ನೇಕಾರಿಕೆ ಅತ್ಯಂತ ಪ್ರಾಚೀನ ವೃತ್ತಿ. ಅದು ಇತಿಹಾಸ ಪೂರ್ವದಿಂದ ನಾಗರಿಕತೆ ಮತ್ತು ಸಂಸ್ಕೃತಿಯೊಂದಿಗೆ ತಳಕು ಹಾಕಿಕೊಂಡು, ಸಾಮಾಜಿಕ ಜೀವನಕ್ಕೆ ಭದ್ರತೆ ಒದಗಿಸಿದೆ. ನೇಯ್ಗೆ ಪ್ರಕ್ರಿಯೆ ಸೃಷ್ಟಿಕ್ರಯೆಯ ಕ್ರಿಯೆಯ ಪ್ರತಿಮೆಯಾಗಿ ಬಳಕೆಯಾಗಿದೆ. ದೇವರು ಆಕಾಶ ಮತ್ತು ಭೂಮಿಯನ್ನು ಮಗ್ಗ ಮಾಡಿ, ಸೂರ್ಯ – ಚಂದ್ರರನ್ನು ಹಾಸು-ಹೊಕ್ಕನ್ನಾಗಿ ಸೃಷ್ಟಿಯನ್ನು ನೇಯ್ದಿದ್ದಾನೆ ಎಂಬ ನಂಬಿಕೆ ಇದೆ. ಕವಿಗಳು ಸಹ ನೇಕಾರಿಕೆ ವಿವಿಧ ಕ್ರಿಯೆಗಳನ್ನು ಪ್ರತಿಮೆಗಳಾಗಿ, ರೂಪಕಗಳಾಗಿ ಬಳಸಿರುವುದು ಕಂಡುಬರುತ್ತದೆ. ಸ್ಥಿತ್ಯಂತರದ ಚಾರಿತ್ರಿಕ ಘಟ್ಟಗಳಲ್ಲಿ ನೇಕಾರರ ಬದುಕು ಏರಿಳಿತಗಳನ್ನು ಕಂಡಿದೆ. ಕೃಷಿ ಮತ್ತು ನೇಕಾರಿಕೆ ಮಾನವನ ಅವಶ್ಯಕವಾದ ಮೂಲ ವೃತ್ತಿಗಳು. ನೇಕಾರಿಕೆ ಕೃಷಿಯನ್ನೇ ಅವಲಂಬಿಸಿದೆ. ದೇಶ ಮತ್ತು ಭಾಷೆಗಳಿಗನುಗುಣವಾಗಿ ನೇಕಾರರ ಸಂಸ್ಕೃತಿ, ಬಹು ಸಂಸ್ಕೃತಿಯ ಸ್ವರೂಪ ಪಡೆದಿದ್ದರೂ, ವೃತ್ತಿಗೇ ಮೀಸಲಾದ ಕೆಲವು ಸಾಂಸ್ಕೃತಿಕ ಲಕ್ಷಣಗಳು. ನೇಕಾರರಲ್ಲಿನ ಏಕಸ್ವರೂಪದ ಮೂಲ ಸಂಸ್ಕೃತಿಯನ್ನು ಇಂದಿಗೂ, ಅದರ ಆಚಾರ-ವಿಚಾರಗಳಲ್ಲಿ ಗುರುತಿಸಬಹುದು. ಭಾರತದ ಅಸಲಿ ಸಂಸ್ಕೃತಿಯಲ್ಲಿ, ನೇಕಾರರದ್ದೂ ಒಂದು ಪಾಲಿದೆ. ಆಸಂಘಟಿತವಾದ ನೇಕಾರ ಜನಾಂಗ ಏಕಕಾಲದಲ್ಲಿ ಸಾಂಸ್ಕೃತಿಕ ಸಂಪತ್ತು ಮತ್ತು ಆಥಿರಕ ಬಡತನ ಸಿಕ್ಕಿ ಅಸಡ್ಡೆಗೆ ಒಳಗಾಗಿ ಕುಗ್ಗಿ ಹೋಗಿದ್ದಾರೆ. ಅನ್ಯರ ಮಾನರಕ್ಷಣೆ ಹೊತ್ತ ನೇಕಾರ ಜನಾಂಗ ತಾವು ಮಾತ್ರ ಅಪಮಾನದಿಂದ ಬದುಕುವ ದುಃಸ್ಥಿತಿಗೆ ಸಿಕ್ಕಿರುವುದು ದುರಂತವೇ ಸರಿ.

ಪ್ರಾಚ್ಯ ಸಂಶೋಧನೆಗಳು, ಕಾವ್ಯಗಳು, ಶಾಸನಗಳು, ಶಿಲ್ಪ, ಚಿತ್ರಗಳು, ಜಾನಪದ, ಶಾಸ್ತ್ರ ಗ್ರಂಥಗಳು, ಪ್ರವಾಸಿಗರ ದಾಖಲೆಗಳು ಮತ್ತಿತರ ಮೂಲಗಳಿಂದ ನೇಕಾರ ಜನಾಂಗದ ಸಂಸ್ಕೃತಿ ಮತ್ತು ವೃತ್ತಿಯ ಇತಿಹಾಸವನ್ನು ರಚಿಸಬಹುದು. ಹತ್ತಿ ಮತ್ತು ರೇಷ್ಮೆಯ ಗುಣಮಟ್ಟದ ಜವಳಿ, ಸ್ಥಳೀಯ ಬೇಡಿಕೆಗಳನ್ನು ಪೂರೈಸಿ, ಹೊರದೇಶಗಳಿಗೆ ರಫ್ತಾಗುತ್ತಿದ್ದ ವಿಷಯ ದಾಖಲೆಗಳಿಂದ ತಿಳಿದುಬರುತ್ತದೆ. ದಕ್ಷಿಣದಲ್ಲಿ ಪ್ರಾಚೀನ ಕಾಲದಿಂದಲೂ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರ ಪ್ರಾಂತ್ಯಗಳು ಜವಳಿ ಉತ್ಪಾದನೆಯ ಮುಖ್ಯ ಕೇಂದ್ರಗಳು. ಸಂಗಂ ಕಾಲದ ಶಿಲಪ್ಪದಿಕಾರಂ, ಮಣಿಮೇಗಲೆ ಮುಂತಾದ ಪ್ರಾಚೀನ ಕಾವ್ಯಗಳು ನೇಕಾರ ವೃತ್ತಿಯ ಬದುಕನ್ನು ಕಟ್ಟಿಕೊಡುತ್ತವೆ. ಅರಿಕ ಮೇಡು ಸಂಶೋಧನೆ ಬಟ್ಟೆಯ ಉತ್ಪಾದನೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ವಿವರಗಳಿಂದ ನೇಕಾರರ ಬೀದಿಗಳಿದ್ದು, ಅರಿವೆ ವಣಿಗರ ಬೀದಿಗಳಲ್ಲಿ ಹತ್ತಿ, ರೇಷ್ಮೆ ನೂಲು ಮತ್ತು ಬಟ್ಟೆಯನ್ನು ಮಾರುತ್ತಿದ್ದ ವಿಷಯ ತಿಳಿದುಬರುತ್ತದೆ. ಅರಮನೆ, ದೇವಾಲಯ ಮತ್ತು ವಿದೇಶಗಳು ನೇಕಾರರ ಪ್ರಮುಖ ಗ್ರಾಹಕರು ಮತ್ತು ಗುಣಮಟ್ಟದ ಹೆಚ್ಚು ಬೆಲೆಬಾಳುವ ಬಟ್ಟೆಗಳ ಗಿರಾಕಿಗಳು. ಶಿಲ್ಪ ಮತ್ತು ಚಿತ್ರಗಳಿಂದ ಸಾಮಾನ್ಯರು, ಸೈನಿಕರು, ಕಾರ್ಮಿಕರು, ಅರಮನೆ ಕೆಲಸಗಾರರು, ಸಂಗೀತಗಾರರು, ನೃತ್ಯಕಾರ್ತಿಯರು, ರಾಜ-ರಾಣಿಯರು, ಶ್ರೀಮಂತರ ಉಡಿಗೆ ತೊಡಿಗೆಗಳು ನೇಕಾರರ ಕರಕುಶಲತೆಗೆ ಸಾಕ್ಷಿಯಾಗಿವೆ. ಬಟ್ಟೆಗಳ ಮೇಲೆ ನೇಯುತ್ತಿದ್ದ ರಾಮಾಯಣ, ಮಹಾಭಾರತ, ಭಾಗವತ, ಮರಗಿಡಗಳು, ಪ್ರಾಣಿಪಕ್ಷಿಗಳ ಚಿತ್ರಣಗಳು ನೇಕಾರರ ಪ್ರತಿಭೆಗೆ ಧ್ಯೋತಕವಾಗಿವೆ. ಹಾವಿನಂತೆ ನವುರು ಮತ್ತು ಹೊಗೆಯಂತೆ ತೆಳುವಾದ ಬಟ್ಟೆಗಳನ್ನು ನೇಯುತ್ತಿದ್ದರು. ಮಧ್ಯಯುಗ ನೇಕಾರರು ಕಂಡು ಸುವರ್ಣಯುಗ.

