ಅಶೋಕನಿಂದ ಪ್ರಾರಂಭವಾದ ಪ್ರಾಕೃತ ಶಾಸನಗಳ ಬರವಣಿಗೆಯ ಕೇಂದ್ರ ಅಂದಿನ ಮಗಧ ರಾಜ್ಯವಾದುದರಿಂದ ಅವುಗಳ ಭಾಷೆ ಮಗಧದೇಶದ ಪ್ರಾಕೃತವಾಗಿರುವುದು ಸ್ವಾಭಾವಿಕ. ಅಂದಿನ ಕಾಲದ ಮಾಗಧಿ ಶಾಸನಭಾಷೆಯಾಗಿ ಪ್ರಚುರಗೊಂಡು ಪಶ್ಚಿಮ, ವಾಯುವ್ಯ. ಮಧ್ಯ ಮತ್ತು ಪೂರ್ವಭಾಗಗಳಲ್ಲೂ ದಕ್ಷಿಣದ ತುಂಗಭದ್ರೆಯ ಪರಿಸರದಲ್ಲೂ ಪ್ರಚುರಗೊಂಡಿತು. ಆದರೆ ಅದರಲ್ಲಿ ಮಾಗಧ ಪ್ರಮಾಣ ಭಾಷೆಯ ಅಂಶಗಳ ಜತೆಗೆ ಸ್ಥಳೀಯ ಅಂಶಗಳೂ ಪ್ರವೇಶ ಪಡೆದಿರುವುದನ್ನು ಸುಲಭವಾಗಿ ಗುರುತಿಸಬಹುದು. ಹೀಗಾಗಿ ಆರಂಭದ ಶಾಸನಗಳ ಭಾಷೆಯೇ ಖಚಿತವಾದ ಉಪಭಾಷೆಯೊಂದನ್ನು ಪ್ರತಿನಿಧಿಸಲಾರದ ಸ್ಥಿತಿ ನಿರ್ಮಾಣವಾಗಿದೆಯೆಂದು ಜ್ಲೂಲಬ್ಲಾಕ್ ಮೊದಲಾದ ವಿಸ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಅಶೋಕನ ಶಾಸನಗಳ ಭಾಷೆ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಕರ್ನಾಟಕದಲ್ಲಿ ದೊರೆಯುವ ಆ ಕಾಲದ ೧೪ ಶಾಸನಗಳಲ್ಲಿಯ ವಿಭಿನ್ನ ಅಂಶಗಳು ಗೋಚರಿಸುವುದನ್ನು ನೋಡಬಹುದು. ದೇವಾನಾಂ ಪಿಯೋ ಎಂದು ನಿಟ್ಟೂರಿನ ಪಾಠದಲ್ಲಿದ್ದರೆ ದೇವಾಣಂ ಪಿಯೆ ಎಂದು ಬ್ರಹ್ಮಗಿರಿಯ ಪಾಠದಲ್ಲಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಡಾ. ಎ. ಎಂ. ಮೇಹಂದಳೆ*ತಮ್ಮ ‘Historical Grammer of Inscriptional Prakrits’ ಎಂಬ ಮಹಾಪ್ರಬಂಧದಲ್ಲಿ ತಕ್ಕಷ್ಟು ವಿವರವಾಗಿ ಚರ್ಚಿಸಿದ್ದಾರೆ. ಅವರು ಪರಿಶೀಲನೆಯಲ್ಲಿ ತೋರಿಸಿರುವ ಬಹುತೇಕ ಅಂಶಗಳು ಕರ್ನಾಟಕದಲ್ಲಿ ಅನಂತರ ದೊರೆತ ಪ್ರಾಕೃತ ಶಾಸನಗಳಲ್ಲೂ ಕಂಡು ಬರುತ್ತವೆ. ದೀರ್ಘಸ್ವರಗಳು ಹ್ರಸ್ವವಾಗುವುದು. ಋೠ-ಶಷ ಲೋಪ, ವಿಸರ್ಗ ಲೋಪ, ಮೂರ್ಧನ್ಯೀಕರಣ, ಮಹಾಪ್ರಾಣೀಕರಣ ಕೆಲವೊಮ್ಮೆ ಮೂರ್ಧನ್ಯಗಳು ದಂತೀಕರಣಗೊಳ್ಳುವುದು ಮೊದಲಾದ ಧ್ವನಿಮಾತ್ಮಕ ಪರಿ ವರ್ತನೆಗಳು ಕರ್ನಾಟಕದ ಶಾಸನಗಳಲ್ಲೂ ಇವೆ. ಅಷ್ಟೇ ಅಲ್ಲದೆ ಮೊದಮೊದಲು ಪೂರ್ವಭಾಗದ ಶಾಸನಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಘೋಷಗಳು ಅಘೋಷಗಳಾಗಿ ಪರಿ ವರ್ತಿಸುವ ವಿಶಿಷ್ಟ ಪ್ರಕ್ರಿಯೆ ಕರ್ನಾಟಕದ ಶಾಸನಗಳಲ್ಲೂ ಕೃಚಿತ್ತಾಗಿಯಾದರೂ ಕಂಡು ಬಂದಿದೆ. (ಪೌರಾಣಭಕ್ತಿ >) ಪೋರಾಣಪಕಿತಿ ಅಂಥ ಒಂದು ಉದಾಹರಣೆ.[1]

