ಕವಿರಾಜಮಾರ್ಗಪೂರ್ವದಲ್ಲಿ ಈವರೆಗೆ ಸುಮಾರು ೫೩ ಪದ್ಯಗಳನ್ನು ಬೇರೆ ಬೇರೆ ವಿದ್ವಾಂಸರು ಗುರುತಿಸಿದ್ದಾರೆ. ಅವುಗಳ ಪೈಕಿ ಬಹಳಷ್ಟು ಪದ್ಯಗಳು ಶ್ರವಣ ಬೆಳ್ಗೊಳ ಶಾಸನಗಳಲ್ಲಿ ಕಂಡುಬಂದಿದೆ. ತಮಟಕಲ್ಲು, ಬಾದಾಮಿ, ಬೆಲವತ್ತೆ ಮಂಗಳೂರು, ಉದಯಾವರ, ನರಸಿಂಹರಾಜಪುರ, ವಳ್ಳಿಮಲೆ, ಕೊಪ್ಪಳ ಮೊದಲಾದೆಡೆಗಳಲ್ಲಿ ಹಲವಾರು ಛಂದೋರಚನೆಗಳಿರುವುದು ವಿದ್ವಾಂಸರಿಗೆ ಈಗಾಗಲೇ ತಿಳಿದಿದೆ. ಇವಲ್ಲದೆ ಈವರೆಗೆ ವಿದ್ವಾಂಸರ ಗಮನಕ್ಕೆ ಬಾರದೆ ಇರುವ ಕೆಲವು ವಿಶಿಷ್ಟ ರಚನೆಗಳು ಅಲ್ಲಲ್ಲಿ ಕಾಣಬರುತ್ತವೆ. ಅಂಥ ರಚನೆಗಳಲ್ಲಿ ಕೆಲವನ್ನು ಈಗ ನೋಡಬಹುದು.

ಕುರುವಗಟ್ಟ ಶಾಸನದಲ್ಲಿ ರಾಷ್ಟ್ರಕೂಟ ಮುಮ್ಮಡಿ ಗೋವಿಂದನ ಮಿತ್ರ ಹಾಗೂ ಚಾಲುಕ್ಯ ವಿನಯಾದಿತ್ಯನ ಮಗ ವೀರಗೃಹ ಎಂಬವನನ್ನು ಸ್ತುತಿಸುವ ಒಂದು ಪದ್ಯವಿದೆ.[1] ಉದಾಹರಣೆ :

ಇನ್ತನಪ್ಪಾತನೂಱಯ್ವತೊಬ್ಬರ ಕುಳಿತಲೆಯೊಳಿಱಿದಯ್ವತ್ತಱುವರ ಸುರಿಗೆ ಯೊಳಿಱಿದೋನ್ |
ಇನ್ತವೊನೆ ತಾನುಂ ಸಾಹಸಂಗಳಗೆಯ್ದ ಬೀರಗ್ರಿಹಮೆನಲ್ಸಮಾನವುಳ್ಳದೆ ಇಲ್ಲಿ ಸಾಹಸಂ ||

ಕಡಿತಲೆಯಿಂದ ನೂರೈವತ್ತೊಂದು ಜನರನ್ನೂ ಸುರಿಗೆಯಿಂದ ಐವತ್ತಾರು ಜರನ್ನೂ ಕೊಂದ ವೀರಯೋಧ ವೀರಗೃಹನ ಸ್ತುತಿರೂಪದ ಈ ಪದ್ಯದ ಹಿಂದೆ ಎರಡು ಸಂಸ್ಕೃತ ಶ್ಲೋಕಗಳು ಬಂದಿವೆ. ಇದರಲ್ಲಿ ಆದಿಪ್ರಾಸ ಮತ್ತು ಲಯವಿರುವುದರಿಂದ ಇದು ಪದ್ಯರಚನೆಯೆಂಬುದು ನಿಶ್ಚಯ ಆದಿಪ್ರಾಸವನ್ನು ಗಮನಿಸಿದರೆ ಇದೊಂದು ದ್ವಿಪದಿಯಾಗಿರುವುದು ಕೂಡ ಅಷ್ಟೇ ಸ್ಪಷ್ಟವಾಗಿದೆ. ಈ ಕಾರಣ ಮತ್ತು ಅಕ್ಷರಗಳ ಸಂಖ್ಯಾ ಕಾರಣವಾಗಿ ಇದು ಸಂಸ್ಕೃತದ ಯಾವ ಛಂದಸ್ಸೂ ಆಗಲಾರದು. ಅದೇ ರೀತಿ ಇದು ಎರಡು ಪಾದಗಳಿರುವ ಏಳೆ ಅಥವಾ ದ್ವಿಪದಿಯ ಯಾವ ಲಕ್ಷಣವನ್ನೂ ಹೊಂದಿಲ್ಲಿರುವುದು ಸ್ಪಷ್ಟ. ಇದರಲ್ಲಿ ಅಂಶಲಯ ಎದ್ದು ತೋರುವುದರಿಂದ ಕೆಳಗಿನಂತೆ ಇದಕ್ಕೆ ಪ್ರಸ್ತಾರ ಹಾಕಬಹುದು :

