ಸ್ಥಳನಾಮ ಮತ್ತು ವ್ಯಕ್ತಿನಾಮಗಳ ಅಧ್ಯಯನ ಪಾಶ್ಚಾತ್ಯದಲ್ಲಿ ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದೆ. ಚರಿತ್ರೆಯಲ್ಲಿ ಕಳೆದು ಹೋದ ಹಲವಾರು ವಿಷಯಗಳನ್ನು ಅಥವಾ ಅಧ್ಯಾಯಗಳನ್ನು ತುಂಬಿಕೊಳ್ಳಲು ಈನಾಮಗಳ ಅಧ್ಯಯನ ಕೂಡ ಸಾಕಷ್ಟು ಹೊಸ ವಿಷಯಗಳನ್ನು ಒದಗಿಸುತ್ತದೆ. ಇಂಗ್ಲೆಂಡಿನಲ್ಲಿ ಈಗಿರುವ ‘ಅಂಗ್ಲೋಸೈಕ್ಸನ್’ ಜನಾಂಗಕ್ಕಿಂತ ಪೂರ್ವದಲ್ಲಿ ‘ಕೆಲ್ವ’ ಎಂಬ ಪಂಗಡ ವಾಸವಾಗಿತ್ತೆಂಬ ಅಂಶಕ್ಕೆ ದೊರೆಯುವ ಸ್ಥಳನಾಮಗಳೇ ಆಧಾರವೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಖಚಿತವಾದ ಇತರ ಚಾರಿತ್ರಿಕ ದಾಖಲೆಗಳು ಇಲ್ಲದರಿವ ಸಂದರ್ಭದಲ್ಲಿ ಈ ಸ್ಥಳನಾಮ- ವ್ಯಕ್ತಿನಾಮಗಳಿಂದ ಅಪೂರ್ವಮಾಹಿತಿ ಪಡೆಯಬಹುದಾಗಿದೆ.

ಆರ್ಯರಂತೆ ದ್ರಾವಿಡರೂ ಕೂಡ, ಆರ್ಯರಿಗಿಂತಲೂ ಪೂರ್ವದಲ್ಲಿ ಹೊರಗಿನಿಂದಲೆ ಭಾರತಕ್ಕೆ ಬಂದರೆಂದು ಹೇಳುವಲ್ಲಿ ಈ ಅಧ್ಯಯನದಿಂದ ಆಧಾರಗಳು ಲಭ್ಯವಾಗಿವೆ. ಯುರೋಪಿನ ಭಾಷಿಕ ನಡುಗಡ್ಡೆಯೆಂದು ಪ್ರಸಿದ್ಧವಾಗಿರುವ ‘ಬಾಸ್ಕ’ ಭಾಷೆಯಲ್ಲಿ ಸ್ಥಳನಾಮಗಳ ಅಂತ್ಯ – ಉರ್ ಇತ್ಯಾದಿ ರೂಪಗಳು ಕಂಡುಬಂದಿವೆ. ಇಂಥ ಅಂಶಗಳನ್ನು ವಿವರವಾಗಿ ಅಧ್ಯಯನ ಮಡಿದ ‘ಲಾಹೋವರಿ’ ಎಂಬ ವಿದ್ವಾಂಸರು ‘ಬಾಸ್ಕ’ ಭಾಷೆ ದ್ರಾವಿಡ ಮೂಲದ್ದೆಂದು ಭಾವಿಸಿದ್ದಾರೆ. ಅದೇ ರೀತಿ ಪರ್ಶಿಯಾದ ದ್ವೀಪಕಲ್ಪದಲ್ಲಿ ದ್ರಾವಿಡ ಸ್ಥಳನಾಮಗಳಿವೆ ಎಂಬ ಅಂಶವನ್ನು ಎಲ್.ವ್ಹಿ. ರಾಮಸ್ವಾಮಿ ಅಯ್ಯರ್ ಅವರು ಎತ್ತಿತೋರಿಸಿದ್ದಾರೆ. ಆದ್ದರಿಂದ ಸ್ಥಳನಾಮಗಳ ಜಾಡನ್ನು ಹಿಡಿದು ಪೂರ್ವಚರಿತ್ರೆಯನ್ನು ರಚಿಸಬಹುದಾಗಿದೆ ಎಂಬ ಅಂಶ ಮನದಟ್ಟಾಗಿರುತ್ತದೆ.

ಕರ್ನಾಟಕಕ್ಕೆ ಸಂಬಂಧಪಟ್ಟಂತೆ ನಾಮಗಳ ಅಧ್ಯಯನ ಕ್ಷೇತ್ರಗಳಲ್ಲಿ ಶಂಬಾ ಅವರೇ ಮೊದಲು ಕಾರ್ಯಪ್ರವೃತ್ತರಾದರು. ಈ ಕ್ಷೇತ್ರದಲ್ಲಿ ಆ ಕಾಲದಲ್ಲಿ ಮಹಾರಾಷ್ಟ್ರದ ವಿದ್ವಾಂಸರು ನಡೆಸುತ್ತಿದ್ದ ಚರ್ಚೆ-ಪರಿಚರ್ಚೆಗಳನ್ನು ಅವರು ಗಮನಿಸಿದ್ದರು. ಅಲ್ಲದೆ ಅಂತಹ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಸ್ಥಳವಾಚಕದ ಜೊತೆಗೆ ಮೈಲಾರ-ಖಂಡೋಬಾ, ಹೆಗ್ಗಡೆ ಮುಂತಾದ ಕೆಲವು ದೇವತಾ ವಾಚಕಗಳ ವಿಷಯದಲ್ಲಿಯೂ ಡಾ | ಶಂಬಾ ತಮ್ಮ ಅಭಿಪ್ರಾಯ ಮಂಡಿಸಿದ್ದರು. ಆದರೆ ಕರ್ನಾಟಕದ ಇತರ ವಿದ್ವಾಂಸರು ಈ ಅವಧಿಯಲ್ಲಿ ಈ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಲಿಲ್ಲ.

ಶಾಸನಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದ ವಿದ್ವಾಂಸರು ಮಾತ್ರ ಸ್ಥಳನಾಮ – ವ್ಯಕ್ತಿನಾಮಗಳ ಚರ್ಚೆಯನ್ನು ಆಗೀಗ ಮಾಡುತ್ತಿದ್ದುದು ಕಂಡುಬರುತ್ತದೆ. ಈ ವಿದ್ವಾಂಸರಿಗೆ ಗ್ರಾಮ ನಾಮಗಳನ್ನು ಮತ್ತು ವ್ಯಕ್ತಿನಾಮಗಳನ್ನು ಸರಿಯಾಗಿ ಗುರುತಿಸಬೇಕಾದುದು ಅನಿವಾರ್ಯವಾಗಿತ್ತೆಂದೇ ಶಾಸನಾಧ್ಯಯನ ಕ್ಷೇತ್ರದಲ್ಲಿ ಇಂತಹ ಚರ್ಚೆಗಳನ್ನು ಅಲ್ಲಲ್ಲಿ ಮಾಡುತ್ತ ಬಂದಿದ್ದಾರೆ. ಜೆ.ಎಫ್. ಫ್ಲೀಟ್, ಬಿ.ಎಲ್. ರೈಸ ಮುಂತಾದ ವಿದೇಶಿಯರ ಜೊತೆಗೆ ಆರ್. ನರಸಿಂಹಾಚಾರ, ನೆಲಮಂಗಲ ಲಕ್ಷ್ಮೀನಾರಾಯಣರಾಯರು, ಪಂಚಮುಖಿಯವರು, ಪಿ.ಬಿ.ದೇಸಾಯಿ ಮೊದಲಾದವರು. ಹಲವಾರು ಗ್ರಾಮನಾಮ, ವ್ಯಕ್ತಿನಾಮಗಳ ಬಗ್ಗೆ ಪ್ರಾಸಂಗಿಕವಾಗಿ ಚರ್ಚಿಸಿದ್ದಾರೆ. ಕಿಸುವೊಳಲು, ವೇಣುಗ್ರಾಮ ಕಿರುಕುಪ್ಪಟೂರು, ಬಾದಾಮಿ ಮಹಾಕೂಟ ಇತ್ಯಾದಿ ಸ್ಥಳನಾಮಗಳ ಬಗ್ಗೆ ಫ್ಲೀಟ್‌ರಂಥ ವಿದ್ವಾಂಸರು ಆಗೀಗ ವಿಚಾರಮಾಡಿದ್ದುಂಟು.

