ಕಾಗತಿ, ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ಬೆಳಗಾವಿ ತಾಲೂಕಿನಲ್ಲಿರುವ ಒಂದು ದೊಡ್ಡ ಊರು. ಮುಂಚೆ ಇದು ಸಾಂಗಲಿಯ ಪಟವರ್ಧನರ ಸಂಸ್ಥಾನಕ್ಕೆ ಸಂಬಂಧಿಸಿದ ಶಹಾಪೂರ ತಾಲೂಕಿನ ಭಾಗವಾಗಿತ್ತು. ಸಾಂಗಲಿಯ ಪಟವರ್ಧನರ ಆಧೀನಕ್ಕೆ ಸೇರುವುದಕ್ಕೆ ಮುಂಚಿನ ಕಾಗತಿಯ ಇತಿಹಾಸ ತಿಳಿದು ಬರುವುದು ತೀರ ಅಲ್ಪ.

ಆದರೆ ಈಗಲೂ ಕಾಗತಿ ಊರಿನ ತುಂಬ ಹಲವಾರು ಪ್ರಾಚೀನ ಅವಶೇಷಗಳು ಹರಡಿರುವುದು ಕಂಡು ಬರುತ್ತದೆ. ಊರ ಪೂರ್ವ ಬದಿಯಲ್ಲಿರುವ ಸಿದ್ಧೇಶ್ವರ ದೇವಾಲಯದ ಅವರಣವೊಂದರಲ್ಲೆ ಐದರಷ್ಟು ವೀರಗಲ್ಲುಗಳು ಮತ್ತು ನಾಲ್ಕು ಮಾಸ್ತಿಕಲ್ಲುಗಳಿವೆ. ಜೊತೆಗೆ ಪ್ರಸ್ತುತ ಸಿದ್ಧೇಶ್ವರ ದೇವಾಲಯ ಕೂಡ ಬಹಳ ಹಳೆಯ ಕಾಲದ ದೇವಾಲಯವಾಗಿದೆ. ಈಗ ಈ ದೇವಾಲಯದ ಜೀರ್ಣೋದ್ಧಾರವಾಗಿರುವುದಾದರೂ ಗರ್ಭಗೃಹದಲ್ಲಿರುವ ಶಿವಲಿಂಗ ಬಹಳೇ ಹಳೆಯ ಮಾದರಿಯದಿದೆ. ದೇವಾಲಯದ ಹಿಂಬದಿಯಲ್ಲಿ ಬಿದ್ದಿರುತ್ತಿದ್ದ ಪ್ರಾಚೀನ ಶಿಲಾಲೇಖವೊಂದು ಈಗ ಮಾಯವಾಗಿದೆ. ಇಂಥ ಕೆಲವು ಅಂಶಗಳನ್ನು ಗಮನಿಸಿದಾಗ ಈ ಕಾಗತಿ ಊರು ಸಾಕಷ್ಟು ಪ್ರಾಚೀನವಾದುದೆಂಬುದು ನಿರ್ವಿವಾದ. ಇದರಿಂದ ಈ ಕಾಗತಿ ಕನಿಷ್ಠ. ಕಲ್ಯಾಣ ಚಾಲುಕ್ಯರ ಕಾಲದಿಂದಲಾದರೂ ಅಸ್ತಿತ್ವದಲ್ಲಿತ್ತೆಂದು ಊಹಿಸಬಹುದು. ಇದು ಪ್ರಾಚೀನ ಕೂಂಡಿ ಮಂಡಲಕ್ಕೆ ಸೇರಿದ್ದ ವೇಣುಗ್ರಾಮ ೩೦ ಎಂಬ ವಿಭಾಗದ ಒಂದು ಊರಾಗಿತ್ತು.