ಬ್ರ       ವಿ             ವಿ            ವಿ          ವಿ
ಇನ್ತ | ನಪ್ಪಾತ | ನೂಱಯ್ವ | ತೊಬ್ಬರ | ಕಳಿತಲೆ |

ವಿ              ವಿ            ವಿ                  ರು
ಯೊಳಿಱೆದ | ಯ್ವತ್ತಱು | ವರ ಸುರಿ | ಗೆಯೊಳಿಱಿದೋನ್

ಬ್ರ            ವಿ                 ವಿ           ವಿ           ವಿ
ಇನ್ತ | ವೊನೆ ತಾನುಂ | ಸಾಹಸಂ | ಗಳ ಗೆಯ್ದ | ಬೀರಗ್ರಿ

ವಿ             ವಿ             ವಿ            ವಿ
ಹಮೆನಲ್ಸ | ಮಾನವು | ಳ್ಳದೆ ಇಲ್ಲಿ | ಸಾಹಸಂ |

ಆದಿಯಲ್ಲಿ ಒಂದು ಬ್ರಹ್ಮಗಣ ತರುವಾಯ ಏಳು ವಿಷ್ಣುಗಣಗಳು ಮತ್ತು ಕೊನೆಯಲ್ಲಿ ಒಂದು ರುದ್ರ (ಅಥವಾ ರುದ್ರನಿಗೆ ಬದಲು ವಿಷ್ಣು) ಬಂದಿವೆ. ಎಂದರೆ ಒಟ್ಟು ಒಂಬತ್ತು ಗಣಗಳಿವೆ. ಆದಿಯಲ್ಲಿ ಬ್ರಹ್ಮ ಮತ್ತು ಅಂತ್ಯದಲ್ಲಿ ರುದ್ರಗಣವಿದ್ದು ಮಧ್ಯದಲ್ಲಿ ವಿಷ್ಣುಗಣಗಳಿರುವುದು ಅಕ್ಕರಗಳ ಗಣಯೋಜನೆ. ಆದ್ಯಂತ ಬ್ರಹ್ಮ-ರುದ್ರಗಳ ನಡುವೆ ವಿಷ್ಣುಗಣಗಳಿರುವುದು ಅವುಗಳಲ್ಲಿನ ಸಾಮಾನ್ಯ. ಅಕ್ಕರಗಳಲ್ಲಿ ಅತ್ಯಂತ ದೊಡ್ಡದು ಪಿರಯಕ್ಕರ. ಅದರಲ್ಲಿಯ ಪ್ರತಿಪಾದದ ಒಟ್ಟು ಗಣಗಳ ಸಂಖ್ಯೆ ಏಳು. ಪ್ರಸ್ತುತ ದ್ವಿಪದಿಯಲ್ಲಿ ಒಟ್ಟ ಒಂಬತ್ತು ಗಣಗಳು. ಪ್ರತಿಪಾದದಲ್ಲಿವೆ. ಎಂದರೆ ಇದು ಪಿರಿಯಕ್ಕರಕ್ಕೂ ಪಿರಿಯದು. ಇಂಥ ಒಂದು ಬಂಧವಿದ್ದು ಅಥವಾ ಇದನ್ನು ಹೋಲುವ ಅಂಶ ಬಂಧದ ಉಲ್ಲೇಖ ನಮ್ಮ ಯಾವ ಛಂದೋಗ್ರಂಥದಲ್ಲೂ ಇಲ್ಲ. ದ್ರಾವಿಡ ಛಂದಸ್ಸಿನಲ್ಲಿ ಇಷ್ಟು ಬೀಸಾದ ಬಂಧ ಇನ್ನೊಂದಿರಲಾರದು.

ಚಿಕ್ಕಬಳ್ಳಾಪುರ ಶಾಸನವು[2] ಛಂದಸ್ಸಿನ ದೃಷ್ಟಿಯಿಂದ ತುಂಬ ಗಮನಾರ್ಹವಾಗಿದೆ. ಜಯತೇಜನೆಂಬ ಗಂಗ ದೊರೆಯ ಹೆಸರನ್ನು ಈ ಶಾಸನ ಉಲ್ಲೇಖಿಸುತ್ತದೆ. ಈ ಶಾಸನ ಕೂಡ ರಾಷ್ಟ್ರಕೂಟ ಮುಮ್ಮಡಿ ಗೋವಿಂದನ ಕಾಲಾವಧಿಗೆ ಸೇರಿದೆ. ಮಣಿಪ್ರವಾಳ ಶೈಲಿಯಲ್ಲಿರುವ ಇದರ ಮೊದಲ ಪದ್ಯವು ಹೀಗಿದೆ:

ನ           ಜ             ಭ           ಜ          ಭ         ಜ          ರ
ಪ್ರಥಮ | ನು ಕಾಲ | ಮುಖ್ಯಗು | ರು ಕಾಳ | ಶ ಕ್ತಿಗು | ರವಗ್ರ | ಶಿಷ್ಯಯೋ |

ನ              ಜ              ಭ          ಜ          ಜ            ಜ            ರ
ಬ್ರತ ನಿ | ಯಮೋಪ | ವಾಸ ಗು | ಣ ಶೀಲ | ಸಮಾನ್ವಿ | ತ ದಾನ | ಧರ್ಮ್ಮಸತ್

ನ          ಜ            ಭ            ಜ           ಜ           ಜ             ರ
ಕ್ರಿತ ಪ | ರ ಸರ್ವ್ವ | ಭೂತದ | ಯ ನೀಶ್ವ | ರ ದಾಸ | ಮುನೇವ | ಮುಖ್ಯ ತಾ

ಸ            ಜ           ಭ          ಜ          ಜ             ಜ              ರ
ಪ್ರತಿಪಾ | ಲಮೇ ಚ | ತ ಬ್ರಜ | ತಿ ನನ್ದಿ | ಮಲೇಶ್ವ | [ರ] ಮಾಢ | ಪತ್ಯಯ [ಃ]

ಇದರ ಮೊದಲ ಪಾದದ ಐದನೆಯ ಸ್ಥಾನದಲ್ಲಿ ಜಗಣ ಬರುವ ಬದಲು ಭಗಣ ಬಂದಿದೆ. ಇದೇ ರೀತಿ ಕೊನೆಯ ಸಾಲಿನ ಆದಿಯಲ್ಲಿ ನಗಣ ಬರಬೇಕಾಗಿದ್ದ ಸ್ಥಾನದಲ್ಲಿ ಸಗಣ ಬಂದಿದೆ. ಇಷ್ಟನ್ನು ಬಿಟ್ಟರೆ ಉಳಿದಂತೆ ಚಂಪಕಮಾಲೆಯ ಗಣ ಯೋಜನೆಗೆ ಸಂಪೂರ್ಣ ಅನುಗುಣವಾಗಿದೆ. ಮಣಿಪ್ರವಾಳ ಶೈಲಿಯ ಕಾರಣ ಅಕ್ಷರ ಜೋಡಣೆಯಲ್ಲಿ ಕವಿಯು ತೊಡಕನ್ನನುಭವಿಸಿದಂತೆ ಕಾಣುತ್ತದೆ. ಅಂತೂ ಇದನ್ನು ಅಕ್ಷರವೃತ್ತವೆನ್ನಲಡ್ಡಿಯಿಲ್ಲ.

ಇದೇ ಶಾಸನದ ಇನ್ನೊಂದು ಪದ್ಯವು ಇಂತಿದೆ :

ಭ            ರ             ಯ            ಸ           ಸ           ಜ          ಗ
ದತ್ತಿಯ | ನಾಮ ಗಂ | ಗವಂಶೋ | ತ್ಭವ ಮೀ | ತೆಱದಿ | ನ್ತು ವೃದ್ಧಿ | ಯೊಳ್

ಭ            ಯ            ಮ           ಸ        ಸ           ಜ       ಲ
ಉತ್ತರ | ದೊರಾಧಾ | ರಾವರ್ಷಂ | ಕಲಿವ | ಲ್ಲಭವೇ | ನ ಪುತ್ರ | ಕ

ಭ           ರ            ಯ          ಯ         ಸ             ಜ       ಗ
ವೃತ್ತ ಭು | ಜ ಪ್ರಭೂ | ತ ವರ್ಷಂ | ಜಗತ್ತು | ಙ್ಗನ ರಾ | ಜಭೋಗ | ಸಂ

ಭ           ರ          ನ               ಮ                                      ಸ        ಜ    ಲ
ಪತ್ತಿನೊ | ಳಿಮ್ಬುಸ | ಲ್ವೆ ಪದಿ | ನೇಱುವರಿಷಂ (ಪದಿನೇಳ್ವರ್ಷಂ) | ಧನುರಾ | ಶಿಯನ್ದಿ ನ ||