ನಾಮ ವಿಜ್ಞಾನದ ಅಧ್ಯಯನದಿಂದ ಹಲವಾರು ಮಹತ್ವದ ಸಂಗತಿಗಳನ್ನು ಕಂಡುಕೊಳ್ಳಲು ಪ್ರಯತ್ನ ಪಟ್ಟ ಕರ್ನಾಟಕದ ವಿದ್ವಾಂಸರೂ ಇದ್ದಾರೆ. ಈಗಾಗಲೇ ಹೇಳಿದಂತೆ ಅವರಲ್ಲಿ ಡಾ.ಶಂಬಾ ಜೋಷಿ, ಬಹಳ ಮುಖ್ಯರಾದವರು. ಇವರು ಈ ಶತಮಾನದ ೨೦ ರ ದಶಕದಷ್ಟು ಹಿಂದೆಯೇ ಈ ನಿಟ್ಟಿನಲ್ಲಿ ವಿಚಾರ ಮಾಡಿದ್ದು ಕಂಡುಬರುತ್ತದೆ. ಇವರ ಕೆಲವು ಲೇಖನಗಳು ಮತ್ತು ಪುಸ್ತಕಗಳು ಪ್ರಸಿದ್ಧವಾಗಿವೆ. ಕಣ್ಮರೆಯಾದ ಕನ್ನಡ (೧೯೩೩) ಮಹಾರಾಷ್ಟ್ರದ ಮೂಲ (೧೯೩೪) ಕನ್ನುಡಿಯ ಹುಟ್ಟು (೧೯೩೭) ಕನ್ನಡದ ನೆಲೆ (೧೯೩೯) ಎಡೆಗಳು ಹೇಳುವ ಕನ್ನಾಡ ಕಥೆ.(೧೯೪೭) ಈ ಮೊದಲಾದ ಗ್ರಂಥಗಳು ಮೂಲತಃ ಸ್ಥಳ ನಾಮಗಳ ಅಧ್ಯಯನದಿಂದ ಮೂಡಿಬಂದ ವಿಚಾರಗಳಿಂದಲೇ ಪ್ರಸಿದ್ಧವಾಗಿವೆ. ಡಾ || ಶಂಬಾ ಜೋಶಿಯವರು ಗೋದಾವರಿಯ ಆಚೆ, ನರ್ಮದಾ ತೀರದಲ್ಲಿ ಮೂಲ ಕರ್ನಾಟಕವಿತ್ತೆಂದು ತಮ್ಮ ಸಿದ್ಧಾಂತ ಮಂಡಿಸುವಲ್ಲಿ ಇಟ್ಟುಕೊಂಡಿರುವ ಆಧಾರ ಸ್ಥಳನಾಮಗಳೇ. ಗುಜರಾತಿನ ಈಗಿನ ಬಾರ್ಡೋಲಿ ಪ್ರಾಚೀನ ಕಾಲದಲ್ಲಿ ‘ಬಾರಡಪಲ್ಲಿಕಾ’ ಎಂದಾಗಿತ್ತು. ಈಗಿನ ‘ಮಾಳವ’ ‘ಮಾಲವ’ ಪ್ರದೇಶಕ್ಕೆ ಪ್ರಾಚೀನ ಕಾಲದಲ್ಲಿ ‘ಮಲಯ’ ಎಂಬ ಹೆಸರಿತ್ತು. ಮಲಯ ಇದು ‘ಮಲೆ’ ಎಂಬ ದ್ರಾವಿಡ ಮೂಲಪದ. ಇದೇ ರೀತಿ ಪಟ್ಟಿ | ಪಾಡಿ | ಬಾಡಿ ಎಂಬ ಅಂತ್ಯವಾಚಕಗಳಿಂದ ಹಲವಾರು ಸ್ಥಳವಾಚಕಗಳು ಆ ಪ್ರದೇಶದಲ್ಲೆಲ್ಲಾ ಕಂಡುಬರುತ್ತವೆ. ಉದಾ : ‘ಕುಂಡಿರವಳ್ಳಿಕಾ’ ಅಸಾಪಳ್ಳಿ (ಅಹ್ಮದಾಬಾದಜಿಲ್ಲೆ) ‘ಪೂಸಿಲಾವಳ್ಳಿ’ ‘ವಿನ್‌ಹುಚ್‌ವಳ್ಳಿ’ ಮೊದಲಾದ ಸ್ಥಳವಾಚಕಗಳು ಗುಜರಾತಿನ ಶಾಸನಗಳಲ್ಲಿ ಕಂಡುಬಂದಿವೆ. ಕಟವಪ್ರ, ಬೆಳ್ವೂಲ ಪೊಂಬುಚ್ಚ ಬೆಂತನಕಲ್ಲು (ಚಿಂತನಕಲ್ಲು) ಇತ್ಯಾದಿ ಸ್ಥಳನಾಮಗಳನ್ನು ಕುರಿತು ರೈಸರೂ ಅಲ್ಲಲ್ಲಿ ಚರ್ಚಿಸಿದ್ದು ಕಂಡು ಬರುತ್ತದೆ. ಅದೇ ರೀತಿ ಕದಂಬ, ಪುಲಕೇಶಿ, ಪಂಪ, ಭೀಮಯ್ಯ ಮುಂತಾದ ವ್ಯಕ್ತಿನಾಮಗಳನ್ನು ನಮ್ಮ ವಿದ್ವಾಂಸರು, ಚರ್ಚಿಸುತ್ತ ಬಂದಿದ್ದಾರೆ. ಪದ್ಮಪ ಪಂಪ ಆಯಿತೆಂದು ಮೊದಲಿನ ವಿದ್ವಾಂಸರು ಭಾವಿಸಿದ್ದರೆ ಡಾ || ಚಿದಾನಂದಮೂರ್ತಿಯವರು ಮೂಲತಃ ಪಂಪ ಎನ್ನುವ ಶಬ್ದ ಹಂಪೆಯ ಅಧಿದೇವತೆಯಾದ ಪಂಪಾದೇವಿಗೆ ಸಂಬಂಧ ಪಟ್ಟದೆಂದು ಹೇಳಿದ್ದಾರೆ. ಅವರ ಈ ಹೇಳಿಕೆಯಲ್ಲಿ ಸತ್ಯಾಂಶವಿದೆ. ಎಂದು ಹೇಳಬೇಕು. ಹಂಪಾಪೂರ, ಹಂಪಸಾಗರ, ಹಂಪಿಹೊಳೆ ಇತ್ಯಾದಿ ಸ್ಥಳವಾಚಕಗಳಲ್ಲಿ ಈ ಹೆಸರಿನ ಮೂಲ ರೂಪವೇ ಅಡಗಿದೆ. ಕಾರಣ ಪಂಪನ ಹೆಸರು ಜೈನ ಮೂಲದ್ದಾಗಿರದೇ ಅಚ್ಚಕನ್ನಡ ಮೂಲದ್ದೆಂದು ಒಪ್ಪಬೇಕಾಗುತ್ತದೆ. ಇದೊಂದು ಬಹುಪುರಾತನವಾದ ವ್ಯಕ್ತಿವಾಚಕ/ಸ್ಥಳವಾಚಕ ಎಂದು ಹೇಳಬಹುದು. ಇದೇ ರೀತಿ ಬುದ್ಧಯ್ಯ ಲೋಕಪ್ಪ, ಇತ್ಯಾದಿ ಹೆಸರುಗಳು ಈಗಲೂ ಉಳಿದು ಬಂದಿರುವುದು. ಒಂದು ಕಾಲಕ್ಕೆ ಬೌದ್ಧಧರ್ಮ ಕರ್ನಾಟಕ ಮೇಲೆ ಬೀರಿದ ಪ್ರಭಾವದ ಸಂಕೇತವೆಂದೇ ತಿಳಿಯಬಹುದು.

