ಕ್ರಿ.ಶ. ೧೭೮೪ರಲ್ಲಿ ಸರ್ ವಿಲಿಯಂ ಜೋನ್ಸ್ ಮತ್ತು ವಿಲ್ಕಿನ್ಸ ಎಂಬ ಆಂಗ್ಲ ಮಹೋದಯರು ‘(ರಾಯಲ್) ಏಸಿಯಾಟಿಕ್ ಸೊಸಾಯಟಿ ಆಫ್ ಬೆಂಗಾಲ’ ಎಂಬ ಪ್ರಾಚ್ಯ ವಿದ್ಯಾಸಂಸ್ಥೆಯನ್ನು  ಸ್ಥಾಪಿಸಿ ಅದರಂಗವಾಗಿ ‘ಏಸಿಯಾಟಿಕ್ ರೀಸರ್ಚಿಸ್’ ಎಂಬ ಸಂಶೋಧನಾ ಪತ್ರಿಕೆಯನ್ನು ಪ್ರಾರಂಭಿಸಿದರು. ವಿಲಿಯಂ ಜೋನ್ಸ ನ್ಯಾಯಾಧೀಶರಾಗಿ ಕಲ್ಕತ್ತೆಗೆ ಬಂದವರು. ಆದರೆ ಪುರಾತತ್ವ, ಭಾರತೀಯ ತತ್ವಜ್ಯಾನ, ಪ್ರಾಚೀನ ಇತಿಹಾಸ, ಭಾಷಾವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ತುಂಬ ಅಭಿರುಚಿಯುಳ್ಳ ಪ್ರತಿಭಾವಂತರು. ಪೌರ್ವಾತ್ಯ – ಪಾಶ್ಚಿಮಾತ್ಯ ಸಂಸ್ಕೃತಿಗಳ ನಡುವೆ ಸೇತುವೆಯೊಂದನ್ನು ನಿರ್ಮಿಸುವ ಅಭೂತಪೂರ್ವ ಕಾರ್ಯವೆಸಗಿ ಯುಗ ಪ್ರವರ್ತನೆಯ ಹರಿಕಾರರೆನಿಸಿದರು. ತನ್ನ ಗತವೈಭವವನ್ನು ಮರೆತು ಘೋರವಾದ ಅಜ್ಞಾನ ಕೂಪದಲ್ಲಿ ಮುಳುಗಿದ್ದ ಭಾರತಕ್ಕೆ ಜ್ಞಾನದ ಕೈದೀವಿಗೆಯಿತ್ತು ಅದು ಎಚ್ಚರಗೊಳ್ಳುವಂತೆ ಮಾಡಿದರು. ಇಂಡೋ-ಆರ್ಯನ್-ಇಂಡೋ ಯುರೋಪಿಯನ್ ಭಾಷಾ ಕುಟುಂಬದ ವ್ಯವಸ್ಥಿತ ಅಧ್ಯಯನ್ಕೆ ಪ್ರೇರಣ ಶಕ್ತಿಯಾಗಿ ನಿಂತು ಪ್ರಸ್ತುತ ಸಂಸ್ಥೆ ಕೆಲಸ ಪ್ರಾರಂಭಿಸಿದ್ದರಿಂದ ಒಟ್ಟು ಮನುಕುಲದ ಇತಿಹಾಸಕ್ಕೇ ಹೊಸ ತಿರುವು ಪ್ರಾಪ್ತವಾಯಿತು.

ಕರ್ನಾಟಕದ ಪ್ರಾಚೀನ ಇತಿಹಾಸ ಸಂಬಂಧದ ಸಂಶೋಧನೆ ಪ್ರಾರಂಭವಾಗಲು ಕೂಡ ಈ ಸಂಸ್ಥಯೇ ಕಾರಣೀಭೂತವಾಯಿತು. ‘ಏಸಿಯಾಟಿಕ್ ರೀಸರ್ಚ’ನ ೧೭೯೧ ವರ್ಷದ ಸಂಚಿಕೆಯಲ್ಲಿ ‘ಏ ರಾಯಲ್ ಗ್ರ್ಯಾಂಟ್ ಆಫ್ ಲ್ಯಾಂಡ ಇನ್ ಕರ್ನಾಟ’ ಎಂಬ ಲೇಖನ ಅಚ್ಚಾಯಿತು. ಇದು ಕಂಚಿಯಲ್ಲಿ ದೊರೆತ ವಿಜಯನಗರ ದೊರೆಗಳ ಒಂದು ತಾಮ್ರಪಟವನ್ನು ಕುರಿತದ್ದು ಇದರ ಮಾಹಿತಿಯನ್ನು ವಿಲಿಯಂ ಜೋನ್ಸ ಅವರಿಗೆ ಅಲೆಕ್ಝಾಂಡರ ಮಾಕ್ಲಿಯೋಸ ಎಂಬ ಅಧಿಕಾರಿ ಕಳುಹಿಸಿಕೊಟ್ಟಿದ್ದ ಟಿಪ್ಪಣಿಗಳೊಂದಿಗೆ ಅದನ್ನು ಜೋನ್ಸ ಇಂಗ್ಲೀಷಿಗೆ ಅನುವಾದಿಸಿದರು. ಇಲ್ಲಿಂದ ಕರ್ನಾಟಕ ಶಾಸನಗಳ ಅಧ್ಯಯನಕ್ಕೆ ನಾಂದಿಯಾಯಿತು.

ಟಿಪ್ಪೂ ಸುಲ್ತಾನನನ್ನು ೧೭೯೯ರಲ್ಲಿ ಬ್ರಿಟಿಷರು ಸೋಲಿಸಿ ಕೊಂದು ಹಾಕಿದರು. ಆಗ ಮೈಸೂರು ಪ್ರದೇಶದ ಬಹುಭಾಗ ಅವರ ಸ್ವಾಧೀನಕ್ಕೆ ಬಂತು, ಬೆಂಗಳೂರು ಅವರ ದೊಡ್ಡ ಕೇಂದ್ರವಾಗಿ ಮಾರ್ಪಟ್ಟಿತು. ಮೈಸೂರು ಪ್ರದೇಶದ ಆಡಳಿತವನ್ನು ವ್ಯವಸ್ಥೆಗೆ ತರುವುದರ ಅಂಗವಾಗಿ ಭೂ ಪರಿವೀಕ್ಷಣೆಯ ಕಾರ್ಯ ಕೈಕೊಳ್ಳಲಾಯಿತು. ಇದಕ್ಕೆ ನಿಯಮಿತನಾದವನು ಕರ್ನಲ್ ಮೆಕೆಂಜಿ ಎಂಬ ಸೈನ್ಯಾಧಿಕಾರಿ. ಈತ ಪರಿವೀಕ್ಷಣೆಯ ಕಾರ್ಯದ ಜೊತೆಗೆ ಪ್ರಾಚೀನ ತಾಡೋಲೆ ಗ್ರಂಥಗಳು, ಶಾಸನ ಪಡಿಯಚ್ಚುಗಳು, ಕೈಫೀಯತ್ತುಗಳೂ ಪ್ರಾಚ್ಯಾವಶೇಷಗಳೂ ಮೊದಲುಗೊಂಡು ಊರೂರುಗಳಲ್ಲಿ ದೊರೆಯುತ್ತಿದ್ದ ತಾಪ್ರಪಟ, ನಾಣ್ಯ ಇತ್ಯಾದಿ ಹಲವು ಬಗೆಯ ಅವಶೇಷಗಳನ್ನು ಕಲೆ ಹಾಕಿದನು. ತಾನು ಸಂಗ್ರಹಿಸಿದ ಶಾಸನಗಳನ್ನು ಕೆಲಮಟ್ಟಿಗೆ ಓದಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿ ಆದನು. ಆ ಕಾರ್ಯದಲ್ಲಿ ಆತನಿಗೆ ಸಹಾಯಕನಾದವನು ಕವೆಲ್ಲಿ ವೆಂಕಟ ಬೋರಯ್ಯನೆಂಬ ಬ್ರಾಹ್ಮಣನೆಂದು ತಿಳಿದು ಬರುತ್ತದೆ. (‘ಇವನ ಹೆಸರಿನಲ್ಲಿರುವ ‘ಕವೆಲ್ಲಿ’ ಎಂಬುದು ಕಾವಳ್ಳಿ ಎಂಬ ಗ್ರಾಮ ವಾಚಕವಾಗಿರುವಂತೆ ಕಾಣುತ್ತದೆ) ಮೆಕೆಂಜಿ ೧೭೯೯ರಿಂದ ೧೮೦೯ರ ವರೆಗೆ ಮೈಸೂರು ಪ್ರದೇಶದಲ್ಲಿ ಸಂಚರಿಸಿ ತನಗೆ ದೊರೆತ ಶಾಸನಗಳ ಬಗ್ಗೆ ‘ಏಸಿಯಾಟಿಕ್ ರೀಸರ್ಚಿಸ್’ ಪತ್ರಿಕೆಗೆ ವರದಿ ಮಾಡುತ್ತ ಬಂದುದು ಕಂಡುಬರುತ್ತದೆ.

ವಾಲ್ಟರ ಇಲಿಯಟ್ ಎಂಬ ಆಂಗ್ಲವಿದ್ವಾಂಸ ಕೂಡ ಕರ್ನಾಟಕದ ಶಾಸನಕ್ಷೇತ್ರದಲ್ಲಿ ಆಸಕ್ತಿ ವಹಿಸಿದವರ ಪೈಕಿ ಪ್ರಮುಖನೆನಿಸಿದ್ದಾನೆ. ಇವನು ‘ಹಿಂದೂ ಇನ್‌ಸ್ಕ್ರಿಪ್ಶನ್ಸ ಎಂಬ ಲೇಖನ ಪ್ರಕಟಿಸಿದ್ದಲ್ಲದೆ ‘ಕರ್ನಾಟಕ ದೇಶ ಇನ್‌ಸ್ಕ್ರಿಪ್ಶನ್ನ’ ಎಂಬ ಶಾಶನಗಳ ಸಂಗ್ರಹ ಸಿದ್ದಪಡಿಸಿದ್ದು ತಿಳಿದುಬಂದಿದೆ. ಸು. ೫೯೫ ಶಾಸನಗಳಿದ್ದ ಈ ಸಂಗ್ರಹದ ಒಟ್ಟು ನಾಲ್ಕು ಪ್ರತಿಗಳನ್ನು ಮಾಡಿ ಒಂದು ಪ್ರತಿಯನ್ನು ರಾಯ್ ಏಸಿಯಾಟಿಕ್ ಸಂಸ್ಥೆಗೂ ಇನ್ನೊಂದನ್ನು ಎಡಿನ್‌ಬರೊ ವಿಶ್ವವಿದ್ಯಾಲಯಕ್ಕೂ ಕೊಟ್ಟನು. ಇನ್ನುಳಿದ ಎರಡು ಪ್ರತಿಗಳು ಏನಾದವೆಂದು ತಿಳಿಯದು. ಅದಲ್ಲದೆ ಮುಂಚೆ ಲಭ್ಯವಿದ್ದ ಇನ್ನೆರಡು ಪ್ರತಿಗಳೂ ಈಗ ಕಳೆದುಹೋಗಿವೆ. ಕರ್ನಾಟಕದ ಶಾಸನಾಧ್ಯಯನ ಕ್ಷೇತ್ರದಲ್ಲಿ ಇಲಿಯಟ್‌ನ ಈ ಕಾರ್ಯ ಒಂದು ಪ್ರಮುಖ ಹಂತವೆಂದು ಹೇಳಬಹುದು. ಮುಂದುವರಿದು ಹೆರ್ನಿವಥೆನ್ ಎಂಬವನು ೧೮೩೯ರ ಜೆ ಆರ್ ಎ ಎಸ್ ಸಂ. Vರಲ್ಲಿ ಬೆಳಗಾವಿಯ ಒಂದು ಶಾಸವನ್ನು ಪ್ರಕಟಿಸಿದ. ೧೮೬೫ರಲ್ಲಿ ಚಿತ್ರದುರ್ಗ, ಬೆಳಗಾವಿ, ಹರಿಹರ ಮೊದಲಾದೆಡೆಗಳಲ್ಲಿ ಲಭ್ಯವಿದ್ದ ಶಾಸನ ಪಡಿಯಚ್ಚುಗಲ ಪೋಟೋಗಳನ್ನು ಅಂದಿನ ಮೈಸೂರು ಸರಕಾರ ಪ್ರಕಟಿಸಿತು.

೧೮೩೦ರ ಸುಮಾರಿನಲ್ಲಿ ಅಶೋಕನ ಶಾಸನಗಳನ್ನು ಓದುವ ಪ್ರಯತ್ನ ನಡೆದಿತ್ತು. ೧೮೩೬ರಲ್ಲಿ ಗ್ರೀಕ್-ಬ್ರಾಹ್ಮಿಲಿಪಿಯ ನಾಣ್ಯಗಳ ಸಹಾಯದಿಂದ ಲಾಸೆನ್ ಎಂಬುವನು ಅಶೋಕನ ಶಾಸನಗಳನ್ನು ಓದುವಲ್ಲಿ ಯಶಪಡೆದನು. ೧೮೩೭ರಲ್ಲಿ ಪ್ರಿನ್ಸೆಪ್ ಎಂಬವನು ಬ್ರಾಹ್ಮೀ ಶಾಸನಗಳನ್ನು ಸಮಗ್ರವಾಗಿ ಓದಿ ಲಿಪಿಯ ಎಲ್ಲ ವಿವರಗಳನ್ನು ಪ್ರಕಟಿಸಿದನು. ಇದರಿಂದಾಗಿ ಪ್ರಾಚೀನ ಭಾರತದ ಎಲ್ಲ ಪ್ರಾಂತಗಳಲ್ಲಿ ದೊರೆಯುತ್ತಿದ್ದಂತೆ ಕರ್ನಾಟಕದ (ಆರುಕಡೆ) ದೊರೆತ ಅಶೋಕ ಲಿಪಿಗಳನ್ನು ಹಾಗೂ ಇತರ ಬ್ರಾಹ್ಮೀ ಶಾಸನಗಳನ್ನು ಓದಲು ಮತ್ತು ವ್ಯವಸ್ಥಿತ ಅಧ್ಯಯನ ಕೈಕೊಳ್ಳಲು ಅನುಕೂಲವಾಯಿತು. ಕನ್ನಡ ಲಿಪಿಯ ವಿಕಾಸದ ವಿವಿಧ ಹಂತಗಳಲ್ಲಿ ಗುರುತಿಸುವ ಕೆಲಸಕೂಡ ಇದರಿಂದ ಸುಲಭಗೊಂಡಿತು. ಇಂಥ ಪ್ರಯತ್ನಗಳ ಪೂರ್ಣ ಪ್ರಯೋಜನ ಪಡೆದು ಕರ್ನಾಟಕ ಶಾಸನ ನಿಧಿಯನ್ನು ಮೇಲೆತ್ತಿ ಅದರ ಅತಿಶಯತೆಯನ್ನು ಜಗತ್ತಿಗೆ ತೋರಿಸಿದ ಪ್ರಮುಖರೆಂದರೆ ಜೆ. ಎಫ್. ಫ್ಲೀಟ ಮತ್ತು ಬಿ.ಎಲ್. ರೈಸ್‌ ಮಹೋದಯರು. ಕನ್ನಡಿಗರು ಈ ಮಹನೀಯರಿಬ್ಬರ ಉಪಕಾರವನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ.

