ಮಾದಿಗರ ಮಾಡೋದು (ನಾಗೋಲಿ)

ಮದುವೆಯಾದ ಹೊಸ ಜೋಡಿಗಳು ನಾಗೋಲಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ನಾಗೋಲಿಯು ಇತರೆ ವೃತ್ತಿ ಸಮುದಾಯಗಳಲ್ಲಿ ಅತ್ಯಂತ ಸಂಭ್ರಮದ ಆಚರಣೆಯಾಗಿರುತ್ತದೆ. ನೇಕಾರ ಸಮುದಾಯದಲ್ಲಿ ನಾಗೋಲಿಯು ಸಂಭ್ರಮದ್ದೇ ಆಗಿದ್ದರೂ ಅದರೊಂದಿಗೆ ಮಾದಿಗರ ಮಾಡುವ ಆಚರಣೆಯೊಂದು ವಿಶೇಷ. ನವದಂಪತಿಗಳಿಬ್ಬರನ್ನೂ ಹಳೆಯಬಟ್ಟೆಗಳು ತೊಡಿಸಿ ಮನೆಯ ಬಾಗಿಲ ಮುಂದೆ ಕೂರಿಸುತ್ತಾರೆ. ಅವರ ಕೈಯಲ್ಲೊಂದು ಪಾತ್ರೆಯನ್ನು ಕೊಡುತ್ತಾರೆ. ಅವರಿಬ್ಬರೂ ಮನೆಗೆ  ಬಂದ ಬೀಗರು ಬಿಜ್ಜರನ್ನು ಭಿಕ್ಷೆ ಕೇಳಬೇಕು. ಬಂದವರೆಲ್ಲಾ  ಬಿಡಿಗಾಸನ್ನು ಹಾಕುತ್ತಾರೆ.  ನಂತರ ಮದುಮಗನಿಗೆ ಸ್ನಾನ ಮಾಡಿಸಿ ಹೊಸಬಟ್ಟೆಯನ್ನು ನೀಡಿ ಮಾದಿಗತನವನ್ನು ತೊಲಗಿಸಲು ವೀಳ್ಯದ ಎಲೆಯಿಂದ ಹಾಲು, ಜೇನು, ತುಪ್ಪ, ಶುದ್ಧ ನೀರು ಬೆರೆತ ಮಿಶ್ರಣವನ್ನು ಚುಮುಕಿಸಿ ಹೊರಗಿನಿಂದ ಒಳ ಕರೆಯುತ್ತಾರೆ.

ಒಳಗೆ ಬಂದು ಕುಟುಂಬದೊಂದಿಗೆ ಸೇರಿಕೊಂಡ ಮದುಮಗನು ಮಾದಿಗಿತಿಯಾಗಿ ಹೊರಗಿರುವ ಹೆಂಡತಿಯನ್ನು ಏನು ಬೇಕು ಎಂದು ಕೇಳುತ್ತಾನೆ. ’ಅಪ್ಪಾ ಅನ್ನಹಾಕಿ, ನೀರು ಹಾಕಿ ಭಿಕ್ಷೆ ನೀಡ್ರಿ ’ಎಂದು ಬೇಡುತ್ತಾಳೆ. ಭಿಕ್ಷೆಯನ್ನು ಹಾಕಿದ ತರುವಾಯ ಆಕೆಗೂ ಸ್ನಾನ ಮಾಡಿಸಿ ಹೊಸಬಟ್ಟೆಯನ್ನು ನೀಡಿ ಮನೆಯೊಳಗೆ ಕರೆಯುತ್ತಾರೆ.

ನಾಗೋಲಿಯ ದಿನ ದಂಪತಿಗಳಿಬ್ಬರನ್ನು ’ಮಾದಿಗರ ಮಾಡುವ’ ಕಾರ್ಯಕ್ರಮದ ಹಿಂದೆ ಯಾವ ಸಾಮಾಜಿಕ ಆಶಯವಿದೆಯೆಂಬುದು ಗ್ರಹಿಸಬೇಕಾಗಿದೆ.

ನಾಗೋಲಿಯಲ್ಲಿ ನೇಕಾರ ಸಮುದಾಯದ ಹೆಣ್ಣುಮಕ್ಕಳೆಲ್ಲರೂ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಹೊಸ ಬಟ್ಟೆಯುಟ್ಟು, ವಿವಿಧ ಆಭರಣಗಳನ್ನು ತೊಟ್ಟು ಸಿಂಗರಿಸಿಕೊಂಡ ಮಹಿಳೆಯರು ತಮ್ಮ ನೆಂಟರೊಂದಿಗೆ ಕೆಲವು ಸಮಯ ಹಾಸ್ಯ ಪ್ರಸಂಗದಲ್ಲಿ ತೊಡಗುತ್ತಾರೆ. ವರನ ಕಡೆಯವರು ತಾಮ್ರದ ಗಂಗಾಳದಲ್ಲಿ ಕೊಬ್ಬರಿ, ಉತ್ತುತ್ತಿ, ಅಡಿಕೆ, ಎಲೆ, ಅಕ್ಕಿ ಮುಂತಾದುವನ್ನು ಇಟ್ಟುಕೊಂಡು ಎಲ್ಲರೂ ಸೇರಿ ’ಹುಗ್ಗಿಗೆ ಬೆಲೆಯಿಲ್ಲ, ಚಹಾಕ್ಕೆ ಸಕ್ರಿಯಿಲ್ಲ, ಅನ್ನಕ್ಕೆ ಉಪ್ಪು ಇಲ್ಲ’ ಬೀಗರ ಅಡಿಗೆ ಪಾಡಾಗಿಲ್ಲ ಛೇ ಛೇ ಎಂದು ಚಟಾಕಿ ಹಾರಿಸುತ್ತಾರೆ. ಇದಕ್ಕೆ ಪ್ರತಿಯಾಗಿ ವಧುವಿನ ಕಡೆಯವರು ತಟ್ಟೆಯೊಂದರಲ್ಲಿ ಬೆಂಕಿಯನ್ನು ಹಾಕಿ ಅದರಲ್ಲಿ ಬೆಲ್ಲವಿದೆ, ಸಕ್ಕರೆಯಿದೆ, ಉಪ್ಪುಯಿದೆ ಎಂದು ವರನ ಕಡೆಯವರ ಹತ್ತಿರ ಇಟ್ಟು ಅದರಲ್ಲಿ ಒಣ ಮೆಣಸಿನಕಾಯಿಯನ್ನು ಹಾಕಿ ಓಡುತ್ತಾರೆ. ತಕ್ಷಣ ಅದರ ಘಾಟಿನಿಂದ ಎಲ್ಲರೂ ಎದ್ದು ಓಡುತ್ತಾರೆ. ಇದು ನೇಕಾರ ಸಮುದಾಯದ ಹೆಣ್ಣು ಮಕ್ಕಳ ಹಾಸ್ಯಪ್ರಜ್ಞೆಗೆ ಸಾಕ್ಷಿಯಾಗಿದೆ.

ನಾಗೋಲಿಯ  ಸಂದರ್ಭದಲ್ಲಿಯೇ ಮದುಮಗಳ  ಕಾಲುಜೋಡನ್ನು ಬಚ್ಚಿಡುವುದು, ಕುಡಿಯುವ ನೀರಲ್ಲಿ ಉಪ್ಪು ಹಾಕಿಕೊಡುವುದು, ಹಿಟ್ಟಿನ ಮೆಣಸಿನಕಾಯಿಯೊಳಗೆ ಕಲ್ಲು ಇಡುವುದು, ಕೊಬ್ಬರಿ ಬೆಲ್ಲದ ಪುಡಿಯಲ್ಲಿ ಖಾರತುಂಬಿ ಕರ್ಚಿಕಾಯಿ ಮಾಡಿ ಕೊಡುವುದು ಮುಂತಾದ ಹಾಸ್ಯ ಪ್ರಸಂಗಗಳು ಗಂಡನ ಮನೆಯಲ್ಲಿ ಹೆಂಡತಿಗೆ ನಡೆಯುತ್ತವೆ.

ನಾಗೋಲಿಯು ಹೊಸ ಬೀಗತನದ ಎರಡು ಮನಸ್ಥಿತಿಯವರನ್ನು ಒಂದುಗೂಡಿಸುವ ಮನಸ್ಸನ್ನು ಅರ್ಥೈಸಿಕೊಂಡು ನಲಿಯುವುದಕ್ಕೆ ಉಪಯುಕ್ತವಾದುದು.

ಚಿಗುಳಿ ತಂಬಿಟ್ಟು

ನವದಂಪತಿಗಳಿಬ್ಬರನ್ನು ಕರೆದುಕೊಂಡು ಗಂಗೆಯ ಪೂಜೆಯ ಮಾಡಿಕೊಂಡು ಬರುವ ಆಚರಣೆಯೇ ’ಚಿಗುಳಿತಂಬಿಟ್ಟು’ ಗ್ರಾಮೀಣ ಭಾಗದಲ್ಲಿ ಮದುವೆಯಾದ ಹೊಸತರಲ್ಲಿ ಮಹಿಳೆಗೆ ಊರಿನ ಪರಿಚಯವಿರುವುದಿಲ್ಲ. ಒಂದು ಕಾಲದಲ್ಲಿ ನಮ್ಮ ಹಳ್ಳಿಗಳ ನೀರಿನ ಮೂಲಗಳೆಂದರೆ ಕೆರೆ, ಬಾವಿ, ಹಳ್ಳ, ನದಿಗಳು, ಇವುಗಳನ್ನು ಮನೆಗೆ ಬಂದ ಸೊಸೆಗೆ ತೋರಿಸುವ ಸಲುವಾಗಿ ’ಗಂಗೆಪೂಜೆ’ ಮಾಡಲಾಗುತ್ತಿತ್ತು. ಇಂದು ಈ ನೀರಿನ ಮೂಲಗಳು ಬದಲಾಗಿವೆ. ಸಾಂಕೇತವಾಗಿ ಈ ಆಚರಣೆಯು ಉಳಿದಿವೆ. ಗ್ರಾಮೀಣ ಪರಿಸರದಲ್ಲಿ ಇಂದಿಗೂ ಬಾವಿ, ಕೆರೆ ಅವಲಂಬಿಸಿರುವುದೂ ಇದೆ. ನವ ದಂಪತಿಗಳಿಬ್ಬರಿಗೂ ಕಂಕಣವನ್ನು ಕಟ್ಟಿ, ಇಬ್ಬರಿಗೂ ನೀರಿನ ಬಿಂದಿಗೆಗಳನ್ನು ಕೊಟ್ಟು ಕಳಸಗಿತ್ತಿಯೊಂದಿಗೆ ಬಾವಿಗೆ ಹೋಗುತ್ತಾರೆ. ಐದು ಎಲೆ, ಐದು ಅಡಿಕೆ, ಐದು ಕರಿಎಳ್ಳಿನ ಉಂಡಿ, ಐದು ಬಿಳಿ ಎಳ್ಳಿನ ಉಂಡಿ ಮತ್ತು ಜೋಳವನ್ನು ಹುರಿದು ಅದರ ಹರಳಿನಿಂದ ಮಾಡಿದ ತಂಬಿಟ್ಟುಗಳನ್ನು ಬಾವಿಯ ಮುಂದೆ ನೈವೇದ್ಯವಾಗಿಡುತ್ತಾರೆ. ನವದಂಪತಿಗಳಿಬ್ಬರೂ ಬಾವಿಯಿಂದ ತುಂಬಿದ ಬಿಂದಿಗೆಗಳನ್ನು ಜಗ್ಗಬೇಕು. ನೀರಿನ ಹರಿವಿಗಳನ್ನು ನೈವೇದ್ಯದೊಂದಿಗಿರಿಸಿ ಪೂಜಿಸುತ್ತಾರೆ. ನಂತರ ಗಂಡ ತುಂಬಿದ ಬಿಂದಿಗೆ ಹೊತ್ತು ಮುಂದು ನಡೆದರೆ ಹೆಂಡತಿ ತುಂಬಿದ ಬಿಂದಿಗೆ ಹೊತ್ತು ಆತನನ್ನು ಅನುಸರಿಸಿ ನಡೆಯುತ್ತಾಳೆ. ಇಲ್ಲಿಂದಲೇ ಆಕೆಯ ದಿನನಿತ್ಯದ ಜೀವನ ಆರಂಭವಾಗುತ್ತದೆಂಬುದು ಗಮನಿಸಬಹುದು. ಮನೆಗೆ ಬಂದ ಹೊಸತರಲ್ಲಿ ನೇರವಾಗಿ ಕೆರೆ, ಬಾವಿಗೆ ನೀರಿಗೆ ಕಳಿಸದೆ, ಇಂತಹ ಗಂಗೆಪೂಜೆಯ ಮೂಲಕ ಅದನ್ನು ಪರಿಚಯಿಸಲಾಗುತ್ತದೆ. ಹೀಗಾಗಿ ’ಊರಿಗೆ ಬಂದಾಕಿ ನೀರಿಗೆ ಬರದೇ ಇರ‍್ತಾಳ’ ಎಂದ ಜನಪದ ನುಡಿಯೊಂದು ಚಾಲ್ತಿಯಲ್ಲಿದೆ.

