ನಾಯಕ ಜನಾಂಗದಲ್ಲಿ ಹಲವಾರು ಒಳಪಂಗಡಗಳಿರುವುದು ಕಂಡುಬರುತ್ತದೆ. ಮುಂಬೈ ಕರ್ನಾಟಕದ ಊರುಬೇಡ ಮ್ಯಾಸಬೇಡ ಇತ್ಯಾದಿಯಾದ ಉಪಜಾತಿಗಳು ಕಂಡು ಬರುವುದಿಲ್ಲ. ಆದರೆ ಆ ಭಾಗದಲ್ಲಿ ಕಂಡುಬರುವ ದುರುಗಮರಗಿಯರು ದೊಂಬರು ಮುಂತಾದ ಕೆಲವು ಜಾತಿಗಳು ಬೇಡರ ಉಪಜಾತಿಗಳೇ ಎಂದು ಹೇಳಲಾಗುತ್ತದೆ. ಈ ಕೆಲವು ಉದ್ಯೋಗಗಳಲ್ಲದೆ ಗುಡ್ಡ ಬೆಟ್ಟಗಳ ಜೊತೆಗೆ ನಿಕಟ ಸಂಬಂಧವುಳ್ಳ ಹಣ್ಣು-ಹಂಪಲ ಆಯವುದು, ಕಟ್ಟಿಗೆ ತರುವುದು, ಜೇನು ಸಂಗ್ರಹಿಸುವುದು ಇವರ ಉದ್ಯೋಗಗಳಲ್ಲಿ ಕೆಲವು, ತಳವಾರ, ವಾಲಿಕಾರ ಕೋಲುಕಾರ ಮುಂತಾದ ಕೆಲವು ನೌಕರಿಗಳು ಇಂದು ಹೀನ ಸ್ಥಿತಿಗೆ ಇಳಿದಿದ್ದರೂ ಮೂಲತಃ ಇವು ತುಂಬ ಹೊಣೆಗಾರಿಕೆಯ ನಿಯೋಗಗಳಾಗಿದ್ದವು. ಈ ನಿಯೋಗಗಳು ಹೆಚ್ಚಾಗಿ ಬೇಡ ಜನಾಂಗದಿಂದಲೇ ನಿರ್ವಹಿಸಲ್ಪಡುತ್ತಿದ್ದವು. ಅನೇಕ ಊರುಗಳಲ್ಲಿ ಗೌಡಿಕೆ-ಅಥವಾ ಪಟೇಲಿಕೆ-ಇವರ ಕೈಯಲ್ಲಿ ಈಗಲೂ ಇದೇ. ಇಂದಿನ ಒಂದೆರಡು ಶತಮಾನಗಳ ದಾಖಲೆಗಳನ್ನು ಪರಿಶೀಲಿಸಿದರೆ ಪಾಳೆಯಗಾರರು ಅಥವಾ ಪುಟ್ಟ – ದೊಡ್ಡ ಸಂಸ್ಥಾನಿ ಕರು ಬಹು ಸಂಖ್ಯೆಯಲ್ಲಿ ಇವರೇ ಇದ್ದುದಾಗಿ ತಿಳಿದುಬರುತ್ತದೆ. ಬ್ರಿಟಿಶ್ ಭಾರತದಲ್ಲಿ ಇವರಿಗೆ ಮಹತ್ವ ದೊರೆಯದೇ ಇರಲು ಕಾಣರವೆಂದರೆ ಅಂದಿನ ದೇಶೀಯ ಸೈನ್ಯದಲ್ಲಿ ಬಹುಭಾಗ ಇವರೇ ಆಗಿದ್ದು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು ಬ್ರಿಟಿಶರು ನಮ್ಮ ದೇಶದಲ್ಲಿ ಸಿಕ್ಕರು, ಗುರ್ಖಾಗಳು ಮುಂತಾದ ಜನರನ್ನು ನಂಬಿ ಅವರನ್ನೇ ಹಿಂದಿನ ಒಂದು ಒಂದೂವರೆ ಶತಮಾನದಲ್ಲಿ ನಮ್ಮ ಪರಂಪರೆಯ ಸೈನಿಕ ವೃತ್ತಿಯಿಂದಲೂ ವಂಚಿತರಾದರು. ಈ ಮಾತು ಡೆಕ್ಕನಿನ ಪ್ರದೇಶಕ್ಕೆ ವಿಶೇಷವಾಗಿ ಅನ್ವಯಿಸುತ್ತದೆ. ಬ್ರಿಟಿಷ್ ಬರಹಗಾರರು ಹೈದರಾಲಿ ಮತ್ತು ಟಿಪ್ಪೂನಂಥ ದೇಶೀಯ ರಾಜರಲ್ಲಿದ್ದ ಸೈನ್ಯದ ಬಹುಭಾಗ ಬೇಡರೇ ಆಗಿದ್ದರೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಸಂಗತಿಗಳನ್ನು ಗಮನಿಸಿದರೆ ಬೇಡ ಜನಾಂಗದ ಪಾರಂಪರಿಕ – ಮುಖ್ಯ ಉದ್ಯೋಗ ಸೈನಿಕ ವೃತ್ತಿ ಎಂಬುದು ಸ್ಪಷ್ಟಪಡುತ್ತದೆ. ಸೈನಿಕ ವೃತ್ತಿಯ ಸಮೀಪದ ಇತರೆ ವೃತ್ತಿಗಳೆಂದರೆ ಅಂಗರಕ್ಷಣೆ, ನಗರ -ಗ್ರಾಮ ರಕ್ಷಣೆ, ಕೋಟೆ ಕೊತ್ತಲಗಳ ಕಾವಲು ಕೆಲಸ, ಗಸ್ತಿತಿರುಗುವುದು, ಬೇಟೆ ಇವು ಕೆಲವು.

