ಗೊಂದಲಿಗರು ಯಾವ ಮೂಲದವರು? ಕರ್ನಾಟಕದವರೋ ಅಥವಾ ಮಹಾರಾಷ್ಟ್ರದವರೋ ಎಂಬ ಬಗೆಗೆ ವಿದ್ವಾಂಸರಲ್ಲಿ ಇಂದು ಅಭಿಪ್ರಾಯ ಭೇದ ಉಂಟಾಗಿರುವುದು ಕಂಡುಬರುತ್ತದೆ. ಈಗಲೂ ಇವರು ಕರ್ನಾಟಕದ ಬಹುಭಾಗಗಳಲ್ಲಿ ಹರಡಿದ್ದರೂ ಮರಾಠಿಯನ್ನೇ ಮಾತೃಭಾಷೆಯನ್ನಗಿ ಆಡುತ್ತಿರುವುದರಿಂದ ಮೂಲತಃ ಮಹಾರಾಷ್ಟ್ರದವರೇ ಆಗಿರಬಹುದೆಂಬ ಅಭಿಪ್ರಾಯ, ಬಹುಜನರಲ್ಲಿದೆ. ಈ ಸಮಸ್ಯೆಯ ಎಲ್ಲ ಮುಖಗಳು ಈ ವರೆಗೆ ವಿವರವಾದ ಪರಿಶೀಲನಗೆ ಒಳಗಾದಂತೆ ತೋರಲಿಲ್ಲ. ಹಾಗೆ ವಿವರವಾಗಿ ಪರಿಶೀಲಿಸದ ಹೊರತು ಯಾವೊಂದು ನಿರ್ಣಯಕ್ಕೆ ಬಂದು ಮುಟ್ಟುವುದು ತರವಲ್ಲ. ಅದರಲ್ಲೂ ‘ಗೊಂದಲಿಗ’ ಪದದ ರೂಪನಿಷ್ಪತ್ತಿಯನ್ನು ಕುರಿತು ವಿಚಾರಿಸಬೇಕಾದುದು ತೀರಮುಖ್ಯ. ಸಮಸ್ಯೆಯ ಈ ಮುಖವನ್ನು ಪರಿಶೀಲಿಸಿ ಸದೆ ಹೇಳಿದ ಯಾವ ನಿರ್ಣಯವೂ ಯೋಗ್ಯವೆನಿಸಲಾರದು. ಆದುದರಿಂದ ‘ಗೊಂದಲಿಗ’ ಪದ ವ್ಯುತ್ಪತ್ತಿಯನ್ನು ಕುರಿತು ವಿಚಾರಿಸುವುದು ಈ ಲೇಖನದ ಮುಖ್ಯ ಉದ್ದೇಶ. ಜೊತೆಗೆ ಬೇರೆ ಒಂದೆರಡು ಸಂಗತಿಗಳನ್ನು ಕುರಿತೂ ಇಲ್ಲಿ ಚರ್ಚಿಸಿದೆ.

ಪ್ರಾಕೃತ ಮತ್ತು ಸಂಸ್ಕತಗಳಲ್ಲಿ ‘ಗುಂದಲ’ ಎಂಬ ಪದ ದೊರೆಯುತ್ತಿದೆ. ಸಂಸ್ಕೃತ ಅಥವಾ ಪ್ರಾಕೃತದಲ್ಲಿ ಇದಕ್ಕೆ ಸರಿಯಾದ ನಿಷ್ಪತ್ತಿ ಹೇಳುವುದು ಸಾಧ್ಯವಿಲ್ಲ. ಈ ಮಾತು ಅನೇಕ ವಿದ್ವಾಂಸರಿಗೆ ಈಗಾಗಲೇ ಮನವರಿಕೆಯಾಗಿದೆ. ಅಲ್ಲದೆ ಮಹಾರಾಷ್ಟ್ರದ ವಿದ್ವಾಂಸರಲ್ಲಿಯೇ ಕೆಲವರು ಇದು ಕನ್ನಡ ಮೂಲದ ಪದವಿರಬಹುದೆಂದು ಸೂಚಿಸುತ್ತ ಬಂದಿದ್ದಾರೆ. ಇದು ಕೂಡ ಈ ಶಬ್ದಕ್ಕೆ ಆರ್ಯವರ್ಗದ ಭಾಷೆಗಳಲ್ಲಿ ಸರಿಯಾದ ನಿಷ್ಪತ್ತಿ ಅಥವಾ ಜ್ಞಾತಿಪದಗಳು ಇಲ್ಲವೆಂಬುದನ್ನು ಶ್ರುತಪಡಿಸುತ್ತದೆ. ಮರಾಠಿ ಮತ್ತು ಗುಜರಾಥಿಗಳಲ್ಲಿ ಗುಂತ, ಗುಂಥ ಎಂಬ ಕ್ರಿಯಾಧಾತುಗಳು ಇವೆ. ಇವುಗಳ ಅರ್ಥ ‘ತೊಡಕು’, ತೊಡಕಿಕೊಳ್ಳು’ ಎಂದು ಮುಂತಾಗಿ ಇದೆ. ಆದುದರಿಂದ ಇವುಗಳೊಡನೆ ಗೊಂದಳ, ಗೋಂಧಳಗಳ ಸಂಬಂಧ ಕಲ್ಪನೆ ಸಾಧುವಾದುದಲ್ಲವೆಂದು ಹೇಳಬಹುದು.

