಸಾಲ ಮಂಜೂರು ಮಾಡಲು ಅವಕಾಶವಿದೆ. ಇದೇ ರೀತಿ ಏಕನೆಯದಾಗಿ ಕೇಂದ್ರ ವಲಯ ವಸತಿ ಕಾರ್ಯಾಗಾರ ಯೋಜನೆ. ಇದು ಸಂಪೂರ್ಣ ಕೇಂದ್ರ ವಲಯ ಯೋಜನೆ ಆಗಿದ್ದು ಕೈಮಗ್ಗನೇಕಾರರ ಕೆಲಸದ ಹಾಗೂ ವಾಸಸ್ಥಳವನ್ನು ಉತ್ತಮ ಸ್ಥಿತಿ ಕಲ್ಪಿಸಲು ಕಟ್ಟಡ ನಿರ್ಮಾಣಕ್ಕೆ ಸಹಾಯ ಧನ ಒದಗಿಸಲಾಗುವುದು. ಇದರಲ್ಲಿ ಗ್ರಾಮೀಣ ಭಾಗದಲ್ಲಿ ಕಾರ್ಯಾಗಾರದ ಘಟಕದ ವೆಚ್ಚವು ನಿಗದಿತ ಹಣ ೯.೦೦೦ ರೂ. ಇದ್ದು ಗರಿಷ್ಟ ಸಹಾಯ ಧನ ೭,೦೦೦ ರೂ. ಇರುತ್ತದೆ. ನಗರ ಪ್ರದೇಶದಲ್ಲಿ ಘಟಕದ ವೆಚ್ಚವು ನಿಗದಿತ ಹಣ ೧೪,೦೦೦ ರೂ. ಇದ್ದು ಸಹಾಯ ಧನ ೧೦,೦೦೦ ರೂ. ಇರುವುದು. ಸಾಲದ ಯೋಜನೆಯಲ್ಲಿ ಗ್ರಾಮೀಣ ಭಾಗದಲ್ಲಿ ಘಟಕದ ವೆಚ್ಚದ ನಿಗದಿತ ಹಣ ೩೫,೦೦೦ ರೂ. ಇದು ಗರಿಷ್ಠ ಸಹಾಯ ಧನ ೧೮,೦೦೦ ರೂ. ಇದೆ. ಒಟ್ಟಾರೆ ಸಾಲ ೧೪,೦೦೦ ರೂ. ಲಭ್ಯವಿರುವುದು. ನಗರ ಭಾಗದಲ್ಲಿ ಘಟಕದ ವೆಚ್ಚ ೪೫,೦೦೦ ರೂ. ಇದ್ದು ಗರಿಷ್ಟ ಸಹಾಯ ಧನ ೨೦,೦೦೦ ರೂ. ಇದೆ. ಇದರಲ್ಲಿ ೨೦,೦೦೦ ರೂ. ಸಾಲ ಲಭ್ಯವಿರುವುದು. ವಸತಿ ಕಾರ್ಯಾಗಾರಕ್ಕೆ ಘಟಕ ವೆಚ್ಚದ ಸಾಲದ ಮೊತ್ತವನ್ನು ಸ್ಥಳೀಯ ಬ್ಯಾಂಕ್ ಅಥವಾ ರಾಜೀವ ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ನಿಗಮದ ಮುಖಾಂತರ ಪಡೆದುಕೊಳ್ಳಬೇಕು. ಸದರಿ ಸಹಾಯ ಧನವನ್ನು ಈ ಇಲಾಖೆಯಿಂದ ನೀಡಲಾಗುವುದು.

ಇವೆಲ್ಲಾ ಜಿಲ್ಲಾ ವಲಯದ ಸವಲತ್ತುಗಳಾಗಿದ್ದು ಇವುಗಳ ಸದುಪಯೋಗವನ್ನು ಕೈಮಗ್ಗ ನೇಕಾರರು ಪಡೆದುಕೊಳ್ಳಬೇಕು. ಇನ್ನು ಕೇಂದ್ರ ಸರಕಾರದ ಸವಲತ್ತುಗಳನ್ನು ಒಳಗೊಂಡ ರಾಜ್ಯ ವಲಯದ ಸವಲತ್ತುಗಳ ಬಗ್ಗೆ ವಿವರಗಳನ್ನು ತಿಳಿಸಲು ಇಚ್ಛಿಸುತ್ತೇನೆ.

