ತುರಮರಿಯು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಮಲಪ್ರಭಾ ನದಿಯ ದಕ್ಷಿಣ ತಟದಲ್ಲಿರುವ ಒಂದು ಹಳ್ಳಿ. ಬೈಲಹೊಂಗಲದಿಂದ ನೇರಕ್ಕೆ ೯ ಮೈಲುಗಳು ಮತ್ತು ಬೆಳಗಾವಿಯಿಂದ ೨೬ ಮೈಲುಗಳ ಅಂತರದಲ್ಲಿದೆ. ಊರು ಚಿಕ್ಕಬೆಟ್ಟವೊಂದರ ಉತ್ತರ ಮತ್ತು ಪೂರ್ವ ಪಾರ್ಶ್ವಗಳಲ್ಲಿ ಹಬ್ಬಿದ್ದು ಇದೇ ಗುಡ್ಡದ ದಕ್ಷಿಣ ತುದಿಗಿರುವ ಬಹುಕಡಿದಾದ ಶಿಖರದ ಮೇಲೆ ಬಸವಣ್ಣನ ಗುಡಿಯಿದೆ. ಅದರ ಪಕ್ಕದಲ್ಲಿ ಪ್ರಸ್ತುತ ಶಾಸನವಿರುವ ಹಾಸುಗಲ್ಲು ಬಿದ್ದುಕೊಂಡಿವೆ. ೪೫” ಉದ್ದ ಮತ್ತು ೩೫” ಅಗಲ ಇದ್ದು ಬಲಗಡೆ ಮೇಲ್ಭಾಗದಲ್ಲಿ ಸೀಳಿ ತುಂಡಾಗಿರುವುದರಿಂದ ಮೊದಲಿನ ಒಂಬತ್ತು ಸಾಲುಗಳ ಕೆಲವು ಅಕ್ಷರಗಳು ಲೋಪಗೊಂಡಿವೆ. ಆ ತುಂಡುಗಲ್ಲೂ ಅಲ್ಲಿಯೆ ಬಿದ್ದಿದೆ. ಇಷ್ಟಲ್ಲದೆ ಕಲ್ಲಿನ ಕೆಳಭಾಗದಲ್ಲಿ ನಟ್ಟ ನಡುವೆ ಸು. ೭” ವ್ಯಾಸದ ತೂತು ಕೊರೆಯಲ್ಪಟ್ಟಿರುವುದರಿಂದ ನಾಲ್ಕು ಸಾಲುಗಳ ಪಾಠ ಮಧ್ಯದಲ್ಲಿ ಪೂರ್ಣ ಲೋಪಗೊಂಡಿದೆ. ಒಟ್ಟು ಶಾಸನವು ಹಲವು ಸ್ಥಳಗಳಲ್ಲಿ ಸವೆದು ಹೋಗಿರುವುದರಿಂದ ಅಲ್ಲಲ್ಲಿ ಕೆಲವು ಅಕ್ಷರಗಳು ಲೋಪಿಸಿವೆ.

ಪ್ರಸ್ತುತ ಶಾಸನವು ಮೂಲತಃ ಬಸವಣ್ಣನ ಗುಡಿಯದಲ್ಲವೆಂತಲೂ ಬೇರೆಡೆಯಿಂದ ಈಗಿನ ಸ್ಥಳಕ್ಕೆ ಸಾಗಿಸಿದ್ದೆಂತಲೂ ತಿಳಿದುಬರುತ್ತದೆ. ಆದರೆ ಎಲ್ಲಿಂದ ಸಾಗಿಸಿದ್ದು ಎಂಬ ವಿಷಯದಲ್ಲಿ ಊರವರಿಂದ ಖಚಿತವಾದ ವಿವರಗಳು ದೊರೆಯುತ್ತಿಲ್ಲ. ಶಾಸನದಲ್ಲಿ ತುರಮರಿಗ್ರಾಮದ ಉಲ್ಲೇಖವಿಲ್ಲ. ಅದರ ಬದಲು ‘ಪಟ್ಟದ ಕುಱುಗುಂದ’ ಎಂಬ ಊರ ಉಲ್ಲೇಖವಿದೆ. ಮಲಪ್ರಭಾನದಿಯ ಉತ್ತರತಟದಲ್ಲಿ, ತುರುಮರಿಯಿಂದ ಒಂದು ಮೈಲು ಅಂತರದಲ್ಲಿ ಈಗ ‘ಕುರುಗುಂದ’ ಎಂಬ ಹಳ್ಳಿಯಿದೆ. ಶಾಸನವು ಮೂಲದಲ್ಲಿ ಈ ಕುರುಗುಂದವೆಂಬ ಊರಿನದಾಗಿರಲೂ ಬಹುದು.

