ಗಂಗ ದೊರೆ ದುರ್ವಿನೀತನ ಉತ್ತನೂರು ಶಾಸನದಲ್ಲಿ ರಾಜ ಬಿರುದನ್ನು ಕೆಳಗಿನಂತೆ ಕೊಡಲಾಗಿದೆ:

ಶ್ರೀಮಾಧವ ಮಹಾರಾಜ:

ನಾನಾ ಶಾಸ್ತ್ರಾರ್ತ್ಥ ಸದ್ಭಾವಾಧಿಗಮ ಪ್ರಣೀತ ಮತಿ ವಿಶೇಷ್ಯಸ್ಯ
ವಿದ್ವತ್ಕವಿಕಾಂಚನ ನಿಕಷೋಪಲ ಭೂತಸ್ಯ
ವಿಶೇಷತೋಪ್ಯನವಶೇಷಸ್ಯ
ನೀತಿ ಶಾಸ್ತ್ರ ವಕ್ತೃಪ್ರಯೋಕ್ತೃ ಕುಶಲಸ್ಯ
ದತ್ತಕ ಸೂತ್ರ ವೃತ್ತೇಃ ಪ್ರಣೀತ ಶ್ರೀಮಾಧವ ಮಹಾರಾಜಸ್ಯ

ದುರ್ವಿನೀತ:

ವಿಜೃಂಭಮಾಣ ಶಕ್ತಿ ತ್ರಯೋಪ ನಮಿತ ಸಮಸ್ತ ಸಾಮನ್ತ ಮಂಡಲೇನ
ಆನ್ದರ್ಯ ಆಲತ್ತೂರ ಪೇರುಳಱೆ ಅಪೆರ್ನ್ನೆಗರಾದ್ಯನೇಕ ಸಮರ ಮುಖ
ಮಹಾಹೂತ ಪ್ರತಾಪ ಶೂರಪುರುಷ ಪಶೂಪಹಾರ
ವಿಷಸವಿಹಸ್ತೀಕೃತ ಕೃತಾಂತಾಗ್ನಿ ಮುಖೇನ
ಶಬ್ದಾವತಾರ ಕಾರೇಣ ದೇವಭಾರತೀ ನಿಬದ್ಧ ವಡ್ಡಕಥೇನ
ಕಿರಾತಾರ್ಜುನೀಯೇ ಪಂಚದಶಸರ್ಗ ಟೀಕಾಕಾರೇಣ
ದುರ್ವಿನೀತ ನಾಮಧೇಯೇನ …..

ರಾಜನ ಹಲವಾರು ಗುಣವಿಶೇಷಗಳನ್ನು ಹೇಳುವ ಸಂದರ್ಭದಲ್ಲಿ ಅವರು ಗಳಿಸಿದ ಯುದ್ಧ ವಿಜಯಗಳು, ಮತ್ತು ಸಾಹಿತ್ಯ ಕೃತಿರಚನೆಯ ಬಗೆಗೆ ಇಲ್ಲಿ ಪ್ರಸ್ತಾಪ ಬಂದಿದೆ. ಒಂದನೆಯ ಮಾಧವನು ದತ್ತಕನೆಂಬ ಕಾಮಶಾಸ್ತ್ರಜ್ಞನ ಕೃತಿ ‘ದತ್ತಕಸೂತ್ರ’ ಎಂಬುದಕ್ಕೆ ವೃತ್ತಿ ರಚಿಸಿದ; ದುರ್ವಿನೀತನು ಹಲವಾರು ಯುದ್ಧ ವಿಜಯಗಳ ಜತೆಗೆ ಶಬ್ದಾವತಾರವೆಂಬ ವ್ಯಾಕರಣ ಸಂಸ್ಕೃತ ಭಾಷೆಯಲ್ಲಿ (ಗುಣಾಢ್ಯನ) ಬೃಹತ್ಕಥೆ ಅಥವಾ ವಡ್ಡಕಥೆಯ ಅನುವಾದ ಮತ್ತು (ಭಾರವಿಯ ಕಿರಾತಾರ್ಜುನೀಯದ ೧೫ ಆಶ್ವಾಗಳಿಗೆ ಟೀಕೆ- ಹೀಗೆ ಮೂರು ಕೃತಿ ರಚಿಸಿದ. ಹೀಗೆ ಇವರ ಬಿರುದುಗಳಲ್ಲಿ ರಾಜಕೀಯ ಚರಿತ್ರೆಯಷ್ಟೆ ಅಲ್ಲದೆ ಸಾಹಿತ್ಯ ಚರಿತ್ರೆ ಕೂಡ ಅಳವಡಿಸಲ್ಪಟ್ಟಿದೆ. ಈ ಬಿರುದಾವಳಿಯ ಬಲದಿಂದಲೇ ರಾಜರುಗಳ ಸ್ಥಾನಮಾನಗಳನ್ನು ನಿರ್ಧರಿಸುವುದು ಇತಿಹಾಸಜ್ಞರಿಗೆ ಸಾಧ್ಯವಾಗುತ್ತದೆ. ಮುಂದಿನ ಕಾಲದ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಮ್ರಾಟರಲ್ಲಿ ಈ ಪರಂಪರೆಯ ಮುಂದುವರಿಕೆಯನ್ನು ನಾವು ಕಾಣುತ್ತೇವೆ. ತರುವಾಯದಲ್ಲಿ ಕನ್ನಡ ಶಾಸನಗಳಿಗೂ ಇದು ವಿಸ್ತರಿಸುತ್ತದೆ. ಅಮೋಘವರ್ಷ ನೃಪತುಂಗನ ಶಿರೂರ-ನೀಲಗುಂದ ಕನ್ನಡ ಶಾಸನಗಳಲ್ಲಿ ಕಂಡುಬರುವ ಬಿರುದಾವಳಿ ಇದಕ್ಕೊಂದು ಉತ್ತಮ ಉದಾಹರಣೆ.

ಇದರ ಪ್ರಾರಂಭದಲ್ಲಿ ತ್ರಿಮೂರ್ತಿಗಳ ಸ್ತುತಿಯನ್ನು ಸಂಸ್ಕೃತದಲ್ಲಿ ಕೊಡಲಾಗಿದ್ದು.

ಅರಿನೃಪತಿ ಮಕುಟ ಘಟ್ಟಿತ ಚರಣಸ್ಸಕಲ ಭುವನವಂದಿತ ಕಾಯಃ
ವಂಗಾಂಗ ಮಗಧ ಮಾಳವ ವೆಂಗೀಶೈರರ್ಚಿತೋತಿಶಯಧವಳಃ

ಎಂದು ನೃಪತುಂಗನ ವರ್ಣನೆ ಸಂಸ್ಕೃತದಲ್ಲಿ ಬಂದಿದೆ. ಇದಾದ ಮೇಲೆ ಕನ್ನಡದಲ್ಲಿ ದೀರ್ಘವಾಗಿ ಚಕ್ರವರ್ತಿಯ ಬಿರುದಾವಳಿ ವೈಭವೋಪೇತವಾಗಿ ಕೊಡಲ್ಪಟ್ಟಿದೆ.

ಓಂ ಸ್ವಸ್ತಿ ಶ್ರೀಸಮಧಿಗತ ಪಂಚಮಹಾಶಬ್ದ ಮಹಾರಾಜಾಧಿರಾಜ ಪರಮೇಶ್ವರ ಭಟ್ಟಾರಕ ಚತುರುದಧಿ ವರಲವಲಯಿತ ಸಕಲಧರಾತಲ ಪ್ರಾತಿ ರಾಜ್ಯಾನೇಕ ಮಂಡಲಿಕಾ ಕಟಕಟಿಸೂತ್ರ ಕುಂಡಲ ಕೇಯೂರ ಹಾರ ಭರಣಾಳಂ ಕೃತ ಗಣಿಕಾ ಸಹಸ್ರ ಚಾಮರಾಂಧಃಕಾರಾಧೋದಿರ್ಯ್ಯಮಾನ ಶ್ವೇತಾತಪತ್ರತ್ರಯ ಕಹಳ ಕಾಹಳ ಶಂಖ ಪಾಳಿಧ್ವಜೋರು ಕೇತು ಪತಾಕಾಚ್ಛಾದಿತ ದಿಗಂತರೆಲ್ಲಾ ಸೃಷ್ಟಿ ಸೇನಾಪತಿ ಪುರವರ್ಗ ತಳವರ್ಗ ದಂಡನಾಯಕ ಸಾಮಾನ್ತಾದ್ಯನೇಕ ವಿಷಯ ವಿನಮ್ನೋತ್ತುಂಗ ಕಿರಾತ ಮುಕುಟ ಘೃಷ್ಟ ಪಾದಾರವಿಂದ ಯುಗ್ಮ ನಿರ್ಜಿತ ವೈರಿರಿಪುನಿವಹ ಕಾಲದಂಡ ದುಷ್ಟಮದ ಭಂಜನನ್ ಅಮೋಘರಾಮಂ ಪರಚಕ್ರ ಪಂಚಾನನಂ ಸುರಾಸುರಮದಮರ್ದನಂ ವೈರಿ ಭಯಂಕರಂ ಬರ್ದೆಮನೋಹರಂ ಅಭಿಮಾನ ಮಂದಿರಂ ರಟ್ಟವಂಶೋದ್ಭವಂ ಗರುಡಲಾಂಛನಂ ತ್ರಿವಳಿಪಱೆ ಘೋಷಣಂ ಲತ್ತನೂರಪುರ ಪರಮೇಶ್ವರಂ ಶ್ರೀಮದಮೋಘವರ್ಷ ನೃಪತುಂಗ ನಾಮಾಂಕಿತ ಲಕ್ಷ್ಮೀವಲ್ಲಭೇಂದ್ರಂ ಚಂದ್ರಾದಿತ್ಯ ಕಾಲಬಂರಂ ಮಹಾವಿಷ್ಣುವ ರಾಜ್ಯ ಬೋಲ್‌ ಉತ್ತರೋತ್ತರಮ್ ರಾಜ್ಯಾಭಿವೃದ್ಧಿ ಸಲುತ್ತಿರೆ-

ಸಂಸ್ಕೃತ ಶಾಸನಗಳ ಮಾದರಿಯಲ್ಲಿ ಕನ್ನಡ ಶಾಸನಗಳೂ ಎಲ್ಲಂದರಲ್ಲಿ ಸಮಗ್ರತೆ ಪಡೆದುದಕ್ಕೆ ಇದೊಂದು ಉತ್ತಮ ನಿದರ್ಶನ.

ಬಿರುದಾವಳಯ ಈ ಭಾಗ ರಾಜರಿಗಷ್ಟೆ ಸೀಮಿತವಾಗಿ ಉಳಿಯದೆ ಅವರ ಕೆಳಗಿನ ಮಂತ್ರಿ-ದಂಡಾಧಿಕಾರಿಗಳು ಸಾಮಂತರು, ಗೌಡರುಗಳು ಪ್ರತಿಗ್ರಹಿಗಳಾದ ಯತಿ-ಮುನಿಗಳು, ರಾಣಿಯರು, ಕೊನೆಯಲ್ಲಿ ಲಿಪಿಕಾರ. ಕಂಡರಣೆ ಕಾರರವರೆಗೂ ವಿಸ್ತರಿಸಿದ್ದು ಮುಂದಿನ ಕನ್ನಡ ಶಾಸನಗಳಲ್ಲಿ ಸಾಮಾನ್ಯವೆನಿಸುತ್ತದೆ.