ಮುಖ್ಯವಾಗಿ ಮೊದಲನೆಯದಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ದಿ ನಿಗಮ ಯೋಜನೆ (NCDC) National c-operative Development Corporation) ಈ ಯೋಜನೆ ಪ್ರಕಾರ ಪ್ರಾಥಮಿಕ ಕೈಮಗ್ಗ ಹಾಗೂ ನೇಕಾರ ಸಹಕಾರ ಸಂಘಗಳು ಆಥಿರಕ ನೆರವನ್ನು ಪಡೆಯಲು ಅವಕಾಶವಿರುತ್ತದೆ. ಇವುಗಳಲ್ಲಿ ನಾಲ್ಕು ಪ್ರಕಾರದ ಅವಕಾಶಗಳಿವೆ. ೧. ಶೇರು ಬಂಡವಾಳ ಹೂಡಿಕೆ ೨. ನೇಯ್ಗೆ ಪೂರ್ವ ಮತ್ತು ನೇಯ್ಗೆ ನಂತರದ ಸಂಸ್ಕೃರಣ ಘಟಕಗಳ ಸ್ಥಾಪನೆಗೆ ಆರ್ಥಿಕ ನೆರವು. ೩. ಮಾರಾಟ ಮಳಿಗೆ ಮತ್ತು ಉಗ್ರಾಣ ನಿರ್ಮಾಣಕ್ಕಾಗಿ ಆರ್ಥಿಕ ನೆರವು. ೪. ಕಾರ್ಯಾಗಾರ ನಿರ್ಮಾಣಕ್ಕೆ ಆರ್ಥಿಕ ನೆರವು ಈ ಪ್ರಕಾರ ಇರುತ್ತದೆ. ಎರಡನೆಯದಾಗಿ ನಬಾರ್ಡ ಯೋಜನೆಯಲ್ಲಿ ದುಡಿಯುವ ಬಂಡವಾಳ ಸಾಲ ಯೋಜನೆ ಸ್ಥಳೀ ನೇಕಾರ ಸಹಕಾರ ಸಂಘಗಳಿಗೆ ಡಿ.ಸಿ.ಸಿ. ಬ್ಯಾಂಕ್ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಮುಖಾಂತರವಾಗಿ ಪಡೆಯಬಹುದಾದಂತಹ ದುಡಿಯುವ ಬಂಡವಾಳ ಸಾಲ ಯೋಜನೆ ಇದಾಗಿದೆ. ಮೂರನೆಯದಾಗಿ ನೇಕಾರ ಕಲ್ಯಾಣ ಯೋಜನೆ (N.K.Y) ಇದರಲ್ಲಿ ಕೈಮಗ್ಗ ನೇಕಾರರ ಮೂಲಭೂತ ಅವಶ್ಯಕತೆಗಳಾದ ಆರೋಗ್ಯ ಯೋಜನೆಗಳು ಅದರಲ್ಲಿ ಮುಖ್ಯವಾಗಿ ಕ್ಯಾನ್ಸರ ರೋಗಕ್ಕೆ ಚಿಕಿತ್ಸೆಗೆ ತಗಲುವಂತಹ ಪೂರ್ತಿ ವೆಚ್ಚವನ್ನು ಈ ಯೋಜನೆ ಅಡಿಯಲ್ಲಿ ಮರು ಪಾವತಿಸಲಾಗುವುದು. ಹಾಗೂ ವರುಷಕ್ಕೆ ರೂ.೫೦೦ರಂತೆ ಜೀವನಾಧಾರ ಭತ್ಯೆ ಚಿಕಿತ್ಸಾವಧಿಯಲ್ಲಿ ನೀಡಲಾಗುವುದು. ಅದೇ ರೀತಿ. ಹೃದಯ ರೋಗ ಹಾಗೂ ಮೂತ್ರಪಿಂಡ ಜೋಡಣೆಗೆ ಚಿಕಿತ್ಸೆಗಾಗಿ ವೈದ್ಯಕೀಯ ವೆಚ್ಚ ಗರಿಷ್ಟ ರೂ.೫೦.೦೦೦ಗಳ ವರೆಗೆ ಮರು ಸಂದಾಯ ಮಾಡಲಾಗುವುದು ಹಾಗೂ ವರುಷಕ್ಕೆ ರೂ.೫೦೦ ರಂತೆ ಜೀವನಾಧಾರ ಭತ್ಯೆಯನ್ನು ಚಿಕಿತ್ಸಾವಧಿಯಲ್ಲಿ ನೀಡಲಾಗುವುದು. ಇದೇ ಪ್ರಕಾರ ಮೂರನೆಯದಾಗಿ ಕುಷ್ಟ ರೋಗ ಮತ್ತು ಮಾನಸಿಕ ವಿಕಲತೆ ಅಸಮತೋಲನ ಚಿಕಿತ್ಸೆಗಾಗಿ ಮಾಸಿಕ ರೂ.೫೦೦ ರಂತೆ ಹಣ ಸಹಾಯ ನೀಡಲಾಗುವುದು. ನಾಲ್ಕನೆಯದಾಗಿ ನೇಕಾರರ ಅಂತ್ಯ ಸಂಸ್ಕಾರದ ಖರ್ಚು. ನೇಕಾರ ಸದಸ್ಯರು ಮರಣ ಹೊಂದಿದಲ್ಲಿ ಅಂತ್ಯ ಸಂಸ್ಕಾರದ ವೆಚ್ಚಕ್ಕೆ ೧,೦೦೦ ರೂ.ಗಳನ್ನು ನೀಡಲಾಗುವುದು. ನೇಕಾರ ಸಂಘ K.H.D.C. ರವರು ಮರಣ ಹೊಂದಿದವರ ಕುಟುಂಬಕ್ಕೆ ಮೊದಲು ಹಣ ಬಿಡುಗಡೆ ಮಾಡಿ ನಂತರ ಸರ್ಕಾರದಿಂದ ಮರು ಪಡೆಯಬಹುದು. ಐದನೆಯದಾಗಿ ಶೈಕ್ಷಣಿಕ ಯೋಜನೆಗಳು. ನೇಕಾರ ಜನರ ಮಕ್ಕಳಿಗೆ P.U.C. ಮತ್ತು ಡಿಪ್ರೋಮೇಲ್ಪಟ್ಟು ಅವರ ಶೇಕಡಾ ಅಂಕದ ಆಧಾರದ ಮೇಲೆ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುವುದು ಹಾಗೂ ಪುಸ್ತಕ ಖರೀದಿಗೂ ಅನುದಾನ ನೀಡಲಾಗುವುದು. ಇತರೆ ಕೈಮಗ್ಗ ನೇಕಾರರ ಯೋಜನೆಗಳ ಅಡಿಯಲ್ಲಿ ರಿಯಾಯತಿ ದರದಲ್ಲಿ ನೂಲು ಖರೀದಿಸುವ ಸೌಲಭ್ಯವನ್ನು ರಾಷ್ಟ್ರೀಯ ಕೈಮಗ್ಗ ಅಭಿವೃದ್ದಿ ನಿಗಮ ಮೂಲಕ ಪ್ರಯತ್ನಿಸಬಹುದಾಗಿದೆ. ಇನ್ನು ಆರನೆಯದಾಗಿ ಕೈಮಗ್ಗ ನೇಕಾರ ಆರೋಗ್ಯ ವಿಮಾ ಯೋಜನೆ. ಇದರಲ್ಲಿ ಆರ್ಥಿಕವಾಗಿ ಹಿಂದುಳಿದ ನೇಕಾರ. ಆತನ ಪತ್ನಿ ಮತ್ತು ಇಬ್ಬರು ಮಕ್ಕಳಿಗೂ ಅನ್ವಯಿಸುವಂತೆ ಆರೋಗ್ಯ ವಿಮಾ ಯೋಜನೆಯನ್ನು I.C.I.C.I. ಲೊಂಬಾರ್ಡ ಮತ್ತು ಜನರಲ್ ವಿಮಾ ಕಂಪನಿಗಳ ಸಹಯೋಗದೊಂದಿಗೆ ಕೇವಲ ವಾರ್ಷಿಕ ೨೦೦ ರೂ.ಗಳ ವಂತಿಗೆಯೊಂದಿಗೆ ಕುಟುಂಬದ ನಾಲ್ಕು ಜನರ ಸದಸ್ಯರಿಗೆ ಗರಿಷ್ಟ ೧೫,೦೦೦ ರೂ.ಗಳ ವೈದ್ಯಕೀಯ ವೆಚ್ಚವನ್ನು ಪಡೆಯಬಹುದಾಗಿದೆ. ಏಳನೆಯದಾಗಿ ಮಹಾತ್ಮಾಗಾಂಧಿ ಬುಣಕರ ಬಿಮಾ ಯೋಜನೆ. ಇದರಲ್ಲಿ ಕೈಮಗ್ಗ ನೇಕಾರರಿಗೆ ಸ್ವಾಭಾವಿಕ ಹಾಗೂ ಅಪಘಾತ ಸಾವು ಉಂಟಾದಲ್ಲಿ ಹೆಚ್ಚಿನ ವಿಮಾ ಪರಿಹಾರವನ್ನು ಪಡೆಯುವ ಉದ್ದೇಶದಿಂದ ವಾರ್ಷಿಕ ಕೇವಲ ೮೦ ರೂ.ಗಳ ವಂತಿಗೆಯನ್ನು ನೀಡಿ ಸರಕಾರದಿಂದ ನೇಕಾರನ ಅವಲಂಬಿತರು ಹೆಚ್ಚಿನ ಪರಿಹಾರ ಧನವನ್ನು ಈ ಮೂಲಕ ಪಡೆಯಬಹುದಾಗಿದೆ.

ಕೇಂದ್ರ ಸರಕಾರದ ನೇಕಾರರ (K.H.D.C) ವಿಶೇಷ ಪ್ಯಾಕೇಜ (೧೫೬೦ ಲಕ್ಷ).

ಈ ವಿಶೇಷ ಪ್ಯಾಕೇಜನ್ನು ಏಳು ಪ್ರಕಾರ ವಿಂಗಡಿಸಿ ಬಿಡುಗಡೆ ಮಾಡಲಾಗಿದೆ. ಅವುಗಳು ಈ ಪ್ರಕಾರ ಇವೆ.

೧. ಸಾಮೂಹಿಕ ನೇಯ್ಗೆ ಕೇಂದ್ರಗಳಿಗೆ ಮಗ್ಗ ಹಾಗೂ ಸಲಕರಣೆಗಳನ್ನು ಒದಗಿಸುವುದು. (೨೩.೮೯.೦೦೦ ರೂ.)

೨. ಚಾಲ್ತಿಯಲ್ಲಿರುವ ಮಗ್ಗಗಳ ಆಧುನೀಕರಣ (೪೩,೪೭,೦೦೦ ರೂ.)

೩. ನೇಕಾರರಿಗೆ ನೇಯ್ಗೆಯಲ್ಲಿ ನೈಪುಣ್ಯತೆಯನ್ನು ಹೆಚ್ಚಿಸಲು ತರಬೇತಿ ಕಾರ್ಯಕ್ರಮ (೧೮.೨೦.೦೦೦ ರೂ.)

೪. ದುಡಿಮೆಯ ಬಂಡವಾಳದ ಮೇಲೆ ಶೇ.೩.೫ರಷ್ಟು ಬಡ್ಡಿ ಸಹಾಯ ಧನ ೨೦೦೬-೦೭ಕ್ಕೆ ೯೦.೨೯.೦೦೦ ರೂ. ೦೭-೦೮ಕ್ಕೆ ೬೦ ಲಕ್ಷ ರೂ.

೫. ಕೈಮಗ್ಗ ಉತ್ಪನ್ನ ಮಾರಾಟಗಳ ಮೇಲೆ ರಾಜ್ಯ ಶೇಕಡಾ ೨೦ ರಷ್ಟು ರಿಬೇಟ (೧೩೫ ದಿನಗಳಿಗೆ) (೪ ಕೋಟಿ)

೬. ಕಚ್ಚಾ ಮಾಲು ಖರೀದಿಗಾಗಿ ದುಡಿಮೆ ಬಂಡವಾಳ ಸಹಾಯ ಧನ ೧ ಕೋಟಿ.