ಇನ್ನು ಒಂದು ಶಬ್ದವು ಒಂದು ಭಾಷೆಗೆ ಸೇರಿದ್ದೆಂದು ಹೇಳಬೇಕಾದರೆ ಅದಕ್ಕೆ ಒಂದು ಮೂಲ ಪ್ರಕೃತಿಯಿದು ಅದರಿಂದ ಸೃಷ್ಟಿಗೊಂಡ ಪದ ಸಮುದಾಯ ಅಥವಾ ರೂಪಾವಳಿ ಆ ಭಾಷೆ ಮತ್ತು ಅದರಂಥ ಬೇರೆ ಜ್ಞಾತಿ-ಭಾಷೆಗಳಲ್ಲಿ ದೊರೆಯುತ್ತಿರಬೇಕು. ಹಾಗಿಲ್ಲದೆ ಏಕಾಕಿಯಾಗಿ ಒಂದು ಪದವು ಒಂದು ಗುಂಪಿನ ಭಾಷೆಗಳ ಪೈಕಿ ಎಲ್ಲೊ ಒಂದರಲ್ಲಿ ಮಾತ್ರ ಕಂಡುಬಂದರೆ ಅದರ ಮೂಲವು ಆ ಭಾಷೆಯಲ್ಲಿಲ್ಲವೆಂದು ನಿರ್ಧರಿಸಬೇಕಾಗುತ್ತದೆ. ಸಂಸ್ಕೃತ ಮತ್ತು ಮರಾಠಿಗಳಲ್ಲಿ ಈ ಪದವು ಏಕಾಕಿಯಾಗಿದೆ. ಎಂದ ಮೇಲೆ ಇದು ಆರ್ಯಮೂಲದ ಪದವಲ್ಲವೆಂದು ಭಾವಿಸಲು ಮತ್ತೊಂದು ಸಾಧಕ ಅಂಶವೆನಿಸುತ್ತದೆ.

ಇನ್ನು ಇಷ್ಟರಮೇಲೆ ‘ಗೊಂದಲ’ ಪದವನ್ನು ಕನ್ನಡ ಮತ್ತು ಅದರ ಜ್ಞಾತಿ ಭಾಷೆಗಳಲ್ಲಿ ನೋಡಬಹುದು. ಹತ್ತನೆಯ ಶತಮಾನದಿಂದಲೂ ಇದು ಗೊಂದಣ ಗೊಂದಳ ಎಂಬ ರೂಪದಲ್ಲಿ ಕನ್ನಡದಲ್ಲಿ ದೊರೆಯುತ್ತಿದೆ. ಇದಕ್ಕೆ assemblage, Crowd. Concourse of People ಎಂಬ ಅರ್ಥಗಳಿವೆ. ತಮಿಳಿನಲ್ಲಿ ಕೊಂತಳಮ್‌ ಎಂಬುದಕ್ಕೆ Confusion, Turmoil (D.E.D. No. ೧೭೪೫),

