೧. ಹಿರೇಕೆರೂರ ತಾಲೂಕಿನ ಒಂದು ದೊಡ್ಡ ಊರು ಚಿಕ್ಕೇರೂರು. ಹಂಸ ಭಾವಿಯಿಂದ ಹಿರೇಕೆರೂರಿಗೆ ಹೋಗುವ ದಾರಿಯಲ್ಲಿದೆ. ಊರಲ್ಲಿ ಈಗಾಗಲೇ ಕಲ್ಯಾಣ ಚಾಲುಕ್ಯರ ಕಾಲದ ಹಲವು ಶಾಸನಗಳು ಪತ್ತೆಯಾಗಿದ್ದು ಊರ ಪಶ್ಚಿಮಕ್ಕಿರುವ ದೊಡ್ಡ ಕೆರೆಯ ಏರಿಯ ಮೇಲೆ ಹಲವಾರು ಪ್ರಾಚ್ಯಾವಶೇಷಗಳು ಹರಡಿಕೊಂಡಿವೆ. ವೀರಗಲ್ಲು ಮಾಸ್ತಿಕಲ್ಲುಗಳಲ್ಲದೆ ಊರಲ್ಲಿ ಒಟ್ಟು ಇಪ್ಪತ್ತೊಂದು ಶಾಸನಗಳಿರುವ ವರದಿಗಳಿವೆ. ಪ್ರಸ್ತುತ ಶಾಸನವಿರುವ ಕಲ್ಲನ್ನು ದೊಡ್ಡ ಕೆರೆಯ ಕಾಲುವೆಯಲ್ಲಿ ಚೆಲ್ಲಲಾಗಿದೆ.

ಕಲ್ಲಿನ ಮೇಲ್ಭಾಗದ ಎರಡೂ ಬದಿಗೆ, ಮೇಲಿಂಗ ಕೆಳಕ್ಕೆ ಸೀಳಿ ಹೋಗಿವೆ. ಇದರಿಂದ ಮೊದಲ ನಾಲ್ಕು ಸಾಲುಗಳ ಒಂದೆರಡು ಅಕ್ಷರಗಳು ಓದಲು ದೊರೆಯುತ್ತಿಲ್ಲ.

ಶಾಸನದ ಲಿಪಿ ಅವ್ಯವಸ್ಥಿತವಾಗಿದೆ. ಸಾಲುಗಳು ನೇರವಾಗಿ ಎಡದಿಂದ ಬಲಕ್ಕೆ ಮೇಲೇರುತ್ತ ಹೋಗಿವೆ. ಕೆಲವು ಅಕ್ಷರಗಳು ತುಂಬ ದೊಡ್ಡವಾಗಿದ್ದರೆ ಇನ್ನು ಕೆಲವು ಚಿಕ್ಕವು. ಉದಾ- ಒಂದನೆಯ ಸಾಲಿನ ರಾ.ಸ. ಎರಡನೆಯ ಸಾಲಿನ ಲ, ಮೂರನೆಯ ಸಾಲಿನ ಧಾ ಮೊದಲಾದವು. ಎರಡನೆಯ ಸಾಲಿನಲ್ಲಿರುವ ‘ಟ’ ನಾಲ್ಕು ಮತ್ತು ಏಳನೆಯ ಸಾಲಿನಲ್ಲಿರುವ ಶಕಟರೇಫಗಳು ಚಿಕ್ಕಗಾತ್ರದಲ್ಲಿವೆ. ಹಲವೆಡೆ ಚಕ್ಕೆ ಎದ್ದಿವೆ.

ಈ ಶಾಸನದ ಲಿಪಿಗೆ ತಲೆಕಟ್ಟು ಇಲ್ಲ. ಎರಡು ಕಡೆ ಬಳಕೆಯಾಗಿರುವ ಶಕಟ ರೇಫವು ಶುದ್ಧ ವರ್ತುಳಾಕಾರದಲ್ಲಿದ್ದು ಗಾಲಿಯ ಚಕ್ರದಂತೆ ಹೊಟ್ಟೆಯಲ್ಲಿ ಅಡ್ಡ ಮತ್ತು ಉದ್ದ ಗೆರೆ ಹೊಂದಿದೆ. ರಕರಾರದ ಗೆರೆ ಮೇಲ್ಕುಖವಾಗಿ ಏರಿ ತಲೆಗೆ ಸೇರಿರುವುದರಿಂದ ಮತ್ತು ಶಕಟರೇಫ ಹಳೆಯ ವಿಧಾನದಲ್ಲಿದೆ ಬರೆಯಲ್ಪಟ್ಟಿರುವುದರಿಂದ ಇದರ ಕಾಲ ಸು. ೬-೭ನೆಯ ಶತಮಾನವೆಂದು ಭಾವಿಸಬಹುದು.

