ಎರಡನೆಯ ನಾಗವರ್ಮನ ವರ್ಧಮಾನ ಪುರಾಣವು ದೊರೆತು ಆತನ ಕಾಲ ವಿಷಯಕ ಅನಿಶ್ಚಿತತೆ ಈಗ ತೊಲಗಿದೆ. ಕ್ರಿ.ಶ. ೧೦೪೨ ರಲ್ಲಿ ಆತನು ತನ್ನ ವರ್ಧಮಾನ ಪುರಾಣವನ್ನು ಬರೆದು ಮುಗಿಸಿದನೆಂದು ತಿಳಿಯುವದರಿಂದ ಆತ ಪಂಪನಿಗಿಂತ ಪುರಾಣವನ್ನು ಬರೆದು ಮುಗಿಸಿದನೆಂದು ತಿಳಿಯುವದರಿಂದ ಆತ ಪಂಪನಿಗಿಂತ ಒಂದು ನೂರು ವರ್ಷಗಳ ತರುವಾಯದವನಾಗುತ್ತಾನೆ. ಆತನ ಭಾಷಾ ಭೂಷಣ ಮತ್ತು ಶಬ್ದಸ್ಮೃತಿಗಳಲ್ಲಿ ಪ್ರಥಮೆ, ದ್ವಿತೀಯ ಮತ್ತು ತೃತೀಯೆಗಳಿಗೆ ಕ್ರಮವಾಗಿ ಮ್‌, ಅಮ್‌, ಇಮ್‌ ಇವು ಪ್ರತ್ಯಗಳೆಂದು ಹೇಳಿದೆ

[1] ಈ ಪ್ರತ್ಯಯಗಳ ಅಂತ್ಯದಲ್ಲಿ ಸಾರ್ವತ್ರಿಕವಾಗಿ – ಅದರಲ್ಲೂ ದ್ವಿತೀಯ ಮತ್ತು ತೃತೀಯೆಗಳಲ್ಲಿ ಮಕಾರವನ್ನು ಹೇಳಿದ್ದು ತಪ್ಪು.ನೇಗಿನಹಾಳ ಪ್ರಬಂಧಗಳು ದ್ವಿತೀಯೆ ಮತ್ತು ತೃತೀಯೆಗಳಲ್ಲಿ. ನಕಾರವೇ ಇರಬೇಕಾದುದು ನ್ಯಾಯ. ಅಂತ್ಯ ಅನುನಾಸಿಕಗಳಾದ ಮಕಾರ-ನಕಾರಗಳನ್ನು ಬಿಂದುವಾಗಿ ಬರೆಯುತ್ತಿದ್ದುದರ ಫಲವಾಗಿ ಈ ರೀತಿ ಗೊಂದಲ ಉಂಟಾಗಿದೆ. ಆ ಕಾರಣವೆ ಈ ಮೂರು ವಿಭಕ್ತಿಗಳಲ್ಲಿ ಮಕಾರವನ್ನು ಪ್ರತ್ಯಯಾಂತವಾಗಿ ಹೇಳಿದೆ. ಇದೇ ರೀತಿ ಕನ್ನಡದ ಶಾಸನಗಳಲ್ಲೂ ಅಂತ್ಯದ ಮನಗಳೆರಡರ ಬದಲು ಬಿಂದುವನ್ನು ಬರೆಯುವುದು ಕವಿರಾಜಮಾರ್ಗ ಕಾಲಕ್ಕಾಗಲೇ ಪ್ರಚಲಿತವಾಗಿದ್ದುದು ಕಂಡು ಬರುತ್ತದೆ. ಶಾಸನಗಳಲ್ಲಿ ಬಹು ಪುರಾತನ ಕಾಲದಿಂದ ಪ್ರತ್ಯಯಾಂತವಾಗಿ ಬಿಂದುವನ್ನು ಪ್ರಯೋಗಿಸುವುದು ಕಂಡುಬರುವುದಾದರೂ ಕ್ರಿ.ಶ. ೯ನೆಯ ಶತಮಾನದಿಂದ ಈಚೆಗೆ ಮಾತ್ರ ಇದು ಸಾಮಾನ್ಯವಾಗಿದೆ.[2] ಅದರಾಚೆಗೆ ಪದಾಂತ ಮನಗಳನ್ನು-ವಿಶೇಷವಾಗಿ ನಕಾರವನ್ನು-ಬಿಂದುವಾಗಿ ಬರೆಯದೇ ನಕಾರವಾಗಿ ಬರೆಯುವುದೇ ವಿಶೇಷವಾಗಿತ್ತು. ಆದುದರಿಂದಲೆ ಎಂದು ಕಾಣುತ್ತದೆ – ಆರ್‌. ನರಸಿಂಹಾಚಾರ್ಯರು[3] ಈ ‘ಅಂತ್ಯ ನಕಾರ’ವನ್ನು ಪೂರ್ವದ ಹಳಗನ್ನಡದ ವೈಶಿಷ್ಟ್ಯವೆಂದು ಗಣಿಸಿದ್ದಾರೆ. ಅದರ ವಿವರವಾದ ಚರ್ಚೆ ಇಲ್ಲಿ ಅಪ್ರಸ್ತುತವಾದರೂ ಒಂದು ಮಾತನ್ನು ಸ್ಪಷ್ಟಪಡಿಸುವುದು ಅಗತ್ಯ. ಕ್ರಿ.ಶ. ೯ನೆಯ ಶತಮಾನದವರೆಗೆ, ತಮಿಳಿನಲ್ಲಿ ಇಂದೂ ಇರುವಂತೆ ಕನ್ನಡದಲ್ಲಿ ಕೂಡ ಅಂತ್ಯದಲ್ಲಿರಬೇಕಾದ ನಕಾರವನ್ನು (ದೋಷವಿಲ್ಲದಂತೆ) ಪ್ರಯೋಗಿಸುವುದು ಸಾಮಾನ್ಯವಾಗಿತ್ತು.

ಕವಿರಾಜಮಾರ್ಗ ಕಾಲಕ್ಕಾಗಲೇ ವರ್ಗೀಯ ವ್ಯಂಜನಗಳು ಪರದಲ್ಲಿದ್ದಾಗ ಅನುನಾಸಿಕಗಳನ್ನು ಆಯಾ ವರ್ಗ ಪಂಚಮಗಳನ್ನಾಗಿ ಬರೆಯುವುದು ಸಾಮಾನ್ಯ. ಎಂದರೆ ಈ ವ್ಯಂಜನಗಳು ಮುಂದಿನ ವರ್ಗೀಯ ವ್ಯಂಜನಗಳೊಡನೆ ಸಮರೂಪ ಧಾರಣೆಗೊಳ್ಳುವುದು ಆಗಲೇ ಸಂಪೂರ್ಣಗೊಂಡಿತ್ತು. ೯ನೆಯ ಶತಮಾನದ ಶಾಸನಗಳಲ್ಲಿ ಇಂಥ ಸಮರೂಪಧಾರಣೆ ವಿಶೇಷವಾಗಿದೆ.

ಉದಾ:

ಇಬ್ಬು[4] E-C-XVII ಚಿಕ್ಕಬಳ್ಳಾಪುರ. ೬೬
ಎಬ್ಬು I-A-XI ಪು. ೧೨೬
ಕೋಡುಙ್ಗಲ್‌ Ec-XVII ಚಿಕ್ಕಬಳ್ಳಾಪುರ ೬೬
ಪೊಮ್ಬುೞ್ಚ ೩A E-I IX ಪು. ೨೨

ಸಮರೂಪಗೊಳ್ಳುವ ಕ್ರಿಯೆ ಶಾಸನಗಳಲ್ಲಿ ಏಳನೆಯ ಶತಮಾನದಿಂದಲೇ ಕಾಣಬಹುದಾದರೂ[5] ಮುಂದಿನ ಎಂಟನೆಯ ಶತಮಾನಕ್ಕೆ ಮತ್ತೂ ಹೆಚ್ಚಿ ಒಂಬತ್ತನೆಯ ಶತಮಾನಕ್ಕೆ ಸಾಮಾನ್ಯವಾದ ರೂಢಿಯಾಗಿತ್ತೆಂದು, ಹೇಳಬಹುದು. ಒಂಬತ್ತನೆಯ ಶತಮಾನದಲ್ಲಿ ಸಮರೂಪಧಾರಣೆಯ ಜತೆಗೆ ಸಮರೂಪಗೊಳ್ಳದಿದ್ದ ಪ್ರಯೋಗಗಳು ಅಲ್ಲಲ್ಲಿ ಕಂಡುಬರುವದಾದರೂ ಬಹುಕ್ವಚಿತ್ತಾಗಿವೆ. ವಡ್ಡಾರಾಧನೆಯಲ್ಲಿ ಉಣ್ಬ, ತಿನ್ಬ, ಎನ್ಬ ಇತ್ಯಾದಿ ರೂಪಗಳು ಅಧಿಕಪ್ರಮಾಣದಲ್ಲಿ ಕಂಡು ಬರುತ್ತವೆ. ಇಂಥವು ಕವಿರಾಜಮಾರ್ಗ, ಪಂಪಭಾರತ ಮತ್ತು ಆದಿ ಪುರಾಣಗಳಲ್ಲಿ ಕಂಡು ಬರುವವಾದರೂ ವಡ್ಡಾರಾಧನೆಯ ಹೋಲಿಕೆಯಲ್ಲಿ ಕಡಿಮೆ ಪ್ರಮಾಣದಲ್ಲಿವೆ. ಆದುದರಿಂದ ವಡ್ಡಾರಾಧನೆಯ ಇಂಥ ಪ್ರಯೋಗಗಳು ಒಂಬತ್ತನೆಯ ಶತಮಾನದ ಶಾಸನಗಳು ಮತ್ತು ಕವಿರಾಜಮಾರ್ಗಕ್ಕಿಂತ ತಕ್ಕಷ್ಟು ಪ್ರಾಚೀನವಾದವುಗಳೆಂದು ಹೇಳಬಹುದು.

