ಮುಗಟಖಾನ ಹುಬ್ಬಳ್ಳಿಯು ಬೈಲಹೊಂಗಲ ತಾಲೂಕಿನ ಪಶ್ವಿಮ ಭಾಗದಲ್ಲಿರುವ ದೊಡ್ಡ ಊರು. ಬೈಲಹೊಂಗಲ ತಾಲೂಕಿನ ಈ ಭಾಗದಲ್ಲಿನ ದೇಗಾಂವಿ, ಕಿತ್ತೂರು, ದೇವರಶೀಗೆಯಹಳ್ಳಿ, ಕಲಭಾವಿ, ತುರಮರಿ ಮತ್ತು ಕಾದರವಳ್ಳಿ ಈ ಗ್ರಾಮಗಳಲ್ಲಿ ಶಾಸನಗಳಿದ್ದುದು ಈ ವರೆಗೆ ತಿಳಿದು ಬಂದಿತ್ತು. ಪ್ರಸ್ತುತ ಶಾಸನದಿಂದ ಮೇಲಿನ ಊರುಗಳ ಸಾಲಿಗೆ ಮುಗಟಖಾನ ಹುಬ್ಬಳ್ಳಿಯೂ ಈಗ ಸೇರಿದಂತಾಗಿದೆ. ಮುಗಟಖಾನ ಹುಬ್ಬಳ್ಳಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಮೇಲೆ, ಬೆಳಗಾವಿಯಿಂದ ದಕ್ಷಿಣಕ್ಕೆ ಸುಮಾರು ಹದಿನೆಂಟು ಮೈಲುಗಳ ಅಂತರದ ಮೇಲಿದೆ. ಊರ ದಕ್ಷಿಣದಲ್ಲಿ ಮಲಪ್ರಭಾನದಿ ಹರಿಯುತ್ತಿದೆ. ಪ್ರಾಚೀನಕಾಲದ ‘ಕಾದಲ(ರ)ವಳ್ಳಿ ಮೂವತ್ತು ಅಥವಾ ಮೂವತ್ತಾಱು’ ವಿಭಾಗದ ಮುಖ್ಯ ಊರಾದ, ಕಾದರವಳ್ಳಿಯು ಮಲಪ್ರಭಾನದಿಯ ದಕ್ಷಿಣ ತಟದಲ್ಲಿ, ಮು. ಖಾ. ಹುಬ್ಬಳ್ಳಿಯಿಂದ ಆಗ್ನೇಯಕ್ಕೆ ಸು. ಮೂರು ಮೈಲುಗಳ ಅಂತರದ ಮೇಲಿದೆ. ಇದರ ನೈಋತ್ಯ- ಪಶ್ಚಿಮದಲ್ಲಿ ಸು. ಹದಿನೈದು ಮೈಲುಗಳ ದೂರದಲ್ಲಿ ಇತಿಹಾಸ ಪ್ರಸಿದ್ಧ ಹಲಸಿಗೆ ಗ್ರಾಮವಿದೆ.

