ನೇಕಾರರು: ಪ್ರಾಚೀನ ಚರಿತ್ರೆ

1.ನೇಕಾರ (ಸಾಳಿ)ರು : ತಾವು ದೇವಾಂಗನೆಂಬ ಋಷಿಯ ವಂಶದವರೆಂದು ಹೇಳುತ್ತಾರೆ. ಕೆಲವರು ಮಾರ್ಕಂಡೇಯನ ವಂಶದವರೆಂದೂ ಹೇಳುತ್ತಾರೆ. ದೇವಾಂಗ ಋಷಿಯ ಏಳುಜನ ಹೆಂಡಿರ ಹೊಟ್ಟೆಯಿಂದ ಹುಟ್ಟಿದವರಿಗೆಲ್ಲಾ ಸಾಳಿ ಅಂದರೆ ಬಟ್ಟೆಯನ್ನು ನೆಯ್ಯುವವರು ಎಂಬ ಹೆಸರಿದೆ. ಇವರ ನಾಲ್ಕು ಮುಖ್ಯ ಭೇದಗಳಿವೆ. ಒಂದನೇ ವರ್ಗದಲ್ಲಿ ಪದ್ಮಸಾಳಿ, ಸುಕಸಾಳಿ, ಸಕ್ಕುಲಸಾಳಿ ಎಂಬ ಮೂರು ಒಳಭೇದಗಳಿವೆ. ಇವರಿಗೆ ರೂಢಿಯಲ್ಲಿ ಸಾಳಿ ಎನ್ನುವರು. ಎರಡನೇ ವರ್ಗದಲ್ಲಿ ದೇವಸಾಳಿಗಳು ಅಥವಾ ಪಡಸಾಲಿಗಳು ಅಥವಾ ದೇವಾಂಗರು ಇದ್ದಾರೆ. ಇವರಿಗೆ ಹಟಕಾರರೆನ್ನುತ್ತಾರೆ. ಮೂರನೇ ವರ್ಗದಲ್ಲಿ ಪಡಸಾಲಿಗಳು ಅಥವಾ ಪಟ್ಟಸಾಳಿ, ಸಮಸಾಳಿಗಳೆಂಬ ಲಿಂಗವಂತರು ಇದ್ದಾರೆ. ಶುದ್ಧ ಸಾಳಿಗಳೆಂಬುವವರು ನಾಲ್ಕನೇ ವರ್ಗದವರು.

ಈ ಎಲ್ಲ ಒಳಜಾತಿಗಳಲ್ಲಿ ಪ್ರಾಚೀನ ಕಾಲದಲ್ಲಿ ದೇಹಸಂಬಂಧ ಆಗುತ್ತಿತ್ತು. ಈಚೆಗೆ ಲಿಂಗವಂತರಾದ್ದರಿಂದ ಹೆಣ್ಣು-ಗಂಡು ಕೊಡು-ಪಡೆ ನಡೆಯುವುದಿಲ್ಲ. ಬದಲಾದ ಕಾಲ ಸಂದರ್ಭದಲ್ಲಿ ಮದುವೆಗಳು ನಡೆಯುತ್ತಲೂ ಇವೆ. ಮೇಲೆ ಉಲ್ಲೇಖಿಸಿದ ಸಮುದಾಯಗಳು ಉತ್ತರದಿಂದ ಬಂದವರಾಗಿದ್ದು, ಇವರ ಭಾಷೆ ಕಾಡು ಮಹಾರಾಷ್ಟ್ರ ಭಾಷೆ. ಧಾರವಾಡ ಜಿಲ್ಲೆಯವರು ಕನ್ನಡ ಮಾತಾಡುತ್ತಾರೆ. ಇವರ ಅಡ್ಡ ಹೆಸರುಗಳಲ್ಲಿ ಮಹಾರಾಷ್ಟ್ರ ಶಬ್ದಗಳು ಇರುತ್ತವೆ. ಲಿಂಗವಂತರಲ್ಲದಂಥ ಸಾಳಿಗಳಲ್ಲಿ ಬಹುಜನರು ಜನಿವಾರ ಹಾಕುತ್ತಾರೆ. ಬ್ರಾಹ್ಮಣರನ್ನು ಪೌರೋಹಿತ್ಯಕ್ಕೆ ಕರೆಯುತ್ತಾರೆ. ಮನೆಯಲ್ಲಿ ತುಳಸೀಗಿಡ ನೆಡುತ್ತಾರೆ. ಹಣೆಗೆ ಗಂಧ ಹಚ್ಚುತ್ತಾರೆ. ಹೆಂಗಸಿಗೆ ಜನಿವಾರ ನಿಷೇಧ. ಮಧ್ಯ-ಮಾಂಸಗಳು ಸ್ವೀಕರಿಸುತ್ತಾರೆ. 150 ವರ್ಷಗಳ ಹಿಂದೆ ಸಾಲಿಗ್ರಾಮ ಪೂಜಿಸುತ್ತಿದ್ದರಂತೆ. ಮಧ್ಯಮಾಂಸ ನಿಷೇಧವಿತ್ತೆಂದೂ ತಿಳಿಯುತ್ತದೆ.

ಸಾಳಿಗರು ಯಲ್ಲಮ್ಮ: ವೆಂಕಟರಮಣ: ತುಳಜಾಭವಾನಿ: ಖಂಡೋಬ ದೇವರಿಗೆ ನಡೆಯುತ್ತಾರೆ. ಪದ್ಮಸಾಳಿಗಳು ಹೆಣಗಳನ್ನು ಸುಡುತ್ತಾರೆ. ಉಳಿದವರಲ್ಲಿ ಹುಗಿಯುವುದೂ ಇದೆ.

ಸಾಳಿಗಳಲ್ಲಿ ಹೆಣ್ಣು ಮಕ್ಕಳ ವಿವಾಹ ಚಿಕ್ಕಂದಿನಲ್ಲಿಯೇ ಆಗಬೇಕು. ವಿಧವೆ ಲಗ್ನಕ್ಕೆ ವಿರೋಧವಿಲ್ಲ. ಪಡಸಾಳಿಗಳು ರೇಶಿಮೆಯ ವಸ್ತ್ರದ ಕೆಲಸ ಮಾಡುವುದರಿಂದ ಪಟ್ಟೆಸಾಳಿ ಎಂಬ ಹೆಸರು ಬಂದಿದೆ. ಇವರೆಲ್ಲ ಲಿಂಗವಂತರು. ಮಧ್ಯಮಾಂಸ ಮುಟ್ಟುವುದಿಲ್ಲ. ಶ್ರೀಶೈಲ ಮಲ್ಲಿಕಾರ್ಜುನನಿಗೆ ನಡೆದುಕೊಳ್ಳುತ್ತಾರೆ.

ಸಾಳಿಗಳ ಕೆಲವು ಜಾತಿಗಳಲ್ಲಿ ವಿಧವೆಗೆ ವ್ಯಭಿಚಾರದಿಂದ ಗರ್ಭಧಾರಣವಾದರೆ ಆಕೆ ಹಡೆದ ಬಳಿಕ ಆ ಕೂಸನ್ನು ಯಾರಿಗಾದರೂ ಕೊಡುವವರೆಗೆ ಜಾತಿ ಬಾಹ್ಯಳಾಗುತ್ತಾಳೆ. ಆ ಕೂಸಿನ ತಂದೆಯು ಅದನ್ನು ಮನಸಿಗೆ ಬಂದರೆ ತೆಗೆದುಕೊಳ್ಳುತ್ತಾನೆ. ಆ ಕೂಸನ್ನು ಅನ್ಯ ಜಾತಿಯವರಿಗೆ ಕೊಟ್ಟರೂ ನಡೆಯುತ್ತದೆ. ಅದು ತಾಯಿಯನ್ನು ಬಿಟ್ಟ ಹೊರ್ತು ಜಾತಿಯೊಳಗೆ ಬರುವುದಿಲ್ಲ. ಪೂರ್ವದಲ್ಲಿ ಹೆಣ್ಣು ಕೂಸು ಹುಟ್ಟಿದರೆ ಪಾತರದವರಿಗೆ ಕೊಡುವ ಪದ್ಧತಿಯಿತ್ತು. ಕೂಸನ್ನು ಪರರಿಗೆ ಕೊಟ್ಟ ನಂತರ ಜಾರಿಣಿಯಾದ ವಿಧವೆಯು ಬ್ರಾಹ್ಮಣನ ಚಕ್ರತೀರ್ಥ ತೆಗೆದುಕೊಂಡು ತಮ್ಮ ಜಾತಿಗೆ ಊಟ ಹಾಕಿದ ಬಳಿಕ ಶುದ್ಧವಾಗುತ್ತಾಳೆ. ಪೂರ್ವದಲ್ಲಿ ವಿಧವೆಯರ ತಲೆ ಬೋಳಿಸುತ್ತಿದ್ದರು. ಈಗ ಐದು ಪಟ್ಟಿಗಳನ್ನು ತೆಗೆದು ಬೋಳಿಸುವ ಸಂಸ್ಕಾರ ಮಾಡಿದ ಹಾಗೆ ಮಾಡುತ್ತಾರೆ.

ಸಾಳಿಗಳಲ್ಲಿ ಸುಂತಾಸಾಳಿ ಎಂಬುದೊಂದು ಜಾತಿಯಿದೆ. ಪೂರ್ವದಲ್ಲಿ ಇವರು ಮುಸಲ್ಮಾನರಾದವರು ಮತ್ತೆ ಹಿಂದೂಗಳಾದರು. ಆದ್ದರಿಂದ ಸುಂತಾಸಾಳಿ ಹೆಸರು ಬಂದಿದೆ. ಈಗಲೂ ಇವರಲ್ಲಿ ಸುಂತಿಮಾಡುವ ರೂಢಿಯಿದೆ.

ಉತ್ತರ ಕನ್ನಡ ಜಿಲ್ಲೆಯ ಪದ್ಮಸಾಳಿಗಳು ಭಿನ್ನವಾಗಿದ್ದಾರೆ. ಶಿರಸಿ ತಾಲ್ಲೂಕಿನಲ್ಲಿ ವಾಸಿಸುವ ಇವರು ತಮ್ಮ ಹೆಸರಿನ ಮುಂದೆ ಶೆಟ್ಟಿ ಪಾಳ್ಯ ಎಂದು ಸೇರಿಸುತ್ತಾರೆ. ಇವರ ಭಾಷೆ ಕನ್ನಡ. ಮುಂಚೆ ತಮಿಳನ್ನಾಡುತ್ತಿದ್ದರಂತೆ, ಇವರು ಮಾರ್ಕಾಂಡೇಯನ ವಂಶಸ್ಥರೆಂದು ಹೇಳುತ್ತಾರೆ. ಇವರಲ್ಲಿ ಅರಿಶಿನ ಪತ್ಲದವರೆಂಬ ಒಳಜಾತಿಯಿದೆ. ಇವರು ಮಧ್ಯಮಾಂಸ ಸೇವಿಸುತ್ತಾರೆ. ಜನಿವಾರ ಹಾಕಿಕೊಂಡು ಲಿಂಗವಂತರಂತೆ ವಿಭೂತಿ ಮುಂತಾದ ಶೈವ ಚಿನ್ಹೆಗಳನ್ನು ಧರಿಸುವರು. ವಿಧವೆಯರ ಲಗ್ನಕ್ಕೆ ವಿರೋಧವಿಲ್ಲ. ಮೂಲವೃತ್ತಿ ಬಟ್ಟೆ ನೇಯುವುದು.

2. ಹಟಕಾರರು(ದೇವಾಂಗ): ದಕ್ಷಿಣದಲ್ಲಿ ಇವರ ವಾಸ ಹೆಚ್ಚು. ಬಾಗಲಕೋಟೆ ಗುಳೇದಗುಡ್ಡಗಳಲ್ಲಿ ಇವರು ನೇಯುವ ಬಟ್ಟೆ ಪ್ರಸಿದ್ಧವಾಗಿವೆ. ಇವರ ಭಾಷೆ ಕನ್ನಡ ಇವರಲ್ಲಿ ಕುಲಾಚಾರಿಗಳು, ಶಿವಾಚಾರಿಗಳು ಎಂಬ ಕವಲುಗಳಿವೆ. ಕುಲಾಚಾರಿಗಳು ವೈದಿಕರು, ಶಿವಾಚಾರಿಗಳು ಲಿಂಗವಂತರು. ಕುಲಾಚಾರಿಗಳಲ್ಲಿ 16 ಸಂಸ್ಕಾರಗಳಿವೆ. ಬ್ರಾಹ್ಮಣರಂತೆ ಹೆಂಗಸರು ಕಚ್ಚೆಹಾಕುತ್ತಾರೆ. ಮುಟ್ಟಾದಾಗ ಮೂರು ದಿವಸ ಹೊರಗೆ ಕೂಡುತ್ತಾರೆ. ಶಿವಾಚಾರಿಗಳ ಹೆಣ್ಣನ್ನು ಕುಲಾಚಾರಿಗಳು ಮದುವೆಯಾಗುತ್ತಾರೆ. ಆದರೆ ಮದುವೆಯ ಪೂರ್ವದಲ್ಲಿ ಆ ಹೆಣ್ಣನ್ನು ಶುದ್ಧ ಮಾಡಿಕೊಳ್ಳುತ್ತಾರೆ. ಹುಡುಗಿಯ ಮೈಗೆ ಮಣ್ಣು ಬೂದಿಯನ್ನು ಹಚ್ಚಿ, ಆಕೆಯ ತಲೆಯ ಮೇಲೆ ನಾದಿಗನ ಕತ್ತಿಯಂತೆ ದರ್ಭೆಯ ಕಡ್ಡಿಯನ್ನು ಆಡಿಸಿ, ಎಣ್ಣೆಹಚ್ಚಿ ಎರೆಯುವರು. ಬಳಿಕ ಹೋಮ ಮಾಡಿ ಮನೆಯ ದೇವರ ತೀರ್ಥವನ್ನು ಆಕೆಗೆ ಕೊಟ್ಟ ಬಳಿಕ ಶುದ್ಧಳಾಗುತ್ತಾಳೆ. ಶಿವಾಚಾರಿಯ ಮಗಳನ್ನು ಕುಲಾಚಾರಿಯು ತಕ್ಕೊಂಡಾಗ ಸಹ ಅವರಿಗೂ ಇವರಿಗೂ ಅನ್ನವ್ಯವಹಾರ ಆಗುವುದಿಲ್ಲ.ನಿವಾರ, ಲಿಂಗ ಎರಡೂ ಧರಿಸಿದ ಕುಲಾಚಾರಿಗಳಿರುವರು. ತಂದ ಜನಿವಾರ, ಮಗ ಲಿಂಗ ಧರಿಸಿದ ಮಾದರಿಯೂ ಇದೆ. ಬಾದಾಮಿ ಬನಶಂಕರಿಗೆ ನಡೆದುಕೊಳ್ಳುತ್ತಾರೆ. ಮಧ್ಯಮಾಂಸ ನಿಷೇಧ. ತಮ್ಮ ಅನ್ಯವನ್ನು ಅನ್ಯಜಾತಿಯವರಿಗೆ ತೋರಗೊಡುವುದಿಲ್ಲ. ಅನ್ಯಜಾತಿಯಲ್ಲಿ ಊಟ ನಡೆಯದು. ಹೆಣ್ಣುಮಗಳ ಲಗ್ನ ನೆರಿಯುವ ಮೊದಲೇ ಆಗಬೇಕು. ವಿಧವೆಯ ಲಗ್ನ ನಿರಾತಂಕವಾಗಿ ನಡೆಯುತ್ತದೆ. ಹಟಕಾರರು ವಿಧವೆಗೆ ಹೆಚ್ಚು ವರದಕ್ಷಿಣೆ ಕೊಡುತ್ತಾರೆ. ಯಾಕೆಂದರೆ ಮದುವೆಯಾದ ಮೇಲೆ ವಿಧವೆಯಿಂದ ನೇಯುವ ಕೆಲಸಕ್ಕೆ ಸಹಾಯವಾಗುತ್ತದೆ. ಎಲ್ಲಮ್ಮನ ಮಗನಾದ ಪರಶುರಾಮನು ದೇವಾಂಗ ಋಷಿಯ ಮಕ್ಕಳಲ್ಲಿ ಕೆಲವರನ್ನು ಕೊಂದನಂತೆ ಆದ್ದರಿಂದ ಹಟಕಾರರು ಎಲ್ಲಮ್ಮನಿಗೆ ನಡಕೊಳ್ಳುವುದಿಲ್ಲ. ಇವರ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಾರೆ.