ಊರು ಇಷ್ಟೊಂದು ಪ್ರಾಚೀನವಾಗಿದ್ದರೂ ಇಲ್ಲಿಯ ಕಾಗತಿ ದೇಸಾಯರ ಮನೆತನ ಅಷ್ಟೊಂದು ಪ್ರಾಚೀನವಾಗಿದ್ದಂತೆ ಕಂಡು ಬರುವುದಿಲ್ಲ. ಈ ಮನೆತನದ ಮೂಲ ಪುರುಷ ಮಡೆಮಾಮಗೌಡ ಅಥವಾ ಮರಿಮಾಮನಗೌಡ. ಇವನು ವಿಜಾಪುರದ ಆದಿಲಶಾಹಿಯ ಕಾಲದಲ್ಲಿ ವಿಜಾಪುರದ ಕಡೆಯಿಂದ ಕಾಗತಿಗೆ ವಲಸೆ ಬಂದನೆಂದು ತಿಳಿದು ಬರುತ್ತದೆ. ಈ ವಲಸೆಯ ಕಾರಣ ಸ್ಪಷ್ಟವಿಲ್ಲ. ಈ ಮನೆತನದ ಹನ್ನೆರಡನೆಯ ತಲೆಮಾರಿನಷ್ಟೊತ್ತಿಗೆ ಇವರು ವಿಶೇಷ ಪ್ರಾಬಲ್ಯಕ್ಕೆ ಬಂದರು. ಹನ್ನೆರಡನೆಯ ತಲೆಮಾರಿನ ೩ನೆಯ ಖಾನಗೌಡ ಎಂಬವನು ಕ್ರಿ. ಶ. ಸು. ೧೭೭೫ರಲ್ಲಿ ತನ್ನ ಸ್ವಸಾಮರ್ಥ್ಯದಿಂದ ಕಾಗತಿಯ ದೇಶಗತಿಯನ್ನು ಸಂಪಾದಿಸಿದನೆಂಬಲ್ಲಿ ಏಕಾಭಿಪ್ರಾಯ ಕಂಡು ಬರುತ್ತದೆ. ಈ ಖಾನಗೌಡನ ಖಾಸಾ ಅಣ್ಣನೇ ಧೂಳಪ್ಪ ಗೌಡ ದೇಸಾಯಿ. ಈ ಮನೆತನದ ವಂಶಾವಳಿಯನ್ನು ಈ ಸಂದರ್ಭದಲ್ಲಿ ಪರಿಶೀಲಿಸುವುದು ಸೂಕ್ತವಾಗಿದೆ.

ಮುಂದಿನ ಪುಟದ ವಂಶಾವಲಿಯಲ್ಲಿನ ಮೂರನೆಯ ಖಾನಗೌಡನು ಕಾಗತಿಯ ದೇಶಗತಿಯನ್ನು ಸಂಪಾದಿಸಿದನೆಂದು ಹೇಳಿತಷ್ಟೇ, ಈ ಖಾನಗೌಡ ಶೂರನೂ, ಸಮರ್ಥನೂ, ಚಾಣಾಕ್ಷನೂ ಆಗಿದ್ದನೆಂದು ತಿಳಿದುಬರುವುದು. ದಕ್ಷಿಣದಲ್ಲಿದ್ದ ಪಟವರ್ಧನರ ಈ ಪ್ರಾಂತಗಳಲ್ಲಿ ಮತ್ತು ಅವುಗಳ ನೆರೆಹೊರೆಯಲ್ಲಿ ಅಂದು ವಿಜಾಪುರದ ಆದಿಲಶಾಹಿ ಮನೆತನದಕ್ಕೆ ಸೇವೆ ಸಲ್ಲಿಸಿದ ಅನೇಕ ಸರದಾರರು ಸುಬೇದಾರರು ನೆಲೆಸಿದ್ದರು. ಈ ಸರದಾರರಲ್ಲಿ ಕೆಲವರು ಸಮಯ ಸಿಕ್ಕಾಗಲೆಲ್ಲಾ ಕಿರುಕುಳ ಕೊಡುತ್ತಿದ್ದರು. ಅಂಥವರಲ್ಲಿ ಒಬ್ಬ, ಬೆಳಗಾವಿ ತಾಲೂಕಿನ ಅಂಕಲಗಿಯಲ್ಲಿದ್ದು, ಈತನನ್ನು ನಿಯಂತ್ರಿಸುವುದು ಪೇಶ್ವಯರಿಗೆ ಕಠಿಣವಾಗಿ ಉಪಟಳ ಅತಿಶಯ ವಾಯಿತು. ಕಾಗತಿಯ ಖಾನಗೌಡನು ಅವನನ್ನು ಎದುರಿಸಿ ಕೊಂದು ಹಾಕಿದನಂತೆ. ಈ ಘಟನೆ ಕ್ರಿ.