೭. ಕೈಮಗ್ಗ ನೇಕಾರ ಮಿತವ್ಯಯ ನಿಧಿ ಯೋಜನೆಯಡಿಯಲ್ಲಿ ೩೧-೩-೨೦೦೪ರ ವರೆಗಿನ ಬಾಕಿ ಬಡ್ಡಿ ಮೊತ್ತ (೪೨ K.H.D.C. ಉಪಕೇಂದ್ರ ನೇಕಾರರಿಗೆ ೭೧ ಲಕ್ಷ).

ಇನ್ನುಳಿದ ೫ ಕೋಟಿ ೪ ಲಕ್ಷ ೬೩ ಸಾವಿರ ರೂ.ಗಳ ಯೋಜನೆಗಳ ಬಗ್ಗೆ ಚರ್ಚೆ ನಡೆದಿರುತ್ತದೆ. ಈ ಎಲ್ಲಾ ಯೋಜನೆಗಳಿಗೆ ಸಂಬಂಧ ಪಟ್ಟ ನೇಕಾರರು ಸರಕಾರಿ ಅಧಿಕರಿಗಳನ್ನು ಭೆಟ್ಟಿಯಾಗಿ ಇವುಗಳ ಸದುಪಯೋಗ ಪಡೆದುಕೊಳ್ಳಲು ಪ್ರಯತ್ನಿಸಬೇಕಾಗಿದೆ.

ಕರ್ನಾಟಕ ಸರಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯವರು ಜವಳಿ ನೀತಿ ೨೦೦೪-೦೯ರ ಪ್ರಕಾರ ಜವಳಿ ನೀತಿಯ ಉದ್ದೇಶಗಳು ಈ ಪ್ರಕಾರವಾಗಿದೆ.

೧. ಪುರಾತನ ಮತ್ತು ಸಾಂಪ್ರದಾಯಿಕ ಕೈಮಗ್ಗಗಳನ್ನು ಸಂರಕ್ಷಿಸುವುದು ಮತ್ತು ನೇಕಾರರ ಜೀವನ ಮಟ್ಟವನ್ನು ಸುಧಾರಿಸುವುದು.

೨. ವಿನ್ಯಾಸಾಭಿವೃದ್ದಿ ತರಬೇತಿಯ ಬೆಂಬಲ, ತಾಂತ್ರಿಕ ಉನ್ನತೀಕರಣ ಹಾಗೂ ಮಾರುಕಟ್ಟೆಯ ಮಾಹಿತಿಯ ಮುಖಾಂತರ ಕೈಮಗ್ಗವನ್ನು ಆಧುನೀಕರಣಗೊಳಿಸುವುದು.

೩. ವಿಶಿಷ್ಟ ವಿನ್ಯಾಸ ಮತ್ತು ಹೆಚ್ಚಿನ ಮೌಲ್ಯವುಳ್ಳ ಕರಕುಶಲ ಆಧಾರಿತ ವಸ್ತುವಿಗೆ ವಿಶೇಷ ಮಾರುಕಟ್ಟೆಯನ್ನು ಕಲ್ಪಿಸಿಕೊಡಲಾಗುವುದು.

ಈ ಮೇಲ್ಕಂಡ ಉದ್ದೇಶಗಳ ಪ್ರಕಾರ ರಾಷ್ಟ್ರೀಯ ಫ್ಯಾಶನ್ ತಂತ್ರಜ್ಞಾನ ಸಂಸ್ಥೆ (N.I.F .T) ಸಹಯೋಗದಿಂದ ಇಳಕಲ್ . ಮೊಳಕಾಲ್ಮೂರ, ಉಡುಪಿ, ಮೇಲುಕೋಟೆ ಕಸೂತಿ, ತಲಗವಾಡಿ ಸೀರೆಗಳು, ಬಳ್ಳಾರಿಯ ತೆಕ್ಕಲು ಕೋಟೆ ಪುರಾತನ ಕೈಮಗ್ಗದ ವಸ್ತುಗಳಿಗೆ ಹೆಚ್ಚಿನ ಆಕರ್ಷಣೆಗಾಗಿ ವಿನ್ಯಾಸದ ಬೆಂಬಲ ನೀಡುವುದು.

ಹೆಚ್ಚಿನ ಮೌಲ್ಯದ ಹಾಗೂ ರಫ್ತಿನ ಸಲುವಾಗಿ ಖಾಸಗಿಯವರ ಸಹಭಾಗಿತ್ವದಲ್ಲಿ ಕೈಮಗ್ಗದ ಗುಂಪುಗಳನ್ನು ಅಭಿವೃದ್ದಿಪಡಿಸಿ, ಹತ್ತಿ ಕೈಮಗ್ಗದ ಗುಂಪುಗಳಾದ ರಬಕವಿ, ಬನಹಟ್ಟಿ ಕೊಳ್ಳೆಗಾಲ, ರಾಮದುರ್ಗ, ಇಳಕಲ್, ರಾಣಿಬೆನ್ನೂರು, ಗುಲಬರ್ಗಾ, ಬಸವಕಲ್ಯಾಣ, ಭಾಗ್ಯ ನಗರ ಮತ್ತು ಗದಗ-ಬೆಟಗೇರಿ ರೇಶ್ಮೆ ಕೈಮಗ್ಗಕ್ಕಾಗಿ ಆನೇಕಲ್, ಕೊಳ್ಳೇಗಾಲ, ತಿಪಟೂರ, ಕಲ್ಲೂರ, ಮೊಳಕಾಲ್ಮೂರ ಮತ್ತು ಚಿಂತಾಮಣಿ ಈ ಸ್ಥಳಗಳನ್ನು ಭಾರತ ಸರಕಾರದ ಯೋಜನೆಗಳ ಅನುಷ್ಠಾನಕ್ಕಾಗಿ ಉಪಯೋಗಿಸಿಕೊಳ್ಳಲಾಗುವುದು.

ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ, ಕಾವೇರಿ ಮಹಾಮಂಡಳ, ನೇಕಾರರಿಗೆ ನಿರಂತರ ಯೋಜನಾ ಸಲಹೆ ನೀಡುವ ಉದ್ದೇಶದಿಂದ ಮತ್ತು ಮಾರುಕಟ್ಟೆ ಸಮೀಕ್ಷೆ ಸಂಬಂಧಪಟ್ಟ ಕಾರ್ಯಕ್ರಮಗಳ ಸಲುವಾಗಿ ಜವಳೀ ಸಂಶೋಧನಾ ಕೇಂದ್ರ. ರಾಷ್ಟ್ರೀಯ ಫ್ಯಾಶನ್ ತಂತ್ರಜ್ಞಾನ ಸಂಸ್ಥೆ (N.I.F .T.) ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.

ಕೈಮಗ್ಗ ನೇಕಾರರು ತಾವು ತಯಾರಿಸಿದಂತಹ ಕರಕುಶಲ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಈ ಕ್ರಿಯೆ ನಡೆಯುತ್ತಲಿದೆ.

ಪ್ರಸ್ತುತ ಗದಗ ತರಬೇತಿ ಕೇಂದ್ರ ಮತ್ತು ಜಮಖಂಡಿಯ ಉದ್ದೇಶಿತ ಉನ್ನತ ತರಬೇತಿ ಕೇಂದ್ರ ಇವೆರಡನ್ನು ಹೆಚ್ಚಿನ ತರಬೇತುದಾರರು, ಪ್ರಯೋಗ ಶಾಲೆ, ಸಲಕರಣೆಗಳಿಂದ ನಿಷ್ಟ ಸಹಯೋಗದಿಂದ ಬಲಪಡಿಸಿ ತಮಿಳುನಾಡಿನ ಸೇಲಂನಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಹ್ಯಾಂಡಲೂಮ್ ಟೆಕ್ನಾಲಾಜಿ ಮತ್ತು ಮಹಾರಾಷ್ಟ್ರದ ಇಚಲಕರಂಜಿಯಲ್ಲಿರುವ D.K.T.E. ಸಂಸ್ಥೆಗಳಿಗೆ ಸರಿ ಸಮನಾಗಿ ಅಭಿವೃದ್ದಿ ಪಡಿಸಲು ಸಂಕಲ್ಪಿಸಲಾಗಿದೆ. ಇದು ಅತಿ ಮಹತ್ವದ ವಿಷಯವಾಗಿದೆ. ಕೈಮಗ್ಗ ವಲಯದ ಎಲ್ಲ ನೇಕಾರರು ಇದುವರೆಗೆ ವಿವರಿಸಿದ ಈ ಯೋಜನೆಗಳ ಫಲಾನುಭವಿಗಳಾಗುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ.