ಪ್ರಾಚೀನ ಕಾಲದ ದಾಖಲೆಗಳಲ್ಲಿ ಈ ಜನಾಂಗವನ್ನು ಗುರುತಿಸುವಲ್ಲಿ ಮೇಲಿನ ಕೆಲವು ಅಂಶಗಳು ನಮ್ಮ ಸಹಾಯಕ್ಕೆ ಬರುತ್ತವೆ. ಅಮರಸಿಂಹ ತನ್ನ ಕೋಶದಲ್ಲಿ ಮ್ಲೇಚ್ಛ ಜಾತಿಗಳೆಂದು ಮಾಡಿರುವ ಪಟ್ಟಿಯಲ್ಲಿ ಕಿರಾತ, ಶಬರ, ವ್ಯಾಧ, ವಾಗುರಿ, ನಿಷಾದ, ಭಟ, ಪುಲಿಂದ, ಲುಬ್ಧಕ ಇವಿಷ್ಟನ್ನೂ ಸೇರಿಸಿದ್ದಾನೆ. ಇವು ಮೂಲದಲ್ಲಿ ಪ್ರತ್ಯೇಕ ಜನಾಂಗಗಳೇ ಆಗಿದ್ದರೂ ಇವುಗಳ ಅರ್ಥ ಹೇಳುವಾಗ ಇವೆಲ್ಲ ಬೇಡ ಶಬ್ದದ ಪರ್ಯಾಯಗಳಂತೆ ಗಣಿಸಲಾಗುತ್ತದೆ. ಈ ಜನಾಂಗದ ತಾಂತ್ರಿಕ ಸಂಗತಿಗಳನ್ನು ಕಲೆ ಹಾಕುವಲ್ಲಿ ಈ ಅಂಶವನ್ನೂ ಗಣಿಸಬೇಕಾದುದು ಅನಿವಾರ್ಯವೇ ಎನಿಸಿದೆ.

ಈ ಜನಾಂಗದಿಂದ ಉದಿಸಿ ಬಂದ ಪ್ರಸಿದ್ಧ ವ್ಯಕ್ತಿಗಳು, ರಾಜರು ಕಾಲಾಂತರದಲ್ಲಿ ಭಾರತೀಯ ಶಿಷ್ಟ ಮತಗಳನ್ನು ಸ್ವೀಕರಿಸಿ ಶ್ರೇಷ್ಠ ವರ್ಣದವರೆಂದು ಕರೆಯಿಸಿಕೊಂಡರು. ಹೀಗಾಗಿ ಈ ಜನಾಂಗದವರಿಗೆ ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ತಕ್ಕ ಪ್ರಾತಿನಿಧ್ಯ ಲಭಿಸಲಿಲ್ಲ ಮತ್ತು ಇವರ ವೈಭವೀಕೃತ ಚಿತ್ರಣ ಎಲ್ಲಿಯೂ ಗೋಚರಿಸಲಿಲ್ಲ. ಆದರೂ ಆಗಾಗ ಈ ಜನಾಂಗದ ವ್ಯಕ್ತಿಗಳು ಸಂಸ್ಕೃತ, ಪ್ರಾಕೃತ ಸಾಹಿತ್ಯದಲ್ಲಿ ಗೋಚರಿಸಿದ್ದಾರೆ. ಇಡೀ ಸಂಸ್ಕೃತ ಸಾಹಿತ್ಯಕ್ಕೇ ಆದಿ ಕವಿಯೆಂದು ಹೆಸರಾದ ವಾಲ್ಮೀಕಿ ರಾಮಾಯಣವನ್ನು ರಚಿಸಿ ಪ್ರಖ್ಯಾತನಾದ. ಈತ ಪ್ರಚೇತಸ ಮತ್ತು ಪ್ರಮ್ಲೋಚೆಯರ ಮಗನೆಂದೂ ತಮಸಾನದಿಯ ತೀರದಲ್ಲಿ ವಾಸವಾಗಿದ್ದನೆಂದೂ ಹೇಳಲಾಗಿದೆ. ಅದೇ ಕಾವ್ಯದಲ್ಲಿ ಬರುವ ಶಬರಿ, ಮಹಾಭಾರತದ ಧರ್ಮವ್ಯಾಧ ಮತ್ತು ಏಕಲವ್ಯ, ಜೈನ ಆರಾಧನಾ ಗ್ರಂಥದಲ್ಲಿ ಬಂದಿರುವ ಚಿರಾತಪುತ್ರ ಮುಂತಾದವರು ಈ ಜನಾಂಗದ ಪ್ರತಿನಿಧಿಗಳೇ.