ಚಿಗುಳಿ ತಂಬಿಟ್ಟಿನ ಊಟ ಮದುಮಕ್ಕಳಿಗೆ ವಿಶೇಷ ಊಟ. ಸಜ್ಜೆಯಿಂದ ಅಥವಾ ಜೋಳದಿಂದ ಹುರಿದ ಹರಳಿನಿಂದ ಮಾಡಿದ ತಂಬಿಟ್ಟು, ಎಳ್ಳಿನ ಉಂಡಿ ಗ್ರಾಮೀಣ ರೈತಾಪಿ ಜೀವನದ ಕೃಷಿಮೂಲಕ ಸಂಕೇತಗಳಾಗಿಯೂ, ದೈಹಿಕವಾಗಿ ನವದಂಪತಿಗಳಿಗೆ ಪುಷ್ಠಿ ನೀಡುವ ಆಹಾರಗಳಾಗಿಯೂ ತೋರುತ್ತವೆ. ಚಿಗುಳಿ ತಂಬಿಟ್ಟಿನ ಈ ಗಂಗಾಪೂಜೆಯ ಆಚರಣೆಯು ನವವಧುವಿಗೆ ಪರ ಊರಿನಲ್ಲಿ ಬದುಕುವ ಹೊಸಜನರ ಸಂಪರ್ಕಕ್ಕೆ ನಾಂದಿಯಾಗುವ, ಗಂಡನ ಮನೆಯಲ್ಲಿ ಆತ್ಮ ಸ್ಥೈರ್ಯದಿಂದ ಇರುವ ಬಗ್ಗೆ ಹೇಳುತ್ತದೆ. ಆದರೂ ಪುರುಷರ ಮತ್ತು ಪುರುಷಮೌಲ್ಯಗಳಿಂದ ಪ್ರೇರಿತವಾದ ಅತ್ತೆ, ಮಾವ, ನೆಗಣ್ಣಿ, ಮೈದುನ, ಮೈದುನನ ಹೆಂಡತಿ, ಮಾವ, ಮಾವನಹೆಂಡತಿ, ಗಂಡನ ತಂಗಿ ಅಕ್ಕಗಳೊಂದಿಗೆ ಆತಂಕದಿಂದಲೇ ಜೀವನಕ್ಕೆ ಕಾಲಿಡುವುದು ಆಕೆಗೆ ಅನಿವಾರ್ಯವೇ ಆಗಿರುತ್ತದೆ.
ರಾಗಿಬೀಸುವ ಕಲ್ಲೆ – ಬನವಣೀಯ ಒಳಕಲ್ಲೆ

ನೇಕಾರ ಸಮುದಾಯದ ಮಹಿಳೆಯು ಮಗ್ಗ ಹಿಡಿದು ಬಟ್ಟೆಯನ್ನು ನೇಯುವ ವೃತ್ತಿಯನ್ನು ಮಾತ್ರ ಅವಲಂಭಿಸದೇ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮೂಲ ಜನರೂ ಇದ್ದಾರೆ. ಮನೆಗೆ ಬಂದ ಸೊಸೆಗೆ ರೈತಾಪಿ ಕುಟುಂಬಗಳಲ್ಲಿ ರಾಗಿ ಬೀಸುವ ನವಣಿಯನ್ನು ಕುಟ್ಟುವ ತರಬೇತಿಯನ್ನು ನೀಡಬೇಕಾಗುತ್ತದೆ. ಹಾಗಾಗಿ ಬೀಸುಕಲ್ಲಿನ ಪೂಜೆ, ಒಳಕಲ್ಲಿನ ಪೂಜೆಯನ್ನು ಮಾಡಿಸುತ್ತಾರೆ. ಬೀಸುಕಲ್ಲಿನಲ್ಲಿ ರಾಗಿಯನ್ನು ಹಾಕಿ ಮುತ್ತೈದೆಯರೆಲ್ಲಾ ಹಿಡಿದು ತಿರುವುತ್ತಾರೆ. ಅಂತೆಯೇ ಒಳಿಕಲ್ಲಿನಲ್ಲಿ ನವಣೀಯ ತೆವಡನ್ನು ತೆಗೆಯಲು ಆಳೆತ್ತರದ ಒನಕೆಯೊಂದನ್ನು ಆಕೆಗೆ ನೀಡಿ ಕುಟ್ಟಿಸುತ್ತಾರೆ. ಕುಟ್ಟಿ ಬೀಸುವ ಹಾಡು ’ಯಾಕಿ ಕಲಿಸ್ಯಾಳ ಕೃಷ್ಣನ ತಂಗಿ ಸುಭದ್ರೆ ಕಲಿಸ್ಯಾಳ ರಾಗಿಯಾ ಬೀಸುವ ರಾಜನ ಕಲ್ಲೆ, ರಾಜ ನನಗಂಡ ಬರುವಾಗ ಜೋರು ಜೋರು ಪದವನ್ನ ಹಾಡವ್ವ’ ಎಂದು ಮೌಖಿಕ ಹಾಡುಗಳ ಪರಂಪರೆಯನ್ನು ಮುತ್ತೈದೆಯರು, ಮುದುಕಿಯರು ಹಾಡುತ್ತಾ ಮನೆಗೆ ಬಂದ ಯುವತಿಗೆ ಒಳಕಲ್ಲು, ಒನಕೆ, ಬೀಸುಕಲ್ಲುಗಳ ಪೂಜೆಯ ಮುಖೇನ ಮಾರ್ಗದರ್ಶನ ಮಾಡುತ್ತಾರೆ.

ಗ್ರಾಮೀಣ ನೇಕಾರ ಸಮುದಾಯಗಳಲ್ಲಿ ಹಲವರು ಕೃಷಿಯೊಂದಿಗೆ ನೇಯ್ಗೆಯ ಕಾರ್ಯವನ್ನೂ ಮುಂದುವರೆಸಿದ್ದಾರೆ. ಹೀಗಾಗಿ ನೇಕಾರ ರೈತ ಮಹಿಳೆಯು ಬೆಳಗಾಗ ಎದ್ದು ದನಗಳಿಗೆ ಜೋಳ, ಸಜ್ಜೆಯ ನುಚ್ಚು ಒಡೆಯುವ ದೈನಂದಿನ ಕುಟುಂಬದ ಆಹಾರಕ್ಕಾಗಿ ರಾಗಿ, ನವಣಿಯ ಬೀಸುವ, ಕುಟ್ಟುವ ಕಾಯುಕದಲ್ಲಿಯೇ ತೊಡಗಬೇಕಾದುದು ಅನಿವಾರ್ಯವಾಗಿರುತ್ತದೆ. ಮನೆಯಲ್ಲಿ ಆಕೆಗೆ ಏನೆಲ್ಲಾ ತೊಂದರೆ, ಅಪಮಾನಗಳಿದ್ದಾಗ್ಯೂ ಬೀಸುಕಲ್ಲು, ಒಳಕಲ್ಲುಗಳ ಸಾಂಗತ್ಯದಲ್ಲಿಯೇ ತನ್ನ ಜೀವನವನ್ನು ಸವೆಸುವುದು ಕಂಡು ಬರುತ್ತದೆ. ಕೈಮಗ್ಗ ಹೊಂದಿದ ಮನೆಗಳಲ್ಲಿ ಆಕೆ ಅಣಿಗೆ ಕೆಚ್ಚುವುದು, ಉಂಕಿ ತೆಗೆಯುವುದು ಮುಂತಾದ ಶ್ರಮದಾಯಕ ಕೆಲಸಗಳಲ್ಲಿ ರೆಟ್ಟೆಯ ಬಲ ಉಡುಗುವವರೆಗೂ ಮಾಡಲೇಬೇಕಾಗುತ್ತದೆ. ಸ್ತ್ರೀಯೆಂಬ ಕಾರಣಕ್ಕೆ ಅವಳು ತನ್ನ ಬೇಸರಿಕೆಯನ್ನು ಹೇಳಿಕೊಳ್ಳುವ ಹಾಗಿಲ್ಲ. ಗ್ರಾಮೀಣ ಸಮುದಾಯದ ಮಹಿಳೆಯರು ಕುಟ್ಟು, ಬೀಸುವ ಕಾಯಕದಲ್ಲಿ ತಲ್ಲೀನಳಾಗಿ ಸ್ವರ್ಗವನ್ನು ಕಾಣುತ್ತಾಳೆ. ಅಪಾರ ಸಾಹಿತ್ಯವನ್ನು ಸೃಜಿಸುತ್ತಾಳೆ. ಅದೊಂದು ರಸಮಯ ಗಳಿಗೆ ಎಂಬೆಲ್ಲಾ ಮಾತುಗಳಿಂದ ನಮ್ಮ ನಾಡಿನ ಅಧ್ಯಯನಗಳು ಆಕೆಯನ್ನು ನೋಡುವ ದೃಷ್ಟಿ ಪುರುಷಮೌಲ್ಯಾಧಾರಿತವಾಗಿದೆ. ರಸಗಳಿಗೆ ಸ್ವರ್ಗ ಎಂಬುದರ ಆಚೆಗೆ ಹಗಲೆಲ್ಲಾ ಹೊಲಗಳಲ್ಲಿ ದುಡಿದು, ಕೈಮಗ್ಗದಲ್ಲಿ ಬಸವಳಿದು ಸಂಜೆಯಾಗುತ್ತಲೇ ಅಡುಗೆಯಲ್ಲಿ ತೊಡಗಿ, ಬೆಳಗಾಗುತ್ತಲೇ ಕುಟ್ಟುವ, ಬೀಸುವ ಕೈಗಳಲ್ಲಿ, ರಟ್ಟೆಗಳಲ್ಲಿ ಬಲವಾದರೂ ಎಲ್ಲಿಯದು? ಅವಳ ಮನೋವೇದನೆಯೇ ಹಾಡುಗಳ ಮುಖೇನ ಬಂದಿದೆಯೆಂಬುದನ್ನು ನಮ್ಮ ಸಮಾಜ ತೆರೆಮರೆಯಲ್ಲಿರಿಸಿದ್ದು ದುರಂತವೇ ಸರಿ.

ನಗರ  ಪ್ರದೇಶಗಳಲ್ಲಿ ಬೀಸುವಕಲ್ಲು, ಒಳಕಲ್ಲು ಪೂಜೆಗಳು ಸಾಂಕೇತಿಕವಾಗಿ ಮಾತ್ರ ಉಳಿದಿವೆಯೆನ್ನಬಹುದು. ಆದರೆ ನಗರದ ನೇಕಾರ ಮಹಿಳೆಗೆ ಮಗ್ಗದ ಕೆಲಸದಲ್ಲಿ ತೊಡಗುವುದು ಅನಿವಾರ್ಯವಾಗಿದೆ.

ತುಪ್ದೂಟ

ಇತರೆ ಸಮುದಾಯಗಳಲ್ಲಿರುವಂತೆ ಪ್ರಸ್ಥಕ್ಕೆ ಮುಂದಿನ ದಿನಗಳಲ್ಲಿ ನವದಂಪತಿಗಳಿಬ್ಬರಿಗೂ ಕೊಬ್ಬರಿ – ಬೆಲ್ಲ – ತುಪ್ಪ – ಪುಟಾಣಿಯಿಂದ ತಯಾರಿಸಿದ ಊಟವನ್ನು ನೀಡುತ್ತಾರೆ. ವೀರ‍್ಯವೃದ್ಧಿ, ಕಾಮವೃದ್ಧಿ, ಬಲವರ್ಧನೆಗಾಗಿ ಕೊಬ್ಬರಿ ಬೆಲ್ಲದೊಂದಿಗೆ ಹೆಚ್ಚು ತುಪ್ಪವನ್ನು ಬೆರೆಸಿ ಬೆಳ್ಳಂಬೆಳಗ್ಗೆ ಒಂದೇ ತಟ್ಟೆಯಲ್ಲಿ ಗಂಡ ಹೆಂಡತಿಯರಿಗೆ ನೀಡುವುದೇ ತುಪ್ದೂಟ.  ಗಂಡ ಹೆಂಡತಿಯ ಸಹಭೋಜನದ ಕುರುಹಾಗಿಯೂ ಇದು ತೋರುತ್ತದೆ. ಮುಂದಿನ ದಿನಗಳಲ್ಲಿ ಕೌಟುಂಬಿಕ ಬಿಗಿ ವಾತಾವರಣದಲ್ಲಿ ಆಕೆಗೆ ಸಹಭೋಜನ ಸಾಧ್ಯವಾಗದೇ ಇರಬಹುದು. ನಾಚಿಕೆ ಸ್ವಭಾವದ ಹೆಣ್ಣು ಒಂದೇ ತಟ್ಟೆಯ ತುಪ್ದೂಟ ತಿನ್ನದೇ ಗಂಡನಿಗೆ ಬಿಡುತ್ತಾಳೆ. ಇದರಿಂದ ಪ್ರಸ್ಥಕ್ಕೆ ಪೂರ್ವ ಅವನು ಬಲಿಷ್ಠನಾಗುತ್ತಾನೆ. ಆಕೆಗೆ ತಿನ್ನುವ ಮಿತಿಯನ್ನೂ ಹಿರಿಯರು ಹೇರಿರುತ್ತಾರೆ. ’ಹೆಚ್ಚು ತಿಂದರೆ ಕಾಮಬಲಿತು’ ಗಂಡಿಗೆ ಅಪಮಾನವಾಗಬಹುದೆಂಬ ಧೋರಣೆಯೂ ಇರಬಹುದು. ಗಂಡು ಮಾತ್ರ ವೀರ‍್ಯ ಬಲಿಸಿಕೊಂಡು ಲೈಂಗಿಕವಾಗಿ ಸಬಲನಾಗಬೇಕು. ಆಕೆಯು ಸೋಲಬೇಕು. ತನ್ನ ಅಧೀನಳನ್ನಾಗಿಸಿಕೊಳ್ಳಬೇಕೆಂಬ ನೆಲೆಯೂ ಇದರ ಹಿಂದೆ ಇಲ್ಲದಿಲ್ಲ.