೧೮೬೦-೭೫ರ ಅವಧಿಯಲ್ಲಿ ಇವರಿಬ್ಬರಲ್ಲದೆ ಬಾಳ ಗಂಗಾಧರಶಾಸ್ತ್ರಿ, ಕಾಶಿನಾಥ ತ್ರ್ಯಂಬಕ ತೇಲಂಗ, ಭಾವುದಾಜಿ, ಸರ್ ಜಾನ್ ಮಾಲ್ಕಂ ಮೊದಲಾದವರು ಈ ಕ್ಷೇತ್ರದಲ್ಲಿ ಕೆಲಮಟ್ಟಿಗೆ ಶ್ರಮವಹಿಸಿದ್ದು ಕಂಡುಬರುತ್ತದೆ. ಆದರೆ ಫ್ಲೀಟ್ ಮತ್ತು ರೈಸರನ್ನು ಇವರಾರೂ ಸರಿಗಟ್ಟಲಿಲ್ಲ. ವೆಂಕಟ ರಂಗೋ ಕಟ್ಟಿ ಮತ್ತು ಗಂಗಾಧರ ಮಡಿವಾಳೇಶ್ವರ ತುರಮರಿ ಇವರ ಫ್ಲೀಟ್ ಅವರಿಗೆ ಉತ್ತರ ಕರ್ನಾಟಕದ ಶಾಸನಗಳನ್ನು ಓದಿ ಅರ್ಥವಿಸುವಲ್ಲಿ ಸಹಾಯಸಲ್ಲಿಸಿದ್ದಾಗಿ ತಿಳಿದು ಬರುತ್ತದೆ. ಫ್ಲೀಟ್‌ ಅವರು ರಾಯಲ್‌ ಏಸಿಯಾಟಿಕ್‌ ಸೊಸಾಯಟಿಯ ಮುಂಬೈ ಶಾಖೆಯ ಪತ್ರಿಕೆ (ವಿಶೇಷವಾಗಿ ಪ್ರಾರಂಭವಾದ ೧೨ ಸಂಪುಟಗಳು) ಮತ್ತು ಇಂಡಿಯನ್ ಎಂಟಿಕ್ವರಿಯ (ಮೊದಲ ೨೦) ಸಂಪುಟಗಳಲ್ಲಿ ತಮ್ಮ ಬಹಳಷ್ಟು ಲೇಖನ-ಶಾಸನಗಳನ್ನು ಪ್ರಕಟಿಸಿದರು. ಪಾಲಿ, ಸಂಸ್ಕೃತ ಎಂಡ ಓಲ್ಡ ಕ್ಯನರೀಜ್- ಇನ್‌ಸ್ಕ್ರಿಪ್ಶನ್ಸ್’ ಎಂಬ ಲೇಖನ ಮಾಲೆಯನ್ನಾರಂಭಿಸಿ ಉತ್ತರ ಕರ್ನಾಟಕದ- ವಿಶೇಷವಾಗಿ, ಬೆಳಗಾವಿ, ಧಾರವಾಡ, ವಿಜಾಪುರ ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರ ಮತ್ತು ಗುಜರಾತ ಪ್ರದೇಶಗಳಲ್ಲಿ ದೊರೆತ, ಚಾಲುಕ್ಯ, ರಾಷ್ಟ್ರಕೂಟ ಶಾಸನಗಳನ್ನು ಸಂಗ್ರಹಿಸಿ, ವಿದ್ವತ್ಪೂರ್ಣವಾಗಿ ಸಂಪಾದಿಸಿ ಬೆಳಕಿಗೆ ತಂದರು. ಅವರ ಈ ಮಹತ್ತರ ಕಾರ್ಯದಿಂದಾಗಿ ಅದಿಕದಂಬ, ಬಾದಾಮಿ ಚಾಲುಕ್ಯ ಮತ್ತು ರಾಷ್ಟ್ರಕೂಟ ಮನೆತನಗಳ ಖಚಿತವಾದ ಚರಿತ್ರೆ ವಿದ್ವಲ್ಲೋಕಕ್ಕೆ ದೊರೆಯುವಂತಾಯಿತು. ಈ ದಿಶೆಯಲ್ಲಿ ಹೆಸರಿಸಬೇಕಾದ ಅವರ ಪ್ರಖ್ಯಾತ ಕೃತಿ Dynasties of Kanarese districts (೧೮೯೬) ಎಂಬುದು. ಪ್ರಾಚೀನ ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟತೆ ಇದಕ್ಕೆ ಸಮನಾದ ಗ್ರಂಥ ಬಹುಶಃ ಬೇರೊಂದಿಲ್ಲ. ತರುವಾಯ ಇತರ ವಿದ್ವಾಂಸರು ಈ ಕ್ಷೇತ್ರದಲ್ಲಿ ಮಾಡಿದ ಬಹುಪಾಲು ಕೆಲಸವೆಲ್ಲ ಈ ಗ್ರಂಥದಲ್ಲಿ ಪ್ರತಿಪಾದಿತವಾದ ವಿಷಯಗಳನ್ನು ಸಮರ್ಥಿಸುವುದೇ ಆಗಿದೆ. ಕನ್ನಡಿಗರು ಅಖಿಲ ಭಾರತೀಯ ಮಟ್ಟದ ಮೂರು ದೊಡ್ಡ ಚಕ್ರಾಧಿಪತ್ಯಗಳನ್ನು ಕಟ್ಟಿಬೆಳಸಿದ ಮಹಾನ್ ಚಿತ್ರ ಇದರಲ್ಲಿ ಮೂಡಿನಿಂತಿದೆ. ಇದನ್ನೋದಿದ ಕನ್ನಡಿಗರು ನಿದ್ರೆಯಿಂದ ಎಚ್ಚತ್ತವರಂತೆ ಕನ್ನಡ- ಕರ್ನಾಟಕಗಳ ಪುರೋಭಿವೃದ್ಧಿಯ ಕನಸು ಕಾಣತೊಡಗಿದರು. ಕರ್ನಾಟಕ ಏಕೀಕರಣದ ಕಲ್ಪನೆಗೆ ಇದರಿಂದ ಹೆಚ್ಚು ಬಲ ಬಂದು. ಶಾಸನಗಳಲ್ಲಿನ ಐತಿಹಾಸಿಕ ಅಂಶಗಳಂತೆ ಅವುಗಳ ಲಿಪಿಸ್ವರೂಪ ಕಾಲಗಣನೆ, ಭಾಷೆ (ಕನ್ನಡ) ಛಂದಸ್ಸು, ಸ್ಖಾಲಿತ್ಯ ಸ್ವರೂಪ, ಪರಾಣಿಕ-ಗ್ರಂಥಿಗಳ ವಿವರಗಳ ವ್ಯಾಪಕವಾದ ಮಾಹಿತಿ, ಇವೆಲ್ಲವನ್ನು ಕ್ರೋಢೀಕರಿಸಿ ಇತಿಹಾಸ ಕಟ್ಟುವ ಅವರ ಸಂಶೋಧನಾ ಪ್ರತಿಭೆ ಈ ಗ್ರಂಥದುದ್ದಕ್ಕೂಕೆನೆಗಟ್ಟಿ ನಿಂತಿರುವುದನ್ನು ಕಾಣಬಹುದು.

ಬಿ.ಎಲ್. ರೈಸರು (೧೮೭೨) ಇಂಡಿಯನ್ ಎಂಟಿಕ್ವರಿಯಲ್ಲಿ (ಮೊದಲ ಸಂಪುಟ) ಮಡಿಕೇರಿಯ ತಾಮ್ರಪಟ ಪ್ರಕಟಿಸಿದರು. ‘ಮೈಸೂರ ಇನ್‌ಸ್ಕ್ರಿಪ್ಕನ್” ಅನ್ನು ೧೮೭೦ ರಲ್ಲಿಯೂ ಎಪಿಗ್ರಾಫಿಯ ಕರ್ನಾಟಕದ ಮೊದಲ ಸಂಪುಟವನ್ನು ೧೮೮೬ ರಲ್ಲೂ ಪ್ರಕಟಿಸಿದ ಅವರು ೧೯೦೪ರ ವರೆಗೆ ಇನ್ನುಳಿದ ೧೧ ಸಂಪುಟಗಳನ್ನು ಪ್ರಕಟಿಸುತ್ತ ಬಂದರು. ಪ್ರತಿಯೊಂದು ಶಾಸನದ ರೋಮನ್ ಲಿಪಿಯ ಪಾಠ, ಇಂಗ್ಲಿಷ್ ಅನುವಾದ, ತರುವಾಯ ಶಾಸನದ ಕನ್ನಡಪಾಠ ಮತ್ತು ಪ್ರತಿಸಂಪುಟಕ್ಕೆ ವಿಸ್ತೃತ ಮುನ್ನುಡಿ-ಈ ಕ್ರಮದಲ್ಲಿ ರೈಸ ಅವರು ಒಟ್ಟು ಹನ್ನೆರಡು ಸಂಪುಟಗಳಲ್ಲಿ ೮೮೬೯ ಶಾಸನಗಳನ್ನು ಬೆಳಕಿಗೆ ತಂದಿರುವುದು ಬೇರೆಲ್ಲೂ ಕಾಣಲಾಗದ, ಕೇಳಲಾಗದ ದೊಡ್ಡ ಸಾಧನೆ. ಇದಲ್ಲದೆ ಮೈಸೂರು ಗೆಜೆಟಿಯರ್‌ನ ಎರಡು ಸಂಪುಟಗಳು ಮೈಸೂರ ಎಂಡ್ ಕೂರ್ಗ ಫ್ರಾಂ ಇನ್‌ಸ್ಕ್ರಪ್ಶನ್ಸ್ (೧೯೦೮), ಪಂಪಭಾರತಾದಿ ಹಳಗನ್ನಡ ಕೃತಿಗಳ ಪ್ರಕಟನೆ ಮೊದಲಾದ ಬಹುಮುಖವಾಗಿ ಕನ್ನಡದ ಕೆಲಸ ಮಾಡಿದರು. ಸಿದ್ದಾಪುರ, ಬ್ರಹ್ಮಗಿರಿ, ಜಟಿಂಗರಾಶ್ವರಗಳಲ್ಲಿ ಶೋಧಿಸಿದ ಅಶೋಕನ ಶಾಸನಗಳನ್ನು, ಮಳವಳ್ಳಿಯ ಪ್ರಾಕೃತ ಶಾಸನಗಳು, ತಾಳಗುಂದದ ಕಾಕುಸ್ಥವರ್ಮನ ಶಾಸನ, ಗಂಗರ ಹಲವಾರು ತಾಮ್ರ ಪಟಗಳು ಶ್ರವಣ ಬೆಳ್ಗೊಳದ ನಿಷಧಿ ಬರಹಗಳು ಮೊದಲಾಗಿ ಅಪೂರ್ವ ಶಾಸನಗಳನ್ನು ಶೋಧಿಸಿದ್ದು ಇವರ ಹಿರಿಮೆಯ ದ್ಯೋತಕ. ಗಂಗರ ಹಲವಾರು ಶಾಸನಗಳನ್ನು ಶೋಧಿಸಿ ಪ್ರಕಟಿಸಿದಾಗ ಅವುಗಳಲ್ಲಿ ಬಹಳಷ್ಟು ಕೃತಕವಾಗಿದ್ದುದನ್ನು ಫ್ಲೀಟರು ಎತ್ತಿ ತೋರಿಸಿದರು. ಈ ವಿಷಯಕ್ಕೆ ಇಬ್ಬರಿರಲ್ಲಿ ನಡೆದ ಚರ್ಚೆಗಳಿಂದ ಲಿಪಿಶಾಸ್ತ್ರ ಕುರಿತಾದ ಹಲವಾರು ಸೂಕ್ಷ್ಮಗಳು ವಿದ್ವತ್ಪ್ರಪಂಚಕ್ಕೆ ಪರಿಚಿತವಾದುದಲ್ಲದೆ ಗಂಗರ ಚರಿತ್ರೆಗೆ ಒಂದು ಗಟ್ಟಿ ಮುಟ್ಟಾದ ನೆಲೆ ಪ್ರಾಪ್ತವಾಯಿತು. ೧೯೦೬ರಲ್ಲಿ ರೈಸರು ನಿವೃತ್ತರಾಗುವಷ್ಟರಲ್ಲಿ ಎಪಿಗ್ರಾಫಿಯಾ ಕರ್ನಾಟಕದ ಎಲ್ಲ ಸಂಪುಟಗಳನ್ನು ಹೊರತಂದುದಲ್ಲದೆ, ಹಲವಾರು ಲೇಖನ, ಟೀಕೆ ಟಿಪ್ಪಣೆಗಳನ್ನು ಬರೆದು ಖ್ಯಾತನಾಮರಾದರು. ಜೇಮ್ಸ್ ಬರ್ಜಿಸ್ ಅವರಿಂದ ೧೮೭೨ರಲ್ಲಿ ಇಂಡಿಯನ್‌ ಎಂಟಿಕ್ವರಿ ಸಂಪುಟಗಳ ಪ್ರಕಟಣೆ ಪ್ರಾರಂಭಗೊಂಡುದರಿಂದ ಉತ್ತರ ಕರ್ನಾಟಕದ ಶಾಸನ ಪ್ರಕಟಣೆಗೆ ದೊಡ್ಡ ಅವಕಾಶ ಪ್ರಾಪ್ತವಾದಂತಾಯಿತು. ಫ್ಲೀಟ್ ಮೊದಲಾದ ಹಲವು ಜನ ಹಲವಾರು ಚಾರಿತ್ರಿಕ ಮಹತ್ವದ[1] ಶಾಸನಗಳನ್ನು ಪತ್ತೆ ಮಾಡಿ ಅದರಲ್ಲಿ ಪ್ರಕಟಿಸ ತೊಡಗಿದರು.