ಶಾಸನದ ಅಕ್ಷರಗಳ ಪ್ರಮಾಣ ೩/೪” x ೧” ನಷ್ಟು ಇದ್ದು, ೧೦-೧೧ನೆಯ ಶತಮಾನದ್ದಾಗಿದೆ. ಪ್ರಾರಂಭದಲ್ಲಿ ಹಳಗನ್ನಡ ಗದ್ಯವಿದ್ದು ಅದರ ಕೊನೆಯಲ್ಲಿ ಸಂಸ್ಕೃತ ಪದ್ಯಗಳ ಫಲಶ್ರುತಿಯಿದೆ. ಅದಾದಮೇಲೆ ಕನ್ನಡ ಕಂದಪದ್ಯಗಳಿವೆ. ತೀರಕೊನೆಯಲ್ಲಿ ಕವಿ ಮತ್ತು ಕಂಡರಣೆಕಾರರ ಹೆಸರುಗಳಿವೆ. ಶಾಸನದಲ್ಲಿ ಮಿತಿಯ ಉಲ್ಲೇಖವು ಸ್ಪಷ್ಟವಿದ್ದು ಕ್ರಿ.ಶ. ೧೦೫೧ ಕ್ಕೆ ಸೇರಿಹೋಗುವ ೯೭೩ನೆಯ ಖರ ಸಂವತ್ಸರವೆಂದು ಸ್ಪಷ್ಟಪಡಿಸಲಾಗಿದೆ. ಇದು ಕಲ್ಯಾಣ ಚಾಳುಕ್ಯದೊರೆ ಆಹವಮಲ್ಲ ಎಂದರೆ ೧ನೆಯ ಸೋಮೇಶ್ವರನ ಆಳ್ವಿಕೆಗೆ ಸೇರಿದ್ದಾಗಿದೆ.

ಈ ಶಾಸನದಿಂದ ಮೊದಲಬಾರಿಗೆ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ. ರಾಷ್ಟ್ರಕೂಟ ಒಂದನೆಯ ಅಮೋಘವರ್ಷನ ಸಾಮಂತನಾಗಿದ್ದ (?) ಗಂಗದೊರೆ ಸೈಗೊಟ್ಟ ಶಿವಮಾರನು ಶಕವರ್ಷ ೨೬೧ ರಲ್ಲಿ[1] ಕುಮ್ಮುದವಾಡದ ಜೈನಬಸದಿಗೆ ಕೊಟ್ಟಿದ್ದ ದತ್ತಿಯನ್ನು ಗಂಗದೊರೆ ಕಂಚರಸನು ಪುನರ್ದತ್ತಿಯಾಗಿತ್ತು. ಉದ್ಧರಿಸಿದ ನೆಂದು ಕಲಭಾವಿ ಶಾಸನದಲ್ಲಿ ಹೇಳಿದೆ.[2] ಎಂದರೆ ಕಲಭಾವಿಶಾಸನದಲ್ಲಿ ಕಂಚರಸನು ದತ್ತಿಕೊಟ್ಟ ಕಾಲವನ್ನು ನಮೂದಿಸದೆ ಸೈಗೊಟ್ಟ ಶಿವಮಾರನ ದತ್ತಿಕೊಟ್ಟ ಕಾಲವನ್ನು ಮಾತ್ರ ಹೇಳಿದೆ. ಫೀಟರು ಶಾಸನದ ಲಿಪಿಯನ್ನು ಗಮನಿಸಿ ಅದರ ಕಾಲ ಸು. ೧೧ನೆಯ ಶತಮಾನವೆಂದು ಹೇಳಿದ್ದರು. ಪ್ರಸ್ತುತ ತುರಮರಿಯ ಶಾಸನವು ಕ್ರಿ.ಶ. ೧೦೫೧ ರಲ್ಲಿ ಕಾದಲವಳ್ಳಿ ಮೂವತ್ತನ್ನು ಕಂಚರಸನು ಮನ್ನೆಯ ಸ್ವಾಮ್ಯದಿಂದ ಆಳುತ್ತಿದ್ದನೆಂದು ಸ್ಪಷ್ಟವಾಗಿ ಉಲ್ಲೇಖಿಸುವುದರಿಂದ ಫ್ಲೀಟರ ಊಹೆಗೆ ಖಚಿತತೆ ಬಂದಂತಾಗಿದೆ. ಕಂಚರನಿಗೆ ನಂದಗಿರಿನಾಥ, ಕೊಂಗುಣಿವರ್ಮ ಧರ್ಮ ಮಹಾರಾಜ, ಸಮದಕರಿಲಾಂಛನ ಎಂಬ ಬಿರುದುಗಳನ್ನು ಕೊಟ್ಟಿರುವುದರಿಂದ ಕಲಭಾವಿ ಶಾಸನದ ಗಂಗದೊರೆ ಕಂಚರಸನೇ ಈತ ಎಂಬುದು ಸ್ಪಷ್ಟ. ಒಟ್ಟಿನಲ್ಲಿ ಕಂಚರಸನನ್ನು ಉಲ್ಲೇಖಿಸುವ ಈವರೆಗಿನ ಪ್ರಕಟಿತ ಶಾಸನಗಳಲ್ಲಿ ಇದು ಎರಡನೆಯದು. ಮತ್ತು ಆತನ ಕಾಲದ ಬಗೆಗೆ ಖಚಿತ ಆಧಾರ ನೀಡುವಂಥದು.