ಇನ್ನು ಅದೇ ಪ್ರಕಾರವಾಗಿ ವಿದ್ಯುತ್ ಮಗ್ಗಗಳ ವಲಯದ ನೇಕಾರರಿಗೂ ಕರ್ನಾಟಕ ರಾಜ್ಯ ವಿದ್ಯುತ್ ಮಗ್ಗಗಳ ಅಭಿವೃದ್ದಿ ನಿಗಮದ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಹಲವಾರು ಸವಲತ್ತುಗಳು ಈ ಪ್ರಕಾರವಾಗಿವೆ.

೧. ವಿದ್ಯುತ್ ಮಗ್ಗ ನೇಕಾರರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಶಾಶ್ವತ ನೊಂದಣಿ ಪ್ರಮಾಣ ಪತ್ರ ಪಡೆದು ಅದರ ಮೂಲಕ ಕರ್ನಾಟಕ ರಾಜ್ಯ ವಿದ್ಯುತ್ ಮಗ್ಗಗಳ ಅಭಿವೃದ್ದಿ ನಿಗಮದ ಸದಸ್ಯತ್ವವನ್ನು ಪಡೆಯಬಹುದಾಗಿದೆ.

೨. TUF ಯೋಜನೆ : ಜಾಗತಿಕ ಮಾರುಕಟ್ಟೆಯ ನೀತಿಯಿಂದಾಗಿ ವಿದ್ಯುತ್ ಮಗ್ಗ ಘಟಕಗಳು ಹಾಗೂ ಜವಳಿ ವಲದಯ ಅಂಗ ಘಟಕಗಳನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಈ ಯೋಜನೆಯನ್ನು (ತಾಂತ್ರಿಕ ಉನ್ನತೀಕರಣ ಯೋಜನೆ) ಈ ಕೆಳಗಿನಂತೆ ಉಪಯೋಗ ಪಡೆಯಬಹುದಾಗಿದೆ. ಅವುಗಳಲ್ಲಿ ಮೊದಲನೆಯದಾಗಿ ಜವಳೀ ಘಟಕಗಳ ಸ್ಥಾಪನೆಗೆ ನಿಗದಿಪಡಿಸಿದ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲದ ಮೊತ್ತಕ್ಕೆ ಶೇ.೫ರಷ್ಟು ಬಡ್ಡಿ ರಿಯಾಯತಿಯನ್ನು ಮರು ಸಂದಾಯ ರೂಪದಲ್ಲಿ ಪಡೆಯಬಹುದಾಗಿದೆ. ಎರಡನೆಯದಾಗಿ ಅಸಂಘಟಿತ ವಿದ್ಯುತ್ ಮಗ್ಗವಲಯದ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಕ್ರೆಡಿಟ್ ಲಿಂಕಡ್ ಕ್ಯಾಪಿಟಲ್ ಸಬ್ಸಿಡಿ (C.L.C.S.) ಅಡಿಯಲ್ಲಿ ಶೇ.೨೦ ರಷ್ಟು ಸಹಾಯ ಧನ ಒದಗಿಸಲಾಗುವುದು. ಈ ಯೋಜನೆಯಲ್ಲಿ ವಿದ್ಯುತ್ ಮಗ್ಗ ನೇಕಾರ ಸಹಕಾರ ಸಂಘಗಳೂ ಕೂಡ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಸಹಕಾರ ಸಂಘಗಳು ಇಲ್ಲದಿದ್ದರೂ ಕೂಡ ನೇಕಾರಿಕೆ ಸಾಂದ್ರಿತವಲ್ಲದ ಪ್ರದೇಶಗಳಲ್ಲೂ ಕೂಡ ನಾಲ್ಕೈದು ಜನರು ಕೂಡಿ ಈ ಯೋಜನೆಯ ಫಲಾನುಭವಿಗಳಾಗಬಹುದು.

೩. N.C.D.C. ಯೋಜನೆ (National C-operative Development Corporation) ರಾಷ್ಟ್ರೀಯ ಸಹಕಾರಿ ಅಭಿವೃದ್ದಿ ನಿಗಮದ ಯೋಜನೆ ಈ ನಿಗಮದ ವತಿಯಿಂದ ವಿದ್ಯುತ್ ಮಗ್ಗವಲಯ ಅಭಿವೃದ್ದಿ ಮತ್ತು ಗುಣಮಟ್ಟದ ಅಭಿವೃದ್ದಿ ಮಾಡುವ ಉದ್ದೇಶಕ್ಕಾಗಿ ಪವರಲೂಮ ಕಾಂಪ್ಲೆಕ್ಸ ಪ್ರೊಸೆಸಿಂಗ್ ಯುನಿಟ್ ಹಾಗೂ ಫ್ರೀ ಲೂಮ ಘಟಕಗಳನ್ನು ಸ್ಥಾಪಿಸಲು N.C.D.C. ಮೂಲಕ ನೆರವನ್ನು ಪಡೆಯಬಹುದಾಗಿದೆ.

೪. ವಿದ್ಯುತ್ ಮಗ್ಗ ಸಹಕಾರ ಸಂಘಗಳಿಗೆ ನಬಾರ್ಡ ಸಂಸ್ಥೆಯಿಂದ Cas-Credit ಸಾಲದ ಮಿತಿಯನ್ನು D.C.C. ಬ್ಯಾಂಕುಗಳ ಮುಖಾಂತರ ಪಡೆಯಲು ಅವಕಾಶವಿರುತ್ತದೆ.

೫. ವಿದ್ಯುತ್ ಮಗ್ಗ ನೇಕಾರರು K.S.P.D.C. ಹಾಗೂ ಪವರಲೂಮ್ ಸರ್ವಿಸ್ ಸೆಂಟರ್ ಮುಖಾಂತರ ನೇಯ್ಗೆ ತರಬೇತಿಯನ್ನು ಪಡೆಯಬಹುದಾಗಿದೆ.

೬. ಪವರಲೂಮ ಸರ್ವಿಸ್ ಸೆಂಟರ್ ನಲ್ಲಿರುವ ಕ್ಯಾಡ ಕ್ಯಾಮ ಸೌಲಭ್ಯವನ್ನು ಪಡೆದು ವಿದ್ಯುತ್ ಮಗ್ಗ ಘಟಕಗಳಿಗೆ ಬೇಕಾದ ಕಂಪ್ಯೂಟರ್ ಏಡೆಡ್ ಡಿಜೈನ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

೭. ಇವೆಲ್ಲ ಅಲ್ಲದೆ ವಿದ್ಯುತ್ ಮಗ್ಗ ವಲಯಕ್ಕೆ ಇನ್ನೂ ವಿವಿಧ ಸರ್ಕಾರಿ ಸವಲತ್ತುಗಳು ಈ ರೀತಿ ಇವೆ.

ಅ. ೨೦ H.P. ಒಳಗಿನ ವಿದ್ಯುತ್ ಸಂಪರ್ಕ ಹೊಂದಿರುವ ಘಟಕಗಳಿಗೆ ಮಗ್ಗ ಪೂರ್ವ ಸೌಲಭ್ಯಗಳಾದ Twisting ಹಾಗೂ Warping ಘಟಕಗಳು ಸೇರಿದಂತೆ ವಿದ್ಯುತ್ ಶಕ್ತಿಯನ್ನು ಪ್ರತಿ ಯುನಿಟ್ಟಿಗೆ ೧.೨೫ ರಂತೆ ಒದಗಿಸಲಾಗಿರುತ್ತದೆ.

ಬ. ಸೆಮಿ ಅಟೋ ಹಾಗೂ ಅಟೋ ವಿದ್ಯುತ್ ಮಗ್ಗ ಸ್ಥಾಪನೆಗೆ ಗರಿಷ್ಟ ೪ ಮಗ್ಗಗಳಿಗೆ ೨೫,೦೦೦ ರೂ. ಬಂಡವಾಳ ಸಹಾಯಧನ ನೀಡಲಾಗುವುದು.

