ರಾತ್ರಿಯೆನ್ನದೆ ಹಗಲೆನ್ನದೆ ನೇಕಾರರು ವಾಸಿಸುವ ಬೀದಿಗಳು ಯಾವತ್ತೂ ಎಚ್ಚರದಿಂದಿರುತ್ತವೆ. ಉದಯಕಾಲದಿಂದ ಅಸ್ತಮಾನದವರೆಗೆ ನಿರಂತರವಾಗಿ ಕೇಳಿ ಬರುವ ಲಟಕ್ ಲಟಕ್ ಶಬ್ದ ಸಂಜೆಯಾಗುತ್ತಿದ್ದಂತೆ ನಿಶ್ಯಬ್ಧವಾಗುತ್ತದೆ. ತಮ್ಮ ಆರಾಧ್ಯ ದೇವತೆಗಳು ಆ ಹೊತ್ತಿನಲ್ಲಿ ತಮ್ಮನ್ನು ಅನುಗ್ರಹಿಸುತ್ತಾರೆ ಎಂಬ ದೃಢವಿಶ್ವಾಸದಿಂದ ಮನೆಯೊಳ ಹೊರಗೆ ದೀಪ ಬೆಳಗಿ ದೈವಾನುಗ್ರಹಕ್ಕಾಗಿ ಅವರು ಕಾಯುತ್ತಾರೆ. ಮಗ್ಗದ ಕೊಟ್ಟಿಗೆಗಳಿಂದ ಒಬ್ಬೊಬ್ಬ ನೇಕಾರನೂ ಮಗ್ಗಕ್ಕೆ ನಮಸ್ಕರಿಸಿ ಕೆಳಗಿಳಿಯುವಾಗ, ಅವನ ಪಕ್ಕದಲ್ಲಿ ಕುಳಿತು ನೇಯುವ ಕೌಶಲ್ಯವನ್ನು ಅರಗಿಸಿಕೊಳ್ಳುವ ಪುಟ್ಟ ಮಗ, ಅಪ್ಪ ಮಗ್ಗದಿಂದ ಇಳಿದ ಮೇಲೆ ಆ ಸ್ಥಾನದಲ್ಲಿ ತಾನು ಕುಳಿತು ಕಾಲೆಟುಕದಿದ್ದರೂ ಅಂಚಿಗೆ ಸರಿದು ಪುಟ್ಟ ಕಾಲಿನಿಂದ ಅಣಿಯ ಹಲಗೆಯ ಕೋಲನ್ನು ಒದ್ದು ಒಂದೆರಡು ಬಾರಿ ಲಾಳಿ ಎಳೆದು, ಲಾಳಿಯನ್ನು ತೆಗೆದು ಬದಿಗಿಟ್ಟು ಅಪ್ಪನ ಕೈ ಹಿಡಿದು ಅಂಗಳಕ್ಕೆ ಇಳಿಯುತ್ತಾನೆ. ಒಂದೇ ಸವನೆ ರಾಟೆಯನ್ನು ತಿರುಗಿಸುತ್ತಿದ್ದ ಹೆಂಗಸರ ಕೈಗಳು ಸ್ತಬ್ಧವಾದರೆ, ಅವರ ಮಡಿಲಲ್ಲಿ ಕುಳಿತು ಅಮ್ಮ ತಿರುಗಿಸುವ ರಾಟೆಗೆ ಪುಟ್ಟ ಕೈಗಳನ್ನು ಸೇರಿಸಿ ತಿರುಗಿಸುತ್ತಿದ್ದ ಪುಟ್ಟ ಹೆಣ್ಣು ಮಕ್ಕಳು ನೂಲಿಲ್ಲದ ರಾಟೆಯನ್ನು ಸುಮ್ಮನೆ ಒಂದೆರಡು ಬಾರಿ ತಿರುಗಿಸಿ, ಅಮ್ಮನ ಮಡಿಲಿಂದ ಜಾರಿ ಅಂಗಳ ಸೇರುತ್ತಾರೆ. ಸ್ನಾನ, ಸಂಧ್ಯಾವಂದನೆಗಳನ್ನು ಮುಗಿಸಿ ಎಲ್ಲರೂ ಅಂದು ನೇಯ್ದ ಬಟ್ಟೆಗಳ ಅಂಚು ಕತ್ತರಿಸುವುದರಲ್ಲೂ, ಅಂಚು ಕಟ್ಟುವುದರಲ್ಲೂ ಎರಡೂ ಬದಿಯಲ್ಲಿ ಇಬ್ಬರು ಎಳೆದು ಹಿಡಿದು ಚೊಕ್ಕವಾಗಿ ಮಡಿಸಿ ಇಡುವುದರಲ್ಲೂ, ಅಂಚು ಕಟ್ಟುವುದರಲ್ಲೂ ಎರಡು ಬದಿಯಲ್ಲಿ ಇಬ್ಬರು ಎಳೆದು ಹಿಡಿದು ಚೊಕ್ಕವಾಗಿ ಮಡಿಸಿ ಇಡುವುದರಲ್ಲೂ ನಿರತವಾಗಿರುತ್ತಾರೆ. ಹೆಂಗಸರು ಗಂಜಿ ತಯಾರಿಸುವುದರಲ್ಲೂ, ಮಳೆಗಾಲವಾಗಿದ್ದರೆ ನೂಲಿನ ಗಂಜಿ ಬಣಗಲು ಬೇಕಾದ ಕೆಂಡ ತಯಾರಿಸುವಲ್ಲೂ ನಿರತರಾಗುತ್ತಾರೆ. ಎಲ್ಲಾ ಕೆಲಸಗಳನ್ನು ಮುಗಿಸಿ, ಕುಲದೈವಕ್ಕೆ ಸಮಸ್ಕರಿಸುತ್ತಾ ಅನಿರ್ವಚನೀಯವಾದ ಆನಂದಕ್ಕೆ ಸಾಗುತ್ತಿರುವಾಗ ನೇಕಾರ ಬೀದಿಯ ಪ್ರತಿಯೊಬ್ಬ ನೇಕಾರನ ಒಳ ಮನಸ್ಸೂ ಹಾರೈಸುವುದು “ದೇವರೇ ನನ್ನ ಸಮುದಾಯದಿಂದ ನಾನು ದೂರವಾಗದಂತೆ, ಸಮೂಹವು ಚದುರಿ ಹೋಗದಂತೆ ಅನುಗ್ರಹಿಸಿ.”

ನೇಕಾರರ ಜೀವನಕ್ಕೆ, ಜೀವಿತ ಮಾರ್ಗಕ್ಕೆ ಕುಟುಂಬದ ಒಂದೊಂದು ಎಳೆಯೂ ಸೇರಬೇಕಾದುದು ಅನಿವಾರ್ಯ. ನೇಕಾರ ಕುಟುಂಬದ ಪ್ರತಿಯೊಬ್ಬರೂ ಹಾಸು-ಹೊಕ್ಕಾಗಿ ಬೆರೆಯದಿದ್ದರೆ ಅವರ ತಟ್ಟೆ ಯಾವತ್ತೂ ಖಾಲಿಯೇ. ಒಬ್ಬನಿಗೆ ಇನ್ನೋರ್ವ ಜತೆ. ಅವನ ಎಡಗೈಗೂ, ಬಲಗೈಗೂ ಹೆಣ್ಣು-ಗಂಡು ಮಕ್ಕಳೇ ಆಧಾರ.