ಮು.ಖಾ. ಹುಬ್ಬಳ್ಳಿಯ ಬಸ್-ನಿಲ್ದಾಣದಿಂದ ಊರೊಳಗೆ ಪ್ರವೇಶಿಸುವ ಮಾರ್ಗದ ಇಕ್ಕೆಲದಲ್ಲಿ ಪ್ರಾಚೀನ ಅವಶೇಷಗಳು ಅಲ್ಲಲ್ಲಿ ಕಣ್ಣಿಗೆ ಬೀಳುತ್ತವೆ. ಸ್ವಲ್ಪ ಮುಂದೆ ಹೋದರೆ ಪ್ರಸ್ತುತ ದಾರಿಯ ಎಡಭಾಗದಲ್ಲಿ ಒಂದು ಶಿಲಾಶಾಸನದ ಕಲ್ಲನ್ನು ನೆಡಲಾಗಿದೆ. ಆದರೆ ಶಾಸನದ ಭಾಗ ನೆಲದಲ್ಲಿ ಪೂರ್ಣ ಹೂತು ಹೋಗಿದೆ. ಊರ ಪಶ್ಚಿಮ ಬದಿಯಲ್ಲಿ ದಕ್ಷಿಣೋತ್ತರ ಹಬ್ಬಿರುವ ಇನ್ನೊಂದು ಓಣಿಯಲ್ಲಿ ಮತ್ತೊಂದು ಶಾಸನ ನೆಡಲಾಗಿದೆ. ಈ ಶಾಸನ ಕೊರೆದಿರುವ ಕಲ್ಲು ತೀರ ಒರಟಾಗಿರುವುದರಿಂದ ಶಾಸನದ ಪಡಿಯಚ್ಚು ತೆಗೆದುಕೊಳ್ಳುವುದು ಅತಿ ಕಷ್ಟಸಾಧ್ಯವೆನಿಸಿದೆ.

ಮು.ಖಾ. ಹುಬ್ಬಳ್ಳಿ ಬಹು ಪ್ರಾಚೀನವಾದ ಊರೆಂಬುದು ನಿಶ್ಚಿತವಾಗುವದರಿಂದ ಊರನ್ನು ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸುವುದು ಅವಶ್ಯಕವಾಗಿದೆ. ಊರಿಗೆ ಹೊಂದಿ ಪೂರ್ವಬದಿಯಲ್ಲಿರುವ ದೊಡ್ಡ ಹೊಂಡದಂತಿರುವ ಕೆರೆ, ದಕ್ಷಿಣ ಮತ್ತು ನೈಋತ್ಯ ಭಾಗದಲ್ಲಿರುವ ಕೆರೆಗಳು ಅದರ ಪ್ರಾಚೀನತೆಗೆ ಕುರುಹುಗಳಾಗಿವೆ. ನೈಋತ್ಯಕ್ಕಿರುವ ಕೆರೆಯನ್ನು “ಹುಬ್ಬಳ್ಳೆವ್ವ” ಅಥವಾ ‘ಹೂಬಳ್ಳೆವ್ವ’ ನ ಕೆರೆಯೆಂದು ಕರೆಯುತ್ತಾರೆ. ಈ ಕೆರೆಗಳಲ್ಲಿ ಪ್ರಾಚೀನ ದೇವಾಲಯದ ಅವಶೇಷಗಳೂ ಶಿಲಾ ಮೂರ್ತಿಗಳೂ ದೊರೆತಿರುವುದಾಗಿ ತಿಳಿದುಬರುತ್ತದೆ. ಕಾರಣ ಈ ಸ್ಥಳಗಳನ್ನು ಪರಿಶೋಧಿಸಿದರೆ ಇನ್ನೂ ಹೆಚ್ಚಿನ ಶಾಸನ ಮುಂತಾದ ಅವಶೇಷಗಳು ದೊರೆಯಬಹುದಾಗಿದೆ.

