ಗ್ರಾಮಮೊಂದರ ಮುಖ್ಯ ಅಧಿಕಾರಿ ಎಂಬ ನಿರ್ದಿಷ್ಟ ಅರ್ಥದಲ್ಲಿ ಕೌಟಿಲ್ಯನು ‘ಗ್ರಾಮಣಿ’ ಎಂಬುದನ್ನೂ ಮನು ‘ಗ್ರಾಮಿಕ’ ಎಂಬುದನ್ನೂ ಬಳಸಿದ್ದಾರೆ.[1] ಗ್ರಾಮ ಪತಿ, ಗ್ರಾಮಸ್ವಾಮಿ (ಕ), ಗ್ರಾಮಿ,, ಗ್ರಾಮಮಹತ್ತರ ಮುಂತಾದ ಶಬ್ದಗಳನ್ನು ಪ್ರಾಚೀನ ಭಾರತದ ಶಾಸನಗಳು ಪ್ರಯೋಗಿಸಿವೆ. ಕರ್ನಾಟಕದ ಮೊದಮೊದಲಿನ ಶಾಸನಗಳಲ್ಲಿ ಗಾಮಿಕ, ಗಾಮಿ ಎಂಬವು ಗೌಡ ಎಂಬರ್ಥದಲ್ಲಿ ಪ್ರಯೋಗಿಸಲ್ಪಟ್ಟಿವೆ. ಇವು ಕ್ರಮವಾಗಿ ಗ್ರಾಮಿಕ ಮತ್ತು ಗ್ರಾಮಿ ಎಂಬುದರಿಂದ ಬಂದವಾಗಿವೆ. ಆದರೆ ಇವುಗಳಿಗಿಂತ ಹೆಚ್ಚಾಗಿ ಗಾಮುಂಡ, ಗಾವುಂಡ, ಗೌಂಡ ಅಥವಾ ಗೌಡ ಎಂಬ ಪದಗಳ ಪ್ರಯೋಗವೇ ನಮ್ಮ ನಾಡಿನ ಶಾಸನಗಳಲ್ಲಿ ವಿಶೇಷ. ಕೆಲಮೊಮ್ಮೆ ಪ್ರಭು, ಒಡೆಯ ಊರೊಡೆಯ ಎಂಬಂಥ ಪ್ರಯೋಗಗಳೂ ಕಂಡುಬರುತ್ತವೆ. ಕ್ರಿ.ಶ. ಎರಡನೆಯ ಶತಮಾನದ ಮ್ಯಾಕದೋನಿ ಶಾಸನದಲ್ಲಿ ಕುಮಾರದಾಸನೆಂಬ ‘ಗುಮಿಕ’ನ ಉಲ್ಲೇಖ ಕಂಡುಬಂದಿದೆ.[2] ಗುಮಿಕ ಎಂಬುದು ‘ನಾಯಕ’ ಎಂಬರ್ಥದ ಸಂಸ್ಕೃತದ ಗುಲ್ಮಿಕ ಅಥವಾ ಗೌಲ್ಮಿಕ ಎಂಬುದರಿಂದ ಬಂದುದು. ಪ್ರಸ್ತುತ ಶಾಸನದಲ್ಲಿ ಕುಮಾರ ದಾಸನು ವೇಪುರಕ ಗ್ರಾಮದ ಗುಮಿಕನೆಂದಿರುವುದರಿಂದ ಆತನು ಆ ಗ್ರಾಮದ ಮುಖ್ಯ ಅಧಿಕಾರಿ ಎಂದು ಭಾವಿಸಲಾಗಿದೆ.[3] ಅದೇ ರೀತಿ ಸನ್ನತಿಯ ಬಿಡಿ ಶಾಸನಗಳಲ್ಲಿ ಊಮಾರನೆಂಬ ಮಹಾಗಾಮಿಯ ಉಲ್ಲೇಖವಿದೆ.[4] ಕರ್ನಾಟಕದಲ್ಲಿ ದೊರೆಯುವ ಗ್ರಾಮಾಧಿಕಾರಿಗಳ ಉಲ್ಲೇಖಗಳಲ್ಲಿ ಇವು ಅತೀ ಪ್ರಾಚೀನವಾದವುಗಳು.

ಕ್ರಿ.ಶ. ಏಳನೆಯ ಶತಮಾನದಿಂದ ಕನ್ನಡ ಶಾಸನಗಳಲ್ಲಿ ‘ಗಾಮುಂಡ’ ಮತ್ತು ಅದರಿಂದ ಪರಿವರ್ತನಗೊಂಡ ರೂಪಗಳು ಅಲ್ಲಲ್ಲಿ ಕಾಣಸಿಗುತ್ತವೆ. ಬಾದಾಮಿ ಚಾಲುಕ್ಯದೊರೆ ವಿನಯಾದಿತ್ಯನ ಬಳ್ಳಿಗಾವೆ ಶಾಸನದಲ್ಲಿ.[5] ದೊರೆಯುವ ಗಾಮುಂಡ ಶಬ್ದ ಪ್ರಯೋಗವು ಅಂಥವುಗಳಲ್ಲಿ ಬಹುಪ್ರಾಚೀನವಾದುದು. ಗಾಮುಂಡ ಎಂಬುದು ಗಾಮಊಡ, ಗಾಮುಡ ಎಂಬ ಪ್ರಾಕೃತ ಶಬ್ದದಿಂದ ನಿಷ್ಪನ್ನವಾದುದೆಂದು ಭಾವಿಸಲಾಗಿದೆ. ಈ ಪ್ರಾಕೃತ ಶಬ್ದಕ್ಕೆ ಮೂಲವಾದ ‘ಗ್ರಾಮಕೂಟ’ ಎಂಬುದು ಸಂಸ್ಕೃತದಲ್ಲಿ ವಿಶೇಷ ಬಳಕೆಯಲ್ಲಿ ಇಲ್ಲ. ಅಲ್ಲದೆ ಗಾವಲುಡ, ಗಾವಲೂಡಗಳನ್ನು ಹೇಮಚಂದ್ರನು ತನ್ನ ದೇಶಿನಾಮ ಮಾಲೆಯಲ್ಲಿ ಸೇರಿಸಿದ್ದಾನೆ.[6] ಗಾಮುಂಡ, ನಾೞ್ಗಾಮುಂಡ ಮತ್ತು ಇವುಗಳಿಂದ ನಿಷ್ಪನ್ನವಾದ ಶಬ್ದಗಳು ಕರ್ನಾಟಕದ ಹೊರಗಿನ ಶಾಸನಗಳಲ್ಲಿ ಕಾಣಿಸಿಕೊಳ್ಳುವುದು ತೀರ ಅಪರೂಪ.

ಕರ್ನಾಟಕ ಪೂರ್ವಭಾಗ ಮತ್ತು ಆಂಧ್ರಪ್ರದೇಶಗಳಲ್ಲಿ ರೆಡ್ಡಿ ಅಥವಾ ರಡ್ಡಿ ಎಂಬುದು ಗ್ರಾಮಾಧಿಕಾರಿಯನ್ನು ಸೂಚಿಸುತ್ತದೆ. ಇದು ಸಂಸ್ಕೃತದ ‘ರಾಷ್ಟ್ರಿಕ’ ಎಂಬುದರಿಂದ ಬಂದುದು. ಇದರರ್ಥ ಒಂದು ನಾಡು ಅಥವಾ ಚಿಕ್ಕ ಪ್ರದೇಶವೊಂದರ ಅಧಿಕಾರಿ ಎಂದಾಗುತ್ತದೆ. ಪ್ರಾಕೃತ ಶಾಸನಗಳು ರಟ್ಠಿ, ರಟ್ಠಿಕ ಎಂಬ ಅಧಿಕಾರಿಗಳನ್ನು ಆಗಾಗ ಉಲ್ಲೇಖಿಸುತ್ತವೆ. ಕರ್ನಾಟಕದಲ್ಲಿಯೇ, ಹಿರೇಹಡಗಲಿಯ ಪಲ್ಲವ ಶಾಸನ (ಕ್ರಿ.ಶ. ಸು. ಮೂರನೆಯ ಶತಕ)ದಲ್ಲಿ ರಟ್ಠಿಕರ ಉಲ್ಲೇಖವಿದೆ.[7] ರಡ್ಡಿ ಅಥವಾ ರೆಡ್ಡಿ ಎಂಬುದು ರಟ್ಠಿ ಎಂಬುದರ ತೆಲುಗಿನ ರೂಪಾಂತರ.

ಉತ್ತರ ಕರ್ನಾಟಕದ ವಿಜಾಪುರ ಜಿಲ್ಲೆ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಗೌಡ ಮನೆತನಗಳಿಗೆ ‘ಬಿರಾದಾರ’ ಎಂಬ ಅಡ್ಡ ಹೆಸರಿರುವುದು ಕಂಡುಬರುತ್ತದೆ. ಬ್ರಾದರ್ (ಸಂ.ಭ್ರಾತೃ) ಎಂದರೆ ಸಹೋದರ, ಬಂಧು, ವಂಶಸ್ಥ ಎಂಬರ್ಥದ ಪರ್ಶಿಯನ್ ಶಬ್ದದಿಂದ ಬಂದುದು. ವಿಜಾಪುರದ ಆದಿಲಶಾಹಿ ಆಳ್ವಿಕೆಯಲ್ಲಿ ಇದು ರೂಢಿಗೆ ಬಂದಿದೆ.