ದ್ವಿವಚನ ಲೋಪ ಮೊದಲಾದ ಅಂಶಗಳು ಎಲ್ಲ ಶಾಸನಗಳಿಗೆ ಸಾಮಾನ್ಯವೆನಿಸಿದೆ. ಆದರೆ (ಏಕವಚನದ) ಚತುರ್ಥಿ ಮತ್ತು ಷಷ್ಠೀ ವಿಭಕ್ತಿಗಳಲ್ಲಿ ಹೆಚ್ಚಿನ ಸಂದರ್ಭದಲ್ಲಿ ಅಂತರವೇ ತೋರದು. ಇದರಿಂದಾಗಿ ಅನೇಕ ವೇಳೆ ಶಾಸನದ ಆಶಯವೇನೆಂಬುದು ಸ್ಪಷ್ಟವಾಗುವುದಿಲ್ಲ. ‘ದೇತಿ-ಕಸ’ ಎಂದರೆ ‘ದೇತಿಕನದು’ ಎಂಬ ಷಷ್ಯರ್ಥ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅದೇ ‘ಪುರಿಸದತಾಯ’ ಎಂಬಲ್ಲಿ ಪುರಿಸದತ್ತನಿಗೆ ಎಂದು ಚತುರ್ಥಿಯ ಅರ್ಥದಲ್ಲಿ ಸ್ವೀಕರಿಸಿದರೆ ಅರ್ಥದಲ್ಲಿ ಗೊಂದಲ ವೇರ್ಪಡುತ್ತದೆ. ‘ದೇತಿಕಸ’ ಎಂದರೆ ದೇತಿಕನೆಂಬನ ದಾನ ಎಂದು ಹೇಳಬಹುದು ಅಥವಾ ಅವನಿಗಾಗಿ ನಿರ್ಮಿಸಿದ ಸ್ಮಾರಕ ಎಂದೂ ಹೇಳಬಹುದು. ಅದರೆ ‘ಪುರಿಸದತಾಯ’ ಎಂಬಲ್ಲಿ ಪುರುಷದತ್ತನಿಗೆ ಎಂದಷ್ಟೆ ಹೇಳುವುದು ಔಚಿತ್ಯ ಪೂರ್ಣವೆನಿಸಿ ‘ಪುರುಷದತ್ತನ’ ಎಂದು ಅರ್ಥಹೇಳುವುದು ಅನುಚಿತವಾಗಿ ತೋರುತ್ತದೆ. ಶಾಸನಗಳಲ್ಲಿ ಷಷ್ಠಿ-ಚತುರ್ಥಿಗಳ ಈ ಗೊಂದಲಕಾರಣವಾಗಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಮೇಹಂದಳೆಯುವರು ಆಯ ಪ್ರತ್ಯಯವನ್ನು ‘ಏಕವಚನದಲ್ಲಿ ಚತುರ್ಥಿ ಮತ್ತು ಷಷ್ಠಿಗಳೆರಡಕ್ಕೂ ಹೇಳಿರುವಲ್ಲಿಯೂ ಈ ತೊಡಕದು ಎದ್ದು ತೋರುತ್ತದೆ.[2] ಸದ್ಯ ಇಂಥ ಸಮಸ್ಯೆಗಳಿಂದ ನಮ್ಮ ವಿಶ್ಲೇಷಣೆಗೆ ಹೆಚ್ಚಿನ ಬಾಧೆಯಲ್ಲದ ಕಾರಣ ಇವನ್ನು ಇಲ್ಲಿ ಅಲಕ್ಷಿಸಬಹುದು.

