೧೯೭೦ ರಿಂದ ಈವರೆಗೆ ನಾನು ಬರೆಯುತ್ತ ಬಂದ ಸಂಶೋಧನ ಲೇಖನಗಳಿಂದಾಯ್ದ ಅರುವತ್ತು ಸಂಪ್ರಬಂಧಗಳನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದೇನೆ. ೧೯೮೨ರ ವಿಶ್ವಕನ್ನಡ ಮೇಳ ನಾನು ಸಂಪಾದಿಸಿದ ‘ಬಸವನಾಳರ ಸಂಶೋಧನ ಬರಹಗಳು’ ಎಂಬ ಕೃತಿಯನ್ನು ಪ್ರಕಟಿಸಿತು. ಅದರ ಪ್ರಸ್ತಾವನೆ ‘ಶಿ. ಶಿ. ಬಸವನಾಳರು’ ಎಂಬ ಇಲ್ಲಿನ ಲೇಖನ. ಅದೇ ರೀತಿ ‘ಶಿವಲೆಂಕ ಮಂಚಣ್ಣ’ ಎಂಬುದು ‘ಶಿವಲೆಂಕ ಮಂಚಣ್ಣನ ವಚನಗಳು’ ಎಂಬ ವಚನಸಂಗ್ರಹಕ್ಕೆ ನಾನು ಬರೆದಿದ್ದ ಪೀಠಿಕೆ. ಇಲ್ಲಿ, ೯, ೧೦, ೨೭, ೩೧, ೩೨, ೩೩, ೩೪, ೪೬ ಮತ್ತು ೬೦ನೆಯ ಸಂಪ್ರಬಂಧಗಳನ್ನು ಹೊಸತಾಗಿ ಬರೆದು ಇದರಲ್ಲಿ ಸಮಾವೇಶಗೊಳಿಸಿದ್ದೇನೆ. ಇನ್ನುಳಿದ ನಾಲ್ವತ್ತೆಂಟು ಸಂಪ್ರಬಂಧಗಳು ಆಗೀಗ ವಿದ್ವತ್ಪತ್ರಿಕೆಗಳಿಗೆ ನಾನು ಬರೆಯುತ್ತ ಬಂದ ಲೇಖನಗಳು ಅಥವಾ ವಿಚಾರಗೋಷ್ಠಿಗಳಲ್ಲಿ ಆಯಾ ಸಂದರ್ಭಕ್ಕೆ ಮಂಡಿಸಿದ ಬರಹಗಳು.

ಕೆಲವು ಸಂಪ್ರಬಂಧಗಳ ತಲೆಬರಹಗಳನ್ನು ಇಲ್ಲಿ ಸಂಕ್ಷೇಪಿಸಲಾಗಿದೆ. ಕೆಲವು ಚಿಕ್ಕಪುಟ್ಟ ಶಾಬ್ದಿಕ ಬದಲಾವಣೆಗಳನ್ನು ಬಿಟ್ಟರೆ ಮೂಲ ಲೇಖನಗಳನ್ನು ಇಲ್ಲಿ ಇದ್ದಕ್ಕಿದ್ದಂತೆ ಉಳಿಸಿಕೊಳ್ಳಲಾಗಿದೆ. ಅಡಿಟಿಪ್ಪಣಿಗಳಲ್ಲಿ ಒಂದೆರಡು ಕಡೆ ಇತ್ತಿರುವ ಸೂಚನೆಗಳು ಮಾತ್ರ ಹೆಚ್ಚಿನವು.