ಗ್ರಾಮಮುಖ್ಯನ್ನಿಗೆ ಹಿಂದಿ-ಉರ್ದು, ಗುಜರಾಥಿ ಭಾಷೆಗಳಲ್ಲಿ ಪಟೇಲ ಎಂದೂ ಮರಾಠಿಯಲ್ಲಿ ಪಾಟೀಲ ಎಂದೂ ಕರೆಯುವುದು ರೂಡಿಯಾಗಿದೆ. ಈಗಲೂ ಉತ್ತರ ಕರ್ನಾಟಕದಲ್ಲಿ ಗೌಡ ಮನೆಗನಗಳಿಗೆ ಅಡ್ಡಹೆಸರಾಗಿ ‘ಪಾಟೀಲ’ ಎಂಬುದು ವಿಶೇಷ ಬಳಕೆಯಲ್ಲಿದೆ. ಮರಾಠರ ಆಳ್ವಿಕೆಯಲ್ಲಿ ಇದು ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಪ್ರಚಾರಕ್ಕೆ ಬಂದುದಾಗಿದೆ. ಗ್ರಾಮಾಧಿಕಾರಿ ಎಂಬರ್ಥದ ‘ಪಟ್ಟಕೀಲ’ ಎಂಬ ಶಬ್ದದಿಂದ ಇದು ಬಂದಿದೆ. ಜಬಲಪೂರ ಭೋಪಾಳ ಮೊದಲಾದಡೆಯ ೧೨-೧೩ನೆಯ ಶತಮಾನದ ಶಾಸನಗಳಲ್ಲಿ.[8] ಇದು ಕಾಣಿಸಿಕೊಂಡಿದೆ. ಅದರಂತೆ ‘ಪಟೇಲ’ ಎಂಬುದೂ ಶಾಸನಗಳಲ್ಲಿದೆ.[9]

ಅಶೋಕನ ಶಾಸನಗಳಲ್ಲಿ ಲಾಜುಕ, ಎಂಬ ಅಧಿಕಾರಿಗಳು ಉಲ್ಲೇಖಿತರಾಗಿದ್ದಾರೆ. ಈ ಶಬ್ದಗಳು ರಜ್ಜುಗ್ರಾಹಕ ಎಂಬುವುಗಳಿಂದ ಬಂದುವಾಗಿವೆ. ಮೌರ್ಯರ ಕಾಲಾವಧಿಯಲ್ಲಿ ಇವರು ಗ್ರಾಮಾಧಿಕಾರಿಗಳಾಗಿರುವಂತೆ ತಿಳಿಯುತ್ತದೆ. ಇವರು ಭೂಕಂದಾಯವನ್ನು ಗೊತ್ತುಪಡಿಸುವ ಅಧಿಕಾರಿಗಳಾಗಿದ್ದರೆಂದೂ ಕೆಲವು ಜನ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.[10] ಅರ್ಥಶಾಸ್ತ್ರದಲ್ಲಿ ಚೋರ ರಜ್ಜುಕರೆಂಬ[11] ಅಧಿಕಾರಿಗಳ ಹೆಸರು ಕಂಡುಬರುತ್ತದೆ. ಜತೆಗೆ ಗ್ರಾಮಣಿಯ ಉಲ್ಲೇಖವೂ ಅದರಲ್ಲಿದೆ. ಮನುವು ಗ್ರಾಮ, ದಶಗ್ರಾಮ, ವಿಂಶತಿಗ್ರಾಮ, ಶತಗ್ರಾಮ ಮತ್ತು ಸಹಸ್ರಗ್ರಾಮ ಎಂಬ ಆಡಳಿತ ಘಟಕಗಳನ್ನು ಹೆಸರಿಸಿದ್ದಾನೆ.[12] ಶುಕ್ರನು ಗ್ರಾಮ, ದಶಗ್ರಾಮ, ಶತಗ್ರಾಮ, ಸಹಸ್ರಗ್ರಾಮ ಎಂಬ ಘಟಕಗಳನ್ನು ಹೆಸರಿಸಿದ್ದಾನೆ.[13]

ಅರ್ಥಶಾಸ್ತ್ರ ಮತ್ತು ಸ್ಮೃತಿಗಳ ಕಾಲದಿಂದೀಚೆ ಗ್ರಾಮ ಮುಖ್ಯವನ್ನು ರಾಜನೇ ನಿಯಮಿಸುವ ಪರಿಪಾಠ ರೂಢಿಗೆ ಬಂದಿದೆ.13 ‘ಗ್ರಾಮಣಿ’ ಎಂದರೆ ಗ್ರಾಮಾಧಿಕಾರಿ ಎಂಬರ್ಥದಲ್ಲಿ ಅರ್ಥಶಾಸ್ತ್ರವು ಪ್ರಯೋಗಿಸಿರುವುದನ್ನು ಈಗಾಗಲೇ ಹೇಳಿದೆ. ಅದರ ಪ್ರಕಾರ ಕರಸಂಗ್ರಹ, ಗ್ರಾಮರಕ್ಷಣೆ ಮುಂತಾದ ಪ್ರಮುಖ ಕಾರ್ಯಗಳು ಅವರ ಅಧಿಕಾರ ವ್ಯಾಪ್ತಿಗೆ ಸೇರಿದ ವಿಷಯಗಳಾಗಿದ್ದವು. ಆತನಿಗೆ ‘ಯುಕ್ತ’ ಅಥವಾ ಕರಣಿಕ ಚೋರ ರಜ್ಜುಕರಂಥ ಅಧಿಕಾರಿಗಳು ಸಹಾಯಕರಾಗಿದ್ದರು. ಕಳುವಾದ ವಸ್ತುವಿನ ಶೋಧ ಮುಂತಾದ ಕಾರ್ಯಗಳನ್ನು ಚೋರರಜ್ಜುಕರು ನೆರವೇರಿ ಸುತ್ತಿದ್ದರು.[14] ಮೌರ್ಯಕಾಲದ ಕರ್ನಾಟಕದಲ್ಲಿ ರಜ್ಜುಕ ಅಥವಾ ಗ್ರಾಮಣಿಗಳೇ ಗ್ರಾಮಾಡಳಿತದ ಮುಖ್ಯ ಅಧಿಕಾರಿಗಳಾಗಿದ್ದರೆಂದು ಹೇಳಬಹುದು.

ಈಗಾಗಲೇ ಹೇಳಿರುವಂತೆ ಕ್ರಿ.ಶ. ಎರಡನೆಯ ಶತಮಾನದ ಮ್ಯಾಕದೋನಿ ಶಾಸನದಲ್ಲಿ ಕುಮಾರದಾಸನೆಂಬ ಗ್ರಾಮಾಧಿಕಾರಿಯ ಹೆಸರು ಬಂದಿದೆ. ಪ್ರಸ್ತುತ ಶಾಸನದಲ್ಲಿ ಕೆರೆಯ ನಿರ್ಮಾಣವನ್ನು ಕುರಿತು ಹೇಳಿದೆ. ಆದುದರಿಂದ ಅಂಥ ಸಾರ್ವಜನಿಕ ಕಾರ್ಯಗಳು ಗ್ರಾಮಾಧಿಕಾರಿಯ ಅಧಿಕಾರ ಕಕ್ಷೆಗೊಳಪಟ್ಟ ವಿಷಯಗಳಾಗಿದ್ದವೆಂದು ಹೇಳಬಹುದು. ಸಾತವಾಹನ ರಾಜನಾದ ಹಾಲನು ಗಾಥಾಸಪ್ತಶತಿ ಎಂಬ ಗಾಥಾ ಸಂಗ್ರಹವನ್ನು ರಚಸಿದ್ದಾನೆ. ಆತನ ಗಾಥಾ ಸಪ್ತಶತಿ ಮತ್ತು ವಾತ್ಸಾಯನ ಕಾಮ ಸೂತ್ರಗಳಲ್ಲಿ[15] ಗ್ರಾಮಪತಿಯ ಉಲ್ಲೇಖಗಳು ಬಂದಿವೆ. ಕ್ರಿ.ಶ. ಸು. ಮೂರನೆಯ ಶತಮಾನದ ಹಿರೇಹಡಗಲಿಯ ಪಲ್ಲವ ಶಾಸನದಲ್ಲಿ[16] ರಟ್ಠಿಕ, ಮಡಂಬಿಕೆ ಪಲ್ಲವ, ಗೋವಲ್ಲವ ಮುಂತಾದ ಹಲವು ಜನ ಅಧಿಕಾರಿಗಳನ್ನು ಹೆಸರಿಸಿದೆ. ಇದರಿಂದ ಸಾತವಾಹನ ಮತ್ತು ಪಲ್ಲವ ಕಾಲದ ಕರ್ನಾಟಕದಲ್ಲಿ ಗ್ರಾಮಾಡಳಿತದ ವ್ಯವಸ್ಥೆಯು ಹಲವಾರು ಜನ ಅಧಿಕಾರಿಗಳಲ್ಲಿ ಹಂಚಲ್ಪಟ್ಟಿತ್ತೆಂದು ಹೇಳಬಹುದು.

ಕದಂಬರ ಕಾಲದಲ್ಲಿ ಪ್ರತಿಹಾರ, ಭೋಜಕರೆಂಬ ಅಧಿಕಾರಿಗಳು ಉಲ್ಲೇಖಿಸಲ್ಪಟ್ಟಿದ್ದಾರೆ. ಭೋಜಕರೆಂದರೆ ಒಂದೋ ಹಲವೋ ಗ್ರಾಮಗಳ ಅಧಿಕಾರಿಗಳೆಂದು ಸಾಮಾನ್ಯವಾಗಿ ಭಾವಿಸಬಹುದು. ಗ್ರಾಮಾಡಳಿತಕ್ಕೆ ಸಂಬಂಧ ಪಟ್ಟಂತೆ ಕದಂಬರ ಕಾಲದಲ್ಲಿ ಹೆಚ್ಚಿನ ಸಂಗತಿಗಳು ತಿಳಿದುಬರುವುದಿಲ್ಲ.

