ಕರ್ನಾಟಕದಲ್ಲಿ ಬಲು ಹಿಂದಿನಿಂದ ವಾಸ ಮಾಡುತ್ತಾ ಬಂದ ಬುಡಕಟ್ಟುಗಳಲ್ಲಿ ಗೊಲ್ಲ ಜನಾಂಗವೂ ಒಂದು. ಈಗ ಗೊಲ್ಲರೆಂದರೆ ಸಾಮಾನ್ಯವಾಗಿ ದನಕುರಿಗಳನ್ನು ಸಾಕಿಕೊಂಡು ಉದರ ನಿರ್ವಹಣೆ ಮಾಡುವ ಪಶುಪಾಲಕ ಜನಾಂಗವೆಂದು ತಿಳಿಯಲಾಗುತ್ತದೆ.

ಗೊಲ್ಲ ಎಂಬ ಪದವು ಜಾತಿವಾಚಕವಾಗಿ ಕರ್ನಾಟಕ ಮತ್ತು ಆಂಧ್ರಗಳಲ್ಲಿ ವಿಶೇಷ ಬಳಕೆಯಲ್ಲಿದೆ. ತಮಿಳುನಾಡು ಮತ್ತು ಕೇರಳಗಳಲ್ಲಿ ಈ ಜಾತಿ ವಾಚಕ ಬಳಕೆಯಲ್ಲಿದ್ದಂತಿಲ್ಲ. ಅದೇ ರೀತಿ ಮರಾಠಿಯಲ್ಲಿಯೂ ಇದು ಕಂಡುಬರುವುದಿಲ್ಲ. ಮಹಾರಾಷ್ಟ್ರದಲ್ಲಿ ‘ಗೊಲ್ಲ’ ಎಂಬುದಕ್ಕೆ ಸಂವಾದಿಯಾಗಿ ‘ಗೌಳಿ’ ಎನ್ನುವ ಪದ ಬಳಕೆಯಲ್ಲಿದೆ.ನೇಗಿನಹಾಳ ಪ್ರಬಂಧಗಳು

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನಲ್ಲಿ ಗೊಲ್ಲ ಎಂಬ ಶಬ್ದಕ್ಕೆ ಸರಾಫನ ಹಣದ ಚೀಲ ಒಯ್ಯುವ ಅಧಿಕಾರಿ ಇಲ್ಲವೆ ಸೇವಕ ; ದನಕರು ಕಾಯುವವನು; ಮತ್ತು ಒಂದು ದೇಶದ ಹೆಸರು – ಎಂಬ ಪ್ರಮುಖವಾದ ಮೂರು ಅರ್ಥಗಳನ್ನು ಕೊಟ್ಟಿದೆ. ಇವುಗಳಲ್ಲಿ ಮೂರನೆಯ ದೇಶವಾಚಕ ಅರ್ಥವನ್ನು ಕುರಿತು ತರುವಾಯ ನೋಡೋಣ. ಇನ್ನುಳಿದ ಎರಡು ಅರ್ಥಗಳನ್ನು ನಾವು ಇಲ್ಲಿ ತುರ್ತಾಗಿ ಗಮನಿಸಬೇಕು. ಒಂದು ಹಣದ ಚೀಳ ಒಯ್ಯುವವನು, ಖಜಾನೆಯ ಸೇವಕ – ಎಂದಿರುವುದಕ್ಕೂ ಪಶುಪಾಲಕ ವೃತ್ತಿ ಅನುಸರಿಸುವವನು – ಎನ್ನುವುದಕ್ಕೂ ತುಂಬಾ ಅಂತರವೆನಿಸುತ್ತದೆ. ಆದರೆ ಒಂದು ಜನಾಂಗ ಉಪಜೀವನಕ್ಕಾಗಿ ವಿಭನ್ನ ರೀತಿಯ ಹಲವು ಉದ್ಯೋಗಗಳನ್ನು ಅನುಸರಿಸುವುದು ಅಸಂಭವವೇನೂ ಅಲ್ಲ ಪರಂಪರಾಗತವಾಗಿ ಒಂದು ಜಾತಿಗೆ ಒಂದು ಉದ್ಯೋಗ ಅಥವಾ ಕಾಯಕವನ್ನು ಅನ್ವಯಿಸಿ ಹೇಳುತ್ತಿದ್ದರೂ ವಾಸ್ತವವಾಗಿ ಆ ಜಾತಿ ತನ್ನ ಜೀವನೋಪಾಯಕ್ಕಾಗಿ ಬೇರೆ ಇನ್ನಾವುದೋ ಉದ್ಯೋಗವನ್ನು