[1] a kind of dance (D.E.D. No. ೧೭೪೬). ಎಂದು ಅರ್ಥಗಳಿರುವುದನ್ನು ಗಮನಿಸಬಹುದು. (ತಮಿಳಿನಲ್ಲಿ ಘೋಷಕ್ಕೆ ಪ್ರತ್ಯೇಕವಾದ ಲಿಪಿ, ಸಂಜ್ಞೆ ಇಲ್ಲವೆಂಬುದನ್ನು ಇಲ್ಲಿ ಸ್ಮರಿಸಬಹುದು ಅಗತ್ಯ.) ತೆಲುಗಿನಲ್ಲಿ ಗೊಂಡಲಿಗೆ, ಗೊಂಡ್ಲಿ (D.E.D. ೧೭೪೬) ಎಂಬ ರೂಪದಲ್ಲಿ ಇದು ಬಳಕೆಯಲ್ಲಿದ್ದು ಇಲ್ಲಿಯೂ ನರ್ತಿಸುವಿಕೆ ಎಂಬ ಅರ್ಥವಿದೆ. ಎಂದರೆ ಜನರಗುಂಪು, ನೃತ್ಯ (>ಗದ್ದಲ) ಎಂಬ ಅರ್ಥಗಳು ಇದರ ಹಿಂದಿರುವುದು ಕಂಡುಬರುತ್ತದೆ. ಎಂದರೆ ಮೂಲದಲ್ಲಿ ‘ಹಲವು ಜನರು ಕೂಡಿ ನರ್ತಿಸುವುದು’ ಎಂಬ ಅರ್ಥವೇ ಇದಕ್ಕೆ ಇರಬೇಕೆಂದು ಇದರಿಂದ ಖಚಿತವಾಗುತ್ತದೆ.

ಇಲ್ಲಿಯೆ ಇದರ ಸಮೀಪವರ್ತಿಯಾದ ಇತರ ಪದಗಳನ್ನು ಕುರಿತು ಸ್ವಲ್ಪ ವಿವರಗಳನ್ನು ನಾವು ನೋಡಬಹುದು.

ಉದಾ:

ಕನ್ನಡ : ಕೊತ್ತು, ಕೊತ್ತಣಿ, ಕೊತ್ತೞಿ= Multitude assemblage (D.E.D. No. 1741)
ಗುತ್ತಿ, ಗುದಿ= Bunch or cluster of fruits of flowers.
ತಮಿಳು : ಕೊಂತು = Cluster of flowers, gathering Multitude
ಕೊತ್ತು = Cluster, assembly, family
ಮಲೆಯಾಳಿ : ಕೊತ್ತು = (ತಮಿಳಿನಲ್ಲಿರುವ ಅರ್ಥದಲ್ಲಿಯೆ)
ತೆಲಗು : ಗುತ್ತಿ, ಗುದಿ = (ಕನ್ನಡದಲ್ಲಿರುವ ಅರ್ಥದಲ್ಲಿಯೆ)

ಮೇಲಿನ ಎಲ್ಲ ರೂಪಗಳು ನೋಡಿದರೆ ಇದು ದ್ರಾವಿಡ ಮೂಲಕ ಪದವೆಂಬಲ್ಲಿ ಯಾವ ಸಂಶಯವೂ ಇಲ್ಲವೆಂದು ಹೇಳಬಹುದು. ಎಂತಲೇ ಡಾ. ಎಂ.ಬಿ. ಎಮಿನೊ ಮತ್ತು ಟಿ. ಬರೋ ಅವರು ತಮ್ಮ ದ್ರಾವಿಡ ಭಾಷಾ ಜ್ಞಾತಿ ಪದಕೋಶದಲ್ಲಿ ಇದಕ್ಕೆ ಸ್ಥಾನಕೊಟ್ಟಿದ್ದಾರೆ. ಒಟ್ಟಿನಲ್ಲಿ ‘ಗೊಂದಲ’ ಗೊಂದಣ ಮೊದಲಾದ ಈ ಪದಗಳ ರೂಪಗಳಲ್ಲಿ ಕೊನ್ತ್‌ ಅಥವಾ ಕೊತ್ತ್‌ ಎಂಬ ಮೂಲ ಪ್ರಕೃತಿಯಿದ್ದು ಅದರಿಂದ ಉಳಿದ ರೂಪಗಳು ಸಿದ್ಧಿಸಿವೆಯೆಂದು ಹೇಳಲು ಅಭ್ಯಂತರವಿಲ್ಲ.

