ಈಗಿನ ಹಾನಗಲ್ ತಾಲೂಕಿನ ಒಂದು ಕುಗ್ರಾಮ ಕನ್ನೇಶ್ವರ. ಹಾವೇರಿಯಿಂದ ಸಂಗೂರಿನ ಮೇಲೆ ಹಾಯ್ದು ತಿಳುವಳ್ಳಿಯನ್ನು ಸೇರುವ ಒಂದು ದೀರ್ಘ ಕಚ್ಚಾ ರಸ್ತೆಯಿದೆ. ಕಲಕೇರಿ, ಬ್ಯಾತನಾಳ ಮುಂತಾದ ಶಾಸನ-ಪ್ರಾಚ್ಯವಸ್ತುಗಳಿರುವ ಊರುಗಳು ಈ ರಸ್ತೆಯಲ್ಲಿ ಸಿಕ್ಕುತ್ತವೆ. ಬ್ಯಾತನಾಳದಿಂದ ಮುಂದುವರಿದರೆ ಈ ದಾರಿಯಲ್ಲಿ ಕೂಸಲೂರ ಎಂಬ ಹಳ್ಳಿಯಿದೆ. ಇದರ ಪಶ್ಚಿಮಕ್ಕೆ ಸು. ೨.೫ ಕಿಲೋಮೀಟರ್ ಕಾಲುದಾರಿಯಲ್ಲಿ ಹೋದರೆ ಕನ್ನೇಶ್ವರ ಎಂಬ ಕುಗ್ರಾಮವಿದೆ. ವರದಾ ನದಿಯ ಪೂರ್ವ ಬದಿಯಲ್ಲಿರುವ ಈ ಚಿಕ್ಕ ಊರು ಇತಿಹಾಸ ಕಾಲದಲ್ಲಿ ಒಂದು ಮಹತ್ವದ ಸ್ಥಾನವಾಗಿರುವಂತೆ ತೋರುತ್ತದೆ. ಬ್ರಿಟೀಷರ ವಿರುದ್ಧ ಹೋರಾಡಿದ ಕೊರಗ ಜಾತಿಯ ಕನ್ನೇಶ್ವರರಾಮ ಇದೇ ಊರಿನವ.

ಊರಿಂದ ಪಶ್ಚಿಮ ಬದಿಗೆ ವರದಾ ನದಿಗೆ ಹೋಗುವ ಕಾಲುದಾರಿಯ ಬಲ ಬದಿಯ ದಿನ್ನೆಯೊಂದರ ಮೇಲೆ ಕನ್ನೇಶ್ವರ ದೇವಸ್ಥಾನವಿದೆ. ಇದರ ಪರಿಸರದಲ್ಲಿ ದೊಡ್ಡ ಗಾತ್ರದ ಸು. ೧೨ ಇಂಚು ಉದ್ದದ ಇಟ್ಟಿಗೆಗಳಿರುವ ಪ್ರಾಚೀನ ಕಾಲದ ರಚನೆಗಳಿರುವಂತೆ ತೋರುತ್ತದೆ. ಇಲ್ಲಿ ಇಡಿಯಾದ ಇಟ್ಟಿಗೆಗಳು ನನಗೆ ದೊರೆಯಲಿಲ್ಲ. ಆದರೆ ಸ್ಥಳೀಯರ ಹೇಳಿಕೆಯಂತೆ ಅಲ್ಲಿ ಇಟ್ಟಿಗೆಯ ರಚನೆ ಮೊದಲು ಇದ್ದುದಾಗಿ ತಿಳಿದುಬಂತು. ಇವು ಸಾತವಾಹನರ ಕಾಲದ ಇಟ್ಟಿಗೆಗಳಿರಬಹುದೇ ಎನ್ನುವ ಸಂಶಯ ಉಂಟಾಗುವಂತಿದೆ.

ಮೇಲೆ ತಿಳಿಸಿದ ಕನ್ನೇಶ್ವರದೇವಾಲಯ ಮುಂಚೆ ಇಟ್ಟಿಗೆಯಿಂದ ಕಟ್ಟಿದ್ದು ತರುವಾಯ ಕಲ್ಲಿನ ಕಟ್ಟಡವಾಗಿ ಅದನ್ನು ಪರಿವರ್ತಿಸಲಾಗಿದೆ. ಎಂದರೆ ಇಟ್ಟಂಗಿಯ ಒಳಗೋಡೆಗಳಿಗೆ ಕಲ್ಲಿನ ಕಟ್ಟಡದ ಹೊರಹೊದಿಕೆ ಜೋಡಿಸಲಾಗಿದೆ. ದೇವಾಲಯಕ್ಕೆ ಶಿಖರ ಕಳಸ ಇತ್ಯಾದಿಗಳಿಲ್ಲ. ಬದಿಯಲ್ಲಿ ದೊಡ್ಡ ಕಲ್ಯಾಣಿಯಿದೆ. ದೇವಾಲಯದ ಮುಂಭಾಗದ ದಕ್ಷಿಣ ಬದಿಯಲ್ಲಿ ಎರಡು ಮತ್ತು ಕಲ್ಯಾಣಿ ಅಥವಾ ಹೊಂಡದ ಪಶ್ಚಿಮ ಬದಿಯಲ್ಲಿ ಒಂದು ಹೇಗೆ ಮೂರು ಶಿಲಾಶಾಸನಗಳನ್ನು ನಿಲ್ಲಿಸಿದೆ.

ಇವುಗಳಲ್ಲಿ ಮೊದಲನೆಯದು ಕ್ರಿ.ಶ. ೧೦೦೫ ನೆಯ ವರ್ಷಕ್ಕೆ ಸರಿಹೋಗುವ ಶಾ.ಶ. ೯೦೫ ನೆಯ ಶುಭಕೃತ್ ಸಂವತ್ಸರ ಉತ್ತರಾಯಣ ಸಂಕ್ರಾಂತಿ ವ್ಯತಿಪಾತ, ಆದಿತ್ಯವಾದ ಎಂಬ ವಿವರವಾದ ಮಿತಿಯುಳ್ಳದ್ದಾಗಿದೆ. ೨೪ ಸಾಲುಗಳ ಬರಹವುಳ್ಳ ಇದರ ಕೆಳಭಾಗ ನೆಲದಲ್ಲಿ ಹೂಳಿದೆ.

ಮೇಲಿನ ಶಾಸನದ ಎಡಬದಿಯಲ್ಲಿ ನಿಲ್ಲಿಸಿರುವ ಎರಡನೆಯ ಶಾಸನ ಚಾ.ವಿ. ವರ್ಷದ ೯ನೆಯ ಕ್ರೋಧನ ಸಂವತ್ಸರ ಆಶ್ವಯುಜ ಅಮವಾಸ್ಯೆ ಆದಿತ್ಯವಾರ ವ್ಯತಿಪಾತ ಎಂದು (ಕ್ರಿ.ಶ. ೧೦೮೫-೮೬ ಕ್ಕೆ ಹೊಂದುವ) ಮಿತಿ ಹೇಳಿದೆ. ೫೨ ಸಾಲುಗಳ ಈ ಶಾಸನ ಮೇಲ್ಭಾಗದಲ್ಲಿ ೯ ಸಾಲುಗಳಷ್ಟು ಪಾಠ ನಷ್ಟವಾಗಿದೆ.

ಹೊಂಡದ ಏರಿಯ ಮೇಲೆ ನಿಲ್ಲಿಸಿದ ೩ನೆಯ ಶಾಸನ ೩೨ ಸಾಲು ಬರಹವುಳ್ಳದ್ದಾಗಿದ್ದು ಮೇಲ್ಭಾಗದ ೭ ರಿಂದ ೧೦ನೆಯ ಸಾಲಿನಷ್ಟು ಎಡಭಾಗ ಸವೆದು ಹೋಗಿದೆ. ಇದರಲ್ಲಿ ಚಾ.ವಿ. ವರ್ಷದ ೪೭ನೆಯ ಶುಭಕೃತು ಸಂವತ್ಸರದ ಮಾಘ ಶು. ೧೧ ಆದಿತ್ಯವಾರ ಎಂದು ಮಿತಿ ಹೇಳಿದೆ. ಒಟ್ಟು ೩೨ ಸಾಲುಗಳ ಬರಹವಿದೆ.

