ಬಿಂಜ ಶಬ್ದ ವಿಂಧ್ಯದ ತದ್ಭವವೆಂದು ಕೇಶಿರಾಜ ಹೇಳುತ್ತಾನೆ. ವಿಂಧ್ಯವು ಉತ್ತರ ಮತ್ತು ದಕ್ಷಿಣ ಭಾರತಗಳನ್ನು ವಿಭಾಗಿಸುವ ಪರಂಪರಾಗತ ಪರ್ವತಶ್ರೇಣಿ. ಅಗಸ್ತ್ಯ ವಿಂಧ್ಯವನ್ನು ದಾಟಿಬಂದ ಮೊದಲ ಗುಂಪಿನ ಆರ್ಯರ ಮುಂದಾಳು ಎಂಬುದು ನಮ್ಮ ಪೌರಾಣಿಕ ಕತೆಗಳ ಹೇಳಿಕೆ.

ಕನ್ನಡದ ಅನೇಕ ಕೃತಿಗಳಲ್ಲಿ ಬಿಂಜ ಶಬ್ದದ ಪ್ರಯೋಗವಿದೆ. ಕರ್ನಾಟಕ ಶಬ್ದಸಾರ, ಕರ್ನಾಟಕ ಶಬ್ದ ಮಂಜರಿ, ಕರ್ನಾಟಕ ಭಾರತ ನಿಘಂಟುಗಳು ಈ ಪದಕ್ಕೆ ಕೇವಲ ಅಡವಿ, ಅರಣ್ಯ ಎಂಬ ಸಾಮಾನ್ಯಾರ್ಥ ನೀಡಿವೆಯೆ ಹೊರತು ವಿಂಧ್ಯ ಪರ್ವತವೆಂಬ ವಿಶಿಷ್ಟಾರ್ಥ ನೀಡಿಲ್ಲ. ಪ್ರಾಚೀನ ಕೃತಿಗಳ ಹಲವು ಪ್ರಯೋಗಗಳು ಇದನ್ನು ಸಾಮಾನ್ಯಾರ್ಥದಲ್ಲಿಯೇ ಪ್ರಯೋಗಿಸಿವೆ. ಇಂಥ ಪ್ರಯೋಗಗಳು ಶಾಸನಗಳಲ್ಲಿ ಕೂಡ ಬಂದಿವೆ. ಇತ್ತೀಚೆಗೆ ಬೆಳಕಿಗೆ ಬಂದ ಸೊಲ್ಲಾಪುರದ ವಿವಾಹ ಪುರಾಣವೆಂದು ಹೆಸರಾದ (ಕ್ರಿ.ಶ. ೧೧೫೦-೬೦) ಶಾಸನದಲ್ಲಿ-

ಕಂಜಾಕ್ಷಿಸಬರಿಯರ್‌
ಬಿಂಜದೊಳೊಂದಾಗಿ
ಮಂಜರಿ ರಾಗದಿಂ ಪಾಡುತಿಪ್ಪರ್ ||
(ಸಂಶೋಧನ ವ್ಯಾಸಂಗ-೧-೫)

ಎಂದು ಹೇಳಿದೆ. ನಾಂದೇಡ ಜಿಲ್ಲೆ ತಡಖೇಲ ಊರಿನ ಕನ್ನಡ ಶಾಸನ (ಕ್ರಿ.ಶ. ೧೦೪೭) ಡಂಗ, ಸವಲಕ್ಕವಿಂಜ, ವರಾಳ, ಲಂಜಿ, ಚಕ್ರಗೊಟ್ಟ ಎಂಬ ದಕ್ಷಿಣ-ಮಧ್ಯಭಾರತದ ಕೆಲವು ಪ್ರದೇಶಗಳನ್ನು ಹೆಸರಿಸಿದೆ. ಇದರಲ್ಲಿನ ಸವಲಕ್ಕವಿಂಜ ಎಂದರೆ ವಿಂಜ ಬಿಂಜ ವಿಂಧ್ಯಪ್ರದೇಶವೇ. ಅಂದು ಈ ಪ್ರದೇಶ ವಿಂಧ್ಯ ಪರ್ವತವನ್ನೊಳಗೊಂಡಂತೆ ಅಕ್ಕಪಕ್ಕದಲ್ಲಿ ಒಂದೂಕಾಲಲಕ್ಷದಷ್ಟು ವಿಶಾಲವಾಗಿತ್ತು.

