ಸಜ್ಜಕದ ಊಟ ನಾಜೂಕದ ನಾರೀಗೆ

ಮೈನೆರೆದಂದಿನಿಂದ ಒಂದು ತಿಂಗಳವರೆಗೆ ಯುವತಿಗೆ ಪೌಷ್ಠಿಕ ಆಹಾರವನ್ನು ನೀಡುತ್ತಾರೆ. ಅದರಲ್ಲಿಯೂ ಗೋಧಿಯಿಂದ ತಯಾರಿಸಿದ ಸಜ್ಜಕದ ಊಟ ಆಕೆಗೆ ಹಿತವಾಗಿರುತ್ತದೆ. ರಕ್ತಸ್ರಾವದಿಂದ ನಿಶ್ಯಕ್ತಳಾದ ಹುಡುಗಿಗೆ ಗೋಧಿ ಸಜ್ಜಕದಲ್ಲಿ ಒಣಶುಂಠಿ, ಗಸಗಸೆ, ಕೊಬ್ಬರಿ ಮತ್ತು ಅಧಿಕ ಪ್ರಮಾಣದ ತುಪ್ಪವನ್ನು ಬೆರೆಸಿದ ಆಹಾರ ನೀಡುತ್ತಾರೆ. ಇದರಿಂದ ಆಕೆಯ ದೇಹ ಬಲಿಷ್ಠಗೊಳ್ಳುತ್ತದೆ.

ಮೈನೆರೆದ ಹುಡುಗಿಗೆ ಓಣಿಯ ಮುತ್ತೈದೆಯರು, ಗೆಳತಿಯರು ದಿನಕ್ಕೊಂದು ಬಗೆಯ ಸುಜ್ಜಕ, ಕೊಬ್ಬರಿಬೆಲ್ಲ ಹಣ್ಣುಗಳು ಮುಂತಾದವನ್ನು ತಂದು ಕೊಡುತ್ತಾರೆ. ಇಲ್ಲೆಲ್ಲಾ ಹೆಣ್ತನ ತಾಯ್ತನದ ಪ್ರೀತಿವಾತ್ಸಲ್ಯಗಳು ವ್ಯಕ್ತಗೊಳ್ಳುತ್ತವೆ. ಹೀಗೆ ಊಟ ತಂದವರು ಒಂದಲ್ಲ ಒಂದು ಬಗೆಯಲ್ಲಿ ಆಕೆಗೆ ಸಲಹೆ ಮಾರ್ಗದರ್ಶನ ಮಾಡಿ ಧೈರ್ಯ ತುಂಬುತ್ತಾರೆ. ಮೈನೆರೆದವರ ಜಗತ್ತೇ ಒಂದು ರೋಚಕವಾದದ್ದು. ಅಲ್ಲೆಲ್ಲಾ ಮಹಿಳೆಯರು ತಮ್ಮ ದೈಹಿಕ ಮನೋಧರ್ಮದ ಪಾಠ ಕಲಿಯುತ್ತಾರೆ. ಸಮಾಜದಲ್ಲಿ ಬದುಕುವ ಛಲ, ರೀತಿಗಳನ್ನು ಕಲಿಯುತ್ತಾರೆ.

ಮುಟ್ಟುನೀರು ಎರೆಯೇ ಅತ್ತೆಮ್ಮ

ಮೈನೆರೆದ ಹುಡುಗಿಯನ್ನು ಒಂಭತ್ತು ಇಲ್ಲವೇ ಹನ್ನೊಂದು ದಿನದಲ್ಲಿ ಎಬ್ಬಿಸುವ ಕಾರ್ಯ ನಡೆಸುತ್ತಾರೆ. ಹುಡುಗಿಯ ತಂದೆಯ ತಂಗಿ ಅಥವಾ ಅಕ್ಕ ನೀರು ಎರೆಯಬೇಕು. ಅರಿಶಿಣ ಎಣ್ಣೆಯನ್ನು ಹಚ್ಚಿ, ಆರತಿಯನ್ನು ಎತ್ತಿ ನಂತರ ಅತ್ತೆಯಾದವಳು  ನೀರು ಎರೆಯುತ್ತಾಳೆ. ಈ ಸಂದರ್ಭದಲ್ಲಿ ಹಿರಿಯ ಮುದುಕಿಯರು ಮೈ ನೆರೆತಕ್ಕೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ.  ಹುಡುಗಿಯನ್ನು ಐದು ಮಂದಿ ಮುತ್ತೈದೆಯರು ಕರೆತಂದು ಕೈಯಲ್ಲಿ ನೀರು ತುಂಬಿದ ಸಣ್ಣ ತಾಮ್ರದ ತಂಬಿಗೆ ಕೊಡುತ್ತಾರೆ. ಅದರೊಂದಿಗೆ ಅವಳು ಮಣೆಯ ಮೇಲೆ ಕೂರುತ್ತಾಳೆ. ಬಂಧು ಬಳಗವೆಲ್ಲಾ ಆಕೆಗೆ ಕಾಣಿಕೆ ಹೊಸಬಟ್ಟೆ ನೀಡುತ್ತಾರೆ. ಈಚೆಗೆ ಆಧುನಿಕತೆಯಿಂದಾಗಿ ಒಂದು ದೊಡ್ಡ ಕಾರ್ಯಕ್ರಮವನ್ನೇ ಮಾಡುತ್ತಾರೆ. ಮುಟ್ಟುನೀರು ಎರೆದಾಕೆಗೆ ಹೊಸಬಟ್ಟೆಯನ್ನು ಕೊಡುವ ರೂಢಿಯಿದೆ.

ಒಂಭತ್ತನೇ ದಿನ ಅಗಸರ ಮಹಿಳೆಯು ಬಂದು ಮುಟ್ಟೆರೆದ ಬಟ್ಟೆಯನ್ನು ತಾನೇ ತೆಗೆದುಕೊಳ್ಳುತ್ತಾಳೆ ಮತ್ತು ಎಂಟು ದಿನ ಋತುಮತಿಗೆ ನೀಡಿದ ಎಲೆ ಅಡಿಕೆ ಅಕ್ಕಿಗಳನ್ನೆಲ್ಲಾ ತೆಗೆದುಕೊಂಡು ’ಮುಟ್ಟಿನ ಕಾಣಿಕೆ’ ಪಡೆಯುತ್ತಾಳೆ.  ಹೀಗೆ ನೇಕಾರ ಸಮುದಾಯದಲ್ಲಿ ಮೆತ್ತನಾ ಬಾಲೀನ ಮುತ್ತೈದೇರು ಎಬ್ಬಿಸುವ ಮೂಲಕ ಮೈ ನೆರೆದ ಕಾರ‍್ಯಕ್ರಮ ಮುಕ್ತಾಯವಾಗುತ್ತದೆ.

ಮೂಗುತಿಯನಿಕ್ಕಿ ಮದುವೆಗೆ ಅಣಿಮಾಡಿ

ಋತುಮತಿಯಾದ ಕೆಲವೇ ತಿಂಗಳುಗಳಲ್ಲಿ ಮೂಗುಚುಚ್ಚುವ ಕಾರ್ಯ ನಡೆಯುತ್ತದೆ. ಮದುವೆಯಾಗುವ ಯುವತಿಯರಿಗೆ  ನೇಕಾರ ಸಮುದಾಯದಲ್ಲಿ ಮೂಗುತಿಯನ್ನು ಹಾಕಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲವಾದರೆ ಆಕೆಯನ್ನು ’ಮೂಳ’ ಎನ್ನುತ್ತಾರೆ. ಪ್ರಶಸ್ತ ದಿನ, ಸಮಯವನ್ನು ಪಂಚಾಂಗದಿಂದ ನೋಡಿ, ಅಕ್ಕಸಾಲಿಗನಿಗೆ ದಕ್ಷಿಣೆ ಮುಂತಾದ ಕಾಣಿಕೆ ಕೊಟ್ಟು ಮೂಗುತಿಯಿಟ್ಟುಕೊಂಡರೆ, ಬಹುತೇಕ ಆಕೆಯು ಮದುವೆಗೆ ಸಿದ್ಧವಾದಂತೆಯೇ. ಕೆಲವರು ಮದುವೆಯ ಸಂದರ್ಭದಲ್ಲಿಯೂ ನತ್ತು ಹಾಕುವುದು ಪದ್ಧತಿ. ಈಚೆಗೆ ಈ ಕಾರ‍್ಯದಿಂದ ವಿನಾಯಿತಿಯನ್ನು ಮಹಿಳೆ ಪಡೆಯುತ್ತಿದ್ದಾಳೆ.

ಅಸುನೀಗಿದರೂ ಹಚ್ಚೆ ಅಳಸಲ್ಲ:

ಗ್ರಾಮೀಣ ಪರಿಸರದ ನೇಕಾರ ಕೃಷಿಕರು ಮತ್ತು ಕೈಮಗ್ಗ ನೇಯುವ ವೃತ್ತಿ ಅವಲಂಬಿಸಿದ ಮಹಿಳೆಯರು ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ಹಣೆಯ ಮೇಲೆ ಒಂದು ಬಟ್ಟು, ಮುಂಗೈ ತೋರುಬೆರಳು ಮತ್ತು ಹೆಬ್ಬೆರಳಿನ ನಡುವಿನ ಮೇಲ್ಭಾಗದಲ್ಲಿ ಮೂರು ಬಟ್ಟು (ಆಕಾರದಲ್ಲಿ) ಮತ್ತು ಕೈಯಲ್ಲಿ ಸಾಮಾನ್ಯವಾಗಿ ನಾಗರಹಾವು ಚೌಡೇಶ್ವರಿ ದೇವಿಯ ಚಿತ್ರ, ಸಣ್ಣ ಸಣ್ಣ ಚೇಳುಗಳ ಚಿತ್ರ, ಚಿತ್ತ ಚಿತ್ತಾರದ ರಂಗೋಲಿ ಎರಡೂ ಕೈಗಳಲ್ಲಿ ಹಾಕಿಸಿಕೊಳ್ಳುವ ರೂಢಿಯಿದೆ. ಆಧುನಿಕರು ಫ್ಯಾಶನ್ ಗಾಗಿ ಹಚ್ಚೆ ಹಾಕಿಸಿಕೊಳ್ಳುವುದುಂಟು. ಏನೇ ರೋಗಬಂದರೂ ಹಚ್ಚೆ ಅಳಸದು ಅದು ಶಾಶ್ವತ ಎಂಬುದು ಮಹಿಳೆಯರಿಗೆ ಖುಷಿ. ನಮ್ಮ ಪ್ರಾಚೀನ ಕಾಲದ ಮಹಿಳೆಯರ ಶೃಂಗಾರದ ಪ್ರತಿನಿಧಿಯಾಗಿಯೂ ಹಚ್ಚೆ ಇದೆಯೆನ್ನಬಹುದು.