ಇದರ ನಾಲ್ಕನೆಯ ಸಾಲಿನ ನಾಲ್ಕನೆಯ ಗಣವನ್ನು ನೇೞ್ವಿರ್ಷಂ ಎಂದು ನೇರ್ಪಡಿಸಿದರೆ ಅದು ಮಗಣವಾಗುತ್ತದೆ. ಮತ್ತು ಒಟ್ಟು ಅಕ್ಷರ ಸಂಖ್ಯೆ ೧೯ ಆಗುತ್ತದೆ. ಪ್ರತಿಪಾದದ ಆದಿಯಲ್ಲಿ ಭಗಣವು ಸಾಮಾನ್ಯವಾಗಿದೆ. ಎರಡು ಮತ್ತು ನಾಲ್ಕನೆಯ ಸಾಲಿನ ಅಂತ್ಯಲಘುಗಳನ್ನು ಗುರುವಾಗಿ ಮಾರ್ಪಡಿಸುವುದು ಸುಲಭ ಸಾಧ್ಯ. ಇದರಿಂದ ಪ್ರತಿಪಾದದ ಆದಿಯಲ್ಲಿ ಭಗಣ ಮತ್ತು ಕೊನೆಯಲ್ಲಿ ಸ | ಜ | ಗ ಇಷ್ಟು ಸಾಮಾನ್ಯವೆನಿಸುತ್ತದೆ. ಇದರಲ್ಲಿ ಅಕ್ಷರಗಣಗಳನ್ನು ಸರಿಯಾಗಿ ಹೊರಡಿಸುವುದು ಅಷ್ಟು ಸುಲಭವಲ್ಲವೆಂಬುದು ಸ್ಪಷ್ಟ. ಅದೇ ರೀತಿ ಮಾತ್ರಾಸಂಖ್ಯೆಯನ್ನು ಗಮನಿಸಿದರೆ ಅನುಕ್ರಮವಾಗಿ ೨೮, ೨೮, ೨೯ ಮತ್ತು ೨೮ ರಂತೆ ಪ್ರತಿಪಾದದಲ್ಲಿ ಮಾತ್ರೆಗಳು ಕಂಡುಬರುತ್ತವೆ. ಮಾತ್ರೆ ಹೆಚ್ಚಿಗಿರುವ ಮೂರನೆಯ ಪಾದವನ್ನು ತಿದ್ದಲು ಅವಕಾಶವಿಲ್ಲ. ಇನ್ನು ಇದರಲ್ಲಿ ಅಂಶಗಣಗಳನ್ನು ಹೊರಡಿಸುವುದು ಕೂಡ ಫಲಕಾರಿಯಲ್ಲ. ೨೮ ಮಾತ್ರೆಗಳಿವೆ ಎಂದು ಭಾವಿಸಿ ಏಳು ಚತುರ್ಮಾತ್ರಾಗಣಗಳನ್ನು ಹೊರಡಿಸಲೂ ಇದರಲ್ಲಿ ಸಾಧ್ಯವಿಲ್ಲ. ಅಂತೂ ಇದು ತುಂಬ ಸಮಸ್ಯಾತ್ಮಕವಾದ ಬಂಧವೆಂದು ಒಪ್ಪಿಕೊಳ್ಳಬೇಕು. ಬಹುಶಃ ಮಾತ್ರವೃತ್ತವೆಂದು ಸದ್ಯಕ್ಕೆ ಪರಿಗಣಿಸಬಹುದು.

ಈ ಶಾಸನದಲ್ಲಿ ಮೂರನೆಯ ಪದ್ಯವು ಇಂತಿದೆ :

ಪಡ್ಡಾಗೆ ಕೊಯತೂರು ಪನ್ನೀರ್ಛಾಸಿರ ಭೂಮಿಯನಾಳೆ ಬಣರರ್ |
ದಡ್ಡನರಾಧಿಪತ್ಯರವರಮ್ಮಗಳ್ವಣ ವಿಧ್ಯಾದ ರಾಜರಾ |
ಇಷ್ಟಸುದೇವಿ ರತ್ನಾವಲಿ ಮಾಡಿಸಿ ನನ್ದಿಯೊಳ್ಳಿವಾಲಯಂ |
ಕೊಟ್ಟೊದು ದೇವಭೋಗಂ ಸೊಡಲಿಯಮನಾ ವೈಶಾಖ ಪೌರ್ಣ್ನದೊಳ್ ||