ಶುಕ್ರನೀತಿಸಾರದಲ್ಲಿ ಆರುಪ್ರಕಾರದ ಗ್ರಾಮಾಧಿಕಾರಿಗಳನ್ನು ಹೆಸರಿಸಿದೆ.[17] ಅವರಲ್ಲಿ ಗ್ರಾಮನೇತೃ ಎಂದರೆ ಗ್ರಾಮಪ್ರಮುಖನೂ ಒಬ್ಬ. ಬಾದಾಮಿ ಚಾಲುಕ್ಯ ಮತ್ತು ರಾಷ್ಟ್ರಕೂಟ ಕಾಲದ ಕರ್ನಾಟಕದಲ್ಲಿ ಬೇರೊಂದು ತೆರನಾದ ಆಡಳಿತ ವ್ಯವಸ್ಥೆಯಿದ್ದುದನ್ನು ಶಾಸನಗಳಿಂದ ತಿಳಿಯಬಹುದಾಗಿದೆ. ಅವರ ಕಾಲದಲ್ಲಿ ಒಂದು ಊರಿಗೆ ಒಬ್ಬನೇ ಗೌಡನಿರುವ ಬದಲು ಬೇರೆ ಬೇರೆ ಕಾರ್ಯ ಮತ್ತು ಬೇರೆ ಬೇರೆ ವಿಭಾಗಗಳಿಗೆ ಬೇರೆ ಬೇರೆ ಗೌಡರಿರುತ್ತಿದ್ದಂತೆ ಕಾಣುತ್ತದೆ. ಕ್ರಿ.ಶ. ಸು. ೬೯೦ ರ ಬಳ್ಳಿಗಾವೆಯ ಶಾಸನದಲ್ಲಿ ಹಿರಿಯಒಸಗೆ ಆಲವಣ ಮತ್ತು ಅಪುತ್ರಕಧನಗಳನ್ನು ಹತ್ತುಜನ ಅಧಿಕಾರಿಗಳು ಸೇರಿ ರಾಜಾಶ್ರಾವಿತ ಮಾಡಿ. ಎಂದರೆ ರಾಜನ ಒಪ್ಪಿಗೆ ಪಡೆದು ಬಿಟ್ಟುಕೊಟ್ಟು ಸಂಗತಿ ಉಲ್ಲೇಖಿಸಲ್ಪಿಟ್ಟಿದೆ. ಆ ಹತ್ತು ಜನರಲ್ಲಿ ಸೊರ್ಕಗಾಮುಂಡ, ಎಡೆಯ ಗಾಮುಂಡ, ಮಣಿಯಗಾಮುಂಡ, ಅಂಡುಗಿಯ ಗಾಮಿಗ, ಸಿಂದೆಱಗಾಮಿಗ ಎಂಬ ಹೆಸರುಗಳು ಕಂಡುಬಂದಿವೆ.[18] ಆದುದರಿಂದ ಶಾಸನವು ಹೇಳುವ ಹತ್ತೂಜನರು ಗೌಡರೇ ಆಗಿದ್ದರೆಂದು ತಿಳಿಯಬಹುದು. ಇದರಂತೆಯೆ ಮುಂದಿನ ಕಾಲದ ಕರ್ನಾಟಕದಲ್ಲಿ ಬಾದಾಮಿಯ ಚಾಲುಕ್ಯರ ಆಡಳಿತ ಪದ್ಧತಿಯೇ ಮುಂದುವರೆದಿದೆ. ಕ್ರಿ.ಶ. ೧೧೪೮ರ ಸಿರಸಂಗಿ ಶಾಸನದಲ್ಲಿ[19] ತೊರಹರ ಕುಲದ ಕಾವಗಾವುಂಡ, ಆರಿಂದರ ಕುಲದ ಬೋಸಿಗೌವುಂಡ, ಮರಿಯರ ಪದ್ಮಗಾವುಂಡ, ಮೂಲಿಗೆ ಒಮ್ಮ ಗಾವುಂಡ, ಸಾಗುಳದ ರಾಜಿಗಾವುಂಡ ಎಂಬ ಹೆಸರುಗಳಿವೆಯಲ್ಲದೆ ಆ ಊರಲ್ಲಿ ‘ಅರುವರ್’ ಗಾವುಂಡರಿದ್ದಾರೆಂದು ಹೇಳಿದೆ. ಹಾಗೂ “ಅರಸರುಮ್‌ ಅಧಿಕಾರಿಗಳ ಱುವರಂ ರಕ್ಷಿಸುವರು” ಎಂದು ಸ್ಪಷ್ಟಪಡಿಸಿದೆ. ಆದುದರಿಂದ ಆ ಗ್ರಾಮದ ಆಡಳಿತದಲ್ಲಿ ಈ ಆರೂ ಜನರು ಅಧಿಕಾರ ಹೊಂದಿದ್ದರೆಂದು ಖಚಿತಪಡುತ್ತದೆ. ಇದೇ ರೀತಿ ಹಿರಿಯ ಕುಮ್ಮಿ (=ಹಿರೇಕುಂಬಿ) ಯಲ್ಲಿ ಆರುಜನ, ಹಸುಡಿ (=ಅಸುಂಡಿ) ಮತ್ತು ತೇರಿದಾಳಗಲ್ಲಿ ಹನ್ನೆರಡು-ಹನ್ನೆರಡು ಜನ ಗೌಡರು ಇದ್ದುದಾಗಿ ಶಾಸನಗಳು ಹೇಳುತ್ತವೆ.[20]

ಮೇಲೆ ಉಲ್ಲೇಖಿಸಿದ ಸಿರಸಂಗಿ ಶಾಸನದಲ್ಲಿ ‘ಮೂಲಿಗ ಬಮ್ಮಗಾವುಂಡ’ ಎಂಬ ಪ್ರಯೋಗವಿದೆ. ಕ್ರಿ.ಶ. ೧೧೯೯ರ ಬೆಳಗಾವಿ ಶಾಸನದಲ್ಲಿ[21] “ಹಳಿಗಳ ಸಮಸ್ತ ಮುಲಿಗರು ಗಾವುಂಡುಗಳಂ” ಎಂದು ಮೂಲಿಗರನ್ನು ಪ್ರತ್ಯೇಕವಾಗಿ ಹೆಸರಿಸಿದೆ. ಕ್ರಿ.ಶ. ೧೨೦೯ರ ಹಣ್ಣಿಕೇರಿಯ ಶಾಸನದಲ್ಲಿ[22] “ಶ್ರೀಮನ್ಮಹಾಪ್ರಭು ಮೂಲಿಗಂ ಮರಿಯರಂಮ್ಮಗಾವುಂಡನು ಆಚಂದ್ರಾರ್ಕ ತಾರಂಬರಂ ಸರ್ವಬಾಧಾಪರಿ ಹಾರರ್ತ್ಥಂ…………ಕೊಟ್ಟ ಭೂಮಿ” ಎಂದಿದೆ. ಅದೇ ಶಾಸನದಲ್ಲಿ ಪುನಃ “ಶ್ರೀಮತು ಸುಂಕಧಿಕಾರಿ ಮತಗೌಂಡನು…….ಪಂಚಮತಸ್ಥಾನಂಗಳಿಗೆ ಬಿಟ್ಟ ದತ್ತಿ……..” ಎಂದು ಹೇಳಿದೆ. ಇದರಿಂದ ಸುಂಕಧಿಕಾರಿ ಗೌಡಬೇರೆ, ಇತರ ಗೌಡ ಬೇರೆ ಎಂಬುದು ಸ್ಪಷ್ಟವಾಗಿದೆ. ಕ್ರಿ.ಶ. ೧೧೯೭ರ ಕಿರಿಯಿಂಡಿಯ ಶಾಸನದಲ್ಲಿ[23] ಊರೊಡೆಯರಾದ ಸೋವರಸ (ಜೈನ), ಕೇಶಿರಾಜ (ಬ್ರಾಹ್ಮಣ), ಮತ್ತು ಬಮ್ಮರಸರೆಂಬ ಶ್ರೀವತ್ಸಕುಲದ ಮೂವರೂ ಮೂಲಿಗರಾದ ಗೌಡರ ಉಲ್ಲೇಖವಿದೆ. ಈ ಮೂಲಿಗಗೌಡರು ಗ್ರಾಮದ ಮೂಲನಿವಾಸಿ ಕುಟುಂಬಗಳಿಗೆ ಸೇರಿದವರೆಂದು ಹೇಳಬಹುದು. ಒಟ್ಟಿನಲ್ಲಿ ಬದಾಮಿ ಚಾಲುಕ್ಯರ ಕಾಲದಿಂದ ಕರ್ನಾಟಕದಲ್ಲಿ ಗ್ರಾಮಾಧಿಕಾರದಲ್ಲಿ ಪ್ರಮುಖರಾದ ಗೌಡಿಕೆಯು ಒಬ್ಬ ವ್ಯಕ್ತಿಯ ವಶದಲ್ಲಿರದೆ ಹಲವುಜನ ಗೌಡರಲ್ಲಿ ಹಂಚಿಹೋಗಿದ್ದುದು ಸ್ಪಷ್ಟವಿದೆ. ಆದುದರಿಂದ ಈಗಿರುವಂತೆ ಪೋಲೀಸ ಪಾಟೀಲ ಮತ್ತು ಮುಲ್ಕೀಪಾಟೀಲ ಎಂದರುವ ಇಬ್ಬಗೆಯ ವರ್ಗೀಕರಣವು ತೀರ ಇತ್ತೀಚಿನದೆಂದು ಹೇಳಬಹುದು.

ಆಡಳಿತ ಕಾರ್ಯದಲ್ಲಿ ಗ್ರಾಮಾಧಿಕಾರಿ ಅಥವಾ ಗೌಡನಿಗೆ ಬೇರೆ ಬೇರೆ ಪ್ರಕಾರದ ಅಧಿಕಾರಿಗಳು ಸಹಾಯಕರಾಗಿದ್ದರು ಚೋರರಜ್ಜುಕ, ಯುಕ್ತರಂಥ ಸಹಾಯಕ ಅಧಿಕಾರಿಗಳು ಮೌರ್ಯ ಕಾಲದಲ್ಲಿದ್ದರು. ಶುಕ್ರನೀತಿಯಲ್ಲಿ, ಗ್ರಾಮನೇತೃ, ಸಾಹಸಾಧಿಪತಿ (ನ್ಯಾಯಾಧಿಕಾರಿ), ಭಾಗಹರ (ಕಂದಾಯ ವಸೂಲಿ ಮಾಡವವ), ಲೇಖಕ (ಕುಲಕರಣಿ), ಶುಲ್ಕಗ್ರಾಹಕ (ಜಕಾತಿಕಟ್ಟೆಯ ಅಧಿಕಾರಿ) ಮತ್ತು ಪ್ರತಿಹಾರರೆಂಬ ಆರು ಜನ ಅಧಿಕಾರಿಗಳನ್ನು ಹೆಸರಿಸಲಾಗಿದೆ. ಕ್ರಿ.ಶ. ಮೂರನೆಯ ಶತಮಾನದ ಕರ್ನಾಟಕದಲ್ಲಿ ಈ ಸಂಖ್ಯೆ ಆರಕ್ಕಿಂತಲೂ ಹೆಚ್ಚಾಗಿರುವಂತೆ ತೋರುತ್ತದೆ. ಚಾಲುಕ್ಯ ರಾಷ್ಟ್ರಕೂಟರ ಕಾಲದಲ್ಲಿ ಈ ಗೌಡರು, ಶ್ರೀಕರಣ ಅಥವಾ ಕುಲಕರಣಿ, ಕಳ್ಳವಳ್ಳ, ಸುಂಕಾಧಿಕಾರಿಗಳು, ತೞಾಱರು, ಮಹಾಜನರು, ಶ್ರೇಣಿಗಳು, ಎಂಟು ಹಿಟ್ಟುಗಳು, ಅರವತ್ತೊಕ್ಕಲು ಮುಂತಾದವರು ಸಹಾಯದಿಂದ ಊರ ಆಡಳಿತ ನೋಡಿಕೊಳ್ಳುತ್ತಿದ್ದರು.

