೧೯೬೬ ಮಾರ್ಚ್‌ ತಿಂಗಳ ‘ತೆಲುಗು ಭಾರತಿ’ ಪತ್ರಿಕೆಯಲ್ಲಿ ಡಾ || ಎನ್. ವೆಂಕಟರಮಣಯ್ಯನವರು ಪಂಪನ ತಮ್ಮ ಜಿನವಲ್ಲಭನ ಕುರ್ಕ್ಯಾಲ ಶಾಸನವನ್ನು ಪ್ರಕಟಿಸಿದಾಗಿನಿಂದ ಅದರ ಬಗೆಗೆ ಸಾಕಷ್ಟು ಚರ್ಚೆ ನಡೆದಿದೆ. ವಿದ್ವಾಂಸರಿಂದ ಹಲವಾರು ಲೇಖನಗಳು ಪ್ರಕಟವಾಗಿ ಪಂಪಕವಿಯ ಜೀವನದ ವಿಷಯಕ್ಕೆ ಅನೇಕ ಸಂಗತಿಗಳು ಬೆಳಕಿಗೆ ಬಂದಿವೆ. ಜತೆಗೆ ಹಲವು ವಿಷಯಗಳನ್ನು ಕುರಿತ ಚರ್ಚೆ ಈಗಲೂ ನಡೆದೇ ಇದೆ. ಕೆಲವು ವಿಷಯಗಳಲ್ಲಿ ಚರ್ಚೆ ಒಂದು ನಿಲುಗಡೆಗೆ ಬಂದಂತೆ ಕಂಡುಬಂದರೂ ವಿದ್ವಾಂಸರು ಆಗೀಗ ಹೊಸ ಹೊಸ ವಿಷಯಗಳನ್ನು ಕುರಿತು ವಿವೇಚಿಸುವುದು ಈ ಲೇಖನದ ಉದ್ದೇಶ.

ಪ್ರಸ್ತುತ ಕುರ್ಕ್ಯಾಲ ಶಾಸನ ಸ್ವತಃ ಜಿನವಲ್ಲಭನು ಬರೆಸಿದ್ದು. ಬೇರೆ ರಾಜ ಅಥವಾ ದಾನಿ ಹಾಕಿಕೊಟ್ಟದ್ದಲ್ಲವೆಂಬುದು ಸ್ವಯಂ ಸ್ಪಷ್ಟವಿದೆ. ಧರ್ಮಪುರದ ಉತ್ತರ ದಿಗ್ಭಾಗದಲ್ಲಿರುವ ವೃಷಭಗಿರಿ ಎಂಬ ಅನಾದಿ ಸಂಸಿದ್ಧ ತೀರ್ಥದ ದಕ್ಷಿಣಾ ದಿಶಾ ಭಾಗದ ಸಿದ್ಧಶಿಲೆಯಲ್ಲಿ ತಮ್ಮ ಕುಲದೈವವೇ ಮುಂತಾದ ಜಿನಬಿಂಬಗಳು, ಚಕ್ರೇಶ್ವರಿ ಯಕ್ಷಿ, ಇತರ ಜಿನಪ್ರತಿಮೆಗಳು, ತ್ರಿಭುವನತಿಲಕವೆಂಬ ಬಸದಿ, ಕವಿತಾ ಗುಣಾರ್ಣಾವವೆಂಬ ಕೆರೆ, ಮದನವಿಳಾಸವೆಂಬ ಬನ ಇವಿಷ್ಟನ್ನೂ ಜಿನವಲ್ಲಭ ನಿರ್ಮಿಸಿ ಬಸದಿಯ ತೀರ್ಥಂಕರ ಮತ್ತು ಇತರ ಜಿನಬಿಂಬಗಳಿಗೆ ಅಭಿಷೇಕ ಮಾಡಿಸಿದನು. ಈ ಧಾರ್ಮಿಕ ಕಾರ್ಯದ ನೆನಪಿಗಾಗಿಯೆ ಆತ ಈ ಶಾಸನ ಕೆತ್ತಿಸಿದ್ದು. ಇದೊಂದು ಸ್ಮಾರಕ ಶಾಸನ ಅರ್ಥಾತ್ ಜಿನವಲ್ಲಭನ ಪ್ರಶಸ್ತಿ ಶಾಸನವೇ ಹೊರತು, ದತ್ತಿ ದಾನ, ಆತ್ಮಬಲಿ ಮುಂತಾದ ಪ್ರಕಾರದ ಶಾಸನವಲ್ಲವೆಂಬುದು ಸ್ಪಷ್ಟ. ಎಂದರೆ ಅರಿಕೇಸರಿ ಪಂಪನಿಗೆ ಧರ್ಮಪುರವನ್ನು ದತ್ತಿಯಾಗಿ ಬಿಟ್ಟ ದಾಖಲೆಯಂತೂ ಅಲ್ಲ. ಅಂದಮೇಲೆ ಕವಿಗೆ ಅರಿಕೇಸರಿ ಒಂದು ತಾಮ್ರ ಶಾಸನವನ್ನೋ ಶಿಲಾಶಾಸನವನ್ನೋ ಪ್ರತ್ಯೇಕವಾಗಿ ಕೊಟ್ಟಿದ್ದಾನೆನ್ನುವುದು ಗಟ್ಟಿ ಮಾತು. ಬಹುಜನ ವಿದ್ವಾಂಸರು ಇದನ್ನು ಒಪ್ಪಿದ್ದಾರೆ.[1]