ಕ್ರಿ.ಶ ೧೦೦೫ರ ಮೊದಲ ಶಾಸನವನ್ನು ಗಮನಿಸಿರುವ ಫ್ಲೀಟ್ ತಮ್ಮ ಡೈನ್ಯಾ ಸ್ಟೀಸ್ ಆಫ್ ಕ್ಯಾನರೀಸ್ ಡಿಸ್ಟ್ರಿಕ್ಟ್ಸ್ ಕೃತಿಯಲ್ಲಿ ಕೆಲವು ವಿವರಗಳನ್ನು ನಮೂದಿಸಿದ್ದಾರೆ. ಇನ್ನೆರಡು ಶಾಸನಗಳನ್ನು ಕುರಿತು ಹೇಳಿಲ್ಲ, ಶಾಸನಗಳ ಪಠ್ಯ ಇದೇ ಮೊದಲು ಬಾರಿ ಪ್ರಕಟವಾಗುತ್ತಿದೆ.

ಕ್ರಿ.ಶ. ೧೦೦೫ ರಲ್ಲಿ ಕಲ್ಯಾಣ ಚಾಲಯಕ್ಯ ದೊರೆ ಇಱೆವ ಬೆಡಂಗ ಸತ್ಯಾಶ್ರಯ ಚಾಲುಕ್ಯ ಚಕ್ರವರ್ತಿಯಾಗಿ ಆಳುತ್ತಿದ್ದ. ಈತನ ಕಾಲಾವದಿಯ ಶಾಸನಗಳು ದೊರೆತಿರುವುದು ಬಹಳ ಕಡಿಮೆಯಾಗಿರುವುದರಿಂದ ಪ್ರಸ್ತುತ ಶಾಸನಕ್ಕೆ ವಿಶೇಷ ಮಹತ್ವ ವಿದೆಯೆಂದು ಬೇರೆ ಹೇಳಬೇಕಾಗಿಲ್ಲ. S.I.I. ಸಂ. ೯ ರಲ್ಲಿ-ಸಂ. ೪೮೮ ರಿಂದ ೫೪ ರವರೆಗೆ, ೭ ಶಾಸನಗಳು ಹೊಟ್ಟೂರು ಶಾಸನ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ತಾಮ್ರಪಟ (ಕ.ಭಾ) ಮೊದಲಾದವು ಆತನ ಇತರ ಕೆಲವು ಶಾಸನಗಳು.

ಇರಿವಬೆಡಂಗ ಸತ್ಯಾಶ್ರಯನನ್ನು ಕುರಿತಂತೆ ರನ್ನಕವಿಯ ಗದಾಯುದ್ಧದಲ್ಲಿ ಮುಂದಿನ ಒಂದು ಮಹತ್ವದ ವೃತ್ತ ಕಂಡು ಬರುತ್ತದೆ.

ಬರೆಗರ್ಭಕ್ಕರಿ ವಸ್ತು ವಾಹನ ಚಯಂ ಕೆಯ್ಗೆಯ್ದೆ ವಂದತ್ತು ಪು
ಟ್ಟೆರಣೋತ್ಸಾಹದೆ ಚಕ್ರವರ್ತಿ ವಿಭವಂ ಪುಟ್ಟಿತ್ತು ಕೆಯ್ವೆತ್ತಿನಿಂ
ದಿರೆ ಪತ್ತಿತ್ತು ಸಮಸ್ತಧಾತ್ರಿ [ಬಳೆಯಲ್ಕೆಂತುಂ] ದಿಶಾದಂತಿಗ
ಳ್ಪರೆಗಂ ತಂದೆಯ ಕೀರ್ತಿಯುಂ ಬಳೆದುದೇಂ ಸತ್ಯಾಶ್ಯಂ
ಧನ್ಯನೋ
(ಗ.ಯು. ಪ್ರಥಮಾಶ್ವಾಸ)

ಇರಿವಬೆಡಂಗ ಜನಿಸಿದ ಕೂಡಲೆ ತೈಲಪನಿಗೆ ಚಕ್ರವರ್ತಿ ಪದವಿ ಪ್ರಾಪ್ತವಾಯಿತೆಂದು ರನ್ನ ಇಲ್ಲಿ ಹೇಳಿದ್ದಾನೆ. ಎಂದರೆ ಕ್ರಿ.ಶ. ೯೭೩ ರಲ್ಲಿ ಸತ್ಯಾಶ್ರಯ ಜನಿಸಿದ ವರ್ಷವೆಂದಾಯಿತು. ಪಟ್ಟಕ್ಕೆ ಬಂದುದು, ಕ್ರಿ.ಶ. ೯೯೭ ರಲ್ಲಿ ತೀರಿಕೊಂಡದ್ದು ಕ್ರಿ.ಶ.೧ ೦೦೮ ರಲ್ಲಿ. ಒಟ್ಟು ೩೫ ವರ್ಷ ಆತ ಬಾಳಿದ್ದಾನೆ.

ಈ ಶಾಸನದಲ್ಲಿ ಇರಿವ ಬೆಡಂಗನನ್ನು ಕುರಿತಾಗಿ ಇವರ ಮಹತ್ವದ ಸಂಗತಿಗಳಾವವೂ ಉಲ್ಲೇಖಗೊಂಡಿಲ್ಲ. ಆದರೆ ಬೇರೆ ಬೇರೆ ಕೆಲವು ಮಹತ್ವದ ಸಂಗತಿಗಳು ಇದರಿಂದ ತಿಳಿದು ಬರುತ್ತವೆ. ತೈಲಪನಂಕಕಾರ, ಸಾಮಂತಕೇಸರಿ ಎಂಬ ಬಿರುದುಗಳನ್ನು ಹೊಂದಿದ್ದ ಭೀಮದೇವ ಎಂಬುವನು ಬನವಾಸಿ ೧೨ಸಾವಿರ, ಸಾಂತಳಿಗೆ ಸಾವಿರ ಹಾಗೂ ಕಿಸುಕೌಡೆಪ್ಪತ್ತು ಪ್ರದೇಶಗಳನ್ನು ಬೀಳ ವೃತ್ತಿಯಿಂದ ಆಳುತ್ತಿದ್ದನೆಂದು ಪ್ರಸ್ತುತ ಶಾಸನ ಹೇಳುತ್ತದೆ. ಕ್ರಿ.ಶ ೧೦೧೯ನೆಯ ವರ್ಷದ ಬಾದಾಮಿ ಬನಶಂಕರಿ ಗುಡಿಯ ಶಾಸನ (SII-IX-i. ನಂ. ೫೭) ಕೂಡ ಮೇಲೆ ಹೇಳಿದ ಪ್ರದೇಶಗಳನ್ನು ಕ.ಚಾ. ಜಗದೇಕಮಲ್ಲನ ಅಧೀನನಾಗಿ ಭೀಮದೇವ ಆಳುತ್ತಿದ್ದುದಾಗಿ ತಿಳಿಸುತ್ತದೆ. ಬನಶಂಕರಿ ಗುಡಿಯ ಶಾಸನದಲ್ಲಿ ಭೀಮದೇವನಿಗೆ ಅಹವಮಲ್ಲದೇವರ ಪಾದಪಂಕಜಭ್ರಮರ, ಮಾವನಗಂಧವಾರಣ, ಭಾವನಸಿಂಗ, ಪರಬಳಾಂಕುಶ, ಕುಮಾರತಳ ಪ್ರಹಾರಿ, ಸಿಂಘನ ಹಣುಮ, ಕಾರ್ಯ ಸೌಪರ್ಣ, ಮಂಡಳಿಕ ನಾರಾಯಣ ಎಂದು ಮುಂತಾಗಿ ಬಿರುದುಗಳನ್ನು ಕೊಟ್ಟಿದೆ. ಎಂದರೆ ಈ ಭೀಮದೇವ ರಾಷ್ಟ್ರಕೂಟ ವಂಶದವನಾಗಿದ್ದು ಆಹವಮಲ್ಲ ತೈಲಪನ ನಚ್ಚಿನ ಬಂಟನೂ ಸಮೀಪದ ಸಂಬಂಧಿಯೂ ಆಗಿದ್ದನೆಂದು ತಿಳಿಯುತ್ತದೆ. ಮಾವನಗಂಧವಾರಣ ಎಂದರೆ ತೈಲಪ ಅಥವಾ ಇರಿವ ಬೆಡಂಗ ಇವರ ಸಮೀಪ ಸಂಬಂಧಿ ಎಂದಾಗುತ್ತದೆ. ಸಿಂಘನ ಹಣುಮ ಎಂಬುದು ಈತ ಜಗದೇಕಮಲ್ಲ ಜಯಸಿಂಹನ ಕಾಲದಲ್ಲೂ ಕ.ಚಾ. ಮನೆತನಕ್ಕೆ ನಿಷ್ಠನಾಗಿದ್ದ ಸಂಗತಿಯನ್ನು ಖಚಿತ ಪಡಿಸುತ್ತದೆ. ಒಟ್ಟಿನಲ್ಲಿ ಭೀಮದೇವ ಇಮ್ಮಡಿತೈಲಪನ ಕಾಲದಿಂದ ಕನಿಷ್ಠ ಕ್ರಿ.ಶ. ೧೦೨೦ ರವರೆಗೆ ಕ. ಚಾಳುಕ್ಯರ ಕೈಕೆಳಗೆ ಮಂಡಳೇಶ್ವರನಾಗಿದ್ದನೆಂದು ಹೇಳಬಹುದು. ಈ ಅವಧಿಯಲ್ಲಿ ತೈಲಪ ಮತ್ತು ಇರಿವಬೆಡಂಗರ ತರುವಾಯ ೫ನೆಯ ವಿಕ್ರಮಾದಿತ್ಯ, ಅಯ್ಯಣ ಮತ್ತು ಜಯಸಿಂಹ ಜಗದೇಕಮಲ್ಲರ ಕಾಲಾವಧಿಯಲ್ಲೂ ಭೀಮದೇವ ಮಂಡಲೇಶ್ವರನಾಗಿದ್ದ.