ದಕ್ಷಿಣದಲ್ಲಿ ಚೋಳರ ದಾಳಿಯಿಂದಾಗಿ ತಲಕಾಡಿನ ಗಂಗಮನೆತನ ನಷ್ಟವಾಯಿತಷ್ಟೆ, ಆ ಸಂದರ್ಭದಲ್ಲಿ ಕಲ್ಯಾಣದ ಚಾಳುಕ್ಯರು ಗಂಗರನ್ನು ಪುನರುದ್ಧರಿಸಬೇಕೆಂಬ ಮನೀಷೆಯಿಂದ ಕಂಚರಸನನ್ನು ಉತ್ತರದ ಈ ಭಾಗದಲ್ಲಿ ತಂದು ಪ್ರತಿಷ್ಠಿಸಿರಬೇಕು. ಈ ಪ್ರತಿಷ್ಠಾಪನೆ ಹತ್ತನೆಯ ಶತಮಾನದ ಕೊನೆ ಅಥವಾ ಹನ್ನೊಂದನೆಯ ಶತಕದ ಆದಿಯಲ್ಲಿ ಜರುಗಿರಬೇಕು. ಕಾದಲವಳ್ಳಿ ಮೂವತ್ತನ್ನು ಕ್ರಿ.ಶ. ೧೦೭೫ ರಲ್ಲಿ ಚಾಲುಕ್ಯ ಭುವನೈಕಮಲ್ಲ ಎರಡನೆಯ ಸೋಮೇಶ್ವರನ ದಂಡನಾಯಕ ಸೋಮೇಶ್ವರ ಭಟ್ಟನು ಆಳುತ್ತಿದ್ದುದಾಗಿ ಕಾದರವಳ್ಳಿಯ ಶಾಸನವೊಂದರಿಂದ[3] ತಿಳಿಯುವುದರಿಂದ ಮತ್ತು ಅದರಲ್ಲಿ ಕಂಚರಸನ ಉಲ್ಲೇಖವಿಲ್ಲದಿರುವುದರಿಂದ ಈ ಇಪ್ಪತ್ತೈದು ವರ್ಷಗಳಲ್ಲಿ ಈ ಗಂಗಮನೆತನವೂ ನಷ್ಟಗೊಂಡಿತ್ತೆಂದು ಊಹಿಸಬಹುದು; ಆ ಪ್ರದೇಶವು ಗೋವೆಯ ಕದಂಬರ ಕೈಗೆ ಇನ್ನೂ ಬಂದಿರಲಿಲ್ಲವೆಂದೂ ತಿಳಿಯಬಹುದು.