3. ಜಾಡರು: ಕನ್ನಡಿಗರು: ಇವರು ತೋರಿಕೆಯಲ್ಲಿ ಹಟಕಾರರಿಗೂ ಇವರಿಗೂ ಭೇದಕಾಣದು. ಇವರಲ್ಲಿ 18 ಒಳಜಾತಿಗಳಿವೆ. ಆದರೆ ಶಿವಶಾಮಶೆಟ್ಟಿ; ಸೋಮಸಾಳಿ; ಪಟ್ಟಸಾಳಿ; ಕುರುವಿನಶೆಟ್ಟಿ ಮುಖ್ಯವಾದುವು ಮತ್ತು ಜಾಡರಲ್ಲಿ ಕರಿಜಾಡರು, ಬಿಳಿಜಾಡರೆಂಬ ಎರಡು ವರ್ಗಗಳಿವೆ. ಕೆಲವು ಬ್ರಾಹ್ಮಣ ಮತ್ತೆ ಕೆಲವರು ಲಿಂಗವಂತ ಅನುಯಾಯಿಗಳಿದ್ದಾರೆ. ಬ್ರಾಹ್ಮಣರ ಅನುಯಾಯಿಗಳೂ ಕುಲಾಚಾರಿಟಕಾರಂಥವರು ಹೆಚ್ಚಾಗಿ ಶೂದ್ರರಂತೆ ವರ್ತಿಸುತ್ತಾರೆ. ಜನಿವಾರ ನಿರ್ಬಂಧವಿಲ್ಲ. ಸ್ನಾನ ಮಾಡುವುದಿಲ್ಲ. ಮಧ್ಯಮಾಂಸ ಸೇವಿಸುತ್ತಾರೆ. ನೀಳಕಟಬಾಳ್ಕಿ ಎಂಬ ಜಾತಿಯವರು ಕುರುವಿನಶೆಟ್ಟಿಯವರಿಗೆ ಹೆಣ್ಣು ಮಕ್ಕಳನ್ನು ಕೊಡುತ್ತಾರೆ. ಈ ನೀಳಕಟಬಾಳ್ಕಿಯೆಂಬ ಕುಲದವರು ಲಿಂಗವನ್ನು ಭಸ್ಮಸಹಿತ ಬಲಗಾಲಿಗೆ ಸರ್ಪಣಿಯಂತೆ ಕಟ್ಟಿಕೊಳ್ಳುತ್ತಾರೆ. ಜಾಡರ ಕುಲದೈವ ಬನಶಂಕರಿ. ಜಾಡರಿಗೆ ಮಹಾರಾಷ್ಟ್ರ ಭಾಷೆ ಗೊತ್ತಿಲ್ಲ.

4. ಪಟವೇಗಾರರು: ಅಂದರೆ ರೇಶಿಮೆ ಮಾಡುವವರು. ಇವರು ಗುಜರಾತ್‌ನಿಂದ ಬಂದ ಕ್ಷತ್ರಿಯರೆಂದು ಹೇಳುತ್ತಾರೆ. ಧಾರವಾಡ ಜಿಲ್ಲೆಯಲ್ಲಿ ಇವರನ್ನು ಕ್ಷತ್ರಿಯರೆನ್ನುತ್ತಾರೆ. ಇವರ ಭಾಷೆಯಲ್ಲಿ ಗುಜರಾತಿ; ಮರಾಠಿ; ಹಿಂದೂಸ್ತಾನಿ ಮಿಶ್ರವಾಗಿರುತ್ತವೆ. ಎಲ್ಲಾ ಶುದ್ದ ಕಾರ್ಯಗಳಿಗೆ ಬ್ರಾಹ್ಮಣರು ಪೌರೋಹಿತ್ಯಕ್ಕೆ ಬರುತ್ತಾರೆ. ಜನಿವಾರ ಹಾಕುತ್ತಾರೆ. ತುಳಸೀ ಗಿಡ ಕಡ್ಡಾಯ ಮನೆಯಲ್ಲಿರಬೇಕು. ಭಾರಧ್ವಾಜ; ಜಮದಗ್ನಿ; ಕಶ್ಯಪ; ಕಾತ್ಯಾಯನ; ವಾಲ್ಮೀಕಿ; ವಸಿಷ್ಠ; ವಿಶ್ವಾಮಿತ್ರ ಗೋತ್ರಗಳಿವೆ. ತುಳಜಾ, ಬನಶಂಕರಿ; ವಿಠೋಬ ಇವರ ದೈವಗಳು. ಮದ್ಯಮಾಂಸ ಸ್ವೀಕರಿಸುತ್ತಾರೆ. ಮೂಲವೃತ್ತಿ ರೇಶಿಮೆಗೆ ಬಣ್ಣಹಾಕೋದು ಬಟ್ಟೆನೇಯುವುದು. ಹೆಣ್ಣುಮಕ್ಕಳ ಲಗ್ನ ಚಿಕ್ಕಂದಿನಲ್ಲೇ ಆಗಬೇಕು. ವಿಧವೆಯರಿಗೆ ಒಮ್ಮೆ ಮಾತ್ರ ಲಗ್ನವಾಗುವುದು. ಹೆಂಗಸರಿಗೆ ಕುಂಕುಮ, ಕಚ್ಚೆಗಳಿರುತ್ತವೆ. ಈ ಹೆಂಗಸರಲ್ಲಿ ಕೆಲವರು ಮಾಘಪೂರ್ಣಿಮೆಯಲ್ಲಿ ಕುಲದೇವತೆಯ ಗರ್ಭಗುಡಿಯೊಳಗೆ ಹೋಗಿ ಬೆತ್ತಲೆಯಾಗಿ ಬೇವಿನ ಹುಟ್ಟಿಗೇ ಉಟ್ಟುಕೊಂಡು, ದೇವಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನೂ ಆರತಿಯನ್ನೂ ಮಾಡಿ ಬರುತ್ತಾರೆಂದು ಹೇಳುತ್ತಾರೆ. ಇವರು ಹೆಣಗಳನ್ನು ಸುಡುತ್ತಾರೆ. ಔರಂಗಜೇಬನ ಕಾಲದಲ್ಲಿ ಹಲವು ಪಟವೇಗಾರರು ಮುಸಲ್ಮಾನರಾದರೆಂದು ಹೇಳುತ್ತಾರೆ. ಇವರು ಬೆಳಗಾವಿ ಜಿಲ್ಲೆಯಲ್ಲಿದ್ದಾರೆ.

5.ಕುರುವಿನ ಶೆಟ್ಟಿಗಳು: ಇವರಿಗೆ ಹೀರೇ ಕುರುವಿನವರೆಂತಲೂ ಕರೆಯುತ್ತಾರೆ. ಭಾಷೆ ಕನ್ನಡ, ಮೈಬಣ್ಣ ಕಪ್ಪು, ಲಿಂಗವಂತಧರ್ಮದವರು. ಕುರುವಿನ ಶೆಟ್ಟಿಗಳಲ್ಲಿ ವಿಧವೆಯರ ಲಗ್ನಕ್ಕೆ ಅಡ್ಡಿಯಿಲ್ಲ. ಆದರೆ ಗಂಡಸತ್ತಾಗ ಹೊಸ ಸೀರೆ ಉಟ್ಟುಕೊಂಡು ಗಂಡನ ಹೆಣಕ್ಕೆ ಆರತಿ ಮಾಡಿದ ಹೆಂಗಸು ಎರಡನೇ ಲಗ್ನ ಮಾಡಿಕೊಳ್ಳಕೂಡದೆಂದು ಕಟ್ಟಳೆಯುಂಟು. ಇವರ ಮೂಲವೃತ್ತಿ ನೇಯುವುದು. ಚಿಕ್ಕ ಕುರುವಿನವರೂ ಹಿರೇಕುರುವಿನವರಂತೆಯೇ ಆಚರಣೆ ಮಾಡುತ್ತಾರೆ. ಆದರೆ ಲಿಂಗಧಾರಣೆ ಮಾಡುವುದಿಲ್ಲ. ಬ್ರಾಹ್ಮಣರನ್ನು ಲಗ್ನ ಕಾರ್ಯಕ್ಕೆ ಕರೆಯುತ್ತಾರೆ. ಆದರೆ ಹೆಣವನ್ನು ಹುಗಿಯುವಾಗ ಜಂಗಮನನ್ನು ಕರೆಯುತ್ತಾರೆ.

ನೇಕಾರರು ಪ್ರಾಚೀನ ಚರಿತ್ರೆಯೆಂಬ ಭಾಗವನ್ನು ಕ್ರಿ.ಶ. 1893ರಲ್ಲಿ ಮಾನ್ಯ ವೆಂಕಟ ರಂಗೋಕಟ್ಟಿಯವರು ಭಾಷಾಂತರಿಸಿದ ಧಾರವಾಡ; ಬೆಳಗಾವಿ; ವಿಜಾಪುರ; ಕಾನಡಾ ಗ್ಯಾಝೇಟಿಯರ್‌ದಿಂದ ಪಡೆಯಲಾಗಿದೆ.

ನೇಕಾರರು: ಸಮುದಾಯದ ಚರಿತ್ರೆ

ನೇಕಾರಿಕೆಯ ಮೂಲತಃ ಒಂದು ವೃತ್ತಿ. ಮುಂದೆ ಜಾತಿ, ಸಮುದಾಯವಾಗಿ ರೂಪು ಪಡೆದಿದೆ. ಬಹುಶಃ ಕರ್ನಾಟಕದ ನೇಕಾರರು ಒಂದು ಕಾಲದಲ್ಲಿ ತಮ್ಮ ವೃತ್ತಿಯನ್ನು ಒಂದು ಉದ್ದಿಮೆಯನ್ನಾಗಿ ರೂಪಿಸಲು ಸಾಧ್ಯವಿದೆ. ನೇಯ್ಗೆಯ ಸಂಬಂಧಿ, ನೇಕಾರರ ಸಂಬಂಧಿಯಾದ ಲಿಖಿತ ದಾಖಲೆಗಳು, ಮೌಖಿಕ  ಆಕರಗಳು ಅಲ್ಲಲ್ಲಿ ದೊರೆಯುತ್ತವೆ.

ಶಾಸನಗಳ ಸಾಲಿನಲ್ಲಿ

ಕನ್ನಡ ಶಾಸನಗಳಲ್ಲಿ ನೇಕಾರರನ್ನು ಸಾಲಿಗ ಎಂಬ ಪರಿಭಾಷೆಯಿಂದ ಕರೆಯಲಾಗಿದೆ. ಸಾಲೆ ಎಂಬ ಪದ ಬಟ್ಟೆ. ಅರಿವೆ ಎಂಬುದನ್ನು ಸೂಚಿಸುತ್ತದೆ. ಸಾಲೆ ಪದಕ್ಕೆ ಇಗ ಎಂಬ ಪುರುಷವಾಚಿ ಪ್ರತ್ಯಯ ಸೇರಿ ಸಾಲಿಗ ಆಗಿದೆ. ಇದರರ್ಥವೇ ಮಹಿಳೆಯನ್ನು ಒಳಗೊಳ್ಳದ ನೇಕಾರ ಎಂಬುದನ್ನು ಸೂಚಿಸುವಂತಿದೆ. ವೃತ್ತಿಮೂಲ ಪದಗಳಲ್ಲಿಯೂ, ಜಾತಿಮೂಲ ಪದಗಳಲ್ಲಿಯೂ ಮಹಿಳೆಯು ಅಪ್ರದಾನವಾಗಿದ್ದಳೆಂಬುದು ಭಾಷಿಕ ಪರಿಕರಗಳಿಂದಲೂ ಸ್ಪಷ್ಟವಾಗುತ್ತದೆ. ಕ್ರಿ.ಶ.1278ರ ಚನ್ನಪಟ್ಟಣ ತಾಲೂಕು ಯಲಿಯೂರ ಗ್ರಾಮದ ಶಾಸನದಲ್ಲಿ, ನೇಕಾರ ವೃತ್ತಿಯವರಿಗೆ ಮಗ್ಗದದೇಣಿ ಎಂಬ ಸುಂಕವನ್ನು ಹಾಕುತ್ತಿದ್ದರೆಂಬ ಮಾಹಿತಿಯು ದೊರೆಯುತ್ತದೆ. ಇದರಿದ 12ನೇ ಶತಮಾನದಷ್ಟು ಹಿಂದೆ ನೇಕಾರಿಕೆಯು ಬ್ರಹತ್ ಉದ್ದಿಮೆಯಾಗಿರುವಂತೆ ತೋರುತ್ತದೆ.