ಆದರೆ ಹಾಗೆ ಹಾಕಿಕೊಟ್ಟಿರುವುದು ತಾಮ್ರ ಶಾಸನವೇ ಶಿಲಾಶಾಸನವೇ ಎಂಬ ಪ್ರಶ್ನೆ ವಿದ್ವಾಂಸರನ್ನು ಕಾಡಿದೆ. ಬೇರೊಂದು ಶಿಲಾಶಾಸನವಿರಬೇಕೆಂದು ಮೊದಲು ಊಹೆ ಮಾಡಿದವರು ಡಾ || ಎನ್. ವೆಂಕಟರಮಣಯ್ಯನವರು.[2] ಅವರ ಈ ಊಹೆಯನ್ನು ತಳ್ಳಿಹಾಕಿದ ಡಾ || ಪಿ.ಬಿ. ದೇಸಾಯಿಯವರು, ಅರಿಕೇಸರಿ ಪಂಪನಿಗೆ ಕೊಟ್ಟದ್ದು ತಾಮ್ರಶಾಸನವೇ ಎಂದು ಅವರು ಗ್ರಹಿಸಿದ್ದಾರೆ.[3] ವೆಂಕಟರಮಣಯ್ಯನವರು ಊಹಿಸುವಂತೆ ವೃಷಭ ಪರ್ವತದಲ್ಲಿ ಬರೆದ ಬೇರೊಂದು ಶಿಲಾಶಾಸನವಿರದೆ ಪ್ರಸ್ತುತ ಕುರ್ಕ್ಯಾಲ ಶಾಸನವೇ ಆ ಶಾಸನವೆಂದು ಅವರು ನಿರ್ಣಯಿಸಿದ್ದಾರೆ. ಡಾ || ದೇಸಾಯಿಯವರ ಈ ಅಭಿಪ್ರಾಯವನ್ನು ವಿರೋಧಿಸುತ್ತ ಡಾ || ಎಂ.ಎಂ. ಕಲಬುರ್ಗಿಯವರು “ನನಗೆ ಮಾತ್ರ ಪಂಪನಿಗೆ ಅರಿಕೇಸರಿ ತಾಮ್ರ ಶಾಸನವನ್ನು ಕೊಟ್ಟಿರಲಿ ಬಿಡಲಿ; ಶಿಲಾಶಾಸನವನ್ನು ತಪ್ಪದೇ ಕೊಟ್ಟಿರುವನು. ಅದು ಬೊಮ್ಮಲಗುಟ್ಟ (ವೃಷಭಾದ್ರಿ)ದಲ್ಲಿ ಈಗ ದೊರೆತಿರುವ ಶಾಸನವಲ್ಲ; ಇದೇ ಬೆಟ್ಟದಲ್ಲಿ ಇನ್ನೊಂದೆಡೆ ಇದ್ದಿರಬಹುದಾದ ಇನ್ನೊಂದು ಶಾಸನವೆನಿಸುತ್ತದೆ” ಎಂದು ಖಂಡಿತವಾದ ಶಬ್ದಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.[4]

ಇತ್ತೀಚೆಗೆ ಡಾ || ಎಂ. ಚಿದಾನಂದಮೂರ್ತಿಯವರು ‘ಪಂಪಭಾರತದ ರಚನಾ ಕಾಲ- ಒಂದು ಲಘು ಟಿಪ್ಪಣಿ’ ಎಂಬ ತಮ್ಮ ಲೇಖನದಲ್ಲಿ ಮೇಲೆ ಹೇಳಿದ ವಿದ್ವಾಂಸರ ಅಭಿಪ್ರಾಯಗಳನ್ನು ವಿವರವಾಗಿ ಚರ್ಚಿಸಿಲ್ಲವಾದರೂ ಅವರು ಅರಿಕೇಸರಿ ಪಂಪನಿಗೆ ಕೊಟ್ಟದ್ದು ತಾಮ್ರಶಾಸನವೆಂಬ ಅಭಿಪ್ರಾಯ ತಾಳಿದ್ದಾರೆ.[5]

ಪಂಪನಿಗೆ ಹಾಕಿಕೊಟ್ಟ ಶಾಸನ ಶಿಲಾಶಾಸನವೆಂದು ಭಾವಿಸುವವರು ತಮ್ಮ ಅಭಿಪ್ರಾಯ ಸಮರ್ಥನೆಗೆ ಜಿನವಲ್ಲಭನ ಕುರ್ಕಿಯಾಲ ಶಾಸನವನ್ನು ಮುಖ್ಯ ಆಧಾರವಾಗಿ ಸ್ವೀಕರಿಸುತ್ತಾರೆ. ಡಾ || ವೆಂಕಟರಮಣಯ್ಯನವರು ಈ ಅಂಶವನ್ನು ವಿವರವಾಗಿ ಚರ್ಚಿಸಹೋಗಿಲ್ಲ. ಇದನ್ನು ವಿವರವಾಗಿ ಚರ್ಚಿಸುವ ಡಾ || ಕಲಬುರ್ಗಿಯವರು ತಮ್ಮ ವಾದ್ಯಕ್ಕೆ ಆಧಾರವಾಗಿ ಹೇಳುತ್ತಾರೆ.

ಬರೆದರೆ ತಾಂಮ್ರಶಾಸನಮದೇಯಮೆ ಧರ್ಮವುರಂ ನೆಗೞ್ತೆವೆ
ತ್ತರಿಗನ ಕೊಟ್ಟುದೆ ನೆಗೞ್ದ ಪಂಪನ ಪೆತ್ತುದೆ ಪೇೞಿಮೆನ್ದು ನೀ
ಮ್ಮರುಳೆ ಪಲರ್ಮೆಯಂ ಪಲಬರಂ ಬೆಸಗೊಳ್ಳದೆ ಪೋಗಿನೋಡ ಸು
ನ್ದರ ವೃಷಭಾಚಳೋನ್ನತ ಶಿಲಾತಳದೊಳ್ಬರೆದಕ್ಕರಂಗಳಂ
||
ವಿನುತ ಚಳುಕ್ಯ ವಂಶಪತಿ ಮಿಕ್ಕರಿಕೇಸರಿ ಸಂದ ವಿಕ್ರಮಾ
ರ್ಜುನ ವಿಜಯಕ್ಕೆ ಧರ್ಮವುರಮೆನ್ದು ಮದೀಯಮಿದೆನ್ದು ಕೀರ್ತಿಶಾ