ಶ. ಸು. ೧೭೬೫ ರಲ್ಲಿ ನಡೆಯಿತು, ಇದರಿಂದ ಸಂಪ್ರೀತರಾದ ಪಟವರ್ಧನವರು ಕಾಗತಿಯ ದೇಶಗತಿಯನ್ನು ಈ ಮನೆತನಕ್ಕೆ ಉಂಬಳಿ ಹಾಕಿ ಕೊಟ್ಟರು. ಈ ಪ್ರದೇಶ ಬೆಳಗಾವಿಯ ಉತ್ತರ ಬದಿಯಲ್ಲಿರುವ ಕಂಗ್ರಾಳಿ ಮತ್ತು ಯಮುನಾಪುರದಿಂದ ಆರಂಭಗೊಂಡು ಘಟಪ್ರಭಾ ನದಿತೀರದವರೆಗೂ ಹಬ್ಬಿತ್ತು. ಸುಮಾರು ೨೯ ಹಳ್ಳಿಗಳು ಇದರಲ್ಲಿ ಸಮಾವೇಶಗೊಂಡಿದ್ದವು. ಖಾನಗೌಡನು ತನಗೆ ದೊರೆತ ದೇಶಗತಿಯನ್ನು ತಾನೊಬ್ಬನೇ ಉಪಭೋಗಿಸದೆ ಅದರ ಕೆಲವು ಅಂಶಗಳನ್ನು ತನ್ನ ಸೋದರ ಸಂಬಂಧಿಗಳಲ್ಲಿ ಹಂಚಿಕೊಟ್ಟನು. ಅಣ್ಣನಾದ ಧೂಳಪ್ಪಗೌಡ ದೇಸಾಯಿಗೆ ಕೂಡ ಕೆಲವು ಭಾಗವನ್ನಿತ್ತನು. ಆದರೆ ಧೂಳಪ್ಪ ಗೌಡ-ಪದ್ಮಾವತಿಯರಿಗೆ ಚೆನ್ನಮ್ಮ ಒಬ್ಬಳೇ ಮಗಳಾದುದರಿಂದ ಇವರ ವಂಶ ಮುಂದುವರಿಯಲಿಲ್ಲ.

05

ಧೂಳಪ್ಪಗೌಡ ಮತ್ತು ಖಾನಗೌಡರ ಸಮೀಪ ಸಂಬಂಧಿಯಾಗಿದ್ದ ಚೆನ್ನಪ್ಪಗೌಡ ಎಂಬವನ ಮನೆತನದವರಿಗೆ ಬಂಬರಿಗೆ ಮತ್ತು ಕಡೋಲಿಯ ಭಾಗವನ್ನು ಹಂಚಿಕೊಟ್ಟಂತೆಯೂ ಈ ಚೆನ್ನಪ್ಪಗೌಡನ ಸಂತತಿಯವರು ತಮ್ಮ ಭಾಗದ ದೇಶಗತಿಯನ್ನು ಪುನಃ ಎರಡು ಭಾಗಗಳನ್ನಾಗಿ ಮಾಡಿಕೊಂಡರೆಂತಲೂ ತಿಳಿದು ಬರುತ್ತದೆ. ಈ ಎರಡೂ ಭಾಗಗಳಿಗೆ ಕ್ರಮವಾಗಿ ಬಂಬರಿಗೆ ಮತ್ತು ಕಡೋಲಿಗಳು ಕೇಂದ್ರವಾಗಿದ್ದವು. ಬಂಬರಿಗೆ ದೇಶಗತಿಯಲ್ಲಿ ೮ ಹಳ್ಳಿಗಳು ಮತ್ತು ಕಡೋಲಿಯಲ್ಲಿ ೫ ಹಳ್ಳಿಗಳು ಸಮಾವೇಶಗೊಂಡುದಾಗಿ ತಿಳಿದುಬರುತ್ತದೆ.