ತಮಿಳುನಾಡಿನಲ್ಲಿ ಬಹುಮುಖ್ಯ ಆದೋಲನವಾಗಿ ಬೆಳೆದು ಬಂದ ಭಕ್ತಿ ಪಂಥದಲ್ಲಿ ಮೊದಲಬಾರಿಗೆ ಕೆಳವರ್ಗದ ನಾಯಕರು ತಮಿಳು ಸಾಹಿತ್ಯ ಕೃತಿಗಳಲ್ಲಿ ಸತ್ಪುರುಷರಾಗಿ ಚಿತ್ರಣಗೊಂಡಿದ್ದಾರೆ. ಅವರ ಪೈಕಿ ವಿಷ್ಣು ಭಕ್ತರಾದ ಪರಕಾಲ ಮತ್ತು ಶಿವಭಕ್ತನಾದ ಬೇಡರ ಕಣ್ಣಪ್ಪ ಇವರು ಬೇಡ ಜನಾಂಗದವರು. ಕನ್ನಡ ಸಾಹಿತ್ಯದಲ್ಲಿ ಕ್ರಾಂತಿಯನ್ನೆಸಗಿದ ೧೨ನೆಯ ಶತಮಾನದಲ್ಲಿ ಈ ಜಾತಿಯವರಾದ ಹಲವು ಜನ ಶರಣರು ತಮ್ಮವ್ಯಕ್ತಿಮಹಿಮೆಯಿಂದ ಪ್ರಸಿದ್ಧಿಗೆ ಬಂದಿದ್ದಾರೆ. ಮೇಲೆ ಈ ಜನಾಂಗದ ಉದ್ಯೋಗಗಳನ್ನು ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ಶರಣರನ್ನು ಈಗ ಗುರುತಿಸುವ ಯತ್ನ ಮಾಡಬಹುದು ಮತ್ತು ಅವರ ಸಂಬಂಧಿಯಾದ ಕೆಲವು ವಿವರಗಳನ್ನು ಕುರಿತು ಚರ್ಚಿಸಬಹುದು.

ಹರಿಹರ ಕವಿ ೬೩ ಪುರಾತನದಲ್ಲಿ ಒಬ್ಬನಾದ ಬೇಡರ ಕಣ್ಣಪ್ಪನನ್ನು ಕುರಿತು ಒಂದು ರಗಳೆಯನ್ನು ರಚಿಸಿದ್ದಾನೆ. ಕಣ್ಣಪ್ಪ ಪ್ರಾಕೃತನೆನಿಸಿದರೂ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುವ ಅವನ ಅಮರ ಚಿತ್ರ ಪ್ರಸ್ತುತ ರಗಳೆಯಲ್ಲಿ ಮೂಡಿ ಬಂದಿದೆ. ಹರಿಹರನಂತೆ ಮುಂದಿನ ಕಾಲದ ಅನೇಕ ಜನ ಕವಿಗಳು ಕಣ್ಣಪ್ಪನ ಮಹಿಮೆಯನ್ನು ಕೊಂಡಾಡಿದ್ದಾರೆ.

ಬಸವಣ್ಣನ ನಾಯಕತ್ವದಲ್ಲಿ ಅಂದು ಉಂಟಾದ ಸಾಮಾಜಿಕ, ಧಾರ್ಮಿಕ ಆಂದೋಲನದಲ್ಲಿ ಕೆಲಗಿನ ಜಾತಿನ ಅಸಂಖ್ಯ ಜನರು ಭಾಗವಹಿಸಿದರು. ಈ ಆಂದೋಲನ ಅಂದಿನ ಕರ್ನಾಟಕದಲ್ಲಿ ಬಸವಣ್ಣನವರಿಗಿಂತ ಕಿಂಚಿತ್ಪೂರ್ವದಲ್ಲಿಯೇ ಆರಂಭಗೊಂಡಿತ್ತೆಂದು ಕಾಣುತ್ತದೆ. ಅವರಿಗಿಂತ ಸ್ವಲ್ಪ ಹಿಂದೆ ಅಲ್ಲಲ್ಲಿ ಮಿನುಗುತ್ತಿದ್ದ ಕ್ರಾಂತಿಯ ಕಿಡಿಗಳು ಆಗಲೇ ಜನಮನವನ್ನು ಗೆದ್ದಿದ್ದರು. ಅವರಲ್ಲಿ ತೆಲುಗು ಜೊಮ್ಮಯ್ಯನೂ ಒಬ್ಬ : ಈತ ಬೇಟೆಯಾಡಿ ತಂದ ಮಾಂಸವನ್ನು ಮಾರಿ ಜಂಗಮಾರಾಧನೆ ಮಾಡುತ್ತಿದ್ದನೆಂದೂ ಚಾಲುಕ್ಯ ದೊರೆ ಪೆರ್ಮಾಡಿರಾಯನಲ್ಲಿ ಮಂತ್ರಿಯಾಗಿದ್ದನೆಂದೂ ತಿಳಿದು ಬಂದಿದೆ. ಇವನ ಸಮಕಾಲೀನನಾದ ಕೊಂಡುಗಳಿಯ ಕೇಶಿರಾಜ ಕಲ್ಯಾಣಕ್ಕೆ ಹೋದಾಗ ಮೊದಲು ಜೊಮ್ಮಯ್ಯನ ಮನೆಗೆ ಹೋಗಿ ಅಲ್ಲಿ ತನ್ನ ಲಿಂಗಪೂಜೆ ಮಾಡಲಾರದೆ ಹೊರಬಿದ್ದು ಬಂದು ತರುವಾಯ ಪುನಃ ಅವನಲ್ಲಿಗೆ ಹೋಗಿ ತನ್ನ ಇಷ್ಟಲಿಂಗ ಪೂಜೆ ಪೂರೈಸಿದನೆಂದು ಕಥೆಯಿದೆ. ಮುಂದಿನ ಕಾಲದ ಭೀಮಕವಿ, ಲಕ್ಕಣ್ಣದಂಡೇಶ, ವಿರೂಪಾಕ್ಷ ಪಂಡಿದ ಮೊದಲಾದವರು ಜೊಮ್ಮಯ್ಯನನ್ನು ಸ್ತುತಿಸಿದ್ದಾರೆ. ಇವನಂತೆಯೇ ಈ ಜಾತಿಯ ತೆಲುಗೇಶ ಮಸಣಯ್ಯ ಕೂಡ ೧೨ನೆಯ ಶತಮಾನದಲ್ಲಿದ್ದ ಪ್ರಸಿದ್ಧ ಶರಣ ಇವರಿಬ್ಬರು ವಚನಗಳನ್ನು ಬರೆದಿರುವರೆಂದು ವಿದ್ವಾಂಸರ ಅಭಿಪ್ರಾಯವಿದೆ. ಆದರೆ ಇವರಿಬ್ಬರು ವಚನಗಳನ್ನು ಬರೆದಿರುವರೆಂದು ವಿದ್ವಾಂಸರ ಅಭಿಪ್ರಾಯವಿದೆ. ಆದರೆ ಇವರಿಬ್ಬರ ಅಂಕಿತಗಳ ಬಗ್ಗೆ ಸ್ವಲ್ಪ ಗೊಂದಲವಿದೆ. ತೆಲುಗೇಶ್ವರ ಮತ್ತು ಶಂಭು ತೆಲುಗೇಶ್ವರ ಎಂಬ ಅಂಕಿತಗಳು ಇವರಿಗೆ ಸಂಬಂಧಪಟ್ಟಿವೆ.

