ಆಡೂರು ಧಾರವಾಡ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿರುವ ಊರು. ಇದು ಕ್ರಿ. ೭-೮ನೆಯ ಶತಮಾನಗಳಿಂದಲೂ ಉತ್ತರ ಕರ್ನಾಟಕದ ಹೆಸರಾದ ಜೈನ ಕೇಂದ್ರಗಳಲ್ಲಿ ಒಂದಾಗಿತ್ತು. ಆಡೂರಿನಲ್ಲಿ ಕ್ರಿ.ಶ. ಸು. ೭೫೦ರ ಒಂದು ಸಂಸ್ಕೃತ-ಕನ್ನಡಗಳ ಮಿಶ್ರ ಶಾಸನ ದೊರೆತಿದ್ದು ಈಗಾಗಲೇ Karnataka Inscriptions-Volume-1 ರಲ್ಲಿ ೩ನೆಯ ಕ್ರಮಾಂಕದ ಶಾಸನವಾಗಿ ಪ್ರಕಟಿಸಲ್ಪಟ್ಟಿದೆ. ಈ ಶಾಸನದಲ್ಲಿ ಆಡೂರನ್ನು ಗಂಗಿ- ಪಾಂಡಿಯೂರು ಎಂದು ಕರೆದಿದೆ. (ಇಲ್ಲಿ ಗಂಗಿ- ಎಂಬುದು ಪಾಂಡಿಯೂರು ಎಂಬುದಕ್ಕೆ ವಿಶೇಷಣವಾಗಿ ಬಂದಿದೆ. ಪಾಂಡಿಯೂರೆಂಬುದು ಮೂಲ ಹೆಸರು. ೧೩-೧೪ನೆಯ ಶತಮಾನಗಳ ಶಾಸನಗಳಲ್ಲಿ ಪಾಂಡಿಯೂರು ಎಂಬುದೇ ಹಾಡಿಯೂರು ಎಂದು ಒಂದೆರಡು ಶಾಸನಗಳಲ್ಲಿ ಬಂದಿದೆ. ಅದರಲ್ಲಿ ೬ನೆಯ ಶಾಸನದಲ್ಲಿ ‘ಹಾಡಿಯೂರು’ ಎಂಬುದರ ‘ಯೂ’ ಅಕ್ಷರವು ತೀರ ಸ್ಪಷ್ಟವಾಗಿ ಕೆತ್ತಲ್ಪಟ್ಟಿದೆ. ಇನ್ನುಳಿದ ಒಂದೆರಡು ಶಾಸನಗಳಲ್ಲಿ ಈ ‘ಯೂ’ ಅಕ್ಷರವು ‘ಮೂ’ ಅಕ್ಷರದಂತೆ ಕಾಣುತ್ತದೆ. ಇದರಿಂದ ಪಾಂಡಿಯೂರು ಎಂಬುದೇ ಪಾಡಿ ಮೂರು-ಯೂರು > ಹಾಡಿಮೂರು-ಯೂರು > ಅಥವಾ ಹಾಡಿವೂರು > ಹಾಡೂರು ಆಡೂರು ಎಂದು ಪರಿವರ್ತನೆಗೊಂಡಿದೆ ಎಂದು ಹೇಳಬಹುದು. ಉತ್ತರ ಕರ್ನಾಟಕದ ಕನ್ನಡ ಪ್ರಭೇದಗಳಲ್ಲಿ ಆದಿ ಹಕಾರವು ಶೂನ್ಯಗೊಳ್ಳುವುದು. ತೀರ ಅಪರೂಪ. ಅಂಥ ಅಪರೂಪದ ಒಂದು ಉದಾಹರಣೆ ಈ ಸ್ಥಳವಾಚಕದಲ್ಲಿದೆ. ಪ್ರಸ್ತುತ ಶಾಸನದ ಶಿಲೆಯು ಈಗ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆಯಲ್ಲಿದೆ. ಆಡೂರಿಗೆ ಸಂಬಂಧಿಸಿದಂತೆ ಈ ವರೆಗೆ ಇದೊಂದೇ ಶಾಸನವು ಪ್ರಕಟವಾಗಿದೆ.

ಇದೀಗ ಆಡೂರಿನಲ್ಲಿ ಮತ್ತೆ ಏಳು ಶಾಸನಗಳು ಪತ್ತೆಯಾಗಿವೆ. ನಾನು ಆಡೂರನ್ನು ಸಂದರ್ಶಿಸಿದಾಗ ಊರಲ್ಲಿ ಪ್ರಾಚೀನ ಕಾಲದ ಹಾಳುಬಿದ್ದ ಬಸದಿ ಮತ್ತು ಶಿವಾಲಯಗಳು ಇದ್ದುದು ಕಂಡುಬಂತು. ಹಾಗೂ ಇವುಗಳ ಪರಿಸರದಲ್ಲಿ ಶಾಸನಗಳಿರುವುದು ತಿಳಿದುಬಂತು. ಊರ ಮಧ್ಯದಲ್ಲಿರುವ ಶೈವ ದೇವಾಲಯವೊಂದರ ಮಗ್ಗುಲಲ್ಲಿ ಶಾಸನಕೆತ್ತಿದ ಎರಡು ಶಿಲೆಗಳನ್ನು ನಿಲ್ಲಿಸಲಾಗಿದೆ. ಅವುಗಳಲ್ಲಿ ಒಂದರಲ್ಲಿ ಬಹುಶಃ ಕಲ್ಯಾಣಿ-ಚಾಳುಕ್ಯರ ಕಾಲದ ಶಾಸನವೊಂದನ್ನು ಕೊರೆಯಲಾಗಿದ್ದು ಅದು ಬಹಳಷ್ಟು ಸವೆದುಹೋಗಿದೆ. ಅದರಲ್ಲಿರುವ ವಿಷಯಗಳಾವವೂ ತಿಳಿದುಬರುವುದಿಲ್ಲ. ಈ ಶಾಸನಶಿಲೆಯ ಮೇಲ್ಭಾಗದಲ್ಲಿನ ಮೀನಿನ ಚಿತ್ರವೊಂದನ್ನು ಕೆತ್ತಲಾಗಿದ್ದು ಅದು ಈವರೆಗೂ ಸ್ಪಷ್ಟವಾಗಿ ಕಾಣಿಸುತ್ತದೆ.