ಕ. ಚಾಲನೆಯಲ್ಲಿರುವ ವಿದ್ಯುತ್ ಮಗ್ಗಗಳ ಆಧುನೀಕರಣಕ್ಕೆ ರೂ. ೧೪.೦೦೦(ಪ್ರತಿ ಮಗ್ಗಕ್ಕೆ) ಗರಿಷ್ಟ ೨ ಮಗ್ಗಗಳಿಗೆ ಸಹಾಯಧನ ನೀಡಲಾಗುವುದು.

ಡ. ವಿದ್ಯುತ್ ಮಗ್ಗ ನೇಕಾರರಿಗೆ ಜನಶ್ರೀ ಬಿಮಾ ಯೋಜನೆ ಹಾಗೂ ಗುಂಪು ವಿಮಾ ಯೋಜನೆ ಸೌಲಭ್ಯ ನೀಡಲಾಗುವುದು. ಈ ಮೇಲ್ಕಂಡ ಸವಲತ್ತುಗಳಿಂದ ವಿದ್ಯುತ್ ಮಗ್ಗ ನೇಕಾರರಿಗೆ ರಿಯಾಯತಿ ದರದಲ್ಲಿ ವಿದ್ಯುತ್ ಶಕ್ತಿ ಸಿಗುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ಮಾರುಕಟ್ಟೆಯಲ್ಲಿ ಪೈಪೋಟಿಯನ್ನು ಎದುರಿಸಲು ಸಶಕ್ತರಾಗುತ್ತಾರೆ. ಎಲ್ಲ ವಿದ್ಯುತ್ ಮಗ್ಗ ನೇಕಾರರು ಈ ಎಲ್ಲ ಯೋಜನೆಗಳ ಸಹಾಯವನ್ನು ಪಡೆಯಬೇಕು.

ಹೊಸ ಸ್ವಯಂ ಚಾಲಿತ ಮತ್ತು ಅರೆ ಸ್ವಯಂ ಚಾಲಿತ ಮಗ್ಗಗಳನ್ನು ಸರಕಾರದ ಸಹಾಯ ಧನದಿಂದ ಪಡೆದು ಉತ್ತಮ ಗುಣಮಟ್ಟದ ಬಟ್ಟೆಯನ್ನು ಕಡಿಮೆ ಉತ್ಪಾದನಾ ವೆಚ್ಚದಿಂದ ಹಾಗೂ ಕಡಿಮೆ ಕೆಲಸಗಾರರಿಂದ ಬಟ್ಟೆಯನ್ನು ತಯಾರು ಮಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಎದುರಿಸಬಹುದಾಗಿದೆ.

ಸಾಲದ ಹೊರೆಯಿಂದ ತತ್ತರಿಸಿದಂತಹ ಬಡ ನೇಕಾರ ಜನರಿಗೆ ರಾಜ್ಯದ ಮಾನ್ಯ ಸಮ್ರಿಶ್ರ ಸರಕಾರದವರು ಸುಸ್ತಿಯಾಗಿರುವಂತಹ ಸಾಲಗಳನ್ನು ರೂ.೨೫,೦೦೦ ಗಳ ವರೆಗೆ ಅಸಲು ಮತ್ತು ಒಟ್ಟು ಸಾಲದ ಬಡ್ಡಿಯನ್ನು ಮನ್ನಾ ಮಾಡಿ ಸಂಕಷ್ಟದಿಂದ ಪಾರು ಮಾಡಿರುತ್ತಾರೆ. ಇದರ ಫಲಾನುಭವಿಗಳಾದ ನೇಕಾರರ ವತಿಯಿಂದ ನಾನು ಆ ಸರಕಾರಕ್ಕೆ ಚಿರ ಋಣಿಯಾಗಿರುತ್ತೇನೆ. ಇದು ಒಂದು ನಮ್ಮ ಕರ್ನಾಟಕ ಸರಕಾರದ ಇತಿಹಾಸದಲ್ಲಿ ಮೈಲುಗಲ್ಲಾಗಿದೆ.

ನೇಕಾರ ವಿಶೇಷ ಪ್ಯಾಕೇಜನ್ನು ರಾಜ್ಯ ಸರಕಾರದ ಬಜೆಟ್ ನಲ್ಲಿ ಮಂಜೂರಾದ ಒಟ್ಟು ಹಣ ೪.೫೦೮.೫೦ ಲಕ್ಷ ರೂ.ಗಳು ಈ ಹಣವನ್ನು ನೇಕಾರರಿಗೆಂದೇ ತೆಗೆದಿರಿಸಲಾಗಿದೆ. ಅದರಲ್ಲಿ ಸಾಮಾನ್ಯರಿಗೆ ಒಟ್ಟು ೩.೨೪೭.೯೩ ಲಕ್ಷ ರೂ.ಗಳು ಇವನ್ನು ಈ ಪ್ರಕಾರ ಹಂಚಲಾಗಿದೆ.

೧. ರಿಯಾಯತಿ ದರದಲ್ಲಿ ವಿದ್ಯುತ್ ಶಕ್ತಿಯನ್ನು ಪೂರೈಸಲಿಕ್ಕಾಗಿ ೨೦ H.P ಒಳಗಿನ ಬಳಕೆದಾರರಿಗೆ ೨೩೦೦ ಲಕ್ಷ ರೂ.ಗಳು.

೨. ಗದಗ ಮತ್ತು ಜಮಖಂಡಿಯಲ್ಲಿ ಉದ್ದೇಶಿತ ಉನ್ನತ ತರಬೇತಿ ಕೇಂದ್ರಗಳ ಅಭಿವೃದ್ದಿಗಾಗಿ ೧೧೫ ಲಕ್ಷ ರೂ.ಗಳು

೩. ನೇಕಾರರಿಗೆ ಪ್ರತಿಶತ ೪ರ ಬಡ್ಡಿದರದಲ್ಲಿ ಕೋ-ಅಪರೇಟಿವ್ಹ ಮತ್ತು ಅರ್ಬನ ಕೋ-ಆಪರೇಟಿವ ಬ್ಯಾಂಕುಗಳಿಂದ ಸಾಲದ ಸೌಲಭ್ಯಕ್ಕಾಗಿ ೧೨೮.೩೭ ಲಕ್ಷ ರೂ.ಗಳು

೪. ಬಳ್ಳಾರಿಯಲ್ಲಿ ಸಿದ್ಧ ಉಡುಪುಗಳ ತಯಾರಿಕೆಯ ತರಬೇತಿ ಕೇಂದ್ರದ ಅಭಿವೃದ್ದಿಗಾಗಿ ೪೦ ಲಕ್ಷ ರೂ.ಗಳು

೫. K.H.D.C. ನೇಕಾರರ ಸಲುವಾಗಿ ೧೩೦.೫೫ ಲಕ್ಷ ರೂ.ಗಳು

೬. ೨೦೦೬-೦೭ರ ಬಜೆಟ್ಟಿನಲ್ಲಿ ಮಂಜೂರಾದ ೫೦೦ ಲಕ್ಷ ರೂ.ಗಳನ್ನು ಪವರಲೂಮ ಕಾರ್ಯಾಗಾರಗಳ ಸಲುವಾಗಿ ಕಾಯ್ದಿರಿಸಲಾಗಿದೆ.

೭. ಕೈಮಗ್ಗ ಸಹಕಾರಿ ಸಂಘಗಳ ಮತ್ತು ತರಬೇತಿ ಕೇಂದ್ರಗಳ ಮುಖಾಂತರ ೨೫೦ ಕೈಮಗ್ಗ ನೇಕಾರರಿಗೆ ತರಬೇತಿ ಕೊಡುವ ಸಲುವಾಗಿ ೧೧.೨೫ ಲಕ್ಷ ರೂ.ಗಳು.