ಇದರ ಎರಡನೆಯ ಪಾದವೊಂದನ್ನುಳಿದು ಇತರೆಡೆ ತಿದ್ದುಪಡಿಗೆ ಅವಕಾಶವಿಲ್ಲ. ಎರಡನೆಯ ಪಾದದ ವಣ ಮತ್ತು ವಿಧ್ಯದ ಎಂಬ ಶಬ್ದಗಳನ್ನು ಕ್ರಮವಾಗಿ ‘ವಾಣ’ (ಬಾಣ) ಮತ್ತು ‘ವಿದ್ಯಾಧಿ’ ಎಂದು ಮಾರ್ಪಡಿಸಬಹುದು. ಒಂದನೆಯ ಪಾದದಲ್ಲಿ ೨೯, ಎರಡನೆಯದರಲ್ಲಿ ೨೮ (ತಿದ್ದಿದರೆ ೩೦) ಮೂರು ಮತ್ತು ನಾಲ್ಕನೆಯದರಲ್ಲಿ ೨೮ರಂತೆ ಮಾತ್ರೆಗಳು ಕಂಡುಬರುತ್ತವೆ. ಆದರೆ ನಾಲ್ಕು ಮಾತ್ರೆಯ ೭ ಗಣಗಳಾಗಲೀ ೩/೪ ಅಥವಾ ೪/೩ ರಂತೆ ನಾಲ್ಕು ಸಲುವಾಗಲೀ ಏಳು ಮಾತ್ರೆಯ ಗಣಗಳಾಗಲೀ ಇದರಲ್ಲಿ ಹೊರಡುವುದಿಲ್ಲ. ಅಂತೆಯೇ ಐದು ಮಾತ್ರೆಯ ಗಣಗಳಿಗೂ ಇದರಲ್ಲಿ ಅವಕಾಶವಿಲ್ಲ. ಕಾರಣ ಇದನ್ನು ಮಾತ್ರವೃತ್ತವೆಂದು ಹೆಸರಿಸಲು ಶಕ್ಯವಿಲ್ಲ. ಮಾತ್ರಾ ಸಂಖ್ಯೆ ಸರಿಹೊಂದದಿದ್ದಾಗ ಅದನ್ನು ಅಕ್ಷರ ವೃತ್ತವೆಂದು ಹೇಳುವುದು ಇನ್ನೂ ಕಠಿಣ. ಕಾರಣ ಇದನ್ನು ಅಂಶಛಂದಸ್ಸಿನಲ್ಲಿ ಪ್ರಸ್ತಾರ ಹಾಕಿ ನೋಡುವುದು ಸೂಕ್ತ :

ವಿ              ವಿ               ವಿ              ಬ್ರ             ವಿ                ವಿ
ಪಡ್ಡಾಗೆ | ಕೊಯತೂರು | ಪನ್ನೀರ್ಛಾ | ಸಿರ ಭೂ | ಮಿಯನಾಳೆ | ಬ (ಬಾ) ಣರರ್

ವಿ          ರು             ವಿ          ವಿ         ವಿ            ವಿ                ವಿ
ದಡ್ಡನ | ರಾಧಿಪತ್ಯ | ರವರಮ್ಮ | ಗಳ್ವಣ | [ಳ್ವಾಣ] ವಿಧ್ಯದ (ವಿದ್ಯಾಧಿ) | ರಾಜರಾ

ವಿ                ವಿ              ವಿ               ವಿ             ವಿ             ವಿ
ಕೊಟ್ಟೊದು | ದೇವಭೋ | ಗಂ ಸೊಡ | ಲಿಯಮನಾ | ವೈಶಾಖ | ಪೌರ್ಣ್ನದೊಳ್

ಎಂದರೆ ಇದರ ಪ್ರತಿಪಾದದಲ್ಲಿ ಆರು ವಿಷ್ಣುಗಣಗಳು ಕಂಡುಬರುತ್ತವೆ. ಯಾದುದರಿಂದ ಇದು ಕರ್ಣಾಟಕ ವಿಷಯ ಜಾತಿಯಲ್ಲಿಯೇ ಬರುವಂಥದು. ಆದರೆ ನಾಗವರ್ಮಾದಿಗಳು ಹೇಳಿರುವ ಯಾವುದೇ ವೃತ್ತಕ್ಕಿಂತ ಭಿನ್ನವಾಗಿರುವುದು ಸ್ಪಷ್ಟ. ಇದರಿಂದ ಕುರುವಗಟ್ಟ ಶಾಸನದ ವೃತ್ತ ಮತ್ತು ವೃತ್ತಗಳು ಅಂದು ಪ್ರಚಲಿತವಿದ್ದ ಹಲವಾರು ಪ್ರಕಾರದ ದೇಶೀಬಂಧಗಳಿಗೆ ಉದಾಹರಣೆಗಳು. ಛಾಂದಸಿಗರು ಇಂಥವನ್ನು ಗಮನಿಸಹೋಗಿಲ್ಲ.