ನೇಕಾರರನ್ನು ಸಮಯಾಸಾಲಿಗ, ಜೇಡ, ಜಾಡ ಪಟ್ಟಗಾರ, ನೆವ್ವಾರ, ನೇಶೆ ಮುಂತಾದ ಹೆಸರುಗಳಿಂದಲೂ 10ನೇ ಶತಮಾನದ ಶಾಸನಗಳು ಉಲ್ಲೇಖಿಸಿವೆ. ಕರ್ನಾಟಕದ ನೇಕಾರರು ರಾಜಪ್ರಭುತ್ವದಲ್ಲಿ ಮಹತ್ವದ ಸ್ಥಾನ ವಹಿಸಿದ್ದರೆಂಬುದನ್ನು ತಿಳಿಯಬಹುದಾಗಿದೆ. ನೇಕಾರಿಕೆಯ ವೃತ್ತಿಯನ್ನವಲಂಬಿಸಿದ ಸಮುದಾಯದವರ ಪ್ರತ್ಯೇಕ ಗುಂಪುಗಳಾಗಿ ವಾಸಿಸುತ್ತಿದ್ದರೆಂಬುದನ್ನು ಕ್ರಿ.ಶ.1145ರ ಸಾಲವಾಡಗಿ ಶಾಸನದ ಸಾಲಿಗ ಮೂನೂರ್ವರು; ಎಂಬ ಉಲ್ಲೇಖದಿಂದ ತಿಳಿಯುತ್ತದೆ. ಕಾರಣ ಈ ಸಮುದಾಯದ ಮಹಿಳೆಯೂ ಒಳಗೊಂಡಂತೆ ಬಟ್ಟೆ ನೇಯುವ ಕಾರ್ಯದಲ್ಲಿ ಮೂನ್ನೂರು ಜನರ ಒಂದು ಗುಂಪು ಸಂಘಟಿತರಾಗಿದ್ದುದು ವಿಶೇಷವಾಗಿದೆ. ನೇಕಾರಿಕೆ ಎಷ್ಟು ಮಹತ್ವವಾಗಿತ್ತೆಂಬುದು ಈ ಉಲ್ಲೇಖದಿಂದ ತಿಳಿಯುತ್ತದೆ. ಅಲ್ಲದೇ ಇಂತಹ ಸಂಘಟಿತ ನೇಕಾರಿಕೆಯ ವೃತ್ತಿಮೂಲದ ಗುಂಪು ಅಲ್ಲಲ್ಲಿ ನೆಲೆಸಿದ್ದು ಉದ್ದಿಮೆಯನ್ನು ಮುನ್ನಡೆಸಿದ ಉಲ್ಲೇಖಗಳು ದೊರೆಯುತ್ತವೆ. ಕ್ರಿ.ಶ.1071ರ ಅಮ್ಮಿನಬಾವಿ ಶಾಸನ ಸಾಲೆಸಾಸಿರ್ವರು ಎಂಬ ಮತ್ತೊಂದು ಉಲ್ಲೇಖನವನ್ನು ನೀಡುತ್ತದೆ. ಸಾವಿ ಮಂದಿಯ ಈ ನೇಕಾರದ ಗುಂಪನ್ನು ದಾನಿಗಳ್ ಗುಣಾಗ್ರಣಿಗಳ್ ಎಂಬ ವಿಶೇಷಣಗಳಿಂದಲೂ ಕರೆಯಲಾಗಿದೆ. ಅಣ್ಣಿಗೇರಿಯ ಶಾಸನವೊಂದರಲ್ಲಿಯೂ ಈ ಸಮುದಾಯವನ್ನು ದಾನವಿನೋದರು ಸತ್ಯವಂತರು ಎಂದು ಸಂಬೋಧಿಸಿದೆ. ಇದರಿಂದ ನೇಕಾರ ಸಮುದಾಯದ ವ್ಯಕ್ತಿಗುಣ ಸಂಪನ್ನತೆಗಳೂ ಅರಿವಿಗೆ ಬರುತ್ತವೆ.

ನೇಕಾರ ಸಮುದಾಯ ಒಂದು ಕಾಲದಲ್ಲಿ ಆರ್ಥಿಕವಾಗಿ ಸಬಲವಾಗಿತ್ತೆಂಬುದಕ್ಕೆ ದಾನಿಗಳು ಎಂಬ ಶಾಸನೋಕ್ತ ವಿಶೇಷಣಗಳಿಂದ ತಿಳಿಯುತ್ತದೆ. ಸಾಲೆ ಸಾಸಿರ್ವರು, ಸಾಲೆ ಮೂನೂರ್ವರು ಎಂಬ ಉಲ್ಲೇಖಗಳಲ್ಲಿ ಮಹಿಳೆಯರು, ಪುರುಷರು ಯಾವ ಸಂಖ್ಯೆಯಲ್ಲಿದ್ದರೆಂಬುದು ತಿಳಿಯುವುದಿಲ್ಲ. ಆದರೆ ಮಹಿಳೆಯರ ಸಹಭಾಗಿತ್ವ ಮಾತ್ರ ಇದ್ದಿರಲೇ ಬೇಕೆಂಬುದನ್ನು ಊಹಿಸಬಹುದು. ಭೌಗೋಳಿಕವಾಗಿ ಅಲ್ಲಲ್ಲಿ ನೆಲೆಯೂರಿದ್ದ ನೇಕಾರ ಗುಂಪುಗಳು ತಮ್ಮ ವೃತ್ತಿಯಲ್ಲಿ ನೈಪುಣ್ಯತೆಯನ್ನು, ಕಲಾತ್ಮಕತೆಯನ್ನು ರೂಢಿಸಿಕೊಂಡಿದ್ದ ಬಗ್ಗೆ ಕ್ರಿ.ಶ. 1092ರ ಯರಗುಪ್ಪ ಶಾಸನ ವಿವರ ನೀಡುತ್ತದೆ. ನಯವಾದ ಬಟ್ಟ್ಟೆಯನ್ನು ತಯಾರಿಸುವವರನ್ನು ಪುಟ್ಟಸಾಲಿಗ ಪಟ್ಟೆಗಾರ ಎಂದು ಯರಗುಪ್ಪಿಯ ಶಾಸನ ಕರೆದಿದೆ. ಆಂಧ್ರದ ತೆಲುಗು ಶಾಸನವೊಂದರಲ್ಲಿ ರೇಷ್ಮೆಯ ಸೀರೆಗಳನ್ನು ನೇಯುವವರನ್ನು ಪಟ್ಟುಚಾಲಿ ಎಂಬ ಹೆಸರಿನಿಂದ ಕರೆಯಲಾಗಿದೆ. ಇಂದಿಗೂ ಪಟ್ಟು ಚೀರಲು ಎಂದರೆ ರೇಷ್ಮೆ ಸೀರೆ ಎಂದರ್ಥದಲ್ಲಿ ಅಲ್ಲಿ ಕರೆಯುವ ರೂಢಿಯಿದೆ. ಕ್ರಿ.ಶ. 1157ರ ಕನ್ನಡ ಶಾಸನವೊಂದರಲ್ಲಿ ನೇಕಾರ ಸಮುದಾಯವನ್ನು ತಂತುವಾಯಾನ್ವ ಯಾರ್ ಎಂದೂ ಉಲ್ಲೇಖಿಸಿದೆ. ನೇಕಾರರು ಉಪಯೋಗಿಸುವ ವಸ್ತುಗಳಿಂದಲೂ ಅವರನ್ನು ಗುರುತಿಸಿರುವುದು ವಿಶೇಷವಾಗಿದೆ.

ಶಾಸನೋಕ್ತ ನೆಇಗಾರಶೆಟ್ಟಿ, ಕುರುಹಿನಶೆಟ್ಟಿ ದೇಡಸೀರೆ: ನೂಲುಪಟ್ಟಿ ಸೂತ್ರ ಎಂಬ ಪದಗಳು ನೇಕಾರರ ವ್ಯಾಪಾರದ ಮನೋಧರ್ಮವನ್ನು ಸೂಚಿಸುತ್ತವೆ. ಶೆಟ್ಟಿ ಪದವು ವ್ಯವಹಾರ, ವ್ಯಾಪಾರ ಸಂಬಂಧಿಯಾದುದರಿಂದ ನೇಕಾರ ಸಮುದಾಯದ ಗುಂಪೊಂದು ನೇಯ್ದ ಬಟ್ಟೆಯನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದರಿಂದ ವ್ಯಕ್ತಿ ನಾಮಗಳಲ್ಲಿ ವಾರ್ಗಿಕವಾಗಿ ಸೇರಿಕೊಂಡಿದೆ.

ವಿಶೇಷವೆಂದರೆ ಕ್ರಿ.ಶ.1415ರ ಸಂಗೂರ ಶಾಸನವೊಂದು ವೀರಪ್ಪ, ಸೋಮಗೊಂಡ, ನರಸಿಂಹಗೊಂಡ, ನಾಗಪ್ಪ ಎಂಬ ಪಟ್ಟಸಾಲಿಗಳನ್ನು ಹೆಸರಿಸಿದೆ. ಕರ್ನಾಟಕದ ಯಾವ ಶಾಸನದಲ್ಲಿಯೂ ನೇಕಾರ ಮಹಿಳೆಯ ಉಲ್ಲೇಖವಿಲ್ಲ. ಇದರಿಂದ ಮಹಿಳೆಯರು ನೇಕಾರ ಪುರುಷರ ಬೆನ್ನಲುಬಾಗಿ ದುಡಿದು ತೆರೆಮರೆಯಲ್ಲಿದ್ದರೆಂಬುದು ಗಮನಾರ್ಹ.

ನೇಕಾರರ ಕುರಿತು ಉಲ್ಲೇಖ ಮಾಡುವ ಶಾಸನಗಳೆಲ್ಲ 10ನೇ ಶತಮಾನದಿಂದ ಈಚಿನವುಗಳಾಗಿವೆ. ಹಾಗಾಗಿ ಈ ಸಮುದಾಯ 12ನೇ ಶತಮಾನದಷ್ಟೊತ್ತಿಗೆ ಪ್ರಬಲ ಉದ್ದಿಮೆಗಳನ್ನು ರೂಪಿಸಿಕೊಂಡು ಬಸವಣ್ಣನವರ ನೇತೃತ್ವದ ಜಾತಿರಾಹಿತ್ಯ ಚಳವಳಿಯಲ್ಲಿ ಪಾಲ್ಗೊಂಡು ವೃತ್ತಿಯ ಹೆಸರಿನಿಂದಲೇ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿವೆಯೆನ್ನಬಹುದು.

ಪುರಾಣಗಳ ಜಾಡಿನಲ್ಲಿ

ನೇಕಾರ ಸಮುದಾಯ ತನ್ನ ಸಂಸ್ಕೃತಿಯನ್ನು, ಪೂರ್ವಚರಿತ್ರೆಯನ್ನು ಕಟ್ಟಿಕೊಳ್ಳಲು ಕೆಲವು ಪೌರಾಣಿಕ ಕಥೆಗಳನ್ನು ಹೆಣೆದುಕೊಂಡಿದೆ. ಇತರೆ ಎಲ್ಲ ಸಮುದಾಯಗಳೂ ಈ ಬಗೆಯ ಕಥೆಗಳ ಮೂಲಕವೇ ತಮ್ಮ ಜನಾಂಗದ ಪ್ರಾಚೀನತೆ ಮತ್ತು ಹೆಚ್ಚುಗಾರಿಕೆಯನ್ನು, ಅಸ್ತಿತ್ವವನ್ನು ನೆಲೆಗೊಳಿಸಲು ಹವಣಿಸಿವೆ. ನೇಕಾರ ಸಮುದಾಯ ದೇವಾಂಗಪುರಾಣ: ಭಾವನಾಋಷಿಪುರಾಣ: ಮಾರ್ಕಂಡೇಶ್ವರ ಪುರಾಣ: ಸಾಲೇರ್ಶವರ‌್ಪುರಾಣ: ನೀಲಕಂಠಮಹಿಮೆ ಮುಂತಾದ ಪುರಾಣಗಳನ್ನು ಭಾವನಾತ್ಮಕವಾಗಿ ನೆಮ್ಮಿಕೊಂಡಿವೆ. ಪೂಜನೀಯವೆಂದು ಭಾವಿಸುತ್ತವೆ. ಈ ಕಥೆಗಳಿಂದಲೇ ಸಮುದಾಯ ತಮ್ಮ ಪೂರ್ವಿಕರನ್ನು ದೇವಾನು ದೇವತೆಗಳ ಮುಖೇನವೇ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತವೆ. ಭಾರತದಂತಹ ದೇಶದಲ್ಲಿ ಸಾಮಾನ್ಯವಾಗಿ ಎಲ್ಲ ಸಮುದಾಯಗಳು ಇಂಥಾ ಪುರಾಣಗಳ ಜಾಡಿನಲ್ಲಿ ಚರಿತ್ರೆಯನ್ನು ನಿರ್ಮಾಣ ಮಾಡಿಕೊಂಡದದ್ದಿದೆ.