ಸನ್ನತಿಯ ಶಾಸನವೊಂದರಲ್ಲಿ ‘ಸಂಬಲೀವ ಊರ ವಾಸಿನೋ’ ಎಂಬ ಪಾಠವಿರುವುದಾಗಿ ಡಾ || ಪಿ. ಬಿ. ದೇಸಾಯಿ ಹೇಳಿದ್ದರು. ಅವರ ಈ ಪಾಠವನ್ನಿಟ್ಟುಕೊಂಡು (ನಾನು ಅದೊಂದು ಸ್ಥಳವಾಚಕವೆಂದು ಗ್ರಹಿಸಿ) ‘ಕನ್ನಡ ನಾಡು-ನುಡಿಗಳು ಎಷ್ಟು ಪ್ರಾಚೀನ?’ ಎಂಬ ಲೇಖನದಲ್ಲಿ ಆ ಕುರಿತು ಚರ್ಚಿಸಿದ್ದೆ. ಇತ್ತೀಚೆ ಡಾ || ಐ.ಕೆ. ಶರ್ಮಾ ಮತ್ತು ಜೆ. ವರಪ್ರಸಾದರಾವ ಅವರು ಆ ಶಾಸನದಲ್ಲಿನ ‘ಸಂಬಲೀನ ಊರ’ ಎಂಬ ಪಾಠಕ್ಕೆ ಪ್ರತಿಯಾಗಿ ‘ಬಲಿವದಾರ’ ಎಂಬ ಓದು ಕೊಟ್ಟಿದ್ದಾರೆ. ಈ ಇಬ್ಬರು ವಿದ್ವಾಂಸರಿತ್ತ ಶಾಸನ ಪಡಿಯಚ್ಚುಗಳನ್ನು ಪರೀಕ್ಷಿಸಲಾಗಿ ‘ಬಲಿವದಾರ’ ಎಂಬ ಪಾಠವೇ ಅಲ್ಲಿ ಕಂಡು ಬರುತ್ತಿದೆ. ಕಾರಣ ಪ್ರಸ್ತುತ ಲೇಖನದ ಚರ್ಚೆಯಲ್ಲಿ ‘ಸಂಬಲೀವ ಊರ’ ಎಂಬುದನ್ನು ಅಲಕ್ಷಿಸಬೇಕಾಗಿ ಓದುಗರಲ್ಲಿ ಕೋರಿಕೆ.

ಇಲ್ಲಿನ ಮೊದಲ ಲೇಖನ ‘ಪೊನ್ನನ ಭುವನೈಕ ರಾಮಾಭ್ಯುದಯ’ ನಾನು ೧೯೭೧ರಲ್ಲಿ ಪ್ರಪ್ರಥಮವಾಗಿ ಬರೆದುದು. ಅದನ್ನು ಕುರಿತಂತೆ ನಮ್ಮ ವಿದ್ವಾಂಸ ರಿಂದ ಹಲವಾರು ಬಾರಿ ಪ್ರತಿಕ್ರಿಯೆಗಳು ವ್ಯಕ್ತವಾದುವು. ಆ ಲೇಖನ ಪುನರ್ಮುದ್ರಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಂಕ್ಷಿಪ್ತವಾಗಿಯಾದರೂ ಕೊಂಚ ವಿವರಣೆ ಅಗತ್ಯವೆಂದು ಕಾಣುತ್ತದೆ:

ಭುವನೈಕ ರಾಮಾಭ್ಯುದಯದ ನಾಯಕ ಶಂಕರಗಂಡನೇ ಎನ್ನುವುದು ಈಗಲೂ ನನ್ನ ದೃಢವಾದ ನಿಲುವು. ಶಬ್ದಮಣಿದರ್ಪಣಕಾರ ಕೇಶಿರಾಜ ‘ಉದಯಾ ಸ್ತೋನ್ನತ……… ಭುವನೈಕರಾಮ ಮಹಿಪಂಗಕ್ಕುಂ ಪೆಱರ್ಗಕ್ಕುಮೇ’ ಎಂಬ ಆ ಪದ್ಯದಲ್ಲಿನ ನೆಲನೆಂಬ ನಪುಂಸಕ ಲಿಂಗಾರ್ಥದ ಶಬ್ದಕ್ಕೆ ಆಸೇತು ಹಿಮಾಚಲ ವಿಸ್ತಾರವಾಗುಳ್ಳ ‘ಧರಾವನಿತೆ’ ಎಂಬ ಸ್ತ್ರೀಲಿಂಗಾರ್ಥವಿದೆಯೆಂದು ಖಚಿತವಾಗಿ ಹೇಳಿದ್ದಾನೆ. ಕಬ್ಬೀ(ಚ್ಚೆ)ಗನಿಗೆ ಭುವನೈಕರಾಮ ಮಹಿಪನು ಒಪ್ಪಿಸಿದ ನೆಲವೆಂದರೆ ‘ಉದಯಾಸ್ತೋನ್ನತ ಶೈಲ ಸೇತು ಹಿಮವತ್ಕುತ್ಕೀಲ ಪರ್ಯಂತ ಸಂಪದೆ’ ಯಾದ ಅಖಂಡ ಭಾರತವೇ ಹೊರತು ಯಾವುದೋ ಒಂದು ತುಂಡು ನೆಲವಲ್ಲ, ಆದ್ದರಿಂದ ಭುವನೈಕರಾಮ ಮಹಿಪನೆಂದರೆ ಮಾಂಡಲಿಕ ಶಂಕರಗಂಡನೇ ಹೊರತು ಚಕ್ರವರ್ತಿ ಮುಮ್ಮಡಿ ಕೃಷ್ಣನಲ್ಲ, ‘ಶುಭತ್ತುಂಗ’ ಇತ್ಯಾದಿ ಹೆಸರುಗಳೊಂದಿಗೆ ಕಂಡು ಬರುವ ಪದ್ಯ-ಪದ್ಯವೇಷ್ಟನಗಳನ್ನು ರಾಷ್ಟ್ರಕೂಟ ಸಾಮ್ರಾಟರಾದ ಮೂವರು ಕೃಷ್ಣರಲ್ಲಿ ಯಾವನಿಗಾದರೂ ಅನ್ವಯಿಸಬಹುದು. ಅಂಥ ಬೇರೆ ಒಂದೋ ಹಲವೋ ಕಾವ್ಯಗಳಿರುವುದು ಶಕ್ಯ. ಪೊನ್ನ ಕವಿಯ ಭುವನೈಕರಾಮಾಭ್ಯುದಯಕ್ಕೇ ಅವನ್ನೆಲ್ಲ ಅನ್ವಯಿಸಬೇಕಿಲ್ಲ. ಸೂಕ್ತಿಸುಧಾರ್ಣವ. ಕಾವ್ಯಸಾರಾದಿಗಳಲ್ಲಿ ಸಂಕಲಿತವಾದ ಪ್ರತಿಶತ ಅರುವತ್ತಕ್ಕೂ ಮೇಲ್ಪಟ್ಟ ಪದ್ಯಗಳಿಗೆ ಆಕರಗಳೇ ಇದುವರೆಗೆ ಸಿಕ್ಕಿಲ್ಲದಿರುವುದನ್ನು ವಿದ್ವಾಂಸರು ಗಮನಿಸಬೇಕಾಗಿ ವಿನಂತಿ.