ಪ್ರಸ್ತುತ ಶಾಸನವಿರುವ ಕಲ್ಲನ್ನು ಊರಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯವರ ಮನೆಯ ಮುಂದೆ ಒಂದು ಗೋಡೆಗೆ ಆನಿಸಿ ನಿಲ್ಲಿಸಲಾಗಿದೆ. ಶಾಸನದ ಕಲ್ಲು ಸು. ಎರಡೂ ಮುಕ್ಕಾಲು ಅಡಿ ಅಗಲ, ಮೂರುವರೆ ಅಡಿಗಳಷ್ಟು ಉದ್ದವಾಗಿದೆ. ಶಾಸನದ ಅಕ್ಷರಗಳು ದೊಡ್ಡದಾಗಿದ್ದು ತಕ್ಕಷ್ಟು ಆಳವಾಗಿ ಕೆತ್ತಲ್ಪಟ್ಟಿವೆ. ಆದರೆ ಶಾಸನ ಶಿಲೆಯ ಮೇಲುಭಾಗ ಮತ್ತು ಬಲಭಾಗಗಳು ಒಡೆದು ಹೋಗಿವೆ. ಇದರಿಂದಾಗಿ ಶಾಸನದ ಬಲಭಾಗದ ಪ್ರತಿಸಾಲಿನ ಆರಂಭದಲ್ಲಿ ಒಂದು ಅಥವಾ ಎರಡರಂತೆ ಅಕ್ಷರಗಳು ಲೋಪಿಸಿವೆ. ಶಾಸನದ ಮೇಲ್ಮೈ ಕೂಡ ಸಾಕಷ್ಟು ಸವೆದಿದೆ. ಅದರಿಂದಾಗಿ ಶಾಸನದ ಕೆಳಭಾಗದ ಅಕ್ಷರಗಳು ಅಸ್ಪಷ್ಟವಾಗಿವೆ. ಶಾಸನವಿರುವ ಸ್ಥಿತಿಯನ್ನು ನೋಡಿದರೆ ಅದನ್ನು ಎಲ್ಲಿಂದೆಲ್ಲಿಗೋ ಸ್ಥಳಾಂತರಿಸಿದಂತೆ ಕಂಡುಬರುತ್ತದೆ.

ಇದರಲ್ಲಿ ಒಟ್ಟು ಹದಿನೈದು ಸಾಲುಗಳ ಬರಹವಿದ್ದು ಇಡೀ ಶಾಸನವು ಹಳಗನ್ನಡ ಗದ್ಯದಲ್ಲಿ ರಚಿತವಾಗಿದೆ. ಶಾಸನದ ಆದಿ ಮತ್ತು ಅಂತ್ಯಗಳಲ್ಲಿ ತೋರುವ ಸಾಮಾನ್ಯವಾದ ಸಂಸ್ಕೃತ ಶ್ಲೋಕಗಳು ಇದರಲ್ಲಿ ಇಲ್ಲ. ಶಕಟರೇಫ ಮತ್ತು ರಳಗಳನ್ನು ಪ್ರಯೋಗಿಸಿದೆಯಾದರೂ ಅವುಗಳ ಪ್ರಯೋಗ ತಪ್ಪಾಗಿದೆ.

ಶಾಸನವು ಚಾಲುಕ್ಯ ಸಾಮ್ರಾಟರ ಬಿರುದಾವಳಿಯಿಂದ ಪ್ರಾರಂಭವಾಗಿ ಕನ್ನಡ ಗದ್ಯದ ಫಲಶ್ರುತಿ ಮತ್ತು ಲಿಪಿಕಾರನ ಹೆಸರಿನಿಂದ ಕೊನೆಗೊಳ್ಳುತ್ತದೆ.

ಶಾಸನದ ಸಾರ:

ರಾಜಾಧಿರಾಜ ಪರಮೇಶ್ವರನೆಂದು ಬಿರುದಾಂಕಿತನಾದ ಚಾಲುಕ್ಯದೊರೆ ತ್ರೈಳೋಕ್ಯ ಮಲ್ಲದೇವ (೧ನೆಯ ಸೋಮೇಶ್ವರ)ನು ಸಮಸ್ತ ಭೂಮಂಡಲವನ್ನು ಆಳುತ್ತಿದ್ದಾಗ (ಶಾಲಿವಾಹನ) ಶಕದ ೯೭೩ನೆಯ ವರ್ಷದ ಚೈತ್ರ ಶುದ್ಧ ಪಂಚಮಿ (ಆದಿತ್ಯವಾರ)ಯಂದು ‘ತಂಬುಲಿಗರ ಭೀxxಣ್ಣ’ ನೆಂಬವನು ತಾನು ಅಗೆಸಿದ (ಭೀಮಗಟ್ಟು) ಎಂಬ ಹೊಂಡಕ್ಕೆ ನೀರು ತುಂಬಿಸುವ ಸಲುವಾಗಿ (ಕೆಲವು) ಗದ್ಯಾಣಗಳ ಬಡ್ಡಿಯಲ್ಲಿ (ಕ್ರಯಕ್ಕೆ ಕೆಲವೊಂದು) ಗದ್ದೆಯ ಭೂಮಿಯನ್ನು ಕೊಂಡು ಅದನ್ನು ದಾನವಾಗಿ ಇತ್ತನು. xxxx ಭೀಮಯ್ಯ, ಸೇನಬೋವ (ಕುಲಕರಣಿ) ಗೋವಿನ್ದಿಮಯ್ಯ, ಬxxಸಯ್ಯ, ಹೋಳವ ಮಾಧವಯ್ಯ, ಮುಗ್ಗಿಯ ಮಧುವಯ್ಯ, xxxಚಟ್ಟಿಮಯ್ಯ, ದೊಮ್ಮ[ರ]ಚಟ್ಟಿಮಯ್ಯ ರಾವಚಿದ್ದಯ್ಯ, ಸೀವರ ಬಿಟ್ಟಮ[ಯ್ಯ], xನ್ನ ರಸಿಯ ಚೀ ಬಿಟ್ಟಮಯ್ಯ ? ಇವರ ಗುತ್ತಗೆಯಲ್ಲಿ ‘ಸ್ಥಾನಮಿೞ್ದು’ ಈ ದತ್ತಿಯನ್ನು ಬಿಟ್ಟರು. ಶಾಸನವನ್ನು ಬರೆದವನು ನಾಗವರ್ಮಯೋಜ.

ಪ್ರಸ್ತುತ ಶಾಸನದಲ್ಲಿ ಉಕ್ತನಾದ ಚಾಲುಕ್ಯದೊರೆ ತ್ರೈಳೋಕ್ಯಮಲ್ಲದೇವ ಎಂದರೆ ೧ನೆಯ ಸೋಮೇಶ್ವರ ಈತನ ಆಳ್ವಿಕೆಯ ಕಾಲ ಕ್ರಿ.ಶ. ೧೦೪೪ ರಿಂದ ೧೦೬೮ರ ವರೆಗೆ. ಆದರೆ ಶಾಸನದಲ್ಲಿ ಈತನ ಮಾಂಡಲಿಕ ಅಥವಾ ಸಾಮಂತನ ಹೆಸರು ಯಾವುದೂ ಕಂಡು ಬರುವುದಿಲ್ಲ. ಶಾಸನದಲ್ಲಿ ಮಿತಿ ಮಾತ್ರ ಸ್ಪಷ್ಟವಾಗಿದೆ. ಶಕ ವರ್ಷ ೯೭೩ನೆಯ ಚೈತ್ರ ಶುದ್ಧ ಪಂಚಮಿ ಆದಿತ್ಯವಾರವೆಂದು ಹೇಳಿದೆ. ಇದು ಕ್ರಿ.ಶ. ೧೦೫೧ ಕ್ಕೆ ಸಮನಾದುದು. ಇದೇ ಶಕ ವರ್ಷದ ಪೌಷ್ಠ ಮಾಸದಲ್ಲಿ ಹುಟ್ಟಿದ ತುರುಮರಿ (ಬೈಲಹೊಂಗಲ ತಾಲೂಕ) ಗ್ರಾಮದ ಶಾಸನದಲ್ಲಿ*ಯೂ ಪ್ರಸ್ತುತ ಚಾಲುಕ್ಯ ೧ನೆಯ ಸೋಮೇಶ್ವರನನ್ನೇ ಸಾಮ್ರಾಟನಾಗಿ ಹೆಸರಿಸಿದೆ. ಎಂದರೆ ಇವೆರೆಡು ಶಾಸನಗಳು ಒಂದೇ ವರ್ಷದಲ್ಲಿ ಹತ್ತು ತಿಂಗಳುಗಳ ಅಂತರದ ಮೇಲೆ ಹುಟ್ಟಿವೆ. ಆದ್ದರಿಂದ ಪರಸ್ಪರ ಸಮೀಪದ ಊರುಗಳಿಗೆ ಮತ್ತು ಕಾಲಕ್ಕೆ ಸಂಬಂಧಿಸಿದೆ. ಇವೆರಡು ಶಾಸನಗಳಲ್ಲಿ ಉಕ್ತವಾದ ಸಂಗತಿಗಳಿಗೆ ವಿಶೇಷ ಮಹತ್ವವಿದೆಯೆಂದು ಹೇಳಬಹುದು.