ಜಾತ್ರೆಗೋಗುಣ ಬಾರಾ

ಮದುವೆಯಾದ ಹೊಸತರಲ್ಲಿ ಯಾವುದಾದರೊಂದೂ ಜಾತ್ರೆಯಲ್ಲಿ ಮದು ಮಕ್ಕಳಿಬ್ಬರೂ ತೇರು ರಥ, ಉಚ್ಛಾಯ ನೋಡಬೇಕೆಂಬ ರೂಢಿ ಗ್ರಾಮೀಣ ಪರಿಸರದ ಎಲ್ಲ ಸಮುದಾಯಗಳಲ್ಲಿದೆ. ನೇಕಾರ ಸಮುದಾಯವೂ ಇದನ್ನು ಅನುಸರಿಸುತ್ತದೆ. ಸಾಮಾನ್ಯವಾಗಿ ಪ್ರಸ್ಥದ ಪೂರ್ವದಲ್ಲಿ ತೇರು ರಥಗಳನ್ನು ನೋಡಲು ಹೋಗುತ್ತಾರೆ. ರಥಗಳಲ್ಲಿ ಕೆತ್ತಿರುವ ಲೈಂಗಿಕ, ಮೊಲದ ವಿವಿಧ ಶಿಲ್ಪಗಳನ್ನು ಹಿರಿಯರು ತೋರಿಸುತ್ತಾರೆ. ರಥಗಳಲ್ಲಿ ರತಿ ಮನ್ಮಥರ ಕಾಮ ಪ್ರೇಮ ಪ್ರಸಂಗಗಳು, ಶಿವ ಗಿರಿಜೆಯರ ಪ್ರಣಯ ಪ್ರಸಂಗಗಳು ಇರುತ್ತವೆ. ವಿವಿಧ ಭಂಗಿಗಳಲ್ಲಿ ಕೆತ್ತಲ್ಪಟ್ಟ ಶಿಲ್ಪ ದರ್ಶನದಿಂದ ಯುವತಿಯು ತನಗೆ ಅಪರಿಚಿತವಾದ ಲೈಂಗಿಕ ಕ್ರಿಯೆಗಳನ್ನು ತಕ್ಕಮಟ್ಟಿಗೆ ತಿಳಿಯುವ ಉದ್ದೇಶ ಇದರ ಹಿಂದೆ ಇರುತ್ತದೆ. ಸ್ವಚ್ಛಂಧವಾಗಿ ಜಾತ್ರೆಯಲ್ಲಿ ಗಂಡನ ಜೊತೆ ಓಡಾಡುವುದು ಒಂದು ಅವಕಾಶ. ಆದರೆ ಲೈಂಗಿಕ ಶಿಲ್ಪಗಳನ್ನು ರಥಗಳಲ್ಲಿ ವೀಕ್ಷಿಸಿದ ಯುವತಿಯು ಕೆಲವು ಆತಂಕಗಳಲ್ಲಿ ಮುಳುಗಿರುತ್ತಾಳೆ. ಆದರೆ ಗಂಡು ಪ್ರೇರಣೆಗೊಂಡು ಮಿಲನಕ್ಕೆ ಸಿದ್ದನಾಗುತ್ತಾನೆ. ಅಪ್ರಾಪ್ತ ಅಥವಾ ಚಿಕ್ಕವಯಸ್ಸಿನಲ್ಲಿ ಮದುವೆಯಾದ ಹುಡುಗಿಗೆ ಸಹಜವಾದ ಆತಂಕ ಭಯದ ವಾತಾವರಣ ಬರುತ್ತದೆ. ರಥ ಶಿಲ್ಪದರ್ಶನದಿಂದ ಕೊಂಚ ಧೈರ್ಯ ಬಂದರೂ ಮಹಿಳೆಗೆ ಆಂತರಿಕ ನೋವುಗಳಿರುತ್ತವೆ. ನಗರ ಪ್ರದೇಶದ ಮಹಿಳೆಯರು ಜಾತ್ರೆಗೆ ಹೋಗುವ ಆಚರಣೆಯಿಂದ ದೂರವಿರುವುದು ಕಂಡು ಬರುತ್ತದೆ. ಸಾಂಪ್ರದಾಯಿಕ ಕುಟುಂಬಗಳಲ್ಲಿ ಈ ಆಚರಣೆ ಜಾರಿಯಲ್ಲಿದೆ.

ಪ್ರಸ್ಥ

ವೈವಾಹಿಕ ಜೀವನ ಸುಗಮವಾಗಿ ಸಾಗಲು ಮತ್ತು ಮನಸ್ಸುಗಳ ಸಹಜ ಕಾಮ ಬಯಕೆಗಳ ಮುಖ್ಯಘಟ್ಟ, ಪ್ರಸ್ಥ. ನೇಕಾರ ಸಮುದಾಯದಲ್ಲಿ ಪ್ರಸ್ಥ ಪವಿತ್ರವಾದುದು. ಮೊದಲ ರಾತ್ರಿ ದಿನ ಪೂಜೆಯೊಂದಿಗೆ ದೈನಂದಿನ ಕಾರ್ಯಕ್ರಮಗಳನ್ನು ಆರಂಭಿಸುತ್ತಾರೆ. ಆ ದಿನದಲ್ಲಿ ಮಹಿಳೆಗೆ ಅತ್ಯಂತ ನಾಚಿಕೆ ಹಿಂಜರಿಕೆ ಇರುತ್ತದೆ. ಆದರೆ ಗಂಡನಾದವನು ಬೀಗುತ್ತಿರುತ್ತಾನೆ. ಪ್ರಸ್ಥ ಎರಡು ಮನಸ್ಸು, ಎರಡು ದೇಹಗಳ ಮಿಲನವಾದ್ದರಿಂದ ಅಪರಿಚಿತ, ಅದರಲ್ಲಿಯೂ ಸಾಮಾಜಿಕವಾಗಿ ಪುರುಷಶಾಹಿ ಧೋರಣೆಯ ಗಂಡಿನೊಂದಿಗೆ ಅತ್ಯಂತ ಸೂಕ್ಷ್ಮವಾಗಿ ನಡೆ -ನುಡಿಯನ್ನು ಪ್ರದರ್ಶಿಸಬೇಕಾಗುತ್ತದೆ. ಕಾರಣವಾಗಿ ಆದಮ್ಯ ಕಾಮಬಯಕೆಗಳಿದ್ದರೂ ಗೆಳೆತಿಯರೊಂದಿಗೆ ಹಂಚಿಕೊಳ್ಳಲು ಹಿಂಜರಿಯಬೇಕಾದ ಪ್ರಸಂಗ ಮಹಿಳೆಗೆ ಬಂದಿದೆ.

ನವದಂಪತಿಗಳಿಬ್ಬರಿಗೂ ರಾತ್ರಿ ಸ್ನಾನ ಮಾಡಿಸಿ, ಬಿಳಿ ದುಕೂಲಗಳನ್ನು ಉಡಲು ಕೊಡುತ್ತಾರೆ. ಕಂಬಳಿಯ ಮೇಲೆ ಬರೆದ ಹಸೆ ಇಲ್ಲವೇ ಕಟ್ಟಿಗೆಯ ಮಣೆಯ ಮೇಲೆ ಕೂರಿಸಿ, ಮುತ್ತೈದೆಯರು ಆರತಿಯೆತ್ತುತ್ತಾರೆ. ಮದುವೆಯಾದ ಗಂಡನನ್ನು ಹೊರತುಪಡಿಸಿ ಈ ಕಾರ್ಯಕ್ರಮ ಸಂಪೂರ್ಣ ಹೆಂಗಸರದೇ, ಮದುಮಕ್ಕಳಿಗೆ ಕಂಕಣವನ್ನು ಕಟ್ಟುತ್ತಾರೆ. ನಂತರ ಗಂಗೆಯ ಪೂಜೆ, ಮನೆಯಲ್ಲಿಯೇ ತೆಂಗಿನಗಿಡವಿದ್ದರೆ ಅದರ ಅಡಿಯಲ್ಲಿ ತುಂಬಿದ ನೀರಿನ ತಂಬಿಗೆಯನ್ನಿಟ್ಟು ಮದುವೆಯಾದ ಹುಡುಗಿಯೊಂದಿಗೆ ಗಂಗೆಪೂಜೆ ಮಾಡಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂದರ್ಭದಲ್ಲಿ ರತಿ ಮನ್ಮಥರಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಈ ಸಂದರ್ಭದಲ್ಲಿ ರತಿ ಮನ್ಮಥರಿಗೆ ಸಂಬಂಧಿಸಿದ ಹಾಸ್ಯ ಚಟಾಕಿಗಳೊಂದಿಗೆ ಬಿಡುತ್ತಾರೆ. ಕೋಣೆಯ ಮಂಚವನ್ನು ಹೂಗಳಿಂದ ಅಲಂಕರಿಸಲಾಗಿರುತ್ತದೆ. ದಂಪತಿಗಳಿಗೆ ಬೇಕಾದ ಹಣ್ಣು- ಫಳಾರಗಳನ್ನೆಲ್ಲಾ ಇಟ್ಟಿರುತ್ತಾರೆ. ಮಂಚದ ಮೇಲಿನ ಹಾಸಿಗೆಯನ್ನು ರಾತ್ರಿ ಸಾಮಾನ್ಯವಾಗಿ ಹುಡುಗಿಯ ಅಣ್ಣನ ಹೆಂಡತಿ ಇಲ್ಲವೇ ಹುಡುಗಿಯ ನಾದಿನಿಯು ಹಾಸುತ್ತಾಳೆ.

ಪ್ರಸ್ಥ ಮುಗಿದ ನಂತರ ಬೆಳಗಿನ ಜಾವ ಹಾಸಿಗೆ ಎತ್ತುವ ಕಾರ್ಯವಿರುತ್ತದೆ.  ಇದನ್ನು ಹುಡುಗಿಯ ಸೋದರತ್ತೆ ಮಾಡುತ್ತಾಳೆ. ಮದುವೆಯಾದ ಗಂಡು ಪ್ರಸ್ಥ  ಮುಗಿಸಿದ ಮೇಲೆ ಒಂದು ನೂರಾ ಒಂದು ರೂಪಾಯಿ ಹಾಸಿಗೆಯಲ್ಲಿ ಬಿಟ್ಟಿರುತ್ತಾನೆ. ಹಾಸಿಗೆ ಎತ್ತುವವಳು ಅದನ್ನು ತೆಗೆದುಕೊಳ್ಳುತ್ತಾಳೆ. ಅಲ್ಲದೇ ಈಕೆಗೆ ದಂಪತಿಗಳು ಸೀರೆ ಕುಪ್ಪಸ ನೀಡಬೇಕು. ಹಾಸಿಗೆ ಎತ್ತುವ ಕಾರ್ಯ ಹೆಂಗಸರಿಗೇ ಸೀಮಿತವಾದದ್ದನ್ನು ಗಮನಿಸಬಹುದು. ಬೆಳಗಿನ ಜಾವ ಸ್ನಾನ ಮಾಡಿಸಿ ದೇವಸ್ಥಾನಕ್ಕೆ ದಂಪತಿಗಳನ್ನು ಕಳಿಸುತ್ತಾರೆ. ಈ ಸಂದರ್ಭದಲ್ಲಿ ಪ್ರಸ್ಥದ ಮುಜುಗರದಿಂದ ಬೆಂಡಾಗಿ ಸ್ತ್ರೀಯು ಬೀದಿಯಲ್ಲಿ ಹೋಗುವಾಗ ಕೆಲವರ ಬಾಯಿಗೆ ಸುದ್ದಿಯಾಗಿ ಮತ್ತಷ್ಟು ಮುಜುಗರಕ್ಕೊಳಗಾಗುವ  ಪ್ರಸಂಗಳಿರುತ್ತವೆ. ನಗರ ಪ್ರದೇಶಗಳಲ್ಲಿ ಈ ಮುಜುಗರಗಳಿಗೆ ಅವಕಾಶವಿರುವುದಿಲ್ಲ.

ಬೀಗ್ರು – ಬಿಜ್ರು ಬರ‍್ತಾರ

ಪ್ರಸ್ಥವಾದ ಎರಡು ದಿನಗಳ ನಂತರ ನೇಕಾರ ಮಹಿಳೆಯನ್ನು ಅಡುಗೆ ಮನೆಗೆ ಇಳಿಸಲಾಗುತ್ತದೆ. ಗಂಡನ ಮನೆಗೆ ಸಂಬಂಧಿಸಿದ ಕೆಲವಾರು ನಂಟರು ಊಟಕ್ಕೆಂದು ಬರುತ್ತಾರೆ. ಇದನ್ನು ಬೀಗ್ರು ಬಿಜ್ರು ಕಾರ್ಯಕ್ರಮ ಎನ್ನುತ್ತಾರೆ. ಹೊಸತಾಗಿ ಮನೆಗೆ ಬಂದ ಸೊಸೆಯ ಕೈರುಚಿಯನ್ನು ನೋಡಲು ಎಲ್ಲರೂ ಉತ್ಸುಕರಾಗಿರುತ್ತಾರೆ. ಮನೆಗೆ ಬಂದ ಇಪ್ಪತ್ತು ಮೂವತ್ತು ಜನರಿಗೆ ಅಡುಗೆ ಮಾಡುವ ಜವಾಬ್ದಾರಿ ಈಕೆಯದೇ. ಒಂದರ್ಥದಲ್ಲಿ ಅಡುಗೆ ಮನೆಗೆ ಈಕೆ ಸಮರ್ಥಳೇ ಎಂದು ಪರೀಕ್ಷೆ ಮಾಡುವ ಕಾರ್ಯ ಇದಾಗಿದೆ. ಈಕೆಯೊಂದಿಗೆ ಇತರೆ ಹೆಂಗಸರು ಸಹಾಯ ಮಾಡುತ್ತಾರಾದರೂ ಮುಖ್ಯ ಇವಳೇ. ಅಡುಗೆಯ ತಯಾರಿಯ ನಂತರ ಎಲ್ಲರಿಗೂ ಬಡಿಸುವುದು, ಉಂಡ ಎಲೆ ಎತ್ತುವುದು, ಅಡುಗೆಯು ರುಚಿಯಿಲ್ಲದಿದ್ದರೆ ಹಾಸ್ಯ, ಟೀಕೆಗೊಳಗಾಗುವುದು ಮಹಿಳೆಯ ಪಾಲಿಗೆ ಅನಿವಾರ್ಯವಾಗಿದೆ. ಈಕೆಯನ್ನು ಅಡುಗೆಮನೆಗೆ ಸೀಮಿತಗೊಳಿಸವ ಆಚರಣೆಯಂತೆ ತೋರುತ್ತದೆ.