ವಡ್ಡಾರಾಧನೆಯಲ್ಲಿ ‘ಆ ಮನೆಗೆವೋದನ್‌’ (ಪು. ೩೩-೧೧) ಮಲಯ ಸುಂದರನ್‌ (ಪು. ೩೭-೨೨), ಇದೇನ್‌ (ಪು. ೧೮-೬) ಸೋಮ ಶರ್ಮಭಟ್ಟನ್‌ (ಪು ೨೩-೧೨) ಈ ಮುಂತಾದ ವಿಶಿಷ್ಟ ಪ್ರಯೋಗಗಳು ಗಣನೀಯ ಸಂಖ್ಯೆಲ್ಲಿವೆ. ಇದು ಹತ್ತನೆಯ ಶತಮಾನದಲ್ಲಿ ಬಹು ಕ್ವಚಿತ್ತಾಗಿದ್ದ ಪದ್ಧತಿ. [6] ಪ್ರಾಚೀನ ಶಾಸನಗಳಲ್ಲಿ ಅಂತ್ಯ ನಕಾರವೇ ಸಾಮಾನ್ಯವಾಗಿದ್ದು ಈ ಶತಮಾನದಲ್ಲಿ ಬಹು ಅಪರೂಪವಾಗಿ ಕಂಡುಬರುತ್ತದೆ. ಈಗಾಗಲೇ ಹೇಳಿರುವಂತೆ ಒಂಬತ್ತೆಯ ಶತಕದ ಹಿಂದೆ ಇದ್ದ ರೂಢಿ ಇದು.

ಹಲ್ಮಿಡಿ ಶಾಸನದಲ್ಲಿ ಪ್ರೇಮಾಲಯ ಸುತನ್ಗೆ, ವಿಜಅರಸನ್ಗೆ ಎಂಬ ಪ್ರಯೋಗಗಳಿವೆ. ಇಲ್ಲಿ ಚತುರ್ಥಿಯ ‘ಗೆ’ ಪರವಾದಾಗಲೂ ಹಿಂದಿನ ದಂತ್ಯ ಅನುನಾಸಿಕವು ಸಮರೂಪಗೊಳ್ಳದಿದ್ದ-ಎಂದರೆ ಅರಸಙ್ಗೆ (ಅಥವಾ ಅರಸಂಗೆ) ಎಂದು ಪರಿವರ್ತಿಸದ-ರೂಪ ಕಂಡುಬರುತ್ತವೆ. ಇದು ಪೂರ್ವದ ಹಳಗನ್ನಡದ ಪ್ರಮುಖ ಲಕ್ಷಣಗಳಲ್ಲಿ ಒಂದು. ಇಂತಹ ಅನುನಾಸಿಕವು ಸಮರೂಪಗೊಳ್ಳುವುದು ಏಳನೆಯ ಶತಮಾನದಲ್ಲಿ ಕಂಡುಬರುವುದಾದರೂ ಈ ಶತಮಾನದಲ್ಲಿ ಸಮರೂಪಗೊಳ್ಳದಿದ್ದ ರೂಪಗಳೇ ಅಧಿಕವಾಗಿವೆ. ಶಾಸನಗಳಲ್ಲಿ ಈ ಕ್ರಿಯೆ ಎಂಟನೆಯ ಶತಮಾನದಲ್ಲಿ ಪ್ರಬಲಿಸಿ ಒಂಬತ್ತನೆಯ ಶತಮಾನದಲ್ಲಿ ಪೂರ್ಣಗೊಂಡಿದೆ. ವಡ್ಡಾರಾಧನೆಯ ಹೊರತು ಕನ್ನಡದಲ್ಲಿ ಪ್ರಯೋಗಗಳು ಕಂಡುಬರುವುದಿಲ್ಲ. ವಡ್ಡಾರಾಧನೆಯಲ್ಲಿ ಮಾತ್ರ ಪಿಡಿಸೆನ್ಗುಂ (ಪು. ೭-೨೧) ಭಟ್ಟಾರರೆನ್ಗುಂ (ಪು. ೭-೨೨), ಇಂತೆನ್ಗುಂ (ಪು. ೨೨-೨೩), ಮುಂತಾದ ಹಲವು ಪ್ರಯೋಗಗಳು ಕಂಡು ಬಂದಿವೆ. ಇವು ಮೊದಲನೆಯದಾದ ಸುಕುಮಾರಸ್ವಾಮಿಯ ಕಥೆಯಲ್ಲಿಯೇ ವಿಶೇಷವಾಗಿವೆ. ಇತರತ್ರ ಕಡಿಮೆ ಸಂಖ್ಯೆಯಲ್ಲಿ ತೋರಿಬರುತ್ತಿವೆಯಾದರೂ ಮೊದಲಲ್ಲಿ ಇಂಥವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇದ್ದಿರಬೇಕು. ಹಾಗೂ ಮುಂದಿನ ಕಾಲದ ಪ್ರತಿಕಾರರಿಂದ ಅವು ತಿದ್ದಲ್ಪಟ್ಟಿರಬೇಕು. ನಾನು ಕಂಡಿರುವಂತೆ ಇಂತಹ ಪ್ರಯೋಗಗಳು ಕ್ರಿ.ಶ. ೮೧೦ ರ ಒಂದು ತಾಮ್ರ ಪಟದಲ್ಲಿಯವೇ ಕೊನೆಯವು.

ಉದಾ:

ಕಾದವನ್ಗೆ Ec XVII ಚಿಕ್ಕಬಳ್ಳಾಪುರ. ೬೬
ಕಿಡಿಪೊನ್ಗೆ Ec XVII ಚಿಕ್ಕಬಳ್ಳಾಪುರ. ೬೬

ಆದುದರಿಂದ ವಡ್ಡಾರಾಧನೆಯ ಮೇಲಿನ ಪ್ರಯೋಗಗಳು ನಿಸ್ಸಂಶಯವಾಗಿ ಅದರ ಪ್ರಾಚೀನತೆಯ ಕುರುಹೆಂದು ಹೇಳಬಹುದು.

ವಡ್ಡಾರಾಧನೆಯ ತುಂಬ ಅಖ್ಯಾತ ಪ್ರತ್ಯಯಗಳಾದ ಒನ್‌, ಒಳ್‌,‌ ಒರ್, ಒಮ್‌ (೦) ಎಂಬವು ಪ್ರಯೋಗಗೊಂಡಿವೆ. ಈ ಸರಣಿಯಲ್ಲಿಯೇ ಸಮಾವೇಶಗೊಳ್ಳುವ ‘ಒಂದು’ ಎಂಬ ನಪುಂಸಕಲಿಂಗ ಸೂಚಿತ ಪ್ರತ್ಯಯ ಕಂಡು ಬರುವುದಿಲ್ಲ. ಅದೇ ರೀತಿ ಈ ಪ್ರತ್ಯಯಗಳಲ್ಲಿ ಓನ್‌, ಓಳ್‌ ಎಂಬಂಥ ದೀರ್ಘ ಸ್ವರಹಿತವಾದ ರೂಪಗಳು ಈಗ ಕಂಡುಬರುತ್ತಿಲ್ಲ. ಶಾಸನಗಳಿಂದ ಮಾತ್ರವೇ ಇಂತಹ ರೂಪಗಳು ಕನ್ನಡದಲ್ಲಿ ಇದ್ದುದು ನಮಗೆ ತಿಳಿದಿದೆ. ಇಂಥವು ಒಂಬತ್ತನೆಯ ಶತಮಾನಕ್ಕಾಗಲೇ ಬಹುಕಡಿಮೆ ಪ್ರಮಾಣದಲ್ಲಿ ತೋರಿಬರುತ್ತವೆ.