ಸನ ಮೆನೆ ಕೊಟ್ಟ ಶಾಸನದ, ಪಂಪನನಾ ಬಿರುದೊನ್ದು ಜೈನಶಾ
ಸನದ ನೆಗೞ್ತೆಯಂ ವೃಷಭ ಪರ್ವತಮನ್ತದು ತಾನೆ ಪೇೞದೇ
||

ಇಲ್ಲಿನ ‘ಬರೆದುದೆ ತಾಂಬ್ರಶಾಸನಂ ಅದೇಯಮೇಧರ್ಮವುರಂ’ ಎಂಬ ಮಾತಿಗೆ ಕೆಲವರು ಅದು ತಾಮ್ರಶಾಸನವೆಂದು ಅರ್ಥ ಹಚ್ಚುತ್ತಾರೆ, ‘ಬರೆ’ದುದೆ ತಾಮ್ರ ಶಾಸನಂ? ಅದೇಯಮೇಧರ್ಮವುರಂ? ನೆಗೞ್ತೆವೆತ್ತರಿಗನ ಕೊಟ್ಟುದೇ? ಪಂಪನ ಪೆತ್ತುದೆ? ಎಂದು ಮುಂತಾಗಿ ಮರುಳನಂತೆ ವ್ಯರ್ಥ ಪ್ರಶ್ನೆ ಕೇಳದೆ ‘ಪೋಗಿ ನೋಡ ಸುಂದ ವೃಷಭಾಚಳೋನ್ನತ ಶಿಲಾತಳದೊಳ್ ಬರೆದಕ್ಕರಂಗಳಂ’ ಎಂದು ಜಿನವಲ್ಲಭ ಹೇಳುವ ಮಾತುಗಳಿಂದ “ಪಂಪನು ಪಡೆದುದು ಕೃತಕವೆಂದು ಸಂದೇಹ ಹುಟ್ಟಿಸುವ ತಾಮ್ರಶಾಸನವಲ್ಲ; ಬಹಿರಂಗವಾಗಿ ಬರೆದ ಶಿಲಾಶಾಸನ” ಎಂಬ ಅರ್ಥ ಹೊರಡುತ್ತದೆಯೆಂದು ಡಾ || ಕಲಬುರ್ಗಿಯವರು ನಿರ್ಧರಿಸುತ್ತಾರೆ. ಅವರೇ ಮುಂದುವರಿದು, “ವಿನುತ ಚಳುಕ್ಯ ವಂಶಪತಿ ಮಿಕ್ಕರಿಕೇಸರಿ….
ಎಂಬ ಪದ್ಯದ ‘ಅರಿಕೇಸರಿ…. ಕೊಟ್ಟ ಶಾಸನದ ನೆಗೞ್ತೆಯಂ ವೃಷಭ ಪರ್ವತಮನ್ತದು ತಾನೆ ಪೇೞದೇ’ ಎಂಬ ಮಾತಿನಿಂದ ಪಂಪನನ್ನೆ ಮುಖ್ಯ ವಿಷಯವಾಗಿಟ್ಟುಕೊಂಡ ಬೇರೊಂದು ಶಾಸನವಿರಬೇಕನಿಸುತ್ತದೆ” ಎಂದು ಅನುಮಾನಿಸುತ್ತಾರೆ.[6] ಈ ಎರಡನೆಯ ಪದ್ಯ (ಶಾಸನದ ೭ನೆಯ ಪದ್ಯ) ಅರ್ಥದ ದೃಷ್ಟಿಯಿಂದ ಸ್ವಲ್ಪ ಕ್ಲಿಷ್ಟವಾಗಿದೆಯೆಂದು ತಮ್ಮ ಲೇಖನದಲ್ಲಿ ಡಾ || ಕಲಬುರ್ಗಿಯವರು ಭಾವಿಸಿದ್ದರು. ತರುವಾಯ ಕುರ್ಕ್ಯಾಲ ಶಾಸನದ ಬೇರೊಂದು ಪಾಠ ಪ್ರಕಟವಾಗಿದೆ. ಅದನ್ನು ಡಾ || ಜಿ.ಎಸ್. ಗಾಯಿಯವರು ಪ್ರ.ಕ. ೫೩-೪ ರಲ್ಲಿ ಪ್ರಕಟಿಸಿದ್ದಾರೆ. ಆ ಪಾಠದ ರೀತ್ಯಾ ಪ್ರಸ್ತುತ ಪದ್ಯದ ಪರಿಷ್ಕೃತ ರೂಪ ಮುಂದಿನಂತಿದೆ:

ವಿನುತ ಚಳುಕ್ಯವಂಶಪತಿ ಮಿಕ್ಕರಿಕೇಸರಿ ಸಂದವಿಕ್ರಮಾ
ರ್ಜುನ ವಿಜಯಕ್ಕೆ ಧರ್ಮಪುರವೆನ್ದು ಮದೀಯಮಿದೆಂದು ಕೀರ್ತಿಶಾ
ಸನ ಮೆನೆ ಕೊಟ್ಟ ಶಾಸನದ, ಪಂಪನ ನಂಬಿದುದೊಂದುಜೈನಶಾ
ಸನದ ನೆಗಱ್ತೆಯಂ ವೃಷಭ ಪರ್ವತಮನ್ತದು ತಾನೆಪೇೞದೇ
||

ಇಲ್ಲಿ ‘ಪಂಪನನಾ ಬಿರುದೊಂದು’ ಎಂಬ ಹಿಂದಿನ ಪಾಠ ತಪ್ಪೆಂದು ಕಂಡು ಬರುತ್ತದೆ. ಅದರ ಬದಲು ‘ಪಂಪನ ನಂಬಿದುದೊಂದು’ ಎಂದು ಡಾ || ಗಾಯಿಯವರು ಕೊಟ್ಟಿರುವ ಪಾಠ ಸ್ಪಷ್ಟವಾಗಿದ್ದು ಅನ್ವಯದ ತೊಡಕನ್ನು ಹೋಗಲಾಡಿಸುತ್ತದೆ.