ಜೋಳರು ಮತ್ತು ವಿಜಯನಗರದ ಅರಸರ ಕಾಲದಲ್ಲಿ ಪ್ರಚೋದನೆ ಮತ್ತು ಪ್ರೋದೊರಕಿತು. ಮಧ್ಯಯುಗದಲ್ಲಿ ಅರಮನೆ ಮತ್ತು ದೇವಾಲಯಗಳು ನೇಕಾರ ವೃತ್ತಿಗೆ ಬೆನ್ನೆಲುಬಾಗಿ ನಿಂತವು. ನೇಕಾರಿಕೆ ಉತ್ಪಾದನೆ ರಾಜ್ಯಗಳ ಪ್ರಮುಖ ಸಂಪನ್ಮೂಲವೂ ಆಗಿದ್ದಿತು. ನೇಕಾರರ ಆರ್ಥಿಕವಾಗಿ ಗರಿಗಟ್ಟಿಕೊಂಡರು. ಅದು ಅವರ ಸಾಮಾಜಿಕ ಬದಲಾವಣೆಗೆ ದಾರಿಯಾಯಿತು. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ನೇಕಾರ ಜನಾಂಗದ ಊರ್ಧ್ವ ಮುಖ ಸಾಮಾಜಿಕ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿತು. ನೇಕಾರರಿಗೆ ದೊರಕಿದ ಸಾಮಾಜಿಕ ಸ್ಥಾನಮಾನ, ವರ್ಣವ್ಯವಸ್ಥೆಯ ಅನುಶ್ರೇಣಿಯ ಧಾರ್ಮಿಕ ಮತ್ತು ಸಾಮಾಜಿಕ ಸ್ಥಾನಮಾನವಿಲ್ಲ. ಅವರು ನಿರ್ದಿಷ್ಟ ಕಸುಬುದಾರರ ಸಮಾಜಗಳಲ್ಲಿ, ಆರ್ಥಿಕ ಬಲಗಳಿಸಿಕೊಟ್ಟ ಸ್ಥಾನಮಾನಕ್ಕೆ ನೇಕಾರರು ಅರ್ಹರಾದರು. ಇಂಥ ಆರ್ಥಿಕ ಬಲದಿಂದ ಸಾಮಾಜಿಕ ಸ್ಥಾನಮಾನ ಗಳಿಸಿದ ಮತ್ತೊಂದು ಕಸುಬುದಾರ ಸಮಾಜ, ವಿಶ್ವಕರ್ಮ ಸಮಾಜ, ನೇಕಾರ ಮತ್ತು ವಿಶ್ವಕರ್ಮ ಸಮಾಜಗಳು ಧಾರ್ಮಿಕ ಸ್ಥಾನಮಾನದ ಉನ್ನತದ ಕಸುಬುದಾರ ಅನುಶ್ರೇಣಿಗೆ ಪೈಪೋಟಿ ನಡೆದು ಬರುತ್ತಿರುವುದು ಇತಿಹಾಸ. ಈ ಎರಡೂ ಸಮಾಜಗಳು ವೃತ್ತಿ ನಿರತ ಸಮಾಜಗಳಲ್ಲಿಯೇ ಉನ್ನತಸ್ಥಾನ ಪಡೆದಿರುವ ಸಮಾಜಗಳು ಮತ್ತು ಸಂಸ್ಕೃತಿಯ ಪ್ರಜ್ಞಾವಂತರಾದ ಜನಾಂಗಗಳು ಇತರ ವೃತ್ತಿನಿರತ ಸಮಾಜಗಳು ಆದಷ್ಟು ತಮ್ಮ ಮೂಲ ಸಂಸ್ಕೃತಿಗೆ ಬದ್ಧವಾದರೆ, ಈ ನೇಕಾರ ಮತ್ತು ವಿಶ್ವಕರ್ಮ ಸಮಾಜಗಳು, ಮೇಲ್ವರ್ಗಗಳ ಸಂಸ್ಕೃತಿಯ ಸಂಪರ್ಕದಿಂದ, ಅನುಕರಣೆಗೆ ತ್ವರಿತವಾಗಿ ತುತ್ತಾಗಿ, ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣಕ್ಕೆ ಒಳಗಾಗಿ, ವೃತ್ತಿಗೌರವದಿಂದ ಬೀಗಿ, ತಾವು ಅಪ್ರಾಕೃತ ಬ್ರಾಹ್ಮಣರು, ಗರ್ಭಬ್ರಾಹ್ಮಣರು, ಬ್ರಾಹ್ಮಣರು ಪ್ರಾಕೃತ ಬ್ರಾಹ್ಮಣರು. ಆದುದ್ದರಿಂದ ತಾನೇ ಬ್ರಾಹ್ಮಣರಿಗಿಮತ ಶ್ರೇಷ್ಠರು ಎನ್ನುವ ಶಾಸ್ತ್ರ ಮತ್ತು ಪುರಾಣಗಳು ಮೂಲವನ್ನು ಕಟ್ಟಿಕೊಂಡರು.

‘‘ಶೇಷಾಃ ಪ್ರಾಕೃತ ವಿಪ್ರಾಸ್ಯುಸ್ಯರ್ವೇ ಮುನಿಕುಲೋದ್ಭವಾಃ
ಅಪಾಕೃತ ದ್ವಿಜಾತೀನಾಂ ದೇವಾಂಗ ಕುಲ ಸಂಭವಾಂ
ಬ್ರಾಹ್ಮಣ್ಯಂತು ಸ್ವತಸಿದ್ಧ ಮೇತತ್ಕೃತಿ ಮತಂ ಶೃಣು
ತಥಾ ಪ್ರಾಕೃತ ವಿಪ್ರಾಣಾಂ ಸಂಧ್ಯಯಜ್ಞಾದಿಕರ್ಮಭಿಃ
ಬ್ರಾಹ್ಮಣ್ಯಂ ವರ್ತತೇತಸ್ಮಾದನ್ಯಥಾ ಪತಿತೋಭವತ್ ||’’
-ದೇವಾಂಗ ಮೂಲಸ್ತಂಭ

ವಿಶ್ವಕರ್ಮಕುಲೇ ಜಾತೋ ಗರ್ಭ ಬ್ರಾಹ್ಮಣ ಉಚ್ಯತೇ
ಶೂದ್ರತ್ವಂ ನಾಸ್ತಿ ತದ್ವಂ ಶೇ ಬ್ರಾಹ್ಮಣೋ ವಿಶ್ವಕರ್ಮಜಃ ||
ನಾಗರಖಂಡ(ಸಂ) ವಿರ್ದ್ದಾ ತಾ.ವೆಂ.ಮುತ್ತಾಚಾರ್ಯ.

ದೇವಾಂಗದವರು ಅಂದರೆ ನೇಕಾರರು ಮತ್ತು ವಿಶ್ವಕರ್ಮರು ಶೂದ್ರತ್ವವನ್ನು ನಿರಾಕರಿಸಿ, ತಾವೇ ಬ್ರಾಹ್ಮಣರಿಗಿಂತ ಶ್ರೇಷ್ಠರು, ಗರ್ಭಬ್ರಾಹ್ಮಣರು, ಅಪ್ರಾಕೃತ ಬ್ರಾಹ್ಮಣರು, ಅನುಶ್ರೇಣಿಯಲ್ಲಿ ಶ್ರೇಷ್ಠರು ಆರ್ಥಿಕ ಊರ್ಧ್ವ ಮುಖ ಬದಲಾವಣೆಯನ್ನು ಕಂಡು ಧಾರ್ಮಿಕ ಊರ್ಧ್ವ ಮುಖ ಬದಲಾವಣೆಯ ಹಕ್ಕನ್ನೂ ಚಲಾಯಿಸುವುದನ್ನು ಕಾಣಬಹುದಾಗಿದೆ. ಇದು ಬ್ರಾಹ್ಮಣೇಕರಣ ಮತ್ತ ಸಂಸ್ಕೃತೀಕರಣದ ಫಲ. ಇದೂ ಅಲ್ಲದೆ ಯಜ್ಞೋಪವೀತ ಮತ್ತು ಗಾಯತ್ರಿ ಮಂತ್ರದ ಅಧಿಕಾರಿಗಳೂ ಆದರು. ಇದು ಈ ವರ್ಗಗಳಲ್ಲಿಯೇ ಒಳಪಂಗಡಗಳಲ್ಲಿ ಸಾಂಸ್ಕೃತಿಕ ಬಿಕ್ಕಟ್ಟಿಗೆ ಮೂಲವಾಗಿದೆ.