ಉಡಿಕೆ

ನೇಕಾರ ಸಮುದಾಯದಲ್ಲಿ ’ಉಡಿಕೆ’ ಪದ್ಧತಿಯ ಮದುವೆಯ ಪ್ರಕಾರವೂ ಇದೆ. ಗಂಡ ತೀರಿಕೊಂಡ ಮಹಿಳೆಯು ತನ್ನ ವೈಧವ್ಯವನ್ನು ಹೋಗಲಾಡಿಸಿಕೊಳ್ಳಲು ಮರುಮದುವೆಯಾಗುವುದೇ ’ಉಡಿಕೆ’ ಸಂಪ್ರದಾಯ, ಈ ಪದ್ಧತಿಯು ಸಾಂಪ್ರದಾಯಿಕ ಸಮಾಜದಲ್ಲಿ ಹೆಣ್ಣಿಗೆ ಆತ್ಮಗೌರವ ತರುವುದೇ ಆಗಿದೆ. ಆದರೆ ’ಉಡಿಕೆ’ ಮದುವೆಯಾದವರನ್ನು ಸಮಾಜ ತಿರಸ್ಕಾರ ಮನೋಭಾವದಿಂದ ನೋಡುವುದೂ ಇದೆ. ಅಷ್ಟೇ ಅಲ್ಲ, ಈ ಮದುವೆಯು ವಿಜೃಂಭಣೆಯಿಂದಲೂ ನಡೆಯುವುದಿಲ್ಲ.

ಹೆಂಡತಿ ತೀರಿಕೊಂಡ ಗಂಡು, ಗಂಡ ತೀರಿಕೊಂಡ ಹೆಣ್ಣು ಮದುವೆಯಾಗಬಹುದು. ಇಲ್ಲವೇ ಗಂಡ ತೀರಿಕೊಂಡ ಹೆಣ್ಣು ಮದುವೆಯಾಗದ ಗಂಡು ಬಂಧನಕ್ಕೊಳಗಾಗಬಹುದು. ಹೆಂಡತಿ ತೀರಿಕೊಂಡ ಗಂಡು, ಗಂಡ ತೀರಿಕೊಂಡ ಹೆಣ್ಣಿನ ಕಡೆಯವರ ಪರಸ್ಪರ ಒಪ್ಪಿಗೆಯಿಂದ ಈ ಸಮುದಾಯದ ಗೌಡ ಮತ್ತು ಹೆಗಣೆಯವರ ಅಪ್ಪಣೆಯಿಂದ ಮದುವೆಗೆ ಅವಕಾಶ ದೊರೆಯುತ್ತದೆ. ಅಚ್ಚರಿಯೆಂದರೆ ಈ ವಿವಾಹ ಹಗಲು ನಡೆಯಲು ಸಾಂಪ್ರದಾಯಿಕ ಸಮಾಜದ ಒಪ್ಪಿಗೆಯಿಲ್ಲ. ರಾತ್ರಿಯ ವೇಳೆಯಲ್ಲಿ ನಿಗೂಢವಾದ ಸ್ಥಳವೊಂದರಲ್ಲಿ ಕೇವಲ ರಂಡೆಯರೇ (ವಿಧವೆಯರು) ಹೋಗಿ ತಾಳಿಕಟ್ಟಿಸಿಕೊಂಡು ಬರುವ ಕರಾಳ ಆಚರಣೆಯಿದು. ವಿಧವೆಯರೇ ಹೋಗುವುದರಿಂದ ಕರಾಳ ಎನ್ನಲಾಗದು. ಆದರೆ ಮಹಿಳೆಯು ವಿಧವೆಯಾದ ಕಾರಣಕ್ಕೆ ನಿಗೂಢ ರೀತಿಯಲ್ಲಿ ಆಕೆಯನ್ನು ನಡೆಸಿಕೊಂಬುದು ಅಕ್ಷಮ್ಯ, ವಿದುರನು ಕನ್ಯೆಯನ್ನು ಮದುವೆಯಾದರೆ ವಿಜೃಂಭಣೆಯಿಂದ ಎಲ್ಲಾ ವಿಧಿ ಆಚರಣೆಯೊಂದಿಗೆ ನಡೆಯುತ್ತದೆ. ವಿಧವೆ ಕುವರನನ್ನು, ವಿಧುರನನ್ನೋ ಮದುವೆಯಾದರೆ ಕರಾಳತೆ ಬಂದು ಬಿಡುತ್ತದೆ. ಗಂಡಸಿಗಿಲ್ಲದ ಲೈಂಗಿಕ ಪವಿತ್ರೀಕರಣ ಮಹಿಳೆಗೆ ಮಾತ್ರ ಹೇರಲಾಗಿದೆ. ಎಲ್ಲ ಸಮುದಾಯಗಳಲ್ಲಿಯೂ ಉಡಿಕೆಯ ಪದ್ಧತಿ ಇದೆ.

ಉಡಿಕೆ ಮದುವೆಯಾದ ಹೆಂಗಸು ಯಾವುದೇ ಮದುವೆ ಹಬ್ಬ ಆಚರಣೆಯಲ್ಲಿ ನಡೆಯುವ ಮಂಗಲಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ. ಅಷ್ಟೇ ಅಲ್ಲ ಆಕೆ ಕಳಸವನ್ನು ಮುಟ್ಟುವಂತಿಲ್ಲ. ಉಡಿಕೆಯ ಮದುವೆಯಿಂದ ಜನಿಸಿದ ಮಕ್ಕಳಿಗೂ ಮುಂದೆ ಗಂಡು ಹೆಣ್ಣನ್ನು ಕೊಡಲು ಸಮಾಜ ಮತ್ತು ಸಮುದಾಯ ನಿರಾಕರಿಸುತ್ತದೆ. ಆದ್ದರಿಂದ ಹಲವು ಕಷ್ಟಗಳಿಗೆ ಒಳಗಾಗಬೇಕಾಗಿದೆ. ಉಡಿಕೆಯಾದ ಮಹಿಳೆ ಹಲವು ಅಪಮಾನಗಳಿಗೆ, ನಿಂದನೆಗಳಿಗೆ ಒಳಗಾಗುತ್ತಾಳೆ.

ಹೆರಿಗೆ

ಮಹಿಳೆಗೆ ಹೆರಿಗೆಯು ಅತ್ಯಂತ ವಿಶಿಷ್ಟವಾದದ್ದು. ಗರ್ಭ ಧರಿಸುವುದು ಆಕೆಗೆ ಮಾತ್ರ ಸಾಧ್ಯ. ಹಾಗಾಗಿ ಹೆರಿಗೆಯನ್ನು ಭಾರತೀಯ ಸಮಾಜ ಗೌರವದಿಂದ ಕಾಣುತ್ತದೆ. ಈ ಸಂದರ್ಭದಲ್ಲಿ ಆಕೆಯ ನೋವು ನಲಿವುಗಳನ್ನು ಎಚ್ಚರದಿಂದ ಗಮನಿಸಲಾಗುತ್ತದೆ. ಕೃಷಿ ಕುಟುಂಬಗಳಲ್ಲಿ ಗರ್ಭಿಣಿಯಾದ ಹೆಂಗಸಿಗೆ ಅಂತಹ ಆರೈಕೆಯೇನೂ ಇರುವುದಿಲ್ಲ. ನೇಕಾರ ವೃತ್ತಿಯನ್ನು ಅವಲಂಬಿಸಿದವರೂ ಸಾಮಾನ್ಯವಾಗಿ ಅಣಿಗೆಕೆಚ್ಚುವ, ಉಂಕಿ ತೆಗೆಯುವ ಕಾರ್ಯ ಗರ್ಭಿಣಿಯಿದ್ದಾಗಲೂ ಮಾಡುತ್ತಾಳೆ. ಕೃಷಿಯಲ್ಲಿಯೂ ದಿನನಿತ್ಯ ಆಕೆ ದುಡಿಯಬೇಕಾದ ಸಂದರ್ಭಗಳಿವೆ. ನೇಯ್ಗೆಯ ವೃತ್ತಿಯನ್ನವಲಂಬಿಸಿದ ನೇಕಾರ ಸಮುದಾಯ ಹೆಂಗಸು ಗರ್ಭಧರಿಸಿದಾಗಿನಿಂದ ಹೆರಿಗೆಯವರೆಗೂ ಹಲವು ಕಾರ್ಯಕ್ರಮಾಚರಣೆ ಮಾಡುತ್ತಾರೆ. ಮಗು ಜನಿಸಿದ ಬಳಿಕ ಮತ್ತೂ ಕೆಲವಾರು ವಿಧಿಯಾಚರಣೆಗಳಿವೆ.

ಬಯಕೆ ಬುತ್ತಿ

ನೇಕಾರ ಮಹಿಳೆ ಮೊದಲ ಬಸುರಿಯಾದಾಗ ಸಂತೋಷದ ಜೊತೆಗೆ ಹಲವು ಸಂಕಟಗಳಿಗೂ ಒಳಗಾಗುವುದುಂಟು. ಆಹಾರವು ಹೊಟ್ಟೆಗೆ ಸೇರದೆ ವರ್ಜನೆಯಾಗುತ್ತದೆ. ಈ ಸಂದರ್ಭದಲ್ಲಿ ಆಕೆಯ ಮಾನಸಿಕ ಸ್ಥಿತಿಯು ಬದಲಾಗುತ್ತದೆ. ಹೆಣ್ಣಾಗಿ ಹುಟ್ಟಬಾರದಿತ್ತು ಎಂಬ ಪಾಪಪ್ರಜ್ಞೆಗೆ ಒಳಗಾಗುವುದು ಸಾಮಾಯವಾಗಿರುತ್ತದೆ. ಮೂರು ತಿಂಗಳು ಗರ್ಭ ನಿಂತಿತೆಂದರೆ, ತವರುಮನೆಯವರು ’ಬಯಕೆ ’ ಬುತ್ತಿಯನ್ನು ತರುತ್ತಾರೆ. ಐದು ಮಂದಿ ಮುತ್ತೈದೆಯರು ’ಮೊಸರು ಅನ್ನ ಬೆಳ್ಳುಳ್ಳಿಖಾರ’ ’ಕಟಗರೊಟ್ಟಿ- ಬದನಿಪಲ್ಲೆ’ ತಂದು ಮೂರು ತಿಂಗಳ ಬಸುರಿಗೆ ಉಣಬಡಿಸುತ್ತಾರೆ. ಇದು ಗರ್ಭಿಣಿಯಾದ ಮಹಿಳೆಗೆ ಆನಂದ ಉಂಟು ಮಾಡುವ ಸಂಗತಿಯಾಗಿರುತ್ತದೆ. ಆಹಾರ ಸೇರದೆ ದಿಗ್ಭ್ರಮೆಗೆ ಒಳಗಾದ ನಾರಿಗೆ ತವರು ಮನೆಯವರ ಮುಖ ನೋಡಿ ಮಾತನಾಡುವ, ದುಃಖ ಹಂಚಿಕೊಳ್ಳುವ ಸಂಗತಿ ಒಂದಾದರೆ, ಮೊಸರು ಅನ್ನ ಗಂಡನ ಮನೆಯಲ್ಲಿದ್ದರೂ ಗರ್ಭಸ್ತ ಸೂಕ್ಷ್ಮ ಮನಸ್ಸಿಗೆ ತಾನು ಹುಟ್ಟಿದ ಮನೆಯ ’ಬುತ್ತಿ’ ಯೆಂಬುದು ಮನಸ್ಸಿನಲ್ಲಿ ಉಲ್ಲಸಿತಗೊಳಿಸುವ ಮನೋಸ್ಥೈರ್ಯ ಕೊಡುವುದೇ ಆಗಿರುತ್ತದೆ. ಇಷ್ಟಾದರೂ ಆಕೆ ತವರು ಮನೆಗೆ ಹೋಗದೇ ದೈನಂದಿನ ಕೆಲಸಕಾರ್ಯಗಳಲ್ಲಿ ನಿರತವಾಗಲೇಬೇಕಾಗಿರುತ್ತದೆ.