ಉದಾ:

ಕ್ರಿ.ಶ. ೯ನೆಯ ಶತಮಾನ
ಪಡೆದೋರ್‌ E.c-XVII    ಚಿಕ್ಕಬಳ್ಳಾಪುರ. ೧೦೯
ವಿಟ್ಟಾರ್‌ E.I. IV          ಪು. ೧೪೧
ಕೈಕೊಂಡಾನ್‌             ” ”
ಕೊಟ್ಟೋನ್‌ S. I. I XV. No. 6

ಹತ್ತನೆಯ ಶತಮಾನದಲ್ಲಂತೂ ಇಂಥವು ತೀರ ಅಪರೂಪವಾಗಿ ಈ ಶತಮಾನದ ಉತ್ತರಾರ್ಧದಿಂದ ಇವು ಪೂರ್ಣ ಲೋಪಿಸುತ್ತವೆ.

ಉದಾ: ೧೦ನೆಯ ಶತಮಾನ.

ಲೋಕಕ್ಕೆ ಹೋಹಾನ್‌ ಕ್ರಿ. ಶ. ಸು. ೯೧೦. E.c.-III, ಶ್ರೀರಂಗಪಟ್ಟಣ. ೧೩೪
ಅವುತವುರಂ ಬಿಡಿಸಿದೋರ್‌ ಕ್ರಿ.ಶ. ೯೧೨ E.c. VII ಶಿಕಾರಿಪುರ. ೨೧೯

ವಡ್ಡಾರಾಧನೆಯಲ್ಲಿ ಒಕಾರ ದೀರ್ಘ ಪ್ರಯೋಗಗಳು ಈಗ ಕಾಣಬರುವುದಿಲ್ಲವಾದರೂ ಅದರಲ್ಲಿ ಅಂಥವು ಇರಲೇ ಇಲ್ಲವೆಂದು ಹೇಳಲಾಗದು. ಕರ್ನಾಟಕದ ಪ್ರಾಚೀನ ಲಿಪಿ ವಿಧಾನದಲ್ಲಿ ಏ, ಓ ಗಳ ಪ್ರತ್ಯೇಕ ವ್ಯವಸ್ಥೆ ಇಲ್ಲದ್ದರಿಂದ ಅಂಥವು ಇಂದು ನಮಗೆ ಕಂಡುಬರುವುದು ದುಸ್ತರವಾಗಿದೆ. ವಡ್ಡಾರಾಧನೆಯ ಇಡೀ ಗ್ರಂಥದಲ್ಲಿ ದೀರ್ಘ ಸ್ವರವುಳ್ಳ ಅಖ್ಯಾತ ಪ್ರತ್ಯಯವು ಎರಡು ಕಡೆ ಮಾತ್ರ ಕಂಡು ಬಂದಿದೆ.

ಉದಾ:

(೧) ‘ಮತ್ತಂ ತಲೆ ನವಿರ್‌ ಬೆಳೆದುದುಮಂ ಕಂಡಾರ್-ಅಪ್ಪೊಡಂ ಪ್ರತಿ ವಂದನೆಯಂ ಕೊಟ್ಟುವುದಿಲ್ಲ’. (ಪು. ೯೦-೨೩ ಇದಕ್ಕೆ ಯಾವ ಪ್ರತಿಯಲ್ಲಿಯೂ ಪಾಠಾಂತರಗಳಿಲ್ಲ.

(೨) ಶಿವಕೋಟ್ಯಾಚಾರ್ಯರ್ ಪೇೞ್ದಾರ್‌ (ಪು. ೧೯೪-ಅಂತ್ಯ)

ಇದು ಗ್ರಂಥಾಂತ್ಯದಲ್ಲಿದ್ದು, ಖ ಮತ್ತು ಘ ಪ್ರತಿಗಳಲ್ಲಿಯೂ ಪಾಠಾಂತರಲ್ಲಿ ಹ್ರಸ್ವವಿದೆ.

ಇದು ಮುಂದಿನ ಕಾಲದ ಕನ್ನಡ ಸಾಹಿತ್ಯಕ್ಕೆ ತೀರ ಅಪರಿಚಿತವಾದುದು. ಕವಿರಾಜಮಾರ್ಗದಲ್ಲಾಗಲೀ ಪಂಪನಲ್ಲಾಗಲೀ ಇಂಥವು ಒಂದೂ ಕಂಡು ಬರುವದಿಲ್ಲ.

ಆದುದರಿಂದ ಈ ವಿಷಯದಲ್ಲಿ ಕವಿರಾಜಮಾರ್ಗಕಾರ ಮತ್ತು ಪಂಪ ಹೊಸ ಮಾರ್ಗವನ್ನೇ ತುಳಿದಿದ್ದಾರೆಂದು ಹೇಳಬಹುದು.

ಹಲ್ಮಿಡಿ ಶಾಸನಕಾಲದಿಂದಲೇ ಕನ್ನಡದಲ್ಲಿ ಪದಾದಿ ವಕಾರವು ಬಕಾರವಾಗಿ ಪರಿವರ್ತಿಸತೊಡಗುತ್ತದೆ.[7] ಜತೆಯಲ್ಲಿಯೇ ವಕಾರವುಳ್ಳ ರೂಪಗಳೂ ಬಹು ದೀರ್ಘ ಕಾಲದವರೆಗೆ ಉಳಿದುಬರುತ್ತವೆ. ಕ್ರಿ.ಶ. ೭ನೆಯ ಶತಮಾನದವರೆಗೆ ವಕಾರವು ಅಧಿಕವಾಗಿದ್ದರೆ, ೮ನೆಯ ಶತಕದಲ್ಲಿ ಬಕಾರವುಳ್ಳ ಉದಾಹರಣೆಗಳು ಮೇಲುಗೈ ಪಡೆದಿವೆ. ಒಂಬತ್ತನೆಯ ಶತಮಾನದಲ್ಲಿ ವಕಾರವು ತೀರ ಕ್ಷೀಣಿಸಿದೆ. ಅಚ್ಚಗನ್ನಡ ಪದಗಳಲ್ಲಿ ಅದು ಉಳಿದಿಲ್ಲವೆಂದೇ ಹೇಳಬಹುದು. ಕ್ರಿ.ಶ. ೮೦೦ ರಿಂದ ೮೫೦ ರ ವರೆಗಿನ ಶಾಸನಗಳಲ್ಲಿ ‘ವಾಳೆೞೆಯನ್‌’ (E.I. IX ಪು. ೨೦) ವೆಸಗೆಯ್ದೊ (E.c. VII. ಶಿಕಾರಿಪುರ-೨೮೩) ವೆದೆಮಣ್ಣುಂ (M.A.R. ೧೯೨೦. ಪು ೨೪) ಮುಂತಾದ ಕೆಲವು ಪ್ರಯೋಗಗಳು ಮಾತ್ರ ಕಂಡುಬರುತ್ತವೆ. ಗ್ರಾಂಥಿಕ ಕನ್ನಡದಲ್ಲಿ ಅಪರಿವರ್ತಿತ ವಕಾರವು ಎಲ್ಲಿಯೂ ತೋರಿಬಂದಿಲ್ಲ. ವಡ್ಡಾರಾಧನೆಯಲ್ಲಿ ಮಾತ್ರ ಒಂದೆರಡು ಕಡೆ ಅಪರಿವರ್ತಿತ ವಕಾರವು ಉಳಿದಿರುವಂತೆ ಕಾಣುತ್ತದೆ.

ಉದಾ:

೧) ಮಗಳೆ ಎಮ್ಮ ಕೊಟ್ಟ ಬ್ರತಂಗಳಂ ನಿಮ್ಮಮ್ಮಂ ಬಿಸಡಲ್ವೇೞ್ದನಪ್ಪೊಡೆ ಪೆಱವುೞಿ ವಿಸುಡದಿರ್‌ ಎಮ್ಮಲ್ಲಿಗೆ ವಂದೆಮ್ಮ ಕೊಟ್ಟ ಬ್ರತಂಗಳನೆಮಗೊಪ್ಪಿಸುವುದು………(ಪು. ೧೩-೫)

೨) ಬಾಲವದ್ದೆಯಂ ಕೂಸಂ ಸಿಸುವನವ್ಯಕ್ತನಂ ವಿಸಟ್ಟೆಂತು ತಪಂಬಟ್ಟೆ ಪಾಪಕರ್ಮ ……..(ಪು. ೪೫-೧೦)

ಮೇಲಿನ ಉದಾಹರಣೆಗಳಲ್ಲಿ ವಾಕ್ಯವೇಷ್ಟನ ಸಂಧಿಯಿಲ್ಲದಿರುವುದು ಸ್ಪಷ್ಟವಿರುವುದರಿಂದ ಇಲ್ಲಿಯ ವಕಾರವು ಆದೇಶದ್ದಂತೂ ಅಲ್ಲ. ಮೂಲದಲ್ಲಿ ವಡ್ಡಾರಾಧನೆಯು ಇಂಥ ವಕಾರವುಳ್ಳ ಪ್ರಯೋಗಗಳನ್ನು ಹೆಚ್ಚು ಹೆಚ್ಚಾಗಿ ಹೊಂದಿರಬೇಕೆಂದು ತೋರುತ್ತದೆ. ಇದೂ ಕೂಡ ಕವಿರಾಜಮಾರ್ಗ ಪೂರ್ವದ ಸ್ಥಿತಿಯಾಗಿದೆ.