ಊರ ಪಶ್ವಿಮಕ್ಕಿರುವ ಎತ್ತರವಾದ ಮೊರಡಿಯಲ್ಲಿ ಹುಗಿದು ಹೋಗಿದ್ದ ಪಾಳು ಜೈನ ದೇವಾಲಯವೊಂದರ ಅವಶೇಷಗಳು ಕೆಲವು ವರ್ಷಗಳ ಹಿಂದೆ ಬೆಳಕಿಗೆ ಬಂದಿವೆ. ಅವು ಮೊರಡಿಯ ಪೂರ್ವ ಬದಿಯಲ್ಲಿ ರಾಶಿಯಾಗಿ ಬಿದ್ದಿದ್ದು ಅವುಗಳಲ್ಲಿ ಏಳು ಶಾಸನಗಳು ನನಗೆ ಕಂಡುಬಂದವು. ಈ ಏಳೂ ಜೈನ ಶಾಸನಗಳಾಗಿದ್ದು ಆರು ಸಲ್ಲೇಖನ ವ್ರತದಿಂದ ದೇಹತ್ಯಾಗ ಮಾಡಿದವರನ್ನು ಕುರಿತು ಹೇಳುತ್ತವೆ. ಒಂದು ಶಾಸನದಲ್ಲಿ ಮಾತ್ರ ವ್ಯಕ್ತಿಯೊಬ್ಬನು ಶಸ್ತ್ರದಿಂದ ಹತನಾಗಿ ಸತ್ತ ಸಂಗತಿಯನ್ನು ಹೇಳಲಾಗಿದೆ. ಅಲ್ಲಿರುವ ಅವಶೇಷಗಳ ರಾಶಿಯನ್ನು ಇನ್ನೂ ಸರಿಯಾಗಿ ಸಂಶೋಧಿಸಬೇಕಾದ ಅವಶ್ಯಕತೆಯುಂಟು. ಹಾಗೆ ಮಾಡಿದಲ್ಲಿ ಜೈನ ಬಸದಿಯ ವಿಷಯವಾಗಿ ಇತರ ಐತಿಹಾಸಿಕ ಮಹತ್ವದ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.

ಶಾಸನಗಳ ಕಾಲ:

Karnatak Inscriptions ಸಂಪುಟ ೧ ರಲ್ಲಿ ಪ್ರಕಟವಾದ ಕೀರ್ತಿಮರ್ವನ ಕಾಲದ ಶಾಸನದ ಕಾಲ ಕ್ರಿ.ಶ. ಸು. ೭೫೦ ಎಂದು ಅದನ್ನು ಪ್ರಸಿದ್ಧಿಸಿದ್ದ ಶ್ರೀ ಆರ್. ಎಸ್. ಪಂಚಮುಖಿಯವರು ನಿರ್ಧರಿಸಿದ್ದಾರೆ. ಅಲ್ಲದೆ ಆಡೂರಿನಲ್ಲಿದ್ದ ಆ ಬಸದಿಯು ಕ್ರಿ.ಶ. ಸು. ೭೦೦ ರಷ್ಟು ಹಿಂದಿನದಾಗಿರಬೇಕೆಂದು ಊಹಿಸಿದ್ದಾರೆ.

ಇದೀಗಪ್ರಕಟಗೊಳ್ಳುತ್ತಿರುವ ಏಳು ಶಾಸನಗಳಲ್ಲಿ ಒಂದು ಸೇವುಣ ಯಾದವ ದೊರೆ ಸಿಂಘಣದೇವನನ್ನು ಹೆಸರಿಸಿದ್ದು ಪ್ಲವಂಗ ಸಂವತ್ಸರವನ್ನು ಉಲ್ಲೇಖಿಸುತ್ತದೆ. ದೇವಗಿರಿಯ ಸೇವುಣ ರಾಜರಲ್ಲಿ ಸಿಂಘಣದೇವನೆಂಬ ಹೆಸರಿನ ಮೂವರು ರಾಜರು ಆಗಿಹೋದುದು ತಿಳಿದುಬರುತ್ತದೆ. ಅವರಲ್ಲಿ ಮೊದಲಿನವನ ಕಾಲ ಕ್ರಿ.ಶ. ಸು. ೧೧೦೦ ರಿಂದ ೧೧೪೫ರ ವರೆಗೂ ಎರಡನೆಯವನ ಕಾಲ ಕ್ರಿ.ಶ. ೧೧೯೯ ರಿಂದ ೧೨೪೭ರ ವರೆಗೂ ಇದ್ದುದಾಗಿ ಖಚಿತಪಟ್ಟಿದೆ. (A History of Karnataka pp 246-248 Ed. P.B. Desai) ಮೂರನೆಯವನು ಕ್ರಿ.ಶ. ೧೩೧೨ ರಿಂದ ೧೩೧೩ರ ವರೆಗೆ ಅತ್ಯಲ್ಪ ಕಾಲದವರೆಗೆ ಅಧಿಕಾರದಲ್ಲಿದ್ದನು ಆದುದರಿಂದ ಪ್ಲವಂಗ ಸಂವತ್ಸರವು ೩ನೆಯ ಸಿಂಗಣನ ಕಾಲಾವಧಿಯಲ್ಲಿ ಬರುವುದು ಶಕ್ಯವಿಲ್ಲ. ಈ ಕಾರಣ ಈ ಶಾಸನದಲ್ಲಿ ಹೆಸರಿಸಿದವನು ೩ನೆಯ ಸಿಂಘಣನಾಗಲಾರನು ಇನ್ನು ಒಂದನೆಯ ಸಿಂಘಣನ ಕಾಲಾವಧಿಯಲ್ಲಿ ಬರುವ ಕ್ರಿ.ಶ. ೧೧೨೭ನೆಯ ವರ್ಷವು ಪ್ಲವಂಗವಾಗುವುದು. ಅದೇ ರೀತಿ ಕ್ರಿ.ಶ. ೧೨೪೭ಕ್ಕೆ ಕೊನೆಯಾಗುವ ೨ನೆಯ ಸಿಂಘಣದೇವನ ಆಳ್ವಿಕೆಯ ಕೊನೆಯ ವರ್ಷವೂ ಪ್ಲವಂಗವಾಗುವುದು. ಇದರಿಂದ ಈ ಶಾಸನದಲ್ಲಿ ಹೇಳಿದ ಸಿಂಘಣದೇವನು ೧ನೆಯ ಅಥವಾ ೨ನೆಯ ಸಿಂಘಣನಾಗಿರುವುದು ಶಕ್ಯವಿದೆ. ಇದರ ಲಿಪಿಯು ೧೨-೧೩ನೆಯ ಶತಮಾನದ ಶಾಸನಗಳ ಲಿಪಿಗೆ ಹೋಲುತ್ತಿದೆ. ಈ ಕಾರಣದಿಂದ ಕ್ರಿ.ಶ ೧೧೯೨ ರಿಂದ ೧೧೯೭ರ ವರೆಗೆ ಆಳಿದ ಮೊದಲನೆಯ ಜೈತುಗಿಯ ಮಗನಾದ ೨ನೆಯ ಸಿಂಘಣನೆಂದು ಹೇಳಬಹುದು.