ನೇಕಾರರು ಆರ್ಥಿಕವಾಗಿ ಗರಿಗಟ್ಟಿಕೊಂಡು ಭೂಮಿಯನ್ನು ಕೊಂಡು ಭೂ ಒಡೆಯರೂ ಆದರು. ಮನೆಯಲ್ಲಿ ಮಗ್ಗಗಳಲ್ಲಿ ಕೂತು ಲಾಳಿ ಹಿಡಿದವರು, ಹೊಲಗಳಲ್ಲಿ ನೇಗಿಲು ಹಿಡಿದರು. ಇದರಿಂದ ಕೆಳವರ್ಗಗಳಲ್ಲಿ ಮಧ್ಯಮವರ್ಗದವರಾದರು. ಅಷ್ಟೇ ಅಲ್ಲ ಸೈನ್ಯದಲ್ಲಿ ಸೇರಿ ಯುದ್ಧ ಮಾಡಿ ಸೈನಿಕರು ಆದರು. ಶಾಂತಿಕಾಲದಲ್ಲಿ ನೇಯ್ಗೆ, ಯುದ್ಧಕಾಲದಲ್ಲಿ ಸೈನಿಕ ವೃತ್ತಿಯಲ್ಲಿಯೂ ತೊಡಗಿದರು. ತಮಿಳು ನಾಡಿನ ನೇಕಾರರಾದ ಸಾಲೀಯರು ಮತ್ತು ಕೈಕ್ಕೊಳರ್ ನಂಬಿಕಾರ್ಹ ಚೊಳರ (ಚೋಳೀಯ) ಸೈನಿಕರು, ‘ಜೋಳೀಯ ಸಾಲೀಯರು’ ಎಂದೇ ಹೆಸರಾಗಿದ್ದರು. ಕೈಕ್ಕೊಳರು ಬಲಿಷ್ಠರಾದ ಮೇಲೆ ಸಾಲೀಯರ ಪ್ರಾಬಲ್ಯ ಕುಗ್ಗಿತು. ಕೈಕ್ಕೊಳರು ರಾಜರ ಅಂಗರಕ್ಷಕರು. ಹೀಗಾಗಿ ನೇಕಾರರ ಅನೇಕ ಒಳಪಂಗಡಗಳಲ್ಲಿ ನೇಕಾರ ವೃತ್ತಿ ಮತ್ತು ಸೈನಿಕ ವೃತ್ತಿ ಸಾಮಾನ್ಯವಾಗಿತ್ತು. ನೇಕಾರರು ಪುರಾಣಗಳ ವೀರರ ವಂಶಸ್ಥರ ಮೂಲವನ್ನೇ ಗುರುತಿಸಿಕೊಳ್ಳುತ್ತಾರೆ. ಕೈಕ್ಕೊಳರು ದೇವತೆಗಳ ಸೇನಾಧಿಪತಿ ಕಾರ್ತಿಕೇಯನ ವಂಶಸ್ಥರೆಂದೂ, ತೊಗಟವೀರರು ಏಕಾಂಗವೀರರು, ದೇವಾಂಗದವರು ಚೌಡೇಶ್ವರಿಯ ಸೈನ್ಯದವರು. ಹೀಗೆ ನೇಕಾರರ ಸಮುದಾಯಗಳು ವೀರ ಮೂಲವನ್ನು ಗುರುತಿಸಿಕೊಳ್ಳುತ್ತಾರೆ. ವೀರಗಾರಿಕೆ ನೇಕಾರರ ಒಂದು ಸಂಸ್ಕೃತಿಯೂ ಹೌದು. ಇಂದಿಗೂ ದೇವತೆಗಳ ಉತ್ಸವದಲ್ಲಿ ವೀರ ಕುಮಾರರು ಕಲೆ, ಹಿಡಿದು ವೀರಗಾರಿಕೆ ಸೇವೆ ಸಲ್ಲಿಸುವುದು. ಅದರಲ್ಲಿಯೂ ಗಂಡುಗತ್ತರಿ ಹಾಕಿ ಸೇವೆ ಸಲ್ಲಿಸುವುದಂತೂ, ನೇಕಾರರ ವೀರತ್ವದ ಆರ್ಷೇಯ ಸಂಸ್ಕೃತಿಯೇ ಸರಿ.

ಆರ್ಥಿಕವಾಗಿ ಬಲಗೊಂಡ ನೇಕಾರಿರಿಗೆ ದೇವಾಲಯಗಳಲ್ಲಿ ಸ್ಥಾನಮಾನ ದೊರಕುವಂತಾಯಿತು. ನೇಕಾರರು ಧರ್ಮದರ್ಶಿಗಳಾದರು. ಲೆಕ್ಕ ಪತ್ರಗಳ ದಾಖಲೆಗಳನ್ನಿಡುವ ಲೆಕ್ಕಿಗರಾದರು, ದೇವಾಲಯಗಳಲ್ಲಿ ಆಡಳಿತಗಾರರೂ ಆದರು. ಭೂದಾನ, ಹಣದಾನ ಮತ್ತು ಇತರ ದೇವಾಲಯದ ಸೇವೆಗಳಿಂದ, ದೇವಾಲಯದ ಗೌರವದ ಅನುಶ್ರೇಣಿಯಲ್ಲಿ ನೇಕಾರರಿಗೂ ಸ್ಥಾನ ದೊರೆಯಿತು. ಇದರಿಂದ ಅವರು ಕೆಲವು ಸೌಲಭ್ಯಗಳನ್ನು ಪಡೆದು, ದೇವಾಲಯದ ಕಂಬಗಳಿಗೆ ‘ಧ್ವಜ ಪತ್ರ’ ಮತ್ತು ಶಿಖರಗಳಿಗೆ ಪಾವಡ ನೇಯ್ದು ಒದಗಿಸುವ ಹಕ್ಕುದಾರರಾದರು. ಇದೂ ಅಲ್ಲದೆ ದೇವಾಲಯದ ದೇವ-ದೇವತೆಗಳಿಗೆ ಬೆಲೆ ಬಾಳುವ ವೈವಿಧ್ಯದ ಉಡಿಗೆ ತೊಡಿಗೆಗಳನ್ನು ನೇಯ್ದು ಒದಗಿಸಬೇಕಾಗಿತ್ತು. ಇದರಿಂದಾಗಿ ನೇಕಾರರಿಗೆ ದೇವಾಲಯದ ವಲಯದಲ್ಲಿ ವಾಸಿಸುವ ಅವಕಾಶವೂ ಒದಗಿತು. ಮಗ್ಗ ತೆರಿಗೆಗಳಲ್ಲಿ ವಿನಾಯತಿ ದೊರೆಯಿತು. ರಾಜ್ಯಗಳಲ್ಲಿ ನೆಲೆನಿಲ್ಲಲು ನೇಕಾರ ಕುಟುಂಬಗಳಿಗೆ ರಾಜರು ಸಕಲ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರು. ಸಾಮಾನ್ಯವಾಗಿ ನೇಕಾರರು ಬಂದರು ಮತ್ತು ನಗರಗಳಲ್ಲಿ ನೆಲೆ ನಿಲ್ಲುತ್ತಿದ್ದರು. ಬರಗಾಲ ಅಥವಾ ಹೆಚ್ಚು. ಲಾಭ ಗಳಿಸುವ ಸಂದರ್ಭಗಳಲ್ಲಿ ನೇಕಾರರು ಸಾಮಾನ್ಯವಾಗಿ ವಲಸೆ ಹೋಗುತ್ತಿದ್ದರು. ಸ್ಥಳೀಯರ, ಭಾಷೆ, ಸಂಸ್ಕೃತಿ ಆಚಾರ ವಿಚಾರಗಳಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿ, ನೇಕಾರರಲ್ಲಿ ಅನೇಕ ಒಳಪಂಗಡಗಳು ಹುಟ್ಟಿಕೊಂಡವು. ಎಲ್ಲಾ ಕಾಲದಲ್ಲಿಯೂ, ಎಲ್ಲಾ ಪ್ರಾಂತ್ಯಗಳಲ್ಲಿಯೂ ಸೌಲಭ್ಯಗಳು ಸಿಕ್ಕುತ್ತಿರಲಿಲ್ಲ. ಪಾಳೆಯಗಾರರಿಂದ ಅಪರಾಧಗಳಿಗೆ ಕಠಿಣ ಶಿಕ್ಷೆಯೂ ಆಗುತ್ತಿತ್ತು. ಸಾಮಾನ್ಯವಾಗಿ ನೇಕಾರರಲ್ಲಿ ಕೊಲೆ, ಸುಲಿಗೆ ಮುಂತಾದ ಸಮಾಜ ದ್ರೋಹಿ ಅಪರಾಧಗಳು ಇಲ್ಲದ ಸಂಸ್ಕೃತಿಯ ಸಮಾಜ, ದುಡಿದು ತಿನ್ನುವ ಆತ್ಮವಿಶ್ವಾಸದ ಶ್ರಮ ಸಂಸ್ಕೃತಿ ಅವರದ್ದು.