‘. . . ಚಳುಕ್ಯವಂಶಪತಿ.. ಅರಿಸಕೇಸರಿ…. ವಿಕ್ರಮಾರ್ಜುನ ವಿಜಯಕ್ಕೆ ಧರ್ಮಪುರವೆಂದುಮದೀಯಮಿದೆಂದು ಕೀರ್ತಿ ಶಾಸನ ಮನೆ ಕೊಟ್ಟ, ಶಾಸನದ, ಪಂಪನ ನಂಬಿದೊಂದು ಜೈನ ಶಾಸನದ, ನೆಗೞ್ತೆಯಂ ವೃಷಭ ಪರ್ವತಂ ಅನ್ತದು ತಾನೆ ಪೇೞದೇ, ಎಂದು ಇಲ್ಲಿ ಸ್ಪಷ್ಟವಾದ ಅನ್ವಯ ಹೊರಡುತ್ತದೆ. ಎಂದರೆ ಈಗ ವೃಷಭ ಪರ್ವತವು, ಅರಿಕೇಸರಿ ವಿಕ್ರಮಾರ್ಜುನ ವಿಜಯ ಬರೆದುದಕ್ಕಾಗಿ ತನ್ನ ಕೀರ್ತಿ ಶಾಸನವೆನ್ನುವಂತೆ ಹಾಕಿಕೊಟ್ಟ ಶಾಸನ ಮತ್ತು ಪಂಪನು ನಂಬಿದ್ದ ಜೈನ ಶಾಸನ, ಇವೆರಡರ ನೆಗೞ್ತೆಯನ್ನೂ ಸಾರುತ್ತಿದೆ, ಎಂಬ ಅರ್ಥ ಹೊರಡುತ್ತದೆ. ಅರಿಕೇಸರಿ ಹಾಕಿಕೊಟ್ಟ ಕೀರ್ತಿಶಾಸನ ಮತ್ತು ಪಂಪನು ನಂಬಿದ್ದ ಜೈನ ಶಾಸನ ಇವೆರಡೂ ಬೇರೆ ಬೇರೆ ಎಂಬ ಧ್ವನಿ ಇಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಮತ್ತು ಅವೆರಡೂ ವೃಷಭ ಪರ್ವತದಲ್ಲಿಯೇ ಇವೆ ಎಂಬ ಅರ್ಥಕೂಡ ಅಷ್ಟೇ ಸ್ಪಷ್ಟವಾಗಿದೆ. ಇದರಿಂದ ಅರಿಕೇಸರಿ ಪಂಪನಿಗೆ ಹಾಕಿಕೊಟ್ಟ ಶಿಲಾಶಾಸನ ಆ ಪರ್ವತದಲ್ಲಿಯೇ ಇತ್ತೆಂದು ತಿಳಿಯಬೇಕಾಗುತ್ತದೆ.

ಪಂಪನು ನಂಬಿದ್ದ ಜೈನಶಾಸನ ಎಂದರೆ ಆತನು ನಂಬಿದ್ದ ಜೈನಧರ್ಮ ಎಂದೇ ಅರ್ಥ. ಆ ಜೈನಧರ್ಮದ ನೆಗೞ್ತೆಯನ್ನೂ ಪರ್ವತ ಸಾರುತ್ತಿದೆ. ಅದು ಹೇಗೆ? ಎಂದರೆ ಅದರಲ್ಲಿ ಜಿನವಲ್ಲಭ ಹಲವಾರು ಜಿನಪ್ರತಿಮೆಗಳನ್ನೂ ಚಕ್ರೇಶ್ವರಿಯನ್ನೂ ತ್ರಿಭುವನ ತಿಲಕವೆಂಬ ಬಸದಿಯನ್ನೂ ನಿರ್ಮಿಸಿದ. ಮತ್ತು ಬಸದಿಯಲ್ಲಿ ವೃಷಭೇಶ್ವರ ಬಿಂಬವನ್ನು ಪ್ರತಿಷ್ಠಾಪಿಸಿ ವೈಭವಯುತವಾದ ಅಭಿಷೇಕ ಸಮಾರಂಭ ಜರುಗಿಸಿದ. ಇದರಿಂದ ದ್ವಿಜಾವಸಥವಾಗಿದ್ದ ಪರ್ವತ ಜಿನ ಚೈತ್ಯವಾಗಿ ಮಾರ್ಪಾಡು ಹೊಂದಿತು. ಇಂತು ಜೈನಶಾಸನದ ನೆಗೞ್ತೆಯನ್ನು ವೃಷಭ ಪರ್ವತ ಸಾರುವಂತಾಯಿತು.