ಕಿತ್ತೂರ ಚೆನ್ನಮ್ಮ ರಾಣಿಯ ಹೆಸರು ಈಗ ಕರ್ನಾಟಕದ ತುಂಬ ಪರಿಚಿತವಾಗಿದೆ. ಕಿತ್ತೂರ ಮನೆತನದ ಮತ ವೀರಶೈವವೆಂಬುದು ಎಲ್ಲರಿಗೂ ಗೊತ್ತು. ಆದರೆ ಸ್ವತಃ ಕಿತ್ತೂರ ರಾಣಿ ಚೆನ್ನಮ್ಮನ ತವರು ಮನೆ ಎಂದರೆ ಕಾಕತಿಯ ದೇಸಾಯರ ಮನೆತನ ಜೈನ ಧರ್ಮಾವಲಂಬಿಯಾಗಿತ್ತು. ಇದನ್ನು ಪೋಷಿಸುವ ಪ್ರಧಾನ ಅಂಶವೆಂದರೆ ಚೆನ್ನಮ್ಮನ ತಾಯಿಯ ಹೆಸರು ‘ಪದ್ಮಾವತಿ’ ಎಂಬುದು. ನನ್ನ ಕ್ಷೇತ್ರ ಕಾರ್ಯದಲ್ಲಿ ಈ ಅಂಶ ದೃಢಪಟ್ಟಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಯ ಅನೇಕ ಮನೆತನಗಳಲ್ಲಿ ಮಗೆಪ್ಪ, ಮಗಯ್ಯ, ಮಗೆವ್ವ, ಇತ್ಯಾದಿ ವ್ಯಕ್ತಿವಾಚಕಗಳು ಈಗಲೂ ದೊರೆಯುತ್ತದೆ. ಇಂತಹ ವ್ಯಕ್ತಿವಾಚಕಗಳು ದೊರೆಯಲು ಮಗಿಯ ಪ್ರಭುಗಳು ಎಂಬ ಸ್ವಾಮಿಗಳೇ ಕಾರಣ. ಈ ಸ್ವಾಮಿಗಳು ವೀರಶೈವರೆಂದು ಈಗ ತಿಳಿಯಲಾಗುತ್ತದೆ. ಆದರೆ ವಾಸ್ತವದಲ್ಲಿ ಇವರು ನಾಥಪಂಥೀಯರಾಗಿದ್ದರೆಂದು ಹೇಳಬೇಕಾಗುತ್ತದೆ. ‘ಮಗಿ’ ಅಥವಾ ಹಂಡಿ ಎಂದರೆ ಮಣ್ಣಿನ ಪಾತ್ರೆ ಇಂತಹ ಮಣ್ಣಿನ ಪಾತ್ರೆ. ನಾಥ ಪಂಥೀಯರ ಸಂಕೇತಗಳಲ್ಲಿ ಒಂದು.

ಡಾ. ಡಿ.ಎಲ್.ಎನ್. ತಮ್ಮದೊಂದು ಲೇಖನದಲ್ಲಿ ‘ಇಸಿಲ’ ಎಂಬ ಸ್ಥಳವಾಚಕ ಅಶೋಕನ ಬ್ರಹ್ಮಗಿರಿ ಮುಂತಾದ ಶಾಸನಗಳಲ್ಲಿ ಬಂದಿರುವುದನ್ನು ಎತ್ತಿ ತೋರಿಸಿ ಅದೇ ಕನ್ನಡಭಾಷೆಯ ಅಸ್ತಿತ್ವವನ್ನು ಸಾರುವ ಮೊದಲ ಶಬ್ದವೆಂದು ಹೇಳಿದ್ದಾರೆ.