ಕರ್ನಾಟಕದಲ್ಲಿ ದೊರೆಯುವ ಕ್ರಿ.ಶ.ಪೂ. ಮೂರು ಮತ್ತು ಒಂದನೆಯ ಶತಮಾನದ ಶಾಸನಗಳು ಮತ್ತು ತರುವಾಯದ ಸನ್ನತಿ ಪರಿಸರದ ಶಾಸನಗಳ ಭಾಷೆಯಲ್ಲಿ ಮಗಧ ಭಾಷೆಯ ಅಂಶಗಳಿರುವಂತೆ ಬೌದ್ಧ ಸಂಸ್ಕೃತಿಯ ಕುರುಹುಗಳು ವಿಶೇಷವಾಗಿವೆ. ಜತೆಗೆ ಕ್ಷತ್ರಪರ ಭಾಷೆಯವಾಗಿರಬಹುದಾದ ಒಂದೆರಡು ಅಂಶಗಳ ಅವರ ಹೆಸರುಗಳಲ್ಲಿ ಕಾಣಬರುತ್ತವೆ. ದ್ರಾವಿಡ ಅಂಶಗಳು ಮಾತ್ರ ತೀರ ಕಡಿಮೆ ಯಾಗಿವೆ. ಸ್ಥಳವಾಚಕಗಳಿಗೆ ಹೋಲಿಸಿದಲ್ಲಿ ವ್ಯಕ್ತಿ ವಾಚಕಗಳಲ್ಲಿ ದ್ರಾವಿಡ – ಕನ್ನಡ ಮೂಲದ ಭಾಷಾಂಶಗಳು ವ್ಯಕ್ತಿವಾಚಕಗಳಲ್ಲಿ ತೀರ ಕಡಿಮೆಯೆನ್ನದೆ ನಿರ್ವಾಹವಿಲ್ಲ. ಈ ಶಾಸನಗಳಲ್ಲಿ ಹತ್ತೆಂಟು ಕನ್ನಡ ಮೂಲದ ಸ್ಥಳವಾಚಕಗಳು ಕಂಡುಬಂದಿದ್ದರೆ ವ್ಯಕ್ತಿವಾಚಕಗಳಲ್ಲಿ ಕೋಟ್ಟ, ಕೋಟ್ಟಿ, ಆಪ? ಎಂಬ ವಿಶಿಷ್ಟಗಳು ಹಾಗೂ ಕುಟಿ ? ಪ, ಅನ್ಹ? ಎಂಬ ವಾರ್ಗಿಕಗಳು ಮಾತ್ರ ಕಂಡುಬಂದಿವೆ.

ಇದರಿಂದ ಪ್ರಸ್ತುತ ಶಾಸನಗಳಲ್ಲಿ ತೋರುವ ಬಹುತೇಕ ವ್ಯಕ್ತಿಗಳು ಹೊರಗಿನಿಂದ ಕರ್ನಾಟಕಕ್ಕೆ ಬಂದು ನೆಲೆಸಿದವರೆಂದು ಭಾವಿಸಬೇಕಾಗುತ್ತದೆ.

ಇಂದಿನ ಶಿಕಾರಿಪುರ ತಾಲೂಕಿನ ಮಳವಳ್ಳಿ ಮತ್ತು ಧಾರವಾಡ ಜಿಲ್ಲೆಯ ವಾಸನಗಳು ಶಿವಲಿಂಗಪೂಜೆ ನಡೆಯುತ್ತಿದ್ದುದರಿಂದ ಅವು ಶೈವಕೇಂದ್ರಗಳಾಗಿದ್ದವು ಬೆಳಗಾವಿ, ಹಿರೆಹಡಗಲಿ ಪ್ರದೇಶದಲ್ಲಿ ವೈದಿಕರು ವಿಶೇಷವಾಗಿದ್ದರು. ಸನ್ನತಿ ಬನವಾಸಿಗಳಲ್ಲಿ ಬೌದ್ಧರ ದೊಡ್ಡನೆಲೆಗಳಿದ್ದ ವೆಂದು ಹೇಳಬಹುದು. ಒಟ್ಟಾರೆಯಾಗಿ ಬೌದ್ಧದರ್ಮ ತುಂಬ ವ್ಯಾಪಕವಾಗಿ ಅಂದು ಹಬ್ಬಿತ್ತು. ಈ ಅವಧಿಯಲ್ಲಿ ಶಾಸನೋದಾಹರಣೆಗಳಲ್ಲಿ ಜೈನಾವಶೇಷಗಳು ಇಲ್ಲವೇ ಇಲ್ಲ.