ನೇಕಾರ ಮಗ್ಗದ ಹಲಗೆಗೆ ಏರುವಾಗ, ಅವನು ನೇಯುವ ಬಟ್ಟೆ ಅವನ ಮನಸ್ಸಿನಂತೆ ರೂಪುಗೊಳ್ಳುವಾಗ, ಅದರ ಹಿಂದೆ ಪ್ರವರ್ತಿಸುವ ಕೈಗಳೆಷ್ಟು? ನೇಕಾರನಾಗಿ ಇದನ್ನು ಅರ್ಥವಿಸಿಕೊಂಡೇ ಇರಬೇಕು ದೇವರ ದಾಸಿಮಯ್ಯ, `ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ’ ಎಂದುದು. ಅವನು ಹೇಳಿದ ಮಾತು ಭಕ್ತಿಗೆ ಮಾತ್ರವಲ್ಲ, ಅವನ ಕಾಯಕಕ್ಕೂ ಅನ್ವಯಿಸುತ್ತದೆ. `ನಿನ್ನೆ ಅಟ್ಟ ಅಂಬಲಿ ಸುಟ್ಟಿತ್ತು’ ಎಂದಾಗ ತಣಿಸಿಕೊಡುವ ಪತ್ನಿ, ಹಚ್ಚ ಹಗಲಲ್ಲೇ ತನ್ನೆದುರಿನಲ್ಲೇ ಇದ್ದ ಕುಂಚಿಕೆ ಕಾಣುವುದಿಲ್ಲವೆಂದಾಗ ದೀಪ ತಂದು ಕೊಡುವ ಮನದನ್ನೆಯ ಅಗತ್ಯ ನೇಕಾರನಿಗೆ ಇದೆ ಎಂಬುದನ್ನು ಆತ ತನ್ನ ಭಕ್ತಿ ಹಾಗೂ ಕಾಯಕದ ಸಾಧನೆಯ ಹಿಂದಿನಿಂದ ತೋರಿಸಿಕೊಟ್ಟಿದ್ದಾನೆ.

ನೇಕಾರನಿಗೆ ಯಾವತ್ತೂ ವಿಶ್ರಾಂತಿಯಿಲ್ಲ. ಆತನ ಮನೆಯವರಿಗೂ ವಿಶ್ರಾಂತಿಯಿಲ್ಲ. ಪ್ರಾಚೀನ ಕಾಲದಲ್ಲಿ, ಹತ್ತಿ ಬಿಡಿಸುವುದರಿಂದ ತೊಡಗಿ, ಬಿಡಿಸಿ ಹತ್ತಿಯನ್ನು ಉಪಯೋಗಿಸಿ ಬತ್ತಿ ಮಾಡುವುದು, ಬತ್ತಿಯನ್ನು ಚರಕದ ಕದಿರಿನಲ್ಲಿಟ್ಟ ನೂಲು ತಯಾರಿಸುವುದು, ತಯಾರಿಸಿದ ನೂಲಿಗೆ ಬಣ್ಣ ತಯಾರಿಸುವುದು, ಅದಕ್ಕಾಗಿ ವಿವಿಧ ವಸ್ತುಗಳನ್ನು ಉಪಯೋಗಿಸಿ ಬಣ್ಣ ಅರೆಯುವುದು, ಬಣ್ಣ ಹಾಕಿ ನೂಲು ಬೇಯಿಸುವುದು, ಬೇಯಿಸಿದ ನೂಲನ್ನು ಒಳಗಿಸುವುದು, ಆ ನೂಲನ್ನು ರಾಟೆಗೆ ಹಾಕಿ ಕಂಡಿಕೆಯನ್ನು ಸುತ್ತಿಕೊಳ್ಳುವುದು, ಈ ಕಂಡಿಕೆಯಲ್ಲಿ ಸುತ್ತಿದ ನೂಲಿನಿಂದ ಹಾಸು ತಯಾರಿಸುವುದು, ಪುಟ್ಟ ಕಂಡಿಕೆಯಲ್ಲಿ ಹೊಕ್ಕಿಗೆ ನೂಲು ತಯಾರಿಸುವುದು. ಅದನ್ನು ಲಾಳಿಗೆ ಸಿಕ್ಕಿಸಿ ಅಚ್ಚಿನ ಮುಖಾಂತರವಾಗಿ ಹಾದು ಬಂದು ಬಾಯಿಬಿಡುವ ನೂಲುಗಳೆಡೆಯಿಂದ ಅತ್ತಲೂ ಇತ್ತಲೂ ಹಾಯಿಸುವುದು. ಹೀಗೆ ತಯಾರಾದ ವಸ್ತ್ರವನ್ನು ಮಾರಾಟ ಮಾಡುವುದು… ಹೀಗೇ… ಅದು ನಿರಂತರ.

ನೇಕಾರನ ಜೀವನವೇ ಒಂದು ಸಾಂಗತ್ಯ. ಮಗ್ಗದ ಏಕತಾರಿಗೆ ರಾಟೆಯ ದನಿಗೂಡಿ, ನೇಕಾರನ ಹಾಡಿಗೆ ಅತನ ಮಡದಿಯ ಸ್ವರ ಸೇರಿ, ಮಕ್ಕಳೂ ಉಳಿದವರೂ ಅದರೊಂದಿಗೆ ದನಿಗೂಡಿಸಿದರೆ ಮಾತ್ರ ಅದು ಪರಿಪೂರ್ಣ.

ಮೊದಲಿನಿಂದಲೂ ನೇಕಾರರು ಗುಂಪಾಗಿ ಜೀವಿಸಲು ಮೂಲ ಕಾರಣ ಅವರ ಈ ಕಸುಬು. ಒಂದು ಸೀರೆಯ ಹಿಂದೆ ಹತ್ತು ಹಲವರ ಶ್ರಮ ಸೇರಿಕೊಂಡಿರುತ್ತದೆ. ಶಿಲ್ಪಕಲೆ, ಚಿತ್ರಕಲೆಗಳಂತೆ ನೇಕಾರಿಕೆಯೂ ಅದ್ಭುತ ಕಲೆ, ಶಿಲ್ಪಿ ಕೆತ್ತಿ ಚಿತ್ರಿಸುತ್ತಾನೆ. ಚಿತ್ರಕಾರ ಕುಂಚದಲ್ಲಿ ಬಣ್ಣ ಹಾಕಿ ಚಿತ್ರ ಬಿಡಿಸುತ್ತಾನೆ. ನೇಕಾರ ಅದರಂತೆಯೇ ತಾನು ನೇಯ್ದ ವಸ್ತ್ರದಲ್ಲಿ ಚಿತ್ರ, ಚಿತ್ತಾರ ಬಿಡಿಸುತ್ತಾರೆ. ಅದಕ್ಕೆ ಅವನಿಗೆ ಹಲವರ ಸಹಕಾರ ಬೆಂಬಲ ಬೇಕು. ಮಹಿಳೆಯ, ಕುಟುಂಬದವರ ಸಹಕಾರವಿಲ್ಲದೆ ನೇಕಾರ ಮುಂದುವರಿಯಲಾರ. ಹಿಂದೆ ಹತ್ತಿ ನೂಲಿನ ಕೈಮಗ್ಗಗಳಿದ್ದು ಅವುಗಳಿಗೆ ಸಿದ್ಧತೆ ಮಾಡುವ ವಿಷಯಗಳಾದ ಗಂಜಿ ಹಚ್ಚುವುದು, ಅಚ್ಚು ಕೆಚ್ಚುವುದು, ಕಂಡಿಕೆ(ಕಣಿಕೆ) ಸುತ್ತುವುದು, ಹಾಸು ತಯಾರಿಸುವುದು ಎಲ್ಲದರಲ್ಲೂ ಪುರುಷರಿಗೆ ಸಮಾನಾಗಿ ಮಹಿಳೆ ದುಡಿಯುತ್ತಿದ್ದಳು. ಒಂದು ಸೂರಿನಡಿಯಲ್ಲಿ ಕುಟುಂಬದ ಸದಸ್ಯರೆಲ್ಲಾ ಸೇರಿ, ನೂಲಿನೆಳೆಯ ಜತೆ ಎಲ್ಲರೂ ಸೇರಿ ದುಡಿವ ದುಡಿಮೆಯೇ ನೇಕಾರಿಕೆ.