ಆದ್ದರಿಂದ ಈ ಸ್ಥಳವಾಚಕ/ವ್ಯಕ್ತಿವಾಚಕಗಳ ಬಲದಿಂದ ಹಲವಾರು ನೈಜಸಂಗತಿಗಳನ್ನು ತಿಳಿಯುವುದು ಸಾಧ್ಯವಾಗುತ್ತದೆಂದು ಮೊದಲು ಹೇಳಿದ ಅಂಶಕ್ಕೆ ಆಧಾರ ಒದಗಿಸಿದಂತೆ ಆಯಿತೆನ್ನಬಹುದು. ಇನ್ನೂ ಆಳವಾಗಿ ಚಿಂತನೆಗೈಯುತ್ತಾ ಹೋದರೆ ಹಲವಾರು ಹೊಸ ಅಂಶಗಳು ನಮ್ಮ ಗಮನ ಸೆಳೆಯುತ್ತವೆ. ಉದಾ : ಕರ್ನಾಟಕದ ಪ್ರಾಕೃತ ಶಾಸನಗಳಲ್ಲಿ ದೊರೆಯುವ ಶಾತವಾಹನ ರಾಜರ ಹೆಸರುಗಳಲ್ಲಿ ಗೌತಮಿಪುತ್ರ, ವಾಶಿಷ್ಟೀಪುತ್ರ, ಮಾಢರೀ ಪುತ್ರ ಎಂದು ತಪ್ಪದೆ ತಾಯಂದಿರ ಹೆಸರನ್ನು ಹೇಳುವ ಪದ್ಧತಿ ಕಂಡು ಬರುತ್ತದೆ. ಆಗಿನ ಕಾಲದ ಇತರ ರಾಜಮನೆತನಗಳಲ್ಲಿ ತಾಯಿಯ ಹೆಸರಿಗೆ ಪ್ರಾಧಾನ್ಯವಿಯುವುದು ಕ್ವಚಿತ್ತಾಗಿ ಕಂಡುಬರುತ್ತದೆ. ಸಮುದ್ರಗುಪ್ತನ ತಾಯಿ ‘ಲಿಚ್ಛವಿ’ ಮನೆತನದವಳು, ಗಂಗದೊರೆ ದುರ್ವಿನೀತನತಾಯಿ ‘ ಪುನ್ನಾಟ’ ಮನೆತನದವಳು ಎಂಬಂಥ ಅಂಶಗಳು ಕ್ವಚಿತ್ತಾಗಿ ಕಂಡು ಬಂದಿದೆ. ಶಾತವಾಹನದಲ್ಲಿ ತಪ್ಪದೇ ತಾಯಂದಿರ ಹೆಸರನ್ನು ಹೇಳಿಕೊಳ್ಳುವ ಪದ್ಧತಿಯಿದೆ ಆದ್ದರಿಂದ ಶಾತವಾಹನರು ಮಾತೃಪ್ರಧಾನ ಕುಟುಂಬದರರಾಗಿದ್ದರು ಎಂದು ತಿಳಿಯುವುದು ಸೂಕ್ತವೆ ಆಗಿದೆ. ಇದೇ ರೀತಿ ಸನ್ನತಿಯ ಶಾಸನಗಳಲ್ಲಿ ಕಂಡು ಬರುವ ಮುಡಾಣ ಮುನಾಳಿ ಎಂಬಂಥ ಸ್ಥಳವಾಚಕಗಳು ಮತ್ತು ಟಾಲೇಮಿ, ಪೆರಿಪ್ಲಸ್, ಲೇಖನಗಳಲ್ಲಿ ತೋರುವ ಬೈಜಂಥಿಯ, ಬದಿಯಾಮೊಯಿ ಮೊದಲಾದ ಸ್ಥಳವಾಚಕಗಳು ಗಮನಾರ್ಹವಾಗಿವೆ.

ಪ್ರಾಕೃತ ಶಾಸನ ಮತ್ತು ನಾಣ್ಯಗಳಲ್ಲಿ ತೊರುವ ಪುಳುಮಾವಿ ವಿಳಿವಾಯಕುರ, ತಕಿಂಚಿ, ಕೊಂಡಮಾಣ.[1] ವಳಿವೇರ,[2] ಮೊದಲಾದ ವ್ಯಕ್ತಿವಾಚಕಗಳು ಪ್ರಾಕೃತ ಅಥವಾ ಸಂಸ್ಕೃತ ಮೂಲದವಲ್ಲ ಎಂಬುದು ಸ್ಪಷ್ಟ. ಆದರೆ ವಳಿವೇರ ತಕಿಂಚಿ ಮುಂತಾದವು ದ್ರಾವಿಡ ಮೂಲದವೆಂದು ಹೇಳುವುದು ಕೂಡ ಅಷ್ಟೇ ಕಷ್ಟದ ಕಾರ್ಯ. ಯಾಕೆಂದರೆ ಸನ್ನತಿ ಶಾಸನದಲ್ಲಿ ತೋರಿ ಬರುವ ತುವೇರ, ಎನ್ನುವುದು ಶಕ ಮೂಲದ ವ್ಯಕ್ತಿವಾಚಕ ಶಬ್ದ. ಆದ್ದರಿಂದ ಕರ್ನಟಕದ ಇನ್ನೊಂದು ಶಾಸನದಲ್ಲಿ ಕಂಡುಬರುವ ವಳಿವೇರ2 ಎಂಬುದು ಶಕಮೂಲದ್ದೇ ಎಂದು ಊಹಿಸಬೇಕಾಗುತ್ತದೆ. ಧಾರವಾಡ ಜಿಲ್ಲೆಯ ಬೆಳ್ಹೊಡೆಯ ಶಾಸನದಲ್ಲಿ ‘ಸಕಏಚಮ್ಮ’ ಎಂಬ ವ್ಯಕ್ತಿಯ ಹೆಸರು ೮ ನೆಯ ಶತಮಾನದಲ್ಲಿ ಕಂಡು ಬರುತ್ತದೆ. ಆದ್ದರಿಂದ ಶಕಮೂಲದ ಜನರ ರಕ್ತ ಇಂದಿನ ಕನ್ನಡಿಗರಲ್ಲಿ ಸಮ್ಮಿಳಿತವಾಗಿದೆ ಎಂದು ಧಾರಾಳವಾಗಿ ಹೇಳಬಹುದು. ಇಂಥ ಅವಶೇಷಗಳ ಜೊತೆಗೆ ಅಚ್ಚದೇಶಿಯ ಸಂಸ್ಕೃತಿಯನ್ನು ಪ್ರದರ್ಶಿಸುವ ಅಂಶಗಳಿಗೂ ನಮ್ಮಲ್ಲಿ ಕೊರತೆಯಿಲ್ಲ. ಉದಾ : ಹುಟ್ಟಿದ ಮಕ್ಕಳು ತಾಳದಿದ್ದಾಗ ಅವುಗಳಿಗೆ ಹೀನಾರ್ಥಸೂಚಕ ಹೆಸರುಗಳನ್ನಿಡುವ ಒಂದು ದೊಡ್ಡ ಪರಂಪರೆ ನಮ್ಮಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪುಲಕೇಶಿಯ ಹೆಸರನ್ನೆ ತೆಗೆದುಕೊಳ್ಳಬಹುದು. ಈ ಹೆಸರಿನ ಮೂಲ ರೂಪ ‘ಪೊಲೆ+ಕೇಶಿ’ ಎಂದು ‘ಪೊಲೆ’ ಎಂಬ ಹೆಸರು ಅನೇಕ ವ್ಯಕ್ತಿಗಳಿಗೆ ಇದ್ದುದನ್ನು ಶಾಸನಗಳಿಂದ ಗುರುತಿಸಬಹುದು. ಇದೇ ರೀತಿ ಕಲ್ಲ, ಗುಂಡ, ದುಂಡ, ತಿಪ್ಪ, ಮಾಚ, ಕೇತ, ಕೆಂಚ, ಹುಚ್ಚ ಮೊದಲಾದ ಹೆಸರುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಂಥ ಅನಿಷ್ಟ ಸೂಚಕಗಳ ಜೊತೆಗೆ ಅಚ್ಚ ಕನ್ನಡದ ಮುದ್ದಾದ ಹೆಸರುಗಳು ಕೂಡ ಬೇಕಾದಷ್ಟು ಇದ್ದುವು, ಕೆಂಪ, ಚೆನ್ನ, ಹೊನ್ನ, ಕುಡಿಮುದ್ದ, ಇರಿವಬೆಡಂಗ…… ಇತ್ಯಾದಿ ಹೆಸರುಗಳು ಕರ್ನಾಟಕದ ಚರಿತ್ರೆಯಲ್ಲಿ ಬೇಕಾದಷ್ಟು ಕಂಡುಬರುತ್ತವೆ.