ಇತರೆ ಹಬ್ಬಾಚರಣೆಗಳು

ನೇಕಾರ ಸಮುದಾಯವು ಸಾಮಾನ್ಯವಾಗಿ ಎಲ್ಲಾ ಹಬ್ಬಗಳನ್ನು ವಿಶೇಷವಾಗಿಯೇ ಆಚರಿಸುತ್ತದೆ. ಮಹಿಳೆಯರೇ ಹೆಚ್ಚು ಪಾಲ್ಗೊಳ್ಳುವ ಹಬ್ಬಾಚರಣೆಗಳು ಕೆಲವೇ ಇವೆ. ಈಕೆಯೇ ಪ್ರಧಾನ ಪಾತ್ರವಹಿಸಿ ತನ್ನ ಜೀವನದ ಕಷ್ಟಕಾರ್ಪಣ್ಯಗಳನ್ನು ಬದಿಗಿಟ್ಟು ಸಂತೋಷದಿಂದ ಕಾಲಕಳೆಯಲು ಮುಖ್ಯವಾಗಿವೆ.

ಕೊಂತಿರೊಟ್ಟಿ

ಬಳ್ಳಾರಿ-ರಾಯಚೂರು, ಚಿತ್ರದುರ್ಗದ ಕೆಲವು ಪ್ರದೇಶಗಳಲ್ಲಿ ಗೌರಿಹಬ್ಬ ವಿಶೇಷವಾಗಿ ಕೊಂತಿರೊಟ್ಟಿಯ ಮೂಲಕ ನಡೆಯುತ್ತದೆ. ಗೌರಿಹುಣ್ಣಿಮೆಯಂದು ಗಜಗೌರಿಕೆ ಸಂಕ್ರಾಂತಿ ಬೆಳಗುತ್ತಾರೆ. ಈ ಹಬ್ಬ ವಿಜೃಂಭಣೆಯಿಂದಲೇ ನಡೆಯುತ್ತದೆ. ಇದಾದ ಐದು ದಿನಗಳಿಗೆ ಕೊಂತಿರೊಟ್ಟಿಯ ಹಬ್ಬ ಮಾಡುತ್ತಾರೆ. ಈ ಎರಡೂ ಹಬ್ಬಗಳಿಗೆ ಮಹಾಭಾರತದ ಹಿನ್ನೆಲೆಯಿದೆ. ಗಾಂಧಾರಿಯು ಶ್ರೀಮಂತಳಾದ್ದರಿಂದ ಆಕೆ ರೇಶಿಮೆಯುಟ್ಟು, ಬಂಗಾರದ ಆಭರಣಗಳನ್ನೆಲ್ಲಾ ಧರಿಸಿ, ತಮ್ಮ ಸೋದರನನ್ನು ಪಟಾಕಿ ಹಾರಿಸಲು ಕರೆಸಿಕೊಂಡು ಅತ್ಯಂತ ವೈಭವದಿಂದ ಗಜಗೌರಿ ಪೂಜೆಯನ್ನು ಮಾಡಲು ಮೆರವಣಿಗೆಯಲ್ಲಿ ಹೋದಳಂತೆ. ಕುಂತಿಯು ಬಡವಳಾದ್ದರಿಂದ ಈ ವೈಭವದ ಪೂಜೆ ಸಾಧ್ಯವಾಗದೇ, ಬಡವರನ್ನೆಲ್ಲಾ ಕರೆದು ತಾನು ವಿಶೇಷ ಪೂಜೆ ಮಾಡಿ ಎಲ್ಲರೊಂದಿಗೆ ವಿವಿಧ ಅಡುಗೆಯನ್ನು ಮಾಡಿ ಊಟ ಮಾಡಿದಳಂತೆ. ಈ ಇಬ್ಬರು ಹೆಣ್ಣುಮಕ್ಕಳ ಪ್ರಾತಿನಿಧಿಕ ಹಬ್ಬಗಳಾಗಿ ಇಂದು ಬಹುತೇಕ ಎಲ್ಲ ಸಮುದಾಯಗಳಲ್ಲಿ ರೂಢಿಯಿದೆ. ಅದರಂತೆ ನೇಕಾರ ಮಹಿಳೆಯರೂ ಆಚರಿಸುವರು.

ಗೌರಿಯ ಹಬ್ಬ ಹೆಂಗಸರಿಗೆ ವಿಶೇಷವಾದದ್ದು. ಸಂತೋಷದ, ಸಂಭ್ರಮದ ಕ್ಷಣಗಳಲ್ಲಿ ಕೆಲವು ಕಾಲವಾದರೂ ಲೀನವಾಗುತ್ತಾಳೆ. ಕೊಂತಿರೊಟ್ಟಿಯು ಅತ್ಯಂತ ವಿಶೇಷವಾದ ಹೆಣ್ಣು ಮಕ್ಕಳ ಆಚರಣೆ. ಮನೆಯ ಮಾಳಿಗೆಯ ಮೇಲೆ ಗೋವಿನ ಸೆಗಣಿಯ ನೀರನ್ನು ವೃತ್ತಾಕಾರದಲ್ಲಿ ಹಾಕಿ, ಅದರ ಸುತ್ತಲೂ ಕೆಮ್ಮಣ್ಣಿನ ಗೋಳವನ್ನು ಬರೆಯುತ್ತಾರೆ. ಚಿತ್ತಾರದ ರಂಗೋಲಿಯನ್ನು ಹಾಕುತ್ತಾರೆ. ಕೆರೆಯಿಂದ ತಂದ ಕೆಸರಿನಿಂದ ಇಂಚು ಅಗಲದ ಎರಡು ಉದ್ದನೆಯ ಮೂರ್ತಿಯನ್ನು ಮಾಡಿ (ಆಕಾರ) ಸಂಜೆ ಐದುಗಂಟೆಗೆ ವಿಧವಿಧವಾದ ಹೂ, ಪತ್ರೆಯನ್ನಿಟ್ಟು ಪೂಜಿಸುತ್ತಾರೆ. ಎಳ್ಳು ಹಚ್ಚಿದ ಸಜ್ಜೆಯ ರೊಟ್ಟಿಯಲ್ಲಿ ಬೆಲ್ಲ, ತುಪ್ಪವನ್ನಿಟ್ಟು ನೈವೇದ್ಯ ಮಾಡಿ ಧೂಪವನ್ನು ಹಾಕುತ್ತಾರೆ. ನಂತರ ಕೊಂತಿ ರೊಟ್ಟಿ ಊಟ ಮನೆಯವರೆಲ್ಲ ಸೇರಿ ಮಾಳಿಗೆಯ ಮೇಲೆ ವಿಧವಿಧದ ಅಡುಗೆಯನ್ನು ಮಾಡಿ ತಿನ್ನುವುದೇ ಒಂದು ವಿಶೇಷ. ಇಡೀ ಊರಿಗೆ ಊರೇ ಮಾಳಿಗೆಯ ಮೇಲೆ ಇರುತ್ತದೆ. ನಗರ ಪ್ರದೇಶಗಳಲ್ಲಿ ಈ ಹಬ್ಬವಿಲ್ಲ. ಹೆಂಗಳೆಯರು ತಮ್ಮ ಅಡುಗೆಯ ಕೈಚಳಕ ಇಲ್ಲಿ ತೋರಿಸುತ್ತಾರೆ.

ನೇಕಾರ ಸಮುದಾಯವು ಅದರಲ್ಲಿಯೂ ಮಹಿಳೆಯು ನಾಗರಪಂಚಮಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾಳೆ. ತವರುಮನೆಗೆ ಹೋಗಿ ಪಂಚಮಿ ಆಚರಿಸಿ ನಾಗಾರಾಧನೆ ಮಾಡುವ ರೂಢಿಯಿದೆ. ಅದರಂತೆ ಮಹಾನವಮಿಯು ಈಕೆಗೆ ವಿಶೇಷವಾದ ಹಬ್ಬ, ನವರಾತ್ರಿಯ ಸಂದರ್ಭದಲ್ಲಿ ದಿನವೂ ತನ್ನ ಬೇಡಿಕೆಗಳ ಪೂರೈಕೆಗಾಗಿ ಬೆಳಗಿನ ಜಾವ ರಹಸ್ಯವಾಗಿ ಬನ್ನಿಯ ಮರವನ್ನು  ದುರ್ಗೆಯ ಹೆಸರಲ್ಲಿ ಪೂಜಿಸುವುದುಂಟು. ಮಕ್ಕಳು ಇಲ್ಲದ ಬಂಜೆಯು ಮಕ್ಕಳ ಭಾಗ್ಯಕ್ಕೆ ಈ ರಹಸ್ಯ ಪೂಜೆಯಲ್ಲಿ ತೊಡಗುತ್ತಾರೆ.