೨ನೆಯ ಶಾಸನವು ಸೇವುಣ ರಾಮದೇವನ ೧೮ ಮತ್ತು ೧೯ನೆಯ ಆಳ್ವಿಯ ವರ್ಷಗಳನ್ನು ನೇರವಾಗಿ ಪ್ರಸ್ತಾಪಿಸಿದೆ. ರಾಮದೇವನ ಈ ವರ್ಷಗಳು ಕ್ರಮವಾಗಿ ಕ್ರಿ.ಶ. ೧೨೮೮-೮೯, ಮತ್ತು ೧೨೮೯-೯೦ ರಲ್ಲಿ ಬೀಳುತ್ತವೆ.

ಮೂರನೆಯ ಶಾಸನವು ರಾಮದೇವನ ೨೨ನೆಯ ವರ್ಷದಲ್ಲಿ ಎಂದರೆ ಕ್ರಿ.ಶ. ೧೨೯೨-೯೩ನೆಯ ವರ್ಷದಲ್ಲಿ ಹುಟ್ಟಿದೆ. ೪ ಮತ್ತು ೫ನೆಯ ಶಾಸನಗಳೂ ಇದೇ ವರ್ಷಾವಧಿಯಲ್ಲಿ ಹುಟ್ಟಿವೆ.

೬ನೆಯ ಶಾಸನದಲ್ಲಿ ಹಾಡಿಯೂರ ನಾಳ್ಪ್ರಭು ಹರಿಯಮ ಗಾಮುಂಡನ ಹೆಂಡತಿ ಕನಕಿಗಾವುಂಡಿಯ ಹೆಸರಿದೆ. ಮೇಲೆ ಹೇಳಿದ ಕ್ರಿ.ಶ. ೧೨೯೨-೯೩ನೆಯ ವರ್ಷದ ಎರಡು ಮತ್ತು ಮೂರು ಮತ್ತು ಐದನೆಯ ಶಾಸನಗಳಲ್ಲಿಯೂ ಹಾಡಿಯೂರ ನಾಳ್ಪ್ರಭು ಹರಿಯಮಗಾವುಂಡನ ಹೆಸರಿದೆ. ಇದರಿಂದ ಈ ಶಾಸನಗಳಿಗಿಂತ ಸ್ವಲ್ಪ ಮುಂಚಿನ ಕಾಲಾವಧಿಯಲ್ಲಿ ೯ನೆಯ ಶಾಸನವು ಹುಟ್ಟಿದಂತೆ ತೋರುತ್ತದೆ. ಮತ್ತು ಅದರಲ್ಲಿ ದುಂದುಭಿ ಸಂವತ್ಸರವನ್ನು ಉಲ್ಲೇಖಿಸುವುದರಿಂದ ಅದರ ಕಾಲ ಕ್ರಿ.ಶ. ೧೨೬೨-೬೩ ಆಗಿರುವ ಸಾಧ್ಯತೆ ಹೆಚ್ಚಾಗಿದೆ.

ಏಳನೆಯ ಶಾಸನದ ಕಾಲನಿರ್ಧಾರಕ್ಕೆ ಆಂತರಿಕವಾದ ಯಾವ ಆಧಾರಗಳೂ ಇಲ್ಲ. ಲಿಪಿಯಾಧಾರದಿಂದ ಅದನ್ನು ಕ್ರಿ.ಶ. ೧೩-೧೪ನೆಯ ಶತಮಾನದ್ದೆಂದು ಹೇಳಬಹುದು.

ಹೀಗೆ ಈ ಏಳು ಶಾಸನಗಳು ೧೨ನೆಯ ಶತಕದ ಅಂತ್ಯ ಭಾಗದಿಂದ ೧೪ನೆಯ ಶತಕದ ಆದಿಭಾಗದ ಅವಧಿಯಲ್ಲಿ, ಎಂದರೆ ಸುಮಾರು ೧೨೫ ವರ್ಷಗಳ ಕಾಲಾವಧಿಯಲ್ಲಿ ಬರೆಯಲ್ಪಟ್ಟಿವೆಯೆಂದು ಹೇಳಬಹುದು.

ರಾಜಕೀಯ ಸಂಗತಿಗಳು:

ಎರಡನೆಯ ಕೀರ್ತಿವರ್ಮನ ಶಾಸನವು ಆಡೂರನ್ನು ಗಂಗಿಪಾಂಡಿಯೂರೆಂದು ಕರೆದಿದ್ದು ಅದನ್ನು ಸಿಂದರಸ ಆಳುತ್ತಿದ್ದನೆಂದು ಹೇಳಿದೆ. ಮತ್ತು ಮಾಧವತ್ತಿಯರಸನಿಗೆ ವಿಜ್ಞಾಪಿಸಿಕೊಂಡು ಜೈನದೇವಾಲಯಕ್ಕೆ ಕರ್ಮಗಾಲೂರ ಕೆರೆಯ ಕಳಗಡೆ ಭೂಮಿಯನ್ನು ದಾನವಿತ್ತುದಾಗಿ ಹೇಳಲಾಗಿದೆ. ಈ ಶಾಸನವನ್ನು ಪ್ರಸಿದ್ಧಸಿದ ಶ್ರೀ ಆರ್. ಎಸ್. ಪಂಚಮುಖಿಯವರು ಇದರಲ್ಲಿ ಉಕ್ತನಾದ ಸಿಂದರಸನು ಸಿಂದವಂಶದವನೆಂದೂ, ಮಾಧವತ್ತಿಯರಸನು ಸೇಂದ್ರಕ ವಂಶದವನಾಗಿರಬೇಕೆಂದೂ ಊಹಿಸಿದ್ದಾರೆ. ಅನಂತರ ಕಾಲದ ಶಾಸನಗಳಲ್ಲಿ ತಮ್ಮನ್ನು ಸಿಂದರು ನಾಗವಂಶದವರೆಂದೂ ಭೋಗಾವತೀಪುರ ವರಾಧೀಶ್ವರರೆಂದೂ ಕರೆದುಕೊಂಡಿದ್ದಾರೆ. ಇದೇ ರೀತಿ ಸೇಂದ್ರಕರೂ ತಾವು ನಾಗವಂಶದವರೆಂದು ಹೇಳಿಕೊಂಡಿದ್ದಾರೆ. ಸೇಂದ್ರಕರು ಕದಂಬರಾಜ್ಯ ಸ್ಥಾಪಕನೆಂದು ಹೆಸರಾದ ಮಯೂರಶರ್ಮನ ಕಾಲದಿಂದಲೇ ಈ ಭಾಗದಲ್ಲಿ ಆಳುತ್ತಿದ್ದವರು. ಇವರನ್ನು ಮಯೂರವರ್ಮನ ಚಂದ್ರವಳ್ಳಿ ಶಾಸನದಲ್ಲಿಯೂ ಅನಂತರದ ಕದಂಬ ಮತ್ತು ಬಾದಾಮಿ ಚಾಲುಕ್ಯರ ಶಾಸನಗಳಲ್ಲಿಯೂ ಉಲ್ಲೇಖಿಸಲಾಗಿದೆ. ಇವರು ಇಂದಿನ ಶಿವಮೊಗ್ಗೆ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳನ್ನು ಒಳಗೊಂಡಿದ್ದ ನಾಗರಖಂಡ ಅಥವಾ ನಾಯರ ಖಂಡವೆಂಬ ಪ್ರದೇಶವನ್ನು ಪ್ರಾರಂಭಕಾಲದಲ್ಲಿ ಆಳುತ್ತಿದ್ದುದಾಗಿ ತಿಳಿದುಬರುತ್ತದೆ. ಸೇಂದ್ರಕರು ಮೊದಲು ಬನವಾಸಿಯ ಕದಂಬರಿಗೂ ತರುವಾಯ ಬಾದಾಮಿಯ ಚಾಳುಕ್ಯರಿಗೂ ಸಾಮಂತರಾಗಿ ಆಳುತ್ತಿದ್ದರು.