ಇನ್ನು ಈ ಶಬ್ದದ ರೂಪಗಳಲ್ಲಿ ಇರುವ ಧ್ವನ್ಯಾತ್ಮಕ ವ್ಯತ್ಯಾಸಗಳನ್ನು ನೋಡಬಹುದು. ತಮಿಳಿನಲ್ಲಿ ಪದಾದಿಯಲ್ಲಿ ಅಘೋಷ ಧ್ವನಿಯಿದ್ದು ಕನ್ನಡ-ತೆಲುಗುಗಳಲ್ಲಿ ಘೋಷವಿದೆ. ಮೂಲದ್ರಾವಿಡದಲ್ಲಿದ್ದ ಪದಾದಿ ಅಘೋಷದ ಬದಲು ಕನ್ನ-ತೆಲುಗುಗಳಲ್ಲಿ ಬಹಳಷ್ಟು ಕಡೆ ಘೋಷವಿರುವುದು ಸಾಮಾನ್ಯವಾದ ಸಂಗತಿ. ಅಷ್ಟೆ ಏಕೆ ಕನ್ನಡದಲ್ಲಿಯೇ ಅನೇಕ ಪದಗಳಲ್ಲಿ ಈ ಘೋಷ-ಅಘೋಷಗಳ ಗೊಂದಲವಿರುವುದುಂಟು.

ಉದಾ:

ಕೆಳೆಯ ಗೆಳೆಯ
ಕೀರು ಗೀರು
ಕೀಸು ಗೀಚು
ಕೆಯ್‌ ಗೆಯ್‌
ತಡಿ ದಡಿ
ತಣಿ ದಣಿ
ತುಡಿ ದುಡಿ
ಪುಟ್ಟಿ ಬುಟ್ಟಿ
ಪಟ್ಟೆ ಬಟ್ಟೆ
ತಮಿಳು ಕನ್ನಡ
ಕಿಳಿ ಗಿಳಿ
ಕಂಟಾನ್‌ ಗಂಡ (ನ್‌)
ಕುಂಟು ಗುಂಡು

ಇನ್ನು ಕೊತ್ತು-ಕೊಂತು, ಕೊಂತಳಮ್‌, ಗೊಂದಲಗಳಲ್ಲಿ ಒಂದೆಡೆ ಸಜಾತೀಯ ದ್ವಿತ್ವ, ಮತ್ತೊಂದೆಡೆ ಸಾನುನಾಸಿಕ ದ್ವಿತ್ವಗಳಿರುವುದು ಕಂಡುಬರುತ್ತದೆ. ಇದು ಕನ್ನಡ (ಹಾಗೂ ಇತರ ದ್ರಾವಿಡ ಭಾಷೆಗಳಲ್ಲಿ)ದ ಹಲವಾರು ಪದಗಳಲ್ಲಿ ತೋರುವ ಸ್ವಚ್ಛಂದ ಪರಿವರ್ತನೆಯಾಗಿದೆ.[2] ಕನ್ನಡದಲ್ಲಿರುವ ಮುಂದಿನ ಕೆಲವು ದ್ವಂದ್ವರೂಪಗಳನ್ನು ನೋಡಬಹುದು:

ಕೆಂಚ – ಕೆಚ್ಚ-
ಪಂಚು (ಹಂಚು) ಪಚ್ಟು
ಪಿಂತಿಲ್‌ ಹಿತ್ತಿಲು (ಹೊ.ಗ.)
ಕೊಂಕೆ ಕೊಕ್ಕೆ
ಚುಂಚು ಚುಚ್ಚು
ಗುಂಪಿ ಕುಪ್ಪಿ
ಗುಂಪು  
ಗುಂಪೆ ಕುಪ್ಪೆ
ಹೆಂಚು ಹೆಚ್ಚು
ಪೆಂಟಿ ಪೆಟ್ಟೆ
ಪೆಂಗೆ, ಪೆಂಗಿ ಪೆಗ್ಗ
ಒಂಕುಂದ (ಕವಿರಾಜಮಾರ್ಗ) ಒಕ್ಕುಂದ