ಸಾವು

ನೇಕಾರ ಸಮುದಾಯದಲ್ಲಿ ಮಹಿಳೆಗೆ ಗಂಡ ತೀರಿಕೊಂಡಾಗ ಇತರೆ ಸಮುದಾಯಗಳಲ್ಲಿರುವಂತೆ ತವರುಮನೆಯವರು ಹೊಸ ಸೀರೆ, ಕುಪ್ಪಸವನ್ನು ತಂದು ಹೆಣದ ಮುಂದೆ ಆಕೆಗೆ ಉಡಿಸಿ ಹೂಮುಡಿಸಿ, ಕುಂಕುಮ ಹಚ್ಚಿ, ಉಡಿಯನ್ನು ತುಂಬುತ್ತಾರೆ. ಹಸಿರು ಬಳೆಯನ್ನು ತೊಡಿಸುತ್ತಾರೆ. ಇದು ಈಕೆಗೆ ಕೊನೆಯ ಮುತ್ತೈದೆ ಭಾಗ್ಯ, ಸುಡುಗಾಡಿನಲ್ಲಿ ಗಂಡನ ಹೆಣದ ಮೇಲೆ ಈಕೆಯ ತಾಳಿ, ಕುಂಕುಮ, ಹೂ, ಬಳೆಯನ್ನು ತೆಗೆದು ರಂಡೆಯನ್ನಾಗಿ ಮಾಡುವ ಕರಾಳ ಆಚರಣೆಯು ಇಂದಿಗೂ ರೂಢಿಯಿದೆ. ಹೆಣ್ಣು ಹುಟ್ಟುತ್ತಲೇ ಇವಾವುವು ಹೊಂದಿರುವುದಿಲ್ಲ.  ಆದರೂ ಸಮಾಜ ಮುತ್ತೈದೆ, ರಂಡೆ, ನಡತೆಗೆಟ್ಟವಳು ಎಂಬೆಲ್ಲಾ ಪಟ್ಟಗಳನ್ನು ಆಕೆಗೆ ಹೇರಿದೆ. ಈಚೆಗೆ ಶಿಕ್ಷಿತರಾದವರು ತಾಳಿಯನ್ನು ಮಾತ್ರ ತೆಗೆಯುವ ಹಂತಕ್ಕೆ ಬಂದಿದ್ದಾರೆ.

ಈ ಸಮುದಾಯದಲ್ಲಿ ಮದುವೆಯಾಗದೇ ಇರುವ ಯುವತಿಯು ತೀರಿಕೊಂಡರೆ ಆಕೆಯನ್ನು ಹಿಂದಿನ ಕಾಲದಲ್ಲಿ ಅಂಗಾತಮಲಗಿಸುವ ರೂಢಿಯಿತ್ತಂತೆ. ಹೀಗೆ ಮಲಗಿಸಿದರೆ ಆಕೆಯ ಕಾಮದ ಅತೃಪ್ತ ಭಾವನೆಗಳನ್ನು ತೀರಿಕೊಂಡ ಐದು ದಿನಗಳಲ್ಲಿ ಮನ್ಮಥನು ಬಂದು ತೀರಿಸುತ್ತಾನೆಂಬ ನಂಬಿಕೆ ಇದೆಯಂತೆ. ಒಂದು ವೇಳೆ ಮಹಿಳೆಯ ಹೆಣವನ್ನು ಸುಡುವುದಿದ್ದರೆ ಮಣ್ಣಿನ ಗೊಂಬೆಯೊಂದನ್ನು ಮಾಡಿ ಆಕೆಯ ಹೆಸರಿನಲ್ಲಿ ಅಂಗಾತ ಮಲಗಿಸುವ ಪದ್ದತಿಯಿತ್ತಂತೆ. ಈಗ ಇದಾವುದು ಇರುವುದಿಲ್ಲ.

ವೀರಶೈವ ನೇಕಾರ ಸಮುದಾಯ ಹೆಣವನ್ನು ಕುಳ್ಳಿರಿಸಿ ಸಮಾಧಿ ಮಾಡುತ್ತಾರೆ ಮತ್ತು ಪುರುಷನಂತೆಯೇ ಈಕೆಗೆ ಸಮಾನವಾದ ಮರಣೋತ್ತರ ವಿಧಿಗಳನ್ನು  ನಡೆಸುತ್ತಾರೆ. ಜಂಗಮನು ಬಂದು ತನ್ನ ಕಾಲಿನಿಂದ ತಲೆಯ ಮೇಲೆ ಒತ್ತಿ, ಲಿಂಗವನ್ನು ತೆಗೆದುಕೊಳ್ಳುತ್ತಾನೆ. ತರುವಾಯ ಆಕೆಯ ಕೈಯಲ್ಲಿ ಮತ್ತೊಂದು ಲಿಂಗಾಕೃತಿಯನ್ನು ಇಟ್ಟು ಮೋಕ್ಷ ಕೊಡಿಸುತ್ತಾನೆ. ವೈದಿಕ ಅನುಯಾಯಿಗಳಾದ ದೇವಾಂಗ ಮುಂತಾದ ನೇಕಾರರಲ್ಲಿ ಮಹಿಳೆಗೆ ಮರಣೋತ್ತರ ವಿಧಿಯು ಪುರುಷನಂತೆ ಇರುವುದಿಲ್ಲ.

ಗಂಡನಿರುವಾಗಲೇ ಹೆಂಡತಿಯು ಮರಣ ಹೊಂದಿದರೆ ’ಮುತ್ತೈದೆ ಮರಣ ಮಹಾಭಾಗ್ಯ’ ವೆಂದು ಈ ಸಮುದಾಯ ನಂಬುತ್ತದೆ. ಗಂಡನಿಗೆ ಯಾವುದೇ ರಂಡೆತನದಂಥ ವಿಧಿಯು ಇರುವುದಿಲ್ಲ. ವಿದುರನೆಂಬ ಕಳಂಕವೂ ಆತನಿಗಿಲ್ಲ. ನಿರಾತಂಕವಾಗಿ ಮತ್ತೊಂದು ಮದುವೆಯಾಗಬಹುದು. ಆದರೆ ಹೆಣ್ಣಿಗೆ ಈ ಎಲ್ಲವೂ ನಿಷೇಧ. ಒಂದು ವೇಳೆ ಮದುವೆಯಾದರೆ ಅದರ ಸುತ್ತಲೂ ಸಾಮಾಜಿಕ ವಕ್ರದೃಷ್ಟಿಯಿರುತ್ತದೆ. ಹೆಣ್ಣು ಶಿಶು ಮರಣಹೊಂದಿದರೆ ಬಟ್ಟೆಸುತ್ತಿಕೊಂಡು ಕೈಯಲ್ಲಿಡಿದುಕೊಂಡು ಸುಡುಗಾಡಿನಲ್ಲಿ ಹುಗಿಯುವ, ಸುಡುವ ಪದ್ಧತಿಯಿದೆ.

ಕುಟುಂಬದಲ್ಲಿನ ಸ್ಥಾನ

ನೇಕಾರ ಮಹಿಳೆಯು ಇಂದಿಗೂ ಸ್ವತಂತ್ರಳೇನಲ್ಲ. ಅತ್ತೆ, ಮಾವ, ಗಂಡ ಮತ್ತು ಮನೆಯ ಸದಸ್ಯರ ಆಜ್ಞೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಅವರು ನೀಡುವ ಕಿರುಕುಳಗಳನ್ನೂ ಮೌನವಾಗಿ ಸಹಿಸಿಕೊಳ್ಳಬೇಕು. ಕೂಡುಕುಟುಂಬಗಳಲ್ಲಿ ಅತಂತ್ರ ಮನೋಧರ್ಮದಲ್ಲಿಯೇ ಜೀವನ ಸಾಗಿಸುವ ಈಕೆ ಗಂಡನೊಂದಿಗೆ  ಬೇರೆಯಾದಾಗ ತನ್ನಲ್ಲಿ ಕೊಂಚ ಸ್ವತಂತ್ರತೆಯನ್ನು ಕಂಡುಕೊಳ್ಳುತ್ತಾಳೆ. ಅತ್ತೆಮಾವ ಇರುವವರೆಗೂ ಅಧೀನಳಾಗಿರುವ ಈಕೆ ಅವರ ತರುವಾಯ ಗಂಡನೊಂದಿಗೆ, ಗಂಡನೂ ತೀರಿಕೊಂಡರೆ ಈಕೆಯೆ ಕುಟುಂಬದ ಯಜಮಾನಿತಿಯಾಗುತ್ತಾಳೆ. ಪರಸ್ಪರ ಗಂಡ ಹೆಂಡತಿ ಆಭಿಪ್ರಾಯಗಳಿಗೆ ನೇಕಾರರಲ್ಲಿ ಮಾನ್ಯತೆಯಿದೆ. ಈಚೆಗೆ ನೇಕಾರ ಸಮುದಾಯವೂ ಕೌಟುಂಬಿಕ ವಾತಾವರಣವನ್ನು ಸರಳವಾಗಿ, ನಿರಾಳವಾಗಿಸಿಕೊಂಡಿವೆ. ಆದರೂ ವರದಕ್ಷಿಣೆ ಶೀಲಶಂಕೆಯಂತಹ ಹಲವು ಪ್ರಕರಣಗಳಾಗುತ್ತಿರುವುದೂ ಮಹಿಳೆಗೆ ದಕ್ಕದ ಸ್ವಾತಂತ್ರ‍್ಯವನ್ನೇ ಹೇಳುತ್ತದೆ.