ಕಾಲಕಾಲಕ್ಕೆ ಹೊಸಹೊಸ ವಿಷಯಗಳನ್ನು, ಸಮಸ್ಯೆಗಳು ಹುಟ್ಟಿಕೊಂಡಂತೆ, ಸಂಶೋಧನ ಕ್ಷೇತ್ರದಲ್ಲಿ ಅವುಗಳನ್ನು ಕುರಿತ ಚರ್ಚೆಗಳು ನಡೆಯುವುದು ಸ್ವಾಭಾವಿಕ. ನಮ್ಮ ಹಿಂದಿನ ತಲೆಮಾರಿನಲ್ಲಿ ಕವಿ-ಕಾಲ-ಕಾವ್ಯಗಳು, ಅವುಗಳಲ್ಲಿ ಪ್ರಯೋಗಗೊಂಡ ಶಬ್ದವಿಶೇಷಗಳು ಹೆಚ್ಚಾಗಿ ವಿದ್ವಾಂಸರ ಚರ್ಚೆಯ ವಿಷಯಗಳಾಗಿದ್ದುವು. ಕನ್ನಡನಾಡು ಆರು ತುಂಡುಗಳಲ್ಲಿ ಹಂಚಿ ಹೋಗಿದ್ದಿತು. ದೇಶದ ಪಾರತಂತ್ರ್ಯ ಮತ್ತು ಪಾಶ್ಚಾತ್ಯ ವಿಚಾರಗಳು ಅಂದು ಇತರ ಕ್ಷೇತ್ರಗಳಂತೆ ಕನ್ನಡ ಸಂಶೋಧನಕ್ಷೇತ್ರದ ಮೇಲೆ ಕೂಡ ತೀವ್ರ ಪ್ರಭಾವ ಬೀರಿದ್ದವು. ೧೯೫೬ರ ತರುವಾಯ ಈ ಪರಿಸ್ಥಿತಿ ಬದಲಾಯಿಸಿ, ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಬಹು ದೊಡ್ಡ ಪ್ರಮಾಣದ ಕೆಲಸ ನಡೆಯತೊಡಗಿತು. ಹೆಚ್ಚು ಹೆಚ್ಚು ಸಮಾಜಮುಖಿಯಾದ ಅಂತರರಾಷ್ಟ್ರೀಯ ಚಿಂತನೆಗಳು ಕೂಡ ಈ ಕ್ಷೇತ್ರದಲ್ಲಿ ಕಾಲಿಟ್ಟವು. ಜಾನಪದ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾದ ಅನೇಕ ವಿದ್ವಾಂಸರು ಹೊಸ ಹೊಸ ಆಯಾಮಗಳನ್ನು ತೆರೆದಿಟ್ಟರು.

ಈ ಹಿನ್ನೆಲೆಯಲ್ಲಿ ಈ ಸಂಪುಟದ ಬರಹಗಳನ್ನು ನೋಡಬಹುದೆಂದು ಕಾಣುತ್ತದೆ. ಇದೇನಿದ್ದರೂ ವಿದ್ವಾಂಸರಿಗೆ ಬಿಟ್ಟ ವಿಷಯ.

ಕರ್ನಾಟಕತ್ವದ ವಿಕಾಸ, ಎಂದರೆ ಕನ್ನಡ ನಾಡು-ನುಡಿಗಳ ಅಸ್ತಿತ್ವ ಮತ್ತು ಪ್ರಾಚೀನತೆಗಳನ್ನು ಕುರಿತಂತೆ ನನಗಿದ್ದ ಅಪಾರವಾದ ಆಸಕ್ತಿ ಕಾರಣವಾಗಿ ಇಲ್ಲಿನ ಬಹುತೇಕ ಲೇಖನಗಳು ಮೂಡಿಬಂದಿವೆ. ಪೂರ್ವದ ಹಳಗನ್ನಡ ಭಾಷಾಸ್ವರೂಪ ಕುರಿತಾದ ನನ್ನ ಹಲವು ವಿಚಾರಗಳನ್ನು ಇಲ್ಲಿ ನಾನು ಮಂಡಿಸಿದ್ದೇನೆ. ಬೇಡ, ಗೊಲ್ಲ, ಗೊಂದಲಿಗ ಮೊದಲಾದ ನಮ್ಮ ಸಮಾಜದ ಕೆಳವರ್ಗಗಳು, ಮೈಲಾರದೇವರು, ಎಲ್ಲಮ, ಜುಂಜಪ್ಪ ಮೊದಲಾದ ದೇವ-ದೇವತೆಗಳು ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಲೇಖನಗಳನ್ನು ಇಲ್ಲಿ ಸೇರಿಸಿದ್ದೇನೆ. ಕೆಲವು ಲೇಖನಗಳು ನಾಮ ವಿಜ್ಞಾನಕ್ಕೂ ಸಂಬಂಧಿಸಿವೆ.