ಕ್ರಿಸ್ತಶಕ ೭೫೪ರ ಗುಂಡ್ಲಹಳ್ಳಿ ಶಾಸನದಲ್ಲಿ ಕೆಳಗಿನ ಪದ್ಯವಿದೆ[3] :

ಬಿಸೆಯ ಸತ್ತಿಕುಮಾರ ವಸುನ್ಧ [ರಾ] ಪತಿತನಯ ಪಟುಕ್ಕ
ಣ್ಣ ಸತ್ತಿಯಾ ಪುತ್ರನತಿ ಪ್ರಘನ ನಿರ್ಮಲ ಮಾನತ ವೈ
ರಸತ್ತಿಯಾ ಸತ್ಕುಲ….. ಗೊಪ್ಪೆಯ ಸುತನ್ ಪರಮೇಶ್ವರದೇ
ವಶಕ್ತಿಯಾ ಕ್ಷತ್ರಣಿಯಾ ತಟಂಕಮಿದು ತಿಂಕಚಿರನೆಱೆದ ||

ಇದರ ಎರಡು ಮತ್ತು ಮೂರನೆಯ ಪಾದಗಳಲ್ಲಿ ಜತ ಜಭ ಜಜ ಲಗ ಎಂಬ ಯೋಜನೆ ಸಾಮಾನ್ಯವಾಗಿ ಕಂಡು ಬರುತ್ತದೆ. ನಾಲ್ಕನೆಯ ಪಾದದ ಅಂತ್ಯಭಾಗವನ್ನು ಚಿರನ್ನೆಱೆದಂ ಎಂದು ತಿದ್ದಿದರೆ ಅದರಲ್ಲಿಯೂ ಈ ಪ್ರಸ್ತಾರ ದೊರೆಯುತ್ತದೆ. ಆದರೆ ಮೊದಲ ಪಾದದಲ್ಲಿ ಹೆಚ್ಚಿನ ತಿದ್ದುಪಡಿಗೆ ಅವಕಾಶವಿಲ್ಲ. ಬಹಳವಾದರೆ ಮೊದಲ ನಗಣವನ್ನು ಜಗಣವನ್ನಾಗಿಸಲು ‘ಸೆ’ ಅಕ್ಷರವನ್ನು ದೀರ್ಘಗೊಳಿಸಬಹುದು. ಆದರೆ ತರುವಾಯದ ಗಣಗಳು ಭಭ ರನನ ಎಂದಾಗುವುದರಿಂದ ಮುಂದಿನ ಪಾದಗಳೊಂದಿಗೆ ಮುಂದಿನ ಮೂರೂ ಪಾದಗಳಲ್ಲಿ ಅಂಶಗಣ ತತ್ವಕ್ಕೆ ವಿರುದ್ಧವಾದ ಲ-ಎಂಬ ಅಕ್ಷರ ಯೋಜನೆಯಿರುವುದರಿಂದ ಇದು ಅಂಶಗಣ ಘಟಿತ ಬಂಧವಲ್ಲವೆಂಬುದು ನಿಶ್ಚಿತ. ಆದ್ದರಿಂದ ಇದನ್ನು ಮಾತ್ರಾವೃತ್ತವೆಂದೇ ಹೇಳಬೇಕು. ಮಾತ್ರೆಗಳ ಲೆಕ್ಕದಲ್ಲಿ ಪ್ರಸ್ತಾರ ಹಾಕಿದರೆ ಕೆಳಗಿನಂತೆ ಯೋಜನೆ ಕಂಡುಬರುತ್ತದೆ. :

೪?        ೪           ೪         ೪?                ೪          ೪?
ಬಿಸೆಯ | ಸತ್ತಿಕು | ಮಾರ ವ | ಸುನ್ಧ | [ರಾ] | ಪತಿ ತನ | ಪಟುಕ್ಕ |

೪         ೪         ೪         ೪         ೪            ೪             ೪
ಣ್ಣ ಸತ್ತಿ | ಯಾಪು | ತ್ರನತಿ | ಪ್ರಸಿದ್ಧ | ಘನ ನಿ | ರ್ಮಲ ಮಾ | ಗತವೈ |

೪          ೪         ೪?        ೪?              ೪           ೪            ೪
ರ ಸತ್ತಿ | ಯಾ ಸ | ತ್ಕುಲ | …..ಗೊಪ್ಪೆ | ಯ ಸುತನ್ | ಪರಮೇ | ಶ್ವರ ದೇ |

೪         ೪          ೪          ೪             ೪            ೪        ೪
ವ ಶಕ್ತಿ | ಯಾಕ್ಷ | ತ್ರಣಿಯಾ | ತಟಂಕ | ಮಿದು ತಿಂ | ಕಚಿರ | ನ್ನೆ ಱೆದ [೦] |