ಈ ಶಾಸನ ರಚನೆಯ ಕಾಲದಲ್ಲಿ ಪಂಪಮಹಾಕವಿ ಜೀವಿಸಿದ್ದನೇ? ಎಂಬುದು ಇನ್ನೊಂದು ಪ್ರಶ್ನೆ. ಇದಕ್ಕುತ್ತರವಾಗಿ ಡಾ || ದೇಸಾಯಿಯವರು ಈ ಶಾಸನ ಸ್ಮಾರಕಗಳ ರಚನೆಯ ಕಾಲದಲ್ಲಿ ಪಂಪಕವಿ ಜೀವಿಸಿದ್ದನೆಂದು ಊಹಿಸುತ್ತಾರೆ. ಪ್ರತಿಯಾಗಿ ಡಾ || ಕಲಬುರ್ಗಿಯವರು ಪಂಪ ಆಗ ಜೀವಿಸಿರಲಿಲ್ಲವೆಂದು ವಾದಿಸಿದ್ದಾರೆ. ಜೈನಾಭಿಷೇಕೋತ್ಸವ ನಡೆಯುತ್ತಿರುವಲ್ಲಿ ಧರ್ಮಪುರಕ್ಕೆ ಬಂದ ಜನತೆ ನೋಡುವುದು ಜಿನವಲ್ಲಭನನ್ನು ಮಾತ್ರವೇ ಹೊರತು ಅವನ ಅಣ್ಣ ನನ್ನಲ್ಲ. ಕವಿತಾ ಗುಣಾರ್ಣವ ಕೆರೆಯನ್ನು ಜಿನವಲ್ಲಭ ನಿರ್ಮಿಸಿರುವುದು ಪಂಪನ ಪರೋಕ್ಷದಲ್ಲಿ; ಅಣ್ಣನ ಕೀರ್ತಿ ಗುಡಿಗಟ್ಟಿ ನಿಲ್ಲಲಿ ಎಂಬ ಉದ್ದೇಶದಿಂದ; ಈ ಉದ್ದೇಶದ ಅಂಗವಾಗಿ ಪ್ರಸ್ತುತ ಶಾಸನ ಕೆತ್ತಿಸಲ್ಪಟ್ಟಿದೆ ಎಂಬುದು ಡಾ || ಕಲಬುರ್ಗಿಯವರ ಸಾಮಾನ್ಯ ನಿಲುವು. “ಹೀಗೆ ಪಂಪನ ಸ್ಮಾರಕವೆಂದು ಎತ್ತಿಸಿದ ದೇವಾಲಯ, ಕಟ್ಟಿಸಿದ ಕೆರೆ, ನಿಲ್ಲಿಸಿದ ಜಿನಪ್ರತಿಮೆ, ನಿರ್ಮಿಸಿದ ಉದ್ಯಾನ ಕಾರ್ಯ ವಿಶೇಷಗಳನ್ನು ವಿವರಿಸುವುದರಿಂದ ಈ ಶಾಸನ ಪಂಪನು ಗತಿಸಿ ಹೋದ ತರುವಾಯ ಹುಟ್ಟಿತೆಂದು ಹೇಳಬಹುದು” ಎಂಬ ಅವರ ಮಾತುಗಳಿಂದ ಅವರ ನಿಲವು ಇನ್ನೂ ಸ್ಪಷ್ಟವಾಗುತ್ತದೆ.[7]