ಇದರಿಂದ ಕೊಂತು ಅಥವಾ ಕೊತ್ತು ಎಂಬ ಪ್ರಕೃತಿಗೆ –ಅಣ್, -ಅಳ್‌, -ಅಲ್‌, ಅಥವಾ –ಅೞಾ ಮೊದಲಾದ ಪ್ರತ್ಯಯಗಳು ಸೇರಿ ಗೊಂದಣ, ಗೊಂದಳ, ಗೊಂದಲ (ಅಥವಾ ಕೊತ್ತೞೆ) ಎಂಬ ರೂಪಗಳು ಸಿದ್ಧಿಸಿವೆಯೆಂದು ಹೇಳಬಹುದು. ಇಲ್ಲಿಯ ಕನ್ನಡ ಮತ್ತು ಇತರ ದ್ರಾವಿಡ ಭಾಷೆಗಳ ರೂಪಗಳ ಅಂತ್ಯದಲ್ಲಿರುವ ೞಾ, ಳ್‌, ಣ್‌, ಲ್‌, ಗಳು ಪರಸ್ಪರ ವ್ಯತ್ಯಾಸಗೊಳ್ಳುವುದು ಹಲವು ಸಂದರ್ಭಗಳಲ್ಲಿ ತೋರುವ ಸಾಮಾನ್ಯ ಸಂಗತಿ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಮರಾಠಿ ರೂಪ ‘ಗೋಂಧಳ’ ದಲ್ಲಿಯ ದೀರ್ಘಸ್ವರ ಮತ್ತು ಮಹಾಪ್ರಾಣಗಳ ಬಗೆಗೆ ಶ್ರೀಜ್ಯೋತಿ ಹೊಸೂರ (ಕಾಲ ೧-೧: ಪುಟ ೮೬-೮೭) ಅವರು ಇತ್ತ ವಿವರಣೆ ಸಮರ್ಪಕವಾಗಿದೆ.

ಗೊಂದಲಿಗರ ಪರಂಪರೆಯು ಕರ್ನಾಟಕದಲ್ಲಿ ಬಹುಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದ್ದ ಬಗೆಗೆ ದಾಖಲೆಗಳಿವೆ. ಅಂಥವುಗಳನ್ನು ಹಲವು ಜನ ಲೇಖಕರು ಈಗಾಗಲೇ ಸೂಚಿಸಿದ್ದಾರೆ.