ಕಂಚರಸನ ಜೊತೆಗೆ ರಾಷ್ಟ್ರಕೂಟ ಭೀಮದೇವನೆಂಬುವನನ್ನು ಶಾಸನವು ಉಲ್ಲೇಖಿಸುತ್ತದೆ. ಈತನ ಇತಿವೃತ್ತಗಳಾವವೂ ಶಾಸನದಲ್ಲಿ ಇಲ್ಲ. ಈ ಭೀಮದೇವನ ಪುರದವಳೆಂದು ಶಾಸನ ಹೇಳುವಂತೆ ತೋರುತ್ತದೆ. ಆದರೆ ಶಾಸನದ ಆ ಭಾಗಸ್ಪಷ್ಟವಿಲ್ಲ. ಅಂತೂ ೧೧ನೆಯ ಶತಮಾನದ ಮಧ್ಯದಲ್ಲಿ ಕಾದರವಳ್ಳಿಯ ಪ್ರದೇಶದಲ್ಲಿ ರಾಷ್ಟ್ರಕೂಟರ ವಂಶಸ್ಥರು ನೆಲೆಸಿದ್ದರೆಂಬುದು ಈ ಶಾಸನದಿಂದ ಪ್ರಥಮಬಾರಿಗೆ ಗೊತ್ತಾಗುತ್ತದೆ.

ಪಟ್ಟಕುರುಗುಂದದ ಕುಪ್ಪೆಯಗೆರೆಗೆ ದೇಯಬ್ಬೆ ರಾಣಿಯು ಎಂಟು ಮತ್ತರು ಭೂಮಿಯನ್ನು ದಾನವಾಗಿತ್ತ ಸಂಗತಿಯನ್ನು ತಿಳಿಸುವುದು ಶಾಸನದ ಮುಖ್ಯೋದ್ಧೇಶ. ಕೆರೆಯ ವರ್ಣನೆ ಮತ್ತು ದಾನದ ಹಿರಿಮೆಗಳು ಪ್ರೌಢವಾದ ಕನ್ನಡಗದ್ಯದಲ್ಲಿವೆ. ಕೊನೆಯಲ್ಲಿ ೬ ಕಂದಪದ್ಯಗಳಿವೆ. ‘ಹರಚರಣ ಸರಸಿಜಾರ್ಚಿತೆ’ಯಾದ ದೇಯಬ್ಬೆಗೆ ‘ದಾನವ್ಯಸನಮೆ ಪರಮ ವ್ಯಸನ’ವಾಗಿತ್ತೆಂದು ಶಾಸನ ಹೇಳುತ್ತದೆ.

ಶಾಸನ ಪಾಠ:

೧. ಸ್ವಸ್ತಿ ಸಮಸ್ತ [ಭು]ಮನಾಶ್ಶ್ರಯ ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಸ್ವರ

೨. ಪರಮಭಟ್ಟಾರ xo ಸತ್ಯಾಶ್ಯ ಕುಳತಿಳಕಂ ಚಾಳ (ಳು) ಕ್ಯಾಭರಣಂ ತ್ರೈಶೋಖ್ಯ ಮಲ್ಲಂ ಶ್ರೀ.

೩. ಮದಾಹಮಲ್ಲದೇವರ ವಿಜಯರಾಜ್ಯಮಭಿವೃದ್ಧಿಗಾಚಂದ್ರಾರ್ಕ್ಕಂಬರಂ ಸಲುತ್ತಮಿರೆ ಸಕ ನೃ

೪. ಪಕಾಳಾತೀತ xoವತ್ಸರ ಶತಂಗ ೯೭೩ನೆಯ ಖರಸಂವತ್ಸರದ ಪೌಷ್ಯ ಸು [ದ್ಧ]

೫. ಸೋಮ ? x[ರ?] ಮುಂ ವ್ಯತೀಪಾತದಂದು ಗಂಗಾ [ಜಳ?] ಧೌತ ನಿರ್ಮ್ಮಳ ವಸ್ತ್ರಪುರಾ [ಧಿ?]