ಭಾಷೆ

ಕರ್ನಾಟಕದ ನೇಕಾರ ಸಮುದಾಯದ ಭಾಷೆ ಕನ್ನಡ. ಆದರೆ ಪ್ರಾದೇಶಿಕವಾಗಿ ಹರಿದು ಹಂಚಿಹೋದ ಈ ಸಮುದಾಯ ಅಲ್ಲಿನ ಸ್ಥಳೀಯ ಭಾಷೆಯನ್ನೂ ಮನೆಮಾತನ್ನಾಗಿಸಿಕೊಂಡಿದೆ. ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಬೀದರಿನ ಗಡಿಭಾಗಗಳಲ್ಲಿ ವಾಸವಿರುವ ನೆವ್ವಾರು, ಜಾಢರು, ತೊಗಟವೀರರು, ಪದ್ಮಶಾಲಿಗಳೆಂದು ಕರೆಸಿಕೊಂಡ ನೇಕಾರರು ತೆಲುಗು ಮನೆಮಾತಾಗಿಸಿಕೊಂಡಿದ್ದಾರೆ. ಧಾರವಾಡ, ಗದಗ, ಬೆಟಗೇರಿಗಳಲ್ಲಿರುವ ಸಾಳಿಗಳು ಪೂರ್ವದಲ್ಲಿ ತಮಿಳು ಮಾತಾಡುತ್ತಿದ್ದರೆಂದು ಗೆಝಟಿಯರ್ ತಿಳಿಸುತ್ತದೆ. ಅಲ್ಲದೇ ಬೆಳಗಾವಿ ಪರಿಸರದಲ್ಲಿರುವ ಈ ಸಮುದಾಯ ಮರಾಠಿಯನ್ನೂ ಮಾತಾಡುತ್ತಾರೆ. ಕರಾವಳಿ ಭಾಗದ ನೇಕಾರರು ’ಸಾಲಿ’ ಭಾಷೆಯೊಂದನ್ನು ಆಡುತ್ತಾರೆ. ಆದ್ದರಿಂದ ಇವರನ್ನು ’ಸಾಲಿಗ’ ರೆಂದೂ ಕರೆಯುತ್ತಾರೆ.

ನೇಕಾರ ಸಮುದಾಯದ ಒಳಪಂಗಡಗಳಲ್ಲಿ ಕೆಲವು ಉತ್ತರ ಭಾರತದಿಂದ, ಮತ್ತೆ ಕೆಲವು ಆಂಧ್ರಮೂಲದಿಂದ, ಮಹಾರಾಷ್ಟ್ರ ಮೂಲದಿಂದ ಬಂದವರಾದುದರಿಂದ ಆಯಾ ಭಾಷೆಯನ್ನು ಸಹಜವಾಗಿಯೇ ಹೆಣ್ಣುಮಕ್ಕಳನ್ನು ಒಳಗೊಂಡು ಮಾತಾಡುತ್ತಾರೆ. ಇದರಲ್ಲಿ ಸಾಲಿಭಾಷೆಯ ವಿಶೇಷವಾದದ್ದು, ಅದರ ಕೆಲವು ಪದಗಳು ಇಲ್ಲಿವೆ.

ಪಕ್ಷಿ –  ಪಕ್ಕಿ

ಹರಿಯುವ –  ಪರಕ್ ರ

ಒಂದು – ಒಂಡು

ನಾವು  – ನಂಬೆ

ಮಾಡು – ಚೆಯು

ಬೆಂಕಿ – ತೀಯಿ

ಕನ್ನಡವನ್ನೇ ತಮ್ಮ ಮನೆಮಾತಾಗಿಸಿಕೊಂಡವರ ಜನಸಂಖ್ಯೆ ಕರ್ನಾಟಕದಲ್ಲಿ ಅಧಿಕವಾಗಿದೆ.

ಜೇಡನ ಬಲೆಯಲ್ಲಿ ಅಬಲೆ (ಬೇನೆಯರಿಯದ ನೀರಸರ ನಡುವೆ)

ಮಹಿಳೆಯನ್ನು ಪ್ರಾಚೀನ ಪರಂಪರೆ – ಪುರುಷ – ಪುರೋಹಿತರೆಲ್ಲರೂ ಹಲವಾರು ಮೌಢ್ಯಗಳಿಗೆ ಕ್ಷುಲ್ಲಕ ಆಚರಣೆಗೆ ಒಳಪಡಿಸಿದ್ದಾರೆ.

ತರುಣಿ ವಿಧವೆಯರಿಗೆ ಮತ್ತು ಮುದಕಿಯರಿಗೆ ಧರ್ಮದ  ದೀಕ್ಷೆಯ ತಂತ್ರದಿಂದ ಆಕೆಯ ಸ್ವಾತಂತ್ರ‍್ಯ, ಅಭಿವ್ಯಕ್ತಿ, ಅಸ್ತಿತ್ವವನ್ನು ಅಡಗಿಸುವ ಮತ್ತು ತೆರೆಮರೆಯಲ್ಲಿ ಮುಗುದೆಯರನ್ನು ತಮ್ಮ ಕಾಮಾಪೇಕ್ಷೆಗೆ ಬಲಿಯಾಗಿಸಿಕೊಳ್ಳುವುದು ಕಂಡು ಬರುತ್ತಿದೆ.  ಈಚೆಗೆ ಹಲವು ನೇಕಾರ ಮಹಿಳೆಯರು ಆಂಧ್ರದ ಭಂಭಂ ಸ್ವಾಮಿ ಎಂಬ ಮಠವೊಂದಕ್ಕೆ ದೀಕ್ಷೆಗೆ ಹೋಗುತ್ತಿದ್ದಾರೆ. ಈ ದೀಕ್ಷೆಯು ಸಂಕ್ರಾಂತಿಗಿಂತ ಒಂದು ತಿಂಗಳು ಮೊದಲೇ ಕೊಡಲಾಗುತ್ತದೆ. ದೀಕ್ಷೆ ಪಡೆಯುವವಳು ಭಂಭಂ ಸ್ವಾಮಿಯ ಆವರಣದಲ್ಲಿ ಸ್ನಾನಮಾಡಿ ಬಿಳಿಬಟ್ಟೆಗಳನ್ನು ಧರಿಸಿ, ಕೊರಳಲ್ಲಿ ರುದ್ರಾಕ್ಷಿಯನ್ನು ಹಾಕಿ, ಮಣ್ಣಿನ ಪರಿಯಾಣ, ಮಣ್ಣಿನ ಮಗಿಯನ್ನು ತೆಗೆದುಕೊಂಡು ಏಕಾಂತದಲ್ಲಿ ಕೂಡಬೇಕು. ಸ್ವಾಮಿಯು ಅವಳ ಕಿವಿಯಲ್ಲಿ ಮಂತ್ರಬೋಧಿಸುತ್ತಾನೆ. ಅಂದಿನಿಂದ ಗುರುಬೋಧೆ ಪಡೆದವಳು ದಿನವೂ ನಾಲ್ಕುಸ್ನಾನ, ನಾಲ್ಕು ಪೂಜೆ ಮಾಡಬೇಕು. ಸಂಕ್ರಾಂತಿ ಬಂದಾಗ ಇಪ್ಪತ್ತೊಂದು ದೀಪಹಚ್ಚಿ, ರಾಶಿ ಅಕ್ಕಿಗೆ ಪೂಜೆ ಮಾಡಿ, ಕಳಸಬೆಳಗಿ ಮುಕ್ತಾಯ ಮಾಡಿ ಮಣ್ಣಿನ ಪರಿಯಾಣ, ಮಗಿಯೊಂದಿಗೆ ಐದು ಮನೆಗಳಲ್ಲಿ ಭಿಕ್ಷೆ ಬೇಡಿ ಊಟ ಮಾಡುವ ರೂಢಿಯಿದೆ.

ಆಧುನಿಕತೆಯು ಬೆಳೆದಂತೆಲ್ಲಾ, ಆಧುನಿಕ ಧರ್ಮ ಮತ್ತು ಧಮಾಂಧರೂ ಬೆಳೆಯುತ್ತ ಪರೋಕ್ಷವಾಗಿ ನೊಂದ, ಮುಗುದೆಯರ ದೌರ್ಬಲ್ಯಯುತ ಮನಸ್ಸನ್ನು ದುರುಪಯೋಗ ಪಡೆದುಕೊಳ್ಳುವ ಪದ್ಧತಿಗಳು ಬರುತ್ತಿರುವುದು ದುರಂತವೇ ಆಗಿದೆ. ಮಹಿಳೆಯೂ ಪ್ರಾಚೀನ ಕಾಲದಿಂದ ಪುರುಷಮೌಲ್ಯಗಳ ಗೆರೆಯೊಳಗೇ ಬುಗುರಿಯಂತೆ ಕಷ್ಟದ ಕೋಟಲೆಗಲಲ್ಲಿ ಗಿರಕಿ ಹೊಡೆದಿದ್ದಾಳೆ. ಹೊರ ಬರಬೇಕೆನ್ನುವ ತವಕದಲ್ಲಿದ್ದಾಗಲೇ ಜೇಡನ ಬಲೆಯಲ್ಲಿ ಅಬಲೆಯ ಕಾಲುಗಳು ಮತ್ತೆ ಸಿಗಿಬೀಳುತ್ತಿರುವುಎದನ್ನು ಮಹಿಳೆಯರು ಎಚ್ಚರದಿಂದ ಗಮನಿಸಬೇಕು. ಬೇನೆಯರಿಯದ ನೀರಸರ ನಡುವೆ ವಿಫುಳ ಭೋಗಕ್ಕೆ ಸರ್ವಸುಖವನ್ನು ತೊರೆಯಬಾರದು.

