ಒಂದು ಕಾಲದಲ್ಲಿ ಕೊಲ್ಲಾಪುರವು ಕನ್ನಡ ಸಂಸ್ಕೃತಿಯ ಪ್ರಸಿದ್ಧ ಕೇಂದ್ರವಾಗಿತ್ತು. ಕ್ರಿ.ಶ. ೧೬೯೦ ರ ಸುಮಾರಿನಲ್ಲಿ ಈ ನಗರಕ್ಕೆ ಮರಾಠಿ ಪ್ರವೇಶಗೊಂಡು ದಿನೇದಿನೇ ವರ್ಧಿಸತೊಡಗಿತು. ಕ್ರಿ.ಶ. ೧೯೩೧ರ ವರೆಗೂ ಇಲ್ಲಿ ಪ್ರತಿಶತಃ ಮೂವತ್ತರಷ್ಟು ಜನ ಕನ್ನಡ ಮಾತೃಭಾಷೆವುಳ್ಳವರಾಗಿದ್ದರೆಂದು ದಾಖಲೆಗಳಿಂದ ತಿಳಿದುಬರತ್ತದೆ. ಹಿಗೀರುವುದರಿಂದ ಕೊಲ್ಲಾಪುರನಗರದಲ್ಲಿ ದೊರೆಯುವ ಪ್ರಾಚೀನ ಅವಶೇಷಗಳು ಕನ್ನಡ ಪರವಾಗಿಯೇ ಇರುವದು ಸಹಜ. ಈ ವಿಷಯ ಮಹಾರಾಷ್ಟ್ರದ ಅನೇಕ ಗಣ್ಯ ಸಂಶೋಧಕರಿಗೆ ತಿಳಿದಿದೆಯಾದರೂ ಅವರು ತಿಳಿದೂ ತಿಳಿಯದವರಂತೆ ವರ್ತಿಸುತ್ತಾರೆ. ಈ ಹಿನ್ನೆಲ್ಲೆಯಲ್ಲಿ ಪ್ರೊ. ಕುಂದಣಗಾರ ಅವರು ಕೊಲ್ಲಾಪುರ ಪರಿಸರದಲ್ಲಿ ಅಡಗಿಹೋಗಿದ್ದ ಅಸಂಖ್ಯ ದಾಖಲೆಗಳನ್ನು ಗುರುತಿಸಿ ಅವುಗಳ ಮೇಲೆ ವಿದ್ವತ್ ಪೂರ್ಣವಾದ ಲೇಖನ, ಟಿಪ್ಪಣೆ ಇತ್ಯಾದಿಗಳನ್ನು ಬರೆದು ಪ್ರಕಟಿಸಿದರು. ಅವರ ಈ ಕಾರ್ಯ ಹಲವಾರು ಮುಖಗಳಲ್ಲಿ ಅಭಿವ್ಯಕ್ತಗೊಂಡಿದೆ.

ಪ್ರೊ. ಕುಂದಣಗಾ ಕೊಲ್ಲಾಪುರ ಭಾಗದ ಹಲವಾರು ಶಾಸನಗಳನ್ನು ಪತ್ತೆ ಹಚ್ಚಿ ಪ್ರಕಟಿಸಿರುವುದು ಸರ್ವವಿದಿತ. ಅವರು ಪ್ರಕಟಿಸಿರುವ ಶಾಸನಗಳು ಪ್ರಾಕೃತ, ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿವೆ. ಅವುಗಳ ಐತಿಹಾಸಿಕ ಮಹತ್ವದ ಜೊತೆಗೆ ಭಾಷಿಕ ಸಾಂಸ್ಕೃತಿಕ ಮಹತ್ವನ್ನೂ ಅವರು ಬೆಳಕಿಗೆ ತಂದಿದ್ದಾರೆ. ಅಲ್ಲಿನ ಬ್ರಹ್ಮಪುರಿಯಲ್ಲಿ ದೊರೆತಿರುವ ಒಂದು ಪಾತ್ರೆಯ ಮೇಲೆ ಕೆತ್ತಲ್ಪಟ್ಟಿರುವ ‘ಬಮ್ಮಸ’ ದಾನಂ ‘ಧಮ್ಮಗುತ್ತೇನ’ ಕಾರಿತಂ, ಎಂದಿರುವ ಪ್ರಾಕೃತ ಶಾಸನ ‘ಖರೋಷ್ಠಿ’ ಲಿಪಿಯಲ್ಲಿದೆ. ಇದು ತುಂಬ ಮಹತ್ವದ ಸಾಂಸ್ಕೃತಿಕ ಅಂಶವೆಂಬುದನ್ನು ಇಲ್ಲಿ ಎತ್ತಿ ಹೇಳಬೇಕಾಗಿದೆ. ಕರ್ನಾಟಕದ ಪರಿಸರದಲ್ಲಿ ದೊರೆತ ‘ಖರೋಷ್ಠಿ’ ಲಿಪಿಯ ದಾಖಲೆಗಳಲ್ಲಿ ಇದು ಎರಡನೆಯದು. ಸಿದ್ಧಾಪುರದಲ್ಲಿ ದೊರೆತಿರುವ ಅಶೋಕನ ಶಾಸನಗಳಲ್ಲಿ ಲಿಪಿಕಾರಣ ಹೆಸರು ಮಾತ್ರ ‘ಚಪಡೇನ ಲಿಖಿತಂ’ ಎಂದಿರುವ ಬರಹ ‘ಖರೋಷ್ಠಿ’ಯಲ್ಲಿರುವುದು ವಿದ್ವಾಂಸರಿಗೆ ತಿಳಿದಿದೆ. ಅವರೊಡನೆ ಕೊಲ್ಲಾಪುರದ ಈ ಬರಹವು ಮಹತ್ವದ ದಾಖಲೆಯೆನಿಸುತ್ತದೆ. ಕ್ರಿ.ಶ. ಪೂರ್ವ ೩ ನೆಯ ಶತಮಾನದಿಂದ ಕ್ರಿ.ಶ. ಸುಮಾರು ೨ನೆಯ ಶತಮಾನದವರೆಗೆ ಖರೋಷ್ಠಿ ಮೊದಲಾದ ಬೇರೆ ಬೇರೆ ಲಿಪಿ ಬಲ್ಲ ತಜ್ಞಲೇಖರು ಕರ್ನಾಟಕದಲ್ಲಿದ್ದರೆಂದು ಇದರಿಂದ ಕಂಡುಬರುತ್ತದೆ.

ಶಾಸನಗಳ ಭಾಷೆ ಕುರಿತಂತೆಯೇ ಹೇಳಬೇಕಾದ ವಿಚಾರಗಳು ಇನ್ನೂ ಹಲವಾರು ಇವೆ. ಅವುಗಳನ್ನು ಇನ್ನೂ ಹೆಚ್ಚು ವಿವರವಾಗಿ ಇಲ್ಲಿ ಚರ್ಚಿಸಲು ಅವಕಾಶವಿಲ್ಲ. ಅವರ ‘ಗಮ್ಮಹ’ ‘ವಮ್ಮಹ’ ವಿಚಾರ, ಗುಮ್ಮಟ ಶಬ್ದದ ಉತ್ಪತ್ತಿ; ಶಿಲಾಲಿಪಿ ಚಂಪೂ ಕಾವ್ಯಗಳ ಗದ್ಯ ಸ್ವರೂಪ ‘ಸಮ್‌ ಅಬ್ಸೊಲೀಟ; ಕನ್ನಡ ವರ‍್ಡ್ಸ ಇನ್‌ ಪಂಪ ಭಾರತ-ಮೊದಲಾದವು ಅಂಥವುಗಳಲ್ಲಿ ಕೆಲವು. ಅವರ ಇಂತಹ ಇನ್ನೊಂದು ಮಹತ್ವದ ಲೇಖನ ‘ವೈಯಾಕರಣಭೀಮ ಅಥವಾ ಭೀಮಸೇನ’ ಎಂಬುದು. ಈತನೊಬ್ಬ ಪ್ರಖ್ಯಾತನಾದ ವ್ಯಾಕರಣಕಾರ. ಸಂಸ್ಕೃತದಲ್ಲಿ ಈತ ಧಾತುಪಾಠವನ್ನು ರಚಿಸಿದ್ದಾನೆ. ನಮ್ಮ ಪ್ರಸಿದ್ಧ ವೈಯಾಕರಣಿ ಕೇಶಿರಾಜ, ತಾನು ಧಾತುಪಾಟ ತಯಾರಿಸುವುದರಲ್ಲಿ ಈ ಭೀಮನನ್ನು ಅನುಕರಿಸಿರುವದಾಗಿ ಹೇಳಿಕೊಂಡಿದ್ದಾನೆ. ಕೇಶಿರಾಜನ ಧಾತು ಪ್ರಕರಣ, ಈ ವೈಯಾಕರಣಿ ಭೀಮನ ಕೃತಿಯನ್ನು ಅವಲಂಬಿಸಿದೆ ಎಂದು ಇದರಿಂದ ಖಚಿತವಾಗುತ್ತದೆ.