ಕಲಕಸುಬಿಗೂ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಕೌಟುಂಬಿಕ ಸಾಮರಸ್ಯವನ್ನು ಸಾಧಿಸುವುದರಲ್ಲಿ ಕಸುಬಿಗೆ ಬಹಳ ಹಿಂದಿನಿಂದಲೇ ಅಗ್ರಸ್ಥಾನವಿದೆ. ಅವಿಭಕ್ತ ಕುಟುಂಬಗಳ ಜೀವನಾಡಿಯಾಗಿ ಕುಲಕಸುಬು ಕುಟುಂಬದ ಸದಸ್ಯರನ್ನು ಪರಸ್ಪರ ಬಂಧಿಸುತ್ತಿತ್ತು. ಯಾವುದೇ ಕಸುಬನ್ನು ಎತ್ತಿಕೊಂಡರೂ ಆ ಕಸುಬಿನ ಹಿಂದೆ ಕುಟುಂಬದ ಸದಸ್ಯರ ಪಾಲುಗೊಳ್ಳುವಿಕೆ ಒಂದಲ್ಲ ಒಂದು ರೀತಿಯಿಂದ ಇರುವುದನ್ನು ಕಾಣಬಹುದು. ಒಂದು ಕುಟುಂಬದ ಒಟ್ಟು ಆದಾಯದ ಹಿಂದೆ ಸರ್ವ ಸದಸ್ಯರ ಪರಿಶ್ರಮದ ಫಲ ಖಂಡಿತವಾಗಿಯೂ ಇತ್ತು. ಕುಲಕಸುಬನ್ನು ಆಧರಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಕಾಲಘಟ್ಟದಲ್ಲಿ ಪ್ರತಿಯೊಂದು ವೃತ್ತಿಯನ್ನು ಅವಲಂಬಿಸಿದ ಪ್ರತಿಯೊಂದು ಮನೆಯವರೂ ಒಟ್ಟಾಗಿಯೇ ದುಡಿಯುತ್ತಿದ್ದರು. ಇದರಿಂದ ಅವರ ಮಧ್ಯೆ ಭಾವನಾತ್ಮಕ ಸಂಬಂಧ ಬೆಳೆಯಲು ಸಹಕಾರಿಯಾಗುತ್ತಿತ್ತು. ನೋವು ನಲಿವುಗಳಲ್ಲಿ ಪರಸ್ಪರ ಪಾಲುಗೊಳ್ಳುತ್ತಾ ವಿಚಾರ ವಿನಿಮಯ ಮಾಡುಕೊಳ್ಳುತ್ತಾ, ಸುದ್ದಿ ಸ್ವಾರಸ್ಯಗಳನ್ನು ಹಂಚಿಕೊಳ್ಳುತ್ತಾ ಆತ್ಮೀಯತೆಯಿಂದ ಮಾತನಾಡಿಕೊಳ್ಳುತ್ತಾ ಕೆಲಸಗಳಲ್ಲಿ ನಿರತರಾಗಿರುತ್ತಿದ್ದರು.

ಕಮ್ಮಾರರ ಕೇರಿಗೆ ಹೋದರೆ ಕಮ್ಮಾರನೊಬ್ಬ ಕಬ್ಬಿಣವನ್ನು ಕಾಯಿಸುತ್ತಿದ್ದರೆ ಅವರ ಹೆಂಡತಿ ತಿದಿಯೊತ್ತುತ್ತಿದ್ದಳು. ಮಕ್ಕಳು ಹತ್ತಿರವೇ ಕುಳಿತು ಕಾದ ಕಬ್ಬಿಣಕ್ಕೆ ರೂಪು ಕೊಡುವ ಕೆಲಸದಲ್ಲಿ ವಯಸ್ಸಿಗೆ ತಕ್ಕಂತೆ ಸಹಕರಿಸುತ್ತಿದ್ದರು. ಕುಂಬಾರರ ಕೇರಿಗೆ ಹೋದರೆ, ಕುಂಬಾರ ತಿರುಗುವ ಚಕ್ರದಲ್ಲಿ ಮಡಿಕೆಗೆ ರೂಪುಕೊಡುತ್ತಿದ್ದರೆ, ಹೆಂಡತಿ-ಮಕ್ಕಳು ಮಣ್ಣು ಹದಗೊಳಿಸುವಲ್ಲೂ, ಮಡಿಕೆ ಸುಡುವುದರಲ್ಲೂ ಭಾಗಿಗಳಾಗುತ್ತಿದ್ದರು. ಕೊರಗರ (ಆದಿವಾಸಿ ಬುಡಕಟ್ಟು ಜನಾಂಗ) ಕೇರಿಗೆ ಹೋದರೆ, ಗಂಡ ಕಾಡಿನಿಂದ ಬೆತ್ತವನ್ನು ಕಡಿದು ತಂದು ರಾಶಿ ಹಾಕಿದರೆ, ಮಕ್ಕಳು ಸಿಪ್ಪೆ ಸುಲಿದು ಇಡುತ್ತಿದ್ದರು. ಹೆಂಡತಿ ಕುಳಿತು ಸುಂದರವಾದ ಬುಟ್ಟಿ ಹೆಣೆಯುತ್ತಿದ್ದಳು.

ನೇಕಾರರ ಬೀದಿಗೆ ಹೋದರಂತೂ, ಪ್ರತಿಯೊಂದ ಮನೆಯಲ್ಲೂ ಎಲ್ಲರಿಗೂ ಕೈ ತುಂಬಾ ಕೆಲಸ, ಮಗ್ಗದಣ್ಣ ಮಗ್ಗವೇರಿದರೆ ಆತನಿಗೆ ಹೊಕ್ಕಿಗೆ ಬೇಕಾದ ನೂಲು ತಯಾರಿಸಿಕೊಡಲು ಆತನ ಮಡದಿ ರಾಟೆಯ ಬಳಿ ಹಾಜರು! ಮಕ್ಕಳು ನೂಲು ಬಿಡಿಸಿ ಕೊಡುವುದರಲ್ಲೂ, ಉಳಿದವರು ಗಂಜಿ ತಯಾರಿಸುವುದರಲ್ಲೂ, ಬಣ್ಣ ಕುದಿಸುವುದರಲ್ಲೂ, ನೂಲು ತೊಳೆಯುವುದರಲ್ಲೂ, ಒಣಗಿಸುವುದರಲ್ಲೂ, ಹಾಸು ತಯಾರಿಸುವುದರಲ್ಲೂ, ಹಾಸು ಸುತ್ತುವುದರಲ್ಲೂ, ನೇಯ್ದ ವಸ್ತ್ರವನ್ನು ಮಡಿಸುವುದರಲ್ಲೂ, ಅಂಚು ಕತ್ತರಿಸುವುದರಲ್ಲೂ, ಅಂಚು ಕಟ್ಟುವುದರಲ್ಲೂ, ಹಾಸು ಏರಿಸುವುದ್ಲಲೂ, ಹಾಸು ಪೋಣಿಸುವುದರಲ್ಲೂ ಹೀಗೆ ಹತ್ತು ಹಲವಾರು ಕೆಲಸಗಳಲ್ಲಿ ನಿರತರಾಗಿರುತ್ತಿದ್ದರು. ಇದರೊಂದಿಗೆ ನೆರೆಕರೆಯವರ ಸಲಹೆ-ಸೂಚನೆ, ಸಹಕಾರ, ವಿಚಾರ ವಿನಿಮಯ ಕಸುಬಿನಲ್ಲಿ ಪರಿಣತಿ ಸಾಧಿಸಲು ಸಹಕರಿಸುತ್ತಿತ್ತು.