ನಾನು ಪ್ರಕಟಿಸಿರುವ ತುರಮರಿಯ ಶಾಸನ (ಬೈಲಹೊಂಗಲ ತಾ.) ದಲ್ಲಿ ಕೂಡ ಭೀಮದೇವನ ಹೆಸರು ಬಂದಿದೆ. ಇದರ ಕಾಲ ಕ್ರಿ.ಶ. ೧೦೫೧. ಈ ಅವಧಿಯಲ್ಲಿ ಕಲ್ಯಾಣ ಚಾಲುಕ್ಯ ದೊರೆ ೧ನೆಯ ಸೋಮೇಶ್ವರ ಪಟ್ಟದ ಮೇಲಿದ್ದ. ಭೀಮದೇವ ಈ ಅವಧಿಯಲ್ಲಿ ಜೀವಿಸಿರಲಿಲ್ಲ. ತುರಮರಿ ಶಾಸನದ ಪ್ರಕಾರ ರಾಷ್ಟ್ರಕೂಟ ವಂಶದ ಭೀಮಾದೇವನ ರಾಣಿ ದೇಯಿಬ್ಬೆ ಎಂಬುವಳು ಪಟ್ಟ ಕುರುಗುಂದದ ಕೆರೆಯೊಂದಕ್ಕೆ ಕೆಲವು ದತ್ತಿಗಳನ್ನು ಬಿಟ್ಟಳು (ಕ.ಭಾ. ೧೦-೪) ಇವಳನ್ನು ವಸ್ತ್ರಪುರದವಳೆಂದು ಶಾಸನ ಹೇಳುವಂತೆ ಕಾಣುತ್ತದೆ. ಆದರೆ ಶಾಸನದ ಆ ಭಾಗ ಒಡೆದು ಹೋಗಿದೆ. ತೈಲಪನ ಮರಣಾನಂತರ (ಕ್ರಿ.ಶ. ೯೯೭) ಸು.೫೫ ವರ್ಷಗಳ ಮೇಲೆ ತುರಮರಿಯ ಶಾಸನ ಭೀಮದೇವನನ್ನು ಹೆಸರಿಸಿರುವುದರಿಂದ ಹಾಗೂ ಈ ಅವಧಿಯಲ್ಲಿ ಎಂದರೆ ಕ್ರಿ.ಶ. ಸು. ೧೦೨೦ರ ತರುವಾಯ ಬನವಾಸಿ ಪ್ರಾಂತಕ್ಕೆ ಬೇರೆ ಮಂಡಲೇಶ್ವರರು ಅಧಿಕಾರಿಗಳಾಗಿದ್ದುದರಿಂದ ಭೀಮದೇವ ಈ ಅವಧಿಯಲ್ಲಿ ಜೀವಿಸಿರಲಿಲ್ಲವೆಂಬುದು ಖಚಿತವಾಗಿದೆ. ಅವನ ಮರಣಾನಂತರ ದೇಯಿಬ್ಬೆ ರಾಣಿ ಬಿಟ್ಟಿರುವ ದತ್ತಿ ಕಾರಣವಾಗಿ ಅವನ ಹೆಸರು ತುರಮರಿ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟಿದೆ ಅಷ್ಟೆ. ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೆ ರಾಷ್ಟ್ರಕೂಟದೆಜ್ಜಮಹಾರಾಜನ ಮನೆತನವಿದ್ದ ಬಗ್ಗೆ ಗೋಕಾಕ ತಾಮ್ರಪಟ ಮಾಹಿತಿ ನೀಡುತ್ತದೆ. ಸವದತ್ತಿಯ ರಟ್ಟರು ತಾವು ರಾಷ್ಟ್ರಕೂಟರ ವಂಶದವರೇ ಎಂದು ಹೇಳಿಕೊಳ್ಳುತ್ತಾರೆ. ಬಹುಶಃ ಸವದತ್ತಿಯ ಮನೆತನಕ್ಕೇ ಸೇರಿದವಳಾದ ದೇಯಿಬ್ಬೆರಾಣಿ ಕುರುಗುಂದದಲ್ಲಿದ್ದಳೆಂದು ತುರಮರಿಯ ಶಾಸನದಿಂದ ಊಹಿಸಬಹುದಾಗಿದೆ. ಸವದತ್ತಿಯ ರಟ್ಟರಿಗೆ ಈ ಮನೆತನ ಸಮೀಪದ್ದಾಗಿರಬಹುದು.

ತುರಮರಿಯ ಶಾಸನ ಮತ್ತು ಅದರ ಸಮಪದ ಕಲಭಾವಿ ಶಾಸನಗಳಲ್ಲಿ ಗಂಗದೊರೆ ಕಂಚರಸನೆಂಬವನ ಉಲ್ಲೇಖ ಬಂದಿದೆ. ಈ ಕಂಚರಸ ಕಾದಲವಳ್ಳಿ-ಈಗಿನ ಕಾದರವಳ್ಳಿ ಬೈಲಹೊಂಗಲ ತಾ: ಪ್ರದೇಶದಲ್ಲಿ ಸಾಮಂತನಾಗಿ ಆಳುತ್ತಿದ್ದು ಕೊಂಗುಣಿವರ್ಮ ನಂದಗಿರಿನಾಥ ಇತ್ಯಾದಿ ಆ ಮನೆತನದ ಬಿರುದುಗಳನ್ನು ಹೇಳಿಕೊಂಡಿದ್ದಾನೆ. ಪ್ರಸ್ತುತ ಕನ್ನೇಶ್ವರ ಶಾಸನದಲ್ಲಿ ಕೂಡ ಒಂದು ಚಿಕ್ಕ ಗಂಗಮನೆತನದ ಉಲ್ಲೇಖ ಬಂದಿದೆ. ಭೀಮದೇವನ ಅಧೀನನಾಗಿ ಕೂಸಲೂರನ್ನು ಆಳುತ್ತಿದ್ದ ಗಂಗರ ಕನ್ನಯ್ಯನೆಂಬುವನು ದೇವಾಲಯವನ್ನು ಕಲ್ಲುವೆಸದಿಂದ ಕಟ್ಟಲು ಪ್ರಾರಂಭಿಸಿದನು. ಈ ಕಣ್ಣನ ಮಗ ಚೌಡ ಹಾಗೂ ಚೌಡನ ಮಗ ಬೊಪ್ಪ ಎನ್ನುವವನು ಕ್ರಿ.ಶ ೧೦೮೬ ರಲ್ಲಿ ಪ್ರಸ್ತುತ ದೇವಾಲಯದ ಕಾರ್ಯವನ್ನು ಪೂರ್ತಿಗೊಳಿಸಿದನೆಂದು ಕನ್ನೇಶ್ವರದ ಎರಡನೆಯ ಶಾಸನ ತಿಳಿಸುತ್ತದೆ. ಎಂದರೆ ಸು. ಒಂದು ಶಾಸನ ಈ ಗಂಗರ ಮನೆತನ ತಿಳವಳ್ಳಿ ಪ್ರದೇಶದಲ್ಲಿ ನೆಲೆಸಿತ್ತೆಂದು ಹೇಳಬಹುದು. ತರುವಾಯದ ಕ್ರಿ.ಶ. ೧೧೨೩ ವರ್ಷದ ೩ನೆಯ ಶಾಸನದಲ್ಲಿ ಗಂಗರ ಬದಲು ಬೇರೆ ಹೆಸರುಗಳು ಕಂಡುಬರುತ್ತವೆ.