ವ್ಯಕ್ತಿ ವಾಚಕಗಳಂತೆ ನದಿ, ಬೆಟ್ಟ, ಜಲಾಶಯ, ಕುಲಗೋತ್ರಗಳು, ಹಣಕಾಸು ಇತ್ಯಾದಿ. ಅಂಶಗಳು ಗ್ರಾಮವಾಚಕ ಮತ್ತು ವ್ಯಕ್ತಿ ವಾಚಕಗಳಲ್ಲಿ ಪ್ರತಿಫಲಿತವಾಗುತ್ತದೆ. ಉದಾ : ಕಾವೇರಿ ಎಂಬ ನದೀವಾಚಕ ಕರ್ನಾಟಕದ, ವಿಶೇಷವಾಗಿ ಕೊಡಗಿನ ಸ್ತ್ರೀವಾಚಕಗಳಲ್ಲಿ ಬಹುಜನಪ್ರೀಯವಾದುದು. ಇದರ ಮೂಲ ‘ಕಾವ’ (< ಕಾಪ್ಪ) +ಏರಿ > ಕಾವರೇಇ ಎಂದು ಹೇಳಬಹುದು. ಇಲ್ಲಿ ಪೂರ್ವಪದ ಕಾಪ್ಪವೆಂದರೆ ರಕ್ಷಿಸುವ-ಕಾಪಾಡುವ ಅರ್ಥಾತ್ ಪವಿತ್ರವಾದ ಅಥವಾ ದಿವ್ಯವಾದ ‘ಏರಿ’ ಎಂದರೆ ಬೆಟ್ಟದ ಸ್ಥಳ ಎಂದು ಅರ್ಥ ಹೇಳಬಹುದು. ಏರಿ ಎಂಬ ಉತ್ತರ ಪದ ‘ಏರು’ ಎಂದೂ ಇರಬಹುದು. ಏರು ಅಂದರೆ ನೀರಿನ ಬುಗ್ಗೆ ಅಥವಾ ಜಲಾಶಯವಿರುವ ಸ್ಥಳ ಎಂಬರ್ಥ. ಆದರೆ ಕವೇರನೆಂಬ ಋಷಿಯ ಮಗಳು ಕಾವೇರಿ ಎಂದು ಕಲ್ಪಿತ ನಿಷ್ಪತ್ತಿಯನ್ನು ಹೇಳಲಾಗುತ್ತದೆ. ಇಂಥ ನಿಷ್ಪತ್ತಿಗಳಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಬದಲು ನೈಜಸ್ಥಿತಿಯನ್ನೂ ಸಂಸ್ಕೃತಿಯನ್ನೂ ತಿರುಚದಂತಾಗುತ್ತದೆ. ಇದಕ್ಕೆ ಇನ್ನೊಂದು ಉದಾಹರಣೆಯನ್ನು ಕೊಡಬಹುದು : ಬೆಳಗಾವಿ ಮತ್ತು ವಿಜಾಪೂರ ಜಿಲ್ಲೆಗಳಲ್ಲಿ ಹರಿಯುವ ಮಲಪ್ರಭೆ ಎಂಬ ನದಿಯ ಹೆಸರು ಮಲ+ಪ್ರಭೆ ಎಂದರೆ ಎಂಥಹ ಅಪದ್ಧತನ ? ಇಂಥ ಹೆಸರನ್ನು ಯಾರಾದರೂ ಇಡಬಹುದೆ ? ಇದು ಸಂಪೂರ್ಣ ತಪ್ಪು. ಇದರ ಮೂಲರೂಪ ಮಲೆಯ ಪರಿ ಎಂದರೆ ಮಲೆಗಳಲ್ಲಿ ಹುಟ್ಟಿ ಬೆಳ್ವಲದಲ್ಲಿ ಹರಿಯುವ ತೊಳೆ ಎಂದರ್ಥ. ಇದೇ ರೀತಿ ಗೋದಾ+ವರಿ ಎಂಬುದು ಕೂಡ ದ್ರಾವಿಡ ಮೂಲದ ಅರ್ಥಾತ್ ಕನ್ನಡ ಮೂಲದ ಪದವೇ. ಗೋದಾ ಅಥವಾ ಗೋದ+ಪರಿ ಗೋದಾವರಿ ಎಂದಾಗಿದೆ. ಗೋದ ಎಂದರೆ ‘ಗೋವಿನ ‘ ಅಥವಾ ಗೋದ+ಪರಿ ಗೋದಾವರಿ ಎಂದಾಗಿದೆ. ಗೋದ ಎಂದರೆ ‘ಗೋವಿನ’ ಅಥವಾ ‘ಕೋವಿನ’ (ಎಂದರೆ ದೇವರ) ಎಂದು ಅರ್ಥ ಹೇಳಬಹುದು. ಇದೇ ರೀತಿ ನಮ್ಮ ನಾಡಿನ ನದಿಗಳ ಹೆಸರುಗಳನ್ನು ವಿಮರ್ಶಿಸುವುದು ತುಂಬ ಅವಶ್ಯಕವಾಗಿದೆ.