ಇತಿಹಾಸ ರಚನೆಯ ದೃಷ್ಟಿಯಿಂದ ಶಾಸನಗಳಲ್ಲಿ ಬರುವ ಇನ್ನೊಂದು ಮುಖ್ಯಭಾಗ ಅದರ ಮಿತಿ. ಪ್ರಾಕೃತ ಶಾಸನಗಳಲ್ಲಿ ಮತ್ತು (ತರುವಾಯರ) ಕದಂಬ-ಗಂಗರ ಆದಿಮ ಶಾಸನಗಳಲ್ಲಿ ಈ ಭಾಗ ಬೇರೊಂದು ವಿಧದಲ್ಲಿ ಬರೆಯಲ್ಪಟ್ಟಿರುತ್ತದೆ. ಋತು, ಪಕ್ಷ, ತಿಥಿ, ವಾರ, ನಕ್ಷತ್ರ- ಕೆಲವೊಮ್ಮೆ ಆಡಳಿತದ ವರ್ಷ ಸಾಮಾನ್ಯವಾಗಿ ಇವುಗಳಲ್ಲಿ ಬರುವುದುಂಡು, ಇಂಥ ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಶಕವರ್ಷದ ಉಲ್ಲೇಖ ಅವುಗಳಲ್ಲಿ ಕಂಡುಬರುವುದಿಲ್ಲ. ಇಂಥ ಉಲ್ಲೇಖವುಳ್ಳ ಮೊದಲ ಶಾಸನವೆಂದರೆ ೪೬೫ನೆಯ ವರ್ಷದನವನು ಹೇಳಿರುವ ಬಾದಾಮಿ ಕೋಟೆಯ ಒಂದನೆಯ ಪುಲಕೇಶಿಯ ಶಾಸನ,[1] ಅನಂತರದ ಅನೇಕ ಶಾಸನಗಳಲ್ಲಿ ಸಾಕಷ್ಟು ವಿವರವಾಗಿ ಮಿತಿ-ನಿರ್ದೇಶ ಮಾಡಿರುವುದು ಕಂಡು ಬರುತ್ತದೆ. ಕೆಲವು ಶಾಸನಗಳ ಪ್ರಾರಂಭ ಮಿತಿಯ ಉಲ್ಲೇಖದಿಂದಲೆ ಆಗಿರುವುದುಂಟು. ಆದರೆ ಹೆಚ್ಚಾಗಿ ದಾನ ವಿವರಗಳನ್ನು ಹೇಳುವ ಪೂರ್ವದಲ್ಲಿ ಮಿತಿಯನ್ನು ಉಲ್ಲೇಖಿಸುವುದು ಶಾಸನಗಳಲ್ಲಿ ಸಾಮಾನ್ಯ. ಅಥವಾ ದಾನವಿವರ ಸೀಮಾ ವಿವರಗಳನ್ನು ಹೇಳಿಯಾದ ಮೇಲೂ ಮಿತಿ ವಿವರಗಳು ಬರುವುದೂ ಉಂಟು. ಕೊನೆಯಲ್ಲಿ ಫಲಶ್ರುತಿ ಮತ್ತು ಲಿಪಿಕಾರ-ಕಂಡರಣೆಕಾರರ ಹೆಸರುಗಳಿಗಿರುವುದು ಸಾಮಾನ್ಯ.

ಶಾಸನ ಶಿಲ್ಪಗಳನ್ನು ಕುರಿತಂತೆ ಇಲ್ಲಿ ಕೆಲವು ಸಂಗತಿಗಳನ್ನು ಹೇಳುವುದು ಅಪ್ರಸ್ತುತವೆನಿಸಲಾರದು. ಪ್ರಾರಂಭಿಕ ಹಂತದಲ್ಲಿ ಪ್ರಾಕೃತ ಶಾಸನಗಳಲ್ಲಿ ಯಾವ ರೀತಿಯ ಶಿಲ್ಪ ಚಿಹ್ನೆಗಳೂ ಕಾಣಬರುವುದಿಲ್ಲ. ಕ್ರಿ.ಶ. ಸು. ೨ನೆಯ ಶತಮಾನದ ಸನ್ನತಿಯ ಒಂದು ಶಾಸನ ತಕ್ಕಷ್ಟು ದೊಡ್ಡದಿದ್ದು ಅದರ ಮೇಲ್ಭಾಗ ತ್ರುಟಿತಗೊಂಡಿದೆ. ಉಳಿದ ಕೆಳಭಾಗದಲ್ಲಿ ಹಲವು ಜನ ಸ್ತ್ರೀಯರು ಶೋಕಮಗ್ನರಾಗಿರುವಂತೆ ಕೆತ್ತನೆಯಿದೆ. ತ್ರುಟಿತ ಭಾಗದಲ್ಲಿ ಶಾತವಾಹನ ದೊರೆ ಸಾತಕಣ್ಣಿಯ ಮರಣಶಯ್ಯೆಯ ಚಿತ್ರ ಇದ್ದಿರಬಹುದಾಗಿದೆ. ಸನ್ನತಿ ಪ್ರದೇಶದಲ್ಲಿ ದೊರೆತಿರುವ ಶಾಸನಗಳ ಮೇಲ್ಗಡೆ ಬೌದ್ಧ ಚೈತ್ಯಾಲಯವನ್ನು ಹೋಲುವ ಕೆತ್ತನೆಯು ಕಂಡುಬರುತ್ತದೆ. ಒಂದು ಶಾಸನದಲ್ಲಿ ಈ ಶಿಲ್ಪದ ಜತೆಗೆ ಕೆಳಗಡೆ ದಂಪತಿಗಳೂ ಅವರ ಕೆಳಗೆ ಅವರ ಸೇವಕರೂ ಚಿತ್ರಿಸಲ್ಪಟ್ಟಿದ್ದಾರೆ.[2]ಬೆಳ್ವಾಡಗಿಯ ಪ್ರಾಕೃತ ಶಾಸನದಲ್ಲಿ ವಿಶ್ರಾಂತ ಸ್ಥಿತಿಯಲ್ಲಿರುವ ಬಂಡಿ ಮತ್ತು ವ್ಯಕ್ತಿಯ ಚಿತ್ರ ಬಿಡಿಸಿದೆ.

ಹಲ್ಮಿಡಿಶಾಸನದ ಮೇಲ್ಭಾಗದಲ್ಲಿ ಸುದರ್ಶನ ಚಕ್ರ ಬಿಡಿಸಲಾಗಿದ್ದು ಅದಕ್ಕೂ ಮೇಲ್ಗಡೆ ಜ್ಯೋತಿಯ ಚಿಹ್ನೆಯನ್ನು ಸೂಕ್ಷ್ಮ ರೇಖೆಗಳಿಂದ ತೋರಿಸಿದೆ. ಆದರೆ ೬ನೆಯ ಶತಮಾನದ ಕಂಪ್ಲಿ, ಕೆಲಗುಂದ್ಲಿ, ಬಾದಾಮಿ (ಮಂಗಳೇಶ) ಮೊದಲಾದ ಯಾವ ಶಾಸನದಲ್ಲೂ ಶಿಲ್ಪ ಚಿತ್ರಗಳಿಲ್ಲ. ಕ್ರಿ.ಶ. ಸು. ಏಳನೆಯ ಶತಮಾನದ ಶ್ರವಣ ಬೆಳ್ಗೊಳ ನಿಷಧಿ ಶಾಸನಗಳಲ್ಲೂ ಯಾವ ಚಿತ್ರಗಳೂ ಕಂಡು ಬರುವುದಿಲ್ಲ. ಇವೆಲ್ಲ ಅನಲಂಕೃತವಾಗೇ ಇವೆ.

ಆದರೆ ೬ನೆಯ ಶತಮಾನದ ಸಿರಗುಪ್ಪಿ (ಹುಬ್ಬಳ್ಳಿ) ಶಾಸನದ ಕೆಳಭಾಗದಲ್ಲಿ ತುರುಗೋಳ್ಗಾಳಗದ ಚಿತ್ರ ಬಿಡಿಸಲಾಗಿದೆ. ಶಾಸನ ಪಾಠದಲ್ಲಿ ಮಾತ್ರ ಇದರ ಪ್ರಸಕ್ತಿಯಿಲ್ಲ. ಈ ರೀತಿಯ ಚಿತ್ರ ಮುಂದಿನ ಕಾಲಾವಧಿಯ ತುರುಗೋಳ್ಗಾಳಗದ ಶಾಸನಗಳಲ್ಲಿ ಸರ್ವೇ ಸಾಮಾನ್ಯ. ವೀರಗಲ್ಲುಗಳ ಶಿಲ್ಪ ಇದೇ ಮಾದರಿಯಲ್ಲಿ ಇನ್ನಷ್ಟು ವಿಸ್ತರಿಸುತ್ತದೆ. ಕೆಳಹಂತದ ಯುದ್ಧ ಚಿತ್ರ, ನಡುವೆ ದೇವಗಣಿಕೆಯರಿಂದೊಡಗೂಡಿದ ವಿಮಾನ, ಮೇಲ್ಭಾಗದಲ್ಲಿ ಶಿವಲಿಂಗ ಅಥವಾ ಜಿನಬಿಂಬವಿದ್ದು ವೀರಸ್ವರ್ಗ ಸೇರಿದ ವೀರ ಅವನ್ನು ಪೂಜಿಸುವ ರೀತಿಯಲ್ಲಿ ಶಿಲ್ಪ ವಿನ್ಯಾಸವಿರುತ್ತದೆ.

ಇತರ ಶಾಸನಗಳ ಮೇಲ್ಬಾಗದಲ್ಲಿ ಒಂದುಬದಿಗೆ ಸೂರ್ಯ ಇನ್ನೊಂದು ಬದಿಗೆ ಚಂದ್ರ, ಗೋವು ಮತ್ತು ಕರು ಹಾಗೂ ಖಡ್ಗಗಳ ಚಿತ್ರಗಳಿದ್ದು ನಡುವೆ ಲಿಂಗ ಅಥವಾ ಜಿನಬಿಂಬವಿರುವುದು ಸಾಮಾನ್ಯ, ಇವಲ್ಲದೆ ಕೆಲವೊಮ್ಮೆ ರಾಜಮನೆತನದ ಚಿಹ್ನೆಗಳಿರುವುದೂ ಉಂಟು. ರಾಷ್ಟ್ರಕೂಟ ಶಾಸನಗಳಲ್ಲಿ ನೇಗಿಲು, ಆಳುವ ಶಾಸನಗಳಲ್ಲಿ ಮೀನು ಗಂಗರ ಶಾಸನಗಳಲ್ಲಿ ಆನೆ ಸಾಮಾನ್ಯವಾಗಿ ಕಂಡುಬರುತ್ತದೆ. ಚಾಳುಕ್ಯರ ಶಾಸನಗಳಲ್ಲಿ ಅವರ ಲಾಂಛನವಾದ ವರಾಹ ಕೂಡ ಆಗೀಗ ಕಂಡುಬರುತ್ತದೆ. ತಾಮ್ರ ಶಾಸನಗಳ ಉಂಗುರಗಳಲ್ಲಿ ಸಿಂಹ, ಆನೆ, ನಂದಿ, ವರಾಹ ಮೊದಲಾದ ರಾಜಚಿಹ್ನೆಗಳಿರುವುದು ಸಾಮಾನ್ಯ.