ಪುತ, ಕುಮಾರಿ ಭಾತು, ಭಗಿನಿ, ಪತಿ, ಭರಿಯಾ, ಮಾತುಲ ಮೊದಲಾದ ಸಂಬಂಧವಾಚಕಗಳು ಅಲ್ಲಲ್ಲಿ ಕಂಡುಬಂದಿವೆ. ವಾಸಿಠೀ ಪುತ (=ವಾಶಿಷ್ಠೀ ಪುತ್ರ) ಗೌತಮೀಪುತ (ಗೌತಮೀಪುತ್ರ,) ಮೊದಲಾದ ರಾಣಿಯರು ಮತ್ತು ತಾಯಂದಿರ ಹೆಸರುಗಳು ಕಂಡುಬಂದಿವೆ. ಈ ಸಂಗತಿ ವಿದ್ವಾಂಸರ ಗಮನಕ್ಕೆ ಬಂದಿದೆ. ಇಂಥದೊಂದು ಉದಾಹರಣೆ ಮಳವಳ್ಳಿಯ ಶಾಸನದಲ್ಲೂ ಇದ್ದು ‘ಕೋಸಿಕೀ ಪುತ್ತ’ ಎಂಬ ಪುರೋಹಿತನ ಹೆಸರು ಹೇಳುತ್ತದೆ. ವಶಿಷ್ಠ ಗೌತಮ’ ಕೌಶಿಕ ಮೊದಲಾದ ಪ್ರಖ್ಯಾತ ವೈದಿಕ ಋಷಿಗಳು ಹೆಸರು ಇವಾಗಿದ್ದು ಇಂಥವನ್ನು ಉಚ್ಚವರ್ಗದ ಸ್ತ್ರೀಯರು ಇಟ್ಟುಕೊಳ್ಳುತ್ತಿದ್ದುದೊಂದು ವಿಶೇಷವೇ ಎನಿಸಿದೆ. ಆದರೆ ತಂದೆಯ ಹೆಸರಿನ ಬದಲು ತಾಯಿಯ ಹೆಸರನ್ನು ಸಾತವಾಹನ ರಾಜರು ಹೇಳಿಕೊಂಡಿರುವುದು ಇನ್ನೂ ವಿಶೇಷವಾಗಿದೆ. ಈ ಶಾಸನಗಳ ಕಾಲಾವಧಿಯಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯು ಇನ್ನೂ ಬಲವಾಗಿದ್ದ ಸಂಗತಿಯನ್ನು ಇಂಥ ಉದಾಹರಣೆಗಳು ದೃಢಪಡಿಸುತ್ತವೆ. ಹೀಗೆ ಹೆಸರುಗಳನ್ನು ಹೇಳಿಕೊಳ್ಳುವ ಮಟ್ಟಿಗಾದರೂ ಸಾತವಾಹನರು ಸ್ತ್ರೀ ಪ್ರಾಧಾನ್ಯವನ್ನು ಮಾನ್ಯಮಾಡಿದ್ದರಾದುದರಿಂದ ಅವರು ಸಾಂಸ್ಕೃತಿಕವಾಗಿ ಆರ್ಯೀಕರಣ-ಪ್ರಾಕೃತೀಕರಣಗೊಂಡಿದ್ದರೂ ಮೂಲತಃ ದ್ರಾವಿಡ ಜನಾಂಗ ವಾಗಿದ್ದರೆಂಬುದು ಇದರಿಂದ ಸೂಚಿತವಾಗುತ್ತದೆ.

ಈ ಅವಧಿಯ ಸ್ತ್ರೀ ಸಮುದಾಯ ರಾಜಕಾರ್ಯವನ್ನು ನಿಯಂತ್ರಿಸುವ ಮಟ್ಟಿಗಾದರೂ ಪ್ರಭಾವಶಾಲಿಯಾಗಿತ್ತೆಂದು ಹೇಳಬಹುದು. ಆದರೆ ಅವರು ನೇರವಾಗಿ ರಾಜಕೀಯದಲ್ಲಿ ಭಾಗವಹಿಸುತ್ತಿದ್ದ ಬಗ್ಗೆ ಆಧಾರಗಳಿಲ್ಲ. ಹಲವು ಜನ ರಾಜಮನೆತನದವರು ಅಮಾತ್ಯ ಪತ್ನಿ-ಕುಮಾರಿಯರು, ಭೋಜಕ ಪತ್ನಿಯರು ಗ್ರಾಮಿಕ (ಗೌಡ) ಕುಮಾರಿಯರು. ವ್ಯಾಪರಿಗಳ ಹೆಂಡಂದಿರು ದತ್ತಿ-ದಾನಗಳನ್ನೀಯುತ್ತಿದ್ದುದು ಹಾಗೂ ಬೌದ್ಧ ಭಿಕ್ಷುಣಿಯರಾಗುತ್ತಿದ್ದುದು ಶಾಸನಗಳಲ್ಲಿದೆ. ಬನವಾಸಿಯಲ್ಲಿ ಕೆರೆ, ವಿಹಾರಗಳನ್ನು ನಿರ್ಮಾಣಗೈದ ನಾಗಸಿರಿ, ನಾಗಾರ್ಜುನೀ ಕೊಂಡದಲ್ಲಿ ವಿಹಾರ ನಿರ್ಮಾಣ ಮಾಡಿದ ಬನವಾಸಿಯ ರಾಣಿ ಕೊದಬಾಲಸಿರಿ, ರಾಜಾಮಾಚಿ ರಾಮಸಿರಿ, ಗಾಮಿಕುಮಾರಿ ಪದಮಸಿರಿ, ಭೋಜಕಿನಿ ಕಾಮಾ, ರಠಿನೀ ಸೇಬನಿಕಾ, ಭಿಕುನಿ ಯಖಿ, ನಾಟಿಕಾ(ನರ್ತಕಿ) ಆಯ(೯) ದಾಸಿ, ಗೋವಿ ದಾಸಿ- ಹೀಗೆ ಮಹಿಳಾ ಪರಿವಾರ ಕಂಡುಬರುತ್ತದೆ. ಅಂದಿನ ಬೌದ್ಧ ಸಮುದಾಯದಲ್ಲಿ ನಟಿಯರೂ (ದೇವದಾಸಿಯರು ?) ಇದ್ದರೆಂಬುದು ಗಮನಿಸತಕ್ಕ ಸಂಗತಿ. ಹಲವು ಜನ ಮಾನ್ಯ ಗೃಹಿಣಿಯರು ಶಾಸನಗಳಲ್ಲಿ ನಿರ್ದಿಷ್ಟಗೊಂಡಿದ್ದಾರೆ. ಗೋವಿದಾಸಿ, ಆಯ(೯) ದಾಸಿ ಎಂದು ‘ದಾಸಿ’ ವಾರ್ಗಿಕದಿಂದ ಅಂತ್ಯಗೊಳ್ಳುವ ಹೆಸರುಗಳಿಂದ ಅವರು ಶೂದ್ರ ಸ್ತ್ರೀಯರೆಂದು ಭಾವಿಸಿಬಹುದು.