೧೯೦೬ರಲ್ಲಿ ರೈಸರ ಉತ್ತರಾಧಿಕಾರಿಯಾಗಿ ಆರ್. ನರಸಿಂಹಾಚಾರರು ಮೈಸೂರು ಪ್ರಾಕ್ತನ ಇಲಾಖೆಯನ್ನು ವಹಿಸಿಕೊಂಡರು. ಆಗಿನಿಂದಲೇ ವಾಷಿಕ ವರದಿಗಳನ್ನು ಪ್ರಕಟಿಸುವ ಕ್ರಮ ಜಾರಿಗೊಳಿಸಿದ್ದಲ್ಲದೆ ೧೯೦೮ ರಿಂದ ಅವುಗಳಲ್ಲಿ ಶಾಸನಗಳನ್ನು ಹೊರತರಲು ಉಪಕ್ರಮಿಸಿದರು. ೧೯೨೨ ರ ವರೆಗೆ ಒಟ್ಟು ೧೭ ವರದಿಗಳು ಎಪಿಗ್ರಾಫಿಯಾ ಕರ್ನಾಟಕದ ೧೪, ೧೫, ೧೬ ಮತ್ತು ೧೭ ನೆಯ ಸಂಪುಟಗಳು ಮತ್ತು ಶಾಸನ ಪದ ಸಂಗ್ರಹದ ಮೊದಲ ಭಾಗ (ಕೆ, ವರೆಗೆ) ಗಳನ್ನು ಹೊರತಂದರು. ಇತ್ತೀಚೆಗೆ ಅವರೇ ಸಿದ್ಧ ಪಡಿಸಿ ಇಟ್ಟಿದ್ದ ಪದಸಂಗ್ರಹದ ಎರಡನೆಯ ಭಾಗ ಕೂಡ ಕರ್ನಾಟಕದ ಪ್ರಾಕ್ತನ ವಿಭಾಗದಿಂದ ಪ್ರಕಟವಾಗಿದೆ. (೧೯೮೭). ಒಟ್ಟು ೫೦೦೦ ಶಾಸನಗಳು ಆಚಾರ್ಯರಿಂದ ಸಂಶೋಧಿತವಾಗಿ ಪ್ರಕಗೊಂಡಿವೆ. ಹಲವಾರು ಶಾಸನ ಪಾಠಗಳನ್ನು ಅವರು ಪರಿಷ್ಕೃಇಸಿದ್ದಾರೆ. ವಾರ್ಷಿಕ ವರದಿಗಳಲ್ಲಿ ಶಾಸನಗಳಷ್ಟೇ ಅಲ್ಲದೆ ಹಸ್ತಪ್ರತಿಗಳು, ನಾಣ್ಯಗಳು, ಚಿತ್ರಪಟಗಳು ಹೊಯ್ಸಳ ವಾಸ್ತುಶಿಲ್ಪ ಕುರಿತಾದ ವಿಫುಲ ವಿವಗಳು ಇತ್ಯಾದಿಯಾಗಿ ಹಲವಂದದ ಹೊಸ ವಿಷಯಗಳು ಬೆಳಕು ಕಂಡವು. ಹೊಯ್ಸಳ ವಾಸ್ತುಶಿಲ್ಪಕ್ಕೆ ಪ್ರತ್ಯೇಕ ಸ್ಥಾನ ದೊರಕಲು ನರಸಿಂಹಾಚಾರರ ಈ ವಿಸ್ತೃತ ವರದಿಗಳೇ ಕಾರಣ. ಶರಣರ ವಚನಗಳು, ನಾಗವರ್ಮನ ಭಾಷಾಭೂಷಣ ಕಾವ್ಯಾವಲೋಕನ History of Kannada Language, ಕರ್ನಾಟಕ ಕವಿ ಚರಿತೆಯ ಮೂರು ಸಂಪುಟಗಳು ಮೊದಲಾದವು ಆಚಾರ್ಯರ ಇನ್ನುಳಿದ ಪ್ರಖ್ಯಾತ ಕೃತಿಗಳು. ಇದರಿಂದಾಗಿ ಮೈಸೂರು ಸರ್ಕಾರದಿಂದ ಅವರಿಗೆ ಪ್ರಾಕ್ತನ ವಿಮರ್ಶೆ ವಿಚಕ್ಷಣ ಎಂಬ ಬಿರುದು ಮತ್ತು ಆಗಿನ ಭಾರತ ಸರ್ಕಾರದಿಂದ ಮಹಾ ಮಹೋಪಾಧ್ಯಾಯ ಪ್ರಶಸ್ತಿ ಲಭ್ಯವಾದವು. ಈ ಪ್ರಶಸ್ತಿ ಪಡೆದ ಕನ್ನಡಿಗರು ಅವರೊಬ್ಬರೇ.

ಆರ್. ನರಸಿಂಹಾಚಾರರ ತರುವಾಯ ಡಾ. ಎಂ. ಎಚ್. ಕೃಷ್ಣ ಅವರು ಈ ಕೆಲಸವನ್ನು ಸಮರ್ಥವಾಗಿ ಮುಂದುವರಿಸಿದರು. ೧೯೨೯ ರಿಂದ ೧೯೪೫ರ ವರೆಗೆ ಪ್ರತಿವರ್ಷ ವಾರ್ಷಿಕ ವರದಿಗಳನ್ನು ತುಂಬ ವ್ಯವಸ್ಥಿತವಾಗಿ ಪ್ರಕಟಿಸಿದ್ದಲ್ಲದೆ ಸು. ಒಂದು ಸಾವಿರದಷ್ಟು ಹೊಸ ಶಾಸನಗಳನ್ನು ಅವುಗಳಲ್ಲಿ ಬೆಳಕಿಗೆ ತಂದರು. ರಾಷ್ಟ್ರಕೂಟ ಅವಿಧೇಯನ ಪಂಡರಂಗವಳ್ಳಿಯ ಶಾಸನ, ಹಲ್ಮಿಡಿ ಶಾಸನ, ಮಯೂರ ವರ್ಮನ ಚಂದ್ರವಳ್ಳಿ ಶಾಸನ, ಚಂದ್ರವಳ್ಳಿಯ ಉತ್ಖನನ ಮೊದಲಾದುವು ಅವರ ಮುಖ್ಯ ಕೊಡುಗೆಗಳು. ಕೃಷ್ಣ ಅವರು ಹಲ್ಮಿಡಿ ಶಾಸನ ಶೋಧಿಸಿದ್ದು ಕನ್ನಡ ನಾಡಿನ ಚರಿತ್ರೆಯಲ್ಲಿ ಒಂದು ಅಪೂರ್ವ ಘಟನೆ.

ಇಂಡಿಯನ್ ಎಂಟಿಕ್ವರಿಯ ಮಾದರಿಯಲ್ಲಿಯೆ ಬರ್ಜಿಸ್ ಅವರಿಂದ ಎಪಿಗ್ರಾಫಿಯಾ ಇಂಡಿಕಾ ಪತ್ರಿಕೆ ೧೮೯೨ರಲ್ಲಿ ಪ್ರಾರಂಭವಾಯಿತು. ಇದರಲ್ಲಿ ಕೂಡ ಅಸಂಖ್ಯ ಕನ್ನಡ ಶಾಸನಗಳು ಅಚ್ಚು ಕಟ್ಟಿನಿಂದ ಪ್ರಕಟವಾಗುತ್ತ ಬಂದಿದ್ದು ಈಗಲೂ ಈ ಪ್ರಕಟಣೆ ಮುಂದುವರಿದಿದೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಈ ಪತ್ರಿಕೆಗಿದೆ. ಬೂಲ್ಹರರಿಂದ ಇದರ ಮೊದಲನೆಯ ಸಂಪುಟದಲ್ಲಿ ಹಿರೇಹಡಗಲಿಯ ಪಲ್ಲವ ಶಾಸನ ಪ್ರಕಟಗೊಂಡಿದೆ.

ಇ. ಹುಲ್ಷ ಅವರು ೧೮೯೦ ರಲ್ಲಿ ‘ದಕ್ಷಿಣ ಭಾರತದ ಶಾಸನಗಳು’ ಮಾಲೆಯ ಮೊದಲ ಸಂಪುಟವನ್ನು ಹೊರತಂದರು. ಈ ಮಾಲೆಯ ೯ನೆಯ ಸಂಪುಟದ ಎರಡು ಭಾಗಗಳು, ೧೧ನೆಯ ಸಂಪುಟದ ೨ ಭಾಗಗಳು, ೧೫, ೧೮ ಮತ್ತು ೨೦ನೆಯ ಸಂಪುಟಗಳು ಸಂಪೂರ್ಣ ಕನ್ನಡ ಶಾಸನಗಳಿಗೆ ಮೀಸಲಾಗಿವೆ. ಆದರೆ ಇವುಗಳ ಹೆಚ್ಚಿನ ಸಂಪುಟಗಳಲ್ಲಿ ಫ್ಲೀಟ್‌, ರೈಸರಂತಹ ಸಂಪಾದನಾ ಶಿಸ್ತು ಕಂಡುಬರುವುದಿಲ್ಲ.

ಆಂಧ್ರ ಪ್ರದೇಶ ಸರ್ಕಾರದ ಪ್ರಾಕ್ತನ ಮಾಲೆಯಲ್ಲಿ ಡಾ ಪಿ.ಬಿ. ದೇಸಾಯಿ ಮೊದಲಾದವರಿಂದ ಹೈದರಾಬಾದ ಕರ್ನಾಟಕ ಹಲವಾರು ಶಾಸನಗಳು ಪ್ರಕಟವಾಗಿವೆ. ಈ ಭಾಗದಲ್ಲಿ ಇನ್ನೂ ಅಸಂಖ್ಯ ಶಾಸನಗಳು ಉಳಿದು ಹೋಗಿವೆ. ಆಂಧ್ರ ಪ್ರದೇಶ, ತಮಿಳು ನಾಡು, ಮಹಾರಾಷ್ಟ್ರ ಮತ್ತು ಗೋವಾ ಪ್ರದೇಶಗಳಲ್ಲೂ ಕರ್ನಾಟಕದಕ್ಕೆ ಸಂಬಂಧಪಟ್ಟ ಶಾಸನಗಳು ಇನ್ನು ಪ್ರಕಟವಾಗಬೇಕಾಗಿದೆ. ಎನ್. ವೆಂಕಟರಮಣಯ್ಯನವರು (೧೯೬೭) ಕರೀಂನಗರ ಜಿಲ್ಲೆಯ ಕುರ್ಕಿಯಾಲದ ಗುಡ್ಡದಲ್ಲಿ ಕಂಡು ಹಿಡಿದ ಜಿನವಲ್ಲಭನ ಶಾಸನ ಒಂದು ಅಮೋಘ ಶೋಧ.

ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆ (ಇದು ತರುವಾಯ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿಸಲ್ಪಟ್ಟಿತು) ಕೂಡ ಶಾಸನ ಸಂಗ್ರಹ ಕಾರ್ಯ ಮಾಡಿದೆ. ಆಗೀಗ ಪ್ರಕಟಿಸಿದ ವರದಿಗಳು ಮತ್ತು ‘ಕರ್ನಾಟಕ ಶಾಸನಗಳು’ ಎಂಬ ಹೆಸರಿನ ಆರು ಸಂಪುಟಗಳಲ್ಲಿ ಆರ್. ಎಸ್. ಪಂಚಮುಖಿ, ಜಿ.ಎಸ್. ದೀಕ್ಷಿತ. ಪಿ.ಬಿ. ದೇಸಾಯಿ, ಬಿ.ಆರ್. ಗೋಪಾಲ, ಶ್ರೀನಿವಾಸ ರಿತ್ತಿ ಮೊದಲಾದ ವಿದ್ವಾಂಸರು ಪ್ರಕಟಿಸಿರುವ ಶಾಸನಗಳಿವೆ. ಅದೇ ರೀತಿ ಭಾರತ ಸರ್ಕಾರದ ಪುರಾತತ್ವ ಇಲಾಖೆಯು ಪ್ರಕಟಿಸುತ್ತ ಬಂದಿರುವ ವಾರ್ಷಿಕ ವರದಿಗಳಲ್ಲಿ ಅನೇಕ ಹೊಸ ಶಾಸನಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರ ೧೯೬೬-೬೭ನೆಯ ಸಾಲಿನ ವರದಿಯಲ್ಲಿ ಸನ್ನತಿಯ ಪ್ರಾಕೃತ ಶಾಸನಗಳು ಬೆಳಕಿಗೆ ಬಂದವು.

ಮೇಲೆ ತಿಳಿಸಿದ ಮಹನೀಯರಲ್ಲದೆ ಕರ್ನಾಟಕ ಶಾಸನಕ್ಷೇತ್ರದಲ್ಲಿ ಇನ್ನೂ ಅನೇಕರು ಕೆಲಸ ಮಾಡಿದ್ದಾರೆ. ಬಾರ್ನೆಟ್, ಡಿ.ಸಿ. ಸರ್ಕಾರ, ಜಿ.ಎಸ್. ಗಾಯಿ, ಪ್ರೊ. ಮಿರಾಶಿ, ಆರ್. ಎನ್. ಗುರವ, ಎಸ್. ಶೆಟ್ಟರ್, ಕೆ.ವಿ. ರಮೇಶ, ಎಂ.ಎಂ. ಕಲಬುರ್ಗಿ, ಎ.ವಿ. ನರಸಿಂಹ ಮೂರ್ತಿ ಮೊದಲಾದ ಶಾಸನ ತಜ್ಞರು ಮಹತ್ವದ ಹಲವಾರು ಶಾಸನಗಳನ್ನು ಬೆಳಕಿಗೆ ತಂದಿದ್ದಾರೆ.