ಜೈನಧರ್ಮದ ನಿಷಧಿ ಶಾಸನಗಳಲ್ಲಿ ಕನಿಷ್ಠ ಎರಡು ಹಂತಗಳಿರುತ್ತವೆ. ಕೆಳಗಿನ ಭಾಗದಲ್ಲಿ ನಡುವೆ ಗ್ರಂಥದ ಅಟ್ಟಣೆಯಿದ್ದು, ಬಲಬದಿಯಲ್ಲಿ ನಿರ್ಯಾಪಕನ ಚಿತ್ರವೂ ಎಡಬದಿಯಲ್ಲಿ ವ್ರತಧಾರಿಯ ಚಿತ್ರವೂ ಬಿಡಿಸಲ್ಪಟ್ಟಿರುತ್ತವೆ. ಎರಡನೆಯ ಹಂತದಲ್ಲಿ ವ್ರತಧಾರಿ ತೀರ್ಥಂಕರರನ್ನು ಪೂಜಿಸುವಂತೆ ಕೆತ್ತನೆಗಳಿರುತ್ತವೆ. ಮಹಾಸತಿ ಶಾಸನದಲ್ಲಿ ಸತಿಯ ಬಲಗೈ ಪ್ರಧಾನ. ಅದರಲ್ಲಿ ಮಾಂಗಲ್ಯ ಸೂಚಕವಾದ ಬಳೆ ಮತ್ತು ಲಿಂಬೆ (ಮಾದು)ಯ ಕೆತ್ತನೆಯಿದ್ದು ತಲೆಯ ಹಿಂದೆ ಜ್ವಾಲೆಯನ್ನುಬಿಡಿಸಿರುತ್ತಾರೆ. ಗೋಸಾಸದ ಕಲ್ಲುಗಳ ಮೇಲ್ಭಾಗ ಕಮಾನಿನಾಕಾರದಲ್ಲಿದ್ದು ಕೆಳಗಡೆ ಆನೆ, ಹಂಸ, ಮೀನ, ನಂದಿ, ಇತ್ಯಾದಿ ಚಿತ್ರಗಳಿರುವುದು ಸಾಮಾನ್ಯ. ಈ ಮುಖ್ಯ ಪ್ರಕಾರವಲ್ಲದೆ ಸಿಡಿತಲೆ, ಸೂರ್ಯಬಲಿ ಮೊದಲಾದ ಶಾಸನಗಳಲ್ಲಿ ಆಯಾ ಪ್ರಕಾರದ ಚಿತ್ರಗಳಿರುವುದು ಕಾಣಬರುತ್ತದೆ. ಅಲ್ಲದೆ ಈ ಎಲ್ಲ ವರ್ಗದ ಶಾಸನಶಿಲ್ಪಗಳಲ್ಲಿ ಪರಿಮಿತಿ ವೈವಿಧ್ಯಗಳಿರುವುದನ್ನು ನೋಡಬಹುದು.

ಕರ್ನಾಟಕದ ರಾಜಮಹಾರಾಜರು, ಸಾಮಂತರು, ದಂಡಾಧಿಕಾರಿಗಳು, ರಾಜಪ್ರತಿನಿಧಿಗಳು ಬರೆಯಿಸಿರುವ ಶಾಸನಗಳು ಉತ್ತರದಲ್ಲಿ ಸೌರಾಷ್ಟ್ರ, ಗುಜರಾತ, ಮಧ್ಯಪ್ರದೇಶಗಳವರೆಗೆ, ಪೂರ್ವದಲ್ಲಿ ವಿಶಾಖಾ ಪಟ್ಟಣ-ವೆಂಗಿಯವರೆಗೆ, ದಕ್ಷಿಣದಲ್ಲಿ ಸೇಲಂ, ಕೊಯಿಮತ್ತೂರು ಕಂಚಿಯವರೆಗೆ, ಪಶ್ಷಿಮದಲ್ಲಿ ಗುಜರಾತ ಕರಾವಳಿಯಿಂದ ಕೇರಳದವರೆಗೆ ಅಪಾರ ಸಂಖ್ಯೆಯಲ್ಲಿ ದೊರೆಯುತ್ತಿವೆ. ಇವುಗಳ ಸಂಶೋಧನೆಗಾಗಿ ವ್ಯವಸ್ಥಿತವಾದ ಪರಿವೀಕ್ಷಣೆಯೇ ನಡೆದಿಲ್ಲ. ಹಳೆಯ ಮೈಸೂರು ಪ್ರದೇಶದಲ್ಲಿ ಬಿ.ಎಲ್. ರೈಸ್ ಮತ್ತು ಆರ್ ನರಸಿಂಹಾಚಾರರು ಮಾಡಿರುವ ಕೆಲಸವೊಂದು ಮಾತ್ರ ಈ ಮಾತಿಗೆ ಅಪವಾದ. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮರಾಠವಾಡ, ತೆಲಂಗಾಣ ಮತ್ತು ಮಹಾರಾಷ್ಟ್ರದ ಇನ್ನಿತರ ಭಾಗಗಳಲ್ಲಿ ಶಾಸನ ಪ್ರಮಾಣದಲ್ಲಿ ಅಡಗಿ ಕುಳಿತಿದೆ. ಈ ಪ್ರದೇಶಗಳಲ್ಲಿ ಈ ನಿಧಿ ಇನ್ನು ದೊಡ್ಡ ಪ್ರಮಾಣದಲ್ಲಿ ಅಡಗಿ ಕುಳಿತಿದೆ. ಈಗ ಲಭ್ಯವಾದ ಸು. ಇಪ್ಪತ್ತು ಸಾವಿರ ಶಾಸನಗಳನ್ನು ಅಧ್ಯಯನ ಮಾಡಲು ತಕ್ಕ ಏಪಾಡು ಇನ್ನೂ ಆಗಬೇಕಾಗಿದೆ. ಕಂಪ್ಯೂಟರ್ ತಂತ್ರಜ್ಞಾನವನ್ನು ಈ ಕ್ಷೇತ್ರಕ್ಕೆ ಅಳವಡಿಸಬೇಕಾದುದು ತುಂಬ ಅಗತ್ಯ.

ಭಾರತದಲ್ಲಿ ತಮಿಳಿನ ಶಾನಗಳ ಸಂಖ್ಯೆಯ ದೃಷ್ಟಿಯಿಂದ ಪ್ರಥಮ ಸ್ಥಾನಗಳಿಸಿವೆ. ಆದರೆ ಗುಣಮಟ್ಟದಲ್ಲಿ ಅವುಗಳ ಸ್ಥಾನ ಸಂಸ್ಕೃತ ಮತ್ತು ಕನ್ನಡ ಶಾಸನಗಳ ತರುವಾಯದ್ದು. ಈ ಮುಂಚೆ ನೋಡಿರುವಂತೆ ಇತಿಹಾಸ ರಚನೆಯ ಕಾರ್ಯದಲ್ಲಿ ಸಂಸ್ಕೃತ ಶಾಸನಗಳು ಅಪಾರವಾದ ಮಾಹಿತಿ ಒದಗಿಸುತ್ತವೆ. ಅವುಗಳಲ್ಲಿ ಕಂಡುಬರುವ ರಾಚನಿಕ ಅಚ್ಚಕಟ್ಟು ತರ್ಕಸಮ್ಮತವಾಗಿರುವುದರಿಂದ ಅಲ್ಲಿನ ಮಾಹಿತಿಯನ್ನು ಇತಿಹಾಸ ರಚನೆಗೆ ಸುಲಭವಾಗಿ ಬಳಸಿಕೊಳ್ಳಬಹುದು. ಆದರೆ ಸಂಸ್ಕೃತ ಶಾಸನಗಳಲ್ಲಿ ರಾಜಮಹಾರಾಜರ ವಂಶಾವಳಿ, ಯುದ್ಧ ಅವರ ವಿಜಯಗಳು ಆಡಳಿತ ಮತ್ತು ಅಗ್ರಹಾರ ಕೇಂದ್ರಿತ ಸಂಸ್ಕೃತಿ ಕುರಿತಾದ ವಿವರಗಳು ಅಧಿಕ ಪ್ರಮಾಣದಲ್ಲಿ ಕಾಣಬರುತ್ತವೆ. ಬದುತೇಕ ಶಾಸನಗಳಲ್ಲಿ ಮಿತಿಯ ಉಲ್ಲೇಖ ಕೊಡಲ್ಪಡುವುದರಿಂದ ಅವುಗಳ ಮಹತ್ತರತೆ ಗಮನಾರ್ಹವೆನಿಸುತ್ತದೆ. ಹಲವಾರು ಕನ್ನಡ ಶಾಸನಗಳಲ್ಲಿ ಸಂಸ್ಕೃತ ಶಾಸನಗಳ ಈ ವೈಶಿಷ್ಟ್ಯಗಳು ನಿಹಿತವಾಗಿರುದುಂಟು. ಜತೆಗೆ ದೇಶ್ಯವಾದ ಅರ್ಥಾತ್ ಜನಸಾಮಾನ್ಯರ ಜೀವನ ಸಂಬಂಧಿಯಾದ ಅಪಾರ ಮಾಹಿತಿ ಕನ್ನಡ ಶಾಸನಗಳಲ್ಲಿ ಲಭ್ಯವಾಗಿದೆ. ಅಂದಿನ ರಾಜಮಹಾರಾಜರು, ಅಧಿಕಾರಿಗಳು, ಮಹಾರಾಜರು ಅಷ್ಟೇ ಅಲ್ಲದೆ ಸಮಾಜದಲ್ಲಿನ ತೀರ ಕೆಳವರ್ಗದ ಜನಜಾತಿಗಳ ಉಲ್ಲೇಖಗಳು ಕೂಡ ಕನ್ನಡ ಶಾಸನಗಳಲ್ಲಿ ಲಭಿಸುತ್ತವೆ. ಸಮ್ಮಗಾರರ, ಹೊಲೆಯರು, ನಾಪಿತರು ಮೊದಲಾಗಿ ಒಕ್ಕಲಿಗರು, ಕುಶಲಕರ್ಮಿಗಳು ಸಣ್ಣ, ದೊಡ್ಡ ವ್ಯಾಪಾರಿಗಳು, ಆಯುಧ ಜೀವಿಗಳು ಮುಂತಾದ ಸಮಾಜದ ಎಲ್ಲ ವರ್ಗಗಳ ಜನಜೀವನಕ್ಕೆ ಸಂಬಂಧಿಸಿದ ಸ್ಥಿತ ಚಿತ್ರ ಅವುಗಳಲ್ಲಿ ಮೂಡಿನಿಂತಿದೆ. ಎಂಟನೆಯ ಶತಮಾನದ ಬಾದಾಮಿಯ ಶಾಸನವೊಂದು ಸಮಗಾರರು ರಾಜಭಂಡಾರಕ್ಕೆ ತೆರಿಗೆ ಸಲ್ಲಿಸುತ್ತಿದ್ದ ಸಂಗತಿಯನ್ನು ದಾಖಲಿಸಿದೆ. ಸಾಮಾಜಿಕ ಜೀವನದ ಎಲ್ಲ ಹಂತದಲ್ಲಿ ಅಂದು ಸೂಳೆಯರಿಗೆ ಕೂಡ ಉತ್ತಮ ಸ್ಥಾನವಿದ್ದುದನ್ನು, ಮಹಾಕೂಟ, ಪಟ್ಟದಕಲ್ಲು, ಶ್ರವಣಬೆಳ್ಗೊಳ ಮೊದಲಾದೆಡೆಗಳಲ್ಲಿ ದೊರೆತ ಶಾಸನಗಳು ಸ್ಪಷ್ಟಪಡಿಸುತ್ತವೆ.