ಶುಕ್ರನೀತಿಸಾರವು ಕ್ರಿ.ಶ. ಸು. ೬೦೦ ರಿಂದ ೯೦೦ ರ ಮಧ್ಯಾವಧಿಯಲ್ಲಿ ಹುಟ್ಟಿದ ಗ್ರಂಥ. ಇದರಲ್ಲಿ ಗ್ರಾಮನೇತ್ರ ಬ್ರಾಹ್ಮಣನಿರಬೇಕೆಂದು ಹೇಳಿದೆ. ಇದು ಕರ್ನಾಟಕದಲ್ಲಿದ್ದ ವಸ್ತು ಸ್ಥಿತಿಗೆ ಹೊಂದುವಂಥ ವಿಷಯವಲ್ಲ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪಂಚಮರನ್ನು ಹೊರತುಪಡಿಸಿ ಮುಸಲ್ಮಾನರಾದಿಯಾಗಿ ಎಲ್ಲ ಜಾತಿಗಳವರೂ ಗೌಡರಾಗಿದ್ದಾರೆ. ಇಂದು ದಕ್ಷಿಣ ಮಹಾರಾಷ್ಟ್ರವಾಗಿದ್ದ ಪ್ರದೇಶವು ಒಂದಾನೊಂದು ಕಾಲದಲ್ಲಿ ಕರ್ನಾಟಕವೇ ಆಗಿತ್ತು. ಆ ಭಾಗದಲ್ಲಿ ಈಗಲೂ ಶೂದ್ರರೆನ್ನಿಸಿಕೊಳ್ಳುವ ಮರಾಠರೇ ಬಹುಸಂಖ್ಯೆಯಲ್ಲಿ ಗೌಡರಾಗಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಶೂದ್ರರೇ ಬಹುಸಂಖ್ಯೆಯಲ್ಲಿ ಗೌಡರಾಗಿದ್ದಾರೆ.

ಕರ್ನಾಟಕದ ಗೌಡರ ಇನ್ನೊಂದು ವೈಶಿಷ್ಟ್ಯವೆಂದರೆ ಗೌಡಿಕೆಯ ಅಧಿಕಾರದ ಜತೆಗೆ ಒಕ್ಕಲುತನವನ್ನು ತಮ್ಮ ಮನೆತನದ ಕಸಬನ್ನಾಗಿ ಮಾಡಕೊಂಡಿದ್ದಾರೆ. ಇದು ಮಹಾರಾಷ್ಟ್ರದ ಪಾಟೀಲರಿಗೂ ತೆಲುಗು ನಾಡಿನ ರಡ್ಡಿಗಳಿಗೂ ಅನ್ವಯಿಸುವ ಮಾತು. ತಮ್ಮ ಉಂಬಳಿ ಭೂಮಿಯನ್ನು ಯಾವನೋ ಒಬ್ಬ ಉಳುವವನಿಗೆ ಕೊಟ್ಟು ಅದರಿಂದ ಬರುವ ಆದಾಯದಲ್ಲಿ ಸುಖದಿಂದ ಕಾಲಕಳೆಯುವ ಬದಲು ತಾವೇ ಒಕ್ಕಲುತನ ಮಾಡುವ ಪರಿಪಾಠವಿಟ್ಟುಕೊಂಡು ಬಂದಿದ್ದಾರೆ. ಇದು ನಿಜಕ್ಕೂ ಪ್ರಶಂಸನೀಯವಾದ ಪದ್ಧತಿ.

ಮರಾಠಾ ರಾಜ್ಯಕ್ಕೊಳಪಟ್ಟ ಉತ್ತರಕರ್ನಾಟಕದಲ್ಲಿ ಗೌಡರು ಮೇಲಧಿಕಾರಿಗಳೊಡನೆ ಪತ್ರವ್ಯವಹಾರ ಮಾಡಬೇಕಾಗಿ ಬಂದಾಗ ಪತ್ರಗಳಿಗೆ ತಮ್ಮ ಅಂಕಿತದ ಜತೆಗೆ ನೇಗಿಲದ ಗುರುತನ್ನು ಮಾಡುತ್ತಿದ್ದರು. ಇದು ಗೋವೆಯ ಪ್ರದೇಶದಲ್ಲಿಯೂ ರೂಢಿಯಲ್ಲಿತ್ತು. ಈ ಸಂಗತಿ ಪ್ರಸಿದ್ಧ ಸಾಮ್ರಾಟರಾದ ರಾಷ್ಟ್ರಕೂಟರನ್ನು ನೆನಪಿಗೆ ತರುತ್ತದೆ. ರಾಷ್ಟ್ರಕೂಟರು ತಮ್ಮ ಅನೇಕ ಶಾಸನಗಳಲ್ಲಿ ನೇಗಿಲದ ಗುರುತನ್ನು ಮಾಡಿದ್ದಾರೆ. ಗ್ರಾಮಕೂಟನೆಂದರೆ ಗ್ರಾಮಾಧಿಕಾರಿ ಎಂದಿರುವಂತೆ ರಾಷ್ಟ್ರಕೂಟರೆಂದರೆ ರಾಷ್ಟ್ರದ ಅಧಿಕಾರಿಯೆಂದಾಗುತ್ತದೆ. ರಾಷ್ಟ್ರ ಎಂದರೆ ನಾಡು ಅಥವಾ ಒಂದು ಚಿಕ್ಕ ಪ್ರಾಂತ ಎಂದು ಅರ್ಥ. ಎಂತಲೇ ರಾಷ್ಟ್ರಕೂಟರೆಂದರೆ ನಾಡಗೌಡರೆಂದು ಊಹಿಸಲಾಗಿದೆ.[24] ಈ ರಾಷ್ಟ್ರಕೂಟರು ಕ್ಷತ್ರಿಯರಾಗಿರಲಿಲ್ಲ.

ಗ್ರಾಮಾಧಿಕಾರಿಗೂ ರಾಜಕೀಯಕ್ಕೂ ಯಾವತ್ತೂ ನಿಕಟ ಸಂಪರ್ಕ ಇದ್ದುದೇ ಆದುದರಿಂದ ರಾಜಕೀಯದಲ್ಲಿ ಮಹತ್ವ ಸಂಪಾದಿಸುವುದು ಗೌಡರಿಗೆ ಸುಲಭವಾಗಿತ್ತು. ಆ ಕಾರಣ ಆಡಳಿತಗಾರರಾಗಿದ್ದ ರಾಷ್ಟ್ರಕೂಟರು ತಮ್ಮ ಸಾಮರ್ಥ್ಯದಿಂದ ಕ್ರಮೇಣ ವರ್ಧಮಾನಕ್ಕೆ ಬಂದು ಸಾಮ್ರಾಟರಾದರೆಂದು ತಿಳಿಯಬಹುದು. ಇದಕ್ಕೆ ವಿರುದ್ಧವಾಗಿ ಕೆಲವು ರಾಜ ಮನೆತನಗಳೇ ಸಾಮಾನ್ಯ ಗೌಡನ ಸ್ಥಿತಿಗೆ ಇಳಿದಿರಬಹುದಾದ ಸಾಧ್ಯತೆಯೂ ಇದೆ. ಬಸವಕಲ್ಯಾಣದ ಗೌಡರ ಮನೆತನವೊಂದು ಚಾಳುಕ್ಯ-ಪಾಟೀಲ ಎಂಬ ಹೆಸರಿನಿಂದ ಈಗಲೂ ಕರೆಯಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ಎಂದರೆ ಆ ಮನೆತನವು ಮೂಲತಃ ಕಲ್ಯಾಣ-ಚಾಳುಕ್ಯರದೋ ಅಥವಾ ಅವರ ನಿಕಟ ಸಂಬಂಧಿಗಳದೋ ಆಗಿದ್ದು ತುಳಿತಕ್ಕೆ ಸಿಕ್ಕು ಇಂದಿನ ಸಾಮಾನ್ಯ ಸ್ಥಿತಿಗೆ ಇಳಿದಿದೆಯೆಂದು ಊಹಿಸಬಹುದಾಗಿದೆ.

ಶಾಸನಗಳಲ್ಲಿ ಪ್ರಾಚೀನಕಾಲದ ಗೌಡರ ಆದಾಯ ಅಥವಾ ಆಯದ ಬಗೆಗೆ ನೇರವಾದ ಉಲ್ಲೇಖಗಳು ಕಂಡುಬರುವುದು ಅಪರೂಪ. ಗೌಡನನ್ನು ನಿಯಮಿಸುವ ಅಧಿಕಾರವುಳ್ಳ ರಾಜನು ರಾಜ್ಯಾದಾಯದ ಕೆಲವೊಂದು ಭಾಗವನ್ನು ಆತನಿಗೆ ಬಿಡುತ್ತಿದ್ದನು.[25]ಈ ಆದಾಯ ಅಥವಾ ಕರಗಳನ್ನು ಶಾಸನಗಳು ಅನೇಕ ಸಲ ‘ಆಯ’ ಎಂದು ಕರೆದಿವೆ. ಉದಾ: ಸಿದ್ಧಾಯ, ದಂಡಾಯ (K-I-Vo-l No.17 ಕ್ರಿ.ಶ. ೧೦೫೫), ಲಾಭಾಯ, (K-I-Vo-l No.30 ಕ್ರಿ.ಶ. ೧೨೨೨) ಮುಂತಾದವನ್ನು ನೋಡಬಹುದು. “ಆಯಗಾರ ನಿರ್ಣಯ” ಎಂಬ ಗ್ರಂಥದಲ್ಲಿ ಗೌಡನನ್ನು ಪೂರ್ಣ ಆಯಗಾರ ಪಟ್ಟಿಗೆ ಸೇರಿಸಲಾಗಿದೆ. ಆದುದರಿಂದ ಗೌಡನೂ ಆಯಗಾರನೇ ಎಂದಾಯಿತು. ಆದರೆ ‘ಆಯ’ ಎಂಬ ಶಬ್ದಕ್ಕೆ ಮೂಲತಃ ಈಗಿರುವ ಹೀನಾರ್ಥ ಇರಲಿಲ್ಲವೆಂಬುದು ಸ್ಪಷ್ಟ.