೮. ನೇಕಾರರಿಗೆ ವಾಸದ ಮನೆ ಮತ್ತು ಕಾರ್ಯಾಗಾರಗಳನ್ನು ಕಟ್ಟಿಕೊಳ್ಳಲು ೧೫ ಲಕ್ಷ ರೂ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೇಕಾರರಿಗಾಗಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ೮೯೭.೬೪ ಲಕ್ಷ ರೂ.ಗಳು ಮತ್ತು ೩೬೨.೯೩ ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಇವೆಲ್ಲವುಗಳೊಂದಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ. ಬೆಂಗಳೂರು ಇದರ ಮುಖಾಂತರವೂ ಕೂಡ ೨ಎ ವರ್ಗದಲ್ಲಿ ಬರುವ ನಮ್ಮ ನೇಕಾರ ಜನಾಂಗದವರಿಗೂ ಕೂಡ ಸಾಕಷ್ಟು ಸರಕಾರದ ಸಹಾಯವನ್ನು ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೆಟ್ಟಿ ಮಾಡಿ ಸವಲತ್ತುಗಳನ್ನು ಪಡೆಯಬಹುದಾಗಿದೆ.

೧೦ ರಿಂದ ೧೨ನೇ ತರಗತಿಯಲ್ಲಿ ಓದುತ್ತಿರುವ ನೇಕಾರರ ಮಕ್ಕಳಿಗೆ ಸ್ಕಾಲರ್ ಶಿಪ್ . ಯೋಜನೆ ಮಾನ್ಯ ರಾಜ್ಯ ಸರಕಾರದಿಂದ ಇರುತ್ತದೆ. ಬಡತನದಿಂದಾಗಿ ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಅಲಭ್ಯವಾದಾಗ ಈ ವ್ಯವಸ್ಥೆಯ ಉಪಯೋಗ ಪಡೆದುಕೊಂಡು ನೇಕಾರರ ಮಕ್ಕಳು ವಿದ್ಯಾವಂತರಾಗಬಹುದು.

ನಮ್ಮ ರಾಜ್ಯದಲ್ಲಿ ಒಟ್ಟು ಪವರಲೂಮಗಳ ಸಂಖ್ಯೆ ಅಂದಾಜು ಒಂದು ಲಕ್ಷದ ಒಳಗೆ ಇದ್ದು ಹಾಗೆ ನೋಡಿದರೆ ತಮಿಳುನಾಡಿನಲ್ಲಿ ೧೪ ಲಕ್ಷದವರೆಗೆ ವಿದ್ಯುತ್ ಮಗ್ಗಗಳಿದ್ದರೂ ಕೂಡ ಎಲ್ಲವೂ ಸುವ್ಯವಸ್ಥೆಯಾಗಿ ನಡೆಯುತ್ತಲಿವೆ. ಆದರೆ ನಮ್ಮ ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಗ್ಗಗಳಿದ್ದರೂ ಕೂಡ ಅದರಲ್ಲಿ ಕೆಲವು ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಈವತ್ತು ನಮ್ಮ ರಾಜ್ಯದಲ್ಲಿನ ವಿದ್ಯುತ್ ಮಗ್ಗಗಳನ್ನು ಸರ್ವೆ ಮಾಡಿ ಅದರಲ್ಲಿ ಜಾಲತಿ ಇದ್ದಂತವುಗಳು ಮತ್ತು ಕಾಯರ ನಿರ್ವಹಿಸದೇ ಇದ್ದಂತವುಗಳನ್ನು ಪಟ್ಟಿ ಮಾಡಿ ಅವುಗಳಿಗೆ ಸಂಬಂಧಪಟ್ಟ ಲೋಪದೋಷಗಳನ್ನು ಹುಡುಕಬೇಕಾಗಿದೆ.

ಇದುವರೆಗೆ ವಿವರಿಸಿದ ಎಷ್ಟೋ ಸಹಾಯ ಸವಲತ್ತುಗಳನ್ನು ಪಡೆದುಕೊಂಡರೂ ಕೂಡ ನಮ್ಮ ರಾಜ್ಯದ ಜವಳೀ ಉದ್ಯಮ ನೆರೆಯ ರಾಜ್ಯಗಳಾದ ತಮಿಳುನಾಡು. ಮಹಾರಾಷ್ಟ್ರ ಗುಜರಾತ ರಾಜ್ಯಗಳಿಗೆ ಹೋಲಿಸಿದಲ್ಲಿ ನಾವು ಬಹಳೇ ಹಿಂದುಳಿದಿರುತ್ತೇವೆ. ಈವತ್ತು ತಮಿಳುನಾಡಿನಲ್ಲಿ ಕೇವಲ ೨ ಮಗ್ಗಗಳಿದ್ದ ನೇಕಾರನೂ ಸಹ ತಾನು ತಯಾರಿಸಿದ ಬಟ್ಟೆಯನ್ನು ನೇರವಾಗಿ ವಿದೇಶಕ್ಕೆ ರಫ್ತು ಮಾಡುವಷ್ಟು ಪ್ರಬಲನಾಗಿದ್ದಾನೆ. ಇದು ಆ ರಾಜ್ಯದ ಜವಳಿ ನೀತಿಯಿಂದಾಗಿ ಅವನಿಗೆ ಸಾಧ್ಯವಾಗಿದೆ. ನಮ್ಮ ರಾಜ್ಯವು ನೇಕಾರಿಕೆಯಲ್ಲಿ ಅವರಿಗಿಂತ ಸುಮಾರು ೧೦ ವರುಷಗಳನ್ನು ಹಿಂದುಳಿದಿದೆ. ಯಾಕೆಂದರೆ ನಮ್ಮ ರಾಜ್ಯದಲ್ಲಿ ಈಗ ಬರುತ್ತಿರುವ ಸುಧಾರಿತ ಯಂತ್ರ ಮಗ್ಗಗಳು. ಈಗಾಗಲೇ ಅವರಲ್ಲಿ ಬಹು ವರುಷಗಳ ಹಿಂದೆಯೇ ಚಾಲ್ತಿಯಲ್ಲಿ ಇರುತ್ತವೆ. ಈವತ್ತು ಒಂದು ಜನಾಂಗದವರ ಕುಲಕಸುಬಾದ ನೇಕಾರಿಕೆಯನ್ನು ಮಾಡುತ್ತಿರುವಂಥವರು ಒಂದು ರಾಜ್ಯದ ಸರಕಾರವನ್ನೇ ನಿಯಂತ್ರಿಸುತ್ತಲಿರುವರು. ಅಷ್ಟರ ಮಟ್ಟಿಗೆ ತಮಿಳುನಾಡಿನಲ್ಲಿ ಜವಳಿ ಉದ್ಯಮ ಪ್ರಬಲವಾಗಿ ಬೆಳೆದಿರುತ್ತದೆ. ನೇಕಾರರಿಗೆ ಸಿಗಬೇಕಾದಂತಹ ಎಲ್ಲ ಮೂಲಭೂತ ಸೌಲಭ್ಯಗಳನ್ನು ಪಡೆಯಬೇಕಾದರೆ ನಮ್ಮ ನೇಕಾರಿಕೆಯ ಪ್ರಾತಿನಿಧ್ಯ ಇರುವವರೇ ಜನಪ್ರತಿನಿಧಿಗಳಾಗಬೇಕು. ಈ ಒಂದು ವ್ಯವಸ್ಥೆ ಇರುವ ತಮಿಳುನಾಡು ಇಡೀ ನಮ್ಮ ಭಾರತ ದೇಶದಲ್ಲಿಯೇ ಜವಳಿ ಉದ್ಯಮದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ತಮಿಳುನಾಡಿನವರನ್ನೇ ಉದಾಹರಣೆಯಾಗಿಟ್ಟುಕೊಂಡು ನಮ್ಮ ನೆರೆಯ ಮಹಾರಾಷ್ಟ್ರ ರಾಜ್ಯವೂ ಕೂಡ ಅಭಿವೃದ್ದಿಯತ್ತ ದಾಪುಗಾಲು ಹಾಕುತ್ತಲಿದೆ.