ಮೂರನೆಯ ಖಾನಗೌಡ ದೇಸಾಯಿ ಇನ್ನೂ ಹಲವಾರು ಮಹತ್ವದ ಕಾರ್ಯಗಳನ್ನು ಕೈ ಕೊಂಡಿದ್ದನಲ್ಲದೆ ಈತ ವೀರಶೈವ ಮತದತ್ತ ವಿಶೇಷ ಒಲವು ತೋರಿಸಿದ, ಆ ಕಾಲಕ್ಕಾಗಲೇ ಈ ವಂಶದ ಹಲವಾರು ವಿರಶೈವರಾಗಿದ್ದರೂ ಇನ್ನೂ ಕೆಲವು ಮನೆತನಗಳು ಜೈನರಾಗಿಯೇ ಮುಂದುವರಿದಂತೆ ಕಂಡು ಬರುತ್ತದೆ. ಖಾನಗೌಡನ ಅಧಿಕಾರಾವಧಿಯಲ್ಲಿ ಇವರ ಬಹಳಷ್ಟು ಮನೆತನಗಳು ವೀರಶೈವ ಮತಕ್ಕೆ ಪರಿವರ್ತಿತವಾದವು. ಮೇಲೆ ಹೇಳಿದ ಸಿದ್ದೇಶ್ವರ ದೇವಾಲಯದ ಸವೀಪದಲ್ಲಿದ್ದ ಪ್ರಾಚೀನವಾದ ಬಸದಿಯೊಂದನ್ನು ಈ ಖಾನಗೌಡನೇ ಒಡೆದು ಹಾಕಿದನೆಂದು ಸ್ಥಳೀಯರು ಹೇಳುತ್ತಾರೆ. ಈ ಕಾಲಾವಧಿಯಲ್ಲಿ ಹಾಲಗಿ. ನಾವಗಿ ಮುಂತಾದ ಕೆಲವು ಮನೆತನಗಳನ್ನು ಹೊರತುಪಡಿಸಿ ಉಳಿದೆಲ್ಲ ದೇಸಾಯಿ-ಗೌಡರು ವೀರಶೈವರಾಗಿ ಪರಿವರ್ತನಗೊಂಡರು. ತಮ್ಮ ದೇಶಗತಿಯ ಹಲವಾರು ಊರುಗಳಲ್ಲಿ ಶೈವ ದೇವಾಲಯಗಳನ್ನೂ ಮಠಗಳನ್ನೂ, ಸ್ಥಾಪಿಸಿಕೊಂಡರು. ಕಾಗತಿಯಲ್ಲಿದ್ದ ಪಟ್ಟದದೇವರ ಹಿರೇಮಠ ಈ ಖಾನಗೌಡನ ಕಾಲದಲ್ಲಿಯೇ ಅಸ್ತಿತ್ವಕ್ಕೆ ಬಂತೆಂದು ಊಹಿಸಬಹುದು. ತಮ್ಮ ಕುಲದೇವರೆಂದು ಭಕ್ತಿ ಗೌರವಗಳಿಗೆ ಪಾತ್ರವಾಗಿದ್ದ ಕಾಗತಿಯ ಸಿದ್ಧೇಶ್ವರ ದೇವಾಲಯವನ್ನು ಇವನು ಜಿರ್ಣೋದ್ಧಾರಗೊಳಿಸಿದನು. ಕಂಗ್ರಾಳಿಯಲ್ಲಿನ ಕಲ್ಮೇಶ್ವರ ದೇವಾಲಯ ಮತ್ತು ಅಂಥ ಇತರ ಹಲವಾರು ದೇವಾಲಯಗಳಿಗೆ ದತ್ತಿಗಳನ್ನೀಯಲಾಯಿತು. ಸ್ವತಃ ಖಾನಗೌಡ ಮತ್ತು ಧೂಳಪ್ಪ ಗೌಡರು ಕೂಡಿಕೊಂಡು ಈಗಲೂ ಕಾಗತಿಯಲ್ಲಿರುವ ಚಿಕ್ಕ ಕೋಟೆಯನ್ನು ಪುನರ್ನಿರ್ಮಾಣಗೊಳಿಸಿದ್ದಾಗಿ ತಿಳಿದು ಬರುತ್ತದೆ.