ಡಾ. ಡಿ.ಎಲ್‌.ಎನ್‌. ಮತ್ತು ಡಾ. ಎ.ಎನ್‌. ಉಪಾಧ್ಯೆಯವರು ವಡ್ಡಾರಾಧನೆಯ ಕಾಲ ಚರ್ಚೆಯಲ್ಲಿ ಪ>ಹ ಪ್ರಕ್ರಿಯೆಯನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಈ ಗ್ರಂಥದಲ್ಲಿ ಎಲ್ಲಿಯೂ ಪ>ಹ ಆದಂತಿಲ್ಲವೆಂಬ ಬಗ್ಗೆ ಇಬ್ಬರೂ ಸಹಮತ ವ್ಯಕ್ತಪಡಿಸಿದ್ದಾರೆ. ಡಾ. ಡಿ.ಎಲ್‌.ಎನ್. ಪಕಾರವು ಕ್ರಿ.ಶ. ಹತ್ತನೆಯ ಶತಮಾನಕ್ಕಾಗಲೇ ಕರ್ನಾಟಕದ ತುಂಬೆಲ್ಲ ಹಕಾರವಾಗತೊಡಗಿತ್ತೆಂಬ ಡಾ. ಎ.ಎನ್‌. ನರಸಿಂಹಯ್ಯನವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು[8] ವಡ್ಡಾರಾಧನೆಯ ಕಾಲ ನಿರ್ಣಯದಲ್ಲಿ ತಮ್ಮ ಅಭಿಪ್ರಾಯವನ್ನು ರೂಪಿಸಿಕೊಂಡಿದ್ದಾರೆ. ಜತೆಗೆ ಪ>ಹ ಆದ ಕೆಲವು ಪ್ರಾಚೀನ ಪ್ರಯೋಗಗಳನ್ನು ಶಾಸನಗಳಿಂದ ಎತ್ತಿಕೊಟ್ಟಿದ್ದಾರೆ. ಅವುಗಳಲ್ಲಿ ಕ್ರಿ.ಶ. ೬೮೩ರ ಲಕ್ಷ್ಮೇಶ್ವರದ ತಾಮ್ರ ಶಾಸನವೊಂದರಿಂದ ಎತ್ತಿದ ‘ಹಡಗಲೆ’ ಎಂಬ ಪ್ರಯೋಗವು ಅತೀ ಪ್ರಾಚೀನವಾದುದಾಗಿದೆ. [9] ಇದರಿಂದ ಪದಾದಿಯ ಪ>ಹ ಆಗಿ ಪರಿವರ್ತನೆಗೊಳ್ಳತೊಡಗಿದ್ದು ಅಷ್ಟು ಪ್ರಾಚೀನ ಕಾಲದಿಂದಲೇ ಎಂಬ ಅಭಿಪ್ರಾಯ ವಿವಕ್ಷಿತವಾಗುತ್ತದೆ. ಆದರೆ ಇದು ಸಮಂಜಸವಲ್ಲ. ಲಕ್ಷ್ಮೇಶ್ವರದ ಆ ಶಾಸನದಲ್ಲಿ ಅದರ ಕಾಲ ಪ್ರಾಚೀನವೆಂದಿದ್ದರೂ ಅದರ ಲಿಪಿ ಹತ್ತು-ಹನ್ನೊಂದನೆಯ ಶತಮಾನದ್ದಾಗಿದೆ. ಈ ಸಂಗತಿಯನ್ನು ಡಾ || ಡಿ.ಎಲ್‌. ಎನ್‌. ಗಮನಿಸಿಲ್ಲ. ನನ್ನ ಪಿಎಚ್‌.ಡಿ. ಮಹಾ ಪ್ರಬಂಧ ‘ಪ್ರಾಚೀನ’ ಕನ್ನಡ ಶಾಸನಗಳ ಭಾಷಿಕ ಮತ್ತು ಸಾಹಿತ್ಯಿಕ ಅಧ್ಯಯನ’ದಲ್ಲಿ ಪ>ಹ ಪರಿವರ್ತನೆಯ ಎಲ್ಲ ಮುಖಗಳನ್ನು ಕುರಿತು ಚರ್ಚಿಸಿದ್ದೇನೆ. ಇಲ್ಲಿ ಪ್ರಸ್ತುತಕ್ಕೆ ಅವಶ್ಯಕವೆನಿಸುವ ಕೆಲವು ಸಂಗತಿಗಳನ್ನು ಮಾತ್ರ ನೋಡಬಹುದು. ಪ>ಹ ಪರಿವರ್ತನೆಯ ಸ್ಪಷ್ಟವಾದ ಪ್ರಥಮ ಪ್ರಯೋಗ ಕಂಡುಬರುವುದು ‘ಬೆಳ್ಹೊಡೆ’ ಎಂಬ ಗ್ರಾಮ ವಾಚಕದಲ್ಲಿ. ಈ ಪ್ರಯೋಗವುಳ್ಳ ಶಾಸನದ ಕಾಲ ಕ್ರಿ.ಶ. ೭೯೪-೮೧೪ರ ಮಧ್ಯೆ.[10] ಮುಂದಿನ ಒಂಬತ್ತನೆಯ ಶತಮಾನದ ಅಂತ್ಯದವರೆಗೆ (ಕರಾವಳಿ ಪ್ರದೇಶವನ್ನು ಹೊರತು ಪಡಿಸಿ) ಕರ್ನಾಟಕದ ತುಂಬೆಲ್ಲ ಪ>ಹ ಆದ ಪ್ರಯೋಗಗಳು ತೋರಿಬಂದಿವೆ.

ಕವಿರಾಜಮಾರ್ಗದಲ್ಲಿ ಪ>ಹ ಆದುದು ವಿಶೇಷ ಕಂಡುಬರುವುದಿಲ್ಲವಾದರೂ ಅದರ ಶ್ರುತಿದುಷ್ಟ ಪ್ರಯೋಗದಲ್ಲಿ ಹಕಾರ ಕಂಡುಬರುತ್ತದೆ.[11] ಆ ಪದ್ಯಕ್ಕೆ ಕವಿ ರಾಜಮಾರ್ಗದ ಬೇರೆ ಬೇರೆ ಪ್ರತಿಗಳಲ್ಲಿ ಪಾಠಾಂತರಗಳಿವೆಯಾದರೂ ಅವುಗಳಲ್ಲೆಲ್ಲ ಹಕಾರವು ಇದ್ದೇ ಇದೆ. ಪಂಪಭಾರತದ ೧-೧೨ರಲ್ಲಿ ‘ಬರೆಹಕಾರರ ಕೈಗಳ ಕೇಡು’ ಎಂಬ ಪ್ರಯೋಗವಿದೆ. ಪಂಪಭಾರತದ ಮೂರನೆಯ ಮುದ್ರಣ (೧೯೬೯)ದಲ್ಲಿ ಇಲ್ಲಿಯ ಹಕಾರವನ್ನು ಅಡಿ ಟಿಪ್ಪಣಿಗೆ ಸೇರಿಸಿ ಪಕಾರವನ್ನು ಊಹಾ ಪಾಠವಾಗಿ ಕೊಡಲಾಗಿದೆ. ಆದರೆ ಪಂಪಭಾರತದ ಎಲ್ಲ ಪ್ರತಿಗಳಲ್ಲಿ, ಹಕಾರವೇ ಇದೆ. ಮುಂದೆ ೯-೧೦೩ ‘ಸಡಹುಡನಪ್ಪ’ ಎಂಬ ಪ್ರಯೋಗವಿದೆ. ಇಲ್ಲಿಯ ‘ಹು’ ಅಕ್ಷರಕ್ಕೆ ಬದಲು ‘ಪು’ ಇದ್ದುದಕ್ಕೆ ಬೇರೆ ಕಾವ್ಯಗಳಲ್ಲಿ ಪ್ರಯೋಗಗಳು ದೊರೆಯುತ್ತವೆ.[12] ಇದರಿಂದ ಕವಿರಾಜಮಾರ್ಗ ಕಾಲಕ್ಕಾಗಲೇ ಈ ಪರಿವರ್ತನೆ ಆಡು ಭಾಷೆಯಲ್ಲಿ ರೂಢವಾಗಿದ್ದು ಪಂಪನ ಕಾಲದಷ್ಟೊತ್ತಿಗೆ ಸಾಹಿತ್ಯಿಕ ಭಾಷೆಗೂ ಅದು ಪ್ರವೇಶಪಡೆದಿತ್ತೆಂದು ಹೇಳಬಹುದು. ಆದುದರಿಂದ ಪ>ಹ ಪರಿವರ್ತನೆಯನ್ನು ಕಾಲ ನಿರ್ಧಾರಕ ಅಂಶವೆಂದು ಪರಿಗಣಿಸಿದರೆ ವಡ್ಡಾರಾಧನೆಯನ್ನು ಕವಿರಾಜಮಾರ್ಗ ಪೂರ್ವದ ಗ್ರಂಥವೆಂದು ಹೇಳಬೇಕಾಗುತ್ತದೆ.