ಕ್ರಿ.ಶ. ೧೦೦೪ರ ಮೊದಲ ಶಾಸನದಲ್ಲಿ ಬಾಸವೂರ ನೂರ ನಲ್ವತ್ತರ ನಾಳ್ಗಾವುಂಡ ಸೇನಮಲ್ಲರ ವಜ್ಜಯ್ಯನೆಂಬುವನ ಹೆಸರು ಬಂದಿದೆ. ಅಂದು ಕನ್ನೇಶ್ವರ ಬಾಸವೂರ ೧೪೦ ಕ್ಕೆ ಸೇರಿತ್ತು. ಈ ಸೇನಮಲ್ಲರ ಮನೆತನ ಈ ಭಾಗದ ಹಲವು ಶಾಸನಗಳಲ್ಲಿ ಕಂಡುಬರುತ್ತದೆ. ರಾಷ್ಟ್ರಕೂಟ ೩ನೆಯ ಕೃಷ್ಣನ ಹಾವೇರಿ ಶಾಸನದಲ್ಲಿ. (SII-XVIII-.೩೦)ಸೇ ನಮಲ್ಲರ ಮಲ್ಲಪ್ಪನ ಹೆಸರು ಬಂದಿದೆ. ಮಿತಿ ನಿರ್ದೇಶನವಿಲ್ಲದ ಬಿದರಗಡ್ಡಿ ಶಾಸನ (ಅದೇ ಸಂ.೫೨) ದಲ್ಲಿ ಇರಿವ ಬೆಡಂಗನ ಮಗ ಕುಂದರಾಜನು ಬನವಾಸಿ, ೧೨೦೦. ವನ್ನು ಮಂಡಲೇಶ್ವನಾಗಿ ಆಳುತ್ತಿದ್ದಾಗ ಅವನ ಅಧೀನನಾಗಿ ಸೇನಮಲ್ಲರ ಕಣ್ಣ ಬಾಸವೂರ ನಾಳ್ಗಾವುಂಡನಾಗಿದ್ದನೆಂದಿದೆ. ಅದೇ ರೀತಿ ಕ್ರಿ.ಶ. ೧೦೨೫ ರಲ್ಲಿ ಜಗದೇಕಮಲ್ಲ ಜಯಸಿಂಹನ ಕೈಕೆಳಗೆ ಈ ಕಣ್ಣಮ್ಮ ಕುಂದರಾಜನ ಕೈಕೆಳಗೆ ಬಾಸವೂರು ನಾಡಿನ ನಾಳ್ಗಾವುಂಡನಾಗಿದ್ದನೆಂದು ಇನ್ನೊಂದು ಶಾಸನ (ಅದೇ ನಂ. ೪೫) ಹೇಳಿದೆ. ಸೇನಮಲ್ಲರ ಈ ವಂಶನಾಮ ಸೇನವಲ್ಲ ಎಂದು ಕೂಡ ಬಂದಿರುವುದನ್ನು (SII-18ರ ಮುನ್ನುಡಿ) ನೋಡಿದರೆ ಇದು ಸೇನವಾರ/ ಸೇನಾವರ/ ಸೇನವ ಎಂದು ಪರಸಿದ್ಧವಾಗಿದ್ದ ಪ್ರಾಚೀನ ಮಂಡಲೇಶ್ವರರ ಮನೆತನವೇ ಎಂದು ನಾನು ಈಗಾಗಲೇ ಬೇರೊಂದು ಕಡೆಗೆ ತೋರಿಸಿದ್ದೇನೆ. ಈ ರೀತಿ ಕನ್ನೇಶ್ವರ ಈ ಮೂರು ಶಾಸನಗಳು ಕಲ್ಯಾಣ ಚಾಳುಕ್ಯ ರಾಷ್ಟ್ರಕೂಟ ಗಂಗ ಮತ್ತು ಸೇನವಾರ ಮನೆತನಗಳ ಚರಿತ್ರೆಯ ಮೇಲೆ ಬೆಳಕು ಚೆಲ್ಲುತ್ತವೆ.

ತಿಳವಳ್ಳಿಯ ಬ್ರಾಹ್ಮಣರನ್ನು ಕುರಿತು ಹೇಳುವಾಗ ಅವರು ಸಪ್ತಸೋಮ ಸಂಸ್ಥಾವಭೃತ ಅವಗಾಹನ ಪವಿತ್ರೀಕೃತ ಶರೀರರು ಎಂಬಿತ್ಯಾದಿಯಾಗಿ ಹೊಗಳುತ್ತ ‘ಪದಾರ್ಥ ವಾಕ್ಯಾರ್ಥ’, ಕೋವಿದರು ಎಂದೂ ತಿಳಿಸುತ್ತದೆ. ಸಂಸ್ಕೃತ ಸಾಹಿತ್ಯದಲ್ಲಿ ಬರುವ ‘ಪದವಾಕ್ಯ ಪ್ರಮಾಣಜ್ಞ’ ಎಂಬ ಪ್ರಯೋಗಕ್ಕೆ ಇದು ಪರ್ಯಾಯವಾಗಿರುವುದು ಸ್ಪಷ್ಟ. ಆದ್ದರಿಂದ ಪದ-ವಾಕ್ಯ ಪ್ರಮಾಣಜ್ಞ ಎಂಬುದಕ್ಕೆ ಶಬ್ದಾರ್ಥ ಮತ್ತು ವಾಕ್ಯಾರ್ಥಗಳನ್ನು ಚೆನ್ನಾಗಿ ಅನ್ವಯಿಸಿ ಹೇಳಬಲ್ಲ ಸಾಮರ್ಥ್ಯವುಳ್ಳವರು ಎಂದು ಮಾತ್ರ ಅರ್ಥವೇ ಹೊರತು ಇತರ ಯಾವ ಅರ್ಥವೂ ಇರಲಿಲ್ಲವೆಂಬುದನ್ನು ಇಲ್ಲಿ ಗಮನಿಸಬಹುದು.

ಶಾಸನಗಳ ಪಾಠ

೧ನೇ ಶಾಸನ

ದೇವಾಲಯದ ಮುಂದೆ ನಿಲ್ಲಿಸಿರುವ ದಕ್ಷಿಣ ಬದಿಯ ಕಲ್ಲು:

ಶಾ.ಶ. ೯೨೫ ನೆಯ ಶುಭಕೃತ್ ಸಂವತ್ಸರ, ಉತ್ತರಾಯಣ ಸಂಕ್ರಾಂತಿ ಕಲ್ಯಾಣ ಚಾಳುಕ್ಯ ದೊರೆ ಇಱಿವ ಬೆಡಂಗ ಸತ್ಯಾಶ್ರಯ

೧. ಸ್ವಸ್ತಿ ಸಮಸ್ತ ಭುವನಾಶ್ರಯಂ ಶ್ರೀ ಪೃಥ್ವೀವಲ್ಲಭಂ ಮಹಾರಾಜಧಿರಾಜ ಪರಮೇಶ್ವರಂ ಪರಮ ಭಟ್ಟಾರಕಂ ಸ

೨. ತ್ಯಾಶ್ರಯ ಕುಳತಿಳಕನಕಳಂಕ ಚರಿತ ನಿಱೆವ ಬೆಡಂಗಂ ಶ್ರೀಮತ್ ಸತ್ಯಾಶ್ರಯ ದೇವರ ರಾಜ್ಯಮು

೩. ತ್ತರೋತ್ತರಾಭಿವೃದ್ಧಿಗೆ ಸಲುತ್ತಮಿರೆ [11*] ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಸಾಮಂತಂ ಬಾಳರೇವನ್ತ [೦]ತು