ಈ ಶಾಸನದಲ್ಲಿ ಸಿಂದರಸನೆಂದು ಹೆಸರಿಸಿರುವುದು ವ್ಯಕ್ತಿನಾಮವೋ ಅಥವಾ ವಂಶನಾಮವೋ? ಸ್ಪಷ್ಟವಿಲ್ಲ. ಅದೇ ರೀತಿ ಮಾಧವತ್ತಿಯರಸನು ಶಾಸನೋಕ್ತ ಸಿಂದರಸನೇ ಇರಬಹುದೇ? ಎಂದು ಸಂಶಯಪಡಲೂ ಅವಕಾಶವಿದೆ. ಹಾಗಾದಲ್ಲಿ ಸಿಂದರೂ ಸೇಂದ್ರಕರೂ ಒಂದೇ ಮೂಲದವರೆಂದು ಹೇಳಲು ಅವಕಾಶವುಂಟಾಗುತ್ತದೆ.

ತರುವಾಯದ ಏಳು ಶಾಸನಗಳಲ್ಲಿ ಅಂಥ ಮಹತ್ವದ ರಾಜಕೀಯ ಘಟನೆಗಳ ಉಲ್ಲೇಖವಿಲ್ಲ. ಒಂದನೆಯ ಶಾಸನದಲ್ಲಿ ಸೇವುಣದೊರೆ ೨ನೆಯ ಸಿಂಘಣನೂ ಮುಂದಿನ ವೀರರಾಮದೇವನೂ ಉಲ್ಲೇಖಿಸಲ್ಪಟ್ಟಿದ್ದಾರೆ. ೨ನೆಯ ಸಿಂಘಣನು ಸೇವುಣರಲ್ಲಿ ಬಹುಪ್ರತಾಪಿಯಾಗಿದ್ದ ದೊರೆ. ಆತನ ಕಾಲದಲ್ಲಿ ಸೇವುಣ ರಾಜ್ಯವು ಉಚ್ಛ್ರಾಯ ಸ್ಥಿತಿಗೆ ಮುಟ್ಟಿತ್ತು. ಅದೇ ರಾಮದೇವನ ಕಾಲಕ್ಕೆಂದರೆ ಸೇವುಣರಿಗೆ ದುರ್ದಿನಗಳು ಪ್ರಾಪ್ತವಾಗಿದ್ದವು. ಅಲ್ಲಾವುದ್ದೀನ ಖಿಲಜಿಯು ರಾಮದೇವನ ರಾಜ್ಯವನ್ನು ಕೊಳ್ಳೆ ಹೊಡೆದು ಹಾಳು ಗೆಡುವಿದನು. ರಾಮದೇವನ ತರುವಾಯ ಸೇವುಣ ರಾಜ್ಯವು ಬಹುಬೇಗನೆ ನಾಶಹೊಂದಿತು.

೨ನೆಯ ಶಾಸನದಲ್ಲಿ ವಿಕ್ರಮಗಾವುಂಡನೆಂಬುವನನ್ನೂ ಮೂರನೆಯ ಶಾಸನದಲ್ಲಿ ಕೇಶವಗಾವುಂಡನೆಂಬವನನ್ನೂ ವರ್ಣಿಸಲಾಗಿದೆ. ಜೈನರಾಗಿದ್ದ ಅವರಿಬ್ಬರೂ ಕಲಿಗಳಾಗಿದ್ದರೆಂದು ಶಾಸನಗಳು ಹೇಳಿವೆಯಾದರೂ ಯಾವುದೇ ಯುದ್ಧ ಅಥವಾ ರಾಜಕೀಯ ಸಂಗತಿಗಳನ್ನು ಉಲ್ಲೇಖಿಸುವುದಿಲ್ಲ. ತುಂಗಭದ್ರಾನದಿಯವರೆಗೂ ಸೇವುಣರ ರಾಜ್ಯಾಧಿಕಾರವು ಈ ಶಾಸನಗಳ ಕಾಲದಲ್ಲಿ ನೆಲೆಯೂರಿತ್ತೆಂದು ಮಾತ್ರ ಇವುಗಳಿಂದ ತಿಳಿಯಬಹುದಾಗಿದೆ.