೬. x x ಪ [ವಿ?ತ್ರ ಗೋತ್ರೆಯರುಂ ಬನ್ಧುಜನನಿಧಾನೆಯರುಮ [ಪ್ಪ]ಶ್ರೀ ಮದ್ದೇ [ಯಬ್ಬೆ]

೭. ಧಲ (ರಲ?) || ಸ್ವಸ್ತಿ ಸಮಧಿಗತ ಪಞ್ಚಮಹಾಶಬ್ದ ಮಹಾಮ [ಣ್ಡ]ಳೇ ಸ್ವರ xx

೮. x x ವರೇಶ್ವರಂ ನನ್ದಗಿರಿನಾಥಂ ಲೋಕವಿಖ್ಯಾತಂ ಕಂಬಳಾ [ತೂ]ರ್ಯ್ಯನಿರ್ಗ್ಫೋಷ x x

೯. [ಕೊಂ]ಗುಣಿವರ್ಮ್ಮ ಧರ್ಮ್ಮಮಹಾರಾಜಂ ಹಯವತ್ಸರಾಜಂ ಸಮದಕರಿ ಲಾಂಛನ x

೧೦. …..ನಂ ಮಾರ್ತ್ತಣ್ಡ ನಾಮಾದ್ಯನೇಕಾಂಕಮಾಳಿಕಾ ಸಮೇತರಪ್ಪ ಶ್ರೀ ಮತು ಕಂಚರಸಕ್ಕಾ ದ

೧೧. ಲವಳ್ಳಿ ಮೂವತ್ತಱ ಮನ್ನೆಯ [ಸ್ವಾ]ಮ್ಯದಿಂ ಸು[ಖ] ಸಂಕಥಾವಿನೋದ ದಿಂ ರಾಜ್ಯಂಗೆಯ್ಯ || ಭೂಮಿ

೧೨. ದಾನಮೆ ಮಹಾದಾನಮಪ್ಪುದನಷ್ಟಾದಶಪುರಾಣದೋದುಂ ಮನು ಬೃಹಸ್ಪತಿ ವಸಿ

೧೩. ಷ್ಟಾದಿಗಳಪ್ಪ ಮಹಾತ್ಮರ ಪೇಳ್ದ ಸ್ಮೃತಿಗಳೊಳಱೆವು ಕೇಸಯ? ಯವುಳ್ಳ ದಱೆಂ ದಾನವಿನೋ

೧೪. ದದೆ ದಾನವ್ಯಸನಮೆ ತನಗೆ ಪರಮ ವ್ಯಸನಮಪ್ಪುದಱೆಂ ಪಟ್ಟದ ಕಱುಗುನ್ದದ

೧೫. ತೆಂಕಣವೋ? ದ ಮಹಾಸಮುದ್ರೋಪಮಮುಂ ಬಕಬಳಾಕಹಂಸಚಕ್ರ ವಾಕಾದ್ಯನೇಕ ಜಳ

೧೬. ವಿಹಂಗಮ ವಿರಾಜಿತಮುಂ ಮಕರ ಗ್ರಾಹಸಿಯಮಾರಸಫರ ಕಚ್ಛಪ ಪ್ರಮುಖ ಜಳಧರ

೧೭. ನಿಚಯ ನಿಚಿತಮುಂ ನೀಳನೀರಜನೀರೆಜ ಕುಮುದ ವಿಷಜ ಬಹುವಿಧ ಕುಸುಮ ಸಂಶೋಭಿ

೧೮. ತಮುಮಮಯಪಯೋವೋಪಮಾ? ಚ್ಛಾಹಿ ಪರಿಪೂರ್ಣ್ನಮುಪ್ಪ ಕುಪ್ಪೆಯ ಗೆಱೆ x x

೧೯. x ದಾನೀಂತನ x x ಯರ್ಬ್ಬಿಟ್ಟ ಗಱ್ದೆ ಮಣ್ನಂ ಮತ್ತರ್ x x ಇನ್ತಿದ ನಾವನೊರ್ವಂ ರಕ್ಷಿಸಿದಂ ಬಾ

೨೦. x ರಾಸಿಯೊಳಂ ಕುರುಕ್ಷೇತ್ರದೊಳಮಯ್ನೂ x ಬ್ರಾಹ್ಮಣರ್ಗ್ಗಯ್ನೂಱು ಕವಿಲೆಯಂ ಕೊಟ್ಟ ಫಲಂ

೨೧. x [ದ]ನಳಿದಂ ಬಾಣರಾಸಿಯೊಳಂ ಕುರುಕ್ಷೇತ್ರದೊಳಮಯ್ನೂರ್ವ ರ್ಬ್ರಾಹ್ಮಣರುಮನಯ್ನೂಱುಕವಿ[ಲೆ]