ಕೊಲ್ಲಾಪುರದ ಪ್ರಸಿದ್ಧ ದೇವತೆ ಮಹಾಲಕ್ಷ್ಮೀಯನ್ನು ಕುರಿತಾಗಿ ಮತ್ತು ದೇವಾಲಯವನ್ನು ಕುರಿತಾಗಿ ಅವರು ಬರೆದಿರುವ ಪುಸ್ತಿಕೆ ತುಂಬ ಪ್ರಸಿದ್ಧಿಯಾಗಿದೆ. ಆ ಪುಸ್ತಿಕೆಯಲ್ಲಿ ಹಲವಾರು ಅಮೂಲ್ಯ ಸಾಂಸ್ಕೃತಿಕ ವಿಚಾರಗಳು ಪ್ರತಿಪಾದಿತವಾಗಿವೆ. ಅವುಗಳಲ್ಲಿ ಚಾಲುಕ್ಯ ‘ಕರ‍್ಣದೇವ’ ಎಂಬುವನು ಒಬ್ಬ ಪ್ರಸಿದ್ಧದೊರೆ ಮತ್ತು ಆತನ ವಂಶ ‘ಕೊಂಕಣ’ ಪ್ರದೇಶದಲ್ಲಿ ಹಲವು ಕಾಲ ರಾಜ್ಯವಾಳಿದ್ದು, ಸ್ಪಷ್ಠಪಡುತ್ತದೆ. ಕರ್ಣದೇವನ ಕಾಲ ಕುರಿತಾಗಿ ಅವರು ಮಾಡಿರುವ ಪರಾಮರ್ಶೆ ತುಂಬ ಉಪಯುಕ್ತವಾಗಿದೆ.

ಮೇಲೆ ತಿಳಿಸಿದ ಪುಸ್ತಿಕೆಯಲ್ಲಿ ಕೊಲ್ಲಾಸುರನೆಂಬ ದೈತ್ಯನ ಕುರಿತು ಚರ್ಚಿಸುತ್ತ ಆತನೊಬ್ಬ ದ್ರಾವಿಡ ಮೂಲದ ರಾಜನಾಗಿರಬೇಕೆಂಬಂತೆ ಪ್ರೊ. ಕುಂದಣಗಾರ ಅವರು ಚರ್ಚಿಸಿದ್ದಾರೆ. ಕೊಲ್ಲ ಎಂಬುದು ಆರ್ಯದ್ರಾವಿಡೇತರ ಸಮುದಾಯ ಸೂಚಕ ಪದ ಎಂಬುದನ್ನು ಅವರು ಪರಿಭಾವಿದಿಲ್ಲ; ಆಮಾತು ಬೇರೆ.