ಮಣ್ಣು ತಿಂದು ಮುಕ್ಕಣ್ಣನ ಹಡಿಯೇ

ಮಹಿಳೆಯು ಗರ್ಭಿಣಿ ಸ್ಥಿತಿಯಲ್ಲಿದ್ದಾಗ ನಾನಾ ಬಗೆಯ ತಿಂಡಿ – ತಿನಿಸುಗಳ ಬಯಕೆಯಾಗುತ್ತದೆಯಂತೆ. ಸಿಹಿ, ಉಳಿ, ಉಪ್ಪು, ಖಾರದೊಂದಿಗೆ ಕೆಲವಾರು ವಿಶಿಷ್ಟ ಬಯಕೆಗಳೂ ಉಂಟಾಗುತ್ತವೆ. ಬಯಲು ಸೀಮೆಯ ಕೃಷಿ ಮೂಲದ ನೇಕಾರ ಬಸುರಿಯು ಎರೆಮಣ್ಣನ್ನು ತಿನ್ನುತ್ತಾಳೆ. ಬೇಸಿಗೆಯಲ್ಲಿ ಚೆನ್ನಾಗಿ ರೆಂಟೆಹೊಡೆದು ಎಬ್ಬಿಸಿದ ಮಣ್ಣಿನ ಹೆಂಟೆ ಅತ್ಯಂತ ಸುವಾಸನೆಯಿಂದ ಕೂಡಿರುತ್ತದೆ. ಬಿಳಿ ಜೋಳದ ಬುಡಕ್ಕೆ ಅಂಟಿಕೊಂಡ ಮಣ್ಣಿನ  ವಾಸನೆಯಂತೂ ಸಿಹಿ ಮಿಶ್ರಿತವಾಗಿ ಘಮಘಮಿಸುತ್ತದೆ. ಈ ಮಣ್ಣಿನ ಮೇಲೆ ನೀರಿನ ಹನಿಬಿದ್ದರೆ ಹಾಗೇ  ಅರಳುತ್ತದೆ. ಇದನ್ನು ಗರ್ಭಿಣಿ ಹೆಂಗಸು ತಿನ್ನುವುದು ರೂಢಿಯಿದೆ, ಗ್ರಾಮೀಣ ಪರಿಸರದಲ್ಲಿ ಮಣ್ಣು ತಿಂದರೆ ಮುಕ್ಕಣ್ಣನಂತ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಮಣ್ಣು ರೈತರ ಬದುಕಿನ  ಸಂಕೇತ. ಹೊಲದಲ್ಲಿ ದುಡಿಯಲು ಪುರುಷ ಬಲಿಷ್ಠನಾಗಿರುತ್ತಾನೆ. ಹೀಗಾಗಿ ಗಂಡು ಜನಿಸಬೇಕೆಂಬುದು ಕುಟುಂಬದವರ ಬಯಕೆಯಾಗಿರುತ್ತದೆ. ಕೆಲವು ಕುಟುಂಬಗಳಲ್ಲಿ ಗರ್ಭಿಣಿಯು ಮಣ್ಣು ತಿಂದರೆ ಅದನ್ನು ನೋಡಿ ಆನಂದದಿಂದ ಗಂಡು ಜನಿಸುತ್ತದೆಂದು ಆಕೆಗೆ ಸರಿಯಾದ ಆರೈಕೆ ಮಾಡಿ ಪ್ರಸಂಗಗಳೂ ಇರುವುದನ್ನು ಗಮನಿಸಿದರೆ ಸಮುದಾಯಗಳು ಬಯಸುವ ಮಗು ಎಂಥಾದ್ದು ಎಂಬ ಲಿಂಗತಾರತಮ್ಯ ಬೇಧದ ಅರಿವು ಆಗುತ್ತದೆ.

ಸುಣ್ಣವ ತಿಂದು ಸುಪನಾತಿಯ ಹಡಿಯೇ

ಗರ್ಭಿಣಿ ಮಹಿಳೆಯು ಸುಣ್ಣ, ವಿಭೂತಿ, ಉಂಡೆಗಳನ್ನು ತಿನ್ನುವುದೂ ಇದೆ. ಹಾಗೇನಾದರೂ ತಿಂದಲ್ಲಿ ಆಕೆಗೆ ಹೆಣ್ಣು ಮಗು ಜನಿಸುವುದು ಖಚಿತವೆಂದು ನಂಬುತ್ತಾರೆ. ಈ ಸಂದರ್ಭದಲ್ಲಿ ಆಕೆಗೆ ಆರೈಕೆಯಲ್ಲಿ ಏರು ಪೇರಾಗುವ ಸಾಧ್ಯತೆ ಇರುತ್ತದೆ. ಸುಣ್ಣವ ತಿಂದು ಸುಪನಾತಿಯ ಹಡಿ ಎಂಬಲ್ಲಿ ಸುಪನಾತಿ ಪದವೇ ಹೆಣ್ಣು ಕೆಲಸಕ್ಕೆ ಬಾರದ, ವಂಶವನ್ನು ಬೆಳೆಸಿದ, ಕೈಲಾಗದ ಎಂಬುದನ್ನು ಸೂಚಿಸುವಂತಿದೆ. ಈ ಸಂದರ್ಭದಲ್ಲಿ ಅತ್ತೆಯ ಮನೆ ಕಿರುಕುಳದಿಂದ ಪಾರಾಗಲು ಆಕೆಗೆ ಮಣ್ಣು ತಿನ್ನಲು ಸಾಧ್ಯವಾಗಲಾರದು. ಮನಸ್ಸು ಬಯಸಿದ್ದನ್ನು ಆಕೆ ನಿರ್ಭಿಡೆಯಿಂದ ತಿನ್ನುತ್ತಾಳೆ.

ಕರಿಬೂಜವ ತಿಂದರೆ ಮರಿಬೀಜಕೆ ಕುತ್ತು

ಗರ್ಭಿಣಿಯಾದ ನೇಕಾರ ಮಹಿಳೆಯು ಕರಿಬೂಜದ ಹಣ್ಣನ್ನು ತಿನ್ನಬಾರದೆಂಬ ನಿಷೇಧವಿದೆ. ನಿಸರ್ಗದತ್ತವಾದ ಈ ಹೆಣ್ಣಿನ ಸಿಪ್ಪೆಯು ಪೊರೆಪೊರೆಯಾಗಿ ಗೆರೆಗಳಿಂದ ಕೂಡಿರುತ್ತದೆ. ಇದನ್ನು ಸೇವಿಸಿದ್ದೇ ಆದರೆ ಜನಿಸುವ ಮಗು ಗಂಡೇ ಇರಲಿ, ಹೆಣ್ಣೇ ಇರಲಿ ಚರ್ಮವೂ ಅದರ ರೂಪ ಪಡೆಯುತ್ತದೆ ಎಂದು ತಿಳಿದಿದ್ದಾರೆ. ಹೀಗಾಗಿ ಆ ಹಣ್ಣನ್ನು ಬಯಸಿದರೂ ಕೊಡುವುದಿಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣ ಇದ್ದಿರಬಹುದು.

ಅಂತೆಯೇ ಗರ್ಭಿಣಿಯರಿಗೆ ಪಪ್ಪಾಯಿ ಹಣ್ಣು ತಿನ್ನುವುದೂ ನಿಷಿದ್ಧ. ಈ ಹಣ್ಣಿನ ಸೇವನೆಯಿಂದ ಧರಿಸಿದ ಗರ್ಭಪಾತವಾಗುತ್ತದೆಂದು ತಿಳಿದಿದ್ದಾರೆ. ಆದರೆ ವೈದ್ಯಲೋಕ ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಪಪ್ಪಾಯಿ ಮತ್ತು ಕರಿಬೂಜಗಳು ಉಷ್ಣದಿಂದ ಕೂಡಿರುತ್ತವಾದ್ದರಿಂದ ನಿಷೇಧ ಮಾಡಿರಬೇಕಷ್ಟೇ.

ನಾಗರ ಕಂಡರೆ ಜಾಗವ ಬಿಡದು

ಗರ್ಭಿಣಿಯಾದ ಮಹಿಳೆಯು ನಾಗರಹಾವು ಅಥವಾ ಇತರೆ ಹಾವುಗಳನ್ನು ನೋಡಿದರೆ ಎರಡು ಸಂಕಟಗಳು ಎದುರಾಗುತ್ತವೆಯಂತೆ. ಜನಿಸುವ ಮಗುವಿಗೆ ಸದಾ ಬಾಯಿಯಲ್ಲಿ ಜೊಲ್ಲು ಸುರಿಯುತ್ತದೆ ಮತ್ತು ನಾಗರಹಾವಿನಂತೆ ಸದಾ ನಾಲಿಗೆಯನ್ನು ಚಾಚುತ್ತಲೇ ಇರುತ್ತದೆ. ಅಂತೆಯೇ ಹಾವನ್ನು ಯಾವ ಸ್ಥಳದಲ್ಲಿ ಆಕೆ ನೋಡುತ್ತಾಳೋ ಅಲ್ಲಿಯೇ ಹಾವಿಗೆ ಕಣ್ಣು ಕಾಣದಾಗುತ್ತದೆ. ಪೊರೆ ಬರುತ್ತದೆ. ಆಕೆಯ ಹೆರಿಗೆಯಾದ ನಂತರವೇ ಮರಳಿ ಹಾವಿಗೆ ಪೊರೆ ಕಳಚುತ್ತದೆಂಬ ನಂಬಿಕೆ ಇದೆ. ಆ ಹಾವು ಪೊರೆ ಕಳಚುವವರೆಗೆ ಅವಳ ಮನೆಯ ಸುತ್ತಲೇ ಅಲ್ಲಲ್ಲಿ ಹರಿದಾಡುತ್ತದೆಯಂತೆ.

ಹೊಳೆದಾಟಿದರೆ ಕೊಳೆ ಕಟ್ಟುತ್ತೆ

ಗರ್ಭಿಣಿಯಾದ ಮಹಿಳೆಯು ಮೂರು ತಿಂಗಳವರೆಗೆ ಯಾವುದೇ ಹೊಳೆಯನ್ನು, ನದಿ, ಸಮುದ್ರಗಳನ್ನು ದಾಟಬಾರದು. ಒಂದು ವೇಳೆ ದಾಟಿದರೆ ಹೊಟ್ಟೆಯಲ್ಲಿ ಮಗುವಿಗೆ ಬದಲಾಗಿ ಕೊಳೆ ಕಟ್ಟುತ್ತದೆಯೆಂಬ ನಂಬಿಕೆಯಿದೆ. ಅನಿವಾರ್ಯವಾಗಿ ಅಂದರೆ ತವರು ಮನೆಯ ಕಡೆ ಯಾರಾದರೂ ಮರಣ ಹೊಂದಿದರೆ  ಹೋಗಲೇ ಬೇಕಾಗಿ ಬಂದರೆ ಹೊಳೆಯಲ್ಲಿ ಎರಡು ಎಲೆ ಅಡಿಕೆ ಒಂದು ರೂಪಾಯಿ ನಾಣ್ಯ ಮತ್ತು ಜೀರಿಗೆ ಕಾಳುಗಳನ್ನು ಬಿಟ್ಟು ಹಿಂದಕ್ಕೆ ತಿರುಗಿ ನೋಡದೇ ಹೋಗಬೇಕು. ಮೂರು ತಿಂಗಳ ತರುವಾಯ ಈ ನಿಷೇಧ ಇರುವುದಿಲ್ಲ.

ಗರ್ಭಿಣಿ ಮಹಿಳೆಯರಿಗೆ ನೇಕಾರ ಸಮುದಾಯದಲ್ಲಿರುವ ಈ ನಿಷೇಧಗಳೆಲ್ಲಾ ಬಹುಶಃ ಆಕೆಯ ಯೋಗಕ್ಷೇಮಕ್ಕಾಗಿಯೇ ಇರುವಂಥವುಗಳೆನ್ನಬಹುದು. ಕರಿಬೂಜ, ಪಪ್ಪಾಯಿ, ಆಹಾರ ಉಷ್ಣತೆಯವು. ನಾಗರಹಾವನ್ನು ಕಂಡರೆ ಭಯಗೊಂಡು ಮಗುವಿನ ಬೆಳವಣಿಗೆಯು ಕುಂಠಿತವಾಗಬಹುದೆಂಬ ಅರಿವು. ಹೊಳೆದಾಟುವುದೆಂದರೆ ಮೂರು ತಿಂಗಳ ಸಂದರ್ಭದಲ್ಲಿ ಆಗತಾನೆ ಪಿಂಡ ಗಟ್ಟಿಗೊಳ್ಳುತ್ತಿರುತ್ತದೆ. ಆದ್ದರಿಂದ ಪ್ರಯಾಣ ಮಾಡಬಾರದು. ಇದರಿಂದ ಈ ನಿಷೇಧ ಜನಿಸಿರಲು ಸಾಧ್ಯವಿದೆ.