ಹೀಗೆ ತುಂಬ ಚಟುವಟಿಕೆಯಿಂದ ಕೂಡಿದ ಖಾನಗೌಡ ದೇಸಾಯಿಯ ಜೀವನದಲ್ಲಿ ಇನ್ನೊಂದು ಅನೀಕ್ಷಿತ ಘಟನೆ ನಡೆದು ಹೋಯಿತು. ಖಾನಗೌಡ ನಿರುಪದ್ರವಿ ಯಾದ ವ್ಯಕ್ತಿಯಲ್ಲವೆಂದೂ ಪಟವರ್ಧನರ ಸಂಸ್ಥಾನದ ಇತರ ಪ್ರದೇಶಗಳಲ್ಲಿ ಆತ ಅರಾಜಕತೆ ಹಬ್ಬಿಸುತ್ತಿದ್ದಾನೆಂದೂ ಭಾವಿಸಿ ಪಟವರ್ಧನರು ಈತನನ್ನು ಹಿಡಿದು ತರಿಸಿ ಸೆರೆಮನೆಗೆ ಹಾಕಿದರು. ಆದರೆ ಆತನ ಸತ್ವಶಾಲಿಯಾದ ವ್ಯಕ್ತಿತ್ವನ್ನೂ ಕೆಚ್ಚನ್ನೂ ಮನಗಂಡು ತಮ್ಮ ಅಂಗರಕ್ಷಕನೆಂದು ನೇಮಿಸಿಕೊಂಡು ಗೌರವಿಸಿದರು. ಖಾನಗೌಡ ಈ ರೀತಿ ಗೌರವಪೂರ್ವಕ ಕಾಗತಿಗೆ ಮರಳಿ ಬಂದು ಉಳಿದ ದಿನಗಳನ್ನು ದೇಶಗತಿಯ ಉನ್ನತಿಗಾಗಿ ಸವೆಸಿದರು. ಕಾಗತಿ ಸಿದ್ಧೇಶ್ವರ ದೇವಾಲಯದ ಆವರಣದಲ್ಲಿ ತನಗಾಗಿ ದೊಡ್ಡದೊಂದು ಸಮಾಧಿಯನ್ನು ತಾನೆ ಕಟ್ಟಿಸಿದನು. ಮರಣಾನಂತರ ಆತನ ಇಚ್ಛೆಯಂತೆ ಆ ಸಮಾಧಿಯಲ್ಲಿಯೇ ಆತನನ್ನು ಹೂಳಲಾಯಿತು. ಪ್ರಸ್ತುತ ಸಮಾಧಿ ಈಗಲೂ ಸುಸ್ಥಿತಿಯಲ್ಲಿದೆ.