ಎಂತಹ ವಿಪರ್ಯಾಸ ನೋಡಿ. ನಮ್ಮ ರಾಜ್ಯದ ಟೆಕ್ಸಟೈಲ್ ಇಂಜಿನೀರಿಂಗ್ ಕಾಲೇಜುಗಳಲ್ಲಿ ಕಲಿತಂತಹ ವಿದ್ಯಾರ್ಥಿಗಳು ಇಡೀ ದೇಶದಲ್ಲಿ ಯಾವ ಲೆಕ್ಕಕ್ಕೂ ಇಲ್ಲ. ಆದರೆ ಅದೇ ತಮಿಳುನಾಡಿನ ಸೇಲಂನಲ್ಲಿರುವ ಕೇಂದ್ರ ಸರಕಾರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಹ್ಯಾಂಡಲೂಮ ಟೆಕ್ನಾಲಾಜಿ (I.I.H.T.)ಯಲ್ಲಿ ಕಲಿತಂತಹ ಡಿಪ್ರೋವಿದ್ಯಾರ್ಥಿಗಳಿಗೆ ಅವರು ಕಲಿಯುವುದು ಮುಗಿಯುವುದಕ್ಕಿಂತ ಮುಂಚೆಯೇ ದೇಶದ ದೊಡ್ಡ ದೊಡ್ಡ ಟೆಕ್ಸಟೈಲ್ ಕಂಪನಿಗಳು ಅವರನ್ನು ಸೇವೆಗಾಗಿ ನಿಯಮಿಸಿಕೊಳ್ಳುತ್ತಾರೆ. ಇನ್ನೊಂದು ಸಂಗತಿ ಏನೆಂದರೆ ಅಷ್ಟು ಉಚ್ಛ ಮಟ್ಟದ ಪಠ್ಯಕ್ರಮವಿದ್ದ ಸೇಲಂ ಡಿಪ್ರೋವಿದ್ಯಾರ್ಥಿಗಳು ಟೆಕ್ಸಡೈಲ್ ಇಂಜಿನಿಯರಿಂಗ್ ಮಾಡಬೇಕಾದರೆ ಬೇರೆ ರಾಜ್ಯದ ಕಾಲೇಜುಗಳಲ್ಲಿ ಮುಕ್ತ ಪ್ರವೇಶವಿದೆ. ಆದರೆ ನಮ್ಮ ರಾಜ್ಯದಲ್ಲಿ ಆ ವಿದ್ಯಾರ್ಥಿಗಳಿಗೆ ಇಂಜಿನೀಯರಿಂಗ್ ಮಾಡಲು ಅವಕಾಶವಿರುವುದಿಲ್ಲ. ಈ ಬಗ್ಗೆ ನಾವು ವಿಧಾನಸೌಧದಲ್ಲಿ ಜನಪ್ರತಿನಿಧಿಗಳ ಮೂಲಕ ಧ್ವನಿ ಎತ್ತಿದಾಗ ನಮ್ಮ ರಾಜ್ಯದ ಟೆಕ್ಸಟೈಲ್ ಕಾಲೇಜುಗಳ ಪಠ್ಯ ವಿಷಯ ಬೇರೆಯಾಗಿರುವ ಕಾರಣ ಹೇಳಿ ನಮ್ಮ ಬಾಯಿ ಮುಚ್ಚಿಸಲಾಯಿತು. ಈವತ್ತಿಗೆ ಇಡೀ ಭಾರತದಲ್ಲಿಯೇ ಉಚ್ಛ ಮಟ್ಟದ ಶಿಕ್ಷಣವನ್ನು ನೀಡುತ್ತಿರುವ ತಮಿಳುನಾಡಿನ ಸೇಲಂನಲ್ಲಿ ಲಭ್ಯವಿರುವಂತಹ ಪಠ್ಯದ ವಿಷಯವನ್ನು ನಮ್ಮ ರಾಜ್ಯ ಸರಕಾರದವರು ಕ್ಷುಲ್ಲಕವೆಂದು ತಿಳಿದದ್ದು ವಿಷಾದನೀಯ. ಈ ವಿಷಯದ ಬಗ್ಗೆ ಈ ವಿಚಾರ ಸಂಕಿರಣ ಸಂಘಟಕರು ಸರಕಾರದ ಗಮನ ಸೆಳೆಯಬೇಕೆಂಧು ವಿನಂತಿಸಿಕೊಳ್ಳುತ್ತೇನೆ. ನಮ್ಮಲ್ಲಿನ ಈ ಎಲ್ಲ ಕುಂದುಕೊರತೆಗಳು ಪರಿಹಾರವಾಗಬೇಕಾದರೆ ಸರಕಾರಿ ಮಟ್ಟದಲ್ಲಿ ಎಲ್ಲ ಹಂತಗಳಲ್ಲೂ ವಿದ್ಯಾವಂತ ಅನುಭವಿ ನೇಕಾರರನ್ನು ಸೇರ್ಪಡೆ ಮಾಡಿದರೆ ಮಾತ್ರ ಒಳ್ಳೆಯ ಪರಿಣಾಮವನ್ನು ನಿರೀಕ್ಷೆಸಬಹುದಾಗಿದೆ.

ನಮ್ಮ ದೇಶದ ಪ್ರಾಚೀನ ಆರ್ಥಿಕ ತಜ್ಞನೂ, ರಾಜನೀತಿ ತಜ್ಞನೂ ಆದಂತಹ ಚಾಣಕ್ಯನ ಬಗ್ಗೆ ಹೇಳುವುದು ಇಲ್ಲಿ ಪ್ರಸ್ತುತವೆನಿಸುತ್ತದೆ. ಆತ ರಾಜರಿಗೆ ಹೇಳಿದಂತಹ ನೀತಿಯಲ್ಲಿ ಮುಖ್ಯವಾದದ್ದು ರಾಜನು ತನ್ನ ಪ್ರಜೆಗಳನ್ನು ನೋಡಿಕೊಳ್ಳುವ ರೀತಿ. ಆತ ರಾಜನಿಗೆ ಹೇಳುತ್ತಾನೆ – ನೀನು ಒಬ್ಬ ಒಳ್ಳೆಯ ರಾಜನಾಗಬೇಕಾದರೆ ನಿನ್ನ ರಾಜ್ಯ ಭಂಡಾರದಿಂದ ಪ್ರಜೆಗಳಿಗೆ ಆಹಾರ, ಇನ್ನಿತರ ವಸ್ತುಗಳನ್ನು ಕೊಟ್ಟು ಅವರನ್ನು ಪರಾವಲಂಬಿಗಳಾಗಿ ಮಾಡಬೇಡ. ಅದೇ ಅವರಿಗೆ ಜೀವನ ಪರ್ಯಾತ ಆಗುವಷ್ಟು ಧವಸ-ಧಾನ್ಯಗಳನ್ನು ಪಡೆಯಲು ಬೇಕಾದಂತಹ ಶಾಶ್ವತ ವ್ಯವಸ್ಥೆಯಾದ ಉದ್ಯೋಗವನ್ನು ಕಲ್ಪಿಸಿಕೊಡು. ಈ ಮಾತು ಈವತ್ತಿಗೂ ಕೂಡ ಎಷ್ಟು ಸಮಂಜಸವಾಗಿರುತ್ತದೆ. ನಮ್ಮ ಸರಕಾರದವರು ತಾತ್ಕಾಲಿಕ ಪರಿಹಾರವನ್ನು ನೀಡಿ ನಮ್ಮ ಜನರನ್ನು ಪರಾವಲಂಬಿಗಳಾಗಿ ಮಾಡುತ್ತಲಿದ್ದಾರೆ. ಅದೇ ಅವರು ನಮಗೆ ಉದ್ಯೋಗದ ಅವಕಾಶಗಳನ್ನು ನೀಡಿದ್ದೇ ಆದಲ್ಲಿ ಯಾವ ಸಾಲಮನ್ನಾಗಳ ಅವಶ್ಯಕತೆಯೂ ಇರುವುದಿಲ್ಲ. ಈ ದಿಸೆಯಲ್ಲಿ ನಾವು-ನೀವು ಸರಕಾರದವರೊಡನೆ ಚಿಂತನೆ ಮಾಡಬೇಕಾಗಿದೆ. ಇದಕ್ಕೆ ಪ್ರತ್ಯೇಕ ಉದಾಹರಣೆ ಎಂದರೆ ಸರಕಾರದ ವಿದ್ಯಾವಿಕಾಸ ಯೋಜನೆ. ಇದು ನಮ್ಮ ರಾಜ್ಯದ ನೇಕಾರರಿಗೆ ಕೇವಲ ಒಂದು ತಿಂಗಳ ಉದ್ಯೋಗ ಮಾತ್ರ ಸಿಗುತ್ತಲಿದೆ. ಅದೂ ಕೂಡ K.S.P.D.C. ಇವರ ಪ್ರಯತ್ನದ ಫಲವಾಗಿ. ಆದರೆ ನಮ್ಮ ರಾಜ್ಯದ ಎಲ್ಲ ಮಂತ್ರಿ ಮಹೋದಯರು ನಮ್ಮ ನೇಕಾರರ ಕೂಗಿಗೆ ಓಗೊಟ್ಟು ಬರುವಂತಹ ದಿನಗಳಲ್ಲಿ ನಮ್ಮ ರಾಜ್ಯದಲ್ಲಿಯ ಎಲ್ಲ ಇಲಾಖೆಗಳ ಸಮವಸ್ತ್ರದ ಬಟ್ಟೆಯನ್ನು ನಮ್ಮ ರಾಜ್ಯದ ನೇಕಾರರಿಂದಲೇ ಪೂರೈಸಿಕೊಂಡದ್ದೇ ಆದಲ್ಲಿ ಪೂರ್ಣ ಪ್ರಮಾಣದ ಉದ್ಯೋಗ ಅವಕಾಶ ಸಿಕ್ಕಂತಾಗುವುದು. ನೇಕಾರ ನೇಯ್ದ ಬಟ್ಟೆಯನ್ನು ನೇರವಾಗಿ ಸರಕಾರದವರೇ ಖರೀದಿಸಿ ಮಧ್ಯವರ್ತಿಗಳ ಕೈಯಿಂದ ಪಾರು ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇವೆ. ಯಾಕೆಂದರೆ ಬಟ್ಟೆಯನ್ನು ಕಷ್ಟುಪಟ್ಟು ನೇಯುವವ ನೇಕಾರನಾದರೆ ಅದರ ಫಲವನ್ನು ಪೂರ್ಣವಾಗಿ ಮಧ್ಯವರ್ತಿಗಳು ಪಡೆಯುತ್ತಲಿದ್ದಾರೆ. ಈ ವ್ಯವಸ್ಥೆ ತೊಲಗಬೇಕಾಗಿದೆ. ಸರಕಾರದವರು ಮಧ್ಯ ಪ್ರವೇಶಿಸಿ ಬಂಡವಾಳ ಶಾಹಿಗಳನ್ನು ಮಟ್ಟಹಾಕಬೇಕು.