ಧಾರ್ಮಿಕ ಸಂಗತಿಗಳು:

ಈಗಾಗಲೇ ಹೇಳಿರುವಂತೆ ೨ನೆಯ ಕೀರ್ತಿವರ್ಮನ ಕಾಲದ ಶಾಸನದಲ್ಲಿ ಊರ ಗೌಡನಿಂದ ಕ್ರಿ.ಶ ೭೦೦ ರ ಸುಮಾರಿಗೆ ಒಂದು ಜಿನಾಲಯ ಮತ್ತು ದಾನ ಶಾಲೆಗಳು ನಿರ್ಮಿಸಲ್ಪಟ್ಟವು ಎಂಬ ಸಂಗತಿ ಉಕ್ತವಾಗಿದೆ. ಪರಲೂರು ಗಣದ ವಿನಯನಂದಿ, ಅವನ ಶಿಷ್ಯ ವಾಸುದೇವಗುರು. ಅವನ ಶಿಷ್ಯ ಪ್ರಭಾಚಂದ್ರಗುರು ಇವರು ಅಲ್ಲಿಯ ಆಚಾರ್ಯರಾಗಿದ್ದು ರಾಜಪೂಜಿತರಾಗಿದ್ದರು. ಪ್ರಭಾಚಂದ್ರರಿಗೆ ಅವನ ಶಿಷ್ಯನಾಗಿದ್ದ ಶ್ರೀಪಾಲನು ೨೫ ನಿವರ್ತನಗಳಷ್ಟು ಭೂಮಿಯನ್ನು ದತ್ತಿಯಾಗಿ ಬಿಟ್ಟುದಾಗಿ ಶಾಸನದ ಸಂಸ್ಕೃತಭಾಗದಲ್ಲಿಯೂ ಕೆಲವು ಗೌಡರು ಮತ್ತು ಕರಣ ಮೊದಲಾದ ಅಧಿಕಾರಿಗಳು ೮ ಮತ್ತರು ಗದ್ದೆಯನ್ನು ಬಿಟ್ಟುದಾಗಿ ಕನ್ನಡ ಭಾಗದಲ್ಲಿಯೂ ಹೇಳಿದೆ. ೭ ಮತ್ತು ೮ನೆಯ ಶತಮಾನಗಳಲ್ಲಿ ಉತ್ತರ ಕರ್ನಾಟಕದ ಕೊಪ್ಪಳ, ಲಕ್ಷ್ಮೇಶ್ವರ, ಹಲಸಿಗೆಗಳಂತಹ ಜೈನ ಕೇಂದ್ರಗಳಲ್ಲಿ ಆಡೂರು ಕೂಡ ಒಂದಾಗಿತ್ತೆಂದು ಇದರಿಂದ ತಿಳಿಯಬಹುದಾಗಿದೆ.

ಮುಂದೆ, ೮ನೆಯ ಶತಮಾನದಿಂದ ಒಮ್ಮೆಲೆ ೧೩ನೆಯ ಶತಮಾನದ ಈ ಶಾಸನಗಳು ದೊರೆತಿವೆ. ಈ ನಡುವಿನ ಕಾಲಾವಧಿಯಲ್ಲಿ ಬೇರೆ ಶಾಸನಗಳು ಅಲ್ಲಿ ಹುಟ್ಟಿರುವ ಸಾಧ್ಯತೆ ಇದೆ. ಸವೆದು ಹೋದ ಅಂಥ ಶಾಸನಗಳನ್ನು ಕುರಿತು ಈಗಾಗಲೆ ಹೇಳಿದೆ. ಆದರೆ ಅವುಗಳಿಂದ ಯಾವ ಸಂಗತಿಗಳೂ ಬೆಳಕಿಗೆ ಬರುವುದಿಲ್ಲ. ಈಗಿನ ಏಳು ನಾಶನಗಳ ಪೈಕಿ ಮೊದಲಿನದರಲ್ಲಿ (ಕ್ರಿ.ಶ. ೧೨೪೭) ಬಂಕಾಪುರದ ಪಡೆವಳ ಚಟ್ಟಯ್ಯನ ಹೆಂಡತಿ ಭಾಗವ್ವೆಯು ಮುಡಿಪಿದಳೆಂದು ಹೇಳಿದೆ. ಈ ಭಾಗವ್ವೆಯೂ ಸೂರಸ್ತಗಣದ ಸಿರಿಣಂದಿ ಭಟ್ಟಾರಕರ ಶಿಷ್ಯಳೆಂದಿದೆ. ಬಂಕಾಪುರವು ಹತ್ತನೆಯ ಶತಮಾನದಲ್ಲಿ ಒಂದು ಪ್ರಸಿದ್ಧ ಜೈನಕೇಂದ್ರವಾಗಿದ್ದಂತೆಯೂ ಅಲ್ಲಿದ್ದ ಅಜಿತಸೇನಾಚಾರ್ಯರ ಸನ್ನಿಧಿಯಲ್ಲಿ ಗಂಗದೊರೆ ಎರಡನೆಯ ಮಾರಸಿಂಹನು ಸಲ್ಲೇಖನ ವ್ರತದಿಂದ ಪ್ರಾಣ ತ್ಯಾಗ ಮಾಡಿದಂತೆಯೂ ಶ್ರವಣಬೆಳ್ಗೊಳದ ಶಾಸನವೊಂದರಿಂದ ತಿಳಿಯುತ್ತದೆ. (E.C.II. ನಂ. ೫೯. ಕ್ರಿ.ಶ. ೯೭೮) ಆದರೆ ೧೨-೧೩ನೆಯ ಶತಮಾನಗಳಲ್ಲಿ ಬಂಕಾಪುರದವಳಾದ ಭಾಗವ್ವೆ ಆಡೂರಿಗೆ ಬಂದು ವ್ರತಧರಿಸಿ ಪ್ರಾಣತ್ಯಾಗ ಮಾಡಿದ್ದಾಳೆ ಇದರಿಂದ ಆಡೂರು ಅಂದು ಜೈನಧರ್ಮೀಯರಿಗೆ ಪವಿತ್ರವೆನಿಸಿದ್ದ ಸ್ಥಳವಾಗಿತ್ತೆಂದು ಹೇಳಬಹುದಾಗಿದೆ.

ಎರಡನೆಯ ಶಾಸನದಲ್ಲಿ ಮಾಧವಚಂದ್ರದೇವರ ಶಿಷ್ಯನಾಗಿದ್ದ ಬಲ್ಲಗಾವುಂಡ ಮತ್ತು ಆತನ ಮೊಮ್ಮಗನೂ ಅನಂತಕೀರ್ತಿಯತಿಯ ಶಿಷ್ಯನೂ ಆಗಿದ್ದ ವಿಕ್ರಮಗಾವುಂಡನು ಸಲ್ಲೇಖನ ವ್ರತದಿಂದ ತೀರಿದರೆಂದು ಹೇಳಿದೆ. ಮೂರನೆಯ ಶಾಸನದಲ್ಲಿ ಮೌನೀಶ್ವರದೇವರ ಶಿಷ್ಯನಾಗಿದ್ದ ಕೇಶವಗಾವುಂಡನು ಸಮಾಧಿ ವಿಧಿಯಿಂದ ಮುಡಿಪಿ ಸ್ವರ್ಗಸ್ಥನಾದನೆಂದು ಹೇಳಿದೆ. ಅದೇ ರೀತಿ ನಾಲ್ಕನೆಯ ಶಾಸನದಲ್ಲಿ ಸೇನ ಬೋವ ಸುಬ್ಬಯ್ಯನ ಮಗಳೂ, ದೇವೆಂದ್ರ ದೇವರ ಶಿಷ್ಯಳೂ ಆಗಿದ್ದ ಮಾದವ್ವೆಯು ಸಮಾಧಿ ವಿಧಿಯಿಂದ ತೀರಿದಳೆಂದಿದೆ.