ಮೇಲೆ ಸೂಚಿಸಿದ ತುರುಮರಿಯ ಶಾಸನದಲ್ಲಿ ಅದು ‘ಪಟ್ಟಕುರುಗುಂದ’ ಎಂಬ ಊರಿಗೆ ಸೇರಿದ್ದೆಂತಲೂ ಪಟ್ಟಕುರುಗುಂದ ಗ್ರಾಮವು ‘ಕಾದಲವಳ್ಳಿ ಮೂವತ್ತು’ ಎಂಬ ಆಡಳಿತ ಆ ವಿಭಾಗದಲ್ಲಿ ಇತ್ತೆಂದೂ ಹೇಳಿದೆ. ಇಲ್ಲಿ ಹೇಳಿದ ‘ಪಟ್ಟ ಕುರುಗುಂದ’ವೆಂದರೆ (ತುರುಮರಿಯ ಮಗ್ಗುಲಲ್ಲಿ) ಪ್ರಸ್ತುತ ಮು. ಖಾ ಹುಬ್ಬಳ್ಳಿಯಿಂದ ಪೂರ್ವಕ್ಕೆ ಸು. ಮೂರು ಮೈಲು ಅಂತರದ ಮೇಲಿರುವ ‘ಕರಗುಂದ’ ಎಂಬ ಗ್ರಾಮವಾಗಿರಬಹುದು. ಮು.ಖಾ. ಹುಬ್ಬಳ್ಳಿಯ ಶಾಸನದಲ್ಲಿ ಯಾವುದೇ ಊರನ್ನು ಹೆಸರಿಸಿಲ್ಲ. ಈ ಶಾಸನವು ಮೂಲತಃ ಮು. ಖಾ. ಹುಬ್ಬಳ್ಳಿಗೇ ಸೇರಿದ್ದೆಂದಾದ ಪಕ್ಷದಲ್ಲಿ ಅಂದು ಹುಬ್ಬಳ್ಳಿಯು ಕಾದಲವಳ್ಳಿ ಮೂವತ್ತು ಅಥವಾ ಮೂವತ್ತಾರರ ವಿಭಾಗದಲ್ಲಿ ಸೇರಿರಲಿಲ್ಲವೆಂದು ಹೇಳಬೇಕಾಗುತ್ತದೆ. ಒಂದು ವೇಳೆ ಕಾದಲವಳ್ಳಿ ವಿಭಾಗದಲ್ಲಿ ಸೇರಿದ್ದಾಗಿದ್ದರೆ, ಆ ಸಂಗತಿಯನ್ನು ಉಲ್ಲೇಖಿಸದೆ ಬಿಡುತ್ತಿರಲಿಲ್ಲ. ಆದರೆ ಮು.ಖಾ. ಹುಬ್ಬಳ್ಳಿ ಅಂದು ಹಲಸಿಗೆ-೧೨೦೦೦ ನಾಡಿನಲ್ಲಿಯೇ ಇತ್ತೆಂದು ಭಾವಿಸಲು ಅಡ್ಡಿಯಿಲ್ಲ.