ಮೂಲ ದಕ್ಷಿಣ ದ್ರಾವಿಡ ತಮಿಳು ಮತ್ತು ಮೂಲ ಕನ್ನಡದಲ್ಲಿ ತೊಱು, ಕೊಱೆಮ ಪೊಗು, ಕೊಡು, ತೊಡು, ಒಗು, ಕೆವಿ, (ತೆ) ಡಿ, ಗೆ, ಕೆ ಱು, ಎಸು, ಕೆಸು, ವೆಸು (ವೆಸಿ), ಕೆಡು ಮುಂತಾಗಿ ಶಬ್ದ ರೂಪಗಳು ಪ್ರಚಲಿತವಿದ್ದವು. ಕನ್ನಡದಲ್ಲಿ ಕ್ರಿ.ಶ. ಏಳನೆಯ ಶತಮಾನದ ಕೊನೆ ಅಥವಾ ಎಂಟನೆಯ ಶತಮಾನದ ಆದಿಯಿಂದ ಇವುಗಳ ಪ್ರಥಮ ಸ್ವರವು ಮಧ್ಯವಿದ್ದುದು ಉಚ್ಚವಾಗಿ ಪರಿವರ್ತಿಸತೊಡಗಿತು.[13] ಎಂದರೆ ಇವು ಕ್ರಮವಾಗಿ ತುಱು, ಕುಱೆ, ಪುಗು, ಕುಡು, ತುಡು, ಉಗು, ಕಿವಿ, ಸಿಡಿ, ಗಿಱು, ಇಸು, ತಿಳಿ, ಕಿಸು, ಬಿಸು (ಬಿಸಿ), ಕಿಡು, ಎಂದು ಪರಿವರ್ತಿತಗೊಳ್ಳ ತೊಡಗಿದವು. ದ್ವಿತೀಯ ಸ್ವರವು ಉಚ್ಚವಾಗಿರುವುದೇ ಇದಕ್ಕೆ ಕಾರಣ. ಕವಿರಾಜ ಮಾರ್ಗದಿಂದಾರಂಭಿಸಿ ಮುಂದಿನ ಕಾಲದ ಹಳಗನ್ನಡ ಕೃತಿಗಳಲ್ಲೆಲ್ಲ ಈ ಪರಿವರ್ತಿತ ರೂಪಗಳೇ ತೋರುತ್ತವೆ. ಹೀಗಿದ್ದರೂ ದ್ವಿತೀಯಾಕ್ಷರದಲ್ಲಿ ದ್ವಿತ್ವವೇರ್ಪಡುವ ಪ್ರಸಂಗವಿದ್ದರೆ ಕನ್ನಡ ಭಾಷೆಯ ಎಲ್ಲ ಅವಸ್ಥೆಗಳಲ್ಲಿ ಮೂಲದ ಸ್ವರವೇ ತೋರಿಬರುತ್ತದೆ. ಉದಾ. ಪೊಕ್ಕ್ –(ಹೊಕ್ಕ್), ಕೊಟ್ಟ್-ತೊಟ್ವ್, ಗೆತ್ತ, ಎಚ್ಚ್‌, ಕೆಚ್ಛ್, ಕೆಂಪು, ಬೆಚ್ಚ್‌, ಕೆಟ್ವ್‌-ಇತ್ಯಾದಿ. ಕವಿರಾಜಮಾರ್ಗ ಮತ್ತು ತದನಂತರದ ಕೃತಿಗಳಲ್ಲಿ ಪರಿವರ್ತಿತ ರೂಪಗಳೇ ಕಾಣಬರುತ್ತವೆ. ಶಾಸನಗಳಲ್ಲಿ ಈ ಸ್ವರ ಪರಿವರ್ತನೆ ಎಂಟು-ಒಂಬತ್ತನೆಯ ಶತಮಾನಗಳಲ್ಲಿ ಅತಿಶಯವಾಗಿದ್ದು ಹತ್ತನೆಯ ಶತಮಾನದಲ್ಲಿ ಈ ಕ್ರಿಯೆ ಪೂರ್ಣಗೊಳ್ಳುವ ಒಂದು ಹಂತ ಮುಗಿದುಹೋಗಿದೆ. ಆದುದರಿಂದ ಹತ್ತನೆಯ ಶತಮಾನದ ಪಂಪಭಾರತಾದಿ ಗ್ರಂಥಗಳಲ್ಲಿ ಪರಿವರ್ತನೆಗೊಳ್ಳದ ರೂಪಗಳು ಕಾಣಿಸಿಕೊಳ್ಳಲು ಅವಕಾಶವಿಲ್ಲ. ಅದೇರೀತಿ ವಡ್ಡಾರಾಧನೆಯಲ್ಲಿಯೂ ತುಡು, ಕಿಡು, ಪುಗು ಮುಂತಾದ ರೂಪಗಳೇ ವಿಶೇಷವಾಗಿವೆ. ಆದರೆ ಪುಟ ೪೬-೭ರಲ್ಲಿ ಪೆಱುಕು ಎಂಬ ಧಾತುವಿನ ಭೂತ ನ್ಯೂನ ರೂಪ ‘ಪೆಱುಕಿ’ ಎಂದು ಪ್ರಯೋಗಿಸಲ್ಪಟ್ಟಿದೆ. ಡಾ || ಡಿ.ಎಲ್‌. ಎನ್‌. ಇದರ ತಮಿಳು ರೂಪ ಪೆಱುಕ್ಕಿ, ಮಲೆಯಾಳಿ ರೂಪ ಪೆಱುಕ್ಕು ಎಂದಿರುವುದಾಗಿ ತಿಳಿಸಿದ್ದಾರೆ. (ಪು. ೨೧೮) ತೆಲುಗಿನಲ್ಲಿ ಇದು ಪೆಱುಕು, ಪೆರ್ಕು ಎಂದಿದೆ. ಎಂದರೆ ಇಲ್ಲಿ ಮೂಲದ ಮಧ್ಯ ಸ್ವರವೇ ಪ್ರಥಮಾಕ್ಷರದಲ್ಲಿದೆ. ವಡ್ಡಾರಾಧನೆ ಶಕ್ಯವಿರಲಿಲ್ಲ. ವಡ್ಡಾರಾಧನೆಯ ಚ ಛ ಪ್ರತಿಗಳಲ್ಲಿ ‘ಪಿಱುಕಿ’ ಎಂದು ಹಳಗನ್ನಡಕ್ಕೆ ಸರಿ ಹೊಂದುವ ರೂಪವೇ ಇದೆ. ಈ ರೂಪ ಅನಂತರ ಕಾಲದ್ದೆಂದು ಬೇರೆ ಹೇಳಬೇಕಾಗಿಲ್ಲ. ಇಲ್ಲಿ ಪ್ರಥಮ ಸ್ವರವು ಎಕಾರವಾಗಿರುವ ರೂಪವನ್ನು ಹತ್ತನೆಯ ಶತಮಾನದ ಅನಂತರದ ಲೇಖಕರು ಕಲ್ಪಿಸುವುದು ದುಸ್ತರವೇ ಸರಿ. ಹೊಸಗನ್ನಡದಲ್ಲಿ ‘ಹೆಕ್ಕು’[14] ಎಂಬ ಧಾತುವಿದ್ದು ಇದು ಪೆಱುಕುವಿನಿಂದಲೇ ಬಂದುದಾಗಿದೆ.

ಗೋವಿಂದ ಪೈ ಅವರು ತಮ್ಮ ‘ಮೂರು ಉಪನ್ಯಾಸಗಳು’ ಲೇಖನದಲ್ಲಿ ಇಱ್ದು, ಪೊಱ್ದುಗಳೆಂಬ ವಡ್ಡಾರಾಧನೆಯ ಪ್ರಯೋಗಗಳನ್ನು ಕುರಿತು ಚರ್ಚಿಸಿದ್ದಾರೆ. ಇವರೆಡರ ೞಕಾರವು ರೇಫೆಯ ಬದಲು ಬಂದುದು. ಶಾಸನಗಳಲ್ಲಿ ಇಂಥ ಪ್ರಯೋಗಗಳು ಏಳನೆಯ ಶತಮಾನದಲ್ಲಿ ಕಂಡುಬಂದಿವೆ. ಮತ್ತು ವಡ್ಡಾರಾಧನೆಯ ಹೊರತು ಬೇರಾವ ಕನ್ನಡ ಗ್ರಂಥದಲ್ಲೂ ಇಂಥವು ತೋರುತ್ತಿಲ್ಲ. ಈ ಮತ್ತು ಇಂಥ ಬೇರೆ ಕೆಲವು ಆಧಾರಗಳಿಂದ ಅವರು “ನನಗಾದರೋ ಕನ್ನಡ ವೊಡ್ಡಾರಾಧಣವು ಕ್ರಿ.ಶ. ೬ನೆಯ ಶತಮಾನಕ್ಕಿಂತ ಈಚೆಯದಲ್ಲವೆಂದು ತೋರುತ್ತದೆ” [15] ಎಂದು ನಿರ್ಣಯಿಸಿದ್ದಾರೆ.