೫ನೆಯ ಶಾಸನದಲ್ಲಿ ಹಾಡಿಯೂರ ಹರಿಯಮಗಾವುಂಡನ ಆಳು ಗಾಮಯ್ಯನು ಶಸ್ತ್ರಹತವಾಗಿ ಸತ್ತನೆಂದಿದೆ. ಈ ಗಾಮಯ್ಯನು ಹರಿಯಮಗಾವುಂಡನ ವೇಳೆ ವಾಳಿಯೋ ಜೋಳವಾಳಿಯೋ ಆಗಿರುವಂತೆ ಕಾಣುತ್ತದೆ. ಬಹುಶಃ ಈತನು ಜೈನೇತರ ವ್ಯಕ್ತಿ. ೬ ಮತ್ತು ೭ನೆಯ ಶಾಸನಗಳಲ್ಲಿ ಹಾಡಿಯೂರ ಹರಿಯ ಮಗಾವುಂಡನ ಹೆಂಡತಿ ಕನಕಿಗಾವುಂಡಿ ಮತ್ತು ಎಲಮಡಿಯ ಹೆಗ್ಗಡೆ ಹರಿಪಯ್ಯನ ಹೆಂಡತಿ ಗೋಂದ ವ್ವೆಯರು ತೀರಿಕೊಂಡರೆಂದಿದೆ. ಗೊಂದವ್ವೆಯ ಊರಾದ ಎಲಮಡಿ ಆಡೂರಿನ ಸಮೀಪದಲ್ಲಿದ್ದ ಒಂದು ಹಳ್ಳಿಯಾಗಿರುವಂತೆ ಕಾಣುತ್ತದೆ.

ಈ ರೀತಿ ಆಡೂರಿನಲ್ಲಿಯ ಈ ಶಾಸನಗಳಿಂದ ಸೂರಸ್ತಗಣದ ಸಿರಿಣಂದಿಮುನಿ, ಮೂಲಸಂಘಸೇನಗಣದ ಕುಮಾರ ಸೇನ ಮುನಿ, ಇವರಲ್ಲದೆ ಮಾಧವಚಂದ್ರದೇವ, ಅನಂತಕೀರ್ತಿಯತಿ, ಮೌನೀಶ್ವರಯತಿ, ದೇವೇಂದ್ರಯತಿ ಈ ಆರು ಜನ ಜೈನ ಯತಿಗಳು ಇದ್ದುದಾಗಿ ತಿಳಿದುಬರುತ್ತದೆ. ೮ನೆಯ ಶತಮಾನದಲ್ಲಿದ್ದ ಪರಲೂರುಗಣದ ವಿನಯನಂದಿ ವಾಸುದೇವ ಗುರು ಮತ್ತು ಪ್ರಭಾಚಂದ್ರಗುರು ಇವರ ಉಲ್ಲೇಖವಿದೆ. ಬೇರೆ ಊರುಗಳಿಂದ ಶ್ರಾವಕರು ಆಡೂರಿಗೆ ಬಂದು ಸಲ್ಲೇಖನದಿಂದ ದೇಹತ್ಯಾಗ ಮಾಡುತ್ತಿದ್ದರೆಂಬುದು ಮೇಲಿನ ಎರಡು ಶಾಸನಗಳಿಂದ ಸ್ಪಷ್ಟವಾಗಿದೆ. ಇದರಿಂದ ೭-೮ನೆಯ ಶತಮಾನಗಳಿಂದ ೧೪ನೆಯ ಶತಮಾನದವರೆಗೂ ಆಡೂರು ಒಂದು ಪ್ರಸಿದ್ಧ ಜೈನಕೇದ್ರವಾಗಿತ್ತೆಂದು ಹೇಳಬಹುದಾಗಿದೆ.

ಶಾಸನ ಪಾಠಗಳು:

೧ನೆಯ ಶಾಸನ

ದೇವಗಿರಿಯ ಯಾವದ ಸಿಂಘಣ || (ಕ್ರಿ.ಶ. ೧೧೯೯ ರಿಂದ ೧೨೪೭) ಕಾಲಃ ಕ್ರಿ.ಶ. ೧೨೪೭

೧) ಸ್ವಸ್ತಿ ಶ್ರೀಮತು ಯಾದವ ನಾರಾಯಣಂ ಭುಜಬ

೨) ಳ ಪ್ರತ (ತಾ) ಪ ಚಕ್ರವರ್ತ್ತಿ ಶ್ರೀ ಸಿಂಹಣದೇವ (ವ)ವರ್ಷದ ಪ್ರವಂಗ

೩) ಸಂವತ್ಸರದ ಮಾಘ ಬಹುಳ ಪಂಚಮಿ ಗುರುವ (ವಾ)

೪) ರದಂದು ಸು(ಸೂ) ರಸ್ತಗಣದ ಸಿರಿಣಂದಿ ಭಟ್ಟಾರ

೫) ಕದೇವರ ಗುಡ್ಡಿ ಬಂಕಾಪುರದ ಹಡವಳ ಚ

೬) ಟ್ಟಯ್ಯನ ಹೆಂಡತಿ ಭಾಗವೆ ಮುಡಿಪಿ ಸ್ವ

೭) ರ್ಗಸ್ತೆ(ಸ್ಥೆ) ಯಾದಳು || ಮಂಗಳ ಮಹಾ ಶ್ರೀ

೮) ಗೋಸನೋಜನು ಮಾಡಿದಂ ||

೨ನೆಯ ಶಾಸನ

ದೇವಗಿರಿ ಯಾದವ ರಾಮದೇವ (ಕ್ರಿ.ಶ. ೧೨೭೧ ರಿಂದ ೧೩೧೨) ಕಾಲ: ೧೨೮೯.

೧) ಶ್ರೀಮತು ಯಾದವನಾರಾಯಣಂ ಭುಜಬಳಪ್ರತಾಪ ಚಕ್ರವರ್ತಿ ರಾಮದೇವನ ವಿ

೨) ಜಯರಾಜ್ಯದ ೧೮ನೆಯ ಸರ್ಬ್ಬಧಾರಿ ಸಂವತ್ಸರದ ಪಾಲ್ಗುಣ ಸುಧ (ದ್ಧ) ೧[೦?] ಸ || ಮಾಧವಚಂದ್ರ .