ಕ್ರಿ.ಶ. ೧೦೫೧ರ ತುರಮುರಿಯ ಶಾಸನದಲ್ಲೂ ಸರಿ ಸುಮಾರು ಇದೇ ಅವಧಿಯ ಕಲಭಾವಿಯ ಶಾಸನದಲ್ಲಿಯೂ ಗಂಗದೊರೆ ಕಂಚರಸನು ಕಾದಲವಳ್ಳಿ ಮೂವತ್ತನ್ನು ಮನ್ನೆಯ ಸ್ವಾಮ್ಯದಿಂದ ಆಳುತ್ತಿದ್ದನೆಂದು ಹೇಳಿದೆ. ಕ್ರಿ.ಶ ೧೦೭೫ರ ಕಾದರವಳ್ಳಿಯ ಒಂದು ಶಾಸನದಲ್ಲಿ ಕಾದಲವಳ್ಳಿ ಪ್ರದೇಶವನ್ನು ೨ನೆಯ ಸೋಮೇಶ್ವರ ಚಕ್ರವರ್ತಿಯ ದಂಡನಾಡಕ ಸೋಮೇಶ್ವರ ಭಟ್ಟನೆಂಬವನು ಆಳುತ್ತಿದ್ದುದಾಗಿ ತಿಳಿದುಬರುತ್ತದೆ. ಅದೇ ಊರಿನ ಕ್ರಿ.ಶ. ೧೦೯೯ರ ಒಂದು ಶಾಸನದಲ್ಲಿ ಗೋವೆಯ ಕದಂಬ ದೊರೆ ಗೂವಲದೇವನು ಕಾದಲವಳ್ಳಿ ಮೂವತ್ತು ಸಹಿತವಾಗಿ ಹಲಸಿಗೆ-೧೨೦೦೦ ಪ್ರಾಂತವನ್ನು ಆಳುತ್ತಿದ್ದುದಾಗಿ ಉಲ್ಲೇಖ ಬರುತ್ತದೆ. ಇದರಿಂದ ಕ್ರಿ.ಶ. ೧೦೫೧ರ ಸುಮಾರಿನಲ್ಲಿ ಮು.ಖಾ. ಹುಬ್ಬಳ್ಳಿಯ ಆಡಳಿತವು ಕಂಚರಸನಿಗೆ ಸೇರಿರಲಿಲ್ಲವೆಂದು ತಿಳಿದು ಬರುತ್ತದೆ. ಕ್ರಿ.ಶ. ೧೦೯೯ ಸುಮಾರಿನಲ್ಲಿ ಮಾತ್ರ ಮು.ಖಾ. ಹುಬ್ಬಳ್ಳಿ ಪ್ರದೇಶವು ಮಹಾಮಂಡಲೇಶ್ವರರಾದ ಗೋವೆಯ ಕದಂಬರ ವಶದಲ್ಲಿತ್ತೆಂದು ಧಾರಾಳವಾಗಿ ಹೇಳಬಹುದು. ಮುಂದೆ ಗೋವೆಯ ಕದಂಬರ ಕೊನೆಗಾಲದವರೆಗೂ ಈ ಪ್ರದೇಶ ಅವರ ಕೈಯಲ್ಲಿಯೇ ಉಳಿದುಕೊಂಡಿತ್ತೆಂದು ಭಾವಿಸಲು ಅಡ್ಡಿಯಿಲ್ಲ.

ಒಟ್ಟಿನಲ್ಲಿ ಕಾದರವಳ್ಳಿಯ ಸಮೀಪದ ಈ ಪ್ರದೇಶದಲ್ಲಿ ಶಾಸನಗಳು ಹೆಚ್ಚಾಗಿ ಸಿಕ್ಕಿಲ್ಲದಿರುವುದರಿಂದ ಪ್ರಸ್ತುತ ಮು. ಖಾ . ಹುಬ್ಬಳ್ಳಿಯ ಶಾಸನಕ್ಕೆ ವಿಶೇಷ ಮಹತ್ವವಿದೆಯೆಂದು ತಿಳಿಯಬೇಕು. ಹಾಗು ಈ ಶಾಸನದಿಂದ ಕ್ರಿ.ಶ. ೧೧-೧೨ನೆಯ ಶತಮಾನಗಳ ಕಾಲದ ಚರಿತ್ರೆಯ ಕೆಲವು ಸಂಗತಿಗಳನ್ನು ನಿರ್ಣಯಿಸುವಲ್ಲಿ ಒಳ್ಳೆಯ ಸಹಾಯ ಒದಗುತ್ತದೆಂದು ಹೇಳಬೇಕು.