೪. ರಗ ವಿದ್ಯಾಧರಂ ಗಜಕೆ ಬಲ್ಗಣ್ಡಂ ರಣರಂಗಮಲ್ಲಂ ತೈಲಪನಂಕಕಾರಂ ಸಾಮನ್ತ ಕೇಸರಿ ಶ್ರೀಭೀಮರಾಜಂ

೫. ಕಿಸುಕಾಡೆಳ್ಪತ್ತುಂ ಬನವಾಸಿ ಪನ್ನಿರ್ಚ್ಛಾಸಿರಮುಂ ಸಾನ್ರಳಿಗೆ ಸಾಯಿರಮುಮಂ ಬೀಳವೃತ್ತಿಯೊಳಾಳು

೬. ತ್ತಮಿರೆ ಸಮಸ್ತ ಭರರಾಜ್ಯ ನಿರೂಪಿತ ಮಹಾಮಾತ್ಯ ಪದವೀ ವಿರಾಜಮಾನಂ ನಾರಾಚವರ್ಷಂ ಕಾಯ್ವರ ಗ

೭. ರುಡನಚಳಿತ ಮಲ್ಲನುಪಶಮ ಯುಧಿಸ್ಥಿರಂ ಮನುನೀತಿ ಮಾರ್ಗಂ ವ್ಯವಹಾರ ಚತುರ್ಮುಖಂ ಮಲೆರಾಜ ಸರ್ಪಂ

೮. ಗಂಡರ ಸಿಂಗಂ ಶ್ರೀಮತ್ಪೆರ್ಗ್ಗೆಡೆ ಕಾಡಿಮಯ್ಯಂ . . . . . . . ಬನವಾಸಿ ದೇಶಮಂ ದುಷ್ಟನಿಗ್ರಹ ವಿಶಿಷ್ಟ ಪ್ರತಿ ಪಾಳದಿಂ

೯. ಶ್ರೀ ಭಿಮರಾಜಂಗೇಕಾಯುತಂ ಮಾಡಿ ಸುಖಸಂಕಥಾ ವಿನೋದೊಳಿೞ್ದು | ಕಂ | ಕಲಿಯುಗಭೀಮನ ಬೆಸದಿಂ ಮಲೆ

೧೦. ಪರನಾಟನ್ದು ಪಶ್ಚಿಮಾಬ್ಧಿವರಂ ಮಂಡಲಮಂ ನಿಮಿರ್ಚಿದಂ ನಿರ್ಮ್ಮಳಯ ಶನಧಿಕ ಪ್ರತಾಪಿ ಕಾಯ್ದರ ಗರುಡಂ

೧೧. ಸ್ವಸ್ತಿ ಸಮಸ್ತ ಗುಣ ಪೂರ್ಣ್ಣಮೇರು ಮಾವ [ನ] ಪಿಣ್ಡಂ ಮನದೊಳ್ಗೋ (ಳ್ಗ?) ಣ್ಡ [೦] ಶ್ರೀಮತ್ಸೇನ ಮಲ್ಲರ ವಜ್ಜಯ್ಯಂ ಬಾಸವೊರ್ನ್ನೂ ಱ

೧೨. ನಾಲ್ವತ್ತರ್ಕ್ಯಂ ನಾೞ್ಗಾವುಣ್ಡುಗೆಯ್ಯೆ || ಕನ್ದ || ಕಡೆಗಣಿಸದೆ ಕಣ್ಣು ಗಳಪಿದವರ್ಗ್ಗುದಾರಮಾಗಿ ಗಂಗರ ಕನ್ನಂ [ಕನ್ದ] ನು . . . . . ವೊ [ಡಾ]

೧೩. ಱೆನ್ದಮಶೇಷಂ ಪೊಡವಿಯೊಳೆಸೆದಪುದುಬ [ಡ]ವರಾಶ್ರಯನಾ [ದಂ] ಈ ಸಕಳ ವಸುಮತೀ ತಳವಾಸಿಗಳಯ್ನೂ

೧೪. ರ್ಬ್ಬರರ್ಗ್ಗೇಂ ಬೆಸಕೆಯ್ದಿ ಕೋಪಿಂ ಪಾಸಕಲ ಮೆಸೆಯೆ ಸಮಯದ ದಾಸಿಯೆನಲ್ನೆಗೞ್ದನಲ್ತೆಗಂಗರ ಕನ್ನಂ ಸ್ವಸ್ತಿಸ

೧೫. ಮಸ್ತ ಗುಣಗಣಾಧಾರಂ ಪರಾಂಗನಾದೂರಂ ನಿಜಕುಳ ಪವಿತ್ರಂ ಸುಜನೈಕ ಮಿತ್ರಂ ಸಮಯದ ದಾಸಿ ದು [ಷ್ಟಾ]ರಿ ತಾಪಹರ [೦]

೧೬. ಶ್ರೀ ಮತ್ಗಂಗರ ಕನ್ನಮಯ್ಯಂ ಕೂಸಲೂರೊಳೇಕ ಭೋಗಂಗಾವುಣ್ಡುಗೆಯ್ಯುತ್ತ ಮಿೞ್ದು ಧರ್ಮ್ಮಾನುರಾಗದಿಂ ದೇಗುಲಮಂ ಮಾಡಿ

೧೭. ಸಕವರ್ಷ ೯೨೫ನೆಯ ಶೋಭಕೃತ್ ಸಂವತ್ಸರದುತ್ತರಾಯಣ ಸಂಕ್ತಾಂತಿ ವ್ಯತಿಪಾತಮಾದಿತ್ಯವಾರ . . . . ನ

೧೮. ರ್ಗ್ಗೆ-ದೆ [ಕಾ]ಡಿಮಯ್ಯಂಗಳ್ದೇಗುಲಮಂ ನೋಡಿ ಕನ್ನೇಶ್ವರ ದೇವರ್ಗ್ಗೆ ತೆಂಕಣ ನಿಡುಗೆಱೆ ಕೆೞಗೆ ಕೊಟ್ಟ . . . . . . . . . . . .

೧೯. ಬಿಟ್ಟ ಗೞ್ದೆಯ ಮತ್ತರಾಱು ಸರ್ವ್ವಬಾಧಾಪರಿಹಾರ ಮಿದಱೊಳಗೆ ದೇಗುಲದ ಖಣ್ಡಸ್ಪುಟಿತಕ್ಕೆ ಮತ್ತರೊನ್ದು . . . . . .

೨೦. [ಕಂ] ಮತ್ತರೊನ್ದು ಸ್ಥಾನಪತಿ ಚಾಮುಣ್ಡಭೞಾರರ್ಗ್ಗೆ ಮತ್ತರೊನ್ದು ಪಱೆಕಾ ಱರ್ಗ್ಗೆ . . . . . . ಸೂಳೆಯರ್ಗ್ಗೆ ಮತ್ತರೇ . . . . .

೨೧. [ಹಿ]ರ ಖಣ್ಡಿಯ ಜದು . . . . ಪಂ ಕಾದುನಡೆಯಿಸಿದಾತಂ ವಾರಣಾಸಿ ಪ್ರಯಾಗ್ಗೆ (ಗೆ) ಕುರು . . . . . . . . .

೨೨. ರ್ಪ್ಪಾರ್ವ್ವರ್ಗ್ಗೆ ಸಾಸಿರ ಕವಿಲೆಯನುಭಯ ಮುಖಿಗೊಟ್ಟ ಪಲಮಕ್ಕುಂ . . . . . . .

೨೩. ಸಾಸಿರ ಕವಿಲೆಯುಮನೞೆದ ಪಂಚಮಹಾಪಾತಕನುಕ್ಕುಂ | ಸ್ವದತ್ತಾ . . . . . .

೨೪. ಹಶ್ತಾಣಿ ವಿಷ್ಟಾಯಾಂ ಜಾಯತೇ ಕ್ರಿಮಿಃ || ಬಹುಭಿರ್ವಸುಧಾ . . . . . . . . . .

೨೫. . . . . . ತದಾಫಲಂ || ಸಾಮಾನ್ಯೋಯಂ . . . . . . . . . . . . . . . . . . . . . .

ಶಾಸನದ ಮೇಲ್ಭಾಗದಲ್ಲಿ ಕೆಳಗಿನ ಒಂದು ಸಾಲು ಬರಹವಿದೆ: ಸ್ವಸ್ತಿಯಮನಿಯಮ ಸ್ವಾಧ್ಯಾಯ ಧ್ಯಾನಾನುಷ್ಠಾಣ ಪರಾಯಣರಪ್ಪ ಶ್ರೀಮತ್ ರಾಮರಾಸಿ ಭೞಾರರೀ ಮಟಕ್ಕೆ ಮುಖ್ಯರ್.

೨ನೆಯ ಶಾಸನ: ಗುಡಿಯ ಮುಂದೆ ನಿಲ್ಲಿಸಿದ ಬಲಗಡೆಯ ಕಲ್ಲು:

ಚಾಳುಕ್ಯ ವಿಕ್ರಮ ವರ್ಷ ೯ನೆಯ ಕ್ರೋಧನ ಸಂವತ್ಸರ ಆಶ್ವಯುಜದಮಾವಾಸ್ಯೆ.