ಅನುಸರಿಸುತ್ತಿರಬಹುದು. ಇದಕ್ಕೆ ಬ್ರಾಹ್ಮಣರೇ ದೊಡ್ದ ಉದಾಹರಣೆ. ಪರಂಪರೆಯಂತೆ ಬ್ರಾಹ್ಮಣರು ಯಜನ-ಯಾಜನ, ಅಧ್ಯಯನ-ಅಧ್ಯಾಪನ, ದಾನ-ಪ್ರತಿಗ್ರಹಗಳೆಂಬ ಷಟ್ಕರ್ಮಗಳನ್ನೇ ಮಾಡಬೇಕು. ಆದರೆ ವಾಸ್ತವದಲ್ಲಿ ಬ್ರಾಹ್ಮಣರು ಇಷ್ಟೇ ಕಾರ್ಯಗಳಿಗೆ ತಮ್ಮ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡಿಲ್ಲ. ಇತಿಹಾಸ ಕಾಲದಲ್ಲಿ ಬ್ರಾಹ್ಮಣರು ರಾಜ್ಯಾಧಿಕಾರವನ್ನು ನಡೆಸಿದ್ದಾರೆ. ಕದಂಬರು ಮತ್ತು ಪೇಶ್ವೆಗಳು ಇದಕ್ಕೆ ಉತ್ತಮ ನಿದರ್ಶನ. ಮಂತ್ರಿಗಳೂ ನ್ಯಾಯಾಧೀಶರೂ, ಆಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕದ ಶಾಸನಗಳಲ್ಲಿ ಬ್ರಾಹ್ಮಣ ದಂಡನಾಯಕರು ಕಾಣಿಸಿಕೊಳ್ಳುತ್ತಾರೆ. ಬಹುಮುಂಚಿನಿಂದ ಒಕ್ಕಲುತನ ಮಾಡುತ್ತಿದ್ದ ಬ್ರಾಹ್ಮಣರು ನಮ್ಮಲ್ಲಿದ್ದರು. ವಡ್ಡಾರಾಧನೆಯಲ್ಲಿ ಇದರ ಉಲ್ಲೇಖವನ್ನು ಕಾಣಬಹುದು. ಹುಡುಕಿದರೆ ವ್ಯಾಪಾರ ಮಾಡುತ್ತಿದ್ದ ಬ್ರಾಹ್ಮಣರೂ ದೊರೆಯಬಹದು. ಇರಲಿ, ಈ ಮಾತುಗಳನ್ನು ಇಲ್ಲಿ ಹೇಳಲು ಕಾರಣ ಒಂದು ಜಾತಿಯವರಿಗೆ ಒಂದು ಉದ್ಯೋಗ ಎಂಬುದು ಕಟ್ಟುನಿಟ್ಟಾಗಿ ಯಾವ ಕಾಲಕ್ಕೂ ಇರಲಿಲ್ಲವೆಂಬುದು. ಎಂದರೆ ಗೊಲ್ಲರು ಮತ್ತು ಅದರಲ್ಲಿರಬಹುದಾದ ಒಳಪಂಗಡಗಳು ಎಲ್ಲವೂ ಪಶುಪಾಲನೆಯೊಂದನ್ನೇ ಜೀವನವೃತ್ತಿಯಾಗಿ ಅವಲಂಬಿಸಿಕೊಂಡಿರಲಿಲ್ಲ. ಪ್ರಾಚೀನ ದಾಖಲೆಗಳಲ್ಲಿಯೇ ಈ ಮಾತಿಗೆ ಆಧಾರಗಳು ದೊರೆಯುತ್ತವೆ. “ಬಾಗಿಲು ಕಾಯ್ದಿರ್ದಗೊಲ್ಲಂಗೆ ವೆಚ್ಚಕೆ ಒಡೆತನವುಂಟೇ ಅಯ್ಯಾ” ಎಂಬ ಚೆನ್ನಬಸವಣ್ಣನವರ ವಚನವನ್ನು ನೋಡಬಹುದು. ಇದರಿಂದ ೧೨ ನೆಯ ಶತಮಾನದ ಕರ್ನಾಟಕದಲ್ಲಿ ಕೂಡ ಗೊಲ್ಲರು ಖಜಾನೆಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರೆಂಬುದು ಇದರಿಂದ ತಿಳಿದು ಬರುತ್ತದೆ.