ವೃತ್ತಿ ನಿರತ ಸಮಾಜಗಳಲ್ಲಿ ಎಡಗೈ-ಬಲಗೈ ವಿಂಗಡನೆಯ ಸಂಘರ್ಷ ಸಾಂಸ್ಕೃತಿಕ ಬಿಕ್ಕಟ್ಟಿಗೆ ಎಡೆ ಮಾಡಿಕೊಟ್ಟಿದೆ. ನೇಕಾರರನ್ನೂ ಎಡಗೈ-ಬಲಗೈ ವಿಂಗಡಣೆಯ ಸಂಘರ್ಷ ಬಿಟ್ಟಿಲ್ಲ. ನೇಕಾರರಲ್ಲಿ ಎಡಗೈ-ಬಲಗೈ ವಿಂಗಡಣೆ ಅತ್ಯಂತ ಸಂಕೀರ್ಣವಾದುದು. ದೇವಾಂಗದವರು ಮತ್ತು ಕೈಕ್ಕೊಳರು ಎಡಗೈ ಆದರೆ, ಸಾಲೀಯರು ಬಲಗೈ ತಮಿಳು ನಾಡಿನಲ್ಲಿ ಎಡಗೈ-ಬಲಗೈ ವಿಂಗಡಣೆ ಅತ್ಯಂತ ಪ್ರಬಲವಾಗಿದೆ ಒಂದೇ ಪಂಗಡದಲ್ಲಿ ಗಂಡಸರು ಎಡಗೈ, ಹೆಂಗಸರು ಬಲಗೈ. -ಈ ವಿಂಗಣೆ ಅತ್ಯಂತ ವಿಚಿತ್ರವಾಗಿದೆ. ಕರ್ನಾಟಕ ಮತ್ತು ಆಂಧ್ರದಲ್ಲಿ ಎಡಗೈ-ಬಲಗೈ ವಿಂಗಡಣೆ ನೇಕಾರರಲ್ಲಿ ಅಷ್ಟಾಗಿ ಇಲ್ಲ. ಆದರೆ ಕರ್ನಾಟಕ ಕೈ ವಲಸೆ ಬಂದ ಕೈಕ್ಕೊಳರ್ ಮತ್ತು ಸಾಲೀಯರಲ್ಲಿ ಇಂದಿಗೂ ಮುಂದುವರಿದಿದೆ. ಕರ್ನಾಟಕದಲ್ಲಿ ‘ಪಣಕಟ್ಟು’ ಪದ್ಧತಿ ಇಂದಿಗೂ ರೂಡಿಯಲ್ಲಿದೆ. ನೇಕಾರರಲ್ಲಿಯೂ ಪಣಕಟ್ಟು ಪದ್ಧತಿ ರೂಢಿಯಲ್ಲಿದೆ. ನೇಕಾರರ ಒಳಪಂಗಡದಲ್ಲಿ ದೇವಾಂಗದವರು ಹದಿನೆಂಟು ಪಣ, ಪದ್ಮಸಾಲಿಗಳು ಒಂಬತ್ತು ಪಣ. ಸೌಲಭ್ಯಗಳು ಮತ್ತು ಸಾಮಾಜಿಕ ಸ್ಥಾನಮಾನ ಇಂಥ ವಿಂಗಡಣೆಗೆ ಕಾರಣ. ಎಡಗೈ-ಬಲಗೈ ವಿಂಗಡಣೆ ಚೋಲರ ಸೈನ್ಯದ ವಿಂಗಡಣೆ ಎಂಬ ಅಭಿಪ್ರಾಯವೂ ಇದೆ. ಜೋಳರ ಪ್ರಾಬಲ್ಯ ಕುಗ್ಗಿ ಎಡಗೈ-ಬಲಗೈ ವಿಂಗಡಣೆ ಸೈನ್ಯವಿಸರ್ಜಿಸಿದ ಅನಂತರ ವಿಜಯನಗರದ ರಾಜ್ಯದಲ್ಲಿ ಮುಂದುವರಿಯಲಿಲ್ಲ. ಇಂಥ ವಿಂಗಡಣೆಯಲ್ಲಿ ಬ್ರಾಹ್ಮಣರು ಸೇರುವುದಿಲ್ಲ. ಅವರು ಮಹಾಜನರು. ವರ್ಣ ವ್ಯವಸ್ಥೆಯ ವಿಂಗಡನೆ ಅಡ್ಡಡ್ಡ (Horizontal Division) ವಿಂಗಡಣೆಯಾದರೆ, ಎಡಗೈ-ಬಲಗೈ ಮತ್ತು ಒಂಬತ್ತು ಪಣ ಹದಿನೆಂಟು ಪಣ ವಿಂಗಡಣೆಗಳು ಉದ್ದುದ್ದ(Vertical Division) ಅಂದರೆ ಲಂಬವಾದುದು, ನೇಕಾರರ ಒಳಪಂಗಡಗಳಲ್ಲಿ ಇಂಥ ವಿಂಗಡಣೆಗಳು ರೂಢಿಯಲ್ಲಿದ್ದರೂ, ರಾಜರುಗಳು ತೆರಿಗೆಯನ್ನು (ಮಗ್ಗದೆರೆ, ಬಣ್ಣದೆರೆ ಮುಂತಾದವು) ಹೆಚ್ಚಿಸಿದಾಗ, ನೇಕಾರರು ಒಳಪಂಗಡಭೇದ ಮರೆತು ಪ್ರತಿಭಟಿಸಿದ ಪ್ರಸಂಗಗಳು ಇತಿಹಾಸದಲ್ಲಿ ವೆ.ಕುಲೋತ್ತುಂಗ, ಹೊಯ್ಸಳರ ರಾಮನಾಥದೇವ, ವಿಜಯನಗರದ ಹರಿಹರ II ತೆರಿಗೆ ಹೆಚ್ಚಿಸಿದಾಗ ನೇಕಾರರು ತೀವ್ರವಾಗಿ ಪ್ರತಿಭಟಿಸಿ, ದೊರೆಗಳೇ ಅಂತಿಮವಾಗಿ ಸೋತು ತೆರಿಗೆ ಕಡಿಮೆ ಮಾಡಿದರು.