ಇದರಿಂದ ಪ್ರತಿಪಾದದಲ್ಲಿ ಏಳೇಳು ಚತುರ್ಮಾತ್ರಾಗಣಗಳು ಇರುವುದು ಎದ್ದು ತೋರುತ್ತದೆ. ಆದುದರಿಂದ ಇದು ಮಾತ್ರಾವೃತ್ತವಾಗಿದ್ದು ಕವಿ ಇದರಲ್ಲಿ ಅಕ್ಷರಗಳನ್ನು ಹೊಂದಿಸುವ ವಿಫಲ ಪ್ರಯತ್ನ ಮಾಡಿದ್ದಾನೆನ್ನಬಹುದು. ಕನ್ನಡದ ಯಾವ ಛಂದೋಗ್ರಂಥದಲ್ಲಿಯೂ ಇದರ ಪ್ರಸ್ತಾಪವಿಲ್ಲ. ಪ್ರಾಕೃತದಲ್ಲಿ ಮಾತ್ರ ಇತರ ಯಾವ ನಿರ್ಬಂಧಗಳೂ ಇಲ್ಲದೆ ಪ್ರತಿಪಾದದಲ್ಲಿ ಏಳು ಚತುರ್ಮಾತ್ರಾಗಣಗಳಿರುವ ವೃತ್ತಕ್ಕೆ ‘ಲಯ’ ಎಂಬ ಹೆಸರಿರುವುದಾಗಿ ಹೇಮಚಂದ್ರನ ಛಂದೋನುಶಾಸನದಿಂದ ತಿಳಿದುಬರುತ್ತದೆ.[4] ಕಾರಣ ಇದನ್ನು ನಾವು ‘ಲಯವೃತ್ತ’ ಎಂದು ಹೆಸರಿಸಬಹುದು. ಕೈಪಿಡಿಕಾರರು ಹೇಳಿರುವ ಲಯೋತ್ತರ ಮತ್ತು ಲಯಗ್ರಾಹಿ ವೃತ್ತಗಳಿಂದ ಭಿನ್ನವೂ ಚಿಕ್ಕದೂ ಆಗಿರುವ ಇದು ಹೇಮ ಚಂದ್ರನಿಗಿಂತ ಮೂರುವರೆ-ನಾಲ್ಕು ಶತಮಾನಗಳಷ್ಟು ಹಿಂದಿನ ಬಂಧವೆಂಬುದನ್ನು ನಾವು ನೆನಪಿಡಬೇಕು.

ಕ್ರಿಸ್ತಶಕ ೮ ನೆಯ ಶತಮಾನದ್ದೆಂದು ಹೇಳಲಾದ ಬಾದಾಮಿಯ ಶಾಸನದಲ್ಲಿ ಒಂದು ವೃತ್ತವಿದೆ.[5] ಉದಾಹರಣೆ :

ಅನೇಕ | ತರ ಸ | ಕಳ ಪ್ರ | ವರ ತುಂ | ಗ ಶೈಲಂ | ಗಳಿಂ
-ನಯ | ನ ಹಾರಿ | ಯುಡುಪಿ | ಲವಿನಿ | ರ್ರು‍ಕೋ….ದಳ |

ವಿನಯ | ಕಫಣೀ | ನ್ದ್ರರೀಕು | ಶಲಧ | ರ್ಮ್ಮೆಣಪ್ಪ | ಪಿತಮ್
-ನಕ್ಕ | ಘವಿನಾ | ಸಿಗಳ್ಮು | ದದೆಲೇ | ಖ ನಾಮಾ | ತ್ರದೆ ||

ಇದರ ಒಂದನೆಯ ಪಾದದಲ್ಲಿ ಜನ ಜಸ ಯ ಲಗ ಎಂಬ ವ್ಯವಸ್ಥೆ ಕಂಡುಬರುತ್ತದೆ. ಎರಡನೆಯ ಪಾದ ಹೆಚ್ಚು ತ್ರುಟಿತ ಮತ್ತು ತಪ್ಪುಗಳುಳ್ಳದ್ದಾಗಿದೆ. ಮೂರನೆಯ ಪಾದ ಜಸ ಜಸ ಯ ಲಗ ಎಂಬಂಥ ವ್ಯವಸ್ಥೆ ಹೊಂದಿದೆ. ನಾಲ್ಕನೆಯ ಪಾದದ ಮೊದಲಕ್ಷರ ತ್ರುಟಿತವಿದ್ದು ಮುಂದಿನ ಎರಡು ಅಕ್ಷರಗಳು-U ಎಂಬುದಾಗಿವೆ. ಇದು ಜಗಣವಾಗಿರುವ ಸಂಭವ ತೀರ ಹೆಚ್ಚಾಗಿದೆ. ಇದರಿಂದ ಇದು ಜಸ ಜಸ ಯ ಲಲ ಅಥವಾ ಲಗ ಎಂದಾಗುತ್ತದೆ. ಒಟ್ಟಿನಲ್ಲಿ ಇದರ ಪ್ರಸ್ತಾರ ಜಸ ಜಸಯ ಯ ಲಗ ಎಂದು ಭಾವಿಸಬಹುದು. ಆದ್ದರಿಂದ ಇದನ್ನು ಹದಿನೇಳನೆಯ ಅತ್ಯಷ್ಟಿಯಲ್ಲಿಯ ಅಶುದ್ಧ ಪೃಥ್ವೀವೃತ್ತವೆನ್ನಬಹುದು.