ಹತ್ತನೆಯ ಶತಮಾನದ ಪಂಪಕವಿ ‘ಅಂಗ, ವಂಗ, ಕಳಿಂಗ, ಕೊಂಗ, ಕೊಂಕಣ, ಗೊಲ್ಲ, ಕಾಂಭೋಜ, ನಾನಾದ್ವೀಪ ದೇಶಾಧೀಶ್ವರರು.’ಎಂದು ತನ್ನ ಭಾರತದ (೯-೯೫) ರಲ್ಲಿ ಹೇಳಿದ್ದಾನೆ. ಇದೇ ರೀತಿ ನಯಸೇನನ ಧರ್ಮಾಮೃತದಲ್ಲಿಯೂ ಗೊಲ್ಲ ದೇಶದ ಉಲ್ಲೇಖವಿದೆ. ಈ ಇಬ್ಬರು ಕವಿಗಳ ಉಲ್ಲೇಖದಿಂದ ಪ್ರಾಚೀನ ಕಾಲದಲ್ಲಿ ಗೊಲ್ಲರು ಕೇವಲ ಸೇವಕವರ್ಗದವರು ಅಥವಾ ಗೋಪಾಲಕರು ಆಗಿರದೆ ರಾಜಮನೆತನದವರೂ ಆಗಿದ್ದರೆಂಬುದು ಸ್ಪಷ್ಟವಾಗುತ್ತದೆ.

ಶ್ರವಣಬೆಳಗೊಳದ ಶಾಸನ ಸಂ.೧೫೬, ೧೭೩ ಮತ್ತು ೭೧- ಈ ಮೂರು ಶಾಸನಗಳಲ್ಲಿ ಗೊಲ್ಲಾಚಾರ್ಯನೆಂಬ ಒಬ್ಬ ಜೈನಮುನಿಯ ಹೆಸರು ಹೇಳಲಾಗಿದೆ. ಇವುಗಳಲ್ಲಿ ಕಾಲ ಅನುಕ್ರಮವಾಗಿ ಕ್ರಿ.ಶ.೧೧೧೫, ೧೧೪೫ ಮತ್ತು ೧೧೬೩. ಇವುಗಳಲ್ಲಿ ಉಲ್ಲೇಖಿತನಾದ ಗೊಲ್ಲಾಚಾರ್ಯ, ಪದ್ಮನಂದಿ ಕೊಂಡಕುಂದರ ಮೂಲಸಂಘಕ್ಕೆ ಸಂಬಂಧಪಟ್ಟ ವೀರನಂದಿಮುನಿಯ ಪರಂಪರೆಗೆ ಸೇರಿದವನು. ತ್ರೈಕಾಲ್ಯಯೋಗಿ, ಅಭಯನಂದಿ, ಸಕಲಚಂದ್ರ, ಮೇಘಚಂದ್ರ ತ್ರೈವಿದ್ಯ- ಇತ್ಯಾದಿಯಾಗಿ ಇವನ ಶಿಷ್ಯ ಪರಂಪರೆ ಮುಂದುವರಿದಿದೆ. ಮೇಘಚಂದ್ರ ತ್ರೈವಿದ್ಯನ ಶಿಷ್ಯರು ಪ್ರಭಾಚಂದ್ರ ಮುನಿ ಮತ್ತು ವೀರನಂದಿ ಸೈದ್ಧಾಂತಿಕರೆಂದೂ ಈ ಪ್ರಭಾಚಂದ್ರಮುನಿಯ ಶಿಷ್ಯೆ ಹೊಯ್ಸಳ ವಿಷ್ಣುವರ್ಧನನ ಪ್ರಸಿದ್ಧರಾಣಿ ಶಾಂತಲೆಯೆಂದೂ ತಿಳಿದುಬರುತ್ತದೆ. (ನಂ. ೧೭೩). ಎಂದರೆ ಕ್ರಿ.ಶ.