ರಾವು ಬಡಿದರೆ ನೋವು ಖಚಿತ

ಗರ್ಭಿಣಿ ಮಹಿಳೆಯು ನವಮಾಸ ತುಂಬಿದಾಗ ಅತ್ಯಂತ ಜಾಗರೂಕತೆಯಿಂದ ಇರಬೇಕಾಗುತ್ತದೆ. ಒಬ್ಬಳ್ಳನ್ನೇ ಎಲ್ಲಿಗೂ ಕಳಿಸುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳು ಇಲ್ಲದೇ ಬಯಲಿಗೆ ಹೋಗಬೇಕು. ಇಂಥ ಸಂದರ್ಭದಲ್ಲಿ ಒಂಟಿಯಾಗಿ ಹೋದರೆ ಅಲ್ಲಿ ರಾವು (ರಾಹು) ಬಡಿದುಕೊಳ್ಳುತ್ತದೆ. ಭೂತ ಪಿಶಾಚಿಗಳು, ಕೊಳ್ಳಿ ದೆವ್ವಗಳು ಹೊಟ್ಟೆಯೊಳಗೆ ಹೋಗುತ್ತವೆ. ಒಳಗಿರುವ ಶಿಶುವಿಗೆ ಭಯಾನಕ ತೊಂದರೆ ಕೊಡುತ್ತವೆ. ಹೆರಿಗೆ ಸುಲಭವಾಗದಂತೆ ಕಾಡಿಸುತ್ತವೆ ಎಂಬ ನಂಬಿಕೆಗಳಿವೆ. ಕಾರಣ ಒಬ್ಬೊಂಟಿಯಾಗಿ ಆಕೆ ಹೋಗುವುದಿಲ್ಲ. ಈ ನಿಷೇಧದ ಹಿಂದೆ ಬಹುಶಃ ಬೀಳಬಹುದು. ಅಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡರೆ ಕಷ್ಟ ಎಂಬ ವೈಜ್ಞಾನಿಕ ಹಿನ್ನಲೆಯಿರಬಹುದು.

ಕುಬುಸದ ಕಾರಣ

ನೇಕಾರ ಸಮುದಾಯದಲ್ಲಿ ಗರ್ಭಿಣಿ ಮಹಿಳೆಗೆ ಐದು ತಿಂಗಳು ಇಲ್ಲವೇ ಎಂಟನೇ ತಿಂಗಳಲ್ಲಿ ಕುಬುಸದ ಕಾರಣ ಮಾಡಿ ತವರು ಮನೆಗೆ ಹೆರಿಗೆಗೆ ಕರೆದುಕೊಂಡು ಹೋಗುತ್ತಾರೆ. ಚೊಚ್ಚಲ ಹೆರಿಗೆಯ ಸಂದರ್ಭದಲ್ಲಿ ತವರುಮನೆಯಿಂದ ಹನ್ನೊಂದು ಹಸಿರುಬಳೆ, ಹಸಿರು ಸೀರೆ, ಕುಪ್ಪಸ, ಎಲೆ ಅಡಿಕೆ, ಉತ್ತತ್ತಿ, ಹಲವು ವಿಧದ ಹಣ್ಣುಗಳು, ಹಲವು ಸಿಹಿ ಪದಾರ್ಥಗಳನ್ನು ತಂದು ಗಂಡನಿಗೂ ಹೊಸ ಬಟ್ಟೆಯನ್ನು ತರುತ್ತಾರೆ. ಇಬ್ಬರನ್ನೂ ಕೂಡಿಸಿ ಬಟ್ಟೆ ಫಲತಾಂಬೂಲ ನೀಡುತ್ತಾರೆ. ’ಹಸಿರು ಬಳೆ’ ಬಟ್ಟೆಗಳು ಸಮೃದ್ಧಿ ಫಲದ ಸಂಕೇತಗಳು. ಹೆರಿಗೆಗೆ ತವರಿನವರು ಕರೆದೊಯ್ಯುತ್ತಾರೆ.

ಸೂಲಗಿತ್ತಿಯ ಒಡಲು

ತುಂಬು ಗರ್ಭಿಣಿಯು ಹೆರಿಗೆ ನೋವನ್ನು ಅನುಭವಿಸುವಾಗ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸೂಲಗಿತ್ತಿಯನ್ನು ಕರೆಸುತ್ತಾರೆ. ಆಕೆ ಬಂದ ತಕ್ಷಣ ಒಂದು ಸೇರು ಅಕ್ಕಿ, ಐದು ಬೆಳ್ಳುಳ್ಳಿ, ಐದು ಉತ್ತತ್ತಿ, ಕೊಬ್ಬರಿ, ಎಲೆ ಅಡಿಕೆಯನ್ನು ಉಡಿ ತುಂಬುತ್ತಾರೆ. ಆಕೆ (ಸೂಲಗಿತ್ತಿ) ರಂಡೆಯಾಗಿದ್ದರೆ ಕೈಯಲ್ಲಿ ಕೊಡುತ್ತಾರೆ. ಇದು ಹೆರಿಗೆ ಮಾಡಿಸಲು ಆಹ್ವಾನ ನೀಡಿದಂತೆ. ಅದರಂತೆ ಊರಿನ ಅಥವಾ ಓಣಿಯ ಅನುಭವಿ ಹೆಂಗಸರಿಗೂ ಎಲೆ ಅಡಿಕೆ ನೀಡಿ ಆಹ್ವಾನಿಸಲಾಗುತ್ತದೆ. ಎಲ್ಲರೂ ಸೇರಿ ಸುಸೂತ್ರವಾಗಿ ಹೆರಿಗೆಯನ್ನು ಮಾಡಿಸುತ್ತಾರೆ. ಈ ಸಂದರ್ಭದಲ್ಲಿ ಗಂಡಸರು ಯಾರೂ ಇರುವುದಿಲ್ಲ. ಸೂಲಗಿತ್ತಿ ಆಗಾಗ ಹಾಸ್ಯ ಚಟಾಕಿಯನ್ನು ಹಾರಿಸುತ್ತಾ ಹೆರಿಗೆಯ ನೋವನ್ನು ಕಾಣದಂತೆ ಮಾಡುತ್ತಾಳೆ. ಹೆಣ್ಣು ಜನಿಸಿದರೆ ’ತೂತು ವಡೆ’ ಗಂಡು ಜನಿಸಿದರೆ ’ಮಿಂಡಗಾರ’ ಹುಟ್ಟಿದನಮ್ಮೋ’ ಎಂದು ಸೂಲಗಿತ್ತಿ ಜೋರಾಗಿ ಕೂಗುತ್ತಾಳೆ. ಇಲ್ಲಿಯೂ ’ಮಿಂಡಗಾರ’ ಎಂಬಲ್ಲಿ ಪುರುಷ ಅಧಿಕಾರವು ಇರುವುದನ್ನು ಗಮನಿಸಬಹುದು. ನಗರ ಪ್ರದೇಶ ಶಿಕ್ಷಿತರಲ್ಲಿ ದಾದಿಯರೇ ಹೆರಿಗೆ ಮಾಡಿಸುವುದರಿಂದ ಈ ಸಾಂಸ್ಕೃತಿಕ ಸನ್ನಿವೇಶಗಳು ಇರುವುದಿಲ್ಲ.

ಮಾಸಲು ದಿಬ್ಬ

ಜನಿಸಿದ ಮಗುವಿನ ಮಾಸಲು ಹೂತಿಡುವುದಕ್ಕೆ ಮಾಸಲುದಿಬ್ಬ ಎನ್ನುತ್ತಾರೆ. ನೇಕಾರ ಸಮುದಾಯಗಳಲ್ಲಿ ಗಂಡು ಜನಿಸಿದರೆ ಮನೆಯ ಮುಂದಿನ ಅಂಗಳದಲ್ಲಿ ಕುಣಿಯನ್ನು ಅಗೆದು ಅದರಲ್ಲಿ ಮಾಸಲು ಇಟ್ಟು ಮುಚ್ಚಿ ಮೇಲೆ ಬೇವಿನ ಎಲೆಯನ್ನಿಡುತ್ತಾರೆ. ಸಣ್ಣ ಬಂಡೆಯೊಂದನ್ನಿಟ್ಟು ಕುಂಕುಮ ಮತ್ತು ಅರಿಶಿಣದ ಐದೈದು ಬೊಟ್ಟುಗಳನ್ನಿಟ್ಟು ಐದು ಸಣ್ಣ ಗುಂಪು ಜೋಳ, ಅಕ್ಕಿ, ಇಟ್ಟು ಸಾಂಬ್ರಾಣೀ ಹಾಕುವ, ಊದುಬತ್ತಿ ಬೆಳಗುವ ಪದ್ಧತಿಯಿದೆ.

ಹೆಣ್ಣು ಮಗು ಜನಿಸಿದರೆ ಮಾಸಲನ್ನು ತಿಪ್ಪೆಗುಂಡಿಯಲ್ಲಿ ಹೂಳುವ ಪದ್ದತಿಯಿದೆ. ಇದು ನೇಕಾರರ ಸಮಾಜವು ಹೆಣ್ಣನ್ನು ಹೀನಾಯವಾಗಿ ಕಾಣುವ ಧೋರಣೆಯನ್ನು ತಿಳಿಸುತ್ತದೆ. ಗಂಡು ಮಗುವಿನ ಮಾಸಲನ್ನು ಮನೆಯ ಅಂಗಳದಲ್ಲಿಟ್ಟುಕೊಂಡು ಪೂಜಿಸುವ ಜನ ಹೆಣ್ಣಿನ ಬಗ್ಗೆ ತೋರುವ ನಿರಾಕರಣೆಯ ಮನೋಭಾವ, ಆಕೆಯನ್ನು ದ್ವಿತೀಯ ದರ್ಜೆಯಲ್ಲಿ ನೋಡುವುದೇ ಆಗಿದೆ.

ಈರಲು ಪೂಜೆ

ಮಗು ಜನಿಸಿದ ಮೂರನೇ ದಿನಕ್ಕೆ ಈರಲು ಪೂಜೆ ಮಾಡುತ್ತಾರೆ. ಬಾಣಂತಿಯು ಮಲಗಿದ ಮಂಚದ ಕೆಳಗೆ ಜೋಳವನ್ನು ಹಾಕಿ ಅದರ ಮೇಲೆ ತುಂಬಿದ ಸಣ್ಣ ಕೊಡವನ್ನಿಡುತ್ತಾರೆ. ಅಂತೆಯೇ ಬೇವಿನ ಸೊಪ್ಪು, ಕಾಲ್ಮರಿ ಮತ್ತು ಮಚ್ಚುಗಳನ್ನೂ ಇಡುತ್ತಾರೆ. ಇದರಿಂದ ಬಾಣಂತಿಗೆ ಮತ್ತು ನವಜಾತ ಶಿಶುವಿಗೆ ಯಾವುದೇ ಪಿಂಡಾದಿಗಳು ತಾಕದಿರುತ್ತವೆ.

ಮುಖ್ಯವಾಗಿ ಈರಲು ಪೂಜೆಯ ದಿನ ಬಾಣಂತಿಗೆ ನೀರೆರೆದು, ಕೂಸಿಗೂ ನೀರೆರೆಯುತ್ತಾರೆ. ’ಬಜೆ’ಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ದಾರದಿಂದ ಅದನ್ನು ಪೋಣಿಸಿ ಮಾಲೆಯನ್ನು ಮಾಡಿ ಹೆಣ್ಣು ಶಿಶುವಿನ ಕೊರಳಲ್ಲಿ ತಾಯಿ ಹಾಕುತ್ತಾಳೆ. ಅಲ್ಲದೇ ಕರಿಮಣೆಯ ಸರವನ್ನು ಕೈಗೆ ಕಟ್ಟುತ್ತಾಳೆ. ಇದನ್ನು ’ಕಿಸಿರುಮಣಿ’ ಎಂದು ಕರೆಯುತ್ತಾರೆ. ತುಂಬಿದ ಕೊಡಕ್ಕೆ ಪೂಜೆ ಮಾಡಿ ಮಗುವನ್ನೆತ್ತಿಕೊಂಡು ’ಎಣ್ಣೆ ದಾರಿ ಕೊಡಬೇಡ, ತುಪ್ಪದ ದಾರಿಕೊಡಪ್ಪ’ ಎಂದು ತಾಯಿ ದೇವರಿಗೆ ಮೊರೆ ಹೋಗುವ ಪದ್ದತಿಯೇ ಈರಲು ಪೂಜೆ. ಬಹುಶಃ ಜನಿಸಿದ ಮಗು ಹೆಣ್ಣು ಆಗಿದಿದ್ದರಿಂದ ಆಕೆಯ ಜೀವನದಲ್ಲಿ ಎಣ್ಣೆ ದಾರಿಯೆಂದರೆ ಕಷ್ಟದ ಹಾದಿ ಇದು ಅವಳಿಗೆ ಬೇಡ, ತುಪ್ಪದಂಥ ಒಳ್ಳೆಯ ಮಾರ್ಗತೋರಿಸು ಎಂಬ ಆಶಯ ಇದ್ದಂತಿದೆ.