ಎಲ್ಲವರ್ಗಗಳ ಜನರು ಸಕ್ರಿಯವಾಗಿ ರಾಜಕೀಯ ಮತ್ತು ಯುದ್ಧರಂಗಗಳಲ್ಲಿ ಭಾಗವಹಿಸುತ್ತಿದ್ದರೆ ಮಾತ್ರ ಒಂದು ಜನಾಂಗ ಬಲಶಾಲಿಯಾಗಿರಲು ಸಾಧ್ಯ. ಇಂಥ ಸಕ್ರಿಯತೆ ಪ್ರಾಚೀನ ಕರ್ನಾಟಕದಲ್ಲಿ ತುಂಬ ಸಶಕ್ತವಾಗಿ ಇದ್ದುದ್ದರಿಂದಲೆ ಕನ್ನಡಿಗರು ಸುಮಾರು ಒಂದು ಸಹಸ್ರಮಾನ ಕಾಲ ಅಖಿಲ ಭಾರತದ ರಾಜಕೀಯವನ್ನು ನಿಯಂತ್ರಿಸುವುದು ಸಾಧ್ಯವಾಯಿತು.

ಇಂಥ ಚಾರಿತ್ರಿಕ ಸಂಗಾತಿಗಳು ಹೆಚ್ಚಾಗಿ ನಮ್ಮ ಗ್ರಂಥ ಪುರಾಣಾದಿಗಳಲ್ಲಿ ಉಲ್ಲೇಖಗೊಂಡಿಲ್ಲ. ಅಪವಾದಾತ್ಮಕವಾಗಿ ವಿಕ್ರಮಾಂಕದೇವ ಚರಿತ, ರಾಜತರಂಗಿಣಿ ಯಂಥ ಕೃತಿಗಳು ಕನ್ನಡಿಗರ ರಾಜಕೀಯ ಮೇಲ್ಮೆಯನ್ನು ಆಗೀಗ ಪ್ರಸ್ತಾಪಿಸುತ್ತವೆ. ಆದರೆ ಶಾಸನಗಳು ಈ ವಿಷಯಕ್ಕೆ ಸಂಬಂಧಪಟ್ಟ ಅಭೂತ ಪೂರ್ವ ಮಾಹಿತಿ ಒದಗಿಸಿವೆ. ಸೈನಿಕ ಪ್ರಾಬಲ್ಯಗಳಿಸುವುದಕ್ಕಾಗಿಯೇ ಅಂದು ನಮ್ಮ ಸಮಾಜದಲ್ಲಿ ವಿಶಿಷ್ಟ ನಡುವಳಿಕೆಗಳು ಪ್ರಚಲಿತವಾಗಿದ್ದು ವೇಳೆವಾಣಿ, ಜೋಳವಾಣಿ, ಕೀಳ್ಗುಂಠೆ, ಅಂಕಕಾರಿಕೆ, ಸಿಡಿತಲೆ, ದ್ವಂದ್ವಯುದ್ಧದಂಥ ಇಂದಿನವರ ಕಲ್ಪನೆಗೆ ಮೀರಿದ ಪರಾಕ್ರಮ ವಿಧಾನಗಳು ಕನ್ನಡಿಗರಿಗೆ ಅಂದು ನೀರು ಕುಡಿದಷ್ಟು ಸುಲಭವಾಗಿದ್ದವು.

ಒಂದು ಮಾತನ್ನು ಇಲ್ಲಿ ಗಮನದಲ್ಲಿಡುವುದು ಅವಶ್ಯಕ. ಕ್ರಿ. ಶ.ಪೀ. ೩ನೆಯ ಶತಮಾನದಿಂದ ಕ್ರಿ.ಶ. ೪ನೆಯ ಶತಮಾನದವರೆಗೆ ಮೇಲೆ ವಿವರಿಸಿದ ಸಾಮರಿಕ ಚಟುವಟಿಕೆಗಳಲ್ಲಿ ಈ ನಾಡಿಗರು ತಮ್ಮನ್ನು ಅಷ್ಟಾಗಿ ತೊಡಗಿಸಿ ಕೊಂಡಿರಲಿಲ್ಲ. ಬಹುಶಃ ಪರ ಪ್ರಾಂತೀಯರು ಆಗ ಸಾಮರಿಕ ಕ್ಷೇತ್ರದಲ್ಲಿ ಪ್ರಬಲರಾಗಿದ್ದರು. ಅದರಿಂದಾಗಿ ಅಂದಿನ ಸಮಾಜದ ಎಲ್ಲ ವರ್ಗಗಳವರು ಶಾಸನಗಳಲ್ಲಿ ಕಾಣಿಸಿಕೊಂಡಿಲ್ಲ. ಮುಂದಿನ ಕಾಲದ ಗಂಗ ಕದಂಬರ ಕಾಲಾವಧಿಯಿಂದ ಪರಿಸ್ಥಿತಿ ವಿಶೇಷವಾಗಿ ಬದಲಾವಣೆಗೊಂಡು ಸಮಾಜದ ಎಲ್ಲ ವರ್ಗಗಳು ರಾಜಕೀಯ ಜೀವನದಲ್ಲಿ ಪಾಲ್ಗೊಳ್ಳ ತೊಡಗಿದ್ದು ಶಾಸನಗಳಿಂದ ಸ್ಪಷ್ಟಪಡಿಸುತ್ತದೆ.

“ದೇವನಾಂ ಪ್ರಿಯ” ಎಂಬ ಪರ್ಯಾಯ ನಾಮದಿಂದ ದೇಶದ ಉದ್ದಗಲಕ್ಕೂ ತನ್ನ ಆಜ್ಞೆಗಳನ್ನು ಬರೆಯಿಸಿದವನು ಮೌರ್ಯ ಸಾಮ್ರಾಟ ಅಶೋಕನೆಂಬ ಸಂಗತಿಯನ್ನು ಮೊದಲು ಸೂಚಿಸಿದ್ದು ಕರ್ನಾಟಕದ ಮಸ್ಕಿಯ ಶಾಸನವೇ. ಈ ಸಂಗತಿಯನ್ನು ತರುವಾಯ ಮಧ್ಯಪ್ರದೇಶದ ಗುಜರ್ರಾದಲ್ಲಿ ದೊರೆತ ಶಾಸನ ದೃಢಪಡಿಸಿತು. ಇತ್ತೀಚೆಗೆ ನಿಟ್ಟೂರು- ಉದೋಗೋಳಗಳಲ್ಲಿ ದೊರೆತ ಶಾಸನಗಳೂ ಅಶೋಕನ ಹೆಸರನ್ನು ಸ್ಪಷ್ಟವಾಗಿ ಹೇಳಿವೆ.

೧೯೮೯ ರಲ್ಲಿ ಸನ್ನತಿಯ ಒಂದು ದೇವಾಲಯದಲ್ಲಿ ಮತ್ತೆ ನಾಲ್ನು ಅಶೋಕನ ಶಾಸನಗಳು ದೊರೆತಿರುವುದನ್ನು ಈ ಮೊದಲು ಸೂಚಿಸಿದೆ. ಇವುಗಳಲ್ಲಿ ಎರಡು ವಿಶೇಷಪಾಠವುಳ್ಳದಾಗಿದೆ. ಓಡಿಸಾದ ಜೌಗಡಾ ಮತ್ತು ಧೌಲಿಗಳಲ್ಲಿ ಈ ಹೆಚ್ಚು ಶಾಸನ ಪಾಠಗಳು ದೊರೆಕಿದ್ದವು. ಕಲಿಂಗ ಯುದ್ಧದಿಂದ ತುಂಬ ನೊಂದುಕೊಂಡಿದ್ದ ಅಲ್ಲಿನ ಜನತೆಯನ್ನು ಸಾಂತ್ವನ ಗೊಳಿಸುವುದಕ್ಕೋಸ್ಕರ ಹಾಗೆ ಆ ಎರಡು ವಿಶೇಷ ಶಾಸನಗಳನ್ನು ಅಶೋಕ ಬರೆಯಿಸಿರಬೇಕೆಂದು ಊಹಿಸಲಾಗುತ್ತದೆ. ಅದೇ ರೀತಿ ಶಾಸನಗಳನ್ನು ಅಶೋಕ ಬರೆಯಿಸಿರಬೇಕೆಂದು ಊಹಿಸಲಾಗುತ್ತದೆ. ಅದೇ ರೀತಿ ಕರ್ನಾಟಕದ ಈ ಭಾಗದಲ್ಲಿ ಅಂಥದೊಂದು ಘಟನೆ ಜರುಗಿರುವ ಸಾಧ್ಯತೆಯುಂಟು. ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಶೋಧ ಮತ್ತು ಪರಾಮರ್ಶೆ ನಡೆಯಬೇಕಾಗಿದೆ.

ಮೌರ್ಯರು ಮೂಲತಃ ಮಗಧ ದೇಶದವರು. ತಮ್ಮ ರಾಜ್ಯಾಧಿಕಾರವನ್ನು ಕರ್ನಾಟಕದವರಿಗೆ ವಿಸ್ತರಿಸಿ ರಾಜ್ಯಾಡಳಿತದೊಂದಿಗೆ ತಮ್ಮಲ್ಲಿ ಪ್ರಚಲಿತವಿದ್ದ ಧರ್ಮ, ರೀತಿ-ನೀತಿ, ನಡಾವಳಿಗಳನ್ನು ತಮ್ಮಲ್ಲಿ ಕೊಡ ಪ್ರಚಲಿತಗೊಳಿಸಿದರು. ಕರ್ನಾಟಕಕ್ಕೆ ಬೌದ್ಧ ಮತ್ತು ಜೈನಧರ್ಮಗಳು ಆಗಮಿಸಿಲು ಮೌರ್ಯರ ಈ ಪ್ರಭಾವವೇ ಕಾರಣ. ಕರ್ನಾಟಕದಲ್ಲಿ ಕನಿಷ್ಠ ಎಂಟು ಹತ್ತು ಬೌದ್ಧ ಕೇಂದ್ರಗಳು ಇವರ ಆಡಳಿತಾವಧಿಯಲ್ಲಿ ಅಸ್ತಿತ್ವಕ್ಕೆ ಬಂದುದನ್ನು ಶಾಸನಗಳು ತಿಳಿಸಿಕೊಡುತ್ತವೆ. ಈ ಅವಧಿಯಲ್ಲಿ ನಮ್ಮ ನಾಡಿಗೆ ಆರ್ಯ ಜನಾಂಗದ ಇಂಥ ವಲಸೆ ದೊಡ್ಡ ಪ್ರಮಾಣದಲ್ಲಿ ಘಟಿಸಿತು. ಇಲ್ಲಿನ ಭಾಷೆ, ಸಂಸ್ಕೃತಿ ಸಮಾಜಗಳನ್ನು ಸಾಕಷ್ಟು ಪರಿವರ್ತಿಸಿತು.