ನೇಕಾರ ಸಮುದಾಯದ ಭಾವನಾಋಷಿಪುರಾಣದಲ್ಲಿ ಬರುವ ಒಂದು ಕಥೆ ಹೀಗಿದೆ. ಕಾಳವಸುರ ಎಂಬ ರಾಕ್ಷಸನೊಬ್ಬನನ್ನು ಭಾವನಾರಾಯಣ ಋಷಿ ಕೊಂದು ಅವನ ವಕ್ಷಸ್ಥಲವನ್ನು ಬಗೆದು ಅದನ್ನೇ ಮಗ್ಗದ ಕುಣಿಯನ್ನಾಗಿ, ಅವನ ತಲೆಬುರುಡೆಯನ್ನು ಬಾನಿಯಾಗಿ ಮಾಡಿ, ಅಂಗಗಳನ್ನೆಲ್ಲಾ ಮಗ್ಗದ ಸಾಧನಗಳನ್ನಾಗಿಸಿ, ವಿಷ್ಣುವಿನ ನಾಭಿಯನ್ನು ನೂಲಿನಂತೆ ನೇಯ್ದು ಬಟ್ಟೆಯನ್ನು ತಯಾರಿಸಿದ ಎಂಬಲ್ಲಿ ನೇಕಾರರ ಕಾಯಕನಿಷ್ಠೆಯನ್ನು ಗುರುತಿಸಬಹುದು. ಮನುಷ್ಯರಿಗೆ ಜೀವನಕ್ಕಿಂತ ಹೆಚ್ಚು ವೃತ್ತಿ ಮುಖ್ಯವಾದದು. ವಿಷ್ಣು ಸಾಕ್ಷಾತ್ ದೇವರಾದರೂ ಕಾಯಕಯೋಗಿಗೆ ಅದು ಮುಖ್ಯವಲ್ಲ. ಅವನ ನಾಭಿಯನ್ನೇ ನೂಲುವ ಕ್ರಿಯೆಯು ಮೊದಲು ವೃತ್ತಿಯನ್ನು ಮಾಡು ಎಂಬುದನ್ನು ಸಂಕೇತಿಸುತ್ತದೆ. ಹಾಗಾಗಿ ಭಾವನಾತ್ಮಕವಾಗಿ ದೇವರನ್ನು ಪೂಜಿಸಿದರೂ ಮಿಗಿಲಾಗಿ ವೃತ್ತಿಯನ್ನು, ಅದಕ್ಕೆ ಸಂಬಂಧಿಸಿದ ಪರಿಕರಗಳನ್ನು ಇವರು ಜೀವನದ ಮುಖ್ಯ ಆಧಾರಗಳೆಂದು ತಿಳಿಯುತ್ತಾರೆ. ಮತ್ತೊಂದು ಕಥೆ ಹೀಗಿದೆ. ಆದಿಯಲ್ಲಿ ಮನುಷ್ಯರಿಗೂ, ದೇವರಿಗೂ ಬಟ್ಟೆ ಇದ್ದಿಲ್ಲ. ಅವರು ಶಿವನ ಬಳಿಗೆ ಹೋಗಿ ಏನಾದರೂ ಆವರಣವನ್ನು ಕೊಡೆಂದು ಬೇಡಿಕೊಂಡರು. ಶಿವನಿಗೆ ಬುದ್ಧಿ ಹರಿಯದ್ದರಿಂದ ಮೂರ್ಛೆ ಬರಲಾಗಿ, ಆ ಮೂರ್ಛೆಯಲ್ಲಿ ಕನಸಿನಂತೆ ತನ್ನ ಮೈಯಿಂದ ಒಬ್ಬ ಉಗ್ರ ಸ್ವರೂಪಿಯಾದ ಮನುಷ್ಯನು ಹೊರಟಂತೆ ಕಂಡನು. ಆ ಮನುಷ್ಯನು ವಸ್ತ್ರವನ್ನುಟ್ಟುಕೊಂಡು ಜನಿವಾರ, ವಿಭೂತಿ, ರುದ್ರಾಕ್ಷಿ ಮಾಲೆಗಳನ್ನು ಧರಿಸಿದ್ದನು. ಶಿವನು ಎಚ್ಚೆತ್ತ ಬಳಿಕ ಕನಸಿನಲ್ಲಿ ಕಂಡ ಆ ಮನುಷ್ಯನೇ ತನ್ನೆದುರಿಗೆ ನಿಂತಿದ್ದನ್ನು ನೋಡಿದನು. ಅವನು ತನ್ನ ಮೈಯಿಂದ  ಹೊರಟವನಾದ ಕಾರಣ ಅವನಿಗೆ ದೇವಾಂಗ ನೆಂಬ ಹೆಸರಿಟ್ಟು, ಬಟ್ಟೆಗಳನ್ನು ನೇಯ್ದು ಮನುಷ್ಯರಿಗೂ ದೇವತೆಗಳಿಗೂ ಕೊಡೆಂದು ಹೇಳಿದನು. ದೇವಾಂಗನ ವಸ್ತ್ರಗಳಿಂದ ಕಶ್ಯಪನು ಸಂತುಷ್ಟನಾಗಿ ದೇವದತ್ತಿಯೆಂಬ ತನ್ನ ತಂಗಿಯನ್ನು ಅವನಿಗೆ ಲಗ್ನಮಾಡಿ ಕೊಟ್ಟನು. ಇದಲ್ಲದೇ ದೇವಾಂಗನು ಲಗ್ನದಲ್ಲಿ ಹೋಮ ಮಾಡುವಾಗ ಅಗ್ನಿಕುಂಡದಿಂದ ಅಗ್ನಿದತ್ತಿಯೆಂಬ ಕನ್ನಿಕೆ ಹೊರಟು ಅವನನ್ನೇ ಲಗ್ನಮಾಡಿಕೊಂಡಳು. ಈ ಇಬ್ಬರು ಹೆಂಡಂದಿರ ಸಂತತಿಗಳೇ ನಾನಾ ಪ್ರಕಾರದ ನೇಕಾರರ ಜಾತಿಗಳಾದವು. ಹಟಕಾರರು ಮೊದಲು ಲಿಂಗವಂತರಿದ್ದರು. ದೇವಾಂಗನೆಂಬ ಋಷಿಯ ಅವರಲ್ಲಿ ಕೆಲವರಿಗೆ ಉಪದೇಶಮಾಡಿ ತನ್ನ ಶಿಷ್ಯರನ್ನು ಮಾಡಿಕೊಂಡನು. ಅವರು ಹಠದಿಂದ ದೇವಾಂಗನ ಉಪದೇಶವನ್ನು ಕೈಕೊಂಡದ್ದರಿಂದ ಹಟಕಾರರೆಂಬ ಹೆಸರು ಅವರ ಸಂತತಿಗೆ ಬಂತು(ಶ್ರೀ ವೆಂಕಟರಂಗೋಕಟ್ಟಿ).

ಈ ಕಥೆಯಲ್ಲಿಯೂ ಇಡೀ ಜಗತ್ತಿಗೆ ನೇಕಾರರು ಎಷ್ಟು ಮುಖ್ಯರೆಂಬುದನ್ನು ತಿಳಿಸುವ ಹಂಬಲವಿದ್ದಂತಿದೆ. ದೇವತೆಗಳಿಗೂ ಮಾನವರಿಗೂ ಬಟ್ಟೆಯನ್ನು ತೊಡಲು ಅಥವಾ ನಾಗರಿಕರಾಗಲು ಮೂಲ ಕಾರಕರು ಈ ಸಮುದಾಯ. ಜೊತೆಯಲ್ಲಿ ಮೇಲಿನ ಕಥೆ ಜನಿವಾರ, ವಿಭೂತಿ, ರುದ್ರಾಕ್ಷಿಗಳ ಧಾರಣೆಯ ಪ್ರಸ್ತಾಪಮಾಡುವುದರಿಂದ ಮೂಲತಃ ಶೈವ ಬ್ರಾಹ್ಮಣರನ್ನೇ ದೇವಾಂಗದವರು ಅನುಸರಿಸುತ್ತಿರಬಹುದು. ವೈದಿಕ ಮೂಲದಿಂದ ಕ್ರಮೇಣ ಶೈವಮೂಲಕ್ಕೆ ಬಂದಿರಬಹುದೆಂದು ತಿಳಿಯಬಹುದು.

ಭೌಗೋಳಿಕ ನೆಲೆಗಳು

ನೇಕಾರರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಮೂಲ ವೃತ್ತಿಯಿಂದ ಕೈಮಗ್ಗದಿಂದ ನೇಯ್ಗೆಯನ್ನು ಮಾಡುವವರೇ ಹೆಚ್ಚಾಗಿದ್ದು ಜೀವನಾಧಾರಕ್ಕೆ ಚರಕ, ಕೈಮಗ್ಗಗಳೇ ಆಸರೆಯಾಗಿವೆ. ಅಲ್ಲಲ್ಲಿ ಬಂಡವಾಳ ಇರುವವರು ಸಣ್ಣ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಯಂತ್ರಚಾಲಿತ ಕೈಮಗ್ಗಗಳನ್ನೂ ಹೊಂದಿದ್ದಾರೆ. ಮಹಿಳೆಯರೇ ಕೈಮಗ್ಗ, ಚರಕದಿಂದ ನೇಯವಲ್ಲಿ ಪ್ರಮುಖರಾಗಿದ್ದಾರೆ. ಮನೆಕೆಲಸದೊಂದಿಗೆ ವೃತ್ತಿಯಲ್ಲೂ ಈಕೆಯದು ಪ್ರಧಾನ ಪಾತ್ರ.

ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಇಳಕಲ್ಲು, ರಬಕವಿ, ಗುಳೇದಗುಡ್ಡ, ಮಹಾಲಿಂಗಪುರ, ಬನಕಟ್ಟಿ, ಅಮೀನಗಡ, ಸೂಳೇಬಾವಿ, ರಾಣೆಬೆನ್ನೂರು, ಗದಗ, ಕೊಪ್ಪಳ, ಹೊಸಪೇಟೆ, ಕೊಟ್ಟೂರು ಮುಂತಾದಲ್ಲಿ ನೇಕಾರಿಕೆಯ ವೃತ್ತಿಯು ನಿರಂತರವಾಗಿ ನಡೆಯುತ್ತಿದೆ. ಹೈದ್ರಾಬಾದ್ ಕರ್ನಾಟಕದ ದೇವದುರ್ಗ, ಆಳಂದ, ರಾಯಚೂರು, ಬಳ್ಳಾರಿ, ಕಾರಟಗಿ, ಮಾನ್ವಿ ಮುಂತಾದಲ್ಲಿ ನೇಕಾರರು ವಾಸಿಸುತ್ತಿದ್ದಾರೆ. ದಕ್ಷಿಣ ಕರ್ನಾಟಕದ ದೊಡ್ಡಬಳ್ಳಾಪುರ ಶ್ರೀರಾಂಪುರ, ಬೆಂಗಳೂರು, ಮೈಸೂರು, ಕೆ.ಆರ್.ಪೇಟೆ, ಮಂಡ್ಯ, ಕಿಕ್ಕೇರಿ, ಹೊಸಹೊಳಲು, ಬಸಾಪಟ್ಟಣ, ಚಿಕ್ಕನಾಯಕನಹಳ್ಳಿ, ಕೋಟಹಳ್ಳಿ, ಮೇಲುಕೋಟೆ ಮೊಳಕಾಲ್ಮೂರು, ಚಿತ್ರದುರ್ಗ ಮುಂತಾದಲ್ಲಿ ಅಧಿಕ ಸಂಖ್ಯೆಯಲ್ಲಿ ವಾಸಮಾಡುತ್ತಾರೆ.

ನೇಕಾರರು ಕರ್ನಾಟಕದ ವಿವಿಧ ಭೌಗೋಳಿಕ ವಲಯಗಳಲ್ಲಿ ವಾಸ ಮಾಡುತ್ತಿದ್ದರೂ ಬಹುತೇಕ ಇವರ ದೈನಂದಿನ ಆಚರಣೆಗಳು ಹಬ್ಬಾಚರಣೆಗಳು ಒಂದೇ ತೆರನಾಗಿರುವುದು ಕಂಡು ಬರುತ್ತದೆ. ವೈದಿಕಮೂಲ ಶೈವಮೂಲದ ಆಚರಣೆಗಳು ಏಕವಾಗಿಲ್ಲ. ಭಿನ್ನನೆಲೆಯಲ್ಲಿವೆ. ಅಲ್ಲದೇ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಮೊಳಕಾಲ್ಮೂರು ಭಾಗದ ನೇಕಾರರು ಆಂಧ್ರಮೂಲದ ಜಾಡ ಪದ್ಮಶಾಲಿಗಳಾಗಿದ್ದು ಇವರ ಆಚರಣೆಯಲ್ಲಿ ಕೊಂಚ ಭಿನ್ನತೆಯಿರುವುದು ಕಂಡು ಬರುತ್ತದೆ. ಉತ್ತರ ದಕ್ಷಿಣ ಕರ್ನಾಟಕದ ನೇಕಾರರ ವಿಧಿ-ಆಚರಣೆಗಳು ಸಾಮಾನ್ಯವಾಗಿ ಏಕರೂಪದವು. ಪ್ರಾದೇಶಿಕತೆಯನ್ನು ಮೈಗೂಡಿಸಿಕೊಂಡು ಕೊಂಚ ಬದಲಾಗಿಯೂ ಇರುವುದಿದೆ.

ಒಳ ಬಗೆಗಳು

ನೇಕಾರ ಎಂಬುದು ಒಂದು ವೃತ್ತಿಮೂಲ ಪರಿಭಾಷೆ. ಇದು ಇಂಥದೇ ಜಾತಿ ಎಂಬ ಅರ್ಥಸೂಚಿಸುವುದಿಲ್ಲ. ಆದರೆ ಭಾರತದಲ್ಲಿ ವೃತ್ತಿಪರ ಸಮುದಾಯಗಳು ಜಾತಿಯಾಗಿ ಮಾರ್ಪಾಡುಗೊಂಡಿರುವುದು ತಿಳಿಯುತ್ತದೆ. ಅದರಂತೆ ನೇಕಾರ ವೃತ್ತಿಯೂ ಜಾತಿಯಾಗಿ ಸ್ಥಿತ್ಯಂತರಗೊಂಡಿದೆ. ನಂತರ ನೇಕಾರ ಜನಾಂಗದಲ್ಲಿ ಹಲವು ಭಿನ್ನ ಒಳಬಗೆಗಳೂ ಇವೆ. ಮುಖ್ಯವಾಗಿ ಪದ್ಮಶಾಲಿ : ದೇವಾಂಗ: ಕುರುಹಿನಶೆಟ್ಟಿ: ಪಟ್ಟಶಾಲಿ;ಸ್ವಕುಳಶಾಲಿ: ತೊಗಟವೀರ ಎಂಬ ಆರು ಪಂಗಡಗಳಿವೆ. ಅಲ್ಲದೇ ಜನಸಾಮಾನ್ಯ ಪರಿಭಾಷೆಯಲ್ಲಿ ಜಾಡ: ಸಾಳಿ: ಪಟಗಾರ:ದಿಂಕಸಾಲಿ: ತೊಗಟವೀರ:ಎಂದೂ ಆಂಧ್ರದ ಗಡಿಭಾಗದಲ್ಲಿ ವಾಸಿಸುವ ಕರ್ನಾಟಕದ ನೇಕಾರರಿಗೆ ನೆವ್ವಾರ: ಜಾಡ: ನೇಸೆವಾರು ಎಂಬ ಹೆಸರಿನಲ್ಲೂ ಕರೆಯಲಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಕೆಲವು ಭೌಗೋಳಿಕ ಪರಿಸರದಲ್ಲಿ ಸಹಸ್ರಾರ್ಜುನ ಸೋಮವಂಶ ಕ್ಷತ್ರಿಯರೆಂದೂ ಕರೆದುಕೊಳ್ಳುತ್ತಾರೆ. ಬಹುಶಃ ಹೀಗೆ ಕರೆದುಕೊಳ್ಳುವವರು ಮಹಾರಾಷ್ಟ್ರ ಮೂಲದವರಿರಬೇಕು. ಆಂಧ್ರಮೂಲದ ನೇಕಾರರು ಆರ್ಥಿಕವಾಗಿ ಸಬಲರಾಗಿದ್ದಾರೆ. ಆದ್ದರಿಂದ ನೇಕಾರ ಸಮಾವೇಶಗಳಲ್ಲಿ ಅವರದೇ ಮುಖ್ಯಪಾತ್ರ ಹಾಗೂ ತೆಲುಗು ಭಾಷೆಯೇ ಅಲ್ಲಿ ಪ್ರಚಲಿತವಾಗಿರುತ್ತದೆ.