ನಮ್ಮಲ್ಲಿ ಇಂಥ ಹಲವಾರು ನಾಮಗಳ ಚರ್ಚೆ ಆಗೀಗ ನಡೆಯುತ್ತ ಬಂದಿದೆ. ಪಂಪ, ಪುಲಕೇಶಿ ಎಂಬಥ ಪುರುಷರ ಹೆಸರುಗಳ ಜೊತೆಗೆ ಕಪ್ಪೆ ಅರಭಟ್ಟ, ಅಲ್ಲಮ, ಅಣ್ಣಣಬ್ಬೆ,ಮಧ್ವಾಚಾರ್ಯ ಎಂಬ ಹೆಸರುಗಳಲ್ಲದೆ ಮೈಲಾರ, ಖಂಡೋಬಾ, ಎಲ್ಲಮ್ಮ, ಗೋಕರ್ಣ ಬಾದುಬ್ಬೆ, ಭಳಾರಿ, ಬನದಬ್ಬೆ, ಚುಂಚ, ಜುಂಜಪ್ಪ, ಮಲ್ಲಿಕಾರ್ಜುನ ಇತ್ಯಾದಿ ದೇವರುಗಳ ಹೆಸರಿನ ಚರ್ಚೆಯೂ ಆಗೀಗ ನಡೆಯುತ್ತಾ ಬಂದಿದೆ. ಈ ದೇವತಾ ವಾಚಕಗಳನ್ನು ಸರಿಯಾಗಿ ವಿಶ್ಲೇಷಿಸುವುದು ಸಾಧ್ಯವಾದರೆ ನಮ್ಮ ಸಂಸ್ಕೃತಿಯ ಚಿತ್ರಣ ಹೆಚ್ಚು ಸ್ಪಷ್ಟವಾಗಲೂ ಸಾಧ್ಯ. ಲಕ್ಷಣ ದಂಡೇಶನು ‘ಜುಂಜು ವೀರಭದ್ರೇಶ್ವರ’ನೆಂಬ ಶರಣರ ಹೆಸರು ಹೇಳುತ್ತಾನೆ. ಇಲ್ಲಿ ವೀರಭದ್ರೇಶ್ವರ ಸರಿ; ಆದರೆ ಇದಕ್ಕೆ ಜುಂಜು ಎಂಬ ವಿಶೇಷಣವೇಕೆ? ಬಹುಶಃ ಮೂಲತಃ ವೀರಭದ್ರನ ಆರಾಧನೆ ಜುಂಜಪ್ಪನ ಆರಾಧನೆಯಿಂದ ಸಿಡಿದು ಪ್ರತ್ಯೇಕಗೊಂಡುದನ್ನೇ ಈ ಹೆಸರು ಸೂಚಿಸುತ್ತಿರಬಹುದು.