ಮೌರ್ಯರ ಕಾಲ ಕಳೆದ ಮೇಲೆ ಸಾತವಾಹನರು ಅಧಿಕಾರಕ್ಕೆ ಬಂದರು. ಇವರು ದಾಕ್ಷಿಣಾತ್ಯರಾಗಿರುವರಾದರೂ ಪಾಕೃತ ಭಾಷೆಯನ್ನೇ ತಮ್ಮ ಆಡಳಿತಕ್ಕೆ ಬಳಸಿದರು. ಅದರಿಂದ ಇವರ ಶಾಸನಗಳು ಪ್ರಾಕೃತದಲ್ಲಿಯೇ ಇವೆ. ಇವರ ಕೆಲವು ಶಾಸನಗಳು ಹೊಸದಾಗಿ ಸನ್ನತಿ ಮತ್ತು ಬಸವಾಸಿಗಳಲ್ಲಿ ಸಿಕ್ಕಿವೆ. ಇವುಗಳಿಂದ ನಮ್ಮ ನಾಡಿನ ಚರಿತ್ರೆಗೆ ಸಂಬಂಧಪಟ್ಟ ಹಲವಾರು ಅಪೂರ್ವ ಸಂಗತಿಗಳು ತಿಳಿದು ಬಂದಿವೆ. ಗೋದಾವರಿ ತೀರದ ಪೈಠಣದಂತೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯೂ ಇವರ ದಕ್ಷಿಣದ ರಾಜಧಾನಿಯಾಗಿ ಮಾರ್ಪಟ್ಟಿತು. ಈ ಮನೆತನದ ರಾಣಿಯೊಬ್ಬಳ ಸಮಾಧಿ ಶಾಸನವೊಂದು ಬನವಾಸಿಯಲ್ಲಿ ದೊರೆತಿರುವುದರಿಂದ ಹೀಗೆ ಊಹಿಸಲು ಸಾಧ್ಯವಾಗುತ್ತದೆ. ಬೇರೆ ಕೆಲವು ಅಂಶಗಳೂ ಅಂದು ಬನವಾಸಿ ಒಂದು ದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿದ್ದುದನ್ನು ಖಚಿತ ಪಡಿಸಿತ್ತದೆ.

ಸನ್ನತಿಯಲ್ಲಿ ದೊರೆತ ಶಾಸನದಿಂದ ಕ್ರಿ.ಶ. ಸು. ಒಂದನೆಯ ಶತಮಾನದ ಅವಧಿಯಲ್ಲಿ ರಟ್ಟರ ರಾಜ್ಯವೊಂದು ಈ ಭಾಗದಲ್ಲಿ ಅಸ್ತಿತ್ವದಲ್ಲಿದ್ದುದು ಗೊತ್ತಾಗುತ್ತದೆ.[3] ಮೌರ್ಯರ ಕಾಲದಲ್ಲಿ ಕಠಿಕರೆಂಬ ಆಡಳಿತಾಧಿಕಾರಿಗಳು ಮಾತ್ರ ಈ ಭಾಗದಲ್ಲಿದ್ದರು.

ಸಾತವಾಹನರ ತರುವಾಯ ಪಲ್ಲವರು ಕರ್ನಾಟಕದ ಬಹು ಭಾಗಗಳನ್ನು ಹಿಡಿದುಕೊಂಡಿದ್ದರು. ಹಿರೇಹಡಗಲಿ, ಅಣಜಿ, ತಾಳಗುಂದ (ಕದಂಬ) ಶಾಸನಗಳಿಂದ ಈ ಸಂಗತಿ ದೃಢಪಡುತ್ತದೆ. ಕಂಚಿಯ ಪಲ್ಲವರು ವೈದಿಕ ಸಂಸ್ಕೃತಿಯ ಅಭಿಮಾನಿಗಳಾಗಿದ್ದರು. ಇವರಿಂದ ಕರ್ನಾಟಕದಲ್ಲಿ ಹಲವು ಅಗ್ರಹಾರಗಳು ಅಸ್ತಿತ್ವಕ್ಕೆ ಬಂದವು. ಗಂಗರಸರ ಮೇಲೆ ಪಲ್ಲವರ ಹಿಡಿತ ಬಹುಕಾಲದವರೆಗೆ ಉಳಿದು ಬಂತು. ಆದರೆ ಕರ್ನಾಟಕದ ಉತ್ತರ ಭಾಗಗಳನ್ನು ಕದಂಬರು ಪಲ್ಲವರ ಹಿಡಿತದಿಂದ ವಿಮುಕ್ತಗೊಳಿಸಿ ಕನ್ನಡಿಗರಿಗೆ ಸಂಪೂರ್ಣ ಸ್ವಾತಂತ್ರ್ಯ ಒದಗಿಸಿಕೊಟ್ಟರು.

ಕ್ರಿ.ಶ. ನಾಲ್ಕನೆಯ ಶತಮಾನದ ಉತ್ತರಾರ್ಧದಲ್ಲಿ ಕದಂಬ ರಾಜ್ಯ ಸ್ಥಾಪನೆಗೊಂಡುದು ಕರ್ನಾಟಕದ ಚರಿತ್ರೆಯ ಒಂದು ಸುವರ್ಣಾಧ್ಯಾಯ. ಇವರು ಅಚ್ಚ ಕನ್ನಡಿಗರಾದುದರಿಂದ ಸಂಸ್ಕೃತದ ಜತೆಗೆ ಕನ್ನಡವನ್ನೂ ಆಡಳಿತ ಭಾಷೆಯನ್ನಾಗಿ ಜಾರಿಗೆ ತಂದರು. ಸಾತವಾಹನರು ಮತ್ತು ಅವರ ಮಾಂಡಲಿಕರನ್ನಷ್ಟೆ ಅಲ್ಲದೆ, ಕೇಕಯ ಪಲ್ಲವ ಬಾಣ ಮೊದಲಾದ ಅನೇಕರನ್ನು ನಿಯಂತ್ರಿಸಿ ಬನವಾಸಿ ಮತ್ತು ಹಲಿಸಿಗೆಗಳನ್ನು ತಮ್ಮ ರಾಜ್ಯದ ಕಲೆ ಸಂಸ್ಕೃತಿಗಳ ಕೇಂದ್ರಗಳನ್ನಾಗಿ ಅಭಿವೃದ್ಧಿ ಪಡಿಸಿದರು. ತ್ರಿಕೂಟ, ಉಚ್ಚಂಗಿಗಳೂ ಇವರ ಕಾಲಾವಧಿಯಲ್ಲಿ ಮಹತ್ವದ ಕೇಂದ್ರಗಳೆನಿಸಿದವು. ದೇವಗಿರಿ, ಹಲಸಗಿ ತಾಳಗುಂದ, ಬನವಾಸಿ ಮೊದಲಾದೆಡೆಗಳಲ್ಲಿ ದೊರೆತ ಇವರ ಶಾಸನಗಳು ಸಾಂಸ್ಕೃತಿವಾಗಿ ತುಂಬ ಮಹತ್ವದ ಮಾಹಿತಿ ಒದಗಿಸುತ್ತವೆ.

ಇಂಥ ದೊಡ್ಡ ಮನೆತನಗಳಲ್ಲದೆ ಪುನ್ನಾಟ, ಸೇನವಾರ, ಸಾಂತರ ಮೊದಲಾದ ಹಲವಾರು ಚಿಕ್ಕ ಪುಟ್ಟ ರಾಜ್ಯಗಳು ನಮ್ಮ ನಾಡಿನಲ್ಲಿ ಅಸ್ತಿತ್ವದಲ್ಲಿದ್ದವು. ಬೇಡರ ರಾಜ್ಯವೊಂದರ ಬಗ್ಗೆ ಗದ್ದೆ ಮನೆ ಶಾಸನದಲ್ಲಿ ಉಲ್ಲೇಖವಿದೆ. ಗೊಲ್ಲ ಜನಾಂಗದ ರಾಜ್ಯವೊಂದು ಇದ್ದುದಾಗಿ ಶ್ರವಣಬೆಳ್ಗೊಳದ ಒಂದು ಶಾಸನದಲ್ಲಿ ಹೇಳಿದೆ. ಖಚರ/ ವಿದ್ಯಾಧರ, ನಾಗ, ಉಗ್ರ ಯಾದವ, ಕೇಕಯ, ಗುಪ್ತಮೊದಲಾದ ಹಲವಾರು ವಂಶ ಮೂಲಗಳನ್ನು ಹೇಳಿಕೊಂಡಿರುವ ರಾಜಮನೆತನಗಳು ನಮ್ಮಲ್ಲಿದ್ದವು. ಮೂಲತಃ ಕುರುಬರಾಗಿದ್ದ ವಿಜಯನಗರದ ಸಂಗಮ ವಂಶೀಯರು ತಮ್ಮನ್ನು ಶಾಸನಗಳಲ್ಲಿ ಯಾದವರೆಂದೂ ಸೂರ್ಯ ವಂಶರೆಂದೂ, ಚಂದ್ರವಂಶೀಯರೆಂದೂ ಕರೆದುಕೊಂಡಿದ್ದಾರೆ;

ಜಾನಾಂಗಿಕವಾಗಿ ಇಂದಿನ ಕರ್ನಾಟಕದಲ್ಲಿ ಗುರುತಿಸಲಾಗದ ಅನೇಕ ಜಾತಿವರ್ಗಗಳು ನಮ್ಮ ಶಾಸನಗಳಲ್ಲಿ ಕಂಡುಬಂದಿವೆ. ಧಾರವಾಡ ಜಿಲ್ಲೆಯ ಬೆಳ್ಹೊಡೆಯ ಶಾಸನದಲ್ಲಿ ಸಕ (ಶಕ) ವಶೀಯರು ಎಂಟನೆಯ ಶತಮಾನದವರೆಗೂ ಈ ನಾಡಿನಲ್ಲಿ ಅಸ್ತಿತ್ವ ಪಡೆದಿದ್ದರೆಂಬ ಸಂಗತಿ ಗಮನಿಸತಕ್ಕುದಾಗಿದೆ. ಬ್ರಹ್ಮಕ್ಷತ್ರಿಯರೆಂಬ ಸಂಕೀರ್ಣ ಜಾತಿಯವರ ಹಲವು ಉಲ್ಲೇಖಗಳು ಶಾಸನಗಳಲ್ಲಿ ಕಂಡುಬರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಶಾಸನಗಳಲ್ಲಿ ತೊಳಹರ ಕುಲದ ಉಲ್ಲೇಖಗಳಿವೆ. ಇಂಥ ಅಸಂಖ್ಯ ವಿವರಗಳನ್ನು ನಮ್ಮ ಶಾಸನಗಳು ಮಾತ್ರ ಹಿಡಿದಿಟ್ಟಿವೆ. ಗ್ರಂಥಸ್ಥ ಕೃತಿಗಳಲ್ಲಿ ಇವಾವವೂ ಉಲ್ಲೇಖಗೊಂಡಿಲ್ಲ.