ಮಾನವ ವಿಕಾಸದ ಅವಲೋಕನ ಮಾಡಿದಾಗ ಅವನು ತನ್ನ ಉತ್ಪತ್ತಿಯ ಆರಂಭದ ಹಂತದಲ್ಲಿ ಕಾಡುಮಾನವನಾಗಿ ಪ್ರಾಣಿ ಜೀವನ ನಡೆಸಿದ್ದು ತಿಳಿದು ಬರುತ್ತದೆ. ಕ್ರಮೇಣ ಉದ್ಯೋಗದ ಕಲ್ಪನೆ ಮೂಡಿ, ಒಂದು ವಿಶಾಲವಾದ ಬಯಲು ಪ್ರದೇಶದಲ್ಲಿ ನೆಲೆನಿಂತು ಕೃಷಿ, ಹೈನುಗಾರಿಕೆ, ಬಟ್ಟೆ ತಯಾರಿಕೆಯಂತಹ ಒಂದೊಂದೇ ವಿಕಾಸದ ಹಂತಗಳನ್ನೇರಿದನು. ವೃತ್ತಿಯ ಅಡಿಪಾಯದಲ್ಲಿ ಸಮುದಾಯ ರೂಪುಗೊಂಡಿತು. ಮಾನವರ ಆಕೃತಿ, ಪ್ರಕೃತಿ, ಬುದ್ದಿ, ಆಲೋಚನೆಗಳು ವೃತ್ತಿಯ ಸವಿಶೇಷತೆಗಳೊಂದಿ ಸ್ನೇಹಪೂರ್ವಕವಾಗಿ ಸೇರಿಕೊಂಡವು. ಪರಸ್ಪರ ಬೆಸೆದು ಬದುಕುವ ಜೀವನಕ್ರಮ ಆರಂಭವಾಯಿತು. ಭಾರತೀಯ ಸಂಸ್ಕೃತಿಯಲ್ಲೇ ಅತ್ಯಂತ ಪ್ರಾಚೀನವಾದುದು ನೇಕಾರಿಕೆ. ಸಿಂಧೂ ಕಣಿವೆಯಲ್ಲಿ ಕಾಣ ಸಿಕ್ಕಿದ ನಾಗರಿಕತೆಯ ಕಾಲದಲ್ಲೇ ನೇಕಾರಿಕೆಯಲ್ಲಿ, ಬಣ್ಣ ಹಾಕುವುದರಲ್ಲಿ ಭಾರತೀಯರಿಗೆ ಇದ್ದ ಪ್ರಾವೀಣ್ಯತೆಯು ಅರಿವಿಗೆ ಬರುತ್ತದೆ. ಭಾರತದ ಪ್ರಾಚೀನ ಗ್ರಂಥಗಳಲ್ಲೂ ನೇಕಾರಿಕೆಯ ಬಗ್ಗೆ ಪರಾಮರ್ಶೆ ಇದೆ. ನೇಕಾರರು ಎಂದೂ ಏಕಾಂಗಿಗಳಾಗಿ ಜೀವಿಸಿದವರಲ್ಲ. ಗುಂಪು ಗುಂಪಾಗಿ ವಾಸಿಸುತ್ತಾ ಬಂದವರು. ಸಮೂಹ ಜೀವನದ ರಹಸ್ಯ ಅವರ ಕಸುಬಿನಲ್ಲಿದೆ. ಅವರ ವೃತ್ತಿಯ ಪ್ರತೀ ಹಂತದಲ್ಲೂ ಸ್ತ್ರೀಯರ, ಮಕ್ಕಳ ಹಾಗೂ ಕುಟುಂಭದ ಸಹಾಯ ಬೇಕೇ ಬೇಕು.

ನೇಕಾರ ವೃತ್ತಿಯನ್ನು ಅವಲಂಬಿಸಿದವರನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು. ಒಂದನೆಯದು ಮಿಲ್ಲುಗಳಿಂದ ದೊರಕುವ ಕೈನೂಲು ಉಪಯೋಗಿಸಿ ನೂಲು ಸುತ್ತುವುದು. ಎರಡನೆಯದು ಹಾಸು ತಯಾರಿಸುವುದು. ಮೂರನೆಯದು ನೇಯುವುದು. ನಾಲ್ಕನೆಯದು ಬಣ್ಣ ಹಾಕುವುದು ಹಾಗೂ ಬ್ಲೀಚಿಂಗ್ ಮಾಡುವುದು. ಸಾಮಾನ್ಯವಾಗಿ ಒಂದು ಕುಟುಂಬದವರೆಲ್ಲರೂ ಸೇರಿ ಈ ನಾಲ್ಕು ಕೆಲಸಗಳನ್ನು ನಿರ್ವಹಿಸುತ್ತಾರೆ. ಅಲ್ಲದಿದ್ದರೆ ನೆರೆಯವರ ಸಹಾಯದಿಂದ ಮಾಡಿಕೊಳ್ಳುತ್ತಾರೆ.

ನೇಕಾರನೊಬ್ಬನ ನೇಯ್ಗೆ ಆರಂಭವಾಗುವುದು ಅಂಗವಸ್ತ್ರ, ಚೌಕಳಿ ವಸ್ತ್ರ, ಲಂಗೋಟಿಗಳನ್ನು ನೇಯುವುದರಿಂದ, ಕ್ರಮೇಣ ಕಮನೀಯವಾದ ಅತ್ಯಂತ ತೆಳು ಸೀರೆಯನ್ನು ನೇಯುವುದರಲ್ಲಿ ಪರಿಣತನಾಗಿ ಯಶಸ್ಸನ್ನು ಸಾಧಿಸುತ್ತಾನೆ. ವೃದ್ಧಾಪ್ಯದೆಡೆಗೆ ಸಾಗುತ್ತಾ ದು ಇಳಿಮುಖವಾಗುತ್ತದೆ. ಆಗ ಹಾಸಿಗೆ ಹಾಸು, ಹೊದೆಯುವ ವಲ್ಲಿ ಮುಂತಾದ ದಪ್ಪನೆಯ ವಸ್ತ್ರಗಳನ್ನು ನೇಯುತ್ತಾನೆ. ನೇಕಾರಿಕೆಗೆ `ಬಳಸಲಾಗುವ ಮಗ್ಗಗಳಲ್ಲೂ ಹಲವು ವಿಧಗಳಿವೆ. ಗುಣಿಮಗ್ಗ ಅಥವಾ ಗುಳಿಮಗ್ಗ, ಪಟಗದ ಮಗ್ಗ, ಕಂಬಳಿಮಗ್ಗ, ಖಣದ ಮಗ್ಗ, ಅಟೊಮ್ಯಾಟಿಕ್ ಮಗ್ಗ, ಸಾದಾಮಗ್ಗ.

ಭಾರತೀಯ ನೇಕಾರಿಕೆಯನ್ನು ಕಾಲದ ನೆಲೆಯಿಂದ ಮೂರು ಹಂತಗಳಾಗಿ ವಿಭಾಗಿಸಬಹುದು. ಈ ಮೂರು ನೆಲೆಗಳಲ್ಲೂ ಕುಟುಂಬದ ಪಾತ್ರ ಇದ್ದೇ ಇದೆ.

ಆರಂಭದ ಹಂತವನ್ನು `ಗುಣಿಮಗ್ಗದ ಹಂತ’ ಎನ್ನಬಹುದು. ಇದು ನೇಯ್ಗೆಯ ಪ್ರಾಚೀನ ರೂಪ. ನೇಕಾರ `ಗುಣಿ’ ಅಥವಾ ಹೊಂಡಕ್ಕೆ ಕಾಲನ್ನು ಇಳಿಬಿಟ್ಟು ಕುಳಿತು ದೋಣಿಯನ್ನು ಅತ್ತಿಂದಿತ್ತ ಎಸೆದು ಹಿಡಿದು ನೇಯಬೇಕಾಗಿತ್ತು. ವಸ್ತ್ರೋದ್ಯಮದ ಆರಂಭ ಘಟ್ಟಗಳಲ್ಲಿ ಎಳೆಯ ಮಕ್ಕಳನ್ನು ಗುಣಿಮಗ್ಗಕ್ಕೆ ಇಳಿಸಿ ನೇಯಿಸುತ್ತಿದ್ದರು. ಹೆಂಗಸರೂ ಗುಣಿಮಗ್ಗಗಳಲ್ಲಿ ನೇಯುತ್ತಿದ್ದರು. ಆದರೆ ಗುಳಿಮಗ್ಗದ ಹಂತದಲ್ಲಿ ಹೆಂಗಸರ ಅವಶ್ಯಕತೆ ಹೆಚ್ಚಾಗಿ ಹಾಸು ತಯಾರಿಸುವುದರಲ್ಲಾಗಿತ್ತು. ಇದು ಅತ್ಯಂತ ಪರಿಶ್ರಮದಾಯಕವಾದ ಕೆಲಸವಾಗಿತ್ತು. ಒಂದೇ ಒಂದು ನೂಲನ್ನು ಬಳಸಿಕೊಂಡು ಬೇಕಾಗುವಷ್ಟು ಅಗಲದ ಹಾಗೂ ಉದ್ದದ ಹಾಸನ್ನು ತಯಾರಿಸುತ್ತಿದ್ದರು. ಅಂದಿನ ಮಹಿಳೆಯರು ಈ ಕೆಲಸದಲ್ಲಿ ಬಹಳಷ್ಟು ವಿಪುಣರಾಗಿದ್ದರು.