೧೦ನೆಯ ಶತಮಾನದಲ್ಲಿ ಪ್ರಸ್ತುತ ಗೊಲ್ಲಾಚಾರ್ಯನಿದ್ದುದು ಐತಿ ಹಾಸಿಕ ಸತ್ಯ. ಈ ಗೊಲ್ಲಾಚಾರ್ಯನು ನೂತನ್ನ ಚಂಡಿಲನವಂಶದ ಗೊಲ್ಲರಾಜನೆಂದು ಪ್ರಸ್ತುತ ಶ್ರ,ಬೆ. ಶಾಸನಗಳು ಅತ್ಯಂತ ನಿರ್ದುಷ್ಟವಾದ ಶಬ್ದಗಳಲ್ಲಿ ಹೇಳುತ್ತವೆ. ಗೊಲ್ಲ ಜನಾಂಗದ ರಾಜನೊಬ್ಬ ತನ್ನ ಐಹಿಕ ಬಂಧನಗಳನ್ನು ತ್ಯಜಿಸಿ ಜೈನಮುನಿಯಾಗಿ ಬಹು ಖ್ಯಾತಿವೆತ್ತಿದ್ದನೆಂಬುದು ಇದರಿಂದ ಖಚಿತವಾಗುತ್ತದೆ.

ಹನ್ನೆರಡನೆಯ ಶತಮಾನದ ತರುವಾಯ ಈ ಗೊ‌ಲ್ಲ ಜನಾಂಗದ ಉಲ್ಲೇಖಗಳು ಹೆಚ್ಚುತ್ತಾ ಹೋಗುತ್ತವೆ. ಗುಂಡ್ಲು ಪೇಟೆಯ (ಸಂ.೧೮೭, ಬಂಡೀಪುರದ ೧೨೪೯ ರ) ತಮಿಳು ಶಾಸನದಲ್ಲಿ “ಧಮ್ಮಚಿತ್ತನ್ ಕೊಲ್ಲಗಾಮುಂಡನ್” ಎಂಬುವನ ಉಲ್ಲೇಖವಿದೆ. ಪ್ರಸ್ತುತ ಶಾಸನದ ‘ಕೊಲ್ಲಗಾಮುಣ್ಣ’ ಎಂಬುದು ಗೊಲ್ಲಗೌಡ ಎಂಬುದರ ತಮಿಳುರೂಪ. ಕೊಳ್ಳೇಗಾಲ ಶಾಸನ (ಸಂ. ೬೯, ಕ್ರಿ.ಶ. ೧೪೦೮)ದಲ್ಲಿ “ಮೊದೆ ಹಳ್ಳಿಯ ಗೊಲ್ಲಗೌಂಡ” ಎಂಬ ಉಲ್ಲೇಖವಿದೆ. ಉಮ್ಮತ್ತೂರಿನ (ಚಾಮರಾಜ ನಗರ ಸಂ.೧೦೨, ಕ್ರಿ.ಶ. ೧೫೮೯.) ಶಾಸನದಲ್ಲಿ ಕೊಲ್ಲಗೌಂಡನಪುರ ಎಂಬ ಗ್ರಾಮದ ಹೆಸರಿದೆ. ಈ ರೀತಿ ೧೨ನೆಯ ಶತಮಾನದಿಂದ ಕರ್ನಾಟಕದ ಶಾಸನಗಳಲ್ಲಿ ಗೊಲ್ಲರ ಉಲ್ಲೇಖಗಳು ಹೆಚ್ಚುತ್ತಾ ಹೋಗುತ್ತವೆ.

ತೆಲುಗಿನ ಒಂದು ಶಾಸನದಲ್ಲಿ ‘ಗೊಲ್ಲಮು’ ಎಂಬ ಉಲ್ಲೇಖವಿದ್ದು ಅದಕ್ಕೆ the entire temple establishment ಎಂಬ ಅರ್ಥವಿದೆಯಂತೆ (SII-X, No.208).