ರಾಜ್ಯಾದಾಯದ ಅಂಶವಿಲ್ಲದೆ ಗೌಡರಿಗೆ ವಂಶಪಾರಂಪರ್ಯವಾಗಿ ಉಂಬಳಿಗಳ ನಡೆದು ಬಂದಿವೆ. ಗಾವುಣ್ಡರುಣ್ಬಳಿಯನ್ನು ಶಾಸನಗಳು ಹೆಸರಿಸಿವೆ. ಮರಾಠರ ಆಡಳಿತದಲ್ಲಿ ಈ ಉಂಬಳಿ ಅಬಾಧಿತವಾಗಿ ನೆಡೆದಿರಬಹುದಾದರೂ ಬ್ರಿಟಿಷರ ಆಡಳಿತದಲ್ಲಿ ಅವುಗಳ ಮೇಲೆ ಸ್ವಲ್ಪಮಟ್ಟಿನ ಭೂಕಂದಾಯವನ್ನು ಹೇರಲಾಯಿತು.

ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ಗ್ರಾಮಣಿಯ ಕಾರ್ಯಗಳನ್ನು ಆಗಾಗ ಉಲ್ಲೇಖಿಸಿದ್ದಾನೆ. ಆತನ ಕಾಲದಲಿ ಊರ ಜನವಸತಿಯ ನಿಯಂತ್ರಣವು ಗ್ರಾಮಣೀಯ ಕಡೆಗೆಯೆ ಇತ್ತು. ಒಂದು ಊರಿಗೆ ಹೊಸತಾಗಿ ಬಂದು ಒಕ್ಕಲಾಗುವುದಾಗಲೀ ಯಾವುದಾದರೂ ಕಾರಣಕ್ಕೆ ಊರಿಂದ ವ್ಯಕ್ತಿಗಳನ್ನು ಹೊರ ಹಾಕುವದಾಗಲೀ ಗ್ರಾಮಣಿಯ ಅಧಿಕಾರ ಕಕ್ಷೆಯಲ್ಲಿಯೆ ಬರುವ ವಿಷಯವಾಗಿತ್ತು.[26]ಸ್ತೇಯ ಮತ್ತು ಪರದಾರ ಗಮನದಂಥ ಅಪರಾಧಿಗಳನ್ನು ಶಿಕ್ಷಿಸದೇ ಇದ್ದರೆ ಗ್ರಾಮಾಧಿಕಾರಿಗೆ ೨೪ ಪಣಗಳ ದಂಡ ವಿಧಿಸಬೇಕೆಂದು ಕೌಟಿಲ್ಯ ಹೇಳಿದ್ದಾನೆ. ಒಟ್ಟಿನಲ್ಲಿ ಗ್ರಾಮ ಜನತೆಯ ಮೇಲೆ ಗೌಡನಿಗೆ ವಿಶೇಷಾಧಿಕಾರಗಳಿದ್ದುದು ಮೊನ್ನೆ ಮೊನ್ನೆಯವರೆಗಿನ ಸತ್ಯವಾಗಿತ್ತು.

ಗ್ರಾಮಾಧಿಕಾರಿಯು ಎಲ್ಲ ತರಹದ ಕರಗಳನ್ನು ಸಂಗ್ರಹಿಸಿ ಅದನ್ನು ದಶಗ್ರಾಮಾಧಿಕಾರಿಗೆ ಕೊಡಬೇಕೆಂದು ಮನುಸ್ಮೃತಿ (೭-೧೧೫) ಮತ್ತು ಮಹಾಭಾರತ (ಶಾಂ. ಪ. ೮೭-೬)ಗಳ ಅಭಿಪ್ರಾಯವಾಗಿದೆ. ಅದೇ ರೀತಿ ರಾಜಸ್ವಕ್ಕಾಗಿ ಸಂಗ್ರಹವಾದ ಆಹಾರ ಧಾನ್ಯ, ಇಂಧನಾದಿಗಳನ್ನು ಕಷ್ಟಕಾಲದಲ್ಲಿ ಗ್ರಾಮಾಧಿಕಾರಿಯು ಜನತೆಗೆ

ಹಂಚಬೇಕು ಮತ್ತು ಅದರ ವಿವರಗಳನ್ನು ದಶಗ್ರಾಮಾಧಿಕಾರಿಗೆ ತಿಳಿಸಬೇಕು ಎಂದು ಮನು (೭-೧೧೮) ಅಭಿಪ್ರಾಯಪಟ್ಟಿದ್ದಾನೆ. ಕಳ್ಳರು. ಅಧಿಕಾರಿಗಳು ಮತ್ತು ಹೊರಗಿನ ದಾಳಿಗಳಿಂದ ಗ್ರಾಮವನ್ನು ರಕ್ಷಿಸಬೇಕೆಂದು ಶುಕ್ರ ಹೇಳಿದ್ದಾನೆ. ಕರ್ನಾಟಕದಲ್ಲಿ ಮ್ಯಾಕದೋನಿ ಶಾಸನಕಾಲ (ಕ್ರಿ.ಶ. ೨ನೆಯ ಶತ)ದಿಂದಲೂ ಗ್ರಾಮದ ವ್ಯವಹಾರಗಳಲ್ಲಿ ಗ್ರಾಮಾಧಿಕಾರಿಗೆ ಪ್ರಮುಖ ಸ್ಥಾನವಿತ್ತೆಂದು ಹೇಳಬಹುದು. ಮುಂದಿನ ಶತಮಾನಗಳಲ್ಲೆಲ್ಲ ಕರ್ನಾಟಕದಲ್ಲಿ ಗ್ರಾಮ ರಕ್ಷಣೆ, ಆರಕ್ಷಣೆ, ಕರನಿರ್ಧಾರ ಮತ್ತು ಸಂಗ್ರಹ, ಕಷ್ಟ ಸಮಯದಲ್ಲಿ ಅವುಗಳ ವಿತರಣೆ, ಸ್ಥಾನಿಕ ನ್ಯಾಯದಾನ ಮುಂತಾದ ಕಾರ್ಯಗಳನ್ನು ಗ್ರಾಮಮುಖ್ಯನು ನಿರ್ವಹಿಸುತ್ತಿದ್ದನು.

ಮರಾಠರ ಕಾಲದಿಂದ ಬ್ರಿಟಿಶರ ಆಡಳಿತದ ಕೊನೆಯವರೆಗೆ ಗೌಡನು ನೆರವೇರಿಸುತ್ತಿದ್ದ ಕಾರ್ಯ ಕಲಾಪಗಳ ಬಗೆಗೆ ಅನೇಕ ವಿವರಗಳು ತಿಳಿದುಬಂದಿವೆ. ಕರ್ನಾಟಕದಲ್ಲಿ ‘ಮೈಸೂರು ಪೋಲೀಸು ಕಾಯ್ದೆ ೧೯೬೩ ಜಾರಿಗೆ ಬರುವವರೆಗೂ ಗೌಡನ ಅಂತಸ್ತು ಸಾಮಾನ್ಯವಾಗಿ ಹಿಂದಿನಂತೆಯೆ ಮುಂದುವರಿದು ಬಂದಿದೆ. ಸ್ಥಾನೀಯರಾದ ಇತರ ಅಧಿಕಾರಿಗಳಿಗೆ ಆತನೇ ಮುಖ್ಯನು. ಊರಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯ ಮೇಲೆ ಗಮನವಿಡುವುದು, ಹೊಡೆದಾಟ, ಬೆಂಕಿ ಮುಂತಾದ ಅನಪೇಕ್ಷಿತ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆವಹಿಸುವುದು ಅಂಥವು ನಡೆದುದು ತಿಳಿದ ಕೂಡಲೆ ಅವುಗಳ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸುವುದು, ಸ್ಥಾನಿಕವಾಗಿ ನಡೆಯುವ ವ್ಯಾಜ್ಯಗಳನ್ನು ತಾನೇ ವಿಚಾರಿಸಿ ನ್ಯಾಯದಾನ ಮಾಡುವುದು, ಈ ಮುಂತಾದವು ಗೌಡನ ಅಧಿಕಾರವ್ಯಾಪ್ತಿಗೆ ಸೇರಿದ ವಿಷಯಗಳಾಗಿದ್ದವು.

ಊರಲ್ಲಿ ಕಳ್ಳಕಾಕರರ ಹಾವಳಿ ತಲೆದೋರಿದಾಗ ಅದನ್ನು ನಿಯಂತ್ರಿಸುವುದು, ಅದಕ್ಕಾಗಿ ಗಸ್ತಿಯ ವ್ಯವಸ್ಥೆ ಮಾಡವುದು, ಆರಕ್ಷಣೆಯ ಸಹಾಯ ದೊರಕಿಸುವುದು ಮುಂತಾದ ಕೆಲಸಗಳ ಜತೆಗೆ ಸಂಚಾರಿ-ಅರೆಸಂಚಾರಿ ಮತ್ತು ಉಪದ್ರವಕಾರಿ ಜನರ ಚಲನವಲನಗಳ ಮೇಲೆ ಕಣ್ಣಿಡುವುದು, ಅಂಥವರನ್ನು ಊರ ಸೀಮೆಯಿಂದ ದೂರ ಸಾಗಿಸುವುದು, ಅವರ ವಿಷಯಕ್ಕೆ ನೆರೆಯ ಗ್ರಾಮದವರಿಗೂ ಮೇಲಾಧಿಕಾರಿಗಳಿಗೂ ಸೂಚನೆಕೊಡುವುದು ಈ ಮೊದಲಾದವು ಗೌಡನ ಕರ್ತವ್ಯಗಳಾಗಿದ್ದವು.