ವಸ್ತುತಃ ಕನ್ನಡ ಶಾಸನಗಳಲ್ಲಿ ಬೇರೆ ವ್ಯಂಜನಗಳು ಪರದಲ್ಲಿದ್ದಾಗ ರಕಾರದ ಬದಲು ಱಕಾರ ತೋರುವುದು ಇವೆರಡೇ ಧಾತುಗಳಿಗೆ ಸೀಮಿತವಾಗಿಲ್ಲ. ಇತರ ಅನೇಕ ಪದಗಳಲ್ಲಿ ತೋರಿಬರುತ್ತದೆ.

ಉದಾ:

ಕಿಱುಯರಸಙ್ಗೆ ಒಕ್ಕಲ್ ಪೆೞ್ಚುಗೆ ಕ್ರಿ.ಶ. ೭ನೆಯ ಶ. M.A.R. ೧೯೦೮ ಪು. ೭
ಉೞ್ಚಿ[16]ಕೊಳ್ವ ಕ್ರಿ.ಶ. ೮ನೆಯ ಶ. E.C. viii ಸೊರಬ-೨೨
ಕವೞ್ತೆ[17]ಯಾನ್ವಿಟ್ಟಾರ್‌ ಕ್ರಿ.ಶ. K.I. vol-l. No. 4
ಬನವಾಸಿ ಪನ್ನಿೞ್ಚಾಸಿರಮನಾಳೆ ಕ್ರಿ.ಶ. E.-I.vi ಪು. ೨೫೩

ಕ್ರಿ.ಶ. ಏಳನೆಯ ಶತಮಾನದಷ್ಟು ಹಿಂದಿನಿಂದಲೇ ಪರದಲ್ಲಿ ಬೇರೆ ವ್ಯಂಜನಗಳಿದ್ದಾಗ ಱಕಾರವು ರೇಫೆಯಾಗಿ ಪರಿವರ್ತಿತವಾಗುತ್ತಿತ್ತು.

ಉದಾ:

ಏಱ್ನೂರ್ವ್ವರಂ ೭ನೆಯ ಶ. E.C.II. No. 166
ಅದರ್ಕ್ಕೆ ೭ನೆಯ ಶ. M.A.R. ೧೯೨೫, No. 106
ಮೂನೂರ್ವ್ವರು ೭ನೆಯ ಶ. E.C. vi-ಕೊಪ್ಪ-೧೪

ಕೆಲೆವೆಡೆಗೆಳಲ್ಲಿ ರೇಫೆಗೆ ಬದಲು ಱಕಾರ ಪ್ರಯೋಗಿಸಿದ್ದೂ ಉಂಟು.

ಇಱ್ದೊನಾನ್ ೭ನೆಯ ಶ. E.C.II. No. 26
ಎದಿಱ್ಚೆ ೮ನೆಯ ಶ. S.S.I. xx. No. 8

ಇದರಿಂದ ಪರದಲ್ಲಿ ವ್ಯಂಜನಗಳಿದ್ದಾಗ ರ, ಱ, ೞಗಳ ಉಚ್ಚಾರ ಆ ಕಾಲದಲ್ಲಿ ಒಂದೇ ತೆರನಾಗಿತ್ತೆಂದು ಹೇಳಬಹುದು. ಇದೇ ಕಾರಣಕ್ಕಾಗಿ ಗೊಂದಲವೇರ್ಪಟ್ಟು ಮುಂದೆ ೞಕಾರ ಲೋಪಕ್ಕೆ ದಾರಿಯಾಯಿತು. ಈ ಕಾರಣಗಳಿಂದಾಗಿ ಗೋವಿಂದ ಪೈಗಳ ಗ್ರಹಿಕೆ ತಪ್ಪೆಂದು ಕಂಡುಬರುತ್ತದೆ. ಇದೇ ರೀತಿ ಡಾ. ಎಂ. ಚಿದಾನಂದ ಮೂರ್ತಿಯವರು ಗ್ರಹಿಸಿಕೊಂಡಿರುವಂತೆ ಇದು (ರ>ಱ ಪರಿವರ್ತಿನೆ). Back-for-mation ಎಂಬ ಭಾಷಾ ಪ್ರಕ್ರಿಯೆಯ ಪ್ರಭಾವವೂ ಅಲ್ಲವೆಂಬುದು ಸ್ಪಷ್ಟ.[18]

ಶಾಸನಗಳಲ್ಲಿ ರಕಾರಕ್ಕೆ ಬದಲು ೞಕಾರ ಪ್ರಯೋಗಗೊಳ್ಳುವುದು ಹನ್ನೆರಡನೆಯ ಶತಮಾನದವರೆಗೂ ಮುಂದುವರಿದಿದೆ. ಉದಾ:-

ಇೞ್ದು E.I.xvii ಪು. ೧೯೬-೧೬ನೆಯ ಸಾಲು ಕ್ರಿ.ಶ. ೧೧೦೭

ಇನ್ನು ಗೋವಿಂದ ಪೈ ಅವರ ಅಭಿಪ್ರಾಯ, ಇಂಥ ಪ್ರಯೋಗಗಳಿರುವುದು ವಡ್ಡಾರಾಧನೆಯೊಂದರಲ್ಲಿ ಮಾತ್ರ ಎಂಬುದೂ ಅಷ್ಟೊಂದು ಸಮಂಜಸವಾದುದಲ್ಲ. ಪಂಪಭಾರತದ ೪-೬೮ರಲ್ಲಿಯ ‘ಪೆಟ್ಟುವೆ [ರ್ಚಿ] ಎಂಬುದಕ್ಕೆ ಎಲ್ಲ ಹಸ್ತಪ್ರತಿಗಳಲ್ಲಿ ಪೆಟ್ಟುವೆೞ್ಚಿ ಎಂದಿರುವುದು ಕಂಡುಬರುತ್ತದೆ. ಇಲ್ಲಿಯ ೞಕಾರವು ರೇಫೆಗೆ ಬದಲಾಗಿ ಬಂದುದು ಸ್ಪಷ್ಟ. ಆದುದರಿಂದ ಈ ರೀತಿಯ ೞಕಾರ ಪ್ರಯೋಗವು ಕ್ರಿ.ಶ. ಏಳನೆಯ ಶತಮಾನದಿಂದ ಕ್ರಿ.ಶ. ಹದಿನಾಲ್ಕು-ಹದಿನೈದನೆಯ ಶತಮಾನಗಳವರೆಗೂ ಕರ್ನಾಟಕದಲ್ಲಿ ಸಾಗಿಬಂದ ಪದ್ಧತಿಯಾಗಿತ್ತೆಂದು ಹೇಳಬಹುದು.[19] ಹಾಗೂ ಪೞ್ತಿ, ಎೞ್ತು, ಅೞ್ತಿ, ಈ ಕೆಲವು ಶಬ್ದಗಳು[20] ಈ ಪದ್ಧತಿಯ ಬಳುವಳಿಯಾಗಿವೆ. ಒಟ್ಟಿನಲ್ಲಿ ವಡ್ಡಾರಾಧನೆಯ ಕಾಲ ನಿರ್ಣಯಕ್ಕೆ ಇವುಗಳಿಂದಾಗುವ ಪ್ರಯೋಜನ ಸೀಮಿತವಾದುದೆಂದು ಹೇಳಬಹುದು.