ಕರ್ನಾಟಕಕ್ಕೆ ಬೌದ್ಧಧರ್ಮ ಪ್ರವೇಶಗೊಂಡುದು ಮೌರ್ಯರ ಕಾಲದಲ್ಲಿ ಎಂಬ ಸಂಗತಿಯನ್ನು ಈ ಮುಂಚೆ ನೋಡಿದೆವು. ಮಹಾಯಾನ ಪಂಥ ನಮ್ಮಲ್ಲಿ ವಿಶೇಷ ಪ್ರಚಾರದಲ್ಲಿತ್ತು. ಅದರಂತೆ ಜೈನಧರ್ಮ ಕೂಡ ಮಗಧ ದೇಶದಿಂದಲೇ ಭಾರತದ ತುಂಬ ಪ್ರಸಾರವಾಯಿತು. ಅದು ಕರ್ನಾಟಕದಲ್ಲಿ ಬಹು ಹಿಂದೆಯೆ ಪ್ರವೇಶಿಸಿತ್ತು. ಮೌರ್ಯ ಚಂದ್ರಗುಪ್ತನ ಕಾಲಾವಧಿಯಲ್ಲಿಯೇ ಜೈನ ಮುನಿ ಭದ್ರಬಾಹು ಶ್ರಣಬೆಳ್ಗೊಳಕ್ಕೆ ಬಂದು ನೆಲೆನಿಂತು ಅದರ ಪ್ರಸಾರಕ್ಕೆ ನಾಂದಿ ಭದ್ರಬಾಹು ಶ್ರವಣಬೆಳ್ಗೊಳಕ್ಕೆ ಬಂದು ನೆಲೆನಿಂತು ಅದರ ಪ್ರಸಾರಕ್ಕೆ ನಾಂದಿ ಹಾಡಿದನೆಂದು ಜೈನ ಪರಂಪರೆ ಹೇಳುತ್ತದೆ. ಆದರೆ, ಕ್ರಿ.ಶ. ಐದನೆಯ ಶತಮಾನದಿಂದ ಮಾತ್ರ ಆ ಮತಕ್ಕೆ ಸಂಬಂಧಪಟ್ಟ ಶಾಸನಗಳು ದೊರೆಯುತ್ತವೆ. ಹಲಸಿಗೆಯಲ್ಲಿ ಕದಂಬ ಕಾಕುಸ್ಥವರ್ಮನು ಯುವರಾಜನಾಗಿದ್ದಾಗ ಹೊರಡಿಸಿದ ದಾಖಲೆಯಲ್ಲಿ ಜೈನಧರ್ಮ ಪರ ಉಲ್ಲೇಖವಿದೆ. ಅದರಲ್ಲಿನ ಪ್ರತಿಗೃಹಿ ಶ್ರುತಿಕೀರ್ತಿ ಸೇನಾಪತಿ ಜೈನಧರ್ಮೀಯನು. ಈ ಶಾಸನದ ಕಾಲಕ್ಕೆ ಸರಿ ಸುಮಾರಾಗಿ ಶ್ರವಣಬೆಳ್ಗೊಳದಲ್ಲಿ ಕೂಡ ಜೈನಧರ್ಮೀಯರು ನೆಲೆಸಿದ್ದ ಬಗ್ಗೆ ಶ್ರ. ಬೆ. ದ ಮೊದಲ ಶಾಸನ (ನಂ.೧) ದಲ್ಲಿ ಆಧಾರವಿದೆ. ಪ್ರಭಾಚಂದ್ರನೆಂಬ ಜೈನಯತಿ ಸಮಾಧಿ ಮರಣದಿಂದ ಮುಡಿಪಿದ ಸಂಗತಿ ಅದರಲ್ಲಿ ವರ್ಣಿತವಾಗಿದೆ. ಇದರ ಹಿಂದಿನ ಕಾಲಾವಧಿಯ ಶಾಸನಗಳು ನಮ್ಮಲ್ಲಿ ಕಂಡುಬರುವುದಿಲ್ಲ. ಆ ಕಾರಣ ಗಂಗ-ಕದಂಬರ ಹಿಂದೆ ಜೈನಧರ್ಮ ಸ್ವರೂಪವನ್ನರಿಯುವುದು ಶಕ್ಯವಿಲ್ಲ. ಕದಂಬರ ಶಾಸನಗಳಲ್ಲಿ ನಿರ್ಗ್ರಂಥ, ಯಾಪನೀಯ ಶ್ವೇತಪಟ, ಅಹರಿಷ್ಠಿ, ಕೂರ್ಚಕ ಮೊದಲಾದ ಹಲವು ಪಂಗಡಗಳು ಉಲ್ಲೇಖಗೊಂಡಿವೆ. ರಾಜ ಮಹಾರಾಜರಷ್ಟೆ ಅಲ್ಲದೆ ಜನಸಾಮಾನ್ಯರಿಗೂ ಅದು ಪ್ರಿಯವಾದ ಧರ್ಮವಾಗಿತ್ತು. ದಿಗಂಬರರ ಕೊಂಡಕುಂದಾನ್ವಯದ ಮೂಲಸಂಘ, ಪುನ್ನಾಟ ಸಂಘಗಳು ಕರ್ನಾಟಕ ಮೂಲದವಾಗಿದ್ದು ಹಲವಾರು ಶಾಸನಗಳಲ್ಲಿ ಇವನ್ನು ಉಲ್ಲೇಖಿಸಲಾಗಿದೆ. ಯಾಪನೀಯವೆಂಬ ಉದಾರವಾದೀ ಜೈನಪಂಥ ಒಂದು ಕಾಲಕ್ಕೆ ಅಖಿಲಭಾರತೀಯ ಮಟ್ಟದಲ್ಲಿ ಪ್ರಸಾರ ಪಡೆದಿತ್ತು. ಇದು ಕರ್ನಾಟಕದಲ್ಲಿ ಹುಟ್ಟಿದ್ದೆಂದು ವಿದ್ವಾಂಸ ನಂಬಿಗೆಯಾಗಿದೆ. ಹಲಸಿಗೆಯಲ್ಲಿ ೫ನೆಯ ಶತಮಾನದಿಂದ ದೊರೆಯುವ ಇದರ ಉಲ್ಲೇಖಗಳು ಸೌದತ್ತಿಯ ರಟ್ಟರ ಕಾಲದವರೆಗೂ ಶಾಸನಗಳಲ್ಲಿ ಕಾಣಬರುತ್ತವೆ. ಇದರ ಮೈಳಪಾನ್ವಯ, ಕಾರೆಯಗಣ, ಕಾಣೂರಗಣ, ಸೂರಸ್ತಗಣ ಮತ್ತು ತಿಂತ್ರಿಣೀ ಗಚ್ಛಗಳು ತುಂಬ ಪ್ರಸಿದ್ಧವಾಗಿದ್ದವು. ಉತ್ತರ ಕರ್ನಾಟಕದಲ್ಲಿ ಇಂದು ದಿಗಂಬರ ಪಂಗಡಕ್ಕೆ ಸೇರಿದ ಹಲವಾರು ಬಸದಿಗಳು ಒಂದು ಕಾಲಕ್ಕೆ ಯಾಪನೀಯರ ವಶದಲ್ಲಿದ್ದವು. ಕೊಪ್ಪಳ ಬಹುಶಃ ಇದರ ಒಂದು ಪ್ರಾಚೀನ ಕೇಂದ್ರವಾಗಿದ್ದಂತೆ ತೋರುತ್ತದೆ. ಬೆಳಗಾವಿ ಜಿಲ್ಲೆಯ ಸವದತ್ತಿಕೂಡ ಇದರ ಇನ್ನೊಂದು ಪ್ರಮುಖ ನೆಲೆ. ಹತ್ತನೆಯ ಶತಮಾನದ ಪ್ರಸಿದ್ಧ ದಾನಿ ಅತ್ತಿಮಬ್ಬೆ ಯಾಪನೀಯಳೆಂದು ಕಾಣುತ್ತದೆ. ಅದೇ ರೀತಿ ಪೊನ್ನನ ಮತವೂ ಯಾಪನೀಯವಾಗಿದೆ.

ಭಾರತೀಯ ಭಾಷೆಗಳ ಪೈಕಿ ಅತಿ ಹೆಚ್ಚು ಸಂಖ್ಯೆಯ ಜೈನ ಗ್ರಂಥಗಳು ಕನ್ನಡದಲ್ಲಿರುವಂತೆ ಅದರ ಅತಿ ಹೆಚ್ಚು ಶಾಸನಗಳು ಕರ್ನಾಟಕದಲ್ಲಿ ಅದರೂ ಕನ್ನಡದಲ್ಲಿ ಇವೆ.

ಪೌರಾಣಿಕ ಹಿಂದೂ ಧಮ್ಮದ ಬಗ್ಗೆ, ಅದರ ಹಲವಾರು ದೇವ-ದೇವತೆಗಳ ಬಗ್ಗೆ ನಮ್ಮ ನಾಡಿನ ಶಾಸನಗಳು ಅಪೂರ್ವ ಮಾಹಿತಿ ಒದಗಿಸುತ್ತವೆ. ಕ್ರಿಸ್ತಶಕಾರಂಭದಿಂದ ನಮ್ಮ ನಾಡಿನಲ್ಲಿ ಬುದ್ಧನ ಪೂಜೆಯಂತೆ ಶಿ, ಕಾರ್ತಿಕೇಯ, ನಾಗ ಮತ್ತು ಹಾರೀತಿ ಎಂಬ ಜಾನಪದ ಮೂಲದ ದೇವತೆಗಳು ಪೂಜೆ ಗೊಳ್ಳುತ್ತಿದ್ದರು. ಈ ಅವಧಿಯಲ್ಲಿ ದೊರೆಯುವ ಪ್ರಾಕೃತ ಶಾಸನಗಳಲ್ಲಿ ಸು. ಇನ್ನೂರರಷ್ಟು ವ್ಯಕ್ತಿನಾಮಗಳು ಕಂಡುಬಂದಿವೆ. ಅವುಗಳ ವಿಶ್ಲೇಷಣೆಯಿಂದ ದೈವಾರಾಧನೆ ಕುರಿತಾದ ಮೇಲಿನ ಅಭಿಪ್ರಾಯ ದೃಢಪಟ್ಟಿದೆ. ಈ ಆರಂಭ ಕಾಲದಲ್ಲಿ ತರುವಾಯ ಪ್ರಚಲಿತಗೊಂದ, ಗಣಪತಿ, ರಾಮ, ಹನುಮಂತ ಮೊದಲಾದ ಹಿಂದೂ ಪೌರಾಣಿಕ ದೇವತೆಗಳ ಪೂಜೆ ಪ್ರಚಲಿತವಿರಲಿಲ್ಲವೆಂದು ಕಂಡುಬರುತ್ತದೆ.[4] ದಶಾವತಾರಗಳ ಕಲ್ಪನೆ ಅಂದು ಬಹುಶಃ ಇರಲಿಲ್ಲ. ಆದರೆ ವಿಷ್ಣು ಪೂಜೆ ಅಂದು ರೂಢಿಯಲ್ಲಿತ್ತು.[5]