ಈ ಶತಮಾನದ ಇನ್ನೊಬ್ಬ ವಚನ ಕಾರ ತಳವಾರ ಕಾಮಿದೇವ. ವಿರೂಪಾಕ್ಷ ಪಂಡಿತನು ತನ್ನ ಚೆನ್ನಬಸವ ಪುರಾಣದಲ್ಲಿ ಹೇಳಿರುವ ತಳವಾರ ರಾಮಯ್ಯನೆಂದರೆ ಪ್ರಾಯಶಃ ಇವನೇ. ಈತನ ವಚನಗಳ ಅಂಕಿತ ಕಾಮಹರಪ್ರಿಯ ರಾಮನಾಥ ಎಂದಿದೆ.

ದುರುಗಮುರಗಿಯರು ಬೇಡ ಜನಾಂಗದ ಒಂದು ಉಪಪಂಗಡವೆಂದು ತಿಳಿದುಬಂದಿರುವುದರಿಂದ ಪ್ರಸಿದ್ಧ ಶರಣ ಢಕ್ಕೆಯ ಮಾರಯ್ಯ ಅಥವಾ ಢಕ್ಕೆಯ್ಯ ಬೊಮ್ಮಯ್ಯನೆಂಬ ಪ್ರಮುಖ ವಚನಕಾರ ಈ ಜನಾಂಗದವನೇ ಆಗುತ್ತಾನೆ. ಈತ, ಶಿವನಿಂದ ಉರಿಗಣ್ಣು ಪಡೆದದ್ದಕ್ಕಾಗಿ ಗರ್ವದಿಂದ ಉಬ್ಬಿ ಹೋಗಿದ್ದ ಶಂಕರದಾಸಿ ಮಯ್ಯನ ಗರ್ವ ಇಳಿಸಿದನು. ತಾನು ಕುಣಿಸುತ್ತಿದ್ದ ಮಾರಿಯಿಂದ ಶಂಕರದಾಸಿಮಯ್ಯನು ಉರಿಗಣ್ಣನ್ನುನುಂಗಿಸಿ ಬಿಟ್ಟು ತರುವಾಯ ಅವಳಿಂದ ಈ ಕಣ್ಣನ್ನು ಪುನಃ ಕೊಡಿಸಿದನೆಂದು ಕತೆಯಿದೆ. ಈತನ ಅಂಕಿತ ‘ಕಾಲಾಂತಕ ಭೀಮೇಶ್ವರಲಿಂಗ’ ಎಂಬುದು. ಈತನ ೮೯ ವಚನಗಳು ಸಿಕ್ಕು ಪ್ರಕಟವಾಗಿದೆ. ಕೆಳವರ್ಗದಿಂದ ಬಂದ ವಚನಕಾರರಲ್ಲಿ. ಈತನದು ಪ್ರಮುಖವಾದ ಹೆಸರು. ಲಕ್ಕಣ್ಣ ದಂಡೇಶನು ಹೇಳುವ ಮಸಣದ ಮಾರಯ್ಯನೆಂಬವನ ಹೆಸರು ‘ಅಸಂಖ್ಯಾತ ಭಕ್ತ’ರ ಸಮುದಾಯದಲ್ಲಿದೆ. ಇದು ಢಕ್ಕೆಯ ಬೊಮ್ಮಯ್ಯನ ಇನ್ನೊಂದು ನಾಮಾಂತರವೋ ಅಥವಾ ಇವನೊಬ್ಬ ಬೇರೆಯೇ ಶರಣನೋ ಗೊತ್ತಾಗುವುದಿಲ್ಲ. ಲಕ್ಕಣ್ಣದಂಡೇಶ, ಈತನೂ ಮಾರಿಯನ್ನು ಹೊತ್ತು ತಿರುಗುತ್ತಿದ್ದನೆಂದು ಸ್ಪಷ್ಟವಾಗಿ ಹೇಳಿದ್ದಾನೆ. ಮುಂದಿನ ಕಾಲದ ಅನೇಕ ವೀರಶೈವ ಕವಿಗಳು ಢಕ್ಕೆಯ್ಯ ಬೊಮ್ಮಯ್ಯನನ್ನು ಸ್ತುತಿಸಿದ್ದಾರೆ. ಶೂನ್ಯಸಂಪಾದನೆಕಾರರು ಈತನ ವಚನಗಳನ್ನು ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ.

ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿ ಕೋಲುಶಾಂತಯ್ಯನು ಬಸವಣ್ಣನವರಲ್ಲಿ ‘ಕೋಲುವಿಡಿದು ಮಾಲಗಾರ ನಿಯೋಗ’ವನ್ನು ನಡೆಸುತ್ತಿದ್ದನೆಂದು ಹೇಳಲಾಗಿದೆ. ಈ ಮಾಲಗಾರ ನಿಯೋಗ ಎಂದರೆ ಈಗಿನ ‘ಕೋಲುಕಾರಿಕೆ’ಯ ಉನ್ನತರೂಪ ಎಂದರೆ ರಾಜಾಸ್ಥಾನ, ದೇವಾಲಯ ಮುಂತಾದೆಡೆಗಳಲ್ಲಿ ದಂಡಧಾರಿಗಳಾಗಿ ಸೇವೆ ಸಲ್ಲಿಸುವ ಕೈಂಕಯ್ಯ. ನಿಮ್ನ ವರ್ಗದ ಕೋಲುಕಾರಿಕೆ ಹೊಲೆಯ ಮುಂತಾದ ಜಾತಿಗಳವರಲ್ಲಿ ಈಗಲೂ ಇದೆ. ಬಸವಣ್ಣನವರಲ್ಲಿದ್ದ ಈ ಕೋಲು ಶಾಂತಯ್ಯ ಸ್ವಲ್ಪ ಉಚ್ಚಮಟ್ಟದವನಾಗಿದ್ದಂತೆ ಊಹಿಸಬಹುದು. ಈತನೂ ಒಬ್ಬ ನಾಯಕ ಜಾತಿಯ ಶರಣನೆಂದು ತೋರುತ್ತದೆ. ಇದು ನಿಜವಾದರೆ ಈ ಜನಾಂಗದ ವಚನಕಾರರಲ್ಲಿ ಈತನೇ ಅಗ್ರಪಟಕ್ಕೆ ಅರ್ಹನೆನಿಸುತ್ತಾನೆ. ೧೦೧ ವಚನಗಳು ಈತನವೆಂದು ಈವರೆಗೆ ಗುರುತಿಸಲ್ಪಟ್ಟಿವೆ. ಈತನ ‘ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ’ ಎಂಬುದು.

ಮೇಲಿನ ಕೆಲವು ಜನ ವಚನಕಾರರಲ್ಲಿ ಇಲ್ಲಿ ಇನ್ನೂ ಹಲವರನ್ನು ಈ ಪಟ್ಟಿಗೆ ಸೇರಿಸಲು ಶಕ್ಯವಿದೆ. ಅವರಲ್ಲಿ ಪಡಿಹಾರಿ ಉತ್ತಣ್ಣ, ಪಡಿಹಾರಿ ಬಸವಯ್ಯ. (ಚನ್ನಬಸವ ಪುರೋಣೋಕ್ತರು.) ಉಗ್ಗಡಿಸುವ ಗಬ್ಬಿದೇವಯ್ಯ, ಎಚ್ಚರಿಕೆ ಕಾಯಕದ ಮುಕ್ತುನಾಥಯ್ಯ, ರಕ್ಕಸ ಬೊಮ್ಮಯ್ಯ ಅಂಥವರಲ್ಲಿ ಕೆಲವರು. ಕೊಟ್ಟೂರು ಬಸವೇಶ್ವರ ಪುರಾಣದಲ್ಲಿ ಬರುವ ಮೋಳಿಗೆಯ ಚಿಕ್ಕಯ್ಯ ಕೂಡ ಇದೇ ಜನಾಂಗದವನು. ಈತ ಮೊದಲು ಬೇಟೆಯಾಡುವವನಾಗಿದ್ದು ತರುವಾಯ ಮೋಳಿಗೆ ಎಂದರೆ ಕಟ್ಟಿಗೆ ತರುವ ಕಾಯಕ ಕೈಕೊಂಡಿದ್ದರು. ಲಕ್ಕಣ್ಣ ದಂಡೇಶನು ತನ್ನ ಶಿವತತ್ವ ಚಿಂತಾಮಣಿಯಲ್ಲಿ ಸುಗ್ಗನ ಹಳ್ಳಿಯ ಮಹಲಿಂಗದೇವಯ್ಯ ಮತ್ತು ಚಂಪಾವತಿಯ ವೀರು ನಾಯಕ ಜನಾಂಗದ ಶರಣರೆಂದು ಹೇಳಿದ್ದಾನೆ. ಇವರ ಜೀವನದ ಹೆ‌ಚ್ಚಿನ ವಿವರಗಳು ತಿಳಿದು ಬಂದಿಲ್ಲ. ಸೋಮನಾಥ ಪುರಾಣ ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿ ಹೇಳಿರುವ ಮಾತಂಗತಮ್ಮ ಅಥವಾ ನನ್ನಯ್ಯನೆಂಬ ಶಿವಭಕ್ತನ ಹೆಸರನ್ನು ಕೂಡ ಇಲ್ಲಿ ಸ್ಮರಿಸಬಹುದು. ಸಿದ್ದನಂಜೇಶನು ತನ್ನ ಗುರುರಾಜ ಚಾರಿತ್ರದಲ್ಲಿ ದೇವನಾಯಕನೆಂಬ ಶಿವಭಕ್ತನು ಅಂತ್ಯಜ ಜಾತಿಯಲ್ಲಿ ಹುಟ್ಟಿದೆ ಒಬ್ಬ ಚಿಕ್ಕ ರಾಜನೆಂದು ತಿಳಿಸಿದ್ದಾನೆ ಎಂದರೆ ಇವನೂ ಒಬ್ಬ ನಾಯಕ ಜನಾಂಗದ ಶಿವಭಕ್ತನೆಂದು ಸದ್ಯಕ್ಕೆ ಪರಿಗಣಿಸಲಡ್ಡಿಯಿಲ್ಲ.