ಎರಡು ಉದ್ದನೆಯ ಮರದ ಹಲಗೆಗಳಿಗೆ ಅಲ್ಲಲ್ಲಿ ಸಣ್ಣ ಸಣ್ಣ ಗೂಟಗಳನ್ನು ಜೋಡಿಸಿಟ್ಟು, ಆ ಗೂಟಗಳಿಗೆ ನೂಲನ್ನು ಅತ್ತಿಂದಿತ್ತ ಹಾಯಿಸಿಕೊಂಡು ಹಾಸು ತಯಾರಿಸಲಾಗುತ್ತಿತ್ತು. ಒಂದು ಕೈಯಲ್ಲಿ ನೂಲಿನ ಕೈ ಹಟ್ಟೆ, ಮತ್ತೊಂದು ಕೈಯಲ್ಲಿ ಸಪೂರವಾದ ಬಿದಿರಿನ ಓಟೆ. ಆ ಓಟೆಯ ಮೂಲಕ ನೂಲನ್ನು ಗೂಟಗಳಿಗೆ ಸಿಕ್ಕಿಸುತ್ತಾ ಹಾಸು ತಯಾರಿಸುತ್ತಿದ್ದ ಕಲೆಯಲ್ಲಿ ಮನೆಯ ಹೆಂಗಸರು ನಿಪುಣರಾಗಿದ್ದರು.

ಹೀಗೆ ತಯಾರಿಸಿದ ಹಾಸನ್ನು ಕಟ್ಟಿ, ಬಿಸಿ ಮಾಡಿ, ಗಂಜಿಯಲ್ಲಿ ನೆನೆಸಿ ಹಾಕುವ ಕೆಲಸದಲ್ಲಿ ಮನೆಯವರೆಲ್ಲರೂ ಪಾಲುಗೊಳ್ಳುತ್ತಿದ್ದರು. ಅನಂತರ ಸುಮಾರು ೧೫೦-೨೦೦ ಅಡಿ ಉದ್ದದ ಹಾಸನ್ನು ಒಣಗಿಸುವ ಬವಣೆಯಂತೂ ನೇಕಾರರ ಬದುಕಿನಲ್ಲಿ ಒಂದು ಸಾಹಸದ ಕೆಲಸವೇ ಆಗಿತ್ತು. ಹಾಸನ್ನು ಖಾಲಿ ಜಾಗದಲ್ಲಿ ನೆಲಕ್ಕಿಂತ ಎತ್ತರದಲ್ಲಿ ಎಳೆದು ಕಟ್ಟಿ ಒಳಗಿಸಿ ಅದನ್ನು ಏಟಿಕೋಲಿಗೆ ಸುತ್ತಿಕೊಂಡು, ಮಧ್ಯೆ ಮಧ್ಯೆ ಕತ್ತರಿ ಕೋಲನ್ನು ಸಿಕ್ಕಿಸಲಾಗುತ್ತಿತ್ತು. ಪೂರ್ಣ ಒಣಗಿದ ನಂತರ ಅದನ್ನು ಸುತ್ತಿಕೊಂಡು ಮಗ್ಗದ ಗೂಟಕ್ಕೆ ಎಳೆದು ಕಟ್ಟಲಾಗುತ್ತಿತ್ತು. ಮಳೆಗಾಲದ ದಿನಗಳಲ್ಲಂತೂ ನೇಕಾರ ಕುಟುಂಬಗಳಿಗೆ ಅತ್ಯಂತ ಕಷ್ಟದ ದಿನಗಳು, ಹಾಸು ಒಳಗಿಸುವ ಕಷ್ಟ ಹೇಳತೀರದು. ಮರದ ದಿಮ್ಮಿಗಳನ್ನೂ, ಗೆರಟೆಗಳನ್ನೂ ಉರಿಸಿ, ಕೆಂಡ ತಯಾರಿಸುವ ಕೆಲಸ ಮನೆಯೊಳಗಿನ ಹೆಂಗಸರದ್ದಾಗಿದ್ದರೆ, ಹಿಡಿಕೆಯಿರುವ ತಟ್ಟೆಯಲ್ಲಿ ಕೆಂಡವನ್ನಿಟ್ಟು ಹಾಸಿನ ಅಡಿಯಲ್ಲಿ ಹಾಯಿಸಿ, ಒಣಗಿಸುವ ಕೆಲಸ ಪುರುಷರದ್ದು.

ಗುಳಿಮಗ್ಗದಲ್ಲಿ ಎರಡೂವರೆಯಿಂದ ಮೂರೂವರೆ ಅಡಿಗಳವರೆಗಿನ ಅಗಲದ ೬ ಅಡಿ ಉದ್ದದ ಎರಡು ಮೂರು ಜೋಡಿ ವಸ್ತ್ರವನ್ನು ತಯಾರಿಸುತ್ತಿದ್ದವರು ಇದ್ದರು. ಕೆಲವರಂತೂ ಒಂದು ಹಾಸನ್ನು ನಾಲ್ಕೈದು ದಿನಗಳಲ್ಲಿ ನೇಯುತ್ತಿದ್ದರು. ಹಾಗಾಗಿ ಮನೆಯ ಹೆಂಗಸರಿಗೆ ನೂಲು ಸುತ್ತುವ ಮತ್ತು ಹಾಸು ಮಾಡುವ ಕೆಲಸ ನಿರಂತರ ಇರುತ್ತಿತ್ತು.

ನೇಯ್ದ ವಸ್ತ್ರಗಳನ್ನು ಮಾರಾಟ ಮಾಡುವುದು ಅಂದಿನ ನೇಕಾರಿಕೆಯ ಮುಂದಿನ ಹಂತ. ಇಂದಿನಷ್ಟು ವಾಹನ ಸೌಕರ್ಯಗಳಿಲ್ಲದ ಅಂದಿನ ಕಾಲದಲ್ಲಿ ಬಡ ನೇಕಾರ ಬಟ್ಟೆಯ ಗಂಟನ್ನು ತಲೆಯಲ್ಲಿ ಹೊತ್ತುಕೊಂಡು ಊರಿಂದೂರಿಗೆ ಹೋಗಬೇಕಾಗಿತ್ತು. ತಂದೆ-ಮಕ್ಕಳು ಸೇರಿಕೊಂಡೇ ಬಟ್ಟೆ ಮಾರಲು ಹೋಗುತ್ತಿದ್ದರು. ತಂದೆಯ ತಲೆಯ ಮೇಲೆ ದೊಡ್ಡ ಬಟ್ಟೆಯ ಗಂಟು ಇದ್ದರೆ, ಮಗನ ತಲೆಯ ಮೇಲೆ ಪುಟ್ಟ ಗಂಟು. ಅದನ್ನು ಕೆಲವೊಮ್ಮೆ ಹೆಗಲಿಗೂ, ಬೆನ್ನಿಗೂ ಬದಲಾಯಿಸುತ್ತಾ ಬರಿಗಾಲಿನಿಂದ ಊರಿನಿಂದ ಊರಿಗೆ ಪ್ರಯಾಣ. ಮನೆಗಳು ವಿರಳವಾಗಿದ್ದ ಅಂದಿನ ಕಾಲದಲ್ಲಿ ಈ ತೆರ ಮಾರಾಟ ಮಾಡುವವರ ಕಷ್ಟವನ್ನರಿತ ಹಳ್ಳಿಯವರು, ಅವರಿಗೆ ಊಟ-ಉಪಹಾರ-ವಸತಿಗಳನ್ನು ನೀಡಿ ಸಹಕರಿಸುತ್ತಿದ್ದರು. ಹಿಂತಿರುಗಿ ಬರುವಾಗ ದವಸ-ಧಾನ್ಯ, ತರಕಾರಿಗಳ ಒಂದು ದೊಡ್ಡ ಹೊರೆಯನ್ನೇ ಹೊತ್ತು ತರುತ್ತಿದ್ದರು. ತಮ್ಮ ತಮ್ಮ ಊರುಗಳಲ್ಲಿ ಮಾತ್ರವಲ್ಲದೆ, ಅಕ್ಕಪಕ್ಕದ ಊರುಗಳಲ್ಲಿ ನಡೆಯುವ ಸಂತೆಗಳಿಗೂ, ಜಾತ್ರೆಗಳಿಗೂ ನೇಯ್ದ ಬಟ್ಟೆಗಳನ್ನು ಕೊಂಡೊಯ್ದು ಮಾರಾಟ ಮಾಡುವಲ್ಲಿ ಹೆಂಗಸರ ಸಹಾಯವೂ ಇದ್ದೇ ಇರುತ್ತಿತ್ತು.