ಇನ್ನು ಅವರು ಛಂದಸ್ಸನ್ನು ಕುರಿತಂತೆ ಬರೆದಿರುವ ಲೇಖನಗಳು ಕೂಡ ಗಮನಾರ್ಹವಾಗಿವೆ. ‘ಕರ್ನಾಟಕ ವಿಷಯ ಜಾತಿ’. [Nagavarma and Jayakirti and Kannada Metres Sangatya and Satpadi Metre] ಷಟ್ಟದಿಕಾರ ರಾಘವಾಂಕ, ಪರಿವರ್ಧಿನಿ, ಷಟ್ಟದಿಯ ಲಕ್ಷಣವೇನು? ಮೊದಲಾದ ಲೇಖನಗಳಲ್ಲಿ ಕುಂದಣಗಾರರು ಕನ್ನಡ ಛಂದಸ್ಸಿನ ಕುರಿತಾಗಿ ಹಲವಾರು ಹೊಸ ವಿಚಾರಗಳನ್ನು ಮಂಡಿಸಿದ್ದಾರೆ. ಜತೆಗೆ ಅವರ ಮಾರ್ಗದರ್ಶನದಲ್ಲಿ ಡಾ. ಡಿ.ಎಸ್‌. ಕರ್ಕಿಯವರು ತಮ್ಮ ಪ್ರಖ್ಯಾತ ಪ್ರಬಂಧ ‘ಕನ್ನಡ ಛಂದೋ ವಿಕಾಸವನ್ನು ರಚಿಸಿ ಛಂದಸ್ಸಿನ ಅಧ್ಯಯನದಲ್ಲಿ ಹೊಸದೊಂದು ಮಾರ್ಗವನ್ನೇ ನಿರ್ಮಿಸಿದರು. ಇನ್ನಿತರ ಅಚ್ಚಗನ್ನಡ ಛಂದೋಬಂಧಗಳ ಜತೆಗೆ ಇದರಲ್ಲಿ ಹಳಗನ್ನಡ-ನಡುಗನ್ನಡಗಳಲ್ಲಿ ತುಂಬ ಜನಪ್ರಿಯವಾಗಿದ್ದ ತ್ರಿಪದಿಯನ್ನು ಕುರಿತಂತೆ ಮೌಲಿಕವಾದ ವಿವರಗಳು ಬಂದಿವೆ. ಹೊಸಗನ್ನಡ ಛಂದಸ್ಸನ್ನು ಕುರಿತಂತೆ ಇದರಲ್ಲಿ ಬಂದಿರುವ ಪರಾಮರ್ಶೆ ತುಂಬ ವಿಸ್ತೃತ ಹಾಗೂ ಮಾರ್ಗದರ್ಶಕವಾಗಿದೆ. ಹೊಸಗನ್ನಡ ಛಂದಸ್ಸಿನ ಗಣ ಯೋಜನೆಗಳ ವಿಷಯದಲ್ಲಿ ಕೂಡ ಇಲ್ಲಿ ಬಂದಿರುವ ವಿವರಗಳು ಸಂಶೋಧಕರ ಬಹುಶ್ರುತತೆ ಹಾಗೂ ಪರಿಪಕ್ವತೆಗೆ ಮಾದರಿ ಎನಿಸಿವೆ. ಇಂಥದೊಂದು ಪ್ರೌಢಗ್ರಂಥಕ್ಕೆ ಪ್ರೊ. ಕುಂದಣಗಾರರು ಮಾರ್ಗದರ್ಶಕರಾಗಿದ್ದರೆಂಬುದನ್ನು ನಾನು ಎಂದೂ ಮರೆಯುವಂತಿಲ್ಲ. ಕನ್ನಡ ಛಂದಸ್ಸನ್ನು ಕುರಿತಾದ ಸಂಶೋಧನೆಯಲ್ಲಿ ಇದೊಂದು ಮೈಲಿಗಲ್ಲು.

ಹಸ್ತಿಮಲ್ಲನನ್ನು ಕುರಿತಂತೆ ಪ್ರೊ. ಕುಂದಣಗಾರ ಅವರು ಬರೆದಿರುವುದು ಈಗ ವಿದ್ವಾಂಸರಿಂದ ಮನ್ನಣೆಗಳಸಿದ ಸಂಗತಿಯಾಗಿದೆ. ಆತ ಕ್ರಿ.ಶ. ೧೩೦೦ ರಿಂದ ೧೩೧೯ರ ನಡುವಿನ ಕಾಲಾವಧಿಯಲ್ಲಿದ್ದನೆಂದು ಹೇಳಿರುವುದು ತುಂಬ ಉಚಿತ. ಅಲ್ಲದೆ ಆತನ ಕೃತಿ ‘ಪೂರ್ವ ಪುರಾಣ’ ವನ್ನು ಕುಂದಣಗಾರರು ಸಂಪಾದಿಸಿ ಪ್ರಕಟಿಸಿದ್ದಾರೆ. ಹಸ್ತಿಮಲ್ಲನ ಆಶ್ರಯದಾತ, ಆತನ ಸಂಸ್ಕೃತಿ ನಾಟಕ ಮೊದಲಾದ ಗ್ರಂಥ ಸಮುದಾಯ ಅವನನ್ನು ಉಲ್ಲೇಖಿಸಿರುವ ಇತರರು ಅವನ ವಂಶ ಪರಂಪರೆ, ಮೊದಲಾಗಿ ಅಮೂಲ್ಯ ಸಂಗತಿಗಳನ್ನು ಪ್ರೊ. ಕುಂದಣಗಾರರು ತುಂಬ ಶ್ರಮವಹಿಸಿ ಒದಗಿಸಿದ್ದಾರೆ.