೨೨. [ಯು]ಮನಳಿದಪಾತಕಂ ಸ್ವದತ್ತಂ ಪರದತ್ತಂ ವಾಯೋ ಹರೇತ ವಸುನ್ಧ ರಾಂ ಷಷ್ಠಿರ್ವರ್ಷಸಹ

೨೩. ಶ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿಃ || ಬಹುಭಿರ್ವಸುಧಾ ಭುಕ್ತಾ ರಾಜಭಿಸ್ಸಗರಾದಿಭಿರ್ಯಸ್ಯ

೨೪. ಯಸ್ಯ ಯದಾ ಭೂಮಿಸ್ತಸ್ಯ ತಸ್ಯ ತದಾ ಫಲಮಿತಿ || ಶ್ರೀ ರಾಷ್ಟ್ರಕೂಟ ವಂಶನ ವೀರಾಗ್ರಣಿ x

೨೫. ಮದೇವ ಭೂಪನ ವಧು ಧಾ x ಣಿಯೆನಿಪೊನ್ದಱೆವಿನೊಳಾವಾಣಿ ದೇಯಬ್ಬೆರಾಣಿಗನ್ಯಾಂಗ x

೨೬. ಯರ್ || ಹರಚರಣಸರಸಿಜಾರ್ಚ್ಚಿತೆ ಪರಮಾಕೊತೆ ? ಯುದಾರ ಚರಿತೆಯ …..

೨೭. ಶ್ವ ? ವರದಾನವೊಳ್ಳಿತೆಂದಾದರದಿಂ ಶ್ರೀ ದೇಯಬ್ಬರಸಿರ್ಮ್ಮನ್ಮತದಿಂ || ಕು ಱುಗುಂದದ ಕುಪ್ಪೆಯ ಗೆ….

೨೮. ಱೆಯೊಳ್ಬಿಟ್ಟ….ನ ಱೆತಿದಿಗು? ದೇಯಬ್ಬರಸಿಯರಱೆದಿತ್ತರ್ಗ್ಗೞ್ದೆ ಮತ್ತ ರೆಂಟಂ

೨೯. ಮುದದಿಂ || ಭೀಮಮಹೀಪಾಳನ ವಧು ಭೂಮಿಯನೊರ್ಮ್ಮತ್ತರೆಸೆವ ಗೞ್ದೆಯ ಮಣ್ನಂ ಶ್ರೀಮದ್ ಕುಪ್ಪೆ

೩೦. ಯಗೆಱೆಗೆನ್ದೀ ಮಹಿ ಪೊಗಳ್ವನ್ತೆ ಬಿಟ್ಟ …………. ದಾನ ಗುಣದಿಂವೆ ಪಡೆದಳ್ಮಾನಿನಿದೇಯಿಬ್ಬೆರಾಣಿ

೩೧. x ದ ವಾಸ್ಪದಮಂ || ದೀನಮನದನ್ಯ [ಭೀ ?] ……. [ಣ] ತ್ತು ಸುಗತಿವಡೆವುದು ಮೊಗ್ಗೆ ||

೩೨. ದಾನ x x ವಂ ಪೇಳ್ವಡೆ ಮಾನಿತ ………… ಬುಧನುತನೊಳ್ಕಾ ನೀನಗುತ್ತ ವೃತ್ತನೊಳೇನೊ

೩೩. xx[ಪಿಂಘ?] ಮುನ್ನತಮೆಂಬ x ಶ್ರೀ …………. ರದಾ ಸ. ಸೇನ ಬೋವಾಯ್ತವರ್ಮ್ಮಯ ನಾ[ಯಕ]

೩೪. [ನೊರೆದಂ] ದರ್ಮ್ಮಗಳ || ಮಾರ ………. ಜ ಸಾಸನಮಂ ಪೊಯ್ದ[4] ||

 