ಇತ್ತೀಚೆ ಕರ್ನಾಟಕದಲ್ಲಿ ಮತ್ತೆ ಎಂಟು ಅಶೋಕನ ಶಾಸನಗಳನ್ನು ಕಂಡು ಹಿಡಿಯಲಾಗಿದೆ. ಡಾ ಎಸ್. ಶೆಟ್ಟರ ಮತ್ತು ಎಸ್. ರಾಜಶೇಖರ ನಿಟ್ಟೂರಿನಲ್ಲಿ (೧೯೭೭ ರಲ್ಲಿ) ಮತ್ತು ಎಸ್. ನಾಗರಾಜರಾವ ಹಾಗೂ ಶ್ರೀನಿವಾಸ ರಿತ್ತಿ ಅವರು ಉದೋಗೋಳಂ ನಲ್ಲಿ (೧೯೭೮) ಎರಡೆರಡು ಶಾಸನಗಳನ್ನು ಕಂಡು ಹಿಡಿದರು. ಇವೆಲ್ಲ ಶಾಸನಗಳು ಮಸ್ತಿ ಶಾಸನದಂತೆ ಅಶೋಕನ ಹೆಸರನ್ನು ನೇರವಾಗಿ ಹೇಳುತ್ತವೆ. ೧೯೮೯ ರಲ್ಲಿ ಹೈದರಾಬಾದ ಪ್ರಾಚ್ಯ ವಿಭಾಗದ ಪರವಾಗಿ ಆರ್. ವಿ. ಶಿವಶರ್ಮ, ಜೆ. ಎವರಪ್ರಸಾದರಾವ ಹಾಗೂ ಜಿ. ವಿ. ಎಸ್. ರಾವ ಅವರಿಂದ ಇನ್ನೂ ನಾಲ್ಕು ಅಶೋಕನ ಶಾಸನಗಳು ಸನ್ನತಿಯಲ್ಲಿ ಸಂಶೋಧಿಸಲ್ಪಟ್ಟವು.

ಮೈಸೂರು ವಿಶ್ವವಿದ್ಯಾಲಯದ ಪರವಾಗಿ ಹಳೆಯ ಮೈಸೂರು ಪ್ರದೇಶದ ಸಮಗ್ರ ಶಾಸನಗಳನ್ನು ಕ್ರಮಬದ್ಧ ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆ ೧೯೭೨ ರಲ್ಲಿ ಪ್ರಾರಂಭವಾಯಿತು. ಡಾ. ಹಾ. ಮಾ. ನಾಯ್ಕ ಅವರ ಅಧ್ಯಕ್ಷತೆ ಹಾಗೂ ಬಿ. ಆರ್. ಗೋಪಾಲ ಅವರ ಸಂಪಾದಕ್ಷದಲ್ಲಿ ಕೊಡಗು, ಮೈಸೂರು, ಮಂಡ್ಯ, ಜಿಲ್ಲೆ ಶಾಸನಗಳು ಮತ್ತು ಶ್ರವಣ ಬೆಳ್ಗೊಳ ಹೀಗೆ ಒಟ್ಟು ಒಂಬತ್ತು ಸಂಪುಟಗಳು ಈಗಾಗಲೇ ಪ್ರಕಟವಾಗಿದೆ. ಇನ್ನುಳಿದ ಆರು ಜಿಲ್ಲೆಗಳ ಪರಿಷ್ಕೃತ ಆವೃತ್ತಿಗಳು ಬೇಗ ಪ್ರಕಟವಾಗಬೇಕು.

ಶಾಸನಗಳನ್ನಾಧರಿಸಿ ರಾಜಕೀಯ ಚರಿತ್ರೆಯ ಅಧ್ಯಯನ ನಡೆದಿರುವಂತೆ ಭಾಷಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕುರಿತಾದ ಅಧ್ಯಯನಕ್ಕೂ ಈಗ ಹೆಚ್ಚು ಗಮನ ಕೊಡಬೇಕಾಗಿದೆ. ಭಾಷಿಕ ಅಧ್ಯಯನ ಕ್ಷೇತ್ರದಲ್ಲಿ ಎ.ಎನ್. ನರಸಿಂಹಯ್ಯನವರಿಂದ ೬-೭ನೆಯ ಶತಮಾನದ ಕನ್ನಡ ಶಾಸನಗಳ ಭಾಷೆ ಕುರಿತಂತೆ ಮತ್ತು ಜಿ.ಎಸ್. ಗಾಯಿಯವರಿಂದ ೮, ೯, ೧೦ನೆಯ ಶತಮಾನಗಳ ಭಾಷೆ ಕುರಿತಂತೆ ಅಧ್ಯಯನ ನಡೆದಿದೆ. ಪ್ರಸ್ತುತ ಲೇಖಕನಿಂದ ಕವಿರಾಜ ಮಾರ್ಗ ಪೂರ್ವದ ಸು. ೫೦೦ ಶಾಸನಗಳ ಪರಿಭಾಷೆ ಕುರಿತ ಅಧ್ಯಯನ ನಡೆದಿದ್ದು ೧೯೮೨ರಲ್ಲಿ ಪ್ರಬಂಧ ಪ್ರಕಟವಾಗಿದೆ. ಅದೇ ರೀತಿ ಮುಂದಿನ ಶತಮಾನದ ಶಾಸನಗಳನ್ನು ಕುರಿತು ಕೆ. ಕುಶಾಲಪ್ಪಗೌಡ ಮತ್ತು ಚೆ. ರಾಮಸ್ವಾಮಿಯವರೂ ಅಧ್ಯಯನ ಕೈಕೊಂಡಿದ್ದಾರೆ. ಇನ್ನೂ ಈ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸ ತುಂಬಾ ಇದೆ. ಸ್ಥಳನಾಮ-ವ್ಯಕ್ತಿನಾಮಗಳ ಅಧ್ಯಯನಕ್ಕೆ ಶಾಸನಗಳಿಂದ ಅಪಾರವಾದ ಪ್ರಯೋಜನ ಪಡೆಯಬಹುದಾಗಿದೆ.

ಕನ್ನಡ ಶಾಸನಗಳ ಸಾಹಿತ್ಯಿಕ ಮೌಲ್ಯ ಕುರಿತ ಅಧ್ಯಯನದಲ್ಲಿ ತೀರ ಕಡಿಮೆ ಕೆಲಸವಾಗಿದೆ. ಆರ್. ನರಸಿಂಹಾಚಾರರಿಂದ ೧೯೨೩ ರಲ್ಲಿ ೧೮೬೫ ಶಾಸನ ಪದ್ಯಗಳ ಸಂಕಲನವೊಂದು ಸಿದ್ಧಗೊಳಿಸಲ್ಪಟ್ಟಿದೆ. ಎ.ಎಂ. ಅಣ್ಣಿಗೇರಿ ಮತ್ತು ಮೇವುಂಡಿ ಮಲ್ಲಾರಿಯವರು ಸಾಹಿತ್ಯಿಕ ಗುಣವುಳ್ಳ ೧೧೪ ಶಾಸನಗಳ ಸಂಕಲನವೊಂದನ್ನು ೧೯೬೩ ರಲ್ಲಿ ಪ್ರಕಟಿಸಿದ್ದಾರೆ. ಬೆಂಗಳೂರು, ಮಂಗಳೂರು, ಮತ್ತು (ಧಾರವಾಡ) ಕರ್ನಾಟಕ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗಾಗಿ ಇಂಥ ಒಂದೊಂದು ಸಂಕಲನಗಳನ್ನು ಹೊರತಂದಿವೆ. ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯಗಳು ಪ್ರಕಟಿಸಿರುವ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಗಳಲ್ಲಿ ಶಾಸನಸಾಹಿತ್ಯ ಕುರಿತಾಗಿಯೂ ಚರ್ಚೆಗಳು ಬಂದಿವೆ. ಡಾ. ಎಂ.ಎಂ. ಕಲಬುರ್ಗಿಯವರು ಮಾರ್ಗ ಸಂಪುಟ ಮತ್ತು ‘ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’ ಎಂಬ ತಮ್ಮ ಪ್ರಬಂಧದಲ್ಲಿ ಶಾಸನ ಸಾಹಿತ್ಯ ಕುರಿತಾದ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ಈ ಕ್ಷೇತ್ರದಲ್ಲಿಯೂ ಇನ್ನೂ ಅಪಾರ ಕೆಲಸವಾಗಬೇಕಾದ ಅಗತ್ಯವಿದೆ. ೧೯೯೪ ರಲ್ಲಿ ಪ್ರಸ್ತುತ ಲೇಖನಿಂದ ರಚಿತವಾದ ‘ಪೂರ್ವದ ಹಳಗನ್ನಡ ಶಾಸನಗಳ ಸಾಹಿತ್ಯಿಕ ಅಧ್ಯಯನ’ ಎಂಬ ಪ್ರತ್ಯೇಕ ಸಾಹಿತ್ಯ ಅಧ್ಯಯನಕ್ಕೇ ಮೀಸಲಾದ ಕೃತಿಯೊಂದು ಪ್ರಕಟಿಸಲ್ಪಟ್ಟಿದೆ.

ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ಈಗ ಹಲವು ಕೃತಿಗಳು ಕನ್ನಡದಲ್ಲಿ ರಚನೆಗೊಳ್ಳುತ್ತಿವೆ. ಡಾ. ಎಂ. ಚಿದಾನಂದ ಮೂರ್ತಿಯವರ ‘ಪ್ರಾಚೀನ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ (೧೯೬೬/೧೯೭೯) ಈ ಕ್ಷೇತ್ರದ ಆಚಾರ್ಯಕೃತಿ. ಇದರಂತೆ ಪ್ರಾಚೀನ ಕರ್ನಾಟಕದ ಶಿಕ್ಷಣ ಕ್ರಮ (ಜಿ.ಎಸ್. ದೀಕ್ಷಿತ ೧೯೭೦) ಶಾಸನಗಳಲ್ಲಿ ಶಿವಶರಣರು (೧೯೭೦) ಮಹಾರಾಷ್ಟ್ರದ ಕನ್ನಡ ಶಾಸನಗಳು (೧೯೮೯) ಸಮಾಧಿ ಬಲಿದಾನ ವೀರಮರಣಗಳು (೧೯೮೦ ಎಂ.ಎಂ. ಕಲಬುರ್ಗಿ) ಕರ್ನಾಟಕದ ವೀರ ಗಲ್ಲುಗಳು (೧೯೮೨, ಆರ್. ಶೇಷಶಾಸ್ತ್ರಿ) ಶಾಸನಗಳಲ್ಲಿ ಕರ್ನಾಟಕದ ವರ್ತಕರು (೧೯೮೬ ಬಿ.ಆರ್. ಹಿರೇಮಠ) ಆರನೆಯ ವಿಕ್ರಮಾದಿತ್ಯನ ಶಾಸನಗಳು (೧೯೮೭ ಜೆ. ಎಂ. ನಾಗಯ್ಯ) ತರ್ದವಾಡಿನಾಡು (೧೯೯೦) ಎಸ್. ಕೆ. ಕೊಪ್ಪ ಶ್ರವಣಬೆಳ್ಗೊಳ ರಾಜಕೀಯ ಸಾಹಿತ್ಯಿಕ ಸಾಂಸ್ಕೃತಿಕ ಮಹತ್ವ (೧೯೯೧) ಮತ್ತು ‘ಬಂಕಾಪುರ ಶೋಧ’ (೧೯೯೦, ಚೆನ್ನಕ್ಕ ಪಾವಟೆ) ಕರ್ನಾಟಕದಲ್ಲಿ ಸತೀಪದ್ಧತಿ (೧೯೯೧ ಬಿ.ಎಸ್. ಶೇಠೆ) ನಾಗರಖಂಡ ೭೦ (೧೯೯೫ ಬಿ.ಬಿ. ಪಾಟೀಲ) ಮೊದಲಾಗಿ ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನ ಕೃತಿಗಳು ರಚನೆಗೊಂಡಿವೆ. ಸೇವುಣ, ಹೊಯ್ಸಳ, ನೊಳಂಬ, ಕದಂಬ ಮೊದಲಾದ ರಾಜ ಮನೆತನಗಳ ಇತಿಹಾಸ ಕುರಿತಂತೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಕೃತಿಗಳು ಬಂದಿವೆ. ಇತ್ತೀಚೆಗೆ ಪ್ರೊ. ಬಿ. ಶೇಕ ಅಲಿಯವರ ಸಂಪಾದಕತ್ವದಡಿ ಏಳು ಸಂಪುಟಗಳಲ್ಲಿ ‘ಕರ್ನಾಟಕದ ಚರಿತ್ರೆ’ಯನ್ನು ಹಂಪಿ ವಿಶ್ವವಿದ್ಯಾಲಯ ಹೊರತಂದಿದೆ. ಈ ಸಂಪುಟಗಳನ್ನು ಈವರೆಗೆ ಪ್ರಕಟವಾಗಿರುವ ಬಹುತೇಕ ಎಲ್ಲ ಶಾಸನ ಸಾಮಗ್ರಿಯನ್ನು ಬಳಸಿಕೊಳ್ಳಲಾಗಿದೆ. ಆದರೆ ಕನ್ನಡ ನಾಡಿನ ಹಲವು ಸಾಮಂತ ಮನೆತನಗಳ ಚರಿತ್ರೆ ರಚಿಸುವುದು ಇನ್ನೂ ಆಗ ಬೇಕಾದ ಕೆಲಸ. ದಿ. ದಿನಕರ ದೇಸಾಯಿಯವರ Mahamandaleshwaras Under Chalukyas of Kalyana ಮತ್ತು ಹಂಪ ನಾಗರಾಜಯ್ಯನವರ ‘ಸಾಂತರರು ಒಂದು ಅಧ್ಯಯನ ಈ ಕ್ಷೇತ್ರದ ಗಮನಾರ್ಹ ಕೃತಿಗಳು. ಆರ್. ಎನ್. ಗುರವ ಅವರ ಕದಂಬಾಸ್ ಆಫ್ ಗೋವಾ ಅಪ್ರಕಟಿತವಾಗೇ ಉಳಿಯಿತು. ಕರ್ನಾಟಕ ಇತಿಹಾಸದ ಸಮಗ್ರ ರಚನೆಗೆ ಲಭ್ಯವಾಗ ಬಹುದಾದ ಶಾಸನ ಸಂಪತ್ತು ಎಷ್ಟಿದೆ ಎಂದು ತಿಳಿಯಲು ಪರಿವೀಕ್ಷಣೆಯಕಾರ್ಯ ಇನ್ನೂ ವ್ಯಾಪಕವಾಗಿ ನಡೆಯ ಬೇಕೆಂದು ಬೇರೆ ಹೇಳಬೇಕಿಲ್ಲ.