ಗ್ರಾಮನ್ಯಾಯದಾನ ವ್ಯವಸ್ಥೆಯಲ್ಲಿ ಆಯಾ ಜಾತಿ-ಪಂಗಡಗಳ ಹಿರಿಯರು ಪ್ರಮುಖ ಪಾತ್ರವಹಿಸುತ್ತಿದ್ದರಷ್ಟೆ. ಅಂಥ ಮುಖ್ಯಸ್ಥರು ನಿರ್ವಹಿಸುವ ಕಾರ್ಯಕಲಾಪಗಳಿಗೆ ಗೌಡನ ಮಾರ್ಗದರ್ಶನ ಯಾವತ್ತೂ ಇರುತ್ತಿತ್ತು. ಎಷ್ಟೋಸಲ ಅವರಿಂದ ಬಗೆಹರಿಯದ ಸಮಸ್ಯೆಗಳು ಗೌಡನಲ್ಲಿ ಪರಿಹಾರ ಕಾಣುತ್ತಿದ್ದವು. ಗೌಡ ತನ್ನ ಅಧಿಕಾರ ಚಲಾಯಿಸಿ ಅಂಥ ಬಿಕ್ಕಟನ್ನು ದೂರಗೊಳಿಸುತ್ತಿದ್ದನು.

ಮೊದಲಲ್ಲಿದ್ದ ಗ್ರಾಮ ಸಭೆಗಳಲ್ಲಿ ಗೌಡನಿಗೆ ವಿಶೇಷಾಧಿಕಾರಗಳಿದ್ದು ಗೌಡನು ಗ್ರಾಮಸಭೆಯ ಪ್ರಧಾನಧಿಕಾರಿಯಂತೆ ಕಾರ್ಯ ನಿರ್ವಹಿಸುತ್ತಿದ್ದನು.

ಮರಾಠರ ಆಡಳಿತದಲ್ಲಿ ಗೌಡನು ಊರ ಜಮೀನಿನ ಸಾಗುವಳಿಯು ಸರಾಗವಾಗಿ ನಡೆಯುವಂತೆ ಕ್ರಮಕೈಕೊಳ್ಳುವ ಅಧಿಕಾರ ಹೊಂದಿದ್ದನು. ಭೂಕಂದಾಯವನ್ನು ನಿಗದಿಗೊಳಿಸುವುದು, ಅದನ್ನು ಕೊಡುವ ಸಾಮರ್ಥ್ಯ ಉಳ್ಳವರಿಗೆ ಭೂಮಿಯನ್ನು ಕೊಡುವುದು, ಅಸಮರ್ಥರಾದವರಿಂದ ಅದನ್ನು ಕಸಿದುಕೊಂಡು ಸಮರ್ಥರಿಗೆ ವರ್ಗಾಯಿಸುವುದು, ಮುಂತಾದ ಕಾರ್ಯಗಳು ಗೌಡನ ಇಚ್ಛೆಯ ಮೇರೆಗೆ ನಡೆಯುತ್ತಿದ್ದವು. ಬ್ರಿಟಿಶರ ಆಡಳಿತದಲ್ಲಿ ಮಾತ್ರ ಇಂಥ ಅಧಿಕಾರಗಳು ಮೊಟಕುಗೊಳಿಸಲ್ಪಟ್ಟವು.

ಗ್ರಾಮದ ಕಾಗದ-ಪತ್ರಗಳ ಹೊಣೆ ಗೌಡನದೇ ಆಗಿತ್ತು. ಊರಿನ ಹೊಲ-ಮನೆ ಮುಂತಾದ ಸ್ವತ್ತುಗಳಿಗೆ ಸಂಬಂಧಿಸಿದ ಕಾಗದಪತ್ರಗಳು ಆತನ ವಶದಲ್ಲಿಯೇ ಇರುತ್ತಿದ್ದವು. ಕುಲಕರಣಿಯು ಅವುಗಳನ್ನು ಬರೆಯುವವನಾದರೂ ಅವನಿಗೆ ಅವುಗಳ ಮೇಲೆ ಸ್ವಾಮ್ಯವಿರಲಿಲ್ಲ. ಆತನು ಅವನ್ನು ಗೌಡನಿಗೆ ಒಪ್ಪಿಸಿ ಹೋಗಬೇಕಾಗುತ್ತಿತ್ತು. ರೂಢಿಯಲ್ಲಿ ಈ ಸ್ಥಿತಿ ವ್ಯತ್ಯಾಸಗೊಂಡಿತ್ತು. ಆ ಮಾತು ಬೇರೆ, ಸ್ವತ್ತುಗಳು ವಾರಸುದಾರಿಕೆ, ತಕರಾರು, ಮುಂತಾದವು ಗೌಡನಿಂದಲೇ ನಿರ್ಧರಿಸಲ್ಪಡಬೇಕಾಗಿತ್ತು. ಇಂಥ ಸಂದರ್ಭಗಳಲ್ಲಿ ಮೇಲಧಿಕಾರಿಗಳ ಜತೆಗೆ ನೇರ ಸಂಪರ್ಕ ಹೊಂದಿರುವವನೆಂದರೆ ಗೌಡನೇ ಆಗಿದ್ದನು. ಅದರ ಜತೆಗೆ ಕಂದಾಯದ ಸಂಗ್ರಹ, ಲಗ್ನಗಳು, ಜನನ-ಮರಣ ಮುಂತಾದ ವಿಷಯಕ್ಕೆ ಸಂಬಂಧಪಟ್ಟ ದಾಖಲೆಗಳು ಗೌಡನ ವಶದಲ್ಲಿಯೇ ಇರುತ್ತಿದ್ದವು.

ಗ್ರಾಮಕ್ಕೆ ಸರಕಾರಿ ಕೆಲಸದ ಮೇಲೆ ಬರುವ ಅಧಿಕಾರಿಗಳ ಕಾರ್ಯದಲ್ಲಿ ಪಾಲುಗೊಳ್ಳುವುದು. ಅವರಿಗೆ ಇತರ ಅನುಕೂಲಗಳನ್ನು ಕಲ್ಪಿಸಿಕೊಡುವುದು, ಗೌಡನ ಹೊಣೆಗಾರಿಕೆಯೇ ಆಗಿತ್ತು. ಅಂಥ ಅಧಿಕಾರಿಗಳ ಊಟ-ವಸತಿಗಳ ವ್ಯವಸ್ಥೆ ನೈತಿಕ ಹೊಣೆ ಎಂಬ ಭಾವ ಕರ್ನಾಟಕದ ಗೌಡರಲ್ಲಿ ಸಾಮಾನ್ಯವಾಗಿತ್ತು.

ಮೇಲಿನಿಂದ ಬರುವ ಆಜ್ಞೆಗಳು, ಕಾಯ್ದೆ ಕಾನೂನುಗಳು, ಕೋರ್ಟುಗಳಿಂದ ಹೊರಡುವ ಆದೇಶಗಳು ಇವೇ ಮೊದಲಾದವು ಜಾರಿಯಾಗುವುದು ಗೌಡನಿಂದಲೇ. ಅಂಥವನ್ನು ಗೌಡನು ಓಲೆಕಾರಿಂದಲೋ, ಡಂಗುರ ಹೊಯಿಸುವಿಕೆಯಿಂದಲೋ ಜಾರಿ ಮಾಡುತ್ತಿದ್ದನು.

ಇದಲ್ಲದೆ ಗ್ರಾಮಸ್ಥರಾದ ಇತರ ಅಧಿಕಾರಿಗಳ ಮೇಲೆ ತನ್ನ ಮಿತಿಯಲ್ಲಿ ಅಧಿಕಾರ ಚಲಾಯಿಸುವುದು ಗೌಡನಿಗೆ ಸಾಧ್ಯವಿತ್ತು. ಕುಲಕರಣಿ, ಹಳಬ, ತಳವಾರ ಮುಂತಾದವರಿಂದ ಅವರವರಿಗೆ ಸಂಬಂಧಪಟ್ಟ ಕಾರ್ಯಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವುದು ಗೌಡನ ಹೊಣೆಯಾಗಿತ್ತು. ಅಂಥವರ ವತನ-ಇನಾಮುಗಳ ವಿಷಯದಲ್ಲಿ ತಲೆದೋರಬಹುದಾದ ವಿವಾದಗಳಲ್ಲಿ ಕೂಡ ಗೌಡನ ಅಭಿಪ್ರಾಯಕ್ಕೆ ಪ್ರಾಧಾನ್ಯವಿತ್ತು. ಮುಂಬೈ ವತನ ಕಾಯ್ದೆ ೧೮೭೪ ಜಾರಿಯಲ್ಲಿ ಬಂದ ತರುವಾಯ ಈ ವಿಷಯಕ್ಕೆ ವ್ಯಾಪಕವಾದ ನಿಯಮಗಳು ರಚಿಸಲ್ಪಟ್ಟು ಈ ಗೌಡನ ಅಧಿಕಾರಗಳ ಮೇಲೆ ಕೆಲವೊಂದು ಮಿತಿಗಳು ಹೇರಲ್ಪಟ್ಟವು.

ಊರಿಗೆ ಸಂಬಂಧಪಟ್ಟ ಕೆರೆ-ಕಟ್ಟೆ ಮುಂತಾದ ನೀರಾವರಿ ಮೂಲಗಳ ಹತೋಟಿ ಗೌಡನ ಕೈಯಲ್ಲಿಯೆ ಇದ್ದುದರಿಂದ ಅವುಗಳ ಸಂರಕ್ಷಣೆ, ರಿಪೇರಿಗಳು ಗೌಡನ ನಿಯಂತ್ರಣಕ್ಕೊಳಪಟ್ಟಿದ್ದವು. ನೀರು ಬಿಡುವ ಕಾರ್ಯವು ಆತನ ನಿರ್ದೇಶನದಂತೆಯೇ ನಡೆಯಬೇಕಾಗಿತ್ತು. ಅಂಥವುಗಳ ನಿರ್ಮಾಣ ಮುಂತಾದ ಕಾರ್ಯಗಳಿಗೆ ಸರಕಾರದಿಂದಲೂ ಸಾರ್ವಜನಿಕರಿಂದಲೂ ವಂತಿಗೆ ದೇಣಿಗೆಗಳನ್ನು ಸಂಗ್ರಹಿಸಿ ಕಾರ್ಯರೂಪಕ್ಕೆ ತರುವ ಹೊಣೆ ಗೌಡನದೇ ಆಗಿತ್ತು. ಆಧುನಿಕ ಕಾಲದಲ್ಲಿ ಈ ಕಾರ್ಯಗಳನ್ನು ಗೌಡನ ಅಧಿಕಾರ ಕಕ್ಷೆಯಿಂದ ಹೊರಗಿಡಲಾಗಿದೆ.