ಮೇಲೆ ನೋಡಿರುವಂತೆ ಶೂದ್ರರ ಹೆಸರುಗಳ ಅಂತ್ಯದಲ್ಲಿ-ದಾಸ-ದಾಸಿ ಎಂಬಹ ವಾರ್ಗಿಕಗಳು ಸೇರುತ್ತಿದ್ದವೆಂಬುದಕ್ಕೆ ಆಧಾರಗಳಿರುವಂತೆ ಬ್ರಾಹ್ಮಣರ ಹೆಸರುಗಳ ಅಂತ್ಯದ-ಜ – ಆಯ (<ಆರ್ಯ) ಸಮ (<ಶರ್ಮ) ಮೊದಲಾದ ವಾರ್ಗಿಕ ಸ್ಪಷ್ಟವಾಗಿ ಕಂಡುಬಂದಿವೆ. ಇದೇ ರೀತಿ ಹಿರೇಹಡಗಲಿ ಮತ್ತು ಮಳವಳ್ಳಿಯ (ಕದಂಬ) ಶಾಸನದಲ್ಲಿ ಶಿವಖದವಮ ಮತ್ತು ಶಿವ…. ಮಮ್ಮ ಎಂಬ ರಾಜರ ಹೆಸರುಗಳು ಕಂಡುಬಂದಿರುವುದರಿಂದ ಸ್ಮ್ರತಿಗಳು ಹೇಳುವಂತೆ ಬ್ರಾಹ್ಮಣ ಹೆಸರುಗಳಿಗೆ ಶರ್ಮ, ಕ್ಷತ್ರೀಯರ ಹೆಸರುಗಳಲ್ಲಿ ವರ್ಮ, ಶೂದ್ರರ ಹೆಸರುಗಳಲ್ಲಿ ದಾಸ-ದಾಸಿ ಎಂಬ ವಾರ್ಗಿಕಗಳು ಸೇರುತ್ತಿದ್ದುದು ಗಮನಾರ್ಹ ಸಂಗತಿ. ಆದರೆ ವೈಶ್ಯ ವರ್ಣ-ವರ್ಗದವರಿಗೆ-ಗುಪ್ತ ಎಂಬುದನ್ನು ಸೇರಿಸಬೇಕೆಂದು ಹೇಳುವ ಸ್ಮ್ರತಿಗಳ ಮಾತಿಗೆ ಒಂದೂ ಉದಾಹರಣೆಗಳಿಲ್ಲ. ರಾಜರನ್ನು ಬಿಟ್ಟರೆ ಇತರ ಯಾವ ಗಂಡಸಿಗೂ- ವರ್ಮ ಪ್ರಯೋಗವಿಲ್ಲದಿರುವುದು ಕೂಡ ಅಷ್ಟೇ ಗಮನಾರ್ಹವಾಗಿದೆ. ಬ್ರಾಹ್ಮಣರು ಮಾತ್ರ ಸೃತಿಗಳನ್ನು ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರೆಂದು ಹೇಳಬಹುದು.