ಹಳ್ಳಿಗಳ ಆಯಗಾರರ ಗುಂಪಿಗೆ ನೇಕಾರರು ಬರುವುದಿಲ್ಲ. ಆಯಗಾರರು ಎಂದರೆ ಹಳ್ಳಿಯ ಸ್ವಾವಲಂಬನೆಯ ಸೇವೆಗೆ ಅನಿವಾರ್ಯವಾದವರು. ಆಯಗಾರರು ಪ್ರತಿಫಲವಾಗಿ ವರ್ಷದ ಅಂತ್ಯದಲ್ಲಿ ಹಡದೇ ಸಂಭಾವನೆ ಪಡೆಯುತ್ತಾರೆ. ಆಯಗಾರರು ಗ್ರಾಮಗಳ ಆಸ್ತಿ, ನೇಕಾರರು ಆಯಗಾರ ವರ್ಗಕ್ಕೆ ಸೇರಿರುವ ಪ್ರಸಂಗಗಳು ಅಪರೂಪ. ಎಣ್ಣೆ, ಬಟ್ಟೆ ಮುಂತಾದವುಗಳು ಹಳ್ಳಿಗಳಿಗೆ ಹೊರಗಿನಿಂದಲೇ ಬರಬೇಕು. ನೇಕಾರರು ಕಚ್ಚಾವಸ್ತು ಕೊಳ್ಳುವುದು ಮತ್ತು ನೇಯ್ದ ಬಟ್ಟೆ ಮಾರುವ ವ್ಯವಹಾರ ಹಣದ ಮಾಧ್ಯಮದಿಂದಲೇ ನಡೆಯುವುದು ಅನಿವಾರ್ಯ. ನೇಕಾರರಿಗೆ ಸಂತೆ ವ್ಯಾಪಾರ ಮುಖ್ಯವಾದುದು ಆದ್ದರಿಂದ ನೇಕಾರರು ಸಾಮಾನ್ಯವಾಗಿ ಆಯಗಾರರ ವರ್ಗಕ್ಕೆ ಬರುವುದಿಲ್ಲ. ನೇಕಾರ ಸಂಘಗಳು(ghilds), ದೇವಾಲಯಕ್ಕೆ ಕೊಡುವ ದಾನ ಮತ್ತು ಹಬ್ಬ, ಜಾತ್ರೆ ಮತ್ತಿತರ ವಿಶೇಷ ಸಂದರ್ಭದಲ್ಲಿನ ನೇಕಾರರ ಸೇವೆಗಳು. ಕುಟುಂಬ ಹಾಗೂ ಸಾಮೂಹಕವಾಗಿ ಹೊಂದಿದ್ದ ಭೂ ಒಡೆತನ ಮತ್ತು ಹೊಂದಿದ್ದ ಸೌಲಭ್ಯಗಳು ಸಮಾಜದಲ್ಲಿ. ಅವರ ಮುಖ್ಯಸ್ಥಾನಮಾನವನ್ನು ನಿರ್ಣಯಿಸುತ್ತಿದ್ದವು. ನೇಕಾರ ವೃತ್ತಿ ಕೇವಲ ದುಡಿಮೆಯ ವೃತ್ತಿಯಾಗದೆ, ಕರಕುಶಲತೆಯ ಸೌಂದರ್ಯಾರಾದಕ ವೃತ್ತಿಯೂ ಆಗಿದ್ದು, ಗ್ರಾಮೀನ ನಿತ್ಯೋಪಯೋಗಿ ವೃತ್ತಿಗಳಿಗಿಂತ ಭಿನ್ನವಾಗಿದ್ದು, ಇತರ ಆಯಗಾರರಿಗಿಂತ ಭಿನ್ನವಾಗಿತ್ತು. ನೇಕಾರರ ಮನೆಗಳಲ್ಲಿ ಇಂದಿಗೂ ಕಾಮಶಾಸ್ತ್ರ, ಜ್ಯೋಷ್ಯ ಶಾಸ್ತ್ರ, ಔಷಧಿ ಗ್ರಂಥಗಳು, ಪುರಾಣಗಳು ಮತ್ತಿತರ ತಾಳೆಗರಿಯ ಹಸ್ತ ಪ್ರತಿಗಳು ದೊರಕುತ್ತಿರುವುದೇ, ನೇಕಾರರ ಮಧ್ಯಯುಗದ ವಿವಿಧ ಅಭಿರುಚಿಗೆ ಸಾಕ್ಷಿಯಾಗಿದ್ದು, ನೇಕಾರರದ್ದು, ವೃತ್ತಿ ಜೀವನದ ಜೊತೆಗೆ, ಅವರ ಬದುಕು ಬಹುಮುಖಿಯಾದದ್ದು ಎಂಬುದು ಸ್ಪಷ್ಟವಾಗುತ್ತದೆ. ನೇಕಾರರಿಗೆ ಧರ್ಮ ಬದುಕಿಗಿಂತ (ವೃತ್ತಿ) ಭಿನ್ನವಾಗಿರದೆ, ಅವರ ವೃತ್ತಿ ಧರ್ಮವೇ ಧರ್ಮಸಾಧನೆಯೂ ಆಗಿತ್ತು. ಹೀಗಾಗಿ ನೇಕಾರರಲ್ಲಿ ಭುಕ್ತಿ ಮತ್ತು ಮುಕ್ತಿ ಸಾಮರಸ್ಯಗೊಂಡು, ಲೌಕಿಕ ಜೀವನವನ್ನು ನಿರಾಕರಿಸದೆ, ಭ್ರಮೆಯೆಂದು ಭಾವಿಸದೆ, ಬದುಕಿನಲ್ಲಿ ಸಹಜನತೆಯನ್ನು ಒಪ್ಪಿಕೊಂಡ ಪರ್ಯಾಯ ಸಂಸ್ಕೃತಿಯ ಸಾಧಕ ಜೀವನಕ್ಕೆ ನೇಕಾರರ ಕೊಡಿಗೆ ಅಪಾರವಾದು. ನೇಕಾರರದ್ದು, ಬುಡಕಟ್ಟಿನ ಸಂಸ್ಕೃತಿಯಿಂದ ಬೆಳೆದು ಬಂದಿರುವ ಮೂಲಸಂಸ್ಕೃತಿಯಾಗಿದೆ. ಕಾಲ ಧಂವನ್ನು ಅನುಸರಿಸುತ್ತ, ಅನೇಕ ಸಿದ್ಧಾಂತ, ಸಂಪ್ರದಾಯ, ತಾತ್ತ್ವಿಕ ಜೀವನದ ಪ್ರಭಾವಕ್ಕೆ ಒಳಗಾಗಿದ್ದರೂ, ನೇಕಾರರ ತೋಂಡಿ ಸಂಪ್ರದಾಯದ ಆಚಾರ-ವಿಚಾರಗಳ ಅಧ್ಯಯನದಿಂದ, ನೇಕಾರರ ಮೂಲ ಸಂಸ್ಕೃತಿಯನ್ನು ಗುರುತಿಸುವುದು ಅಷ್ಟು ಕಷ್ಟವಲ್ಲ. ನೇಕಾರರ ಮೂಲ ನೆಲ ಸಂಸ್ಕೃತಿಯ ಅಸಟಿತನ ಮಾತೃ ಸಂಸ್ಕೃತಿಯಲ್ಲಿ ಬೇರುಗಳಿರುವುದು ಕಂಡುಬರುತ್ತದೆ. ನೇಕಾರರ ಒಳಪಂಗಡಗಳಲ್ಲಿಯೇ ಇಂದಿಗೂ ಮಾತೃಸಂಸ್ಕೃತಿಯ ಆಚರಣೆಗಳು ರೂಢಿಯಲ್ಲಿವೆ. ಆದರೆ ಅವು ಪಿತೃಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ, ಆಸ್ತಿ ಮತ್ತು ಸಂಪತ್ತಿನ ಅಂಶಗಳಲ್ಲಿ ಪಿತ ಸಂಸ್ಕೃತಿಯ ಅಂಶಗಳನ್ನೇ ಸ್ವಾರ್ಥದಿಂದ ಮಾತೃಸಂಸ್ಕೃತಿಯಲ್ಲಿಯೇ ಅಳವಡಿಸಿ ಕೊಂಡಿದ್ದಾರೆ. ಸಾಮಾನ್ಯವಾಗಿ ನೇಕಾರರ ಎಲ್ಲಾ ಒಳಪಂಗಡಗಳಿಗೂ ಇಂದಿಗೂ ಹೆಣ್ಣು ದೇವತೆಯೇ ಕುಲದೇವತೆ. ಆದರೆ ಪಿತೃ ಸಂಸ್ಕೃತಿಯ ಅನುಕರಣೆಯಿಂದ ಸಾಮಾಜಿಕ ಜೀವನದಲ್ಲಿ, ಹೆಣ್ಣನ್ನು ಕೀಳಾಗಿ ಕಂಡರೂ, ದೇವರ ದಾಸಿಮಯ್ಯ ಸ್ತ್ರೀಯರ ಸ್ಥಾನಮಾನವನ್ನು ಎತ್ತಿ ಹಿಡಿದಿರುವುದು, ಅವರ ವಚನಗಳಲ್ಲಿ ಕಂಡು ಬರುತ್ತದೆ. ನೇಕಾರರ ಮಂಗಳ-ಅಮಂಗಳ ಧಾರ್ಮಿಕ ವಿಧಿಗಳಲ್ಲಿ ‘ಕಳಸಪೂಜೆಯೋ’ ಮುಂದಾಗಿರುವುದು ಹೆಣ್ಣಿಗೆ ಕೊಟ್ಟಿರುವ ಪ್ರಧಾನ್ಯತೆಗೆ ಸಾಕ್ಷಿಯಾಗಿದೆ. ಕಳಸ ಹೆಣ್ಣಿನ ಗರ್ಭದ ಸಂಕೇತ ಮತ್ತು ಫಲವಂತಿಕೆಯನ್ನು ಸೂಚಿಸುತ್ತದೆ. ನೇಕಾರರಿಗೆ ಮಾರ್ಕಡೇಯ ಪುರಾಣವೇ ಮೂಲವಾದುದು. ನೇಕಾರರು ಶಿವ ಸಂಸ್ಕೃತಿಯ ಆರಾಧಕರು. ಹೀಗಾಗಿ ಶಿವ-ಶಕ್ತಿಯ ಸಂಸ್ಕೃತಿ ನೇಕಾರರಿಗೆ ರಕ್ತಗತವಾಗಿದೆ. ಅತ್ಯಂತ ಪ್ರಾಚೀನ ಕಾಲದಲ್ಲಿದ ಶಿವ-ಶಕ್ತಿಯ ಸಂಘರ್ಷ, ಕ್ರಮೇಣ ಸಾಮರಸ್ಯಗೊಂಡು ‘ಶಕ್ತಿ ಹೀನನಾದ ಶಿವ ಶವ’ ಎಂದು ರೂಢಿಯಾಯಿತು. ಶಿವ ಸಂಸ್ಕೃತಿ ಏಕ ಸಂಸ್ಕೃತಿಯಲ್ಲ, ಬಹುಸಂಸ್ಕೃತಿ, ನೇಕಾರರಲ್ಲಿ ಒಳಪಂಗಡಗಳಲ್ಲಿ ಶಿವಸಂಸ್ಕೃತಿಯ ಬಹುಸಂಸ್ಕೃತಿ ಕಂಡುಬರುತ್ತದೆ. ಅದು ಸಂಘರ್ಷದ್ದಲ್ಲ, ಸಾಮರಸ್ಯದ್ದು. ನೇಕಾರರಲ್ಲಿ ನೇಕಾರರು (ಶ್ರಮಜೀವಿಗಳು) ಮತ್ತು ಯಜಮಾನರು (ಬಂಡವಾಳಗಾರರು) ವಿಂಗಡಣೆ ಶಾಶ್ವತವಾಗಿ ಸಂಘರ್ಷದ್ದು. ಯಜಮಾನ ನೇಕಾರವರ್ಗ, ಸಾಮಾನ್ಯ ನೇಕಾರ ವರ್ಗವನ್ನು ಶಾಶ್ವತವಾಗಿ ಶೋಷಿಸುತ್ತಲೇ ಬಂದಿದ್ದಾರೆ. ಶೋಷಕ-ಶೋಷಿತ ಹಿನ್ನೆಲೆಯಲ್ಲಿ ನೇಕಾರ ಸಂಸ್ಕೃತಿಯನ್ನು ವಿಶ್ಲೇಷಿಸಿ, ಮರು ಮೌಲ್ಯಗೊಳಿಸಿದರೆ, ನೇಕಾರರ ಮೂಲ ಸಂಸ್ಕೃತಿ ಸ್ಪಷ್ಟವಾಗುತ್ತದೆ. ಈ ಶೋಷಕ-ಶೋಷಿತ ಸಂಬಂಧ ಮತ್ಸ್ಯನಾಯದ್ದು; ಚಿಕ್ಕ ಮೀನನ್ನು ದೊಡ್ಡ ಮೀನು ನುಂಗಿ ವಿಜೃಂಭಿಸುವುದು. ನೇಕಾರರು (ಶ್ರಮಿಕರು) ಅನಕ್ಷರಸ್ಥರಾಗಿ, ಕಡು ಬಡತನದಿಂದ ತಮ್ಮ ನೆಲ ಮೂಲ ಸಂಸ್ಕೃತಿಗೆ ಅಂಟಿಕೊಂಡರೆ, ಯಜಮಾನ ನೇಕಾರರು ವೈದಿಕ ಸಂಸ್ಕೃತಿಯ ಅನುಕರಣೆಯಿಂದ, ಶೋಷಕ ವರ್ಗವಾಗಿ, ಮರದ ಕೊಡಲಿಯ ಕಾವೇ ಮರಕ್ಕೆ ಮೃತ್ಯುವಾದ ದುರಂತ ನೇಕಾರ ಜನಾಂಗದ್ದು. ಇಂದಿಗೂ ನೇಕಾರ ಶ್ರಮಿಕ ವರ್ಗ ಆತ್ಮಹತ್ಯೆಗೆ ಶರಣು ಹೋಗುತ್ತಿರುವುದೇ ಸಾಕ್ಷಿ.