ಹಳಗನ್ನಡದಲ್ಲಿ ಪಾಡು ಎಂದಿರುವ ರೂಪಕ್ಕೆ ಬದಲು ವಡ್ಡಾರಾಧನೆಯಲ್ಲಿ ಪಾಟು ಎಂಬ ರೂಪಪ್ರಯೋಗ ಕಂಡುಬರುತ್ತದೆ. ಉದಾ. ಪಾಟಮುಂ. (ಪು. ೫೫-೨) ಇದಕ್ಕೆ ಸಮನಾದ ತಮಿಳಿನ ರೂಪ ಪಾಟ್ಟಂ ಎಂಬುದು. ವಡ್ಡಾರಾಧನೆಯ ಪ್ರಯೋಗದಲ್ಲಿ ಏಕ ಪುರುಷ ವ್ಯಂಜನವಿದ್ದು ದ್ವಿತ್ವವಿಲ್ಲ. ಮೂಲತಃ ಕನ್ನಡದಲ್ಲೂ ಕೋಟ್ಟೆ. ತೋಟ್ಟಂ ಮುಂತಾಗಿ ದೀರ್ಘ ಸ್ವರಕ್ಕೆ ಪರದಲ್ಲಿ ಸಜಾತೀಯ ಪರುಷದ್ವಿತ್ವಗಳು ಇದ್ದವು. ಕನ್ನಡ ಶಾಸನಗಳಲ್ಲಿ ಇಂಥ ದ್ವಿತ್ವ ಪ್ರಯೋಗ ನನಗೆ ಕಂಡುಬಂದಿರುವಂತೆ, ರಾಷ್ಟ್ರಕೂಟ ಗೋವಿಂದನ ಕ್ರಿ.ಶ. ೮೦೪ರ (ಬ್ರಿಟಿಷ್‌ ಮ್ಯೂಜಿಯಂ) ತಾಮ್ರ ಶಾಸನದಲ್ಲಿಯದೇ ಕೊನೆಯದು.

ಉದಾ:

ರಾಮೇಶ್ವರ ಎಮ್ಬ ತೀರ್ಥದಾ ಮೊದಲೊಳ್ ಮೇಪ್ಪಿಕ್ಕಿ ಪೊರ (ರ) ದ ಪನ್ದಿಗಖನಿಱಿಯಲ್ ಬನ್ದಲ್ಲಿ……….

ಇಲ್ಲಿಯ ಮೇಪ್ಪು ಎಂಬುದು ಅನಂತರದ ಕನ್ನಡದಲ್ಲಿ (ಮೇಪ್ಪು>ಮೇಘ>)ಮೇವು ಎಂದಾಗಿದೆ. ಹಳಗನ್ನಡದ ಗ್ರಂಥ ರಾಶಿಯಲ್ಲಿ ಇಂಥ ದ್ವಿತ್ವ ಪ್ರಯೋಗ ಒಂದು ಇಲ್ಲ. ಅನಂತರದಲ್ಲಿ ಈ ದ್ವಿತ್ವಗಳು ಹಲವು ರೀತಿಯಾಗಿ ಬದಲಾಯಿಸಿವೆ.

ಪ್ರಸ್ತುತಕ್ಕೆ:

ಕಾಕ್ಕೆ > ಕಾಕೆ > ಕಾಗೆ
ಆಕ್ಕು > ಆಕು * > ಆಗು
ನಾಟ್ಟು > ನಾಟು > ನಾಡು

ಎಂಬ ಪರಿವರ್ತನೆಯನ್ನು ನೋಡಬಹುದು. ಇವುಗಳಂತೆ ಹಳಗನ್ನಡದಲ್ಲಿ ‘ಪಾಡು’ ಎಂಬ ರೂಪವಿರಬೇಕಾದುದು ಅಪೇಕ್ಷಣೀಯ. ಇತರತ್ರ ಇದೇ ರೂಪವಿದ್ದು ವಡ್ಡಾರಾಧನೆಯ ಮೇಲಿನ ಉದಾಹರಣೆಯಲ್ಲಿ ಮಾತ್ರ ಇನ್ನೂ ಹಳೆಯದಾದ ‘ಪಾಟು’ ಎಂಬ ರೂಪವಿದೆ. [21]

ಮಾವ ಎಂದು ತೋರುವ ಪದವು ವಡ್ಡಾರಾಧನೆಯಲ್ಲಿ ಮಾಮನ್‌ (ಪು. ೨೧-೯) ಎಂಬ ರೂಪದಲ್ಲಿವೆ. ಉದಾಃ ‘ಸುವರ್ಣ ದ್ವೀಪಕ್ಕೆ ವೋಗುತ್ತುಂ ಮಾಮಂಗೆಂದಂ’. ಪಂಪಭಾರತದಲ್ಲಿ ಇದು ಮಾವ ಎಂದೇ ಇದೆ. ಉದಾಃ ಜಯವಧು ಕೂರ್ತೊಸೆದಿರ್ಕ್ಕುಂ ಮಾವ ನಿಮ್ಮ ದಯೆಯಿಂದೆಮ್ಮಂ. (೧೨-೯೦) ಮಾಮ(ನ್), ಎಂದಿರುವ ರೂಪವು ೮ನೆಯ ಶತಮಾನದ ಅಂತ್ಯ ಅಥವಾ ೯ನೆಯ ಶತಮಾನದ ಆದಿಭಾಗಕ್ಕೆ ಸೇರಿದ ತಾಮ್ರ ಪಟವೊಂದರಲ್ಲಿ ಕಂಡುಬರುತ್ತದೆ.

ಉದಾ:

‘ಅವರಾ ಮಾಮಂಗಳ್ ವಿಜಯಶಕ್ತಿ ಅರಸ ಕೊಟ್ಟದು.’ M.A.R. ೧೯೨೦-p-೨೪, plate-XXI-B-I. ಇದು ಈ ರೂಪದಲ್ಲಿ ಬೇರಾವುದೇ ಕನ್ನಡ ಗ್ರಂಥದಲ್ಲಿ ಪ್ರಯೋಗಗೊಂಡಂತೆ ಕಾಣದು.

ಇನ್ನು ಪೂರ್ವದ ಹಳಗನ್ನಡದ ವೈಶಿಷ್ಟ್ಯಗಳಲ್ಲಿ ಒಂದಾದ ದೀರ್ಘ ಸ್ವರಕ್ಕೆ ಪರದ ದ್ವಿತ್ವದ ಉದಾಹರಣೆ ಸದ್ಯಕ್ಕೆ ವಡ್ಡಾರಾಧನೆಯಲ್ಲಿ ಒಂದೂ ಇಲ್ಲ. ಪು ೩೮-೨೪ರಲ್ಲಿ ‘ಸುರಟ’ ಎಂದಿರವುದಕ್ಕೆ ಬದಲಾಗಿ ಘ ಪ್ರತಿಯಲ್ಲಿ ‘ಸುರಾಟ್ಟ’ ಎಂದಿದೆ. ಇಲ್ಲಿ ಅಂಥ ದ್ವಿತ್ವವಿದೆಯಾದರೂ ಇದು ಸ್ವೀಕೃತಪದವಾದುದರಿಂದ ಪರಿಶೀಲನಾರ್ಹವಲ್ಲವೆಂದು ಹೇಳಬಹುದು.

ಇದೇ ರೀತಿ ಪೆಡಂಗೈಯುಡಿಯೆ ಕಟ್ಟಿ, ಕಲ್ನಿಲೆ, ಒಳ್ಳಿತ್ತು, ಮುಂತಾದ ಹಳೆಯ ಪ್ರಯೋಗಗಳು ಅಲ್ಲಲ್ಲಿ ಕಂಡುಬರುತ್ತವೆ. ದ್ವಿತೀಯೆಯ ಆನ್‌, ಷಷ್ಠಿಯ ಆ, ಸತ್ತಾರ್ತದ ಒಡೆಯ, ಆಖ್ಯಾತ ಪ್ರತ್ಯಯಗಳಲ್ಲಿಯ ಒಸ್ವರ, ಪ>ಹ ಪರಿವರ್ತನೆ ತೋರದಿರುವುದು, ವಿಶಿಷ್ಟವಾದ ಸಮುಚ್ಚಯ ವಿಧಾನ ಮೊದಲಾದ ಭಾಷಾ ವೈಲಕ್ಷಣ್ಯಗಳನ್ನು ಡಿ.ಎಲ್‌.ಎನ್‌. ಮುಂತಾದ ವಿದ್ವಾಂಸರು ಈಗಾಗಲೇ ಎತ್ತಿ ತೋರಿದ್ದಾರೆ. ಅವುಗಳ ಜತೆಗೆ ಮೇಲೆ ಚರ್ಚಿಸಿದ ವೈಶಿಷ್ಟ್ಯಗಳನ್ನು ಸೇರಿಸಿದರೆ ವಡ್ಡಾರಾಧನೆಯ ಭಾಷಾ ಶೈಲಿ ಎಂಥದಾಗಿರಬಹುದೆಂಬ ವಿಚಾರ ಸ್ಫುಟಗೊಳ್ಳುತ್ತದೆ. ಹಳೆಯ ರೂಪಗಳ ಪರಿಚಯುವುಳ್ಳ. ಲೇಖಕನೊಬ್ಬ ಎಷ್ಟೇ ಪಟ್ಟು ಹಿಡದು ಪ್ರಯೋಗಿಸುತ್ತಾನೆಂದು ತಿಳಿದರೂ ಮೇಲಿನ ಎಲ್ಲ ವೈಲಕ್ಷಣ್ಯಗಳನ್ನು-ಅದೂ ತದ್ವಿರುದ್ಧವಾದ ರೂಪಗಳೇ ಪ್ರಚಲಿತವಿರುವ ಕಾಲದಲ್ಲಿ-ಪ್ರಯೋಗಿಸುವುದು ಅಶಕ್ಯವೇ ಸರಿ. ಆದುದರಿಂದ ಮುಂದಿನ ಕೆಲವು ಸಾಧ್ಯತೆಗಳು ಉಂಟಾಗುತ್ತವೆ.