‘ಸಂದ ಪಂಪನ’ ಎಂದರೆ ಕೆಲವರು ಮಾಡುವ ಊಹೆಯಂತೆ ‘ನಿಧನ ಹೊಂದಿದ ಪಂಪನ’ ಎಂಬ ಅರ್ಥ ಸರಿಯಾದುದಲ್ಲ; ‘ಪ್ರಸಿದ್ಧನಾದ ಪಂಪನ’ ಎಂಬ ಅರ್ಥವೇ ಈ ಮಾತಿಗೆ ಉಚಿತವಾದುದು; ಕವಿತಾ ಗುಣಾರ್ಣವ ಎಂಬ ಕೆರೆಯನ್ನು ಜಿನವಲ್ಲಭ ಕಟ್ಟಿಸಿದ್ದು ಪಂಪನ ಸ್ಮಾರಕವಾಗಿ ಎಂದು ಶಾಸನದಲ್ಲಿ ಎಲ್ಲಿಯೂ ಹೇಳಿಲ್ಲ; ಹಾಗೆಂದು ನಾವು ಅರ್ಥ ಮಾಡಿಕೊಳ್ಳಬೇಕಾಗಿಲ್ಲ; ವ್ಯಕ್ತಿಗಳು ಜೀವಿಸಿರುವಾಗಲೇ ತಮ್ಮ ಹೆಸರಿನ ಕೆರೆ ಕಟ್ಟಿಸುವ ಪದ್ಧತಿಯಿದ್ದ ಬಗ್ಗೆ ಶಾಸನಾಧಾರವಿದೆ; ಎಂದು ಮುಂತಾಗಿ ಡಾ || ಚಿದಾನಂದಮೂರ್ತಿಯವರು ಈ ವಿಷಯಕ್ಕೆ ವಾದಿಸಿದ್ದಾರೆ. ಮುಂದುವರಿದು, ಈ ಶಾಸನ-ಸ್ಮಾರಕಗಳ ರಚನೆಯ ಕಾಲದಲ್ಲಿ ‘ಪಂಪ ಇನ್ನೂ ಜೀವಿಸಿದ್ದನೆಂದು ತೆಗೆದುಕೊಳ್ಳುವುದೇ ಉಚಿತವಾದುದೆಂದು’ ಅವರು ತಿಳಿಯುತ್ತಾರೆ. ಆದರೂ ‘ಇದಮಿತ್ಥಂ’ ಎಂದು ಹೇಳುವ ಮನಸ್ಸು ಅವರಿಗಿದ್ದಂತಿಲ್ಲ.[8] ಈ ಸಂಬಂಧದಲ್ಲಿ ಶಾಸನ ಬಾಯಿಬಿಟ್ಟು ಏನನ್ನೂ ಹೇಳುವುದಿಲ್ಲವೆಂಬ ಅವರ ಅಭಿಪ್ರಾಯ ಒಪ್ಪತಕ್ಕದೇ. ಆದರೆ ಹತ್ತನೆಯ ಶತಮಾನದ ಶಾಸನಗಳ ಚೌಕಟ್ಟನ್ನು ನಾವು ಗಮನಿಸಿದರೆ ಮತ್ತು ಆ ಚೌಕಟ್ಟಿಗೆ ಪ್ರಸ್ತುತ ಶಾಸನವನ್ನು ಹೋಲಿಸಿದರೆ, ನಮ್ಮ ಮುಂದೆ ಹಲವಾರು ಸಮಸ್ಯೆಗಳು ನಿಲ್ಲುತ್ತವೆ. ಪಟ್ಟದ ರಾಣಿಯಾಗಿದ್ದವರು, ಯುವರಾಜರಾಗಿದ್ದವರು ಕೂಡ ಇಷ್ಟು ವ್ಯಾಪಕವಾದ ಸ್ಮಾರಕಾದಿಗಳನ್ನು ನಿರ್ಮಿಸಬೇಕಾಗಿ ಬಂದ ಸಂದರ್ಭದಲ್ಲಿ ಅಧಿರಾಜನಾಗಿದ್ದ ತಮ್ಮ ಗಂಡ ಅಥವಾ ತಂದೆಯ ಅನುಮತಿ ಪಡೆಯುವುದು ಅಂದು ರೂಢವಾಗಿತ್ತು. ಬಸದಿ, ಉದ್ಯಾನವನ, ವಿಸ್ತಾರವಾದ ಕೆರೆ ಇವುಗಳ ನಿರ್ಮಾಣಕ್ಕೆ ಸಾಕಷ್ಟು ವಿಸ್ತಾರವಾದ ಪ್ರದೇಶ ಬೇಕು. ಅಲ್ಲವೆ? ಅಷ್ಟು ವಿಸ್ತೃತ ಪ್ರದೇಶದ ಹಕ್ಕು ಮತ್ತು ಅದರಲ್ಲಿ ಶಾಸನ ಕೊರೆಯಿಸುವ ಕಾರ್ಯದಂಥ ವಿಷಯಗಳಲ್ಲಿ ಒಡೆಯನಾಗಿದ್ದ ಅಣ್ಣನ ಪ್ರಸ್ತಾಪ ಬರಬೇಕಾದುದು ಅನಿವಾರ್ಯವೆಂದು ನನ್ನ ಭಾವನೆ. ಅಣ್ಣನ ಅಧಿಕಾರ ಸೂಚಿಸದೇ ಇಲ್ಲಿ ಜಿನವಲ್ಲಭ ಎಲ್ಲವನ್ನು ತಾನೇ ನಡೆಸುತ್ತಿದ್ದಾನೆ. ಜಿನದರ್ಶನಕ್ಕೆ ಶ್ರಾವಕರು, ಜನಸಾಮಾನ್ಯರು, ಅಷ್ಟೇ ಅಲ್ಲದೆ ಮುನಿಜನರೂ ಬರುತ್ತಿದ್ದಾರೆ. ಅವರನ್ನೆಲ್ಲ ಸತ್ಕರಿಸುವವ ಜಿನವಲ್ಲಭನೇ ಹೊರತು ಪಂಪನಲ್ಲ. ಪಂಪ ಆಗ ಜೀವಿಸಿದ್ದೇ ನಿಜವಾದರೆ ಶಾಸನದ ಒಟ್ಟು ಧಾಟಿಯೇ ಬೇರೆ ತೆರನಾಗಿರುತ್ತಿತ್ತು. ತಾತ್ಪರ್ಯವೆಂದರೆ, ಧರ್ಮಪುರದ ಎಲ್ಲ ಅಧಿಕಾರಗಳು ಈಗಾಗಲೇ ಜಿನವಲ್ಲಭನಿಗೆ ಹಸ್ತಾಂತರ ಹೊಂದಿವೆ. ಆದ್ದರಿಂದ ಪಂಪ ಗತಿಸಿದ ತರುವಾಯವೇ ಈ ಶಾಸನ ಹುಟ್ಟಿದೆಯೆಂದು ನಿರ್ಣಯಿಸಬಹುದು.

ಧರ್ಮಪುರದ ದತ್ತಿಯ ವಿಷಯದಲ್ಲಿ ವಿವಾದ ತಲೆದೋರಿತ್ತೆಂಬ ಧ್ವನಿ ಶಾಸನದಲ್ಲಿದೆ. ಇದು ಈಗಾಗಲೇ ವಿದ್ವಾಂಸರ ಗಮನಕ್ಕೆ ಬಂದಿದೆ. ೨ನೆಯ ಅರಿಕೇಸರಿ ಜೀವಿಸಿರುವವರೆಗೆ ಇಂಥ ವಿವಾದ ತಲೆಯೆತ್ತಲು ಖಂಡಿತವಾಗಿಯೂ ಅವಕಾಶವಿರಲಿಲ್ಲ. ಡಾ || ವೆಂಕಟರಮಣ್ಯನವರು ಎರಡನೆಯ ಅರಿಕೇಸರಿಯ ಜೀವಿತ ಕಾಲ ಕ್ರಿ.ಶ. ಸು. ೯೩೦ ರಿಂದ ೯೫೮ ಎಂದು ಹೇಳಿದ್ದಾರೆ. (E.A.-II, p.-27) ಶ್ರೀ ಎಸ್. ಗೋಪಾಲಕೃಷ್ಣಮೂರ್ತಿ ಎಂಬುವರು ಅವನ ಕಾಲ ಕ್ರಿ.ಶ. ೯೩೦ ರಿಂದ ೯೫೫ ಎಂದು ಹೇಳಿದ್ದಾರೆ. (Jain Vestiges in Andhra p. 43) ನಮಗೆ ಪ್ರಸ್ತುತ ಶಾಸನ ಇಮ್ಮಡಿ ಅರಿಕೇಸರಿಯ ಕಾಲಾನಂತರದಲ್ಲಿ ಹುಟ್ಟಿರಬೇಕೆನಿಸುತ್ತದೆ. ಎಂದರೆ ಈಗ ನಿರ್ಧರಿಸಿರುವಂತೆ ಈ ಶಸನದ ಕಾಲ ಕ್ರಿ.ಶ. ಸು. ೫೯೦ ಎಂಬುದನ್ನು ಸ್ವಲ್ಪ ಮಾರ್ಪಡಿಸಿ ಕ್ರಿ.ಶ. ಸು. ೫೬೦ ಎಂದಿಟ್ಟುಕೊಳ್ಳಬೇಕಾಗುತ್ತದೆ.