ಹೀಗೆ ಕೆಳವರ್ಗದ ವಚನಕಾರರ‍ಲ್ಲಿ ನಾಯಕ ಜನಾಂಗದವರು ತುಂಬ ಪ್ರಮುಖರಾಗಿದ್ದಾರೆಂಬ ಅಂಶ ಸ್ಪಷ್ಟವಾಗುತ್ತದೆ.

ಲಕ್ಕಣ್ಣ ದಂಡೇಶಾದಿಗಳು ಹೇಳಿರುವ ಗುಂಡಬ್ರಹ್ಮಯ್ಯ (ರು) ಇದೇ ಜಾತಿಯ ಶರಣ (ರು) ಎಂದು ಹಲವು ಜನ ವಿದ್ವಾಂಸರ ಅಭಿಮತ. ಇವರು (ಓರಂಗಲ್ಲಿನ ಸಮೀಪದ) ಗೋಚನ ಪುರದವರು, ಬೇಡರಾಜರಲ್ಲಿ ಪ್ರಚಲಿತವಾಗಿದ್ದ ಶೂಲದ ಹಬ್ಬದ ಆಚರಣೆ ಇವರಿಬ್ಬರೂ ಅಂದು ಶಿವನಿಗಾಗಿ ಶೂಲವೇರಿದ್ದರ ಪ್ರತೀಕವೆಂದು ಭಾವಿಸಲಾಗುತ್ತದೆ.

ಕಂಪಲಿಯ ರಾಜ್ಯ ಈ ಜನಾಂಗದ್ದೇ ಆಗಿತ್ತು. ಆ ಮನೆತನ ಕ್ರಿ.ಶ.ಸು.೧೩೨೭ ರಲ್ಲಿ ಮಹಮದೀಯರಿಂದ ನಾಶವಾಯಿತು. ಅದರ ಅವಶೇಷಗಳಿಂದಲೇ ವಿಜಯನಗರ ಸಾಮ್ರಾಜ್ಯ ಉದಿಸಿ ಬಂತು. ಅದರ ಉಚ್ಛ್ರಾಯ ಕಾಲದಲ್ಲಿ ಕಂಪಲಿ ಅಥವಾ ಕುಮ್ಮಟ ದುರ್ಗದ ದೊರೆ ಕಂಪಿಲರಾಯ ಮತ್ತು ಅವನ ಮಗ ಕುಮಾರರಾಮನ ಜೀವನವನ್ನು ಪ್ರಧಾನ ವಸ್ತುವಾಗುಳ್ಳ ಕುಮಾರರಾಮನ ಸಾಂಗತ್ಯ ಕೃತಿಗಳು ಹುಟ್ಟಿಬಂದವು. ಕುಮಾರರಾಮನ ವೀರ ಮತ್ತು ಶೌಚಗುಣಗಳನ್ನು ಚಿತ್ರಿಸುವ ಈ ಕಥೆಯನ್ನು ನಂಜುಂಡ, ಪಂಚಾಳಗಂಗ ಮತ್ತು ಮಹಲಿಂಗಸ್ವಾಮಿ ಇವರು ಬೇರೆ ಬೇರೆಯಾಗಿ ಎತ್ತಿಕೊಂಡು ಸಾಂಗತ್ಯ ಕಾವ್ಯಗಳನ್ನು ರಚಿಸಿದ್ದಾರೆ. ಇದಲ್ಲದೆ ೧೭ನೆಯ ಶತಮಾನದ ಬಸವಣಯ್ಯ ಎಂಬವನು ರಚಿಸಿದ ನವರತ್ನ ಮಾಲಿಕೆ ಎಂಬ ಕಾವ್ಯದಲ್ಲಿ ಕೂಡ ಕುಮಾರರಾಮನಿಗೆ ಸಂಬಂಧಸಿದ ವಿವರಗಳು ಬಂದಿವೆ. ಕುಮಾರರಾಮನ ಅಜ್ಜ ಮುಮ್ಮಡಿ ಸಿಂಗ, ತಂದೆ ಕಂಪಿಲರಾಯ, ತಾಯಿ ಹರಿಹರದೇವಿಯರು ಐತಿಹಾಸಿಕ ವ್ಯಕ್ತಿಗಳೆಂಬುದು ಶಾಸನಗಳಿಂದ ಸ್ಥಿರಪಟ್ಟಿದೆ. ನಂಜುಂಡ ತನ್ನ ಕೃತಿಯಲ್ಲಿ ಕುಮಾರರಾಮನ ಜೊತೆಯಲ್ಲಿದ್ದ ಅನೇಕ ವೀರರ ಹೆಸರುಗಳನ್ನು ಹೇಳಿದ್ದಾನೆ. ಆತನ ಆಪ್ತ ಮಿತ್ರರಲ್ಲಿ ದೇವಿಶೆಟ್ಟಿಲಿಂಗ, ಕೊಳ್ಳಿಯನಾಗ, ಕಾಳಾಂಜಿಯ ಕಂಪ, ಗಿಂಡಿಯ ಲಕ್ಕ, ಅಕ್ಕಸಾಲೆಯ ಚಿಕ್ಕ, ಹರಿಯಸಿಂಗ ಭಟರಲ್ಲಿ ಅಗ್ಗಳೆಯರೆನಿಸುವ ಹೊಲೆಯರ ಹುಳ್ಳ, ಮಾದಿಗ ಹಂಪ ಮುಂತಾದವರನ್ನು ಅಲ್ಲಿ ಕಾಣಬಹುದು. ಇವರಲ್ಲಿ ನಾಗ, ಕಂಪ ಮತ್ತು ಲಕ್ಕ ಬೇಡ ಜನಾಂಗದವರೇ ಆಗಿರುವಂತೆ ಕಾಣುತ್ತದೆ. ಸೈನಿಕ ವೃತ್ತಿಯಲ್ಲಿ ಮೇಲು ಕೀಳು ಯಾವುದೂ ಕೆಲಸಕ್ಕೆ ಬಾರದು. ಜಾತಿ ಪೌರುಷವೊಂದೇ ಅಲ್ಲಿ ನಡೆಯುವ ನಾಣ್ಯ. ಹೀಗಾಗಿ ಎಲ್ಲ ಜಾತಿಯ ವೀರರು ಇಲ್ಲಿ ಉಲ್ಲೇಖಗೊಂಡಿದ್ದಾರೆ. ಈ ಕಾವ್ಯದಲ್ಲಿ ಕಾಟಣ್ಣ ಅಣ್ಣ ಭೈರವ, ಅಕ್ಕಮಾರಮ್ಮ ತಂಗಿ ಸಿಂಗಮ್ಮ ಮುಂತಾದ ಹಲವು ಜನರು ರಾಮನ ಪರಿವಾರದಲ್ಲಿದ್ದರೆಂದು ನಂಜುಂಡ ಹೇಳಿದ್ದಾನೆ. ಕಾಟಣ್ಣನ ಪರಾಕ್ರಮವನ್ನು ಪ್ರತ್ಯೇಕವಾಗಿಯೇ ವಿವರಿಸಿದ್ದಾನೆ.