ನೇಕಾರ ಮಹಿಳೆಯು ಇತರೆ ಜನಸಮುದಾಯಗಳ ಮಹಿಳೆಯಂತೆಯೇ ಪ್ರಾಚೀನ ಕಾಲದಿಂದಲೂ ಹಲವು ತಲ್ಲಣಗಳ ನಡುವೆಯೇ ಬೇಗುದಿಗೊಂಡು ಬದುಕು ಸಾಗಿಸಿದ್ದಾಳೆ. ಪುರೋಹಿತಶಾಹಿ ಮತ್ತು ಶ್ರೀಮಂತಶಾಹಿ ಪುರುಷಾಕಾರಗಳು ಕಾಲಾಂತರದಲ್ಲಿ ಆಕೆಯ ಸ್ವಾತಂತ್ರ‍್ಯವನ್ನು ಕಸಿಯುತ್ತಲೇ ಗುಲಾಮಳಂತೆ ನಡೆಸಿಕೊಂಡಿದ್ದಾರೆ. ವೈದಿಕ ಸಂವಿಧಾನ ಪ್ರಣೀತ ಧರ್ಮದ ಚೌಕಟ್ಟಿನಲ್ಲಿ ನೇಕಾರ ಸಮುದಾಯದ ಮಹಿಳೆಯೂ ನಲುಗಿಹೋಗಿದ್ದುಂಟು. ಧರ್ಮ ಎಂಬ ಪಾರಂಪರಿಕ ಜಡ್ಡು ಆಕೆಯ ಜೀವನದ ಸಂತಸದ ಕ್ಷಣಗಳೆಲ್ಲವನ್ನೂ ನುಂಗಿದೆ. ಧಾರ್ಮಿಕ ಕಟ್ಟುಪಾಡುಗಳನ್ನು ವಿಧಿಸಿದವರಲ್ಲಿ ಸ್ತ್ರೀಯು ಇಲ್ಲವೇ ಇಲ್ಲ. ಪುರುಷ ಮನೋಧರ್ಮದಲ್ಲಿ ರಚನೆಗೊಂಡ ವಿಧಿಗಳೆಲ್ಲವೂ ಹೆಚ್ಚು ಕೆಳಜಾತಿ ಮತ್ತು ಎಲ್ಲ ವರ್ಗ, ಜಾತಿಯ ಮಹಿಳೆಗೇ ಅನ್ವಯವಾಗುವಂಥವು. ಆರಂಭದಿಂದಲೂ ಆಕೆಯು ಹೆರುವ ಯಂತ್ರವಾಗಿಯೇ, ಭೋಗದ ವಸ್ತುವಾಗಿಯೇ ಸಮಾಜಕ್ಕೆ ಕಂಡದ್ದು ದುರಂತವೇ ಸರಿ. ಜೈವಿಕ ಕಾರಣಗಳಿಗಾಗಿ ಆಕೆಯು ಸದಾ ಪುರುಷನ ಅಡಿಯಾಳಾಗಿ ಬದುಕಬೇಕೆಂಬ ಕಟ್ಟುಪಾಡುಗಳು ಅರ್ಥರಾಹಿತ್ಯ ತಂತ್ರಗಳೇ. ಮಹಿಳೆಯ ಮುಟ್ಟು, ಹೆರಿಗೆ ಋತುಮತಿಯಂಥವು. ಸಹಜವಾದ ದೈಹಿಕ ಚಲನೆಗಳು. ಆದರೆ ಇವುಗಳನ್ನೇ ಮುಂದುಮಾಡಿಕೊಂಡು ದೌರ್ಬಲ್ಯಗಳೆಂದು ಬಗೆದು ಸಲ್ಲದ ಆಚರಣೆ ನಿಷೇಧಗಳನ್ನು ಆಕೆಯ ಮೇಲೆ ಹೇರಿದ್ದು ಚರಿತ್ರೆಯ ಅಣಕವೇ ಸರಿ. ಅಮ್ಮನ ಮಡಿಲಲ್ಲಿಯೇ ಟಿಸಿಲೊಡೆದ ಮೊಗ್ಗು ಗಂಡು, ಆಕೆಯ ತಾಯ್ತನ, ಪ್ರೀತಿ – ವಾತ್ಸಲ್ಯಗಳನ್ನು ಉಂಡವನೇ, ಮುಂದೆ ಪುರುಷ ಎಂಬ ಅಹಂಕಾರದಲ್ಲಿ ಇಡೀ ’ಹೆಣ್ಣು’ ತನವನ್ನೇ ದ್ವೇಷಿಸುವ, ಸ್ವಾತಂತ್ರ‍್ಯವನ್ನು ಕಸಿಯುವ ಸರ್ವಾಧಿಕಾರಿಯಂತೆ ವರ್ತಿಸುವುದು ವಿಚಿತ್ರವಾಗಿದೆ. ಅಕ್ಷರಸ್ಥರೂ ಈ ಬಗೆಯ ಮನೋಧೋರಣೆ ಹೊಂದಿರುವುದು ಸಮಕಾಲೀನ ಸಾಮಾಜಿಕ ವ್ಯವಸ್ಥೆಯ ದಾರುಣತೆಯನ್ನು ಸೂಚಿಸುತ್ತದೆ.

ನೇಕಾರ ಮಹಿಳೆಯು ಪುರುಷಾಧಾರಿತ ಧಾರ್ಮಿಕ ಸಂವಿಧಾನಕ್ಕೆ ಬದ್ಧಳಾಗಿ ಜೀವನ ನಡೆಸಬೇಕಾಗಿತ್ತು. ದೇವರು ಮತ್ತು ದೇವರ ಪೂಜೆಯೂ ಅವಳಿಗೆ ಕೆಲವು ಸಂದರ್ಭಗಳಲ್ಲಿ ನಿಷೇಧ, ಮುಟ್ಟು, ಹೆರಿಗೆ ಮುಂತಾದ ಸಹಜ ದೈಹಿಕ ಕ್ರಿಯೆಗಳ ಸಮಯದಲ್ಲಿ ಆಕೆಯನ್ನು ಮನೆಯಿಂದ ಹೊರಹಾಕಲಾಗುತ್ತದೆ. ಮನುಷ್ಯರು ದೇವರ ಸೃಷ್ಟಿ ಎಂದು ನಂಬುವ ಸಮಾಜ ಆಕೆಯ ಸಹಜ ದೈಹಿಕ ಕ್ರಿಯೆಗಳನ್ನೂ ದೇವರಸೃಷ್ಟಿ ಎಂದು ನಂಬಲಾರದು. ದೇವರಿಗೆ ಇದು ಅಪಥ್ಯವೆಂಬ ಭಾವನೆಯನ್ನು ಉಂಟು ಮಾಡಿಸಿ ಆಕೆಯನ್ನು ದೂರವಿಡುವುದು ಇದೆ. ನೇಕಾರ ಸಮುದಾಯದ ವೈಷ್ಣವ ಅನುಯಾಯಿಗಳಲ್ಲಿ ಮಹಿಳೆಗೆ ಧಾರ್ಮಿಕ ವಿಧಿ ವಿಧಾನಗಳ ಆಚರಣೆಯ ಸಂದರ್ಭ ಈವರೆಗೂ ಜಟಿಲ, ಕಠಿಣ, ಉಗ್ರವಾದ ನಿಷೇಧಗಳಿರುವುದು ಸಾಂಪ್ರದಾಯಿಕ ಕುಟುಂಬಗಳಲ್ಲಿರುವುದು ತಿಳಿದು ಬರುತ್ತದೆ. ಅಸಾಧ್ಯವಾಗಿದೆ. ವೈಷ್ಣವ ಧರ್ಮದ ಅನುಯಾಯಿಗಳಾದ ’ಸಾಳಿ’ ಪಂಗಡದ ನೇಕಾರರು ತಮ್ಮ ಮಹಿಳೆಯರು ವೈದಿಕರಂತೆಯೇ ಇರಬೇಕೆಂದು ಬಯಸುತ್ತಿದ್ದಾರೆ. ಮನೆಯಲ್ಲಿ ತುಳಸಿ ಗಿಡನೆಡುವುದು, ಹಣೆಗೆ ಗಂಧ ಹಚ್ಚುವುದು, ಕಚ್ಚೆಯನ್ನು ಹಾಕುವುದು ರೂಢಿಯಲ್ಲಿವೆ. ತುಳಸಿ, ಗಂಧ ಮುಂತಾದವು ವೈಜ್ಞಾನಿಕ ನೆಲೆಯಲ್ಲಿ ಹಲವು ಉಪಯೋಗಗಳಿಗೆ ಬರುತ್ತವೆ. ಆದರೆ ಕಚ್ಚೆ ಹಾಕಿಕೊಂಡು ತುಳಸೀ, ಗಂಧದ ಆಚರಣೆಗಳು ಗೊಡ್ಡು ಸಂಪ್ರದಾಯಗಳಾಗಿ ಮಾರ್ಪಾಡಾಗಬಾರದು. ಮಹಿಳೆಗೆ ಕಚ್ಚೆ ಹಾಕುವ ಆಚರಣೆಯಲ್ಲಿ ಪುರುಷನ ತಂತ್ರಗಳು ಇಲ್ಲದಿಲ್ಲ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಒಬ್ಬ ಮಹಿಳೆಯು ಈ ಬಗ್ಗೆ ನೋವಿನಿಂದ ನುಡಿದು ’ಕಚ್ಚೆ ಹಾಕದಿದ್ದರೆ ನಮ್ಮನೆಯ ಹಿರೀಕರು ಬೈಯ್ತಾರೆ. ನಮಗೇನು ಇಷ್ಟವಿಲ್ಲ. ಆದ್ರೂ ಹಾಕಬೇಕು. ಕಚ್ಚೆ ಹಾಕದಿದ್ದರೆ ಏನಾದರೂ ಕೆಲಸ ಮಾಡುವಾಗ, ಕುಂದ್ರುವಾಗ ನಮ್ಮ ತೊಡೆಗಳು ಕಾಣಬಾರದು ಅಂತ ಕಚ್ಚೆ ಹಾಕಬೇಕಂತೆ’ ಎಂಬ ಅಂತರಾಳದ ನೋವಿನಲ್ಲಿ ಪುರುಷ ಮಹಿಳೆಯನ್ನು ಸದಾ ’ಲೈಂಗಿಕ ಪವಿತ್ರತೆ’ ನೆಲೆಯಲ್ಲಿಯೇ ನೋಡುತ್ತಾನೆಂಬುದು ತಿಳಿಯುತ್ತದೆ.