ಈಗ ಕರ್ನಾಟಕದಲ್ಲಿ ಗೊಲ್ಲರ ಹಲವು ಪಂಗಡಗಳಿವೆಯಷ್ಟೆ. ಅವುಗಳಲ್ಲಿ ‘ರಾಜಗೊಲ್ಲ’ ಎಂಬುದೂ ಒಂದು. ಇವರು ತಾವು ರಾಜವಂಶದವರೆಂದೇ ಹೇಳಿ ಕೊಳ್ಳುತ್ತಾರೆ. ಇವರ ಈ ನಂಬಿಕೆ ಐತಿಹಾಸಿಕ ಸತ್ಯವೇ ಆಗಿದೆ. ‘ಗೋವಳಕೊಂಡ’ದ ಸುತ್ತಮುತ್ತಲಿನ ಪ್ರದೇಶ ಪ್ರಾಚೀನಕಾಲದಲ್ಲಿ ಗೊಲ್ಲರ ರಾಜ್ಯವೇ ಆಗಿತ್ತೆಂದು ಆ ಭಾಗದಲ್ಲಿ ಪ್ರಚಲಿತವಿರುವ ಐತಿಹ್ಯಗಳು ಸಾರುತ್ತಿವೆ. ಅದರ ಪ್ರಕಾರ ಗೊಲ್ಲರಾಜರು ತಮ್ಮ ರಾಜ್ಯವನ್ನು ಕಳುಕೊಂಡು ಗೋದಾವರಿಯ ದಕ್ಷಿಣಕ್ಕೆ ಬಂದು ಅಲ್ಲಿನ ಹಳ್ಳಿಗಳಲ್ಲಿ ನೆಲೆಸಿದರಂತೆ. ಈ ಸೋಲಿನ ಕಥೆಯನ್ನು ಚಿತ್ರಗಳಲ್ಲಿ ಬರೆದು, ಹಾಡಿನ ಮೂಲಕ ವರ್ಣಿಸುತ್ತ, ಗೊಲ್ಲರಹಳ್ಳಿಗಳಲ್ಲಿ ಸಂಚರಿಸುವ ಪದ್ಧತಿ ಅವರಲ್ಲಿ ಬಹುಕಾಲ ದವರೆಗೆ ಇದ್ದದ್ದನ್ನು ಎಲ್.ಕೆ.ಎ.ಅಯ್ಯರ್ (Mysore Tribes and Castes-III p.197) ತಿಳಿಸುತ್ತಾರೆ.

೧೦ನೆಯ ಶತಮಾನದ ಸುಮಾರಿನಲ್ಲಿ ರಾಜ್ಯಾಧಿಕಾರಿಗಳಾಗಿದ್ದ ಗೊಲ್ಲರು ವೈರಿ ರಾಜರಿಂದ ಸೋಲಿಸಲ್ಪಟ್ಟು ತಮ್ಮ ದೇಶ-ಕೋಶಗಳನ್ನು ಕಳೆದುಕೊಂಡು ಗೌಡ ಮುಂತಾದ ಗ್ರಾಮಾಧಿಕಾಗಿಗಳಾದರು. ಬರಬರುತ್ತ ತಮ್ಮ ಸ್ಥಾನಮಾನಗಳಿಂದ ಚ್ಯುತರಾಗಿ, ದೇವಾಲಯದ ಸೇವಕರೋ, ಖಜಾನೆ ಕಾಯುವ ಉದ್ಯೋಗದವರೋ, ದ್ವಾರ ಪಾಲಕರೋ, ಆಗಿ ಕಾಲ ಉರುಳಿದಂತೆ ಕೇವಲ ಪಶುಪಾಲಕರಾಗಿ ಮಾರ್ಪಟ್ಟರು. ಆಧುನಿಕ ಕಾಲದಲ್ಲಿ ಸಾಮಾಜಿಕವಾಗಿ ಇನ್ನೂ ಕೆಳಗೆ ಇಳಿದು ಸಂಚಾರಿ-ಅರೆಸಂಚಾರಿ ಜನಾಂಗಗಳ ಸಾಲಿಗೆ ಸೇರಿದರು.