‘ಸ್ವಾದಿಯ ತಾಮ್ರ ಶಾಸನಗಳು’ ಎಂಬ ಲೇಖನದಲ್ಲಿ ಸ್ವಾದಿಯ ಅರಸರ ವಂಶಾವಳಿ ಹಾಗೂ ಅಲ್ಲಿನ ಜೈನ ಮಠದ ಗುರವಂಶಾವಳಿಯನ್ನು ಕುರಿತು ಚರ್ಚಿಸಿದ್ದಾರೆ ಅದೇ ರೀತಿ ನಮ್ಮ ಇನ್ನೊಬ್ಬ ಪ್ರಸಿದ್ಧ ವೈಯಾಕರಣಿ ಭಟ್ಟಾಕಳಂಕನನ್ನು ಕುರಿತಾಗಿ ಈ ಲೇಖನದಲ್ಲಿ ಬಂದಿರುವ ಅಂಶಗಳು ಮಹತ್ವಪೂರ್ಣವಾಗಿವೆ. ಸ್ವಾದಿಯೂ ಆರೂ ಶಾಸನಗಳನ್ನು ಕುರಿತು ಚರ್ಚಿಸುವದರೊಂದಿಗೆ ಅವುಗಳ ಪಾಠಗಳನ್ನು ಕೂಡ ಇದರಲ್ಲಿ ಕೊಡಲಾಗಿದೆ. ಮುಖ್ಯವಾಗಿ ಎರಡು ವಿಷಯಗಳು ಇದರಲ್ಲಿ ಪ್ರಮುಖವಾಗಿ ಚರ್ಚಿಸಲ್ಪಟ್ಟಿವೆ. ಮೊದಲನೆಯದು ಭಟ್ಟಾಕಳಂಕನ ಗುರುಪರಂಪರೆ. ಈ ಪರಂಪರೆ ಮೂಲತಃ ಹಾಡುವಹಳ್ಳಿಯದೆಂದು ಶಾಸನದಿಂದ ಸ್ಪಷ್ಟಪಡುತ್ತದೆ. ಅನಂತರ ಇವರು ಬಿಳಿಗೆಯ ರಾಜರಿಂದಲೂ ಪೂಜಿತರಾಗಿದ್ದರು. ೩ನೆಯ ಶಾಸನ ಕಾಲವಾದ ಕ್ರಿ.ಶ. ೧೫೮೮/೯ ರಲ್ಲಿ ಬಿಳಿಗೆಯ ದೊರೆ ಘಂಟೇಂದ್ರನಿಂದ ಭಟ್ಟಾಕಲಂಕ ಸಂಪೂಜಿತನಾದ್ದ. ಹಾಗೂ ಅದೇ ರಾಜನಿಂದ ಬಿಳಿಗೆಯಲ್ಲಿ ನೇಮಿನಾಥ, ಪಾರ್ಶ್ವನಾಥ ಮತ್ತು ವರ್ಧಮಾನ ತೀರ್ಥಂಕರರ ಮೂರ್ತಿಗಳನ್ನೊಳಗೊಂಡ ಬಸದಿ ಕಟ್ಟಿಸಲ್ಪಟ್ಟಿತ್ತು. ಈ ದೇವರುಗಳಿಗಾಗಿ ಸೋವಿನ ಕೊಪ್ಪ ಮೊದಲಾದ ಒಂಬತ್ತು ಹಳ್ಳಿಗಳು ದಾನವಾಗಿ ದೊರತವು. ಇದರ ಜೊತೆಗೆ ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಇದರಲ್ಲಿ ಭಟ್ಟಾಕಳಂಕನ ಗುರಪರಂಪರೆ ದೀರ್ಘವಾಗಿ ದಾಖಲಿತವಾಗಿರುವುದು. ಸಂಗೀತಪುರ ಎಂದರೆ ಹಾಡುವ ಹಳ್ಳಿ (ಇಂದಿನ ಭಟಕಳ. ತಾಲೂಕು) ಯಲ್ಲಿ ಮೂಲಸಂಘದ ದೇಶೀಯ ಗಣದಲ್ಲಿ (೧) ವಿಜಯಕೀರ್ತಿ ಎಂಬ ಮುನಿ ®ಶಿಷ್ಯ (೨) ಅಕಲಂಕ ®ಶಿಷ್ಯ (೩) ವಿಜಯ ಕೀರ್ತಿ ®ಶಿಷ್ಯ (೪) ಚಂದ್ರಪ್ರಭಯತಿ®ಶಿಷ್ಯ (೫) ಪುಷ್ಪದಂತ®ಶಿಷ್ಯರು (೬) ವಿಜಯಕೀರ್ತಿ ಮತ್ತು (೭) ಜಯಕೀರ್ತಿ ಎಂಬಿಬ್ಬರು. ಇವರಲ್ಲಿ ಜಯಕೀರ್ತಿಯ ಶಿಷ್ಯ (ಬಹುಶಃ ಮೂರನೆಯ) (೮) ಅಕಲಂಕ ®ಶಿಷ್ಯ (೯) ಭಟ್ಟಾಕಲಂಕ. ಎಂಬ ಪರಂರೆ ದಾಖಲೆಗೊಂಡಿದೆ. ಅವರಿತ್ತಿರುವ ಆರನೆಯ ಶಾಸನ ಪಾಠದಲ್ಲಿ ಈ ಗುರುವಂಶದ ಮೂಲ ಪುರುಷ ವಿಜಯಕೀರ್ತಿ ಎಂದೇ ಹೇಳಿದೆ. ಈ ಅನ್ವಯದಲ್ಲಿ (ತರುವಾಯ) ಚಂದ್ರಪ್ರಭ ಮುನಿಯಾದನೆಂದಿದೆ. ೬ನೆಯ ಶಾಸನದ ಈ ವಿಜಯಕೀರ್ತಿ ಮತ್ತು ಚಂದ್ರಪ್ರಭರು ಮೇಲೆ ೩ನೆಯ ಶಾಸನೋಲ್ಲಿಖಿತರಾದ ಮುನಿಗಳಲ್ಲಿ ಕ್ರಮವಾಗಿ ೧ನೆಯ ಮತ್ತು ೪ನೆಯವರು. ಆರನೆಯ ಶಾಸನದಲ್ಲಿ ತರುವಾಯ ಅಕಲಂಕ ಶ್ರೀವಿಜಯ ವಿಮಲಕೀರ್ತಿ, ಮತ್ತು ನಿಷ್ಕಲಂಕ ಎಂಬ ಮುನಿಗಳ ಹೆಸರಿದ್ದು ಇವರನ್ನು ೩ನೆಯ ಶಾಸನದಲ್ಲಿನ ಮುನಿಗಳ ಜತೆಗೆ ಖಚಿತವಾಗಿ ಸಮೀಕರಿಸುವುದು ಸ್ವಲ್ಪ ಕಷ್ಟ. ಅದೇನಿದ್ದರೂ ವೈಯಾಕರಣ ಭಟ್ಟಾಕಳಂಕನ ಗುರುಪರಂಪರೆ ಸು. ೧೪ನೆಯ ಶತಮಾನದಿಂದ ಪ್ರಾರಂಭ ಗೊಳ್ಳುತ್ತದೆಂಬ ಅಂಶ ಇವೆರಡು ಸ್ವಾದಿಯ ಶಾಸನಗಳಿಂದ ಖಚಿತಪಡುತ್ತದೆ. ಹಾಗೂ ಈ ಪರಂಪರೆಯ ಜೈನಯತಿಗಳು ಹಾಡುವಹಳ್ಳಿ, ಬಿಳಿಗೆ ಹಾಗೂ ಸ್ವಾದಿ ಈ ಮೂರುರಾಜ ವಂಶಗಳಿಗೆ ಗುರುಸ್ಥಾನದಲ್ಲಿದ್ದರೆಂದು ಖಚಿತವಾಗಿ ಹೇಳಬಹುದಾಗಿದೆ. ಒಟ್ಟಿನಲ್ಲಿ ಕುಂದಣಗಾರರು ಪ್ರಕಟಿಸಿರುವ ಸ್ವಾದಿಯ ಶಾಸನಗಳಿಂದ ಈ ಜೈನ ಪರಂಪರೆಯ ಮೇಲೆ ಅಪೂರ್ವವಾದ ಬೆಳಕು ಬೀಳುತ್ತದೆಂಬುದನ್ನು ವಿದ್ವಾಂಸರು ಗಮನಿಸಬೇಕಾಗಿದೆ.