ಹೀಗೆ ಈವರೆಗೆ ವಿದ್ವಾಂಸರು ಗಮನಿಸದೇ ಉಳಿದಿರುವ ಕವಿರಾಜ ಮಾರ್ಗಪೂರ್ವದ ಈ ಛಂದೋಬಂಧಗಳ ಪೈಕಿ ಚಿಕ್ಕಬಳ್ಳಾಪುರ ಮತ್ತು ಬಾದಾಮಿ ಶಾಸನಪದ್ಯಗಳು ಕ್ರಮವಾಗಿ ಚಂಪಕಮಾಲೆ ಮತ್ತು ಪೃಥ್ವೀವೃತ್ತಗಳಾಗಿದ್ದು ಕೆಲಮಟ್ಟಿಗೆ ಅಶುದ್ಧವಾಗಿವೆ. ಚಿಕ್ಕಬಳ್ಳಾಪುರ ೬೬ ಶಾಸನದ, ಎರಡನೆಯ ಪದ್ಯ ತುಂಬ ಸಮಸ್ಯಾತ್ಮಕವಾಗಿದೆ. ಗುಂಡ್ಲ ಹಳ್ಳಿ ಶಾಸನದ ‘ಲಯವೃತ್ತ’ ಮಾತ್ರಾಛಂದಸ್ಸಿನ ದೃಷ್ಟಿಯಿಂದ ಗಮನಾರ್ಹವಾಗಿದೆ. ಕುರುವಗಟ್ಟಿ ಮತ್ತು ಚಿಕ್ಕಬಳ್ಳಾಪುರ ಕೊನೆಯ ಪದ್ಯ ಇವು ಅಂಶಛಂದಸ್ಸಿನ ಅಪೂರ್ವ ಬಂಧಗಳಾಗಿದ್ದು ಕನ್ನಡದ ಜಾತಿಛಂದಸ್ಸಿಗೆ ಹೊಸ ಕೊಡುಗೆಗಳಾಗಿವೆ.

ಆನುಷಂಗಿಕವಾದ ಇನ್ನೊಂದು ಸಂಗತಿಯನ್ನು ಇಲ್ಲಿ ಹೇಳಬೇಕಾಗಿದೆ. ಕ್ರಿ.ಶ. ೭೫೪ ರ ಗುಂಡ್ಲಹಳ್ಳಿ ಶಾಸನದಲ್ಲಿ “ಲಿಖಿಚ್ಚದೋನ್ ದಿವ್ಯಭಾಷಾಕಲನ್ ತ್ರಿಣನಾಮ ಗಿರಿ ಗ್ರಾಮಮೊಳ್ದೋನ್” ಎಂದಿದೆ. ಇಲ್ಲಿ ಬಂದಿರುವ ದಿವ್ಯ ಭಾಷ್ಯಾಕಲನ್ ಈ ಶಾಸನ ರಚಕನ ಬಿರುದು. ಈ ಬಿರುದಿನಿಂದಲೇ ಈತ ಪ್ರಸಿದ್ಧನಾಗಿರಬೇಕು. ಈತ ತ್ರಿಣನಾಂಗಿರಿ ಎಂಬ ಗ್ರಾಮಾಧಿಕಾರಿಯೂ ಹೌದು. ಆದ್ದರಿಂದ ಈತ ಈ ಶಾಸನದ ಕವಿ ಎಂಬುದು ನಿಸ್ಸಂಶಯ. ಕಾರಣ ಕನ್ನಡ ಭಾಷೆಯ ಮಟ್ಟಿಗೆ ಹೆಸರು ತಿಳಿದುಬರುವ ಪ್ರಪ್ರಥಮ ಕವಿ ಇವನಾಗುತ್ತಾನೆ.

 

[1]ಆಂಧ್ರಪ್ರದೇಶ ಆರ್ಕ್ಯಾಲಾಜಿಕಲ್ ಸಿರೀಸ್ ಸಂಖ್ಯೆ ೩, ಶಾಸನಸಂಖ್ಯೆ ೨೯

[2]ಎಪಿಗ್ರಾಫಿಯ ಕರ್ನಾಟಿಕಾ, ಸಂಪುಟ೧೭, ಸಂಖ್ಯೆ ೬೬, ಕ್ರಿ.ಶ.೮೧೦

[3]ಅದೇ, ಸಂಪುಟ ೧೬, ಪಾವಗಡ ೧೨.

[4]ಎಚ್.ಡಿ.ವೇಲಣಕರ್ (ಸಂ.): ಹೇಮಚಂದ್ರನ ಛಂದೋನುಶಾಸನ, ಅನುಬಂಧ-೨

[5]ಕರ್ನಾಟಕ ಇನ್‌ಸ್ಕ್ರಿಪನ್, ಸಂಪುಟ ೧, ಸಂಖ್ಯೆ ೬.