ವ್ಯತಿಪಾತ ಆದಿತ್ಯವಾರ.

೧. [ಶ್ರೀ] ಗಣಪತಯೇ ನಮಃ ನಮಸ್ತುಂಗ ಚಿ[ಶಿ]ರ . . . . . . . . .

೨. [ನ]ಗರಾರಂಭ ಮೂಲಸ್ತಂಭಾಯ ಶಂಭ . . . . . . . . . . . . .

೩. ಶ್ರೀ ಪೃಥ್ವೀವಲ್ಲಭಂ ಮಹಾರಾಜಾಧಿರಾಜಂ ಪರ . . . . . . . . .

೪. ಶ್ರಯ ಕುಳಿತಿಳಕಂ ಚಾಳುಕ್ಯಾಭರಂ ಶ್ರೀಮತ . . . . . . . . . .

೫. ಮಲ್ಲದೇವನು ಪೃಥ್ವೀರಾಜ್ಯಂಗೆಯ್ಯತ್ತಮಿರೆ

೬. ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಸಾಮಂತಾ . . . . . . . .

೭. ಯಕಂನಾಸ್ಥಾನ . . . . ಸ್ತು ನಾಯಕಂ ನಿಯೋಗ ಯೌಗಂಧ [ರಾ]

೮. [ಯ]ಣಂ ವಿವೇಕ ವಿದ್ಯಾಧರಂನಸಹಾಯ ಸಿಂಗಂ ಪರಬಳ [ಸಾ]/ದ]

೯. ಕಂ ಕಂನ್ನಡ ಸಂಧಿವಿಗ್ರಹಿ ಸೇನಾಧಿಪತಿ ಮನೆವರ್ಗ್ಗಡೆ ಹಡಪ…….

೧೦. ಚಿನ್ನದೇವಿಯರಸರ ತಮ್ಮಂ || ಸ್ವಸ್ತಿ ಸಮಸ್ತ ಪ್ರಶಸ್ತಿಗುಣಸಂಪನ್ನರಪ್ಪ

೧೧. ಪ್ರಧಾನಸೇನಾಧಿಪತಿ ಮನೆವೆರ್ಗ್ಗಡೆ ಹಡಪವಳ ದಂಣ್ಡನಾಯಕಂ ಮಾಧವ [ರಸ]

೧೨. ರ್ ಬನವಾಸಿ ಪನ್ನಿರ್ಚ್ಛಾಸಿರಮುಮಂ ದುಷ್ಟನಿಗ್ರಹ ಶಿಷ್ಟಪ್ರತಿಪಾಳನದಿಂ ಸುಖದಿಂ . . . . . . . . . .

೧೩. ರ ತತ್ಪಾದ ಪದ್ಮೋಪಜೀವಿ || ಸಮಸ್ತ ಪ್ರಶಸ್ತಿ ಗುಣ ಸಂಪನ್ನರಪ್ಪ ಶ್ರೀಮತುನಾಚಯ್ಯ

೧೪. ಚೆಟ್ಟಯ್ಯಗಳು ತಿಳುವಳ್ಳಿಯ ನಾಡಾಳುತ್ತಮಿರೆ || ಸ್ವಸ್ತೃನೇಕ ಗುಣಗಣಾಧಾರ

೧೫. ಶೌಚಾಚಾರರುಂ ಪಿತಾಮಹ ಮಹಿಮಾಸ್ಪದಂ ಪದಾರ್ಥವಾಕ್ಯಾರ್ಥ ಕೋವಿದರುಂ ತಿ

೧೬. . . . . . . ಕಳಂಕ ಗುಪ್ತೋಸ . . . . . . ಲಾೞಂಕ್ರಿತರುಂ ಬಾಲಾಗ್ನಿಹೋತ್ರಿಗಳುಂ ಸಪ್ತಸೋಮ ಸಂಸ್ಥಾವಭ್ರಿತಾವಗಾ

೧೭. ಹನ ಪವಿತ್ರೀಕೃತ ಶರೀರರುಂ ಚತುವೇದ ವೇದಾಂಗೋಪಾಂಗ ಸ್ಮೃತಿ ಪುರಾಣ ಕಾವ್ಯ ನಾಟಕ ಭರತಷ

೧೮. ಟ್ತರ್ಕ್ಕ ಮೀಮಾಂಸಾದಿ ಸರ್ವಶಾಸ್ತ್ರ ವಿಶಾರದರುಂ ಸಾರದಚಂದ್ರೋಜ್ಜಳ ಧರ್ಮ್ಮಾಖಿತ ಕೀರ್ತಿ

೧೯. ಸಾಗರ ಪರಿವ್ರಿತ ವಸುಧಾ ರಕ್ಷದಕ್ಷದಕ್ಷಿಣ ಭುಜಾವಷ್ಟಂಭ ಶುಭದು . . . .ರಾಜಾಧಿರಾಜ ಸೇಬಾ

೨೦. ಜಿತರೇಕ ವಾಕ್ಯರ್ದ್ವಾತ್ರಿಂಶತು ಸಮಸ್ತ ಸಮಯಾಗ್ರಗಣ್ಯರಗಣ್ಯಪುಣ್ಯ ಮೂರ್ತಿಗಳ್ ದಕ್ಷಿಣ ದ . . . . . . . [ವ]

೨೧. ಶಿಷ್ಟ ಗೌತಮ . . . . ಥೇ ಸನಕ ಸನಂದ ಸನತ್ಕುಮಾರಾದಿ ಕಾರುಣ್ಯ, ಮುನಿ ಸಮಾನರೇಕ ವಾಕ್ಯ . . . . . . . .

೨೨. ರಣಾಗತ ವಜ್ರಪಂಜರರುಮಪ್ಪ ಶ್ರೀಮದಗ್ರಹಾರಂ ತಿಳುವಳ್ಳಿಯ ಮಹಾಜನ ಸಾ[ಸಿ]

೨೩. ರ್ವ್ವರ ಮಗಂ ಗಂಗರ ಕಣ್ಣಯ್ಯಂ ಬಾಸವೂರ ನೂಱನಾಲ್ವತ್ತರ್ಕ್ಕಂ ನಾಳ್ಗಾವುಂಡುಗೆಯ್ಯವ ಪೆಂಪನೇರ್ಣ್ಣಿಪೆಂ

೨೪. ಕಡೆಗಣಿಸದೆ ಕಂಡುಗಳುಪಿದವರ್ಗ್ಗುದಾರ ಮಾಗೆ ಗಂಗರ ಕಂಣಂ ಕೋಪ . . . .ದರಿಂದೇಂ ಕಾ . . . . . . . .

೨೫. . . . . . . . . ಸೆದಪುದಾ . . . . . .ರಾಶ್ರಯ ನಾಮಂ || ಈ ಸಕಲ ವಸುಮತೀ ತಳವಾಸಿಗಳೈನೂರ್ವ್ವರ ವರ್ಗ್ಗೆ ಬೆಸ

೨೬. ಕೆಯ್ಯಲೆ . . . . . .ಕಲ. . . . . .ಸೆಯೆ ಸಮಯದ ದಾಸಿಯೆನಲ್ನೆಗೞ್ದನಲ್ತೆ ಗಂಗರ ಕಂಣಂ || ಶ್ರೀಮತು ಗಂಗರಕನ್ನ

೨೭. ಯ[೦] ಕೂಸಲೂರನೇಕ ಭೋಗದಿಂದ ಗಾಮುಣ್ಡುಗೆಯ್ಯುತ್ತಮಿರ್ಪ್ಪಂ || ಧರ್ಮ್ಮಾನುರಾಗದಿಂ ದೇಗುಲಮಂ ಮಾ

೨೮. ಡಿಸಿದನೂನ . . . . . . .ಮುದ್ದಿಯ ಚಿನ್ತಾಮಣಿಗಂ ಪುಟ್ಟಿದ ಮಗನ ಮಹಿಮೆಯೆಂತೆಂದಡೆ ಸ್ವಸ್ತಿ

೨೯. ಸಮಸ್ತೋರ್ವ್ವೀತಳ ವಿನೂತ ಪ್ರತಾಪ ಮಕರಧ್ವಜ ವೈರಿಗರುಡ ಧ್ವಜಂ ಶರಣಾಯತಪಭೀತಾಪ ಮ

೩೦. ತನುತ್ರಾಣ ತತ್ವಪ್ರವೀಣ ಬಾಣ ಸೌಜನ್ಯ ವನಕೇಳೀವಸನ್ತಂ ವಿನಯ ಲಕ್ಷ್ಮೀ ಕಾಂತಂ ಸುಜನ ಪ್ರಸಂನ್ನ ಮದನಹರಚರಣ