ವಿಂಧ್ಯದ ಪ್ರಯೋಗ ಸಂಸ್ಕೃತ ಸಾಹಿತ್ಯದಲ್ಲೂ ವಿಪುಲವಾಗಿದೆ. ಆದರೂ ಸಂಸ್ಕೃತದ ಪ್ರಖ್ಯಾತ ಕೋಶಕಾರೆನಿಸಿರುವ ಮೋನಿಯರ್‌ ವಿಲಿಯಮ್ಸ್‌ ಇದರ ಮೂಲವಾಗಲಿ ನಿಷ್ಪತ್ತಿಯಾಗಲಿ ತಿಳಿದಿಲ್ಲವೆಂದು ಹೇಳಿದ್ದಾರೆ. ಆಪ್ಟೆ ಮೊದಲಾದವರೂ ಇದರ ಮೂಲವನ್ನು ತಿಳಿಸಿಲ್ಲ. ಆದ್ದರಿಂದ ಇದು ಸಂಸ್ಕೃತ ಮೂಲದ ಪದವಲ್ಲ; ಆರ್ಯೇತರ-ದ್ರಾವಿಡ ಮೂಲದ್ದು. ಇದರ ಅರ್ಥ ಕಾಡು, ಅರಣ್ಯ ಎಂದೇ. ಹರಿಹರ ಕೇವಲ ಕಾಡು ಎಂಬರ್ಥದಲ್ಲಿ ವಿಂಧ್ಯ ಶಬ್ದವನ್ನು ಪ್ರಯೋಗಿಸಿದ್ದಾನೆ. ವಿಂಧ್ಯವಾಸಿನಿ ಎಂದಿರುವ ದುರ್ಗೆಯ ಹೆಸರಿಗೆ ಕಾಡಿನಲ್ಲಿ ವಾಸಿಸುವ ದೇವಿ ಎಂದು ಅರ್ಥ. ಈ ಪ್ರದೇಶದವನಾದ ಪ್ರಸಿದ್ಧ ವೈಯಾಕರಣಿ ವ್ಯಾಢಿ ಕೂಡ ವಿಂಧ್ಯ ವಾಸಿನ್‌ ಎಂದು ಪ್ರಸಿದ್ಧಿ ಪಡೆದವನು. ಆದ್ದಿರಿಂದ ಕಾನು, ಕುಂದ, ಗುಡ್ಡ, ಬೆಟ್ಟ, ಮಲೆ ಮೊದಲಾದವುಗಳಂತೆ ವಿಂಜ | ಬಿಂಜವೂ ಕನ್ನಡ ಮೂಲದ್ದು. (ತಮಿಳು ತೆಲುಗುಗಳಲ್ಲಿ ಇಂಥದೊಂದು ಪದವಿಲ್ಲ).

ಶಂಬಾ ಅವರು ಕನ್ನಡದ ಮೂಲನೆಲೆ ಗೋದಾವರಿಯ ಉತ್ತರದಲ್ಲಿ ಎಂದು ಹೇಳುತ್ತಾರೆ. ನರ್ಮದಾ ನದಿಯದಡದಲ್ಲಿದ್ದ ಕರ್ನಾಟಕ ರಾಕ್ಷಸನನ್ನು ಆರ್ಯರು ಓಡಿಸಿದರೆಂದು ಹೇಳುವಲ್ಲಿ ಐತಿಹಾಸಿಕ ಘಟನೆಯೊಂದು ಅಡಗಿದೆ ಎಂದೂ, ಈಗಿನ ಗುಜರಾತ ಪ್ರದೇಶದಲ್ಲಿ ಹಲವಾರು ಕನ್ನಡ ಮೂಲದ ಸ್ಥಳನಾಮಗಳಿವೆ ಎಂದೂ ಅವರು ತೋರಿಸಿಕೊಟ್ಟಿದ್ದಾರೆ. ಅವರೇ ಒಂದು ಕಡೆ ಗೋದಾವರಿಯ ಆಸುಪಾಸಿನಲ್ಲಿ ಬೀಡ್‌ ಎಂಬ ಅಚ್ಚಕನ್ನಡ ಊರ ಹೆಸರಿರುವುದನ್ನು ಇನ್ನೊಂದೆಡೆ ಇಂದಿನ ಮಾಳವಕ್ಕೆ ಮಲಯ ಎಂಬ ದ್ರಾವಿಡ ಮೂಲದ ಹೆಸರಿರುವುದನ್ನು ಉಲ್ಲೇಖಿಸಿದ್ದಾರೆ. ಕನ್ನಡಿಗರ ಮೂಲ ನೆಲೆ ವಿಂಧ್ಯದ ದಕ್ಷಿಣ ಬದಿಯಲ್ಲಿ ಇದ್ದುದರಿಂದಲೇ ಅವರು ಅದನ್ನು ಮಲೆ, ಕಾಡು, ವಿಂಜ | ಬಿಂಜ ಎಂದೂ ಕರೆಯುತ್ತಿದ್ದರು. ಶಂಬಾ ಅವರ ಪ್ರಮೇಯ ಬರಿ ಊಹೆಯಲ್ಲ ಎನ್ನಲು ಇದೂ ಒಂದು ಹೊಸ ಆಧಾರ.