ಗ್ರಾಮ ನೈರ್ಮಲ್ಯ, ಕುಡಿಯುವ ನೀರಿನ ವ್ಯವಸ್ಥೆ, ಅಂಟುರೋಗಗಳ ಹತೋಟಿ ಮುಂತಾದ ವಿಷಯಗಳಲ್ಲಿ ಗೌಡನ ಪಾತ್ರ ಅತ್ಯಂತ ಮುಖ್ಯವಾಗಿತ್ತು. ಊರಿನ ದೇವಸ್ಥಾನಗಳ ನಿರ್ಮಾಣ, ಜೀರ್ಣೋದ್ಧಾರದಂಥ ಕೆಲಸಗಳು ಗೌಡನ ಕಣ್ಣರಿಕೆಯಲ್ಲಿಯೇ ನಡೆಯುತ್ತಿದ್ದವು.

ರಾಜ್ಯ ಅಥವಾ ಸರಕಾರದ ಪ್ರತಿನಿಧಿಯೆಂದು ಗೌಡನನ್ನು ತಿಳಿಯುತ್ತಿದ್ದುದರಿಂದ ಆತನಿಗೆ ಊರ ಧಾರ್ಮಿಕ ಸಾಂಸ್ಕೃತಿಕ ಕಾರ್ಯಗಳಲ್ಲಿ ರಾಜಪ್ರತಿನಿಧಿಗೆ ಸಲ್ಲುವ ಗೌರವಗಳೆಲ್ಲ ದೊರೆಯುತ್ತಿದ್ದವು. ಉತ್ಸವಗಳು, ಪಲ್ಲಕ್ಕಿ, ತೇರು ಮುಂತಾದವುಗಳನ್ನು ಗೌಡನ ಹಸ್ತದಿಂದಲೇ ಪ್ರಾರಂಭಗೊಳಿಸುವುದನ್ನು ಈಗಲೂ ಅನೇಕ ಗ್ರಾಮಗಳಲ್ಲಿ ಕಾಣಬಹುದು. ಅದೇ ರೀತಿ ಮದುವೆ ಮುಂಜಿವೆ ಮುಂತಾದ ಕಾರ್ಯಗಳಲ್ಲಿ ಉಲುಪಿ, ಬಾಬು ಅಥವಾ ಚಾಜುಗಳು ಸಲ್ಲುತ್ತಿದ್ದವು.

ಹೀಗೆ ಒಂದು ಊರಿನ ದೊರೆಯೆ ಆಗಿದ್ದ ಗೌಡನು ಆಧುನಿಕ ಗ್ರಾಮ ಪಂಚಾಯತಿಗಳು ಅಸ್ತಿತ್ವಕ್ಕೆ ಬಂದ ಮೇಲೆ ತನ್ನ ಹಳೆಯ ಅಧಿಕಾರ ಮತ್ತು ಕರ್ತವ್ಯಗಳಿಂದ ದೂರಗೊಳಿಸಲ್ಪಟ್ಟನು. ಹೊಸಕಾಲದ ಗ್ರಾಮಪಂಚಾಯತಿಗಳು ಪ್ರಜಾಪ್ರಭುತ್ವದ ನೆಲೆಗಟ್ಟಿನ ಮೇಲೆ ರಚಿತವಾದವುಗಳಾದುದರಿಂದ ಅವುಗಳ ಕಾರ್ಯವಿಧಾನಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಅದನ್ನು ನಾವಿಂದು ಹಳ್ಳಿಗಳಲ್ಲಿ ಪ್ರತ್ಯಕ್ಷ ಕಾಣುತ್ತಿದ್ದೇವೆ. ಆ ಮಾತು ಬೇರೆ. ಗ್ರಾಮಪಂಚಾಯತಿಗಳು ಪ್ರಜಾಪ್ರಭುತ್ವದ ಪದ್ಧತಿಯಿಂದ ನಡೆಯುತ್ತಿದ್ದರೂ ಅವುಗಳಲ್ಲಿ ಗೌಡರದೇ ಮೇಲುಗೈ ಇರುವುದನ್ನು ಇಂದಿನ ಗ್ರಾಮೀಣ ಕರ್ನಾಟಕದ ಎಲ್ಲೆಡೆಯಲ್ಲಿ ಕಾಣಬಹುದು.

ಕಳೆದ ಮೂವತ್ತು ವರ್ಷಗಳಿಂದ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವು ಜಾರಿಯಲ್ಲಿದೆ. ಪ್ರೌಢಮತದಾನ ಪದ್ಧತಿಯ ಮುಖಾಂತರ ಆರಿಸಲ್ಪಟ್ಟ ಪ್ರತಿನಿಧಿಗಳಿಂದ ನಮ್ಮ ಶಾಸನಾಡಳಿತ ನಡೆಯುತ್ತಿದೆ. ಈ ಹೊಸ ವ್ಯವಸ್ಥೆಯಲ್ಲಿ ಮೊದಲಿದ್ದ ಮಹಾರಾಜನು ಮೂಲೆಗುಂಪಾದರು. ಆದರೆ ಗೌಡರು ಮಾತ್ರ ಈ ವ್ಯವಸ್ಥೆಯಲ್ಲಿಯೂ ಮುಂಚೂಣೆಯಲ್ಲಿಯೆ ಇದ್ದಾರೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರಗಳಲ್ಲಿ ಇಂದಿಗೂ ಪ್ರಮುಖ ರಾಜಕೀಯ ನಾಯಕರು ಗೌಡರೇ ಆಗಿರುವುದನ್ನು ಇಲ್ಲಿ ಸ್ಮರಿಸಬಹುದು. ನಾಡಿನ ಬಹುಭಾಗದಲ್ಲಿ ಊರಗೌಡನ ಹೇಳಿಕೆಯಂತೆಯೇ ಊರಿನ ಜನರೆಲ್ಲ ಮತನೀಡುತ್ತಿದ್ದಂಥ ಪರಿಸ್ಥಿತಿ ಮೊನ್ನೆ-ಮೊನ್ನೆಯವರೆಗೂ ಪ್ರಚಲಿತವಿದ್ದುದು ಎಲ್ಲರಿಗೂ ಗೊತ್ತಿದ್ದ ಸಂಗತಿ.

ಈಗ ಅನುವಂಶಿಕ ಗೌಡಿಕೆ ರದ್ದಾಗಿದೆ. ತಲಾಠಿ, ಗ್ರಾಮಸೇವಕ, ಮತ್ತು ಗ್ರಾಮಪಂಚಾಯಿತಿಗಳಿಗೆ ಗೌಡನಿಗೆ ಹಿಂದಿದ್ದ ಅಧಿಕಾರಗಳನ್ನು ಹಂಚಿಕೊಡಲಾಗಿದೆ. ಅಲ್ಲದೆ ಗೌಡನ ಬದಲು ‘ದಳಪತಿ’ ಎಂಬ ಅಧಿಕಾರಿಯನ್ನು ನಿಯಮಿಸುವ ಯೋಜನೆ ಈಗ ಕರ್ನಾಟಕದಲ್ಲಿ ಪ್ರಾರಂಭವಾಗಿದೆ. ಅಂತೂ ಹಿಂದಿನ ಕಾಲದ ಗೌಡಿಕೆಯ ವೈಶಿಷ್ಯಗಳು ಒಂದೊಂದಾಗಿ ಲೋಪಿಸುತ್ತಿವೆ, ಎಂಬುದು ಸ್ಪಷ್ಟ. ಬದಲಾದ ಪರಿಸ್ಥಿತಿಯಲ್ಲಿ ಗೌಡನ ಸ್ಥಾನ ತುಂಬಬಲ್ಲ ನಾಯಕರು ಬರುವುದು ಕಷ್ಟವೇ.

ಗೌಡನು ಗ್ರಾಮಜೀವನ ಕೇಂದ್ರವ್ಯಕ್ತಿಯಾದುದರಿಂದ ಗ್ರಾಮಜೀವನದ ಮೇಲೆ ಆತನ ಪ್ರಭಾವವು ಯಾವತ್ತೂ ಇದ್ದದ್ದೆ. “ಯಥಾ ರಾಜಾ ತಥಾ ಪ್ರಜಾ” ಎಂಬಂತೆ ಗೌಡನಿರುವಂತೆ ಗ್ರಾಮವಿರುವುದು ತೀರ ಸ್ವಾಭಾವಿಕ. ಹಾಗಾಗಿ ಗ್ರಾಮದ ಆಗುಹೋಗುಗಳು ಆತನ ವ್ಯಕ್ತಿತ್ವವನ್ನೇ ಅವಲಂಬಿಸಿದ್ದವೆಂದು ಹೇಳಬಹುದು. ಆತ ಒಳ್ಳೆಯವನಾದರೆ ಊರೇ ಒಳ್ಳೆಯದಾಗಬಹುದಾಗಿತ್ತು. ಆತ ಒಂದು ವೇಳೆ ಕೆಟ್ಟವನಾದರೆ ಊರೇ ಕೆಟ್ಟದ್ದಾಗಬಹುದಾಗಿತ್ತು. ಗ್ರಾಮಜೀವನದ ಎಲ್ಲ ಕ್ಷೇತ್ರಗಳಲ್ಲಿ ಆತನ ವ್ಯಕ್ತಿತ್ವದ ಪ್ರಭಾವಮುದ್ರೆಯನ್ನು ಕಾಣಬಹುದು. ‘ಗಂಡು ಹೆತ್ತರೆ ಗೌಡನ ಹೆಸರು. ಹೆಣ್ಣು ಹೆತ್ತರೆ ಹೆಗ್ಗಡತಿಯ ಹೆಸರು’ ಎಂಬ ಗಾದೆ ಮೇಲಿನ ಅಭಿಪ್ರಾಯದ ಪ್ರತೀಕವಾಗಿದೆ. ‘ಏನು ಗೌಡ ಅಂದರೆ ಕಂಬಳಿಗೆ ಮೂರು ಹಣ ಅಂದ’, ‘ಊರ ಹೊರಗೆ ಹೊಯ್ಕಳ್ಳಲು ಗೌಡನ ಅಪ್ಪಣೆ ಯಾಕೆ?; ‘ಗೌಡರ ಕೋಣ, ತಾನೂ ಹಾರದು, ಹಾರುವವರನ್ನು ಬಿಡದು’, ‘ಊರಿಗೆ ಗೌಡನಾದರೆ ತೋಳಗೆ ಏನು?’ ‘ಒಂದೂರಿನ ಗೌಡ ಪರವೂರಿನ ತಳವಾರ’ ಎಂಬಂಥ ಗಾದೆಗಳು ಗೌಡನ, ಅಧಿಕಾರ ದರ್ಪ, ಗ್ರಾಮದ ಮೇಲೆ ಅವನಿಗಿದ್ದ ಹಿಡಿತಗಳನ್ನು ಚೆನ್ನಾಗಿ ಧ್ವನಿಸುತ್ತವೆ.