೩೧. ನರಸೀರುಹ ಪರಿಮಳಾಮೋದ ಶ್ರೀಗಣಸ್ಥಾನ ರಂಗ ಶೋಭಾಕರ ವಿನಯರತ್ನಾಕರಂ ಗಂಗರ ಸಿಂಘನಾಮಾಧಿ ಸಮಸ್ತ ಪ್ರಸ್ತಿ

೩೨. ಸಹಿತಂ ಶ್ರೀಮತು ಕೂಸಲೂರ ಚೌಡಗಾಮುಣ್ಡಂ ಕನ್ನೇಶ್ವರ ದೇವರ ದೇಗುಲಕ್ಕೀಕಲುವೆಸಕ್ಕೆ ಪ್ರಾರಂಭ ಮುಖನಾದ

೩೩. ನಾ ಪುಣ್ಯಪುರುಷಂಗಂ ಕಾಳಿಯಬ್ಬೆ ಗಾಮುಣ್ಡಿಗಂ ಪುಟ್ಟಿದಮಗನಾತನ ಪೆರ್ಮ್ಮೆಯೆನ್ತದಡೆ || ಸ್ವಸ್ತಿ ಸಮಸ್ತ ವಸ್ತುಗು

೨೪. ಣ ಮಿಸ್ತೀರ್ಣ್ಣ ಘೂರ್ಣ್ಣಿತಾರ್ಣ್ಣನ ನಿನಾದನಿಶಿತ ನಿಶ್ತ್ರಿಂಶ ಕೌಕ್ಷೆಯ [ಕಾಸಿ] ಮುಶಲ ಕನಾಯಕಂ ಪಣ ಮುಶುಣ್ಡಿ.

೩೫. ಭಿಂಣ್ಡಿವಾಳಾದಿ ನಾನಾಸ್ತ್ರ ಪ್ರವೀಣ [೦]ಗೋತ್ರಪವಿತ್ರಂ ಪರಾಂಗನಾಪುತ್ತ ಕಾನ್ತಾಮನೋಜ ಮನುನೀತಿ ಮಾರ್ಗನುಪಾ

೩೬. ಯ ಚಾಣಕ್ಯನೈನೂರ್ವ್ವರ ಸಮಯ ಸಮುದ್ಧರಣ ದಾಸನೈಯ್ಯನ ಸಿಂಹ ಗಂಗಕುೞಕಮಳ

೩೭. ಮತ್ತಣ್ಣನ ಸಹಾಯ ಸೌರ್ಯ್ಯ ಗಂಗಕುಳ ಕುಮುದಿನೀ ಚಂದ್ರಂ ಧಿಬ್ರಿದ ಚಿನ್ತಾಮಣಿ ಸಾಸಿರ್ವ್ವರ ಪಾ

೩೮. ದಾರಾಧಕಂ ಶ್ರೀ ಕನ್ನೇಶ್ವರದೇವಲಬ್ಧವರ ಪ್ರಸಾದ ನಾಮಾದಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತು ಕೂಸಲೂರ

೩೯. ಬೊಪ್ಪಗಾಮುಣ್ಡಂ ತಮ್ಮ ಪಿತೃಪಿತಾಮಹರು ಮೂಡಿಸಿದ ಕನ್ನೇಶ್ವರ ದೇವರ ದೇಗುಲಮಂ ಕಲುವೆಸ [ದಿಂ]

೪೦. ಮಾಡಿಸಿ ಸಾಸಿರ್ವ್ವರಂ ತನ್ದು ತೋಱಲವರುಂ ಪ್ರಸನ್ನರಾಗಿ ಶ್ರೀಮಚ್ಚಾಳುಕ್ಯ ವಿಕ್ರಮ ಪ್ರತಾಪ ಚಕ್ರವರ್ತಿ ಜಗದೇಕಮ . . . . . . .

೪೧. ರಿಷದ ೯ನೆಯ ಕ್ರೋಧನ ಸಂವತ್ಸರದಾಶ್ವಜಯುದಮವಾಸ್ಯೆಯುಮಾದಿತ್ಯ ವಾರಮುಂ ವ್ಯತಿಪಾತಮುಂ ಕೂಡಿ

೪೨. ಪುಣ್ಯದಿನದಂದು ಶ್ರೀ ಕನ್ನೇಶ್ವರ ದೇವರ್ಗ್ಗೆ ನಿವೇದ್ಯಕ್ಕೆ ತಿಳುವಳ್ಳಿಯ ವಿಷ್ಣುವರ್ಧನನ ಕೋಲಲು ಗೋಳಿಕೊಳದ ಕೆೞಗೆ ಕೋ

೪೩. ಜ ಮಾನಂ ಗರ್ದ್ದೆ ಮತ್ತಲೊನ್ದುವಂ ಸರ್ವ್ವಬಾಧಾಪರಿಹಾರವಾಗಿ ಬಿಟ್ಟರು || ಆಱುವತ್ತೊಕ್ಕಲುಂ ದೇವಗೊಳಗವಂ ಬಿಟ್ಟರು.

೪೪. ಇ ಧರ್ಮ್ಮಮನ್ನಾವನ್ನೊರ್ವ್ವಂ ಪ್ರತಿಪಾಳಿಸಿದಾತಂ ವಾರಣಾಸಿ ಕುರುಕ್ಷೇತ್ರ ಪ್ರಯಾಗೆ ಕುರುಕ್ಷೇತ್ರವ ಮೈತಿಷ್ಠ [ಪ್ರಯಾಗೆ?]

೪೫. ನದಲು ಸಾಸಿರ ಕವಿಲೆಯಂ ಕೋಡುಂಕೊಳಗುವಂ ಪಂಚರತ್ನಂಗಳಿಂ ಕಟ್ಟಿಸಿ ಸಾಸಿರ್ವರು ವ್ವೇದಪಾರಂಗರಪ್ಪಬ್ರಾಹ್ಮಣ……

೪೬. ಭಯ ಮುಖಿ ದಾನಮಂ ಕೊಟ್ಟ ಫಲಮಕ್ಕುಂ || ಈ ಧರ್ಮ್ಮಂ ನಾವನೊರ್ವ್ವಂನಳಿದಾತಂ ವಾರಣಾಸಿ ಕುರುಕ್ಷೇತ್ರ ಪ್ರಯಾಗೆ . . . . . . . . .

೪೭. ತೃಮೆಂಬೀ ತೀರ್ತ್ಥಸ್ಥಾನದಲು ಸಾಸಿರಕವಿಲೆಯುಮಂ ಸಾಸಿರ್ವ್ವರು ವೇದ ಪಾರಗರಪ್ಪ ಬ್ರಾಹ್ಮಣರಂ ಕೊಂದ ಪಂಚಮಹಾಪಾತಕನಕ್ಕುಂ ||

೪೮. ಸ್ವದತಂ ಪರದತ್ತಂ ವಾಯೋ ಹರೇತಿ ವಸುಂಧರಾ ಷಷ್ಠಿರ್ವ್ವರ್ಷ ಸಹಸ್ತಾಣಿ ವಿಷ್ಠಾಯಾಂ ಜಾಯತೇ ಕ್ರಿಮಿಃ || ಬಹುಭಿಃವಸುಧಾ

೪೯. ದತ್ತಾರಾಜಭಿಃ ಸ್ಸಗರಾಧಿ ಭಿಃ ಯಸ್ಯಯಸ್ಯ ಯದಾಭೂಮಿಸ್ತಸ್ಯತಸ್ಯ ತದಾಫಲಂ || ಸಾಮನ್ಯೋಯಂ ಧರ್ಮ್ಮಸೇತುರ್ನೃ

೫೦. ಪಾಣಾಂ ಕಾಲೇ ಕಾಲೇ ಪಾಲನಿಯೋಭವದ್ಭಿಸ್ಸ . . . .  ನೇತಾನು ಭಾವಿನಃ ಪಾರ್ಥಿವೇಂದ್ರಾ . . . . . . . ಯಾಚತೇರಾಮಚಂದ್ರಃ ||

೫೧. ದೇವರಿಗೆ ಗೆ . . . . . .ಟ್ಟಿಗೆಯ ಮಣ . . . .ದೇಮ . . . .ಮಂಗಳಮಹಾ ಶ್ರೀ || ಪಾಂಚನೈದ ವಾದೇನಿರ . . . . . .