ಮಳವಳ್ಳಿಯ ಚುಟು ಶಾಸನ ಅಲ್ಲಿನ ಶಿವನನ್ನು ಪರೋಕ್ಷವಾಗಿ ಉಲ್ಲೇಖಿಸಿದೆ. ವಾಸನ ಶಾಸನದಲ್ಲಿ ಚಂಡಶಿವನ ಉಲ್ಲೇಖವಿದೆ. ಕ್ರಿ.ಶ. ಐದನೆಯ ಶತಮಾನದ ತಾಳಗುಂದ ಶಾಸನಗಳಲ್ಲಿ ಶೈವಪರವಾದ ದಾನ-ಪೂಜೆಗಳ ಉಲ್ಲೇಖಗಳಿವೆ. ತರುವಾಯ ಕಾಲದಲ್ಲಿ ಹುಟ್ಟಿದ ಶಾಸನಗಳು ಶಿವಸ್ತುತಿಯನ್ನು ವಿಶೇಷವಾಗಿ ಮಾಡಿವೆ. ಲಾಕುಳಾಗಮ ಕರ್ನಾಟಕದಲ್ಲಿ ತುಂಬ ಜನಪ್ರಿಯವಾಗಿದ್ದು ಲೆಕ್ಕವಿಲ್ಲದಷ್ಟು ಶಾಸನಗಳು ಶಿವಾಲಯ ನಿಮಾಣ, ಮತ್ತು ಲಿಂಗ ಪೂಜೆಯ ವಿವರಗಳನ್ನು ಹೇಳುತ್ತವೆ. ಲಕುಲೀಶ ಪಾಶುಪತದಂತೆ ಕಾಪಾಲಿಕರೂ ನಮ್ಮಲ್ಲಿ ಪ್ರಬಲ ಆಂದೋಲನವಾಗಿ ಮಾರ್ಪಟ್ಟು ಅದು ಜನ ಸಾಮಾನ್ಯರನ್ನು ಆಕರ್ಷಿಸತೊಡಗಿತು. ಹೀಗಾಗಿ ಪ್ರಮುಖ ಶರಣರಾದ, ಬಸವಣ್ಣ, ಸಿದ್ಧರಾಮ, ಏಕಾಂತ ರಾಮಯ್ಯನೆಲುವಿಗೆಯ ಶಾಂತಯ್ಯ, ಉಳೀಯುಮೇಶ್ವರ ಚಿಕ್ಕಯ್ಯ ಮೊದಲಾದ ಶರಣರನ್ನು ಕುರಿತು ಶಾಸನಗಳು ಹುಟ್ಟಿಕೊಂಡವು. ವೀರಶೈವ ಗ್ರಂಥಗಳಲ್ಲಿ ಎಲ್ಲಿಯೂ ತೋರಿಬರದಿರುವ ದೇವರಾಜಮುನಿ ಎಂಬ ಬಸವಣ್ಣನವರ ಅಣ್ಣನ ಹೆಸರು ಅರ್ಜುನವಾಡದ ಶಾಸನದಿಂದ ಮಾತ್ರ ತಿಳಿದು ಬರುತ್ತದೆ. ಕರ್ನಾಟಕದಲ್ಲಿ ದೊರೆಯುವ ೧೨ನೆಯ ಶತಮಾನಾನಂತರದ ಶಾಸನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ವೀರಶೈವವನ್ನು ಕುರಿತ ಈ ವರೆಗೆ ಗ್ರಂಥಗಳಿಂದ ತಿಳಿದುಬರದೇ ಇರುವ ಇನ್ನೂ ಹಲವು ಸಂಗತಿಗಳು ಗೋಚರಿಸುತ್ತವೆ. ನಂದಿ, ಭೃಂಗಿ ಮತ್ತು ವೀರಭದ್ರರೆಂಬ ಶಿವಗಣಗಳ ಪೂಜೆಗೆ ವಿಶೇಷ ಗೌರವವಿತ್ತಿದ್ದ ‘ದ್ಯಾವಾ ಪೃಥ್ವೀ’ ಮಹಾಮಹತ್ತಿನ ಮಠಗಳ ಸಂಪ್ರದಾಯ ಅಂಥವುಗಳಲ್ಲಿ ಒಂದು ಸು. ೧೫ನೆಯ ಶತಮಾನದಲ್ಲಿದ್ದ ಏಕಾಂತ ಬಸವೇಶ್ವರನು ತಾನು ವೀರಶೈವ ಮತ ಸ್ಥಾಪನಾರ್ಚನೆಂದೂ ಏಕಾಂತ ರಾಮಯ್ಯ ವಂಶಜನೆಂದೂ ಹೇಳಿಕೊಂಡಿರುವುದು ಶಾಸನವೊಂದರಲ್ಲಿ ಕಂಡುಬಂದಿದೆ. ಅದೇ ರೀತಿ ಅಲ್ಲಮ, ಚನ್ನಬಸವ ಮೊದಲಾದವರ ಹೆಸರುಗಳು ೧೫ನೆಯ ಶತಮಾನದ ವರೆಗಿನ ಶಾಸನಗಳಲ್ಲಿ ಕಂಡು ಬರುವುದಿಲ್ಲ. ೧೬ನೆಯ ಶತಮಾನದಲ್ಲಿದ್ದ ತೋಂಟದ ಸಿದ್ಧಲಿಂಗ ಯತಿಯನ್ನು ಕುರಿತು ಶಾಸನಗಳು ಹುಟ್ಟಿಕೊಂಡಿವೆ.

ಇದರಂತೆ ವೈಷ್ಣವ ಶಾಸನಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ದುರ್ಗಾ, ಮೈಲಾರಲಿಂಗ, ಸೂರ್ಯ, ಭೈರವ, ಎಕ್ಕಲದೇವಿ, ಎಲ್ಲಮ್ಮ ಮೊದಲಾದ ದೇವರುಗಳ ಉಲ್ಲೇಖಗಳು ಶಾಸನಸ್ಥವಾಗಿವೆ. ಹಲವುಜನ ಸತಿ ಶಿರೋಮಣಿಗಳು, ವೀರರು ಕೂಡ ಶಾಸನೋಲ್ಲೇಖದ ಗೌರವ ಪಡೆದು ಪೂಜೆಗೊಳ್ಳುತ್ತಿದ್ದಾರೆ. ಕುಮ್ಮಟ ದುರ್ಗದ ಕುಮಾರ ರಾಮನಂತೂ ತುಂಬ ಜನಪ್ರಿಯ ನಾಯಕನೆನಿಸಿ ಕರ್ನಾಟಕದ ಬಹು ಭಾಗಗಳಲ್ಲಿ ಶಾಸನಸ್ಥನಾಗಿ, ಪೂಜಾಮೂರ್ತಿಯಾಗಿ ಮೆರೆಯುತ್ತಿದ್ದಾನೆ.

ಭಾಷಾವೈಜ್ಞಾಣಿಕವಾಗಿ ಕೂಡ ಕರ್ನಾಟಕದ ಶಾಸನಗಳು ಬಹುಮುಖ್ಯ ಮಾಹಿತಿ ನೀಡುತ್ತವೆ. ಕ್ರಿ.ಶ. ನಾಲ್ಕನೆಯ ಶತಮಾನದವರೆಗೆ ದೊರೆಯುವ (ಸು. ೧೦೫ ರಷ್ಟು) ಪ್ರಾಕೃತ ಶಾಸನಗಳ ಭಾಷೆಯನ್ನು ಒಟ್ಟಾರೆಯಾಗಿ ಪ್ರಾಕೃತವೆಂದು ಕರೆದರೂ ಇವುಗಳಲ್ಲಿ ಸೂಕ್ಷ್ಮ ಭೇದಗಳನ್ನು ಗುರುತಿಸಬಹುದು. ಅಶೋಕನ ಶಾಸನಗಳು ಸಂಸ್ಕೃತದ ಘೊಷ ವ್ಯಂಜನಗಳಿರಬೇಕಾದ ಸ್ಥಾನಗಳಲ್ಲಿ ಕ. ಪ. ಮುಂತಾದ ಅಘೋಷ ವ್ಯಂಜನಗಳನ್ನು ತಂದುಕೊಂಡಿವೆ. ನಕಾರ ಮೂರ್ಧನ್ಯೀ ಕರಣ ಇವುಗಳಲ್ಲಿ ಕ್ವಚಿತ್ತಾಗಿದೆ. ಆದರೆ ತರುವಾಯದ ಹಲವಾರು ಪ್ರಾಕೃತ ಶಾಸನಗಳಲ್ಲಿ ಈ ಪರಿಸ್ಥಿತಿ ಬದಲಾಯಿಸಿ ಸಂಸ್ಕೃತ ಶಬ್ದಗಳಲ್ಲಿನ ಘೋಷಗಳು ಘೋಷಗಳಾಗಿಯೆ ಉಳಿದುದು ಕಂಡುಬರುತ್ತದೆ. ಅದರಂತೆ ಅಶೋಕನ ಶಾಸನಗಳಲ್ಲಿ ಪ್ರಾರಂಭವಾಗುವ ಮೂರ್ಧನ್ಯೀಕರಣ (ನ>ಣ) ಪ್ರಕ್ರಿಯೆ ಹೆಚ್ಚು ಹೆಚ್ಚಾಗುತ್ತ ಹೋಗುತ್ತದೆ. ಇದು ಅರ್ಧಮಾಗಧಿ ಮತ್ತು ಮಹಾರಾಷ್ಟ್ರೀಯ ಪ್ರಾಕೃತಗಳ ವೈಶಿಷ್ಟ್ಯ. ಇದರಂತೆ (ಚೂಲಿಕಾ) ಪೈಶಾಚಿಯ ಕೆಲವು ಅಂಶಗಳ ಜತೆಗೆ (ತರುವಾಯದ) ಅಪಭ್ರಂಶದ ರೂಪಗಳೂ ಕರ್ನಾಟಕದ ಪ್ರಾಕೃತ ಶಾಸನಗಳಲ್ಲಿವೆ. ಹೀರೆಹಡಗಲಿಯ ಪಲ್ಲವ ಶಾಸನ ಮತ್ತು ಮಳವಳ್ಳಿ ಕದಂಬ ಶಾಸನಗಳ ಭಾಷೆ ಪ್ರಾಕೃತವಾಗಿದ್ದರೂ ಸಂಸ್ಕೃತಕ್ಕೆ ತೀರ ನಿಕಟವಾಗಿರುವುದು ಎದ್ದುಕಾಣುವ ಅಂಶ. ಐದನೆಯ ಶತಮಾನದಿಂದ ಪ್ರಾಕೃತವು ಹಿಂದೆ ಬಿದ್ದು ಅದರ ಬದಲು ಸಂಸ್ಕೃತ ಮತ್ತು ಕನ್ನಡಗಳು ಶಾಸನಗಳಲ್ಲಿ ವಿಜೃಂಭಿಸತೊಡಗಿದ್ದವು. ಆದರೆ ಕ್ರಿ.ಶ. ೨ನೆಯ ಶತಮಾನದ ಹೊತ್ತಿಗಾಗಲೇ ಕನ್ನಡದ ಅಸ್ತಿತ್ವವನ್ನು ಸಿದ್ಧಪಡಿಸುವ, ಮಟ್ಟ ಪಟ್ಟಿ, ಕೊಂಡಮಾನ, ಮೂಡಾಣ, ಮುನಾಳಿ, ಮೊದಲಾದ ಪದಪ್ರಯೋಗಗಳು ಈ ಪ್ರಾಕೃತ ಶಾಸನಗಳಲ್ಲಿರುವುದನ್ನು ನಾನು ಈಗಾಗಲೇ ಬೇರೆಡೆ ತೋರಿಸಿ ಕೊಟ್ಟಿದ್ದೇನೆ.[6]