ಇಷ್ಟೆಲ್ಲ ಇರುವಾಗ ಗೊಂದಲಿಗರು ಇಂದು ತಮ್ಮ ಮನೆ ಮಾತಾಗಿ ಮರಾಠಿಯನ್ನು ಬಳಸುತ್ತಿದ್ದಾರೆಲ್ಲ? ಎಂಬ ಸಮಸ್ಯಸೆ ಎದ್ದು ನಿಲ್ಲುತ್ತದೆ. ಸರಿ ಸುಮಾರು ೧೪ ನೆಯ ಶತಮಾನದವರೆಗೂ ಗೋದಾವರೀ ತೀರದವರೆಗೆ ಕನ್ನಡ ಭಾಷೆಯ ವ್ಯಾಪಿಸಿದ್ದುದಕ್ಕೆ ಬೇಕಾದಷ್ಟು ಐತಿಹಾಸಿಕ ಪುರಾವೆಗಳಿವೆ. (ಇಂದಿನ) ಮಹಾರಾಷ್ಟ್ರದ ಗೋದಾವರೀತಟದ ನಾಂದೇಡಪಟ್ಟಣದ ಕಾಲೇಜೊಂದು ಈಗ್ಗೆ ಸು. ಹತ್ತು ವರ್ಷಗಳ ಹಿಂದೆ ಈ ಜಿಲ್ಲೆಯಲ್ಲಿ ದೊರೆತ ಶಾಸನಗಳನ್ನು ಪ್ರಕಟಿಸಿದೆ. ಅದರಲ್ಲಿ ಸು, ಮೂರು ನಾಲ್ಕನೆಯ ಅಂಶದಷ್ಟು ಶಾಸನಗಳು ಕನ್ನಡ ಭಾಷೆಯಲ್ಲಿವೆ. ಅಷ್ಟೇ ಅಲ್ಲದೆ ನಾಂದೇಡೆ ಜಿಲ್ಲೆಯ ಬೋಧನವೇ ಮೊದಲಾದೆಡೆಗಳಲ್ಲಿ ಈಗಲೂ ಕನ್ನಡ ಮಾತೃ ಭಾಷೆಯುಳ್ಳ ಹಲವು ಜನಾಂಗದವರು ಇದ್ದೆ ಇದ್ದಾರೆ. ೧೪ನೆಯ ಶತಮಾನಕ್ಕೆಂದರೆ ಅಚ್ಚಗನ್ನಡ ರಾಜಮನೆತನಗಳೆಲ್ಲವೂ ಪತನಗೊಂಡು ಅನಂತರ ಮರಾಠಿ ಮಾತೃ ಭಾಷೆಯ ರಾಜಮನೆತನ ಈ ಭಾಗದಲ್ಲಿ ಪ್ರತಿಷ್ಠಿತಗೊಂಡಿತು. ಇದರಿಂದ ಮತ್ತು ಉತ್ತರದಿಂದ ದಕ್ಷಿಣಕ್ಕೆ ಆರ್ಯಮೂಲದ ಜನಾಂಗಗಳ ವಲಸೆ ಅಪ್ರತಿಹತವಾಗಿ ನಡೆದುಬಂದುದರಿಂದ ಗೋದಾವರಿಯ ದಕ್ಷಿಣದಲ್ಲಿ ಕನ್ನಡವನ್ನು ಒತ್ತುತ್ತ ಮರಾಠಿಯು ಸಾಗಿಬಂತು. ಬರುವ ಅದರ ಪ್ರವಾಹದ ಸೆಳೆತದಲ್ಲಿ ಚಿಕ್ಕಪುಟ್ಟವಾದ ಅನೇಕ ಕನ್ನಡ ಪಂಗಡಗಳು ತಮ್ಮ ಮೊದಲಿನ ಮಾತೃಭಾಷೆಯನ್ನು ತ್ಯಾಗ ಮಾಡಿದ್ದರೆ ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ. ಅಲ್ಲದೆ ವಿದರ್ಭ ಮತ್ತು ಕೊಂಕಣಗಳನ್ನು ಹೊರತುಪಡಿಸಿ ಉಳಿದ ಮರಾಠಿ ಪ್ರದೇಶದ ಜನರಿಗೂ ತುಂಗಭದ್ರೆಯ ಉತ್ತರಕ್ಕಿರುವ ಕನ್ನಡಿಗರಿಗೂ ಜಾನಾಂಗಿಕವಾಗಿ ಹೋಲಿಕೆಗಳು (Ethnological affinities) ಈಗಲೂ ಸ್ಪಷ್ಟವಾಗಿ ಕಂಡುಬರುತ್ತದೆ. ಜನಾಂಗವೇ ತನ್ನ ಮಾತೃ ಭಾಷೆಯನ್ನು ಬದಲಿಸಬಹುದು. ಇದಕ್ಕೆ ಓಡಿಸಾರಾಜ್ಯವೊಂದು ಒಳ್ಳೆಯ ನಿದರ್ಶನ. ಓಡಿಸಾದ ಜನತೆಯಲ್ಲಿ ಬಹುಪಾಲ ದ್ರಾವಿಡವರ್ಗಕ್ಕೆ ಸೇರಿದ್ದು. ಆದರೆ ಅಲ್ಲಿ ಇಂದು ಪ್ರಚಲಿತವಿರುವ ಬಹುಜನರ ಭಾಷೆ ಆರ್ಯವರ್ಗದ ಉಡಿಯಾ, ಹಿಂದಿನ ಅರ್ಧಶತಮಾನದ ಅವಧಿಯಲ್ಲಿಯೇ ಬೆಳಗಾವಿಯಲ್ಲಿ ಅಚ್ಚಗನ್ನಡವಾಗಿದ್ದ ಹಲವಾರು ಮನೆತನಗಳು ಮರಾಠಿ ಮನೆತನಗಳಾಗಿ ಪರಿವರ್ತಿಸಿದ ಖೇದದಾಯಕ ಸಂಗತಿಯನ್ನು ನಮ್ಮ ಭಾಗದ ಹಿರಿಯರು ಈಗಲೂ ನೆನೆಸುತ್ತಾರೆ. ಎಂದ ಮೇಲೆ ಗೊಂದಲಿಗರಂಥ ಬಡಪಾಯಿಗಳ ಬಗೆಗೆ ಹೇಳುವುದೇನು?

 

[1] Dravidian Etymological Dictionary –M.B. Emineau and T. Burrow.

[2]ಮೂಲದ್ರಾವಿಡದಲ್ಲಿ ಸಕರ್ಮಕ ಅಕರ್ಮಕ ವ್ಯವಸ್ಥೆಯಲ್ಲಿ ಇಂಥದೇ ದ್ವಿತ್ವಪರಿವರ್ತನೆ ತೋರಬಹುದಾಗಿದೆ. ಆದರೆ ಆ ನಿಯಮಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲವೆಂಬುದನ್ನು ಇಲ್ಲಿ ನೆನಪಿಡಬೇಕು.