ಇದಿಮಾಯಿ ಬರೆಹ (ಚಟುವಾಯಿ ಬರೆಹ)

ಮಗು ಜನಿಸಿದ ಮೂರನೇ ದಿನ ಈರಲು ಪೂಜೆಯಾದ ಮೇಲೆ ರಾತ್ರಿ ಮಂಚದ ಕೆಳಗೆ ಕಾಡಿಗೆ ಮತ್ತು ಕದಿರನ್ನು ಶಿಶು ಹೆಣ್ಣೇಯಿರಲಿ, ಗಂಡೇ ಇರಲಿ ಅಂದು ರಾತ್ರಿ ದಿಮಾಯಿ ಬಂದು ಅವರ ಹಣೆಬರಹ ಬರೆದುಹೋಗುತ್ತಾಳೆಂಬ ನಂಬಿಕೆ ನೇಕಾರ ಸಮುದಾಯದಲ್ಲಿದೆ. ಆಗಲೂ ತಾಯಿಯಾದವಳು ’ಎಣ್ಣೆದಾರಿ ಕೊಡಬೇಡ ತುಪ್ಪದ ದಾರಿಕೊಡು’ ಎಂದೇ ಇದಿಮಾಯಿಯನ್ನು ಮನದಲ್ಲಿ ಬೇಡುತ್ತಾಳೆ. ಇದಿಮಾಯಿ ಬರುವಾಗ ಆಕೆ ಸಿಟ್ಟಾಗಬಾರದೆಂದು ಮಂಚದ ಹತ್ತಿರ ಗೋವಿನ ಸೆಗಣಿಯಿಂದ ಸಾರಿಸಿ, ರಂಗೋಲಿ ಇಳಿಬಿಟ್ಟು, ರೇಷ್ಮೆ ಸೀರೆಯನ್ನು ಮಂಚಕ್ಕೆ ಕಟ್ಟುತ್ತಾರೆ. ಇದಿಮಾಯಿ ಬರೆಹವನ್ನೇ ನಂಬಿದ ಸಮುದಾಯವು ಮುಂದೆ ಹೆಣ್ಣು ಮಗಳಿಗೆ ಏನೇ ಶೋಷಣೆ, ಅಪಮಾನ, ಕಷ್ಟ ಕೋಟಲೆ ಬಂದರೂ ಅದು ಇದಿಮಾಯಿ ಬರೆಹ ಏನು ಮಾಡುವುದು ಎಂದು ಬಂದದ್ದನ್ನು ಸಹಿಸಿಕೊಳ್ಳಲೆತ್ನಿಸುತ್ತಾರೆ. ನಾಲ್ಕನೇ ದಿವಸ ವಿಧಿಮಾಯಿ ಬರೆದುಹೋದ ಹಾಳೆಯನ್ನು ಚೆನ್ನಾಗಿ ಮಡಚಿ, ಕುಂಕುಮ ಅರಿಶಿಣ ಹಚ್ಚಿ ಪೂಜಿಸಿ ಮಗುವಿನ ತೊಟ್ಟಿಲಿನ ಹಗ್ಗಕ್ಕೆ ಮೇಲ್ಬಾಗದಲ್ಲಿ ಕಟ್ಟುತ್ತಾರೆ. ತೆಲುಗು ಮೂಲಕ ನೇಕಾರರಲ್ಲಿ ಇದು ಚಟವಾಯಿ ಆಚರಣೆ. ಉತ್ತರ ಕರ್ನಾಟಕದಲ್ಲಿ ಶೇಟಿಗೆವ್ವನ ಆಚರಣೆ ರೂಪದಲ್ಲಿ ಜಾರಿಯಿದೆ.

ಇಷ್ಟಲಿಬೆಲ್ಲ

ಬಾಣಂತಿಯಾದವಳು ಮಗುವನ್ನು ಹೆತ್ತ ಮೇಲೆ ನಿಶ್ಯಕ್ತಳಾಗಿರುತ್ತಾಳೆ. ಈ ಅವಧಿಯಲ್ಲಿ ಅವಳಿಗೆ ಪೌಷ್ಠಿಕ ಆಹಾರ ಅಗತ್ಯವಾಗಿರುತ್ತದೆ. ಆಹಾರದೊಂದಿಗೆ ಆಕೆಯ ರಕ್ತವೃದ್ಧಿ, ಮೊಲೆಹಾಲು ವೃದ್ಧಿಯಾಗಲೆಂದು ಇಪ್ಪಲಿಬೆಲ್ಲವನ್ನು ನೇಕಾರ ಸಮುದಾಯ ನೀಡುತ್ತದೆ. ಇಪ್ಪಲಿ ಒಂದು ಬಗೆಯ ಸುರುಳಿಯಾದ ಸಸ್ಯ. ಇದು ಒಣಗಿರುತ್ತದೆ. ಅದರ ಜೊತೆಗೆ ಜೀರಿಗೆ, ಅಜಮಾನ, ಒಣಶುಂಠಿ, ಬಜೆ, ಆವೊಂಜಿಕಾಳು ಮತ್ತು ಬೆಲ್ಲವನ್ನು ಸೇರಿಸಿ ಪುಡಿಮಾಡಿ ಆಕಳದ ತುಪ್ಪದಲ್ಲಿ ಕರೆದು ಉಂಡೆ ಕಟ್ಟುತ್ತಾರೆ. ದೇವರ ಮುಂದಿಟ್ಟು ಪೂಜಿಸಿ, ಅದನ್ನು ದಿನವೂ ತಿನ್ನುತ್ತಾರೆ.

ದಿನವೂ ಬಾಣಂತಿಯ ಸ್ನಾನವಾದ ಮೇಲೆ ನಿಗಿನಿಗಿ ಕುಳ್ಳಿನ ಕೆಂಡದಿಂದ ದೇಹ ಕಾಯಿಸಿಕೊಂಡು ನಂತರ ಸಜ್ಜಕವನ್ನು ಕುಡಿದಾದ ಮೇಲೆ ಇಪ್ಪಲಿಬೆಲ್ಲ ತಿಂದರೆ ಆಕೆಯ ಮೈಮನಗಳು ಗಟ್ಟಿಗೊಳ್ಳುತ್ತವೆ.

ತೊಟ್ಟಿಲು ಕಾರ್ಯ

ಮಗು ಜನಿಸಿದ ಒಂಬತ್ತು, ಹನ್ನೊಂದು, ಹದಿನಾರು ಹೀಗೆ ಶುಭದಿನಗಳಲ್ಲಿ ನಾಮಕರಣ ಕಾರ್ಯ ಮಾಡುತ್ತಾರೆ.  ಗಂಡು ಮಗುವಾದರೆ ವಿಜೃಂಭಣೆಯಿಂದ, ಹೆಣ್ಣು ಮಗು ಆದರೆ ಸಾಧಾರಣವಾಗಿ ಈ ಕಾರ್ಯ ನಡೆಯುತ್ತದೆ. ನೇಕಾರ ಸಮುದಾಯವು ತವರು ಮನೆಯವರು ನೀಡಿದ ತೊಟ್ಟಿಲಿನಲ್ಲಿ ಪ್ರಶಸ್ತ ಸಮಯ ನೋಡಿ ನಾಮಕರಣ ಮಾಡುತ್ತಾರೆ. ಹೂಗಳಿಂದ ಸಿಂಗರಿಸಿದ ತೊಟ್ಟಿಲಲ್ಲಿ ಶಿಶುವನ್ನು ಹಾಕಿ ಸಾಮಾನ್ಯವಾಗಿ ಮಗುವಿನ ಸೋದರತ್ತೆ, ಇಲ್ಲವೇ ಸೋದರಮಾವನು ಹೆಸರು ಕರೆಯುತ್ತಾನೆ. ನೆರೆದ ಜನರೆಲ್ಲರೂ ಹೆಸರು ಕರೆಯುವ ಸೋದರತ್ತೆಯ ಬೆನ್ನಿಗೆ ಬುದ್ದು ಹಾಕುತ್ತಾರೆ. ಈ ಸಂದರ್ಭದಲ್ಲಿಯೇ ಸೋದರತ್ತೆಯು ಗಂಗಾಳ ಬಾರಿಸುತ್ತಾಳೆ. ಮಗು ಮುಂದೆ ಏನಾದರೂ ಕಿತಾಪತಿ ಮಾಡಿದರೆ ’ಯಾವೋಳು ನಿನ್ಗೆ ಗಂಗಾಳ ಬಾರಿಸಿದೋಳು’ ಎಂದು ಬೈಯುತ್ತಾರೆ. ಆ ನಾದಕ್ಕೆ ಮಗು ವಿನಯವಂತ ಗುಣ ಕಲಿಯಬೇಕೆಂಬ ಹಿನ್ನಲೆಯಿದೆ.

ಗುಂಡಮ್ಮನ ಕೊಳ್ಳೀರೆ

ನಾಮಕರಣವಾದ ನಂತರ ಮುತ್ತೈದೆಯರೆಲ್ಲರೂ ಪದಕಟ್ಟಿ ಹಾಡುತ್ತಾರೆ. ಇಲ್ಲವಾದರೆ ಮಗು ಮೂಗವಾಗುತ್ತದೆಂದು ನಂಬಿಕೆ. ಈ ಸಂದರ್ಭದಲ್ಲಿಯೇ ತೊಟ್ಟಿಲು ಅಡಿಯಲ್ಲಿ ಒಂದು ಗುಂಡುಕಲ್ಲನ್ನು ಇಟ್ಟಿರುತ್ತಾರೆ.  ತೊಟ್ಟಿಲಿನ ಎರಡೂ ಬದಿಯಲ್ಲಿ ನಿಂತ ಹೆಣ್ಣು ಮಕ್ಕಳಲ್ಲಿ ಒಬ್ಬಳು ಗಂಡು ಕಲ್ಲನ್ನಿಡಿದು ’ಗುಂಡಮ್ಮನ ಕೊಳ್ರಮ್ಮಾ’ ಎನ್ನುತ್ತಾಳೆ. ಬೀಗರಾದವರು ’ ಆ ಹೆಣ್ಣಿಗೆ ಮೂಗಿಲ್ಲ ಬೇಡ’ ಅನ್ನುತ್ತಾರೆ. ’ಮೂಗು ತಿದ್ದಿ ತೀಡಿ ಕೊಡ್ತೀವಿ ತಗೊಳ್ರಿ ಬಂಗಾರದ ಗೊಂಬೀನ’ ಎನ್ನುತ್ತಾಳೆ. ವರದಕ್ಷಿಣೆ ಕೊಟ್ರೆ ತಗೊಂತೀವಿ ಎಂದು ಮರು ಹೇಳುತ್ತಾರೆ. ನಾವು ಕೊಡೋದಿಲ್ಲ.”ನಮ್ಮ ಹುಡುಗೀನ ಕಾಲಬಣ್ಣ ನೋಡಿ ಮಾಡ್ಕೊಂಡು ಹೋಗ್ತಾರೆ’ ಎಂದಾಗ ಬೀಗರಾದವರು ’ಆದಿವಾರ ಸಂತೆಗೊಯ್ರಿ ಮೂರುಕಾಸೀಗೆ ತಗೊಳ್ಳಲ್ಲ’ ಎನ್ನುತ್ತಾರೆ.

ಈ ಮೇಲಿನ  ಸಂಭಾಷಣೆಯು ಮೇಲ್ನೋಟಕ್ಕೆ ಹಾಸ್ಯ ಪ್ರಸಂಗ ಎಂಬಂತೆ ತೋರುತ್ತದೆ. ಆದರೆ ಅಲ್ಲಿ ಬರುವ ವರದಕ್ಷಿಣೆ, ರೂಪ, ವರ್ಣ (ಬಣ್ಣ) ಸಂತೆಯಲ್ಲಿ ಮಾರುವ, ಮೂರು ಕಾಸಿಗೆ ಕೊಳ್ಳಲ್ಲ ಎಂಬ ಮಾತುಗಳು ಸಹಜವಾಗಿ ಹೆಣ್ಣಿನ ಬಗ್ಗೆ ಇರುವ ತಾತ್ಸಾರದ ಭಾವನೆಯನ್ನೇ ಹೇಳುತ್ತವೆ. ಆಕೆಯನ್ನು ಮಾರುಕಟ್ಟೆಯ ಸರಕು, ನಿರ್ಜೀವ ಎಂಬಂತೆ ಕಾಣುವ ಮನೋಧೋರಣೆಯು ಕರ್ನಾಟಕದ, ಭಾರತೀಯ ಸಾಂಪ್ರದಾಯಕ ಜಾನಪದೀಯ ಆಚರಣೆಗಳಲ್ಲಿಯೂ ಸೂಕ್ಷ್ಮವಾಗಿ ಬಂದಿರುವುದು ತಿಳಿಯುತ್ತದೆ. ಸಂಭಾಷಣೆ ನಡೆಸುವವರು ಸ್ತ್ರೀಯರೇ, ಇವರೆಲ್ಲಾ  ಪುರುಷಕೇಂದ್ರಿತ ಆಶೋತ್ತರಗಳ ನೆರಳಿನಲ್ಲಿ ಬೆಳೆದವರೇ ಆಗಿದ್ದಾರೆ. ಇಂಥಾ ಸಂಭಾಷಣೆ ಗಂಡು ಮಗು ಜನಿಸಿದಾಗ ನಡೆಯುವುದಿಲ್ಲ ಎಂಬುದು ಗಮನಿಸಬಹುದು.

ಹೇಲು ಗುಗ್ಗರಿ

ನಾಮಕರಣ ಸಂದರ್ಭದಲ್ಲಿ ತೊಟ್ಟಿಲಿನ ಕೆಳಗೆ ಹೆಸರುಕಾಳನ್ನು ಗಂಟುಕಟ್ಟಿ ಇಟ್ಟಿರುತ್ತಾರೆ. ಸೋದರತ್ತೆಯು ಹೆಣ್ಣು ಮಗುವಿಗೆ ನಾಮಕರಣ ಮಾಡಿದ ತಕ್ಷಣ ಆ  ಗುಗ್ಗರಿಯ ಗಂಟನ್ನೂ ತೆಗೆದುಕೊಂಡು ಹೊಸ್ತಿಲ ಹೊರಗೆ ಓಡಬೇಕು. ಯಾರಿಗೂ ಕೊಡಲಾರದೆ ತಿನ್ನಬೇಕು. ಅಥವಾ ಸೋದರಮಾವ ಈ ಕಾರ್ಯವನ್ನು ಮಾಡುತ್ತಾನೆ. ಮಾವ, ಅತ್ತೆಯಂದಿರು ಮಗುವಿಗೆ ನಾಮಕರಣ ಮಾಡುತ್ತಾರಾದ್ದರಿಂದ ತಮಾಷೆ ಪ್ರಸಂಗಕ್ಕಾಗಿ ಹೇಲು ಗುಗ್ಗರಿ ಕಾರ್ಯಕ್ರಮ ನಡೆಯುತ್ತದೆ.