ಸಾಳಿ ಹೆಣ್ಣು ಮಕ್ಕಳು ಚಿಕ್ಕಂದಿನಲ್ಲಿಯೇ ಋತುಮತಿಪೂರ್ವ ವಿವಾಹ ಮಾಡಿಕೊಳ್ಳಬೇಕಾದ ಕಾಲವಿತ್ತು. ಈ ಸಂಪ್ರದಾಯ ದೇವಾಂಗ, ಜಾಡ, ಪಟಗಾರ ಪಂಗಡಗಳಲ್ಲಿಯೂ ಆಚರಣೆಯಲ್ಲಿತ್ತು. ಋತುಮತಿಪೂರ್ವ ಮದುವೆಯೂ ಆಕೆಯನ್ನು ಲೈಂಗಿಕ ಪವಿತ್ರತೆಯ ದೃಷ್ಟಿಯಿಂದಲೇ ನೋಡುತ್ತಿತ್ತು. ಮಹಿಳೆ ಋತುಮತಿಯಾದ ನಂತರ ಬೇರೆಯವರೊಂದಿಗೆ ದೇಹ ಸಂಬಂಧ ಬೆಸೆಯಬಹುದು ಎಂಬ ಪುರುಷನ ಪೂರ್ವಾಗ್ರಹಪೀಡಿತ ಆಲೋಚನೆ ಆಕೆಯ ಬಾಲ್ಯವನ್ನು ನುಂಗಿ ಹಾಕುತ್ತಿತ್ತು. ಸಮೃದ್ಧ ಜೀವನದ ಸಂಕೇತವಾದ ಬಾಲ್ಯವನ್ನು ಮಹಿಳೆ ವಿವಾಹವೆಂಬ ಬಂಧನದಲ್ಲಿ ಕಳೆಯಬೇಕಾಗುತ್ತಿದ್ದುದು ದುರಂತವಾಗಿತ್ತು. ಈ ವಿವಾಹದ ಸಂದರ್ಭಗಳಲ್ಲಿಯೂ ನೇಕಾರರು ಒಳ ಪಂಗಡಗಳಲ್ಲಿ ಕೊಡು ಪಡೆಯುವಲ್ಲಿ ಕೆಲವು ನಿಷೇಧಗಳನ್ನು ಹಾಕಿದ್ದಾರೆ. ಈ ನಿಷೇಧ ಕೇವಲ ಮಹಿಳೆಗೆ ಎಂಬುದು ಗಮನಿಸಬೇಕು. ವೈದಿಕ ಅನುಯಾಯಿಗಳಾದ ಕುಲಾಚಾರಿಗಳು ಶೈವ ಅನುಯಾಯಿಗಳಾದ ಶಿವಾಚಾರಿಗಳ ಮಹಿಳೆಯನ್ನು ಮದುವೆಯಾದರೆ ಆಕೆಯನ್ನು ಮದುವೆಯ ಪೂರ್ವದಲ್ಲಿ ’ಶುದ್ಧ’ ಮಾಡಿಕೊಳ್ಳುವ ಕರಾಳ ಆಚರಣೆಯಿತ್ತು. ಗಂಡುಮಗನಿಗೆ ಇಲ್ಲದ ಅಶುದ್ಧತನ ಮಹಿಳೆಗೆ ಮಾತ್ರ ಇದೆಯೆಂದು ಸಾಂಪ್ರದಾಯಿಕ ನೇಕಾರ ಸಮಾಜ ಕಟ್ಟಿದ್ದು ಒಂದು ಬಗೆಯಲ್ಲಿ ಸ್ತ್ರೀಯನ್ನು ಶೋಷಿಸುವ ತಂತ್ರಗಾರಿಕೆಯಾಗಿದೆ.

ಶುದ್ಧವಾದ ಮಹಿಳೆಗೆ ಪೂಜಾಹಕ್ಕು ಇಲ್ಲವೆಂಬುದು ಈ ಸಮುದಾಯದ ಮತ್ತೊಂದು ಕರಾಳ ಆಚರಣೆ. ವೈದಿಕ ಅನುಯಾಯಿಗಳು ಮಹಿಳೆಗೆ ಜನಿವಾರ ಧರಿಸುವ ಹಕ್ಕನ್ನು ನೀಡಿಲ್ಲ. ಮೋಕ್ಷವೆಂಬುದು ಪುರುಷನಿಗೆ ಮಾತ್ರ ಸೀಮಿತ ಎಂಬ ಧೋರಣೆ ಈ ಆಚರಣೆಗಳ ಹಿಂದೆ ಇದೆ. ಜನಿವಾರ ಧರಿಸದಿದ್ದರೂ ಮಹಿಳೆ ತನ್ನ ಸಾಧನೆ ಮಾಡುತ್ತಾಳೆ. ಆದರೆ ಸಾಮಾಜಿಕ ಕಟ್ಟುಪಾಡುಗಳು ಈಕೆಗೆ ವಿಧಿಸಿದ ಷರತ್ತುಗಳಿಂದ ಮಾನಸಿಕ ಸ್ಥೈರ್ಯ ಕಡಿಮೆಯಾಗುತ್ತದೆ.

ವೈದಿಕ ಮನೋಭಾವದ ಗೊಡ್ಡು ಆಚರಣೆಗಳಿಂದ ಆಚೆ ಬಂದ ಹಲವು ಸಮುದಾಯಗಳು ವೀರಶೈವ ಧರ್ಮದಲ್ಲಿ ತಮ್ಮ ಸ್ವಾತಂತ್ರ‍್ಯಯುತ ಬದುಕನ್ನು ರೂಢಿಸಿಕೊಳ್ಳಲು ಲಿಂಗಧಾರಿಗಳಾದರು. ವೀರಶೈವ ಧರ್ಮ ಸ್ತ್ರೀಯರಿಗೂ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲಿ ಸಮಾನ ಅವಕಾಶಕ್ಕೆ ಸ್ಫೂರ್ತಿಯಿತ್ತಿತ್ತು. ಇದರಿಂದ ನೇಕಾರ ಸಮುದಾಯದವರಲ್ಲಿ ಹಲವರು ಲಿಂಗಧಾರಿಗಳಾದರು. ಈ ಸಂದರ್ಭದಲ್ಲಿ ಮಹಿಳೆಯೂ ಲಿಂಗವಂತಳಾಗಿ ತನ್ನ ಧಾರ್ಮಿಕ ಸಾಧನೆಗಳನ್ನು ಮಾಡಿಕೊಳ್ಳಲು ಸಾಧ್ಯವಾಯಿತು.

ಪಟವೇಗಾರರು ವೈದಿಕ ಅನುಯಾಯಿ ನೇಕಾರರು. ಮಹಿಳೆಗೆ ಇವರು ಅತಿ ಹೆಚ್ಚು ಶೋಷಣೆಗೆ ಒಳಪಡಿಸಿದವರು. ಮೂಲತಃ ಗುಜರಾತಿನಿಂದ ಬಂದವರಾಗಿದ್ದರಿಂದ ಅಲ್ಲಿನ ಸಾಂಪ್ರದಾಯಿಕ ಸಹಗಮನ, ಬೆತ್ತಲೆಸೇವೆ ಮುಂತಾದ ಕರಾಳ ಆಚರಣೆಗಳನ್ನು ಜೊತೆಗೆ ತಂದವರು. ಕರ್ನಾಟಕದಲ್ಲಿಯೂ ಒಂದು ಕಾಲದಲ್ಲಿ ಮಹಿಳೆಯರು ಬೆತ್ತಲೆ ಸೇವೆಯಲ್ಲಿ ತೊಡಗುವಂತೆ ಮಾಡಿದ್ದಾರೆ. ಇಂತಹ ಆಚರಣೆಗಳ ಹಿಂದೆ ನಿಸ್ಸಂಶಯವಾಗಿ ವೈದಿಕ, ಪುರುಷ ಶಾಹಿಯ ಕೈವಾಡವಿದೆಯೆಂಬುದು ಗಮನಿಸಬೇಕು. ಸಧ್ಯ ಈ ಆಚರಣೆಗಳು ಈ ಸಮುದಾಯಗಳಲ್ಲಿ ಕಂಡು ಬರದಿರುವುದೇ ಸಂತೋಷದ ಸಂಗತಿ.

ನೇಕಾರ ಸಮುದಾಯವು ಮಹಿಳೆಗೆ ವಿಧವೆಯಾದ ಮೇಲೆಯೂ ವಿವಾಹವಾಗುವ ಸ್ವಾತಂತ್ರ‍್ಯ ನೀಡಿದೆ. ಕೆಲವು ನಿಷೇಧಗಳು ವಿಧವೆಗಿವೆ. ಆದರೂ ವಿಧವಾ ವಿವಾಹಕ್ಕೆ ಅವಕಾಶ ಮಾಡಿದ್ದೊಂದು ಹೆಚ್ಚುಗಾರಿಕೆಯೆನ್ನಲಡ್ಡಿಯಿಲ್ಲ.

ನೇಕಾರ ಮಹಿಳೆಯು ಮದುವೆಯ ಸಂದರ್ಭಗಳಲ್ಲಿ ಹಲವು ಪರೀಕ್ಷೆಗೆ ಒಳಪಡುತ್ತಿದ್ದಳು. ಸುಳಿತೆಗೆಯುವುದು ಇದರಲ್ಲಿ ಅತ್ಯಂತ ತಲ್ಲಣಗೊಳ್ಳುವ ಆಚರಣೆ. ಮಹಿಳೆಯ ದೈಹಿಕ ಸಹಜಾಕೃತಿಯನ್ನೇ ದೌರ್ಬಲ್ಯವೆಂಬ ಮನೋಧೋರಣೆಯಿಂದ ವಿವಾಹಕ್ಕೆ ನಿರಾಕರಿಸಿ, ಮಾನಸಿಕವಾಗಿ ಆಕೆಯನ್ನು ಪ್ರಪಾತಕ್ಕೆ ತಳ್ಳುವ ತಂತ್ರವಿದೆ. ಕುಜದೋಷ ಮುಂತಾದ ವೈದಿಕ ಪ್ರಣೀತ ಜ್ಯೋತಿಷ್ಯ ಸಂಬಂಧೀ ಆಯಾಮಗಳೂ ಆಕೆಯ ಶೋಷಣೆಯ ಪರಿಕರಗಳೇ.