ಈ ಅವಧಿಯಲ್ಲಿ ಕಂಡುಬಂದಿರುವ ಬ್ರಾಹ್ಮಣವಂಶದವರು ತಮ್ಮ ವೈದಿಕ ಕರ್ಮಕಾಂಡವನ್ನು ನಿರಾಬಾಧಿತವಾಗಿ ನಡೆಸಿಕೊಂಡು ಹೋಗುತ್ತಿದ್ದರೆಂಬುದು ಹಡಗಲಿ, ಬೆಳಗಾವಿ, ಮಗಳೂರು ಮೊದಲಾದ ಶಾಸನಗಳಿಂದ ಸ್ಪಷ್ಟವಾಗಿದೆ. ಅಂತೆಯೇ ಬೌದ್ಧರಪದವಾಗಿರುವ ಸನ್ನತಿಯ ಶಾಸನಗಳಲ್ಲಿ ವೈದಿಕ ಪರಂಪರೆಯ ದ್ಯೋತಕವಾಗಿ ಅಗ್ನಿಹೋತ್ರಿ ಮೊದಲಾದ ಹೆಸರುಗಳು ಗೋಚರಿಸಿವೆ. ಆತ್ರೇಯ, ಕೌಂಡಿಣ್ಯ ಕೌಶಿಕ, ಭಾರದ್ವಾಜ, ಹಾರೀತ, ಮಾನವ್ಯ ಮತ್ತು ವತ್ಸ ಗೋತ್ರಗಳ ಜತೆಗೆ ಅಗ್ನಿಷ್ಟೋಮ, ಅಗ್ನಿಹೋತ್ರ ಮೊದಲಾದ ಇಷ್ಟಿ-ಯಜ್ಞಗಳ ಉಲ್ಲೇಖಗಳೂ ಇವೆ. ಕದಂಬರ ಆದಿದಾಖಲೆಯಾದ ಮಳವಳ್ಳಿ ಶಾಸನದಲ್ಲಿ ಅವರನ್ನು ಮಾನವ್ಯಸ ಗೋತ್ರರೆಂದು ಹೇಳಿದೆ. ಅದೇ ಶಾಸನದ ಕೊಂಡಮಾಣನ ವಂಶಸ್ಥರು ಶಿವಲಿಂಗ ಪೂಜೆಯ ಪುರೋಹಿತರಾಗಿದ್ದುದು ಸ್ಪಷ್ಟ. ಶಿವಲಿಂಗ ಪೂಜೆಯಂತೆ, ನಾಗ, ಹಾರೀತಿ ಪೂಜೆಗಳು ಕೂಡ ಅಂದು ಪ್ರಚಲಿತವಾಗಿದ್ದವು. ಈ ರೀತಿ ಬೌದ್ಧಧರ್ಮದ ಪ್ರಾಬಲ್ಯ ಕಾಲದಲ್ಲೂ ವೈದಿಕ ಮತ್ತು ವೈದಿಕೇತರ ಹಿಂದೂ ಮತ ಪ್ರಚಲಿತವಾಗಿದ್ದುದು ಈ ವ್ಯಕ್ತಿನಾಮಗಳಿಂದ ಖಚಿತವಾಗುತ್ತದೆ. ನಾಗಾರಾಧನೆಯಂತೂ ಅಂದು ತುಂಬ ಜನಪ್ರಿಯವಾಗಿತ್ತು. ಬನವಾಸಿಯಲ್ಲಿ ನಾಗಸಿರಿಯಿಂದ ಸ್ಥಾಪಿಸಲಾದ ನಾಗಪ್ರತಿಮೆಯಲ್ಲದೆ ನಾಗದೇವ, ನಾಗನಿಕಾ, ನಾಗನಂದಿ, ನಾಗಬುಧಿ, ನಾಗಬೋಧನಿಕಾ ಮೊದಲಾದ ವ್ಯಕ್ತಿನಾಮಗಳು ಈ ಮಾತಿಗೆ ಸಮರ್ಥನೆ ಒದಗಿಸುತ್ತವೆ.

ನಾಗಾರಾಧನೆಯಂತೆ ಅಂದು ಕರ್ನಾಟಕದಲ್ಲಿ ಸ್ಕಂದನ ಪೂಜೆಯೂ ಪ್ರಚಲಿತವಾಗಿತ್ತು. ಕುಮಾರ, ಖಂದಕೋಂಡಿ, ಖಂದಡ, ಖಂದಸಮ ಎಂಬ ಬ್ರಾಹ್ಮಣ ಹೆಸರುಗಳು ಶಿವಖದವಮ್ಮ ಎಂಬ ರಾಜನ ಹೆಸರು. ಇದಮೋರಕ ಎಂಬ ಶಿಲ್ಪಿ, ಕದಂಬದೊರೆ ಮಯೂರಶರ್ಮ ಎಂದು ಮೊದಲಾದ ಸಮಾಜದ ಎಲ್ಲ ವರ್ಗದವರೂ ಸ್ಕಂದನ ಹೆಸರಿಟ್ಟು ಕೊಳ್ಳುತ್ತಿದ್ದುದು ಈ ಅವಧಿಯಲ್ಲಿ ಕಂಡು ಬರುತ್ತದೆ. ಸನ್ನತಿಯ ಶಾಸನವೊಂದರಲ್ಲಿ ಮಹಾಸೇನ ಎಂಬುದು ದೇವತಾ ವಾಚಕವಾಗಿಯೇ ಕಾಣಿಸಿಕೊಂಡಿದೆ.