ಕರ್ನಾಟಕ ಸಂಸ್ಕೃತಿಯ ಅಧ್ಯಯನದಲ್ಲಿ ನೇಕಾರರನ್ನು ಒಳಪಡಿಸಿ ಅಧ್ಯಯನ ಕೈಗೊಂಡರೆ ನೇಕಾರ ಪರಿಭಾಷೆಯೇ ಮುನ್ನೆಲೆಯಲ್ಲಿರುತ್ತದೆ. ಇನ್ನಿತರ ಒಳಪಂಗಡಗಳು ಗೌಣವಾಗಿರುತ್ತವೆ. ಹಾಗೆಂದು ಶೈವ-ವೈಷ್ಣವ ಎರಡೂ ಆರಾಧಕರಿರುವ ಈ ಸಮುದಾಯ ಗಣನೀಯ ಭಿನ್ನನೆಲೆಯ ಆಚರಣೆ ಸಂಸ್ಕೃತಿಯನ್ನು ರೂಢಿಸಿಕೊಂಡಿಲ್ಲ. ಅಂತೆಯೇ ಆಯಾ ಪ್ರದೇಶದಲ್ಲಿ ನೆಲೆಯೂರಿದ ನೇಕಾರರು ಸ್ಥಳೀಯ ಆಚರಣೆಗಳನ್ನೂ ತಮ್ಮ ಸಮುದಾಯದ ಆಚರಣೆ ಎಂಬಂತೆ ಮೈಗೂಡಿಸಿಕೊಂಡಿರುವುದೂ ಇದೆ. ಭಿನ್ನ ಒಳಪಂಗಡಗಳೊಂದಿಗೆ ಮದುವೆ ಕಾರ್ಯ ನಡೆಯುವುದಿಲ್ಲ. ಊಟೋಪಚಾರವೂ ನಿಷಿದ್ಧ. ಈಗ ಇಂತಹ ಬಂಧನ ಸಡಿಲವಾಗಿದೆ.

ದೇವಿ ಆರಾಧನೆ: ಮಹಿಳೆಗಿಲ್ಲ ಸ್ಥಾನಮಾನ

ನೇಕಾರ ಸಮುದಾಯ ಶಕ್ತಿದೇವತೆಗಳನ್ನು ಅಪಾರ ಭಕ್ತಿ. ಶ್ರದ್ಧೆಗಳಿಂದ ಪೂಜಿಸುತ್ತದೆ. ಪದ್ಮಶಾಲಿ ಪಂಗಡದವರು ಬಾದಾಮಿಯ ಬನಶಂಕರಿದೇವತೆಯನ್ನು ಕುಲದೈವವೆಂದು ಪೂಜಿಸುತ್ತಾರೆ. ತೊಗಟವೀರ ಪಂಗಡದವರು ಚೌಡೇಶ್ವರಿ ದೇವಿಯನ್ನು ವಿಶೇಷವಾಗಿ ಆರಾಧಿಸುತ್ತಾರೆ. ಭಯ-ಭಕ್ತಿಯ ನೆಲೆಯಲ್ಲಿ ಹೆಣ್ಣನ್ನು ಪೂಜಿಸುವ ಈ ಸಮುದಾಯವು ಸಾಮಾಜಿಕ ಜೀವನದಲ್ಲಿ ಆಕೆಗೆ ಮಹತ್ವ ನೀಡದಿರುವುದು ವಿಚಿತ್ರವೇ ಸರಿ. ಕೌಟುಂಬಿಕವಾಗಿ ಮಹಿಳೆಯು ಸಾಂಪ್ರದಾಯಿಕ ಕಟ್ಟುಪಾಡುಗಳಲ್ಲಿಯೇ ಜೀವನ ಸಾಗಿಸಬೇಕು. ಆಕೆಯನ್ನು ಹೆರುವ-ಷೋಷಿಸುವ-ಮನೆಗೆಲಸ ನಿರ್ವಹಿಸುವ ಕಾಮಾಸಕ್ತಿಗಳನ್ನು ಪೂರೈಸುವ ನೆಲೆಯಲ್ಲಿಯೇ ಈವರೆಗೆ ನೋಡಲಾಗುತ್ತಿದೆ. ಪುರಷಾಕಾರ ವ್ಯವಸ್ಥೆ ಭಯದಲ್ಲಿ ಹೆಣ್ಣನ್ನು ದೇವತೆಯೆಂದು ಪೂಜಿಸುತ್ತದೆಯಷ್ಟೆ. ವಾಸ್ತವದಲ್ಲಿ ಆಕೆಯ ಸ್ಥಾನಮಾತ್ರ ಎರಡನೇ ದರ್ಜೆಯಲ್ಲಿದೆ.

ಈ ಸಮುದಾಯ ನೀಲಕಂಠೇಶ್ವರ, ದತ್ತಾತ್ರೇಯ, ಸಾಲೇಶ್ವರ ಮತ್ತು ಮಾರ್ಕಂಡೇಶ್ವರನನ್ನು ಮುಖ್ಯವಾಗಿ ಆರಾಧಿಸುತ್ತದೆ. ನೇಕಾರ ಸಮುದಾಯದಲ್ಲಿ ಲಿಂಗಾರಾಧಕರಾದವರು ಮಹಿಳೆಗೆ ಲಿಂಗಧರಿಸುವ ಪೂಜಿಸುವ ಮುಕ್ತಿಹೊಂದುವ ಅವಕಾಶ ಕಲ್ಪಿಸಿದ್ದಾರೆ. ಇದು ವಚನ ಚಳವಳಿಯ ಫಲವೆಂದು, ಆಕೆಗೆ ಸ್ವಾತಂತ್ರ ನೀಡುವ ಆಧ್ಯಾತ್ಮಿಕ ಸಾಮಾಜಿಕ ರಂಗದಲ್ಲಿ ಸಮಾನ ಅವಕಾಶ ನೀಡಲಾಯಿತು. ವೈಷ್ಣವಾರಾಧಕ ನೇಕಾರರಲ್ಲಿ ಮಹಿಳೆ ಜನಿವಾರ ಧರಿಸುವಂತಿಲ್ಲ. ಅಲ್ಲದೇ ಆಕೆ ಮೋಕ್ಷಸಾಧನೆಗೆ ಬಾಹಿರಳು. ವೈದಿಕ ಅನುಯಾಯಗಳಲ್ಲಿ ಮಹಿಳೆಯ ಸ್ಥಾನಮಾನ ಕೊಂಚ ಸಾಂಪ್ರದಾಯಿಕ ನೆಲೆಯಿಲ್ಲಿದ್ದು ಸ್ವಾತಂತ್ರ್ಯ ಕಡಿಮೆ. ವೀರಶ್ಯವ ಧರ್ಮದ ಅನುಯಾಯಿಗಳಲ್ಲಿ ಮಹಿಳೆಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ ಸಾಮಾಜಿಕವಾಗಿ ಎಲ್ಲ ಬಗೆಯ ಸ್ವಾತಂತ್ರ್ಯಗಳಿಲ್ಲ. ಕೊಂಚ ಸಡಿಲವಾದ ನಿಯಮಗಳು ಆಕೆಯ ಮೇಲಿವೆಯೆಂಬುದು ಗಮನಾರ್ಹ.

ನೇಕಾರ ಮಹಿಳೆ : ಜೀವನ ಪದ್ಧತಿ

ನೇಕಾರ ಮಹಿಳೆಯರು ಪುರುಷರಂತೆಯೇ ಸಮಾಜದಲ್ಲಿ ತಮ್ಮದೇ ಜೀವನ ಪದ್ಧತಿಗೆ ಹೊಂದಿಕೊಂಡಿದ್ದಾರೆ. ಪುರುಷನೊಂದಿಗೆ ಸಾಮಾಜಿಕ ಬದುಕಿನಲ್ಲಿ ಹೆಗೆಲೆಣೆಯಾಗಿ ನಡೆದಿದ್ದಾಳೆ. ಹಲವು ತಲ್ಲಣಗಳ ನಡುವೆಯೂ ತನ್ನತನದ ಹಾದಿಯಲ್ಲಿ ತುಳಿದ ಹೆಜ್ಜೆಗಳು ತೊಟ್ಟ ರೂಪಗಳು ಎಂಥವೆಂಬುದನ್ನು ಅವಲೋಕಿಸಿಬಹುದು.

ವಿವಾಹ: ವಧುವಿನ ಆಯ್ಕೆ

ನೇಕಾರ ಸಮುದಾಯದ ಮಹಿಳೆಯ ವರನ ಆಯ್ಕೆಯನ್ನು ಸ್ವತಂತ್ರವಾಗಿ ನೋಡಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿಲ್ಲ. ಸಾಮಾನ್ಯವಾಗಿ ವಧುವಿನ ಆಯ್ಕೆಗೆ ಗಂಡಿನ ಕಡೆಯ ದೈವದವರು ಬಂದು ಆಯ್ಕೆ ಮಾಡುತ್ತಾರೆ. ವರನ ಒಪ್ಪಿಗೆಯೂ ಇರುತ್ತದೆ. ವರ ಇಷ್ಟವಿರಲಿ ಇಲ್ಲದಿರಲಿ ಹಿರಿಯರ ಮಾತಿಗೆ ಮರುಮಾತುಗೊಡದೆ ಹೆಣ್ಣು ಒಪ್ಪಿಕೊಳ್ಳಬೇಕು. ಆಕೆಯ ಇಷ್ಟ-ಅನಷ್ಟಕ್ಕೆ ಯಾವುದೇ ಸ್ವಾತಂತ್ರ್ಯವಿರುವುದಿಲ್ಲ.

ವಧುವಿನ ಆಯ್ಕೆಯಲ್ಲಿ ನಿಷೇಧಗಳು

 ವಧುವನ್ನು ಆಯ್ಕೆಮಾಡುವ ಪೂರ್ವದಲ್ಲಿ ಗಂಡಿ ಕಡೆಯ ಗೌಡ-ಹೆಗಣೆ ಮತ್ತು ಹಿರಿಯ ಹೆಂಗಸರು ಹೆಣ್ಣಿನ ಕಾಲಿಗೆ ದಾರಹಾಕುತ್ತಾರೆ. ಎರಡೂ ಪಾದಗಳನ್ನು ಜೋಡಿಸಿದಾಗ ಹೆಚ್ಚಿನ ಸಂದು ಇದ್ದರೆ ಆಕೆಯು ವಿವಾಹಕ್ಕೆ ಅನರ್ಹಳು ಮತ್ತು ಹಾಗೇನಾದರೂ ವಿವಾಹ ನಡೆದರೆ ಗಂಡನಿಗೆ ಅನಿಷ್ಟ ತಪ್ಪಿದ್ದಲ್ಲ ಎಂಬ ನಂಬಿಕೆಯಿದೆ.

ಸುಳಿ ತೆಗೆಯುವುದು

 ನೇಕಾರ ವಧುವನ್ನು ಆಯ್ಕೆ ಮಾಡುವಾಗ ಆಕೆಯ ತಲೆಯಲ್ಲಿನ ಸುಳಿಪರೀಕ್ಷೆ ನಡೆಯುತ್ತದೆ. ಆಕೆಗೇನಾದರೂ ಎದುರುಸುಳಿ ಯಿದ್ದರೆ ವಿವಾಹಾ ನಂತರ ಅತ್ತೆ-ಮಾವ-ಗಂಡ-ಮೈದುನರ ಜೊತೆಗೆ ವಾಗ್‌ಯುದ್ಧ ನಡೆಯುತ್ತದೆ. ಎದುರುಸುಳಿಯಿದ್ದ ವಧು ಹೆಚ್ಚು ವಾಚಾಳಿಯೂ, ಪ್ರಶ್ನೆ ಮಾಡುವ ಮನೋಭಾವದವಳೂ, ಜಗಳಗಂಟಿಯೂ  ಆಗಿರುತ್ತಾಳೆಂದು ನಂಬುವುದರಿಂದ ಆಕೆಯನ್ನು ವಿವಾಹವಾಗಲು ನಿರಾಕರಿಸಲಾಗುತ್ತದೆ. ನೇಕಾರ ಯುವತಿಗೆ ತಲೆಯ ಮಧ್ಯ ಭಾಗದಲ್ಲಿ ಎರಡು ಸುಳಿ ಗಳೇನಾದರೂ ಇದ್ದರೆ  ಆಕೆ ಗಂಡನಲ್ಲದೇ ಪರಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದುತ್ತಾಳೆ. ಇಲ್ಲವೇ ಮತ್ತೊಬ್ಬ ಗಂಡನನ್ನು ಹೊಂದುತ್ತಾಳೆಯೆಂಬ ನಂಬಿಕೆಯಿದೆ. ಆಕೆಗೆ ಒಡಿಸುಳಿ ಅಂದರೆ ಸುರಳಿಸುತ್ತಿದ ಸುಳಿಯಿದ್ದರೆ ಸಂಸಾರ ಕಷ್ಟಗಳ ಸುಳಿಗೆ ಸಿಕ್ಕು ಒದ್ದಾಡುತ್ತದೆ ಎಂಬ ನಂಬಿಕೆಯಿದೆ. ಎದುರುಸುಳಿ: ಎರಡು ಸುಳಿ: ಒಡಿಸುಳಿ: ಇರುವ ಕನ್ಯೆಯನ್ನು ವಿವಾಹವಾಗುವುದಿಲ್ಲ.