ಕುಮ್ಮಟ ದುರ್ಗ ಮತ್ತು ಕಂಪಿಲರಾಜ್ಯ ನಾಶವಾದ ಮೇಲೆ ಕೂಡ ಈ ರಾಜ್ಯದಲ್ಲಿದ್ದು ಹಲವು ಜನ ಅಧಿಕಾರಿಗಳು ಮುಂದಿನ ವಿಜಯನಗರ ಸಾಮ್ರಾಜ್ಯ ಕಟ್ಟುವಲ್ಲಿ ಆಧಾರ ಸ್ತಂಭಗಳಾಗಿ ನಿಂತರು. ಹುಕ್ಕ-ಬುಕ್ಕರು ಇಲ್ಲಿಯೇ ಅಧಿಕಾರಿಗಳಾಗಿದ್ದರೆಂಬ ಪ್ರವಾದವೂ ಇದೆ. ಕ್ರಿ.ಶ. ೧೪೦೭ರ ಸಂಗೂರ ಶಿಲಾಶಾಸನದಲ್ಲಿ ಮಾದರಸನೆಂಬವನು ಕುಮಾರರಾಮದೇವರ ಮೂರ್ತಿ ಸ್ಥಾಪಿಸಿದನೆಂಬ ವಿಷಯ ಹೇಳಿದೆ. ಈತನ ತಂದೆಯ ಹೆಸರು ಸೇನಾಧಿಪತಿ ಸಂಗಮನೆಂತಲೂ ಈ ಸಂಗಮನ ಅಜ್ಜನಾಗಿದ್ದ ಬೈಚವೆಗ್ಗಡೆ ಕಂಪಿಲರಾಯನ ಬಾಹತ್ತರ ನಿಯೋಗಾಧಿಪತಿ (ಮಂತ್ರಿ) ಯಾಗಿದ್ದನೆಂತಲೂ ಪ್ರಸ್ತುತ ಅದೇ ಶಾಸನ ತಿಳಿಸುತ್ತದೆ. ಈತನು ಕುಮಾರರಾಮನ ಸಾಂಗತ್ಯದಲ್ಲಿ ಉಲ್ಲೇಖಿತನಾದ ಮಂತ್ರಿ ಬೈಚಪ್ಪನೇ ಇರಬೇಕೆಂದು ಈಗಾಗಲೇ ಡಾ.ಜಿ. ವರದರಾಜ ರಾಯರಂಥ ವಿದ್ವಾಂಸರು ಊಹಿಸಿದ್ದಾರೆ ತರುವಾಯದಲ್ಲಿ ಕುಮಾರರಾಮ ಬೇಡರಿಗೆ ಕುಲದೇವರಾಗಿ ಪೂಜಿತನಾದ. ಇಲ್ಲಿ ಬೈಚಪ್ಪನ ಮರಿಮಗನೂ ಕೂಡ ಕುಮಾರ ರಾಮನನ್ನು ಪೂಜಿಸಿರುವುದು ನಿಶ್ಚಿತವಿರುವುದರಿಂದ ಮಂತ್ರಿ ಬೈಚ್ಚಪ್ಪ ಕೂಡ ಬೇಡ ಜನಾಂಗದವನೇ ಆಗಿದ್ದನೆಂಬುದು ಪ್ರಕಟವಾಗುತ್ತದೆ. ಬೈಚಪ್ಪನ ವ್ಯಕ್ತಿತ್ವದ ಹಿರಿಮೆ ಕಾವ್ಯಗಳಲ್ಲಿ ಸುಂದರವಾಗಿ ಚಿತ್ರವಾಗಿದೆ. ಇವರ ರಾಜಕಾರ್ಯ ನೈಪುಣ್ಯ, ಮುಂದಾಲೋಚನೆ, ಸ್ವಾಮಿನಿಷ್ಠೆಗಳು ಈತನೊಬ್ಬನು ಅಸಾಮಾನ್ಯ ಪುರುಷನನ್ನಾಗಿ ಮಾಡಿವೆ. ಕುಮಾರರಾಮ ರತ್ನಾಜಿಯ ಕುತಂತ್ರದಿಂದ ಪಾರಾದದ್ದು ಈತನ ಮುಂದಾಲೋಚನೆಯಿಂದಲೇ.