ಇನ್ನುಳಿದಂತೆ ಬ್ರಾಹ್ಮಣ ಹೆಸರುಗಳಲ್ಲಿ ಅಗ್ನಿ, ರವಿ, ಇಂದ್ರ, ಕಾಲ, ಮಿತ (<ಮಿತ್ರ), ರುದ = ರುದ್ರ) ಎಂಬ ಹೆಸರುಗಳು ವೈದಿಕ ದೇವತೆಗಳನ್ನು ಪ್ರತಿನಿಧಿಸುವುದು ಸ್ಪಷ್ಟ. ಇವಲ್ಲದೆ, ವಿಣ್ಹು, ಕಾಮ, ಕನ್ಹ, ದತ್ತ ಎಂಬ ಅವೈದಿಕ ಹಿಂದೂ ದೇವತಾ ವಾಚಕಗಳೂ ಈ ಕಾಲದಲ್ಲಿವೆ. ಇವು ತರುವಾಯದ ಪುರಾಣಗಳಲ್ಲಿನ ದೇವತಾನಾಮಗಳು ಆದರೆ ಹಿಂದೂ ಪುರಾಣಗಳ ಇನ್ನುಳಿದ ದೇವ-ದೇವತೆಗಳಾದ, ಪಾರ್ವತಿ-ದುರ್ಗೆ, ಲಕ್ಷ್ಮಿ, ನರಸಿಂಹ, ಹನುಮ, ಗರುಡ, ಸರಸ್ವತಿ, ಲಕ್ಷ್ಮಣ, ಸೀತೆ, ರುಕ್ಮಿಣಿ, ರಾಧೆ, ಗಣಪತಿ ಮೊದಲಾದವರು ಕಂಡುಬಂದಿಲ್ಲ. ರಾಮಸಿರಿ ಎಂದಿರುವ ಏಕೈಕನಾಮ ಪುರುಷವಾಚಿಯಾಗಿರದೆ ಸ್ತ್ರೀವಾಚಿ ಯಾಗಿರುವುದು ಗಮನಾರ್ಹ. ‘ಧರಮಹ’ ಎಂಬ ಅಸ್ಪಷ್ಟ ಉದಾಹರಣೆಯನ್ನು ಹೊರತುಪಡಿಸಿದರೆ ಮಹಾ ಭಾರತದ ಪಾತ್ರಗಳೂ ಇಲ್ಲಿ ಕಂಡುಬಂದಿಲ್ಲ. ಅಂತಯೇ ಅಹಲ್ಯಾ, ಸಾವಿತ್ರಿ ಮೊದಲಾದ ಪಂಚ ಕನ್ಯೆಯರು ದಶಾವತಾರ ಸಂಬಂಧಿ ಇತರರು ಇಲ್ಲಿನ ಶಾಸನಗಳಲ್ಲಿಲ್ಲ.

ಮೌರ್ಯಶಾಸನಗಳಲ್ಲಿ ಆಯಪುತ (ಸಂ. ಆರ್ಯಪುತ್ರ) ಮಹಾಮಾತ (ಮಹಾಮಾತ್ರ) ರಠಿಕ, ಮೊದಲಾದವರು, ಸಾತವಾಹನ ಶಾಸನಗಳಲ್ಲಿ ಮಹಾರಾಜ (ಚಕ್ರವರ್ತಿ) ರಾಜಾಮಾತ್ಯ, ಭೋಜಕ, ಮಹಾರಠಿ, ರಠಿ, ಅಕ್ಷಪಟಲಿಕ ಮಹಾಗಾಮಿ, ಗಾಮೀ (=ಗೌಡ) ಲೇಖಕ ಮೊದಲಾದ ಅಧಿಕಾರ ವರ್ಗದವರು ಕಂಡು ಬರುತ್ತಾರೆ. ಇವರಲ್ಲಿ ರಠಿ, ಮಹಾರಠಿ, ಭೋಜಕರು ತರುವಾಯದ ಕರ್ನಾಟಕದ ಶಾಸನಗಳಲ್ಲಿ ಹಿನ್ನೆಲೆಗೆ ದೂಡಲ್ಪಟ್ಟಿದ್ದಾರೆ ಎಂದರೆ ಗಂಗ ಕದಂಬ ಮತ್ತು ಬಾದಾಮಿ ಚಾಲುಕ್ಯರ ಕಾಲದ ಆಡಳಿತ ವ್ಯವಸ್ಥೆ ಸ್ಥಳೀಯಗೊಂಡು ತೀವ್ರ ಬದಲಾವಣೆಗೊಳಪಟ್ಟಿತು.