ಇದರಂತೆ ಪಂಪನ ಹಿನ್ನೆಲೆ, ಹರಿಹರದೇವನ ಕಾಲ ಇತ್ಯಾದಿ ಅವರ ಲೇಖನಗಳಲ್ಲಿ ಕೂಡ ಹಲವು ಮುಖ್ಯ ವಿಚಾರಗಳು ಚರ್ಚಿತವಾಗಿವೆ. ಆದರೆ ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಒಬ್ಬ ವ್ಯಾಸನೆಂಬ ಕವಿಯ ಹೆಸರು ಹೇಳಿದ್ದಾನೆಂದು, ಆರ್‌. ನರಸಿಂಹಾಚಾರ್ಯರ ಅಭಿಪ್ರಾಯವನ್ನು ಎತ್ತಿಹೇಳಿದ್ದಾರೆ. ಇಲ್ಲಿನ ವ್ಯಾಸ ಮುನೀಂದ್ರನೆಂದರೆ ಮೂಲ ಮಹಾಭಾರತ ಕರ್ತೃ ವೇದವ್ಯಾಸನೇ ಹೊರತು ಯಾವನೋ ಒಬ್ಬ ವ್ಯಾಸನೆಂಬ ಕವಿಯಲ್ಲ. ಹರಿಹರ ಕವಿಯ ಕಾಲ ಚರ್ಚೆಯಲ್ಲಿ ಅಡಕವಾದ ಕಾಕತೀಯ ರುದ್ರ, ಹಂಪೆಯ ದೇವರಾಯ, ಅವನ ಸೋದರಳಿಯ ರಾಘವಾಂಕ ಮೊದಲಾದವರನ್ನು ಕುರಿತು ಕುಂದಣಗಾರರು ಉಪಯುಕ್ತ ಚರ್ಚೆಯನ್ನೇ ಇತ್ತಿದ್ದಾರೆ. ಕನ್ನಡ ವಿದ್ವಲ್ಲೋಕದಲ್ಲಿ ಚರ್ಚಿಸಲ್ಪಡುತ್ತಿದ್ದ ಭಾಷೆ ಸಾಹಿತ್ಯ ಕುರಿತಾದ ಒಟ್ಟಾರೆಯಾಗಿ ಅಂದು ಇಂಥ ಹಲವಾರು ವಿಚಾರಗಳು ಅವರ ಲೇಖನಗಳಲ್ಲಿ ಪ್ರಸ್ತುತಗೊಂಡಿವೆ. ಭಾಷೆಯನ್ನು ಕುರಿತಾಗಿ ಅವರು ಅಷ್ಟಾಗಿ ಗಮನ ಹರಿಸಿಲ್ಲವಾದರೂ ಸಾಹಿತ್ಯ ಚರಿತ್ರೆ ಮತ್ತು ಛಂದಸ್ಸನ್ನು ಕುರಿತಾಗಿ ಅವರು ತುಂಬ ಶ್ರದ್ಧೆಯಿಂದ ಅಳವಾದ ಅಧ್ಯಯನ ನಡೆಸಿದ್ದು ಸ್ಪಷ್ಟವಾಗಿದೆ. ಕೆಲಮೊಮ್ಮೆ ಅವರು ತಪ್ಪು ಶಾಸನ ಪಾಠಗಳನ್ನು ಕೊಟ್ಟಿರುವರಾದರೂ ಆ ಕ್ಷೇತ್ರದಲ್ಲೂ ಅವರ ಕಾಣಿಕೆ ಗಮನಾರ್ಹವಾಗಿದೆ. ಉತ್ತರ ಕರ್ನಾಟಕದ ಒಂದು ತಲೆಮಾರಿನ ವಿದ್ವಾಂಸರನ್ನು ತಯಾರಿಸಿದ ಶ್ರೇಯಸ್ಸು, ಪ್ರೊ. ಕುಂದಣಗಾರರದಾಗಿದೆ.