ನೇಕಾರ ಸಮುದಾಯದ ಮಹಿಳೆಗೆ ಮರಣದ ನಂತರವೂ ಹಲವು ರೀತಿಯ ಶೋಷಣೆಗಳಿವೆಯೆಂಬುದನ್ನು ನೆನೆದರೆ ಅಚ್ಚರಿಯಾಗುತ್ತದೆ. ಮದುವೆಯಾಗದೇ ಮಹಿಳೆ ಮರಣ ಹೊಂದಿದರೆ ಆಕೆಯ ಕಾಮಾಪೇಕ್ಷೆಯನ್ನು ಐದು ದಿನಗಳ ನಂತರ ಮನ್ಮಥ ಬಂದು ತೀರಿಸುತ್ತಾನೆಂಬುದೊಂದು ನಂಬಿಕೆ. ಮಹಿಳೆಯು ನಿರ್ಜೀವಿಯಾದ ಮೇಲೂ ಆಕೆಯನ್ನು ಲೈಂಗಿಕ ಅಪವಿತ್ರದ ನೆಲೆಯಲ್ಲಿಯೇ ಕಾಣುವುದು ನೋಡಿದರೆ ಮಹಿಳೆಯು ಸಿಲುಕಿದ ಬಲೆಯು ಎಷ್ಟು ಕರಾಳವಾಗಿವೆ ಎಂಬುದು ಮನದಟ್ಟಾಗುತ್ತದೆ.

ಮಹಿಳೆಯ ಜನನದಿಂದಲೇ ಆರಂಭವಾಗುವ ಆಕೆಯ ಮೇಲಿನ ನಿಷೇಧ ಶೋಷಣೆಗಳು ಜೀವನದ ಪ್ರತಿಹೆಜ್ಜೆಯಲ್ಲೂ, ಪ್ರತಿ ಹಂತದಲ್ಲೂ  ಎಡೆತಾಕಿ ಆಕೆಯ ಒಟ್ಟು ಬದುಕಿನ ಸ್ವಚ್ಛಂದತೆಯನ್ನು ಮುರುಟಿಹೋಗುವಂತೆ ಮಾಡಲಾಗಿದೆ. ಪುರುಷನಿಗೆ ಸಹವರ್ತಿಣೀಯಾಗಿ ಅವನ ಯಶಸ್ಸಿನ ಬಹುಪಾಲು ಶ್ರಮ ಇವಳದಾದರೂ ಆಕೆಯ ಸ್ಥಾನ ಮಾತ್ರ ’ಹೆಣ್ಣು’ ಎಂದರೆ ಎರಡನೇ ದರ್ಜೆ ಎಂದು ಭಾವಿಸಿ ಭ್ರಮಿಸಿದವರ ನಡುವೆ ಶತಮಾನಗಳುದ್ದಕ್ಕೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದದ್ದೇ ಹೆಣ್ಣಿನ ದುರಂತದ ಚರಿತ್ರೆ, ಮೇಲ್ನೋಟಕ್ಕೆ ಮಹಿಳೆಯರ ಜೀವನ ಶ್ರೇಷ್ಠ, ಸುಖೀ ಜೀವನವೆಂದು ನಂಬಿಸಲಾಗುತ್ತದೆ. ಆಂತರ್ಯದಲ್ಲಿ ಆಕೆಯ ತಳಮಳ – ಗೊಂದಲ – ತಲ್ಲಣಗಳಿಗೆ ನಿಜವಾದ ಸ್ವಾತಂತ್ರ‍್ಯ ದೊರೆಯಬೇಕಾಗಿದೆ.

ಸಮಕಾಲೀನ ಆಧುನಿಕ ಜೀವನದಲ್ಲಿ ಎಲ್ಲ ಸಮುದಾಯಗಳು ತಮ್ಮ ಸಂಸ್ಕೃತಿಯನ್ನು ಹೊಸ ಆಲೋಚನೆ ಚಿಂತನೆಗಳಿಗೆ ಒಡುತ್ತಿವೆ. ಅಂತೆಯೇ ನೇಕಾರರು ಮತ್ತು ಅದರ ಒಳಪಂಗಡಗಳೆಲ್ಲವೂ ಆಧುನಿಕತೆಯತ್ತ ತಮ್ಮ ಸಂಸ್ಕೃತಿಯನ್ನು ಹೊತ್ತು ತರುತ್ತಲಿವೆ. ಅದರಲ್ಲಿಯೂ ಶಿಕ್ಷಣದಿಂದಾಗಿ ಮಹಿಳೆಯರು ತಮ್ಮ ಮೇಲಾಗುತ್ತಿರುವ ದೌರ್ಜನ್ಯ, ಗೊಡ್ಡು ಸಂಪ್ರದಾಯಗಳ ಬೂಟಾಟಿಕತನ, ಶೋಷಣೆಗಳನ್ನು ಅರಿತುಕೊಂಡು ಎಚ್ಚರಗೊಳ್ಳುತ್ತಿದ್ದಾರೆ. ನೇಕಾರ ಮಹಿಳೆಯರಲ್ಲಿ ಈ ತಲೆಮಾರಿನ ಅನೇಕರು ಔದ್ಯೋಗಿಕ ರಂಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆಧುನಿಕ ಶಿಕ್ಷಣ ಪಡೆದ ಮಹಿಳೆಯರು ಶಿಕ್ಷಣ, ಕಲೆ, ಸಂಸ್ಕೃತಿ, ರಾಜಕಾರಣ, ವಿಜ್ಞಾನ, ತಂತ್ರಜ್ಞಾನ, ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.  ಸಂವಿಧಾನಬದ್ಧವಾದ ಕಾನೂನು ಹಕ್ಕು ಕರ್ತವ್ಯಗಳನ್ನು ಅರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾದಂತಹ ಕೆಲವು ಆಚರಣೆಗಳು ವಿಧಿನಿಷೇಧಗಳು ಆಕೆಯಿಂದ ದೂರವಾಗುತ್ತಿವೆ. ಆದರೂ ಸಂಪ್ರದಾಯಸ್ಥ ಕೃಷಿಕ ಕುಟುಂಬಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಂಪ್ರದಾಯಿಕ ಆಚರಣೆ ನಿಷೇಧಗಳಿಗೆ ಬದ್ಧವಾದವರೂ ಇದ್ದಾರೆ. ಆದರೆ ಇವುಗಳೆಲ್ಲ ಪೂರ್ವದಲ್ಲಿದ್ದಂತೆ ಕಠೋರವಾಗಿಲ್ಲ. ಅಕ್ಷರಸ್ಥರ ನಡುವೆಯೂ ಇಂದು ನೇಕಾರರ ಒಳಬಗೆಗಳಲ್ಲಿ ಮದುವೆ ನಿಷೇಧ. ನಗರ ಮತ್ತು ಪಟ್ಟಣಗಳಲ್ಲಿ ಶಿಕ್ಷಿತರು ಒಳ ಪಂಗಡದ ಬೇಧಗಳನ್ನು ನಿಧಾನವಾಗಿ ತೊರೆದು ಮದುವೆ ಮುಂತಾದ ಸಂಬಂಧಗಳನ್ನು ಮಾಡುತ್ತಿರುವುದು ಆರೋಗ್ಯಕರ. ನೇಕಾರರ ವಿಧವೆಗೆ ಇದ್ದ ಕಠೋರ ಆಚರಣೆಗಳೂ ಇಂದು ಕ್ರಮೇಣ ಮಾಯವಾಗುತ್ತಿರುವುದೂ ಮಹಿಳೆಗೆ ತನ್ನತನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ.  ಅಷ್ಟೇ ಅಲ್ಲ ಕಾನೂನುಗಳು ಮಹಿಳೆಗೆ ಆತ್ಮಸ್ಥೈರ್ಯ ತಂದುಕೊಡುತ್ತಿವೆ. ಹಲವು ಸಂಘಸಂಸ್ಥೆ ಚಿಂತಕರಿಂದಲೂ ಆಕೆಯನ್ನು ಹೊಸದಿಂಗತದೆಡೆಗೆ ಕೊಂಡೊಯ್ಯಲು  ಪ್ರಯತ್ನಿಸಿವೆ. ಪುರುಷ ಶೋಷಣೆ, ಧಾರ್ಮಿಕ ಶೋಷಣೆ ಮುಂತಾದವುಗಳಿಂದ ಆಕೆಯು ಮುಕ್ತಳಾಗುತ್ತಿದ್ದಾಳೆ. ಆದರೂ ಇಂದು ಮಹಿಳೆಯು ಮತ್ತೊಂದು ಬಗೆಯ ಶೋಷಣೆಗೆ ಒಳಗಾಗಿದ್ದೂ ಇದೆ. ಪ್ರಾಚೀನ ಪರಂಪರೆ ಧಾಳಿಯಿಂದ ಮುಕ್ತಳಾಗುವ ಹಂತದಲ್ಲಿರುವಾಗಲೇ ಆಕೆ ಔದ್ಯೋಗಿಕ ರಂಗದಲ್ಲಿ ಪುರುಷರ ದೌರ್ಜನ್ಯ, ಅಪಮಾನ ಅತ್ಯಾಚಾರದಂತಹ ಶೋಷಣೆಗೆ ಒಳಗಾಗುತ್ತಿರುವುದು ಗಮನಿಸಿದರೆ ಮಹಿಳೆ ಸರ್ವ ಸ್ವತಂತ್ರಳಾಗಿಲ್ಲವೆಂದೇ ಗ್ರಹಿಸಬೇಕಾಗಿದೆ.