ಧೂಳಪ್ಪಗೌಡ-ಪದ್ಮಾವತಿಯರಿಗೆ ಒಬ್ಬಳೇ ಮಗಳಾದ ಕಿತ್ತೂರಿನ ರಾಣಿ ಚೆನ್ನಮ್ಮ ಹುಟ್ಟಿದ ವಾಡೆ ಮೊನ್ನೆ ಮೊನ್ನೆಯ ವರೆಗೂ ಕಾಗತಿಯಲ್ಲಿತ್ತು. ಇತ್ತೀಚೆಗೆ ಅದರ ಕಿಟಕಿ ಬಾಗಿಲುಗಳನ್ನು ಕಿತ್ತು ಹಾಕಿ ಅದನ್ನು ಹಾಳುಗೆಡವಲಾಗಿದೆ. ಚೆನ್ನಮ್ಮನ ವಂಶಸ್ಥರಿಲ್ಲದೆ ಅವಳ ಸಮೀಪದ ಸಂಬಂಧಿಕರು ಅವಳ ಮನೆತನದ ಆಸ್ತಿಯನ್ನು ಹರಾಜಿನಲ್ಲಿ ಮಾರಿಕೊಂಡು ಹೋದರಂತೆ. ಅದನ್ನು ಕೂಡ ಖಾನಗೌಡರ ಮನೆಯವರೇ ಖರೀದಿಸಿದರೆಂದು ಹೇಳುತ್ತಾರೆ.

ಸದ್ಯ ೩ನೆಯ ಖಾನಗೌಡನ ಮೊಮ್ಮಗನಾದ ೪ನೆಯ ಖಾನಗೌಡ ಮತ್ತು ಅವನ ತಮ್ಮನಾದ ಶಂಕರಗೌಡರ ಮೆತನದವರು ಈ ದೇಶಗತಿಯ ಬಹುಪಾಲು ಆಸ್ತಿಗೆ ಒಡೆಯರಾಗಿದ್ದಾರೆ. ದೇಶಗತಿಯ ಬಹಳಷ್ಟು ಜಮೀನುಗಳು ರೈತರ ಕೈಗೆ ಹೋಗಿವೆ. ದೇಸಾಯಿ ಮನೆತನದವರು ಹಲವಾರು ಶಾಖೆಗಳಾಗಿ ಬಹಳಷ್ಟು ಮನೆತನದವರು ಈಗಲೂ ಕಾಗತಿಯಲ್ಲಿದ್ದಾರೆ. ಇನ್ನೂ ಕೆಲವರು ತಮ್ಮ ಸಂಬಂಧಿಕರಾದ ಗೋವೆಯ ಬಾಂದಿವಾಡೆ, ಕೊಲ್ಲಾಪುರ ಜಿಲ್ಲೆಯ ಬಡಗಾಂವಿ, ಧಾರವಾಡ ಜಿಲ್ಲೆಯ ಸಾತಗಿರಿ -ಇಟಗಿ ಮುಂತಾದೆಡೆಗಳಲ್ಲಿ ಹೋಗಿ ನೆಲೆಸಿದ್ದಾರೆ. ಜೊತೆಗೆ ಅಲಮೇಲ, ವಂಟಮುರಿ, ಚಚಡಿ, ತಲ್ಲೂರು, ಮಾಸ್ತಮರಡಿ, ಕಿತ್ತೂರು, ಅಜರಾ ಮುಂತಾದ ಊರುಗಳ ದೊಡ್ಡ ದೊಡ್ಡ ದೇಸಾಯರು -ಗೌಡರುಗಳ ಜೊತೆಗೂ ಸಂಬಂಧ ಹೊಂದಿದವರಾಗಿದ್ದಾರೆ. ಸದ್ಯ ಮರಿಮಾಮನಗೌಡನ ೧೭-೧೮ನೆಯ ತಲೆಮಾರುಗಳು ನಡೆಯುತ್ತಿವೆ. ಬಂಬರಗಿ-ಕಡೋಲಿಗಳ ಮನೆತನಗಳು ಪ್ರತ್ಯೇಕವಾಗಿವೆ.