ಈ ಶಾಸನಗಳಲ್ಲಿ ಹಲವು ವೃತ್ತಿವಾಚಕಗಳು ತೋರಿದ್ದು. ಇವುಗಳಲ್ಲಿ ಬಹಳಷ್ಟು ಇಂದಿನವರೆಗೂ ನಡೆದುಕೊಂಡು ಬಂದಿವೆ. ಬ್ರಾಹ್ಮಣ, ವಿಶ್ವಕರ್ಮ, ನೇಕಾರ, ಶಿಲ್ಪ, ವಣಿಕ, ಲೇಖಕ, ನರ್ತಕಿ ಮೊದಲಾದವರ ನೇರ ಉಲ್ಲೇಖಗಳಲ್ಲದೆ ಹಿರೇಹಡಗಲಿಯ ಪಲ್ಲವ ಶಾಸನದಲ್ಲಿ ಹದಿನೆಂಟು ಜಾತಿ ಪರಿವಾರಗಳ ಉಲ್ಲೇಖವಿರುವುದು ನಮ್ಮನ್ನು ಚಕಿತಗೊಳಿಸುತ್ತದೆ. ಕ್ರಿ.ಶ. ಆರನೆಯ ಶತಮಾನದ ಮಲ್ಲೋಹಳ್ಳಿಯ ಶಾಸನದಲ್ಲೂ ಕ್ರಿ. ಶ. ೮ನೆಯ ಶತಮಾನದ ಲಕ್ಷ್ಮೇಶ್ವರ ಶಾಸನದಲ್ಲೂ ಇವುಗಳ ಉಲ್ಲೇಖವಿದೆ.[3] ಒಕ್ಕಲುತನ ಅಂದು ಪ್ರಧಾನ ಉದ್ಯೋಗವಾಗಿತ್ತಾದರೂ ಅದರ ನೇರ ಉಲ್ಲೇಖವಿಲ್ಲ. ಬೌದ್ಧಯುಗದ ದೇವಾಲಯ-ವಿಹಾರಗಳಲ್ಲಿ ಅಂದು ನರ್ತನ ಸೇವೆ ನಡೆಯುತ್ತಿತ್ತೆಂದು ಕಾಣುತ್ತದೆ. ಸನ್ನತಿಯ ಶಾಸನಗಳಲ್ಲಿ ಆಯದಾಸಿ, ಗೋವಿದಾಸಿ ಎಂಬ ನರ್ತಕಿಯರು ಉಲ್ಲೇಖಿತರಾಗಿದ್ದಾರೆ.

ಗ್ರಂಥಋಣ :

೧. ಕನ್ನಡ ನಾಮ ವಿಜ್ಞನ,- ಡಾ. ಎಂ. ಎಂ. ಕಲಬುರ್ಗಿ (ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಣೆ)

೨. ತುಂಬಿದ ಕೊಡ – ಸಂ. ಎಂ. ಪಿ. ಮಂಜಪ್ಪಶೆಟ್ಟಿ

೩. ಕಲಬುರ್ಗಿ ಜಿಲ್ಲೆಯ ಶಾಸನಗಳು – ಹನುಮಾಕ್ಷಿ ಗೋಗಿ

೪. ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ- ಡಾ. ಎಂ. ಬಿ. ನೇಗಿನಹಾಳ ಕವಿವಿ ಧಾರವಾಡ

೫. ಪೂರ್ವದ ಹಳಗನ್ನಡ ಶಾಸನಗಳ ಸಾಹಿತ್ಯಕ ಅಧ್ಯಯನ – ಡಾ. ಎಂ. ಬಿ. ನೇಗಿನಹಾಳ ಕವಿವಿ ಧಾರವಾಡ

೬. Early Brahmi Inscriptions from Sannati- I.K. Sharma and J. Varaprasada Rao

೭. The Formation of Marathi Language – Jules Block

೮. Select Inscriptions Vol-1 – D.C. Sircar

೯. Geography in Ancient Indian Inscriptions- Parmananda Gupta

೧೦. Epigraphia Indica Vol-I, II, V, VI

೧೧. South Indian Inscriptions Vol – XX

೧೨. Epigraphia Carnatica Vol- 7, 12.

೧೩. ಕರ್ನಾಟಕ ಇತಿಹಾಸ ದರ್ಶನ ಸಂ. ೧೦

೧೪. ಸಂಶೋಧನ ತರಂಗ ಸಂಪುಟ-೧- ಡಾ. ಎಂ. ಚಿದಾನಂದ ಮೂರ್ತಿ

 

* ‘Historical Grammer of Inscriptional Prakrits Introduction-pp-I-XXVIII ಮತ್ತು ಪು. ೧ ರಿಂದ ೨೭

[1]ಪಕಿತಿಯಂತೆ (ಸಿದ್ಧ, >) ಚಿತ್ತ (ದಂಡ>) ತಂಡ, ರಾಜ > ರಾಚ ಅಧಿಯಡಿ > ಅತಿಯಡಿ ಎಂಬಂಥ ಪ್ರಯೋಗಗಳು ತರುವಾಯದ ಶಾಸನಗಳಲ್ಲಿ ಕಂಡುಬರುತ್ತದೆ.

[2] ‘Historical Grammer of Inscriptional Prakrits-pp’-93-94 ಮುಂ.

[3]ವಚನಕಾರರ ಕಾಲದಲ್ಲಿ ಈ ಸಂಖ್ಯೆ ಹದಿನೆಂಟನ್ನು ಮೀರಿತ್ತು. ಕನಿಷ್ಟ ೩೦ರಷ್ಟು ಜಾತಿಗಳು ವಚನಗಳಲ್ಲಿ ಉಲ್ಲೇಖಗೊಂಡಿವೆ. ಕ್ರಿ. ಶ. ಸು. ೬ನೆಯ ಶತಮಾನದ ಅಮರಕೋಶದಲ್ಲಿ ಸು. ೬೦ರಷ್ಟು ವೃತ್ತಿ-ಜಾತಿಗಳ ಉಲ್ಲೇಖವಿದೆ.