ಆಧುನಿಕ ವಿದ್ಯಮಾನದಲ್ಲಿ ನೇಕಾರ ಮಹಿಳೆಯರು ಬದಲಾದ ಸಂದರ್ಭಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಿಸಿಕೊಳ್ಳುವಲ್ಲಿ ಪುರುಷರ ಅಡೆತಡೆಗಳಿದ್ದಾಗ್ಯೂ ಶಿಕ್ಷಿತಳಾಗಿ, ತನ್ನ ಸೇವೆಯನ್ನು ಎಲ್ಲ ರಂಗಗಳಲ್ಲಿಯೂ ಸಲ್ಲಿಸುತ್ತಿದ್ದಾಳೆ. ನೇಕಾರರ ಅನೇಕ ಮಹಿಳೆಯರು, ಶಿಕ್ಷಕರು, ಡಾಕ್ಟರರು, ಸಾಫ್ಟ್ ವೇರ್ ಎಂಜಿನಿಯರರು, ವಿಜ್ಞಾನ ತಂತ್ರಜ್ಞಾನದಲ್ಲಿಯೂ ಯಶಸ್ಸನ್ನು ಸಾಧಿಸಿದವರಿದ್ದಾರೆ. ಅಲ್ಲದೇ ಸರ್ಕಾರದ ಮಹಿಳಾ ಮೀಸಲಾತಿಯಡಿಯಲ್ಲಿ ಹಲವು ಮಹಿಳೆಯರು ಗ್ರಾಮ ಪಂಚಾಯತ್ ತಾಲ್ಲೂಕು ಜಿಲ್ಲಾ ಪಂಚಾಯತ್ ನಲ್ಲಿ ರಾಜಕಾರಣದಲ್ಲಿ ಸೇವೆ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಶ್ರೀಮತಿ ಉಮಾಶ್ರೀಯವರು ಎಂ.ಎಲ್.ಸಿ. ಯಾಗಿ ನೇಕಾರ ಮಹಿಳೆಯರ ಪ್ರತಿನಿಧಿಯಾಗಿದ್ದಾರೆ. ಶ್ರೀಮತಿ ಉಮಾಶ್ರೀಯವರು ನಾಟಕ – ಸಿನೇಮಾ ರಂಗದಲ್ಲಿ ಅದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇಂಥಾ ಮಹಿಳೆಯರ ಸೇವೆಗಳು ಉಳಿದ ನೇಕಾರ ಮಹಿಳೆಯರ ಆತ್ಮಸ್ಥೈರ್ಯವನ್ನು ಹೆಚ್ಚಿಸಿವೆ.

ನೇಕಾರ ಮಹಿಳೆಯರು ಇಂದು ತಮ್ಮ ಮೂಲವೃತ್ತಿಯನ್ನು ಹೆಚ್ಚು ಅವಲಂಬಿಸಿಲ್ಲ. ಕೈಮಗ್ಗದಿಂದ ಆರ್ಥಿಕ ಬಲ ಕುಗ್ಗುತ್ತಲಿದೆ. ಗಾಂಧೀಜಿಯ ಕಾಲದ ಚರಕದಿಂದ ಬಟ್ಟೆನೇಯುವ, ಅದರಿಂದ ಬಂದ ಉತ್ಪಾದನೆಯಿಂದ ಜೀವಿಸುವ ಸಂದರ್ಭ ಈಗಿಲ್ಲ. ವಿದೇಶೀ ಬಟ್ಟೆಗಳ ನಿರಾಕರಣೆಗೆ ಮುಂದಾದ ಗಾಂಧೀಜಿಯವರು ದೇಶೀಯ ಮಹಿಳೆಗೆ ಬೆನ್ನೆಲುಬಾಗುವ, ಸ್ವಾವಲಂಬಿಯಾಗುವ ದೃಷ್ಟಿಯಿಂದ ತಂತ್ರಜ್ಞಾನವನ್ನು ವಿರೋಧಿಸಿ, ಕೈಮಗ್ಗ, ಚರಕಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಆದರೆ ಆಧುನಿಕ ತಂತ್ರಜ್ಞಾನದ ಪ್ರವಾಹದಲ್ಲಿ ಕೈಮಗ್ಗಗಳೋ, ಚರಕಗಳ ಉತ್ಪಾದನೆಯಿಂದ ಜೀವಿಸುವುದು ದುಸ್ತರ. ಹೀಗಾಗಿ ನೇಕಾರ ಸಮುದಾಯ ಆರ್ಥಿಕ ದುಸ್ಥಿತಿಯಿಂದ ತಮ್ಮ ಮೂಲ ವೃತ್ತಿಯನ್ನು ಕ್ರಮೇಣ ತೊರೆಯುವ ಹಂತದಲ್ಲಿದೆ. ಬಂಡವಾಳ ಉಳ್ಳ ಯಾರೇ ಆದರೂ ಕೈಗಾರಿಕೆ ಸ್ಥಾಪಿಸಿ ಬಟ್ಟೆಯನ್ನು ಉತ್ಪಾದನೆ ಮಾಡಬಹುದಾದ ಕಾಲವಿದು. ಸಹಜವಾಗಿಯೇ ಮಹಿಳೆಯರೂ ತಮ್ಮ ಜೀವನದ ಏಳು – ಬೀಳಿನ ನಡುವೆ ಅಡುಗೆ ಮನೆಗೆಲಸದೊಂದಿಗೆ ಕೈಮಗ್ಗಗಳಲ್ಲಿಯೂ ರಟ್ಟೆದಣಿಯುವಂತೆ ದುಡಿಯುತ್ತಿದ್ದವಳು, ಇಂದು ಮನೆಯ ಕುಟುಂಬದ ಸದಸ್ಯರಿಗೆ ದುಡಿಯುವುದರೊಂದಿಗೆ ದಿನಗೂಲಿ ಕೆಲಸಕ್ಕೆ ಕೈಗಾರಿಕೆಗಳಿಗೆ ದುಡಿಯಲು ಹೋಗುತ್ತಿರುವುದು ಆಕೆಯ ಬದುಕಿನ ಅತಂತ್ರ ಸ್ಥಿತಿಯನ್ನು ತಿಳಿಸುತ್ತದೆ. ಅದರೊಂದಿಗೆ ಕೈಗಾರಿಕೆಗಳಲ್ಲಿ ಮಹಿಳಾ ಕಾರ್ಮಿಕರಿಗೆ ಕೊಡುವ ವೇತನದಲ್ಲಿ ತಾರತಮ್ಯ, ಲೈಂಗಿಕ ಕಿರುಕುಳ, ಅತ್ಯಾಚಾರಗಳೊಂದಿಗೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವುದು ದುಸ್ತರವಾದ ಪ್ರಸ್ತುತ ಸಂದರ್ಭದಲ್ಲಿ, ನೇಕಾರ ಮಹಿಳೆ ತನ್ನ ಕುಟುಂಬ ನಿರ್ವಹಣೆ ಮಾಡಲು ಅನ್ಯ ರಂಗಗಳಲ್ಲಿ ದುಡಿಯುತ್ತಿರುವುದೂ ಕಂಡು ಬರುತ್ತದೆ.

ಕರ್ನಾಟಕದಲ್ಲಿ ಅಥವಾ ಭಾರತದಲ್ಲಿ ಒಂದು ಕಾಲದಿಂದಲೂ ಎಲ್ಲರಿಗೆ ಬಟ್ಟೆ ನೇಯ್ದು ಕೊಡುತ್ತಿದ್ದ ಜಾಡರ ಸಮುದಾಯ ಅದರಲ್ಲಿಯೂ ತನ್ನ ಶ್ರಮ, ಕುಸುರಿ ಕಲೆಯಿಂದ ಉಡುವವರಿಗೆ ಒನಪು ತಂದು ಕೊಡುತ್ತಿದ್ದ ಜಾಡರ ಮಹಿಳೆಯು ಇಂದು ಸ್ಥಿತ್ಯಂತರಗೊಳ್ಳುತ್ತಿದ್ದಾಳೆ.

ಆಭ್ಯಾಸ ಗ್ರಂಥಗಳು

Epigraphia Indica – ಎಲ್ಲ ಸಂಪುಟಗಳು

Epigraphia Carnatica – ಎಲ್ಲ ಸಂಪುಟಗಳು

South Indian Inscriptions  – ಎಲ್ಲ ಸಂಪುಟಗಳು

ವೆಂಕಟರಂಗೋಕಟ್ಟಿ ಅನು :  ಗ್ಯಾಝಟೀಯರು ಮುಂಬಯಿ ಇಲಾಖೆಗೆ ಸೇರಿದ ಕರ್ನಾಟಕ ಭಾಗದ್ದು, ಧಾರವಾಡ ಬೆಳಗಾವಿ, ವಿಜಾಪುರ,ಕೆನಡಾ ಈ ನಾಲ್ಕು ಜಿಲ್ಲೆಗಳದು. ಗವರ್ನಮೆಂಟ್ ಸೆಂಟ್ರಲ್ ಬುಕ್ ಡಿಪೊ ೧೮೯೩

ವಕ್ತೃ ವಿವರ

ಲಕ್ಷ್ಮಮ್ಮ, ೬೫ ವರ್ಷ, ಸಂಡೂರು, ಬಳ್ಳಾರಿ ಜಿಲ್ಲೆ

ಸತೀಶ್ ಎಚ್., ೪೯ ವರ್ಷ , ನರಸಿಂಹರಾಜಪುರ, ಚಿಕ್ಕಮಗಳೂರು

ಗಾಯತ್ರಿ, ೫೨ ವರ್ಷ, ಭದ್ರಾವತಿ, ಶಿವಮೊಗ್ಗ

ಲಕ್ಷ್ಮಿ ಎಸ್., ೪೦ ವರ್ಷ, ನಂಜನಗೂಡು, ಮೈಸೂರು

ಜಾಡರ ಅನ್ನದಾನಿ, ೬೪ ವರ್ಷ, ಬಳ್ಳಾರಿ

ಕಾಶೀನಾಥ, ೪೦ ವರ್ಷ, ಕಿನ್ನಾಳ,   ಕೊಪ್ಪಳ

ರಾಮಕ್ಕ, ೩೨ ವರ್ಷ, ದೊಡ್ಡಬಳ್ಳಾಪುರ