೫೨. ತೀ ಸಮಖ್ಯ . . . . .ತಾಸರ್ವ್ವಪಾಪ ಪ್ರನಾಶಿನಿ ||

೩ನೆಯ ಶಾಸನಃ ಹೊಂಡದ ಏರಿಯ ಕಲ್ಲು

ಚಾ. ವಿ. ೪೭ನೆಯ ಶುಭಕೃತು ಮಾಘ. ಶು. ೧೧. ಆದಿತ್ಯವಾರ ಕ್ರಿ.ಶ. ೧೧೨೩.

೧. ಶ್ರೀ ಗಣಪತ್ಯಾಯನಮಃ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈಳೋ [ಕ್ಯ]

೨. ನಗರಾರಂಭ ಮೂಳಸ್ತಂಭಾಯ ಶಂಭವೇ || [ಸ್ವಸ್ತಿ] ಸಮಸ್ತಭುವನಾ

೩. ಶ್ರಯಂ ಶ್ರೀ ಪೃಥ್ವೀವಲ್ಲ [ಭಂ] [ಮಹಾ] ರಾಜಾಧಿರಾಜ ಪರಮೇಶ್ವರಂ ಪರಮ [ಭ]

೪. ಟ್ಟಾರಕಂ ಸತ್ಯಾಶ್ರಯ ಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ರಿಭು

೫. ವನ ಮಲ್ಲದೇವರ ವಿಜಯರಾಜ್ಯಮುತ್ತರೋತ್ತರಾಭಿವೃದ್ಧಿಗೆ

೬. ಸಲುತ್ತಮಿರೆ || ತತ್ಪಾದ ಪ[ದ್ಮೋ]ಪ[ಜೀವಿ]ಸಮಸ್ತ ರಾಜ್ಯಭರ

೭. ನಿರೂಪಿತ ಮಹಾಮಾತ್ಯ ಪದವೀ ವಿರಾಜ . . . . . . . . .

೮. ಮಂತ್ರೋತ್ಸಾಹ ಶಕ್ತಿತ್ರಯ . . . . . . . . . .

೯. ಧಾನಂ ಮನೆವರ್ಗ್ಗಡೆ ಸೇನಾಪತಿ ಮಣ್ಡ . . . . . . . . . . . . .

೧೦. ಳ ತಮ್ಮಂ ಸಾವಿಮಯ್ಯ ದಣ್ಡನಾಯಕಂ ಬನವಾ[ಸಿ] . . . . . . . .

೧೧. [ಪ] ನೆರಡಱುಮಂ ಸುಖದಿನಾಳುತ್ತಮಿರೆ . . . . . .ತತ್ಪಾದಪದ್ಮೋ

೧೨. ಪಜೀವಿ || ಸಮಸ್ತ ಗಣೋನ್ನತ [ರ]ಪ್ಪ ಶ್ರೀಮ [ನ್ಮಾ] ಹಾದೇವಯ್ಯ ನಾಯಕರು ನಾ

೧೩. ಗರಖಂಣ್ಡಮೆರ್ಪ್ಪತ್ತಮ . . . . . . . . ವ . . . . . . . .ಮನಾಳುತ್ತ

೧೪. ಮಿರಲು || ಚಾಳುಕ್ಯ ವಿಕ್ರಮ ವರ್ಷದ ೪೭ನೆಯ ಶುಭಕೃತು ಸಃ

೧೫. ವತ್ಸರದ ಮಘ ಸು | ೧೧ ಆದಿತ್ಯವಾರ ಮುಂಮುತ್ತರಾಯಣ ಸಂಕ್ರಾನ್ತಿ

೧೬. ಯುಂ ವ್ಯತಿಪಾತಮುಂ ಕೂಡಿದ ಪುಣ್ಯ . . . . . [ದಿನ]ದೊಳ . . . . .ದಗ್ರಹಾರ ತಿಳ

೧೭. ವಳ್ಳಿಯ ಸಾಸಿರ್ವ್ವರ ಮಕ್ಕಳು ಕಿಱುವಡಿಯ ಬಸವ . . . . . . ಯ

೧೮. ನಾಗಗೋಸಿಯ ಕಟ್ಟಿಂದೆ ಕುಸಲಾವತಿ ವೇಣಿಗೌಡ ಮುಗಳಿಯ ಬಾಚಿ

೧೯. ಮಯ್ಯನಾ ಕಟ್ಟಿನ ಧರ್ಮ್ಮಕ್ಕಂ ಕಚ್ಚವಿಯ ಗಳೆಯಲು ಸರ್ವಬಾಧಾಪರಿ

೨೦. ಹಾರವಾಗಾ ಕೆಱೆಯ ಕೆಳಗೆ ನಿರ್ಬಾಧ್ಯಂ ಮಾಡಿ ಬಿಟ್ಟಗರ್ದ್ದೆಕಮ್ಮ ಐ

೨೧. ವತ್ತು ೫೦ ಮತ್ತ ವಾ ಕೂಸಲೂರೆಪ್ಪತ್ತೊಕ್ಕಲುಂ ವಲ್ಲಿಯ

೨೨. ಚಾಮುಣ್ಡಗೌಣ್ಡನು ಮುಗಳಿಯ ಬಾಚಿಮಯ್ಯನುಂವಿರ್ದ್ಡಾಕಟ್ಟಿನ ನೀರುವರಿ

೨೩. ಎನಿತುಕೆಯುಂಟನಿತರ್ಕ್ಕಂ ಮತ್ತಲಿಂಗೊನ್ದು . . . . . . . .ನೋವಂ ಬಿಟ್ಟ ರೀಧರ್ಮ್ಮನು

೨೪. ನಾವನೊರ್ವ್ವಂ ಪ್ರತಿಪಾಳಿಸುವರ ಧರ್ಮ್ಮ || ನೆರೆಮೂಱು ಲೋಕದೊಳಗೀ ಕೆಱೆಯಿಂದೆ ಸಮ

೨೫. ನೆಗರ್ತ್ತೆಯುಂ ಕೀರ್ತ್ತಿಯುಂ ಮಿಕಿಱುವಡೆಯ ನಾಗಗೋಸಿಗೆ ನೆರೆಯಾಯುಂ ಶ್ರೀಯಮಂ

೨೬. ಮಾಚನ್ದ್ರಾರ್ಕ್ಕಂ || ಇರ್ನ್ತೀಧರ್ಮ್ಮನಾರ್ವೊಂ ಪ್ರತಿಪಾಳಿಸಿದಂ ವಾರಣಾಸಿ ಕುರುಕ್ಷೇತ್ರ ಪ್ರಯಾ

೨೭. ಗೆ ಯರ್ಘ್ಯ ತೀರ್ಥಸ್ಥಾನದೊಳಗಾ . . . . . . . . .ಯಂ ಕೋಡುಂಕೊಳಗು ವಂ ಪಂಚರತ್ನಂಗಳಿಂ ಕಟ್ಟಿಸಿ

೨೮. ಬ್ರಾಹ್ಮಣರ್ಗುಭಯ . . . . .ದಾನಮಂ ಕೊಟ್ಟಫಳಮಕ್ಕೆ || ಈ ಧರ್ಮ್ಮಂ ಕಾದು

೨೯. ತೀರ್ತ್ಥಸ್ಥಾನದಲಿನಿತು ಕವಿಲೆಯ್ನ[?] ಗನಿತು ಬ್ರಾಹ್ಮಣರುಮನಳಿದ ಪಾಪವ . . . .

೩೦. ಕು || ಸ್ವದತ್ತಂ ಪರದ ತ್ತಂ ವಾಯೋಹರೇತೀ ವಸುನ್ಧರಾ ಷಷ್ಠಿಣ [ಣ] ರ್ಷ ಸಹಸ್ತಾಣಿ ವಿಷ್ಠಾ

೩೧. ಯಾಂ ಜಾಯತೇ ಕ್ರಿಮಿಃ || ಸಾಮಾನ್ಯೋಯಂ ಧರ್ಮ್ಮಸೇತು ನೃಪಾಣಾಂ ಕಾಲೇಕಾಲೇ

೩೨. ಪಾಲನಿಯೋ ಭವ ಸಕ್ಷಿನೇತಾಂ ಭಾವಿನಃ ಪಾರ್ತ್ಥಿವೇನ್ದ್ರಭೂಂಯೋಭೂಂಯೇ

೩೩.ಯಾಚತೇ ರಾಮಚಂದ್ರ || ಖಣ್ಡರಿಸಿದಂ ತಿಪ್ಪೋಜನಮಗ ಸಿಂಗೋಜ.