ನನ್ನ ಸಂಶೋಧನ ಕುತೂಹಲವನ್ನು ಉತ್ಕರ್ಷಗೊಳಿಸಿದವರು ಗುರುಗಳಾದ ಡಾ || ಎಂ. ಎಂ. ಕಲಬುರ್ಗಿಯವರು; ಸಂಶೋಧನಕ್ಷೇತ್ರಕ್ಕೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡವರು. ಇಲ್ಲಿನ ಬಹಳಷ್ಟು ಸಂಪ್ರಬಂಧಗಳು ರಚನೆಗೊಳ್ಳಲು ಅವರೇ ಕಾರಣೀಭೂತರು. ಡಾ || ಹಾ.ಮಾ. ನಾಯಕ, ಡಾ || ಚಿದಾನಂದ ಮೂರ್ತಿ, ಡಾ || ಹಂ. ಪ ನಾಗರಾಜಯ್ಯ, ಡಾ || ಟಿ. ವ್ಹಿ. ವೆಂಕಟಾಚಲ ಶಾಸ್ತ್ರಿ, ಪ್ರೊ || ಜಿ.ಎಸ್‌. ದೀಕ್ಷಿತ ಮೊದಲಾದ ಹಿರಿಯ ವಿದ್ವಾಂಸರಿಂದ ನಾನು ಅನೇಕ ವೇಳೆ ಸ್ಫೂರ್ತಿ ಮಾರ್ಗದರ್ಶನಗಳನ್ನು ಪಡೆದುಕೊಂಡಿದ್ದೇನೆ. ಈ ಮಹನೀಯರ ಉಪಕಾರವನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ.

ನಮ್ಮ ನಾಡಿನ ಹಲವು ವಿಶ್ವವಿದ್ಯಾಲಯಗಳು, ಕನ್ನಡ ವಿಭಾಗಗಳು, ಕನ್ನಡ ಸಾಹಿತ್ಯ ಪರಿಷತ್ತು, ಅಕಾಡಮಿ ಮೊದಲಾದವು ನನ್ನ ಸಂಪ್ರಬಂಧಗಳನ್ನು ಮಂಡಿಸಲು ಹಲವು ಬಾರಿ ಅವಕಾಶ ಮಾಡಿಕೊಟ್ಟಿವೆ. ವಿದ್ವತ್ಪತ್ರಿಕೆಗಳು ಅವುಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿವೆ.

ಈ ಸಂಪುಟ ಪ್ರಕಟಗೊಳ್ಳುವಲ್ಲಿ ಕೂಡ ಡಾ || ಎಂ. ಎಂ. ಕಲಬುರ್ಗಿಯವರು ತೀವ್ರ ಆಸಕ್ತಿವಹಿಸಿದ್ದಾರೆ. ಅಲ್ಲದೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೋ || ಎ. ವಿ. ನಾವಡ, ಕುಲಸಚಿವರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ವಹಿಸಿದ ಮುತುವರ್ಜಿಯಿಂದಾಗಿ ಇಷ್ಟುಬೇಗ ಈ ಸಂಪುಟ ಹೊರಬರಲು ಸಾಧ್ಯವಾಗಿದೆ. ಇದಲ್ಲದೆ ಗದುಗಿನ ‘ತ್ವರಿತ ಮುದ್ರಣ’ದ ಸಂಸ್ಥಾಪಕರಾದ ಶ್ರೀ ಫ. ಶಿ. ಭಾಂಡಗೆ, ಸಂಚಾಲಕರಾದ ಕೆ. ಅಶೋಕ ಹಾಗೂ ಅವರ ಸಿಬ್ಬಂದಿಯವರು ವಿಶೇಷ ಶ್ರಮವಹಿಸಿ ಈ ಸಂಪುಟವನ್ನು ಅಚ್ಚಿಸಿದ್ದಾರೆ. ಶ್ರೀ ಕೆ. ಕೆ. ಮಕಾಳಿ ಅವರು ಅಂದವಾದ ರಕ್ಷಾಪುಟ ರಚಿಸಿ ಕೊಟ್ಟಿದ್ದಾರೆ.

ಈ ಎಲ್ಲ ಮಹನೀಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಎಂ.ಬಿ. ನೇಗಿನಹಾಳ
ಬೆಳಗಾವಿ
ದಿನಾಂಕ: ೮-೨-೧೯೯೯