ಈ ಶಾಸನದಲ್ಲಿ ಜಿನವಲ್ಲಭ ಜಯನಂದಿ ಮುನಿಯ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ಆದಿಪುರಾಣದ ಆ. ೧, ಪ. ೧೩ ರಲ್ಲಿ ಪಂಪ ಮಲಧಾರಿ ಸಿದ್ಧಾಂತ ಮುನಿ, ದೇವೇಂದ್ರಮುನಿ ಮತ್ತು ಜಯನಂದಿ ಮುನಿಗಳ ಹೆಸರು ಹೇಳಿದ್ದಾನೆ. ಬೋಧನ ಶಾಸನವೊಂದರಲ್ಲಿ ಉಲ್ಲೇಖಿತನಾದ ದೇವೆಂದ್ರ ಸಿದ್ಧಾಂತ ಮುನಿಯೇ ಪಂಪನ ಗುರು ಎಂದು ನಂಬಲಾಗಿದೆ.[9] ಪಂಪ ಹೇಳುವ ಜಯನಂದಿ ಮತ್ತು ಜಿನವಲ್ಲಭ ಹೇಳುವ ಜಯನಂದಿ ಬಹುಶಃ ಒಬ್ಬನೇ. ಅದೇ ರೀತಿ ಬೋಧನ ಶಾಸನದ ದೇವೇಂದ್ರಮುನಿ ಮತ್ತು ಪಂಪ ತನ್ನ ಆದಿಪುರಾಣದಲ್ಲಿ ಹೇಳಿರುವ ದೇವೆಂದ್ರ ಮುನಿ ಅಭಿನ್ನರೆಂದು ನಿಷ್ಕರ್ಷೆಯಾದರೆ ಇವೆರಡು ಶಾಸನಗಳ ಕಾಲಾನುಕ್ರಮದ ಬಗ್ಗೆ ಮತ್ತು ದೇವೇಂದ್ರ ಸಿದ್ಧಾಂತ ಮುನಿಗಳ ಹೆಸರನ್ನು ಜಿನವಲ್ಲಭ ಉಲ್ಲೇಖಿಸಿರಲಿಲ್ಲವೆಂದು ತೋರುತ್ತದೆ. ಎಂದರೆ ಬೋಧನದ ಆ ಶಾಸನದ ತರುವಾಯ ಕುರ್ಕಿಯಾಲ ಶಾಸನ ಹುಟ್ಟಿದೆಯೆಂದು ತಿಳಿಯಬಹುದು. ಇದೊಂದು ಊಹೆ, ಅಷ್ಟೇ.

ಜಿನವಲ್ಲಭ ನಿರ್ಮಿಸಿದ ಸ್ಮಾರಕಗಳಲ್ಲಿ ‘ತ್ರಿಭುವನ ತಿಲಕ’ ಎಂಬ ಬಸದಿಯೂ ಒಂದು. ಜಿನವಲ್ಲಭನ ದೃಷ್ಟಿಯಿಂದ ಈ ಬಸದಿಯ ನಿರ್ಮಾಣವೇ ಪ್ರಧಾನವಾದ ಕಾರ್ಯ. ಉಳಿದೆಲ್ಲವೂ ಇದರ ಪೋಷಕ ನಿರ್ಮಾಣಗಳು. ಪ್ರಧಾನವಾದ ನಿರ್ಮಾಣವೇ ಇಂದು ಹಾಳಾಗಿ ಹೋಗಿದೆ. ಅದರ ಅವಶೇಷಗಳು ಕೂಡ. ಉಪಲಬ್ಧವಿಲ್ಲ. ಆದರೆ ಈ ಬಸದಿಯಲ್ಲಿ ಸ್ಥಾಪಿಸಲ್ಪಟ್ಟ ಮೂರ್ತಿ ಋಷಭನಾಥ ತೀರ್ಥಂಕರನದೆಂಬ ಅಂಶ ಇಲ್ಲಿ ಗಮನಾರ್ಹವಾದುದು. ‘ತಮ್ಮ ಕುಲದೈವ ಮಾದ್ಯಂತ ಜಿನಬಿಂಬಂಗಳು ಮಂ’ ಎಂಬ ಮಾತಿಗೆ ಆದಿ ಅಂತ್ಯ ನಿಜರಾದ ಋಷಭ ದೇವ ಹಾಗೂ ವರ್ಧಮಾನ ಮತ್ತು ಚಕ್ರೇಶ್ವರಿ ಎಂದು ಅರ್ಥ ಹೇಳುವ ಡಾ || ವೆಂಕಟರಮಣಯ್ಯನವರ ಅಭಿಪ್ರಾಯ.[10]ವಾಸ್ತವ ಸಂಗತಿಯನ್ನು ಪರಾವರ್ತಿಸಿದೆಯೆಂದು ಹೇಳಬಹುದು. “ಇದು ಕವಿತಾಗುಣಾರ್ಣವನ ಕೀರ್ತಿಯ ಮೂರ್ತಿವೊಲಾಗಿ ದಕ್ಷಿಣಾರ್ಧದ ವೃಷಭಾದ್ರಿಯಕ್ಕೆ ವೃಷಭೇಶ್ವರ ಬಿಂಬ ಸನಾಥಂ ಎಂಬ ಅಲಂಪೊದವೆ ನಿಜ ದ್ವಿಜಾವಸಥ ಪರ್ವತಮಂ” ಎಂಬ ಉಲ್ಲೇಖದಿಂದ ಈ ಮಾತು ಸ್ವಷ್ಟವಾಗುತ್ತದೆ.