ಭಾರತದಲ್ಲಿ ಮೊಟ್ಟಮೊದಲ ಶಾಸನಗಳನ್ನು ಬರೆಯಿಸುವ ಕ್ರಮ ಪ್ರಾರಂಭಿಸಿದವರು ಮೌರ್ಯರು. ಕ್ರಿ.ಶ. ಪೂ. ೪-೩ನೆಯ ಶತಮಾನಗಳ ಅವರ ಆಡಳಿತ ಕಾಲಾವಧಿಯಲ್ಲಿ ವ್ಯವಸ್ಥಿತವಾಗಿ ಶಾಸನಗಳನ್ನು ಬರೆಯಿಸುವ ಕ್ರಮ ಜಾರಿಗೆ ಬಂತು. ಈ ಮನೆತನದ ಸಮ್ರಾಟ ಅಶೋಕ ಬರೆಯಿಸಿದ ಶಾಸನಗಳು ಭಾರತೀಯ ಚರಿತ್ರೆಯಲ್ಲಿ ಹೇಗೋ ಹಾಗೆ ಕರ್ನಾಟಕದ ಚರಿತ್ರೆಯಲ್ಲಿ ಕೂಡ ಅದ್ವಿತೀಯ ಸ್ಥಾನ ಪಡೆದಿವೆ. ಕರ್ನಾಟಕದ ಚರಿತ್ರೆ ಪ್ರಾರಂಭಗೊಳ್ಳುವುದೇ ಅಶೋಕನ ಶಾಸನಗಳಿಂದ.

ಡಾ. ಜೆ. ಎಫ್. ಫ್ಲೀಟ, ಪಿಪ್ರಾವಾ ಭಾಂಡ ಶಾಸನವೇ ಭಾರತದ ಅತ್ಯಂತ ಪ್ರಾಚೀನ ಶಾಸನವೆಂದು ಹೇಳುತ್ತಾರೆ. ಆದರೆ ಅದರ ಕಾಲದ ಬಗ್ಗೆ ಖಚಿತತೆಯಿಲ್ಲ. ಜೊತೆಗೆ ಆಗೊಂದು ಶಾಸನ ಪರಂಪರೆ ಇತ್ತೆಂದು ಹೇಳಲು ಈ ಶಾಸನ ಹೆಚ್ಚಿನ ಸಹಾಯ ನೀಡುವುದಿಲ್ಲ. ಕರ್ನಾಟಕದ ಮಟ್ಟಿಗಂತೂ ಮೌರ್ಯ ಪೂರ್ವ ಯುಗ ಅಂಧಕಾರ ಮಯವಾಗಿ ಉಳಿದಿದೆ.

ಮೌರ್ಯರ ತರುವಾಯ ರಾಜ್ಯಾಧಿಕಾರ ಪಡೆದ ಅರಸು ಮನೆತನಗಳು ಅವರಂತೆಯೇ ಆಗೀಗ ಶಾಸನಗಳನ್ನು ಬರೆಯಿಸುವ ಕ್ರಮವನ್ನು ಮುಂದುವರೆಸಿ ಕೊಂಡುಬಂದವು. ಕರ್ನಾಟಕದ ಮಟ್ಟಿಗೆ ಹೇಳಬೇಕೆಂದರೆ ಮೌರ್ಯರ ತರುವಾಯ ಸಾತವಾಹನರದು ಈ ಪರಂಪರೆಯನ್ನು ರೂಢ ಮೂಲಗೊಳಿಸಿದ ದೊಡ್ಡ ರಾಜಮನೆತನ, ಮೌರ್ಯರಂತೆ ಇವರೂ ತಮ್ಮ ಶಾಸನಗಳನ್ನು ಉತ್ತರ ಕರ್ನಾಟಕದ ಸನ್ನತಿ, ಮ್ಯಾಕದೋನಿ, ಬನವಾಸಿ ಮೊದಲಾದೆಡೆಗಳಲ್ಲಿ ಹಾಕಿಸಿದ್ದು ಕಂಡುಬರುತ್ತದೆ.

ಆದರೆ ಮೌರ್ಯ ಸಮ್ರಾಟ ಅಶೋಕನ ಶಾಸನಗಳಿಗೂ ಈ ಸಾತವಾಹನರ ಶಾಸನಗಳಿಗೂ ಬಹಳಷ್ಟು ವ್ಯತ್ಯಾಸಗಳಿರುವುದು ಗಮನಾರ್ಹವಾದ ಸಂಗತಿ. ಈ ವ್ಯತ್ಯಾಸಗಳನ್ನು ಕುರಿತು ತರುವಾಯ ನೋಡೋಣ. ಈಗ ಶಾಸನಗಳ ಸ್ವರೂಪಕ್ಕೆ ಸಂಬಂಧಪಟ್ಟ ಕೆಲವೊಂದು ವಿವರಗಳನ್ನು ಮೊದಲು ಪರಿಶೀಲಿಸಬಹುದು.

‘ಶಾಸನ’ ಎಂಬ ಶಬ್ದಕ್ಕೆ ನಾನಾರ್ಥಗಳಿರುವವಾದಾರೂ ಈ ದಾಖಲೆಗಳ ಸಂದರ್ಭದಲ್ಲಿ ಅದಕ್ಕೆ ‘ರಾಜಾಜ್ಞೆ’ ಎಂಬ ವಿಶಿಷ್ಟಾರ್ಥ ಅನ್ವಯವಾಗುತ್ತದೆ. ಇವನ್ನು ಬರೆಯಿಸಿದವರು ಕೂಡ ಆಗೀಗ ಇವನ್ನು ‘ಶಾಸನ’ ಎಂದೇ ಹೆಸರಿಸಿದ್ದಾರೆ. ಇದಲ್ಲದೆ ಲಿಪಿ, ಧಮ್ಮಲಿಪಿ, ಲೇಖ, ಶೀಲಾಲೇಖ ಕಲ್ಬರಹ, ತಾಮ್ರಪಟ್ಟಿಕಾ, ತಾಮ್ರಪಟ, ತಾಮ್ರಶಾಸನ ಇತ್ಯಾದಿ ನಾಮಾಂತರಗಳೂ ಶಾಸನಗಳಿಗೆ ಉಂಟು.

ನಮ್ಮ ದೇಶದಲ್ಲಿ ಶಾಸನಗಳನ್ನು ಬರೆಯಿಸಲು ಸಾಮಾನ್ಯವಾಗಿ ಶಿಲೆಯನ್ನು ಬಳಸುವುದುಂಟು. ಶಿಲೆ ಎಂದರೆ ನೈಸರ್ಗಿಕವಾದ ಬಂಡೆಗಲ್ಲಾಗಿರಬಹುದು. ಅಥವಾ ಪ್ರತ್ಯೇಕವಾಗಿ ಕಟೆದು ನುಣುಪುಗೊಳಿಸಿದ ಫಲಕ, ಕಂಬ, ದೇವಾಲಯದ ಗೋಡೆ, ತೊಲೆ ಮೊದಲಾದ ಭಾಗಗಳಾಗಿರಲೂಬಹುದು. ಅಶೋಕನ ಬಹುತೇಕ ಶಾಸನಗಳು, -ಒಂದೆರಡು ಅಪವಾದಗಳು ಹೊರತು,- ನೈಸರ್ಗಿಕ ಬಂಡೆಗಳ ಮೇಲೆ ಕೆತ್ತಲ್ಪಟ್ಟಿವೆ. ೧೯೮೯ ರಲ್ಲಿ ಪತ್ತೆಯಾದ ಸನ್ನತಿಯ ಅವನ ನಾಲ್ಕು ಶಾಸನಗಳು ಶಿಲಾಫಲಕಗಳ ಮೇಲೆ ಬರೆಯಲ್ಪಟ್ಟಿವೆ. ಈ ಕ್ರಮ ಮುಂದಿನ ಹಲವಾರು ಶತಮಾನಗಳ ವರೆಗೆ ಕರ್ನಾಟಕದಲ್ಲಿ ನಡೆದುಬಂದಿದೆ. ಶ್ರವಣಬೆಳ್ಗೊಳದಲ್ಲಿನ ಪ್ರಾಚೀನ ನಿಷಧಿ ಶಾಸನಗಳು ಬಹುತೇಕ ನಿಸರ್ಗಸಿದ್ಧ ಬಂಡೆಗಲ್ಲುಗಳ ಮೇಲೆ ಕೆತ್ತಲ್ಪಟ್ಟಿವೆ. ಪಂಪನ ತಮ್ಮ ಜಿನವಲ್ಲಭ ಆಂಧ್ರಪ್ರದೇಶದ ಕುರ್ಕಿಯಾಲದ ಗುಡ್ಡದಲ್ಲಿ ಕೆತ್ತಿಸಿರುವ ಬೃಹತ್ಶಾಸನ ದೊಡ್ಡಬಂಡೆಗಲ್ಲಿನ ಮೇಲಿದೆ.

ಇದರಂತೆ ತಾಮ್ರ ಪಟಗಳ ಮೇಲೆ ಬರೆದ ಬಹಳಷ್ಟು ಶಾಸನಗಳು ಇಂದು ಉಪಲಬ್ಧವಾಗಿವೆ. ಹಿರೇಹಡಗಲಿಯ ಪಲ್ಲವ ಶಾಸನ ಇವುಗಳ ಆದಿ ಮಾದರಿ. ತರುವಾಯದ ಸರಗೂರ ಶಾಸನ ಸಂಸ್ಕೃತ-ಕನ್ನಡ ಮಿಶ್ರಭಾಷೆಯಲ್ಲಿದ್ದರೆ ಕ್ರಿ. ಶ. ೮೦೪ರ (ಆಳಂಪುರ) ಬ್ರಿಟಿಶ್ ಮ್ಯುಜಿಯಂ ಶಾಸನ ಶುದ್ಧಾಂಗ ಕನ್ನಡದಲ್ಲಿದೆ. ತಾಮ್ರ ಪಟಗಳ ಪೈಕಿ ಕೃತಕ ಶಾಸನಗಳನ್ನು ಬಿಟ್ಟು ಇನ್ನುಳಿದವುಗಳಿಂದ ಲಭ್ಯವಾಗುವ ಮಾಹಿತಿ ತುಂಬ ಬೆಲೆಯುಳ್ಳದು.

ತಾಮ್ರದಂತೆ ಬೆಳ್ಳಿ, ಕಂಚು ಮೊದಲಾದ ಲೋಹಗಳ ಮೇಲೆ ಕೂಡ ಶಾಸನಗಳನ್ನು ಕೆತ್ತಿದ್ದು ಅಲ್ಲಲ್ಲಿ ಕಂಡು ಬರುತ್ತದೆ. ಕ್ವಚಿತ್ತಾಗಿ ಕಟ್ಟಿಗೆಯ ಮೇಲೆ ಕೊರೆದ ಶಾಸನಗಳೂ ಉಂಟು. ಹುಬ್ಬಳ್ಳಿ ಸಮೀಪದ ಸಿರಗುಪ್ಪಿಯಲ್ಲಿ ಹನುಮಂತ ದೇವರ ಗುಡಿಯ ಕಟ್ಟಿಗೆ ತೊಲೆಯ ಮೇಲೆ ವಿಜಯನಗರದ ಕೃಷ್ಣದೇವರಾಯನ ಕಾಲದ ಶಾಸನವೊಂದನ್ನು ಬರೆಯಲಾಗಿದೆ. ಇದರಂತೆ ಸುಟ್ಟ ಮಣ್ಣಿನ ಪಾತ್ರಗಳ ಮೇಲೆ ತಾಮ್ರ, ಕಂಚು, ಮೊದಲಾದ ಧಾತುಗಳಿಂದ ನಿರ್ಮಿಸಿದ ಪಾತ್ರಗಳ ಮೇಲೆ ದೇವತಾಮೂರ್ತಿಗಳ ಪಾದಪೀಠ, ಹಿಂಭಾಗ, ಮೂರ್ತಿಗಳ ಕೈಯಲ್ಲಿರುವ ಕನ್ನಡಿ ಮೊದಲಾದ ಸಾಧನ ಸಲಕರಣೆಗಳ ಮೇಲೆ ಇತ್ಯಾದಿಯಾಗಿ ಹಲವು ರೀತಿಯಲ್ಲಿ ಬರೆದ ಶಾನಗಳು ಕರ್ನಾಟಕದಲ್ಲಿ ಕಂಡುಬಂದಿವೆ. ಚಿತ್ರದುರ್ಗದಲ್ಲಿ ಬಣ್ಣದಲ್ಲಿ ಬರೆದ ಒಂದು ಶಾಸನವೂ ಪತ್ತೆಯಾಗಿದೆ.