ಹರಿಹರಾಸನ್ ಎಂಬುವನು ಆಳುತ್ತಿದ್ದಾಗ ಕೊಣತಿಯ ದೋಣಗೆರೆಗಾಗಿ ಆರುಮತ್ತರು ಭೂಮಿ ಬಿಟ್ಟುಕೊಟ್ಟ ವಿಷಯವನ್ನು ಶಾಸನ ದಾಖಲಿಸುತ್ತದೆ. ದಾನಿ ಏಮತಿ ನಾಯಕಿತಿ ಎಂಬವಳು ಪನ್ನಿರ್ಸಾಸಿರ್ವರು ಉಲ್ಲೇಖ ಬಂದಿದ್ದು ಅವರು ಪ್ರತಿ ಗ್ರಹಿಗಳಾಗಿರುವಂತೆ ತೋರುತ್ತದೆ. ಮೂರನೆಯ ಸಾಲಿನಲ್ಲಿ ಬಂದಿರುವ ಲಕ್ಷ್ಮೀ ಧಾಮರ್ ಎಂಬ ವ್ಯಕ್ತಿ ಹರಿಹರಾಸನ್‌ನ ಕೈಕೆಳಗಿನ ಸ್ಥಳೀಯ ಅಧಿಕಾರಿಯೆಂದು ಊಹಿಸಬಹುದು. ಯಾವುದೇ ರಾಜಮನೆತನ ಅಥವಾ ಕಾಲದ ಉಲ್ಲೇಖವಿಲ್ಲ.

೨. ಹಾವೇರಿಯ ಪಶ್ಚಿಮಕ್ಕೆ ಸು. ೨ ಕಿ.ಮೀ. ದೂರದಲ್ಲಿರುವ ದೇವಿ ಹೊಸೂರ ಗ್ರಾಮದ ಉತ್ತರ ಪಾರ್ಶ್ವದಲ್ಲಿ ಪ್ರಾಚೀನ ಮಾಳಚೀ ದೇವಿಯ ಗುಡಿಯಿದೆ. ಇಲ್ಲಿನ ಒಂದು ತುಂಡಿನಲ್ಲಿ ಪ್ರಸ್ತುತ ಶಾಸನವಿದೆ. ಇದೊಂದು ವೀರಗಲ್ಲಾಗಿರುವಂತೆ ತೋರುತ್ತದೆ. ಶಾಸನದ ಬಹುಭಾಗ ನಷ್ಟವಾಗಿದೆ.

೮ನೆಯ ಶತಮಾನದ ಲಿಪಿಯಲ್ಲಿರುವ ಇದರಲ್ಲಿ ಜಗತ್ತುಂಗನ ಹೆಸರಿದೆ. ಈ ಜಗತ್ತುಂಗ ಇಮ್ಮಡಿಗೋವಿಂದನೋ ಮುಮ್ಮಡಿ ಗೋವಿಂದನೋ ಹೇಳುವುದು ಕಷ್ಟ. ಅಕ್ಷರಗಳ ಗಾತ್ರ ತುಂಬ ದೊಡ್ಡದು. ಇಮ್ಮಡಿ ಗೋವಿಂದನ ಕಾಲಾವಧಿಯದಾಗಿರಲೂಬಹುದು. ಚಕ್ರವರ್ತಿಯ ಹೆಸರು ಮತ್ತು ಬನವಾಸಿಯ ಉಲ್ಲೇಖಗಳು ಸ್ಪಷ್ಟವಾಗಿವೆ.

ಶಾಸನ ಪಾಠಗಳು[1]

ಚಿಕ್ಕೇರೂರು (ಊರಕಾಲುವೆಯಲ್ಲಿ) ಸು. ೬-೭ನೆಯ ಶತಮಾನ

೧. ಶ್ರೀಮನ್ ಹರಿಹರಾಸನ್ x x x x

೨. x ಸೂದೋಲಟರಾ ಆಳೆ ಎರೆ x x

೩. [ಣನಾರಾ] ಲಕ್ಷ್ಮೀಧಾಮರ್ ಅನಾ [ಟ] x x

೪. x x ತಿಮರಾ ಕೊಣತಿ ದೋಣಗೆೠಎ [ಗಿತ್ತೋ] x

೫. ಪಡೆದೊಂ ಏಮತಿ ಲಾ (ನಾ೦ ಯಕಿತಿ [ಗ್ರಾ]

೬. ಪನ್ನಿಚ್ಛಾಸಿರ್ಬ್ಬರು[೦] ಪೊನ್ನು x x

೭. ಕೊಟೋನ್ ಕೆಇ (ಯಿ) ಅಱುಮತ್ತಲ್

೮. ಮಣ್ಣ[ಯಿ] ದ್ಮಾಡಿದಾನ್

ದೇವಿಹೊಸೂರ (ಹಾವೇರಿ ತಾ.)
(ಪ್ರಾಚೀನ ಮಾಳಚೀದೇವಿ ಗುಡಿಯ ಆವರಣ) ರಾ.ಕೂ. ಗೋವಿಂದ || ? ಸು. ೮ನೆಯ ಶ.

೧. ಶ್ರೀಜಗ . . . . . . . . . .

೨. [ಕ] ಮಹಾರಾ[ಜಾ] . . . . . . . .

೩. x ಟರರಾ ಪ್ರಿಥ್ವೀ . . . . . . . . .

೪. ವರ್ ಬನವಾಸಿ . . . . . . . . . . . .

೫. ಲ್ಲ [ದೂ] ರ [ಣಿ] . . . . . . . . .

 

[1]ಹೋಲಿಸಿರಿ: ಡಾ. ರು. ಮ. ಷಡಕ್ಷರಯ್ಯ ಅವರು ಇತಿಹಾಸ ದರ್ಶನ-ಸಂಪುಟ-೯ ಪುಟ-೮೦ ರಲ್ಲಿ ಕೊಟ್ಟಿರುವ ಪಾಠ.