ಶಾಸನ ಪಾಠ:-

೧. . . . . . . . . . . . . . . . . .  ಮಸ್ತ ಭುವನಾಶ್ರಯ ಶ್ರೀ ಪೃಥ್ವೀವಲ್ಲಭ-ಮಹಾ

೨. ರಾಜಾಧಿರಾಜ ಪರಮೇಶ್ವರಂ ಪರಮಭಟ್ಟಾರಕಂ ಸತ್ಯಾ

೩. ಶ್ರಯ ಕುಳತಿಳಕಂ ಚಾಳುಕ್ಯಾಭರಣಂ ಶ್ರೀ ಮತ್ತ್ರೆಳೋಕ್ಯ

೪. [ಮ] ಲ್ಲದೇವರ ವಿಜಯರಾಜ್ಯ ಮುತ್ತರೋತ್ತರಾಭಿವದ್ಧಿ

೫. ………. ವರ್ದ್ಧಮಾನ ಮಾಚಂದ್ರಾರ್ಕ್ಕ ತಾರಂ ಸಲುತ್ತಿರೆ ಸ

೬. ……………. ಕಾಳಾತೀತ ಸಂವತ್ಸರ ಸತಂಗ ೯೭೩ ನೆಯ

೭. …….. ಸಂವತ್ಸರದ ಚೈತ್ರ ಶುದ್ಧ ೫(ಆ) ತಂಬುಲಿಗರ –ಭೀ

೮. ……….. ಣ್ದಂ ತನ್ನ ಗಳಿಸಿದ ಭೀಮಗಟ್ಟಿನ ಖಾತ ಪೂರಣಕ್ಕೆ ರಿ

೯. ……… ಗದ್ಯಾಣದ ವೃದ್ಧಿಯೊಳಂ ಸ್ಥಾನ ಮಿೞ್ದುಬಿಟ್ಟಗೞ್ದೆಮ

೧೦. ……… ಚರಕ್ಯ ಭೀಮಯ್ಯ ಸೇನಬೋವ ಗೋಯಿನ್ದಿಮಯ್ಯ ಬ

೧೧. …… ಸಯ್ಯ ಹೋಳವ ಮಾಧವಯ್ಯ ಮುಗ್ಗಿಯ ಮಧುವಯ್ಯ [ಗಿ?]

೧೨. …… ಚಟ್ಟಿಮಯ್ಯ ದೊಂಮ್ಮ ಚಟ್ಟಮಯ್ಯ ರಾವಚಿದ್ದಯ್ಯ ಸೀವರ ಬಿಟ್ಟಮ

೧೩. …… ನ್ನರಸಿಯ ಬೀ ? ಬಿಟ್ಟಮ ಇವಱ ಗುತ್ತಗೆಯೊಳಂ-ಸ್ಥಾನಮಿ ೞ್ದಾಚನ್ದ್ರ

೧೪. ….. ರಂಬರಂ ಪಡಿಸಲಿ ಸುವರೀ ಧರ್ಮ್ಮಮಂ ಕಾದಾತಂ-ಗದ್ವಮೇಧಮಿೞ್ದಪು

೧೫. ….. ಮಕ್ಕು ಮಿದನಳಿದರ್ಮ್ಮಹಾಪಾತಕ ನಕ್ಕುಂ –ನ್ನಾಗವರ್ಮ್ಮಯೋಜಂ.

 

*‘ಕರ್ನಾಟಕ ಭಾರತಿ’ ಸಂಪುಟ ೧೦ ಸಂಚಿಕೆ-೪