ವಾಲಿಯ ಭೋಗ

ಹೆಣ್ಣು ಮಗು ಜನಿಸಿದ ಮೂರು ತಿಂಗಳಿಗೆ ಆಕೆಯ ಕಿವಿ ಓಲೆಯನ್ನು ಹಾಕುವ ಕಾರ್ಯ ನಡೆಯುತ್ತದೆ. ಇದನ್ನು ಮುರುವು ಚುಚ್ಚುವುದು, ವಾಲಿಯಭಾಗ್ಯ ಎಂದೂ ಕರೆಯುತ್ತಾರೆ. ತವರುಮನೆಯವರು ಬಂಗಾರದ ಮುರುವುಗಳನ್ನು ಮಾಡಿಸಿಕೊಂಡು  ಬರುತ್ತಾರೆ.  ಸಾಮಾನ್ಯವಾಗಿ  ನೇಕಾರ ಸಮುದಾಯವು ತಮ್ಮ ಕುಲದೈವಗಳಾದ ನೀಲಕಂಠೇಶ್ವರ, ಮಾರ್ಕಂಡೇಶ್ವರ, ಸಾಳೇಶ್ವರ, ಚೌಡೇಶ್ವರಿ ಮುಂತಾದ ದೇವಾಲಯಗಳಲ್ಲಿ ಮುರುವು ಚುಚ್ಚುವ ಇದರೊಂದಿಗೆ ಜಾವುಳ ತೆಗೆಸುವ ಕಾರ್ಯ ಏಕಕಾಲಕ್ಕೆ ನಡೆಸುತ್ತಾರೆ.

ಹೆಣ್ಣು ಮಗುವಿನ ಸೋದರಮಾವನಾದವನು ವೀಳ್ಯದ ಎಲೆಯಿಂದ ತಯಾರಿಸಿದ ಕತ್ತರಿಯಿಂದ ಕೂದಲನ್ನು ಸಾಂಕೇತಿಕವಾಗಿ ಕತ್ತರಿಸುತ್ತಾನೆ. ನಂತರ ಕ್ಷೌರಿಕರಿಂದ ಆಕೆಗೆ  ಗುಂಡು ಮಾಡಿಸಲಾಗುತ್ತದೆ. ಸ್ನಾನಾದಿಗಳಾದ ಮೇಲೆ ಮಾವ ತಂದ ಹೊಸಬಟ್ಟೆಯನ್ನು ಮಗುವಿಗೆ ತೊಡಿಸಿ, ವಾಲಿಯಭೋಗ ಅಂದರೆ ಕಿವಿಗೆ ಮುರುವು ಹಾಕುತ್ತಾರೆ. ಅಕ್ಕಸಾಲಿಗ ಮುರುವು ಚುಚ್ಚುತ್ತಾನೆ. ಈತನಿಗೆ ಅಕ್ಕಿ, ಕಣಕ, ದಕ್ಷಿಣೆಯನ್ನು ನೀಡುತ್ತಾರೆ. ಗಂಡು ಮಗುವಿಗೂ ಮುರುವು ಚುಚ್ಚುವ ಪದ್ಧತಿ ಈ ಸಮುದಾಯದಲ್ಲಿದೆ. ಮುಂದೆ ಕಿವಿಗೆ ವಿಧವಿಧ ಓಲೆಗಳಾಕುವುದರಿಂದ ಹೆಣ್ತನಕ್ಕೆ ಇದೂ ಒಂದು ಸಂಕೇತವೆಂಬಂತೆ ಬಿಂಬಿಸಲಾಗುತ್ತದೆ. ಮದುವೆಯಾಗುವಾಗಲೂ ಬುಗುಡೆ, ಬೆಂಡೋಲೆಗಳು, ಕಡ್ಡಾಯವಾಗಿ ಹಾಕಲೇಬೇಕು. ಇಲ್ಲವಾದರೆ ಸುಮಂಗಲೆಯಾಗಲು ಸಾಧ್ಯವಿಲ್ಲವೆಂಬುದು ಸಾಂಪ್ರದಾಯಿಕ ಸಮಾಜ ಮಹಿಳೆಗೆ ರೂಪಿಸಿದ ಕಟ್ಟಳೆಯಾಗಿದೆ.

ಋತುಮತಿ

ಅವಳ ಕಂಕಣ ಕಿಣಿಕಿಣಿ, ಅಂದುಗೆ
ಝಣ ಝಣ ಮಗ್ಗವನ್ನು ಜಗ್ಗುತ್ತ
ತೂಗುತ್ತಲಿಹಳು ಬಂದಾಗ ಗೆಳೆಯ ಕೊಡಲು
ಕರವಸ್ತ್ರ (ಕೇಶವಮಳಗೀ)

ಎರವಳಾದೆಯಾ ಮಗಳೆ

ನೇಕಾರ ಸಮುದಾಯದಲ್ಲಿ ಋತುಮತಿಯಾದ ಯುವತಿಗೆ ವಿಶೇಷ ಗೌರವ ಕೊಡುತ್ತಾರೆ. ಯುವತಿಯು ಋತುಮತಿಯಾದ ತಕ್ಷಣ ಬಂಧು – ಬಳಗ ಎಂಟತ್ತು ಹೆಂಗಸರು ಅಳುವ ಪದ್ಧತಿಯಿದೆ. ಇವರೊಂದಿಗೆ ಋತುಮತಿಯಾದವಳೂ ದುಃಖಿಸುತ್ತಾಳೆ. ಋತುಮತಿಯಾದವಳಿಗೆ ನೋವು, ಒಂದು ಬಗೆಯ ಹೊಸ ಅನುಭವ ಏನೆಲ್ಲಾ ಸಂಕಟಗಳಿರುತ್ತವೆ. ಅದರೊಂದಿಗೆ ಹೆತ್ತು ಸಾಕಿ ಸಲುಹಿದ ತಾಯಿ, ಮತ್ತು ಅಕ್ಕ ತಂಗಿಯರ ಬಾಂಧವ್ಯದಿಂದ ಪರರ ಮನೆಗೆ ಹೋಗಲು ಸಿದ್ಧವಾದಂತೆಯೇ. ಇದನ್ನು ನೆನೆದು ಎಲ್ಲರೂ ಅಳುತ್ತಾರೆ. ತಂದೆಯಾದವನಿಗೆ ಈ ದುಃಖವಿದ್ದರೂ ಅದು ನಾಟಕೀಯವೆನ್ನಬಹುದು. ಸ್ತ್ರೀಯರೆಲ್ಲಾ ಅಳುವಾಗ ಋತುಮತಿಯಾದರೆ ಏನೂ ತಿಳಿಯದೆ ಕಂಗಾಲಾಗುತ್ತಾಳೆ. ಅಳುವುದರ ಕಾರಣ ವಾಸ್ತವವಾಗಿ ಆಕೆಗೆ ತಿಳಿದಿರುವುದಿಲ್ಲ. ಸ್ತ್ರೀ ಸ್ತ್ರೀತ್ವವೆಂಬುದು ಇಲ್ಲಿ ಅತ್ಯಂತ ಭಾವನಾತ್ಮಕವಾಗಿ  ಪ್ರಕಟವಾಗುತ್ತದೆ. ಹುಡುಗಿ ಮೈನೆರೆದಾಕ್ಷಣವೆ ಆಕೆಯ ಮದುವೆಗೆ ಚಿಂತಿಸುವುದು, ಆಕೆಯನ್ನು ಸಾಧ್ಯವಾದಷ್ಟು  ಬೇಗ ಮನೆಯಿಂದ ಗಂಡನ ಮನೆಗೆ ಕಳಿಸುವ ಪ್ರಯತ್ನವೂ ಆರಂಭವಾಗುತ್ತದೆ. ಮೈನೆರೆತಾಗಿನಿಂದಲೇ ಹೆಣ್ಣು ಎರವಳಾದಳು ಎಂದು ತಿಳಿಯುವುದು ಅತ್ಯಂತ ದುರಂತದ ಸಂಗತಿಯಾಗಿದೆ.

ಮೂಲೆ ಮನೆಯಾ ಮಾಡಿ

ಮೈನೆರೆದ ಹುಡುಗಿಯನ್ನು ಸಾಮಾನ್ಯವಾಗಿ ಮನೆಯ ಪಡಸಾಲೆಯ ಮೂಲೆಯೊಂದರಲ್ಲಿ ಕೂರಿಸಲಾಗುತ್ತದೆ. ಅಂದಿನಿಂದ ಹನ್ನೊಂದು ದಿನದವರೆಗ ಆಕೆ ಆ ಮೂಲೆಯಲ್ಲಿಯೇ ವಾಸವಾಗಿರಬೇಕು. ಈ ಹನ್ನೊಂದು ದಿನ ಊಟ ಮಾಡಲು ಪ್ರತ್ಯೇಕವಾದ ತಟ್ಟೆ, ಲೋಟ ಅದರಲ್ಲಿಯೂ ಅಲ್ಯೂಮಿನಿಯಂ ಲೋಹದವು ನೀಡುತ್ತಾರೆ. ಮಲಗಿಕೊಳ್ಳಲು ಪ್ರತ್ಯೇಕವಾದ ಚಾಪೆ ಮತ್ತು ಚಾದರವನ್ನು ನೀಡುತ್ತಾರೆ. ಆಕೆಯನ್ನು ಸಂಪೂರ್ಣ ’ಹೊಲತಿ’ ಎಂದು ನಂಬಲಾಗುತ್ತದೆ. ಇಲ್ಲೆಲ್ಲಾ ಜಾತಿಯ ಪ್ರಶ್ನೆಯೂ ತರತಮಬೇಧವೂ ಇರುವುದು ತಿಳಿಯುತ್ತದೆ. ಈಕೆ ಊಟ ಮಾಡಿದ ತಟ್ಟೆ, ಲೋಟ ತಾನೇ ಸ್ವಚ್ಛ ಮಾಡಿಕೊಳ್ಳಬೇಕು. ಮಲಗಿಕೊಂಡ ಹಾಸಿಗೆಯನ್ನು ಅಗಸರು ತೆಗೆಯುವ ಪದ್ಧತಿಯಿದೆ. ಐದು ದಿವಸಗಳ ಕಾಲ ನೆರೆದವಳ ಅಕ್ಕ, ತಂಗಿ, ಅತ್ತಿಗೆ ಮುಂತಾದ ಸಂಬಂಧಿಕರು ಮೈ ತುಂಬ ಅರಿಶಿಣವ ಹಚ್ಚಿ ನೀರೆರೆಯುತ್ತಾರೆ. ನೀರೆರೆದ ತಕ್ಷಣ ಎಲೆ ಅಡಿಕೆಯನ್ನು ನೀಡುತ್ತಾರೆ.

ಮೊದಲನೋಟಕ ಮಾವ ಬಾರ

ಋತುಮತಿಯಾದ ನೇಕಾರ ಯುವತಿಯು ಮೊದಲಬಾರಿಗೆ ಪರಪುರುಷರನ್ನು ನೋಡಬಾರದು. ಆದ್ದರಿಂದ ಆಕೆ ಋತುಮತಿಯಾದ ತಕ್ಷಣ ತಂದೆ ಅಣ್ಣ ತಮ್ಮ ಮುಂತಾದ ಗಂಡಸರು ಎದುರುಗಡೆ ಬರುವುದಿಲ್ಲ. ಮೈ ನೆರೆದವಳು ಒಂದು ದಿನದಲ್ಲಿಯೇ ಅತ್ಯಂತ ಕಾಮಾತುರಳಾಗುತ್ತಾಳೆ. ಈ ಕಾಮದಿಂದ ಅಥವಾ ಪುರುಷನನ್ನು ಕೂಡುವ ದೃಷ್ಟಿಯಿಂದ ಮೊದಲಬಾರಿಗೆ ಯಾರನ್ನು ನೋಡುತ್ತಾಳೋ ಅವರ ಮೇಲೆ ಆಕೆಗೆ ಬಯಕೆಯುಂಟಾಗುತ್ತದೆ. ಹಾಗಾಗಿ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಸೋದರ ಮಾವನಾದವನು ಮೊದಲು ನೋಡಬೇಕೆಂಬ ನಂಬಿಕೆಯಿದೆ.

ನೇಕಾರ ಸಮುದಾಯದಲ್ಲಿ ಈ ಹಿಂದೆ ಬಾಲ್ಯವಿವಾಹವು ಜಾರಿಯಲ್ಲಿತ್ತು. ಗಂಡನ  ಮನೆಯಲ್ಲಿಯೇ ಆಕೆ ಋತುಮತಿಯಾದರೆ ಮೊದಲ ಮಿಲನ ಅವನಿಂದ ಆಗುತ್ತದೆ. ಇಲ್ಲವಾದರೆ ಮದುವೆಯ ವೇಳೆಗೆ ಮುಂಚೆಯೇ ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದಬಹುದೆಂಬ ಅನುಮಾನ ಪ್ರಣೀತ ಚಿಂತನೆ ಸಮಾಜದಲ್ಲಿತ್ತು. ಬಾಲ್ಯವಿವಾಹ ಕ್ರಮೇಣ ಮರೆಯಾಗಿದೆ. ಮತ್ತು ಮೊದಲ ನೋಟಕ್ಕೆ ಮಾವ ನೋಡಬೇಕೆಂಬುದೂ ಇಂದು ಇಲ್ಲವಾಗಿದೆ. ತಕ್ಕಷ್ಟೂ ಋತುಮತಿಯಾದವಳಿಗೆ ಸ್ವಾತಂತ್ರ‍್ಯದಿಂದ ಉಸಿರಾಡಲು ಸಾಧ್ಯವಾಗಿದೆ.