[1]ಡಾ. ಆರ್. ಎನ್. ಗುರವ ಅವರು, ಕಲಭಾವಿ ಶಾಸನದ ಕಾಲ ಫ್ಲೀಟ ಹೇಳುವಂತೆ ಶಾ. ಶ. ೨೬೧ ಅಲ್ಲ, ಶಾ.ಶ. ೭೬೧ ಎಂದರೆ ಕ್ರಿ.ಶ. ೮೩೯ ಎಂದು ಅಭಿಪ್ರಾಯ ಪಡುತ್ತಾರೆ. ಎಂದರೆ ಫ್ಲೀಟ ಅನುಮಾನಿಸುವಂತೆ ಶಾಸನದ ಮಿತಿ ಕಾಲ್ಪನಿಕವಲ್ಲವೆಂದು ಡಾ. ಗುರವ ಅವರ ಅಭಿಪ್ರಾಯ. ಆದರೆ ಕ್ರಿ.ಶ. ೮೩೯ ರಲ್ಲಿ ರಾಷ್ಟ್ರಕೂಟ ದೊರೆ ೧ನೆಯ ಅಮೋಘವರ್ಷನೇನೋ ಇದ್ದ. ಗಂಗದೊರೆ ಶಿವಮಾರ ಮಾತ್ರ ಇರಲಿಲ್ಲ. ಅದಾಗಲೇ ಅವನು ತೀರಿಹೋಗಿದ್ದನೆಂದು ಇತಿಹಾಸ ಹೇಳುತ್ತದೆ. ಹೀಗಿರುವಾಗ ಕಲಭಾವಿ ಶಾಸನವು ಹೇಳಿಕೊಳ್ಳುವಂತೆ ಕ್ರಿ.ಶ. ೮೩೯ ರಲ್ಲಿ ಸೈಗೊಟ್ಟನು ದತ್ತಿಬಿಟ್ಟಿರುವುದು ತೀರ ಅಸಂಭವ. ಜತೆಗೆ ಸೈಗೊಟ್ಟ ಶಿವಮಾರನಿರುವ ವರೆಗೆ ರಾಷ್ಟ್ರಕೂಟ ಮತ್ತು ಗಂಗ ಮನೆತನಗಳಲ್ಲಿ ವೈರತ್ವವಿತ್ತೇ ಹೊರತು ಮೈತ್ರಿ ಇರಲಿಲ್ಲ. ಮೂರನೆಯ ಗೋವಿಂದನ ಮರಣಾನಂತರ ಒಂದೆರಡು ವರ್ಷಗಳಲ್ಲಿಯೇ ರಾಷ್ಟ್ರಕೂಟರಿಗೂ ಗಂಗರಿಗೂ ಭಯಂಕರ ಯುದ್ಧವಾಗಿ ಸೈಗೊಟ್ಟನು ತೀರಿಹೋದನು.

[2] Indian Antiquary xviii. pp 309-313, ಕಲಭಾವಿ ಶಾಸನ.

[3] Indian Antiquary I. pp. 141-143.

[4]ಈ ಶಾಸನದ ಸೂಚನೆಯಿತ್ತುದಕ್ಕಾಗಿ ಡಾ. ಆರ್. ಸಿ. ಹಿರೇಮಠ ಕುಲಪತಿಗಳು, ಕ.ವಿ.ವಿ. ಧಾರವಾಡ, ಪಡಿಯಚ್ಚನ್ನು ತೆಗೆಯುವುದರಲ್ಲಿ ನೆರವಾದ ಪ್ರೋ. ಎಂ.ಎಸ್. ಇಂಚಲ ಮತ್ತು ತುರಮರಿಗ್ರಾಮದ ಪ್ರೊ.ಎಂ. ಆರ್. ಹಾರೂಗೊಪ್ಪ. (ಜಾಬಿನ ಸಾಯಿನ್ಸ್ ಕಾಲೇಜ್, ಹುಬ್ಬಳ್ಳಿ), ಹಾಗೂ ಈ ಶಾಸನ ಮತ್ತು ಕಲಭಾವಿ ಶಾಸನಗಳ ಕಾಲವಿಷಯದಲ್ಲಿ ನೆರವಾದ ಡಾ. ಆರ್. ಎನ್. ಗುರವ ಅವರಿಗೆ ಲೇಖಕನು ಕೃತಜ್ಞ.