೩) ದೇವರಗುಡ್ಡ ಬಲ್ಲಗವುಡನು ಮುಡ್ಪಿ (ಡಿಪಿ) ಸ್ವರ್ಗ(ಸ್ಥ)ನಾದ || ಆ ಬಲ್ಲಗವುಡನ ಮಮ್ಮ ಹರಿಪಗವುಡನ

೪) ಪುತ್ರ ಶ್ರೀಮಂನಾಳ ಪ್ರಭು ಪ್ರಭುಗಳಾದಿತ್ಯ ಕಲಿಗಳಂಕುಶಂ ಛಲದಂಕ ವಿಕ್ರಮ

೫) [ಗೌಡನ್] ೧೯ನೆಯ ವಿರೋಧಿ ಸಂವತ್ಸರ ಶ್ರಾವಣಸುದ್ದ, ೩ ಗು || ಸಮಾಧಿ ವಿಧಿಯಿಂದ ಮುಡಿಪಿ

೬) ಸ್ವರ್ಗಸ್ತ (ಸ್ಥ)ನಾದನಾತನ ಗುಣಾವಳಿ ಎನ್ತೆಂದೊಡೆ || ಕಂಡ || ಚಾಗದ ಕಣಿ ಹರಿತನಯಂ ಭೋಗ

೭) ಪುರಂದರನಂ ಚಂದ್ರಮತಿ ಸುತನೆಂದೀ ಯೋಗಿಗಳ ಬುಧರ ಹೃದಯ ದೊಳಾಗಳು ಸೊಗಸಿರ್ಪ್ಪ

೮) ವಿಕ್ರಮಂ ಗುಣರತ್ನಂ || ವ್ರಿತ್ತ || ಪಿರಿದೆನಿಸಿರ್ಪ್ಪ ಗುಣ್ಪಿನೊಳಾ ಸಾಗರದಿಂಹರಿಸೂನುವಿಂದೆ ತಾಂ

೯) ಪಿರಿದೆನಿಸಿರ್ಪ್ಪ ರೂಪಿನೊಳ್ ಬಿಣ್ಪಿನೊಳಂ ಕನಕಾದ್ರಿಯಿಂದೆ ತಾಂ ಪಿರಿದೆನಿಸಿರ್ಪ್ಪ

೧೦) ಕೋ (?) ಮಲೆಯಿನಾ ಬಲದೇವನಿಂ ಕ [ಲ್ತ ?] ದೇವನಿಂ ಪರಿದೆನಿಸಿರ್ಪ್ಪ ವಿಕ್ರಮಗುಣಾನ್ವಿತನಂ

೧೧) ಪೊಗಳ್ಗುಂ ಜಗಜ್ಜನಂ || ಜಿನಪದ ಭಕ್ತಿಯುಕ್ತನು ಮುದಾರನು ಸೂರ ಮೇರು ಧೈರ್ಯ್ಯನಂ ಮನದೊ

೧೨) ಳನನಂತಕೀರ್ತಿಯತಿರಾಜನ ಪಾದ ಪಯೋಜ ಭೃಂಗನೆಂದನಂದಿನ ವಿಕ್ರಮಾಂಕನ ಕುಲಾಂ

೧೩) ಗನೆ ಬೊಂಮಲದೇವಿ ಸಂತತಂ ನೆನವಳಿದೆಂದು ಬಂಣಿಪುದು ಮಾಸತಿಯಂ ವಿಬುರ್ಧ (**)

೧೪) . . . . . . . . . . . . . . . ರಂ ||

೩ನೆಯ ಶಾಸನ

ದೇವಗಿರಿಯ ಯಾದವ ರಾಮದೇವ (ಕ್ರಿ.ಶ. ೧೨೭೧ ರಿಂದ ೧೩೧೨) ಕಾಲಃ ರಾಮದೇವನ ೨೨ನೆಯ ವರ್ಷ

೧) ಸ್ವಸ್ತಿ ಶ್ರೀಮತು ಯಾದವ ನಾರಾಯಣಂ ಭುಜಬಳ ಪ್ರವುಢ ಪ್ರತಾಪ ಚಕ್ರವರ್ತ್ತಿ ವೀರ ರಾಮ ದೇವರಾಯನ

೨) ವಿಜಯ ರಾಜ್ಯೋಜಯದೊ (ಳ್) ೨೨ನೆಯ ವಿಜಯ ಸಂವತ್ಸರ ಆಷಾಡ ಸು. ೧ ಸಫ | ದಂದು ಶ್ರೀಮಂನಾ ಪ್ರ (ಳ್ಪ್ರ) ಭು ಹಾಡಿಯೂ

೩) ರ ಹರಿಯಮಗಾಮುಂಡನ ಪುತ್ರ ಕೇಸವ ಗಾಮುಂಡನು ಸಮಾಧಿವಿಧಿಯಿಂ ಮುಡಿಪಿ ಸ್ವರ್ಗ್ಗಸ್ತನಾದ ಮಂಗ

೪) (ಳ) ಮಹಾ ಶ್ರೀ ಶ್ರೀ ಶ್ರೀ ಪಿತನುತ ವಿಕ್ರಮಂನುತ ಸಮಗ್ರ ಗುಣಾಗ್ರಣಿ ಚಾರುವಂ … ಧಿ…ಳ

೫) ಭೂವರ ಪ್ರಭುಲರಾಮ ಸಿರೋಮಣಿ ಹರಿಪಗಾವುಂಡನ ಸತಿ ಪತಿಭಕ್ತೆ ಚಂದಲೆಗೆ ಪುಟಿ(ಟ್ಟಿ) ದನುತ್ತಮ

೬) ಪುತ್ರನೆಂದು ಸಂತತಂ ಬುಧರರ್ದಿ(ರ್ತಿ)… ಪೊಗಳ್ಗು ಕ್ರೇ (ಕೇ) ಸವಗವುಡನಿಃ ಧರಿತ್ರಿಯೊಳು || ಮನುಜ ಮಹೀ

೭) ತಳಾಗ್ರದೊಳು ರಂಜಿಪನಾಳ್ಪ್ರಭುವಾಗಿ ಮೂರ್ತ್ತಿವೆತ್ತನ ಸಮದಾನ ಧರ್ಮ್ಮ ಫಳದಿಂದೆ ಸು . . . . . . . .