ಹೀಗೆ ಪತ್ತೆಯಾಗಿರುವ ಶಾಸನಗಳನ್ನು ಓದಿ ಅವುಗಳ ಉತ್ತಮ ಪಾಠ ಸಿದ್ಧಪಡಿಸುವುದು ಅಷ್ಟೇನೂ ಸಲಭದ ಕೆಲಸವಲ್ಲ. ಇದಕ್ಕೆ ಭಾಷೆ ಛಂದಸ್ಸು-ಲಿಪಿ ಕುರಿತಾದ ಅಗಾಧ ಜ್ಞಾನ ಬೇಕು. ಅಪಾರವಾದ ತಾಳ್ಮೆ ಮತ್ತು ಶ್ರಮ ಸಾಧ್ಯವಾದ ಈ ಕೆಲಸಕ್ಕೆ ಸಂಶೋಧಕನಿಗೆ ಪ್ರತಿಭಾಬಲ ಇರಬೇಕು. ಊರೂರು ಅಲೆಯುವುದರ ಜತೆಗೆ ಬಿಸಿಲು ಮಳೆಯನ್ನದೆ ಗುಡ್ಡ, ಬೆಟ್ಟ, ಹಳ್ಳಿ, ಕೊಂಪೆ, ಗಿಡಗಳ ಪೊಟರೆ, ಕಾಡು ಮಳೆ, ನದಿತೀರ, ಕೆರೆ ಮೊದಲಾದ ಜಲಾಶಯ, ಹೊಲಸು, ಕೆಸರು ಈ ಯಾವುದನ್ನೂ ಲೆಕ್ಕಿಸದೆ ಶಾಸನಗಳಿಗಾಗಿ ಶೋಧ ಕಾರ್ಯ ಕೈಕೊಳ್ಳಬೇಕಾಗುತ್ತದೆ. ಶಾಸನ ಸಂಶೋಧಕನಿಗೆ ಪರಂಪರಾಗತ ಸಂಸ್ಕೃತಿಯ ಮೂಲಭೂತ ಪ್ರೀತಿ ಇದ್ದರೆ ಮಾತ್ರ ಇದೆಲ್ಲ ಸಾಧ್ಯ.

ಶಾಸನ ಪತ್ತೆಯಾದ ಮೇಲೆ ಅದರ ಪಡಿಯಚ್ಚು ತೆಗೆದುಕೊಳ್ಳುವುದು ಮುಖ್ಯವಾದ ಕಾರ್ಯ. ನಮ್ಮ ಬಹಳಷ್ಟು ಶಾಸನಗಳು ಶತಮಾನಗಳಿಂದ ಜನಸಾಮಾನ್ಯರ ಅವಜ್ಞೆಗೆ ಗುರಿಯಾಗಿ ಹಾಳಾಗಿರುವುದೇ ಹೆಚ್ಚು ಸುಲಭವಾಗಿ ಕೀಳಬಹುದಾದಿ ಬಹುತೇಕ ಶಾಸನ ಶಿಲೆಗಳನ್ನು ವೈಯಕ್ತಿಕ ಮನೆ, ಕಟ್ಟಡ ಇತ್ಯಾದಿಗಳಿಗೆ ಸಂಸ್ಕೃತಿ ಹೀನರು ಉಪಯೋಗಿಸಿಕೊಂಡಿರುವುದು ಎಲ್ಲೆಡೆ ಕಂಡು ಬರುತ್ತದೆ. ನಿಸರ್ಗ ಕೂಡ ತನ್ನ ವಕ್ರದೃಷ್ಟಿ ಬೀರಿ ಇವುಗಳನ್ನು ಪೂರ್ಣ ಅಥವಾ ಭಾಗಶಃ ನಾಶಪಡಿಸಿರುವುದುಂಟು. ಇದರಿಂದಾಗಿ ಅಚ್ಚು ಕಟ್ಟಾಗಿ ಪಡಿಯಚ್ಚು ತೆಗೆಯಬಹುದಾದ ಶಾಸನಗಳು ದೊರೆಯುವುದು ನೂರಕ್ಕೆ ಹತ್ತರಷ್ಟು ಮಾತ್ರ. ಉಳಿದ ತೊಂಬತ್ತು ಭಾಗದ ಶಾಸನಗಳ ಪಡಿಯಚ್ಚು ತೆಗೆದು ಅವುಗಳ ಉಪಯುಕ್ತ ಪಾಠ ಸಿದ್ಧಪಡಿಸುವುದೆಂದರೆ ಸಂಶೋಧಕನ ಸಂಯಮದ ಪರೀಕ್ಷೆಯಾದಂತೆಯೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಶಾಸನ ವಿಷಯಕ್ಕೆ ಹುಚ್ಚು ತಲೆಗೇರಿದ್ದರೆ ಮಾತ್ರ ಇದೆಲ್ಲ ಸಾಧ್ಯ.

ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟ ನಿಸರ್ಗ ಪ್ರಕೋಪಾದಿ ಕಾರಣಗಳಿಂದ ಹಾಳಾಗಿರುವ ಶಾಸನಗಳ ಶುದ್ಧ ಪಾಠ ಸಿದ್ಧಗೊಳಿಸುವಲ್ಲಿ ಸಂಶೋಧಕ ಎದುರಿಸಬೇಕಾದ ಸಮಸ್ಯೆಗಳು ಇನ್ನೂ ಇವೆ. ಅನೇಕ ಕಡೆ ಶಾಸನ ಭಾಗ ಸವೆದುದು ಸಹಜವಾಗಿದ್ದರೆ ಇನ್ನು ಕೆಲವೆಡೆ ಉದ್ದೇಶ ಪೂರ್ವಕವಾಗಿ ಪಾಠಗಳನ್ನು ಹಾಳು ಮಾಡಿರುವ ಉದಾಹರಣೆಗಳೂ ಉಂಟು. ಅರಸೀಕೆರೆಯಲ್ಲಿ ದೊರೆತ ಯಾಪನೀಯ ಜೈನ ಶಾಸನದಲ್ಲಿ ‘ಯಾಪನೀಯ’ ಎಂಬ ಶಬ್ದ ಪ್ರಯೋಗ ಎಲ್ಲೆಲ್ಲಿ ಬಂದಿದೆಯೊ ಅಲ್ಲಲ್ಲಿ ಅದನ್ನು ಒರೆಸಿ ಹಾಕುವ ಪ್ರಯತ್ನ ಮಾಡಿದ್ದು ಕಂಡು ಬರುತ್ತದೆ. ದಾನಿಯ ಅಥವಾ ಪ್ರತಿಗೃಹಿಯು ಹೆಸರುಗಳನ್ನು ಮೇಲೆ ತಿಳಿಸಿದಂತೆ ಉದ್ದೇಶ ಪೂರ್ವಕ ಹಾಳುಮಾಡಿರುವ ಉದಾಹರಣೆಗಳು ಅಪಾರ ಸಂಖ್ಯೆಯಲ್ಲಿವೆ. ಶಾಸನದಿಂದಾಗುವ ಪ್ರಯೋಜನವೇ ಮಿತವಾಗಿ ಬಡುತ್ತದೆ. ಶಾಸನಾಭ್ಯಾಸಿ ಮೇಲಿನ ಸಂಗತಿಗಳನ್ನೆಲ್ಲ ಸೂಕ್ಷ್ಮವಾಗಿ ಅರಿತವನಾಗಿರಬೇಕು. ಜತೆಗೆ ಶಾಸನವಿರುವ ಸೂಚನೆಯಿತ್ತವರಿಂದ ಮೊದಲು ಮಾಡಿ ಅದರ ಉತ್ತಮ ಪಾಠ ಸಿದ್ಧತೆ ಮತ್ತು ಸಂಶೋಧನಾತ್ಮಕ ಅಂಶಗಳನ್ನು ಪ್ರಕಟಿಸುವವರೆಗೆ ಸಹಾಯ ಸಲ್ಲಿಸಿದವರ ಉಪಕೃತಿಯನ್ನು ಉಚಿತ ರೀತಿಯಲ್ಲಿ ಸ್ಮರಿಸಬೇಕಾಗುತ್ತದೆ.

ಸರಿ ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳಷ್ಟು ದೀರ್ಘ ಪರಂಪರೆ ನಮ್ಮ ಶಾಸನಗಳಿಗಿರುವುದರಿಂದ ಅವುಗಳಲ್ಲಿ ಅಡಗಿರಬಹುದಾದ ಮಾಹಿತಿ ಊಹಾತೀತವಾಗಿರುವುದು ಸ್ವಾಭಾವಿಕ. ಆದ್ದರಿಂದ ಶಾಸನ ಸಂಶೋಧಕನಾದವನು ಮೈಯೆಲ್ಲ ಕಣ್ಣಾಗಿರಬೇಕು. ನಮ್ಮ ಶಾಸನಗಳ ಲಿಪಿಯೇ ಒಂದು ದೊಡ್ಡ ಸವಾಲಾಗಿದೆ. ನೂರಾರು ಸಂಖ್ಯೆಯ ಪ್ರತಿಭಾಶಾಲಿಗಳಾದ ಪ್ರಾಕ್ತನ ತಜ್ಞರು ಸಮಸ್ಯೆಯನ್ನು ಅಪಾರ ಶ್ರಮವಹಿಸಿ ಬಗೆಹರಿಸಿದ್ದಾರೆ. ಕರ್ನಾಟಕದ ಶಾಸನಗಳ ಮಟ್ಟಿದೆ ಹೇಳಬೇಕೆಂದರೆ, ಬೇಡನ್, ಪ್ರಿನ್ಸೆಪ್ ಜೇಮ್ಸ್ ಬರ್ಗೆಸ್, ಬೂಲ್ಹರ್, ಫ್ಲೀಟ್, ರೈಸ್, ಹುಲ್ಷ ಮೊದಲಾದ ಮಹನೀಯರು ಶ್ರಮದ ಜತೆಗೆ ತಮ್ಮ ಅಪೂರ್ವ ಪ್ರತಿಭಾ ಬಲದಿಂದ ಅವುಗಳ ಓದನ್ನು ಸುಳಭಗೊಳಿಸಿದ್ದಾರೆ. ನಮ್ಮ ಲಿಪಿ ಮೂಲ ಬ್ರಾಹ್ಮಿಯಿಂದ ೧೯ನೆಯ ಶತಮಾನದವರೆಗೆ ಪಡೆದಿರುವ ಬದಲಾವಣೆಗಳನ್ನೆಲ್ಲ- ಅವುಗಳ ಒತ್ತು, ಕೊಂಬು, ಪಕ್ಕ, ತಲೆಕಟ್ಟು ಮೊದಲುಗೊಂಡು ಅಂಗಪ್ರತ್ಯಂಗಗಳನ್ನೆಲ್ಲ-ಪರಾಮರ್ಶಿಸಿ ಪ್ರತಿ ಅಕ್ಷರದ ಸ್ವರೂಪವನ್ನು ಉಚಿತವಾಗಿ ವಿವರಿಸಿದ್ದಾರೆ. ಇಂದು ದುಂಡನೆ ಮುದ್ದಾಗಿರುವ ಕ ಅಶೋಕನ ಶಾಸನಗಳಲ್ಲಿ ಕ್ರಿಶ್ಚಿಯನ್ನರ ಕ್ರಾಸಿನಂತಿರುವುದು. ಕರಾರ ಇಳಿಬಿದ್ದ ಹುಳದಂತಿದ್ದು, ಬಕಾರ ಚೌಕು ಪೆಟ್ಟಿಗೆಯಂತಿರುವುದು, ಇಕಾರ ಕೇವಲ ಮೂರು ಚಿಕ್ಕೆಯಾಗಿದ್ದುದು ಮೊದಲಾದ ಅಂಶಗಳು ಸ್ವಾರಸ್ಯ ಪೂರ್ಣವಾಗಿವೆ. ಸರಿಸುಮಾರು ಪ್ರತಿ ಇನ್ನೂರು ವರ್ಷಗಳಲ್ಲಿ ನಮ್ಮ ಲಿಪಿ ಬದಲಾವಣೆಗಳನ್ನು ಅರಿತಿದ್ದರೆ ಮಾತ್ರ ಶಾಸನಗಳನ್ನು ಓದುವುದು ಸಾಧ್ಯ. ಲಿಪಿ ಬದಲಾವಣೆಯ ಸಂಧಿ ಕಾಲದಲ್ಲಿ ಹುಟ್ಟಿದ ಶಾಸನಗಳು ಹಲವಾರು ಸಮಸ್ಯೆಗಳನ್ನು ಉಂಟು ಮಾಡಬಲ್ಲವು. ಬ್ರಾಹ್ಮಿಯಿಂದ ನೇರ ವಿಕಸನಗೊಂಡ ನಮ್ಮ ಲಿಪಿಯ ಜೊತೆಗೆ ಆಗೀಗ ಖರೋಷ್ಠಿ, ಒಟ್ಟೆಳತ್ತು ಲಿಪಿಗಳೂ ತಮಿಳು-ಗ್ರಂಥ ಲಿಪಿಗಳೂ ನಮ್ಮ ಶಾಸನಗಳಿಗೆ ಪ್ರಯುಕ್ತಗೊಂಡಿವೆ. ಮುಸಲ್ಮಾನರ ಆಡಳಿತದಲ್ಲಿ ಪರ್ಶಿಯನ್ ಭಾಷೆಯ ಅರಾಬಿಕ್ ಲಿಪಿಯ ಶಾಸನಗಳೂ ಹುಟ್ಟಿವೆ. ಆಯಾ ಲಿಪಿಗಳ ಉತ್ತಮ ಜ್ಞಾನವಿದ್ದವರು ಮಾತ್ರ ಅಂಥ ಶಾಸನಗಳನ್ನು ಓದಬಲ್ಲರು.

ಲಿಪಿಯಂತೆ ಭಾಷೆಯ ಅಪಾರ ಜ್ಞಾನವೂ ಶಾಸನಾಭ್ಯಾಸಿಗೆ ತೀರ ಅವಶ್ಯಕ. ಕ್ರಿ.ಶ. ನಾಲ್ಕನೆಯ ಶತಮಾನದ ವರೆಗಿನ ಎಲ್ಲ ಶಾಸನಗಳ ಭಾಷೆಯನ್ನು ಒಟ್ಟಾರೆಯಾಗಿ ಪ್ರಾಕೃತ ಎಂದು ಹೆಸರಿಸಿದರೂ ಅಶೋಕನ ಶಾಸನಗಳ ಭಾಷೆಗೂ ಸಾತವಾಹನರ ಕಾಲದ ಶಾಸಗಳ ಭಾಷೆಗೂ ತುಂಬಾ ಅಂತರವಿದೆ. ಹಿರೇಹಡಗಲಿಯ ಪಲ್ಲವ ಶಾಸನದ ಪ್ರಾಕೃತವಂತೂ ಹಲವು ದೃಷ್ಟಿಯಿಂದ ಸಮಸ್ಯಾತ್ಮಕವಾಗಿದೆ. ಸಂಸ್ಕೃತದ (ಭವತಿ ಅಥವಾ ಭವೇತ್) ಕ್ರಿಯಾಪದ ಇದರಲ್ಲಿ ಹೋಜತಿ ಎಂದಾಗಿದೆ. ಚಿಲ್ಲರಿಕ ಕೊಡುಂಕ (ಕೆ) ಎಂಬ ಊಹಾತೀತ ಸ್ವರೂಪದ ಗ್ರಾಮನಾಮ ಇದರಲ್ಲಿದೆ. ಸನ್ನತಿ ಶಾಸನಗಳ ಪ್ರಾಕೃತ ಬಹುಶಃ ಮಗಧ ಮೂಲದಿಂದ ಬಂದುದು. ಇತರ ಶಾಸನಗಳಲ್ಲಿ ಮಹಾರಾಷ್ಟ್ರೀಯ ಪ್ರಾಕೃತದ ಅಂಶಗಳು ಗೋಚರಿಸುತ್ತವೆ. ಆದರೆ ಶಾಸನಗಳ ಸಂಸ್ಕೃತದ ಬಗ್ಗೆ ಇಂಥ ಸಮಸ್ಯೆಗಳಿಲ್ಲ. ಸಂಸ್ಕೃತ ಆಗಲೇ ಪ್ರಮಾಣೀಕೃತ ಭಾಷೆಯಾಗಿ ಅಖಿಲ ಭಾರತ ಮಟ್ಟದಲ್ಲಿ ಒಂದೆ ತೆರನಾಗಿ ಪ್ರಸಾರದಲ್ಲಿದ್ದುದೇ ಇದಕ್ಕೆ ಕಾರಣ.

ಕ್ರಿ.ಶ. ಅಯ್ದನೆಯ ಶತಮಾನದಿಂದ ಶಾಸನಗಳಲ್ಲಿ ಗೋಚರಿಸುವ ಕನ್ನಡ ಅಧ್ಯಯನ ಯೋಗ್ಯವಾಗಿದೆ. ಕವಿರಾಜ ಮಾರ್ಗದವರೆಗೆ ದೊರೆಯುವ ಒಟ್ಟು ಸು. ೫೦೦ ಶಾಸನಗಳ ಭಾಷೆ ದ್ರಾವಿಡ ಭಾಷಾ ವಿಜ್ಞಾನ ದೃಷ್ಟಿಯಿಂದ ತುಂಬ ಬೆಲೆಯುಳ್ಳದು. ಮೂಲದ್ರಾವಿಡರಲ್ಲಿದ್ದ ಆದಿವಕಾರ, ವರ್ತ್ಸ್ಯತಕಾರ, ೞಕಾರ, ಆದಿತಾಲವ್ಯ ಸಹಿತ ಮತ್ತು ಲೋಕಗೊಂಡ ಪ್ರಯೋಗಗಳು, ದೀರ್ಘಸ್ವರಯುಕ್ತ ಕ್ರಿಯಾಪದಗಳು, ಅಂಗಾಡಿ, ಅರಾಸ (> ಅರಸ) ಪಾರ್ವಾರ್, ಅಡಿಗಾಳ್ ಎಂಬಂಥ ದೀರ್ಘೋಕ್ತಿಗಳು, ಇಂದು ಲುಪ್ತವಾಗಿರುವ ಪೊರುಳ್, ಸೆಱಪು, ಪೋತ್ತಿನ್ಮಕ್ಕಳ್ (ಗಂಡು ಮಕ್ಕಳು) ಡೆಪ್ಪು (ಲಾಭ) ಕೋಟ್ಟೆ, ತೋಟ್ಟ, ಅಕ್ಕಿ (>ಆಗಿ) ನಿಲೆ, ಎಂಬಂಥ ಶಬ್ದ ರೂಪಗಳು, ತೞೆಕ್ಕಾಡು, ಮನೆತ್ತನ, ತೊಟ್ಟಪ್ಪಟ್ಟು ಎಂಬಂಥ ಸಜಾತೀಯ ದ್ವಿತ್ವ ಸಂಧಿ ರೂಪಗಳು ಐದೊನ್ದಿ ಪತ್ತೊನ್ದಿ ಎಂಬ ಭಿನ್ನಾಂಕ (ಅಪೂರ್ಣಾಂಕ)ಗಳು ಕೇವಲ ಈ ಶಾಸನಗಳಲ್ಲಿ ಮಾತ್ರ ನಮಗೆ ಕಂಡು ಬರುತ್ತವೆ. ಇಂಥವುಗಳ ಸರಿಯಾದ ಪರಿಚಯವಿಲ್ಲದ್ದರಿಂದ ಹಲವಾರು ಶಾಸನಗಳನ್ನು ಓದುವಲ್ಲಿ, ಸರಿಯಾದ ಪಾಠ ಮತ್ತು ಸರಿಯಾದ ಅರ್ಥ ಕಂಡುಹಿಡಿಯುವಲ್ಲಿ ತಪ್ಪಾಗಿರುವುದನ್ನು ಅನೇಕ ಕಡೆ ಕಾಣಬಹುದು. ನರಸಿಂಹರಾಜ ಪುರದ ತಾಮ್ರ ಶಾಸನ ಪ್ರಕಟಿಸಿದ ಆರ್. ನರಸಿಂಹಾಚಾರರು ‘ಕರಿಮಾನಾಖ್ಯಾಮಾನ್, ಒತ್ತು ಕೊಟ್ಟನ್’ ಎಂದು ಓದುವ ಬದಲು ‘ಒತ್ತು ಕೊಟ್ಟನ್’ ಎಂದು ಓದಿದ್ದಾರೆ. ‘ಓತ್ತು (>ಓತು) ಎಂದರೆ ಪ್ರೀತಿಯಿಂದ ಕೊಟ್ಟನು’ ಎಂಬುದು ಶಾಸನ ಪ್ರಯೋಗದ ಅರ್ಥ. ಒತ್ತಿಕೊಟ್ಟನ್ ಎಂದರೆ ಅರ್ಥಾಭಾಸವಾಗುತ್ತದೆ. ಬ್ರಿಟಿಶ್ ಮ್ಯುಜಿಯಂ ತಾಮ್ರಪಟವನ್ನು ಪ್ರಕಟಿಸಿದ ಫ್ಲೀಟರು ‘ಮೆಪ್ಪಿಕ್ಕಿ ಪೊರದ ಪಂದಿಗಳನ್ ಇಱೆಯಲ್ ಬಂದಲ್ಲಿ’ ಎಂಬ ಪಾಠ ಕೊಟ್ಟಿದ್ದಾರೆ. ಇಲ್ಲಿನ ಆರಂಭದ ಪದ ‘ಮೆಪ್ಪಿಕ್ಕಿ’ ಎಂದಲ್ಲ; ‘ಮೇಪ್ಪಿಕ್ಕಿ’ ಎಂದು ದೀರ್ಘ ಸಹಿತವಾಗಿರಬೇಕು. ಮೇಪ್ಪು ಎಂದರೆ ಪೂರ್ವದ ಹಳಗನ್ನಡದಲ್ಲಿ ಮೇವು ಎಂದು ಅರ್ಥ: ಮೇವು ಹಾಕಿ ಜೋಪಾನ ಮಾಡಿದ್ದ ಹಂದಿಗಳ ಬೇಟೆಗೆ ಹೋದ ಎಂದು ಈ ಭಾಗದ ಆಶಯ. ಹತ್ತನೆಯ ಶತಮಾನದಿಂದ ಶಾನಗಳ ಭಾಷೆ ಪ್ರೌಢತರ ಚಂಪೂ ಆಗಿ ಪರಿವರ್ತಿಸುತ್ತದೆ. ಆದ್ದರಿಂದ ಈ ತರುವಾಯದ ಶಾಸನಗಳನ್ನು ಓದುವವರು ಕನ್ನಡ ಚಂಪೂ ಕಾವ್ಯಗಳನ್ನು ಆಳವಾಗಿ ಅಧ್ಯಯನ ಮಾಡಿರಬೇಕಾಗುತ್ತದೆ. ಜತೆಗೆ ಸಂಸ್ಕೃತ ಭಾಷೆಯ ಪರಿಚಯ ತಕ್ಕಮಟ್ಟಿಗಾದರೂ ಅವಶ್ಯಕವೆನಿಸುತ್ತದೆ. ನಾಡಿನ ಧಾರ್ಮಿಕ ಸಾಮಾಜಿಕ ಪರಂಪರೆ, ಸಾಹಿತ್ಯ ಸ್ವರೂಪ ಮತ್ತು ಅದರ ಸಾವಯವ ಚರಿತ್ರೆ, ಚಿಕ್ಕ-ದೊಡ್ಡ ಮನೆತನಗಳ ರಾಜಕೀಯ ಚರಿತ್ರೆ ಮತ್ತು ಅದರಲ್ಲಿ ನಿಹಿತವಾಗಿರುವ ಸಮಸ್ಯೆಗಳು ನಾಣ್ಯ ಪರಂಪರೆ, ಪ್ರಾಕ್ತನಶಾಸ್ತ್ರ ನಾಡಿನ ಪ್ರಾಕೃತಿಕ ಗುಣಲಕ್ಷಣಗಳು- ಇವೆ ಮೊದಲಾದ ಕ್ಷೇತ್ರಗಳ ತಕ್ಕಮಟ್ಟಿನ ಪರಿಚಯವಾದರೂ ಶಾಸನಾಭ್ಯಾಸಿಗೆ ಇರಬೇಕಾಗುತ್ತದೆ. ಈ ಹಿನ್ನೆಲೆಯೊಂದಿಗೆ ನಮ್ಮ ನಾಡಿನಲ್ಲಿ ಇದುವರೆಗೆ ದೊರೆತಿರುದ ಶಾಸನ ಸಾಮಗ್ರಿಯನ್ನು ಕುರಿತು ಪರ್ಯಾಲೋಚಿಸಬಹುದು.

ಅಶೋಕನ ಶಾಸನಗಳಿಗೆ ‘ರಾಜಾಜ್ಞೆ’ ಎಂಬ ಅರ್ಥ ಸರಿಯಾಗಿ ಒಪ್ಪುತ್ತದೆ. ಪ್ರಜೆಗಳ, ಕೌಟುಂಬಿಕ, ಸಾಮಾಜಿಕ, ಧಾರ್ಮಿಕ ನಡುವಳಿಕೆಗಳು ಹೇಗಿರಬೇಕೆಂಬುದರ ಜತೆಗೆ ರಾಜ್ಯದ ಸಾಮಾನ್ಯ ಆಡಳಿತ ಬಗೆಗೂ ಅವುಗಳಲ್ಲಿ ಸ್ಪಷ್ಟ ನಿರ್ದೇಶನವಿದೆ. ಚಕ್ರವರ್ತಿ ಅಶೋಕ, ಮಹಾಮಾತ್ರರು, ರಜ್ಜುಕರು ಮೊದಲಾದ ತನ್ನ ಪ್ರಾಂತೀಯ ಅಧಿಕಾರಿಗಳಿಗೆ ನೇರವಾಗಿ ತನ್ನ ಹೆಸರಿನಿಂದ ಆದೇಶಗಳನ್ನು ಹೊರಡಿಸಿದ್ದು ಅವುಗಳಲ್ಲಿ ನಿಖರವಾಗಿ ಉಲ್ಲೇಖಿಸಲ್ಪಟ್ಟಿದೆ. ಹೀಗೆ ರಾಜಾಜ್ಞೆಗಳ ರೂಪದಲ್ಲಿ ಪ್ರಾರಂಭಗೊಂಡ ನಮ್ಮ ಶಾಸನ ಪರಂಪರೆ ಅನಂತರ, ದತ್ತಿ-ದಾನ ಬರಹಗಳು, ಪ್ರಶಸ್ತಿಗಳು, ಆತ್ಮಬಲಿದಾನಗಳು, ಗಡಿವಿವರಗಳು, ಧಾರ್ಮಿಕ ಚಟುವಟಿಕೆಗಳು, ಚಿಕ್ಕಪುಟ್ಟ ಸ್ಮಾರಕಗಳು, ಕಂದಾಯಾದಿ ಆಡಳಿತ ಕ್ರಮಗಳು ಇತ್ಯಾದಿಯಾದ ಹಲವಾರು ವಿಷಯಗಳಿಗೆ ವಿಸ್ತಾರಗೊಳ್ಳುತ್ತದೆ. ಈ ರೀತಿಯ ವೈವಿಧ್ಯ ೫ನೆಯ ಶತಮಾನದ ತರುವಾಯದ ಕಾಲದಲ್ಲಿನ ಬರಹಗಳಲ್ಲಿ ಸ್ಪಷ್ಟವಾಗಿದೆ. ಬರೀ ರಾಜಕೀಯ ಚರಿತ್ರೆಯಷ್ಟೆ ಅಲ್ಲದೆ ಒಟ್ಟು ಸಮಾಜದ ಸಮಗ್ರಚರಿತ್ರೆಯ ಅಸಂಖ್ಯ ವಿವರಗಳು ಈ ಕಾಲದಲ್ಲಿ ಶಾಸನಗಳಲ್ಲಿ ಎಡೆಪಡೆಯುತ್ತವೆ. ಎಂದರೆ ಮೌರ್ಯರ ಕಾಲದಲ್ಲಿ ಕಂಡುಬರುವ ಶಾಸನಾಶಯಗಳು ತರುವಾಯದ ಸಾತವಾಹನರ ಕಾಲಕ್ಕೆ ಒಮ್ಮೆ ಹಾಗೂ ಗಂಗ-ಕದಂಬರ ಕಾಲದಲ್ಲಿ ಮತ್ತೊಮ್ಮೆ ಬದಲಾವಣೆಗೊಂಡಿವೆ. ನಮ್ಮ ಶಾಸನಗಳು ಹೆಚ್ಚು ಹೆಚ್ಚು ಜನಪರವಾಗಿ ವಾಲುತ್ತ ಹೋಗುವುದನ್ನು ಈ ಎರಡೂ ಹಂತಗಳಲ್ಲಿ ನಾವು ಕಾಣಬಹುದು. ಕದಂಬರಿಂದ ಪ್ರಾರಂಭವಾಗುವ ಕನ್ನಡ ಶಾಸನಗಳು ಬಾದಾಮಿ ಚಾಲುಕ್ಯರಾದಿಯಾಗಿ ಮುಂದಿನ ರಾಜಮನೆತನಗಳ ಆಡಳಿತಾವಧಿಯಲ್ಲಿ ಉತ್ತರೋತ್ತರ ಹೆಚ್ಚುತ್ತ ಹೋಗುವುದನ್ನು ನಾವು ನೋಡುತ್ತೇವೆ.