ದೈಹಿಕ ರಚನೆಯ ಕಾರಣವು ಸಂಪ್ರದಾಯವಾಗಿ ಹೆಣ್ಣಿನ ಚಹರೆಯ ಮೇಲೆಯೇ ಆಕೆಯ ವೈವಾಹಿಕ ಸಂಬಂಧವನ್ನು ನಿರಾಕರಿಸುವ ಪುರುಷಪ್ರಧಾನ ವ್ಯವಸ್ಥೆಯ ಪುರೋಹಿತ ಶಾಹಿಗಳಿಂದ ಸುಳಿನೋಡಿಸುವ ಕರಾಳ ಆಚರಣೆಗೆ ಮುಂದಾಗಿರುವುದು ದುರಂತವೇ ಸರಿ. ಮಾರುಕಟ್ಟೆಯಲ್ಲಿ ಪಶುಗಳನ್ನು ಕೊಳ್ಳುವಾಗಲೂ ಸುಳಿಗಳನ್ನು ನೋಡಲಾಗುತ್ತದೆ. ಹೆಣ್ಣನ್ನು ಪಶುಗಳಂತೆಯೇ ಕಾಣುತ್ತಿರುವ ಸಾಂಪ್ರದಾಯಿಕ ನೇಕಾರ ಸಮಾಜವು ಈಚೆಗೆ ಈ ವಿಷಯದಲ್ಲಿ ಸರಳವಾಗಿರುವುದೂ ಕಂಡುಬರುತ್ತದೆ.

ನೇಕಾರ ಯುವತಿಗೆ ಕಣ್ಣಲ್ಲಿ ಹೂ ಬಿದ್ದಿದ್ದರೆ ಆಕೆಯನ್ನು ವಿವಾಹ ಆಗುವುದಿಲ್ಲ. ಹೀಗೆ ದೇಹರಚನೆಯನ್ನೇ ಮುಂದುಮಾಡಿಕೊಂಡು ಅದಕ್ಕೆ ಸಲ್ಲದ ಗೊಡ್ಡು ಆಚರಣೆ ರೂಪಿಸಿಕೊಂಡು ಶೋಷಿಸುವುದು ಶೋಚನೀಯ ಸಂಗತಿ. ಮೂಲಾನಕ್ಷತ್ರದಲ್ಲಿ ಜನಿಸಿದ ಯುವತಿಯಂತೂ ಜೀವನದಲ್ಲಿ ಹಡೆದವರಿಗೂ ಕೂಡ ಬೇಡವಾಗುತ್ತಾಳೆ. ಜನನ ಒಂದು ಶುಭಗಳಿಗೆಯೆಂಬುದನ್ನು ತೆರೆಮರೆಗೆ ಸರಿಸಿದ ಸಮುದಾಯಗಳು ವೈದಿಕ ಶಾಹಿಯ ಜ್ಯೋತಿಷ್ಯ ಪ್ರಣೀತ ಮೂಲಾನಕ್ಷತ್ರ ಕಾರಣ ಜನನ ಎಂಬ ನೆಪಮಾಡಿ ಆಕೆಯ ಬದುಕನ್ನು ನರಕಮಯಗೊಳಿಸುವ ತಂತ್ರ ಮಹಿಳೆಯ ಮೇಲಿನ ಚಾರಿತ್ರಿಕ ಶೋಷಣೆಯನ್ನು ವಿವರಿಸುತ್ತದೆ. ಪುರುಷನಿಗೆ ಅಂಗ ಊನವಿದ್ದರೂ, ವಯಸ್ಸು ಮೀರಿದ್ದರೂ ಬಾಲೆಯರನ್ನು ಮದುವೆಯಾಗುವ ಸ್ವಾತಂತ್ರ್ಯವಿದೆ. ಮೂಲಾನಕ್ಷತ್ರ, ಕುಜದೋಷ, ಅಂಗವೈಕಲ್ಯಗಳೆಂಬುವು ಕೇವಲ ಸ್ತ್ರೀಯ ಬದುಕಿನ ನಿರ್ಧಾರಕ್ಕೆ ಅಂಟಿಕೊಂಡಿವೆಯೆಂಬುದನ್ನು ಗಮನಿಸಿದರೆ ವಧುವಿನ ಆಯ್ಕೆಯ ಹಿಂದಿನ ಪುರುಷಮೌಲ್ಯ ಅಥವಾ ಪುರುಷರ ಅಧಿಕಾರ, ದರ್ಪಗಳ ಸ್ವರೂಪ ಅನಾವರಣಗೊಳ್ಳುತ್ತದೆ.

ದೊಡ್ಡೀಳ್ಯೆ ಜಂಭ್ರ

ವಧುವಿನ ಆಯ್ಕೆ ಖಚಿತವಾದಂತಾದರೆ ಬಂದ ಗಂಡಿನ ಕಡೆಯವರು ಸಿಹಿಉಂಡು ಹೋಗುತ್ತಾರೆ. ಮುಂದಿನ ಕಾರ್ಯಕ್ರಮವೇ ದೊಡ್ಡೀಳ್ಯೆಜಂಭ್ರ. ನೇಕಾರ ಸಮುದಾಯದ ಪದ್ಮಶಾಲಿ:ದೇವಾಂಗ:ಸಾಳೆ:ಕರುಹಿನಶೆಟ್ಟಿ:ಪಟಗಾರ: ತೊಗಟವೀರ ಇವರಲ್ಲಿ ದೊಡ್ಡೀಳ್ಯೆ ಜಂಭ್ರ ಏಕಪ್ರಕಾರವಾಗಿದೆ. ಈ ಸಮುದಾಯ ನೇಮಿಸಿಕೊಂಡ ದೈವದಮಂದಿ ಗೌಡ: ಹೆಗಣಿ(ಹೆಗಡೆ)ಗಳ ಜೊತೆಗೂಡಿ ಕುಟುಂಬದ ಬಂಧು ಬಳಗದೊಂದಿಗೆ ಹೆಣ್ಣಿನ ಮನೆಗೆ ಬರುತ್ತಾರೆ. ವಧುವಾಗಿ ಆಯ್ಕೆಯಾದವಳಿಗೆ ಸೀರೆ ಕುಪ್ಪಸವಿತ್ತು ಜೋಡು ಎಲೆ ಅಡಿಕೆ ತೆಂಗು ನೀಡುತ್ತಾರೆ. ನೆರೆದ ಜನರೆದುರು ಹುಡುಗಿಯ ತಂದೆಯ ಬಾಯಲ್ಲಿ ಹುಡುಗನ ತಂದೆ ಸಕ್ಕರೆಯನ್ನು ಹಾಕಿ ವೀಳ್ಯವನ್ನು ಬದಲಾಯಿಸಿಕೊಂಡರೆ ಜಂಭ್ರವು ಮುಗಿಯುತ್ತದೆ. ಈ ಕಾರ್ಯದಲ್ಲಿ ಹೆಣ್ಣುಮಕ್ಕಳ ಕೆಲಸ ಹೆಜ್ಜೇನೂ ಇಲ್ಲ. ಆಕೆ ಏನಿದ್ದರೂ ಅಡುಗೆಯ ಉಸ್ತುವಾರಿಯಲ್ಲಿರುತ್ತಾಳಷ್ಟೇ.  ಹಿರಿಯರು ಒಪ್ಪಿದ, ಹೇಳಿದ ಕಾರಣಕ್ಕೆ ಮೌನವಾಗಿ ಒಪ್ಪಿಕೊಂಡ ಯುವತಿಯು ಜಂಭ್ರಕ್ಕೂ ತನ್ನ ಸಮ್ಮತಿಯನ್ನು ಸೂಚಿಸಲೇಬೇಕು. ವರನನ್ನು ನಿರಾಕರಿಸುವ, ಬದಲಾಯಿಸುವ, ತನ್ನ ನೆಚ್ಚಿನ ವರನ ಕೈ ಹಿಡಿಯುವ ಅವಕಾಶವಿಲ್ಲ. ಆದರೆ  ಗಂಡು ದೊಡ್ಡೀಳ್ಯೆ ಜಂಭ್ರವಾದ ಮೇಲೂ ಕನ್ಯೆಯನ್ನು ಬದಲಾಯಿಸುವ ಅವಕಾಶ ಹೊಂದಿದ್ದಾನೆ. ದೊಡ್ಡೀಳ್ಯೆಜಂಭ್ರವಾದ ಕೆಲದಿನಗಳ ನಂತರ ಪ್ರಶಸ್ತ ಕಾಲವನ್ನು ನೋಡಿ ಮದುವೆಯ ದಿನವನ್ನು ಗೊತ್ತುಮಾಡುತ್ತಾರೆ.

ಭೂಮ ತಿನ್ನುವುದು

ನೇಕಾರರಲ್ಲಿ ಭೂಮ ತಿನ್ನುವ ಕಾರ್ಯ ಅತ್ಯಂತ ಪ್ರಾಮುಖ್ಯವಾದದು. ಮಾಂಗಲ್ಯಧಾರಣೆಯ ಮುಂಚಿನ ಸಮಯದಲ್ಲಿ, ಈ ಕಾರ್ಯ ನೆರವೇರಿಸುತ್ತಾರೆ. ಹೋಳಿಗೆ ತಿನ್ನುವುದೇ ಈ ಕಾರ್ಯ. ನೇಕಾರ ಸಮುದಾಯದಲ್ಲಿ ದೇವಾಂಗದವರು ಒಂಟಿ ಭೂಮದವರು. ಒಬ್ಬರಿಗೆ ಒಂದು ಹೋಳಿಗೆಯಂತೆ ಇಪ್ಪತ್ತೊಂದು ಹೋಳಿಗೆ ಮಾಡಿ ಪೂಜಿಸಿ, ಕುಲದೈವ, ಮನೆದೈವಕ್ಕೆ ಅರ್ಪಿಸಿ ಒಂದಗಲೂ ಬಿಡದಂತೆ ಯಾರೂ ನೋಡದಂತೆ ತಿನ್ನುವುದು ರೂಢಿಯಲ್ಲಿದೆ. ಸಾಳೇರು, ತೊಗಟವೀರರು, ಕುರುಹಿನಶೆಟ್ಟಿ, ಪದ್ಮಶಾಲಿಗಳಲ್ಲಿ ಜೋಡು ಭೂಮದ ಆಚರಣೆ ಜಾರಿಯಲ್ಲಿದೆ. ಒಬ್ಬರಿಗೆ ಎರಡು ಹೋಳಿಗೆಯಂತೆ ಇಪ್ಪತ್ತೊಂದು ಜನರಿಗೆ ನಲವತ್ತೆರಡು ಹೋಳಿಗೆ ಮಾಡಿ ಯಾರೂ ನೋಡದಂತೆ ಪೂಜಿಸಿ, ತಿನ್ನುವುದು ರೂಢಿಯಲ್ಲಿದೆ. ಪಟೆಗಾರ ಪಂಗಡದಲ್ಲಿ ’ಭೂಮ’ ದ ಕಾರ್ಯ ಇರುವುದಿಲ್ಲ. ಒಂಟಿ ಭೂಮ ಮತ್ತು ಜೋಡು ಭೂಮದ ಹೋಳಿಗೆಗಳನ್ನು ತಿನ್ನುವ ಮುಂಚೆ ಮದುಮಕ್ಕಳ ಮುಖದ ಮೇಲೆ ನಿವಾಳಿಸಿ ತಿನ್ನುವ ರೂಢಿಯಿದೆ.

ಭೂಮದ ಕಾರ್ಯದಲ್ಲಿ ಮನೆಮಂದಿಗೆ ಮಾತ್ರ ನೋಡಲು ಅವಕಾಶ. ಅಲ್ಲದೇ ಗಂಡನ ಮನೆಗೆ ಹೋದ ಮನೆಮಗಳೂ ನೋಡಲವಕಾಶವಿಲ್ಲ. ಬಹುಶಃ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬ ಜನಪದರ ಸಾಂಪ್ರದಾಯಿಕ ಧೋರಣೆ ಈ ಆಚರಣೆಯಲ್ಲಿದ್ದಂತೆ ತೋರುತ್ತದೆ.

ಸೀಮರ ಪೊಡಗ

ನೇಕಾರ ಮಹಿಳೆಯ ಮದುವೆಯ ಸಂದರ್ಭದಲ್ಲಿ ’ಸೀಮರ ಪೊಡಗ’ ಕಾರ್ಯಕ್ರಮ ಪ್ರಮುಖವಾದ ಆಚರಣೆಯಾಗಿದೆ. ಮದುವೆಯ ಮುಂಚಿನ ಮೂರು ದಿನದಲ್ಲಿ ಕುಂಬಾರ ಮನೆಯಿಂದ ಹೊಸ ಗಡಿಗೆಯೊಂದನ್ನು ತಂದು, ದೇವರ ಮನೆಯಲ್ಲಿಟ್ಟು ಗಡಿಗೆಯಲ್ಲಿ ತೆಂಗಿನಕಾಯಿ, ಎಲೆ-ಅಡಿಕೆ, ಅಕ್ಕಿಯನ್ನು ತುಂಬಿ, ಪರಿಯಾಣವನ್ನು ಮುಚ್ಚುತ್ತಾರೆ. ಗಡಿಗೆಯ ಅಡಿಯಲ್ಲಿ ಜೋಳವನ್ನು ಹಾಕಿಡುತ್ತಾರೆ. ಹೊಸಗಡಿಗೆಯ ಕಂಠದ ಸುತ್ತಲೂ ಮದುಮಗಳಿಗೆ ಸಂಬಂಧಿಸಿದ ಹೊಸ ರೇಷ್ಮೆ ಸೀರೆ, ಕುಪ್ಪಸ ಆಭರಣಗಳಾದ ಕಾಲಂದಿಗೆ, ಕಾಲುಂಗರ, ಕಾಲಸುತ್ತು, ಮೂಗುತಿ, ಬೆಂಡೋಲೆ, ತಾಲಕ್ಕುಕುಡ್ಡಿ, ಡಾಬು, ತೋಳಬಂಧಿ ಮುಂತಾದುವನ್ನು ಹಾಕಿ ಸಿಂಗರಿಸುತ್ತಾರೆ. ಪೊಡಗ (ಗಡಿಗೆ)ದ ಮುಂದೆ ಐದು ಪತ್ರಾವಳಿಯಲ್ಲಿ ಸಜ್ಜಕದ ಎಡೆಯನ್ನು (ನೈವೇದ್ಯ) ಮಾಡಿ, ಪಂಚಕಳಸವಿಟ್ಟು ಪೂಜಿಸುತ್ತಾರೆ. ಈ ಪೂಜೆಯಲ್ಲಿ ಐದು ಜನ ಮುತ್ತೈದೆ ಹೆಂಗಸರು ಮಂಗಳಹಾಡುತ್ತಾರೆ. ಮದುವೆಯಾಗಲಿರುವ ಹೆಣ್ಣು ಈ ಪೂಜೆಯಲ್ಲಿ ವಿಶೇಷವಾಗಿ ಅಲಂಕರಿಸಿಕೊಂಡು ಸೀಮರಪೊಡಗದ ಮುಂದೆ ಏಕಾಂತವಾಗಿ ಕುಳಿತು ಧ್ಯಾನಿಸುತ್ತಾಳೆ.