ಆಂತರಿಕವಾಗಿ ನೇಕಾರರ ಒಳಪಂಗಡಗಳಲ್ಲಿ ಸಂಘರ್ಷ ಅಥವಾ ಸಾಮರಸ್ಯವಿದ್ದರೂ, ಬಹಿರಂಗದಲ್ಲಿ ಮಾತ್ರ ಅನ್ಯಜನಾಂಗದ ಧಾರ್ಮಿಕ ವಿಧಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿರುವುದು ಕಂಡುಬರುತ್ತದೆ. ಅದನ್ನು ‘ಸಂಗು ಮತ್ತು ತಂಡು’ ಹಕ್ಕುದಾರಿಕೆ ಎನ್ನುತ್ತಾರೆ. ಅಂದರೆ ಬಹಿರಂಗ ಮೆರವಣಿಗೆಗಳಲ್ಲಿ ಪಂಚವಾಮ್ನೆಯ ಬಿರುದಿನ ಹಕ್ಕನ್ನು ಪಡೆದುದಕ್ಕೆ ಚಿಂತಾಮಣಿಯ ಪ್ರಸಂಗವೇ ಸಾಕ್ಷಿ. ಪಂಚವಾಮ್ನ ಬಿರುದು ಎಂದರೆ ಬಹಿರಂಗ ಮೆರವಣಿಗೆಗಳಲ್ಲಿ ಐದು ಹಕ್ಕುಗಳನ್ನು ಪಡೆಯುವುದು. ಶಂಖ ಊದುವುದು, ಪಲ್ಲಕ್ಕಿ ಮೆರವಣಿಗೆ, ಸ್ವಂತಧ್ವಜ, ವಾದ್ಯಗಳು, ಯಜ್ಞೋಪವೀತಧರಿಸುವ ಹಕ್ಕುಗಳನ್ನು ಪಡೆದರು. ಅಂತೂ ನೇಕಾರರ ಆರ್ಥಿಕ ಊರ್ಧ್ವ ಮುಖ ಬದಲಾವಣೆ, ಧಾರ್ಮಿಕ ಊರ್ಧ್ವಮುಖ ಬದಲಾವಣೆಗೆ ಕಾರಣವಾಗಿ, ನೇಕಾರ ಯಜಮಾನರು, ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣದ ಅನುಕರಣೆಯಿಂದ ನೇಕಾರರಲ್ಲಿಯೇ ಶಿಷ್ಟ ಸಂಸ್ಕೃತಿ (great Tradition)ಯ ವರ್ಗ ಸೃಷ್ಟಿಯಾಗಿ, ನೇಕಾರ ಒಳಪಂಗಡಗಳಲ್ಲಿ ಸಮಸ್ಯೆಗಳು ಸಂಕೀರ್ಣಗೊಂಡವು.