ಕುಮಾರರಾಮನ ವ್ಯಕ್ತಿಮತ್ತೆಗೆ ಕಳೆಯೇರಿದ್ದು ಅವನ ಮಲತಾಯಿಯಾದ ರತ್ನಾಜಿಯ ವಿಕೃತವೃತ್ತಿಯಿಂದ. ಇವಳು ಡೊಂಬರವಳು ಎನ್ನುವ ಪ್ರವಾದವಿದೆ. ಕೆಲವರ ಅಭಿಪ್ರಾಯದಲ್ಲಿ ಡೊಂಬರು ಕೂಡ ಈ ಜನಾಂಗದ ಒಂದು ಒಳಪಂಗಡ. ಆದ್ದರಿಂದ ಕಂಪಿಲರಾಯ ಇವಳನ್ನು ಲಗ್ನವಾದದ್ದರಲ್ಲಿ ವಿಶೇಷವೇನೂ ಇಲ್ಲ. ಆದರೆ ತನ್ನ ಮಗ ರಾಮನಿಗೆಂದು ಮೊದಲು ಹೇಳಿ ತರುವಾಯ ತಾನೇ ಅವಳನ್ನು ಲಗ್ನವಾದನೆಂದು ಕೂಡ ಕಥಾಂತರವಿದೆ. ಇವೆಲ್ಲ ಅಂಶಗಳಲ್ಲಿ ವ್ಯಕ್ತಿಗಳ ಅನಿಸಿಕೆ-ಭಾವನೆಗಳಿಗಿಂತ ಅಧಿಕವಾಗಿ ಕಾಲ ಪುರುಷನ ಮಸಲತ್ತು ಕೂಡ ಅಡಗಿದೆ. ಒಟ್ಟಿನಲ್ಲಿ ೧೪ನೆಯ ಶತಮಾನದ ಪೂರ್ವರ್ಧದಲ್ಲಿ ಬಾಳಿ ಬೆಳಗಿ ಪರದಾರ ಸೋದರನೆಂದೂ ಅಜೇಯ ವೀರನೆಂದೂ ಕವಿಗಳಿಂದ ವರ್ಣಿತನಾದ ಕುಮಾರ ರಾಮ ಕರ್ನಾಟಕದ ಅಪೂರ್ವ ಮಹಾಪುರುಷರ ಸಾಲಿಗೆ ಸೇರಿದ್ದಾನೆ.

ವಿಜಯನಗರ ಪತನಾನಂತರ ಕರ್ನಾಟಕದಲ್ಲಿ ಅನೇಕ ಚಿಕ್ಕ ದೊಡ್ಡ ಪಾಳೆಯ ಪಟ್ಟುಗಳು, ರಾಜ್ಯಗಳು ಉಳಿದುಕೊಂಡು ಬಂದವು. ಹಾಗಲವಾಡಿ, ಹರಪನಹಳ್ಳಿ, ಚಿತ್ರದುರ್ಗ ಮುಂತಾದ ಪಾಳೆಯಗಾರ- ರಾಜರು ಟಿಪ್ಪು, ಬ್ರಿಟೀಶರು, ಮರಾಠರು ಮುಂತಾದವರು ಪ್ರಬಲಾಗುತ್ತಿರುವಂತೆಯೆ ತಮ್ಮ ರಾಜ್ಯಗಳನ್ನು ನಡೆಸುತ್ತ ಬಂದರು. ಈ ಸಮಯದಲ್ಲಿ ಹುಟ್ಟಿದ ಹಲವಾರು ಸಾಹಿತ್ಯ ಕೃತಿಗಳಲ್ಲಿ ಬೇಡಜನಾಂಗದ ಹಲವಾರು ವ್ಯಕ್ತಿಗಳು ಉಲ್ಲೇಖ ಪಡೆದಿದ್ದಾರೆ. ಸರಜಾಹನುಮೇಂದ್ರನಾಥನಂಥವರನ್ನು ಕುರಿತು ಸ್ವತಂತ್ರ ಕೃತಿಗಳೂ ಹುಟ್ಟಿವೆ. ಇಂಥ ಕಾವ್ಯಗಳು, ಜಾನಪದ ಸಾಹಿತ್ಯ, ಬಖೈರುಗಳು ಕೈಪಿಯತ್ತುಗಳು ಮುಂತಾದ ಸಾಮಗ್ರಿಯನ್ನು ವಿವರವಾಗಿ, ಅಧ್ಯಯನ ಮಾಡಿದರೆ ಇಂಥವರು ಇನ್ನು ಹಲವು ಜನರು ಬೆಳಕಿಗೆ ಬರುತ್ತಾರೆ. ಈ ದಿಶೆಯಲ್ಲಿ ಮುಂದುವರಿಯುವವರುಬೇಕಾಗಿದೆ.