ನೇಕಾರಿಕೆಯ ಎರಡನೆಯ ಹಂತ ಕೈಮಗ್ಗದ ನೇಕಾರಿಕೆ ಇದು ಸುಧಾರಿತ ರೀತಿ. ಕೈಮಗ್ಗ ನೇಕಾರಿಕೆ ಏಶಿಯಾ ಖಂಡ ವಿಶ್ವ ನಾಗರಿಕತೆಗೆ ನೀಡಿದ ಅಮೂಲ್ಯ ಕೊಡುಗೆ. ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬ. ಇಂದೂ ದೇಶದ ಬಹುಮಂದಿ ನೇಕಾರರು ಇದನ್ನೇ ಅವಲಂಬಿಸಿದ್ದಾರೆ. ನಾಲ್ಕು ಕಂಬಗಳ ಆಯತಾಕಾರದ ಕೈಮಗ್ಗದಲ್ಲಿ ನೇಯಲು ಗುಳಿಮಗ್ಗದಷ್ಟು ಪರಿಶ್ರಮದ ಅಗತ್ಯವಿಲ್ಲ. ಆದರೆ ಇದಕ್ಕೂ ಮನೆಮಂದಿಯ ಸಹಕಾರಬೇಕು. ಮಿಲ್ಲುಗಳಿಂದ ತಂದ ನೂಲಿನ ಕೈ ಹಟ್ಟೆಗಳಿಂದ ದೊಡ್ಡ ಕಣಿಕೆಗಳಲ್ಲಿ ನೂಲು ಸುತ್ತುವ ಕೆಲಸವನ್ನು ಮನೆಮಂದಿಯೆಲ್ಲಾ ಸೇರಿಕೊಂಡು ಮಾಡುತ್ತಾರೆ. ಸುಮಾರು ನಲವತ್ತು-ಐವತ್ತರಷ್ಟು ಕಣಿಕೆಗಳು ಸಿದ್ಧವಾದ ಮೇಲೆ ಕಬ್ಬಿಣದ ಕಡ್ಡಿಗಳು ಜೋಡಿಸಲ್ಪಟ್ಟ ಏಳಿಯಂತಹ ರಚನೆಯಲ್ಲಿ ಇವುಗಳನ್ನು ಪೋಣಿಸಲಾಗುತ್ತದೆ. ಅನಂತರ ಅವುಗಳ ನೂಲುಗಳನ್ನು ಒಟ್ಟಾಗಿ ಹಿಡಿದು ಎತ್ತರವಾದ ಚೌಕಾಕಾರದ ಮರದ ಚಕ್ರಕ್ಕೆ ಒಂದು ಕೈಯಿಂದ ಚಕ್ರವನ್ನು ತಿರುಗಿಸುತ್ತಾ, ಇನ್ನೊಂದು ಕೈಯಿಂದ ನೂಲನ್ನು ಚಕ್ರಕ್ಕೆ ಸುತ್ತುತ್ತಾ ಉದ್ದನೆಯ ಹಾಸು ತಯಾರಿಸಲಾಗುತ್ತದೆ. ಈ ಕೆಲಸವನ್ನೂ ಹೆಚ್ಚಾಗಿ ಹೆಂಗಸರೇ ಮಾಡುತ್ತಾರೆ.

ಹೀಗೆ ತಯಾರಿಸಿದ ಹಾಸನ್ನು ಮಗ್ಗಕ್ಕೆ ಏರಿಸಬೇಕಾದರೆ ಕನಿಷ್ಟ ಆರು ಮಂದಿ ಬೇಕೇ ಬೇಕು. ಹಾಸಿನ ನೂಲುಗಳನ್ನು ಕ್ರಮವಾಗಿ ವಿಭಾಗಿಸುವ ಕೋಂಬ್ (ಬಾಚಣಿಗೆ) ಹಿಡಿಯಲು ಈರ್ವರು. ನೂಲು ಎಳೆದು ಹಿಡಿಯಲು ಇಬ್ಬರು ಮಕ್ಕಳು. ಮರದ ರೋಲಿಗೆ ಹಾಸು ಸುತ್ತಲು ಈರ್ವರು ಗಂಡಸರು. ಇದಾದ ನಂತರ ಹಾಸು ಕಟ್ಟುವ ಕೆಲಸ. ರೆಕ್ಕೆ(ಅಣಿ)ಗಳು ಹಾಗೂ ಅಚ್ಚಿನ ಮೂಲಕ ಒಂದೊಂದೇ ನೂಲನ್ನು ಎಳೆದು ಕಟ್ಟುವ ಈ ಕೆಲಸಕ್ಕೆ ಸೂಕ್ಷ್ಮ ಕಣ್ಣುಗಳ ಮನೆಯ ಯುವಕರೇ ಬೇಕು. ಮತ್ತೆ ಹೆಂಗಸರಿಗೆ ಅಂಟು ಹಾಗೂ ಗಂಜಿ ತಯಾರಿಸುವ, ನೂಲು ತೊಳೆಯುವ, ಕಂಡಿಕೆ ಸುತ್ತಿ ಕೊಡುವ ಮಾಮೂಲಿ ಕೆಲಸ; ಮಕ್ಕಳು ಅಂಚು ಕತ್ತರಿಸುವ, ಅಂಚು ಕಟ್ಟುವ, ಬಟ್ಟೆಯನ್ನು ಎಳೆದು ನೀಟಾಗಿ ಮಡಿಸಿಡುವ ಕೆಲಸದಲ್ಲಿ ಸಹಕರಿಸುತ್ತಾರೆ.