ನೇಕಾರರ ಊರ್ಧ್ವಮುಖ ಆರ್ಥಿಕ ಬದಲಾವಣೆ ಅನೇಕ ಸ್ವರೂಪವನ್ನು ಹೊಂದಿತು. ನೇಕಾರರಲ್ಲಿ ಕೆಲವರು ಯಜ್ಞೋಪವೀತ ಧರಿಸಿ, ಗೋತ್ರಗಳನ್ನು ಅಂಟಿಸಿಕೊಂಡು ಬ್ರಾಹ್ಮಣರಿಗಿಂತ ಶ್ರೇಷ್ಠರಾದ ಅಪ್ರಾಕೃತ ಬ್ರಾಹ್ಮಣರೆಂದು ಕರೆದುಕೊಂಡರೆ ಇನ್ನೂ ಕೆಲವರು ಭಕ್ತಿ ಪಂಥದ ಪ್ರಭಾವದಿಂದ ತಮಿಳುನಾಡಿನಲ್ಲಿ ನಯನಾರರು (ಶಿವಭಕ್ತರು) ಮತ್ತು ಆಳ್ವಾರರು(ವಿಷ್ಣು ಭಕ್ತರು) ಆಗಿ ಭಕ್ತಿ ಚಳುವಳಿಯಲ್ಲಿ ಹಂಚಿ ಹೋದರು. ಕರ್ನಾಟಕದಲ್ಲಿಯೂ ನೇಕಾರರು ವಚನ ಚಳುವಳಿಯ (ವೀರಶೈವ) ಮತ್ತು ರಾಮಾನುಜರ ಚಳುವಳಿ(ವಿಷ್ಣುಭಕ್ತಿ)ಯ ಭಕ್ತಿಯ ಬೆಂಬಲಿಗರಾದರು. ನೇಕಾರರು ಪ್ರಬಲ ಸಾಮ್ರಾಜ್ಯಗಳು ಕೊನೆಗೊಳ್ಳುತ್ತಿದ್ದಂತೆಯೇ, ನೇಕಾರರ ಆರ್ಥಿಕ ಸ್ಥಿತಿಯೂ ಪೋಷಕರಿಲ್ಲದೆ ಕುಗ್ಗಿತು. ಭಕ್ತಿ ಪಂಥ ನೇಕಾರರನ್ನು ಬಡತನವನ್ನೇ ಶ್ರೀಮಂತಿಗೆ ಎಂದು ಪರಿಗಣಿಸುವ ಸೂತ್ರಕ್ಕೆ ಕಟಿಬದ್ಧಗೊಳಿಸಿತು. ಭಕ್ತಿ ಪಂಥದ ಮತಾಂತರ ನೇಕಾರ ಜಾತಿಯಲ್ಲಿ ಮತ್ತೊಂದು ಜಾತಿಯ ಸೃಷ್ಟಿಗೆ ಕಾರಣವಾಯಿತೇ ಹೊರತು, ನೇಕಾರರ ಆರ್ಥಿಕ ಸ್ಥಿತಿಗಳು ಮಾತ್ರ ಉತ್ತಮಗೊಳ್ಳಲಿಲ್ಲ. ಇದರಿಂದ ಯಜಮಾನ ನೇಕಾರರಿಗೆ ಬಡ ನೇಕಾರರ ಶೋಷಣೆಗೆ ಭಕ್ತಿಪಂಥ ಸಹಕಾರಿಯಾಯಿತು ಅಷ್ಟೆ. ಶೋಷಕ ದೇವಾಲಯವನ್ನು ಕಟ್ಟಿಯೊ, ದಾನ ಮಾಡಿಯೋ ಸದ್ಭಕ್ತನೆಂದು ಕೀರ್ತಿ ಪಡೆದ. ಸಂಪ್ರದಾಯಸ್ಥರು ಭಕ್ತಿಯೇ ಸಂಪತ್ತೆಂದು, ದೇವರಿಗೆ ಮಾಡುವ ಸೇವೆ ಮತ್ತು ಸಮರ್ಪಣೆಯೇ ಮುಕ್ತಿಯೆಂದು ಪ್ರಚಾರ ಮಾಡಿದರು. ದೇವರು, ದೊರೆ ಮತ್ತು ಯಜಮಾನರು ಭಿನ್ನರಲ್ಲ, ಸೇವೆಗೆ ಅರ್ಹರಾದವರು. ಹೀಗಾಗಿ ಆಶ್ರಯ ತಪ್ಪಿದ ನೇಖಾರರು ಎಡಗೈ-ಬಲಗೈ, ಒಂಬತ್ತು ಪಣ – ಹದಿನೆಂಟು ಪಣ, ಶಿವಭಕ್ತರು, ವಿಷ್ಣುಭಕ್ತರು, ನೇಕಾರರು – ಪಿಂಜಾರ ನೇಕಾರರು, ಒಳಪಂಗಡಗಳು ಮತ್ತು ಮತಾಂತರಗಳ ಸಂಘರ್ಷದಿಂದ ನೇಕಾರರು ಅವನತಿ ಹೊಂದುತ್ತ ಬಂದರು. ಮುಸ್ಲಿಮರ ಕಾಲದಲ್ಲಿ ನೇಕಾರರ ಉತ್ಪಾದನೆಗೆ ಬೇಡಿಕೆ ಹೆಚ್ಚಿದರೂ. ರಾಜಕೀಯ ಅಸ್ಥಿರದಿಂದ, ಅದು ಬಹಕಾಲ ಉಳಿಯಲಿಲ್ಲ. ಬ್ರಿಟಿಷರ ಕಾಲದಲ್ಲಂತೂ ನೇಕಾರರ ಬದುಕು ದುರಂತವಾಯಿತು. ಬ್ರಿಟಿಷರು ಬಂದದ್ದು ಮೂಲತಃ. ವ್ಯಾಪಾರಗಾರರಾಗಿ, ಅದರಲ್ಲಿ ಕಂಪನಿಗಳಂತೂ ನೇಕಾರ ವೃತ್ತಿಯನ್ನು ಸಂಪೂರ್ಣವಾಗಿ ತುಳಿದವು. ನೇಕಾರರು ಮುಂಗಡ ಪಡೆದು ಕಂಪನಿಗೆ ದುಡಿಯುವ ಕೂಲಿ ಕಾರರಾದರು, ಯಜಮಾನ ನೇಕಾರರು ಕಂಪನಿಗಳ ದಳ್ಳಾಳಿಗಳಾದರು. ಕಾರ್ಖಾನೆಗಳ ಜವಳಿಯ ಉತ್ಪಾದನೆ, ನೇಕಾರರ ಕಲಾತ್ಮಕ ಕಸುಬಿನ ಪ್ರತಿಭೆಯನ್ನೇ ನಾಶ ಮಾಡಿದವು. ನೇಕಾರ ಕಸುಬು ನೇಕಾರರ ಕೈಯಿಂದ ಜಾರಿತು. ಮ್ಯಾಂಜಿಸ್ಟರ್ ಮತ್ತು ಲಾಂಕ್ ಪೈರ್ ಗಳಿಂದ, ಹಡಗುಗಳು ಹೊತ್ತು ತಂದ ಜವಳಿ ಬಂದು ಭಾರತದ ಮಾರ್ಕೆಟ್ಟುಗಳನ್ನು ತುಂಬಿದವು. ನೇಕಾರರಿಗೆ ಸೌಲಭ್ಯಗಳು ಸಂಪೂರ್ಣವಾಗಿ ನಿಂತು ಹೋದವು. ಬ್ರಿಟಿಷರ ಕಂಪನಿಗಳೇ ಏಕೈಕೆ ಜವಳಿ ಉತ್ಪಾದನೆಯ ಸರ್ವಾಧಿಕಾರಿಗಳಾದವು. ನೇಕಾರರಿಗೆ ಕಚ್ಚಾ ವಸ್ತುವಾಗಲಿ, ಕೂಲಿಯಾಗಲಿ, ಸೂಕ್ತ ಮಾರ್ಕೆಟ್ಟಾಗಲಿ ಸಿಗದ ದಿವಾಳಿಯಾದರು. ಲಂಡನ್ನಿನ ಕೈಗಾರಿಕಾ ಕ್ರಾಂತಿ, ಭಾರತದ ನೇಕಾರರಿಗೆ ಶಾಪವಾಯಿತು. ನೇಕಾರರಿಗೆ ಬಡತನ ಮತ್ತು ನಿರುದ್ಯೋಗ ಅಂದಿನಿಂದ ಶಾ್ವತವಾಯಿತು. ಆಂಧ್ರ ಮತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ನೇಕಾರರ ಅತ್ಮಹತ್ಯೆಯೇ, ಸ್ವಾತಂತ್ರ್ಯೋತ್ತರ ಭಾರತದ ನೇಕಾರರ ಸ್ಥಿತಿಗತಿಗೆ ಸಾಕ್ಷಿಯಾಗಿದೆ. ಯಂತ್ರಚಾಲಿತ ಮಗ್ಗಗಳು, ಮತ್ತು ಖಾದಿ ಚಳುವಳಿಗಳಂತೂ, ನೇಕಾರರ ಕೈ ಮಗ್ಗಗಳು ನೆಲ ಕಚ್ಚುವಂತಾಯಿತು. ಸರ್ಕಾರದ ಜವಳಿಯ ಹೊಸ ಹೊಸ ಯೋಜನೆಗಳು ಮತ್ತು ರೀತಿ ನೀತಿಗಯ ಸಿದ್ಧಾಂತಗಳಿಂದ, ಈಗಾಗಲೇ ನೆಲ ಕಚ್ಚಿದ್ದ ಕೈ ಮಗ್ಗಳ ಜೊತೆಗೆ, ಯಂತ್ರಚಾಲಿತ ಮಗ್ಗಗಳು ತುಕ್ಕು ಹಿಡಿದು, ಹಳೆಯ ಕಬ್ಬಿಣದ ಅಂಗಡಿಗಳಿಗೆ ಬಿಕರಿಯಾದವು. ಚೋಳ ಮತ್ತು ವಿಜಯ ನಗರದ ಕಾಲದಲ್ಲಿ ನೇಕಾರರು ಕಂಡ ಸುವರ್ಣಯುಗ ಮಾತ್ರ ಒಂದು ಸವಿ ನೆನಪು. ಹತ್ತಿ ಮತ್ತು ರೇಷ್ಮೆಯಂಥ ನವುರಾದ ಎಳೆಗಳೊಂದಿಗೆ ಕೆಲಸ ಮಾಡುತ್ತಿದ್ದ ನೇಕಾರರ ಮೃದುವಾದ ಕೈಗಳು, ಇಂದು ಕಬ್ಬಿಣದ ಅದುರಿನ ಗಣಿಗಳಲ್ಲಿ ರಸ್ತೆಯ ಟಾರು ಹಾಕುವ ಕೆಲಸಗಳಲ್ಲಿ ಒರಟಾಗಿ ಬಿರುಕು ಬಿಡುತ್ತಿವೆ. ನೇಕಾರರ ರಕ್ತ ಹೀಗೆ ಭಾರತದ ಬದುಕನ್ನು ಬ್ಲೀಚ್ ಮಾಡುತ್ತಿದೆ. ಹೀಗೆ ಧಾರ್ಮಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯಕ್ಕೆ ಅಪೂರ್ವ ಕಾಣಿಕೆ ಕೊಟ್ಟ ನೇಕಾರರ ಬದುಕು ಕತ್ತಲುಗಟ್ಟಿತು. ನೇಕಾರವರ್ಗ ಅಂದು ಜವಳಿ ಉತ್ಪಾದಕರಾಗಿ, ಸೈನಿಕರಾಗಿ, ಭಕ್ತಿ ಪಂಥದ ಪ್ರಚಾರಕ್ಕಾಗಿ ಬದುಕನ್ನು ಬಲಿಕೊಟ್ಟುಕೊಂಡು, ಇಂದು ಕೇವಲ ಮತ ಬ್ಯಾಂಕುಗಳಾಗಿ ಅನಾಥರಾಗಿರುವುದು ನೇಕಾರರ ದುರಂತ ಇತಿಹಾಸವೇ ಸರಿ. ನೇಕಾರ ಯಜಮಾನರು ಅಂದು ಶೋಷರಾಗಿ, ದಳ್ಳಾಳಿಗಾಗಿ, ಇಂದು, ರಾಜಕೀಯ ಪುಡಾರಿಗಳಾಗಿ, ನೇಕಾರರನ್ನೇ ಮತ್ತೂ ರಾಜಕೀಯ ಶೋಷಣೆಗೆ ದಳ್ಳಾಳಿಗಳನ್ನಾಗಿ ಮಾಡುತ್ತಿರುವುದು ವಿಷಾದವೇ ಸರಿ. ನೇಕಾರ ಸಂಸ್ಕೃತಿಯೇ ಹಸಿವಿನ ಸಂಸ್ಕೃತಿ. ನೇಕಾರರ ಸಮಾಜ ಒಂದು ಮುಚ್ಚು ಸಮಾಜವೇ ಹೊರತು, ಮುಕ್ತ ಸಮಾಜವಲ್ಲ. ನೇಕಾರ ಜನಾಂಗದಲ್ಲಿ ವ್ಯಕ್ತಿ ಪ್ರಜ್ಞೆಯಿಂದ, ವ್ಯಕ್ತಿಗಳ ಅಭಿವೃದ್ದಿಗೆ ಅವಕಾಶವಾಯಿತೇ ಹೊರತು, ಸಮೂಹ ಪ್ರಜ್ಞೆ ಕುಂಟಿತವಾಗಿ, ಹಿಂದೂ ಸಮೂಹ ಅಭಿವೃದ್ದಿಯಾಗಲಿಲ್ಲ. ನೇಕಾರ ಜನಾಂಗದ ಕೆಲವು ರಾಜಕೀಯ ಪುಡಾರಿಗಳಿಗೆ ನೇಕಾರ ಜನಾಂಗ ಏಣಿಯಾಗಿ ಹಣ ಮತ್ತು ಅಧಿಕಾರದ ದಾಹ ಹಿಂಗಿಸಿತು. ನೇಕಾರ ಜನಾಂಗ ನಂಬಿದ ತಮ್ಮ ನೆಚ್ಚಿನ ನಾಯಕರೇ ಸೊಂಟಕ್ಕೆ ಕಟ್ಟಿದ ಗುಂಡು ಕಲ್ಲುಗಳಾಗಿ, ಜನಾಂಗ ಮುಳುಗುವಂತಾಯಿತು. ನೇಕಾರ ಜನಾಂಗ ಒಳಗೂ ಮತ್ತು ಹೊರಗೂ ಸತತವಾಗಿ ಶೋಷಣೆಗೆ ಒಳಗಾಗಿದ್ದು, ನೇಕಾರರ ಶೈವ, ವೈಷ್ಣವ ಮತ್ತು ಶಾಕ್ತ ಸಂಸ್ಕೃತಿಗಳಿಗೆ, ನೇಕಾರರ ಶೋಷಣೆಯ ಸಂಸ್ಕೃತಿಯೇ ಒಂದು ದೊಡ್ಡ ಬಿತ್ತಿ(ಕ್ಯಾನ್ ವಾಸ್ ).