ಪ್ರಾಚೀನ ಕನ್ನಡ ಕವಿಗಳು ಗ್ರಾಮೀಣ ಜೀವನಕ್ಕೆ ವಿಶೇಷ ಮಹತ್ವವಿತ್ತಿಲ್ಲ. ಹಳೆಯ ಸಾಹಿತ್ಯ ಕೃತಿಗಳಲ್ಲಿ ಗ್ರಾಮಜೀವನದ ಹೆಚ್ಚಿನ ವಿವರಗಳು ದೊರೆಯುವುದಿಲ್ಲ. ಗೌಡನ ವ್ಯಕ್ತಿತ್ವ ಚಿತ್ರಣವು ಹಳೆಯ ಕೃತಿಗಳಲ್ಲಿ ಇಲ್ಲವೆಂದೇ ಹೇಳಬಹುದು.

ಆದರೆ ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಗೌಡರಿಂದ ಹಲವು ರೀತಿಯ ಸೇವೆ ಸಂದಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಕೆಲವು ಜನ ಗೌಡರು ಪ್ರಖ್ಯಾತ ಕವಿಗಳಾಗಿದ್ದಾರೆ. ಮೂರನೆಯ ಮಂಗರಸ ಮುಂತಾದವರನ್ನು ಇಲ್ಲಿ ಹೆಸರಿಸಬಹುದು. ಕೋಳಿವಾಡ ಗೌಡನಾದ ಕುಮಾರವ್ಯಾಸನು ಮಹಾಕಾವ್ಯವೊಂದನ್ನು ರಚಿಸಿ ಗೌಡರ ಕುಲಕ್ಕೆ ಕಳಶಪ್ರಾಯನಾಗಿದ್ದಾನೆ.

ಜಾನಪದ ಮತ್ತು ಆಧುನಿಕ ಕನ್ನಡಸಾಹಿತ್ಯಗಳಲ್ಲಿ ಗೌಡನ ಚಿತ್ರಣ ವೈವಿಧ್ಯಪೂರ್ಣವಾಗಿದೆ. ಶ್ರೀಕೃಷ್ಣ ಆಲನಹಳ್ಳಿಯವರ ‘ಕಾಡು’ ಗೌಡರ ವೈಪರೀತ್ಯಗಳನ್ನು ಚಿತ್ರಿಸಿದೆ. ಅದಕ್ಕೆ ವಿರುದ್ಧವಾಗಿ ‘ಕೆರೆಗೆ’ ಹಾರ’ ಎಂಬ ಕೋಲಾಟಪದದಲ್ಲಿ ಕಲ್ಲನ ಕೇರಿಯ ಮಲ್ಲನ ಗೌಡನು ಉದಾತ್ತ ವ್ಯಕ್ತಿಯಾಗಿ ಚಿತ್ರಿತನಾಗಿದ್ದಾನೆ. ಊರಿಗೆ ಉಪಕಾರವೆಸಗಬೇಕೆಂಬ ಅಭಿಲಾಷೆಯಿಂದ ಗೌಡನು ಕೆರೆಯೊಂದನ್ನು ಕಟ್ಟಿಸಿದನಾದರೂ ಅದರಲ್ಲಿ ‘ಸೆರೆಮುಕ್ಕು’ ನೀರುಕೂಡ ಬೀಳಲಿಲ್ಲ. ಹೊತ್ತಿಗೆ ತೆಗೆಯಿಸಿ ಕೇಳಿದಾಗ ತನ್ನ ಸೊಸೆಯೊಬ್ಬಳನ್ನು ಕೆರೆಗೆ ಹಾರವಾಗಿ ಕೊಡಬೇಕೆಂದು ಬಂತು. ಜನ ಹಿತೈಕ ದೃಷ್ಟಿಯ ಗೌಡ ಅದಕ್ಕೆ ಹಿಂದು ಮುಂದು ನೋಡಲಿಲ್ಲ. ತನ್ನ ಕಿರಿಯ ಸೊಸೆಯಾದ ಮಲ್ಲವ್ವನನ್ನು ಹಾರ ಕೊಡಲು ನಿರ್ಧರಿಸಿದ. ಗೌಡನ ಸೊಸೆ ಎದುರು ಹೇಳದೆ ಬಲಿದಾನಕ್ಕೆ ಸಿದ್ಧಳಾದಳು. ಗೌಡ ತನ್ನ ಅಮೂಲ್ಯ ಸೊಸೆಯನ್ನು ನೀಗಿ ಕೊಂಡನಾದರೂ ಊರಿನ ಪ್ರಾಣವಾಗಿದ್ದ ಕೆರೆ ನೀರಿನಿಂದ ಸಮೃದ್ಧವಾಯಿತು.

ಹೀಗೆ ಶತಮಾನಗಳಿಂದ ಗೌಡ-ಗ್ರಾಮ ಜೀವನದ ಕೇಂದ್ರ ವ್ಯಕ್ತಿಯಾಗಿ ಅಧಿಷ್ಟಿತನಾಗಿದ್ದಾನೆ. ಆತ ಊರಿನ ಆಗು ಹೋಗುಗಳನ್ನು ನಿಯಂತ್ರಿಸಿದ್ದು ಮಾತ್ರವಲ್ಲದೆ ಅದರ ಗಟ್ಟಿಮುಟ್ಟಾದ ಮೇಟಿ ಎನಿಸಿದ್ದಾನೆ. ಕರ್ನಾಟಕದ ಗ್ರಾಮ ಜೀವನದ ಇಂದಿನ ಸ್ವರೂಪಕ್ಕೆ ಗೌಡನ ವ್ಯಕ್ತಿಮತ್ತೆಯ ಪ್ರಧಾನ ಕಾರಣ. ಆದುದರಿಂದ ಕರ್ನಾಟಕದ ಗೌಡನು ಬರೀ ಒಬ್ಬ ಅಧಿಕಾರಿ ಮಾತ್ರ ಎಂದು ಹೇಳದೆ ಆತನೊಬ್ಬ ಸರ್ವಂಕಷ ಪ್ರಭಾವ ಹೊಂದಿದ್ದ ಶಕ್ತಿ ಎಂದು ಹೇಳಿದರೆ ತಪ್ಪಲ್ಲ.

ಗ್ರಂಥ-ಋಣ

1. Annual Report on South Indian Epigraphy. 1966-67.

2. Artha Shastra of Kautlya. Ed-R. Shama Shastry, Eighth Edition 1967.

3. Deshinama mala (Hemachandra)

4. Epigraphia Indica, Volumes

5. History of Dharma Shastra. by P.V. Kane.

6. History of Karnataka Ed-by P.B. Desai

7. Indian Antiquery Volumes.

8. Hereditary offices Act of Bombay 1874.

9. Indina Epigraphical Glossary Ed-D. C. Sircar.

10. Inscriptions from Northern Karnataka & Kolhapur State Ed-K. G. Kundangar.

11. Karnataka Inscriptions-Volumes.

12. Kittle’s Kannada-English Dictionary

13. Manu-Smriti Ed-N. R. Acharya 1946.

14. Mysore Police Act-1963.

15. Paia Sadda Mahannavo. Ed-H. T. Sheit

16. The Rastrakutas and their times. A.S. Altekar.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಅರ್ಥಶಾಸ್ತ್ರ ೧೦; ಮನುಸ್ಮೃತಿ ೭-೧೧೬

[2] E.I. XIV. p-೧೫೫

[3]ಅದೇ, ಅಡಿಟಿಪ್ಪಣಿ.

[4] Annual Report on South Indian Epigraphy Appendix B. No. 223

[5] I-A-XIX pp ೧೪೪-೪೫ ಕ್ರಿ.ಶ. ಸು. ೬೯೦

[6]ದೇಶಿನಾಮ ಮಾಲೆ. (ಹೇಮಚಂದ್ರ ಕೃತ).

[7] E.I. Vol-II p-484.

[8] E-I. XXI-p-95; E.I-XXIV-p-232

[9] I.E.G. p-243;

[10] Ashoka and Decline of Mauryas p-107-108.

[11]ಅರ್ಥಶಾಸ್ತ್ರ IV-XIII

[12]ಮನಸ್ಮೃತಿ VI-115-118.

[13] History of Dharma Shastra-III-p-154.

[14]ಅರ್ಥಶಾಸ್ತ್ರ IV-XIII

[15] History of Dharma Shastra-III-p-154-55

[16]ಅ.ಟಿ. ೭, ನೋ

[17]ಅ.ಟಿ. ೧೩ ನೋ. ಮತ್ತು ಶು. ನೀ II-೧೨೦-೨೧

[18]ಅ.ಟಿ. ೫ ನೋ.

[19] K-l Vol. I No. 24, 1148. A.D.

[20] The Rastrakutas and their times. P 189-190

[21] K.I. Vol-II No.-30.

[22] Inscriptions from Northern Karnataka and Kolhapur State No. 22(a)

[23]ಅದೇ ನಂ. ೧೭.

[24] A. History of Karnataka p-110

[25]ಅರ್ಥಶಾಸ್ತ್ರ III-X p-172.

[26] The Rastrakutas and their times p-194.