೮) ಧನನಾಗಿ ಭೋಗದಿಂ | ದನಂ…. ಗು ಕಲ್ಪಭೂಜ ಸುರಧೇನು ಮಹಾಜನನಾದ ನಾದನೆಂದನುದಿನಂ ಕೀರ್ತಿಕುಂ

೯) ಮದನ ಮೂರ್ತಿಯ ನಾಜಿತ ಕೇಸಿ (ದೇವ) ನಂ || ವ || .. ಭುಜಬಲದ ಬಲುಪಿಂಗೆ ಗೆಲಲಾಗದೆಂಬ

೧೦) ದೋತ್ತೀ ಕಲಿಗಳುಮಂ ಗೆಲಿದಂ ಸತ್ಯ . . . . . .ಸಲೆ ಬಿರುದಾಯಿತಂದು ಕೇಸವಂಗಾವಹವದೊ

೧೧) ಳಂ || ಹರಿಹರಿ ಸೂನು ಚಾರುತರ ಮೂರ್ತ್ತಿ (ಗಳಂ?) ನೆಱೆಬಲ್ಲನೆಲ್ಲರಂ ಸುರಕುಜದಂತೆ ಬಂಧುಜನವಂ ಷ್ವ (ಸ್ವ) ಜನಂಗಳಿಗೀವನೆಂದು ಧಾರಿಣಿಯೊಳು ಕೀರ್ತ್ತಿಕುಂ (ಮೌ)ನೀಶ್ವರ

೧೨) . . . . . .  ಸರಸಿಜ ಭೃಂಗನೆಸದಾರ್ಪ್ಪು . . . . . .ಕೇಸವ ಭೂತಳಾಗ್ರದೊಳು || ದೈವ . . . .ಮಿನೀಂ

೧೩) ದ್ರರಂ ಪರಮ ವಿಕ್ರ (ಮ) . . . . ಕೇಸ . . .ಗೆಯೊಲಿದು ಭಕ್ತಿಯಿಂ ಭಾವಿ . . .ಸಲೆ ಪೂಜಿಪನು.

೧೪) ರ್ಬ್ಬಿಯೊಳೆಂದು . . .ಮನು ರಾಗದಿಂದೊಸೆದು ಕೀರ್ತ್ತಿಪರ್ ಛಲದಂಕ ನೃ . . . .

೧೫) ನ . . . . .ಭಾವದಿನರ್ಥಿಗಳ್ಪೊಗಳ್ವರ್ಕೆ ಸವ ಗವು . . . .

(ಆ) ವನೀತಳದೂಳು ||

೪ನೆಯ ಶಾಸನ

ದೇವಗಿರಿಯ ಯಾದವ ರಾಮದೇವ

ಕಾಲ: ಕ್ರಿ.ಶ ೧೨೯೩ ?

೧) ಸ್ವಸ್ತಿಶ್ರೀಮತು ಯಾದವ ನಾರಾಯಣಂ ಭುಜ ಬಳ ಪ್ರೌ

೨) ಢ ಪ್ರತಾಪ ಚಕ್ರವರ್ತ್ತಿ ಶ್ರೀ ವೀರ ರಾಮದೇವರ ರಾಜ್ಯೋದಯದ ವಿ

೩) ಜಯ ಸಂವತ್ಸರದ ಚಯಿತ್ರ ಸು. ೧ ಸೋಮವಾರದಂದು ಶ್ರೀಮ

೪) ತು ಸೇನಭೋವ ಸುಬ್ಬಯಿನ ಮಗಳು ದೇವೇಂದ್ರದೇವರಗುಡ್ಡಿ

೫) ಮಾದವ್ವೆ ಸಮಾಧಿ ವಿಧಿಯಿಂ ಮುಡಿಪಿ ಸ್ವರ್ಗ್ಗ

೬) ಸ್ತೆಯಾದಳು ಮಂಗಳ ಮಹಾ ಶ್ರೀ ಶ್ರೀ ಶ್ರೀ

೫ನೆಯ ಶಾಸನ

ದೇವಗಿರಿ ಯಾದವ ರಾಮದೇವ

ಕಾಲ: ಕ್ರಿ.ಶ ೧೨೯೩ ?

೧) ಸ್ವಸ್ತಿ ಶ್ರೀ ಮತು ಯಾದವ ನಾರಾಯಣಂ ಭುಜಬಳ ಪ್ರತಾಪ ಚ

೨) ಕ್ರವರ್ತಿ ಶ್ರೀ ವೀರ ರಾಮದೇವನ ವಿಜಯ ರಾಜ್ಯೋದಯದ ವಿಜಯ

೩) ಸಂವತ್ಸ (ರ) ಆಷಾಢ ಸು | ೧ | ಸೋ | ದಂದು ಶ್ರೀಮಂನಾಳ್ಪ್ರಭು ಹರಿಯಮ ಗಾ

೪) ಮುಂಡನ, ಮಾನಿಸ ಗಾಮಯ್ಯನು ಸಸ್ತ್ರಹತನಾಗಿ ಸ್ವರ್ಗ್ಗಸ್ತನಾ

೫) ದ ಮಂಗಳ ಮಹಾ ಶ್ರೀ ಶ್ರೀ ಶ್ರೀ

೬ನೆಯ ಶಾಸನ

ಕಾಲ: ಕ್ರಿ.ಶ. ೧೨೬೨-೬೩ ?

೧) ಸ್ವಸ್ತಿ ಶ್ರೀ ಮೂಲಸಂಗ ಸೇನಗಣದ ಕುಮಾರ ಸೇನದೇ

೨) ವರಗುಡ್ಡಿ ಹಾಡಿಯೂರ ಶ್ರೀ ಮಂನಾಡ್ಪ್ರಭು

೩) ಹರಿಯಮಗಾವುಂಡನ ಹೆಂಡತಿ ಕನಕಿ

೪) ಗಾವಂಡಿ ದುಂದುಭಿ ಸಂವತ್ಸರದ ಕಾರ್ತ್ತಿಕ ಬ

೫) ಹುಳ ಪಂಚಮಿ ಬೃಹ. ವಾರದಲು

೬) ಸಮಾಧಿ ವಿಧಿಯಿಂ ಮುಡಿಪಿ ಸ್ವರ್ಗ್ಗಸ್ತೆಯಾ

೭) ದಳು ||

೭ನೆಯ ಶಾಸನ

೧) ಶ್ರೀಮತು ಎಲಮಡಿಯ ಹೆ

೨) ಗಡೆ ಹರಿಪೈಯನ ಹೆಂ

೩) ಡತಿ ಗೋಂದವೆ ಮುಡಿಪಿ ಸ್ವರ್ಗ್ಗಸ್ತೆ

೪) ಯಾದಳು ||