ಕರ್ನಾಟಕದ ಶಾಸನಗಳು ನೇಕಾರ ವೃತ್ತಿ ಮತ್ತು ಬದುಕಿಗೆ ಸಂಬಂಧಿಸಿದಂತೆ ಕೆಲವು ಚಿತ್ರಗಳನ್ನು ಕಟ್ಟಿ ಕೊಡುತ್ತವೆ. ಅವು ಎಷ್ಟರ ಮಟ್ಟಿಗೆ ಇಡೀ ಜನಾಂಗದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಮತ್ತೊಮ್ಮೆ ವಿಶ್ಲೇಷಿಸಬೇಕಿದೆ ಮತ್ತು ಮರು ಮೌಲ್ಯಗೊಳ್ಳಬೇಕಿದೆ. ಕುತೂಹಲಕ್ಕೆ ಶಾಸನಗಳಲ್ಲಿ ಸೂಚಿತವಾಗಿರುವ ನೇಕಾರ ವೃತ್ತಿಗೆ ಸಂಬಂಧಿಸಿದ ಮಗ್ಗಗಳ ಬೆಳವಣಿಗೆ, ಬಣ್ಣಗಾರಿಕೆ ಮತ್ತು ನೇಕಾರಿಕೆಯ ಕೆಲವು ಕೇಂದ್ರಗಳನ್ನು ಪ್ರಸ್ತಾಪಿಸಲಾಗಿದೆ. ದಕ್ಷಿಣ ಭಾರತದಲ್ಲಿ ಹತ್ತಿ ಬೆಳೆಗೆ ನೆಲ ಸೂಕ್ತವಾಗಿ ಕಪ್ಪು ಮಣ್ಣಿನ ಪ್ರದೇಶಗಳಾದ ಬೆಳಗಾಂ, ಧಾರವಾಡ, ಬಿಜಾಪುರ, ರಾಯಚೂರು, ಗುಲ್ಬರ್ಗಗಳು, ಬಂದರುಗಳಿಗೆ ಹತ್ತಿರವಾಗಿವೆ. ಬಿಜಾಪುರದ ಮಾಣಿಕ್ಯವಳ್ಳಿ, ಬಾಗೇವಾಡಿ, ಬೆಳಗಾವಿಯ ಹೂಲಿ, ಧಾರವಾಡದ ರೋಣ, ಮುಲಗುಂದ, ಲಕ್ಷ್ಮೇಶ್ವರ, ರಾಯಚೂರಿನ ಚಿನ್ಮಲಿ, ಚಿತ್ರದುರ್ಗದ ಚಳ್ಳಕೆರೆ, ದೇವಸಮುದ್ರ, ಬಳ್ಳಾರಿಯ ಕುರವತ್ತಿ, ಹಾಸನದ ಕಣಕಟ್ಟೆ, ಹಳೆಬೀಡು, ಬೇಲೂರು, ಅರಸೀಕೆರೆ, ತುಮಕೂರಿನ ಕೊರಟಗೆರೆ, ಮಂಡ್ಯದ ಬೆಳ್ಳೂರು, ಮೈಸೂರಿನ ಸೋಮನಾಥಪುರ, ಕಡಲಗೆರೆ, ಶಾಸನೋಕ್ತವಾದ ಪ್ರಮುಖ ನೇಕಾರ ಕೇಂದ್ರಗಳಾಗಿದ್ದವು. ಶಿವಮೊಗ್ಗದ ಶಾಸನ ಬಟ್ಟೆಯ ಮುದ್ರಣ ಕಲೆಯ ಮತ್ತು ಬಣ್ಣ ಹಾಕುವ ಬಟ್ಟೆಯ ಕುಸುಂಟೆ, ನೀಲ, ಮಂಜಿಷ್ಟ ಬಣ್ಣಗಳ ವಿವರಗಳಿವೆ. ಬೇಲೂರಿನ ಒಂದು ಶಾಸನ ಇಪ್ಪತ್ತೇಳು ಸಂತೆಗಳ ವಿವರ ಕೊಡುತ್ತದೆ. ವೀರ ಬಲ್ಲಾಳನ ಕಾಲದ ಶಾಸನವೊಂದು ಮಗ್ಗಗಳ ತಂತ್ರಗಾರಿಕೆಯನ್ನು ವಿವರಿಸುತ್ತದೆ. ಲಂಬ ಮಗ್ಗಗಳು (Vertical Looms) ಅತ್ಯಂತ ಪ್ರಾಚೀನವಾದವು. ಅನಂತರ ಕುಣಿ ಮಗ್ಗಗಳು (Horizontal looms) ಸೆಟಲ್ ಮಗ್ಗಗಳು, ಝಕಾಡ್ ರ್ ಮಗ್ಗಗಳು ರೂಢಿಗೆ ಬಂದವು. ಬೀಜಾಪುರದ ಐಯ್ಯಹೊಳೆ ಅತ್ಯಂತ ದೊಡ್ಡ ವ್ಯಾಪಾರ ಕೇಂಧ್ರ. ಅಲ್ಲಿ ಅನೇಕ ಸಂಘಗಳ (Guilds) ವರ್ತಕ ಶ್ರೇಣಿಗಳು ಇದ್ದವು. ನೇಕಾರ ಸಂಘಗಳು (Guilds) ನೇಕಾರ ವೃತ್ತಿಯ ಹಿತವನ್ನು ರಕ್ಷಿಸುತ್ತಿದ್ದವು. ಸಂಘಗಳ ಸದಸ್ಯತ್ವ ವಂಶ ಪಾರಂಪರ್ಯವಾಗಿತ್ತು. ಕಸುಬಿನ ರಹಸ್ಯವನ್ನು ವಂಶಪಾರಂಪರ್ಯವಾಗಿ ರಕ್ಷಿಸಲಾಗುತ್ತಿತ್ತು. ಚೈನಾದಿಂದ ರೇಷ್ಮೆ ತಮಿಳುನಾಡಿಗೆ ಬರುತ್ತಿತ್ತು. ಚೈನಾದಿಂದ ಹೈದ್ರಾಬಾದ್ ಮೂಲಕ ತಮಿಳು ನಾಡಿಗೆ ಇದ್ದ ರಸ್ತೆಯನ್ನು ‘ಸಿಲ್ಕ್ ರೂಟ್ ’ ಎಂದೇ ಕರೆಯಲಾಗುತ್ತಿತ್ತು. ಉತ್ಪನ್ನವಾದ ಜವಳಿ ಕಾವೇರಿಪಟ್ಟಣದ ಬಟ್ಕಲ್ , ಬಾರಕೂರು ಮುಂತಾದ ಬಂದರುಗಳಿಂದ ಹೊರದೇಶಕ್ಕೆ ಹೋಗುತ್ತಿತ್ತು. ಮದುರೆ, ಕಂಚಿ, ತಿರುವನಂತಪುರಗಳೂ ನೇಕಾರ ಕೇಂದ್ರಗಳಾಗಿದ್ದುವು. ನೇಕಾರ ವೃತ್ತಿ ನಗರ ಕೇಂದ್ರಿತವಾದುದು. ರಾಷ್ಟ್ರೀಯ ರಸ್ತೆಗಳ ಪಕ್ಕದಲ್ಲಿಯೇ ನೇಕಾರ ಕೇಂದ್ರಗಳಿರುತ್ತಿದ್ದವು. ಹಲವು ಸವಾಲುಗಳು ಮತ್ತು ಹೊಡೆತಗಳ ನಡುವೆಯೂ, ಗ್ರಾಮಾಂತರಗಳಲ್ಲಿ ಅಲ್ಲೊಂದು ಇಲ್ಲೊಂದು ಕೈ ಮಗ್ಗಗಳ ಸದ್ದನ್ನು ಕೇಳಬಹುದು. ಅವು ಸ್ತಳೀಯರ ಕೈಮಗ್ಗ ಉತ್ಪನ್ನಗಳ ಮೋಹವನ್ನು ಪೂರೈಸುತ್ತಿವೆ. ಜನರಲ್ಲಿ ಸಿಂಥಿಟಿಕ್ ಬಟ್ಟೆಗಳ ಹುಚ್ಚು ಕಡಿಮೆಯಾಗಿ ಸ್ಥಳೀಯ ರೇಷ್ಮೆ ಸೀರೆಗಳ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಕಂಚಿ ಮತ್ತು ಮೊಳಕಾಲ್ಮೂರಿನ ಸೀರೆಗಳ ಬೇಡಿಕೆ ಹೆಚ್ಚುತ್ತಿರುವುದೇ ಸಾಕ್ಷಿ. ಆದರೆ ನೇಯ್ಗೆ ಕೆಲಸಕ್ಕೆ ನೇಕಾರದೇ ಸಿಕ್ಕುತ್ತಿಲ್ಲ. ಗ್ರಾಹಕರ ಬೇಡಿಕೆಯನ್ನು ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ನೇಕಾರರು ವೃತ್ತಿ ಪಲ್ಲಟಗೊಂಡಿದ್ದಾರೆ. ಅವರ ಮಗ್ಗದ ಗುಣಿಗಳು. ನೇಕಾರರ ಬದುಕಿಗೆ ಗುಣಿಗಾಳಾದುದ್ದೇ ಮೂಲ ಕಾರಣ. ನೇಕಾರದ ಆಧ್ಯಾತ್ಮಿಕ ಸಾಧನೆಗೂ ನೇಯ್ಗೆ ವೃತ್ತಿಯ ಕರಕುಶಲಗಾರಿಕೆ ಕಣ್ಮರೆಯಾಯಿತು. ಅದು ದೇಶದ ಆರ್ಥಿಕ ಮತ್ತು ನೈತಿಕ ಪತನವೇ ಸರಿ. ನೇಕಾರರಿಗೆ ಇಂಥ ವೃತ್ತಿಯ ಅನುಭವ ಇಂದು ಸಾಧ್ಯವೆ?

ಉಂಕಿಯ ನಿಗುಚಿ, ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೊಳೆರಡರ ಮೆಟ್ಟಿದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು
ಈ ಸೀರೆಯ ನೆಯ್ದವ ನಾನೊ ನೀನೋ ರಾಮನಾಥ
ದೇವರ ದಾಸಿಮಯ್ಯ

ನಾತಿರುಹುವ ರಾಟಿಯ ಕುಲಜಾತಿಯ ಕೇಳಿರಣ್ಣ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ
ರುದ್ರನ ಬೆಂಬಳಿಯವೆರಡು ಸೂತ್ರದ ಕರ್ಣ
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ
ಸುತ್ತಿತ್ತು ನೂಲು, ಕದಿರು ತುಂಬಿತ್ತು
ಕದಿರೆರೆಮ್ಮವ್ವೆ

* * *