ಅಶೋಕ ಜನತೆಗೆ ತನ್ನ ಆದೇಶಗಳನ್ನು ತಿಳಿಸಬೇಕೆಂದು ನಿರ್ದೇಶಿಸುವುದರೊಂದಿಗೆ ಧರ್ಮದಿಂದ ನಡೆದರೆ ಉಂಟಾಗುವ ಸತ್ಫಲಗಳನ್ನು ಸ್ಪಷ್ಟ ಪಡಿಸುತ್ತಾನೆ. ಜನರನ್ನು ಸನ್ಮಾರ್ಗದಲ್ಲಿ ನಡೆಸುವ ಅವನ ಪ್ರಯತ್ನದಿಂದಾಗಿ ಜಂಬೂದ್ವೀಪದ ನಿವಾಸಿಗಳು ಸ್ವರ್ಗದೇವತೆಗಳೊಂದಿಗೆ ಮಿಶ್ರೀಕೃತಗೊಂಡರೆಂದು ಅವನು ಸಾರುತ್ತಾನೆ ! ‘ದೇವನಾಂ ಪ್ರಿಯ, ಪ್ರಿಯದರ್ಶಿ ಅಶೋಕನು ಹೀಗೆ ಆಜ್ಞಾಪಿಸುತ್ತಾನೆ’ ಎಂದೇ ಅವನ ಬಹಳಷ್ಟು ಶಾಸನಗಳು ಆರಂಭವಾಗುತ್ತವೆ.

ಅಶೋಕನ ತರುವಾಯ ಕರ್ನಾಟಕದಲ್ಲಿ ತಲೆಯೆತ್ತಿದ ಸಾತವಾಹನರ ಯಾವ ರಾಜನೂ ಈ ರೀತಿ ತನ್ನ ಕೈಕೆಳಗಿನ ಅಧಿಕಾರಿಗಳಿಗಾಗಲೀ ಜನತೆಗಾಗಲೀ ನೇರವಾಗಿ ಆದೇಶಿಸುವುದಿಲ್ಲ. ಶಾಸನಾಶಯದಲ್ಲಿ ತೀವ್ರ ಬದಲಾವಣೆ ಉಂಟಾದುದೇ ಇದಕ್ಕೆ ಕಾರಣ. ಜನರನ್ನು ಧರ್ಮಾಚರಣೆಗೆ ಪ್ರೇರೇಪಿಸುವ ನೇರ ಪ್ರಯತ್ನ ಅವರ ಶಾಸನಗಳಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಅವರ ಕಾಲದ ಶಾಸನಗಳ ಚೌಕಟ್ಟು ಕೂಡ ಬೇರೆಯೇ ಆಗಬೇಕಾಯಿತು. ಇವರ ಅವಧಿಯಲ್ಲಿ ಕಂಡುಬರುವ ಸು. ೯೦ ರಷ್ಟು ಪ್ರಾಕೃತ ಬರಹಗಳನ್ನು ನೋಡಿದರೆ ಈ ಸಂಗತಿ ಸ್ಪಷ್ಟಪಡುತ್ತದೆ. ಇವುಗಳಲ್ಲಿ ರಾಜ, ಮಂತ್ರಿ ಮೊದಲಾದ ಗಣ್ಯ ವ್ಯಕ್ತಿಗಳ ಜತೆಗೆ ರಠಿಕ, ಊರಗೌಡ, ವ್ಯಾಪಾರಿ, ಭಿಕ್ಷು ಗೃಹಪತಿ (ಸಾಮಾನ್ಯ ಗೃಹಸ್ಥ) ಗೃಹಿಣಿ, ನರ್ತಕಿ ಮೊದಲಾದ ಸಾಮಾನ್ಯರು ಅಥವ ಅವರ ಸಂಬಂಧಿಸಿಗಳು ತಾವು ಮಾಡಿದ ಧಾರ್ಮಿಕ ಕಾರ್ಯ ಅಥವಾ ಕ್ಷೇತ್ರದರ್ಶನದ ಘಟನೆಯನ್ನು ತಾವು ಹಾಕಿಸಿದ ಬಿಡಿ ಶಾಸನಗಳಲ್ಲಿ ನೇರವಾಗಿ ಉಲ್ಲೇಖಿಸುತ್ತಾರೆ. ಈ ಕಾರಣದಿಂದಾಗಿ ಈ ಅವಧಿಯ ಶಾಸನಗಳು ಒಂದೊ ಎರಡೊ ವಾಕ್ಯಗಳಲ್ಲಿ ಅಥವಾ ಶಬ್ದಗಳಲ್ಲಿ ಮುಗಿದುಬಿಡುತ್ತವೆ. ಮುಂದಿನ ಕೆಲವು ಉದಾಹರಣೆಗಳನ್ನು ಪರಿಶೀಲಿಸಬಹುದು.

ಮಹಾರಠಿ ಪುತಸ
ಮೂಡಾಣ ಮಹಾಗಾಮಿ ಕುಮಾರ ದೇತಿಕಸ
ಭೋಜಕಿನಿ ಕಾಮಾಯ
ವಣಿಕಸ ವೀರಸ
ಗಹಪತಿ ಸೊಲಸ
ಸಮಣಕ ರಖಿತ
ಚಂತಸ

‘(ಇದು) ಮಹಾರಠಿ ಪುತ್ರನದು’ ‘ಗೃಹಪತಿ ಸೊಲನದು’ ‘ವ್ಯಾಪಾರಿ ವೀರನದು’ ಎಂದು ಮೊದಲಾಗಿ ಶಾಸನ ಹಾಕಿಸುವ ವ್ಯಕ್ತಿಯ ಪರಿಚಯವನ್ನು ಒಂದೆರಡು ವಿಶೇಷಣಗಳಲ್ಲಿ ಮಾಡಿಕೊಡುವುದು ಇವುಗಳಲ್ಲಿ ಸಾಮಾನ್ಯವಾಗಿದೆ. ‘ಚಂತಸ’ (ಚಿಕ್ಕ ಸಿಂದಗಿ) ಎಂಬ ಬರಹದಿಂದ ಈ ಚಂತ ಎಂಬುವನು ಯಾರು, ಏನು ಮುಂತಾದ ಯಾವ ಮಾಹಿತಿಯೂ ಕಂಡುಬರುವುದಿಲ್ಲ. ತೀರ ಮಿತವಾದ ಆಶಯ ಇವುಗಳ ಹಿಂದಿರುವುದರಿಂದ ಇವುಗಳ ಸ್ವರೂಪಕ್ಕೆ ಇಂಥ ಲಘುತ್ವ ಪ್ರಾಪ್ತವಾಗಿದೆ ಎಂದು ಹೇಳಬಹುದು.

ಹೇಗಿದ್ದರೂ ಈ ಪ್ರಾಕೃತ ಶಾಸನಗಳ ಕೊನೆಯ ಹಂತದಲ್ಲಿ ಈ ಸ್ಥಿತಿ ತುಂಬ ಬದಲಾಯಿಸುತ್ತದೆ. ಹೀರೆಹಡಗಲಿಯ ಪಲ್ಲವ ಶಾಸನ, ಮಳವಳ್ಳಿಯ ಚುಟು ಮತ್ತು ಕದಂಬ ಶಾಸನಗಳು ಹಾಗೂ ಚಂದ್ರವಳ್ಳಿ ಶಾಸನವು ಒಂದು ದೊಡ್ಡ ಸ್ಥಿತ್ಯಂತರವನ್ನು ಸಂಕೇತಿಸುತ್ತವೆ. ಹಿರೇಹಡಗಲಿಯ ಪಲ್ಲವಶಾಸನ ತಾಮ್ರಪಟವೇ ಆಗಿರುವುದರಿಂದ ಅದರಲ್ಲಿ ನಾಡಿನ ರಾಜ-ದಾನಿ, ಮಂತ್ರಿಮಹೋದಯರು, ಅಧಿಕಾರಿವರ್ಗದವರು, ಹಲವು ಜನ ಬ್ರಾಹ್ಮಣ ಪುರೋಹಿತರು ಹಲವಾರು ಜಾತೀ-ಪರಿವಾರದವರು ಅದರಲ್ಲಿ ಉಲ್ಲೇಖಿತರಾಗಿದ್ದಾರೆ. ಮಿತಿಕೂಟ ಅದರಲ್ಲಿದೆ. ಜತೆಗೆ “ಪಂಚ ಮಹಾಪಾತಕ ಸಂಜುತ್ತೋ ನರಾಧಮೋ ಹೋಜತೀ.. “ಸ್ವಸ್ತಿ ಗೋಬ್ರಾಹ್ಮಣ ಲೇಖಕ ವಾಚಕ ಶ್ರೋತೃಭ್ಯ ಇತೀ” ಎಂದು ಶಾಪ ಮತ್ತು ಮಂಗಲವಾಕ್ಯಗಳು ಅಂತ್ಯದಲ್ಲಿ ಬಂದಿವೆ. ಮಳವಳ್ಳಿಯ ಎರಡೂ ಶಾಸನಗಳ ಚೌಕಟ್ಟು ಸರಿಸುಮಾರು ಇದೇ ತೆರನಾಗಿರುವುದಲ್ಲದೆ. ಅವುಗಳಲ್ಲಿನ ಮಿತಿ ತುಂಬ ಚೊಕ್ಕಟವಾಗಿ ದಾಖಲಾಗಿದೆ. “ಇವ್ವದ್ಧತ್ತಿ ಬಿತೀಯ ಗಿಹ್ಮಪಕ್ಕಂ ಪಡಮದಿವಸಂ ಪಡಮ ಸಂವಚ್ಚರಮ್” ಎಂದು ಮೊದಲ ಶಾಸನದಲ್ಲಿದ್ದರೆ, ೪ ಸವ್ವಚ್ಚರಂ ಪಡಮ ಸರದ ಪಕ್ಖಂ ಬಿತೀಯ ದಿವಸಂ ಪಡಮ ನಕ್ಖತಂ ರೋಹಿಣಿಯಂ” ಎಂದು ಎರಡನೆಯ ಶಾಸನದಲ್ಲಿದೆ.[2]

ಒಟ್ಟು ನಾಲ್ಕನೆಯ ಶತಮಾನದ ಕೊನೆಯ ಹೊತ್ತಿಗೆ ಪ್ರಾಕೃತ ಶಾಸನಗಳ ಬರವಣಿಗೆ ನಿಂತುಹೋಗುತ್ತದೆ. ಬಹುಶಃ ಇಲ್ಲಿನ ಸ್ಥಳೀಯರ ಕೈಗೆ ಅಧಿಕಾರ ಸೂತ್ರಗಳು ಹಸ್ತಾಂತರ ಗೊಂಡುದೇ ಇದಕ್ಕೆ ಕಾರಣ. ಔತ್ತರೇಯರ ಅಧಿಕಾರ ಪೂರ್ಣ ತಪ್ಪಿಹೋಗಿರುವುದಲ್ಲದೆ ಅವರ ಭಾಷೆ ಮತ್ತು ಸಂಸ್ಕೃತಿಗಳೂ ಇಲ್ಲಿನ ಜನರಿಗೆ ಪರಕೀಯವೆನಿಸಿದ್ದರಿಂದ ಹೀಗಾಗಿರಬೇಕು. ಇದರಿಂದ ಕರ್ನಾಟಕದ ಶಾಸನಗಳ ಸ್ವರೂಪವೇ ಬೇರೊಂದು ಆಯಾಮ ಪಡೆದುಕೊಳ್ಳುವಂತಾಗುತ್ತದೆ. ಹಡಗಲಿ, ಮಳವಳ್ಳಿ ಶಾಸನಗಳ ಚೌಕಟ್ಟು ಇನ್ನಷ್ಟು ವ್ಯವಸ್ಥಿತಗೊಂಡುದಲ್ಲದೆ ಭಾಷೆ ಸಂಸ್ಕೃತ ಮತ್ತು ಕನ್ನಡಕ್ಕೆ ತಿರುಗಿಕೊಳ್ಳುತ್ತದೆ.

ಮೇಲೆ ನೋಡಿದಂತೆ ಶಾಸನಗಳ ವಿಷಯಾನುಕ್ರಮ ವ್ಯವಸ್ಥಿತಗೊಂಡು ಕರ್ನಾಟಕದ ಶಾಸನಗಳು ತುಂಬ ಅಚ್ಚುಕಟ್ಟಾಗಿ ರೂಪಗೊಳ್ಳುತ್ತವೆ. ಅದರಲ್ಲೂ ವಿಶೇಷವಾಗಿ ರಾಜನ ಬಿರುದಾವಳಿ ವೈಭವವನ್ನು ಪಡೆದುಕೊಂಡು ಇತಿಹಾಸ ರಚನೆಗೆ ಬೇಕಾದ ಅಪಾರ ಮಾಹಿತಿಯನ್ನೊದಗಿಸುವ ಖಣಿ ಎನಿಸುತ್ತದೆ.

 

[1]ಇದರ ಮೂಲ ಸಂಪುಟದಲ್ಲಿ ಫ್ಲೀಟ್ ಅವರು ಕಾದರೊಳ್ಳಿ (ಬೆಳಗಾವಿ) ಶಾಸನವನ್ನು ರೈಸರು ಮಡಿಕೇರಿ ತಾಮ್ರಪಟವನ್ನು ಮತ್ತು ಶಂಕರ ಪಾಂಡುರಂಗ ಪಂಡಿತ ಎಂಬವರು ರಾಷ್ಟ್ರಕೂಟರ ೩ನೆಯ ಕೃಷ್ಣನ ಸಾಲೋಟಗಿಯ ಶಾಸನವನ್ನು ಕುರಿತ ಮಾಹಿತಿ ಪ್ರಕಟಿಸಿದ್ದಾರೆ.

[2]ಅಶ್ವಿನಿಯ ಬದಲು ರೋಹಿಣಿ ನಕ್ಷತ್ರಗಳನ್ನು ಪ್ರಥಮ ನಕ್ಷತ್ರ ಎಂದು ಕರೆದಿರುವುದು ಹಿಂದೂ ಪಂಚಾಂಗದ ದೃಷ್ಟಿಯಿಂದ ಮಹತ್ತರ ಸಂಗತಿಯಾಗಿದೆ.