ಬಹುಶಃ ಈ ’ಸೀಮರಪೊಡಗ’ದ ಆಚರಣೆಯು ಮದುವೆಯಾಗಲಿರುವ ಯುವತಿಯ ಬಾಳು ಶ್ರೀಮಂತವಾಗಿರಲೆಂಬುದನ್ನು ಸೂಚಿಸುತ್ತದೆ. ಇಲ್ಲವೇ ಮದುವೆಯಾದ ನಂತರದಲ್ಲಿ ಈ ಆಚರಣೆಯು ಜಾರಿಯಲ್ಲಿರುವಂತೆ ತೋರುತ್ತದೆ. ಈ ಸೀಮರ ಪೊಡಗ ಕಾರ್ಯವನ್ನು ನೇಕಾರರಲ್ಲಿ ಕೆಲವು ಪಂಗಡಗಳಲ್ಲಿ ’ಹಿರಿಯರ ಮಾಡುವುದು’ ಎಂದು ಮತ್ತೊಂದು ಹೆಸರಿನಿಂದ ಆಚರಿಸಲಾಗುತ್ತದೆ. ಆದರೆ ಇವೆರಡೂ ಭಿನ್ನವಾಗಿದೆಯೆಂಬುದನ್ನು ಗಮನಿಸಬೇಕು.

ಹೆಣ್ಣುಮಕ್ಕಳ ವೈಯಕ್ತಿಕ ಆಚರಣೆಯೆಂಬಂತೆ ತೋರುವ ಸೀಮರಪೊಡಗ ಹೆಚ್ಚಾಗಿ ಆಂಧ್ರಮೂಲದ ನೇಕಾರರು ವಾಸವಾಗಿರುವ ಮೊಳಕಾಲ್ಮೂರು, ಚಿತ್ರದುರ್ಗ, ಬಳ್ಳಾರಿ, ಸಂಡೂರು, ಹೊಸಪೇಟೆ ಈ ಭಾಗದಲ್ಲಿ ಜಾರಿಯಲ್ಲಿರುವುದು ಕಂಡು ಬರುತ್ತದೆ. ಆಂಧ್ರಮೂಲದ ನೆವ್ವಾರು, ನೇಶೆವಾರು ಹೆಣ್ಣುಮಕ್ಕಳು ಈ ಸಾಂಪ್ರದಾಯಿಕ ವಿಧಿಯನ್ನು ವಿಜೃಂಭಣೆಯಿಂದ ನೆರವೇರಿಸುವುದು ಕಾಣಬರುತ್ತದೆ. ಪೊಡಗಕ್ಕೆ ಹಾಕಿದ ರೇಶ್ಮೆ ಸೀರೆ, ಕುಪ್ಪಸ, ಕಾಲುಂಗರ, ಕಾಲುಸುತ್ತು, ಬೆಂಡೋಲೆ, ತಾಲಕು ಕಡ್ಡಿ, ಡಾಬು, ಕಾಲಂದಿಗೆ ಮುಂತಾದ ಬಟ್ಟೆ ಮತ್ತು ಆಭರಣಗಳು ಹೊಸ ವಸ್ತುಗಳಾಗಿ ವಧುವಿನ ಮೈಗೇರುವುದರಿಂದ, ಅವುಗಳ ಪರಿಚಯವಿರಲೆಂಬ ಆಶಯದಿಂದ ಪೂಜೆಯ ನೆಪದಲ್ಲಿ ಪ್ರದರ್ಶಿಸುವ ರೂಢಿಯೂ ಇದ್ದಿರಲು ಸಾಕು. ಈ ಸಂದರ್ಭದಲ್ಲಿ ಹಾಲುಗಲ್ಲದ ಹುಡುಗಿಯರಿಗೆ  ಮಾನಸಿಕ ತಳಮಳವೂ ಆಗದಿರುವುದಿಲ್ಲ. ಲಂಗ ದಾವಣಿ ಪೈಟಗಳನ್ನುಟ್ಟು ಆಡಿಹಾಡಿಕೊಂಡಿದ್ದ ಅನೇಕ ಹುಡುಗಿಯರಿಗೆ ಮದುವೆಯ ವಯಸ್ಸಿಗಿಂತ ಮುಂಚೆಯೇ ಲಗ್ನವಾಗುತ್ತಿದ್ದ ಸಂದರ್ಭದಲ್ಲಿ ಸೀಮರ ಪೊಡುಗದ ಆಭರಣ – ಉಡುಗೆಗಳು ಸಣ್ಣ ವಯಸ್ಸಿನ ಮನಸ್ಸಿಗೆ ದೊಡ್ಡಸ್ಥಿಕೆಯ ವೇಷ ಹಾಕುವುದನ್ನು ಆಕೆಯ ಮನಸ್ಥಿತಿ ಹೇಗೆ ಅರಗಿಸಿಕೊಳ್ಳುತ್ತದೆಂಬುದೂ ಊಹಿಸಬಹುದು. ಅದೇನೇ ಇದ್ದರೂ ನೇಕಾರ ಸಮುದಾಯದಲ್ಲಿ ಇಂದಿಗೂ ಈ ಸೀಮರ ಪೊಡಗ ಆಚರಣೆಯು ಜಾರಿಯಲ್ಲಿರುವುದು ಕಂಡು ಬರುತ್ತದೆ.

ಒಳಗಿನ ದೇವರು – ಹೊರಗಿನ ದೇವರು

ನೇಕಾರ ಸಮುದಾಯದ ಮದುವೆಗಳಲ್ಲಿ ಇದೊಂದು ವಿಶಿಷ್ಟವಾದ ಆಚರಣೆಯಾಗಿದೆ. ದೇವತಾಕಾರ್ಯದ ಹಿಂದಿನ ದಿನ ಎರಡು ಬಗೆಯ ಪೂಜೆಯು ನಡೆಯುತ್ತದೆ. ಮನೆಯ ಹೊಸ್ತಿಲಿನ ಹೊರಗೆ ಒಂದು ಕುರಿ ಅಥವಾ ಆಡಿನ ಬೇಟೆಯನ್ನು ಮಾಡುತ್ತಾರೆ. ಅಲ್ಲಿ ಚೆಲ್ಲಿದ ರಕ್ತ, ಮಾಂಸದೊಂದಿಗೆ, ಹೆಸರುಬೇಳೆ – ಅಕ್ಕಿಯಿಂದ ತಯಾರಿಸಿದ ಕಿಚಡಿ, ಕುಂಕುಮ, ವಿಭೂತಿ ಮುಂತಾದುವನ್ನು ಪೂಜಿಸುತ್ತಾರೆ. ನೇಕಾರ ಕುಟುಂಬಕ್ಕೆ ಒಕ್ಕಲು ರೂಪದಲ್ಲಿರುವ ತಳವಾರ ಈ ಪೂಜೆಯನ್ನು ಮಾಡುತ್ತಾನೆ. ಅಲ್ಲದೇ ಕುರಿ ಅಥವಾ ಆಡಿನ ಬೇಟೆಯನ್ನು ಕತ್ತರಿಸಿದ ಮಚ್ಚನ್ನು ಹೊಸ್ತಿಲಿನ ಹೊರಗಿಟ್ಟೂ ಪೂಜಿಸುತ್ತಾರೆ. ಈ ಪೂಜೆಯು ಮಧ್ಯರಾತ್ರಿ ಹನ್ನೆರಡು ಗಂಟೆಯ ನಂತರ ನಡೆಯುತ್ತದೆ. ತಳವಾರ ನಡೆಸುವ ಈ ಪೂಜೆಯನ್ನು ಯಾರೂ ನೋಡುವ ಹಾಗಿಲ್ಲ. ಅದರಲ್ಲಿಯೂ ಮಹಿಳೆಯರು ನೋಡಲೇಬಾರದು. ಹೆಣ್ಣುಮಕ್ಕಳು ನೋಡಿದರೆ ಸರ್ವನಾಶ ಎಂಬ ನಂಬಿಕೆಯೂ ಇದೆ. ಕಿಚಡಿ, ಮಾಂಸ, ಒಡೆದ ತೆಂಗಿನಕಾಯಿ, ಐದು ಉತ್ತತ್ತಿ, ಎಲೆ, ಅಡಿಕೆ, ಬಾಳೆಹಣ್ಣು, ಮುಂತಾದ ನೈವೇದ್ಯದ ಪರಿಕರಗಳನ್ನು ತಳವಾರನಾದವನು ಇಡೀ ಮನೆಯ ಸುತ್ತ ’ಸರಗ’ ದಂತೆ ಚೆಲ್ಲುತ್ತಾ ಹೋಗುತ್ತಾನೆ.

ನೇಕಾರ ಮನೆಯ ಹಿರಿಯರು ಉಲಿಗ್ಯೋ, ಉಲಿಗ್ಯೋ, ಎಂದು ಕೂಗುತ್ತಾ ಹೋಗುತ್ತಾರೆ. ಅಕ್ಕಪಕ್ಕದ ಮನೆಯವರು ಅಪ್ಪಿತಪ್ಪಿಯೂ ಈ ಚರಗವನ್ನು ನೋಡುವುದಿಲ್ಲ. ನೋಡಿದರೆ ತಮಗೆ ಕೆಡಕುಂಟಾಗುತ್ತದೆಂದು ನಂಬುತ್ತಾರೆ. ಆ ಆಚರಣೆಯಲ್ಲಿ ಎಲ್ಲಿಯೂ ಹೆಣ್ಣುಮಕ್ಕಳ  ಪ್ರವೇಶ ಇರುವುದಿಲ್ಲ. ಇದು ಹೊರಗಿನ ದೇವರು ಆಚರಣೆ.

ಮನೆಯ ಹೊಸ್ತಿಲಿನ ಒಳಗೆ ಮತ್ತೊಂದು ಪೂಜೆ ನಡೆಯುತ್ತದೆ. ಇಲ್ಲಿ ಮಾಂಸಹಾರ ನೈವೇದ್ಯ ನಿಷೇಧ. ಹೊಸ್ತಿಲಿನ ಹಿಂದೆ ಆಕಳಿನ ಸೆಗಣಿಯ ನೀರನ್ನು ಹಾಕಿ ಅಕ್ಕಿಯಿಂದ ಸೇಸೆಮನೆಯನ್ನು ಬರೆಯುತ್ತಾರೆ. ಈ ಸೇಸೆಮನೆಯ ಚಿತ್ರದ ಮೇಲೆ ಗೋದಿಯ ಹುಗ್ಗಿ, ಅನ್ನ, ಬಾಳೆಯಹಣ್ಣು, ಐದು ಉತ್ತತ್ತಿಯನ್ನಿಟ್ಟು ಮನೆಯವರೇ ಪೂಜೆ ಮಾಡುತ್ತಾರೆ. ಇಲ್ಲಿ ತಳವಾರನ ಕೆಲಸವೇನೂ ಇರುವುದಿಲ್ಲ. ಒಳಗಿನ ಪೂಜೆಯಲ್ಲಿ ಗಂಡನ ಮನೆಗೆ ಹೋದ ಹೆಂಗಸರು ಭಾಗವಹಿಸುವಂತಿಲ್ಲ.

ನೇಕಾರ ಸಮುದಾಯದಲ್ಲಿ ನಡೆಯುವ ಒಳಗಿನ ದೇವರು ಹೊರಗಿನ ದೇವರು ಎಂಬ ಪೂಜಾ ಆಚರಣೆಯು ಗಂಡುಮಕ್ಕಳ ಮದುವೆಯಲ್ಲಿ ಮಾತ್ರ ನಡೆಯುತ್ತದೆ. ಹೆಣ್ಣುಮಕ್ಕಳ ಮದುವೆಯಲ್ಲಿ ನಡೆಯುವುದಿಲ್ಲ. ಮನೆಯಮಗನ ಮದುವೆಯು ನಡೆಯುವಾಗ ನಡೆಯುವ ಹೊರಗಿನ ದೇವರು ಪೂಜೆಯ ಆಚರಣೆಯಿಂದ ತಮ್ಮ ಮನೆಗೆ ಬರುವ ಮದುವಣಗಿತ್ತಿಯ ದೋಷಗಳೆಲ್ಲಾ ಚೆಲ್ಲಿದ ಚರಗದಲ್ಲಿಯೇ ಕರಗಿಹೋಗಲಿ ಆಕೆಯ ಮುಟ್ಟುದೋಷ, ತವರು ಮನೆ ದೋಷ, ಪೀಡೆ ಪಿಶಾಚಿದೋಷಗಳೆಲ್ಲವೂ ಹೆಣ್ಣಿನ ಹಿಂದೆ ಬಂದಿದ್ದರೆ ಅವುಗಳನ್ನು  ಹೊರಗಿನ ದೇವರು ತಡೆಯುತ್ತಾನೆ. ಮದುವಣಗಿತ್ತಿಯ ಹಿಂದೆ ಉಗ್ರದೇವತೆ ಬಂದರೆ ಆಕೆಗಾಗಿ ಕುರಿಯನ್ನು ಬಲಿಕೊಟ್ಟದ್ದೇ ಆಹಾರವಾಗಿ ಮನೆಯ ಸುತ್ತಲೇ ಅವರು ಇರುತ್ತಾರೆ. ಒಳಗೆ ಬರುವುದಿಲ್ಲ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಒಳಗಿನ ದೇವರು ಪೂಜೆಯಿಂದ ಮನೆಯ ಪುಣ್ಯ ಹೊರಹೋಗದಿರಲೆಂದು ಮಾಡುವ ರೂಢಿಯಿದೆ.