ಮೇಲಿನ ವಿವೇಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ವ್ಯಕ್ತಿವಾಚಕ, ಸ್ಥಳವಾಚಕ ಇತ್ಯಾದಿ ನಾಮವಾಚಕಗಳ ಅಧ್ಯಯನ ತುಂಬ ಗಂಭೀರವಾಗಿ ನಡೆಯಬೇಕಾದುದು ಅವಶ್ಯಕವೆನಿಸುತ್ತದೆ. ಆದರೆ ನಮ್ಮ ವಿಶ್ವವಿದ್ಯಾಲಯಗಳ ಭಾಷಾ ವೈಜ್ಞಾನಿಕ ಘಟಕಗಳು ಈ ದೀಶೆಯಲ್ಲಿ ಯಾವುದೇ ಮಹತ್ವದ ಪ್ರಗತಿ ಸಾಧಿಸಿಲ್ಲ. ಮಾಡಬೇಕಾದ ಕಾರ್ಯ ಬೆಟ್ಟದಷ್ಟಿದ್ದರೂ ನಾವು ಕೈ ಕಟ್ಟಿ ಕುಳಿತ್ತಿದ್ದೇವೆ ಎಂದು ಅನ್ನಿಸುತ್ತದೆ. ಕೆಲವೆ ಕೆಲವು ವಿದ್ವಾಂಸರು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಡಾ || ಕೆಮ್ತೂರು ರಘುಪತಿಭಟ್ಟ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳನಾಮಗಳನ್ನು ಕುರಿತು ಉತ್ತಮ ಪ್ರಬಂಧವನ್ನು ಹೊರತಂದಿದ್ದಾರೆ.

ಡಾ | ವ್ಹಿ.ಗೋಪಾಲಕೃಷ್ಣ ಅವರ ಕೃತಿಗಳಲ್ಲಿ ಕೋಲಾರ ಜಿಲ್ಲೆಯ ಸ್ಥಳವಾಚಕಗಳ ವಿವರಗಳು ಲಭ್ಯವಾಗಿವೆ. ಡಾ | ಭರಡೆ ಬೀದರ ಜಿಲ್ಲೆ ಸ್ಥಳನಾಮ ಕುರಿತು ಡಾ || ವೀರಭದ್ರಸ್ವಾಮಿ ಬಳ್ಳಾರಿಜಿಲ್ಲೆಯ ಸ್ಥಳನಾಮಗಳನ್ನು ಕುರಿತು ಪ್ರಬಂಧಗಳನ್ನು ರಚಿಸಿದ್ದಾರೆ. ನಾಮ ವಿಜ್ಞಾನವನ್ನು ಕುರಿತಂತೆ ಡಾ | ಎಂ.ಎಂ. ಕಲಬುರ್ಗಿಯವರ ಪುಸ್ತಿಕೆ – ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸಹಾಯಕ ಗ್ರಂಥವಾಗಿದೆ. ನಮಗಿಂತಲೂ ತೆಲುಗಿನಲ್ಲಿ ಸ್ಥಳನಾಮಗಳನ್ನು ಕುರಿತು ಹೆಚ್ಚು ಅಧ್ಯಯನಗಳು ಬಂದಿವೆ. ಚಿತ್ತೂರು ಚೆಂಗಲ್‌ಪಟ್ಟು, ನೆಲ್ಲೂರು, ಕಡಪಾ,ಈ ಜಿಲ್ಲೆಗಳ ಸ್ಥಳನಾಮ ಕುರಿತು ಒಂದೊಂದು ಮತ್ತು ಅನಂತಪುರ ಜಿಲ್ಲೆಯ ಸ್ಥಳನಾಮವನ್ನು ಕುರಿತು ಎರಡು ಪ್ರಬಂಧ ರಚಿಸಲ್ಪಟ್ಟಿದೆ. ತೆಲುಗು ಶಾಸನಿಕ ಸ್ಥಳನಾಮಗಳನ್ನು ಕುರಿತು ಅಧ್ಯಯನ ನಡೆದಿದೆ. ತಮಿಳಿನಲ್ಲಿ ಕೂಡ ಕೆ. ನಾಚಿಮುತ್ತು ಕೆ.ಎಮ್.ಜಾರ್ಜ, ಮೊದಲಾದವರು ಉತ್ತಮ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಈ ದಿಶೆಯಲ್ಲಿ ಡಾ || ಎಂ.ಬಿ. ಎಮಿನೋ ಅವರು ಕೂಡ ಕೆಲವು ಲೇಖನಗಳನ್ನು ಬರೆದಿದ್ದಾರೆ. ಕಂಪ/ಕಂಬವೆಂಬ ವ್ಯಕ್ತಿ ವಾಚಕ, ಕೊಡಗಿನ ವ್ಯಕ್ತಿ. ವಾಚಕಗಳು, ಇವನ್ನು ಕುರಿತ ಅವರ ಲೇಖನಗಳು ತುಂಬ ಬೆಲೆಯುಳ್ಳವಾಗಿವೆ. ಕನ್ನಡದಲ್ಲಿಯಂತೂ ಡಾ | ಕಲಬುರ್ಗಿಯವರನ್ನು ಬಿಟ್ಟರೆ ವ್ಯಕ್ತಿವಾಚಕಗಳನ್ನು ಕುರಿತ ಅಧ್ಯಯನ ವಿಶೇಷವಾಗಿ ವಿದ್ವಾಂಸರ ಗಮನವನ್ನೆ ಸೆಳೆದಿಲ್ಲವೆಂದು ಹೇಳಬಹುದು.

 

[1] Ec. Vll ಸೊರಬ-೨೬೩

[2]ಎಂ.ಎ.ಆರ್. 1915.PP.124-25