(೧) ವಡ್ಡಾರಾಧನೆಯ ಪೂರ್ವದ ಹಳಗನ್ನಡ ಕಾಲದ, ಕನಿಷ್ಠ ಪಕ್ಷ ಕವಿರಾಜಮಾರ್ಗ ಪೂರ್ವದ ರಚನೆಯಾಗಿರಬೇಕು. ಇದರ ರಚನಾ ಕಾಲ ಕ್ರಿ.ಶ. ಸುಮಾರು ೮೦೦ ಎಂದು ತಿಳಿದರೆ ಭಾಷಿಕವಾಗಿ ಅತ್ಯಂತ ಸಮಪರ್ಕಕವೆನಿಸುತ್ತದೆ. (೨) ಕ್ರಿ.ಶ. ೧೪-೧೫ನೆಯ ಶತಮಾನದವರೆಗೂ ಇಂಥ ಭಾಷಾಶೈಲಿಯುಳ್ಳ ಹಸ್ತಪ್ರತಿಗಳು ಉಪಲಬ್ಧವಾಗಿದ್ದವು. (೩) ಪಂಪನ ತರುವಾಯ ಈ ಭಾಷಾ ಶೈಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು. (೪) ಕವಿರಾಜಮಾರ್ಗಕಾರನು ಖಂಡಿಸಿರುವ ಮತ್ತು ಕೆಲಮಟ್ಟಿಗಾದರೂ ಪೂರ್ವದ ಹಳಗನ್ನಡವನ್ನು ಪ್ರತಿನಿಧಿಸುವ ದೇಸೀಶೈಲಿ ವಡ್ಡಾರಾಧನೆಯಲ್ಲಿ ಉಳಿದುಬಂದಿದೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಗುಣಭದ್ರಾಚಾರ್ಯಕೃತ ಮಹಾಪುರಾಣದ “ಆದೌಜನ್ಮಜರಾರೋಗೌ” ಎಂಬ ಶ್ಲೋಕವೇಷ್ಟನದ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಭಾ. ಭೂ. ಸೂ. ೩೯ ಮತ್ತು ಶಬ್ದಸ್ಮೃತಿ. ಸೂ. ೧೫

[2]ಉದಾ:

ಪಾರ್ವ್ವರುಮಂ ಕೊನ್ದೊಂ ಕ್ರಿ.ಶ. ೯೦೩ M A. R. ೧೯೧೦.ಪು. ೧೮ ನಂ, ೧
ಶ್ರೀಮತ್ವತ್ತಯ್ಯಂ                             “ S. I. I. IX No. 27
ಅಱೆದಾತಂ            “           “           “           ಮುಂ

[3] History of Kannada language. ಪು. ೧೮೩

[4]ಇವುಗಳ ಮೂಲ ರೂಪಗಳು ಕ್ರಮವಾಗಿ ಇನ್ಬು, ಪೊನ್ವುೞ್ಚ ಎಂದಿರಬೇಕು.

[5]ಎಮ್ಬಾ ಕೞನಿ ಸು. ಕ್ರಿ.ಶ. ೭೦೦ M.A.R. ೧೯೧೯ ಪು. ೨೫

ಕಿೞಯರಸಙ್ಗೆ                    “           ””          ೧೯೦೮ ಪು. ೭

[6]ಪಂಪಭಾರತದಲ್ಲಿ ಮೂಲತಃ ಎಲ್ಲೆಡೆ ಪದಾಂತ ನಕಾರವು ಸರಿಯಾಗಿರಬೇಕೆಂದು ತೋರುತ್ತದೆ. ಮುಂದಿನ ಕೆಲವು ಪ್ರಯೋಗಗಳನ್ನು ನೋಡಬಹುದು.

I. ಅದರ್ಕೆ ನೀನ್‌ ಮುಳಿವುದೇ ನೀನ್‌ ಪೇೞ್ವೋಡಾನ್‌ ಸಾಲೆನೇ -೨೨

II. ಎಮ್ಮನ್ವಯಕ್ಕೆ ನೀನ್‌ ತಣ್ಣಿದೆಯಾಗು ೫-೧೦೦೦ ವ

III. ಮುನ್‌ ಗೆಲ್ದ ೬-೭೬

IV. ತೋಳ ತೀನ್‌ ಕಿಡೆ ೧೦-೪೨

[7]ಉದಾ: ಬಾಳ್ಗೞ್ಚು ಸಾಲು-೧೨

[8] Grammar of the oldest kanarese Inscriptions P-2.

[9]ವ.ರಾ ಪೀಠಿಕೆ ಪು. XXVI

[10] I.A.IX ಪು. ೧೨೬.

[11]ಕ.ರಾ.ಮಾ. (ಸಂ. ಎಂ. ವಿ.ಸೀ.) ೧-೪೯

[12]ಪ್ರ.ಕ.೪೬-೧: ಪು.೧

[13]ಇಱೆದೊಳ್ಪ ಪ್ರಕಟಿಸಿದಾನ್‌ ಸು. ೭ ನೆಯ ಶ. S.I.I. XV No. ೨೭೬

ನಿಮಿಲೂರಾ ” E.C.II. No. ೯೭

[14]ತಮಿಳಿನಲ್ಲಿ ಕಂಡುಬರುವ ದ್ವಿತೀಯ ಸ್ವರವನ್ನು ಲೋಪಿಸಿ ದ್ವಿತ್ವಗೊಳಿಸಿಕೊಳುವುದು ಕನ್ನಡದಲ್ಲಿ ಕಂಡು ಬರುತ್ತದೆ.

ಎರುಮೈ ಎರ್ಮೆ > ಮ್ಮೆ
ಕೞುದೈ ಕೞ್ತಿ > ಕರ್ತೆ > ಕತ್ತೆ
ಅರುತ್ತಿ (ಆರ್ತಿ* >) ಅೞ್ತಿ > ಅರ್ತಿ
ಪರುತ್ತಿ (ಪರ್ತಿ*>) ಪೞ್ತಿ > ಪರ್ತಿ > ಪತ್ತಿ

 

[15]ಮೂರು ಉಪನ್ಯಾಸಗಳು (೧೯೬೦) ಪು. ೧೧೩-೧೧೪

[16]ತಮಿಳು: ‘ಉರಿ’

[17]ಇದರ ಮೂಲಧಾತು: ಕವರ್‌

[18]ಉಪಾಯನ ‘ಇೞ್ ಧಾತುವನ್ನು ಕುರಿತು’ ಲೇಖವು ಪು. ೧೦೯. (ಡಾ. ಮೂರ್ತಿ ಈ ಅಭಿಪ್ರಾಯವನ್ನು ತರುವಾಯ ಪರಿಷ್ಕರಿಸಿದ್ದಾರೆ)

[19]ಕೇಶಿರಾಜನು ೞಕಾರ ೞಕಾರಗಳನ್ನು ವ್ಯವಸ್ಥೆಗೊಳಿಸಲು ಪ್ರಯತ್ನಿಸಿದ್ದು ಪ್ರಸಿದ್ಧ ವಿಷಯ. ಶಮದ. ಸೂ. ೩೪ ರಲ್ಲಿ ವ್ಯಂಜನ ಪೂರ್ವ ೞಕಾರ-ರಕಾರಗಳ ಮಿಶ್ರಪ್ರಾಸವಿರುವ ಪ್ರಯೋಗ (೧) ವನ್ನು ಕಾಣಬಹುದು. ಕ್ರಿ.ಶ. ೮೯೮ರ ವರೆಗೂ ಜೀವಿಸಿದ್ದ ಗುಣಭದ್ರಾಚಾರ್ಯರು ತಿದ್ದಿದೆಂದು ಹೇಳಾದ ಕೃತಿಯಿಂದ ಅದು ಎತ್ತಿದ್ದಾಗಿದೆ. ಪ್ರಸ್ತುತ ಪದದಲ್ಲಿ ವ್ಯಂಜನವಿದ್ದಾಗಲೇ ಇದೆಲ್ಲ ಗೊಂದಲವೆಂಬುದನ್ನು ಇದು ಸಮರ್ಥಿಸುತ್ತದೆ.

[20]ಅ. ಟಿ. ೧೪ ನ್ನು ನೋಡಿ.

[21]ಇದರ ಬದ್ಧರೂಪ ‘ಅಟಪಾಟ’ ಎಂಬ ಸಮಸ್ತ ಪದದಲ್ಲಿ ಈಗಲೂ ಉಳಿದಿದೆ.