ಕವಿರಾಜ ಮಾರ್ಗ ಪೂರ್ವದಲ್ಲಿ ಸು. ಐದನೂರರಷ್ಟು ಚಿಕ್ಕ-ದೊಡ್ಡ ಕನ್ನಡ ಶಾಸನಗಳು ಕಂಡುಬಂದಿವೆ. ಇವುಗಳ ಭಾಷೆ ಪೂರ್ವದ ಹಳಗನ್ನಡ. ಈ ಅವಧಿಯಲ್ಲಿ ಕನ್ನಡ ಸಾಹಿತ್ಯ ತಲೆಯೆತ್ತಿತ್ತಾದರೂ ಯಾವುದೇ ಕೃತಿ ಈ ವರೆಗೆ ಉಳಿದುಬಂದಿಲ್ಲ. ಕಳೆದುಹೋದ ಈ ಸಾಹಿತ್ಯದ ಕೊಂಚ ಪರಿಚಯ ಈ ಶಾಸನಗಳಿಂದ ಸಾಧ್ಯವಾಗಿದೆ. ಸು. ೬೫ರಷ್ಟು ಪದ್ಯಗಳು ಈ ಶಾಸನಗಳಲ್ಲಿ ಕಂಡು ಬಂದಿದ್ದು. ಅಕ್ಷರ, ಗಣ, ಅಂಶಗಣ, ಮಾತ್ರಾಗಣ ಈ ಪ್ರಕಾರಗಳು ಪೂರ್ವದ ಹಳಗನ್ನಡ ಸಾಹಿತ್ಯದಲ್ಲಿ ಪ್ರಚಲಿತವಾಗಿದ್ದವೆಂದು ಈ ಶಾಸನ ಪದ್ಯಗಳಿಂದ ಊಹಿಸಬಹುದಾಗಿದೆ. ಕೆಲವೊಮ್ಮೆ ಒಂದೇ ಪದ್ಯದಲ್ಲಿ ಬೇರೆ ಬೇರೆ ಗಣ ಯೋಜನೆಯ ಸಮ್ಮಿಶ್ರಣವೂ ಇತ್ತೆಂದು ಕಾಣುತ್ತದೆ. ಕನ್ನಡಿಗರಿಗೆ ಆದಿಯಿಂದಲೆ ಆದಿ ಪ್ರಾಸದ ಹುಚ್ಚು ಇತ್ತೆಂಬುದಕ್ಕೂ ಇವುಗಳಲ್ಲಿ ಆಧಾರವಿದೆ. ಗದ್ಯ ಪದ್ಯ ಚಂಪೂ ಈ ಮೂರೂ ಪ್ರಕಾರಗಳೊಂದಿಗೆ ಮಣಿ ಪ್ರವಾಳ ಶೈಲಿ ಕೂಡ ತಕ್ಕ ಮಟ್ಟಿಗೆ ಪ್ರಯೋಗದಲ್ಲಿತ್ತೆಂದು ಹೇಳಬಹುದಾಗಿ ರಾಮಾಯಣ, ಮಹಾಭಾರತ, ಬೃಹತ್ಕಥೆಗಳ ಮೂಲದಿಂದ ನಮ್ಮ ಪ್ರಾಚೀನರು ಕಾವ್ಯವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆಂಬುದನ್ನು ಸಮರ್ಥಿಸುವಂತೆ ಶಾಸನಗಳಲ್ಲಿ ಕ್ವಚಿತ್ತಾದ ಕೆಲವು ಉಲ್ಲೇಖಗಳಿವೆ. ಪಟ್ಟದಕಲ್ಲಿನ ದೇವಾಲಯಗಳಲ್ಲಿನ ಬಿಡಿಬರಹಗಳಲ್ಲಿ, ರಾಮ, ಲಕ್ಷ್ಮಣ ಸೀತೆಯರ ಉಲ್ಲೇಖವಿದ್ದರೆ ನಗರಶಾಸನದಲ್ಲಿ ಹನುಮಂತನ ಉಲ್ಲೇಖವೂ ಮಾವಳಿಯ ಶಾಸನದಲ್ಲಿ ಭೀಷ್ಮನ ಉಲ್ಲೇಖವೂ ಬಂದಿವೆ. ಅದರಂತೆ ಜೈನ ಪುರಾಣ ಪಾತ್ರಗಳ ಉಲ್ಲೇಖಗಳೂ ಹೇಳರವಾಗಿವೆ. ಹತ್ತನೆಯ ಶತಮಾನದಿಂದೀಚೆಗೆ ರಚಿತವಾದ ಕಳಸ, ಅಮೃತಾಪುರ, ಅಬ್ಬಲೂರು ಹಂಪೆ (ಮಧುರಕವಿತಚಿತ) ಮೊದಲಾದ ಶಾಸನಗಳು ಚಂಪೂಕಾವ್ಯಗಳೇ ಆಗಿವೆ. ಶ್ರವಣ ಬೆಳ್ಗೊಳದಲ್ಲಿ ಬರೆಯಲಾದ ಗೊಮ್ಮಟ ಜಿನ ಸ್ತುತಿ’ ಕವಿಭೂಪ್ಪಣ ಪಂಡಿತನಿಂದ ರಚಿತವಾದ ಒಂದು ಲಘು ಕಾವ್ಯವೇ ಇತ್ತೀಚೆಗೆ ಸೊಲ್ಲಾಪುರದಲ್ಲಿ ಪತ್ತೆಯಾದ ‘ವಿವಾಹ ವರ್ಣನಂ’ ಎಂಬ ಅಂಶಗಣ ಘಟಿತ ಮೂಲ ಷಟ್ಪದಿಯ ಶಾಸನ ಇನ್ನೊಂದು ಒಂದು ಲಘುಕಾವ್ಯ. ಚಿಕ್ಕಮಾಗಡಿಯ ಶಾಸನ (ಕಾಲ ಕ್ರಿ.ಶ. ೧೨೧೨?) ದಲ್ಲಿ ಶ್ರೀಮತಿ ಜಕ್ಕಲಾಂಬಾ ಎಂಬುವಳ ಉಲ್ಲೇಖಬಂದಿದ್ದು ಕನ್ನಡದ ಮೊದಲ ಜೈನ ಕವಿಯತ್ರಿ ಎಂಬ ಗೌರವಕ್ಕೆ ಪಾತ್ರಳಾಗಿದ್ದಾಳೆ. ಅದರಂತೆ ಗುಂಡ್ಲುಹಳ್ಳಿಯ ಕ್ರಿ.ಶ. ೮ನೆಯ ಶತಮಾನದ ಶಾಸನದಲ್ಲಿ ‘ದಿವ್ಯಭಾಷಾಕಲನ್’ ಎಂಬ ಕವಿಯ ಹೆಸರು ಪ್ರಥಮ ಬಾರಿಗೆ ಬರುವುದನ್ನು ಈಗಾಗಲೇ ಗುರುತಿಸಲಾಗಿದೆ.[7]

ಹೀಗೆ ನಮ್ಮ ಶಾಸನ ಕ್ಷೇತ್ರದಲ್ಲಿನ ಕಾರ್ಯಕ್ಕೆ ನಾನಾಮುಖಗಳಿವೆ. ಈ ಕಾರ್ಯ ಯಶಸ್ವಿಯಾಗಿ ಮುಂದುವರಿಯಲು ಕನ್ನಡ ಶಾಸನಗಳ ಸಮಗ್ರ ಪರಿವೀಕ್ಷಣೆ ನಡೆದು ಅವುಗಳ ಪಾಠಗಳು ಪ್ರಕಟಗೊಳ್ಳಬೇಕು. ಹಾಗೂ ಕಂಪ್ಯೂಟರೀಕರಣಗೊಂಡು ಅವು ಅಭ್ಯಾಸಿಗಳಿಗೆ ಸುಲಭವಾಗಿ ಸಿಗುವಂತಾಗಬೇಕು. ಹಾಗಾದಾಗ ಮಾತ್ರ ನಮ್ಮ ಶಾಸನ ಸಂಪತ್ತಿನ ಮಹಿತಿ ಎಷ್ಟೆಂಬುದನ್ನು ಜಗತ್ತಿಗೆ ಗೊತ್ತಾದೀತು.

 

[1]ಇತ್ತೀಚಿನ ವರೆಗೂ ಶಕವರ್ಷವನ್ನು ಹೇಳುವ ಪ್ರಥಮ ಶಾಸನವೆಂಬ ಹೆಗ್ಗಳಿಕೆ ಈ ಬಾದಾಮಿ ಶಾಸನದ್ದಾಗಿತ್ತು. ಈಗ ವಿದರ್ಭ ಪ್ರದೇಶದಲ್ಲಿ ಇದಕ್ಕಿಂತಲೂ ಕೊಂಚ ಮೊದಲಶಕ ಕಾಲವನ್ನು ಸೂಚಿಸಿರುವ ಶಾಸನವೊಂದು ಪತ್ತೆಯಾಗಿದೆ.

[2]ನೋಡಿ ಪ್ರಾಚೀನ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ: ಪ್ರಾರಂಭದ ಚಿತ್ರ ಪಡಿಯಚ್ಚುಗಳು ಸಂ. ೧೭. ಈ ಶಾಸನ ಶಿಲೆ ಈಗ ಕನ್ನಡ ಸಂಶೋಧನೆ ಸಂಸ್ಥೆ ಧಾರವಾಡದಲ್ಲಿದೆ.

[3]ನೋಡಿ: Early Brahmi Inscriptions from Sannati p-63

[4]ಸಂಗಮ್ ಸಾಹಿತ್ಯ ಯುಗದ ತಮಿಳು ನಾಡಿನಲ್ಲಿಯೂ ಈ ದೇವತೆಗಳ ಆರಾಧನೆ ರೂಢಿಯಲ್ಲಿರಲಿಲ್ಲವೆಂದು ತಿಳಿದು ನಾಡಿನಲ್ಲಿಯೂ ಈ ದೇವತೆಗಳ ಆರಾಧನೆ ರೂಢಿಯಲ್ಲಿರಲಿಲ್ಲವೆಂದು ತಿಳಿದು ಬರುತ್ತದೆ. ನೋಡಿ ಸಂಗಮ್ ರಾಜಕೀಯ ಸಾಮಾಜಿಕ ವ್ಯವಸ್ಥೆ ಪು. ೪೩೫-೩೮ ಅನು: ನಿರಂಜನ.

[5]ಕ್ರಿ.ಶ. ದ ಪ್ರಾರಂಭದಲ್ಲಿ ಪೂಜೆ ನಮ್ಮಲ್ಲಿ ಪ್ರಚಲಿತ ವಿದ್ದಹಾಗೆ ಕಾಣುತ್ತದೆ.

[6]ನೋಡಿ: i. ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ ಕವಿವಿ, ಧಾರವಾಡ

ii. ಕರ್ನಾಟಕದ ಚರಿತ್ರೆ ಸಂ.೧ ಕನ್ನಡ ವಿ.ವಿ. ಹಂಪಿ.

[7]ಹಿಂದಿನ ಅಡಿಟಿಪ್ಪಣಿ ನೋಡಿ.