ಈ ಆಚರಣೆಗಳು ಹೆಣ್ಣಿನ ಮದುವೆಯಲ್ಲಿ ಇಲ್ಲದಿರುವುದರಿಂದ ಮನೆಯ ಪುಣ್ಯ ಗಂಡು ಮಾತ್ರ. ಹೆಣ್ಣು ಮನೆಯ ಪಾಪದ ಪಿಂಡ. ಅವಳು ಹೊರ ಹೋದರೆ ಒಳಿತು. ತೊಂದರೆಯೇನೂ ಇಲ್ಲ ಎಂಬ ಮನೋಭಾವನೆ ಇದರ ಹಿಂದೆ ಇರುವಂತಿದೆ.

ಭುವನಾಶಿ

ದೇವತಾಕಾರ್ಯದ ಹಿಂದಿನ ದಿನ ಲಕ್ಷ್ಮೀಪೂಜೆಯನ್ನು ಮಾಡುವ ಪದ್ಧತಿ ನೇಕಾರ ಸಮುದಾಯದಲ್ಲಿದೆ. ಇದನ್ನು ’ಭುವನಾಶಿ’ ಎಂಬ ಹೆಸರಿನಿಂದ ಕೆಲವು ಕಡೆ ಕರೆಯುತ್ತಾರೆ. ಸೀರೆ ಕುಪ್ಪಸ ಆಭರಣಗಳನ್ನಿಟ್ಟು ಪೂಜಿಸಿ ಮದುಮಗನೊಂದಿಗೆ ಮನೆಯ ಸದಸ್ಯರೆಲ್ಲರೂ ಸೇರಿ ರಾತ್ರಿ ನೈವೇದ್ಯವನ್ನು ಸ್ವೀಕರಿಸುತ್ತಾರೆ. ಕೋಣೆಯ ಎಲ್ಲ ಬಾಗಿಲುಗಳನ್ನು ಮುಚ್ಚಿ ರಂಧ್ರಗಳನ್ನೂ ಮುಚ್ಚಿ ಪೂಜಿಸುವ ವಿಧಾನ ಇದು. ಪ್ರಸಾದ ಉಂಡು ಉಳಿದದ್ದೆಲ್ಲವನ್ನೂ ಭೂಮಿಯೊಳಗೆ ಗುಳಿತೋಡಿ ಹಾಕುವ ಪದ್ಧತಿಯಿದು. ಈ ಸಂದರ್ಭದಲ್ಲಿ ತೆಂಗಿನ ಚಿಪ್ಪು, ಪೀಚು, ಬಳೆಯ ತುಂಡು ಏನೂ, ಯಾವ ವಸ್ತೂ ಬಿಡದಂತೆ ಭೂಮಿಯಲ್ಲಿ ಹಾಕಿ ಮುಚ್ಚಿ ಅದರ ಮೇಲೆ ಆಕಳ ಸೆಗಣಿಯಿಂದ ಸಾರಿಸಿ, ರಂಗೋಲಿ ಬಿಟ್ಟು ಮತ್ತೆ ಪೂಜೆ ಮಾಡುತ್ತಾರೆ.

ಭುವನಾಶಿ ಕಾರ್ಯದಲ್ಲಿಯೂ ಗಂಡನ ಮನೆಗೆ ಈಗಾಗಲೇ ಹೋದ ಮಹಿಳೆಯು ಭಾಗವಹಿಸುವಂತಿಲ್ಲ. ಬಹುಶಃ ಲಕ್ಷ್ಮೀಪೂಜೆ ಅರ್ಥಾತ್ ಸಂಪತ್ತು ಎಂಬುದು ಪುರುಷಮೌಲ್ಯದ, ತನ್ನ ಮನೆಯ ಸ್ವಂತದ್ದು, ಆಸ್ತಿಯು ಹೆಣ್ಣು ಮಕ್ಕಳ ಸ್ವತ್ತಲ್ಲವೆಂಬುದನ್ನು ಆ ಆಚರಣೆಯು ಸೂಚಿಸುತ್ತಿದೆ. ಭೂಮಿಯನ್ನು ತಾಯಿ ಎಂದು ನಂಬಿದ ಸಮುದಾಯಗಳು ಅವಳ ತೃಪ್ತಿ ಶಾಂತಿ, ನೆಮ್ಮದಿ ಮುಖ್ಯ ಎಂಬ ಧೋರಣೆಯಿಂದ ನೆಲದಲ್ಲಿ ನೈವೇದ್ಯಾದಿ ಪರಿಕರಗಳನ್ನು ಮುಚ್ಚಿಡುವ ರೂಢಿಯಿದೆ. ಅಷ್ಟೇ ಅಲ್ಲ ಮುಚ್ಚಿಟ್ಟ ಆ ಕುಣಿಯು ಹೆಚ್ಚು ಉಬ್ಬಿದರೆ ಮನೆಯ ಸಂಪತ್ತು ನೆಮ್ಮದಿ ಇಮ್ಮಡಿಯಾಗಿ ವೃದ್ಧಿಸುತ್ತದೆಂಬ ನಂಬಿಕೆಯೂ ನೇಕಾರ ಸಮುದಾಯದಲ್ಲಿದೆ.

ತಾಳಿಕಟ್ಟಪ್ಪಣೆ

ಭೂಮದ ಕಾರ್ಯಕ್ರಮದ ನಂತರ ಮಾಂಗಲ್ಯಧಾರಣೆಯು ನಡೆಯುತ್ತದೆ. ಕರಿಯಕಂಬಳಿಯ ಮೇಲೆ ಮಂಗಲ  ಊಚಕವಾದ ಅಕ್ಕಿಯ ಸೇಸೆಯನ್ನು ಬರೆಯುತ್ತಾರೆ. ಅದರ ಮೇಲೆ ಮದುಮಕ್ಕಳಿಬ್ಬರನ್ನೂ ಕೂಡಿಸುತ್ತಾರೆ. ಅವರ ಮುಂಭಾಗದಲ್ಲಿ ಐದು ಸಣ್ಣ ಮಡಿಕೆ ಇಲ್ಲವೇ ತಂಬಿಗೆಯಲ್ಲಿ ನೀರನ್ನು ತುಂಬಿ ತಮ್ಮ ಮಗ್ಗದಿಂದ ನೇಯ್ದ ದಾರದಿಂದ ಸುರಗಿ ಸುತ್ತಿರುತ್ತಾರೆ. ಮಾಂಗಲ್ಯ ಕಾರ್ಯಕ್ಕೆ ಪುರೋಹಿತರಾಗಿ, ವೈದಿಕ ನೇಕಾರ ಪರಂಪರೆಯವರಿಗೆ ಬ್ರಾಹ್ಮಣರೂ ವೀರಶೈವ ನೇಕಾರ ಪರಂಪರೆಯವರಿಗೆ ಜಂಗಮರೂ ಆಗಮಿಸುತ್ತಾರೆ. ಗೌಡ-ಹೆಗ್ಗಣಿ (ಹೆಗಡೆ) ಗಳ ನೇತೃತ್ವದಲ್ಲಿ ಕಂಕಣ ಕಟ್ಟಿಕೊಂಡು ೨೧ ಜನರೂ, ಬಾಂಧವರೂ ನೆರೆದಿರುತ್ತಾರೆ. ನೇಕಾರರ ಜೀವನದ ಮುಖ್ಯ ಭಾಗವಾದ ಕೈಮಗ್ಗದ ಕುಂಟೆಯನ್ನು ತಂದು ಅದರ ಮೇಲೆ ಮದುಮಕ್ಕಳನ್ನು ಕೂರಿಸುತ್ತಾರೆ. ಇದು ವೃತ್ತಿಯ ಸೂಚಕವೂ, ಮುಖ್ಯವಾದ ವೈವಾಹಿಕ ಜೀವನದಲ್ಲಿ ಸೂಚಿಸುವ ಗೌರವವೂ ಮುಂದೆ ಮದುವೆಯಾದ ಮಹಿಳೆಗೆ ಅಣಿಗೆಕೆಚ್ಚಲು ಉಂಕಿ ತೆಗೆಯಲೂ ಸೂಚಿಸುವಂತೆಯೂ ಕಂಡು ಬರುತ್ತದೆ. ಮದುವೆಯ ಮುಂದಾಳತ್ವ ವಹಿಸಿಕೊಂಡು ಗೌಡ ಹೆಗಣಿಗಳು ತಾಳಿ ಕಟ್ಟಪ್ಪಣೆ, ತಾಳಿ ಕಟ್ಟಪ್ಪಣೆ ಎಂದು ಐದು ಬಾರಿ ಕೂಗಿದ ಮೇಲೆ ವರ ವಧುವಿನ ಕೊರಳಿಗೆ ಮಾಂಗಲ್ಯ ಕಟ್ಟುತ್ತಾನೆ. ಅಂದಿನಿಂದಲೇ ತಂದೆ- ತಾಯಿ, ಅಣ್ಣ-ತಮ್ಮ, ಅಕ್ಕ- ತಂಗಿಯರೊಂದಿಗಿದ್ದ ನೇಕಾರ ಮಹಿಳೆಯು ಇತರೆ ಎಲ್ಲ ಸಮುದಾಯದ ಮಹಿಳೆಯಂತೆ ಪರಪುರುಷನ ಅಶ್ರಯಕ್ಕೆ ಹೋಗುತ್ತಾಳೆ. ನೇಕಾರ ಯುವತಿಯ ಕೊರಳಲ್ಲಿ ತಾಳಿಯು ಬಿದ್ದಾಕ್ಷಣ ಆಕೆಯ ತಾಯಿ, ತಂಗಿ, ಅಕ್ಕ, ಅತ್ತಿಗೆ, ನಾದಿನಿ ಮುಂತಾದ ಹೆಂಗಸರು ಸಾಮಾನ್ಯವಾಗಿ ಅಳುತ್ತಾರೆ. ಇದು ಮದುವೆಯಾದ ಆನಂದಭಾಷ್ಪವಲ್ಲ. ಬದಲಾಗಿ ಆಕೆಯು ತಮ್ಮಿಂದ ನಿರ್ದಿಷ್ಟವಾಗಿ ದೂರವಾಗುತ್ತಾಲೆಂಬ ಸಂಕಟ, ಆ ವೇದನೆಯೂ ಇರುತ್ತದೆ ಮುಂದೆ ಅರುಂಧತಿ ನಕ್ಷತ್ರದರ್ಶನ ಮಾಡಿಸುತ್ತಾರೆ.

ಮುತ್ತು ಹುಡುಕುವುದು

ಮಾಂಗಲ್ಯಧಾರಣೆಯ ನಂತರ ಪತ್ನಿ-ಪತಿಯರ ನಡುವೆ ಪರಿಚಯ, ಪರಸ್ಪರ ಹೊಂದಾಣಿಕೆ ಮನೋಭಾವಕ್ಕೆಂದು ಪುರೋಹಿತರು ಮುತ್ತು ಹುಡುಕಿಸುವ ಆಟ ಆಡಿಸುತ್ತಾರೆ. ಬಟ್ಟಲೊಂದರಲ್ಲಿ ಹಾಲು ಹಾಕಿ ಅದರಲ್ಲಿ ಮುತ್ತೈದೆಯೊಬ್ಬಳ ನತ್ತನ್ನು ಹಾಕಿ ಮದುಮಕ್ಕಳು ಇಬ್ಬರೂ ಹುಡುಕುವಂತೆ ಹೇಳುತ್ತಾರೆ. ಅದು ಮೊದಲು ಹುಡುಗಿಯ ಕೈಗೆ ಸಿಕ್ಕರೆ ಆಕೆಯ ಬಾಯಿಯಿಂದ ’ಮುತ್ತು ಕಂಡೆ ರತ್ನಕಂಡೆ ಚಿನ್ನದಂಥ ಹೆಂಡತಿನ್ನ ಕಂಡೆ’ ಎಂದು ಹೇಳಿಸುವ ಮೂಲಕ ಪರಸ್ಪರ ದಂಪತಿಗಳಿಗೆ ಆತ್ಮವಿಶ್ವಾಸವನ್ನು ತುಂಬುವ ಕಾರ್ಯ ಇದಾಗಿದೆ. ಅದರಲ್ಲಿಯೂ ಪತ್ನಿಯಾದವಳಿಗೆ ಬಂಗಾರದಂಥ ಗಂಡನ್ನ ಕಂಡರೆ, ಪತಿಯೇ ಪರದೈವ ಅವರ ಶ್ರೀಪಾದ ಕಂಡರೆ ಅವರ ದರ್ಶನ ಭಾಗ್ಯ ಕಂಡರೆ ಎಂಬ ಪುರುಷಾಧಾರಿತ ಮೌಲ್ಯದ ಮಾತುಗಳನ್ನೂ ಹೇಳಿಸುವ ಪುರೋಹಿತರೂ ಇದ್ದಾರೆ. ಮುತ್ತು ಹುಡುಕುವಾಗ ಮೊದಲು ಗಂಡನ ಕೈಗೆ ಸಿಕ್ಕರೆ ಗಂಡು ಜನಿಸುತ್ತದೆ. ಹೆಂಡತಿ ಕೈಗೆ ಸಿಕ್ಕರೆ ಹೆಣ್ಣು ಜನಿಸುತ್ತದೆಯೆಂಬ ನಂಬಿಕೆಯಿದೆ. ಪುರೋಹಿತರು ಈ ಸಂದರ್ಭದಲ್ಲಿ ಮುತ್ತನ್ನು ಹಾಲಿನಿಂದ ತೆಗೆದು ತಾವೇ ಗಂಡಿನ ಕೈಗೆ ಕೊಡುವ ತಂತ್ರ ಮಾಡುತ್ತಾರೆ. ಇಲ್ಲಿಯೂ ಪುರುಷ ಮೌಲ್ಯಗಳನ್ನು ಗುರುತಿಸಬಹುದಾಗಿದೆ.