ಇತ್ತೀಚೆಗೆ ಕೈಮಗ್ಗದ ಸ್ಥಾನವನ್ನು ವಿದ್ಯುತ್ ಚಾಲಿತ ಯಾಂತ್ರಿಕ ಮಗ್ಗಗಳು ಆಕ್ರಮಿಸಿಕೊಳ್ಳುತ್ತಿವೆ. ಇದನ್ನು ನೇಕಾರಿಕೆಯ ಮೂರನೆಯ ಹಾಗೂ ಆಧುನಿಕ ಹಂತ ಎಂದು ಕರೆಯಬಹುದು. ಇದರ ಅವಿಷ್ಕಾರ ಸಾವಿರ ಸಾವಿರ ವರ್ಷಗಳಿಂದ ಸಾಗಿಬಂದ ಮಾನವ ಶಕ್ತಿಯ ಕೈಚಳಕದ ಕಲಾವಂತಿಕೆಯನ್ನು ಹಿಂದೆ ತಳ್ಳಿತು. ಸಾಮಾನ್ಯವಾಗಿ ನೇಯ್ಗೆಯ ಕೆಲಸದಲ್ಲಿಯ ಪ್ರಾಥಮಿಕ ಮೂರು ಅಂಶಗಳು ಎಂದರೆ ಒಂದು, ಹಾಸನ್ನು ಸಮಪಾಲಾಗಿ ಕತ್ತರಿ ಬೀಳುವಂತೆ ಮಾಡುವುದು; ಎರಡು, ಹೊಕ್ಕನ್ನು ಒಂದು ಅಂಚಿನಿಂದ ಇನ್ನೊಂದು ಅಂಚಿನವರೆಗೆ ಲಾಳಿಯ ಮುಖಾಂತರ ಹೊಂದಿಸುವುದು; ಮೂರು, ಹೊಕ್ಕನ್ನು ನೇಯ್ಗೆ ಅನುಗುಣವಾಗಿ ಒತ್ತುವುದು; ಈ ಮೂರನ್ನೂ ವಿಕಸಮಯದಲ್ಲಿ ನೇಕಾರನೇ ಮಾಡಬೇಕು. ಇದೆಲ್ಲದಕ್ಕೂ ನೇಕಾರನು ತನ್ನ ಶಕ್ತಿ ಹಾಗೂ ಯುಕ್ತಿಯನ್ನು ಬಳಸಬೇಕಾಗುತ್ತಿತ್ತು. ಇದರಿಂದಲಾಗಿ ಕೈಮಗ್ಗದಲ್ಲಿಯ ಉತ್ಪಾದನೆ ಕಡಿಮೆಯಾದುದನ್ನು ಮನಗಂಡು ಕೈಯಲ್ಲಿ ಮಾಡುತ್ತಿರುವ ಎಲ್ಲಾ ಕೆಲಸವನ್ನು ವಿದ್ಯುತ್ ಚಾಲಿತ ಮಗ್ಗಗಳಲ್ಲಿ ಮಾಡಲು ಆರಂಭಿಸಿದರು. ಇದಕ್ಕೆ ಹೊಸ ತಾಂತ್ರಿಕತೆಯ ಅಳವಡಿಕೆಗಳಿಂದ ವಿಭಿನ್ನ ತರದ ಬಟ್ಟೆಗಳನ್ನು ತಯಾರಿಸಬಹುದು. ಇದರಿಂದ ಉತ್ಪಾದನೆಯೂ ಹೆಚ್ಚುತ್ತದೆ. ಇದಕ್ಕೆ ಮಾನವಶಕ್ತಿಗಿಂತಲೂ, ಯಾಂತ್ರಿಕ ಶಕ್ತಿಯೇ ಪ್ರಮುಖವಾಗುತ್ತದೆ. ಕಂಡಿಕೆ ಸುತ್ತುವ, ಹಾಸು ತಯಾರಿಸುವ ಕೆಲಸವೂ ಯಂತ್ರಗಳಿಂದಲೇ ನಡೆಯುತ್ತದೆ. ಅದಕ್ಕೆ ಸರಿಯಾಗಿ ನೇಕಾರನೂ ಭಾವನೆಗಳಿಲ್ಲದ ಯಂತ್ರವಾಗುತ್ತಿದ್ದಾನೆ. ಕೈಮಗ್ಗಗಳಲ್ಲಿದ್ದಷ್ಟು ಕೆಲಸಗಳು ಕುಟುಂಬದ ಸದಸ್ಯರಿಗೆ ದೊರೆಯದೆ ಕುಟುಂಬಗಳು ಒಡೆದುಹೋಗುತ್ತವೆ. ಇಂತಹ ಸಂದರ್ಭದಲ್ಲಿ ನೇಕಾರನ ಕುಟುಂಬದ ಪಾತ್ರವೇನು ಎಂಬುದರ ಬಗ್ಗೆ ಚಿಂತಿಸಲೇಬೇಕು. ನೇಕಾರಿಕೆ ಅಭಿವೃದ್ದಿಯಾಗಬೇಕಿದ್ದರೆ ಕುಟುಂಬವೂ ಆಧುನಿಕತೆಗೆ ಒಗ್ಗಿಕೊಳ್ಳಬೇಕು. ಸಾಂಪ್ರದಾಯಿಕ ನೇಯ್ಗೆ ಕಾರ್ಯ ಬಿಟ್ಟು, ಉತ್ಪಾದನೆ ಹೆಚ್ಚಿಸಲು ಅನುಕೂಲವಾಗುವಂತೆ ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕೈಮಗ್ಗ ನೇಕಾರಿಕೆಯಿಂದ ಲಾಭವಿಲ್ಲವೆಂದು ಭಾವಿಸಿದ ಮನೆಮಕ್ಕಳಿಗೆ ನೂತನ ತಂತ್ರಜ್ಞಾನದ ಬಗ್ಗೆ ಅರಿವು ಮೂಡುವಂತೆ ಮಾಡಿ, ನೂತನ Textile ತಂತ್ರ ಜ್ಞಾನಗಳಲ್ಲಿ ಪದವಿ ಪಡೆದುಕೊಳ್ಳುವಂತೆ ಪ್ರೋರಕ್ತಗತವಾಗಿ ಬಂದ ನೇಕಾರಿಕೆಯ ಸಹಜ ಪ್ರತಿಭೆಯೊಂದಿಗೆ, ನೂತನ ತಂತ್ರಜ್ಞಾನದ ಅರಿವೂ ಸೇರಿಕೊಂಡಾಗ ನೇಕಾರಿಕೆಯಲ್ಲಿ ಮುಂದಿನ ತಲೆಮಾರು ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಹಕಾರಿಯಾಗಬಹುದು. ಯುವಕರಿಗೆ ಈ ಉದ್ಯೋಗದಲ್ಲಿ ಆಕರ್ಷಣೆ ಉಂಟಾದರೆ ಮಾತ್ರ ಈ ಉದ್ಯೋಗ ಬಾಳೀ ಬದುಕುತ್ತದೆ; ಬೆಳೆಯುತ್ತದೆ. ಒಂದು ನಿಶ್ಚಿತ ಯೋಗ್ಯ ಜೀವನಾಧಾರವಾದ ವರಮಾನ; ಬಾಳಿನ ಸಂಜೆಯಲ್ಲಿ ನೆಮ್ಮದಿಯ ಜೀವನ ಇವು ನೇಕಾರಿಕೆಯಿಂದ ದೊರೆಯುತ್ತದೆ ಎಂದಾದರೆ, ಸಹಜವಾಗಿ ಯುವಪೀಳಿಗೆ ಈ ಕೈಗಾರಿಕೆಯ ಕಡೆಗೆ ಆಕರ್ಷಣೆ ಹೊಂದುತ್ತವೆ. ನೇಕಾರರ ಮಕ್ಕಳು ಈ ವೃತ್ತಿಯನ್ನು ಕೀಳಾಗ ಕಾಣಬಾರದು. ಇತರ ಶಿಕ್ಷಣದೊಂದಿಗೆ ಇದನ್ನೂ ಕಲಿತರೆ ಉಪವೃತ್ತಿಯಾಗಿ ಹೆಚ್ಚಿನ ಸಂಪಾದನೆ ಮಾಡಬಹುದು. ಕೂಡಿ ಬಾಳುವ ಕೂಡಿ ದುಡಿಯುವ ಸುಖವನ್ನೂ ಅನುಭವಿಸಬಹುದು. ಆಕರ್ಷಕ ಬಟ್ಟೆ ತಯಾರಿಕೆಯ ತರಬೇತಿ ನೀಡುವ ವ್ಯವಸ್ಥೆ ಮಾಡಿದಲ್ಲಿ ಯುವಕರು ಇದರೆಡೆ ಆಕರ್ಷಿತರಾಗುತ್ತಾರೆ. ಹೆಣ್ಣು ಮಕ್ಕಳಿಗೆ ಸಹಜವಾಗಿಯೇ ವಸ್ತ್ರವಿನ್ಯಾಸದ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಆಧುನಿಕರ ಮನೋಭಾವ ಹಾಗೂ ಆಸಕ್ತಿಗನುಗುಣವಾಗಿ ನೂತನ ವಿನ್ಯಾಸವನ್ನು ಅವರು ಇನ್ನಷ್ಟು ಅರಿತುಕೊಳ್ಳಲು Fashion Design, Fabric Technology, Garment makingನಂತಹ ವಿಷಯಗಳಲ್ಲಿ ಅವರು ಪದವಿ ಪಡೆದುಕೊಂಡು ನೇಕಾರಿಕೆಯ ಉದ್ಧಾರಕ್ಕೆ ಸಹಕರಿಸಬಹುದು. ಬಟ್ಟೆ ಮೈಮುಚ್ಚಿದರೆ ಸಾಲದು! ಮನಮೆಚ್ಚಬೇಕು. ಹೊಸ ಮಾದರಿಯ ಬಟ್ಟೆಗಳಿಗೆ ಜನಾಕರ್ಷಣೆ ಇದ್ದೇ ಇದೆ. ನೇಕಾರರ ಮಕ್ಕಳೇ ನೇಕಾರಿಕೆಗೂ ನೇಕಾರರಿಗೂ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವುದರ ಮೂಲಕ ಸಮುದಾಯದ ಅಭಿವೃದ್ದಿಗೆ ಕೊಡುಗೆಗಳನ್ನು ಸಲ್ಲಿಸಬಹುದು. ಇದರಿಂದ ಕುಟುಂಬದವರೆಲ್ಲರೂ ಸೇರಿ ಆಧುನಿಕ ತಂತ್ರಜ್ಞಾನದೊಂದಿಗೆ ಯಾಂತ್ರೀಕೃತ ವಿದ್ಯುತ್ ಮಗ್ಗಗಳನ್ನು ಅಳವಡಿಸಿಕೊಂಡು, ಕರಕುಶಲತೆಯ ವಿನ್ಯಾಸ ವೈಭವದೊಂದಿಗೆ ಯಾವುದೇ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿಯುವ ಛಾತಿಯನ್ನು ನೇಕಾರಿಕೆಯ ಮೂಲಕ ನೇಕಾರರು ತೋರಬಹುದು. ಕೈಮಗ್ಗ ಉದ್ಯಮ ಪುನರುತ್ಥಾನಗೊಂಡರೆ, ನಿರುದ್ಯೋಗ ಸಮಸ್ಯೆ ದೂರವಾಗುತ್ತದೆ. `ವಿದ್ಯೆ ಕಲಿತು ಉದ್ಯೋಗವಿಲ್ಲ’ ಎಂದು ನೇಕಾರರ ಮಕ್ಕಳು ಕುಳಿತುಕೊಳ್ಳುವ ಅಗತ್ಯವಿಲ್ಲ. ಬಟ್ಟೆಯ ಬೇಡಿಕೆ ಯಾವತ್ತೂ ಕಡಿಮೆಯಾಗುವುದಿಲ್ಲ. ನೇಯ್ಗೆಯ ಕುರಿತಾದ ಶಿಕ್ಷಣ ಸಂಸ್ಥೆಗಳಿಗೆ ಒಬ್ಬಬ್ಬ ನೇಕಾರನ ಮನೆಯಿಂದ ಕನಿಷ್ಠ ಒಬ್ಬರು ಸೇರಿಕೊಂಡು ಸ್ವತಃ ನೇಕಾರಿಕೆಯಲ್ಲಿ ತಜ್ಞರು ಎನ್ನಿಸಿಕೊಳ್ಳಬೇಕು. ಪ್ರತೀ ಜಿಲ್ಲೆಯ ಎಲ್ಲ ನೇಕಾರರ ಸಹಕಾರಿ ಸಂಘಗಳು ಒಟ್ಟಾಗಿಯಾದರೂ ಒಬ್ಬರು ತಜ್ಞರನ್ನು ನೇಮಿಸಿಕೊಂಡು ಎಲ್ಲ ಸುಧಾರಿತ ಮಗ್ಗಗಳನ್ನು ನೇಯ್ಗೆ ಮಾದರಿಗಳನ್ನು ಅಳವಡಿಸುವುದು ಒಳಿತು.