ನಮ್ಮ ದೇಶ ಕಂಡ ಅದ್ಭುತ ವ್ಯಕ್ತಿ ನಮ್ಮ ದೇಶದ ಪ್ರಖ್ಯಾತ ವಿಜ್ಞಾನಿ ಮಾಜಿ ರಾಷ್ಟ್ರಪತಿಗಳಾದ ಮಾನ್ಯ ಶ್ರೀ ಅಬ್ದುಲ್ ಕಲಾಂರವರು. ಸುವರ್ಣ ಕರ್ನಾಟಕದ ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಭೆಟ್ಟಿ ಇತ್ತಾಗ ಅವರು ರಾಜ್ಯದ ಸಮಸ್ತ ಅಭಿವೃದ್ದಿಗೆ ಹಾಕಿಕೊಟ್ಟಂತಹ ಸೂತ್ರಗಳಲ್ಲಿ ಅತೀ ಮುಖ್ಯವಾದುದೆಂದರೆ ಯಾವ ದೇಶವು ಅಥವಾ ರಾಜ್ಯವು ಕೃಷಿಯ ನಂತರ ಜವಳೀ ಉದ್ಯಮಕ್ಕೆ ಪ್ರಾತಿನಿಧ್ಯತೆಯನ್ನು ನೀಡುವುದೋ ಆ ದೇಶವು ಸಮೃದ್ಧವಾಗಿ ನಿರುದ್ಯೋಗರಹಿತವಾಗಿ ಬೆಳೆಯುತ್ತದೆ. ಯಾಕೆಂದರೆ ನಮ್ಮ ದೇಶದ ಜವಳಿ ಉದ್ಯಮ ಕೋಟ್ಯಾಂತರ ಜನರಿಗೆ ಉದ್ಯೋಗ ಅವಕಾಶವನ್ನು ನೀಡಿರುತ್ತದೆ. ಈ ಸಂಗತಿಯನ್ನು ನೆನಪಿನಲ್ಲಿಟ್ಟುಕೊಂಡು ಈವತ್ತಿನ ರಾಜಕಾರಣಿಗಳು ನಡೆಯಬೇಕಾಗಿದೆ. ನಮ್ಮ ದೇಶದಲ್ಲಿ ಉತ್ಪನ್ನವಾಗುವ ನೇಕಾರಿಕೆಯ ಕಚ್ಚಾ ವಸ್ತುವಾದ ಹತ್ತಿಯನ್ನು ಪರದೇಶಗಳಿಗೆ ರಫ್ತು ಮಾಡದೇ ಅದೇ ಹತ್ತಿಯನ್ನು ಸಂಸ್ಕರಿಸಿ ಬಟ್ಟೆಯನ್ನಾಗಿ ತಯಾರು ಮಾಡಿ ವಿದೇಶಗಳಿಗೆ ರಫ್ತು ಮಾಡಿದ್ದೇ ಆದಲ್ಲಿ ನಮ್ಮ ದೇಶದ ಬಡತನವೂ ನೀಗುತ್ತದೆ. ಮತ್ತು ನಮ್ಮ ದೇಶದ ಕೀರ್ತಿ ಪತಾಕೆಯನ್ನು ದೇಶ ವಿದೇಶಗಳಲ್ಲಿ ಹಾರಿಸಿದಂತಾಗುತ್ತದೆ. ಕೊನೆಯದಾಗಿ ರಾಜಕಾರಣಿಗಳಿಗೆ ಗಂಭೀರವಾದ ಮಾತೊಂದನ್ನು ಈ ಪವಿತ್ರವಾದ ವೇದಿಕೆಯಲ್ಲಿ ಘಂಟಾಘೋಷವಾಗಿ ಹೇಳಲು ಬಯಸುತ್ತೇನೆ – ನಮ್ಮ ರಾಜ್ಯದ ಮೂಲಭೂತ ಸೌಕರ್ಯ ವಂಚಿತ ಬಹುಸಂಖ್ಯಾತ ನೇಕಾರರು ಮನಸ್ಸು ಮಾಡಿ ಬೀದಿಗಿಳಿದರೆ ರಾಜಕಾರಣದ ದಿಕ್ಕನ್ನೇ ಬದಲಿಸಬಹುದು. ಇದನ್ನು ನೆನಪಿನಲ್ಲಿಟ್ಟುಕೊಂಡು ಮುಂಬರುವ ಚುನಾವಣೆಗಳಲ್ಲಿ ಆರಿಸಿ ಬರುವಂತಹ ಜನ ಪ್ರತಿನಿಧಿಗಳು ನೇಕಾರರ ಅಭ್ಯುದಯಕ್ಕಾಗಿ ದುಡಿಯಲೇ ಬೇಕಾದ ಅನಿವಾರ್ಯತೆ ಇರುತ್ತದೆ ಎಂದು ತಿಳಿಯಪಡಿಸುತ್ತೇನೆ.

ಈವತ್ತಿನ ವಿಚಾರ ಸಂಕಿರಣದಲ್ಲಿ ನನಗೆ ತಿಳಿದ ಮಟ್ಟಿಗೆ ನನ್ನ ವಿಚಾರಗಳನ್ನು ಮಂಡಿಸಿರುತ್ತೇನೆ. ಇದರಲ್ಲಿ ಯಾವುದೇ ತಪ್ಪು ತಡೆಗಳಾಗಿದ್ದಲ್ಲಿ ಯಾವುದೇ ವ್ಯಕ್ತಿಗೆ ನೋವಾಗಿದ್ದಲ್ಲಿ ನನ್ನನ್ನು ಕ್ಷಮಿಸಬೇಕಾಗಿ ವಿನಂತಿ. ಮತ್ತು ತಮ್ಮ ಯಾವುದೇ ಸಲಹೆ ಸೂಚನೆಗಳಿಗೆ ನಾನು ಸ್ವಾಗತ ಬಯಸುತ್ತೇನೆ.

ಜೈ ಹಿಂದ್ ! ಜೈ ಕರ್ನಾಟಕ !!

* * *