ಈ ಶಾಸನದಿಂದ ತಿಳಿದುಬರುವ ಒಂದೆರಡು ಅಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿ ಈ ಲೇಖನ ಮುಗಿಸುತ್ತೇನೆ. ಒಂದು: ಹತ್ತನೆಯ ಶತಮಾನದಷ್ಟು ಹಿಂದಿನ ದಿನಗಳಲ್ಲಿ ಕೂಡ ಕನ್ನಡಿಗರಲ್ಲಿ ಕುಲದೇವತಾ ಪದ್ಧತಿ ಇತ್ತೆಂದು ತೋರುತ್ತದೆ. ಜಿನವಲ್ಲಭ ‘ತಮ್ಮ ಕುಲದೈವ ಮಾದ್ಯಂತ ಜಿನಬಿಂಬಂಗಳು ಮಂ….ಮಾಡಿಸಿದಂ’ ಎನ್ನುವ ಮಾತಿನಿಂದ ಇದು ಸ್ಪಷ್ಟವಾಗಿದೆ. ಎರಡು: ಪಂಪನ ಕಾವ್ಯಗಳ ಪಾಠ ಸಾಕಷ್ಟು ಬದಲಾಯಿಸಿದೆ ಎಂದು ತಿಳಿಯಲು ಈ ಶಾಸನ ಮತ್ತು ಕರೀಂನಗರ ಮ್ಯೂಜಿಯಂ ಶಾಸನಗಳು ಆಧಾರ ನೀಡುತ್ತವೆ. ಕುರ್ಕಿಯಾಲ ಶಾಸನದಲ್ಲಿ ಮರ್ಮ ಎಂಬ ಪದ ಎರಡು ಸಲ ಪ್ರಯೋಗವಾಗಿದೆ. ಇದೇ ಪದ ಪಂಪಭಾರತದಲ್ಲಿ ಮೂತು ಸಲ ಬಂದಿರುವುದಾದರೂ ಅದರಲ್ಲಿ ರೇಫೆ ಸಮರೂಪಗೊಂಡಿದೆ. ಉದಾ: ಕಡುಕೆಯ್ದು-ಇಸನ್-ಎನ್ನ ಮಂಮನ್, ಆಂ ನಡಪಿದೆನೆಂ (ಪಂ. ಭಾ ೧೧-೧೮), ಎಮ್ಮ ಮಮ್ಮಂಗಂ ಎಮಗಂ-ಈಗಳ್-ಅನುವರಂ ದೊರೆಯಾಯ್ತು (೧೧-೪೨ವ), ನೀನೆಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದೆ ಮೊಮ್ಮನೈ (೧೨-೫೬ವ). ಕರೀಂನಗರ ಶಾಸನದಲ್ಲಿ ‘ಅರಿಕೇಸರಿ ರಾಜತ್ತೇಜೋಗ್ನಿ ಮಗ್ನ ರಿಪುನೃಪಶಲಭಂ’ ಎಂಬ ಪಾಠವಿದ್ದರೆ ವಿಕ್ರಮಾರ್ಜುನ ವಿಜಯದಲ್ಲಿ ಅರಿಕೇಸರಿ ರಾಜಂ ತೇಜೋಗ್ನಿ ಮಗ್ನ ರಿಪುನೃಪಶಲಭಂ’ (ವಿ.ವಿ. ೧-೪೧) ಎಂಬ ಪಾಠ ಈಗ ಉಳಿದಿದೆ. ಇಂಥ ಇನ್ನೂ ಹಲವು ಸೂಕ್ಷ್ಮಗಳನ್ನು ಎತ್ತಿ ತೋರಿಸಬಹುದುದಾದರೂ ಇದು ಸರಿಯಾದ ಅವಕಾಶವಲ್ಲವೆಂದು ಭಾವಿಸಿ ಅವನ್ನಿಲ್ಲಿ ಕೈಬಿಡಲಾಗಿದೆ.

 

[1]ಡಾ || ಎನ್. ವೆಂಕಟರಮಣಯ್ಯ: ಶಾಸನ ವ್ಯಾಸಂಗ, ಭಾಗ-೨, ಪು.೩೩-೩೬ ರಲ್ಲಿ ಉಲ್ಲೇಖಿತ.
ಡಾ || ಎಂ.ಎಂ. ಕಲಬುರ್ಗಿ: ಶಾಸನ ವ್ಯಾಸಂಗ, ಭಾಗ-೨, ಪು.೩೩-೩೬ ರಲ್ಲಿ ಉಲ್ಲೇಖಿತ.
ಡಾ || ಪಿ.ಬಿ. ದೇಸಾಯಿ: ಶಾಸನ ವ್ಯಾಸಂಗ, ಭಾಗ-೨, ಪು.೩೩-೩೬ ರಲ್ಲಿ ಉಲ್ಲೇಖಿತ.
ಡಾ || ಎಂ. ಚಿದಾನಂದಮೂರ್ತಿ ‘ಸಾಧನೆ’, ೧೨-೩, ಪು.೧೩೨.

[2]ಶಾಸನ ವ್ಯಾಸಂಗ, ಭಾಗ-೨ ರಲ್ಲಿ ಉಲ್ಲೇಖಿತ.

[3]ಅದೇ, ಪು.೩೪

[4]ಅದೇ, ಪು. ೩೪

[5]ಸಾಧನೆ, ೧೨-೩, ಪು-೧೩೫

[6]ಶಾಸನ ವ್ಯಾಸಂಗ ಭಾಗ-೨, ಪು. ೩೫.

[7]ಅದೇ ಪು. ೩೭

[8]ಸಾಧನೆ: ೧೨-೨, ಪು. ೧೩೫ ರಲ್ಲಿ ಅವರು ಬರೆದ ಅಡಿಟಿಪ್ಪಣಿ ನೋಡಿ.

[9] Epigrahia Andhrica-Vol II p.31

[10]ಅದೇ. ಪು. ೨೪