ವಿಜ್ಞಾನ ಹಾಗೂ ತಂತ್ರಜ್ಞಾನಗಳು ಬೆಳೆಯುತ್ತಾ ಮಾನವನ ಜೀವನದ ದೃಷ್ಟಿ ಬದಲಾಗುತ್ತದೆ ನಿಜ. ಆದರೆ ಅದನ್ನು ಮೀರಿದ ಪ್ರೀತಿ, ಪ್ರೇಮಗಳು ನಿರಂತರವಾಗಿ ಆತನೊಂದಿಗೆ ಇದ್ದು ಮಾನವ ಮಾನವನನ್ನು ಒಂದಲ್ಲ ಒಂದು ರೀತಿಯಿಂದ ಬಂಧಿಸುತ್ತದೆ. ಕೈಮಗ್ಗಗಳು ಇನ್ನೂ ಉಸಿರಾಡುತ್ತಿರುವ ಇಂದಿನ ಕಾಲದಲ್ಲಿ ಜೀವನಾಸಕ್ತಿಯನ್ನು ಕಳೆದುಕೊಂಡು ಕೈಮಗ್ಗದ ನೇಕಾರನ ಮನಸ್ಸು ಛಿದ್ರವಾದರೆ ಆತ ತಯಾರಿಸುವ ಬಟ್ಟೆಯೂ ಛಿದ್ರವೇ. ಮನಸ್ಸು ಹಾಗೂ ದೇಹವನ್ನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕಾದ ನೇಕಾರಿಕೆ ಏಕ ಸಮಯದಲ್ಲಿ ಎರಡಕ್ಕೂ ಆಯಾಸವನ್ನುಂಟು ಮಾಡುವಂತಹದು. ಆತನಿಗೆ ಕುಟುಂಬದಿಂದ ಮಾನಸಿಕ ಹಾಗೂ ದೈಹಿಕ ಬೆಂಬಲ ಬೇಕೇ ಬೇಕು. ತಾನು ನೇಯುವ ಬಟ್ಟೆಯಲ್ಲಿ ಹಾಸು-ಹೊಕ್ಕನ್ನು ಪರಸ್ಪರ ಬೆಸೆಯುವಂತೆ ತನ್ನ ಜೀವನದಲ್ಲೂ ಕುಟುಂಬದವರೊಂದಿಗೂ, ಸುತ್ತಲಿನವರೊಂದಿಗೂ ಹಾಸು ಹೊಕ್ಕಾಗಿ ಬೆರೆತುಕೊಂಡು ಬಾಳಲು ನೇಕಾರನಿಗೆ ಸಾಧ್ಯವಾಗುತ್ತದೆ. ಹೀಗೆ ಒಂದು ಗೂಡಿಕೊಂಡು ವರ್ಣಮಯ ಬದುಕನ್ನು ಬದುಕುವ ನೇಕಾರರ ಬೀದಿಗಳು ಸಮೂಹ ಜೀವನದ ಪಾಠವನ್ನು ಜಗತ್ತಿಗೆ ಸಾರಿ ಹೇಳಿ, ಕಳೆದುಹೋಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ಮರಳಿ ತರಲು ಪ್ರಯತ್ನಿಸಬಹುದು. ತಲೆಮಾರುಗಳಿಂದ ತಮ್ಮನ್ನು ಕಾಡುತ್ತಿರುವ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸಿ, ಸಮಾಧಾನವನ್ನು ಕಂಡುಕೊಳ್ಳಬಹುದು.

ನವೀನಯುಗದಲ್ಲಿ ಮನುಷ್ಯರನ್ನು ಪರಸ್ಪರ ಬಂಧಿಸುವ ಕೊಂಡಿ ಇಂಟರ್ನೆಟ್ ಜಾಲಗಳು ಮಾತ್ರವಾಗಿರುವಾಗ, ಅಣು ಕುಟುಂಬಗಳಾಗಿ ಕುಟುಂಬಗಳು ವಿಘಟಿತವಾಗುತ್ತಿರುವ ಇಂದಿನ ಯುಗದಲ್ಲಿ ವರ್ಷಕ್ಕೊಮ್ಮೆಯಾದರೂ ಕುಟುಂಬಗಳು ಸೇರಿಕೊಳ್ಳುವ ಯೋಗವಿಲ್ಲದೇ ಇದ್ದಾಗ, ವೃತ್ತಿಯ ಹಿನ್ನೆಲೆಯಿಂದ ಪರಸ್ಪರ ಸೇರಲೇಬೇಕಾದ ಅನಿವಾರ್ಯತೆಯನ್ನು ಒದಗಿಸುವ ನೇಕಾರಿಕೆ ಭಾರತೀಯ ಕೂಡು ಕುಟುಂಬದ ಕೊನೆಯ ಹತ್ತು ಅಮೂಲ್ಯವಾದ ಕೊಂಡಿಯೆನ್ನಬೇಕು. ಈ ಕೊಂಡಿ ಕಳಚದಂತೆ ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಂದು ನೇಕಾರ ಕುಟುಂಬಕ್ಕೂ ಇದೆ.

* * *